ಲಿಂಗಾಯತರ ನೈತಿಕತೆ

*

--ವಿಶ್ವಾರಾಧ್ಯ ಸತ್ಯಂಪೇಟೆ, ಶಹಾಪುರ

ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದ ಶಾಸ್ತ್ರವೆಂಬ ನೇಣ ಕಟ್ಟಿ ತೊಟ್ಟಿಲ ತೂಗಿ
ಜೋಗುಳವ ಹಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ
ನೇಣ ಹರಿದು ತೊಟ್ಟಿಲ ಮುರಿದು ಜೋಗುಳವ ನಿಂದಲ್ಲದೆ
ಗುಹೇಶ್ವರ ಕಾಣಬಾರದು

ಹೀಗೆ ಸಂಪೂರ್ಣ ಕಾರ್ಗತ್ತಲಾಗಿದ್ದ ಸಮಾಜಕ್ಕೆ ಬೆಳಕಾಗಿ ಬಂದವರು ಬಸವಾದಿ ಪ್ರಮಥರು. ಬಸವಣ್ಣನವರು ಬರುವುದಕ್ಕಿಂತ ಪೂರ್ವದಲ್ಲಿ ಸಮಾಜದ ಸ್ಥಿತಿ ತೀರಾ ಬಗ್ಗಡಗೊಂಡು ಹೋಗಿತ್ತು. ವೇದಶಾಸ್ತ್ರ - ಆಗಮಗಳ ಹುದುಲಲ್ಲಿ ಜನರನ್ನು ಹೂಳಿ ಇಡಲಾಗಿತ್ತು. ಎಲ್ಲವಕ್ಕೂ ಶಾಸ್ತ್ರ ಸಮ್ಮತ. ವೇದ ಹೇಳಿದ್ದು ಎಂದು ಹೇಳುತ್ತ ಜನರನ್ನು ಯೋಚಿಸದಂತೆ ತಡೆಹಿಡಿಯಲಾಗಿತ್ತು. ಒಟ್ಟಿನಲ್ಲಿ ಜನರ ಬುದ್ಧಿಶಕ್ತಿಯ ಮೇಲೆ ಕಲ್ಲುಚಪ್ಪಡಿ ಎಳೆದುಬಿಟ್ಟ ಪುರೋಹಿತರು ತಮ್ಮ ವಿಕಟನಗೆ ಹೊಮ್ಮಿಸುತ್ತ ಕುಳಿತುಕೊಂಡಿದ್ದರು. ಅಂದು ಆಳ್ವಿಕೆ ನಡೆಸುತ್ತಿದ್ದ ರಾಜ- ಮಹಾರಾಜರನ್ನು ತಮ್ಮ ಕೈಬೆರಳ ತುದಿಯಲ್ಲಿ ಕುಣಿಸುತ್ತ ತಾವು ಹೇಳಿದ್ದೆ ಆಟ. ಮಾಡಿದ್ದೆ ಮಾಟ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಕ್ಷರಶಃ ರಾಜ ಮಹಾರಾಜರನ್ನು ಪೋತರಾಜರಂತೆ ನಡೆಸಿಕೊಂಡು ಬಿಟ್ಟಿದ್ದರು, ಈ ದೇಶದ ಪುರೋಹಿತರು.

ನಮ್ಮ ಹಿಂದಿನ ಪೂರ್ವಜರೆಲ್ಲ ನಮ್ಮ - ನಿಮ್ಮಂತೆ ಹೀಗೆ ನಿರುಮ್ಮಳವಾಗಿ ಉಸಿರಾಡಲು ಅವಕಾಶ ಇರಲಿಲ್ಲ. ಮಾತುಗಳನ್ನು ಆಡುವುದು ಒತ್ತಟ್ಟಿಗಿರಲಿ ಒಳ್ಳೆಯ ಮಾತುಗಳನ್ನು ಕೇಳುವುದಕ್ಕೂ ಸಾಧ್ಯ ಇರಲಿಲ್ಲ. ಏಕೆಂದರೆ ಬ್ರಾಹ್ಮಣನಲ್ಲದವನು ಶಾಸ್ತ್ರದ ನುಡಿಗಳನ್ನು ಕೇಳಿದರೆ ಅವನ ಕಿವಿಯಲ್ಲಿ ಕಾದಸೀಸ ಹಾಕಬೇಕು. ನಾಲಿಗೆಯಿಂದ ನುಡಿದರೆ ಅವನ ನಾಲಿಗೆ ಕತ್ತರಿಸಿ ಹಾಕಬೇಕು - ಎಂದು ಮನುವೆಂಬ ಸನಾತನವಾದಿ ಬರೆದ ಮನುಸ್ಮೃತಿ ಗ್ರಂಥವೇ ಅಂದು ಜನತೆಯನ್ನು ಆಳುತ್ತಿತ್ತು. ಅದರಲ್ಲಿನ ವಿಚಾರಗಳಾದರೋ ಒಂದಕ್ಕಿಂತ ಮತ್ತೊಂದು ಕೀಳು ಹಾಗೂ ನೀಚ ಪ್ರವೃತಿಯವು. ನಮ್ಮ ಇಂದಿನ ಜನ್ಮ ಎನ್ನುವುದು ಹಿಂದಿನ ಜನ್ಮದ ಫಲ ಮಾತ್ರ. ಈ ಏನು ಇದೆಯೋ ಅದೆಲ್ಲ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಫಲ ಮಾತ್ರ. ನಮ್ಮ ಸಾಮಾಜಿಕ , ಧಾರ್ಮಿಕ, ಆರ್ಥಿಕ ಸ್ಥಿತಿಗೆ ನಾವು ನಿಮಿತ್ಯ ಮಾತ್ರ. ಈ ಜೀವನವೊಂದು ಸುಳ್ಳು ಪರವೊಂದೆ ಸತ್ಯ - ಎಂಬ ಫಟಿಂಗ ಶಾಸ್ತ್ರಗಳನ್ನು ಬರಕೊಂಡು ಬಂದಿದ್ದರು.

