ಲಿಂಗಾಯತ ಮತ್ತು ಪ್ರಜಾಪ್ರಭುತ್ವ

*

- ರಂಜಾನ್ ದರ್ಗಾ ರವರ ಲೇಖನದಿಂದ ಆಯ್ದ ಭಾಗ

ಲಿಂಗಾಯತ (ಬಸವ) ತತ್ತ್ವಗಳು ಎಲ್ಲ ದೃಷ್ಟಿಯಿಂದಲೂ ವಿಶ್ವಮಾನ್ಯವಾಗಿವೆ. ಪ್ಲೇಟೋನ ಚಿಂತನೆಗಳು ಮತ್ತು ಬುದ್ಧನ ಸಂಘಜೀವನಕ್ರಮ ಬಿಟ್ಟರೆ ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆಯೇ ಇರಲಿಲ್ಲ. ೧೨ನೇ ಶತಮಾನದಲ್ಲಿ ಅಮೆರಿಕ ದೇಶವೇ ಇರಲಿಲ್ಲ. ಇಂಗ್ಲಂಡ್, ಫ್ರಾನ್ಸ್, ಜರ್ಮನಿ, ಚೀನ, ರಷ್ಯಾ ಹೀಗೆ ಎಲ್ಲೆಡೆ ರಾಜಪ್ರಭುತ್ವದ ಅಟ್ಟಹಾಸವೇ ಮೆರೆಯುತ್ತಿತ್ತು. ಆ ಮಧ್ಯಯುಗದಲ್ಲಿ ಕ್ರೌರ್ಯವೇ ಪ್ರಧಾನವಾಗಿತ್ತು. ಅಂಥ ಸಂದರ್ಭದಲ್ಲಿ ಬಸವಣ್ಣನವರು ಪ್ರಜಾಪ್ರಭುತ್ವದ ಕನಸು ಕಂಡರು. ರಾಜ್ಯಶಕ್ತಿಯನ್ನು ಪ್ರಜಾಪ್ರಭುತ್ವ ಶಕ್ತಿಯಾಗಿ ಪರಿವರ್ತಿಸುವ ಮೊದಲು ಜನರಲ್ಲಿ ಪ್ರಜಾಪ್ರಭುತ್ವದ ಪ್ರಜ್ಞೆ ತುಂಬ ಬಯಸಿದರು, ಆ ಮೂಲಕ, ಇದ್ದ ಸಂಪ್ರದಾಯಬದ್ಧ ಸಮಾಜದಲ್ಲೇ ಪ್ರಜಾಪ್ರಭುತ್ವವಾದಿ ಪರ್ಯಾಯ ಸಮಾಜ ರಚಿಸಿದರು. ಈ ಸಮಾಜದ ಸದಸ್ಯರೆಲ್ಲ ಭಕ್ತರೆನಿಸಿದರು, ಶರಣರೆನಿಸಿದರು. ಅವರಲ್ಲಿ ಅನೇಕರು ವಚನಗಳನ್ನು ಬರೆದು ನವಸಮಾಜ ಮತ್ತು ನವಮಾನವನ ರೂಪುರೇಷೆಗಳನ್ನು ತೋರಿಸಿಕೊಟ್ಟರು.

