21ನೇ ಶತಮಾನಕ್ಕೆ ಬಸವಧರ್ಮ (ಲಿಂಗಾಯತ ಧರ್ಮ)

*

-- ಲೇ: ರಂಜಾನ್ ದರ್ಗಾ

ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದಗಳು ೨೧ನೇ ಶತಮಾನಕ್ಕೆ ಭಾರಿ ದೊಡ್ಡ ಸವಾಲುಗಳಾಗಿ ನಿಂತಿವೆ. ಈ ಭೇದಗಳಲ್ಲದೆ ಭಯೋತ್ಪಾದನೆ, ಜನಾಂಗಹತ್ಯೆ, ಯುದ್ಧ, ನಿರುದ್ಯೋಗ, ಆರ್ಥಿಕ ಹಿಂಜರಿತ, ಕೊಲೆ, ಸುಲಿಗೆ, ಅತ್ಯಾಚಾರ, ಹಸಿವು, ಬಡತನ, ಮಾನಸಿಕ ಒತ್ತಡ ಮತ್ತು ಪರಿಸರ ಸಮಸ್ಯೆಗಳು ಇಡೀ ವಿಶ್ವವನ್ನು ಕಾಡುತ್ತಿವೆ. ಜನಾಂಗಗಳ ಮತ್ತು ದೇಶಗಳ ಮಧ್ಯೆ ಅಪನಂಬಿಕೆ ಹೆಚ್ಚುತ್ತಿದೆ. ಮಾನವೀಯತೆ, ಜೀವಕಾರುಣ್ಯ ಮತ್ತು ಎಲ್ಲ ಜನಾಂಗಗಳ ಬಗೆಗಿನ ಪ್ರೇಮಭಾವ ಕಡಿಮೆಯಾಗುತ್ತ ದ್ವೇಷ ಬೆಳೆಯುತ್ತಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ವಿಶ್ವಮಾನ್ಯವಾದ ಬಸವಣ್ಣನವರ ಚಿಂತನೆಗಳು, ಜಗತ್ತನ್ನು ಎಲ್ಲ ಅನಿಷ್ಟಗಳಿಂದ ಮುಕ್ತಗೊಳಿಸುವ ಶಕ್ತಿಯನ್ನು ಹೊಂದಿವೆ.

ಭೌತಿಕ ಜಗತ್ತಿನ ಕಾಳಜಿಯೊಂದಿಗೆ ಆಧ್ಯಾತ್ಮಿಕ ಜಗತ್ತಿನ ಕಡೆಗೆ ಸಾಗುವುದು. ಭೌತಿಕ ಜಗತ್ತಿನ ಅನುಭವದ ಮೂಲಕ ಆಧ್ಯಾತ್ಮಿಕ ಜಗತ್ತಿನ ಅನುಭಾವ ಪಡೆಯುವುದು. ಸಂಸಾರದಲ್ಲಿ ಇದ್ದುಕೊಂಡೇ ಸದ್ಗತಿಯನ್ನು ಹೊಂದುವುದು. ಸಮಾಜಸೇವೆಯ ಮೂಲಕ ದೇವರಲ್ಲಿ ನಿಷ್ಠೆಯನ್ನು ಹೊಂದುವುದು. ಎಲ್ಲ ಧರ್ಮಗಳ ಜನರ ಬಗ್ಗೆ ಮತ್ತು ಎಲ್ಲ ಪಶು ಪಕ್ಷಿ ಮುಂತಾದ ಜೀವಿಗಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸುವುದು. ಪರಿಸರ ಸಮತೋಲನವನ್ನು ಕಾಪಾಡುವುದು. ದೇಶ, ಭಾಷೆ, ಜಾತಿ, ಧರ್ಮ ಮತ್ತು ಜನಾಂಗಗಳ ಮಧ್ಯೆ ಮಾನವೀಯ ಸಂಬಂಧಗಳನ್ನು ಬೆಳೆಸುವುದು. "ಒಬ್ಬನೇ ದೇವರು, ಒಂದೇ ವಿಶ್ವ ಮತ್ತು ಒಂದೇ ಮಾನವ ಜನಾಂಗ" ಎಂಬ ಸತ್ಯವನ್ನು ಸಾರುವುದು ಲಿಂಗವಂತ ಧರ್ಮ ಎಂಬ ಬಸವಧರ್ಮದ ಗುರಿಯಾಗಿದೆ.