ಅಕ್ಷರಗಳ ಸಮೀಪ ಬ್ರಾಹ್ಮಣರಲ್ಲದ ಯಾರೂ ಸುಳಿಯುವಂತೆ ಇರಲಿಲ್ಲ. ಒಂದು ವೇಳೆ ಅಕ್ಷರದ ಸಮೀಪ ಯಾರಾದರೂ ಬಂದರೆ ಅಕ್ಷರಗಳಿಗೆ ಕ್ಷರತ್ವ ಪ್ರಾಪ್ತವಾಗುತ್ತದೆ ಎಂಬ ಕೀಳು ಶಾಸ್ತ್ರವನ್ನು ರಚಿಸಿದರು. ಹೀಗಾಗಿ ಸಮಾಜ ಅಸಮಾನತೆಯಿಂದ- ಅನ್ಯಾಯದಿಂದ - ದಬ್ಬಾಳಿಕೆಯಿಂದ - ಕ್ರೌರ್ಯದಿಂದ ಮುಲುಗುಟ್ಟುತ್ತಿತ್ತು. ದೇವರು ಧರ್ಮಗಳಂತೂ ಯಾರ ಕೈಗೆ ಎಟುಕುವ ವಸ್ತುಗಳಾಗಿರಲಿಲ್ಲ. ಅವೆಲ್ಲ ಕೆಲವೇ ಜನಗಳ ಸ್ವತ್ತಾಗಿದ್ದವು. ಈ ದೇಶದ ಹೆಣ್ಣು ಮಕ್ಕಳನ್ನಂತೂ ರಕ್ಕಸರಂತೆ ತುಳಿದು ಬಿಟ್ಟಿದ್ದರು. ಮುಟ್ಟಿನ ಸೂತಕ ಇರುವ ಮಹಿಳೆ ಬ್ರಾಹ್ಮಣರ ಹೊಟ್ಟೆಯಲ್ಲಿ ಹುಟ್ಟಿದ್ದರೂ ಆಕೆ ಹೊಲೆ ಎಂದೆ ಹೇಳಿಕೊಂಡು ಬರಲಾಗಿತ್ತು. ಈ ದೇಶದ ಸನಾತನ ಪುರಾತನ ಎಂದೆಲ್ಲ ಹಿರಿಮೆಗಳಿಂದ ಕರೆಯುತ್ತಿದ್ದ ಸಂಸ್ಕೃತಿಯೆಲ್ಲ ಹೀಗೆ ಕೊಳೆತು ನಾರುತ್ತಿರುವ ಮನಸ್ಸುಗಳಿಂದ ನಿಮರ್ಮಿತವಾದವುಗಳೇ ಅಗಿದ್ದವು.

ಈ ಎಲ್ಲಾ ಸಂಗತಿಗಳನ್ನು ಇಲ್ಲಿ ನಿಮ್ಮ ಮುಂದೆ ಯಾಕೆ ಇಡಲಾಗುತ್ತಿದೆ ಎಂದರೆ ಬಸವಣ್ಣನವರು ಬರುವುದಕ್ಕಿಂತ ಪೂರ್ವದಲ್ಲಿ ನಮ್ಮ ಸಮಾಜ ಇಷ್ಟೆಲ್ಲ ಸಂಕಟಗಳ ಹುದುಲಲ್ಲಿ ಕಂಟಮಟ ಸಿಕ್ಕುಬಿದ್ದಿತ್ತು. ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಠಿಸಲಾರ ಎಂಬ ಮಾತೊಂದು ಇದೆ , ಈ ಕಾರಣಕ್ಕಾಗಿ ಬಸವ ಪೂರ್ವದ ಸಮಾಜದ ಕಡೆ ನಮ್ಮ ದೃಷ್ಟಿಯನ್ನು ಹರಿಸಲೇಬೇಕಾಗಿದೆ.

ಇದೆಲ್ಲ ಕಾರಣಗಳಿಗಾಗಿಯೇ ಬಸವಾದಿ ಶರಣರು 12 ಶತಮಾನದಲ್ಲಿ ಮಾಡಿದ ಮೊಟ್ಟ ಮೊದಲ ಕೆಲಸವೆಂದರೆ ಸ್ಥಗಿತವಾಗಿ ನಿಂತು ಗಬ್ಬು ನಾರುತ್ತಿದ್ದ ಸಮಾಜಕ್ಕೆ ತಮ್ಮ ಸದುವಿನಯದ ನಡವಳಿಕೆಗಳ ಮೂಲಕ ಚಾಲನೆ ನೀಡಿದರು. ಏನಯ್ಯ ವಿಪ್ರರು ನುಡಿದಂತೆ ನಡೆಯರು. ತಮಗೊಂದು ಬಟ್ಟೆ. ಶಾಸ್ತ್ರಕ್ಕೊಂದು ಬಟ್ಟೆ ಎಂದು ವಿಡಂಬಿಸಿದರು.

ಕಿಚ್ಚು ದೈವವೆಂದು ಹವಿಯನಿಕ್ಕುವ
ಹಾರುವ ಮನೆಯಲ್ಲಿ ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರ ಬೀದಿಯ ಧೂಳ ಹೋಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯ ವಂದನೆಯ ಮರೆತು
ನಿಂದಿಸುತಿರುವರು ಕೂಡಲಸಂಗಮದೇವಾ

ಶಾಸ್ತ್ರಗಳ ಕುರಿತು ಬಣ್ಣದ ಮಾತುಗಳನ್ನು ಆಡುತ್ತ ಯಾವ್ಯಾವುದನ್ನೋ ದೇವರು ಎಂದು ಸಾರುತ್ತ ಬಂದ ಪುರೋಹಿತ ವರ್ಗ ತನ್ನ ಮನೆಗೆ ಬೆಂಕಿ ಕೆನ್ನಾಲಿಗೆ ಚಾಚಿ ದಗ ದಗ ಎಂದು ಉರಿಯುತ್ತಿದ್ದಾಗ ಅಗ್ನಿದೇವ ನಾನು ಕರೆಯದೆ ನನ್ನ ಮನೆಯನ್ನು ಪ್ರವೇಶಿಸಿದ್ದಾನೆ ಎಂದು ಖುಷಿಗೊಳ್ಳಬೇಕಾಗಿತ್ತು. ಆ ದೇವಾನು ದೇವತೆಗೆ ಯಜ್ಞ ಮಾಡುವಾಗ ಹಾಕುವ ದನ ಧಾನ್ಯ , ರೇಶ್ಮೆಯ ಬಟ್ಟೆ, ಚಂದನ ತುಂಡುಗಳನ್ನು ಹಾಕಿ ಸಂಭ್ರಮ ಪಡಬೇಕಿತ್ತು. ಆ ಕೆನ್ನಾಲಿಗೆಗೆ ತುಪ್ಪ ಸುರಿದು ಸಂತುಷ್ಟಗೊಳ್ಳಬೇಕಿತ್ತು. ಆದರೆ ಶಾಸ್ತ್ರ ಹೇಳುವ ದಾಂಡಿಗ ಪುರೋಹಿತ ಬೀದಿಯ ಧೂಳ, ಬಚ್ಚಲ ನೀರ ಹೋಯ್ದು ಬೊಬ್ಬಿಟ್ಟೆಲ್ಲರ ಕರೆಯ ಪರಿಯನ್ನು / ಅವರುಗಳ ವಿತಂಡ ವರ್ತನೆಗಳನ್ನು ನಮ್ಮೆಲ್ಲರ ಕಣ್ಣಿಗೆ ಕಟ್ಟುವಂತೆ ಬಸವಣ್ಣನವರು ಚಿತ್ರಿಸಿ ಎಲ್ಲರ ಮನಸ್ಸುಗಳ ಕದ ತೆರೆದರು.