"ಸಾಮಾಜಿಕ ಪ್ರಜಾಪ್ರಭುತ್ವ ಇರದಿದ್ದರೆ ಪ್ರಜಾಪ್ರಭುತ್ವದ ಔಪಚಾರಿಕ ಚೌಕಟ್ಟು ಬೆಲೆ ಇಲ್ಲದ್ದಾಗುತ್ತದೆ." ಎಂದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ೧೯೪೩ರಲ್ಲೇ ತಿಳಿಸಿದ್ದಾರೆ. ನಮ್ಮ ಸಂವಿಧಾನ ಸ್ಟೇಟ್ ಸಮಾಜವಾದದ ಆಧಾರದ ಮೇಲೆ ನಿಂತಿರಬೇಕು. ಯಾವುದೇ ಸರ್ಕಾರ ಬಂದರೂ ಸ್ಟೇಟ್ ಸಮಾಜವಾದದ ಅಧೀನದಲ್ಲೇ ಇರಬೇಕು ಮತ್ತು ದೈನಂದಿನ ಸಾಮಾಜಿಕ ಬದುಕಿನಲ್ಲಿ ಪ್ರಜಾಪ್ರಭುತ್ವದ ಮಿಡಿತ ಇರಬೇಕು ಎಂಬುದು ಅಂಬೇಡ್ಕರರ ಆಶಯವಾಗಿತ್ತು. ಅವರ ಈ ಆಶಯ ಇಂದಿಗೂ ಈಡೇರಿಲ್ಲ. ಆದರೆ ಬಸವಣ್ಣನವರು ೮೫೦ ವರ್ಷಗಳ ಹಿಂದೆ ಜಾತಿಭೇದ, ವರ್ಣಭೇದ, ಲಿಂಗಭೇದ, ವರ್ಗಭೇದ ಮತ್ತು ಕಾಯಕಭೇದಗಳಿಲ್ಲದ ಹೊಸ ಕಲ್ಯಾಣ ರಾಜ್ಯ ನಿರ್ಮಿಸುವಲ್ಲಿ ಯಶಸ್ಸು ಸಾಧಿಸಿದರು, ಅವರ ಸರ್ವಸಮಾನತೆಯ ಪ್ರಜಾಪ್ರಭುತ್ವವಾದಿ ಸಮಾಜ, "೨೧ನೇ ಶತಮಾನದ ನಮ್ಮ ಸಮಾಜ ಹೇಗಿರಬೇಕು" ಎಂಬುದಕ್ಕೆ ಮುನ್ಸೂಚನೆಯಾಗಿದೆ.

ನಮ್ಮ ನಮ್ಮ ದೇವರು ಮತ್ತು ಧರ್ಮಗಳು ನಮ್ಮೊಳಗೇ ಇರಬೇಕು. ಆದರೆ ನಾವು ಸಮಾಜದಲ್ಲಿ ಏಕೋಭಾವದೊಂದಿಗೆ ವ್ಯವಹರಿಸಬೇಕು. ಎಂಬುದು ಪ್ರಜಾಪ್ರಭುತ್ವದ ಅತಿದೊಡ್ಡ ಆಶಯವಾಗಿದೆ. ಈ ಆಶಯಕ್ಕೆ ಇಂದಿಗೂ ಬೆಲೆ ಸಿಗದ ಕಾರಣ ಭಾರತ ಕೋಮುಗಲಭೆಗಳ ತಾಣವಾಗುತ್ತಿದೆ. ಬಾಬರಿಮಸೀದಿ ಮತ್ತು ರಾಮಜನ್ಮಭೂಮಿ ವಿವಾದ ಸಹಸ್ರಾರು ಮುಗ್ಧಜೀವಿಗಳ ಬಲಿ ತೆಗೆದುಕೊಂಡಿತು. ದೇಶದ ಜನತೆ ಹತ್ತಾರು ಸಹಸ್ರ ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿತು. ಆದರೆ ಬಸವಣ್ಣನವರ ಪರಿಕಲ್ಪನೆಯ ಸಮಾಜದಲ್ಲಿ ದೇವಸ್ಥಾನಗಳೇ ಇಲ್ಲ! ಅಲ್ಲಿ ಏನಿದ್ದರೂ ಕಲ್ಯಾಣ ರಾಜ್ಯದ ಚಿಂತನಮಂಥನಕ್ಕಾಗಿ ಬೇಕಾದ ಅನುಭವ ಮಂಟಪ. "ಅನುಭವ ಮಂಟಪ" ಎಂಬುದು ವಿಶಿಷ್ಟವಾದ ಸಮಾಜೋ ಧಾರ್ಮಿಕ ಸಂಸತ್ ಆಗಿದೆ.

