ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನಮಠ ಚಿತ್ರದುರ್ಗ

*

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನಮಠ ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಒಂದು ಅಸಾಧಾರಣ ಸಂಸ್ಥೆಯಾಗಿದೆ. ಈ ಮಠವು ಚಿತ್ರದುರ್ಗದ ಪಶ್ಚಿಮ ಭಾಗದ ಸುಂದರ ಮತ್ತು ಪ್ರಶಾಂತವಾದ ಸ್ಥಳದಲ್ಲಿದೆ. ಈ ಹೆಸರಾಂತ ಸಂಪ್ರದಾಯದ ಮಠವು ಮೂರು ಶತಮಾನಗಳಿಂದ ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ರಾಜ್ಯದ ಅಭಿವೃದ್ಧಿಯಲ್ಲಿ ನಿಷ್ಠಾವಂತ ಸೇವೆ ಒದಗಿಸುತ್ತಿದೆ. ಈ ಅಭಿವೃದ್ಧಿ ಕಾರ್ಯಗಳಿಂದ ಇದು ಒಂದು ದೇಶದ ದೊಡ್ಡ ಆಸ್ತಿ ಹಾಗೂ ಉನ್ನತ ಸ್ಥಾನ ಹೊಂದಿದೆ.

ಮುರುಘಾ ಮಠ ಇತಿಹಾಸ

ಚಿತ್ರದುರ್ಗವನ್ನಾಳಿದ ಪ್ರಸಿದ್ದ ಪಾಳೆಯಗಾರರಲ್ಲಿ “ಬಿಚ್ಚುಗತ್ತಿ ಭರಮಣ್ಣನಾಯಕ”ನೂ ಒಬ್ಬ. ಕ್ರಿ.ಶ.1689 ರಿಂದ 1721 ರವರೆಗೆ ಆಳ್ವಿಕೆ “ಮುಂದೇ ನೀನು ಚಿತ್ರದುರ್ಗದ ರಾಜನಾಗುತ್ತಿಯೆಂದು”. ಚಿತ್ರದುರ್ಗದ ಬೃಹನ್ಮಠದ ಪರಂಪರೆಯಲ್ಲಿನ ಎಂಟನೇ ಪಟ್ಟಾಧಿಕಾರಿಗಳಾಗಿದ್ದ ಮುರಿಘೇಂದ್ರ ರಾಜೇಂದ್ರರು (ಕ್ರಿ.ಶ.1640-1710) ಆರ್ಶೀವಾದ ಮಾಡಿದರಂತೆ. ನಂತರದಲ್ಲಿ ಪ್ರವಾಸದಿಂದ ಮರಳಿ ಬರುವ ವೇಳೆಗೆ, ಭರಮಣ್ಣನಾಯಕನ ಚಿತ್ರದುರ್ಗದ ರಾಜನಾಗಿದ್ದ. ಪ್ರವಾಸದಿಂದ ಹಿಂದಿರುಗಿದ ತಮ್ಮ ಗುರುಗಳನ್ನು ಕಂಡು ಹರ್ಷಿತಗೊಂಡ ಅವನು ತುಂಬುಮನಸ್ಸಿನಿಂದ ಗುರುಗಳನ್ನು ಸ್ವಾಗತಿಸಿದ. ತನ್ನ ಭಕ್ತಿಯ ಕಾಣಿಕೆಯೆಂಬಂತೆ ಬೆಟ್ಟದ ಮೇಲಿರುವ ಸಂಪಿಗೆ ಸಿದ್ದೇಶ್ವರ ದೇವಸ್ಥಾನದ ಪಕ್ಕದಲ್ಲಿ 360 ಅಂಕಣಗಳ ವಿಸ್ತಾರವಾದ ದೊಡ್ಡಮಠವೊಂದನ್ನು ಕಟ್ಟಿಸಿಕೊಟ್ಟ. ಅನಂತರ ಬೆಟ್ಟದಿಂದ ದೂರದಲ್ಲಿರುವ ಸ್ಥಳದಲ್ಲಿ ಇನ್ನೊಂದು ಮಠವನ್ನು ನಿರ್ಮಿಸಿದ. ಮಠಕ್ಕೆ ಅವನು ಅರ್ಪಿಸಿದ ವಸ್ತುಗಳಲ್ಲಿ ಗಂಟೆಯೂ ಒಂದು. ಅದರಲ್ಲಿ ಅವರ ಹೆಸರಿದೆ. ಹೀಗಾಗಿ ಶ್ರೀ ಮುರಿಗೇಂದ್ರ ರಾಜೇಂದ್ರರೇ ಈ ಪೀಠದ ಮೂಲ ಸ್ಥಾಪಕರಾಗಿದ್ದಾರೆ. ಈಗ ಬೆಟ್ಟದ ಮೇಲಿರುವ ಮಠ ಬಳಕೆಯಲ್ಲಿದೇ ಕೇವಲ ಒಂದು ಸ್ಮಾರಕವಾಗಿದೆ.

