ಲಿಂಗಾಯತರು ಹಿಂದೂಗಳಲ್ಲ

*

- ಡಾ.ಎನ್.ಜಿ.ಮಹಾದೇವಪ್ಪ,

ಲಿಂಗಾಯತರು ಹಿಂದೂಗಳಲ್ಲ: ಹಿನ್ನೆಲೆ

ಲಿಂಗಾಯತರು (ವೀರಶೈವರು) ಶೂದ್ರರೆಂಬ ತಲೆತಲಾಂತರದ ನಿಂದೆಯನ್ನು ತೊಡೆದು ಹಾಕುವುದಕ್ಕಾಗಿ, ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಕೆಲವು ವೀರಶೈವ ಮುಖಂಡರು, ತಮ್ಮ ಧರ್ಮವು ಪುರಾತನ; ಅದರ ಪ್ರಮುಖ ತತ್ತ್ವಗಳು ಶೈವಾಗಮ ಮತ್ತು ವೇದಗಳಲ್ಲಿ ಪ್ರಸ್ತಾಪಿಸಲ್ಪಟ್ಟಿವೆ; ವೀರಶೈವರು ಲಿಂಗೀಬ್ರಾಹ್ಮಣರೇ ಹೊರತು, ಶೂದ್ರರಲ್ಲ, ಆದುದರಿಂದ, ವೇದಾಧ್ಯಯನ, ಪೂಜೆ, ಪೌರೋಹಿತ್ಯಗಳ ಅಧಿಕಾರ ವೀರಶೈವರಿಗೂ ಇದೆ - ಎಂದು ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿದರು. ಆದರೆ, ನ್ಯಾಯಾಲಯಗಳಲ್ಲಿ ಇದಕ್ಕೆ ವಿರುದ್ಧವಾಗಿ ಕೆಲವರು ವೀರಶೈವರು ಹಿಂದೂ ವರ್ಣವ್ಯವಸ್ಥೆಯಲ್ಲಿ ಶೂದ್ರವರ್ಣಕ್ಕೆ ಸೇರಿದವರೆಂಬ ವಾದವನ್ನು ಮಂಡಿಸಿದರು.

ಈ ಮೊಕದ್ದಮೆಗೆ ಮುಖ್ಯ ಕಾರಣವೆಂದರೆ, ಭಾರತೀಯ ಸಮಾಜದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ, ಆಗ ಬ್ರಾಹ್ಮಣರನಂತರ ಹೆಚ್ಚು ವಿದ್ಯಾವಂತರಾಗಿದ್ದವರೆಂದರೆ ವೀರಶೈವರು ಮಾತ್ರ. ಅವರು ತಮ್ಮವೇ ಆದ ಮಠಗಳನ್ನೂ, ಸಂಸ್ಕೃತ-ಜ್ಯೋತಿಷ್ಯ ಪಾಠಶಾಲೆಗಳನ್ನೂ, ಕೆಲವು ಗುಡಿಗಳಲ್ಲಿ ಪೂಜೆ ಮಾಡುವ ಪಾರಂಪರಿಕ ಹಕ್ಕುಗಳನ್ನೂ ಉಳ್ಳವರಾಗಿದ್ದರು. ಪೂಜೆಯ ಹಕ್ಕನ್ನು ಇನ್ನೂ ವಿಸ್ತರಿಸಿ ಎಲ್ಲ ಶೈವ ದೇವಾಲಯಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಹೆಚ್ಚಿನ ಪ್ರತಿಷ್ಠೆಯನ್ನೂ ವರಮಾನವನ್ನೂ ಪಡೆಯಬೇಕೆಂಬ ಉದ್ದೇಶ ಕೆಲವರಿಗಿತ್ತು. ಬ್ರಾಹ್ಮಣರ ಕೂಡ ನಡೆದ ಈ ಪೈಪೋಟಿಯಲ್ಲಿ ಹೆಚ್ಚಿನ ಪಾತ್ರ ವಹಿಸಿದವರು ಸ್ವಾಮಿಗಳು, ವೀರಶೈವರಲ್ಲಿ ಪೂಜೆ, ಪೌರೋಹಿತ್ಯ ನಡೆಸುತ್ತಿದ್ದ "ಜಂಗಮಜಾತಿ"ಯ ಅಯ್ಯನವರು ಹಾಗೂ ವಿದ್ಯಾವಂತ, `ಭಕ್ತ'ವರ್ಗಕ್ಕೆ ಸೇರಿದ ಹಣವಂತ ವರ್ತಕ ಸಮುದಾಯದವರು.

ಈ ಅಭಿಮಾನದ ಪ್ರಶ್ನೆಯ ಇತರ ಮಗ್ಗಲುಗಳನ್ನೂ ಇಲ್ಲಿ ಗಮನಿಸಬೇಕು:
1) ಯಾವುದೇ ಧರ್ಮದ ಪ್ರಾಚೀನತೆಯು ಅದರ ಶ್ರೇಷ್ಠತೆಯನ್ನು ತೋರಿಸುತ್ತದೆ ಎನ್ನುವ ಭಾವನೆಯಿಂದ ಕೆಲವು ವಿದ್ಯಾವಂತರು ಶಿವ, ಲಿಂಗ, ಪಶುಪತಿ ಮುಂತಾದುವುಗಳ ಸಮಾನ ಸೂಚಕಗಳ ಆಧಾರದ ಮೇಲೆ, ವೀರಶೈವ ಧರ್ಮವು ಮೊಹೆಂಜೋದಾರೊ ಕಾಲದಿಂದಲೂ ಅಸ್ತಿತ್ವದಲ್ಲಿತ್ತೆಂದೂ ಅದಕ್ಕಿಂತ ಇನ್ನೂ ಹಿಂದೆ ಹೋಗಿ ಕೃತಯುಗದಲ್ಲಿಯೇ ವಿಭೀಷಣನ ಲಂಕೆಯಲ್ಲಿ ಕೋಟ್ಯಂತರ ಲಿಂಗಗಳು ಸ್ಥಾಪಿತವಾಗಿದ್ದುವೆಂದೂ ತೋರಿಸಲು ತಕ್ಕ ಪ್ರಯತ್ನ ಮಾಡಿದ್ದಾರೆ. ಕೆಲವು ವೀರಶೈವರು ತಮ್ಮ ಸಾಹಿತ್ಯವು ವೇದ, ಉಪನಿಷತ್ತುಗಳಲ್ಲಿ ಆಗಲೆ ಪ್ರಸ್ತಾಪಿಸಲ್ಪಟ್ಟಿದೆ - ಎಂದು ವಾದಿಸಿರುವರಲ್ಲದೆ, ಅದಕ್ಕೆ ಸಮರ್ಥನೆ ನೀಡಲು ಕೆಲವೊಂದು ರೀತಿಯ ಸಾಹಿತ್ಯವನ್ನೂ ರಚಿಸಿದರು. ಇದರಲ್ಲಿ ಎದ್ದು ಕಾಣುವ ಮತ್ತು ಬಹಳ ಪ್ರಖ್ಯಾತವಾಗಿರುವ ಗ್ರಂಥವೆಂದರೆ, ಶ್ರೀಕರಭಾಷ್ಯ. ರಾಮಾನುಜಾಚಾರ್ಯರ ಶ್ರೀಭಾಷ್ಯದ ಅನೇಕ ಭಾಗಗಳನ್ನೂ ಮಧ್ವಮತ ಖಂಡನೆ ಮತ್ತು ಮಧ್ವಾಚಾರ್ಯರು ಬಳಸಿದ ಭಾಷೆಯನ್ನೂ ಒಳಗೊಂಡಿರುವ ಈ ಗ್ರಂಥವು ಬಸವಪೂರ್ವ ಯುಗಕ್ಕೆ ಸೇರಿದುದು ಎಂದು ತೋರಿಸಲು ಪಂಡಿತೋತ್ತಮರು ಹೆಣಗಾಡಿರುವುದು (ಮತ್ತು ಸೋತಿರುವುದು) ಬಹಳ ಶೋಚನೀಯವೆನಿಸುತ್ತದೆ. ಲಿಂಗಾಯತಧರ್ಮವು ಯಾವ ವೈದಿಕ ಸಂಪ್ರದಾಯದ ದೋಷಗಳನ್ನು ಉಗ್ರವಾಗಿ ಖಂಡಿಸಿ, ಯಾವುದರ ಹಿಡಿತದಿಂದ ಹೊರಬಂದಿತೋ ಅಂಥ ವೈದಿಕ ಸಂಪ್ರದಾಯ ಲಿಂಗಾಯತಧರ್ಮದ ತಳಹದಿ, ಶ್ರೀಕರ ಭಾಷ್ಯವು ಅಂಥ ವೈದಿಕ ಸಂಪ್ರದಾಯವನ್ನು ಬೋಧಿಸುತ್ತದೆ ಎಂದು ತೋರಿಸಲು ಮಾಡಿರುವ ಪ್ರಯತ್ನ ವ್ಯರ್ಥ, ಹಾಸ್ಯಾಸ್ಪದ ಎಂದೇ ಹೇಳಬೇಕು.

2) ಬ್ರಾಹ್ಮಣರ ಕೂಡ ನಡೆದ ಈ ಪೈಪೋಟಿಯ ಪರಿಣಾಮವಾಗಿ ವೈದಿಕ ವ್ಯವಸ್ಥೆಗಳಿಗೆ ಸಮಾನಾಂತರ ವ್ಯವಸ್ಥೆಗಳನ್ನು ವೀರಶೈವದಲ್ಲಿ ಕಲ್ಪಿಸುವ ಕೆಲಸವೂ ನಡೆಯಿತು. ಉದಾ: ಬ್ರಾಹ್ಮಣರಲ್ಲಿರುವಂತೆ, ವೀರಶೈವರಲ್ಲಿ "ಜಂಗಮಜಾತಿ"ಯನ್ನು ರೂಪಿಸಿಕೊಂಡು, ಅವರಿಗೆ ಮಾತ್ರ ಪೂಜಾ, ದೀಕ್ಷಾ, ಪೌರೋಹಿತ್ಯ, ಮುಂತಾದ ಧಾರ್ಮಿಕ ಆಚರಣೆಗಳ ಅಧಿಕಾರವನ್ನು ವಹಿಸಿಕೊಡುವುದು; ಬ್ರಾಹ್ಮಣರಂತೆ ತಮ್ಮ ಹೆಸರಿನ ಮೊದಲು ``ವೇದ ಮೂರ್ತಿ'' ಮತ್ತು ಕೊನೆಗೆ "ಶಾಸ್ತ್ರಿ", "ಶರ್ಮ" ಸೇರಿಸಿಕೊಳ್ಳುವುದು; ಬ್ರಾಹ್ಮಣರ ಉಪನಯನ ಪದ್ಧತಿಯಂತೆ ಜಂಗಮರ ಮಕ್ಕಳಿಗೆ "ಅಯ್ಯಾಚಾರ" ದೀಕ್ಷೆಯನ್ನು ಕೊಡಿಸುವುದು ಮತ್ತು ಬ್ರಾಹ್ಮಣರಲ್ಲಿರುವಂತೆ ಈ ಅಯ್ಯಾಚಾರ ಪದ್ಧತಿಯನ್ನು ಹೆಣ್ಣು ಮಕ್ಕಳಿಗೆ ಕೊಡಿಸದಿರುವುದು; ಲಿಂಗಾಯತರಲ್ಲಿ ಗೋತ್ರಜಾತಿಗಳಿವೆಯೆಂದು ಸುಳ್ಳು ಸೃಷ್ಟಿಸಿ ಅಪಪ್ರಚಾರ ಮಾಡುವುದು, ಮುಂತಾದ ಅನಿಷ್ಟ ಕಾರ್ಯಗಳು ಜರುಗಿದವು.

ಬ್ರಾಹ್ಮಣರ ಕೂಡ ನಡೆದ ಈ ಸ್ಪರ್ಧೆಯಿಂದಾಗಿ ಒಳ್ಳೆಯ ಪರಿಣಾಮವೂ ಉಂಟಾಯಿತು. ಅದೆಂದರೆ, ವೀರಶೈವ ಸಮಾಜದ ಸಂಘಟನೆ. ವೀರಶೈವವು ಒಂದು ನಿರ್ದಿಷ್ಟ ಸ್ವಾಭಿಮಾನಿ ಸಮಾಜ, ಧರ್ಮಾಚರಣೆಗಳಲ್ಲಿ ಬ್ರಾಹ್ಮಣಗಿರುವಷ್ಟೇ ಆಸಕ್ತಿ ಮತ್ತು ಸಮರ್ಥ್ಯ ವೀರಶೈವರಿಗೂ ಇದೆ, ಎಂಬುದು ವೀರಶೈವರಿಗೂ ಇತರರಿಗೂ ಮನದಟ್ಟಾಯಿತು. ಸಂಸ್ಕೃತ ವೇದಾಧ್ಯಯನಕ್ಕಾಗಿಯೂ, ಜ್ಯೋತಿಷ್ಯ ಶಿಕ್ಷಣಕ್ಕಾಗಿಯೂ ವೀರಶೈವರು ತಮ್ಮವೇ ಆದ ಪಾಠಶಾಲೆಗಳನ್ನು ಸ್ಥಾಪಿಸಿ, ಮುಂದುವರಿಸಿ, ಅಭಿವೃದ್ಧಿಪಡಿಸಿದರಲ್ಲದೆ, ವೀರಶೈವದ ವಿಶಿಷ್ಟ ಪರಂಪರೆಯನ್ನು ಸಂಪೂರ್ಣವಾಗಿ ಶೋಧಿಸಿ ತಿಳಿದುಕೊಳ್ಳಬೇಕೆಂಬ ಉತ್ಸಾಹದಿಂದ ವೀರಶೈವಧರ್ಮ, ಇತಿಹಾಸ, ಸಾಹಿತ್ಯ, ಮುಂತಾದುವುಗಳಲ್ಲಿ ಸಂಶೋಧನೆ, ಸಂಕಲನೆ, ಸಂಪಾದನೆ, ಪ್ರಕಟನೆ, ವ್ಯಾಸಂಗ, ಪ್ರಚಾರ ಕಾರ್ಯಗಳನ್ನು ಭರದಿಂದ ನಡೆಸಿದರು. ವಚನಸಾಹಿತ್ಯವು ಮಠ, ಅಯ್ಯನವರ ಹಾಗೂ ಮತ್ತಿತರ ಮನೆ, ಮುಂತಾದ ಸ್ಥಳಗಳಿಂದ ಹೊರಬಂದು ಪ್ರಕಟವಾಗಿ ಹೆಚ್ಚುಹೆಚ್ಚು ಜನ (ವೀರಶೈವೇತರರೂ) ಹನ್ನೆರಡನೆಯ ಶತಮಾನದ ಬಸವಾದಿ ಶರಣರ ತಾತ್ವಿಕ ವಿಚಾರಗಳನ್ನೂ, ಆಚಾರಗಳನ್ನೂ, ಸಂಸ್ಕಾರಗಳನ್ನೂ, ಉದಾತ್ತ ಅನುಭಾವ ಸಂಪತ್ತನ್ನೂ ಅರ್ಥೈಸಿಕೊಂಡು ಪ್ರಭಾವಿತರಾದರು. ಧರ್ಮದ ಬಗೆಗೆ ಆಮೂಲಾಗ್ರ ಚಿಂತನೆ ನಡೆದು, ಹೊಸ ಹೊಸ ವಿಚಾರಗಳು ಹೊರಹೊಮ್ಮುತ್ತ ಬಂದವು. ಆಗ ಸಮಾಜದಲ್ಲಿದ್ದ ವೀರಶೈವ ಧರ್ಮದ ತಿಳುವಳಿಕೆ, ವೀರಶೈವರು ಆಚರಿಸುತ್ತಿದ್ದ ಆಚರಣೆಗಳು, ಸಂಸ್ಕಾರಗಳು ವೀರಶೈವ ಧರ್ಮವು ಅನುಸರಿಸುತ್ತಿದ್ದ ಜಾತಿ-ಉಪಜಾತಿ ಪದ್ಧತಿ, ಶ್ರೇಣೀಕೃತ ವರ್ಗವಿಭಜನೆ, ಮುಂತಾದುವುಗಳು ತೀಕ್ಷ್ಣ ಮರುಪರಿಶೀಲನೆಗೆ ಒಳಗಾದವು. ಇದರೊಡನೆಯೇ ಧರ್ಮನಿರಪೇಕ್ಷ (ಜಛಿಣಟಚಿಡಿ) ಸಾಮಾನ್ಯಶಿಕ್ಷಣ, ವಿದ್ಯಾಪ್ರಸಾರಕಾರ್ಯಗಳೂ ವಿವಿಧ ಯೋಜನೆಗಳಡಿಯಲ್ಲಿ, ಮಠಗಳ ಆಶ್ರಯದಲ್ಲಿ ಜರುಗಿದವು. ಅರ್ಥಾತ್, ಒಂದು ಧಾರ್ಮಿಕ, ಸಾಮಾಜಿಕ ಕ್ರಾಂತಿಯೇ ಪ್ರಾರಂಭವಾಯಿತು. ಒಂದು ರೀತಿಯಲ್ಲಿ ಇದು ಕಲ್ಯಾಣಕ್ರಾಂತಿಯ ಎರಡನೆಯ ಹಂತವೆನ್ನಬಹುದು. ಈ ಸಮಾಜದ ಸಂಘಟನೆಯ ಪ್ರಮುಖ ನಿದರ್ಶನವೆಂದರೆ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ನೇತೃತ್ವದಲ್ಲಿ ಸ್ಥಾಪನೆಯಾದ "ಅಖಿಲಭಾರತ ವೀರಶೈವ ಮಹಾಸಭೆ". ಅದರ ಮೊಟ್ಟ ಮೊದಲನೆಯ ಅಧಿವೇಶನ 1904ರಲ್ಲಿ ಧಾರವಾಡದಲ್ಲಿ ಜರುಗಿತು. ಆಗಿನ ಅಧಿವೇಶನಗಳ ಮಾನ್ಯ ಸಭಾಧ್ಯಕ್ಷರ ಮತ್ತಿತರರ ಭಾಷಣಗಳನ್ನೂ, ಸ್ವೀಕರಿಸಿದ ಗೊತ್ತುವಳಿಗಳನ್ನೂ ಓದಿದರೆ, ಅಂದಿನ ಅವರ ದೂರದೃಷ್ಟಿ, ಸಾಮಾಜಿಕ ಕಳಕಳಿ, ಮತ್ತು ಸ್ವತಂತ್ರವಿಚಾರ ಧೋರಣೆಗಳು ಇಂದಿನ ನಮ್ಮಲ್ಲಿ ಆಶ್ಚರ್ಯ ಮತ್ತು ಉತ್ಸಾಹಗಳನ್ನುಂಟುಮಾಡುತ್ತವೆ. ಧರ್ಮದ ಬಗೆಗಿನ ಆಗಿನ ಮುಖಂಡರ ಹೆಗ್ಗುರಿ ಹಿಂದೂ ವ್ಯವಸ್ಥೆಯಲ್ಲಿ ಬ್ರಾಹ್ಮಣರ ಸಮಾನರೆನ್ನಿಸಿಕೊಳ್ಳುವುದೇ ಆಗಿದ್ದ ಕಾರಣ ಆ ಸಭೆಯಲ್ಲಿ ಸ್ವೀಕರಿಸಲಾದ ಮೊದಲನೆಯ ಗೊತ್ತುವಳಿ ಹೀಗಿದೆ:

"ವೀರಶೈವ ಮತವು ನಿಗಮಾಗಮೋಪನಿಷದ್ಭಾಷ್ಯ ಪ್ರತಿಪಾದಿತ ತತ್ವದಿಂದ ಅನಾದಿ ಸಂಸಿದ್ಧವೆಂತಲೂ ಶ್ರೀ ಬಸವೇಶ್ವರದೇವರು ಈ ಮತವನ್ನು ಪ್ರಚುರ ಪಡಿಸಿದವರೇ ಹೊರತು ಸ್ಥಾಪಕರಲ್ಲವೆಂಬುವುದು ಶಿಲಾಲೇಖಾದಿ ಪ್ರಮಾಣಗಳಿಂದ ಸಿದ್ಧವಾಗುತ್ತದೆಂತಲೂ ಈ ಮಹಾಸಭೆಯವರು ಖಂಡಿತವಾಗಿ ಹೇಳುತ್ತಾರೆ".

ಆದರೆ ಕೆಲವು ವಿದ್ಯಾವಂತರಿಗೆ ಈ ಗೊತ್ತುವಳಿಯಲ್ಲಿ ಏನೋ ದೋಷವಿದೆಯೆಂಬುದು ಮನದಟ್ಟಾಯಿತಲ್ಲದೆ, ಈ ವಿಷಯದ ಕುರಿತು ದೀರ್ಘ ಯೋಚನೆ ಮತ್ತು ಚರ್ಚೆ ಮಾಡಲು ಪ್ರಾರಂಭಿಸಿದರು. ಸುಮಾರು 36 ವರ್ಷಗಳ ದೀರ್ಘ ಕಾಲದ ಚಿಂತನ-ಮಂಥನದ ಪರಿಣಾಮವಾಗಿ ಇದೇ ವಿಷಯದ ಬಗೆಗೆ, ಅಂದರೆ, ಲಿಂಗಾಯತರು ಬ್ರಾಹ್ಮಣರೋ ಅಥವಾ ಶೂದ್ರರೋ ಎಂಬುದರ ಬಗೆಗೆ, 1940ರಲ್ಲಿ ದಾವಣಗೆರೆಯಲ್ಲಿ ನಡೆದ ಮಹಾಸಭೆಯಲ್ಲಿ ಗೊತ್ತುವಳಿಯೊಂದನ್ನು ಸ್ವೀಕರಿಲಾಯಿತು. ಆ ಗೊತ್ತುವಳಿ ಹೀಗಿದೆ:

*

ಲಿಂಗಾಯತ ಮತ್ತು ಹಿಂದೂ:

