ವಚನೋಕ್ತ ಲಿಂಗಾಯತ ಮತ್ತು ಆಗಮೋಕ್ತ ವೀರಶೈವ

*

- ಡಾ.ಎನ್.ಜಿ.ಮಹಾದೇವಪ್ಪ,

ವೀರಶೈವ ಧರ್ಮವು ವೇದ ಮತ್ತು ಉಪನಿಷತ್ತುಗಳಿಗೆ ಅನುಗುಣವಾಗಿರುವುದರಿಂದ, ಅದು ಹಿಂದೂ ಧರ್ಮದ ಶಾಖೆ ಎಂದು ಅನೇಕರು ನಂಬಿರುವರಲ್ಲದೆ, ಅದನ್ನು ಸಿದ್ಧಪಡಿಸಲು ಅನೇಕ ಗ್ರಂಥಗಳನ್ನೂ ಬರೆದಿದ್ದಾರೆ (ಉದಾ: ಸಿದ್ಧಾಂತಶಿಖಾಮಣಿ, ಲಿಂಗಧಾರಣ ಚಂದ್ರಿಕಾ, ಶ್ರೀಕರ ಭಾಷ್ಯ, ಇತ್ಯಾದಿ). ಮತ್ತೆ ಕೆಲವರು ಕಾಶ್ಮೀರ ಶೈವ, ತಮಿಳು ಶೈವ (ಶೈವ ಸಿದ್ಧಾಂತ), ಮುಂತಾದ ಶೈವ ಧರ್ಮದ ಶಾಖೆಗಳಿಗೆ ಮೂಲ ಪ್ರಮಾಣ ಗ್ರಂಥಗಳಾದ ಆಗಮಗಳು ವೀರಶೈವಕ್ಕೂ ಪ್ರಮಾಣ ಗ್ರಂಥಗಳು ಎಂದು ವಾದಿಸುತ್ತಾರೆ. ಇದರ ಜೊತೆಗೆ, ಕೆಲವರು ವಚನೋಕ್ತ ಲಿಂಗಾಯತ ಧರ್ಮಕ್ಕೂ ಆಗಮೋಕ್ತ ವೀರಶೈವ ಧರ್ಮಕ್ಕೂ ಏನೂ ವ್ಯತ್ಯಾಸವಿಲ್ಲವೆಂದು ವಾದಿಸುತ್ತಾರೆ. ಅಂದರೆ, ವಚನೋಕ್ತ ಲಿಂಗಾಯತವು ಹೊಸತೇನಲ್ಲ, ಅದರ ಸಿದ್ಧಾಂತಗಳೆಲ್ಲ ವೇದೋಪನಿಷತ್ತುಗಳಲ್ಲಿಯೂ ಆಗಮಗಳಲ್ಲಿಯೂ ಆಗಲೆ ಪ್ರಣೀತವಾಗಿವೆ, ಎಂಬುದೇ ಅವರ ವಾದದ ತಿರುಳು. ಆದರೆ ಅವರ ಈ ವಾದವು ಸುಳ್ಳು ಮತ್ತು ನಿರಾಧಾರಿತ. ವಚನಗಳ ಲಿಂಗಾಯತವೇ ಬೇರೆ, ಆಗಮಗಳ ವೀರಶೈವವೇ ಬೇರೆ. ಅಷ್ಟೇ ಅಲ್ಲ, ವಚನಗಳಲ್ಲಿ ಲಿಂಗಾಯತವಿದೆ, ವೀರಶೈವವಿಲ್ಲ, ಆಗಮಗಳಲ್ಲಿ ವೀರಶೈವವಿದೆ, ಲಿಂಗಾಯತವಿಲ್ಲ. ಇದನ್ನು ತೋರಿಸಲು ಅವರ ವಾದಗಳನ್ನು ನಾವು ಸ್ಥೂಲವಾಗಿಯಾದರೂ ಪರಿಶೀಲಿಸಬೇಕಾಗುತ್ತದೆ.

ವಿಶ್ವದ ಎಲ್ಲ ಪ್ರಮುಖ ಧರ್ಮಗಳಿಗೂ ತಮ್ಮವೆ ಆದ ಮೂಲ ಧರ್ಮ ಗ್ರಂಥಗಳಿವೆ ಎಂಬುದು ಸರ್ವವಿದಿತ. ಕ್ರಿಶ್ಚಿಯನ್ನರಿಗೆ ಬೈಬಲ್, ಮುಸ್ಲಿಮರಿಗೆ ಕೊರಾನ್, ಶಿಖ್ಖರಿಗೆ ಗ್ರಂಥ ಸಾಹೇಬ್, ಬೌದ್ಧರಿಗೆ ತ್ರಿಪಿಟಕ, ಫಾರ್ಸಿಗಳಿಗೆ ಜೆಂಡ್ ಅವೆಸ್ಥಾ, ಇರುವಂತೆ ಹಿಂದೂಗಳಿಗೆ ವೇದಗಳೆ ಮೂಲಗ್ರಂಥಗಳು. ಅಲ್ಲಾ ಅಥವಾ ಸ್ವರ್ಗದಲ್ಲಿನ ನಂಬಿಕೆಗೆ ಕೊರಾನೇ ಪ್ರಮಾಣ (ಆಧಾರ); ಯೇಸು ಪರಮಾತ್ಮನ ಒಬ್ಬನೇ ಮಗ ಎಂಬ ಕ್ರೈಸ್ತರ ನಂಬಿಕೆಗೆ ಅವರ ಬೈಬಲ್ಲೇ ಪ್ರಮಾಣ; ಬೌದ್ಧರ ಕ್ಷಣಿಕವಾದಕ್ಕೆ ಮತ್ತು ನಿರ್ಮಾಣ ಸಿದ್ಧಾಂತಕ್ಕೆ ಅವರ ತ್ರಿಪಿಟಕ ಪ್ರಮಾಣ. ಅದೇ ರೀತಿ ಒಂದು ವೈದಿಕ ಕರ್ಮಗಳಿಗೆ, ಮೋಕ್ಷ ಸಿದ್ಧಾಂತಕ್ಕೆ ವೇದಗಳೇ ಪ್ರಮಾಣ. ಹಿಂದೂ ಧರ್ಮದ ಶೈವ, ವೈಷ್ಣವ, ಮುಂತಾದ ಎಲ್ಲ ಪಂಥಗಳೂ ವೇದಪ್ರಾಮಾಣ್ಯವನ್ನು ಒಪ್ಪಿಕೊಳ್ಳುತ್ತವೆ.

ವಚನೋಕ್ತ ಲಿಂಗಾಯತವು ವೇದಗಳನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದೆ.

ಉದಾಹರಣೆಗೆ:

1. ನಾದದ ಬಲದಿಂದ ವೇದಂಗಳಾದುವಲ್ಲದೆ, ವೇದ ಸ್ವಯಂಭುವಲ್ಲ, ನಿಲ್ಲು.
ಮಾತಿನ ಬಲದಿಂದ ಶಾಸ್ತ್ರಂಗಳಾದುವಲ್ಲದೆ, ಶಾಸ್ತ್ರ ಸ್ವಯಂಭುವಲ್ಲ, ನಿಲ್ಲು [2]
2. ವೇದ ವೇಧಿಸಲರಿಯದೆ ಕೆಟ್ಟವು . . .[3]

3. ವೇದಂಗಳು ನಿಮ್ಮ ಭೇದಿಸಲರಿಯವು ನೋಡಾ . . .[4]

4. ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ತಿಗಳನಿಕ್ಕುವೆ, . . .[5]

5. ವೇದವನೋದಿದವರೆಲ್ಲ ನಮ್ಮ ಶರಣರು ಹೋದ
ಹಾದಿಯನರಿಯದೆ ಸೋಹಂ ಎಂದು ಅಹಂಕರಿಸಿ
ಅನಿತ್ಯದೇಹಿಗಳಾಗಿ, ಅನಾಮಿಕರಾಗಿ ಹೋದರು . . .[6]

6. ವೇದ ಶಾಸ್ತ್ರ ಪುರಾಣಾಗಮಂಗಳೆಲ್ಲ ಕೊಟ್ಟಣವ ಕುಟ್ಟುತ್ತ್ತ
ನುಚ್ಚು ತೌಡು ಕಾಣಿ ಭೋ ಇವ ಕುಟ್ಟಲೇಕೋ . . .[7]

ಹೀಗೆ, ಲಿಂಗಾಯತರು ವೇದಗಳನ್ನು ತಿರಸ್ಕಾರ ದೃಷ್ಟಿಯಿಂದ ನೋಡಿದ್ದಾರೆಯೆ ಹೊರತು, ಅದು ತಮ್ಮ ಪವಿತ್ರ ಪ್ರಮಾಣ ಗ್ರಂಥ, ಅದಕ್ಕೆ ಗೌರವ ಮತ್ತು ಭಕ್ತಿ ತೋರಿಸಬೇಕು, ಎಂದು ಹೇಳಿಲ್ಲ.

ಇಲ್ಲಿ, ಲಿಂಗಾಯತರು ವೇದಗಳನ್ನು ಯಾವ ಕಾರಣಕ್ಕಾಗಿ ವಿರೋಧಿಸಿದರು ಎಂಬುದನ್ನು ತಿಳಿದುಕೊಳ್ಳುವುದು ಆವಶ್ಯಕ. ಅವರು ವೇದವಿರೋಧವನ್ನು ಎರಡು ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ:
(ಅ) ವೇದಗಳ ವಿಚಾರ(ಸಿದ್ಧಾಂತ)ಗಳನ್ನು ಒಪ್ಪಿಕೊಳ್ಳದಿರುವುದು ಮತ್ತು
(ಆ) ವೈದಿಕ ಆಚಾರಗಳನ್ನು ವಿರೋಧಿಸಿರುವುದು. ವಾಸ್ತವವಾಗಿ, ಇವೆರಡು ಪರಸ್ಪರ ಸಂಬಂಧವುಳ್ಳ ಕಾರಣಗಳು.

(ಅ) ವೇದಗಳ ವಿಚಾರ(ಸಿದ್ಧಾಂತ)ಗಳನ್ನು ಒಪ್ಪಿಕೊಳ್ಳದಿರುವುದು

ಪ್ರತಿಯೊಂದು ಧರ್ಮಕ್ಕೂ ತನ್ನವೇ ಆದ ಕೆಲವು ತತ್ವಮೀಮಾಂಸೀಯ (metaphysical) ನಂಬಿಕೆಗಳಿರುತ್ತವೆ. ಉದಾ: ದೈವದ ಹೆಸರು, ಗುಣ, ಕಾರ್ಯಗಳಿಗೆ ಸಂಬಂಧಿಸಿದ ನಂಬಿಕೆಗಳು; ಪ್ರಪಂಚವು ಸತ್ಯವೋ ಮಿಥ್ಯೆಯೋ, ಸತ್ಯವಾಗಿದ್ದರೆ, ಅದು ಯಾರಿಂದ, ಯಾವ ರೀತಿ, ಯಾವುದರಿಂದ, ಸೃಷ್ಟಿಸಲ್ಪಟ್ಟಿತು, ಎಂಬುದಕ್ಕೆ ಸಂಬಂಧಿಸಿದ ನಂಬಿಕೆಗಳು; ಜೀವಾತ್ಮ, ಪರಲೋಕ, ಮೋಕ್ಷಗಳಿಗೆ ಸಂಬಂಧಿಸಿದ ನಂಬಿಕೆಗಳು, ಇತ್ಯಾದಿ.

ಮೊದಲು ವೇದಗಳ ಇಂಥ ತತ್ವಮೀಮಾಂಸೀಯ ನಂಬಿಕೆಗಳಾವುವು ಎಂಬುದನ್ನು ನೋಡೋಣ. ಮೊದಲಿಗೆ, ವೇದಗಳು ಬಹುದೇವತಾರಾಧನೆಯನ್ನು ಅನುಮೋದಿಸಿದಂತೆಯೂ ಕೊನೆಯಲ್ಲಿ ಏಕಂ ಸತ್ ವಿಪ್ರಾ ಬಹುಧಾ ವದಂತಿ (= ಸತ್ಯವು ಒಂದೆ, ಜ್ಞಾನಿಗಳು ಅದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ) ಎಂದು ಹೇಳುವ ಮೂಲಕ ಬಹುದೇವತಾವಾದವನ್ನೂ ಏಕೇಶ್ವರವಾದವನ್ನೂ ಹೊಂದಿಸುವ ಪ್ರಯತ್ನ ಮಾಡಿರುವಂತೆಯೂ ಕಾಣುತ್ತದೆ. ಉಪನಿಷತ್ಕಾರರು ಮೊದಮೊದಲು ಯಜ್ಞ ಯಾಗಾದಿಗಳನ್ನು (ಕರ್ಮಕಾಂಡವನ್ನು) ಖಂಡಿಸಿದರೂ ಆಮೇಲೆ ಅವುಗಳ ಪಾರಮ್ಯವನ್ನು ಅಲ್ಲಗಳೆದರೇ ಹೊರತು, ಅವುಗಳು ಅನಗತ್ಯವೆನ್ನಲಿಲ್ಲ.

ಚಾರ್ವಾಕರು ಪುನರ್ಜನ್ಮ, ಕರ್ಮ, ಆತ್ಮ, ಸ್ವರ್ಗ, ನರಕ, ಮುಂತಾದ ವೈದಿಕ ನಂಬಿಕೆಗಳನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಜೈನರು ಆತ್ಮ, ಕರ್ಮ ಮತ್ತು ಪುನರ್ಜನ್ಮ ಮುಂತಾದ ಔಪನಿಷದಿಕ ಸಿದ್ಧಾಂತಗಳನ್ನು ಒಪ್ಪಿಕೊಂಡರೂ, ವೈದಿಕರ ದೇವತೆಗಳನ್ನೂ ಸ್ವರ್ಗವೆಂಬ ಆದರ್ಶವನ್ನೂ ತಿರಸ್ಕರಿಸಿದರು. ಬೌದ್ಧರಿಗೆ ತಮ್ಮದೇ ಆತ್ಮ ಪರಿಕಲ್ಪನೆಯೂ ಕರ್ಮ ಮತ್ತು ಪುನರ್ಜನ್ಮ ಸಿದ್ಧಾಂತವೂ ಇದ್ದುದರಿಂದ ಅವರೂ ಆ ಪರಿಕಲ್ಪನೆಗಳಿಗೆ ಸಂಬಂಧಿಸಿದ ವೈದಿಕ ಸಿದ್ಧಾಂತಗಳನ್ನು ವಿರೋಧಿಸಿದರು. ಆದರೆ, ಮೂವರೂ ವೈದಿಕ ಏಕೇಶ್ವರವಾದವನ್ನೂ ಬಹುದೇವತಾವಾದವನ್ನೂ ನಿರಾಕರಿಸಿದರು. ಹೀಗೆ ಈ ಮೂವರೂ ಈ ನಂಬಿಕೆಗಳನ್ನು ನಿರಾಕರಿಸುವ ಮೂಲಕ ವೇದಪ್ರಾಮಾಣ್ಯವನ್ನೇ ನಿರಾಕರಿಸಿದುದರಿಂದ ಅವರು ನಾಸ್ತಿಕರು ಅಥವಾ ಅವೈದಿಕರು (ಹಿಂದೂಗಳಲ್ಲ) ಎಂದು ತೀರ್ಮನಿಸಲಾಯಿತು.

