ಲಿಂಗಾಯತ ಧರ್ಮ ಸಂವಿಧಾನ ಮತ್ತು ಭಾರತ ದೇಶದ ಸಂವಿಧಾನ

*

✍ -ಸಚ್ಚಿದಾನಂದ ಚಟ್ನಳ್ಳಿ ಬಿ.ಇ.ಮೆಕ್ಯಾನಿಕಲ್ .

ಧರ್ಮಗುರು ಬಸವಣ್ಣನವರು 12ನೇ ಶತಮಾನದಲ್ಲಿ ಒಂದು ಪರಿಪೂರ್ಣವಾದ ಸ್ವತಂತ್ರವಾದ, ಅಲ್ಲಿ ಇಲ್ಲಿ ಎಲ್ಲೆಲ್ಲೂ ಸಲ್ಲುವಂಥ, ಅಂದು ಇಂದು ಎಂದೆಂದೂ ಒಪ್ಪುವಂಥ, ವಿಶ್ವ ಭ್ರಾತೃತ್ವದ ಸಂದೇಶವುಳ್ಳ ವಿಶ್ವಮಾನ್ಯವಾದ ಧರ್ಮವನ್ನು ಕೊಟ್ಟರು ಅದುವೇ ಲಿಂಗಾಯತ ಧರ್ಮ. ಲಿಂಗಾಯತ ಧರ್ಮಕ್ಕೆ ಚಲನಶೀಲತೆಯನ್ನು ಒದುಗಿಸಿರುವುದು ಮತ್ತು ಈ ಧರ್ಮ ಇಂದಿನವರೆಗೂ ಜೀವಂತವಾಗಿ ಉಳಿದು ಬೆಳೆದು ಬರಲಿಕ್ಕೆ ಕಾರಣಕರ್ತೃವಾದುದು ವಚನಸಾಹಿತ್ಯ.

ವಚನ ಸಾಹಿತ್ಯ ಕೇವಲ ಬಂಡಾಯ ಸಾಹಿತ್ಯವಲ್ಲ. ಅನೇಕ ಜನ ಸಾಹಿತಿಗಳು ಬಿಡಿ ಬಿಡಿಯಾದ ವಚನಗಳನ್ನು ತಮ್ಮ ಭಾಷಣ ಹಾಗು ಬರಹಗಳಲ್ಲಿ ಬಳಸಿಕೊಳ್ಳುತ್ತಾರೆ. ಮತ್ತು ಅಂತಹ ಬಿಡಿ ವಚನಕ್ಕೆ ಗುರು ಬಸವಣ್ಣನವರ ಮೂಲ ಆಶಯಗಳಿಗೆ ಧಕ್ಕೆಬರುವಂತೆ ವ್ಯಾಖ್ಯಾನ ಮಾಡುತ್ತಾರೆ. ವಚನಸಾಹಿತ್ಯ ಕೇವಲ ಬಂಡಾಯ ಸಾಹಿತ್ಯವಾಗಿದ್ದರೆ ಹಾಗೆ ಮಾಡಬಹುದಿತ್ತು. ಆದರೆ ವಚನ ಸಾಹಿತ್ಯ ಬಂಡಾಯದ ಅಂಶಗಳನ್ನು ತನ್ನಲ್ಲಿ ಒಡಗೂಡಿಸಿಕೊಂಡಿರುವ ಅನುಭಾವ ಸಾಹಿತ್ಯ, ಆಧ್ಯಾತ್ಮಿಕ ಸಾಹಿತ್ಯ ಎಲ್ಲಕ್ಕೂ ಮಿಗಿಲಾಗಿ ಇದು ಲಿಂಗಾಯತ ಧರ್ಮದ ಧರ್ಮ ಸಾಹಿತ್ಯ. ಈ ಸಾಹಿತ್ಯವನ್ನು ಓದಲಿಕ್ಕೆ ವಿಶಿಷ್ಟವಾದ ಮಾನಸಿಕ ಸ್ಥಿತಿ ಬೇಕು ಮತ್ತು ಇದನ್ನು ವಿಶಿಷ್ಟವಾದ ರೀತಿಯಲ್ಲಿ ಓದಿದರೆ ಮಾತ್ರ ವಚನಸಾಹಿತ್ಯವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಲಿಕ್ಕೆ ಸಾಧ್ಯವಿದೆ. ವಚನಸಾಹಿತ್ಯವೆಂಬ ಖಜಾನೆಯನ್ನು ತೆರೆಯಲಿಕ್ಕೆ ತತ್ವಜ್ಞಾನದ ಕೀಲಿಕೈ, ಅನುಭಾವದ ಕೀಲಿಕೈ ಮತ್ತು ಅಧ್ಯಾತ್ಮದ ಕೀಲಿಕೈ ಎನ್ನುವ ಮೂರು ಕೀಲಿಕೈಗಳು ಬೇಕು ಎಂದು ಪೂಜ್ಯ ಮಾತಾಜಿಯವರು ಹಲವಾರು ಬಾರಿ ಹೇಳಿದ್ದಾರೆ.
‘ಲಿಂಗಾಯತ ಧರ್ಮ ಸ್ವತಂತ್ರ ಧರ್ಮ’ ಚಳುವಳಿಯಲ್ಲಿ ಲಿಂಗಾಯತ ಧರ್ಮದ ಬಗ್ಗೆ ಟಿ.ವಿ. ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಯಿತ. ಒಂದೆರಡು ಚಾನಲ್ ಗಳು ಬಿಟ್ಟರೆ ಎಲ್ಲಾ ಕನ್ನಡ ಟಿ.ವಿ. ಗಳಲ್ಲಿ ಚರ್ಚೆಯಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತ್ತು. ಈ ಚರ್ಚೆಗಳಲ್ಲಿ ಎಲ್ಲಾ ಟಿ.ವಿ.ಯವರು ಸಾಮನ್ಯವಾಗಿ ಹೇಳುತ್ತಿದ್ದ ವಚನವಿದು:

ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ
ಇವನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯಾ
ಕೂಡಲ ಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯಾ.