ಲಿಂಗಾಯತರು ತಾವು ಹಿಂದೂಗಳೆಂದು ಹೇಳಿಕೊಳ್ಳಬಾರದೆಂಬುದನ್ನು ಲಕ್ಷ್ಯದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ. ಲಿಂಗಾಯತರು "ಹಿಂದೂ"ಗಳಲ್ಲವೆಂದೇ ಬಹುಜನ ಮುಖಂಡರ ಅಭಿಪ್ರಾಯವಿದೆ. ಹಿಂದೂ ಧರ್ಮವೆಂದರೆ ಚತುರ್ವರ್ಣದ ಮತ್ತು ಚತುರಾಶ್ರಮಗಳುಳ್ಳ ಧರ್ಮವು ... ಜೈನ ಶೀಖ ಧರ್ಮಗಳಂತೆ ಲಿಂಗಾಯತ ಧರ್ಮವೂ ಸ್ವತಂತ್ರ ಧರ್ಮವಾಗಿದೆಯೆಂದೇ ಸ್ಪಷ್ಟವಾಗುತ್ತದೆ". ತರುವಾಯದ 36 ವರ್ಷಗಳಲ್ಲಿ ಹೀಗೆ ತೀವ್ರ ಬದಲಾವಣೆಯಾಗಲು ಕಾರಣಗಳೇನಿರಬಹುದು ಎಂಬುದನ್ನು ವಿಚಾರ ಮಾಡೋಣ. ಹಿಂದೂಸಮಾಜದಲ್ಲಿ 19ನೆಯ ಶತಮಾನವು ಮಹತ್ತರವಾದ ಬದಲಾವಣೆಗಳನ್ನು ಕಂಡಿತು. ಬ್ರಹ್ಮಸಮಾಜ, ಆರ್ಯಸಮಾಜ, ಪ್ರಾರ್ಥನಾಸಮಾಜ, ಮುಂತಾದ ಹೊಸ ಧಾರ್ಮಿಕ, ಸಾಮಾಜಿಕ ಪ್ರಯೋಗಗಳು ನಡೆದು, ವಿಧವಾವಿವಾಹ ಮತ್ತು ಸಹಗಮನಪದ್ಧತಿ ಬಹಿಷ್ಕಾರ, ಶುಷ್ಕಕಮರ್ಾಚರಣೆಗಳ ಬಗೆಗೆ ಔದಾಸೀನ್ಯ ಅಥವಾ ತಿರಸ್ಕಾರ, ಸ್ತ್ರೀಶಿಕ್ಷಣ, ಸರ್ವಸಮಾನತಾ ಭಾವ ಮುಂತಾದ ಮಾನವೀಯತೆಗೆ ಒತ್ತು ಕೊಡುವ ಸುಧಾರಣೆಗಳು ರೂಪ ತಾಳಿದವು. ಜೊತೆಗೆ, ಹಿಂದಿನ ಶಾಸ್ತ್ರೀಯ ಅಧಿಕಾರದ ಹಿಡಿತವನ್ನು ಸಡಿಲಿಸಿಕೊಳ್ಳುವ ಮತ್ತು ಪ್ರಾಯೋಗಿಕ, ವೈಜ್ಞಾನಿಕ, ಅನುಭಾವಗಳ ಆಧಾರಿತ ಧೋರಣೆಯನ್ನು ರೂಪಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನಗಳೂ ನಡೆದವು. ಇವುಗಳ ಪ್ರಭಾವ ಕರ್ನಾಟಕದ ಮೇಲೂ ಆಯಿತು. ಕೊನೆಯಲ್ಲಿ, ಹಿಂದೂ ಸಮಾಜದಲ್ಲಿರುವ ಶೂದ್ರರ ಸ್ಥಾನವೂ ಆದರ್ಶವಾದಿಗಳ, ವಿಚಾರವಂತರ ಮನಸ್ಸಿಗೆ ತೀವ್ರ ಆಘಾತವನ್ನುಂಟುಮಾಡಿತು. ಅಸ್ಪೃಶ್ಯತಾನಿವಾರಣೆಯು ಎಲ್ಲ ಧಾರ್ಮಿಕ, ಸಾಮಾಜಿಕ ಸುಧಾರಣೆಗಳಲ್ಲಿ ಅತ್ಯುನ್ನತ ಪ್ರಾಶಸ್ತ್ಯ ಪಡೆಯಿತು. ಆಗ ಡಾ.ಫ.ಗು.ಹಳಕಟ್ಟಿಯವರ ಪರಿಶ್ರಮದಿಂದ ಪ್ರಕಟವಾದ ವಚನಗಳನ್ನೋದಿದ ವೀರಶೈವರಿಗೆ ಈ ಎಲ್ಲ ಸುಧಾರಣೆಗಳ ತಳಪಾಯ, ಮೂಲಭೂತ ಸಿದ್ಧಾಂತವಾದ ಸರ್ವಸಮಾನತೆ, ವರ್ಣ-ಲಿಂಗ ಭೇದದ ತಿರಸ್ಕಾರ, ಮುಂತಾದುವುಗಳನ್ನು ಬಸವಾದಿ ಶರಣರು ಎಂಟು ಶತಮಾನಗಳಷ್ಟು ಹಿಂದೆಯೇ ಘೋಷಿಸಿದ್ದುದು ತಿಳಿಯಿತು. ಅಲ್ಲದೆ, ಹೀಗೆ ಧಾರ್ಮಿಕ, ಸಾಮಾಜಿಕ ಪ್ರಮಾದಗಳನ್ನು ಶರಣರು ತೀವ್ರವಾಗಿ ಖಂಡಿಸಿದ್ದರೂ, ಅವರು ಸ್ಥಾಪಿಸಿದ ಅಥವಾ ಸುಧಾರಿಸಿ ಪ್ರಚಾರಕ್ಕೆ ತಂದ ತಮ್ಮದೇ ಆದ ಲಿಂಗಾಯತ(ವೀರಶೈವ)ದಲ್ಲಿ ಅವೆಲ್ಲ ಮತ್ತೆ ನುಸುಳಿ ಬಂದು ಸಾಮಾಜಿಕ ಜೀವನವನ್ನು ಕಲುಷಿತಗೊಳಿಸಿದುದನ್ನು ಕಂಡು ಕೆಲವರಿಗೆ ಬೇಸರವೆನಿಸಿತು. ನಮ್ಮ ಧಾರ್ಮಿಕ ಸಾಮಾಜಿಕ ನಂಬಿಕೆಗಳನ್ನು, ವಿಚಾರಗಳನ್ನು, ಸಂಪ್ರದಾಯಗಳನ್ನು ಪುನಃ ಪರಿಶೀಲನೆ ಮಾಡತೊಡಗಿದರು. ಈ ಪರಿಶೀಲನಾ ಕಾರ್ಯದಲ್ಲಿ ವೀರಶೈವಧರ್ಮಕ್ಕೂ ಬ್ರಾಹ್ಮಣರು ಪಾಲಿಸುತ್ತಿದ್ದ ಹಿಂದೂ ಅಥವಾ ವೈದಿಕಧರ್ಮಕ್ಕೂ ಇರುವ, ಇರಬೇಕಾದ ಸಂಬಂಧ ಪ್ರಮುಖವಾಯಿತು.

ವೀರಶೈವ(ಲಿಂಗಾಯತ)ವು ಸ್ವತಂತ್ರ ಧರ್ಮವೋ? ಹಿಂದೂ ಧರ್ಮದ ಶಾಖೆಯೋ? ಎಂಬ ಪ್ರಶ್ನೆ ಇತ್ತೀಚೆಗೆ ಮತ್ತೆ ಉದ್ಭವಿಸಿದೆ. ಅದು ಒಂದು ಸ್ವತಂತ್ರ ಧರ್ಮವೆಂದಾದರೆ ಸಂವಿಧಾನವು ಅಲ್ಪಸಂಖ್ಯಾತ ಧರ್ಮದವರಿಗೆ ಕೊಟ್ಟಿರುವ ಹಕ್ಕುಗಳು ಮತ್ತು ಸೌಲಭ್ಯಗಳು ವೀರಶೈವರಿಗೂ ಸಿಕ್ಕುತ್ತವೆ, ಎಂಬ ಆಶಯ ಕೆಲವರಿಗಿದೆ. ಒಂದು ವೇಳೆ, ವೀರಶೈವಧರ್ಮ ಹಿಂದೂ ಧರ್ಮದ ಒಂದು ಶಾಖೆಯಲ್ಲ, ಸ್ವತಂತ್ರಧರ್ಮ ಎಂದು ತೀರ್ಮಾನವಾದರೆ, ಈ ತೀರ್ಮಾನವನ್ನು ಅನುಸರಿಸಿ ಹಿಂದೂ ಧರ್ಮದ ಇತರ ಶಾಖೆಗಳು ತಾವೂ ಅದರ ಶಾಖೆಗಳಲ್ಲವೆಂದು ವಾದಿಸಿ, ಹಿಂದೂಧರ್ಮದಿಂದ ಸಿಡಿದು ಹೋಗಬಹುದು; ಆಗ ಹಿಂದೂಗಳ ಸಂಖ್ಯೆ ಗಣನೀಯವಾಗಿ ಇಳಿದು ಪ್ರಜಾಪ್ರಭುತ್ವದಲ್ಲಿ ಅವರ ರಾಜಕೀಯ ಪ್ರಾಬಲ್ಯ ಚಿಂತೆಗೀಡುಮಾಡುವಷ್ಟು ಕುಗ್ಗುತ್ತದೆ, ಎಂಬ ವಾದ ಕೆಲವರದಾಗಿದೆ. ಆದರೆ ಅಪ್ರಸ್ತುತ ಮತ್ತು ಅಸಂಬದ್ಧ ಎನಿಸುವ ಈ ಎರಡು ಪರ-ವಿರೋಧ ವಾದಗಳ ಪರಿಚಯವಿಲ್ಲದ ಅನೇಕರು ಇದ್ದರೂ, ಅವನ್ನು ಒಂದಲ್ಲ ಒಂದು ಕಾರಣಕ್ಕಾಗಿ ಪುಷ್ಟೀಕರಿಸುವವರ ಸಂಖ್ಯೆ ಮಾತ್ರ ಕಡಿಮೆಯೇನಿಲ್ಲ. ಆದರೆ, ಹೀಗೆ ಪುಷ್ಟೀಕರಿಸುವವರಲ್ಲಿ ಬಹಳಷ್ಟು ಜನಕ್ಕೆ ವಿಶ್ಲೇಷಣಾತ್ಮಕವಾಗಿ (analytically) ಚಿಂತನ ಮಾಡುವ ಅನುಭವವಿಲ್ಲ. ಮತ್ತೆ ಕೆಲವರು ನಿಷ್ಪಾಕ್ಷಿಕವಾಗಿ ಚಿಂತನೆ ಮಾಡಲೊಲ್ಲರು. ಅವರಲ್ಲಿ ಕೆಲವರು ಕಟ್ಟಾ ವೀರಶೈವ ಅಥವಾ ಲಿಂಗಾಯತರಿರಬಹುದು. ಆದರೆ, ಅತ್ಯಂತ ಶ್ರೇಷ್ಠ ಕಲಾವಿದನಿಗೂ ಕಲೆಯೆಂದರೇನು? ಅದಕ್ಕೂ ಧರ್ಮಕ್ಕೂ ಸಂಬಂಧವೇನು? ಅದು ವಿಜ್ಞಾನದಿಂದ ಹೇಗೆ ಭಿನ್ನ? ಅದು ನಮ್ಮನ್ನು ನೀತಿವಂತರನ್ನಾಗಿ ಮಾಡುತ್ತದೆಯೆ? ಅದಕ್ಕೂ ಸಂಸ್ಕೃತಿಗೂ ಯಾವ ವ್ಯತ್ಯಾಸ ಮತ್ತು ಸಂಬಂಧವಿದೆ? ಮುಂತಾದ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರ ಹೇಳುವ ಸಾಮಥ್ರ್ಯವಿರುವುದಿಲ್ಲ. ಅದೇ ರೀತಿ, ಇಂಥ ಪ್ರಶ್ನೆಗಳ ಪರಿಚಯವೇ ಇಲ್ಲದವರೂ, ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರ ಕೊಡಲಾಗದವರೂ, ವೀರಶೈವರು (ಲಿಂಗಾಯತರು) ಹಿಂದೂಗಳೋ ಅಲ್ಲವೋ ಎಂದು ನಿರ್ಣಯಿಸಲು ಅರ್ಹರಲ್ಲ. ಇಂಥ ಪ್ರಶ್ನೆಗಳ ಪರಿಚಯ ಇರುವ ಕೆಲವರು ನಮ್ಮರಾಜಕೀಯ ಮುಖಂಡರು ಹೀಗನ್ನುತ್ತಾರೆ, ಅಥವಾ ನಮ್ಮ ಗುರುಗಳು ಹೇಳುವುದೇ ಸರಿ ಎಂದು ಪೂರ್ವಾಗ್ರಹ ಪೀಡಿತರಾಗಿ, ಅಥವಾ ಕೆಲವೊಂದು ಆಮಿಷಗಳಿಗೆ ಬಲಿಯಾಗಿ ಅಥವಾ ಸತ್ಯ ಹೇಳಿದರೆ ಅದನ್ನು ಸಹಿಸದವರಿಂದ ಶಿಕ್ಷೆಯಾದೀತೆಂದು ಭಯಪೀಡಿತರಾಗಿ, ಸತ್ಯ ಗೊತ್ತಿದ್ದರೂ ಅದನ್ನು ಬೆಂಬಲಿಸುವುದಿಲ್ಲ. ಆದುದರಿಂದ, ಈ ಪ್ರಶ್ನೆಯನ್ನು ಕುರಿತು ವಿಶ್ಲೇಷಣಾತ್ಮಕವಾಗಿ, ನಿಷ್ಪಾಕ್ಷಿಕವಾಗಿ ಚಿಂತಿಸಬಲ್ಲ ಕೆಲವರು ಹಲವಾರು ದಿನ ಸಭೆಸೇರಿ, ಕೂಲಂಕಷವಾಗಿ ಚರ್ಚಿಸಿ, ಸಮಂಜಸವಾದ ಕಾರಣಗಳನ್ನು ಕೊಟ್ಟು, ಲಾಭದೃಷ್ಟಿಯನ್ನೂ ಕೈಬಿಟ್ಟು, ಕೇವಲ ತಾತ್ವಿಕ ದೃಷ್ಟಿಗೆ ಒತ್ತುಕೊಟ್ಟು ತಮ್ಮ ಅನಿಸಿಕೆಗಳನ್ನು ಈ ಕೆಳಗಿನಂತೆ ಮಂಡಿಸಿದ್ದಾರೆ.

ಧರ್ಮಗಳ ಸಾಮ್ಯ-ಸಂಬಂಧಗಳ ಬಗ್ಗೆ ವಿಚಾರಮಾಡುವಾಗ ಅವುಗಳ ತತ್ವ ಮತ್ತು ಆಚಾರಗಳನ್ನು ಮಾತ್ರ ಗಣನೆಗೆ ತಗೆದುಕೊಳ್ಳಬೇಕೆ ಹೊರತು ರಾಜಕೀಯ, ಆರ್ಥಿಕ ಅಥವಾ ಸಾಮಾಜಿಕ ಲಾಭ-ಹಾನಿಗಳನ್ನು ಗಣನೆಗೆ ತಗೆದುಕೊಳ್ಳಬಾರದು.

ಯಾವುದೇ ಧರ್ಮದಲ್ಲಿ ನಾವು ಮೂರು ಅಂಗಗಳನ್ನು ಗುರುತಿಸಬಹುದು. ಅವೆಂದರೆ, ತಾತ್ವಿಕ ಸಿದ್ಧಾಂತ, ಆಚಾರಗಳು ಮತ್ತು ಸಂಸ್ಕಾರಗಳು. ತಾತ್ವಿಕ ಸಿದ್ಧಾಂತವು ಸೃಷ್ಟಿ, ಸ್ಥಿತಿ, ಲಯ, ಆತ್ಮ, ಪರಮಾತ್ಮ, ಕರ್ಮ ಮತ್ತು ಪುನರ್ಜನ್ಮ, ಮುಕ್ತಿ ಮುಂತಾದ ದಾರ್ಶನಿಕ (ಅಥವಾ ತತ್ವಮೀಮಾಂಸಿಯ) ಸಿದ್ಧಾಂತಗಳಿಗೆ ಅನ್ವಯಿಸಿದರೆ, `ಆಚಾರ'ವು ಪೂಜೆ, ಪ್ರಾರ್ಥನೆ, ಮಂತ್ರಪಠಣೆ ಮುಂತಾದ ಧಾರ್ಮಿಕ ಆಚಾರಗಳಿಗೂ, ದಾನ, ಅಹಿಂಸೆ, ಬ್ರಹ್ಮಚರ್ಯ, ಗುರು-ಹಿರಿಯರಲ್ಲಿ ಭಕ್ತಿ ಮುಂತಾದ ನೈತಿಕ ಆಚಾರಗಳಿಗೂ ಅನ್ವಯಿಸುತ್ತದೆ. `ಸಂಸ್ಕಾರ'ವು ನಾಮಕರಣ, ಮದುವೆ, ಶವಸಂಸ್ಕಾರ ಇತ್ಯಾದಿ ಸಾಮಾಜಿಕ ರೂಢಿಗಳ ಒಂದು ವ್ಯವಸ್ಥೆಗೆ ಅನ್ವಯಿಸುತ್ತದೆ. ಮೊದಲಿನವೆರಡು ಧರ್ಮದ ಜೀವಾಳ ಎಂದಂತೆ ಮೂರನೆಯದು ಧರ್ಮದ ಜೀವಾಳವು ಎನ್ನಲಾಗದು.

ನಮ್ಮ ಸಮಸ್ಯೆಯನ್ನು ನಾವು ಮೂರು ಉಪಸಮಸ್ಯೆಗಳನ್ನಾಗಿ ಪರಿವರ್ತಿಸಬಹುದು:

1. ಧರ್ಮಕ್ಕೂ ಸಂಸ್ಕೃತಿಗೂ ಇರುವ ವ್ಯತ್ಯಾಸವೇನು?
2. ಲಿಂಗಾಯತಕ್ಕೂ ವೀರಶೈವಕ್ಕೂ ಇರುವ ವ್ಯತ್ಯಾಸವೇನು?
3. ಹಿಂದೂಧರ್ಮದ ಲಕ್ಷಣಗಳಾವವು? ಲಿಂಗಾಯತವು ಹಿಂದೂಧರ್ಮದ ಶಾಖೆಯೆ?

1. ಸಂಸ್ಕೃತಿಗೂ ಧರ್ಮಕ್ಕೂ ಇರುವ ವ್ಯತ್ಯಾಸವನ್ನು ಮನಗಾಣವುದು ಅವಶ್ಯ. ಏಕೆಂದರೆ ಅನೇಕರು `ಸಂಸ್ಕೃತಿ' ಮತ್ತು `ಧರ್ಮ' ಪದಗಳನ್ನು ಪರ್ಯಾಯವಾಗಿ ಬಳಸಿ ಗೊಂದಲವನ್ನುಂಟು ಮಾಡಿದ್ದಾರಲ್ಲದೆ, ಈ ಗೊಂದಲವನ್ನೇ ತಮ್ಮ ತಪ್ಪು ಸಿದ್ಧಾಂತಕ್ಕೆ ತಳಹದಿ ಮಾಡಿಕೊಂಡಿದ್ದಾರೆ. ಸಂಸ್ಕೃತಿ ಪರಿಕಲ್ಪನೆಯು ನಮ್ಮ ಎಲ್ಲ ಆಚಾರ-ವಿಚಾರಗಳಿಗೂ ಅನ್ವಯಿಸುತ್ತದೆ. ನಮ್ಮ ವಿಚಾರಗಳು ಧಾರ್ಮಿಕವಾಗಿರಬಹುದು. (ಈಶ್ವರನ ಸ್ವರೂಪ, ಕ್ರಿಯೆ, ಇತ್ಯಾದಿ); ದಾರ್ಶನಿಕವಾಗಿರಬಹುದು. (ತರ್ಕ, ಪ್ರಮಾಣ, ಮೋಕ್ಷದ ಕಲ್ಪನೆ, ಇತ್ಯಾದಿ); ಸಾಹಿತ್ಯಿಕವಾಗಿರಬಹುದು (ನಾಟಕ, ಕಾದಂಬರಿ, ವಿಮರ್ಶೆ, ಇತ್ಯಾದಿ); ಭೌತಶಾಸ್ತ್ರ, ರಸಾಯನಶಾಸ್ತ್ರ, ಅರ್ಥಶಾಸ್ತ್ರ, ರಾಜಶಾಸ್ತ್ರ, ಮುಂತಾದ ವೈಜ್ಞಾನಿಕ ವಿಚಾರಗಳಾಗಿರಬಹುದು. ಅದೇ ರೀತಿ ಆಚಾರಗಳು ಧಾರ್ಮಿಕವಾಗಿರಬಹುದು (ಪೂಜೆ, ಮಂತ್ರ, ಪಠನೆ, ಇತ್ಯಾದಿ); ನೈತಿಕವಾಗಿರಬಹುದು (ದಾನ ಮಾಡುವುದು, ಗುರುಹಿರಿಯರಿಗೆ ವಿಧೇಯತೆ ತೋರಿಸುವುದು, ಇತ್ಯಾದಿ); ಕಲಾತ್ಮಕ ಚಟುವಟಿಕೆಗಳಾಗಿರಬಹುದು (ನಾಟಕ, ಸಂಗೀತ, ಶಿಲ್ಪ ಇತ್ಯಾದಿ); ಸಾಮಾಜಿಕವಾಗಿರಬಹುದು (ಮದುವೆ, ಜಾತ್ರೆ ಮುಂತಾದ ಸಾಂಪ್ರದಾಯಿಕ ರೂಢಿಗಳಾಗಿರಬಹುದು). ಉದಾಹರಣೆಗೆ, ಹರಪ್ಪಾ ಸಂಸ್ಕೃತಿಯನ್ನು ಅಭ್ಯಸಿಸುವುದು ಎಂದರೆ, ಹರಪ್ಪಾ ಜನರು ಯಾವ ರೀತಿ ಮನೆ ಕಟ್ಟುತ್ತಿದ್ದರು? ಯಾವ ರೀತಿಯ ಶಿಲ್ಪಕಲೆ ಅವರಲ್ಲಿತ್ತು? ಅವರು ಆಚರಿಸುತ್ತಿದ್ದ ಧರ್ಮ ಯಾವುದು? ಇತ್ಯಾದಿಗಳನ್ನು ಅಭ್ಯಸಿಸುವುದು ಎಂದರ್ಥ. ಹೀಗೆ, ಸಂಸ್ಕೃತಿಯು ಒಂದು ವಿಶಾಲ ಪರಿಕಲ್ಪನೆಯಾಗಿದ್ದು, ಅದು ಧರ್ಮವನ್ನೂ ಒಳಗೊಳ್ಳುತ್ತದೆ. ಹಿಂದೂ ಧರ್ಮಕ್ಕಿಂತ, ಹಿಂದೂ ಸಂಸ್ಕೃತಿಯು ಹೆಚ್ಚು ಸನಾತನ ಮತ್ತು ಪ್ರಭಾವಶಾಲಿಯಾಗಿದ್ದು, ಈ ನೆಲದಲ್ಲಿಯೇ ಜನ್ಮ ತಳೆದ ಜೈನ, ಬೌದ್ಧ, ಶಿಖ್ಖ ಧರ್ಮಗಳೂ ಹಿಂದೂ ಅಥವಾ ವೈದಿಕಧರ್ಮದಿಂದ ಪ್ರತ್ಯೇಕಗೊಂಡು ಪ್ರಬುದ್ಧವಾಗಿ ಬೆಳೆದಿದ್ದರೂ, ಅವೂ ಹಿಂದೂಸಂಸ್ಕೃತಿಯ ಪ್ರಭಾವಕ್ಕೊಳಗಾಗಿವೆ. ಕರ್ಮ ಮತ್ತು ಪುನರ್ಜನ್ಮ ಸಿದ್ಧಾಂತ, ಮೋಕ್ಷ ಸಿದ್ಧಾಂತ ಈ ಎಲ್ಲ ಧರ್ಮಗಳಲ್ಲಿ ಒಂದಿಲ್ಲ ಒಂದು ರೂಪದಲ್ಲಿ ಕಾಣುತ್ತಿರುವುದು ಹಿಂದೂಸಂಸ್ಕೃತಿಯ ಪ್ರಭಾವದಿಂದಾಗಿ. ಜೈನರು ದೀಪಾವಳಿಯನ್ನು ಆಚರಿಸುವುದು, ಲಕ್ಷ್ಮಿ-ಸರಸ್ವತಿ ಪೂಜೆಮಾಡುವುದು ಹಿಂದೂಸಂಸ್ಕೃತಿಯ ಪ್ರಭಾವದಿಂದಾಗಿ. ಅವು ಹಿಂದೂಧರ್ಮದಿಂದ ಬೇರೆಯಾಗಿದ್ದರೂ, ವಿವಾಹ, ಆಸ್ತಿ, ಅಧಿಕಾರ ಮುಂತಾದ ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದ ಹಿಂದೂ ಕಾನೂನು ಅವುಗಳಿಗೂ ಅನ್ವಯಿಸುತ್ತದೆ. ಇದಕ್ಕೆ ಕಾರಣವೇನೆಂದರೆ, ಅವೂ ಹಿಂದೂಸಂಸ್ಕೃತಿಯ ಪ್ರಭಾವಕ್ಕೊಳಗಾಗಿವೆ. ಈ ಮೂರು ಧರ್ಮಗಳು ಹೇಗೆ ಹಿಂದೂಸಂಸ್ಕೃತಿಯಲ್ಲೇ ಹಾಗು ಹಿಂದೂಧರ್ಮದ ಹಿನ್ನೆಲೆಯಲ್ಲೇ ಹುಟ್ಟಿದರೂ ಅವನ್ನು ಸ್ವತಂತ್ರಧರ್ಮವೆನ್ನಲಾಗುತ್ತದೆಯೋ, ಹಾಗೆಯೇ ಹಿಂದೂಧರ್ಮದ ಹಿನ್ನೆಲೆಯಲ್ಲಿ ಹುಟ್ಟಿದ, ಹಿಂದೂಸಂಸ್ಕೃತಿಯ ಪ್ರಭಾವಕ್ಕೊಳಗಾಗಿರುವ, ತನ್ನವೇ ಆದ ಸಿದ್ಧಾಂತ ಮತ್ತು ಆಚಾರಗಳನ್ನು ಹೊಂದಿರುವ ಲಿಂಗಾಯತ ಧರ್ಮವನ್ನೂ ಸ್ವತಂತ್ರಧರ್ಮವೆಂದು ಪರಿಗಣಿಸಬೇಕು. ಲಿಂಗಾಯತರು, ಜೈನರು, ಬೌದ್ಧರು ಮತ್ತು ಶಿಖ್ಖರು ಹಿಂದೂಸಂಸ್ಕೃತಿಯ ಪ್ರಭಾವಕ್ಕೊಳಗಾಗಿದ್ದಾರೆಂಬ ಮಾತ್ರಕ್ಕೆ ಅವರೂ ಹಿಂದೂಗಳೆನಿಸಿಕೊಳ್ಳುತ್ತಾರೆಂಬ ವಾದವು ಧರ್ಮ ಮತ್ತು ಸಂಸ್ಕೃತಿಗಳಿಗಿರುವ, ಭೇದವನ್ನು ಕಡೆಗಣಿಸುವ ತಪ್ಪು ಕಲ್ಪನೆಯ ಮೇಲೆ ನಿಂತಿದೆ. ವೀರಶೈವ(ಲಿಂಗಾಯತ)ರು ಹಿಂದೂಗಳಂತೆ ಶಿವ, ಶಿವಪ್ರಕಾಶ, ಶಂಕರ, ಗಿರಿಜಾ ಮುಂತಾದ ಹೆಸರುಗಳನ್ನಿಟ್ಟುಕೊಳ್ಳುತ್ತಾರೆ, ಆದ್ದರಿಂದ ಅವರು ಹಿಂದೂಗಳೇ ಎಂಬ ವಾದವು ಅಶೋಕ, ಆನಂದ, ರಾಜ, ನಿರ್ಮಲಾ, ಎಂದು ಹೆಸರಿಟ್ಟುಕೊಳ್ಳುವ ಕ್ರಿಶ್ಚಿಯನ್ನರೂ ಹಿಂದೂಗಳೇ ಎಂಬ ವಾದದಂತೆ ಅಸಮಂಜಸವಾಗಿದೆ. ಈ ಸಾಮಾನ್ಯ ಪರಿಸ್ಥಿತಿಯಿಂದುಂಟಾಗಿರುವ ಇನ್ನೊಂದು ಮುಖ್ಯ ಪರಿಣಾಮವನ್ನು ನಾವು ಗಮನಿಸಬೇಕು. ಅತಿ ಹೆಚ್ಚಿನ ಸಂಖ್ಯೆಯ ಹಿಂದೂಗಳು ಬೇರೆ ಬೇರೆ ಅಲ್ಪಸಂಖ್ಯಾತ ಧರ್ಮದವರನ್ನು ಸುತ್ತುವರಿದುದರಿಂದ ಅವರ ವಿಚಾರ ಮತ್ತು ಆಚಾರಗಳ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಅಲ್ಪಸಂಖ್ಯಾತ ಧರ್ಮದವರಿಗೆ ಸಾಧ್ಯವಾಗಿಲ್ಲ, ಸಾಧ್ಯವೂ ಇಲ್ಲ. ಉದಾಹರಣೆಗೆ ಹಿಂದೂಗಳು ದೇವಾಲಯಗಳಲ್ಲಿ ಮಂಗಳಾರತಿ ಮಾಡುವಂತೆ, ಇಂದು ಭಾರತೀಯ ಕ್ರೈಸ್ತಧರ್ಮದವರೂ ತಮ್ಮ ಚಚರ್ುಗಳಲ್ಲಿ ಮಂಗಳಾರತಿ ಮಾಡಲು ಪ್ರಾರಂಭಿಸಿದ್ದಾರೆ; ಅವರು ಜಾತಿಪಂಗಡ ಭೇದ ಆಚರಿಸುತ್ತಿರುವುದೂ ಮುಸ್ಲಿಂ ಮಹಿಳೆಯರು ಬಳೆ, ಕಾಲುಂಗುರ, ತಾಳಿ ಧರಿಸುವುದೂ ಹಿಂದೂಸಂಸ್ಕೃತಿಯ ಪ್ರಭಾವದಿಂದಾಗಿಯೆ. ಆದುದರಿಂದ, ಹಿಂದೂ ಸಂಸ್ಕೃತಿಯ ಕೆಲವು ಅಂಶಗಳು ಲಿಂಗಾಯತ ಅಥವಾ ವೀರಶೈವರಲ್ಲಿ ಕಾಣುತ್ತವೆ ಎಂಬ ಆಧಾರದ ಮೇಲೆ ಅವರೂ ಹಿಂದೂಗಳು ಎಂದೂ ತೀರ್ಮಾನಿಸುವುದು ಸಮಂಜಸವೆನಿಸದು.

2. ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂಬ ವಾದ ಇತ್ತೀಚಿನದಲ್ಲ. ವೀರಶೈವವೆಂದರೆ ಲಿಂಗೀಬ್ರಾಹ್ಮಣರು; ವರ್ಣಾಶ್ರಮ ಧರ್ಮ, ಬ್ರಾಹ್ಮಣ ಪಾರಮ್ಯ, ದೇವಾಲಯ ಪದ್ಧತಿ, ಉಪನಯನ, ಗಾಯತ್ರಿಮಂತ್ರಪಠನೆ ಮುಂತಾದ ವೈದಿಕ ಮತ್ತು ಆಗಮಿಕ ಪದ್ಧತಿಗಳನ್ನು ಆಚರಿಸುವವರು. ಬಸವಪೂರ್ವಯುಗದವರಾಗಿದ್ದ ಇವರಲ್ಲಿ ಕೆಲವರು ಬಸವಾದಿ ಪ್ರಮಥರ ಬೋಧನೆಯ ಪರಿಣಾಮವಾಗಿ ತಮಗೆ ಮೊದಲೇ ಇದ್ದ ಜನಿವಾರದ ಜೊತೆಗೆ (ಕರಡಿಗೆ ಸಮೇತ) ಶಿವದಾರ ಧರಿಸುವುದನ್ನೂ ರೂಢಿಸಿಕೊಂಡರು. ಈ ವೀರಶೈವರ ತತ್ವಮೀಮಾಂಸೆ ಮತ್ತು ಆಚರಣೆಗಳು ವಚನೋಕ್ತ ಲಿಂಗಾಯತ ತತ್ವಮೀಮಾಂಸೆ ಮತ್ತು ಆಚರಣೆಗಳಿಗಿಂತ ತೀವ್ರ ಭಿನ್ನವಾಗಿವೆ. ಇದನ್ನು ಈ ಲೇಖಕ ಆಗಲೇ ವಿಶದಪಡಿಸಿರುವುದರಿಂದ, ಅದನ್ನು ಮತ್ತೆ ಇಲ್ಲಿ ಪ್ರಸ್ತಾಪಿಸಬೇಕಾಗಿಲ್ಲ. ( ನೋಡಿ: ಲಿಂಗಾಯತ ದರ್ಶನ ಮಾಲೆ-1, ಲಿಂಗಾಯತ ಅಧ್ಯಯನ ಅಕಾಡೆಮಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ, 2004). ಅಂತೂ ಲಿಂಗಾಯತರು ವೀರಶೈವರಲ್ಲ, ಅವರ ತತ್ವಗಳಿಗೆ ಮತ್ತು ಆಚಾರಗಳಿಗೆ ವಚನಗಳು ಆಧಾರವೇ ಹೊರತು, ಆಗಮಗಳಲ್ಲ, ಎಂಬುದು ಇಲ್ಲಿ ಮುಖ್ಯ.

3. ಈ ಲಿಂಗಾಯತ (ವೀರಶೈವ)-ಹಿಂದೂ ವಿವಾದದಲ್ಲಿ ಇತರ ವಿವಾದಗಳೂ ಸೇರಿಕೊಂಡಿವೆ. ವೀರಶೈವ (ಲಿಂಗಾಯತ) ಧರ್ಮದ ಉಗಮ, ಪ್ರಾಚೀನತೆ, ಬೆಳವಣಿಗೆ, ವೀರಶೈವಧರ್ಮ ಮತ್ತು ವೇದ, ವೀರಶೈವ ಧರ್ಮ ಮತ್ತು ಆಗಮ, ವೀರಶೈವ ಧರ್ಮ ಮತ್ತು ಸಂಸ್ಕೃತ, ವೀರಶೈವ (ಲಿಂಗಾಯತ) ಧರ್ಮದ ಸ್ಥಾಪಕರು - ಇವೆಲ್ಲ ತೀವ್ರ ಭಾವನಾತ್ಮಕ (emotional) ವಾದವಿವಾದಕ್ಕೊಳಗಾಗಿರುವ ಮತ್ತು ಕಗ್ಗಂಟಾಗಿರುವ ವಿಷಯಗಳು. ಈ ವಿಷಯಗಳನ್ನು ಪ್ರಾಚೀನತೆಯೇ ಶ್ರೇಷ್ಠತೆಯ ಚಿಹ್ನೆ ಎಂಬ ಕಲ್ಪನೆಯಿಂದ ಹಿಂದಿನ ಶತಮಾನದಲ್ಲಿ ಕೆಲವರು ವೀರಶೈವ (ಲಿಂಗಾಯತ) ಮುಖಂಡರು ಕೈಗೆತ್ತಿಕೊಂಡರು. ಈ ಕಲ್ಪನೆಯ ಬೆನ್ನು ಹತ್ತಿ ಪ್ರಾಚೀನತೆಯನ್ನು ಸಾಧಿಸುವ ಅನೇಕ ಗ್ರಂಥಗಳೂ, ಗ್ರಂಥಭಾಗಗಳೂ ರಚಿತವಾದವು. ಬಸವಣ್ಣನವರೇ ಸ್ಥಾಪಕರೆಂದು ಸಾರುವ ಗ್ರಂಥಗಳು ರಚಿತವಾದವು. ಈ ವಾದ ಮುಗಿಯುವಂತಹುದಲ್ಲ. ಭಾರತೀಯ ಪರಂಪರೆಯಲ್ಲಿ ಇತಿಹಾಸದ ಬಗ್ಗೆ ಉದಾಸೀನತೆ ಸಾಮಾನ್ಯ. ಹೀಗಾಗಿ ಈ ವಾದಕ್ಕೆ ಅಂತಿಮ ತೆರೆ ಎಳೆಯುವುದು ಕಠಿಣ. ಆದುದರಿಂದ ಈ ವಾದವಿವಾದಗಳನ್ನು ಕೈಬಿಟ್ಟು ಹಿಂದೂ-ಲಿಂಗಾಯತ ಧರ್ಮಗಳ ನಡುವೆ ಇರಬಹುದಾದ ಸಾಮ್ಯ-ವೈಷ್ಯಮ್ಯಗಳನ್ನು ಗುರುತಿಸಿ, ಅವುಗಳನ್ನು ನಿಖರವಾದ, ಸ್ಥಿರವಾದ, ವಾದಗ್ರಸ್ತವಲ್ಲದ ತತ್ವಗಳ ಆಧಾರದ ಮೇಲೆ ನಿಲ್ಲಿಸುವುದು ಲೇಸು.

ಗಂಭೀರ ವೈಷಮ್ಯಗಳಿದ್ದೂ ಅಜಾಗರೂಕತೆಯಿಂದಾಗಲಿ, ಧರ್ಮವನ್ನು ಹಗುರವಾಗಿ ಭಾವಿಸಿದುದರಿಂದಾಗಲಿ ಇಲ್ಲವೆ ಅಸಮಂಜಸ ಅಪ್ರಸ್ತುತ ಕಾರಣಗಳಿಂದಾಗಲಿ ಹೆಚ್ಚು ಸಂಖ್ಯೆಯ `ಹಿಂದೂ'ಗಳಲ್ಲಿ ಕೂಡಿಕೊಳ್ಳುವುದೇ ವಿಹಿತವೆಂದು ವಾದಿಸುವುದು ನಿರರ್ಥಕ. ಇಂಥ ಗಂಭೀರ ವೈಷಮ್ಯಗಳನ್ನು ನಾವು ಅಲ್ಪವಾಗಿಸಿ ಮರೆಮಾಚಲು ಯತ್ನಿಸಿದರೆ ಲಿಂಗಾಯತ ಧರ್ಮದ ಅಮೂಲ್ಯತತ್ವ, ಆಚಾರ ಮತ್ತು ಸಂಸ್ಕಾರಗಳ ಕೊಡುಗೆಯನ್ನು `ಹಿಂದೂ' ಸಾಗರದಲ್ಲಿ ಕಲಬೆರೆಸಿ ಇಲ್ಲದಂತೆ ಮಾಡುತ್ತೇವೆ. ಅಲ್ಲದೆ ಲಿಂಗಾಯತರೆ ಅವುಗಳನ್ನು ಮರೆತು ಕೆಲವು ಬಾಹ್ಯ ಲಕ್ಷಣಗಳ ಸಿಪ್ಪೆಯನ್ನು ಮಾತ್ರ ಉಳಿಸಿಕೊಂಡು ತಮ್ಮ ಧರ್ಮದ ಘನತಿರುಳಿನಿಂದ ವಂಚಿತರಾಗುತ್ತಾರೆ. ಆದುದರಿಂದ ಈ ಅಪಾಯದಿಂದ ತಪ್ಪಿಸಿಕೊಳ್ಳಲು ಹಿಂದೂ-ಲಿಂಗಾಯತ ವಾದವಿವಾದವನ್ನು ಸಮಂಜಸ ತಾತ್ವಿಕ ಆಧಾರಗಳ ಮೇಲೆ ನಿಲ್ಲಿಸುವುದು ಸೂಕ್ತ. ಈ ಸಲುವಾಗಿ ನಾವು, ಹಿಂದೂಧರ್ಮದ ಮೂಲತತ್ವಗಳಾವುವು? ಅವು ಲಿಂಗಾಯತಕ್ಕೂ ಮೂಲತತ್ವಗಳೆ? ಅಥವಾ, ಲಿಂಗಾಯತಕ್ಕೆ ತನ್ನವೇ ಆದ ತತ್ವಗಳಿವೆಯೆ? ಎಂಬ ಪ್ರಶ್ನೆಗಳನ್ನೂ ವೀರಶೈವದ ಆಚರಣೆ ಮತ್ತು ಲಿಂಗಾಯತದ ಆಚರಣೆ ಇವುಗಳಿಗೇನಾದರೂ ವ್ಯತ್ಯಾಸವಿದೆಯೆ ಎಂಬ ಪ್ರಶ್ನೆಯನ್ನೂ ನಾವು ನಿಷ್ಪಾಕ್ಷಿಕವಾಗಿ ಪರೀಕ್ಷಿಸಬೇಕಾಗುತ್ತದೆ.

ಪ್ರಸ್ತುತ ಹಿಂದೂ ಧರ್ಮವೆಂದರೇನು? ಎಂಬುದನ್ನು ವಿವೇಚಿಸೋಣ. "ಹಿಂದು" ಎಂಬ ಪದವು ಮೂಲತಃ ಪ್ರದೇಶವಾಚಕವಾಗಿದ್ದು ಧರ್ಮವಾಚಕವಾಗಿರಲಿಲ್ಲ. ಭಾರತಕ್ಕೆ ಹೊರಗಿನಿಂದ ಬಂದವರು - ಪರ್ಶಿಯಾ, ಗ್ರೀಸ್, ಅರೇಬಿಯಾ, ನಿವಾಸಿಗಳು - ಸಿಂಧು ನದಿಯ ಪ್ರದೇಶವನ್ನು "ಹಿಂದು" ಎಂದು ಕರೆಯತೊಡಗಿದರು. [ನಾವು ಯಾವುದನ್ನು "ಸ" ಎನ್ನುತ್ತೇವೆಯೋ ಪರ್ಶಿಯನ್ನರು ಅದನ್ನು "ಹ" ಎಂದು ಉಚ್ಚರಿಸುತ್ತಾರೆ. ಉದಾಹರಣೆಗೆ, "ಅಸುರ" ಎಂಬ ಪದವನ್ನು ಅವರು "ಅಹುರ" ಎಂದು ಉಚ್ಚರಿಸುತ್ತಾರೆ. ಅದೇ ರೀತಿ, "ಸಿಂಧು" ಎಂಬುದನ್ನು ಅವರು "ಹಿಂದು" ಎಂದು ಉಚ್ಚರಿಸತೊಡಗಿದರು.] ಉಳಿದವರು ಅವರನ್ನೇ ಅನುಕರಣೆ ಮಾಡಿದರು. ಆ ಮೇಲೆ, ಅವರು ಸಿಂಧೂ ನದಿಯ ದಕ್ಷಿಣಕ್ಕೂ, ಪೂರ್ವಕ್ಕೂ, ಪಶ್ಚಿಮಕ್ಕೂ ಇದ್ದ ಭೂಭಾಗವನ್ನೆಲ್ಲ "ಹಿಂದು" ಎಂದೇ ಕರೆಯತೊಡಗಿದರು. ಅರ್ಥಾತ್, ಯಾವುದನ್ನು ನಾವು ಇಂದು ಭಾರತ ಎನ್ನುತ್ತೇವೆಯೋ ಅದು ಅವರಿಗೆ ಹಿಂದೂಸ್ಥಾನವಾಯಿತು. ಮುಸ್ಲಿಮರು ಇಲ್ಲಿ ತಳವೂರಿದನಂತರ ಇಲ್ಲಿನ ವಾಸಿಗಳನ್ನೆಲ್ಲ ಅವರು "ಹಿಂದು"ಗಳೆಂದು ಕರೆಯತೊಡಗಿದರು. ವಾಸ್ತವವಾಗಿ "ಹಿಂದು" ಎಂಬ ಅವರು ಕೊಟ್ಟ ಹೆಸರು ಆಗ ಹಿಂದೂಗಳಿಗಷ್ಟೇ ಅಲ್ಲದೆ ಜೈನ, ಬೌದ್ಧ, ಶೀಖ, ಮುಂತಾದ ಧರ್ಮಗಳಿಗೂ ಅನ್ವಯಿಸುತ್ತಿತ್ತು. ಆಗ ಅವರ ಪ್ರಕಾರ, ಹಿಂದೂಗಳೆಂದರೆ ಮುಸ್ಲಿಮರಲ್ಲದವರು. ಅನಂತರ ಬಂದ ಯೂರೋಪಿಯನ್ನರೂ ಸಹ "ಹಿಂದೂ" ಪದವನ್ನು ಧರ್ಮವಾಚಕವಾಗೇ ಬಳಸತೊಡಗಿದಲ್ಲದೆ, ಹಿಂದೂ, ಜೈನ, ಶಿಖ್ಖ ಮುಂತಾದವರು ಬೇರೆ ಬೇರೆ ಎಂದು ಸಿದ್ಧಪಡಿಸಿದರು.

ಇದನ್ನು ನೋಡಿದರೆ, ಭಾರತೀಯರು ಮೊದಲು ತಮ್ಮ ಧರ್ಮವನ್ನು "ಹಿಂದೂ" ಎಂದು ಕರೆದುಕೊಳ್ಳುತ್ತಿರಲಿಲ್ಲ, ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಅವರು ತಮ್ಮ ಧರ್ಮವನ್ನು "ವೈದಿಕ" ಎಂದು ಕರೆದುಕೊಳ್ಳುತ್ತಿದ್ದರು. ಏಕೆಂದರೆ ಅದು ವೇದಗಳ ಮೇಲೆ ನಿಂತ ಧರ್ಮವಾಗಿತ್ತು. ಕೆಲವು ಸಾರಿ ಅದನ್ನು "ಸನಾತನ ಧರ್ಮ" ಎಂದೂ ಕರೆಯಲಾಗುತ್ತಿತ್ತು. ಏಕೆಂದರೆ, ಅದು ಯಾವೊಬ್ಬ ವ್ಯಕ್ತಿಯಿಂದಲೂ ಸ್ಥಾಪಿಸಲ್ಪಡದೆ ಬಹಳ ಹಿಂದಿನ ಕಾಲದಿಂದ ಬಂದ ಧರ್ಮವಾಗಿತ್ತು. ಕೆಲವು ಸಾರಿ ಅದನ್ನು ಆರ್ಯ ಧರ್ಮವೆಂದು ಕರೆಯುತ್ತಿದ್ದರು. ಈ ಹೆಸರು ಆರ್ಯರು ದ್ರಾವಿಡರೊಡನೆ ಬೆರೆಯದೆ ಅವರಿಂದ ಯಾವ ರೀತಿಯಲ್ಲೂ ಪ್ರಭಾವಿತರಾಗದೆ ಇದ್ದ ಕಾಲಕ್ಕೆ ಸರಿಯಾಗಿತ್ತು. ಆದರೆ, ಅವರು ದ್ರಾವಿಡರ ಅನೇಕ ಧಾರ್ಮಿಕ ಆಚರಣೆಗಳನ್ನು ತಮ್ಮ ಧರ್ಮಕ್ಕೆ ಅಳವಡಿಸಿಕೊಂಡಿರುವುದರಿಂದ, ಇಂದು ಅವರ ಧರ್ಮವನ್ನು ಆರ್ಯಧರ್ಮ ಎಂದು ಕರೆಯುವುದು ಸರಿಯಲ್ಲ. ಅಲ್ಲದೆ, ನಾವು ಇಂದು ಯಾವುದನ್ನು ಹಿಂದೂಧರ್ಮವೆಂದು ಕರೆಯುತ್ತೇವೆಯೋ ಅದರಲ್ಲಿ ಅರ್ಯ-ದ್ರಾವಿಡರ ಧರ್ಮವೂ ಅಲ್ಲದೆ, ಆರ್ಯರಿಗಿಂತ ಹಿಂದೆಯೇ ಇದ್ದ ಭಾರತೀಯ ಮೂಲ ನಿವಾಸಿಗಳ ಧರ್ಮವೂ ಸೇರಿದೆ. ಈ ಅಂಶಗಳು ಎಷ್ಟು ಅನ್ಯೋನ್ಯವಾಗಿ ಸಮ್ಮಿಳಿತವಾಗಿವೆಯೆಂದರೆ, ಇಂದು, ನಮಗೆ ಅವುಗಳನ್ನು ಗುರುತಿಸಲಾಗಲಿ, ಬೇರ್ಪಡಿಸಲಾಗಲಿ ಸಾಧ್ಯವಿಲ್ಲ.

ಹಿಂದೂಧರ್ಮಕ್ಕೆ ಒಂದು ವ್ಯಾಖ್ಯೆ ಕೊಡುವುದು ಸುಲಭವಲ್ಲ. ಕ್ರೈಸ್ತಧರ್ಮವು ಜೀಸಸ್ ಕ್ರಿಸ್ತನಿಂದ ಸ್ಥಾಪಿತವಾಯಿತು, ಇಸ್ಲಾಂಧರ್ಮವು ಮೊಹಮ್ಮದ್ ಪೈಗಂಬರನಿಂದ ಸ್ಥಾಪಿತವಾಯಿತು, ಕ್ರೈಸ್ತ ಧರ್ಮವೆಂದರೆ ಬೈಬಲ್ಲಿಗೆ ವಿಧೇಯವಾದ ಧರ್ಮವು, ಇಸ್ಲಾಂ ಎಂದರೆ ಕೊರಾನಿಗೆ ವಿಧೇಯವಾದ ಧರ್ಮ, ಎಂದು ಸುಲಭವಾಗಿ ಹೇಳಿದಂತೆ ಹಿಂದೂ ಧರ್ಮದ ಬಗ್ಗೆ ಹೇಳಲು ಬರುವುದಿಲ್ಲ. ಕಾರಣವೇನೆಂದರೆ, ಹಿಂದೂ ಧರ್ಮವು ಯಾವ ಒಬ್ಬ ವಿಶಿಷ್ಟ ವ್ಯಕ್ತಿಯಿಂದಲೂ ಸ್ಥಾಪಿತವಾಗಿಲ್ಲ, ಅದರ ತತ್ವಗಳು, ಆಚರಣೆಗಳು ವೇದೋಕ್ತವಾದರೂ ಸಹ ವೇದಗಳಲ್ಲೆ ಕಾಲಕಾಲಕ್ಕೆ ಅನೇಕ ವಿಚಾರಗಳು ಸೇರ್ಪಡೆಯಾಗುತ್ತ ಬಂದಿವೆ; ಹೀಗಾಗಿ, ಹಿಂದೂಗಳಲ್ಲಿ, ನಿರೀಶ್ವರವಾದಿಗಳೂ (ಉದಾಹರಣೆಗೆ, ಸಾಂಖ್ಯರು) ಇದ್ದಾರೆ, ಸೇಶ್ವರವಾದಿಗಳೂ ಇದ್ದಾರೆ; ಏಕೇಶ್ವರವಾದಿಗಳೂ ಇದ್ದಾರೆ, ಬಹುದೇವತಾವಾದಿಗಳೂ ಇದ್ದಾರೆ; ಪರಮಾತ್ಮನು ನಿಗರ್ುಣ ಮತ್ತು ನಿರಾಕಾರ ಎಂಬುವವರೂ ಇದ್ದಾರೆ, ಅವನು ಸಗುಣ, ಸಾಕಾರ, ಎನ್ನುವವರೂ ಇದ್ದಾರೆ. ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ಭಕ್ತಿಮಾರ್ಗವೇ ಶ್ರೇಷ್ಠ ಎನ್ನುವವರೂ ಇರುವಂತೆ, ಜ್ಞಾನಮಾರ್ಗವೇ ಶ್ರೇಷ್ಠ ಎನ್ನುವವರೂ ಇದ್ದಾರೆ; ಹಿಂದೂಗಳಲ್ಲಿ ಅದ್ವೈತಿಗಳು ಇರುವಂತೆ ದ್ವೈತಿಗಳೂ ಇದ್ದಾರೆ; ದೇವತೆಗಳಿಗೆ ಪ್ರಾಣಿಬಲಿ ಕೊಡಬೇಕು ಎನ್ನುವವರು ಇರುವಂತೆ, ಅಹಿಂಸೋ ಪರಮಧರ್ಮ ಎನ್ನುವರೂ ಇದ್ದಾರೆ. ಹಿಂದೂ ಧರ್ಮ ಇಷ್ಟು ಸಂಕೀರ್ಣವಾಗಿರುವುದರಿಂದ ಅದನ್ನು ಒಂದು ವಾಕ್ಯದಲ್ಲಿ ಸರಳವಾಗಿ ವ್ಯಾಖ್ಯಾನಿಸುವುದು ಅಸಾಧ್ಯ ಎಂದರೆ ತಪ್ಪಾಗುವುದಿಲ್ಲ. ಆದುದರಿಂದ, ಹಿಂದೂಧರ್ಮವನ್ನು ವಿವರಿಸಬಹುದೇ ಹೊರತು ವ್ಯಾಖ್ಯಾನಿಸಲಾಗದು.