ಅಡ್ಡ ದೊಡ್ಡ ನಾನಲ್ಲಯ್ಯಾ , ದೊಡ್ಡ ಬಸುರನಲ್ಲಯ್ಯಾ
ಮಾವಿನ ಕಾಯಿಯೊಳಗೊಂದು ಎಕ್ಕೆಯ ಕಾಯಿ ನಾನು

ಎಂಬ ಸತ್ಯವನ್ನು ಸಾರುತ್ತ ವಿನಯದ ಮೂರ್ತಿಯಾದರು. ಸದಾಶಿವನ ಒಲುಮೆಗೆ ಬ್ರಹ್ಮಪದವಿ ಬೇಕಿಲ್ಲ. ವಿಷ್ಣು ಪದವಿ ಬೇಕಿಲ್ಲ. ರುದ್ರ ಪದವಿಯೂ ಬೇಕಾಗಿಲ್ಲ. ನಾನಾವ ಪದವಿಯನೊಲ್ಲೆನಯ್ಯ ಎಂದು ತಿರಸ್ಕರಿಸುತ್ತ ಶರಣರ ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯ

ಎಂದು ಬೇಡಿಕೊಳ್ಳುವ ಮೂಲಕ ಶಿವನನ್ನು ಒಲಿಸಿಕೊಳ್ಳಬಹುದು ಎಂದು ಸ್ಪಷ್ಟವಾಗಿ ಹೇಳಿದರು. ಒಂದು ವೇಳೆ ನೀವು ಭಾವಿಸುವಂತೆ ಶಿವ ಇದ್ದುದೇ ಆದರೆ ಆತ ನಾದ ಪ್ರಿಯನಲ್ಲ. ವೇದ ಪ್ರಿಯ ನಲ್ಲ. ಭಕ್ತಿ ಪ್ರಿಯ ನಮ್ಮ ಕೂಡಲಸಂಗಮದೇವಾ ಎಂಬುದನ್ನು ಖಚಿತ ಪಡಿಸಿದರು. ಈ ಕೂಡಲ ಸಂಗಮನಿಗೆ ಬರಬರವಾದ ಭಕ್ತಿಬೇಕಿಲ್ಲ. ಬಂಡೆ ಬಂಡಿಯಲ್ಲಿ ಪತ್ರೆಯ ತಂದು ಕಂಡ ಕಂಡಲ್ಲಿ ಮಜ್ಜನಕ್ಕೆರೆದು ತೋರಿಸುವ ತೋರಿಕೆಯ ಭಕ್ತಿ ಬೇಕಾಗಿಲ್ಲ. ಹತ್ತು ಮತ್ತರ ಭೂಮಿ ಬತ್ತದ ಹಯನು ನಡೆಸಿಹೆವೆಂಬವರ ಮುಖವ ನೋಡಲಾಗದು. ಅವರ ನುಡಿಯ ಕೇಳಲಾಗದು ಎಂದೆಲ್ಲ ಹೇಳುತ್ತ :

ತನ್ನಾಶ್ರಯ ರತಿ ಸುಖವನು
ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಲಿ ಮಾಡಿಸಬಹುದೆ

ಎಂಬ ಮರ್ಮಾಘಾತವಾದ ಮಾತುಗಳ ಮೂಲಕ ತಿವಿಯುತ್ತಲೇ ಅವರೆಲ್ಲ ಕೆಮ್ಮನೆ ಉಪಚಾರಕ್ಕೆ ಮಾಡುತ್ತಾರೆ. ನಾವು ಉಂಡರೆ ಹೇಗೆ ನಮ್ಮ ಹೊಟ್ಟೆ ತುಂಬುತ್ತದೋ, ನಾವು ನಡೆದರೆ ಹೇಗೆ ಸ್ಥಳವನ್ನು ಕ್ರಮಿಸುತ್ತೇವೆಯೊ , ಹಾಗೆಯೇ ನಾವು ಕೂಡಲ ಸಂಗಮನನ್ನು ಪೂಜಿಸಿದರೆ ಆ ಫಲ ನಮ್ಮ ಕೈಗೆ ಎಟುಕುತ್ತದೆ. ಈ ಪೂಜೆಯ ಫಲ ಕೂಡ ಹೋಯ್ದರೆ ಹೋಯ್ಗಳು ಕೈಯ್ಯ ಮೇಲೆ. ಬಯ್ದರೆ ಬಯ್ಗಳು ಕೈಯ ಮೇಲೆ ಸಿಕ್ಕುತ್ತದೆ. ಹಿಂದೆ ಹೇಳಿದ ಕರ್ಮ ಸಿದ್ದಾಂತದ ಪ್ರಕಾರ ನೀವು ಅದಕ್ಕಾಗಿ ಕಾಯಬೇಕಿಲ್ಲ. ಕರ್ಮಣ್ಯೇ ವಾದಿಕಾರಸ್ಥೆ ಮಾಫಲೇ ಶುಕದಾಚನ? ಅಂದರೆ ನಿನ್ನ ಕರ್ತವ್ಯವನ್ನು ನೀವು ನಿಭಾಯಿಸು. ಫಲ ಮಾತ್ರ ಕೇಳಬೇಡ ಎಂದು ಹೇಳುವುದಿಲ್ಲ. ನೀವು ಪೂಜಿಸಿದ ಫಲ ಕೈಯ್ಯಮೇಲೆಯೆ ಸಿಕ್ಕುತ್ತದೆ ಎಂದು ಖಚಿತವಾಗಿ ಹೇಳುತ್ತಾರೆ.

ವಚನಗಳನ್ನು ಬರೆಯುತ್ತ ತಮ್ಮ ಅನುಭವಗಳನ್ನು ಅನುಭವ ಮಂಟಪದಲ್ಲಿ ಇತರರೊಂದಿಗೆ ಹಂಚಿಕೊಳ್ಳುತ್ತ ಬಸವಣ್ಣನವರು ಸಮಾಜಮುಖಿಯಾಗಿ ಹೊರಟರು. ಬಿಜ್ಜಳನ ಗದ್ದುಗೆಯಲ್ಲಿ ಕುಳಿತುಕೊಂಡಿದ್ದರೂ ಅವರು ಪ್ರಜಾಪ್ರಭುತ್ವದ ಕನಸುಗಳನ್ನು ಕಟ್ಟಿಕೊಂಡಿದ್ದರು.