ಹೀಗೆ ನೋಡಿದಾಗ, ಲಿಂಗಾಯತರೂ ಹಿಂದೂಗಳಲ್ಲ (ಅವೈದಿಕರು) ಎನ್ನಬೇಕಾಗುತ್ತದೆ. ಏಕೆಂದರೆ ಅವರು ಇಬ್ಬರು ಮೂವರೆಂದು ಉಬ್ಬುಬ್ಬಿ ಮಾತಾಡಬೇಡ8, ಜಗಕ್ಕೆ ಒಬ್ಬನೇ ದೇವ ಎಂದು ಹೇಳುವ ಮೂಲಕ ವೇದದ (ಅದರಲ್ಲೂ ಕರ್ಮಕಾಂಡದ) ಜೀವಾಳವಾದ ಬಹುದೇವಾತಾವಾದವನ್ನೆ ತಿರಸ್ಕರಿಸಿದ್ದಾರೆ. ಅದೇ ರೀತಿ, ಅವರು ಪರಲೋಕಗಳಿಗೆ ಸಂಬಂಧಿಸಿದ ನಂಬಿಕೆಗಳನ್ನೂ ತೀವ್ರವಾಗಿ ಖಂಡಿಸಿದ್ದಾರೆ.
ಕೈಲಾಸವೆಂಬುದು ಒಂದು ಬೆಳ್ಳಿಯ ಬೆಟ್ಟ, ಅಲ್ಲಿದ್ದಾತ ರುದ್ರನೊಬ್ಬ. ಆ ಬೆಟ್ಟಕ್ಕೆಯೂ ಆ ರುದ್ರಂಗೆಯೂ ಪ್ರಳಯವುಂಟೆಂಬುದಕ್ಕೆ . . .[9]
ಎಂದರೆ, ಕೈಲಾಸ, ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ, ಕೇಳಿರಯ್ಯಾ, ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳು ಬೆಟ್ಟ . . . ಅಲ್ಲಿರುವ ಚಂದ್ರಶೇಖರನೂ ಬಹು ಎಡ್ಡ . . .[10] ಎಂದು ಸಿದ್ಧರಾಮನೂ . . .
ಕೈಲಾಸವೆಂಬುದೇನೋ ಪೃಥ್ವಿಯ ಮೇಲೊಂದು ಮೊರಡಿ . . ., ಎಂದು ಬಸವಣ್ಣನವರೂ[11] ಹೇಳಿ ಕೈಲಾಸವು ಪರಲೋಕವಲ್ಲ, ಅದೂ ಸಹ ಪ್ರಳಯಕ್ಕೊಳಗಾಗುತ್ತದೆ, ಎಂಬ ಸಮರ್ಥನೆ ನೀಡಿ ದೇವಲೋಕ ಕಲ್ಪನೆಯನ್ನೂ ತಿರಸ್ಕರಿಸುತ್ತಾರೆ.

(ಆ) ವೈದಿಕ ಆಚಾರಗಳನ್ನು ವಿರೋಧಿಸಿರುವುದು.

ಲಿಂಗಾಯತರಿಗೆ ವೇದೋಕ್ತ ಕರ್ಮಗಳನ್ನು ಖಂಡಿಸುವುದು ವೇದೋಕ್ತ ಸಿದ್ಧಾಂತಗಳನ್ನು ಖಂಡಿಸುವಷ್ಟೇ ಮುಖ್ಯವಾಗಿತ್ತು. ಈ ಖಂಡನೆಗೆ ಒಳಗಾದ ಮುಖ್ಯವಾದ ಎರಡು ರೀತಿಯ ಕರ್ಮಗಳೆಂದರೆ, ಹವಿಸ್ಸು, ಇತ್ಯಾದಿಗಳನ್ನು ಯಜ್ಞಕುಂಡಗಳಲ್ಲಿ ಸುರಿಯುವುದು ಮತ್ತು ಪ್ರಾಣಿಬಲಿ. ಯಜ್ಞಯಾಗಾದಿಗಳನ್ನು ಮಾಡುವವರು ಬಹುದೇವತಾವಾದವನ್ನು ಒಪ್ಪಿಕೊಂಡಿದ್ದಾರೆಂದರ್ಥ. ಯಜ್ಞಯಾಗಾದಿಗಳಲ್ಲಿ ಪ್ರಾಣಿಬಲಿ ಕೊಡುವುದು ಆವಶ್ಯಕವೆಂದಾದರೆ, ಪ್ರಾಣಹಾನಿ ಧರ್ಮದ ಅಂಗವೆಂದಾಗುತ್ತದೆ. ಆದರೆ ಲಿಂಗಾಯತ ಧರ್ಮವು ಜೈನರಂತೆ ಪ್ರಾಣಿಬಲಿಯನ್ನು ತೀವ್ರವಾಗಿ ಖಂಡಿಸುತ್ತದೆ. ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು ಎಲೆ ಹೋತೇ, ಅಳು ಕಂಡಾ![12] ಎಂದು ಬಸವಣ್ಣ ವ್ಯಂಗ್ಯವಾಗಿ ಹೇಳುವಾಗ, ಇರಿವುದು ಕಡಿವುದು, ಕೊಲುವುದು ಮಲದೇಹಿಗಳಿಗಲ್ಲದೆ ನಿರ್ಮಲದೇಹಿಗಳಿಗುಂಟೆ?[13] ಎಂದು ಘಟ್ಟಿವಾಳಯ್ಯ ಕೇಳುವಾಗ, ನಿಂದು ನೋಡಲು ಜಗಭರಿತವಾಗಿಪ್ಪೆ, ಇನ್ನು ನೋಯಿಸುವೆನಾರಯ್ಯಾ?[14] ಎಂದು ದೇವರ ದಾಸಿಮಯ್ಯ ಹೇಳುವಾಗ, ಪ್ರತಿಯೊಂದು ಜೀವಿಯೂ ಪರಶಿವನ ರೂಪಾಂತರವೆಂದು ನಂಬಿದವರು ಪ್ರಾಣಿಬಲಿ ಕೊಡಲು - ಅಷ್ಟೇ ಏಕೆ, ಯಾವ ಪ್ರಾಣಿಯನ್ನಾದರೂ ನೋಯಿಸಲು - ಹೇಗೆ ಸಾಧ್ಯ? ಎಂಬ ಭಾವ ಪ್ರತಿಧ್ವನಿಸುತ್ತದೆ. ಲಿಂಗಾಯತ ಧರ್ಮದ ನೀತಿ ಸಂಹಿತೆಯ ರಚನಾಕಾರನೆಂದು ಪ್ರಸಿದ್ಧನಾಗಿರುವ ಚೆನ್ನಬಸವಣ್ಣ ಪ್ರತಿಯೊಬ್ಬ ಲಿಂಗಾಯತ ಪಾಲಿಸಲೇಬೇಕಾದ ಐವತ್ತು ಆಚಾರ(ನಿಯಮ)ಗಳನ್ನು ಪಟ್ಟಿಮಾಡಿದ್ದು ಪ್ರಾಣಹಿಂಸೆಯ ಮಾಡದಿಹುದೇ ಐದನೆಯ ಆಚಾರ ಎನ್ನುತ್ತಾನೆ15. ಬಸವಣ್ಣ ದಯವಿಲ್ಲದ ಧರ್ಮವದೇವುದಯ್ಯ16, ಎನ್ನುವಾಗಲೂ ದಯೆಯು ಧರ್ಮದ ಒಂದು ಅವಿಭಾಜ್ಯ ಅಂಗವೆಂಬುದನ್ನು ಒತ್ತಿ ಹೇಳುತ್ತಿದ್ದಾರೆಂಬುದು ಸ್ಪಷ್ಟವಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ, ಪ್ರಾಣಿಹಿಂಸೆಯನ್ನು ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡ ಹಿಂದೂ ಧರ್ಮವು (ವೈದಿಕ ಧರ್ಮವು) ಪ್ರಾಣಿಹಿಂಸೆಯು ಮುಖ್ಯವಾದ ಧರ್ಮವಿರೋಧಿಕ್ರಿಯೆಗಳಲ್ಲೊಂದು ಎಂದು ಹೇಳುವ ಲಿಂಗಾಯತ ಧರ್ಮಕ್ಕೆ ವಿರುದ್ಧವಾಗಿದೆ.

ಇ) ಅದೇ ರೀತಿ, ಮರಣೋತ್ತರ ಸ್ವರ್ಗಪ್ರಾಪ್ತಿ, ಐಹಿಕ ವಿಷಯಸುಖವೇ ಧಾರ್ಮಿಕ ಜೀವನದ ಗುರಿ, ಎಂಬ ವೈದಿಕ ಸಿದ್ಧಾಂತವನ್ನೂ ಲಿಂಗಾಯತರು (ಉಪನಿಷತ್ಕಾರರಂತೆ) ತಿರಸ್ಕರಿಸಿದರು.

ಧರ್ಮಭೀರುಗಳು ತಂತಮ್ಮ ಧರ್ಮದ ಪ್ರಮಾಣ ಗ್ರಂಥಗಳನ್ನು ಪವಿತ್ರವೆಂದು ಪರಿಗಣಿಸುವುದು ಸರ್ವವಿದಿತ. ಅನೇಕ ವೇಳೆ ನಾವು ಇತರರ ಧರ್ಮಗ್ರಂಥಗಳನ್ನು ಅವಹೇಳನ ಮಾಡುವುದು ಅಕ್ಷಮ್ಯ ಅಪರಾಧ ಎನಿಸದಿದ್ದರೂ ಪವಿತ್ರವೆಂದು ಪರಿಗಣಿಸಲಾದ ನಮ್ಮ ಧರ್ಮಗ್ರಂಥವನ್ನೇ ಹೀಯಾಳಿಸುವುದು ಮತ್ತು ಅದು ಬೋಧಿಸುವ ತತ್ವಗಳನ್ನು ಖಂಡಿಸುವುದು ಮಾತ್ರ ಖಂಡಿತ ಅಕ್ಷಮ್ಯ ಅಪರಾಧ. ನಮ್ಮ ಪವಿತ್ರ ಗ್ರಂಥಗಳ ತತ್ತ್ವಗಳಿಗೆ ವಿರೋಧ ತೋರಿಸುವುದೂ ಒಂದೇ, ನಮ್ಮ ಧರ್ಮದ ವಿಚಾರಗಳನ್ನೂ ಆಚಾರಗಳನ್ನೂ ತಿರಸ್ಕರಿಸಿ ನಾವು ಪರೋಕ್ಷವಾಗಿ 'ಅನ್ಯಮತೀಯ'ರಾಗಿದ್ದೇವೆನ್ನುವುದೂ ಒಂದೇ. ಅನ್ಯ ಮತೀಯರು ನಮ್ಮ ಧರ್ಮದ ತತ್ತ್ವಗಳನ್ನು ಖಂಡಿಸುವುದಕ್ಕಿಂತ ನಮ್ಮ ಧರ್ಮದಲ್ಲಿದ್ದುಕೊಂಡೇ ನಾವು ಅವುಗಳನ್ನು ವಿರೋಧಿಸುವುದು ಅಥವಾ ಖಂಡಿಸುವುದು ಬಹಳ ಅಪಾಯಕಾರಿಯಾದ ಔದ್ಧಟ್ಯ. ನಮ್ಮ ಧರ್ಮದ ವಿರುದ್ಧ ಮಾತಾಡುವುದೆಂದರೆ ನಮ್ಮ ಗ್ರಂಥಕ್ಕೆ, ನಮ್ಮ ದೇವರಿಗೆ ಉದ್ದೇಶಪೂರ್ವಕವಾಗಿ, ಎಲ್ಲರೆದುರಿಗೆ, ಅವಮಾನ ಮಾಡಿದಂತೆ; ನಮ್ಮ ಧರ್ಮದ ತತ್ತ್ವಗಳನ್ನು ಹೀಯಾಳಿಸುವುದೆಂದರೆ, ನಮ್ಮ ಧರ್ಮದ ಬೇರನ್ನೇ ಅಲುಗಾಡಿಸಿದಂತೆ. ಇಂಥ ಔದ್ಧಟ್ಯವನ್ನು ಸಹಿಸದವರು ಧರ್ಮಗ್ರಂಥ ನಿಂದಕರಿಗೆ, ಧರ್ಮ ತತ್ತ್ವಗಳ ವಿರೋಧಿಗಳಿಗೆ ಬಹಿಷ್ಕಾರ ಹಾಕುತ್ತಾರೆ. ಹೀಗೆ ವೇದನಿಂದಕರಾದ ಚಾರ್ವಾಕ, ಜೈನ ಮತ್ತು ಬೌದ್ಧರು ನಾಸ್ತಿಕ ಅಥವಾ ಪಾಖಂಡಿ ಎಂಬ ಪಟ್ಟಿಹಚ್ಚಿಸಿಕೊಂಡು ವೈದಿಕ (ಹಿಂದೂ) ಧರ್ಮದಿಂದ ಹೊರಗುಳಿಯಬೇಕಾಯಿತು. ಬೈಬಲ್ ಗ್ರಂಥದ ತತ್ವಗಳನ್ನು ಖಂಡಿಸಿದ ಯೂರೋಪಿನ ವಿಜ್ಞಾನಿಗಳಿಗೆ ತೀವ್ರತರ ಶಿಕ್ಷೆಯನ್ನು ವಿಧಿಸಲಾಯಿತು. ಬೈಬಲ್ಲಿನ ಭೂಕೇಂದ್ರವಾದಕ್ಕೆ ವಿರುದ್ಧವಾಗಿ ಸೂರ್ಯಕೇಂದ್ರ-ವಾದವನ್ನು ಬೋಧಿಸಿದ ಗೆಲಿಲಿಯೋನನ್ನು ಸಾರ್ವಜನಿಕವಾಗಿ ಅವಮಾನಗೊಳಿಸಲಾಯಿತಲ್ಲದೆ ತನ್ನ ಅಭಿಪ್ರಾಯವು ತಪ್ಪೆಂದು ಘೋಷಿಸಬೇಕೆಂದೂ, ಅದನ್ನು ಬೈಬಲ್ಲಿಗನುಗುಣವಾಗಿ ಬದಲಾಯಿಸಿಕೊಳ್ಳಬೇಕೆಂದೂ ಒತ್ತಾಯಿಸಲಾಯಿತು. ಆದರೆ, ಇದೇ ಬೋಧನೆಯನ್ನು ಎತ್ತಿ ಹಿಡಿದ ಅವನ ಗೆಳೆಯ ಗಿಯಾರ್ಡಿನೋ ಬ್ರೂನೋ ಎಂಬ ವಿಜ್ಞಾನಿಯನ್ನು ಮಾತ್ರ ಜೀವಂತ ಸುಡಲಾಯಿತು.

ಕೊರಾನಿನ ತತ್ವಗಳನ್ನು ವಿರೋಧಿಸುವುದು ಅಥವಾ ಅವನ್ನು ಸಂದೇಹಿಸುವುದು ಒಂದು ಘೋರ ಅಪರಾಧ. ಪರ್ಶಿಯಾದ ಮುಸ್ಲಿಂ ಸಂತನೊಬ್ಬ ತನ್ನ ಸಮಾಧಿಸ್ಥಿತಿಯಲ್ಲಿ ತಾನು ದೈವದ ಮಟ್ಟಕ್ಕೇರಿದೆನೆಂದು ಕೊರಾನ್ ವಿರುದ್ಧದ ತತ್ತ್ವವನ್ನು ಸಾರಿದುದಕ್ಕಾಗಿ ಅವನ ಶಿರಚ್ಛೇದನ ಮಾಡಲಾಯಿತು. ಕೊರಾನಿನ ಶ್ಲೋಕಗಳು ಶನಿಯ ಪದ್ಯಗಳೆಂದು ಹೀಯಾಳಿಸಿದ ಮುಸ್ಲಿಂ ಕಾದಂಬರಿಕಾರ ಸಲ್ಮಾನ್ ರಷ್ದಿ ಮೇಲೆ ಇರಾನಿನ ಧರ್ಮಾಧಿಕಾರಿ ಫತ್ವಾ (ಮರಣ ದಂಡನೆ) ಘೋಷಿಸಿದ್ದಾನೆ.

