ರಾಯಸದ ಮಂಚಣ್ಣನ ವಚನಗಳು

9
ಅರಿವಿನ ಪ್ರಸಂಗಕ್ಕೆ ಮಚ್ಚರವೇಕೆ ?
ಮಹಾನುಭಾವಿಗೆ ಮನ್ನಣೆಯ ಮಾಡರೆಂಬ ತೇಜದ ಭೀಷ್ಮತೆಯೇಕೆ ?
ತನ್ಮಯ ತಾನಾದ ಮತ್ತೆ , ತನಗೆ ಅನ್ಯವಿಲ್ಲಾ ಎಂದೆ, ಜಾಂಬೇಶ್ವರಾ

10
ಉಂಬಡೆ ಬಂದು ಬಾಯ ಮರದೆನೆಂದು
ಮೊರೆಯಿಡುತಿಪ್ಪ ಅರಿಕೆಹೀನನ ತೆರನಂತಾಯಿತ್ತು.
ಅರಿಕೆಯವರಿ ಎಂದು ಕುರುಹ ಕೊಟ್ಟ,
ಆ ಕುರುಹ ಮರದು ಅರಿದೆನೆಂಬ ಕುರುಬರ ನೋಡಾ, ಜಾಂಬೇಶ್ವರಾ.

11
ಊರವಂಕದ ಹೊರಗಿದ್ದು, ಮನೆಯ ಬಾಗಿಲ ಕಾಣೆನೆಂದು ಅರಸುವನಂತೆ,
ಇದಿರಿನಲ್ಲಿ ತೋರುವ ಕುರುಹ ಮರದು
ಅರಿವನೊಳಕೊಂಡೆನೆಂಬುವನಂತೆ,
ಜಂಬುಕ ಶಸ್ತ್ರದ ಫಳವ ನುಂಗಿ ಜಂಬೂದ್ವೀಪವೆಲ್ಲಾ
ಪ್ರಳಯವಾಯಿತ್ತು ಎಂದಡೆ, ಅದು ಚಂದವೇ ಜಾಂಬೇಶ್ವರಾ.

12
ಕುರುಡನ ಕೈಯ ಕೋಲು ದೃಢವೆಂದರಿವಂತೆ,
ನೆರೆ ಕುರಿತ ಮನವು ಜ್ಞಾನವ ಸ್ಥಿರಕರಿಸಿದಂತೆ,
ಅದ ಮರೆಯಾ, ಜಾಂಬೇಶ್ವರಾ.

13
ಕೈದು ಮೊನೆ ಏರುವದಕ್ಕೆ ಮೊದಲೇ ಕಟ್ಟಬಲ್ಲಡೆ
ಕೈದೇನ ಮಾಡುವುದು ?
ಹಾವು ಬಾಯಿ ಬಿಡುವುದಕ್ಕೆ ಮೊದಲೇ ಹಿಡಿದ ಮತ್ತೆ
ವಿಷವೇನ ಮಾಡುವುದು ?
ಮನ ವಿಕಾರಿಸುವುದಕ್ಕೆ ಮೊದಲೇ ಮಹದಲ್ಲಿ ನಿಂದ ಮತ್ತೆ
ಇಂದ್ರಿಯಂಗಳೇನ ಮಾಡಲಾಪವು, ಜಾಂಬೇಶ್ವರಾ ?

14
ಗೋಷ್ಠಿಯನೊಡ್ಡಿ ಆಡುವಲ್ಲಿ ಗೊತ್ತ ಮೀರಿದಡೆ,
ಮತ್ತೆ ಆಟವ ಕೊಡೆನೆಂಬವರಂತೆ,
ದೃಷ್ಟದಲ್ಲಿ ಕೊಟ್ಟ ಲಿಂಗವ ಮನ ಮೆಚ್ಚಿ, ಮನ ಘನದಲ್ಲಿ ಮೆಚ್ಚಿ,
ಆ ಘನ ನಾ ನೀನೆನಲಿಲ್ಲದ ಮತ್ತೆ , ತಾನು ತಾನೇ, ಜಾಂಬೇಶ್ವರಾ.