ಬಸವಣ್ಣನವರು ೧೨ನೇ ಶತಮಾನದಲ್ಲೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದರು. ಸಮಾಜೋಧಾರ್ಮಿಕ ಸಂಸತ್ತು ಎಂದು ಕರೆಯಿಸಿಕೊಳ್ಳುವ ಅನುಭವ ಮಂಟಪವನ್ನು ಸ್ಥಾಪಿಸಿದರು. ಈ ಅನುಭವ ಮಂಟಪದಲ್ಲಿ ಎಲ್ಲ ಕಾಯಕ ಜೀವಿಗಳ ೭೭೦ ಪ್ರತಿನಿಧಿಗಳಿದ್ದರು. ಕಸಗುಡಿಸುವವರ, ತೊಗಲು ಹದ ಮಾಡುವವರ, ಪಾದರಕ್ಷೆಗಳನ್ನು ಹೊಲಿಯುವವರ, ದೋಣಿ ನಡೆಸುವವರ, ಬಟ್ಟೆ ಒಗೆಯುವವರ, ಹುಲ್ಲು ಮಾರುವವರ, ರೈತರ, ನೇಕಾರರ, ಕ್ಷೌರಿಕರ, ಬಡಗಿಗಳ, ವೈದ್ಯರ, ದನ ಕಾಯುವವರ, ಕಟ್ಟಿಗೆ ಮಾರುವವರ, ಕಮ್ಮಾರರ, ಕುಂಬಾರರ, ಅಕ್ಕಸಾಲಿಗರ, ಕುರುಬರ, ಬುಟ್ಟಿ ಹೆಣೆಯುವವರ, ವಾದ್ಯಗಳನ್ನು ನುಡಿಸುವವರ, ಬೀದಿನಾಟಕ ಮಾಡುವವರ, ಸಮಾಜದ ಕಟ್ಟಕಡೆಯಲ್ಲಿದ್ದು ಕಡುಬಡತನದಲ್ಲಿ ಜೀವನ ಸಾಗಿಸುವ ದಲಿತರ... ಹೀಗೆ ಹಲವು ಹದಿನೆಂಟು ರೀತಿಯ ಕಾಯಕ ಮಾಡುವವರ ಪ್ರತಿನಿಧಿಗಳಿಂದ ಅನುಭವ ಮಂಟಪ ಕಂಗೊಳಿಸುತ್ತಿತ್ತು. ಈ ಅನುಭವ ಮಂಟಪದಲ್ಲಿ ಎಲ್ಲ ಮಹಿಳಾ ಮತ್ತು ಪುರುಷ ಪ್ರತಿನಿಧಿಗಳಿಗೆ ಸಮಾನ ಅವಕಾಶವಿತ್ತು. ಎಲ್ಲರಿಗೂ ಮಾತನಾಡುವ ಹಕ್ಕಿತ್ತು. ೧೨ನೇ ಶತಮಾನಕ್ಕೆ ಮೊದಲು ಇಂಥ ಒಂದು ಪ್ರಜಾಪ್ರಭುತ್ವದ ಬೃಹತ್ ಪ್ರಯೋಗ ಜಗತ್ತಿನ ಯಾವ ಮೂಲೆಯಲ್ಲೂ ನಡೆದಿಲ್ಲ ಎಂಬುದು ಗಮನಾರ್ಹವಾಗಿದೆ.

೧೨ನೇ ಶತಮಾನದಲ್ಲಿ ಕೆಳವರ್ಗದ ಜನರಿಗೆ ಮತ್ತು ಮಹಿಳೆಯರಿಗೆ ಶಿಕ್ಷಣ ಪಡೆಯುವ ಹಕ್ಕು ಇದ್ದಿದ್ದಿಲ್ಲ. ಬಸವಣ್ಣನವರು ಇಂಥ ಅಕ್ಷರ ವಂಚಿತರಿಗೆ ಅಕ್ಷರ ಜ್ಞಾನ ನೀಡಿ, ಅವರು ಕೂಡ ವಚನಗಳನ್ನು ಬರೆದು ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವಂಥ ವಾತಾವರಣವನ್ನು ಸೃಷ್ಟಿಸಿದರು. ಮಹಿಳೆ ಮತ್ತು ಪುರುಷರಿಗಾಗಿ ಈ ರೀತಿಯ ವಯಸ್ಕರ ಶಿಕ್ಷಣ ವ್ಯವಸ್ಥೆ ಜಗತ್ತಿನಲ್ಲಿ ಹಿಂದೆ ಎಲ್ಲಿಯೂ ಇದ್ದಿದ್ದಿಲ್ಲ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆಯಲ್ಲಿನ ಎಲ್ಲ ೩೦ ಅಂಶಗಳೂ ಬಸವಣ್ಣನವರ ವಚನಗಳಲ್ಲಿ ಇವೆ. ಆ ಮೂಲಕ ಆಧುನಿಕ ಮಾನವನ ಆಶಯಗಳನ್ನು ಈಡೇರಿಸುವ ಶಕ್ತಿಯನ್ನು ಹೊಂದಿವೆ. ಬಡವರ ಮತ್ತು ಮಹಿಳೆಯರ ಹಕ್ಕಿಗಾಗಿ ಅಷ್ಟೇ ಅಲ್ಲದೆ ಅನೈತಿಕ ಸಂಬಂಧದಿಂದ ಹುಟ್ಟಿದ ಮಗುವಿನ ಹಕ್ಕಿಗಾಗಿಯೂ ಅವರು ಧ್ವನಿ ಎತ್ತಿದ್ದಾರೆ.