ಜೋಳವಾಳಿಯಾನಲ್ಲ, ವೇಳೆಯಾಳಿಯವ ನಾನಯ್ಯಾ
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ
ಕೇಳು ಕೂಡಲಸಂಗಮದೇವಾ,
ಮರಣವೇ ಮಹಾನವಮಿ

ಹೀಗೆಲ್ಲ ಬಸವಣ್ಣನವರು ತಮ್ಮನ್ನು ತಾವು ಪರಿಶುದ್ಧನೆಂದು ಸ್ಪಷ್ಟಪಡಿದ್ದರೂ ಕೆಲವರು ವಿನಾಕಾರಣ ಮೊಸರಲ್ಲಿ ಕಲ್ಲು ಹುಡುಕುವ ಯತ್ನದಲ್ಲಿ ತೊಡಗಿದರು. ಆಗಲೂ ಬಸವಣ್ಣ ಕೆರಳದೆ ತಮ್ಮ ಎಂದಿನ ಸೌಜನ್ಯದ ಭಾಷೆಯಲ್ಲಿಯೆ ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳಿರ್ದು ಎಂದು ಹೇಳುತ್ತ ಬಿಜ್ಜಳನನ್ನು ಭವಿ ಎಂದು ಜರೆಯುತ್ತಾರೆ. ಬಸವಣ್ಣನವರು ಯಾವ ರಾಜ ಬಿಜ್ಜಳನ ಅಡಿಯಲ್ಲಿದ್ದು ಕೆಲಸ ಮಾಡಬೇಕಾಗಿದೆಯೋ ಆತನನ್ನು ಭವಿ ಎಂದು ಕರೆದು ದಕ್ಕಿಸಿಕೊಂಡದ್ದು ನೆನೆದರೆ ಬಸವಣ್ಣನವರ ಧೈರ್ಯ ಎಂಥದ್ದು ಎಂದು ಯಾರಿಗಾದರೂ ಮನದಟ್ಟಾಗುತ್ತದೆ.

ಯಾರು ಮುನಿದು ನಮ್ಮನೇನ ಮಾಡುವರು
ಊರು ಮುನಿದು ನಮ್ಮನ್ನೆಂತು ಮಾಡುವುದು

ಎಂಬ ಬಂಡಾಯದ ದನಿ ಬಸವಣ್ಣನವರ ಇಡಿ ವ್ಯಕ್ತಿತ್ವದಲ್ಲಿ ಪ್ರವಹಿಸಿದೆ.

ಬಾರದು ಬಪ್ಪದು ಬಪ್ಪದು ತಪ್ಪದು.
ಉರಿಬರಲಿ ಸಿರಿ ಬರಲಿ ಬೇಕು ಬೇಡೆಂದೆನ್ನೆ.

ನಾಳೆ ಬಪ್ಪುದು ನಮಗಿಂದೆ ಬರಲಿ.
ಇಂದು ಬಪ್ಪುದು ನಮಗೀಗಲೆ ಬರಲಿ.
ಇದಕಾರಂಜುವರು, ಇದಕಾರಳುಕುವರು
ಜಾತಸ್ಯ ಮರಣಂ ಧೃವಂ

ಎಂಬುದು ಬಸವಣ್ಣನವರ ಗಂಡು ಭಾಷೆ. ಸತ್ಯವನ್ನು ಪ್ರತಿಪಾದನೆ ಮಾಡಲು ಧೀರವಾದ ಮನಸ್ಸು ಬೇಕು. ಸತ್ಯ ಶುದ್ಧವಾದ ಕಾಯಕ ಇರಬೇಕು. ಪರಿಪೂರ್ಣ ವ್ಯಕ್ತಿಯ ಪಾಲಿಗೆ ನಾಳೆಯೆಂಬ ಅಸ್ತಿತ್ವವೇ ಇರುವುದಿಲ್ಲ. ವರ್ತಮಾನದ ಕ್ಷಣವೇ ಅವನಿಗೆ ಸರ್ವಸ್ವ. ಅವನ ಬಳಿಯಲ್ಲಿ ನನ್ನೆಯೆಂಬೂ ಇಲ್ಲ. ನಾಳೆಯೆಂಬುದೂ ಇಲ್ಲ ಎಂದು ಓಶೋ ರಜನೀಶ ಹೇಳುವಂತೆ : ಬಸವಣ್ಣನವರು

ಕಾಯದ ಕಳವಳಕ್ಕಂಜಿ ಕಾಯಯ್ಯಾ ಎನ್ನೆನು
ಜೀವನೋಪಾಯಕ್ಕಂಜಿ ಈಯಯ್ಯಾ ಎನ್ನೆನು
ಯದ್ ಭಾವಂ ತದ್ ಭವತಿ
ಉರಿಬರಲಿ ಸಿರಿಬರಲಿ ಬೇಕು ಬೇಡೆನ್ನೆನಯ್ಯಾ

ಎಂದು ಈ ದೇಶದ ರಕ್ಷಣೆ ಮಾಡುವ ಸೈನಿಕನ ಹುರುಪಿನಂತೆ ಮುನ್ನುಗ್ಗಿ ಸಮಾಜವನ್ನು ಸುಧಾರಿಸಬೇಕು. ನಿಮ್ನ ವರ್ಗದ ಜನಗಳಿಗೆ ಬೆಳಕನ್ನು ತಂದುಕೊಡಬೇಕು ಎಂದು ಧಾವಂತದಿಂದ ಹೋಗುತ್ತಾರೆ.

ಯಾವಾತನು ಜೀವನದ ಸತ್ಯ ಸಂಗತಿಗಳಿಗೆ ನೇರವಾಗಿ ಸಾಕ್ಷತ್ಕಾರ ಮಾಡಲು ಎದೆಯೊಡ್ಡುವನೋ ಆತನೇ ನಿಜವಾದ ಧಾರ್ಮಿಕ ವ್ಯಕ್ತಿ. ಅಂಜುಕುಳಿಯಾಗಿ ಹೇಡಿಯಾಗಿ ನಪುಂಸಕನಂತೆ ಜೀವನದ ತಥ್ಯಗಳಿಗೆ ಮುಖ ತಿರುವಿಕೊಂಡು ಅವುಗಳನ್ನು ಎದುರಿಸದಾತನು ಎಂದೆಂದೂ ಧಾರ್ಮಿಕನೆನಿಸಿಕೊಳ್ಳಲಾರ - ಎಂಬ ಆಚಾರ್ಯ ರಜನೀಶ ಅವರ ಮಾತಿನಂತೆ ಬಸವಣ್ಣನವರು ನಿಜವಾದ ಧಾರ್ಮಿಕ ವ್ಯಕ್ತಿಯಾಗಿ ಕಂಗೊಳಿಸಿ ಹೋದರು. ಶಿವನೊಲಿಸಬಂದ ಪ್ರಸಾದ ಕಾಯವನ್ನು ಅವರು ಸವೆಯೆ ಬಳಸಿದರು. ದಿಟವ ನುಡಿವುದು ನುಡಿದಂತೆ ನಡೆವುದು ಅವರ ಬದುಕಾಗಿತ್ತು. ಸತ್ಯವೆಂಬ ಕೂರಲಗನೆ ತಳೆದುಕೊಂಡು ಸಮಾಜವನ್ನು ಗೆದ್ದುಬಿಟ್ಟರು. ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯ ಎಂದು ಅವರೆಲ್ಲ ನುಗ್ಗಿ ನುಗ್ಗಿ ಹೋದರು.