15
ತೊಳೆದಡೆ ಮಡಿ, ಮಾಸಿದಡೆ ಮೈಲಿಗೆ.
ಅರಿದಡೆ ತಾನು, ಮರದಡೆ ಜಗದೊಳಗೆಂಬುದನರಿ.
ಹಿಡಿದು ಬಿಟ್ಟೊಡನೆ ಕೈಮೀರಿದಡೆ,
ಮತ್ತೆ ಮರುಗಿದಡಿಲ್ಲ, ಜಾಂಬೇಶ್ವರಾ.

16
ಬರೆದು ಮತ್ತೆ ತೊಡೆದಡೆ ಅಲೇಖ ಶುದ್ಧವಲ್ಲ ಎಂದೆ.
ಹಿರಿದು ಮತ್ತೆ ಮರೆದಡೆ ಆ ಅರಿವಿಂಗೆ ಭಂಗವೆಂದೆ.
ಸತ್ತ ಮತ್ತೆ ಸಮುದ್ರವೂ ಸರಿ, ಒಕ್ಕುಡುತೆಯುದಕವೂ ಸರಿ, ಜಾಂಬೇಶ್ವರಾ.

17
ಬೆಂಕಿಗೆ ಉರಿ ಮೊದಲೊ, ಹೊಗೆ ಮೊದಲೊ
ಎಂಬುದನರಿದಲ್ಲಿ ಇಷ್ಟಲಿಂಗಸಂಬಂಧಿ.
ಉಭಯವನಳಿದಲ್ಲಿ ಪ್ರಾಣಲಿಂಗಸಂಬಂಧಿ.
ಆ ಉಭಯ ನಷ್ಟವಾದಲ್ಲಿ, ಏನೂ ಎನಲಿಲ್ಲ, ಜಾಂಬೇಶ್ವರಾ.

18
ಮರಾಳಂಗೆ ಹಾಲು ನೀರನೆರೆದಲ್ಲಿ
ನೀರನುಳುಹಿ ಹಾಲ ಕೊಂಬ ಭೇದವ ನೋಡಾ !
ಎಣ್ಣೆ ನೀರ ಕೂಡಿದಲ್ಲಿ ಅದು ತನ್ನಿಂದಲೆ ಬೆಳೆದು,
ಚೆನ್ನಾಗಿ ಉರಿಯದ ಭೇದವ ನೋಡಾ!
ಮಣ್ಣು ಹೊನ್ನಿನಲ್ಲಿ ಬೆಳೆದು, ತನ್ನ ತಪ್ಪಿಸಿಕೊಂಡು,
ಹೊನ್ನು ಬೆಲೆಯಾದ ಭೇದವ ನೋಡಾ !
ತನ್ನೊಳಗೆ ತಾನಿದು ತನ್ನನರಿಯದೆ,
ತೊಳಲುವ ಬಿನ್ನಾಣವ ನೋಡಾ !
ಚೆನ್ನಾಗಿ ನುಡಿವ ಅಣ್ಣಗಳ ಬಾಗಿಲಲ್ಲಿ ನಿಂದು,
ನಿಜವುಳ್ಳ ಅಣ್ಣಗಳ ಬಾಗಿಲಲ್ಲಿ ನಿಂದು, ಬಣ್ಣ ಗೆಟ್ಟವರ ಕಂಡು ಚುನ್ನವಾಡುತಿರ್ದ, ಜಾಂಬೇಶ್ವರಾ.

ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

*
Previousರಕ್ಕಸಬೊಮ್ಮಿತಂದೆ - ರಕ್ಕಸ ಬ್ರಹ್ಮಯ್ಯವಿಶ್ವಪತಿ ವಿಶ್ವನಾಥNext
*