ಬಸವಣ್ಣನವರಿಗೆ ಇಷ್ಟಲಿಂಗಪೂಜೆ ಎಂಬುದು ಮಾನವ ಹಕ್ಕುಗಳ ಪ್ರಜ್ಞೆಯನ್ನು ಹೊಂದುವ ಸಾಧನವಾಗಿದೆ. ಮಾನವ ಏಕತೆಯನ್ನು ಸಾಧಿಸುವ ಕ್ರಮವಾಗಿದೆ.

"ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ,
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?"

ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ೨೧ನೇ ಶತಮಾನದ ಜಗತ್ತು ಕೂಡ ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದಗಳಿಂದ ಮುಕ್ತವಾಗಿಲ್ಲ. ಜಗತ್ತಿನ ಎಲ್ಲ ಜನಾಂಗಗಳ ಮಧ್ಯೆ ಸಾಮರಸ್ಯ ಮೂಡಿಲ್ಲ. ಈ ಎಲ್ಲ ಸಮಸ್ಯೆಗಳಿಂದಾಗಿ ಜಗತ್ತಿನ ಜನರು ಜನಾಂಗದ್ವೇಷ, ಕೊಲೆ, ಸುಲಿಗೆ ಮತ್ತು ಅಪನಂಬಿಕೆಗಳಿಗೆ ಬಲಿಯಾಗುತ್ತಲೇ ಇರುತ್ತಾರೆ. ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಲೇ ಇರುತ್ತಾರೆ. ಇಂಥ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದೇ ಇಷ್ಟಲಿಂಗ ಪೂಜೆಯ ಉದ್ದೇಶವಾಗಿದೆ. ಬರಿ ಲಿಂಗಪೂಜೆ ಮಾಡುತ್ತ ಇಂಥ ಸಮಸ್ಯೆಗಳ ಬಗ್ಗೆ ಗಮನ ಹರಿಸದಿದ್ದರೆ ಮತ್ತು ಅವುಗಳ ನಿವಾರಣೆಗಾಗಿ ಪ್ರಯತ್ನಿಸದಿದ್ದರೆ ಇಷ್ಟಲಿಂಗಪೂಜೆ ಮಾಡುವುದು ವ್ಯರ್ಥ ಎಂಬುದನ್ನು ಬಸವಣ್ಣನವರು ಸ್ಪಷ್ಟಪಡಿಸುತ್ತಾರೆ.

ಸಮರತಿ ಎಂದರೆ ಸತಿ ಮತ್ತು ಪತಿ ಸಮಾನ ಹಕ್ಕು, ಗೌರವ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ಸ್ವಾತಂತ್ರ್ಯವನ್ನು ಹೊಂದಿ, ಲಿಂಗಭೇದವನ್ನು ಅಳಿಸಿ, ಪರಸ್ಪರ ಕಾಳಜಿಯೊಂದಿಗೆ ಎಲ್ಲರೂ ಒಂದಾಗಿ ಬದುಕುವುದು. ಹೀಗೆ ಬಸವಣ್ಣನವರು ಲಿಂಗಭೇದ ನೀತಿಯನ್ನು ವಿರೋಧಿಸುತ್ತಾರೆ.