ಒಂದು ವೇಳೆ ಲಿಂಗಾಯತರು ಹಿಂದೂಗಳೆ ಆಗಿದ್ದರೆ ಅವರು ವೇದಗಳನ್ನು ಪವಿತ್ರವೆಂದು ಪರಿಗಣಿಸುವುದರ ಬದಲು ಹೀಗೆ ಕಟುವಾದ ಮಾತುಗಳಲ್ಲಿ ನಿಂದಿಸುತ್ತಿರಲಿಲ್ಲ. ಅಷ್ಟೇ ಅಲ್ಲ,

1. ಕೆರೆ ಹಳ್ಳ ಬಾವಿಗಳು ಮೈತೆಗೆದರೆ ಗುಳ್ಳೆ ಗೊರಚೆ ಚಿಪ್ಪುಗಳ ಕಾಣಬಹುದು.
ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು. . .
ಕೂಡಲ ಸಂಗನ ಶರಣರು ಮನದೆರೆದು ಮಾತಾಡಿದರೆ ಲಿಂಗವೇ ಕಾಣಬಹುದು[22].

2. ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ. ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ.
ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆ ಇತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥಾ![23]

3. ಆದ್ಯರ ವಚನ ಪರುಷ ಕಂಡಣ್ಣಾ . . .[24]

4. ಎಮ್ಮ ವಚನವೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮಬಾರದಯ್ಯಾ[17]

ಎಂದು ಹೇಳಿ, ಅವರು ಅಧ್ಯಾತ್ಮಿಕ ಸಾಧನೆಗಳಲ್ಲಿ ಪ್ರಗತಿ ಸಾಧಿಸಿದ ಶಿವಭಕ್ತರ ವಚನಗಳು ವೇದಗಳಿಗಿಂತ ಮಿಗಿಲು ಎಂಬ ಅವರ ಧೋರಣೆಯನ್ನು ಸಾರಿರುವ ಹಿನ್ನೆಲೆಯಲ್ಲಿ, ಲಿಂಗಾಯತರಿಗೆ ವೇದೋಪನಿಷತ್ತುಗಳು ಪ್ರಮಾಣ ಗ್ರಂಥಗಳೆಂಬ ವಾದವನ್ನು ನಾವು ಮರುಪರಿಶೀಲನೆಗೆ ಒಳಪಡಿಸಬೇಕಾಗಿದೆ. ವೇದಗಳನ್ನು ಖಂಡಿಸುವುದೆಂದರೆ ನಾವು ಇನ್ನುಮೇಲೆ ವೈದಿಕ (ಹಿಂದೂ) ಧರ್ಮದ ಅನುಯಾಯಿಗಳಲ್ಲ, ಎಂದು ಸ್ಪಷ್ಟವಾಗಿ ಹೇಳಿದಂತೆ; ನಮಗೆ ವಚನಗಳೇ ಶ್ರೇಷ್ಠ ಎಂದು ಘೋಷಿಸಿದರೆ, ವೈದಿಕ ಧರ್ಮಕ್ಕಿಂತ ನಮ್ಮ ಧರ್ಮವೇ ಶ್ರೇಷ್ಠ ಎಂದು ಘೋಷಿಸಿದಂತೆ.

ಬೈಬಲ್ ಮತ್ತು ಕೊರಾನಿಗೆ ತೋರಿಸಿದ ವಿರೋಧಕ್ಕೆ ವಿಧಿಸುವಂಥ ಕಠೋರ ಶಿಕ್ಷೆಯನ್ನು ವೇದಗಳ ಖಂಡಿಸಿದ ಚಾರ್ವಾಕ ಬೌದ್ಧ ಜೈನರಿಗೆ ವಿಧಿಸದಿದ್ದರೂ, ಅವರನ್ನು ಅವೈದಿಕ, ಪಾಖಂಡಿಗಳೆಂದು ಬಹಿಷ್ಕರಿಸಲಾಯಿತು. ಲಿಂಗಾಯತರು ಇಂಥಬಹಿಷ್ಕಾರವನ್ನು ತಪ್ಪಿಸಿಕೊಳ್ಳಲೋ ಅಥವಾ ತಮ್ಮ ಧರ್ಮವು ವೇದಸಮ್ಮತವೆಂದು ಪರಿಗಣಿಸಲ್ಪಟ್ಟರೆ ತಮ್ಮ ಧರ್ಮದ ಘನತೆ ಹೆಚ್ಚುತ್ತದೆ ಎಂದೋ, ತಾವು, ಅತ್ಯಾಶ್ರಮಿ, ಅತಿವರ್ಣಿಗಳಾದ ವೈದಿಕರು ಎಂದು ತೋರಿಸಿಕೊಳ್ಳಲು ಸಿದ್ಧಾಂತ ಶಿಖಾಮಣಿಗಳಂಥ ಗ್ರಂಥಗಳ ರಚನೆಯಲ್ಲಿ ತೊಡಗಿದ್ದಾರು. ಆದರೆ, ವೇದನಿಂದಕರಾದ ಜೈನ, ಬೌದ್ಧರು ಅವೈದಿಕರೆನಿಸಿಕೊಂಡರೆ ವೇದನಿಂದಕರಾದ ಲಿಂಗಾಯತರೂ ಏಕೆ ಅವೈದಿಕರಲ್ಲ?

ವೇದಗಳಲ್ಲಿ ಕರ್ಮಕಾಂಡ ಮತ್ತು ಜ್ಞಾನಕಾಂಡ ಎಂಬ ಎರಡು ಭಾಗಗಳಿದ್ದು ವಚನಕಾರರು ಕರ್ಮಕಾಂಡವನ್ನಷ್ಟೇ ಖಂಡಿಸಿರುತ್ತಾರೆ; ಆದರೆ, ಅವರು ಉಪನಿಷತ್ತುಗಳ ಸಿದ್ಧಾಂತಗಳನ್ನು (ಜ್ಞಾನಕಾಂಡವನ್ನು) ಒಪ್ಪಿಕೊಳ್ಳುತ್ತಾರೆ. ಉದಾಹರಣೆಗೆ, ವಚನಗಳಲ್ಲಿ ಅಲ್ಲಲ್ಲಿ ಬರುವ ಅಷ್ಟತನು ಪರಿಕಲ್ಪನೆಯು ಶ್ವೇತಾಶ್ವತರ ಉಪನಿಷತ್ತಿನಲ್ಲಿ ಆಗಲೆ ಪ್ರಣೀತವಾಗಿದೆ. ವಚನಗಳು ಪ್ರತಿಪಾದಿಸುವ ಪರಶಿವ ಸಿದ್ಧಾಂತ, ಶಕ್ತಿ ಸಿದ್ಧಾಂತ, ಕರ್ಮ ಮತ್ತು ಪುನರ್ಜನ್ಮ ಸಿದ್ಧಾಂತ, ಮೋಕ್ಷ ಸಿದ್ಧಾಂತ, ಮುಂತಾದ ಸಿದ್ಧಾಂತಗಳೆಲ್ಲಾ ಉಪನಿಷತ್ತುಗಳಲ್ಲಿ ಒಂದಲ್ಲ ಒಂದು ರೂಪದಲ್ಲಿ ಪ್ರಕಟವಾಗಿವೆ. ಆದುದರಿಂದ ವಚನೋಕ್ತ ಲಿಂಗಾಯತವು ವೇದವಿರೋಧಿಯಲ್ಲಎಂದು ಕೆಲವರು ವಾದಿಸುತ್ತಾರೆ.ಆದರೆ, ಜೈನರೂ, ಬೌದ್ಧರೂ ಸಹ ಜ್ಞಾನಕಾಂಡವನ್ನು ಅನುಮೋದಿಸುತ್ತಾರೆ. ಆದರೂ ಅವರನ್ನು ಹಿಂದೂಗಳೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅವರು ಕರ್ಮಕಾಂಡ ವಿರೋಧಿಗಳು. ಕರ್ಮಕಾಂಡ ವಿರೋಧಿಗಳೆಲ್ಲಾ ವೈದಿಕರಾದರೆ ಲಿಂಗಾಯತರೂ ಅವೈದಿಕರೇ (ಅಹಿಂದೂಗಳೆ). ವಾಸ್ತವವಾಗಿ, ಉಪನಿಷತ್ಕಾರರೇ ಮೊಟ್ಟಮೊದಲ ಕರ್ಮಕಾಂಡವಿರೋಧಿಗಳು. ಆದರೆ, ಅವರು, ಮುಂದೆ ಕರ್ಮಕಾಂಡಕ್ಕೂ ಅವಕಾಶಮಾಡಿಕೊಟ್ಟರು. ಆದರೆ, ಲಿಂಗಾಯತರು ತಮ್ಮ ಸಿದ್ಧಾಂತಗಳಿಗೆ ಅನುಗುಣವಾದ ಉಪನಿಷತ್ತುಗಳ ಕೆಲವು ಸಿದ್ಧಾಂತಗಳನ್ನು ಅನುಮೋದಿಸಿದರೂ, ಅವರು ವೇದೋಕ್ತ ಬಹುದೇವತಾವಾದವನ್ನಾಗಲಿ, ಅದರ ಮೇಲೆ ನಿಂತಿರುವ ಕರ್ಮಕಾಂಡ ವನ್ನಾಗಲಿ ಪರೋಕ್ಷವಾಗಿಯೂ ಒಪ್ಪಿಕೊಳ್ಳಲಿಲ್ಲ. ಒಪ್ಪಿಕೊಳ್ಳಲಿಲ್ಲ.

ಕೆಲವರು ನಿರೀಶ್ವರವಾದವನ್ನೆ ಅವೈದಿಕತೆಯ ಲಕ್ಷಣವೆಂದು ಪರಿಗಣಿಸಿ, ಬೌದ್ಧರು, ಜೈನರು, ಚಾರ್ವಾಕರು ನಿರೀಶ್ವರವಾದಿಗಳು, ಆದುದರಿಂದ, ಅವರು ಹಿಂದೂಗಳಲ್ಲ (ಅವೈದಿಕರು), ಆದರೆ ಸೇಶ್ವರವಾದಿಗಳಾದ ಲಿಂಗಾಯತರು ಹಿಂದೂಗಳು, ಎನ್ನುತ್ತಾರೆ. ಆದರೆ ಅವರ ಈ ವಾದ ತಪ್ಪು. ಏಕೆಂದರೆ ಸಾಂಖ್ಯರು, ವೈಷೇಶಿಕರು, ಕೆಲವು ಪೂರ್ವ ಮೀಮಾಂಸಕರು ಸಹ ನಿರೀಶ್ವರವಾದಿಗಳೆ. ಆದರೂ ಅವರೆ ಕರ್ಮಕಾಂಡ ಪ್ರತಿಪಾದಕರಾದುದರಿಂದ ಅವರೆಲ್ಲ ವೈದಿಕರು (ಹಿಂದೂಗಳು), ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಲಿಂಗಾಯತರು ವೇದಗಳ ಕರ್ಮಕಾಂಡವನ್ನು ಖಂಡಿಸಿದರೂ ಅವರು ಹಿಂದೂಗಳ ಆಗಮಗಳನ್ನು ಖಂಡಿಸಿಲ್ಲ. ಲಿಂಗಾಯತದ ಸಿದ್ಧಾಂತಗಳೆಲ್ಲ ಆಗಮಗಳಲ್ಲಿ ಪ್ರಣೀತವಾಗಿವೆ; ಆದುದರಿಂದ, ಲಿಂಗಾಯತವು ಹಿಂದೂಗಳ ಆಗಮಪ್ರಣೀತ ಶಾಖೆಯೇ ಹೊರತು, ಅಹಿಂದೂ ಅಲ್ಲ, ಎಂಬುದು ಕೆಲವರ ವಾದ.

ಮೇಲ್ನೋಟಕ್ಕೆ ಬಹಳ ಶಕ್ತಿಯುತವೆಂಬಂತೆ ಕಾಣುವ ಈ ವಾದವು ನಿಜವಾಗಿಯೂ ದುರ್ಬಲವಾಗಿದೆ.

ಮೊದಲನೆಯದಾಗಿ, ವಚನಕಾರರು ಆಗಮಗಳನ್ನೂ ಖಂಡಿಸಿದ್ದಾರೆ.

1. ವೇದವನೋದಿದವರೆಲ್ಲ . . . ಶಾಸ್ತ್ರವನೋದಿದವರೆಲ್ಲ . . . ಆಗಮವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ, ಕ್ರಿಯಾಪಾದ, ಚರ್ಯಾಪಾದ, ಜ್ಞಾನಪಾದವೆಂದು ನಾನಾಪರಿಯ ಕರ್ಮಭಕ್ತಿಯ ಮಾಡಿ, ಲಿಂಗಜಂಗಮದ ಮರ್ಮವನರಿಯದೆ ಅಧರ್ಮಿಗಳಾಗಿ ಹೋದರು ...[25]

2. ಅನಂತವೇದಶಾಸ್ತ್ರಆಗಮಪುರಾಣತರ್ಕತಂತ್ರಂಗಳನ್ನು ಆತ್ಮ ಮಾಡಿದನಲ್ಲದೆ, ಆತ್ಮನನವು ಮಾಡಿದುದಲ್ಲ . . .[26]

3. ವೇದಕ್ಕೆ ಒರೆಯ ಕಟ್ಟುವೆ,... ಆಗಮದ ಮೂಗ ಕೊಯ್ಯುವೆ . . .[27]

ಹೀಗೆ ಬಸವಾದಿ ವಚನಕಾರರು ವೇದ, ಶಾಸ್ತ್ರ, ಪುರಾಣ, ಆಗಮ, ಇತ್ಯಾದಿಗಳನ್ನು ಯಾವ ಘನ ಉದ್ದೇಶದಿಂದ ಖಂಡಿಸಿದ್ದಾರು?

ಬಹಳ ಹಿಂದಿನ ಕಾಲದಿಂದಲೂ ಪರಂಪರೆಯಿಂದ ಬಂದ ವೈದಿಕ ಮತ್ತು ಆಗಮಿಕ ಧರ್ಮಗಳು ವಚನಕಾರರ ದೃಷ್ಟಿಯಲ್ಲಿ ಧರ್ಮಗಳೆ ಅಲ್ಲ. ಏಕೆಂದರೆ ಆ ಧರ್ಮಗಳಲ್ಲಿ ಹೆಚ್ಚಾಗಿ ಯಾಂತ್ರಿಕ ಮತ್ತು ವ್ಯಾಪಾರೀ ಮನೋಭಾವದ ಆಚರಣೆಗಳಿಗೆ ಮಹತ್ವವಿತ್ತೇ ಹೊರತು ನಿಜವಾದ ಧಾರ್ಮಿಕತೆಗಲ್ಲ. ನಿಜವಾದ ಧಾರ್ಮಿಕ ಆಚರಣೆಯು ನಮ್ಮನ್ನು ಸಂಸಾರದಿಂದ ಬಿಡುಗಡೆ ಮಾಡಬೇಕು. ಇಹದಲ್ಲೂ ಪರದಲ್ಲೂ ಇಂದ್ರಿಯ ಸುಖ ಪಡೆಯುವ ಉದ್ದೇಶದಿಂದ ಮಾಡಿದ ಯಜ್ಞಯಾಗಾದಿಗಳು ನಮ್ಮನ್ನು ಭವಬಂಧನದಿಂದ ಬಿಡಿಸಲು ಹೇಗೆ ಸಾಧ್ಯ? ನಮ್ಮಿಂದ ವಸ್ತುಗಳನ್ನು ಅಪೇಕ್ಷಿಸುವ ದೇವದೇವತೆಗಳು ನಮಗೆ ಏನನ್ನು ಕೊಡಲು ಸಾಧ್ಯ? ಅಲ್ಲದೆ, ಅವು ತ್ರೈವರ್ಣಿಕರಿಗೆ ಮೋಕ್ಷದ ಅವಕಾಶ ನೀಡಿ, ಆ ಅವಕಾಶವನ್ನು ಸ್ತ್ರೀಯರಿಗೂ ಶೂದ್ರರಿಗೂ ನೀಡಲಿಲ್ಲ.