ಈಗಿರುವ ಮುರುಘಾಮಠವು ಚಿತ್ರದುರ್ಗ-ದಾವಣಗೆರೆ ಹೆದ್ದಾರಿಯಲ್ಲಿ ಚಿತ್ರದುರ್ಗದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಈ ಮಠ ಕ್ರಿ.ಶ. 1703ರ ಸುಮಾರಿನಲ್ಲಿ ನಿರ್ಮಾಣವಾಗಿರಬಹುದೆಂದು ಭಾವಿಸಲಾಗಿದೆ. ವಿಶಾಲವಾದ ಸ್ಥಳದಲ್ಲಿ ಭವ್ಯವಾದ ಅರಮನೆಯನ್ನು ಹೋಲುವಂತಹ ಕಟ್ಟಡವನ್ನು ಹೊಂದಿರುವ ಈ ಬೃಹನ್ಮಠ ಸ್ಥಾಪನೆಯಾದಗಿನಿಂದ ಪಾಳೆಯಗಾರರಿಂದ ಇನ್ನಿತರ ಸಂಸ್ಥಾನಗಳವರಿಂದ ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರಿಂದ ಗೌರವಾದರಗಳು ಸಲ್ಲುತ್ತಲೇ ಬಂದಿವೆ. ಈಗಿನ ಪಟ್ಟಾಧಿಕಾರಿಗಳಾದ ಶ್ರೀ ಶಿವಮೂರ್ತಿ ಸ್ವಾಮಿಗಳವರ ಆಶ್ರಯದಲ್ಲಿ ಅನೇಕ ವಿದ್ಯಾಸಂಸ್ಥೆಗಳು ನಡೆಯುತ್ತಿವೆ.

ಸಾಮಾಜಿಕ ಕ್ಷೇತ್ರದಲ್ಲಿ ಮುರುಘಾ ಮಠ:

· ಜನರ ಸಂಕಷ್ಟಗಳಿಗೆ ಬೃಹನ್ಮಠವು ಸದಾ ಮಿಡಿಯುತ್ತ ಬಂದಿದೆ. ಭೀಕರ ಬರಗಾಲ ಬಿದ್ದಾಗ ಗಂಜಿಕೇಂದ್ರಗಳನ್ನು ಸ್ಥಾಪಿಸಿ ಅನೇಕರ ಪ್ರಾಣ ಉಳಿಸಿದೆ.
· ಬಡವಿದ್ಯಾರ್ಥಿಗಳಿಗಾಗಿ ಹಲವೆಡೆ ಉಚಿತ ಪ್ರಸಾದ ನಿಲಯಗಳನ್ನು ತೆರೆದಿದೆ.
· ಕೋಮು ಗಲಭೆಯಲ್ಲಿ ನೊಂದವರಿಗೆ ಸಾಂತ್ವನ ನೀಡಿದೆ.
· ಆಶ್ರಯವಿಲ್ಲದ ಬಡವರಿಗೆ, ಹಿಂದುಳಿದವರಿಗೆ ಹಾಗೂ ದಲಿತರಿಗೆ ಮಠವು ನಿವೇಶನಗಳನ್ನಾಗಿ ಮಾಡಿ, ಉಚಿತವಾಗಿ ಹಂಚಿದೆ.
· ಹಲವು ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳು ಮತ್ತು ಶ್ರೀಮಠಕ್ಕೆ ಪರಸ್ಥಳಗಳಿಂದ ಬಂದು ಹೋಗುವ ಜನರಿಗೆ ನಿತ್ಯದಾಸೋಹ.
ಹೀಗೆ ಹತ್ತು ಕೆಲವು ಜನಪರ ಕಾರ್ಯಗಳೊಂದಿಗೆ ಈ ಬೃಹನ್ಮಠವು ಆಧ್ಯಾತ್ಮಿಕದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದೆ.