ಸಮಕಳೆ ಎಂದರೆ ಪ್ರತಿಯೊಬ್ಬ ಮಾನವನಿಗೂ ಸಮನಾದ ತೇಜಸ್ಸು ಇರುವುದು. ಬ್ರಾಹ್ಮಣರಿಗೆ ಬ್ರಹ್ಮತೇಜಸ್ಸು ಮತ್ತು ಕ್ಷತ್ರಿಯರಿಗೆ ಕ್ಷಾತ್ರ ತೇಜಸ್ಸು ಎಂಬುದು ಇರುವುದಿಲ್ಲ. ಕೆಳಜಾತಿಯವರಿಗೆ ಮತ್ತು ಮೇಲ್ಜಾತಿಯವರಿಗೆ ಒಂದೇ ರೀತಿಯ ಮಾನವ ತೇಜಸ್ಸು ಇರುತ್ತದೆ. ಎಲ್ಲ ಮಾನವರು ಸಮಾನರಾಗಿದ್ದಾರೆ. ಜಾತಿ. ಕುಲ ಮತ್ತು ಧರ್ಮಗಳಿಂದ ಯಾರೂ ಮೇಲು ಮತ್ತು ಕೀಳು ಆಗುವುದಿಲ್ಲ. ಹೀಗೆ ಬಸವಣ್ಣನವರು ವರ್ಣಭೇದ ನೀತಿಯನ್ನು ವಿರೋಧಿಸುತ್ತಾರೆ.

ಸಮಸುಖ ಎಂದರೆ ಶ್ರೀಮಂತರು ಮತ್ತು ಬಡವರಿಗೆ ಒಂದೇ ತೆರನಾದ ಬದುಕು ಇರುತ್ತದೆ. ಶ್ರೀಮಂತರಿಗೆ ಒಂದು ರೀತಿಯ ಸುಖ ಮತ್ತು ಬಡವರಿಗೆ ಒಂದು ರೀತಿಯ ಸುಖ ಇರುವುದಿಲ್ಲ. ಎಲ್ಲ ಜೀವಗಳೂ ನೆಮ್ಮದಿಯಿಂದ ಬದುಕಲು ಬಯಸುತ್ತವೆ. ಈ ಭೂಮಿಯ ಮೇಲೆ ಬೇರೆಯವರಿಗೆ ತೊಂದರೆ ಕೊಡದೆ, ದುಡಿದು ಸುಖವಾಗಿ ಬದುಕುವ ಹಕ್ಕನ್ನು ಪ್ರತಿಯೊಬ್ಬರೂ ಪಡೆದಿದ್ದಾರೆ. ಬೇರೆಯವರ ಶೋಷಣೆ ಮಾಡುವ ಹಕ್ಕನ್ನು ಯಾರೂ ಪಡೆದಿಲ್ಲ ಎಂದು ಬಸವಣ್ಣನವರು ವರ್ಗಭೇದ ನೀತಿಯನ್ನು ವಿರೋಧಿಸುತ್ತಾರೆ.

ಎಲ್ಲ ಮಾನವರು ಪ್ರೇಮಭಾವದೊಂದಿಗೆ, ನದಿಯೊಳಗೆ ನದಿ ಬೆರೆತ ಹಾಗೆ ಒಂದಾಗಿ ಬದುಕಬೇಕು. ಯಾರೂ ಹೆಚ್ಚಿನವರಲ್ಲ ಯಾರೂ ಕಡಿಮೆಯಲ್ಲ. ಎಲ್ಲರೂ ಸಮಾನರು. ಆದ್ದರಿಂದ ಎಲ್ಲ ಜಾತಿ, ಜನಾಂಗ ಮತ್ತು ಧರ್ಮದವರು ಸೇರಿ ಒಂದಾಗಿ ಬದುಕಬೇಕು. ಇಂಥ ಪ್ರಜ್ಞೆಯನ್ನು ಮೂಡಿಸುವುದೇ ಇಷ್ಟಲಿಂಗ ಪೂಜೆಯ ಉದ್ದೇಶವಾಗಿದೆ. ಒಂದು ವೇಳೆ ಇಷ್ಟಲಿಂಗ ಪೂಜಕರು ಈ ರೀತಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳದಿದ್ದರೆ ಮಾನವ ಏಕತೆ ಸಾಧಿಸಲಿಕ್ಕಾಗದು. ಆಗ ಇಷ್ಟಲಿಂಗ ಪೂಜೆಯ ಉದ್ದೇಶ ಈಡೇರದು. ಹೀಗೆ ನಿರರ್ಥಕ ಪೂಜೆ ಮಾಡಬೇಕಿಲ್ಲ ಎಂದು ಎಚ್ಚರಿಸುತ್ತಾರೆ.