ಅದೇ ರೀತಿ, ಆಗಮಗಳು ವಿಧಿಸುವ ಪೂಜೆ, ಮುಂತಾದ ಆಚರಣೆಗಳು ಎಷ್ಟು ವಿಸ್ತಾರ ಮತ್ತು ಸಂಕೀರ್ಣವಾಗಿವೆಯೆಂದರೆ ಜೀವಿತಕ್ಕಾಗಿ ಕಾಯಕ ಮಾಡುವವರು ಅಂಥ ಪೂಜೆ ಮಾಡಲು ಸಾಧ್ಯವೆ, ಅಂಥ ಪೂಜೆ ಪೂಜೆಯನ್ನು ಮಾಡಿದರೆ ಕಾಯಕವನ್ನು ಮಾಡಲು ಸಾಧ್ಯವೆ? ಎಂಬ ಪ್ರಶ್ನೆಗೆ ಎಡೆ ಮಾಡಿಕೊಡುತ್ತವೆ. ತಾಮ್ರದ ಪಾತ್ರೆಗಳಿಗಿಂತ ಬೆಳ್ಳಿಯ ಪಾತ್ರೆಗಳು ಉತ್ತಮ, ಬೆಳ್ಳಿಯ ಪಾತ್ರೆಗಳಿಗಿಂತ, ಚಿನ್ನದ ಪಾತ್ರೆಗಳು ಉತ್ತಮ, ಆದುದರಿಂದ ಚಿನ್ನದ ಪಾತ್ರೆಗಗಳನ್ನೊಳಗೊಂಡ ಪೂಜೆಯು ಶ್ರೇಷ್ಠ; ಹೆಚ್ಚು ಹೆಚ್ಚು ಉತ್ತಮ ಉಪಕರಣಗಳನ್ನೂ ಹೆಚ್ಚು ಹೆಚ್ಚು ಸಾಮಗ್ರಿಗಳನ್ನೂ ಉಪಯೋಗಿಸಿದರೆ ಹೆಚ್ಚು ಸಂಪತ್ತು ಲಭಿಸುತ್ತದೆ[28]; ಅನೇಕ ರೀತಿಯ ಹೂಗಳು, ಅನೇಕ ರೀತಿಯ ಪತ್ರೆಗಳನ್ನೊಳಗೊಂಡ ಪೂಜೆ ಕಡಿಮೆ ರೀತಿಯ ಹೂಪತ್ರೆಗಳನ್ನೊಳಗೊಂಡ ಪೂಜೆಗಿಂತ ಶ್ರೇಷ್ಠ; ಸಾವಿರ ಬಿಲ್ವ ಪತ್ರೆಗಳನ್ನು ಶಿವಲಿಂಗಕ್ಕೆ ಅಪರ್ಿಸಬೇಕು, ಏಕೆಂದರೆ ಶಿವನಿಗೆ ಆ ಪತ್ರೆಯೆಂದರೆ ಇಷ್ಟ; ಹತ್ತು ಸಾವಿರ ಸಾರಿ ಪಂಚಾಕ್ಷರಿ ಮಂತ್ರ ಜಪಿಸುವುದು - ಅದು ಸಾಧ್ಯವಾಗದಿದ್ದರೆ, 1008 ಸಾರಿ ಜಪಿಸಿವುದು ಒಳ್ಳೆಯದು; ಮೊದಲು ತಲೆಯ ಮೇಲೆ, ಅನಂತರ ಉಳಿದ ಭಾಗಗಳ ಮೇಲೆ ಭಸ್ಮವನ್ನುಧರಿಸಿಕೊಂಡು ಸ್ನಾನ ಮಾಡಬೇಕು; ಅನಂತರ ಭಸ್ಮ ಬೆರೆತ ನೀರಿನಿಂದ ಸ್ನಾಮಾಡಬೇಕು; ಅನಂತರ ಶುದ್ಧ ನೀರಿನಿಂದ ಸ್ನಾನಮಾಡಬೇಕು; ವಿಶಿಷ್ಟ ಮಂತ್ರವನ್ನು ಹೇಳುತ್ತಾ, ವಿಶಿಷ್ಟ ಅಂಗಕ್ಕೆ ವಿಭೂತಿ ಧಾರಣೆ ಮಾಡಬೇಕು; ಮುಂತಾದ ವಿಧಿಗಳೂ ಪೂಜೆ ಒಂದು ಯಾಂತ್ರಿಕ, ಆಡಂಬರ ಕ್ರಿಯೆಯೇ ಹೊರತು, ಭಕ್ತಿಯನ್ನು ತೋರಿಸುವ ಕ್ರಿಯೆಯಲ್ಲ ಎಂಬುದನ್ನು ಆಗಮಗಳು ಪ್ರತಿ ಹಂತದಲ್ಲೂ ತೋರಿಸುತ್ತವೆ. ಅಂದರೆ ಈ ಆಗಮಿಕ ಧರ್ಮಾಚರಣೆಗಳು ನಮ್ಮನ್ನು ಸಂಸಾರದಿಂದ ಮುಕ್ತಗೊಳಿಸುವುದಿಲ್ಲವೆಂಬುದನ್ನು ಅರಿತುಕೊಂಡ ವಚನಕಾರರು, ನಿಜವಾದ ಧರ್ಮವಿರುವುದು ಸರಳ ಪೂಜೆ, ನೈಜ ಭಕ್ತಿ, ಧ್ಯಾನ, ನೈತಿಕ ವರ್ತನೆಯಲ್ಲೇ ಹೊರತು ಆಗಮಿಕ ವಿಧಿಗಳನ್ನು ಆಚರಿಸುವುದರಲ್ಲಿ ಅಲ್ಲ, ಎಂಬುದನ್ನು ಸಾರಿ ಸಾರಿ ಹೇಳಿದ್ದಾರೆ. ಈ ಕಾರಣದಿಂದಲೇ ಅವರು ಆಗಮಗಳಿಗಾಗಲಿ ವೇದಗಳಿಗಾಗಲಿ ಪರಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿಲ್ಲ, ಎಂದುದು.

ವಚನಕಾರರು ಆಗಮಗಳ ಆಚರಣೆಯನ್ನು ಖಂಡಿಸಿದರೂ, ಅವುಗಳ ತತ್ವಮೀಮಾಂಸೀಯ (metaphysical) ಸಿದ್ಧಾಂತಗಳನ್ನು ಒಪ್ಪಿಕೊಂಡಿದ್ದಾರೆ; ಅರ್ಥಾತ್, ವಚನೋಕ್ತ ಲಿಂಗಾಯತವು ಆಗಮೋಕ್ತ ವೀರಶೈವಕ್ಕಿಂತ ಭಿನ್ನವಲ್ಲ, ಎಂದು ಕೆಲವರು ವಾದಿಸಬಹುದು. ಈ ವಾದವನ್ನೂ ನಾವು ಪರಿಶೀಲಿಸಬೇಕಾಗಿದೆ. ವಚನಗಳಲ್ಲಿ ಅಡಕವಾಗಿರುವ ಪರಶಿವ, ಶಕ್ತಿ, ಅಷ್ಟಾವರಣ, ಷಟ್ಸ್ಥಲ, ಮುಂತಾದ ಸಾರಭೂತ ಲಿಂಗಾಯತ ಪರಿಕಲ್ಪನೆಗಳು ಒಂದಲ್ಲ ಒಂದು ಆಗಮದಲ್ಲಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಆಧಾರದ ಮೇಲೆಯೇ ಅನೇಕ ವಿದ್ವಾಂಸರು ವಚನೋಕ್ತ ಲಿಂಗಾಯತಕ್ಕೆ ಆಗಮಗಳೇ - ಅದರಲ್ಲೂ ಅವುಗಳ ಉತ್ತರ ಭಾಗಗಳು - ಮೂಲ ಎಂಬ ತೀರ್ಮಾನಕ್ಕೆ ಬಂದಿರುವುದು. ಆದರೆ, ನಿಷ್ಪಾಕ್ಷಿಕ ಪರಿಶೀಲನೆಯಿಂದ ಆಗಮೋಕ್ತ ವೀರಶೈವದ ಅನೇಕ ಪರಿಕಲ್ಪನೆಗಳೂ ಆಚಾರಗಳೂ ವಚನೋಕ್ತ ಲಿಂಗಾಯತಕ್ಕೆ ವಿರುದ್ಧವಾಗಿವೆ ಎಂಬುದು ಕಂಡುಬರುತ್ತದೆ. ಇವುಗಳಲ್ಲಿ ಕೆಲವನ್ನು ಪರೀಕ್ಷಿಸಬಹುದು.

1. ಯಾವುದೆ ಆಗಮವನ್ನು ನಿರ್ಲಕ್ಷ್ಯದಿಂದ ನೋಡಿದರೂ ಅಲ್ಲಿನ ಪರಶಿವ ಕಲ್ಪನೆ ಅತಿ ಪೌರಾಣಿಕವೂ ಅವೈಚಾರಿಕವೂ ಆಗಿರುವುದು ಕಂಡುಬರುತ್ತದೆ. ಉದಾಹರಣೆಗೆ ಸೂಕ್ಷಾಗಮದ ಕ್ರಿಯಾಪಾದದ ಪರಶಿವ ಕೈಲಾಸ ಪರ್ವತದಲ್ಲಿ ವಾಸಿಸುತ್ತಾನೆ; ಸಿದ್ಧ, ಚಾರಣ, ಗಂಧರ್ವ, ಯಕ್ಷ, ರಾಕ್ಷಸರ ಸಮೂಹಗಳಿಂದ, ಬ್ರಹ್ಮನೆ, ಮೊದಲಾದ ದೇವಗಣಗಳಿಂದ, ಇಂದ್ರನೆ ಮೊದಲಾದ ಲೋಕಪಾಲಕರಿಂದ, ಸನಕ, ನಂದಿ, ಭೃಂಗಿ, ರಿಟಿ, ಮುನಿ, ಪ್ರಮಥರ ಸಮೂಹದಿಂದ ಪೂಜಿಸಲ್ಪಡುತ್ತಾನೆ[31]. ಪಾರಮೇಶ್ವರ ಆಗಮದ ಪ್ರಕಾರ, ಐದು ಮುಖಗಳುಳ್ಳವನಾದ ಪರಶಿವ, ಸರ್ಪ, ಚಂದ್ರಗಳಿಂದಲೂ, ಆನೆ ಮತ್ತು ಹುಲಿಚರ್ಮಗಳಿಂದಲೂ ಅಲಂಕೃತನಾಗಿದ್ದಾನೆ32. ಅವನು ರುಂಡ ಮಾಲೆ ಮತ್ತು ಜನಿವಾರಗಳನ್ನೂ ಧರಿಸಿದ್ದಾನೆಂಬ ಮಾತು ಎಲ್ಲ ಆಗಮಗಳಿಗೆ ಒಪ್ಪಿಗೆ.

ಆಗಮಗಳ ಈ ಪ್ರಾಕೃತ ಸಿದ್ಧಾಂತವು ವಚನೋಕ್ತ ಸುಸಂಸ್ಕೃತ ಸಿದ್ದಾಂತಕ್ಕೆ ವಿರುದ್ಧವಾಗಿದೆ. ವಚನಗಳ ಪ್ರಕಾರ, ಅಂಬಿಗರ ಚೌಡಯ್ಯ ಹೇಳುವಂತೆ, ಪರಶಿವನಿಗೆ "ಅಸುರರ ಮಾಲೆಗಳಿಲ್ಲ, ತ್ರಿಶೂಲ ಢಮರುಗವಿಲ್ಲ. ಬ್ರಹ್ಮ ಕಪಾಲವಿಲ್ಲ . . . "[33]. ಪರಶಿವ ಅಪರಿಮಿತ ಚಿತ್ ಆದುದರಿಂದ, ಅವನಿಗೆ ಯಾವುದೇ ಸ್ಪಷ್ಟ ಆಕಾರವಿಲ್ಲ, ಮಾನುಷ ಗುಣಗಳೂ ಇಲ್ಲ. ಅವನು ಎಂಬ ಪುಲ್ಲಿಂಗ ಪದವನ್ನು ವಚನಕಾರರು ಬಳಸಿದರೂ ಆ ಪದದ ಬಳಕೆ ಔಪಚಾರಿಕವೇ ಹೊರತು, ಅವನೊಬ್ಬ ಮಾನವಗುಣಗಳನ್ನುಳ್ಳ ವ್ಯಕ್ತಿ ಎಂದು ಸೂಚಿಸುವ ಪದ ಅದಲ್ಲ. ಅವರ ಪರಶಿವ ಗಂಡೂ ಅಲ್ಲ, ಹೆಣ್ಣೂ ಅಲ್ಲ, ನಪುಂಸಕವೂ ಅಲ್ಲ.

ಆಗಮಗಳ ಶಕ್ತಿ ಕಲ್ಪನೆ ಸಹಾ ವಚನೋಕ್ತ ಲಿಂಗಾಯತದ ಶಕ್ತಿ ಕಲ್ಪನೆಗೆ ವಿರುದ್ಧವಾಗಿದೆ. ಆಗಮಗಳಲ್ಲಿ ಪರಶಿವನ ಹೆಂಡತಿಯಾದ ಪಾರ್ವತಿಯೇ ಶಕ್ತಿ. ಆದರೆ ವಚನಗಳ ಪ್ರಕಾರ ಶಕ್ತಿಯೆಂದರೆ ಜಗತ್ತಿನ ಉಪಾದಾನಕಾರಣ; ಅದು ವ್ಯಕ್ತಿಯಲ್ಲ, ಪರಶಿವನ ಇಚ್ಛೆಗನುಗುಣವಾಗಿ ಪ್ರಪಂಚದ ವಿವಿಧ ವಸ್ತುಗಳಾಗಿ ರೂಪಾಂತರಗೊಳ್ಳುವ ಒಂದು ಜಡವಸ್ತು. ವಚನಕಾರರು ಎಲ್ಲಿಯೋ ಒಮ್ಮೊಮ್ಮೆ "ಲೀಲೆಯಾದೊಡೆ ಉಮಾಪತಿ", "ಗಂಗಾದೇವಿ ಮುಂಡೆಯಾದಳು", ಎಂದು ಹೇಳುತ್ತಾರೇನೋ ಹೌದು. ಅದು ಆಲಂಕಾರಿಕ ಭಾಷೆಯೇ ಹೊರತು ಆಗಮಿಕರು ಬಳಸುವ ವಾಚ್ಯಾರ್ಥವನ್ನುಳ್ಳ ಭಾಷೆಯಲ್ಲ.

