Previous ಲಿಂಗಾಯತ ಧರ್ಮ ಸಂವಿಧಾನ ಮತ್ತು ಭಾರತ ದೇಶದ ಸಂವಿಧಾನ ಸರ್ ಸಿದ್ದಪ್ಪ ಕಂಬಳಿ Next

ಡಾ|| ಮಹಾಂತ ಸ್ವಾಮೀಜಿ

*

ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲೂಕು ಇಳಕಲ್‌ನ ವಿಜಯ ಮಹಾಂತೇಶ ಪೀಠದ

ಡಾ|| ಮಹಾಂತ ಸ್ವಾಮೀಜಿ

ಮಹಾಂತ ಜೋಳಿಗೆ ಸ್ವಾಮೀಜಿ ಎಂದೇ ಖ್ಯಾತರಾಗಿದ್ದ ಮಹಾಂತ ಶ್ರೀಗಳ ಜನ್ಮದಿನವನ್ನು ಘನ ಕರ್ನಾಟಕ ರಾಜ್ಯ ಸರಕಾರ ವ್ಯಸನಮುಕ್ತ ದಿನ ಎಂದು ಘೋಷಿಸಿದೆ. ಮಠಾಧೀಶರಾಗಿದ್ದ ಅವರು ಜನರ ದುಶ್ಚಟಗಳನ್ನು ದೂರವಾಗಿಸಲು ಮಹಾಂತ ಜೋಳಿಗೆ ಎಂಬ ಚಿಂತನೆ ಜಾರಿಗೊಳಿಸಿದ್ದರು. ಸಾವಿರಾರು ಜನರು ಸ್ವಾಮೀಜಿಯವರಿಂದ ಪ್ರೇರಿತರಾಗಿ ದುಶ್ಚಟ ಬಿಟ್ಟಿದ್ದರು.

Mahaant Swamiji, Mahant Jolige Swamiji, ಮಹಾಂತ ಜೋಳಿಗೆ ಸ್ವಾಮೀಜಿ

ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ *ಮಳಲಿ ಗ್ರಾಮದಲ್ಲಿ 1 ಆಗಸ್ಟ್ 1930 ರಂದು ಶ್ರೀಗಳು ಜನಿಸಿದರು. ವಿರುಪಾಕ್ಷಯ್ಯ, ನೀಲಮ್ಮ ಪಾಲಭಾವಿಮಠ ಇವರ ಪಾಲಕರು. ಹಿಪ್ಪರಗಿ, ಮುಧೋಳ ಹಾಗೂ ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸ ಮಾಡಿದರು. ಕಾಶಿಯ ಕ್ವೀನ್ಸ್‌ ಕಾಲೇಜ್‌, ಗದಗನ ವೀರೇಶ್ವರ ಪುಣ್ಯಾಶ್ರಮಗಳಲ್ಲಿ ಅಧ್ಯಾತ್ಮ ಅಧ್ಯಯನ, ಸಂಗೀತ, ಕನ್ನಡ, ಹಿಂದಿ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಪಡೆದರು. ಅಥಣಿ ತಾಲೂಕಿನ ಸವದಿಯ ವಿರಕ್ತ ಮಠಕ್ಕೆ 1961 ರಲ್ಲಿ ಪೀಠಾಧಿಪತಿಯಾಗಿ ನೇಮಕಗೊಂಡರು. 1970ರಲ್ಲಿ ಇಳಕಲ್‌ ಮಠದ ಪೀಠಾಧಿಕಾರಿಯಾದ ಮಹಾಂತ ಶ್ರೀಗಳು 48 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದರು. ಶ್ರೀಗಳ ಸೇವೆ ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪದವಿ ಸೇರಿದಂತೆ ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿಗಳು ಅರಸಿ ಬಂದಿವೆ.