ಬಸವಣ್ಣನವರ ಆಶಯದಂತೆ ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದಗಳನ್ನು ಅಳಿಸಿಹಾಕಿ, ನದಿಯೊಳಗೆ ನದಿ ಕೂಡುವ ಹಾಗೆ ಎಲ್ಲ ದೇಶಗಳ ಮತ್ತು ಎಲ್ಲ ಧರ್ಮಗಳ ಮಾನವರ ಏಕತೆಯನ್ನು ಸಾಧಿಸಿದಾಗ ಜಗತ್ತಿನಲ್ಲಿ ಶೋಷಣೆ ಎಂಬುದು ಇರುವುದಿಲ್ಲ. ಯುದ್ಧಗಳು ಇರುವುದಿಲ್ಲ. ಜನಾಂಗಹತ್ಯೆ ಇರುವುದಿಲ್ಲ. ಇಂಥ ಒಂದು ವ್ಯವಸ್ಥೆಯ ಕನಸನ್ನು ಬಸವಣ್ಣನವರು ಕಂಡಿದ್ದರು.

ಬಸವಣ್ಣನವರು ಕಲ್ಯಾಣ ರಾಜ್ಯದ ಪ್ರಧಾನಿಯಾಗಿದ್ದ ಅವಧಿಯಲ್ಲಿ ಒಂದು ಯುದ್ಧವೂ ನಡೆಯಲಿಲ್ಲ. "ಕಲ್ಯಾಣದಲ್ಲಿ ಕೊಡುವವರುಂಟು ಬೇಡುವವರಿಲ್ಲ" ಎಂದು ಬಸವಣ್ಣನವರೇ ಹೇಳಿದ್ದಾರೆ. "ಬಸವ ರಾಜ್ಯದ ಸಿರಿಯು, ಬಸವ ಬಡವರ ನಿಧಿಯು" ಎಂದು ಆ ಕಾಲದ ಜನಪದ ಕವಿಯೊಬ್ಬ ಹಾಡಿದ್ದಾನೆ. ಬಸವಣ್ಣನವರು ಪ್ರಧಾನಿಯಾಗಿದ್ದಾಗ ಕಾಯಕಕ್ಕೆ ಬಹಳಷ್ಟು ಮಹತ್ವ ನೀಡಿದರು. ಜನರು ಕಾಯಕದಲ್ಲಿ ತಲ್ಲೀನರಾಗಿ ಯೋಗ್ಯರೀತಿಯಲ್ಲಿ ಉತ್ಪಾದನೆ ಮಾಡಿದರು. ಯಾರಿಗೂ ಬೇಡದೆ ಬದುಕುವ ಸಾಮರ್ಥ್ಯವನ್ನು ಪಡೆದರು. ಜನರೆಲ್ಲ ಚೆನ್ನಾಗಿ ಉತ್ಪಾದನೆಯಲ್ಲಿ ತೊಡಗಿದ್ದರಿಂದ ರಾಜ್ಯದ ಭಂಡಾರವೂ ತುಂಬಿತು. ಹೀಗೆ ಬಸವಣ್ಣನವರು ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಸದ್ಬಳಕೆಯೊಂದಿಗೆ ಸಮಾನತೆಯಿಂದ ಕೂಡಿದ ಸುಂದರ ಸಮಾಜವನ್ನು ನಿರ್ಮಿಸಿದರು. ಇಂಥ ಒಂದು ಸಮಾಜ ಮಧ್ಯ ಯುಗದ ಅದ್ವಿತೀಯ ಸಮಾಜವಾಗಿತ್ತು.

ಜಗಜ್ಜ್ಯೋತಿ ಬಸವಣ್ಣನವರು ಮಹಾನ್ ಮಾನವತಾವಾದಿಗಳಾಗಿದ್ದರು. ಮಹಾನ್ ಆಡಳಿತಗಾರರಾಗಿದ್ದರು. ಮಹಾನ್ ಸಾಮಾಜಿಕ ಮನೋವಿಜ್ಞಾನಿಗಳಾಗಿದ್ದರು. ಮಹಾನ್ ಅರ್ಥಶಾಸ್ತ್ರಜ್ಞರಾಗಿದ್ದರು. ಮಹಾನ್ ಸಾಹಿತಿಗಳಾಗಿದ್ದರು. ಮಹಾನ್ ಭಾಷಾ ಪಂಡಿತರಾಗಿದ್ದರು. ಬದುಕಿನ ಎಲ್ಲ ರಂಗಗಳಲ್ಲಿ ಮಹಾಜ್ಞಾನಿಗಳಾಗಿದ್ದರು. ಮಹಾನ್ ದಾರ್ಶನಿಕರಾಗಿದ್ದರು.