ಅಗಮಗಳ ಪ್ರಕಾರ, ಶಿವನು ಜಗತ್ತನ್ನು ರಕಷಿಸಲು ಮತ್ತು ತನ್ನ ಪಾರಮ್ಯವನ್ನು ಮೆರೆಯಲು 25 ಲೀಲೆಗಳನ್ನು ಮಾಡಿದನು (ಅವತಾರಗಳನ್ನು ಎತ್ತಿದನು). ಪ್ರಾಯಶಃ ಇದು ಹತ್ತು ಅವತಾರಗಳನ್ನೆತ್ತಿದ ವಿಷ್ಣುವಿಗಿಂತ ಪರಶಿವ ಹೆಚ್ಚು ಎಂದು ತೋರಿಸಲು ಮಾಡಿದ ಪ್ರಯತ್ನವಿರಬೇಕು[34]. ಅವತಾರವೆಂದರೆ ಶಿವಾಂಶ ವಿಶೇಷವಾಗಿರುವ ವ್ಯಕ್ತಿ. ವಚನಕಾರರ ಪ್ರಕಾರ, ಪ್ರತಿಯೊಂದು ಜೀವಿಯೂ ಪರಶಿವನಿಂದಲೇ ಉದ್ಭವವಾಗಿರುವ್ಯದರಿಂದ ಪ್ರತಿಯೊಂದು ಜೀವಿಯೂ ಶಿವಾಂಶಿಕವೇ. ಆದುದರಿಂದ ವಚನಗಳಲ್ಲಿ ಲೀಲೆಗಳ ಸೊಲ್ಲೇ ಇಲ್ಲ.

ಆಗಮಗಳಲ್ಲಿ ಕೈಲಾಸದ ವರ್ಣನೆ ಹೇರಳವಾಗಿದೆ. ವಾಸ್ತವವಾಗಿ, ಪ್ರತಿ ಆಗಮ ಪ್ರಾರಂಭವಾಗುವುದು ಕೈಲಾಸದ ವರ್ಣನೆಯಿಂದಲೇ. ವಚನಕಾರರು ಕೈಲಾಸವೆಂಬುದು ಭೂಮಿಯ ಮೇಲಿನ ಒಂದು ಹಾಳು ಬೆಟ್ಟ ಎಂದು ಹೇಳುವ ಮೂಲಕ ಅದೊಂದು ನಿರಾಧಾರ ಕಲ್ಪನೆ ಎಂದಿದ್ದಾರೆ. 'ಕೈಲಾಸ, ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ, ಕೇಳಿರಯ್ಯಾ ಕೈಲಾಸವೆಂಬುದೊಂದು ಹಾಳು ಬೆಟ್ಟ . . .ಅಲ್ಲಿರುವ ಚಂದ್ರಶೇಖರನು ಬಹುಎಡ್ಡ . .[12] ಎಂದು ಸಿದ್ಧರಾಮನೂ ಕೈಲಾಸವೆಂಬುದೇನೊ, ಪೃಥ್ವಿಯ ಮೇಲೊಂದು ಮೊರಡಿ ಎಂದು ಬಸವಣ್ಣನವರೂ ಹೇಳುವ ಮೂಲಕ, ಕೈಲಾಸವು ಪರಲೋಕವಲ್ಲ, ಭೂಮಿಯ ಮೇಲಿನ ಹಾಳು ಬೆಟ್ಟ, ಅದೊಂದು ನಿರಾಧಾರ ಕಲ್ಪನೆ ಎಂದಿದ್ದಾರೆ.

ಕೈಲಾಸ ಮತ್ತು ವೈಕುಂಠಗಳ ವರ್ಣನೆ ಬಂದಾಗಲೆಲ್ಲ ಚತುಷ್ಪದ ಪದವಿಯ ಕಲ್ಪನೆಯೂ ಬರುತ್ತದೆ. ಚತುಷ್ಪದ ಮೋಕ್ಷವು ಆಧ್ಯಾತ್ಮಿಕ ಜೀವನದ ಪರಮ ಗುರಿ, ಎಂದು ಸಾರುವ ಈ ಸಿದ್ಧಾಂತದ ಪ್ರಕಾರ, ಮುಕ್ತನಾದ ಆತ್ಮ ಪರಮಾತ್ಮನಿರುವ ಲೋಕಕ್ಕೆ (ವೈಕುಂಠಕ್ಕೆ ಅಥವಾ ಕೈಲಾಸಕ್ಕೆ) ಹೋಗುತ್ತಾನೆ (ಸಾಲೋಕ್ಯ ಮೋಕ್ಷ); ಅನಂತರ ಪರಮಾತ್ಮನ ಸಮೀಪ ಹೋಗುತ್ತಾನೆ (ಸಾಮೀಪ್ಯ ಮೋಕ್ಷ); ಅವನಂತೆ ಶುದ್ಧನಾಗುತ್ತಾನೆ (ಸಾರೂಪ್ಯ ಮೋಕ್ಷ); ಮತ್ತು ಕೊನೆಯಲ್ಲಿ ಅವನನ್ನು ಸೇರುತ್ತಾನೆ (ಸಾಯುಜ್ಯ ಮೋಕ್ಷ). ಇಲ್ಲಿ ಸಾಯುಜ್ಯ ಮೋಕ್ಷವೆಂದರೆ ಪರಮಾತ್ಮನೊಂದಿಗೆ ವ್ಯತ್ಯಾಸವಿಲ್ಲದಂತೆ ಬೆರೆಯುವುದು ಅಥವಾ ಐಕ್ಯವಾಗುವುದು ಎಂದರ್ಥವಲ್ಲ, ಅವನ ಜೊತೆಯಲ್ಲಿ ನಿರಂತರವಾಗಿ, ಅವನ ಲೋಕದಲ್ಲಿ ಇರುವುದು, ಎಂದರ್ಥ. ಏಕೆಂದರೆ, ಅಲ್ಲಿರುವ ಪರಮಾತ್ಮನು ಇತರ ಆತ್ಮಗಳಿಗಿಂತ ಸ್ವಭಾವದಲ್ಲಿ ಭಿನ್ನವಾದುದರಿಂದ, ಅವನಲ್ಲಿ ಅವು ಐಕ್ಯವಾಗಾಲಾರವು. ಆದರೆ ವಚನಕಾರರ ಪ್ರಕಾರ ಮೋಕ್ಷವೆಂದರೆ, ನದಿ ಸಮುದ್ರದಲ್ಲಿ ಒಂದಾದಾಗ ಹೇಗೆ ತನ್ನ ಪ್ರತ್ಯೇಕತೆಯನ್ನು ಕಳೆದುಕೊಳ್ಳುತ್ತದೆಯೋ ಹಾಗೆ ಅಂಗವು (ಆತ್ಮವು) ಪರಮಾತ್ಮನಲ್ಲಿ ಒಂದಾದಾಗ ತನ್ನತನವನ್ನು ಕಳೆದುಕೊಂಡು ಅವನಲ್ಲಿ ಬೇರಾಗದಂತೆ ಬೆರೆಯುವುದು. ಆಗ ಮುಕ್ತಾತ್ಮ ಮತ್ತು ಪರಮಾತ್ಮ ಎಂಬ ಎರಡು ಇರದೆ ಒಂದೇ ಇರುತ್ತದೆ. ಅಲ್ಲದೆ, ಕೈಲಾಸ ಅಥವಾ ಚತುಷ್ಪದ ಮೋಕ್ಷ ಪ್ರಾಪ್ತಿ ವ್ಮರಣಾನಚಿತರ ಮಾತ್ರ ಸಾಧ್ಯ. ಆದರೆ, ವಚನಕಾರರು, ಮೇಲೆ ಹೇಳಿರುವಂತೆ, ಕೈಲಾಸದ ಅಸ್ತಿತ್ವವನ್ನೂ ಚತುಷ್ಪದ ಮೋಕ್ಷವನ್ನೂ ಅಲ್ಲಗಳೆದು, ಜೀವನ್ಮುಕ್ತಿಯೂ ಸಾಧ್ಯ, ವಿದೇಹಮುಕ್ತಿಯೂ ಸಾಧ್ಯ ಎಂದರು.

ಇದರ ಪರಿಶೀಲನೆಯಿಂದ, ಆಗಮಗಳು ಬೋಧಿಸುವ ವೀರಶೈವವು ಹೆಚ್ಚಾಗಿ ಶೈವ ಸಿದ್ಧಾಂತಕ್ಕೆ ಹತ್ತಿರವಾದ ದ್ವೈತವೆಂದೂ, ವಚನಗಳು ಬೋಧಿಸುವ ಲಿಂಗಾಯತವು ಶಿವಾದ್ವೈತವೆಂದೂ ಖಚಿತವಾಗಿ ನಿರ್ಣಯಿಸಬಹುದು.

2. ವೀರಶೈವ (ಲಿಂಗ) ದೀಕ್ಷೆ ಪಡೆದವನು ತಲೆಯ ಮೇಲೆ ಭಾರ ಹೊರಬಾರದು, ಭೂಮಿಯನ್ನು ಉಳಬಾರದು, ಗುದ್ದಲಿಯಿಂದ ಅಗೆಯಬಾರದು, ಏನನ್ನೂ ಕತ್ತರಿಸಬಾರದು, ಕಟ್ಟಿಗೆಯನ್ನು ತಲೆಯಮೇಲೆ ಹೊರಬಾರದು[35] ಎಂಬುದು ಆಗಮದ ಮತ್ತೊಂದು ಸಿದ್ಧಾಂತ. ಒಂದು ವೇಳೆ ಲಿಂಗಾಯತ ಮತ್ತು ವೀರಶೈವ ಒಂದೇ ಆದರೆ, ಆಗ ಈ ಹೇಳಿಕೆಯ ಅರ್ಥ ಲಿಂಗಾಯತನು ವ್ಯವಸಾಯಕ್ಕೆ ಸಂಬಂಧಿಸಿದ ಯಾವ ಕೆಲಸವನ್ನೂ ಮಾಡಬಾರದು, ಎಂದಂತಾಗುತ್ತದೆ. ಈ ದೃಷ್ಟಿಯಿಂದ ನೋಡಿದರೆ, ಕಟ್ಟಿಗೆ ತಂದು ಹಾಕುವ ಕಾಯಕ ಮಾಡುತ್ತಿದ್ದ ಮೋಳಿಗೆ ಮಾರಯ್ಯ ಲಿಂಗಾಯತನಲ್ಲ, ಭೂಮಿಯನ್ನು ಉಳುವ, ಕೂಲಿ ಕೆಲಸ ಮಾಡುವ ಜನರಾರೂ ಲಿಂಗಾಯತರಲ್ಲ. ಆದುದರಿಂದ, ಈ ಆಗಮೋಕ್ತ ವೀರಶೈವವು ವಚನೋಕ್ತ ಲಿಂಗಾಯತದ ಕಾಯಕ ಸಿದ್ಧಾಂತಕ್ಕೆ ವಿರುದ್ಧವಿದೆ.

ಇದರಿಂದ ವ್ಯಕ್ತವಾಗುವುದೇನೆಂದರೆ, ಇಲ್ಲಿ ವೀರಶೈವ ಎಂಬ ಪದಕ್ಕೆ ವೀರಶೈವ ಬ್ರಾಹ್ಮಣ ಅಥವಾ ಲಿಂಗೀ ಬ್ರಾಹ್ಮಣ ಎಂಬ ಅರ್ಥ ಇರಬೇಕು. ಏಕೆಂದರೆ, ಬ್ರಾಹ್ಮಣರ ಕರ್ತವ್ಯ ಅಧ್ಯಯನ, ಅಧ್ಯಾಪನ, ಯಜನ, ಮುಂತಾದ ದೈಹಿಕ ಶ್ರಮವನ್ನೊಳಗೊಳ್ಳದ ಕೆಲಸಗಳು; ಅಂಥ ಕೆಲಸಗಳನ್ನು ತಾವಿಟ್ಟುಕೊಂಡು, ಯುದ್ಧಮಾಡುವುದು, ಉಳುವುದು, ಗಿಡ ಕಡಿಯುವುದು, ಅಗೆಯುವುದು, ಮುಂತಾದ ಕೆಲಸಗಳನ್ನು ಉಳಿದ ವರ್ಣಗಳಿಗೆ ಹಂಚಿದ್ದಾರೆ. ಜೊತೆಗೆ, ಈ ಆಗಮಿಕ ವೀರಶೈವರು (ಲಿಂಗೀ ಬಾಹ್ಮಣರು), "ಲಿಂಗಧಾರಿಯು ತನಗೆ ಸುಖ ಬೇಕಿದ್ದರೆ ಬ್ರಹ್ಮ ವೃತ್ತಿಯಿಂದ, ಕ್ಷಾತ್ರವೃತ್ತಿಯಿಂದ, ವೈಶ್ಯವೃತ್ತಿಯಿಂದ ಅಥವಾ ಶೂದ್ರವೃತ್ತಿಯಿಂದ ಜೀವಿಸಬಾರದು; ಅವನು ದಾನವನ್ನು, ಋಣವನ್ನು ಅತಿಸಂಗ್ರಹವನ್ನು ಮಾಡಬಾರದು. ಒಂದು ವೇಳೆ ಸುಖಪೂರ್ವಕ ಭೋಜನವು ದೊರೆಯದಿದ್ದರೆ, ಭಿಕ್ಷಾಟನೆಯನ್ನು ಮಾಡಬೇಕು"36 ಎಂಬ ಆದೇಶ ನೀಡಿದ್ದಾರೆ. ಇದನ್ನು ನೋಡಿದರೆ, ಅವರು ಲಿಂಗೀ ಬ್ರಾಹ್ಮಣರೇ ಇರಬೇಕು ಎಂಬ ನಮ್ಮ ಶಂಕೆ ಸರಿ ಎನಿಸುತ್ತದೆ. ಆದರೆ, ಸಾಲ ಮಾಡಬಾರದು, ಅತಿಸಂಗ್ರಹ ಮಾಡಬಾರದು ಎಂಬ ಮಾತೇನೋ ಸರಿ, ಆದರೆ ದಾನವನ್ನೂ ಅವನು ಮಾಡಬಾರದು ಎಂಬ ಮಾತು ಹೇಗೆ ಸರಿ? ಈ ಆಗಮೋಕ್ತ ಬೋಧನೆಯೂ ಸಹ ವಚನೋಕ್ತ ಲಿಂಗಾಯತದ ದಾಸೋಹ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಹೀಗೆ, ದುಡಿಯಬಾರದು, ಬೇಡಬೇಕು ಎಂದೂ, ದಾನ ಮಾಡಬಾರದು ಎಂದೂ ಪ್ರತಿಪಾದಿಸುವ ಆಗಮಗಳು, ಯಾರೂ ಬೇಡಬಾರದು - ಜಂಗಮ ಸಹ ಬೇಡಬಾರದು (ಬೇಡುವಾತ ಜಂಗಮನಲ್ಲ), ಮತ್ತು ದುಡಿದುದನ್ನು ಇತರರೊಡನೆ ಹಂಚಿಕೊಳ್ಳಬೇಕು - ಎಂಬ ವಚನೋಕ್ತ ಲಿಂಗಾಯತದ ಬಹು ಮುಖ್ಯ ಸಿದ್ಧಾಂತವಾದ ಕಾಯಕ ಮತ್ತು ದಾಸೋಹ ಸಿದ್ಧಾಂತಕ್ಕೆ ವಿರುದ್ಧವಾಗಿವೆ. ಹೀಗೆ ಬೋಧಿಸುವ ಆಗಮಗಳು ವಚನೋಕ್ತ ಲಿಂಗಾಯತಕ್ಕೆ ಮೂಲ ಆಕರಗಳು ಎಂದು ಯಾವ ಧೈರ್ಯದಿಂದ ಹೇಳಬೇಕು? ಅದರ ಬದಲು ವಚನೋಕ್ತ ಲಿಂಗಾಯತವೇ ಬೇರೆ ಆಗಮೋಕ್ತ ವೀರಶೈವವೇ ಬೇರೆ ಎಂದೇಕೆ ಪ್ರಾಮಾಣಿಕವಾಗಿ ಹೇಳಬಾರದು?