ಗುರು ಬಸವಣ್ಣನವರು ಇವನಾರವ ಇವನಾರವ ಎನ್ನದೇ ಎಲ್ಲರನ್ನೂ ಇವ ನಮ್ಮವ ಇವ ನಮ್ಮವ ಎಂದು ಇಂಬಿಟ್ಟುಕೊಂಡವರು. ವೀರಶೈವರು ಬೇರೆ, ಲಿಂಗಾಯತರು ಬೇರೆ ಎಂದು ನೀವು ವೀರಶೈವರನ್ನು ಬೇರೆ ಮಾಡಿ ಧರ್ಮವನ್ನು ಸಮಾಜವನ್ನು ಒಡೆದು ಗುರು ಬಸವಣ್ಣನವರ ತತ್ವಗಳಿಗೆ ವಿರುದ್ದವಾಗಿ ನಡೆಯುತ್ತಿದ್ದೀರಾ ಎಂದು ಟಿ.ವಿ. ಮಾಧ್ಯಮದವರು ಆರೋಪಿಸುತ್ತಿದ್ದರು. ಆಗ ಅವರಿಗೆ ಇದಕ್ಕೆ ನಾನು ಹೇಳುತ್ತಿದ್ದ ವಚನವಿದು:
ಆದಿಯಲಾಗಲಿ, ವೇದದಲಾಗಿ, ಶಾಸ್ತ್ರದಲಾಗಲಿ, ಸಮಯದಲಾಗಲಿ;
ಎನ್ನವರೆನ್ನೆನು, ಎನ್ನವರೆನ್ನೆನು!
ಎನ್ನವರೆಂದರೆ ಸಂಗಾ ನಿಮ್ಮಲ್ಲಿಗೆ ದೂರ!
ಎನ್ನವರಾದಡೆ ಜನ್ನಕ್ಕೆ ನಡೆವರೇ?
ಎನ್ನವರಲ್ಲ ಲಿಂಗದೇವಾ.

ಗುರು ಬಸವಣ್ಣನವರು ಒಬ್ಬ ಪ್ರಧಾನಿಯಾಗಿ ಎಲ್ಲರನ್ನು ನನ್ನವರೆನ್ನುತ್ತಾರೆ. ಆದರೆ ಒಬ್ಬ ಧರ್ಮಗುರುವಾಗಿ ಧರ್ಮಮಾರ್ಗದಲ್ಲಿ ನಡೆಯುವವರನ್ನು ಮಾತ್ರ ನನ್ನವರೆನ್ನುತ್ತಾರೆ. ಕೇವಲ ಜಾತಿಯ ಆಧಾರದಿಂದ ಶಾಸ್ತ್ರದ ಆಧಾರದಿಂದ ನನ್ನವರೆನ್ನುವುದಿಲ್ಲ. ಎನ್ನವರಾದವರು ಜನ್ನಕ್ಕೆ ನಡೆವರೆ? ಯಜ್ಞ ಯಾಗಾದಿಗಳನ್ನು, ಮೂಢ ನಂಬಿಕೆಯನ್ನು ಜಾತಿ ಬೇಧ ಮಾಡುವವರು ನನ್ನವರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ಮುಂದೆ ಹೋಗಿ
ಅಣ್ಣ ತಮ್ಮ ಹೆತ್ತಪ್ಪ ಗೋತ್ರವಾದಡೇನು?
ಲಿಂಗಸಾಹಿತ್ಯವಾಗದವರ ಎನ್ನವರೆನ್ನೆನಯ್ಯಾ.
ನಂಟು ಭಕ್ತಿ ನಾಯಕ ನರಕ ಕೂಡಲ ಸಂಗಮದೇವಾ!

ಒಡಹುಟ್ಟಿದವರೇ ಇಷ್ಟಲಿಂಗಧಾರಿಗಳಾಗಿ ಧರ್ಮ ಮಾರ್ಗದಲ್ಲಿ ನಡೆಯದಿದ್ದರೆ ಅವರನ್ನೇ ನನ್ನವರೆನ್ನದ ಗುರು ಬಸವಣ್ಣನವರು ಎಲ್ಲಿಯಾದರೂ, ಬಂಗಾರದ ಕಿರೀಟವನ್ನು ಧರಿಸಿ ದಸರಾ ದರ್ಬಾರ್ಗಳನನ್ನು ಮಾಡುತ್ತ, ಮನುಷ್ಯರ ಹೆಗಲ ಮೇಲಿನ ಅಡ್ಡಪಲ್ಲಕ್ಕಿಯಲ್ಲಿ ಮೆರೆಯುತ್ತ ಆಡಂಬರಗಳನ್ನು ಮಾಡುತ್ತ ಜನರನ್ನು ವೈಚಾರಿಕತೆಗೆ ಕರೆದೊಯ್ಯದೆ ಮೌಢ್ಯತೆಯ ಕೂಪದಲ್ಲಿ ತಳ್ಳುವವರನ್ನು ಎಂದಾದರೂ ಎನ್ನವರೆನ್ನಲೂ ಸಾಧ್ಯವೇ...?

ಒಲ್ಲೆನಯ್ಯಾ, ಒಲ್ಲೆನಯ್ಯಾ, ನಿಮ್ಮವರಲ್ಲದವರ;
ಒಲ್ಲೆನಯ್ಯಾ, ಒಲ್ಲೆನಯ್ಯಾ, ಜಗವೆಲ್ಲವರಿಯಲು;
ಒಲ್ಲೆನಯ್ಯಾ, ಒಲ್ಲೆನಯ್ಯಾ, ನೀ ಮುನಿದರೆ ಮುನಿ,
ಲಿಂಗದೇವಾ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ.

ದೇವರಮೇಲೆ ಪ್ರಮಾಣ ಮಾಡಿ ಗುರು ಬಸವಣ್ಣನವರು ಧರ್ಮ ಮಾರ್ಗದಲ್ಲಿ ನಡೆಯದವರು ನನ್ನವರಲ್ಲ ಎನ್ನುತ್ತಾರೆ.

ಭಾರತ ದೇಶದ ಸಂವಿಧಾನದ ಎಲ್ಲಾ ಅಂಶಗಳೂ ವಚನ ಸಾಹಿತ್ಯದಲ್ಲಿ ಇವೆ. ವಚನಸಾಹಿತ್ಯ ಹೇಗಿದೆಯೋ ಭಾರತ ದೇಶದ ಸಂವಿಧಾನವೂ ಹಾಗೆಯೇ ಇದೆ. ಉದಾಹರಣೆಗಾಗಿ ಹೇಳುವುದಾದರೆ, ಸಂವಿಧಾನದ ಅನುಚ್ಛೇದ 15(1) ಹೀಗಿದೆ: The State shall not discriminate against any citizen on grounds only of religion, race, caste, sex, place of birth or any of them. ಒಬ್ಬ ಪ್ರಜೆಯ ಧರ್ಮ, ವರ್ಣ, ಜಾತಿ, ಲಿಂಗ ಮತ್ತು ಹುಟ್ಟಿದ ಸ್ಥಳದ ಆಧಾರದ ಮೇಲೆ ಯಾವುದೇ ಬೇಧಭಾವ ಮಾಡಬಾರದು. ಎಲ್ಲರಿಗೂ ಎಲ್ಲಾ ವಿಧದಲ್ಲಿಯೂ ಸಮಾನವಾದ ಅವಕಾಶಗಳನ್ನು ಕೊಡಬೇಕು ಎಂದು ಮುಂದುವರೆದು ಹೇಳುತ್ತದೆ. ಆದರೆ ಅನುಚ್ಛೇದ 15(4) ತೋರಿಕೆಯ ಅರ್ಥದಲ್ಲಿ 15(1)ರ ವಿರುದ್ಧವಾಗಿದೆ.
15(4) Nothing in this article shall prevent the State from making any special provision for the advancement of any socially and educationally backward classes of citizens or for the Scheduled Castes and the Scheduled Tribes. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಅಥವಾ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ ವಿಶೇಷವಾದ ಸೌಲಭ್ಯಗಳನ್ನು ಕೊಡಬಹುದು ಎಂದು. ಜಾತಿಯ ಆಧಾರದಲ್ಲಿ ಬೇಧಬಾವ ಮಾಡಬಾರದು ಎಂದು ಒಂದು ಕಡೆ ಹೇಳಿದರೆ ಇನ್ನೊಂದು ಕಡೆ ಪರಿಶಿಷ್ಠ ಜಾತಿಯವರಿಗೆ ಹೆಚ್ಚಿನ ಸೌಲಭ್ಯ ಕೊಡಬೇಕು ಎಂದು ಮತ್ತೊಂದು ಕಡೆ ಹೇಳಲಾಗಿದೆ.