ಹಿಂದೂಧರ್ಮವು ಇಷ್ಟೆಲ್ಲ ಪರಸ್ಪರ ವಿರುದ್ಧ ಆಚಾರ-ವಿಚಾರಗಳಿಗೆ ಅವಕಾಶ ಮಾಡಿಕೊಟ್ಟಿದ್ದರೂ ಕೆಲವು ವಿಶಿಷ್ಟ ಲಕ್ಷಣಗಳು ಅದನ್ನು ಜೈನ, ಬೌದ್ಧ ಮತ್ತು ಸಿಖ್ ಧರ್ಮಗಳಿಂದ ಪ್ರತ್ಯೇಕ ಮಾಡುತ್ತವೆ. ಅಂಥ ಲಕ್ಷಣಗಳಲ್ಲಿ ಮುಖ್ಯವಾದ ಕೆಲವನ್ನು ಪರಿಶೀಲಿಸಿ ಆ ಲಕ್ಷಣಗಳು ಲಿಂಗಾಯತ ಧರ್ಮದಲ್ಲಿ ಇವೆಯೋ ಇಲ್ಲವೋ ಎಂಬುದನ್ನು ನೋಡೋಣ. ಒಂದು ವೇಳೆ ಹಿಂದೂ ಧರ್ಮದ ಅವೇ ಲಕ್ಷಣಗಳು ಲಿಂಗಾಯತ ಧರ್ಮದಲ್ಲೂ ಇದ್ದರೆ ಆಗ ಲಿಂಗಾಯತವು ಹಿಂದೂ ಧರ್ಮದ ಒಂದು ಶಾಖೆ ಎಂದು ನಿಶ್ಚಯಿಸಲು ನಮಗೆ ಸಾಧ್ಯವಾಗುವುದು; ಇಲ್ಲದಿದ್ದರೆ ಲಿಂಗಾಯತವು ಹಿಂದೂ ಧರ್ಮದ ಶಾಖೆಯಲ್ಲ, ಅದೊಂದು ಪ್ರತ್ಯೇಕ ಹಾಗೂ ಸ್ವತಂತ್ರ ಧರ್ಮ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಾಗುವುದು.

ಹಿಂದೂಧರ್ಮದ ಬಗೆಗೆ ಗಾಂಧಿಜಿಯವರು ಹೀಗೆ ಹೇಳುತ್ತಾರೆ. “Cow protection is dearest possession of the Hindu sect. No one who does not believe in cow protection can possibly be a Hindu. It is a noble belief. Cow worship means to me worship of innocence” (ಗೋರಕ್ಷಣೆ ಹಿಂದೂ ಪಂಥದ ಅತ್ಯಂತ ಅತ್ಯಂತ ಆತ್ಮೀಯ ಆಸ್ತಿ, ಗೋರಕ್ಷಣೆಯಲ್ಲಿ ನಂಬಿಕೆಯಿಲ್ಲದವನು ಹಿಂದೂ ಆಗಲಾರ. ಅದೊಂದು ಉದಾತ್ತ ನಂಬಿಕೆ. ನನಗೇನೋ ಗೋಪೂಜೆಯೆಂದರೆ ಮುಗ್ಧತ್ವದ ಪೂಜೆ ಎನಿಸುತ್ತದೆ").

ಗಾಂಧಿಯವರೆ ಮತ್ತೊಂದು ಕಡೆ ಹೀಗನ್ನುತ್ತಾರೆ: "ಅದು (ಹಿಂದೂಧರ್ಮ) ಅಹಿಂಸಾಪಥದಲ್ಲಿ ನಡೆವವನಿಗೆ ಕಾಣುವ ಸತ್ಯಾನ್ವೇಷಣೆ. ಒಬ್ಬ ವ್ಯಕ್ತಿಗೆ ದೇವರಲ್ಲಿ ನಂಬಿಕೆಯಿಲ್ಲದಿದ್ದರೂ ಅವನು ತನ್ನನ್ನು ಹಿಂದೂ ಎಂದು ಕರೆದುಕೊಳ್ಳಬಹುದು. ಅವಿರತ ಸತ್ಯಾನ್ವೇಷಣೆಯೇ ಹಿಂದೂಧರ್ಮ. ಅದು ಸತ್ಯಧರ್ಮ. ಸತ್ಯವೇ ದೇವರು. ದೇವರ ಅಸ್ತಿತ್ವದಲ್ಲಿ ನಂಬಿಕೆ ಇಲ್ಲದವರನ್ನು ನಾವು ಕಾಣಬಹುದು. ಆದರೆ ಸತ್ಯದ ಅಸ್ತಿತ್ವವನ್ನು ನಿರಾಕರಿಸುವವರನ್ನು ಕಾಣೆವು". ತಿಲಕರು ಹಿಂದೂ ಧರ್ಮದ ಬಗೆಗೆ ಹೀಗೆ ಹೇಳುತ್ತಾರೆ: “Acceptance of the the Vedas with reverence, recognition of the fact that the means of ways to salvation are diverse; and the realization of the truth that the number of gods to be worshipped is large; that indeed is the distinguishing feature of Hinduism” (``ವೇದಗಳನ್ನು ಭಕ್ತಿಯಿಂದ ಮಾನ್ಯಮಾಡುವುದು, ಮೋಕ್ಷಸಾಧನೆಗೆ ಹಲವಾರು ಮಾರ್ಗಗಳಿವೆ ಎಂದು ಗುರುತಿಸುವುದು, ಪೂಜಾಯೋಗ್ಯವಾದ ದೈವಗಳ ಸಂಖ್ಯೆ ಅಪಾರವಾದುದು, ಎಂಬ ಸತ್ಯವನ್ನು ಮನಗಾಣುವುದು - ಇದು ನಿಜವಾಗಿಯೂ ಹಿಂದೂತ್ವದ ಲಕ್ಷಣ").

ಹಿಂದೂ ಧರ್ಮವನ್ನು ವಿವಿಧ ದೃಷ್ಟಿಗಳಿಂದ ಅಧ್ಯಯನ ಮಾಡಿರುವ ಅನೇಕ ದಾರ್ಶನಿಕರು ಹಿಂದೂ ಧರ್ಮದ ವೈಶಿಷ್ಟ್ಯಗಳನ್ನು ಗುರುತಿಸಿದ್ದಾರೆ. ಅವುಗಳನ್ನು ಈ ರೀತಿಯಾಗಿ ಪಟ್ಟಿ ಮಾಡಿಬಹುದು.

1. "ಹಿಂದೂ" ಪದವನ್ನು ಧರ್ಮವಾಚಕವಾಗಿ ಉಪಯೋಗಿಸುವುದು ಸಮಂಜಸವಲ್ಲ, ಎಂದು ವಾದಿಸುವುದು ತಪ್ಪು. ಆದು ವೇದೋಕ್ತ ಧರ್ಮ ಎನ್ನುವುದೂ ಒಂದೇ, ಅದು ಎಲ್ಲ ರೀತಿಯ ಅಂಶಗಳನ್ನೂ ಒಳಗೊಳ್ಳುವ ಧರ್ಮ ಎನ್ನುವುದೂ ಒಂದೇ. ವೇದ ಎಂಬ ಪದವು ಬಹಳ ವಿಶಾಲವಾಗಿದ್ದು ಅದು ಕರ್ಮಕಾಂಡಕ್ಕೆ ಅನ್ವಯಿಸುವಂತೆ ಜ್ಞಾನಕಾಂಡಕ್ಕೂ ಅನ್ವಯಿಸುತ್ತದೆ. ಜ್ಞಾನಕಾಂಡವೆನಿಸಿಕೊಳ್ಳುವ ಉಪನಿಷತ್ತುಗಳು ಹಲವಾರು ಇದ್ದು ಅವುಗಳಲ್ಲಿ ಕೆಲವು ಪರತತ್ವದ ವಿಷಯದಲ್ಲಿಯೂ ಆಚರಣೆಗಳ ವಿಷಯದಲ್ಲಿಯೂ ಪರಸ್ಪರ ವಿರುದ್ಧ ನಿಲವನ್ನು ತಾಳುತ್ತವೆ. ವೈದಿಕ ಧರ್ಮದಲ್ಲಿ ಈ ರೀತಿ ವಿವಿಧ ಅಥವಾ ಪರಸ್ಪರ ವಿರುದ್ಧ ಅಂಶಗಳಿದ್ದರೂ ಅವೆಲ್ಲಕ್ಕೂ ವೇದವೇ ಅಂತಿಮ ಪ್ರಮಾಣ ಎಂಬುದು ಖಚಿತವಾದ ಮಾತು. ವೈದಿಕ ಧರ್ಮವನ್ನು (ವೈದಿಕ ಸಿದ್ಧಾಂತಗಳನ್ನು) ಹಲವಾರು ಧರ್ಮ ಜಿಜ್ಞಾಸುಗಳು ಹಲವಾರು ರೀತಿಯಲ್ಲಿ ಅರ್ಥೈಸಿದ್ದಾರೆ. ಹೀಗೆ ವೈದಿಕ ಧರ್ಮವು ಎಷ್ಟೇ ಚಲನ ಶೀಲ ಧರ್ಮವಾದರೂ ಅದು ವೇದಬಾಹಿರವಲ್ಲ ಎಂಬುದನ್ನು ನಾವು ಮರೆಯುವಂತಿಲ್ಲ. ಯಾರು ವೇದಗಳನ್ನು ಒಪ್ಪಿಕೊಳ್ಳುವುದಿಲ್ಲವೋ ಅಥವಾ ವಿರೋಧಿಸುತ್ತಾರೋ ಅವರು ಹಿಂದೂಗಳಲ್ಲ.

2. ಹಿಂದೂಗಳು ಅದ್ವೈತಿಗಳಿರಲಿ ದ್ವೈತಿಗಳಿರಲಿ, ಸೇಶ್ವರವಾದಿಗಳಿರಲಿ ನಿರೀಶ್ವರವಾದಿಗಳಿರಲಿ, ಏಕೇಶ್ವರವಾದಿಗಳಿರಲಿ ಬಹುದೇವತಾವಾದಿಗಳಿರಲಿ, ಭಕ್ತಿಮಾರ್ಗಗಳಿರಲಿ ಕರ್ಮಮಾರ್ಗಗಳಿರಲಿ ಅಥವಾ ಮತ್ತಾವುದೋ ಮಾರ್ಗಗಳಿರಲಿ, ಅವರೆಲ್ಲರೂ ಕರ್ಮ ಮತ್ತು ಪುನರ್ಜನ್ಮ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತಾರೆ.

3. ಹಿಂದೂ ಧರ್ಮದ ಎಲ್ಲ ಪಂಥಗಳೂ ಜೀವನವೆಂದರೆ ಒಂದು ಬಂಧನವೆಂದೂ ಮೋಕ್ಷಮಾ ರ್ಗವೊಂದೇ ಈ ಬಂಧನದಿಂದ ತಪ್ಪಿಸಿಕೊಳ್ಳುವ ಮಾರ್ಗ ಎಂದೂ ಸಾರುತ್ತವೆ. ಈ ಪಂಥಗಳ ಮೋಕ್ಷ ಪರಿಕಲ್ಪನೆಯಲ್ಲಿ ವ್ಯತ್ಯಾಸವಿರಬಹುದು, ಆ ಗುರಿಯನ್ನು ಸಾಧಿಸುವ ರೀತಿಯಲ್ಲಿ (ಸಾಧನಾ ಮಾರ್ಗದಲ್ಲಿ) ವ್ಯತ್ಯಾಸವಿರಬಹುದು; ಆದರೆ ಹಿಂದೂ ಎನ್ನಿಸಿಕೊಳ್ಳುವವನು ಈ ಸಿದ್ಧಾಂತಗಳಲ್ಲಿ ನಂಬಿಕೆಯನ್ನಿಟ್ಟುಕೊಂಡಿರಲೇಬೇಕು.

4. ಎಲ್ಲ ಹಿಂದೂಗಳು ಪ್ರಪಂಚವನ್ನು ಮಾಯೆ (ಮಿಥ್ಯೆ) ಎಂದು ಪರಿಗಣಿಸುತ್ತಾರೆನ್ನುವುದು, ಮತ್ತು ಅದು ಹಿಂದೂಗಳ ಲಕ್ಷಣವೆನ್ನುವುದು ಎರಡೂ ತಪ್ಪೆ. ಶಾಂಕರ ಅದ್ವೈತಿಗಳಷ್ಟೇ ಪ್ರಪಂಚವು ಮಿಥ್ಯೆ ಎನ್ನುತ್ತಾರೆ, ಉಳಿದ ಹಿಂದೂ ದಾರ್ಶನಿಕರಾರೂ ಅದನ್ನು ಮಿಥ್ಯೆಯೆಂದು ಪರಿಗಣಿಸುವುದಿಲ್ಲ.

ಈ ವಿಚಾರಗಳ ಹಿನ್ನೆಲೆಯಲ್ಲಿ ಲಿಂಗಾಯತ-ಹಿಂದೂ (ವೈದಿಕ) ಧರ್ಮಗಳ ಸಾಮ್ಯಾಂತರಗಳ ಪರಿಶೀಲನೆಗೆ ಮುಂಚೆ ಅದಕ್ಕೆ ಪ್ರಚೋದನೆ ನೀಡಿದ ಮತ್ತೊಂದು ಸಂಗತಿಯನ್ನು ಇಲ್ಲಿ ಪ್ರಸ್ತಾಪಿಸುವುದು ಆವಶ್ಯಕ. 1950ರಲ್ಲಿ ಭಾರತೀಯ ಪ್ರಜಾರಾಜ್ಯ ಸಂವಿಧಾನ ಜಾರಿಗೆ ಬಂದ ಮೇಲೆ ಒಂದು ಹೊಸ ಪರಿಸ್ಥಿತಿ ನಿರ್ಮಾಣವಾಯಿತು. ಅಲ್ಪಸಂಖ್ಯಾತರಿಗೆ ಅವರವರ ವಿಶಿಷ್ಟ ಧರ್ಮ, ಭಾಷೆ, ಲಿಪಿ, ಮತ್ತು ಸಂಸ್ಕೃತಿಗಳ ರಕ್ಷಣೆಯ ಉದ್ದೇಶದಿಂದ ಕೆಲವು ಸೌಕರ್ಯ, ಸೌಲಭ್ಯ, ಹಕ್ಕುಗಳನ್ನು ಸಂವಿಧಾನವು ಕೊಟ್ಟಿತು (ಕಲಮುಗಳು 25ರಿಂದ 30ರವರೆಗೆ). ಈ ಹಕ್ಕುಗಳಿಂದ ಅಲ್ಪ ಸಂಖ್ಯಾತರ ಸಂಸ್ಥೆಗಳಿಗೆ (ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ) ಉಳಿದ ಸಂಸ್ಥೆಗಳಿಗಿಂತ ಹೆಚ್ಚಿನ ಸ್ವಾಯತ್ತತೆಗಳು ದೊರೆತು ಸರಕಾರವು ಅವುಗಳ ಆಡಳಿತ ನಿರ್ವಹಣೆಯಲ್ಲಿ ಕೈಹಾಕಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಮೂಡಿ, ಸರಕಾರದ ನಿಯಮ, ಆದೇಶ, ಆಡಳಿತ ಕ್ರಿಯೆಗಳಲ್ಲಿಯೂ ಸಹಿತ ಕಂಡುಬಂದಿತು. ಆಗ ಕೆಲವು ಸಮುದಾಯಗಳಲ್ಲಿ ತಾವು ಹಿಂದೂಗಳಲ್ಲ (ಅಲ್ಪಸಂಖ್ಯಾತ ಗುಂಪಿನವರು) ಎಂಬ ನಿಲುವನ್ನು ತಾಳಿ ಅದಕ್ಕೆ ನ್ಯಾಯಾಲಯಗಳಿಂದ ಅನುಮೋದನೆ ಪಡೆದರೆ ತಮ್ಮತಮ್ಮ ಸಂಸ್ಥೆಗಳಿಗೂ ಹೆಚ್ಚಿನ ಸ್ವಾಯತ್ತತೆ ಸಿಗುತ್ತದೆ ಎಂಬ ವಿಚಾರ ಅವರಲ್ಲಿ ಮೂಡಿತು. ಇಂಥ ಒಂದು ಉದ್ದೇಶದಿಂದ, ಗುಜರಾತಿನ "ಸ್ವಾಮಿನಾರಾಯಣಪಂಥ"ದವರು ಮೊದಲನೆಯ ಮೊಕದ್ದಮೆಯನ್ನು ಹೂಡಿದರು. ಭಾರತದ ಸರ್ವೋಚ್ಚ ನ್ಯಾಯಾಲಯದ ಆಗಿನ ಮುಖ್ಯ ನ್ಯಾಯಾಧೀಶರಾಗಿದ್ದ ಮಾನ್ಯ ಶ್ರೀ ಗಜೇಂದ್ರಗಡ್ಕರ್ ಅವರ ಅಧ್ಯಕ್ಷತೆಯಲ್ಲಿ ಆ ಪಂಥದವರು ವೈದಿಕರಾದುದರಿಂದ ಅವರು ಹಿಂದೂಗಳೇ ಎಂಬ ಅಂತಿಮ ತೀರ್ಪನ್ನು 1966ರಲ್ಲಿ ನೀಡಲಾಯಿತು.

*

1. ವೇದ ಪ್ರಾಮಾಣ್ಯ

ವಿಶ್ವದ ಎಲ್ಲ ಪ್ರಮುಖಧರ್ಮಗಳಿಗೂ ತಮ್ಮವೆ ಆದ ಮೂಲ ಧರ್ಮಗ್ರಂಥಗಳಿವೆ ಎಂಬುದು ಸರ್ವವಿದಿತ. ಕ್ರಿಶ್ಚಿಯನ್ನರಿಗೆ ಬೈಬಲ್, ಮುಸ್ಲಿಮರಿಗೆ ಕೊರಾನ್, ಶಿಖ್ಖರಿಗೆ ಗ್ರಂಥಸಾಹೇಬ್, ಬೌದ್ಧರಿಗೆ ತ್ರಿಪಿಟಕ, ಫಾರ್ಸಿಗಳಿಗೆ ಜೆಂಡ್ ಅವೆಸ್ಥಾ, ಇರುವಂತೆ ಹಿಂದೂಗಳಿಗೆ ವೇದಗಳಿವೆ. ಆ ಗ್ರಂಥಗಳು ಆಯಾ ಧರ್ಮದ ಪ್ರಮಾಣ ಗ್ರಂಥಗಳು. ದಿನಕ್ಕೆ ಐದು ಬಾರಿ ಅಲ್ಲಾನಿಗೆ ಏಕೆ ಪ್ರಾರ್ಥನೆ ಸಲ್ಲಿಸಬೇಕು ಎಂದು ನಾವು ಒಬ್ಬ ಮುಸ್ಲಿಮನನ್ನು ಕೇಳಿದರೆ ಆತ ಕೊರಾನಿನಲ್ಲಿ ಹಾಗೆ ಹೇಳಿದೆ ಎನ್ನುತ್ತಾನೆ. ಅಹಿಂಸೆಯನ್ನು ಏಕೆ ಪಾಲಿಸಬೇಕೆಂದು ಒಬ್ಬ ಬೌದ್ಧನನ್ನು ಕೇಳಿದರೆ, ಆತ ಹಾಗೆಂದು ತ್ರಿಪಿಟಕದಲ್ಲಿ ಹೇಳಿದೆ ಎನ್ನುತ್ತಾನೆ. ಅದೇ ರೀತಿ, ಒಂದು ವೈದಿಕ ಕರ್ಮವನ್ನು ಏಕೆ ಆಚರಿಸಬೇಕೆಂದು ಒಬ್ಬ ಹಿಂದೂವನ್ನು ಕೇಳಿದರೆ, ಆತ ಹಾಗೆಂದು ವೇದಗಳಲ್ಲಿ ಹೇಳಿದೆ ಎನ್ನುತ್ತಾನೆ. ಹೀಗೆ, ಹಿಂದೂಧರ್ಮದ ಯಾವ ಪಂಥವನ್ನು ತಗೆದುಕೊಂಡರೂ ಅದು ವೇದ ವೇದಪ್ರಾಮಾಣ್ಯವನ್ನು ಒಪ್ಪಿಕೊಳ್ಳುವುದು ಕಂಡು ಬರುತ್ತದೆ ಇಲ್ಲಿ ವೇದಪ್ರಾಮಾಣ್ಯವೆಂದರೆ ಯಾವುದೇ ಧಾರ್ಮಿಕ ಅಥವಾ ದಾರ್ಶನಿಕ ವಿವಾದದ ಸಂದರ್ಭದಲ್ಲಿ ವೇದಗಳು ಹೇಳುವುದೇ ಅಂತಿಮ ಎಂದು ಒಪ್ಪಿಕೊಳ್ಳುವುದು. ಸ್ವರ್ಗ-ನರಕ, ಈಶ್ವರ, ಆತ್ಮ ಮುಂತಾದ ತತ್ವಮೀಮಾಂಸೀಯ ವಿಷಯಗಳಿಗೆ ಸಂಬಂಧಿಸಿದ ಚರ್ಚೆಯಲ್ಲೇ ಆಗಲಿ, ಯಾವುದೇ ಕರ್ಮವನ್ನು ಆಚರಿಸುವುದಕ್ಕೆ ಸಂಬಂಧಿಸಿದ ವಿವಾದದಲ್ಲೇ ಆಗಲಿ, ವೇದ ಹೇಳುವುದೇ ಅಂತಿಮ ತೀರ್ಮಾನ. ಚಾರ್ವಾಕರು, ಜೈನರು, ಶೀಖರು ಮತ್ತು ಬೌದ್ಧರು ವೇದಪ್ರಾಮಾಣ್ಯವನ್ನು ನಿರಾಕರಿಸಿದುದರಿಂದ ಅವರು ವೈದಿಕರಲ್ಲ(ಹಿಂದೂಗಳಲ್ಲ) ಅವೈದಿಕರು ಎನ್ನಲಾಗುತ್ತದೆ. ಸುಪ್ರೀಮ್ ಕೋರ್ಟ್ ಮುಖ್ಯನ್ಯಾಯಾಧೀಶ ರಾಗಿದ್ದ ಪಿ.ಬಿ.ಗಜೇಂದ್ರಗಡ್ಕರ್ ಅವರು ವೇದಗಳನ್ನು ಭಕ್ತಿ-ಶ್ರದ್ಧೆಯಿಂದ ಮಾನ್ಯಮಾಡುವುದು, ಮುಕ್ತಿಗೆ ಹಲವಾರು ಹಾದಿಗಳಿವೆ ಹಾಗೂ ಬಹುದೇವತಾವಾದವಿದೆ ಎಂಬುದನ್ನು ಒಪ್ಪಿಕೊಳ್ಳುವುದು ಹಿಂದೂಧರ್ಮದ ವಿಶಿಷ್ಟ ಲಕ್ಷಣಗಳು ಎಂಬ ಬಾಲಗಂಗಾಧರ ತಿಲಕರ ಮಾತನ್ನು ಉಲ್ಲೇಖಿಸಿ, ಆ ಆಧಾರದ ಮೇಲೆ, ತಮ್ಮ ತೀರ್ಪಿನಲ್ಲಿ ಹಿಂದೂಧರ್ಮದ ಮುಖ್ಯ ಲಕ್ಷಣಗಳನ್ನು ನಿರ್ಧರಿಸಿದರು.

ಹೀಗೆ ನೋಡಿದಾಗ, ವೀರಶೈವರು ಹಿಂದೂಗಳೆಂದೂ, ಲಿಂಗಾಯತರು ಹಿಂದೂಗಳೆಲ್ಲವೆಂದೂ ಸ್ಪಷ್ಟವಾಗುತ್ತದೆ. ಏಕೆಂದರೆ ಲಿಂಗಾಯತರು ವೇದಪ್ರಾಮಾಣ್ಯವನ್ನು ಒಪ್ಪಿಕೊಳ್ಳುವುದಿಲ್ಲವಷ್ಟೇ ಅಲ್ಲ ವೇದಗಳನ್ನು ಸ್ಪಷ್ಟಮಾತುಗಳಲ್ಲಿ ಖಂಡಿಸುತ್ತಾರೆ. ಉದಾಹರಣೆಗೆ, ಈ ಕೆಳಗಿನ ವಚನಗಳನ್ನು ಪರಶೀಲಿಸಿ:

1. ನಾದದ ಬಲದಿಂದ ವೇದಂಗಳಾದುವಲ್ಲದೆ, ವೇದ ಸ್ವಯಂಭುವಲ್ಲ, ನಿಲ್ಲು.
ಮಾತಿನ ಬಲದಿಂದ ಶಾಸ್ತ್ರಂಗಳಾದುವಲ್ಲದೆ, ಶಾಸ್ತ್ರ ಸ್ವಯಂಭುವಲ್ಲ, ನಿಲ್ಲು.

2 ವೇದ ವೇಧಿಸಲರಿಯದೆ ಕೆಟ್ಟವು . . .

3. ವೇದಂಗಳು ನಿಮ್ಮ ಭೇದಿಸಲರಿಯವು ನೋಡಾ . . .

4. ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ತಿಗಳನಿಕ್ಕುವೆ, . . .

5. ವೇದವನೋದಿದವರೆಲ್ಲ ನಮ್ಮ ಶರಣರು ಹೋದ
ಹಾದಿಯನರಿಯದೆ ಸೋಹಂ ಎಂದು ಅಹಂಕರಿಸಿ
ಅನಿತ್ಯದೇಹಿಗಳಾಗಿ, ಅನಾಮಿಕರಾಗಿ ಹೋದರು . . .