3. ಆಗಮದ ಪ್ರಕಾರ ವೀರಶೈವನಾಗಿ ಹುಟ್ಟುವುದು ಹಿಂದಿನ ಜನ್ಮದ ಪುಣ್ಯದಿಂದ. ಶ್ರೌತ ಧರ್ಮದಲ್ಲಿ ಹುಟ್ಟಿ ಸದಾಚಾರದಲ್ಲಿ ತೊಡಗಿದ ವ್ಯಕ್ತಿಗೆ ಚಿತ್ತಶುದ್ಧಿಯಿಂದಾಗಿ ಅನೇಕ ಜನ್ಮಗಳು ಕಳೆದ ಮೇಲೆ ಅನ್ಯದೇವತಾ ವಿಷಯಕ ಭಕ್ತಿ ಉಂಟಾಗುತ್ತದೆ. ಅನ್ಯದೇವತಾರ್ಚನಾಸಕ್ತ ಮನಸ್ಸುಳ್ಳ ವ್ಯಕ್ತಿಗೆ ಅನಂತ ಜನ್ಮಗಳು ಗತಿಸಿದ ಮೇಲೆ ಆ ಅನ್ಯದೇವತಾ ಕೃಪೆಯಿಂದ ಶಿವನಲ್ಲಿ ಭಕ್ತಿ ಉಂಟಾಗುತ್ತದೆ. ಶಿವನ ಪೂಜೆಯಲ್ಲಿ ತೊಡಗಿದ ಆ ವ್ಯಕ್ತಿಗೂ ಸಹ ಅನೇಕ ಜನ್ಮಗಳ ತರುವಾಯ ಶಿವನ ಕೃಪೆಯಿಂದ ಅಂತಿಮ ಜನ್ಮದವನಾದ ಅವನಿಗೆ ಗುರುವಿನ ಅನುಗ್ರಹದಿಂದ ಪಾಶುಪತ(ವೀರಶೈವ)ವೆಂಬ ಶ್ರೇಷ್ಠವ್ರತವು ಲಭಿಸುತ್ತದೆ[37]. ಅಂದರೆ, ಆಗಮಗಳ ಪ್ರಕಾರ ಶೂದ್ರರಾರೂ ಈ ಜನ್ಮದಲ್ಲಿ ವೀರಶೈವರಾಗಲು ಸಾಧ್ಯವಿಲ್ಲ. ಈ ಅಭಿಪ್ರಾಯವು ವರ್ಣಸಂಕರವನ್ನು ಘೋರ ಪಾಪವೆಂಬಂತೆ ಕಾಣುವ ವೈದಿಕ ಸಂಪ್ರದಾಯಕ್ಕನುಗುಣವಾಗಿದೆ. ಆದರೆ, ವಚನಗಳ ಪ್ರಕಾರ, ಯಾವ ಜಾತಿಯವನಾದರೂ ಇದೇ ಜನ್ಮದಲ್ಲಿ ಲಿಂಗದೀಕ್ಷೆ ಪಡೆಯುವ ಮೂಲಕ ಲಿಂಗಾಯತನಾಗಬಹುದು. ಬಸವಾದಿ ಲಿಂಗಾಯತ ಮುಖಂಡರು ಕುಂಬಾರ, ಗಾಣಿಗ, ನೇಕಾರ, ಚಮ್ಮಾರ, ಮುಂತಾದ ಲಿಂಗಾಯತರಾಗಬಯಸಿದವರಿಗೆಲ್ಲಾ ಲಿಂಗಪ್ರದಾನ ಮಾಡಿ ಅವರನ್ನು ಲಿಂಗಾಯತಕ್ಕೆ ಧರ್ಮಾಂತರಗೊಳಿಸಿದುದು ಸುಪ್ರಸಿದ್ಧವಾಗಿದೆ. ಈ ಧರ್ಮಾಂತರದ ವ್ಯಾಪ್ತಿಯನ್ನು ವಿವರಿಸುತ್ತಾ ಡಾ. ಕಲಬುರ್ಗಿಯವರು ಹೀಗನ್ನುತ್ತಾರೆ:

"ತೀರ ಮೆಲಿನ ಸ್ತರದಿಂದ ತೀರ ಕೆಳಗಿನ ಸ್ತರದವರೆಗಿನ ಎಲ್ಲ ಶ್ಭ್ರೆಣಿಯ ಜಾತಿನಿರಸನ ಭಾವದಿಂದ ಶರಣಧರ್ುದಏಕೀಭವಿಸಿದರು. ಕೆಳಗಿನ ಸ್ತರದಿಂದ ಬಂದವರನ್ನಂತೂ ಶರಣರು ಪಿರಿಯ ಮಾಹೇಶ್ವರರೆಂಬ ಪದದಿಂದ ಗೌರವಿಸಿದರು. ಪರಸ್ಪರ ಮುಟ್ಟಿಸಿಕೊಳ್ಳುವ, ನಮಸ್ಕರ ಹೇಳುವ, ಪಾದಪೂಜೆ ಮಾಡುವ, ಪಾದೋದಕ ಸ್ವೀಕರಿಸುವ, ಪರಸ್ಪರ ಮನೆಗಳಲ್ಲಿ ಪ್ರಸಾದ ಸೇವಿಸುವ, ಅಂದರೆ, ಒಂದೇ ಪಂಕ್ತಿ ಯಲ್ಲಿ ಊಟಮಾಡುವ (ಸಹಭೋಜನ), ಒಂದೇ ತಟ್ಟೆಯಲ್ಲಿ ಊಟಮಾಡುವ (ಏಕಭಾಜನ) ಉಪಕ್ರಮಗಳು ಬಹಿರಂಗವಾಗಿಯೇ ಜರುಗತೊಡಗಿದವು [33].

4. ವೀರಶೈವನು ಯಜ್ಞೋಪವೀತವನ್ನು ಧರಿಸಬೇಕು[39]; ಶೂದ್ರನು ತಂದ ಹೂಪತ್ರೆಗಳಿಂದ (ಲಿಂಗೀಬ್ರಾಹ್ಮಣನು) ಲಿಂಗಪೂಜೆ ಮಾಡಿದರೆ ಅವನು ಅಧಃಪತನವನ್ನು ಹೊಂದುತ್ತಾನೆ[40]; ಪಂಚಯಜ್ಞಗಳಲ್ಲಿ ಒಂದಾದ ದೇವಯಜ್ಞವೆಂದರೆ ಸಮಿತ್ ಮುಂತಾದುವುಗಳಿಂದ ಅಗ್ನಿಗೆ ಹವಿಸ್ಸನ್ನು ಅರ್ಪಿಸುವುದು; . . . ಬ್ರಾಹ್ಮಣರಿಗೆ ಅನ್ನ ಕೊಡುವುದು . . .[41], ಮುಂತಾದ ಮಾತುಗಳು ಬ್ರಾಹ್ಮಣ ಪಾರಮ್ಯ ಮತ್ತು ಶೂದ್ರನೀಚತನವನ್ನು ಪ್ರತಿಧ್ವನಿಸುತ್ತವೆ. ಅದೇ ರೀತಿ ವೀರಶೈವರಿಗೆ ಗಾಯತ್ರೀಮಂತ್ರಪಠನೆಯನ್ನೂ, ಸಂಧ್ಯಾವಂದನೆಯನ್ನೂ ಹೇಳಲಾಗಿದೆ. ಆದರೆ ವಚನೋಕ್ತ ಲಿಂಗಾಯತವು ಯಜ್ಞೋಪವೀತಧಾರಣೆ, ಗಾಯತ್ರೀಮಂತ್ರಪಠನೆ, ಜಾತಿತಾರತಮ್ಯ, ಯಜ್ಞ, ಮುಂತಾದ ವೇದಗಳ ಕರ್ಮಕಾಂಡವನ್ನು ತೀವ್ರವಾಗಿ ವಿರೋಧಿಸುತ್ತದೆ.

5. ಲಿಂಗಾಯತದ ಜೀವಾಳವಾದ ಷಟಸ್ಥಲ ಸಿದ್ಧಾಂತದ ಬಗೆಗೂ ಆಗಮಗಳಲ್ಲಿ ಸ್ಪಷ್ಟ ಉಲ್ಲೇಖವಿಲ್ಲ. ಸೂಕ್ಷಾಗಮದ ಕ್ರಿಯಾಪಾದದಲ್ಲಿ ಪರಶಿವ ಗಿರಿಜೆಗೆ ಹೀಗೆ ಹೇಳುತ್ತಾನೆ: ಷಟ್ಸ್ಥಲಾತ್ಮಕವಾದ ಈ ರಹಸ್ಯ ಪೂಜಾವಿಧಾನವನ್ನು ಕೇಳು: ಭಕ್ತ ಸ್ಥಳದಲ್ಲಿ ಭಸ್ಮರುದ್ರಾಕ್ಷಗಳನ್ನು ಧರಿಸಿ ಕುಳಿತು, ಅನಂತರ ಮಾಹೇಶ್ವರ ಸ್ಥಲದಲ್ಲಿ ಷಡಕ್ಷರ ಜಪ ಮಾಡಿ, ಪ್ರಸಾದಿ ಸ್ಥಲವನ್ನು ಆಶ್ರಯಿಸಿ ಲಿಂಗಮೂರ್ತಿಯನ್ನು ಅಂಗೈಯ್ಯಲ್ಲಿಟ್ಟುಕೊಂಡು, ಪ್ರಾಣಲಿಂಗಿಸ್ಥಲದಲ್ಲಿ ಭಕ್ತಿಯಿಂದ ಲಿಂಗವನ್ನು ಪೂಜಿಸಿ, ಶರಣಸ್ಥಲದಲ್ಲಿ ಶಿವನಿಗೆ ಆನಂದದಿಂದ ಅರ್ಪಣೆ ಮಾಡಿ, ಐಕ್ಯಸ್ಥಲದಲ್ಲಿ ಪ್ರಸಾದವನ್ನು ಸ್ವೀಕರಿಸಿ ತೃಪ್ತಿಯನ್ನು ಹೊಂದಬೇಕು. ಹೀಗೆ ಸಮರಸಭಾವದಿಂದ ಅಂಗಷಟ್ಸ್ಥಲ ಯೋಗದಿಂದ ಶಿವನನ್ನು ಆರಾಧಿಸುವವನು ವೀರಶೈವನೆನಿಸುವನು[42]. ಅಂದರೆ, ಸೂಕ್ಷಾಗಮದ ಪ್ರಕಾರ, ಮೊದಲನೆಯ ಎರಡು ಸ್ಥಲಗಳಲ್ಲಿ ಲಿಂಗಪೂಜೆ ಇಲ್ಲ ಮತ್ತು ಪ್ರಸಾದಸ್ವೀಕಾರವೇ ಐಕ್ಯಸ್ಥಲ. ಷಟ್ಸ್ಥಲ ಸಿದ್ಧಾಂತ ಗೊತ್ತಿಲ್ಲದ ಯಾರೋ ಇಂಥ ಮಾತುಗಳನ್ನು ಸೇರಿಸಿರಬೇಕು[43].

ಅದೇ ರೀತಿ, ಆಗಮೋಕ್ತ ಅಷ್ಟಾವರಣದ ಗುರುಪರಿಕಲ್ಪನೆಗೂ ವಚನೋಕ್ತ ಗುರುಕಲ್ಪನೆಗೂ ಒಂದು ಸ್ಪಷ್ಟ ವ್ಯತ್ಯಾಸವಿದೆ. ಚಂದ್ರಜ್ಞಾನಾಗಮದ ಪ್ರಕಾರ ಯಾವ ವೀರಶೈವನೂ ಕುಳ್ಳ, ಕುರೂಪಿ, ಗೂನು ಬೆನ್ನಿನ, ವಿಕಲಾಂಗ, ಕೆಟ್ಟ ಚಟವಿರುವ, ಅಜ್ಞಾನಿಯಾದ ವ್ಯಕ್ತಿಯನ್ನು ಗುರುವೆಂದು ಪರಿಗಣಿಸಬಾರದು (ದ್ವಿತೀಯ ಪಟಲ, 61-64). ಅವನು ಶೈವ ಸಿದ್ಧಾಂತದ ತತ್ತ್ವಗಳನ್ನು ಅರಿತವನೂ, (ಲಿಂಗ) ಪ್ರತಿಷ್ಠಾಪನೆಗೆ ಸಂಬಂಧಿಸಿದ ಮಂತ್ರಗಳನ್ನು ಬಲ್ಲವನೂ ಆಗಿರಬೇಕು (49). "ಯಾರ ಸಂಪರ್ಕದಿಂದ ಅರಿವಿನ ಆನಂದ ಉಂಟಾಗುವುದೋ ಅಂತಹವನನ್ನೇ ಬುದ್ಧಿಮಾನ್ ಶಿಷ್ಯನು ಗುರುವಾಗಿ ಆಯ್ದುಕೊಳ್ಳಬೇಕು" (66). "ಅದಕ್ಕಾಗಿ, ಪ್ರಾರಂಭದಲ್ಲಿ ವೇದ ಪಾರಂಗತನಾದ, ಜ್ಞಾನಿಯಾದ, ಸೌಭಾಗ್ಯ ಶಾಲಿಯಾದ ... ಬ್ರಾಹ್ಮಣನ ಬಳಿಗೆ ಹೋಗಿ ಅವನನ್ನು ಗುರುವೆಂದು ಆರಾಧನೆ ಮಾಡಬೇಕು" (67).

ಇದರಿಂದ ವ್ಯಕ್ತವಾಗುವ ಅಂಶವೇನೆಂದರೆ: ಗುರುವು ಬ್ರಾಹ್ಮಣನಾಗಿರಬೇಕು, ಶೈವ ಸಿದ್ಧಾಂತ ಮತ್ತು ವೇದ ಪಾರಂಗತನಾಗಿರಬೇಕು ಮತ್ತು ಸ್ಥಾವರಲಿಂಗ ಪ್ರತಿಷ್ಠಾಪನೆಯ ಮಂತ್ರಗಳನ್ನು ಬಲ್ಲವನಾಗಿರಬೇಕು, ಎಂದು ಸ್ಪಷ್ಟವಾಗಿಯೇ ಹೇಳಿರುವುದರಿಂದ, ಅವನು ನಿಶ್ಚಿತವಾಗಿಯೂ ವಚನೋಕ್ತ ಲಿಂಗಾಯತ ಗುರುವಲ್ಲ. ವಚನಕಾರರು ಶೈವ ಅಥವಾ ಆಗಮೋಕ್ತ ವೀರಶೈವ ಗುರುವಿಗೂ ವಚನೋಕ್ತ ಲಿಂಗಾಯತ ಗುರುವಿಗೂ ಇರುವ ಅಂತರವನ್ನು ತಿಳಿದುಕೊಂಡಿ ದ್ದುದರಿಂದಲೇ ಅವರು ಪದೇ ಪದೇ "ಶೈವ ಗುರುವಿನಿಂದ ಲಿಂಗ ದೀಕ್ಷೆಪಡೆಯಬಾರದು" ಎಂದು ಒತ್ತಿ ಹೇಳುತ್ತಿದ್ದರು. ಶೈವ ಸಿದ್ಧಾಂತದ ಗುರು ಬ್ರಾಹ್ಮಣ, ಲಿಂಗಾಯತರ ಗುರು ಲಿಂಗಾಯತನೇ ಹೊರತು ಬ್ರಾಹ್ಮಣನಲ್ಲ. ಇಷ್ಟಾದರೂ "ಅಷ್ಟಾವರಣಗಳಲ್ಲಿ ವೀರಶೈವರನ್ನು ಗುರುತಿಸುವಂತಹ ಒಂದು ಮುಖ್ಯವಾದ ಆವರಣ ಯಾವುದು ಎಂದರೆ ಅದು ಇಷ್ಟಲಿಂಗ ಧಾರಣೆ ಎಂದು (ಆಗಮಗಳಲ್ಲಿಯೂ, ಸಿದ್ಧಾಂತ ಶಿಖಾಮಣಿಯಲ್ಲಿಯೂ) ಹೇಳಿದ್ದಾರೆ. . . ಇದೆಲ್ಲವನ್ನೂ ನೋಡಿದಾಗ, ವೀರಶೈವರಿಗೆ ವೇದಾಗಮಗಳೇ ಮೂಲ ಎಂಬುದನ್ನು ನಿರ್ವಿವಾದವಾಗಿ ಒಪ್ಪಿಕೊಳ್ಳಬೇಕಾಗುತ್ತದೆ" ಎಂಬ ಪೂಜ್ಯ ಶ್ರೀ ಕಾಶೀ ಜಗದ್ಗುರುಗಳ ಹೇಳಿಕೆಯನ್ನು ಪುನರ್ ಪರಿಶೀಲಿಸಬೇಕಾಗುತ್ತದೆ.