ವಚನ ಸಾಹಿತ್ಯವು ಇದೇ ರೀತಿಯಾಗಿದೆ. ಒಂದು ವಚನ ಇನ್ನೊಂದು ವಚನಕ್ಕೆ ತದ್ವಿರುದ್ಧವಾಗಿರುತ್ತದೆ. ಅದಕ್ಕಾಗಿ ವಚನಗಳನ್ನು ಸಂದರ್ಭೋಚಿತವಾಗಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಕೆಲವೊಂದು ವಚನಗಳಲ್ಲಿ ನೇರವಾದ ಸಂದೇಶ(Direct Message)ಗಳಿವೆ. ಮತ್ತೆ ಕೆಲವೊಂದು ವಚನಗಳಲ್ಲಿ ಪರೋಕ್ಷವಾದ ಸಂದೇಶ(Indirect Message)ಗಳಿವೆ. ಇನ್ನು ಕೆಲವು ವಚನಗಳಲ್ಲಿ ಬೇರೆ ವಚನಗಳೊಂದಿಗೆ ಪರಸ್ಪರ ಸಂಬಂಧ ಹೊಂದಿರುವ ಸಂದೇಶ(Interlinked Message)ಗಳಿವೆ. ಇಂತಹ ವಚನಗಳನ್ನು ಆ ವಚನಗಳೊಂದಿಗೆ ಓದಿದರೆ ಮಾತ್ರ ಪರಿಪೂರ್ಣವಾದ ಮತ್ತು ನಿಜವಾದ ಅರ್ಥವನ್ನು ಬಿಂಬಿಸುತ್ತವೆ. ಅದಕ್ಕಾಗಿ ‘ಇವನಾರವ ಇವನಾರವ’ ಎನ್ನುವ ವಚನ ಇದು ಇನ್ನೊಂದು ವಚನದ ಮೇಲೆ ಅವಲಂಬಿತವಾಗಿರುವ ವಚನ.
ಭಾರತದೇಶದ ಸಂವಿಧಾನದ ಆಶಯಗಳು ಅದರ ಮುನ್ನುಡಿಯಲ್ಲಿ ಅಭಿವ್ಯಕ್ತವಾಗಿವೆ. ಸಂವಿಧಾನದ ಎಲ್ಲಾ ಅನುಚ್ಛೇದಗಳು ಅದರ ಮುನ್ನುಡಿಯನ್ನೇ ಸುತ್ತುತ್ತಿರುತ್ತವೆ. ಈ ದೇಶದ ಪ್ರತಿಯೊಂದು ನ್ಯಾಯಲಯವೂ ಮುನ್ನುಡಿಯ ಒಂದೇ ಒಂದೇ ಒಂದು ಶಬ್ದಕ್ಕೂ ಧಕ್ಕೆ ತರುವುದಿಲ್ಲ. ಈ ದೇಶದ ಯಾವುದೇ ಕಾನೂನು ಮುನ್ನುಡಿಯ ಒಂದೇ ಒಂದು ಶಬ್ದವನ್ನು ಮೀರುವುದಿಲ್ಲ. ಭಾರತ ದೇಶದ ಸಂವಿಧಾನದ ಮುನ್ನುಡಿ ಹೀಗಿದೆ:
“ಭಾರತ ದೇಶದ ಪ್ರಜೆಗಳಾದ ನಾವು ಒಂದು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ ಅಭಿವ್ಯಕ್ತಿ, ನಂಬಿಕೆ, ಧರ್ಮ ಶ್ರದ್ಧೆ ಮತ್ತು ಉಪಸನಾ ಸ್ವಾತಂತ್ರ, ಸ್ಥಾನಮಾನ ಮತ್ತು ಸಮಾನ ಅವಕಾಶ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು ರಾಷ್ಟ್ರದ ಏಕತೆಯನ್ನು ಮತ್ತು ಅಖಂಡತೆಯನ್ನು ಸುನಿಶ್ಚತಗೊಳಿಸಿ ಅವರಲ್ಲಿ ಭ್ರಾತೃವ್ವ ಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕವಾಗಿ ಸಂಕಲ್ಪ ಮಾಡುತ್ತೇವೆ”
ಈ ಮುನ್ನುಡಿ ಸಂವಿಧಾನದ ಹೃದಯಮಿಡಿತವಾಗಿದೆ. ಯಾವುದೇ ಅನುಚ್ಛೇದ ಪರಿಚ್ಛೇದಗಳು ಈ ಮುನ್ನುಡಿಯ ಒಂದು ಶಬ್ದವನ್ನೂ ಮೀರುವುದಿಲ್ಲ. ಅದೇ ರೀತಿ ಲಿಂಗಾಯತ ಧರ್ಮ ಸಂವಿಧಾನಕ್ಕೂ ಒಂದು ಹೃದಯ ಮಿಡಿತವಿದೆ. ವಚನ ಸಾಹಿತ್ಯದ ಪ್ರತಿಯೊಂದು ಸಾಲು ಆ ಮಿಡಿತದೊಂದಿಗೆ ಮಿಡಿಯುತ್ತದೆ. ಅದುವೇ ಷಡಾಚಾರ. ಷಡಾಚಾರಗಳು ಲಿಂಗಾಯತ ಧರ್ಮ ಸಂವಿಧಾನದ ಮುನ್ನುಡಿ.