ದುಶ್ಚಟಗಳನ್ನೇ ಭಿಕ್ಷೆ ಕೇಳಿದರು

‘ಮಹಾಂತ ಜೋಳಿಗೆ’ ಎಂಬ ವಿಶಿಷ್ಟ ಪರಿಕಲ್ಪನೆ ಮೂಲಕ ದೇಶ - ವಿದೇಶಗಳಲ್ಲಿ ಜನರ ದುಶ್ಚಟ ಬಿಡಿಸುವಲ್ಲಿ ಶ್ರೀಗಳು ಸಫಲರಾಗಿದ್ದರು. ತಮ್ಮ ಜೋಳಿಗೆಯನ್ನು ಹಿಡಿದು ಶ್ರೀಗಳು ಗ್ರಾಮ, ನಗರ ಸೇರಿದಂತೆ ದೇಶದಾದ್ಯಂತ ಸಂಚಾರ ನಡೆಸಿದ್ದರು. ಸಾವಿರಾರು ಜನ ತಮ್ಮ ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಮುಕ್ತಿ ಪಡೆದಿದ್ದರು. ಶ್ರೀಗಳ ಶ್ರಮದಿಂದ ಸಾವಿರಾರು ಜನ ಮದ್ಯಪಾನ ತ್ಯಜಿಸಿದ್ದರು, ಶ್ರೀಗಳ ಸಮಾಜ ಸೇವೆ ಕಂಡ ರಾಜ್ಯ ಸರಕಾರ ಅವರ ಜನ್ಮದಿನವಾದ ಆ.1 ರಂದು ‘ವ್ಯಸನಮುಕ್ತ ದಿನ’ ವಾಗಿ ಘೋಷಿಸಿತು. ಇತ್ತೀಚೆಗೆ ಭಕ್ತರು ಆನ್‌ಲೈನ್‌ನಲ್ಲೂ ಮಹಾಂತ ಜೋಳಿಗೆ ಆರಂಭಿಸಿ ಜನರು ದುಶ್ಚಟ ಬಿಡುವಂತೆ ಸಾರ್ವಜನಿಕರಿಗೆ ಪ್ರೇರೇಪಣೆ ನೀಡಿದ್ದರು. ಕಂದಾಚಾರ, ಮೌಢ್ಯವನ್ನು ನಿವಾರಿಸುವ ಉದ್ದೇಶದಿಂದ ಸ್ವಾಮೀಜಿ ಹಲವಾರು ಹೊಸ ಆಚರಣೆಗಳನ್ನು ಜಾರಿಗೆ ತಂದಿದ್ದರು. ಮಠದಲ್ಲಿ ದಲಿತರಿಗೂ ಪೂಜೆ, ಪ್ರಸಾದಕ್ಕೆ ಅವಕಾಶ ನೀಡಿದ್ದಾರೆ. ಮದುವೆಗಳಲ್ಲಿ ವಧು, ವರರಿಗೆ ಅಕ್ಷತೆಗಾಗಿ ಅಕ್ಕಿ ಹಾಳು ಮಾಡುವ ಬದಲು ಹೂವು ಹಾಕಲು ಆದೇಶಿಸಿದ್ದರು. ವಚನ ಪಠಣದ ಮೂಲಕ ಸರಳ ಮದುವೆಗೆ ಪ್ರೋತ್ಸಾಹಿಸಿದ್ದರು. ಗದ್ದುಗೆಗಳ ಮೇಲೆ ಮೂರ್ತಿಗಳ ಬದಲಾಗಿ ವಚನ ಸಾಹಿತ್ಯ ಪುಸ್ತಕಗಳ ಸ್ಥಾಪನೆ, ರುದ್ರಾಭಿಷೇಕದ ಬದಲಾಗಿ ವಚನಾಭಿಷೇಕ, ಕಾರ್ತಿಕೋತ್ಸವದಲ್ಲಿ ಎಣ್ಣೆಯ ಬಳಕೆ ತಡೆಗಟ್ಟಿದ್ದು ಇವರ ಸಾಮಾಜಿಕ ಚಿಂತನೆಗೆ ಸಾಕ್ಷಿಯಾಗಿದೆ. ನಾಗಪಂಚಮಿಯಂದು ಕಲ್ಲಿನ ಹಾವಿಗೆ ಹಾಲೆರೆಯುವ ಬದಲು ಸಾವಿರಾರು ಮಕ್ಕಳಿಗೆ ಹಾಲು ಕುಡಿಸುವ ಮೂಲಕ ವೈಚಾರಿಕ ಜಾಗೃತಿ ಮೂಡಿಸಿದವರು. ಮಠದಲ್ಲಿ ರಂಜಾನ್‌ ಸಂದರ್ಭದಲ್ಲಿ ಶಾಖಾಹಾರದ ಇಫ್ತಿಯಾರ್‌ ಕೂಟ, ಸರ್ವ ಧರ್ಮ ಸಮ್ಮೇಳನ ಆಯೋಜಿಸಿ ಭಾವೈಕ್ಯತೆ ಮೆರೆದಿದ್ದಾರೆ.

ಬಸವ ತತ್ವ ಅನುಷ್ಠಾನ, ವೈಚಾರಿಕತೆ, ದುಶ್ಚಟಗಳ ನಿರ್ಮೂಲನೆ, ಸಾಮಾಜಿಕ ಕ್ರಾಂತಿ, ಕಂದಾಚಾರ - ಮೌಢ್ಯಗಳ ವಿರೋಧಿ ಆಂದೋಲನ ಹೀಗೆ ಹಲವಾರು ವಿಶೇಷ ಕಾರ್ಯಕ್ರಮಗಳ ಮೂಲಕ ನಾಡಿನಾದ್ಯಂತ ಚಾಪು ಮೂಡಿಸಿದ್ದ ಶ್ರೀಗಳು ೨೦೧೮ ರ ಮೇ ೧೯ ರಲ್ಲಿ ಲಿಂಗೈಕ್ಯರಾದರು.

*
Previous ಲಿಂಗಾಯತ ಧರ್ಮ ಸಂವಿಧಾನ ಮತ್ತು ಭಾರತ ದೇಶದ ಸಂವಿಧಾನ ಸರ್ ಸಿದ್ದಪ್ಪ ಕಂಬಳಿ Next