6. ವೇದ ಶಾಸ್ತ್ರ ಪುರಾಣಾಗಮಂಗಳೆಲ್ಲ ಕೊಟ್ಟಣವ ಕುಟ್ಟುತ್ತ್ತ
ನುಚ್ಚು ತೌಡು ಕಾಣಿ ಭೋ ಇವ ಕುಟ್ಟಲೇಕೋ . . .

ಹೀಗೆ, ವೇದಗಳನ್ನು ಲಿಂಗಾಯತರು ತಿರಸ್ಕಾರದೃಷ್ಟಿಯಿಂದ ನೋಡಿದ್ದಾರೆಯೆ ಹೊರತು, ಅವು ತಮ್ಮ ಪ್ರಮಾಣಗ್ರಂಥ, ಅವಕ್ಕೆ ಗೌರವ ನೀಡಬೇಕು, ಎಂದು ಯಾವತ್ತೂ ಹೇಳಿಲ್ಲ. ಆದರೆ, ಅವರು ತಮ್ಮ ವಚನಗಳಿಗೆ ಅತಿಯಾದ ಗೌರವ ನೀಡಿರುವುದು ಸ್ಪಷ್ಟವಾಗಿದೆ. ಉದಾಹರಣೆಗೆ ಈ ವಚನಗಳನ್ನು ನೋಡಿ:

1. ಕೆರೆ ಹಳ್ಳ ಬಾವಿಗಳು ಮೈತೆಗೆದರೆ ಗುಳ್ಳೆ ಗೊರಚೆ ಚಿಪ್ಪುಗಳ ಕಾಣಬಹುದು.
ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು. . .
ನಮ್ಮ ಕೂಡಲ ಸಂಗನ ಶರಣರು ಮನದೆರೆದು ಮಾತಾಡಿದರೆ ಲಿಂಗವೇ ಕಾಣಬಹುದು.

2. ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ. ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ.
ನಿಮ್ಮ ಶರಣರ ಸೂಳ್ಮ್ನಡಿಯ ಒಂದರಗಳಿಗೆ ಇತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥಾ!

3. ಆದ್ಯರ ವಚನ ಪರುಷ ಕಂಡಣ್ಣಾ . . .

ಹೀಗೆ ಲಿಂಗಾಯತರು ಹಿಂದೂಗಳೇ ಆಗಿದ್ದರೆ ವೇದಗಳನ್ನು ನಿಂದಿಸಿ, ಶರಣರ ವಚನಗಳನ್ನು ವಿಜೃಂಭಿಸುತ್ತಿದ್ದರೆ? ಎರಡನೆಯದಾಗಿ, ಲಿಂಗಾಯತರು ಏಕದೇವೋಪಾಸಕರು, ವೈದಿಕರು ಬಹುದೇವೋ ಪಾಸಕರು. ಆದುದರಿಂದ ಅವರು ಬಹುದೇವತಾವಾದವನ್ನು ಖಂಡಿಸಿ, ಏಕದೇವೋಪಾಸನೆ (ಇಷ್ಟಲಿಂಗೋಪಾ ಸನೆ)ಯನ್ನು ವಿಧಿಸುತ್ತಾರೆ. ವೈದಿಕರು ಏಕಂ ಸತ್, ಬಹುಧಾ ವಿಪ್ರಾ ವದಂತಿ (ಸತ್ಯ ಒಂದೇ, ಅದನ್ನೇ ವಿಪ್ರರು ಅನೇಕ ಹೆಸರುಗಳಿಂದ ಕರೆಯುತ್ತಾರೆ) ಎಂದು ಹೇಳುತ್ತಾ ಏಕದೇವೋಪಾಸನೆ ಮತ್ತು ಬಹುದೇವೋಪಾಸನೆಗಳನ್ನು ಸಮನ್ವಯ ಮಾಡಲು ಪ್ರಯತ್ನಿಸಿದ್ದರಿಂದ ವಿವಿಧ ದೇವತೆಗಳಿಗೆ ಯಜ್ಞ ಮಾಡುವುದನ್ನು ಅವರು ಬಿಟ್ಟಿಲ್ಲ.

`ವೇದಗಳಲ್ಲಿ ಕರ್ಮಕಾಂಡ, ಜ್ಞಾನಕಾಂಡ ಎಂದು ಎರಡು ಭಾಗಗಳಲ್ಲಿದ್ದು, ಲಿಂಗಾಯತರು ಕರ್ಮಕಾಂಡವನ್ನಷ್ಟೆ ಖಂಡಿಸುತ್ತಾರೆ; ಆದರೆ ಉಪನಿಷತ್ತುಗಳ ಸಿದ್ಧಾಂತ (ಜ್ಞಾನಕಾಂಡ)ವನ್ನು ಒಪ್ಪಿಕೊಳ್ಳುತ್ತಾರೆ. ಆದುದರಿಂದ, ವಚನೋಕ್ತ ಲಿಂಗಾಯತ ವೇದವಿರೋಧಿಯಲ್ಲ ಎಂದು ಕೆಲವರು ವಾದಿಸುತ್ತಾರೆ ಆದರೆ, ಜೈನರೂ, ಬೌದ್ಧರೂ ಸಹ ಜ್ಞಾನಕಾಂಡವನ್ನು ಅನುಮೋದಿಸುತ್ತಾರೆ. ಆದರೂ ಅವರನ್ನು ಹಿಂದೂಗಳೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅವರು ಕರ್ಮಕಾಂಡ ವಿರೋಧಿಗಳು. ಕರ್ಮಕಾಂಡ ವಿರೋಧಿಗಳೆಲ್ಲ ಅವೈದಿಕರಾದರೆ ಲಿಂಗಾಯತರೂ ಅವೈದಿಕರೆ (ಅ-ಹಿಂದೂಗಳೇ). ಮೇಲಾಗಿ, ಕಾಲಾನುಕ್ರಮದಲ್ಲಿ ತಲೆದೋರಿದ ಭಾರತದ ಧರ್ಮಗಳು ವೈದಿಕ ಧರ್ಮದ ಎಲ್ಲ ಅಂಶಗಳನ್ನು ಖಂಡಿಸಲೇಬೇಕು ಎಂಬ ನಿಯಮವೇನೂ ಇಲ್ಲ. ಹೀಗಾಗಿ, ಲಿಂಗಾಯತರು ಯಜ್ಞ, ಹಿಂಸೆಗಳನ್ನೊಳಗೊಂಡ ಕರ್ಮಕಾಂಡವನ್ನು ಖಂಡಿಸಿದರು, ಜ್ಞಾನಕಾಂಡವನ್ನು ಒಪ್ಪಿಕೊಂಡರು. (ವಾಸ್ತವವಾಗಿ, ಉಪನಿಷತ್ಕಾರರೇ ಮೊಟ್ಟಮೊದಲ ಕರ್ಮಕಾಂಡವಿರೋಧಿಗಳು. ಆದರೆ, ಅವರೇ ಆಮೇಲೆ ಕರ್ಮಕಾಂಡಕ್ಕೂ ಅವಕಾಶ ಮಾಡಿಕೊಟ್ಟರು.) ಅಷ್ಟೇ ಅಲ್ಲ, ಅದು ತಮ್ಮ ಧರ್ಮದ ಅವಿಭಾಜ್ಯ ಅಂಗವೆಂದರು. ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದಿರುವ ಶಂಕರ, ರಾಮಾನುಜ ಮತ್ತು ಮಧ್ವಾಚಾರ್ಯರು ಶೂದ್ರರಿಗೆ ಮೋಕ್ಷವಿಲ್ಲ ಎಂಬುದನ್ನು ಈ ರೀತಿ ಸಮರ್ಥಿಸಿಕೊಂಡಿದ್ದಾರೆ: ಶೂದ್ರರಿಗೂ, ಸ್ತ್ರೀಯರಿಗೂ ಮೋಕ್ಷ (ಬ್ರಹ್ಮಸಾಕ್ಷಾತ್ಕಾರ)ವಿಲ್ಲ, ಏಕೆಂದರೆ, ಅವರಿಗೆ ವೇದಾಧ್ಯಯನವಿಲ್ಲ; ಅವರಿಗೆ ವೇದಾಧ್ಯಯನ ಏಕಿಲ್ಲವೆಂದರೆ ಅವರಿಗೆ ಯಜ್ಞಯಾಗಾದಿಗಳನ್ನು ಮಾಡುವ ಅಧಿಕಾರವಿಲ್ಲ; ಅವರಿಗೆ ಯಜ್ಞಯಾಗಾದಿಗಳನ್ನು ಮಾಡುವ ಅಧಿಕಾರ ಏಕಿಲ್ಲವೆಂದರೆ, ಅದು ಉಪನಯನಪೂರ್ವಕವಾಗಿ ಆಗತಕ್ಕದ್ದು; ವರ್ಣತ್ರಯರಿಗೆ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ) ಮಾತ್ರ ಉಪನಯನವಿದೆ. ಶೂದ್ರರಿಗೂ ಸ್ತ್ರೀಯರಿಗೂ ಉಪನಯನ ಸಂಸ್ಕಾರವಿಲ್ಲ.(ನೋಡಿ: ಬಾದರಾಯಣನ ಬ್ರಹ್ಮಸೂತ್ರಗಳು ಮತ್ತು ಅದರ ಮೇಲೆ ಈ ಮೂವರೂ ಆಚಾರ್ಯರು ಬರೆದಿರುವ ಭಾಷ್ಯಗಳು: ..ಸೂತ್ರಗಳು 34-38). ಇದರಲ್ಲಿ ಸೂತ್ರ 38 ("ಶ್ರವಣಾಧ್ಯಯನಾರ್ಥ ಪ್ರತಿಷೇಧಾತ್ ಸ್ಮೃತೇಶ್ಚ") ಮನುಸ್ಮೃತಿ ಮುಂತಾದ ಸ್ಮೃತಿಗಳಲ್ಲಿ ಶೂದ್ರನಿಗೆ ವೇದಶ್ರವಣ-ಅಧ್ಯಯನ-ಅರ್ಥಗಳನ್ನು ಪ್ರತಿಷೇಧಿಸಿರುವುದರಿಂದ, ಅವನಿಗೆ ಬ್ರಹ್ಮವಿದ್ಯೆಯಿಲ್ಲ, ಎಂದು ಹೇಳುತ್ತದೆ.

ಕ್ರಿ.ಪೂ.ಎರಡನೆ ಶತಮಾನದಲ್ಲಿ ಬಾದರಾಯಣ ಬ್ರಹ್ಮಸೂತ್ರ ರಚಿಸಿದನೆಂದು ಊಹಿಸಿಕೊಂಡರೆ ಅವನ ಕಾಲಕ್ಕಾಗಲೆ ಸ್ಮೃತಿ ಶಾಸನ ರೂಪದ ಪ್ರಮಾಣಗ್ರಂಥವಾಗಿತ್ತು, ಎನ್ನಬಹುದು. ಉಪನಯನ, ಯಜ್ಞ-ಯಾಗಾದಿಗಳು ಶೂದ್ರರಿಗೂ ಸ್ತ್ರೀಯರಿಗೂ ನಿಷೇಧಿಸಲ್ಪಟ್ಟಿದುದು ಬಸವಣ್ಣನವರನಂತರದ ಮಧ್ವಾಚಾರ್ಯರ (1238-1317) ಕಾಲದಲ್ಲೂ ಇತ್ತು ಎಂದರೆ, ಜಾತಿತಾರತಮ್ಯ, ಉಪನಯನ, ಯಜ್ಞಯಾಗ, ಮುಂತಾದುವು ಹಿಂದೂ (ವೈದಿಕ) ಧರ್ಮದ ಜೀವಾಳವಾಗಿದ್ದವು ಎಂದರ್ಥ. ಇವುಗಳನ್ನು ಅನುಮೋದಿಸುವ ಕರ್ಮಕಾಂಡದ ಪ್ರಾಮುಖ್ಯತೆ ಎಷ್ಟಿತ್ತೆಂದರೆ ಅದು ಗಂಭೀರ ರೀತಿಯ ಹಿಂದೂ ಧರ್ಮವನ್ನು ಪಾಲಿಸಬೇಕೆಂದು ನಿರ್ಧರಿಸುವ ವ್ಯಕ್ತಿಯ ಐಚ್ಛಿಕ ವಿಷಯವಾಗಿರದೆ, ಅವನ ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿತ್ತು.

ಆದರೆ ಡಾ|| ಚಿದಾನಂದಮೂರ್ತಿ ಯವರು ತಮ್ಮ `ಭಾರತೀಯ ಸಂಸ್ಕೃತಿ-ಹಿಂದೂ ಧರ್ಮ' (ಪು.27) ದಲ್ಲಿ ``ಒಂದು ವೇಳೆ ಒಬ್ಬ ವ್ಯಕ್ತಿ ವೇದಪ್ರಾಮಾಣ್ಯವನ್ನು ನಿರಾಕರಿಸಿದರೂ ಅವನು ಹಿಂದೂವೇ ಆಗಿ ಉಳಿಯಬಹುದು. ವೇದಗಳನ್ನು ಓದಿರುವವರು, ಓದಬಲ್ಲವರು, ಓದಬಹುದಾದವರು ಕೆಲವರೇ ಆದರೂ ಎಲ್ಲ ಹಿಂದೂಗಳಿಗೂ ವೇದಗ್ರಂಥಗಳು ಪರಮಪ್ರಾಮಾಣ್ಯ ಎಂದು ಹೇಳಿ ಒಂದು ಸ್ಪಷ್ಟಗೊಂದಲ ಉಂಟುಮಾಡಿದ್ದಾರೆ. ಇದರಲ್ಲಿರುವ ಎರಡು ಮುಖ್ಯ ದೋಷಗಳೆಂದರೆ ಇವು:

a) ವೇದಪ್ರಾಮಾಣ್ಯ ನಿರಾಕರಿಸಿದರೂ ಹಿಂದೂವಾಗಿರಬಹುದೆಂಬ ಮಾತು "ಎಲ್ಲ ಹಿಂದೂಗಳಿಗೂ ವೇದ ಪರಮಪ್ರಾಮಾಣ್ಯ" ಎಂಬುದಕ್ಕೆ ವಿರುದ್ಧವಾಗಿದೆ. ಒಬ್ಬರೆ ಆಡಿದ ಇಂಥ ಮಾತುಗಳಿಗೆ ಸ್ವವಿರೋಧ (self-contradiction) ಎಂದು ಹೆಸರು. ಅಂದರೆ, ಎರಡು ಮಾತುಗಳೂ ಪರಸ್ಪರ ವಿರುದ್ಧವಿದ್ದು, ಅವುಗಳಲ್ಲಿ ಒಂದು ಸತ್ಯವಾಗಿದ್ದರೆ ಇನ್ನೊಂದು ಅಸತ್ಯವಾಗಿರಲೇಬೇಕಾಗುತ್ತದೆ. ಆದರೆ ಡಾ|| ಚಿದಾನಂದಮೂರ್ತಿಗಳು ಈ ಪರಸ್ಪರ ವಿರುದ್ಧ ಮಾತುಗಳೆರಡೂ ಏಕಕಾಲದಲ್ಲಿ ಸತ್ಯವೆಂದು ಹೇಳಿ ಸ್ವವಿರೋಧ ದೋಷಕ್ಕೆ ಒಳಗಾಗಿದ್ದಾರೆ.
b) ವೇದಪ್ರಾಮಾಣ್ಯ ನಿರಾಕರಿಸಿದ ವ್ಯಕ್ತಿ ಹಿಂದೂ (ವೈದಿಕ) ಆಗಿರಲು ಸಾಧ್ಯವಿದೆ ಎಂಬ ಮಾತು ಸತ್ಯವಲ್ಲ. ಚಾರ್ವಾಕ, ಬೌದ್ಧ, ಜೈನ, ಮುಂತಾದವರು ವೇದಪ್ರಾಮಾಣ್ಯವನ್ನು ನಿರಾಕರಿಸಿದುದರಿಂದಲೆ ತಾನೆ ಅವರಿಗೆ ನಾಸ್ತಿಕ (ನಿರೀಶ್ವರವಾದಿ ಎಂಬ ಒಂದೇ ಅರ್ಥದಲ್ಲಿ ಅಲ್ಲ) ಎಂಬ ಬಿರುದು ಬಂದುದು? ವೇದಪ್ರಾಮಾಣ್ಯ ಒಪ್ಪದ ಇವರು ಅಹಿಂದೂಗಳಾದರೆ ಲಿಂಗಾಯತರೇಕಲ್ಲ?

ವೇದಪ್ರಾಮಾಣ್ಯವನ್ನು ನಿರಾಕರಿಸಿಯೂ ಒಬ್ಬ ಹಿಂದೂ ಆಗಿರಬಲ್ಲನೆಂಬ ಡಾ.ಚಿದಾನಂದ ಮೂರ್ತಿಯವರ ವಾದ (ಕರ್ಮಕಾಂಡವನ್ನೊಳಗೊಂಡ) ವೇದಪ್ರಾಮಾಣ್ಯ ನಿರಾಕರಿಸಿದ ಲಿಂಗಾಯತರು ಹಿಂದೂಗಳು ಎಂಬ ತೀರ್ಮಾನವನ್ನು ಪಡೆಯಲು ಸಹಾಯಕವಾಗುತ್ತದೆ. ಆದರೆ, ಮೂಲ ಪ್ರತಿಜ್ಞೆಯೇ (premise) ಅಸತ್ಯವಾಗಿರುವಾಗ ಅದರಿಂದ ಪಡೆದ ಅನುಮಿತಿಯೂ (ತೀರ್ಮಾನವೂ) ಅಸತ್ಯವೇ. ಅಷ್ಟೇ ಅಲ್ಲ, ಒಂದು ವೇಳೆ ಅವರ ಈ ಪ್ರತಿಜ್ಞೆಯನ್ನು ಒಪ್ಪಿಕೊಂಡರೆ ವೇದಪ್ರಾಮಾಣ್ಯ ನಿರಾಕರಿಸಿದ (ಆದರೆ ಉಪನಿಷತ್ತುಗಳ ಕೆಲವು ಸಿದ್ಧಾಂತಗಳನ್ನು ಸ್ವೀಕರಿಸಿದ) ಬೌದ್ಧ, ಜೈನ, ಶಿಖ್ಖರೂ ಹಿಂದೂಗಳಾಗುತ್ತಾರೆ. ಅಲ್ಲದೆ, ಲಿಂಗಾಯತರು ತಮ್ಮ ಸಿದ್ಧಾಂತಗಳಿಗೆ ಅನುಗುಣವಾದ ಉಪನಿಷತ್ತುಗಳ ಕೆಲವು ಸಿದ್ಧಾಂತಗಳನ್ನು ಅನುಮೋದಿಸಿದರೂ, ಅವರು ಉಪನಿಷತ್ತಿನ ಎಲ್ಲ ಸಿದ್ಧಾಂತಗಳನ್ನೂ ಮಾನ್ಯ ಮಾಡಿದರೆಂದಾಗಲಿ ಅವೇ ಅಂತಿಮ ಪ್ರಮಾಣವೆಂದು ಒಪ್ಪಿಕೊಂಡರೆಂದಾಗಲಿ ತೀರ್ಮಾನವಾಗುವುದಿಲ್ಲ.

ಕೆಲವರು ನಿರೀಶ್ವರವಾದವನ್ನೇ ಅವೈದಿಕತೆಯ ಲಕ್ಷಣವೆಂದು ಪರಿಗಣಿಸಿ, ಬೌದ್ಧರು, ಜೈನರು, ಚಾರ್ವಾಕರು ನಿರೀಶ್ವರವಾದಿಗಳು, ಆದುದರಿಂದ ಅವರು ಹಿಂದೂಗಳಲ್ಲ, ಎನ್ನುತ್ತಾರೆ. ಆದರೆ, ಅವರ ಈ ವಾದ ತಪ್ಪು. ಏಕೆಂದರೆ, ಸಾಂಖ್ಯರು, ವೈಶೇಷಿಕರು, ಪೂರ್ವಮೀಮಾಂಸಕರು ಸಹ ನಿರೀಶ್ವರವಾದಿಗಳೆ; ಆದರೂ ಅವರೆಲ್ಲ ವೈದಿಕರು (ಅಥವಾ ಹಿಂದೂಗಳು). ಏಕೆಂದರೆ, ಅವರೆಲ್ಲ ಕರ್ಮಕಾಂಡ ಪ್ರತಿಪಾದಕರು.

2 ಧರ್ಮಗ್ರಂಥ ಮತ್ತು ಸಂಸ್ಕಾರಗಳು

ಜೈನರಿಗೂ, ಬೌದ್ಧರಿಗೂ ಸಿಖ್ಖರಿಗೂ ತಮ್ಮವೇ ಆದ ಧರ್ಮಗ್ರಂಥಗಳೂ, ಧಾರ್ಮಿಕ ಸಂಸ್ಥೆಗಳೂ ಇರುವಂತೆ ಲಿಂಗಾಯತರಿಗೂ ತಮ್ಮವೇ ಆದ ಧರ್ಮಗ್ರಂಥಗಳೂ (ವಚನ ಸಾಹಿತ್ಯ), ಧಾರ್ಮಿಕ ಸಂಸ್ಥೆಗಳೂ ಇವೆ. ಇನ್ನೊಂದು ಮುಖ್ಯವಾದ ಅಂಶವೆಂದರೆ, ಕ್ಷತ್ರಿಯರೂ, ವೈಶ್ಯರೂ, ನಾಮಕರಣ, ಮದುವೆ, ಶವಸಂಸ್ಕಾರ, ಮುಂತಾದ ಸಂಸ್ಕಾರಗಳಿಗೆ ಬ್ರಾಹ್ಮಣ ಪುರೋಹಿತರನ್ನೇ ಕರೆಸುತ್ತಾರೆ, ಮತ್ತು ಬ್ರಾಹ್ಮಣ ಪುರೋಹಿತರು ವೇದದ ಮಂತ್ರಗಳನ್ನೆ ಪಠಿಸುತ್ತ, ವೇದೋಕ್ತ ವಿಧಿಗಳನ್ನೇ ಆಚರಿಸುತ್ತಾರೆ. ಆದರೆ, ಲಿಂಗಾಯತರು ತಮ್ಮ ಮದುವೆ, ನಾಮಕರಣ, ಶವಸಂಸ್ಕಾರ, ಪೂಜೆ, ಮುಂತಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಬ್ರಾಹ್ಮಣ ಪೌರೋಹಿತ್ಯ ಮಾನ್ಯಮಾಡುವುದಿಲ್ಲ.

3 ಹಿಂದೂಗಳು ವೇದಗಳು ಪ್ರತಿಪಾದಿಸುವ ವರ್ಣಧರ್ಮವನ್ನೂ, ಆಶ್ರಮ ಧರ್ಮವನ್ನೂ ಒಪ್ಪಿಕೊಳ್ಳುತ್ತಾರೆ. ಲಿಂಗಾಯತರು ಇವೆರಡನ್ನೂ ತಿರಸ್ಕರಿಸುತ್ತಾರೆ.

3.1 ಸನಾತನಪದ್ಧತಿಯ ಪ್ರಕಾರ, ಭಾರತೀಯ ಸಮಾಜ ಬ್ರಾಹ್ಮಣ, ಕ್ಪ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳಾಗಿ ವಿಂಗಡಿಸಲ್ಪಟ್ಟಿದೆ. ಯಾವ ಅಧಾರದ ಮೇಲೆ ಈ ವಿಭಜನೆಯಾಯಿತು ಎಂಬ ಪ್ರಶ್ನೆಯನ್ನು ಸಧ್ಯಕ್ಕೆ ಕಡೆಗಣಿಸಿ, ಈ ವಿಭಜನೆಯ ಹಿಂದಿರುವ ಕೆಲವು ತತ್ವಗಳನ್ನು ನಾವು ಗಮನಿಸಬೇಕು. ಈ ನಾಲ್ಕು ವರ್ಣಗಳಲ್ಲಿ ವೇದಾಧ್ಯಯನ, ವೇದಾಧ್ಯಾಪನಮಾಡುವ ಬ್ರಾಹ್ಮಣ ಶ್ರೇಷ್ಠ; ರಾಜ್ಯಭಾರಮಾಡುವ, ದೇಶರಕ್ಷಣೆಗಾಗಿ ವ್ಶೆರಿಗಳೊಡನೆ ಹೋರಾಡುವ ಕ್ಷತ್ರಿಯನಿಗೆ ಎರಡನೆಯ ಸ್ಥಾನ; ವ್ಯಾಪಾರ ಮತ್ತು ವ್ಯವಸಾಯ ಮಾಡುವ ವೈಶ್ಯನಿಗೆ ಮೂರನೆಯ ಸ್ಥಾನ; ಈ ಮೇಲಿನ ಮೂರು ವರ್ಗಗಳಿಗೆ ತಮ್ಮ ನಿಸ್ಪೃಹ ಸೇವೆ ಸಲ್ಲಿಸುವ ಕರ್ತವ್ಯವನ್ನುಳ್ಳ ಶೂದ್ರರಿಗೆ ನಾಲ್ಕನೆಯ ಸ್ಥಾನ. ಈಗ ನಾವು ಯಾರನ್ನು ಅಸ್ಪೃಶ್ಯರೆಂದು ಕರೆಯುತ್ತೇವೆಯೋ ಅವರು ಹಿಂದೂ ಗಳಲ್ಲ. ವೈದಿಕರು ಅವರನ್ನು ಕೊನೆಗೆ ಸರಿಸಿ, ಐದನೆಯವರು (ಪಂಚಮರು) ಎಂದು ಕರೆದರು. ಈ ಐದು ವರ್ಣಗಳು ಬ್ರಾಹ್ಮಣ ಪಾರಮ್ಯವನ್ನು ಒಪ್ಪಿಕೊಳ್ಳುತ್ತವೆ. ಕ್ಷತ್ರಿಯರು ತಾವು ಬ್ರಾಹ್ಮಣರಿಗಿಂತ ಕಡಿಮೆಯೇನಿಲ್ಲ ಅಥವಾ ತಾವೇ ಶ್ರೇಷ್ಠರೆಂದು ತೋರಿಸಿಕೊಳ್ಳಲು ಆಗಾಗ್ಗೆ ಪ್ರಯತ್ನ ಮಾಡಿರಬಹುದಾದರೂ ಪರಶುರಾಮ, ವಸಿಷ್ಠರಂಥವರು ಬ್ರಹ್ಮ ಬಲವೇ ಬಲ ಎಂದು ಬ್ರಾಹ್ಮಣಪಾರಮ್ಯದ ಬಗೆಗೆ ಅಂತಿಮ ತೀರ್ಮಾನ ನೀಡಿದ್ದಾರೆ ಮತ್ತು ಇತರರು ಅದನ್ನು ಪ್ರತಿರೋಧವಿಲ್ಲದೆ ಸ್ವೀಕರಿಸಿದ್ದಾರೆ.