ಇದೇ ಆಗಮದ ಏಳನೆಯ ಪಟಲದಲ್ಲಿ ರುದ್ರಾಕ್ಷಿಧಾರಣೆಯ ಬಗೆಗೂ ಇಂಥದೇ ಸಿದ್ಧಾಂತದ ಮಂಡನೆಯಿದೆ. "ಶಿವನ ಆಜ್ಞೆಯಂತೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಜಾತಿಯ ರುದ್ರಾಕ್ಷ ವೃಕ್ಷಗಳು ಭೂಮಿಯ ಮೇಲೆ ಉತ್ಪನ್ನವಾಗಿವೆ; ಅವುಗಳಲ್ಲಿ ಅವೇ ಜಾತಿಯ ಶುಭ ರುದ್ರಾಕ್ಷಗಳು ಹುಟ್ಟುತ್ತವೆ; ಬಿಳಿಯ ರುದ್ರಾಕ್ಷಗಳು ಬ್ರಾಹ್ಮಣ, ಕೆಂಪು ಬಣ್ಣದವು ಕ್ಷತ್ರಿಯ, ಹಳದಿ ಬಣ್ಣದವು ವೈಶ್ಯ ಮತ್ತು ಕಪ್ಪು ಬಣ್ಣದವು ಶೂದ್ರ ಎಂದು ಕರೆಯಲ್ಪಟ್ಟಿವೆ. ಬ್ರಾಹ್ಮಣನು ಬಿಳಿಯ ರುದ್ರಾಕ್ಷಗಳನ್ನು ಧರಿಸಬೇಕು; ಕ್ಷತ್ರಿಯನು ಕೆಂಪು . . .ವೈಶ್ಯನು . . . ಶೂದ್ರನು ಕಪ್ಪು ಬಣ್ಣದವುಗಳನ್ನು ಧರಿಸಬೇಕು" (ಚಂದ್ರಜ್ಞಾನಾಗಮ, ಏಳನೆಯ ಪಟಲ, 11-13). ಹಾಗೆಯೇ ತ್ರೈವರ್ಣಿಕರು ಪಂಚಾಕ್ಷರೀ ಮಂತ್ರವನ್ನು ಓಂ ಪೂರ್ವಕವಾಗಿ, ಸ್ತ್ರೀಯರೂ ಶೂದ್ರರೂ ಪ್ರಣವ ವಿನಾ ಜಪಿಸಬೇಕು, ಎಂಬ ಹೇಳಿಕೆಯೂ ವೈದಿಕ ಮತದಂತೆ ಬ್ರಾಹ್ಮಣ ಪಾರಮ್ಯವನ್ನೇ ಸಾರುತ್ತದೆ. ಹೀಗೆ ಪದೇ ಪದೇ ಜಾತಿ ಪದ್ಧತಿಯನ್ನೇ ಎತ್ತಿ ಹಿಡಿಯುವ ಆಗಮಿಕ ವೀರಶೈವವು ಇಷ್ಟಲಿಂಗ ಧಾರಿಗಳೆಲ್ಲ ಸಮಾನರೆಂದು ಘೋಷಿಸಿದ ವಚನೋಕ್ತ ಲಿಂಗಾಯತಕ್ಕೆ ವಿರುದ್ಧವಿದೆ.

ಪ್ರತಿ ಆಗಮದಲ್ಲಿಯೂ ಪೂರ್ವಭಾಗ ಮತ್ತು ಉತ್ತರ ಭಾಗ ಎಂದು ಎರಡು ಭಾಗಗಳಿವೆಯೆಂದೂ, ಆ ಉತ್ತರಭಾಗದಲ್ಲಿ ವೀರಶೈವಧರ್ಮದ ವಿವರಗಳಿವೆಯೆಂದೂ ವಾದಿಸಲು ವಿದ್ವಾಂಸರು ಸಿದ್ಧಾಂತಾಖ್ಯೇ ಮಹಾತಂತ್ರೇ ಕಾಮಿಕಾದ್ಯೇ ಶಿವೋದಿತೇ/ನಿರ್ದಿಷ್ಟಮುತ್ತರೇ ಭಾಗೇ ವೀರಶೈವಮತಂ ಪರಂ// ಎಂಬ ಸಿದ್ಧಾಂತ ಶಿಖಾಮಣಿಯ (5.14) ಶ್ಲೋಕವನ್ನು ಉದ್ಧರಿಸುತ್ತಾರೆ. ಚಂದ್ರಜ್ಞಾನಾಗಮದ ಉತ್ತರಭಾಗದಲ್ಲಿ ವೈದಿಕ ಕರ್ಮಾಚರಣೆಯ ಆವಶ್ಯಕತೆಯನ್ನು ಒತ್ತಿ ಹೇಳಲಾಗಿದೆ. ವೀರಶೈವರಿಗೆ 'ಉಚಿತವಾದ' ವರ್ಣಾಶ್ರಮ ಧರ್ಮವು ಜ್ಞಾನ ಮಾರ್ಗಕ್ಕೆ ವಿರುದ್ಧವಲ್ಲವೆ, ಎಂಬ ಬೃಹಸ್ಪತಿಯ ಪ್ರಶ್ನೆಗೆ (ದ್ವಾದಶ ಪಟಲ, ಶ್ಲೋ.1-3) ಪರಶಿವನು ಜ್ಞಾನ-ಕರ್ಮಗಳು (ಕುಂಟ-ಕುರುಡರಂತೆ) ಅನ್ಯೋನ್ಯಾಶ್ರಯಿಗಳೇ ಹೊರತು, ಪರಸ್ಪರ ವಿರೋಧಿಗಳಲ್ಲ; ಆದುದರಿಂದ, (ಮೋಕ್ಷಸಾಧನವಾದ ಜ್ಞಾನಕ್ಕೆ) ವರ್ಣಾಶ್ರಮ ಧರ್ಮ ಸಹಿತ ವೈದಿಕ ಕರ್ಮ ಆವಶ್ಯಕವೆಂದು ಹೇಳುತ್ತಾನೆ (4-8). ವರ್ಣಾಶ್ರಮ ಧರ್ಮದ ಆವಶ್ಯಕತೆಯನ್ನು ತಿಳಿಸಲೆಂದೇ ರಚಿತವಾದ ಚಂದ್ರಜ್ಞಾನಾಗಮದ ಉತ್ತರಭಾಗದ 'ವರ್ಣಾಶ್ರಮ ಧರ್ಮಾವಶ್ಯಕತಾಕಥನಂ' ಎಂಬ ಹೆಸರಿನ ಈ ಪಟಲವು ತನ್ನ ಹಿತವನ್ನು ಬಯಸುವವನಾದ ಸಾಧಕನಿಗೆ ವರ್ಣಾಶ್ರಮ ಧರ್ಮ ನಿಯಂತ್ರಿತವಾದ ಕರ್ಮವನ್ನು ಬಿಡಲು ಸಾಧ್ಯವಿಲ್ಲ (9); ಬುದ್ಧಿಪೂರ್ವಕವಾಗಿ ಕರ್ಮವನ್ನು ಮಾಡದಿರುವುದು ನಿಶ್ಚಿತವಾಗಿ ದೋಷಕ್ಕೆ ದಾರಿಯಾಗುತ್ತದೆ (12); ಆದುದರಿಂದ, ಬುದ್ಧಿಶಾಲಿಗಳು ತಮ್ಮ ತಮ್ಮ ವರ್ಣಾಶ್ರಮಗಳಿಗೆ ಉಚಿತವಾದ ಧರ್ಮವನ್ನು ಆದರ ಪೂರ್ವಕವಾಗಿ ಆಚರಿಸಬೇಕು; ಇಲ್ಲವಾದರೆ ಅವನು ನಿಶ್ಚಿತವಾಗಿ ಪತಿತನಾಗುವನು; ವರ್ಣಾಶ್ರಮಾಚಾರಗಳನ್ನು ಬಿಟ್ಟ, ಜ್ಞಾನದ ವೈಭವವೂ ಸಿದ್ಧಿಸದ ವ್ಯಕ್ತಿಯು ಬುಡವು ಕಡಿಯಲ್ಪಟ್ಟ ಮರದಂತೆ ಬಿದ್ದು ಹೋಗುತ್ತಾನೆ; ಆದುದರಿಂದ, ನಿಗಮಾಗಮಗಳಿಂದ ವಿಧಿಸಲ್ಪಟ್ಟ ವರ್ಣಾಶ್ರಮಾಚಾರವನ್ನು ಸತತವಾಗಿ, ಅವಶ್ಯವಾಗಿ ಆಚರಿಸಬೇಕು (16), ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತದೆ.

ಇದರಿಂದ ವಿದಿತವಾಗುವ ಅಂಶವಿದು: ಶೈವ ಸಿದ್ಧಾಂತವನ್ನು ಪ್ರತಿನಿಧಿಸುವ ಆಗಮಗಳಲ್ಲಿ ವೈದಿಕ ಸಂಪ್ರದಾಯ (ಜಾತಿತಾರತಮ್ಯ, ಕರ್ಮಕಾಂಡ, ಮುಂತಾದುವುಗಳನ್ನು ಬೋಧಿಸುವ ಸಂಪ್ರದಾಯ)ವಿದೆಯೇ ಹೊರತು ವಚನೋಕ್ತ ಲಿಂಗಾಯತವಿಲ್ಲ. ವಚನೋಕ್ತ ಲಿಂಗಾಯತವು ಆಗಮೋಕ್ತ ವೀರಶೈವದಿಂದ ಹುಟ್ಟಿತು ಎಂಬುದನ್ನು ನಾವು ವಾದಕ್ಕೋಸ್ಕರ ಒಪ್ಪಿಕೊಂಡರೂ ಸಹ ಅದು ಆಗಮೋಕ್ತ ಸಿದ್ಧಾಂತಗಳನ್ನೂ ಆಚರಣೆಗಳನ್ನೂ ವಿಪರೀತವಾಗಿ ಪರಿಷ್ಕರಿಸಿತು. * ಈ ಪರಿಷ್ಕರಣ ಎಷ್ಟು ವಿಪರೀತವೆಂದರೆ ಅವು ಆಗಮಿಕ ಮೂಲ ಸಿದ್ಧಾಂತ ಮತ್ತು ಆಚಾರಗಳಿಗೆ ವಿರುದ್ಧವಾಗಿದ್ದವು. ಹೀಗೆ, ಅದು ಯಾವತ್ತು ಜಾತಿಭೇದ ನಿರಾಕರಿಸಿ, ಇಷ್ಟಲಿಂಗಧಾರಿಗಳೆಲ್ಲ ಸಮಾನರು, ಉಪನಯನ ಸಂಸ್ಕಾರಕ್ಕೊಳಗಾದವರಿಗಷ್ಟೇ ಅಲ್ಲ, ಶೂದ್ರರಿಗೂ, ಸ್ತ್ರೀಯರಿಗೂ ಮೋಕ್ಷಪಡೆಯುವ ಅಧಿಕಾರವಿದೆ ಎಂದು ಸಾರುವ ಮೂಲಕವೂ ಪ್ರಾಣಿಹಿಂಸೆಯನ್ನು ಒಳಗೊಂಡ ಕರ್ಮಕಾಂಡಗಳನ್ನು ನಿರಾಕರಿಸುವ ಮೂಲಕವೂ ಕಾಯಕ ಮತ್ತು ದಾಸೋಹಗಳಿಗೆ ಒತ್ತು ಕೊಡುವ ಮೂಲಕವೂ ತನ್ನ ಪ್ರತಿಭಟನೆ ಸಾರಿತೋ ಅಂದೇ ಅದು, ವೇದಗಳಿಂದಲೂ ವೇದಾನುಸಾರವಾದ ಆಗಮಗಳಿಂದಲೂ ಪ್ರತ್ಯೇಕವಾಯಿತು. ದೈವ, ಆತ್ಮ, ಮೋಕ್ಷ, ಜ್ಞಾನ, ಮಾಯೆ, ಅಜ್ಞಾನ (ಅವಿದ್ಯೆ ಅಥವಾ ಮರೆವು), ಮುಂತಾದ ಉಪನಿಷತ್ತು ಮತ್ತು ಆಗಮಗಳಲ್ಲಿರುವ ಪರಿಕಲ್ಪನೆಗಳು ವಚನೋಕ್ತ ಲಿಂಗಾಯತದಲ್ಲಿದ್ದರೂ, ಅವುಗಳ ಸ್ವರೂಪ ಮತ್ತು ಸಂದೇಶ ಬೇರೆಯೇ ಇವೆ. ಅಲ್ಲಿ ಅವು ಇನ್ನೂ ಬೀಜರೂಪದಲ್ಲಿವೆ, ಅಸ್ಪಷ್ಟವಾಗಿವೆ; ವಚನಗಳಲ್ಲಿ ಅವು ವಿಸ್ತಾರವನ್ನೂ ಸ್ಪಷ್ಟತೆಯನ್ನೂ ಖಚಿತತೆಯನ್ನೂ ಪಡೆದುಕೊಂಡು, ಆದಷ್ಟು ಸ್ವವಿರೋಧದಿಂದ ಮುಕ್ತವಾಗಿವೆ. ಆದುದರಿಂದ, ವಚನೋಕ್ತ ಲಿಂಗಾಯತ ಎಂಬ ವೃಕ್ಷಕ್ಕೆ ಆಗಮೋಕ್ತ ವೀರಶೈವ ಎಂಬುದು ಬೀಜ ಎಂಬ ಮಾತನ್ನು ಯಾರೂ ಅಲ್ಲಗಳೆಯುವುದಿಲ್ಲವಾದರೂ, ಅವೆರಡೂ ಒಂದೇ ಎಂದು ವಾದಿಸುವುದು ಬೀಜ ಮತ್ತು ವೃಕ್ಷ ಎರಡು ಒಂದೇ ಎಂದು ವಾದಿಸಿದಂತೆ. ಒಂದು ವೇಳೆ ಆಗಮೋಕ್ತ ವೀರಶೈವವೇ ವಚನೋಕ್ತ ಲಿಂಗಾಯತವಾಗಿದ್ದರೆ, ಬಸವಾದಿ ಶರಣರು ಏನೂ ಕ್ರಾಂತಿ ಮಾಡಲೇ ಇಲ್ಲ ಎಂದಾಗುತ್ತದೆ. ಅವರು ಧರ್ಮೋ-ಸಾಮಾಜಿಕ ಕ್ರಾಂತಿ ಮಾಡಿದ್ದುದು ನಿಜವಾದರೆ ಅವರು ಆಗಮಿಕ (ಮತ್ತು ವೈದಿಕ?) ವೀರಶೈವವನ್ನ್ನು ಕಿತ್ತು ಅದರ ಜಾಗದಲ್ಲಿ ವಚನೋಕ್ತ ಲಿಂಗಾಯತವನ್ನು ನೆಟ್ಟು, ಬೆಳೆಸಿದುದು ಸತ್ಯವೆಂದಾಗುತ್ತದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ಬಸವಾದಿ ವಚನಕಾರರು ಆಗಮಗಳಿಂದ ಪ್ರಭಾವಿತರಾಗಿದ್ದರು ಎಂಬುದೇ ಬೇರೆ, ಅವರು ಆಗಮೋಕ್ತ ವೀರಶೈವದ ಆಚಾರ-ವಿಚಾರಗಳನ್ನು ಕಿತ್ತು ಅದರ ಜಾಗದಲ್ಲಿ ವಚನೋಕ್ತ ಲಿಂಗಾಯತವನ್ನು ಹುಟ್ಟು ಹಾಕಿದರು ಎಂಬುದೇ ಬೇರೆ, ಎನ್ನುವುದು ಸ್ಪಷ್ಟವಾಗುತ್ತದೆ.