ಬಸವಾದಿ ಶರಣರು ನಡೆದುದೆ ದಾರಿ - ಹೆದ್ದಾರಿಯಾಯಿತು. ಶರಣ ಮಾರ್ಗವಾಯಿತು. ಈ ಮಾರ್ಗಕ್ಕೆ ಅಡ್ಡಗಾಲಾಗಿ ಬಂದ ಪುರೋಹಿತಶಾಹಿಯ ಅಕ್ಟೋಪಸ್ ಹಿಡಿತ ಕತ್ತರಿಸಿ ತುಂಡಾಗಿ ಹೋಯಿತು. ಗುಡಿ ಗುಂಡಾರಗಳಲ್ಲಿ ಕೆಲವರ ಸ್ವತ್ತಾಗಿದ್ದ ದೇವರ ಗುಡಿಗಳನ್ನು ಮೊಟ್ಟ ಮೊದಲು ಕಿತ್ತೆಸೆದರು. ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯಾ. ಎನ್ನ ಕಾಲೇ ಕಂಬ ದೇಹವೇ ದೇಗುಲ. ಶಿರವೇ ಹೊನ್ನ ಕಳಸವಯ್ಯ ಎಂದವರು ತಮ್ಮ ದೇಹವನ್ನೆ ದೇವಾಲಯವನ್ನಾಗಿ ಮಾಡಿಕೊಂಡರು. ಜಗದಗಲ ಮುಗಿಲಗಲವಾಗಿರುವ ಚೈತನ್ಯವನ್ನು ಬಸವಣ್ಣನವರು ಕರಸ್ಥಲಕ್ಕೆ ತಂದು ಚುಳುಕಾಗುವ ಲಿಂಗವನ್ನವರು ಕಂಡಿರಿಸಿದರು. ಆ ಲಿಂಗ ಪೂಜೆಯಾದರೂ ಆಡಂಬರದ ಪೂಜೆಯಾಗಬಾರದು. ಕಾಟಾಚಾರದ ವಸ್ತುವಾಗಬಾರದು. ಲಿಂಗಪೂಜೆಯೆಂಬುದು ಯೋಗಕ್ರಿಯೆಯಾಗಬೇಕು. ಪ್ರತಿಯೊಬ್ಬ ಮನುಷ್ಯ ತನ್ನ ಅಂತರಂಗದ ಅನುಸಂಧಾನವನ್ನು ಲಿಂಗಪೂಜೆಯೊಂದಿಗೆ ಮಾಡಬೇಕು ಎಂಬುದೇ ಅವರ ಅಭಿಪ್ಸೆಯಾಯಿತು. ಅದು ಬಿಟ್ಟು ಬರೀ ಲಿಂಗದ ಮೇಲೆ ಉದಕ ಸುರುವುತ್ತ ನಡೆದರೆ ಅದು ನೆನೆಯದು. ಮರೆತರೆ ಬಾಡದು ಎಂಬ ಹಂತಕ್ಕೂ ಶರಣರು ಮುಂದಡಿ ಇಟ್ಟರು.

ಇಂಥ ಶರಣರ ಹಿನ್ನೆಲೆಯಿಂದ ಬಂದ ಇಂದಿನ ಲಿಂಗಾಯತರು ಇಂದು ಏನಾಗಿದ್ದಾರೆ ಎಂದು ನೆನೆದರೆ ಸಾಕಷ್ಟು ವ್ಯಥೆ ಯಾಗುತ್ತದೆ. ನೋವು ಉಂಟಾಗುತ್ತದೆ. ಮೊಲೆ ಮುಡಿ ಬಂದರೆ ಹೆಣ್ಣೆಂಬರು ಗಡ್ಡ ಮೀಸೆ ಬಂದರೆ ಗಂಡೆಂಬಂರು . ನಡುವೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡೂ ಅಲ್ಲ ರಾಮನಾಥ ಎಂದು ಹೇಳಿದ ಶರಣರೆಲ್ಲಿ ಮತ್ತದೇ ಸನಾತನ ಧರ್ಮವನ್ನು ಅಪ್ಪಿಕೊಂಡು ಸ್ತ್ರೀಯರನ್ನು ಮತ್ತೆ ಮೂಲೆಗುಂಪಾಗಿ ಮಾಡುತ್ತಿರುವ ನಾವೆಲ್ಲಿ

ಕೊರಳಲ್ಲಿ ಲಿಂಗವನ್ನು ಧರಿಸಿಯೂ ನಾವೆಲ್ಲ ಮತ್ತೆ ಮತ್ತೆ ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆ ಅಡಿಯಾಳಾಗಿ ಬೀಳುವ ಲೊಟ್ಟೆ ಮೂಳಗಳಾಗಿದ್ದೇವಲ್ಲವೆ ಈಗ ನಮ್ಮ ಈ ನಡೆಗಳನ್ನು ನೋಡಿ ಆ ಅಂಬಿಗರ ಚೌಡಯ್ಯ ಯಾವ ಮೆಟ್ಟುಗಳಿಂದ ನಮ್ಮನ್ನು ಬಾರಿಸಿಯಾನು ಸಾಮಾಜಿಕವಾಗಿ ಗಂಡನನ್ನು ಹೊಂದಿದ ಒಬ್ಬ ಸತಿ ಪರ ಪತಿಯರತ್ತ ನೋಡಿದರೆ ಹೇಗೆ ಸಾಮಾಜಿಕ ಹಾದರವಾಗುತ್ತದೋ ಹಾಗೆಯೇ ನಾವುಗಳೆಲ್ಲರೂ ಕೂಡ ನಮಗೆ ಪತಿಯಾಗಿರುವ ಲಿಂಗವನ್ನು ಬಿಟ್ಟು ಬೆಟ್ಟದ ಲಿಂಗಕ್ಕೆ ಹೋದರೆ ಅದು ಧಾರ್ಮಿಕ ಹಾದರವಾಗುತ್ತದೆ , ಅಲ್ಲವೆ