ಅವರಿಗೆ ಇಡೀ ಸಮಾಜ ವ್ಯವಸ್ಥೆಯ ಕಲ್ಪನೆ ಇತ್ತು. ಒಂದು ಹೊಸ ಸಮಾಜ ಹೇಗೆ ಇರಬೇಕು ಎಂಬುದರ ಪ್ರಜ್ಞೆ ಇತ್ತು. ಅವರು ಧರ್ಮ, ಸಮಾಜ, ಸಂಸ್ಕೃತಿ ಮತ್ತು ಅರ್ಥಶಾಸ್ತ್ರವನ್ನು ಬೇರೆಬೇರೆಯಾಗಿ ನೋಡಲಿಲ್ಲ, ಕುಟುಂಬ, ಸಮಾಜ, ದೇಶ ಮತ್ತು ಜಗತ್ತನ್ನು ಬೇರೆಬೇರೆಯಾಗಿ ನೋಡಲಿಲ್ಲ. ಇವೆಲ್ಲವುಗಳ ಮಧ್ಯದ ಘನವಾದ ಸಂಬಂಧವನ್ನು ಗುರುತಿಸಿದರು. ಇವೆಲ್ಲವುಗಳ ಒಟ್ಟು ಅಭಿವೃದ್ಧಿಯಿಂದ ಮಾತ್ರ ಮಾನವರನ್ನು ಎಲ್ಲ ಬಂಧನಗಳಿಂದ ವಿಮೋಚನೆಗೊಳಿಸಬಹುದು ಎಂಬುದನ್ನು ಅವರು ಬಹುಬೇಗ ಕಂಡುಕೊಂಡರು.

ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳ ಯೋಗ್ಯ ಬಳಕೆಯಿಂದ ಜನೋಪಯೋಗಿ ವಸ್ತುಗಳ ಉತ್ಪಾದನೆ ಮಾಡಬೇಕು. ಇದೇ ಕಾಯಕ ತತ್ತ್ವ. ವಸ್ತುಗಳನ್ನು ಹಿತಮಿತವಾಗಿ ಬಳಸುವುದು ಪ್ರಸಾದ ತತ್ತ್ವ. ನಮ್ಮ ಸಂಪತ್ತಿನ ಮೂಲಕ ಸಮಾಜಸೇವೆ ಮಾಡುವುದು ದಾಸೋಹ ತತ್ತ್ವ.

ಹೀಗೆ ಕಾಯಕ, ಪ್ರಸಾದ ಮತ್ತು ದಾಸೋಹ ತತ್ತ್ವಗಳಲ್ಲಿ ನಿಸರ್ಗತತ್ತ್ವ ಅಡಕವಾಗಿದೆ. ಜಗತ್ತಿನಲ್ಲಿ ಎಲ್ಲವೂ ಕಾಯಕ ನಿರತವಾಗಿವೆ. ಪ್ರಸಾದದ ಕ್ರಮವನ್ನು ಅನುಸರಿಸಿ ದಾಸೋಹ ಮಾಡುತ್ತಿವೆ. ನದಿಗಳು ಹರಿಯುವ ಕಾಯಕ ಮಾಡುತ್ತಿವೆ. ದಾಸೋಹ ಭಾವದಿಂದ ಸಮುದ್ರವನ್ನು ಸೇರುತ್ತಿವೆ. ಆ ಮೂಲಕ ಜನರ ನೀರಿನ ಸಮಸ್ಯೆ ಬಗೆಹರಿಸುತ್ತಿವೆ. ಅಲ್ಲದೆ ಭೂಭಾಗಕ್ಕಿಂತಲೂ ದೊಡ್ಡದಾದ ಸಮುದ್ರದ ನೀರು ಹೆಚ್ಚು ಉಪ್ಪಾಗದಂತೆ ನೋಡಿಕೊಳ್ಳುತ್ತ ದಾಸೋಹ ಭಾವದಿಂದ ಸಮುದ್ರ ಜೀವಿಗಳ ಜೀವ ಉಳಿಸುತ್ತಿವೆ. ರೈತರು ದಿನವಿಡೀ ದುಡಿದು ರಾತ್ರಿ ಮನೆಗೆ ಬಂದರೂ ಭೂಮಿಯಲ್ಲಿನ ಎರೆಹುಳುಗಳು ಕಾಯಕ ನಿರತವಾಗಿರುತ್ತವೆ. ಅವು ದಾಸೋಹ ಭಾವದಿಂದ ರೈತರ ಭೂಮಿಯನ್ನು ಹದಗೊಳಿಸುತ್ತಿರುತ್ತವೆ. ಮರಗಳು ನಿಂತಲ್ಲೇ ಕಾಯಕ ನಿರತವಾಗಿ ಜನರಿಗೆ ದಾಸೋಹ ಭಾವದಿಂದ ಫಲಗಳನ್ನು ಕೊಡುತ್ತಿರುತ್ತವೆ. ಜೇನು ನೊಣಗಳು ಹೂವಿನ ಮಕರಂದವನ್ನು ಹೀರುತ್ತವೆ. ಆದರೆ ದಾಸೋಹ ಭಾವದಿಂದ ಪರಾಗಸ್ಪರ್ಶದ ಕಾಯಕದ ಮೂಲಕ ಆ ಹೂವಿನ ಮರ ಮತ್ತು ಬಳ್ಳಿಗಳ ಸಂತತಿಯನ್ನು ಹೆಚ್ಚಿಸುತ್ತಿರುತ್ತವೆ. ಹೀಗೆ ಇಡೀ ಜಗತ್ತೇ ಕಾಯಕ, ಪ್ರಸಾದ ಮತ್ತು ದಾಸೋಹ ತತ್ತ್ವದಿಂದ ಕೂಡಿದೆ.