1. ಬಸವಾಚಾರ 2. ಲಿಂಗಾಚಾರ 3. ಸದಾಚಾರ 4. ಶಿವಾಚಾರ, 5. ಗಣಾಚಾರ 6. ಭೃತ್ಯಾಚಾರ

ಗುರು ಬಸವಣ್ಣನವರೇ ಆದಿ ಗುರು, ಲಿಂಗಾಯತ ಧರ್ಮ ಸಂಸ್ಥಾಪಕರೆÉಂದು ನಂಬಿ ಅವರ ಆದೇಶದಂತೆ ಜೀವಿಸುತ್ತ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ‘ಬಸವಾಚಾರ.’ “ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ, ಒಬ್ಬನೆ ಕಾಣಿರೊ, ಇಬ್ಬರೆಂಬುದು ಹುಸಿ ನೋಡಾ! ಲಿಂಗದೇವನಲ್ಲದಿಲ್ಲೆಂದಿತ್ತು ವೇದ.” ಎನ್ನುವ ಗುರು ಬಸವಣ್ಣನವರ ವಚನದಂತೆ ದೇವರು ಒಬ್ಬನೇ ಮತ್ತು ಸರ್ವೋನ್ನತ ಶಕ್ತಿ ಎಂದು ನಂಬಿ, ಗುರು ಬಸವಣ್ಣನವರು ಕೊಟ್ಟ ಇಷ್ಟಲಿಂಗವೇ ದೇವರ ಸಾಕಾರ ರೂಪವೆಂದು ಪೂಜಿಸಿ ಅನ್ಯದೈವಕ್ಕೆರಗದಿಹುದೇ ‘ಲಿಂಗಾಚಾರ.’ ಕಾಯಕವೇ ಕೈಲಾಸ, ದಾಸೋಹವೇ ದೇವಧಾಮ ಎನ್ನುವ ಗುರು ಬಸವಣ್ಣನವರ ಸಂದೇಶವನ್ನು ನಂಬಿ; ಸತ್ಯ ಶುದ್ಧ ಕಾಯಕದಿಂದ ಜೀವನೋಪಾಯಕ್ಕಾಗಿ ಧನವನ್ನು ಸಂಪಾದಿಸಿ ಒಕ್ಕು(ಬಳಸಿ), ಮಿಕ್ಕ ಧನವನ್ನು ಸಮಾಜದ ಏಳಿಗೆಗಾಗಿ ಮತ್ತು ದಾಸೋಹಕ್ಕಾಗಿ ವಿನಿಯೋಗಿಸುವುದೇ ‘ಸದಾಚಾರ.’ ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಲಿಂಗದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ. ಎನ್ನುವ ಗುರು ಬಸವಣ್ಣನವರ ಸಂದೇಶವನ್ನು ಪಾಲಿಸುತ್ತ, ಇಷ್ಟಲಿಂಗ ದೀಕ್ಷೆ ಹೊಂದಿದವರನ್ನು ಸ್ವಧರ್ಮೀಯರೆಂದು ನಂಬಿ ಅವರನ್ನು ಧರ್ಮ ಬಂಧುಗಳೆಂದು ಪರಿಗಣಿಸಿ, ಅವರ ಮನೆಯಲ್ಲಿ ಉಣ್ಣುವ ಊಡುವ(ಉಣ್ಣಿಸುವ); ಕೊಡುವ ಕೊಳ್ಳುವ ವೈವಾಹಿಕ ಸಂಬಂಧಗಳನ್ನು ಮಾಡಿ ಪರಧರ್ಮೀಯರನ್ನು ಸ್ನೇಹಿತರಂತೆ ಕಾಣುವುದೇ ‘ಶಿವಾಚಾರ.’ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ; ಎನ್ನುವ ಗುರುಬಸವಣ್ಣನವರ ವಾಣಿಯನ್ನು ಪಾಲಿಸುತ್ತ, ವ್ಯಕ್ತಿಗಿಂತಲೂ ಸಮಷ್ಟಿ ಶ್ರೇಷ್ಠ ಎಂದು ಪರಿಗಣಿಸಿ, ಸಮಾಜದ ಹಿತಾಸಕ್ತಿಯನ್ನು ಕಾಪಾಡಲು ಸೇವೆ ಸಲ್ಲಿಸುವುದೇ ‘ಭೃತ್ಯಾಚಾರ.’ “ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ. ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ. ಕೇಳು, ಲಿಂಗದೇವಾ, ಮರಣವೆ ಮಹಾನವಮಿ.” ಎನ್ನುವ ಗುರು ಬಸವಣ್ಣನವರ ವಾಣಿಯಂತೆ ಅನ್ಯರಿಂದ ಧರ್ಮಕ್ಕೆ ಕುಂದು ಬಂದಾಗ ಅವರೊಡನೆ ಹೋರಾಡಿ ಧರ್ಮ ರಕ್ಷಣೆ ಮಾಡುವುದೇ ‘ಗಣಾಚಾರ.’ ಅನಿಷ್ಠಗಳು ಅಂತರಂಗದಲ್ಲೇ ಇರಲಿ ಬಹಿರಂಗದಲ್ಲೇ ಇರಲಿ ಅವುಗಳೊಡನೆ ಹೋರಾಡುವುದೇ ಗಣಾಚಾರ. ಈ ರೀತಿಯಾದ ಷಡಾಚಾರಗಳನ್ನು ಅಳವಡಿಸಿಕೊಂಡವರೆಲ್ಲಾ ಲಿಂಗಾಯತ ಧರ್ಮದ ಅನುಯಾಯಿಗಳು.

ಇದು ಲಿಂಗಾಯತ ಧರ್ಮ ಸಂವಿಧಾನದ ಮುನ್ನುಡಿ. ಈ ಮುನ್ನುಡಿಯ ಒಂದೇ ಒಂದು ಶಬ್ದವನ್ನು ಮೀರಿದವರು ಲಿಂಗಾಯತರಲ್ಲ. ಮೊದಲನೇ ಆಚಾರವಾದ ಬಸವಾಚಾರವನ್ನೇ ಪಾಲಿಸಲು ಒಪ್ಪದ ಪಂಚಪೀಠಾಧೀಶರನ್ನಾಗಲೀ ವೀರಶೈವರನ್ನಾಗಲಿ ನನ್ನವರು, ಲಿಂಗಾಯತರು ಎನ್ನಲಿಕ್ಕೆ ಹೇಗೆ ಸಾಧ್ಯ. ಅವರು ಲಿಂಗಾಯತರಿಗೆ ಎಂತು ಸಮರೆಂಬೆ? ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ನಡೆಸಿದ ಹೋರಾಟದ ಫಲವಾಗಿ ಲಿಂಗಾಯತರಿಗೆ ಮತ್ತು ಬಸವತತ್ವವನ್ನು ಒಪ್ಪುವ ವೀರಶೈವರಿಗೆ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನ ಮಾನ ನೀಡುವಂತೆ ಕರ್ನಾಟಕ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ವೀರಶೈವ ಮಹಾಸಭೆಯವರು ಮತ್ತು ಪಂಚಾಚಾರ್ಯರು ಇದರಿಂದ ಸಂತೋಷಗೊಂಡು ಸಂಭ್ರಮಿಸಬೇಕಾಗಿತ್ತು. ಆದರೆ ಅವರು ಬಸವ ತತ್ವ ಒಪ್ಪುವ ಎನ್ನುವ ಪದ ಬೇಡ ಎಂದು ಹೇಳುವ ಮೂಲಕ ಲಿಂಗಾಯತ ಧರ್ಮ ಸಂವಿಧಾನದ ಮುನ್ನುಡಿಯ ಮೊದಲ ಶಬ್ದವನ್ನೇ ಒಪ್ಪುತ್ತಿಲ್ಲ ಎಂದಮೇಲೆ ಅವರು ಲಿಂಗಾಯತರಲ್ಲ. ಲಿಂಗಾಯತ ಧರ್ಮ ದೀಕ್ಷೆನೀಡುವಾಗ ಪ್ರತಿಯೊಬ್ಬರಿಗೂ 12 ಅಂಶಗಳ ಪ್ರಮಾಣ ವಚನ ಬೋಧಿಸಲಾಗುತ್ತದೆ. ಅದರಲ್ಲಿ ಒಂದು ಪ್ರಮಾಣವಚನ “ಸ್ವ ಧರ್ಮಿಯರನ್ನು ಸಹೋದರ ಸಹೋದರಿಯಂತೆ ಮತ್ತು ಪರಧರ್ಮೀಯರನ್ನು ಸ್ನೇಹಿತರಂತೆ ಕಾಣುತ್ತೇನೆ” ಎಂದಿದೆ. ಅದಕ್ಕಾಗಿ ನಾವು ಬಸವಾಚಾರ ಒಪ್ಪದ ವೀರಶೈವರನ್ನು ಪಂಚಾಚಾರ್ಯರನ್ನು ಪಂಚ ಪೀಠಾಧೀಶರನ್ನು ನಾವು ಸ್ನೇಹಿತರಂತೆ ಕಾಣುತ್ತೇವೆಯೇ ಹೊರತು ಎಂದೆಂದಿಗೂ ಅಣ್ಣ ತಮ್ಮರಂತೆ ಕಂಡು ನಮ್ಮ ಆಸ್ತಿಯಾದ ಲಿಂಗಾಯತಧರ್ಮದಲ್ಲಿ ಅವರಿಗೆ ನಾವು ಪಾಲು ಕೊಡುವುದಿಲ್ಲ.