ಶಿಕ್ಷಣ ಕ್ಷೇತ್ರದಲ್ಲಿ ಮುರುಘಾ ಮಠ:

“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ” ಎಂಬ ಬಸವಣ್ಣನವರ ವಾಣಿಯಂತೆ ಶಿಕ್ಷಣ ಪ್ರಸಾರವೇ ಸಮಾಜದ ಏಳಿಗೆಗೆ ಕಾರಣವೆಂಬುದನ್ನು ಬೃಹನ್ಮಠ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದೆ.

ಕರ್ನಾಟಕದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಶಾಲಾ ಕಾಲೇಜುಗಳು, ಪ್ರಸಾದ ನಿಲಯಗಳು ಇವನ್ನು ನಡೆಸುತ್ತಿರುವ ಕೆಲವೇ ಧಾರ್ಮಿಕ ಸಂಸ್ಥೆಗಳಲ್ಲಿ ಬೃಹನ್ಮಠವೂ ಒಂದಾಗಿದೆ. ಇದರ ಒಂದು ಅಂಗಸಂಸ್ಥೆಯಾದ ‘ಎಸ್.ಜೆ.ಎಂ. ವಿದ್ಯಾಪೀಠ’ವು ಶಿಶುವಿಹಾರಗಳು, ಪ್ರಾಥಮಿಕ-ಮಾಧ್ಯಮಿಕ-ಪ್ರೌಢಶಾಲೆಗಳು ಪದವಿಪೂರ್ವ ಮತ್ತು ಕಲಾ, ವಿಜ್ಞಾನ, ವಾಣಿಜ್ಯ, ಕಾನೂನು, ಲಲಿತಕಲಾ ಪದವಿ ಕಾಲೇಜುಗಳು; ಚಿತ್ರಕಲಾ, ಶುಶ್ರೂಷೆ ಮತ್ತಿತರ ವೃತ್ತಿ ಶಿಕ್ಷಣದ ವಿವಿಧ ವಿದ್ಯಾಲಯಗಳು; ತಂತ್ರಜ್ಞಾನ, ದಂತವೈದ್ಯಕೀಯ, ಔಷಧಿ ವಿಜ್ಞಾನ ಮಹಾವಿದ್ಯಾಲಯಗಳು; ಅಂಗವಿಕಲ ಮಕ್ಕಳ ವಸತಿಯುತ ಶಾಲೆಗಳು, ಈ ಮುಂತಾದುವುಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈ ವಿದ್ಯಾಪೀಠದ ವಿವಿಧ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಸುಮಾರು ಮುಕ್ಕಾಲು ಪಾಲು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಎಂಬುದು ಗಮನಾರ್ಹ ಸಂಗತಿ. ಬೃಹನ್ಮಠವು ಹೀಗೆ ಕೇವಲ ಧಾರ್ಮಿಕ ಸಂಸ್ಥೆಯಾಗಷ್ಟೆ ಉಳಿಯದೇ, ಶಿಕ್ಷಣ ಕ್ಷೇತ್ರದಲ್ಲೂ ವಿಶಿಷ್ಟ ಸೇವೆಯನ್ನು ಸಲ್ಲಿಸಿದೆ ಮತ್ತು ಈಗಲೂ ಸಲ್ಲಿಸುತ್ತದೆ.

ಪರಿವಿಡಿ (index)
*
Previousಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಡಾ|| ಫ.ಗು.ಹಳಕಟ್ಟಿ Next
*