ಕಾಯಕವೆಂಬುದು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತ, ಬದುಕನ್ನು ಹೆಚ್ಚು ಹೆಚ್ಚು ಸುಂದರಗೊಳಿಸುವ ಉತ್ಪಾದನಾ ಕ್ರಿಯೆ. ನಮ್ಮ ಉತ್ಪಾದನಾ ವ್ಯವಸ್ಥೆ ಜೀವಜಾಲ ಸಮತೋಲನಕ್ಕೆ ಧಕ್ಕೆ ಉಂಟುಮಾಡಬಾರದು. ನಮ್ಮ ನದಿ, ಸಮುದ್ರ, ಅರಣ್ಯ ಮತ್ತಿತರ ನೈಸರ್ಗಿಕ ಸಂಪನ್ಮೂಲಗಳು ವಿನಾಶದ ಅಂಚಿಗೆ ತಲುಪದ ಹಾಗೆ ಎಚ್ಚರಿಕೆ ವಹಿಸಿ ಉತ್ಪಾದನೆಯಲ್ಲಿ ತೊಡಗಬೇಕು. ಸತ್ಯ ಶುದ್ಧವಾದುದನ್ನೇ ಉತ್ಪಾದಿಸಬೇಕು. ಇದು ಕಾಯಕ ಪ್ರಜ್ಞೆ.

ಜಗತ್ತಿನ ಎಲ್ಲ ವಸ್ತುಗಳು ದೇವರ ಕಾಣಿಕೆ. ಇದಕ್ಕೆ ಪ್ರಸಾದ ಎಂದು ಕರೆಯುವರು ಪ್ರತಿಯೊಂದು ಕೂಡ ದೇವರ ಕಾಣಿಕೆಯೆ ಆಗಿದೆ. ಆದ್ದರಿಂದ ಎಲ್ಲ ಸಂಪನ್ಮೂಲಗಳನ್ನು ಪ್ರಸಾದ ರೂಪದಲ್ಲಿ ಬಳಸಬೇಕು. ಯಾವುದನ್ನೂ ಹಾಳು ಮಾಡಬಾರದು. ಒಂದು ಹನಿ ನೀರನ್ನೂ ಹಾಳು ಮಾಡಬಾರದು. ಒಂದು ತುತ್ತು ಅನ್ನವನ್ನೂ ಹಾಳುಮಾಡಬಾರದು. ಅವಶ್ಯಕತೆಗಿಂತ ಹೆಚ್ಚಿಗೆ ಯಾವುದನ್ನೂ ಬಳಸಬಾರದು. ಇದು ಪ್ರಸಾದ ಪ್ರಜ್ಞೆ.

ನಾವು ಉತ್ಪಾದಿಸುವುದು ಮತ್ತು ಗಳಿಸುವುದು. ಕೇವಲ ನಮಗಾಗಿ ಮತ್ತು ನಮ್ಮ ಕುಟುಂಬಕ್ಕಾಗಿ ಅಲ್ಲ. ಅದರಲ್ಲಿ ಸಮಾಜದ ಪಾಲೂ ಇದೆ. ಇಡಿ ಸಮಾಜವನ್ನೇ ದೇವರು ಎಂದು ಭಾವಿಸಿ. ನಾವು ಪಡೆದದ್ದರಲ್ಲಿನ ಹೆಚ್ಚಿನ ಪಾಲನ್ನು ದಾಸೋಹ ಭಾವದಲ್ಲಿ ಸಮಾಜಕ್ಕೆ ಅರ್ಪಿಸಬೇಕು. ಇಂಥ ಸಾಮಾಜಿಕ ಪ್ರಜ್ಞೆಯೊಂದಿಗೆ ಸಮಾಜ ರಕ್ಷಣೆ ಮಾಡಬೇಕು. ಯಾರೂ ನೋವಿಗೆ ಒಳಗಾಗದಂಥ ಮತ್ತು ಯಾರೂ ಹಸಿವಿನಿಂದ ಬಳಲದಂಥ ಸಮಾಜವನ್ನು ನಿರ್ಮಾಣ ಮಾಡಬೇಕು. ಇದು ದಾಸೋಹ ಪ್ರಜ್ಞೆ.