ಇಂದಿನ ಸಂವೈಧಾನಿಕ ಕಾನೂನಿನ ಆಳ್ವಿಕೆಗೆ ಮ್ಯಾಗ್ನಾಕಾರ್ಟಾ ಮೂಲ ಸೆಲೆಯಾಗಿದೆ. ರಾಜನ ಹಕ್ಕುಗಳಿಗೆ ಸಂಬಂಧಿಸಿದಂತೆ ಪೋಪ್, ದೊರೆ ಜಾನ್ ಮತ್ತು ಇಂಗ್ಲಂಡ್‌ನ ಕೆಳಹಂತದ ಜಹಗೀರದಾರರ ಮಧ್ಯೆ ಭಿನ್ನಾಭಿಪ್ರಾಯ ಉಂಟಾದಾಗ ೧೨೧೫ರಲ್ಲಿ ಒಂದು ಒಪ್ಪಂದಕ್ಕೆ ಬರಲಾಯಿತು. ಅದುವೆ ಮ್ಯಾಗ್ನಾಕಾರ್ಟಾ. ಅಂದರೆ ಮಹಾ ಒಪ್ಪಂದ. ಈ ಒಪ್ಪಂದದಿಂದಾಗಿ ದೊರೆ ಜಾನ್ ಕೆಲವೊಂದು ಹಕ್ಕುಗಳನ್ನು ಬಿಟ್ಟುಕೊಡಬೇಕಾಯಿತು. ರಾಜನ ಬಯಕೆಗಳು ಕಾನೂನಿನ ಚೌಕಟ್ಟಿನೊಳಗೆ ಇರಬೇಕು ಮುಂತಾದ ಪ್ರಜಾಪ್ರಭುತ್ವವಾದಿ ಅಂಶಗಳು ಮಾಗ್ನಾಕಾರ್ಟಾ ಒಪ್ಪಂದದಲ್ಲಿವೆ. ಹೀಗೆ ಕಾನೂನಿನ ಮೂಲಕ ರಾಜನ ಅಧಿಕಾರವನ್ನು ಮೊಟಕುಗೊಳಿಸಿದ ಕೀರ್ತಿ ಮ್ಯಾಗ್ನಾಕಾರ್ಟಾಗೆ ಸಲ್ಲುತ್ತದೆ. ಜಗತ್ತಿನ ಪ್ರತಿಯೊಂದು ದೇಶದ ಸಂವಿಧಾನದ ಮೇಲೆ ಮ್ಯಾಗ್ನಾಕಾರ್ಟಾದ ಪ್ರಭಾವವಿದೆ. ಮ್ಯಾಗ್ನಾಕಾರ್ಟಾ ಒಪ್ಪಂದಕ್ಕಿಂತ ಅರ್ಧ ಶತಮಾನ ಹಿಂದೆಯೆ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವುದರ ಮೂಲಕ ಜನರಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸಿದ್ದರು. ಅಸ್ಪೃಶ್ಯರು ಮೊದಲು ಮಾಡಿ ವಿವಿಧ ಜಾತಿಗಳ ಜನ ಅನುಭವ ಮಂಟಪದಲ್ಲಿದ್ದರು. ೭೭೦ ಅಮರಗಣಂಗಳಲ್ಲಿ ಬಹುಪಾಲು ಮಂದಿ ವಿವಿಧ ಕಾಯಕಜೀವಿಗಳೇ ಆಗಿದ್ದರು. ಲೋಕವೇ ತಾನಾದವನು ಅಂದರೆ ಸಕಲಜೀವಾತ್ಮರಿಗೆ ಲೇಸನೇ ಬಯಸುವವನು ಮಾತ್ರ ಶರಣ ಎಂದು ಕರೆಯಿಸಿಕೊಳ್ಳುತ್ತಾನೆ. ಹೀಗೆ ಶರಣರು ಎಲ್ಲ ರೀತಿಯ ಅಸಮಾನತೆಗಳಿಗೆ ವಿರುದ್ಧವಾಗಿದ್ದರು.

ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾದ ವಿಚಾರಗಳನ್ನು ವಚನಕಾರರೆಲ್ಲ ಹೊಂದಿದ್ದರು ಎಂಬುದಕ್ಕೆ ಅವರ ಚಳವಳಿ ಮತ್ತು ವಚನಗಳು ಸಾಕ್ಷಿಯಾಗಿವೆ. ಬಸವಣ್ಣನವರು ಇಷ್ಟಲಿಂಗದ ಮೂಲಕ ಸಮಾನತೆಯನ್ನು ಸಾಧಿಸಿದರು. ಜಂಗಮಲಿಂಗದ ಮೂಲಕ ಮನುಷ್ಯನನ್ನು ಸಾಮಾಜೀಕರಣಗೊಳಿಸಿದರು. ಮನುಷ್ಯ ನಿಜವಾಗಿಯೂ ಸಾಮಾಜೀಕರಣಗೊಂಡಾಗ ಜೀವಕಾರುಣ್ಯದಿಂದ ತುಂಬಿದ ಸರ್ವಸಮಾನತೆಯ ಪ್ರಜ್ಞೆಯುಳ್ಳ ಶರಣನೆಂದಿನಿಸಿಕೊಳ್ಳುತ್ತಾನೆ. ಇಂಥ ವಿಶಾಲ ಮನೋಭಾವದವರು ಯಾವುದೇ ದೇಶದಲ್ಲಿದ್ದರೂ ಶರಣರೇ ಆಗಿರುತ್ತಾರೆ.