ನಾಗಮೋಹನದಾಸ ಸಮಿತಿಯ ಮುಂದೆ ಲಿಂಗಾಯತ ಧರ್ಮದ ಬಗ್ಗೆ ವಿಚಾರ ಮಂಡನೆ ಮಾಡುವ ಅವಕಾಶವನ್ನು ಪೂಜ್ಯ ಮಾತಾಜಿಯವರು ಹಾಗು ಸಹೋದರ ಚಂದ್ರಮೌಳಿಯವರು ನನಗೆ ಒದಗಿಸಿಕೊಟ್ಟಿದ್ದರು. ನ್ಯಾಯಮೂರ್ತಿ ನಾಗಮೋಹನದಾಸ್ ರವರು ನನಗೆ ಒಂದು ಪ್ರಶ್ನೆ ಕೇಳಿದರು “ಲಿಂಗಾಯತ ಧರ್ಮದ ಬಗ್ಗೆ ನೀವೆಲ್ಲರೂ ಇಷ್ಟೊಂದು ಹೇಳುತ್ತಿದ್ದೀರಾ. ನೀವು ಹೇಳುವ ನಿಜ ಲಿಂಗಾಯತ ಧರ್ಮ ಎಲ್ಲಿದೆ ಯಾರು ಈ ರೀತಿಯ ಆಚರಣೆ ಮಾಡುತ್ತಿದ್ದಾರೆ. ವೀರಶೈವರು ಮೂರ್ತಿ ಪೂಜೆ, ಜಾತಿ ಭೇದ, ಲಿಂಗಭೇದ ಮಾಡುತ್ತಾರೆ ಲಿಂಗಾಯತರು ಇವುಗಳನ್ನು ಮಾಡುವುದಿಲ್ಲ ಎಂದು ನೀವು ಹೇಳುತ್ತೀರಿ. ಆದರೆ ನಾನು ಅನೇಕ ಜನ ಲಿಂಗಾಯತರ ಮನೆಗೆ ಹೋಗಿದ್ದೇನೆ ಅವರೆಲ್ಲರ ಮನೆಗಳಲ್ಲಿ ಗಣೇಶ ಲಕ್ಷ್ಮೀಯರು ರಾರಾಜಿಸುವುದರ ಜೊತೆಗೆ ಅನೇಕ ಮೂರ್ತಿಗಳನ್ನು ಇಟ್ಟುಕೊಂಡಿದ್ದಾರೆ ಅನೇಕ ಲಿಂಗಾಯತ ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಇಟ್ಟುಕೊಂಡಿಲ್ಲ ಬದಲಿಗೆ ಲಕ್ಷ್ಮೀ ಭಾವಚಿತ್ರವಿಟ್ಟುಕೊಂಡಿದ್ದಾರೆ ದೀಪಾವಳಿಗೆ ಅವರು ಲಕ್ಷ್ಮೀ ಪೂಜೆಯನ್ನೇ ಮಾಡುತ್ತಾರೆ ಎಲ್ಲಿದೆ ನಿಜ ಲಿಂಗಾಯ ಆಚರಣೆ?” ಆಗ ನಾನು “ಸರ್ ಭಾರತ ದೇಶ, ಇಲ್ಲಿನ ಸಂಸ್ಕøತಿ ಮತ್ತು ಈ ನೆಲದ ಕಾನೂನು ಹೇಗಿದೆ ಎಂದು ವಿಶ್ಲೇಶಿಸಬೇಕಾದರೆ ಭಾರತ ದೇಶದ ಸಂವಿಧಾನವನ್ನು ನೋಡಿ ವಿಶ್ಲೇಷಿಸಬೇಕೆ ಹೊರತು ಈ ದೇಶದಲ್ಲಿರುವ ಕಳ್ಳರ, ಕೊಲೆಗಡುಕರ, ವಂಚಕರ, ಸುಲಿಗೆಕೋರರ, ಮಕ್ಕಳ ಮೇಲೆ ಬಲತ್ಕಾರ ಮಾಡಿದವರ ಸಂಖ್ಯೆಯನ್ನು ನೋಡಿ ವಿಶ್ಲೇಷಿಸಬಾರದು. ಇಂತಹ ಅಮಾನವೀಯ ಕೃತ್ಯವೆಸಗಿದವರಿಗಾಗಿಯೇ ಐ.ಪಿ.ಸಿ ಸೆಕ್ಷನ್ಗಳಿವೆ ಅವರಿಗೆ ಶಿಕ್ಷೆ ಇದೆ ಅದಕ್ಕಾಗಿಯೇ ಜೈಲುಗಳಿವೆ. ಅದೇ ರೀತಿ ಲಿಂಗಾಯತ ಧರ್ಮದ ವಿಶ್ಲೇಷಣೆಯನ್ನು ವಚನ ಸಾಹಿತ್ಯ ನೋಡಿ ಅದನ್ನು ಓದಿ ವಿಶ್ಲೇಷಿಸಬೇಕೆ ಹೊರತು, ಯಾರೋ ಕೆಲವರು ಮಾಡುವ ದುರಾಚಾರಗಳನ್ನು ನೋಡಿ ವಿವರಿಸಬಾರದು. ಧರ್ಮ ಮಾರ್ಗವನ್ನು ಬಿಟ್ಟು ನಡೆದವರಿಗೆ ಶಿಕ್ಷೆಯೂ ಇದೆ.