3.2 ಸನಾತನ ಹಿಂದೂ ಆಶ್ರಮ ಪದ್ಧತಿಯ ಪ್ರಕಾರ, ಪ್ರತಿಯೊಬ್ಬನೂ ತನ್ನ ಜೀವನದ ನಾಲ್ಕು ಘಟ್ಟ(ಆಶ್ರಮ)ಗಳಲ್ಲಿ ನಾಲ್ಕು ರೀತಿಯ ಧರ್ಮ (ಕರ್ತವ್ಯ)ಗಳನ್ನು ಪಾಲಿಸಬೇಕಾಗುತ್ತದೆ. ಬ್ರಹ್ಮಚರ್ಯದಲ್ಲಿ ವಿದ್ಯೆ ಕಲಿಯಬೇಕು; ತಾರುಣ್ಯದಲ್ಲಿ ಗೃಹಸ್ಥನಾಗಿ ಸಂತಾನೋತ್ಪತ್ತಿಗೆ ಕಾರಣನಾಗಬೇಕು; ಮಕ್ಕಳು ಗೃಹಸ್ಥರಾದ ಮೇಲೆ ತಾನು ಕಾಡಿಗೆ ಹೋಗಿ ವಾನಪ್ರಸ್ಥ ಜೀವನ ನಡೆಸಬೇಕು ಮತ್ತು ಕೊನೆಯಲ್ಲಿ ಅಲ್ಲೇ ಇದ್ದು ಸನ್ಯಾಸ ಜೀವನ ನಡೆಸುತ್ತಾ ಸತ್ಯಾನ್ವೇಷಣೆಯಲ್ಲಿ ತೊಡಗಬೇಕು. ಈ ಪದ್ಧತಿಯ ಪ್ರಕಾರ ಲೌಕಿಕ ಜೀವನಕ್ಕಿಂತ ವಾನಪ್ರಸ್ಥ ಜೀವನ ಉತ್ತಮ, ವಾನಪ್ರಸ್ಥ ಜೀವನಕ್ಕಿಂತ ಸನ್ಯಾಸ ಜೀವನ ಉತ್ತಮ.

ಒಂದು ವೇಳೆ ಲಿಂಗಾಯತರೂ ಹಿಂದೂಗಳು ಎಂದಾದರೆ, ಆಗ ಅವರು ಹಿಂದೂಗಳಲ್ಲಿ ಯಾವುದಾದರೂ ಒಂದು ವರ್ಣಕ್ಕೆ ಸೇರಿದವರಾಗಿರಬೇಕಾಗುತ್ತದೆ. ಆಗ, ಲಿಂಗಾಯತರು ಬ್ರಾಹ್ಮಣರೊ, ಕ್ಷತ್ರಿಯರೊ, ವೈಶ್ಯರೊ ಅಥವಾ ಶೂದ್ರರೊ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೇಲಿನ ಮೂರು ವರ್ಗಗಳಿಗಂತೂ ಅವರು ಸೇರುವುದಿಲ್ಲ. ಏಕೆಂದರೆ, ಅವರು ಬ್ರಾಹಣ, ಕ್ಷತ್ರಿಯ ವೈಶ್ಯರಂತೆ ಜನಿವಾರ ಧರಿಸುವುದಿಲ್ಲ, ವೇದಕ್ಕೆ ಮಾನ್ಯತೆ ನೀಡುವುದಿಲ್ಲ. ಹಾಗಾದರೆ ಅವರು ಶೂದ್ರರೆ? ಅವರಿಗೆ ವೇದಗಳನ್ನು ಕಲಿಯುವ ಮತ್ತು ಕಲಿಸುವ ಅಧಿಕಾರ ಇರುವುದರಿಂದ, ಅವರನ್ನು ಶೂದ್ರರೆಂದು ಪರಿಗಣಿಸಲು ಸಾಧ್ಯವಿಲ್ಲ. ಮೊದಲನೆಯದಾಗಿ ಅವರು ವೇದಪ್ರಾಮಾಣ್ಯವನ್ನು ನಿರಾಕರಿಸುವುದರಿಂದ ಅವರನ್ನು ಹಿಂದೂಗಳೆಂದು ಕರೆದುದೆ ತಪ್ಪು. ಅಲ್ಲದೆ, ಶಿವಭಕ್ತರಲ್ಲಿ ಜಾತಿಭೇದವಿರಕೂಡದು ಎಂಬ ವಚನಗಳ ಆದೇಶವು ಹಿಂದೂಧರ್ಮದ ಜೀವಾಳವಾದ ವರ್ಣಪದ್ಧತಿಗೆ ವಿರೋಧವಾಗುತ್ತದೆ. ಅಂಥ ಒಂದು ತತ್ವವಿದ್ದರೂ ಶಿವಭಕ್ತರಲ್ಲಿ ವಾಸ್ತವವಾಗಿ ತಾರತಮ್ಯವಿದೆ ಎಂಬ ವಾದವು ಅಸಾಧು. ಏಕೆಂದರೆ, ಒಂದು ಧರ್ಮವು ಯಾವ ತತ್ವವನ್ನು ಬೋಧಿಸುತ್ತದೆ ಎಂಬುದು ಮುಖ್ಯವೇ ಹೊರತು, ಎಷ್ಟು ಜನ ಆ ತತ್ವವನ್ನು ಆಚರಿಸುತ್ತಿದ್ದಾರೆ, ಎಂಬುದಲ್ಲ. ಉದಾ: ಲಿಂಗಾಯತರು ಇಷ್ಟಲಿಂಗವನ್ನಲ್ಲದೆ ಮತ್ತೇನನ್ನೂ ಪೂಜಿಸಬಾರದು ಎಂಬ ವಚನದ ಆದೇಶವನ್ನು ಬಹಳಷ್ಟು ಲಿಂಗಾಯತರು ಗೊತ್ತಿದ್ದೋ ಗೊತ್ತಿಲ್ಲದೆಯೊ ಪಾಲಿಸುವುದಿಲ್ಲ. ಅವರು ಹಿಂದೂ ಧರ್ಮದ ಪ್ರಭಾವಕ್ಕೊಳಗಾಗಿ, ಅದರಿಂದ ತಪ್ಪಿಸಿಕೊಳ್ಳಲಾಗದಿರುವುದೇ ಇದಕ್ಕೆ ಕಾರಣ. ಅದೇ ರೀತಿ ಜಾತಿಪದ್ಧತಿಯನ್ನೂ, ಬಹುದೇವತಾರಾಧನೆಯನ್ನೂ, ವಿಗ್ರಹಾರಾಧನೆಯನ್ನೂ, ಜ್ಯೋತಿಷ್ಯ, ಶಕುನ, ಮಂತ್ರತಂತ್ರ, ಮುಂತಾದವುಗಳನ್ನೂ ಅವರು ಲಿಂಗಾಯತರಾದ ಮೇಲೂ ಮರೆತಿಲ್ಲ. ಇಷ್ಟಲಿಂಗಪೂಜೆಯನ್ನು ಅಲಕ್ಷಿಸುವುದಾಗಲಿ ಜಾತಿಭೇದವನ್ನು ಮಾಡುವುದಾಗಲಿ ಲಿಂಗಾಯತರ ತತ್ವಗಳಲ್ಲ; ಅಥವಾ ಅವು ಅವನನ್ನು ಅ-ಲಿಂಗಾಯತನನ್ನಾಗಿ ಮಾಡುವುದಿಲ್ಲ. ಒಂದು ವೇಳೆ ವಚನೋಕ್ತ ತತ್ವಗಳನ್ನೆಲ್ಲ ಪಾಲಿಸುವರಷ್ಟೆ ಲಿಂಗಾಯತರು ಎಂದಾದರೆ, ಪ್ರಾಯಶಃ ಒಬ್ಬ ಲಿಂಗಾಯತನೂ ಇಂದು ನಮಗೆ ಕಾಣಸಿಗುವುದಿಲ್ಲ, "There was only one true Christian and he died on the cross" ಎಂಬ ಮಾತನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇತ್ತೀಚೆಗೆ ಕೆಲವರು ತಮ್ಮನ್ನು ಲಿಂಗೀಬ್ರಾಹ್ಮಣರೆಂದು ಕರೆದುಕೊಳ್ಳುವ ಮೂಲಕ ತಮ್ಮಲ್ಲಿಯೂ ಜಾತಿಪದ್ಧತಿ ಇದೆಯೆಂದೂ, ಆದುದರಿಂದ, ತಾವೂ ಹಿಂದೂಗಳೆಂದೂ ವಾದಿಸುತ್ತಿದ್ದಾರೆ. ಹೀಗೆ ವಾದಿಸುವುದೂ ಸ್ವವಿರೋಧವೇ. ಈಗಾಗಲೆ ತಾವು ಅತಿವರ್ಣಿಗಳೆಂದು ಹೇಳಿ, ಈಗ ತಮ್ಮಲ್ಲಿಯೂ ಜಾತಿಪದ್ಧತಿ ಇದೆ ಎನ್ನುವುದು ಸ್ವವಿರೋಧವಲ್ಲದೆ ಮತ್ತೇನು?

ಹೀಗೆ ವಾದಿಸುವವರು ಲಿಂಗಾಯತರಿಗೂ ವೀರಶೈವರಿಗೂ ಇರುವ ವ್ಯತ್ಯಾಸವನ್ನು ಬೇಕೆಂದೇ ಕಡೆಗಣಿಸುತ್ತಿದ್ದಾರೆ ಅಥವಾ ಅವರಿಗೆ ಸ್ವವಿರೋಧವೆಂದರೇನೆಂಬುದು ಗೊತ್ತಿರಲಾರದು, ಅಥವಾ ತಾವು ಹಿಂದೂಗಳಾದರೆ, ಲಿಂಗಾಯತರಲ್ಲಿ ತಾವೂ ಬ್ರಾಹ್ಮಣರಂತೆ ಶ್ರೇಷ್ಠರೆಂಬ ಬಿರುದಿಗೆ ಪಾತ್ರರಾಗಬಹುದು ಎಂಬ ಆಶೆ ಅವರಿಗಿದ್ದೀತು. ಆದರೆ ವಚನೋಕ್ತ ಲಿಂಗಾಯತ ತತ್ತ್ವಗಳನ್ನು ಸ್ವೀಕರಿಸುವವನು ಬ್ರಾಹ್ಮಣನಾಗಲಿ ಅಥವಾ ಮತ್ತಾವುದೇ ಶಾಖೆಯ ಹಿಂದೂವಾಗಲಿ ಆಗಲು ಸಾಧ್ಯವಿಲ್ಲ.

3.3 ಹಿಂದೂಗಳಲ್ಲಿ ಲಿಂಗಭೇದಕ್ಕೆ ಮಾನ್ಯತೆ ಇದೆ. ಹೆಂಗಸರು ದೇವರ ಪೂಜೆ ಮಾಡುವುವಂತಿಲ್ಲ. ಮನುಸ್ಮೃತಿಯ ಪ್ರಕಾರ, ಸ್ತ್ರೀಯು ಯಾವ ವಿಧದಲ್ಲೂ, ಯಾವ ಹಂತದಲ್ಲೂ ಪುರುಷ ಸಮಾನಳಲ್ಲ. ಆದರೆ ಲಿಂಗಾಯತ ಧರ್ಮದಲ್ಲಿ ಪೂಜೆ ಮಾಡಲು ಪುರುಷರಿಗಿರುವಷ್ಟೇ ಅಧಿಕಾರ ಸ್ತೀಯರಿಗೂ ಇದೆ. ಎಲ್ಲ ಕ್ಷೇತ್ರಗಳಲ್ಲೂ ಸ್ತ್ರೀಪುರುಷ ಸಮಾನತೆಗೆ ವಚನಗಳು ಒತ್ತು ಕೊಡುತ್ತವೆ. ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಮೀಸೆ ಕಾಸೆ ಬಂದರೆ ಗಂಡೆಂಬರು, ಒಳಗೆ ಸುಳಿವ ಆತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ, ಎಂದು ಸಾರುವ ಮೂಲಕವೂ ಗಂಡಸರಂತೆ ಹೆಂಗಸರೂ ವಚನಗಳನ್ನು ರಚಿಸುವ ಮೂಲಕವೂ ಅನುಭವಮಂಟಪದಲ್ಲಿ ಭಾಗವಹಿಸುವ ಮೂಲಕವೂ ಗಂಡಸರಿಗಿರುವಂತೆ ಹೆಂಗಸರಿಗೂ ಧಾರ್ಮಿಕ ಅಧಿಕಾರವಿರುವುದನ್ನು ಲಿಂಗಾಯತರು ಸಿದ್ಧಪಡಿಸಿದ್ದಾರೆ.

4 ವೇದ ಪಠನ, ವೇದಾಧ್ಯಯನ

ಹಿಂದೂಧರ್ಮದ ಪ್ರಕಾರ, ವೇದ ಪಠನ, ವೇದಾಧ್ಯಯನ ಮತ್ತು ವೇದ ಅಧ್ಯಾಪನ ಶೂದ್ರರಿಗೆ ಸಲ್ಲದು. ವೇದಗಳನ್ನು ಕಲಿಯುವ/ಕಲಿಸುವ ಲಿಂಗಾಯತರು ಬ್ರಾಹ್ಮಣರೂ ಕ್ಷತ್ತಿಯರೂ ವೈಶ್ಯರೂ ಅಲ್ಲವೆಂದ ಮೇಲೆ ಅವರು ಶೂದ್ರರಾಗಿರಬೇಕು. ಆದರೆ ಅವರು ಅನೇಕ ಶತಮಾನಗಳಿಂದ ವೇದಾಧ್ಯಯನ ಇತ್ಯಾದಿಗಳಲ್ಲಿ ತೊಡಗಿರುವುದರಿಂದ ಅವರು ಶೂದ್ರರಾಗಿರಲೂ ಸಾಧ್ಯವಿಲ್ಲ. ಈ ಯಾವ ವರ್ಣಕ್ಕೂ ಅವರು ಸೇರುವುದಿಲ್ಲವೆಂದ ಮೇಲೆ. ಅವರು ಹಿಂದೂಗಳೇ ಅಲ್ಲ.

5. ಪೂಜಾಪದ್ಧತಿಗಳು.

5.1 ಹಿಂದೂಗಳು ಯಜ್ಞ-ಯಾಗಾದಿ, ಹೋಮ-ಹವನ, ಪ್ರಾಣಿಬಲಿಯಂತಹ ಆಚಾರಗಳಗಳನ್ನು ಮಾನ್ಯ ಮಾಡುತ್ತಾರೆ. ಆದರೆ, ಲಿಂಗಾಯತರು ಯಜ್ಞ-ಯಾಗಾದಿಗಳನ್ನೂ ಪ್ರಾಣಿಬಲಿಯನ್ನೂ ವಿರೋಧಿಸುತ್ತಾರೆ.

5.2 ಹಿಂದೂಗಳು ಗುಡಿಯಲ್ಲಿ ವಿಗ್ರಹ, ಸ್ಥಾವರಲಿಂಗಗಳನ್ನು ಪೂಜಿಸುತ್ತಾರೆ. ಆದರೆ, ಲಿಂಗಾಯತರು ಹಾಗೆ ಮಾಡಬಾರದು. ಬಹಳಷ್ಟು ಲಿಂಗಾಯತರು ಶೈವ, ವೈಷ್ಣವ, ಮೊದಲಾದ ದೇವಾಲಯಗಳಿಗೆ ಹೋಗುತ್ತಾರೆ. ಆದರೆ, ಇದೊಂದೇ ಕಾರಣಕ್ಕಾಗಿ, ಹಿಂದೂಗಳಂತೆ ಅವರೂ ವಿಗ್ರಹಾರಾಧಕರು, ಎನ್ನುವುದು ತಪ್ಪು. ಇದು ಹಿಂದೂ ರೂಢಿಗಳ ಯಾಂತ್ರಿಕ ಅನುಕರಣೆಯಷ್ಟೆ. ``ಇಷ್ಟಲಿಂಗವನ್ನು ಬಿಟ್ಟು ಮತ್ತೇನನ್ನೂ ಪೂಜಿಸಬಾರದು'' ಎಂದು ಲಿಂಗಾಯತಧರ್ಮ ಬೋಧಿಸುತ್ತದೆ. ಅನೇಕರು ಅದನ್ನು ಪಾಲಿಸುವುದಿಲ್ಲವೆಂಬ ಮಾತ್ರಕ್ಕೆ, ಅದನ್ನು ಲಿಂಗಾಯತಧರ್ಮ ವಿರೋಧಿಸುತ್ತದೆ, ಎನ್ನಬಾರದು.

5.3 ಮೂರ್ತಿ ಪೂಜೆ ಮತ್ತು ಸ್ವ ಪೂಜಾ ಪದ್ಧತಿ: ಹಿಂದೂ ಗುಡಿಗಳಲ್ಲಿ ಪೂಜಾರಿಗಳು ಪೂಜೆ ಮಾಡುವಾಗ ಇತರರು ಸುಮ್ಮನೆ ನಿಂತು ನೋಡಬೇಕೇ ಹೊರತು, ತಾವೇ ಆ ಮೂರ್ತಿಯನ್ನು ಅಥವಾ ಲಿಂಗವನ್ನು ಮುಟ್ಟಿ ಪೂಜಿಸುವಂತಿಲ್ಲ. ಇದನ್ನು ಲಿಂಗಾಯತಧರ್ಮವು ಎರಡು ಕಾರಣಗಳಿಗೆ ವಿರೋಧಿಸುತ್ತದೆ.
(1) ಗುಡಿಯಲ್ಲಿ ಪೂಜೆ ಮಾಡುವವನು ಮೇಲ್ಜಾತಿಗೆ ಅಥವಾ ಮೇಲ್ವರ್ಗಕ್ಕೆ ಸೇರಿದವನಾಗಿರಬೇಕಾದುದರಿಂದ ಹಾಗೆ ಪೂಜೆ ಮಾಡುವ ಅಧಿಕಾರ ಕೇಳವರ್ಗದವರಿಗಾಗಲಿ ಕೆಳಜಾತಿಯವರಿಗಾಗಲಿ ಇಲ್ಲ. ಅಂದರೆ, ಕೆಳಜಾತಿಯ ಅಥವಾ ಕೆಳವರ್ಗದ ಜನರಿಗೆ ಆಧ್ಯಾತ್ಮಿಕ ಲಾಭಪಡೆಯಲು ಅಧಿಕಾರವಿಲ್ಲ. ಆಧ್ಯಾತ್ಮಿಕ ಲಾಭ ಪಡೆಯಲಿಚ್ಚಿಸಿದವರಿಗೆಲ್ಲ ಲಿಂಗ ಪ್ರದಾನಮಾಡುವ ಮೂಲಕ ಬಸವಣ್ಣನವರು ಈ ಅವಕಾಶ ಮಾಡಿಕೊಟ್ಟಿದುದು ಈ ಅನ್ಯಾಯವನ್ನು ತಿದ್ದುವುದಕ್ಕಾಗಿಯೇ.
(2) ಬೇರೆಯವರು ಮಾಡುವ ಪೂಜೆಯನ್ನು ನೋಡಿದವರಿಗೆ ನೋಡಿದುದಷ್ಟೇ ಲಾಭವೇ ಹೊರತು, ಭಕ್ತಿವೃದ್ಧಿಯಾಗುವುದಿಲ್ಲ. ನಮಗೆ ಹಸಿವಾದಾಗ ನಾವೇ ಊಟ ಮಾಡಬೇಕೆ ಹೊರತು, ನಮ್ಮ ಪರವಾಗಿ ಬೇರೆಯವರು ಮಾಡುವುದು ಹೇಗೆ ಹಾಸ್ಯಾಸ್ಪದವೋ, ಹಾಗೆಯೇ ನಾವು ಆಧ್ಯಾತ್ಮಿಕ ಲಾಭ ಪಡೆಯಬೇಕಾದರೆ, ನಾವೇ ಪೂಜೆ ಮಾಡುವುದರ ಬದಲು ಪೂಜಾರಿಯು ಮಾಡುವ ಪೂಜೆಯನ್ನು ನೋಡುವುದೂ ಹಾಸ್ಯಾಸ್ಪದವೇ. ದೇವ-ಮಾನವ ಸಂಬಂಧಕ್ಕೆ ಪೂಜಾರಿ-ಪುರೋಹಿತ ಮಧ್ಯಸ್ಥನಾಗಬಾರದೆಂಬ ಕಾರಣಕ್ಕಾಗಿಯೇ, ಲಿಂಗಾಯತರು ತಂತಮ್ಮ ಇಷ್ಟಲಿಂಗಗಳನ್ನು ತಾವೇ ಪೂಜಿಸುತ್ತಾರೆ.

5.4 ಹಿಂದೂಗಳು ತೀರ್ಥಯಾತ್ರೆ ಮಾಡಿದರೆ ಒಳ್ಳ್ಳೆಯದೆಂದು ನಂಬುತ್ತಾರೆ. ಲಿಂಗಾಯತರಲ್ಲಿ ಈ ಪದ್ದತಿಗೆ ವಿರೋಧವಿದೆ. ``ನೀನೊಂದು ಪಾದವನಿಟ್ಟ ನೆಲವೇ ಸುಕ್ಕೇತ್ರ, ಜಲವೇ ಪಾವನ ತೀರ್ಥ'' ಎಂಬ ಶರಣರ ಮಾತು ಸುಪ್ರಸಿದ್ದ.

5.5 ಹಿಂದೂಗಳು ಜೋತಿಷ್ಯವನ್ನು ನಂಬುತ್ತಾರೆ, ಲಿಂಗಾಯತರು ನಂಬಬಾರದು.

6 ಹಿಂದೂಗಳಲ್ಲಿ ವರ್ಣಸಂಕರವಿಲ್ಲ, ಆಪದ್ಧರ್ಮ, ಅಸ್ಪೃಶ್ಯತೆ, ಉಂಟು. ಲಿಂಗಾಯತರಲ್ಲಿ ಇದಾವುದೂ ಇಲ್ಲ.