ಮೇಲೆ ಮಂಡಿಸಲಾಗಿರುವ ವಾದಗಳಿಗೆ ಪ್ರತಿಯಾಗಿ ಆಗಮವಾದಿಗಳು ಆಗಮಿಕ ವೀರಶೈವರು (1) ಕೈಲಾಸ ಎಂಬುದು ಒಂದು ಸ್ಥಳವಲ್ಲ, 'ದೇಹೋ ದೇವಾಲಯಃ'[43] ಎಂದೂ, (2) 'ಲಿಂಗಾಂಗ ಸಾಮರಸ್ಯವೇ ಜೀವನದ ಗುರಿಯೇ ಹೊರತು, ಚತುಷ್ಪದ ಮೋಕ್ಷವಲ್ಲ', ಎಂದೂ (3) 'ಜಾತಿ ಭೇದ ಮಾಡಬಾರದು', ಎಂದೂ ನಂಬುತ್ತಾರೆಂದು ತೋರಿಸಲು ವಿವಿಧ ಆಗಮಗಳ ಶ್ಲೋಕಗಳನ್ನು ಉದ್ಧರಿಸುತ್ತಾರೆ. ವಿವಿಧ ಆಗಮಗಳಲ್ಲಿ ಈ ಮಾತುಗಳಿರುವುದು ಸತ್ಯವೇ. ಆದರೆ, ಆಗ ಆಗಮಗಳಲ್ಲಿ ಪರಸ್ಪರ ವಿರೋಧೀ ಮಾತುಗಳಿವೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆಯಲ್ಲದೆ, ಏಕೆ ಸ್ವವಿರೋಧವಿದೆ ಎಂಬುದನ್ನೂ ಸ್ಪಷ್ಟಪಡಿಸಬೇಕಾಗುತ್ತದೆ.

ಆಗಮಗಳಲ್ಲಿ ಪರಸ್ಪರ ವಿರೋಧೀ ಮಾತುಗಳಿವೆ ಎಂಬುದು ಕುತೂಹಲಕಾರಿ ವಿಷಯ. ವೇದಗಳೂ ಉಪನಿಷತ್ತುಗಳೂ ಆಗಮಗಳೂ ಬೇರೆ ಬೇರೆ ಕಾಲದಲ್ಲಿ, ಬೇರೆ ಬೇರೆ ಜನರಿಂದ ಬರೆಯಲ್ಪಟ್ಟಿವೆಯೇ ಹೊರತು, ಒಬ್ಬ ವ್ಯಕ್ತಿಯಿಂದ ಒಂದೇ ಕಾಲದಲ್ಲಿ ಬರೆಯಲ್ಪಡಲಿಲ್ಲ. ಆಗಮಗಳಲ್ಲಿರುವ ಎಲ್ಲ ಶ್ಲೋಕಗಳೂ ಒಬ್ಬನಿಂದ ರಚಿತವಾಗಿದ್ದರೆ ಪ್ರಾಯಶಃ ಅವುಗಳಲ್ಲಿ ಇಂಥ ಸ್ವವಿರೋಧವಿರುತ್ತಿರಲಿಲ್ಲ.

ಈ ಮೇಲಿನ ವಿಶ್ಲೇಷಣೆಯಿಂದ, ಇಂದಿನ ಲಿಂಗಾಯತರು ಆಚರಿಸುತ್ತಿರುವ ಧರ್ಮವು ಖಂಡಿತವಾಗಿಯೂ ಆಗಮೋಕ್ತ ವೀರಶೈವವಲ್ಲ, ಅದು ವಚನೋಕ್ತ ಲಿಂಗಾಯತ ಎಂಬುದು ಸ್ಪಷ್ಟವಾಗುತ್ತದೆ. ವಚನಗಳಲ್ಲಿ ಲಿಂಗಾಯತ ಎಂಬ ಪದದ ಬಳಕೆ ಕಡಿಮೆ ಇರಬಹುದು ಅಥವಾ ಇಲ್ಲದೇ ಇರಬಹುದು. ವಚನಕಾರರೇ "ವೀರಶೈವ" ಎಂಬ ಪದವನ್ನು ಬಳಸಿರಬಹುದು. ಆದರೂ, ಸ್ಪಷ್ಟತೆಯ ಸಲುವಾಗಿ ಆಗಮೋಕ್ತ ಧರ್ಮವನ್ನು "ವೀರಶೈವ" ಎಂದೂ ವಚನೋಕ್ತ ಧರ್ಮವನ್ನು "ಲಿಂಗಾಯತ" ಎಂದೂ ಕರೆಯುವುದೇ ಸೂಕ್ತ ಮತ್ತು ಹೆಚ್ಚು ಸಮರ್ಥನೀಯ.

ಸಂದರ್ಭ ಸೂಚಿ

1. ಡಾ.ಆರ್.ಸಿ.ಹಿರೇಮಠ: ಮಹಾಯಾತ್ರೆ (ಕನ್ನಡ ವಿಶ್ವವಿದ್ಯಾಲಯ, ಹಂಪಿ, 1997), ಪು.88-104;
ಡಾ.ಎಂ.ಚಿದಾನಂದ ಮೂತರ್ಿ: ವೀರಶೈವ ಧರ್ಮ: ಭಾರತೀಯ ಸಂಸ್ಕೃತಿ (ಮಿಂಚು ಪ್ರಕಾಶನ, ಬೆಂಗಳೂರು, 2000), ಪು.42-65;
ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ವೇದಾಗಮಗಳು ಮತ್ತು ಶಿವಶರಣರು (ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು, 2002), ವಿವಿಧ ಲೇಖನಗಳು.
2. ಸಮಗ್ರ ವಚನ ಸಂಪುಟ, ಸಂಪುಟ 6, (ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001) ವ. 171.
3. ಸಮಗ್ರ ವಚನ ಸಂಪುಟ, ಸಂಪುಟ 2, (ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001) ವ. 324.
4. ಸಮಗ್ರ ವಚನ ಸಂಪುಟ, ಸಂಪುಟ 4, (ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001) ವ. 1452.
5. ಬಸವನಾಳ ಶಿವಲಿಂಗಪ್ಪನವರು (ಸಂ): ಬಸವಣ್ಣನವರ ಷಟ್ಸ್ಥಲದ ವಚನಗಳು (ಮೈಸೂರು ಸರಕಾರ, ಬೆಂಗಳೂರು, 1968), ವ. 758.
6. ಸಂ.ಶಿ.ಭೂಸನೂರಮಠ (ಸಂ): ವಚನ ಸಾಹಿತ್ಯ ಸಂಗ್ರಹ (ಮೈಸೂರು ಸರಕಾರ, ಬೆಂಗಳೂರು, 1965), ಪು.13, ವ. 43.
7. ಸಮಗ್ರ ವಚನ ಸಂಪುಟ, ಸಂಪುಟ 5, (ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001) ವ. 372.
8. ಬಸವನಾಳ ಶಿವಲಿಂಗಪ್ಪನವರು (ಸಂ): ಬಸವಣ್ಣನವರ ಷಟ್ಸ್ಥಲದ ವಚನಗಳು, ವ. 548.
9. ಅದರಲ್ಲೇ: ವ. 575.
10. ಸಂ.ಶಿ.ಭೂಸನೂರಮಠ (ಸಂ): ಪೂವರ್ೋಕ್ತ, ಪು.209, ವ. 17.
11. ಅದರಲ್ಲೇ: ಪು.210 ವ.21.
12. ಡಾ.ಆರ್.ಸಿ.ಹಿರೇಮಠ (ಸಂ): ಚೆನ್ನಬಸವಣ್ಣನವರ ವಚನಗಳು (ಕನರ್ಾಟಕ ವಿಶ್ವವಿದ್ಯಾಲಯ, 1971), ವ. 105.
13. ಬಸವನಾಳ ಶಿವಲಿಂಗಪ್ಪನವರು (ಸಂ): ಪೂವರ್ೋಕ್ತ, ವ. 250.
14. ಅದರಲ್ಲೇ, ವ. 864.
15. ಸಮಗ್ರ ವಚನ ಸಂಪುಟ, ಸಂಪುಟ 7, (ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001) ವ. 772.
16 ಬಸವನಾಳ ಶಿವಲಿಂಗಪ್ಪನವರು (ಸಂ): ಪೂವರ್ೋಕ್ತ, ವ. 174.
17. ಸಮಗ್ರ ವಚನ ಸಂಪುಟ, ಸಂಪುಟ 4, (ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001) ವ. 1613.
18. ಸಂ.ಶಿ.ಭೂಸನೂರಮಠ (ಸಂ): ಪೂವರ್ೋಕ್ತ, ಪು. 13, ವ. 43.
19. ಸಮಗ್ರ ವಚನ ಸಂಪುಟ, ಸಂಪುಟ 6, (ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001) ವ. 1219.
20. ಬಸವನಾಳ ಶಿವಲಿಂಗಪ್ಪನವರು (ಸಂ): ಪೂವರ್ೋಕ್ತ, ವ. 719.
21. ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ಕಾರಣಾಗಮ (ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು, 1999), ಐದನೆಯ ಪಟಲ, ಶ್ಲೋ.4, 5, 23, ಇತ್ಯಾದಿ.
22. ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ಸೂಕ್ಷ್ಮಾಗಮ (ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು, 2001), ಐದನೆಯ ಪಟಲ, 1-3.
23. ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ಪಾರಮೇಶ್ವರಾಗಮ (ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು,2000), ಐದನೆಯ ಪಟಲ, 1.
24. ಸಮಗ್ರ ವಚನ ಸಂಪುಟ, ಸಂಪುಟ 6, (ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001) ವ. 47.
25. ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ಸೂಕ್ಷ್ಮಾಗಮ, ಕ್ರಿಯಾಪಾದ (ವೀರಶೈವ ಅನುಸಂಧಾನ ಸಂಸ್ಥಾನ, ಬ ಬೆಂಗಳೂರು, 2001), ದ್ವಿತೀಯ ಪಟಲ.
26. ಸಮಗ್ರ ವಚನ ಸಂಪುಟ, ಸಂಪುಟ 4, (ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001) ವ. 1492.
27. ಡಾ.ಫ.ಗು.ಹಳಕಟ್ಟಿ (ಸಂ): ವಚನ ಶಾಸ್ತ್ರ ಸಾರ (ಭಾಗ 1) (ವೀರಶೈವ ಅಧ್ಯಯನ ಸಂಸ್ಥೆ, ಡಂಬಳ-ಗದಗ, 1982) ವ. 196.
28. ಡಾ.ಆರ್.ಸಿ.ಹಿರೇಮಠ (ಸಂ): ಚೆನ್ನಬಸವಣ್ಣನವರ ವಚನಗಳು (ಕನರ್ಾಟಕ ವಿಶ್ವವಿದ್ಯಾಲಯ, 1971), ವ. 1144.
29. ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ಪಾರಮೇಶ್ವರ ಆಗಮ (ವೀರಶೈವ ಅನುಸಂಧಾನ ಸಂಸ್ಥಾನ, ಬ ಬೆಂಗಳೂರು, 2000), ಐದನೆಯ ಪಟಲ, ಶ್ಲೋಕ 65-67.
30. ಅದರಲ್ಲೇ, ಏಳನೆಯ ಪಟಲ, 58-59.
31. ಸಮಗ್ರ ವಚನ ಸಂಪುಟ, ಸಂಪುಟ 4, (ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001) ವ. 1552.
32. ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ಕಾರಣಾಗಮ, (ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು, 1999), ಪ್ರಥಮ ಪಟಲ, 134-36.
33. ಡಾ.ಎಂ.ಎಂ.ಕಲಬುಗರ್ಿ: ಮಾರ್ಗ-4 (ಸಪ್ನಾ ಬುಕ್ ಹೌಸ್, ಬೆಂಗಳೂರು-9, 2004), ಪು. 173.
34. ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ಕಾರಣಾಗಮ, (ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು, 1999), ಮೂರನೆಯ ಪಟಲ, 71.
35. ಅದರಲ್ಲೆ, ಐದನೆಯ, ಪಟಲ, 28.
36. ಅದರಲ್ಲೆ, ಮೂರನೆ, 70.
37. ಡಾ.ಎಂ.ಶಿವಕುಮಾರ ಸ್ವಾಮಿ (ಸಂ):ಸೂಕ್ಷ್ಮಾಗಮ (ಕ್ರಿಯಾಪಾದ) (ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು, 2001), ಆರನೆಯ ಪಟಲ, 54-57.
38. ಉದಾಹರಣೆಗೆ, ನೋಡಿ: ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ಕಾರಣಗಮ, (ಕ್ರಿಯಾಪಾದ) (ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು, 1999), ಸಪ್ತಮ ಪಟಲ, 3-59.
39. ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ಚಂದ್ರಜ್ಞಾನಾಗಮ (ಕ್ರಿಯಾಪಾದ), (ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು, 2002) ಎರಡನೆಯ ಪಟಲ.
40. ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ವೇದಾಗಮಗಳು ಮತ್ತು ಶಿವಶರಣರು (ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು, 2002), ಪು. ತ
41. ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ಚಂದ್ರಜ್ಞಾನಾಗಮ (ಕ್ರಿಯಾಪಾದ), (ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು, 2002) ಏಳನೆಯ ಪಟಲ, 11-13.
42. ಅದರಲ್ಲೆ, ಎಂಟನೆ ಪಟಲ, 10.
43. ಡಾ.ಎಂ.ಶಿವಕುಮಾರ ಸ್ವಾಮಿ (ಸಂ): ಸೂಕ್ಷ್ಮಾಗಮ (ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು, 2001), ಎಂಟನೆಯ ಪಟಲ, 27.

Previousಲಿಂಗಾಯತ ಮತ್ತು ಪ್ರಜಾಪ್ರಭುತ್ವರಸ ಪ್ರಶ್ನೆ ಹಾಗೂ ಉತ್ತರಗಳು - 1Next
*