ನಂಬಿದ ಹೆಂಡತಿಗೆ ಗಂಡನೊಬ್ಬ ಕಾಣಿರೋ
ನಂಬಬಲ್ಲ ಭಕ್ತಂಗೆ ದೇವನೊಬ್ಬ ಕಾಣಿರೋ
ಬೇಡ ಬೇಡ ಅನ್ಯದೈವದ ಸಂಗ ಹೊಲ್ಲ!
ಬೇಡ ಬೇಡ ಪರದೈವದ ಸಂಗ ಹೊಲ್ಲ!
ಬೇಡ ಬೇಡ ಅನ್ಯದೈವವೆಂಬುದು ಹಾದರ ಕಾಣಿರೋ,
ಕೂಡಲ ಸಂಗಮದೇವ ಕಂಡಡೆ ಮೂಗ ಕೊಯ್ವ ಕಾಣಿರೋ.

ಊಡುವ ಉಡಿಸುವ ಗಂಡನಿದ್ದಂತೆ
ಜೋಡೆ ಮಿಂಡಂಗೆ ಕಣ್ಣಚೆಲ್ಲುವಳ ಕೇಡಿಂಗೆ ಬೆರಗಾದೆನು
ಕೂಡಲ ಸಂಗಮದೇವನು
ಸಿಂಗಾರದ ಮೂಗ ಬಣ್ಣಿಸಿ ಹಲುದೋರೆಕೊಯ್ವ.

ಅಂಗದ ಮೇಲೆ ಲಿಂಗ ಸಾಹಿತ್ಯವಾದ ಬಳಿಕ
ಸ್ಥಾವರ ದೈವಕ್ಕೆರಗಲಾಗದು
ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ
ಕರಸ್ಥಲದ ಲಿಂಗದೇವನಿದ್ದಂತೆ
ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ
ನರಕದಲ್ಲಿಕ್ಕುವ ಕೂಡಲ ಸಂಗಮದೇವಾ.

ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ
ಅಟ್ಟಡಿಯಾಗಿ ಬೀಳುವ ಲೊಟ್ಟೆ ಮೂಳನ ಕಂಡಡೆ
ಮೆಟ್ಟಿದ ಎಡಪಾದ ರಕ್ಷೆಯಿಂದ ಲೊಟಲೊಟನೆ
ಹೊಡೆಯೆಂದನಂಬಿಗೆ ಚೌಡಯ್ಯ ನಿಜಶರಣನು.

ಏನಿ ಬಂದಿರಿ ಹದುಳವಿದ್ದಿರಿ ಎಂದಡೆ ನಿಮ್ಮೈಸಿರಿ ಹಾರಿಹೋಹುದೆ?
ಕುಳ್ಳಿರೆಂದಡೆ ನೆಲ ಕುಳಿಹೋಹುದೆ?
ಒಡನೆ ನುಡಿದರೆ ಸಿರಹೊಟ್ಟೆಯೊಡೆವುದೆ?
ಕೊಡಲಿಲ್ಲದಿರ್ದಡೊಂದು ಗುಣವಿಲ್ಲದಿರ್ದದಡೆ
ಮೂಗ ಕೊಯ್ವುದ ಮಾಬನೇ ಕೂಡಲ ಸಂಗಮದೇವಯ್ಯ.

“ಕಿವಿ ಮೂಗ ಕೊಯ್ದು ಇಟ್ಟಿಗೆಯಲೊರಸಿ ಕನ್ನಡಿಯ ತೋರಿ ನಡೆಸಿ ನರಕದಲ್ಲಿ ಕೆಡಹದೇ ಬಿಡ” “ಕುಂಭೀಪಾಕ ನಾಯಕ ನರಕದಲ್ಲಿಕ್ಕುವ” “ಹಲ್ಲಕಳೆವ” “ರೌರವ ನರಕದಲ್ಲಿಕ್ಕುವ” “ಪರದ್ರವ್ಯಕ್ಕೆ ಆಸೆಮಾಡಿದೆನಾದರೆ, “ನೀನಾಗಲೇ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭು ಜಕ್ಕೇಶ್ವರ” ಇವೆಲ್ಲವೂ ಕೂಡ “ವಚನ ದಂಡಸಂಹಿತೆ” ವಚನ ಪೀನಲ್ ಕೋಡ್ನ ಪಾರಿಭಾಷಿಕ ಪದಗಳು. ತಪ್ಪು ಮಾಡಿದವರಿಗೆ ಈ ರೀತಿಯಾದ ಶಿಕ್ಷಯೂ ಇದೆ. ದೇಶದಲ್ಲಿ ನ್ಯಾಯಧೀಶರು ಶಿಕ್ಷೆ ವಿಧಿಸುತ್ತಾರೆ ಧರ್ಮದಲ್ಲಿ ದೇವರು ಶಿಕ್ಷೆ ವಿಧಿಸುತ್ತಾರೆ ಎಂದು ನಾಗಮೋಹನದಾಸರವರಿಗೆ ನಾನು ಹೇಳಿದ್ದೆ. ಜೊತೆಗೆ ಇಂದು ಇಲ್ಲಿ (ಸಮಿತಿಯ ಮುಂದೆ) ಬಂದಿರುವ ನಾವೆಲ್ಲ ಶುದ್ಧ ಲಿಂಗಾಯತರೇ ತಾವು ನೋಡಿದಂಥ ಯಾವುದೇ ಧರ್ಮಕ್ಕೆ ವಿರುದ್ದವಾದ ಆಚರಣೆ ನಾವು ಮಾಡುವುದಿಲ್ಲ. ಆಮೇಲೆ ಈ ಧರ್ಮದ ಪುನುರುತ್ಥಾನ ಆರಂಭವಾದುದೇ 20ನೇ ಶತಮಾನದಲ್ಲಿ. ಫ.ಗು.ಹಳಕಟ್ಟಿಯವರು 1924ರಲ್ಲಿ “ವಚನಶಾಸ್ತ್ರಸಾರ-1” ಎನ್ನುವ ವಚನಗಳ ಗ್ರಂಥ ಪ್ರಕಟಣೆ ಮಾಡುವವರೆಗೆ ಲಿಂಗಾಯತ ಧರ್ಮವೊಂದಿದೆ ಇದಕ್ಕೊಂದು ಸಾಹಿತ್ಯವಿದೆ ಎನ್ನುವುದೇ ಗೊತ್ತಿರಲಿಲ್ಲ ಅಲ್ಲಿಂದೀಚೆಗೆ ಪೂಜ್ಯ ಲಿಂಗಾನಂದ ಸ್ವಾಮೀಜಿಯವರು ಪೂಜ್ಯ ಮಾತೆ ಮಹಾದೇವಿಯವರು ಮತ್ತು ನಾಡಿನ ಅನೇಕ ಮಠಾಧೀಶರು ಮತ್ತು ಮಠದ ಅನುಯಾಯಿಗಳು ಇಂದು ಶುದ್ಧ ಲಿಂಗಾಯತ ಧರ್ಮ ಆಚರಣೆ ಮಾಡುತ್ತಿದ್ದಾರೆ ಮತ್ತು ಬೋಧಿಸುತ್ತಿದ್ದಾರೆ. ಗದುಗಿನ ಶ್ರೀಗಳು ಮೊದಲು ತಮ್ಮ ಪುಸ್ತಕ ಪ್ರಕಟಣೆಯ ಸಂಸ್ಥೆಗೆ ‘ವೀರಶೈವ ಅಧ್ಯಯನ ಸಂಸ್ಥೆ’ ಎಂದು ಹೆಸರಿಟ್ಟಿದ್ದರು ವೀರಶೈವವೇ ಬೇರೆ ಲಿಂಗಾಯತವೇ ಬೇರೆ ಎಂದು ಗೊತ್ತಾದ ತಕ್ಷಣ ಅವರು ಆ ಸಂಸ್ಥೆಗೆ ‘ಲಿಂಗಾಯತ ಅಧ್ಯಯನ ಸಂಸ್ಥೆ’ಎಂದು ಮರು ನಾಮಕರಣ ಮಾಡಿದ್ದಾರೆ. ಎನ್ನುವ ವಿಚಾರವನ್ನು ನಾನು ನಾಗಮೋಹನದಾಸರವರಿಗೆ ಅತ್ಯಂತ ಅಭಿಮಾನದಿಂದ ಹೇಳಿದೆ.