7 ಮತಾಂತರ:

ಹಿಂದೂಧರ್ಮದಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ತಂತಮ್ಮ ಜಾತಿಗಳನ್ನು ಬಿಟ್ಟು ಅನ್ಯ ಜಾತಿಗೆ ಸೇರಲು ಸಾಧ್ಯವಿಲ್ಲ. ಪ್ರತಿಯೊಂದು ಜಾತಿಯೂ ತನ್ನ 'ಶುದ್ಧತೆ'ಯನ್ನು ಕಾಯ್ದುಕೊಳ್ಳಲು ವೈದಿಕ ಧರ್ಮವು ಪ್ರೋತ್ಸಾಹಿಸುತ್ತದೆ. ಅವರವರ ಸ್ವಭಾವಕ್ಕನುಗುಣವಾಗಿ ನಾನೇ ನಾಲ್ಕು ವರ್ಣಗಳನ್ನು ಸೃಷ್ಟಿಸಿದ್ದೇನೆ, ಪ್ರತಿಯೊಬ್ಬನೂ ತನ್ನ ಜಾತಿಯ ಕರ್ಮವನ್ನು ಮಾಡಿ ಸ್ವರ್ಗ ಪಡೆಯಬೇಕೇ ಹೊರತು, ಮತ್ತೊಂದು ಜಾತಿಯ ಕರ್ಮವನ್ನು ಮಾಡಿ ಅಧೋಗತಿಗಿಳಿಯಬಾರದು, ಎಂದು ಶ್ರೀಕೃಷ್ಣನ ಬಾಯಿಂದ ಹೇಳಿಸುವ ಮೂಲಕ ಜಾತಿತಾರತಮ್ಯಕ್ಕೂ ವರ್ಣಸಂಕರವಿರೋಧಕ್ಕೂ ಒಂದು ಬಲವಾದ ಪುಷ್ಟಿ ಮತ್ತು ಗೌರವ ನೀಡಲಾಯಿತು. ಹೀಗಾಗಿ ಒಂದು ಜಾತಿಯವರು ಮತ್ತೊಂದು ಜಾತಿಯವರನ್ನು ಮದುವೆಯಾಗುವುದು 'ವರ್ಣಸಂಕರ' ಎಂಬ ಘೋರ ಅಪರಾಧವೆಂದು ಪರಿಗಣಿಸಲಾಯಿತು. ಹಿಂದೂಗಳಲ್ಲದವರು ಹಿಂದೂಗಳಾಗಿ ಧರ್ಮಾಂತರ ಗೊಳ್ಳುವುದಂತೂ ತತ್ತ್ವಶಃ ಅಸಾಧ್ಯ. ಹಿಂದೂ ಧರ್ಮದ ಪ್ರತಿಯೊಂದು ಜಾತಿಯೂ ಭದ್ರ ಕೋಟೆಯಾಗಿರುವಾಗ ಅಹಿಂದೂ ಒಬ್ಬ ಹಿಂದೂ ಆಗಿ ಪರಿವರ್ತನಗೊಂಡರೆ ಅವನು ಯಾವ ಜಾತಿಗೆ ಸೇರಬೇಕೆಂಬುದು ಬಿಡಿಸಲಾರದ ಸಮಸ್ಯೆಯಾಗುತ್ತದೆ. ಆದರೆ, ಲಿಂಗಾಯತಧರ್ಮವು ಅವೈದಿಕ ವಾಗಿರುವುದರಿಂದ, ತನ್ನ ಬಾಗಿಲನ್ನು ಇತರರಿಗೂ ತೆರೆಯಿತು, ಅಥವಾ ಇತರರಿಗೂ ತೆರೆದು ಅವೈದಿಕವಾಯಿತು. ಬಸವಣ್ಣನವರು ಇಷ್ಟಲಿಂಗಪ್ರದಾನ ಮಾಡುವ ಮೂಲಕ ವಿವಿಧ ಹಿಂದೂ ಜಾತಿಗಳಿಗೆ ಸೇರಿದವರನ್ನು ಲಿಂಗಾಯತರನ್ನಾಗಿ ಮಾಡಿದುದು ಸರ್ವವಿದಿತ. ಈ ಪ್ರಕ್ರಿಯೆಯು ಅಂದಿನಿಂದಲೂ ಲಿಂಗಾಯತ ಪರಂಪರೆಯ ಅವಿಭಾಜ್ಯ ಅಂಗವಾಗಿ ಉಳಿದುಕೊಂಡು ಬಂದಿದೆ. ಪ್ರಾಯಶಃ ಬಸವಣ್ಣನವರೇ ಒಂದು ಕಾಲದಲ್ಲಿ ಆಗಮೋಕ್ತ ವೀರಶೈವದ ಅನುಯಾಯಿ ಅಥವಾ ಲಿಂಗೀ ಬ್ರಾಹ್ಮಣರಾಗಿದ್ದಿರಬಹುದು. ಅವರು ಲಿಂಗೀ ಬ್ರಾಹ್ಮಣರಾಗಿದ್ದರೂ ಕುಂಬಾರ, ಕ್ಷೌರಿಕ, ಗಾಣಿಗ, ನೇಕಾರ, ಮುಂತಾದ ಶೂದ್ರರಿಗೆ ಇಷ್ಟಲಿಂಗ ಪ್ರದಾನ ಮಾಡಿದುದು ಉಳಿದ ಲಿಂಗೀ ಬ್ರಾಹ್ಮಣರಿಗೆ ಅಕ್ಷಮ್ಯ ಅಪರಾಧವಾಗಿ ಕಂಡಿರಬಹುದು. ಈಗಿನ ಅನೇಕ ವೀರಶೈವರು ಬಸವದ್ವೇಷಿಗಳಾಗಿರುವುದು ಪ್ರಾಯಶಃ ಈ ಕಾರಣಕ್ಕಾಗಿಯೂ ಇರಬಹುದು.

ಅಯ್ಯಾ ವೈಷ್ಣವರಾದವರು ತಮ್ಮ ವಿಷ್ಣುವಂ ಬಿಟ್ಟು ಕಳೆದು ಲಿಂಗಭಕ್ತರಾದರು ಕೆಲವರು.
ಅಯ್ಯಾ, ಜೈನರಾದವರು ತಮ್ಮ ಜೈನಧರ್ಮವಂ ಬಿಟ್ಟು ಲಿಂಗಭಕ್ತರಾದರು ಅನೇಕರು.
ಅಯ್ಯಾ ದ್ವಿಜರಾದವರು ತಮ್ಮ ಕರ್ಮಂಗಳ ಬಿಟ್ಟು ಕಳೆದು ಶಿವಭಕ್ತರಾದರನೇಕರು. . .

ಎಂಬ ಸಂಗಮೇಶ್ವರ ಅಪ್ಪಣ್ಣನ ಮಾತಿಗೆ ಅರ್ಥವೇನು? ವೈಷ್ಣವರು ಲಿಂಗಾಯತರಾಗಿ ಧರ್ಮಾಂತರ ಹೊಂದಿದಂತೆ, ಜೈನರೂ ಧರ್ಮಾಂತರ ಗೊಂಡರು, ಎಂಬುದು ಇದರ ಒಂದು ಅರ್ಥ. "ದ್ವಿಜರಾದವರು ತಮ್ಮ ಕರ್ಮಗಳನ್ನು ತ್ಯಜಿಸಿ ಲಿಂಗಾಯತರಾದರು" ಎಂಬುದಕ್ಕೆ ದ್ವಿಜರಿಗೆ ಕರ್ಮಕಾಂಡ ಜೀವಾಳ, ಅದನ್ನು ಬಿಟ್ಟು, ಅದಿಲ್ಲದ ಲಿಂಗಾಯತಕ್ಕೆ ಬಂದರು, ಎಂಬುದು ಇದರ ಮತ್ತೊಂದು ಅರ್ಥ. ಒಂದು ವೇಳೆ, ಕರ್ಮಕಾಂಡ ಹಿಂದೂ ಧರ್ಮದ ಮುಖ್ಯಭಾಗವಾಗಿರದೆ ಕೇವಲ ಐಚ್ಛಿಕ ವಿಷಯವಾಗಿದ್ದರೆ ಹಾಗೆ ಧರ್ಮಾಂತರಗೊಂಡ ವೈಷ್ಣವರು (ಮತ್ತು ಇತರ ಬ್ರಾಹ್ಮಣರು) ತಮ್ಮ ವೇದೋಕ್ತ ಕರ್ಮಗಳನ್ನು ಬಿಟ್ಟರು ಎಂದು ಒತ್ತಿ ಹೇಳುವ ಅಗತ್ಯವಿರಲಿಲ್ಲ. ಅಲ್ಲದೆ ಲಿಂಗಾಯತಧರ್ಮವು ಕರ್ಮಕಾಂಡವಿರೋಧಿ ಎಂಬುದು ಪ್ರಸಿದ್ಧವಾಗಿದ್ದುದರಿಂದ ದ್ವಿಜರು ತಮ್ಮ ಕರ್ಮಗಳನ್ನು ತ್ಯಜಿಸಿಯೇ ಲಿಂಗಾಯತರಾದರು. (ಈ ಮಾತು ಬ್ರಾಹ್ಮಣರಿಗಷ್ಟೇ ಅಲ್ಲ, ಎಲ್ಲ ದ್ವಿಜರಿಗೂ ಅನ್ವಯಿಸುತ್ತದೆ.) ಅಂದರೆ, ದ್ವಿಜರು ಲಿಂಗಾಯತರಾಗಲು ವೇದೋಕ್ತ ಆಚರಣೆಗಳನ್ನು ಬಿಡುವುದು ಆವಶ್ಯಕವಾಗಿತ್ತು.

8. ಜಂಗಮ

ಹಿಂದೂಗಳಲ್ಲಿ ಜಂಗಮ ಪರಿಕಲ್ಪನೆ ಇಲ್ಲ, ಲಿಂಗಾಯತರಲ್ಲಿ ಇದೆ. ಇಲ್ಲಿ ಜಂಗಮ ಎಂದರೆ ಲಿಂಗಾಯತರ ಒಂದು ಉಪಜಾತಿಯಲ್ಲಿ ಹುಟ್ಟಿದವನು ಎಂದರ್ಥವಾಗದೆ. ಸ್ಥಿರವಾಗಿ ಒಂದೇ ಕಡೆ ನಿಲ್ಲದವನು, ಎಂದರ್ಥವಾಗುತ್ತದೆ. ಅಂದರೆ, ಲಿಂಗಾಯತ ಸಮಾಜದ ಹಿತಾರ್ಥವಾಗಿ ಊರೂರು ಸಂಚರಿಸುವವನು ಎಂಬುದು ಇದರ ನಿಜವಾದ ಅರ್ಥ. ಸಮಾಜದ ಜನರು ಭಕ್ತಿಮಾರ್ಗದಲ್ಲಿ ನಡೆಯಲಿ ಎಂಬ ಉದ್ದೇಶದಿಂದ, ಊರೂರು ಸಂಚರಿಸುತ್ತಾ, ಲಿಂಗಾಯತಧರ್ಮದ ಬೋಧನೆಮಾಡಿ, ಆಚರಣೆಗಳನ್ನು ಕಲಿಸಿ, ಅಡ್ಡದಾರಿ ಹಿಡಿದವರನ್ನು ಸನ್ಮ್ಮಾರ್ಗಕ್ಕೆ ತಂದು, ಸಮಾಜದ ಒಳ್ಳ್ಳೆಯ ಸದಸ್ಯರನ್ನಾಗಿ ಮಾಡುವುದೇ ಜಂಗಮರ ಕಾಯಕ. ಈ ಕಾಯಕ ಮಾಡಲು ಯಾರು ಬೇಕಾದರೂ ಜಂಗಮರಾಗಬಹುದು. ಅವರು ಸಂಸಾರಿಗಳಲ್ಲ. ಜಂಗಮನು ಸಂಸಾರಿಯಲ್ಲ ಎಂದ ಕೂಡಲೆ, ಅವನೂ ಹಿಂದೂ ಸನ್ಯಾಸಿ, ಎಂಬ ಆತುರದ ತೀರ್ಮಾನಕ್ಕೆ ಬರಬಾರದು. ಒಬ್ಬ ಸನ್ಯಾಸಿಯಾಗಬೇಕಾದರೆ, ಅವನು ಕಾಡಿಗೆ ಹೋಗಬೇಕು ಮತ್ತು ಅವನು ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳನ್ನು ತ್ಯಜಿಸಬೇಕು, ಆದರೆ, ಜಂಗಮನು ಕಾಡಿಗೆ ಹೋಗುವುದಿಲ್ಲ. ಸಮಾಜದಲ್ಲಿದ್ದುಕೊಂಡೇ ಜನರಲ್ಲಿ ಧಾರ್ಮಿಕ, ನೈತಿಕ, ಸಾಮಾಜಿಕ ಪರಿವರ್ತನೆಗಳನ್ನು ಮಾಡುತ್ತಾನೆ. ಹೀಗೆ, ಲಿಂಗಾಯತರ ಜಂಗಮ ಪರಿಕಲ್ಪ್ಪನೆ ಹಿಂದೂಗಳ ಸನ್ಯಾಸ ಪರಿಕಲ್ಪನೆಗಿಂತ ಸಂಪೂರ್ಣವಾಗಿ ಭಿನ್ನವಾದುದು ಮತ್ತು ವಿಶಾಲವಾದುದು.

9. ಕಾಯಕ ಮತ್ತು ದಾಸೋಹ

ಹಿಂದೂ ಧರ್ಮದಲ್ಲಿ ಕಾಯಕ ಮತ್ತು ದಾಸೋಹ ಪದ್ದತಿ ಇಲ್ಲ, ಇವೆರಡೂ ಲಿಂಗಾಯತ ಧರ್ಮದ ಪ್ರಮುಖ ತತ್ವಗಳು ಮತ್ತು ಮಹತ್ವದ ಆಚರಣೆಗಳು.

10. ಸಂಸ್ಕಾರಗಳು

ಹಿಂದೂಗಳ ಸಂಸ್ಕಾರಗಳು ಬೇರೆ, ಲಿಂಗಾಯತರವು ಬೇರೆ, ಮುಖ್ಯವಾಗಿ, ಎಲ್ಲ ಹಿಂದೂಗಳೂ (ತ್ರೈವರ್ಣಿಕರು) ಶವಗಳನ್ನು ಸುಡುತ್ತಾರೆ. ಆದರೆ ಲಿಂಗಾಯತರು ಶವಗಳನ್ನು ಹುಗಿಯುತ್ತಾರೆ. ಅಲ್ಲದೆ, ಹಿಂದೂಗಳು ಎಲ್ಲ ಸೂತಕಗಳನ್ನು ಆಚರಿಸುತ್ತಾರೆ; ಅದರೆ, ಲಿಂಗಾಯತರಿಗೆ ಸೂತಕಗಳೇ ಇಲ್ಲ.

ಹನ್ನೆರಡನೆಯ ಶತಮಾನದ ವಚನಕಾರರು ತಮ್ಮ ಕಾಲದ ಸ್ಥಿತಿಗತಿಗಳ ಪರಿಣಾಮವಾಗಿ ಕೆಲವು ಮಹತ್ವದ ವಿಷಯಗಳನ್ನು ತಮ್ಮ ವಚನಗಳಲ್ಲಿ ದೈನಂದಿನ ಬದುಕಿನ ಉದಾಹರಣೆಗಳನ್ನು ಜೋಡಿಸಿ ಸಾಮಾನ್ಯ ಜನರು ತಿಳಿದುಕೊಳ್ಳಬಹುದಾದ ಭಾಷೆಯಲ್ಲಿ ಬೋಧಿಸಿದರು. ಈ ಭೋಧನೆಗೆ ಲಿಂಗಾಯತ ಎಂದು ಹೆಸರಿಟ್ಟು, ಅದು ಶೈವದಿಂದ ಪ್ರತ್ಯೇಕವೆಂದು ಸಾರಿ, ವೇದ, ಆಗಮ, ಪುರಾಣಗಳನ್ನೂ, ಶೈವಧರ್ಮವನ್ನೂ ಖಂಡಿಸಿ, ಅದನ್ನು ಜನರ ಮುಂದಿಟ್ಟರು.

ಎರಡನೆಯದಾಗಿ, ಹಿಂದೂ ಪರಂಪರೆಯ ವೇದ, ಉಪನಿಷತ್ತು, ಆಗಮ, ದರ್ಶನ, ಪುರಾಣಗಳು ಎಲ್ಲರ ಬದುಕು, ವಿಚಾರ, ಭಾವನೆಗಳಲ್ಲಿ ಹಾಸುಹೊಕ್ಕಾಗಿದ್ದುದರಿಂದ, ಸಂಸ್ಕೃತ ಭಾಷೆಯ ಉತ್ಕೃಷ್ಟತೆ ಮತ್ತು ಕನ್ನಡದ ಮೇಲಿನ ಅದರ ಪ್ರಭಾವಗಳಿಂದ, ಸುತ್ತುವರಿದಿದ್ದ ವರ್ಣಪದ್ಧತಿಯಿಂದ, ಅದರ ಪರಿಣಾಮವಾಗಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಶ್ರೇಷ್ಠ ಸ್ಥಾನದಲ್ಲಿದ್ದ ಬ್ರಾಹ್ಮಣ್ಯ ಮತ್ತು ಅದರ ಮೂಲಕ ಮಾನ್ಯತೆ ಪಡೆದಿದ ಸಂಸ್ಕಾರಗಳ ಆಕರ್ಷಣೆಯಿಂದ, ನಿಜವಾದ ಲಿಂಗಾಯತದ ಬಗೆಗಿನ ಅಜ್ಞಾನದಿಂದ, ಈಗಾಗಲೆ ಲಿಂಗಾಯತದ ಒಳಗೇ ಮಾಡಲಾಗಿದ್ದ ಭಕ್ತ, ಮಾಹೇಶ್ವರ ಭೇದದಿಂದ, ಲಿಂಗಾಯತದ ವೈಶಿಷ್ಟ್ಯ ಮಸುಕಾಗಿಸಲು, ಕೆಲವು ವಿಷಯಗಳಲ್ಲಿ ಬಿಟ್ಟುಕೊಡಲು ಅವಕಾಶ ಉಂಟಾಯಿತು. ಹೀಗಾಗಿ, ಇಂದಿನ ಲಿಂಗಾಯತದಲ್ಲಿ ಕೆಲವು ಮೂಲ ವಿಚಾರಗಳ ಬಗೆಗೇ ಭಿನ್ನಾಭಿಪ್ರಾಯ, ವಾದವಿವಾದ, ಆಚರಣೆಯಲ್ಲಿ ಅಂತರಗಳೂ ಕಾಣುತ್ತಿವೆ. ವಚನೋಕ್ತ ಲಿಂಗಾಯತದ ನಿರ್ದಿಷ್ಟ, ನಿಖರ, ಸ್ವರೂಪವು ನಿಚ್ಚಳವಾಗಿ ಕಾಣದಂತಾಗಿದೆ. ಈ ಪರಿಸ್ಥಿತಿಯನ್ನು ಈಗಲೇ ಸರಿಯಾಗಿ ಅರ್ಥಮಾಡಿಕೊಂಡು ಅದರ ಪುನರ್ವಿಮರ್ಶೆ, ಪರಿಷ್ಕರಣೆ ಮಾಡಬೇಕಾಗಿದೆ. ಇಲ್ಲದಿದ್ದರೆ, ಅದು ಹಿಂದೂ ಧರ್ಮವೆನ್ನಿಸಿಕೊಳ್ಳುತ್ತಿರುವ ವೈದಿಕ ಸನಾತನ ಬ್ರಾಹ್ಮಣ್ಯ ಅಥವಾ ಲಿಂಗೀಬ್ರಾಹ್ಮಣ್ಯ ಧರ್ಮದಲ್ಲಿ ಬೆರೆತು, ಒಂದೆರಡು ಬಾಹ್ಯ ಚಿಹ್ನೆ, ಬಾಹ್ಯ ಆಚರಣೆಗಳನ್ನು ಮಾತ್ರ ನೆನಪಿಗೆ ಉಳಿಸಿಕೊಳ್ಳುವ ಅಪಾಯವಿದೆ.

ಈ ಎಲ್ಲ ಅಂಶಗಳನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸಿದರೆ, ಲಿಂಗಾಯತವು ಹಿಂದೂಧರ್ಮದ ಭಾಗವಾಗಿರದೆ, ಒಂದು ಸರ್ವತಂತ್ರ ಸ್ವತಂತ್ರ ಧರ್ಮವೆಂಬುದು ಸಿದ್ಧವಾಗುತ್ತದೆ. ಆದರೆ ಹಿಂದೂ-ಲಿಂಗಾಯತ ಮತ್ತು ಲಿಂಗಾಯತ-ವೀರಶೈವ ಧರ್ಮಗಳ ನಡುವೆ ಮೇಲೆ ನಿರೂಪಿಸಿದ ಪ್ರಮುಖ ಮೂಲಭೂತ ಭೇದಗಳಿದ್ದರೂ ಲಿಂಗಾಯತವು ಸ್ವತಂತ್ರ ಧರ್ಮವೆನ್ನುವುದನ್ನು ಒಪ್ಪದವರೂ ಇದ್ದಾರೆ. ಅವರ ವಿಚಾರಸರಣಿಯನ್ನು ಹೀಗೆ ಮಂಡಿಸಬಹುದು.

1. ರಾಷ್ಟ್ರೀಯ ಐಕ್ಯತೆ ಮತ್ತು ಸಾಮಾಜಿಕ ಸಂಘಟನೆ ದೃಷ್ಟಿಯಿಂದ ಭೇದಗಳಿಗೆ ಒತ್ತು ಕೊಡದೆ ಸಾಮ್ಯಗಳಿಗೆ ಒತ್ತು ಕೊಟ್ಟು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನೆಪದಿಂದ ಕೆಲವರು ಹಿಂದೂ ಧರ್ಮದ ವ್ಯಾಖ್ಯೆಯನ್ನು ಅನಾವಶ್ಯಕವಾಗಿ ಹಿಗ್ಗಿಸಿ ಅದಕ್ಕೂ ಭಾರತೀಯ ಅಥವಾ ಹಿಂದೂ ಸಂಸ್ಕೃತಿ ಅಥವಾ ಪರಂಪರೆಗೂ ವ್ಯತ್ಯಾಸವಿಲ್ಲದಂತೆ ಮಾಡಿದ್ದಾರೆ. ಈ ನೆಪದಿಂದಾಗಿ ಅವರು ಹಲವಾರು ಪರಸ್ಪರ ವಿರೋಧಿ ಧಾರ್ಮಿಕ ತತ್ತ್ವಗಳನ್ನೂ ಆಚಾರಗಳನ್ನೂ ಹಿಂದೂಧರ್ಮದ ಅಂತಮರ್ುಖಗಳೆಂದು ಪರಿಗಣಿಸಿದ್ದಾರೆ. ಹಡರ್ೇಕರ್ ಮಂಜಪ್ಪನವರು ಭಾಷಾಂತರಿಸಿದ ಸ್ವಾಮಿ ರಾಮತೀರ್ಥರ ಹಿಂದುತ್ವದ ಮೂಲತತ್ತ್ವ ಎಂಬ ಲೇಖನದಲ್ಲಿ ಹೀಗಿದೆ: ಹಿಂದೂ ಜನಾಂಗದ ವಿವಿಧ ಸಮಾಜಗಳ ಧಾರ್ಮಿಕ ವಿಚಾರಸಮೂಹಕ್ಕೆ 'ಹಿಂದೂಧರ್ಮ' ಎಂದು ಹೇಳಬೇಕು . . . ಹಾಗೆ ಹೇಳಲು ಇಷ್ಟವಿಲ್ಲದಿದ್ದರೆ 'ಹಿಂದೂ ಧರ್ಮ' ಎಂಬುದನ್ನು ಯಾರೂ ಉಪಯೋಗಿಸಬಾರದು. ಶ್ರುತಿಸ್ಮೃತಿಪುರಾಣೋಕ್ತ ಧರ್ಮದವರು ತಮ್ಮ ತಮ್ಮ ಧರ್ಮಕ್ಕೆ ವೈದಿಕ ಧರ್ಮ ಅಥವಾ ಸನಾತನ ಧರ್ಮ ಎಂದು ಹೇಳಿಕೊಳ್ಳಬೇಕು. ಅದೇ ಪ್ರಕಾರ, ಶೀಖ್, ಜೈನ, ಆರ್ಯ, ಬೌದ್ಧ, ಮೊದಲಾದ ಹಿಂದೂಗಳಲ್ಲಿಯ ಬೇರೆಬೇರೆ ಧರ್ಮದವರು ತಮ್ಮ ತಮ್ಮ ಪ್ರಚಲಿತ ಹೆಸರುಗಳನ್ನೇ ಹೇಳಿಕೊಳ್ಳಬೇಕು [ಗ.ಸ.ಹಾಲಪ್ಪ (ಸಂ): ರಾಷ್ಟ್ರದ್ರಷ್ಟಾರ ಹರ್ಡೇಕರ್ ಮಂಜಪ್ಪ, ಪು.736]. ನಾವು ಹಿಂದೂಗಳೆಂದು ಹೇಳಿಕೊಂಡರೆ ಸನಾತನ ಹಿಂದೂ ಪಂಥದವರಾಗಬಹುದೆಂಬ ಭೀತಿಯಿಂದ ಶೀಖರು ತಾವು ಅಹಿಂದೂಗಳೆಂದು ಹೇಳಿಕೊಂಡರು (ಪು.742).