ಹೀಗೆ ಸಾಮಾಜಿಕ ಪ್ರಜ್ಞೆಯ ಬಸವಧರ್ಮದಲ್ಲಿ ವ್ಯಕ್ತಿಗತ ಮೋಕ್ಷ ಎಂಬುದು ಇಲ್ಲ. ಶೋಷಣೆ ಇಲ್ಲದ ಸುಸಂಸ್ಕೃತ ಸಮಾಜದ ನಿರ್ಮಾಣದಲ್ಲಿ ತೊಡಗುವ ಆನಂದವೇ ಮೋಕ್ಷದ ಆನಂದ. ಹೀಗೆ ಬಸವಧರ್ಮದಲ್ಲಿ ಮೋಕ್ಷ ಎಂಬುದು ಮಾನವನ ಜೀವಿತಾವಧಿಯಲ್ಲೇ ಲಭಿಸುವಂಥದ್ದು. ಇಲ್ಲಿ ಮೋಕ್ಷ ಎಂಬುದು ಅತ್ಯುನ್ನತ ಆನಂದದ ಮನಸ್ಥಿತಿ.

ಬಸವಧರ್ಮದ ಮೂಲ ತತ್ತ್ವಗಳಾದ ಕಾಯಕ, ಪ್ರಸಾದ ಮತ್ತು ದಾಸೋಹ ತತ್ತ್ವಗಳು ಸಾಮಾಜಿಕ ಅರ್ಥಶಾಸ್ತ್ರದ ತತ್ತ್ವಗಳಾಗಿವೆ. ಆದ್ದರಿಂದಲೇ ಕಾಯಕ ಪ್ರಜ್ಞೆ ಯೋಗ್ಯ ಉತ್ಪಾದನಾ ವ್ಯವಸ್ಥೆಯನ್ನು ರೂಪಿಸುವುದು. ಪ್ರಸಾದ ಪ್ರಜ್ಞೆ ಯೋಗ್ಯರೀತಿಯಲ್ಲಿ ವಸ್ತುಗಳನ್ನು ಉಪಯೋಗಿಸುವ ವ್ಯವಸ್ಥೆಯನ್ನು ರೂಪಿಸುವುದು. ದಾಸೋಹ ಪ್ರಜ್ಞೆ ಯೋಗ್ಯರೀತಿಯಲ್ಲಿ ವಸ್ತುಗಳ ವಿತರಣೆಯ ವ್ಯವಸ್ಥೆಯನ್ನು ರೂಪಿಸುವುದು.

ಇಂಥ ವ್ಯವಸ್ಥಿತ ಸಮಾಜದಲ್ಲಿ. ಯಾವುದೇ ರೀತಿಯ ಭೇದಭಾವಗಳು ಇರುವುದಿಲ್ಲ. ಕ್ರೌರ್ಯ ಇರುವುದಿಲ್ಲ. ಎಲ್ಲರೂ ಘನತೆಯಿಂದ ಮತ್ತು ಸೇವಾಭಾವದಿಂದ ಬದುಕುವರು. ಪ್ರತಿಯೊಬ್ಬರು ಚೆನ್ನಾಗಿ ಬದುಕುವಂಥ ವಾತಾವರಣ ಸೃಷ್ಟಿಸುವರು.

ಬಸವಣ್ಣನವರ ಕನಸು ೨೧ನೇ ಶತಮಾನದಲ್ಲಿ ನನಸಾದರೆ. ಈ ಜಗತ್ತು ಎಲ್ಲರೀತಿಯ ಸಮಸ್ಯೆಗಳಿಂದ ಮುಕ್ತವಾಗಿ ಇಡೀ ಮಾನವಕುಲ ಒಂದಾಗುವುದು.

ಪರಿವಿಡಿ (index)
*
Previousಮಹಾಜಗದ್ಗುರು ಲಿಂಗಾನಂದ ಸ್ವಾಮಿಗಳು.ಲಿಂಗಾಯತರು ಹಿಂದೂಗಳಲ್ಲ -ಡಾ.ಎನ್.ಜಿ.ಮಹಾದೇವಪ್ಪNext
*