ನ್ಯಾಯಮೂರ್ತಿ ನಾಗಮೋಹನದಾಸರವರ ಮುಂದೆ ಇಷ್ಟೊಂದು ಅಭಿಮಾನದಿಂದ ನಾನು ಲಿಂಗಾಯತ ಧರ್ಮದ ಬಗ್ಗೆ ಹೇಳಿದರೂ ಕೆಲವು ಲಿಂಗಾಯತರ ಆಚರಣೆಗಳ ಬಗ್ಗೆ ಅವರ ನಡೆ ನುಡಿಗಳ ಬಗ್ಗೆ ಅವರ ಭಾವನೆಗಳ ಬಗ್ಗೆ ಅವರು ಇತರ ನಿಜ ಲಿಂಗಾಯತರ ಜೊತೆ ನಡೆದುಕೊಳ್ಳುವ ರೀತಿಯ ಬಗ್ಗೆ ನನ್ನ ಹ್ರದಯದಲ್ಲಿ ಅಭಿಮಾನವಿಲ್ಲ ಬದಲಿಗೆ ನೋವಿದೆ ಆಕ್ರೋಷವಿದೆ.

ಇನ್ನು ಎಷ್ಷು ವರ್ಷಗಳ ಕಾಲ ಮೌಢ್ಯತೆಯನ್ನೇ ನಂಬಿ ಜಾತಿಯತೆಯನ್ನೇ ಪೋಷಿಸಿ, ಬಸವತತ್ವಕ್ಕೆ ಸಮ್ಮತವಲ್ಲದೆ ಆಚರಣೆಯನ್ನೇ ಮಾಡುತ್ತೀರಿ? ನಿಮ್ಮ ಬಗ್ಗೆ ಹೊರಗಡೆಯ ಸಮಾಜ ಏನೆಂದುಕೊಳ್ಳುತ್ತಿದೆ ಎನ್ನುವುದು ನಾಗಮೋಹನದಾಸರವರ ಬಾಯಿಯಿಂದ ಕೇಳಿದ್ದಿರಲ್ಲಾ? ಯಾವಗ ನಿೀವೆಲ್ಲ ಸುಧಾರಿಸುವುದು? ನಿಮ್ಮನ್ನ ಸುಧಾರಿಸಲು ಇನ್ನು ಎಷ್ಟು ಜನ ಹಳಕಟ್ಟಿಯಂಥವರು, ಎಷ್ಟು ಜನ ಹರ್ಡೆಕರ ಮಂಜಪ್ಪನಂಥವರು ಎಷ್ಟು ಜನ ಉತ್ತಂಗಿ ಚೆನ್ನಪ್ಪರಂಥವರು ಎಷ್ಟು ಜನ ಪೂಜ್ಯ ಲಿಂಗಾನಂದ ಸ್ವಾಮೀಜಿಯಂಥವರು ಎಷ್ಟು ಜನ ಪೂಜ್ಯ ಮಾತಾಜಿಯಂಥವರು ಎಷ್ಟು ಜನ ಚೆನ್ನಬಸವ ಪಟ್ಟದೇವರಂಥವರು ಬೇಕು? ಎಂದು ನೀವೆಲ್ಲ ಸುಧಾರಿಸುವುದು? ಎಂದು ಆಕ್ರೋಷದಿಂದ ನೋವಿನಿಂದ ಕೇಳುತ್ತಿದ್ದೇನೆ.

ನ್ಯಾಯಮೂರ್ತಿ ನಾಗಮೋಹನದಾಸ್ರವರು ನನಗೆ ಇನ್ನೊಂದು ಪ್ರಶ್ನೆ ಕೇಳಿದ್ದರು “ಬಸವಣ್ಣನವರು ಯಾವ ವಚನದಲ್ಲಿಯೂ ನಾನು ಲಿಂಗಾಯತ ಧರ್ಮ ಕೊಟ್ಟಿದ್ದೇನೆ ಎಂದು ಹೇಳಿಲ್ಲವಲ್ಲ?” ಅದಕ್ಕೆ ನಾನು: “ಮಹಾವೀರ ನಾನು ಧರ್ಮಕೊಟ್ಟಿದ್ದೇನೆ ಎಂದು ಎಲ್ಲಿಯೂ ಹೇಳಿಲ್ಲ. ಬುದ್ಧ ಧರ್ಮ ಕೊಟ್ಟಿದ್ದೇನೆ ಎಂದು ಎಲ್ಲಿಯೂ ಹೇಳಿಲ್ಲ. ಯೇಸು, ಪೈಗಂಬರ್, ಗುರುನಾನಕರಾರೂ ಧರ್ಮಕೊಟ್ಟಿದ್ದೇನೆ ಎಂದೂ ಎಲ್ಲಿಯೂ ಹೇಳಿಲ್ಲ ಅದು ಆ ಧರ್ಮದ ಅನುಯಾಯಿಗಳು ಮಾಡಿಕೊಂಡಿದ್ದಾರೆ. ಅದೇರೀತಿ ಗುರು ಬಸವಣ್ಣನವರು ಧರ್ಮ ಕೊಟ್ಟಿದ್ದೇನೆ ಎಂದು ನೇರವಾಗಿ ಹೇಳದಿದ್ದರೂ ಪರೋಕ್ಷವಾಗಿ ಅವರು ಹೇಳಿದ್ದಾರೆ.