2. ಮೇಲೆ ಸೂಚಿಸಿದ ಶೀಖರ ಭೀತಿ ಲಿಂಗಾಯತದಲ್ಲಿ ಸಾಕ್ಷಾತ್ ಅಪಾಯವಾಗಿ ಪರಿಣಮಿಸಿರುವುದನ್ನು ಲಿಂಗಾಯತರೂ ಹಿಂದೂಗಳೆ ಎಂದು ಪ್ರತಿಪಾದಿಸುವವರು ತಮ್ಮ ವಾದದಲ್ಲಿ ಚತುರತೆಯಿಂದ ಬಳಸಿಕೊಳ್ಳುತ್ತಾರೆ. ಮೇಲೆ ಹೇಳಿದ ಹಾಗೆ, ಸುತ್ತುವರಿದ ಹಿಂದೂ" ಆವರಣದ ಪ್ರಭಾವದಿಂದಲೂ, ಲಿಂಗಾಯತ ತತ್ತ್ವಗಳ ಮತ್ತು ಅವುಗಳ ನಿಷ್ಠಾಭರಿತ ಅನುಷ್ಠಾನದ ಮಹತ್ವ ಮತ್ತು ಅಗತ್ಯಗಳ ನಿಜ ಜ್ಞಾನದ ಅಭಾವದಿಂದಲೂ ಲಿಂಗಾಯತರಲ್ಲಿ ಬಹಳಷ್ಟು ಜನ (ಕೆಲವು ಸಂದರ್ಭಗಳಲ್ಲಿ ಸಮಾಜದ ಹಿರಿಯರೂ ಸಹಿತ) ತಮ್ಮ ವಿಚಾರಗಳಲ್ಲಿ ಉಂಟಾದ ಸಡಿಲುತನ, ಕಲಬೆರಕೆತನಗಳನ್ನೇ ಲಿಂಗಾಯತದ ನಿಜಸ್ವರೂಪವೆಂದು ವಾದಿಸಿ, ಲಿಂಗಾಯತವನ್ನು ಹಿಂದೂ ಧರ್ಮದ ವ್ಯಾಪ್ತಿಯಲ್ಲಿಯೇ ತರಲು ಪ್ರಯತ್ನ ಮಾಡುತ್ತಾರೆ. ಹೀಗಾಗಿ, ಲಿಂಗಾಯತ ಮುಖಂಡರೇ ತಮ್ಮನ್ನು ತಾವು "ಲಿಂಗೀ ಬ್ರಾಹ್ಮಣ"ರೆಂದು ಕರೆದುಕೊಳ್ಳುತ್ತಿರುವುದು, ಜಂಗಮರು "ಸ್ಥೂಲವಾಗಿ ಹಿಂದೂ ಧರ್ಮದ 'ಬ್ರಾಹ್ಮಣರಿ'ದ್ದಂತೆ", "ವೀರಶೈವರಲ್ಲಿ ಜಂಗಮ ಒಂದು ಸ್ಪಷ್ಟ ಜಾತಿ", "ಬ್ರಾಹ್ಮಣರಲ್ಲಿ ಸ್ತ್ರೀಯರಿಗೆ ಉಪನಯನವಿಲ್ಲ; ಜಂಗಮರಲ್ಲೂ ಸ್ತ್ರೀಯರಿಗೆ ಅಯ್ಯಾಚಾರ ದೀಕ್ಷೆ ಇಲ್ಲ", "ಒಬ್ಬ ವ್ಯಕ್ತಿ ಜಂಗಮ ವರ್ಗದಿಂದ ಹೊರಗೆ ಹೋಗಬಹುದೇ ಹೊರತು ಜಂಗಮನಲ್ಲದವನು ಜಂಗಮ ಆಗಲು ಸಾಧ್ಯವಿಲ್ಲ", "ಹುಟ್ಟಿನಿಂದಲೇ ಲಿಂಗಾಯತರು ಜಂಗಮರು ಬೇರೆ ಬೇರೆ" ಎಂಬ ವಾದಗಳನ್ನು ಮುಂದುಮಾಡುವ ಪರಿಸ್ಥಿತಿ ಈಗ ಉಂಟಾಗಿದೆ. ಹೀಗೆ ಹಿಂದೂ ಪರಂಪರೆಯ ದೌರ್ಬಲ್ಯವು ಲಿಂಗಾಯತದಲ್ಲೂ ಕಾಣಿಸಿದೆ. "ಹಿಂದೂ ಸಮಾಜದ ಶ್ರೇಣೀಕೃತ ಲಕ್ಷಣ ವೀರಶೈವ ಸಮಾಜದಲ್ಲೂ ಉಂಟು". ವೀರಶೈವರು "ಲಿಂಗ ಯಜ್ಞೋಪವೀತಿಗಳು". ಅಂಥವರು ತಮ್ಮ ವಾದಕ್ಕೆ ಪೂರಕವಾಗಿ, ಸಂಸ್ಕೃತ ಆಗಮಗಳಲ್ಲಿ ವೀರಶೈವರನ್ನು "ವೀರಶೈವ ಬ್ರಾಹ್ಮಣರೆಂದು ಕರೆದಿದ್ದು", "ಬಹಿರ್ದೆಶಕ್ಕೆ ಹೋದಾಗ ತನ್ನ ಶಿವಸೂತ್ರ ಜನಿವಾರಗಳನ್ನು ಕುತ್ತಿಗೆಯ ಹಿಂದಕ್ಕೆ ನೇತಾಡುವಂತೆ ಮಾಡಬೇಕು", "ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಬಳಕೆಯಲ್ಲಿರುವ ವೀರಶೈವ ಪೂಜಾ, ದೀಕ್ಷ, ವಿವಾಹ ವಿಧಿಗಳಲ್ಲಿ ವೇದಮಂತ್ರಗಳ ಬಳಕೆ ಸಾಮಾನ್ಯ" ಮುಂತಾದ ವಿವರಗಳನ್ನು ನೀಡುತ್ತಾರೆ. (ಇವುಗಳನ್ನು ಡಾ.ಚಿದಾನಂದ ಮೂರ್ತಿಯವರ ವೀರಶೈವ ಧರ್ಮ - ಭಾರತೀಯ ಸಂಸ್ಕೃತಿ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ).

3. ಮತ್ತೆ ಕೆಲವರು ಲಿಂಗಾಯತರು ಅತ್ಯಾಶ್ರಮಿಗಳು, ಅತಿವರ್ಣಿಗಳು ಎಂದು ಹೇಳಿ, ಆದರೂ ಅವರು ಹಿಂದೂಗಳು ಎಂದು ವಾದಿಸುತ್ತಾರೆ.

ಯಾವುದೇ ಒಂದು ಆಚರಣೆ ಅಥವಾ ಸಿದ್ಧಾಂತಕ್ಕೆ ಸರ್ವಮಾನ್ಯತೆ, ಅಬಾಧ್ಯತೆ ಮತ್ತು ಗೌರವ ಸಿಕ್ಕುವುದು ಅದು ಲಿಖಿತವಾಗಿ ದಾಖಲಿಸಿದನಂತರ. ಒಂದು ಕಾಲದಲ್ಲಿ "ಬ್ರಾಹ್ಮಣ" ಎಂಬ ಪದಕ್ಕೆ "ಬ್ರಹ್ಮವನ್ನು ತಿಳಿದವನು" ಎಂಬರ್ಥವಿದ್ದು, ಯಾರಾದರೂ ಬ್ರಾಹ್ಮಣರಾಗಬಹುದಿತ್ತು. ಆಗ ಬ್ರಾಹ್ಮಣ, ಕ್ಷತ್ರಿಯ, ಮುಂತಾದ ವರ್ಣ ಅಥವಾ ಜಾತಿಗಳು ವ್ಯಕ್ತಿಯ ಸ್ವಭಾವವನ್ನು ಅವಲಂಬಿಸಿದ್ದವೇ ಹೊರತು ಅವನ ಹುಟ್ಟನ್ನಲ್ಲ. ಆದರೆ ಕಾಲಕ್ರಮೇಣ ಬ್ರಾಹ್ಮಣ ತಂದೆತಾಯಿಗಳಿಗೆ ಹುಟ್ಟಿದವನಷ್ಟೇ ಬ್ರಾಹ್ಮಣ, ಶೂದ್ರತಂದೆ ತಾಯಿಗಳಿಗೆ ಹುಟ್ಟಿದವನಷ್ಟೇ ಶೂದ್ರ, ಮುಂತಾಗಿ ಪರಿಗಣಿಸಲ್ಪಟ್ಟುದೇ ಅಲ್ಲದೆ, ಮನು ಮುಂತಾದ ಸ್ಮೃತಿಕಾರರು ಅದನ್ನೇ ಒಂದು ನಿಯಮ ಅಥವಾ ಶಾಸನವನ್ನಾಗಿ ಮಾಡಿದರು. ಅಲ್ಲದೆ "ಬ್ರಾಹ್ಮಣನು ಜನ್ಮದಿಂದಲೇ ದೇವರಿಗೂ ದೇವನು ..."(ಮನುಸ್ಮೃತಿ, /85), "ಕ್ಷತ್ರಿಯನು ನೂರು ವರ್ಷದವನಿದ್ದರೂ ಹತ್ತು ವರ್ಷದ ಬ್ರಾಹ್ಮಣನು ಅವನಿಗೆ ತಂದೆ ಸಮಾನನು..." (ಮನುಸ್ಮೃತಿ, /135), "ಬ್ರಾಹ್ಮಣನು ಹಿತವಚನ, ತಾನು ತಿಂದ ಬಿಟ್ಟ ಅನ್ನ, ದೇವರಿಗೆ ಅರ್ಪಿಸಿದ ನೈವೇದ್ಯ ಇವುಗಳನ್ನು ಶೂದ್ರನಿಗೆ ಕೊಡಬಾರದು; ಅವನಿಗೆ ಧರ್ಮವನ್ನೂ ತಪಸ್ಸನ್ನೂ ಹೇಳಿಕೊಡಬಾರದು"; "ಅವನಿಗೆ ಧರ್ಮವನ್ನೂ ತಪಸ್ಸನ್ನೂ ಹೇಳಿಕೊಡುವವನು ಅಸಂವೃತವೆಂಬ ನರಕಕ್ಕೆ ಹೋಗುತ್ತಾನೆ" (ಮನುಸ್ಮೃತಿ, ಗಿ/80-81); "ಶೂದ್ರನು ದ್ವಿಜರನ್ನು ಕೂಗಾಡುತ್ತಾ ನಿಂದಿಸಿದರೆ, ಅವನ ನಾಲಗೆಯನ್ನು ಕತ್ತರಿಸಬೇಕು" (ಮನುಸ್ಮೃತಿ, ಗಿ/270);"ಶೂದ್ರನು ಬ್ರಾಹ್ಮಣರಿಗೇ ಅವರ ಧರ್ಮವನ್ನು ಬೋಧಿಸಿದರೆ, ರಾಜನು ಅವನ ಬಾಯಿಗೂ ಕಿವಿಗೂ ಕುದಿಯುವ ಎಣ್ಣೆಯನ್ನು ಸುರಿಯಬೇಕು" (ಮನುಸ್ಮೃತಿ, ಗಿ//272), ಇತ್ಯಾದಿ ಶಾಸನಗಳನ್ನು ಮಾಡುವ ಮೂಲಕ ಬ್ರಾಹ್ಮಣಪಾರಮ್ಯ ಮತ್ತು ಶೂದ್ರ ಅಧಮತೆಯನ್ನೂ, ಪ್ರತಿಯೊಂದು ಜಾತಿಯ ಕರ್ತವ್ಯ ಮತ್ತು ಅದರ ಇತಿಮಿತಿಗಳನ್ನು ನಿರ್ಧರಿಸಲಾಯಿತು.

ಹೀಗೆ ಜಾತಿವಾದವು ಹಿಂದೂಧರ್ಮದ ಒಂದು ಅವಿಭಾಜ್ಯ ಅಂಗವಾಗಿ ಉಳಿದುಕೊಂಡು ಬಂದಿದೆಯಲ್ಲದೆ, ಮನುವಿನಂತರದ ಯಾರೂ "ನಾನೂ ಹಿಂದೂ ಆದರೆ ನಾನು ಜಾತಿಪದ್ಧತಿಯನ್ನು ಧಿಕ್ಕರಿಸುತ್ತೇನೆ" ಎಂದಾಗಲಿ, "ಮನು ಮುಂತಾದ ಸ್ಮೃತಿಕಾರರು ಹೇಳಿದುದು ಪ್ರಾಮಾಣ್ಯವಲ್ಲ" ಎಂದಾಗಲಿ ಹೇಳಲು ಬಾರದಂತೆ ಆಯಿತು. ವಸ್ತುಸ್ಥಿತಿ ಹೀಗಿರುವಾಗ, ನಾನು ಕ್ರಿಶ್ಚಿಯನ್ ಆದರೆ, ಯೇಸು ದೇವರ ಮಗ ಎಂಬುದನ್ನು ನಾನು ನಂಬುವುದಿಲ್ಲ ಎನ್ನುವುದು ಹಾಸ್ಯಾಸ್ಪದವಾಗುವಂತೆ, ನಾನು ಲಿಂಗಾಯತ ಆದರೆ, ನಾನು ಷಟಸ್ಥಲ ಸಿದ್ಧಾಂತವನ್ನು ನಂಬುವುದಿಲ್ಲ, ಎನ್ನುವುದು ಹಾಸ್ಯಾಸ್ಪದವಾಗುವಂತೆ, ನಾನು ಹಿಂದೂ, ಆದರೆ ನಾನು ಅತಿವರ್ಣಿ ಎನ್ನುವುದೂ ಹಾಸ್ಯಾಸ್ಪದವಾಗುತ್ತದೆ. ಹಿಂದೂವಾದರೆ ವೇದೋಕ್ತ ವರ್ಣಾಶ್ರಮ ಪದ್ಧತಿ ಒಪ್ಪಿಕೊಳ್ಳಬೇಕು; ಅತಿವರ್ಣಿಯಾದರೆ ಹಿಂದೂ ಅಲ್ಲ. ಆಗಮೋಕ್ತ ವೀರಶೈವವು ವರ್ಣಾಶ್ರಮಧರ್ಮವನ್ನು ಪಾಲಿಸಬೇಕು ಎಂದು ವಿಧಿಸುವುದರಿಂದ ಅದು ಖಂಡಿತ ಹಿಂದೂ (ವೈದಿಕ). ಆದರೆ, ಅತಿವರ್ಗಳಾದ ಲಿಂಗಾಯತರು ಹಿಂದೂಗಳಲ್ಲ.

4. ಜಾತಿವಾದವು ಲಿಂಗಾಯತದಲ್ಲೂ ಇದೆ. ಆದುದರಿಂದ ಅದೇನೂ ಅತಿವರ್ ಅಲ್ಲ, ಎಂಬುದು ಕೆಲವರ ವಾದ. ಆದರೆ ಲಿಂಗಾಯತರಲ್ಲೂ ಜಾತಿಭೇದವಿರುವುದು ನಮ್ಮ ವಾದವನ್ನು ಶಿಥಿಲಗೊಳಿಸುವುದಿಲ್ಲ. ಲಿಂಗಾಯತರಲ್ಲಿ ಕುಂಬಾರ, ಕ್ಷೌರಿಕ, ಬಣಜಿಗ, ಜಂಗಮ, ಮುಂತಾದ ಜಾತಿಗಳಿವೆಯಷ್ಟೇ ಅಲ್ಲ, ಈ ಜಾತಿಗಳಲ್ಲಿ ಪರಸ್ಪರ ರಕ್ತ ಸಂಬಂಧವೇರ್ಪಡುವುದನ್ನು ಎಲ್ಲರೂ ಕೆಲವೇ ವರ್ಷಗಳ ಹಿಂದಿನವರೆಗೂ ಅವ್ಯಾಹತವಾಗಿ ತಡೆಯುತ್ತಾ ಬಂದಿದ್ದಾರೆ. ಹೀಗಿರುವಾಗ ಲಿಂಗಾಯತ ಧರ್ಮವು ಜಾತಿವಿಷಯದಲ್ಲಿ ಹಿಂದೂ ಧರ್ಮದಿಂದ ಭಿನ್ನ ಎಂದು ಹೇಳುವುದು ಅಯುಕ್ತವಲ್ಲವೆ, ಎಂದು ಕೆಲವರು ಪ್ರಶ್ನಿಸಬಹುದು. ಆದರೆ, ತತ್ವಶಃ ಆದರೂ ಲಿಂಗಾಯತ ಧರ್ಮದಲ್ಲಿ ಜಾತಿತಾರತಮ್ಯವನ್ನು ನಿಷೇಧಿಸಲಾಗಿದೆ. ಇಷ್ಟಲಿಂಗಧಾರಿಗಳಾದ ಬಳಿಕ ಎಲ್ಲರೂ ಕುಲಜರೆ ಆಗುವುದರಿಂದ, ಬಣಜಿಗ ಮೇಲು, ಕ್ಷೌರಿಕ ಕೀಳು ಎನ್ನುವುದು ಸಲ್ಲ, ಎನ್ನುವುದು ಬಸವಾದಿ ಶರಣರ ವಾದ. ಆದರೆ, ಬಸವಾದಿ ಶರಣರ ಈ ಮಾತನ್ನು ಆಚರಣೆಯಲ್ಲಿ ಉಲ್ಲಂಘಿಸುವ ಲಿಂಗಾಯತರು ಅಲಿಂಗಾಯತರಾಗುವುದಿಲ್ಲ. ಇಷ್ಟಲಿಂಗಪೂಜೆಯನ್ನು ಮೂರು ಸಾರಿ ಮಾಡಿಕೊಂಡನಂತರವೇ ಆಹಾರಸೇವನೆ ಮಾಡಬೇಕೆಂಬ ನಿಯಮಕ್ಕೆ ವಿರುದ್ಧವಾಗಿ ಎರಡೆ/ಒಂದೇ ಸಾರಿ ಇಷ್ಟಲಿಂಗಪೂಜೆ ಮಾಡಿಕೊಳ್ಳುವವನು ಹೇಗೆ ಅಲಿಂಗಾಯತನಾಗುವುದಿಲ್ಲವೋ, ಹಾಗೆ ಬಸವಾದಿ ಶರಣರ ಜಾತಿತಾರತಮ್ಯ ಖಂಡನೆಯನ್ನು ಅಲಕ್ಷಿಸುವ ಲಿಂಗಾಯತರೂ ಅಲಿಂಗಾಯತರಾಗುವುದಿಲ್ಲ. ಅಲ್ಲದೆ, ಲಿಂಗಾಯತರು ಜಾತಿಭೇದವನ್ನು ಪಾಲಿಸಬೇಕೆಂಬ ತತ್ತ್ವಕ್ಕೆ ಶಾಸನ ರೂಪ ಕೊಡಲಿಲ್ಲ.

ಈ ಮೇಲ್ಕಾಣಿಸಿದ ಉಲ್ಲೇಖಗಳು ಲಿಂಗಾಯತದ ನಿಖರ ತತ್ತ್ವಗಳ ಮತ್ತು ಲಿಂಗಾಯತರ ನಿಜ ಆಚಾರವಿಚಾರಗಳ ನಡುವೆ ಉಂಟಾದ ಅಂತರವನ್ನು ತೋರಿಸುತ್ತವೆ. ಈ ಬೆಳೆವಣಿಗೆಯನ್ನು ನಿಷ್ಠುರವಾಗಿ ಖಂಡಿಸಿ ಬದಲಿಸದಿದ್ದರೆ ಇದು ಹೀಗೆಯೇ ಮುಂದುವರಿದು ಲಿಂಗಾಯತದ ಸಂಪೂರ್ಣ ರೂಪವನ್ನು ಬದಲಿಸಬಹುದು ಅಥವಾ ಲಿಂಗಾಯತವನ್ನೇ ಇಲ್ಲವಾಗಿಸಬಹುದು. ಇದೇ ಭಯದಿಂದ ಸಿಖ್ಖರು ತಮ್ಮನ್ನು ಅಹಿಂದುಗಳೆಂದು ಕರೆದುಕೊಂಡರು.

ಈಗಾಗಲೆ ಹೇಳಿರುವಂತೆ ಬುದ್ಧನು ಉಪನಿಷತ್ತಿನ ಅನೇಕ ಸಿದ್ಧಾಂತಗಳನ್ನು ಒಪ್ಪಿಕೊಂಡು ಕರ್ಮಕಾಂಡವನ್ನು ತ್ಯಜಿಸುವ ಮೂಲಕ ಅವೈದಿಕನೆನಿಸಿಕೊಂಡ. ಆದರೆ “Buddha is a greatest Hindu” (ಬುದ್ಧನು ಸರ್ವಶ್ರೇಷ್ಠ ಹಿಂದೂಗಳಲ್ಲೊಬ್ಬ) ಎಂದು ತಮ್ಮ 2500 Years of Buddhism ದಲ್ಲೂ,“He was born, grew up and died a Hindu” (ಬುದ್ದನು ಹುಟ್ಟಿದುದು ಹಿಂದೂವಾಗಿ, ಬೆಳೆದುದು ಹಿಂದೂವಾಗಿ, ಸತ್ತಿದ್ದೂ ಹಿಂದೂವಾಗಿ) ಎಂದು ತಮ್ಮ Indian Religions ದಲ್ಲೂ ಡಾ.ರಾಧಾಕೃಷ್ಣನ್ ಹೇಳಿದ್ದಾರೆ. ಹಿಂದೂ ಪುರಾಣಗಳೂ ಸಹ ಬುದ್ಧನು ವಿಷ್ಣುವಿನ ಅವತಾರ ಎಂದು ಪರಿಗಣಿಸಿವೆ. ಆದರೂ ಅವನು ಹಿಂದೂ ಅಲ್ಲ. ಅಷ್ಟೇ ಏಕೆ, ಸ್ವತಃ ಬುದ್ಧನೇ ತಾನು ಬೋಧಿಸುತ್ತಿರುವುದು ಸನಾತನ ಧರ್ಮವನ್ನೇ ಹೊರತು ಹೊಸತೇನನ್ನೂ ಅಲ್ಲ, ಎಂದು ಸಾರಿದನು (Indian Religions,p.165). ಅದೇ ರೀತಿ, ಆದರ್ಶ ಹಿಂದೂಗಳೆಂದರೆ ಸಿಖ್ಖರೆ ಎಂದು ಹರ್ಡೇಕರ್ ಮಂಜಪ್ಪನವರು ಹೇಳಿದರೂ ಸಿಖ್ಖರು ಹಿಂದೂಗಳಲ್ಲ ಎಂಬುದು ಗಮನಾರ್ಹ. ಅದೇ ರೀತಿ ಪ್ರಾಣಿ ಹಿಂಸೆಯನ್ನೊಳಗೊಂಡ ಯಜ್ಞ ಯಾಗಾದಿಗಳನ್ನೂ ಜಾತಿತಾರತಮ್ಯವನ್ನೂ ಧರ್ಮಾಚರಣೆಯ ಹಕ್ಕು ಶೂದ್ರರಿಗೂ ಸ್ತ್ರೀಯರಿಗೂ ಇಲ್ಲವೆಂಬುದನ್ನೂ ವರ್ಣಸಂಕರವನ್ನೂ, ಅಂದರೆ, ಇಡೀ ಕರ್ಮಕಾಂಡವನ್ನೇ, ವಿರೋಧಿಸಿದ ಬಸವಣ್ಣ, ಒಂದು ವೇಳೆ, ನಾನು ಸನಾತನ ಹಿಂದೂಧರ್ಮವನ್ನೇ ಬೋಧಿಸುತ್ತಿದ್ದೇನೆ, ಅಥವಾ ನನ್ನ ಬೋಧನೆ ವೇದಾನುಸಾರ, ವೇದಾವಿರೋಧ ಎಂದರೂ ಸಹ ಅವನ ಧರ್ಮ ಖಂಡಿತ ಹಿಂದೂ ಧರ್ಮವೆನಿಸಿಕೊಳ್ಳುವುದಿಲ್ಲ. ಆದುದರಿಂದ, ಮಾನವವಾದ ಹಾಗು ಸಮಾಜ ಜೀವನಕ್ಕೆ ಲಿಂಗಾಯತದ ವಿಶೇಷ ಕೊಡುಗೆಗಳಾದ ನಿಜಾತ್ಮದ ಅರಿವಿನ ಅಧಿಕಾರ ನಿರಾಕರಣೆಯ ವಿರುದ್ಧದ ಮಾಡಿದ ಚಳುವಳಿ, ಮುಕ್ತ ವಿಚಾರ ವಿನಿಮಯ, ಸರ್ವಸಮಾನತೆ, ಇಷ್ಟಲಿಂಗ, ಕಾಯಕ-ದಾಸೋಹ ಮುಂತಾದ ಶ್ರೇಷ್ಠ ಆದರ್ಶಗಳನ್ನು ಕೆಲವರು ವೈದಿಕ ಧರ್ಮದಲ್ಲಿ ಲೀನಮಾಡಹೊರಟಿರುವುದು ನಿಜಕ್ಕೂ ಲಿಂಗಾಯತಕ್ಕೆ ಆಗುತ್ತಿರುವ ಅಪಚಾರ ಮತ್ತು ಅಪಾಯ. ಈ ಅಪಾಯದಿಂದ ಪಾರಾಗಬೇಕೆಂದರೆ ಲಿಂಗಾಯತವನ್ನು ಮತ್ತೆ ಹಿಂದೂ ಧರ್ಮದೊಳಕ್ಕೆ ಎಳೆದುಕೊಂಡುಹೋಗಲು ಪ್ರಯತ್ನಿಸುವ ವೀರಶೈವರಿಂದ ಅದನ್ನು ರಕ್ಷಿಸಬೇಕಾಗುತ್ತದೆ.

ಡಾ.ಎನ್.ಜಿ.ಮಹಾದೇವಪ್ಪ,
ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕ,
ಧಾರವಾಡ.

ಪರಿವಿಡಿ (index)
*
Previous21ನೇ ಶತಮಾನಕ್ಕೆ ಲಿಂಗಾಯತ ಧರ್ಮಲಿಂಗಾಯತವು ಒಂದು ಧರ್ಮ, ಜಾತಿಯಲ್ಲ.Next
*