ಲಿಂಗಾಯತರ ಮನೆಯ ಜಗುಲಿಗಳೋ ಒಂದು ರೀತಿಯಲ್ಲಿ ಇಂದು ಮ್ಯೂಜಿಯಂ ಇದ್ದ ಹಾಗೆ ಇರುತ್ತವೆ. ತಿರುಪತಿಗೆ ಹೋದರೆ ವೆಂಕಟರಮಣ, ಮಂತ್ರಾಲಯಕ್ಕೆ ಹೋದರೆ ರಾಘವೇಂದ್ರ ಸ್ವಾಮಿ, ಕೇರಳದ ಕಡೆಗೆ ಹೋದರೆ ಅಯ್ಯಪ್ಪ ಸ್ವಾಮಿ, ಹೀಗೆ ದೇವರುಗಳ ಸಣ್ಣ ದಂಡೆ ನಮ್ಮ ನಮ್ಮ ಮನೆಯ ಜಗುಲಿಯ ಮೇಲೆ ಇರುತ್ತವೆ. ಇವೆಲ್ಲವುಗಳು ಅರಗು ತಿಂದು ಕರಗುವ ದೈವಗಳು. ಉರಿಯ ಕಂಡರೆ ಮುರುಟುವ ದೈವಗಳು. ಅಂಜಿಯಾದರೆ ಹೂಳುವ ದೈವಗಳು ಎಂಬುದು ನಮಗೆ ಗೊತ್ತಾಗುತ್ತಿಲ್ಲ.

ಹೀಗಾಗಿ ಮತ್ತೆ ಮತ್ತೆ ನಾವೆಲ್ಲ ನೀರನು ಕಂಡಲ್ಲಿ ಮುಳುಗುತ್ತೇವೆ. ಮರವನ್ನು ಕಂಡಲ್ಲಿ ಸುತ್ತುತ್ತೇವೆ. ಬತ್ತುವ ಜಲವ ಒಣಗುವ ಮರನ ನಂಬಿಕೊಂಡು ಚಿರಸ್ಥಾಯಿಯಾಗಿರುವ ಶಾಶ್ವತವಾಗಿರುವ ನಿಜವಾದ ದೇವರನ್ನು ಮರೆತು ಬಿಟ್ಟಿದ್ದೇವೆ. ಇತ್ತೀತ್ತಲಾಗಿ ಬಸವಣ್ಣನವರು ನಮಗೆ ಕರುಣಿಸಿದ ಲಿಂಗವನ್ನು ಧರಿಸುವುದನ್ನೆ ಬಿಟ್ಟಿದ್ದೇವೆ. ಏಕೆಂದರೆ ನಮಗೆಲ್ಲ ಒಬ್ಬ ಗಂಡನ ಜೊತೆ ಇರುವುದಕ್ಕಿಂತ ಎಲ್ಲಾ ಗಂಡಂದಿರ ಜೊತೆ ಚಕ್ಕಂದವಾಡುವ ಕೌತುಕ !

ಲಿಂಗಾಯತ ಸಮಾಜವನ್ನು ಮುನ್ನಡೆಸಿಕೊಂಡು ಹೋಗಬಲ್ಲ ಸ್ವಾಮಿ, ಜಗದ್ಗುರು, ಷಟಸ್ಥಲ ಭ್ರಮಿಗಳು, ಶ್ರೀ.ಮ.ನಿ.ಪ್ರಗಳ ಬೆನ್ನು ಹತ್ತಿ ಸಾಗಿದ್ದೇವೆ. ಮಠೀಯ ವ್ಯವಸ್ಥೆಗೆ ಜೋತುಬಿದ್ದು ನಿಜವಾದ ಲಿಂಗಾಯತ ತತ್ವಗಳನ್ನು ನಗೆಪಾಟಲಿಗೆ ಈಡುಮಾಡಿದ್ದೇವೆ.ನಾವು ನಂಬಿಕೊಂಡು ಬಂದ ಸ್ವಾಮಿ - ಮಹಾಸ್ವಾಮಿಗಳಾದರೋ ಯಾರ ಯಾರದೋ ಮರ್ಜಿ ಕಾಯುತ್ತ, ಮತ್ತಾರದೋ ಖುರ್ಚಿ ಕಾಯುತ್ತ ಮನಸ್ಸಿಗೆ ದ್ರೋಹ ಬಗೆಯುತ್ತ ನಮ್ಮನ್ನೆಲ್ಲ ದಿಶಾಬೂಲ ಮಾಡುತ್ತ ಹೊರಟಿದ್ದಾರೆ.

ಪಂಚಾಚಾರ್ಯ ಜಗದ್ಗುರುಗಳೆ ಇರಲಿ, ವಿರಕ್ತ ಮಠದ ಸ್ವಾಮಿಗಳೆ ಇರಲಿ ಅವರೆಲ್ಲ ಮತ್ತದೆ ಭೂಜ್ರ್ವತನದ ಪಳಿಯುಳಿಕೆಗಳು. ಅವರೆಂದು ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಸುಧಾರಿಸುವುದೂ ಇಲ್ಲ. ಜಂಗುಹತ್ತಿ ತಮ್ಮ ಸತ್ವವನ್ನು ಕಳಕೊಂಡವರ ಅಡಿದಾವರೆಗಳಿಗೆ ನಮ್ಮ ಬಸವಾದಿ ಶರಣರ ವಿಚಾರಗಳನ್ನು ಇಟ್ಟುಕೊಂಡು ಹೋಗುವುದು ಎಷ್ಟು ಸರಿ ಎಂಬುದನ್ನು ತಾವೆಲ್ಲ ಆರೋಗ್ಯ ಪೂರ್ಣವಾಗಿ ವಿಚಾರಿಸಿಕೊಳ್ಳಬೇಕು. ಸದಾ ಈ ಮಠಗಳು ಕಟ್ಟಿಸುವ ಗದ್ದುಗೆಗಳಿಗೆ ಹಣೆ ಹಚ್ಚಿ ಹಚ್ಚಿ ಹಣೆ ಸವೆದು ಹೋಗಿವೆ. ಕಾಯಿ ಒಡೆದು ಕರ್ಪುರ ಬೆಳಗಿ ಕೈಯೆಲ್ಲ ಕಪ್ಪಾಗಿ ಹೋಗಿವೆ. ಆದರೂ ಏನೊಂದೂ ಬದಲಾವಣೆಯಾಗಿಲ್ಲ. ಆದರೂ ಇವರ ಬೆನ್ನು ಬೀಳುವುದು ಯಾಕೆ ಬಸವಣ್ಣನವರು ಹೇಳಿದ್ದು ಇಂಥ ಮಠಾಧೀಶರ ಹಿಂದೆ ಬೆನ್ನು ಬೀಳಿರಿ ಎಂದು ಎಲ್ಲಿಯೂ ಹೇಳಿಲ್ಲ. ಅರಿವೇ ಗುರು ಎಂದು ಹೇಳಿ ಆ ಅರಿವನ್ನು ಪಡೆಯಲು ಸ್ವತಃ ನೀವೇ ಮುಂದಾಗಬೇಕೆಂದು ಹೇಳಿದ್ದಾರೆಯೆ ಹೊರತು ಯಾರೋ ಓದಿದರೆ, ತಿಳಿದುಕೊಂಡರೆ ಇನ್ನಾರಿಗೋ ಒಳ್ಳೆಯದಾಗುತ್ತದೆ ಎಂದು ಅವರೆಲ್ಲಿಯೂ ಹೇಳಿಲ್ಲ.