ಹಲವು ಕೊಂಬಿಗೆ ಹಾಯಲು ಬೇಡ
ಬರುಕಾಯಕ್ಕೆ ನೀಡಲು ಬೇಡ,
ಲೋಗರಿಗೆ ಕೊಟ್ಟು ಭ್ರಮಿತನಾಗಿರಬೇಡ
ಆಚಾರವೆಂಬುದು ಹಾವಸೆಗಲ್ಲು
ಭಾವತಪ್ಪಿದ ಬಳಿಕ ಏಗೈದಡಾಗದು
ಅಂಜದಿರು ಅಳುಕದಿರು ಪರದೈವಕ್ಕೆರಗದಿರು
ಕೂಡಲ ಸಂಗನ ಕೈಯಲು ಈಸುವುದೆನ್ನ ಭಾರ.

ಮೇಲಿನ ವಚನದಲ್ಲಿ ಕೂಡಲ ಸಂಗನ ಕೈಯಲು ಈಸುವುದೆನ್ನ ಭಾರ ಎಂದು ಹೇಳುವಲ್ಲಿ ಸದಾಚಾರದಲ್ಲಿ ನಡೆವವರೆಗೆ ಗುರು ಬಸವಣ್ಣವರು ದೇವರಕಡೆಯಿಂದ ನಿನಗೆ ಬೇಕಾದುದನ್ನು ಕೊಡಿಸುವುದು ಎನ್ನ ಭಾರ ಎಂದು ಹೇಳಿದ್ದಾರೆ. ಇಂತಹ ಮಾತು ಪ್ರವಾದಿ ಧರ್ಮಗುರು, ಧರ್ಮಕರ್ತೃವಲ್ಲದೆ ಬೇರೊಬ್ಬರು ಹೇಳಲು ಸಾಧ್ಯವಿಲ್ಲ. ಮತ್ತು ಗುರು ಸಿದ್ಧರಾಮೇಶ್ವರರು ಗುರು ಬಸವಣ್ಣನವರು ಒಂದು ಧರ್ಮ ಕೊಟ್ಟಿದ್ದಾರೆ ಎಂದು ಅಂದೇ ಹೇಳಿದ್ದಾರೆ.

ಕರುಣಿ ಬಸವಾ, ಕಾಲಹರ ಬಸವಾ, ಕರ್ಮಹರ ಬಸವಾ,
ನಿರ್ಮಳ ಬಸವಾ, ಶಿವಜ್ಞಾನಿ ಬಸವಾ,
ನಿಮ್ಮ ಧರ್ಮವಯ್ಯ ಈ ಭಕ್ತಿಯ ಪಥವು.
ಕರುಣಿ ಕಪಿಲಸಿದ್ಧ ಮಲ್ಲಿನಾಥಯ್ಯ ನಿಮಗೂ ಎನಗೂ
ಬಸವಣ್ಣನ ಧರ್ಮವಯ್ಯಾ.
ಹೀಗೆ ಗುರು ಬಸವಣ್ಣನವರು ನೀಡಿದ ಧರ್ಮದ ಬಗ್ಗೆ ಸಿದ್ಧರಾಮೇಶ್ವರು ಅಂದೇ ಹೇಳಿದ್ದಾರೆ ಎಂದೆ. ಆಗ ನಾಗಮೋಹನದಾಸ್ ರವರು ಮತ್ತೊಂದು ಪ್ರಶ್ನೆ ಕೇಳಿದರು “ಹಾಗಾದರೆ ಲಿಂಗಾಯತನೂ ಬೇಡ, ವೀರಶೈವವೂ ಬೇಡ. ಬಸವಧರ್ಮ ಎಂದು ಕರೆಯಬಹುದಲ್ಲ? ಎಂದರು. ಆಗ ನಾನು “ಹನ್ನೆರಡನೇ ಶತಮಾನದ ಎಲ್ಲಾ ಶರಣರ ಆಶಯವೂ ಇದೇ ಆಗಿತ್ತು ಬಸವಣ್ಣನವರಿಂದ ಹುಟ್ಟಿದುದು ಬಸವಧರ್ಮ ಎಂದಾಗಿದಿದ್ದರೆ ಇಂದು ಇಷ್ಟೊಂದು ಗೊಂದಲವೇ ಆಗುತ್ತಿರಲಿಲ್ಲ. ಒಂದು ವೇಳೆ ತಾವು ತಮ್ಮ ಸಮಿತಿಯ ಮೂಲಕ ಬಸವಧರ್ಮ ಸ್ವತಂತ್ರ ಧರ್ಮ ಎಂದು ಮಾನ್ಯತೆ ಕೊಡಿಸುವುದಾದರೆ ಅದಕ್ಕಿಂತ ಸಂತೋಷವಾದುದು ಮತ್ತೊಂದಿಲ್ಲ. ಆದರೆ ಗುರು ಬಸವಣ್ಣನವರು ತಮ್ಮ ಹೆಸರಿನಿಂದ ಈ ಧರ್ಮವನ್ನು ಕರೆಯಲು ಇಷ್ಟಪಡಲಿಲ್ಲ ಜಗತ್ತಿನ ಸಾರ್ವಭೌಮನಾದ ದೇವರ ಹೆಸರಿನಲ್ಲಿ ಈ ಧರ್ಮವನ್ನು ಕರೆಯಬೇಕು ಎಂದು ‘ಲಿಂಗವಂತ’-‘ಲಿಂಗಾಯತ’ ಎನ್ನುವ ಪದದಿಂದ ಈ ಧರ್ಮವನ್ನು ಕರೆದರು. ಇಂದು ಬಸವತತ್ವ ಗೊತ್ತಿರದ ಅನೇಕ ಗುಡ್ಡಗಾಡು ಜನರೂ ಇದ್ದಾರೆ ಕರ್ನಾಟಕದೊಂದಿಗೆ ಸಂಪರ್ಕವೇ ಇರದ ಇನ್ನೂ ಅನೇಕ ಲಿಂಗಾಯತರಿದ್ದಾರೆ ಅವರಿಗೆ ಪರಂಪರಾಗತವಾಗಿ ನಾವು ಲಿಂಗಾಯತರು ಎನ್ನುವ ಅರಿವು ಅಷ್ಟೇ ಇದೆ. ಅದ್ಕಾಗಿ ಲಿಂಗಾಯತ ಧರ್ಮ ಎನ್ನುವುದೇ ಸೂಕ್ತ” ಎಂದು ನಾನು ಹೇಳಿದೆ.

(Published in May - 2018 Kalyana kirana)

*
ಪರಿವಿಡಿ (index)
Previousಲಿಂಗಾಯತರು ಶೂದ್ರರೆ?ಮಹಾಂತ ಜೋಳಿಗೆ ಸ್ವಾಮೀಜಿNext
*