ಕರಿಕ ಕೆಂಚನ ನೆನೆದರೆ ಕೆಂಚನಾಗಲ್ಲನೆ
ಕೆಂಚ ಕರಿಕನ ನೆನೆದರೆ ಕರಿಕನಾಗಲ್ಲನೆ
ಮುನ್ನಿನ ಪುರಾತನರ ನೆನೆದು ಧನ್ಯನಾದಿಹೆನೆಂಬ
ಮಾತಿನ ರಂಜಕರನೇನೆಂಬೆ

ಎಂದು ಹೇಳಿದ್ದು ಈ ಅರ್ಥದಲ್ಲಿಯೆ. ಇರುವ ಒಂದೇ ಒಂದು ಜಗತ್ತಿಗೆ ಇಂದು ಎಷ್ಟು ಮಂದಿ ಜಗದ್ಗುರುಗಳು ಈ ಜಗದ್ಗುರುಗಳಾದರೋ ನಮ್ಮ ನಿಮ್ಮಂತೆ ಹುಟ್ಟಿ ಬಂದವರಲ್ಲವಂತೆ ! ತಂದೆ- ತಾಯಿಗಳೇ ಇಲ್ಲದೆ ಹುಟ್ಟಿದ ಲಿಂಗೋದ್ಭವರಂತೆ ! ಜಡವಾಗಿರುವ ಯಾವುದೇ

ಶಿಲೆಯಲ್ಲಿ , ಲಿಂಗದಲ್ಲಿ ರೇಣುಕರು ಹುಟ್ಟಿ ಬರುತ್ತಾರೆಂದು ಇವರು ಹೇಳಿದರೆ ನಾವು ನಂಬಬೇಕಂತೆ ! ಯಾಕೆಂದರೆ ಧರ್ಮ ಸೂಕ್ಷ್ಮವನ್ನು ಯಾರು ಬೇಧಿಸಬಾರದು ಎಂಬ ಕುತರ್ಕಬೇರೆ ಇವರು ಹೆಣೆದುಕೊಂಡಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎಂದು ಜಯಘೋಷ ಹಾಕುತ್ತ ಅದೇ ಮನುಷ್ಯರ ಹೆಗಲ ಮೇಲೆ ಹಾಡೆ ಹಗಲು ಸವಾರಿ ಹೊರಡುವ ಇವರಿಗೆ ಏನೆನ್ನಬೇಕು ನಾಲ್ಕು ಜನರ ಹೆಗಲ ಮೇಲೆ ಸವಾರಿ ಹೊರಟಿರುವುದೇ ಮೊದಲು ಮನುಷ್ಯ ವಿರೋಧಿ ಕೃತ್ಯ. ಇಂಥ ಜಾಗದ ಗುರುಗಳಿಂದ ಎಂದಾದರೂ ಯಾರದಾದರೂ ಉದ್ದಾರವಾಗಲು ಸಾಧ್ಯವೆ

ವಿರಕ್ತರೆ ಇರಲಿ, ಪಂಚಾಚಾರ್ಯರೇ ಆಗಿರಲಿ ಅವರು ಎಷ್ಟೇ ಪ್ರಗತಿಪರವಾಗಿದ್ದರೂ ಅವರೆಲ್ಲ ಮನುಷ್ಯ ಸರಿಸಮಾನತಾ ತತ್ವದ ವಿರೋಧಿಗಳು. ಇಲಿಗಳ ಗುಂಪನ್ನು ಬೆಕ್ಕು ಸಂರಕ್ಷಣೆ ಮಾಡುತ್ತೇನೆ ಎಂದು ಭಾಷೆ ಕೊಟ್ಟಂತೆ ಆಗುತ್ತದೆ. ವಾಸ್ತವದಲ್ಲಿ ಬೆಕ್ಕು ದಿನವೂ ಇಲಿಗಳನ್ನು ಸ್ವಾಹ ಮಾಡುತ್ತದೆ. ಹೀಗೆ ಬಸವಣ್ಣನವರು ಕನಸಿದ ಸಮಾಜವನ್ನು ಮಠೀಯ ವ್ಯವಸ್ಥೆಗಳು ನುಂಗಿಕುಂತಿವೆ. ಇತ್ತೀತ್ತಲಾಗಿ ಮಠಗಳು ಬಲಿಷ್ಠವಾಗುತ್ತ ಸಮಾಜ ಕೃಶವಾಗುತ್ತ ಸಾಗಿದೆ. ಇದು ನಿಜಕ್ಕೂ ಕಳವಳದ ಸಂಗತಿ. ಕಾಯದ ಕಳವಳಕ್ಕಂಜಿ ಕಾಯಯ್ಯ ಎಂದು ವೇದಿಕೆಗಳಲ್ಲಿ ನಿಂತು ಆಶೀರ್ವಚನ ನೀಡುವ ಜಗದ್ಗುರುಗಳು ತಮ್ಮ ಬೆಂಗಾವಲಿಗೆ ಕಾವಲುಗಾರರು, ಬಂದೂಕನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ. ವೇದಿಕೆಗಳಲ್ಲಿ ಸರಳತನದ ಬೋಧಿಸುವ ಗುರುಗಳು ಕೇವಲ ಒಂದು ಕೋಟಿ ಮೊತ್ತದ ಗುಂಡು ನಿರೋಧಕ ಕಾರುಗಳಲ್ಲಿ ಸುಖಲೋಲುಪರಾಗುತ್ತಾರೆ. ಇದನ್ನೆಲ್ಲ ಅವರು ದುಡಿದು ಗಳಿಸಿಕೊಂಡಿದ್ದರೆ ನಾನು ಹೀಗೆಲ್ಲ ಕೇಳುತ್ತಿರಲಿಲ್ಲ. ಅವರ ಮೋಜು ಮೇಜವಾನಿಗೆ ಖರ್ಚಾಗುತ್ತಿರೋದು ನಮ್ಮ ಸಮಾಜದ ದುಡ್ಡು. ಅದು ನಮ್ಮಗಳ ಹಣ. ಹಾಗಾಗಿಯೆ ನಾವೆಲ್ಲ ಇಂದು ಪ್ರಶ್ನೆ ಮಾಡಬೇಕಾಗಿದೆ.

ಇಂಥ ಅರಾಜಕ ಸಂದರ್ಭದಲ್ಲಿ ನಾವೆಲ್ಲ ಮತ್ತೆ ಮತ್ತೆ ವಚನಗಳ ಓದಾಳಿಯಾಗಬೇಕು. ಆ ವಚನಗಳು ಓದುತ್ತ ನಮ್ಮ ಮನಸ್ಸಿನ ಆಳಕ್ಕೆ ಇಳಿಯುತ್ತಲೆ ಅದೇಂಥದೋ ಬದಲಾವಣೆಯ ಗಾಳಿ ನಮ್ಮಲ್ಲಿ ಬೀಸತೊಡಗುತ್ತದೆ. ಇವನಾರವ ಇವನಾರನ ಎನ್ನದೆ ಇವ ನಮ್ಮವ ಇವ ನಮ್ಮವ ಎಂಬ ಬದಲಾವಣೆ ನಮ್ಮೊಳಗೆ ಕಾಣಲು ಶುರುವಾಗುತ್ತದೆ. ನಮ್ಮ ಏಳಿಗೆ ನಮ್ಮಿಂದಲೇ ಹೊರತು ಇನ್ನಾರಿಂದಲೂ ಸಾಧ್ಯವಿಲ್ಲ ಎಂಬ ಸತ್ಯ ಅರ್ಥವಾಗುತ್ತದೆ. ದಿನ ನಿತ್ಯವೂ ವಚನಗಳನ್ನು ಓದುವುದರಿಂದ ನಮಗೆ ಅರಿವಿಲ್ಲದೆ ನಮ್ಮೊಳಗೆ ಕಲಿತನವನ್ನು ತಂದುಕೊಡುತ್ತವೆ. ಒಂದು ಸಂದರ್ಭದಲ್ಲಿ ಒಳ್ಳೆಯ ಕೆಲಸಕ್ಕಾಗಿ ಸಾಯುವ ಸಂದರ್ಭ ಬಂದಾಗಲೂ ಯಾವುದೇ ಹಿಂಜರಿಕೆಯಿಲ್ಲದೆ ಸಾಯಲು ಸಿದ್ದವಾಗುವಂತೆ ಪ್ರೇರೇಪಿಸುತ್ತದೆ. ಒಟ್ಟಿನಲ್ಲಿ ಸಾಯುವಾಗಲು ಸುಖ ಕೊಡುವ ಸಾಹಿತ್ಯ ವಚನ ಸಾಹಿತ್ಯವಾಗಿದೆ. ಲಿಂಗಾತರು ಎಂಬುದು ಒಂದು ಜಾತಿಯಲ್ಲ. ಅದೊಂದು ತತ್ವ . ಅದನ್ನು ಯಾರು ಬೇಕಾದರೂ ಅನುಸರಿಸಬಹುದು. ತಂದೆ- ತಾಯಿಗಳಿಂದ ಅನುಚಾನವಾಗಿ ಬರಲು ಅದೇನು ಯಾರಪ್ಪನ ಆಸ್ತಿ ಅಲ್ಲ ಎಂಬ ಸತ್ಯ ನಮಗೆ ಮನದಟ್ಟಾಗಬೇಕಾದರೆ ವಚನಗಳನ್ನು ಸರಿಯಾಗಿ ಆರ್ಥಮಾಡಿಕೊಳ್ಳಬೇಕು.

ಈ ವಚನಗಳಾದರೋ ಸುಲಿದ ಬಾಳೆ ಹಣ್ಣಿನಂತೆ ಸವಿಯಾಗಿ, ಸಲೀಲವಾಗಿ ಇವೆ. ಬಾಳೆ ಹಣ್ಣು ಹೊಟ್ಟೆಗೆ ಇಳಿಯುತ್ತಲೆ ಹೇಗೆ ಪಚನಗೊಳ್ಳುತ್ತದೋ ಹಾಗೆ ವಚನಗಳೂ ಸಹ. ದಿನ ನಿತ್ಯ ನಾವು ನೀವು ಆಡುವ ಮಾತಿನಂತೆ, ನಿತ್ಯವೂ ಬಳಸುವ ವಸ್ತುಗಳ ಪ್ರತಿಮೆಗಳನ್ನು ಉಪಯೋಗಿಸಿ ಮಾಡಿದ ರಚನೆಗಳು. ಇವು ನಮ್ಮ ಆಡುಭಾಷೆ ಕನ್ನಡದಲ್ಲಿ ಇವೆ ಎಂಬುದು ಮತ್ತೊಂದು ಹೆಗ್ಗಳಿಕೆ. ಇವನ್ನು ನಾವು ಸರಿಯಾಗಿ ಓದಿಕೊಳ್ಳೋಣ. ತಿಳಿದುಕೊಳ್ಳೋಣ. ತಿದ್ದಿಕೊಳ್ಳೋಣ ಆಗ ಮಾತ್ರ ನಾವೆಲ್ಲ ಲಿಂಗಾಯತರಾಗುತ್ತೇವೆ. ಬಸವಣ್ಣನವರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕ ಅಂತಾಗುತ್ತದೆ. ಇಲ್ಲದೆ ಹೋದರೆ ನಾವುಗಳೆಲ್ಲ ನಮ್ಮ ಮನಸ್ಸಿನಲ್ಲಿ ಕತ್ತಲೆಯ ಗಬ್ಬುನಾತವನ್ನು ಇಟ್ಟುಕೊಂಡು ಮೇಲೆ ಮಾತ್ರ ಎಲ್ಲರಿಗೂ ಕಾಣುವಂತೆ ಹೆಂಡದ ಮಡಕೆಯನ್ನು ಹೊರಗೆ ತೊಳೆದು ವಿಭೂತಿ ಹಚ್ಚಿದಂತೆ ಆಗುತ್ತದೆ , ಅಲ್ಲವೆ

ಪರಿವಿಡಿ (index)
*
Previousಲಿಂಗಾಯತ ಧರ್ಮ ಗುರುಜಗನ್ಮಾತಾ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ ಧಾರವಾಡ Next
*