ಭಾರತದ ಸಂವಿಧಾನದ ಆಶಯಗಳು ಮತ್ತು ಬೌದ್ಧಧರ್ಮದ ಆಶಯಗಳು ಬಸವಪ್ರಜ್ಞೆಯಲ್ಲಿ ಇವೆ. ಬಸವಣ್ಣನವರ ಜೀವಿತ ಕಾಲದಲ್ಲಿ ಅವರ ಕ್ರಾಂತಿಕಾರಿ ವಿಚಾರಗಳಿಗೆ ರಾಜಾಶ್ರಯ ಸಿಗಲಿಲ್ಲ. ಸಮಗಾರ ಹರಳಯ್ಯನ ಮಗ ಮತ್ತು ಬ್ರಾಹ್ಮಣ ಮಧುವರಸನ ಮಗಳ ಮದುವೆಗೆ ವಿರೋಧ ವ್ಯಕ್ತವಾಗಿ ಕೊನೆಗೆ ಶರಣರ ಭೀಕರ ಹತ್ಯಾಕಾಂಡ ನಡೆಯಿತು. ರಾಜಾಶ್ರಯ ಹೊಂದಿದ್ದ ಮನುಧರ್ಮದ ಪ್ರಕಾರ ಅವರು ಬೇರೆಯಾಗಿದ್ದರೂ ಬಸವಧರ್ಮದ ಪ್ರಕಾರ ಒಂದೇ ಆಗಿದ್ದರು. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಬಸವಧರ್ಮವನ್ನು ಹಾಳುಗೆಡವುದಕ್ಕಾಗಿ ಬಿಜ್ಜಳನ ಮನಸ್ಸು ಕೆಡಿಸಿ ಈ ಕೃತ್ಯ ಎಸಗಿದವು.

ಆದರೆ ಇಂದು ಬಸವಣ್ಣನವರ ವಿಚಾರಗಳಿಗೆ ಸಂವಿಧಾನದ ಮೂಲಕ ರಾಜಾಶ್ರಯ ಸಿಕ್ಕಿದೆ. ಅಂತರ್ಜಾತಿ ವಿವಾಹ, ವಿಧವಾ ವಿವಾಹ ಮತ್ತು ದೇವದಾಸಿಯರ ಮದುವೆಗಳಿಂದ ಕೂಡಿದ ಮಹಿಳಾ ವಿಮೋಚನಾ ಚಳವಳಿ, ಅಸ್ಪೃಶ್ಯತಾ ನಿವಾರಣಾ ಚಳವಳಿ, ಜಾತೀಯತೆ ವಿರುದ್ಧ ಚಳವಳಿ, ಲಿಂಗಭೇದದ ವಿರುದ್ಧ ಚಳವಳಿ, ವಿವಿಧ ಕಾಯಕಜೀವಿಗಳ ಚಳವಳಿ, ವಯಸ್ಕರ ಶಿಕ್ಷಣವೂ ಸೇರಿದಂತೆ ಶೈಕ್ಷಣಿಕ ಚಳವಳಿ ಹೀಗೆ ನವಸಮಾಜಕ್ಕಾಗಿ ತುಡಿಯುವ ಎಲ್ಲ ಚಳವಳಿಗಳನ್ನೂ ವಚನಕಾರರು ಮಾಡಿದ್ದರು. ಈಗ ಈ ಎಲ್ಲ ಚಳವಳಿಗಳು ಸಂವಿಧಾನಬದ್ಧವಾಗಿದ್ದು ಬಸವಣ್ಣನವರ ಮುಂದಾಲೋಚನೆಗೆ ಸಾಕ್ಷಿಯಾಗಿದೆ.

ಕಳೆದ ಶತಮಾನದಲ್ಲಿ ಕ್ಯೂಬಾ ದೇಶ ಅಮೆರಿಕದ ಅಧೀನದಲ್ಲಿದ್ದಾಗ ಅದರ ರಾಜಧಾನಿ ಹವಾನಾ ವೇಶ್ಯಾವಾಟಿಕೆಗಳಿಂದ ತುಂಬಿ ಹೋಗಿತ್ತು. ಸ್ವಾತಂತ್ರ್ಯಾನಂತರ ಕಮ್ಯೂನಿಸ್ಟ್ ಯುವಕರನೇಕರು ವೇಶ್ಯೆಯರನ್ನು ಮದುವೆಯಾಗುವ ಮೂಲಕ ಆದರ್ಶ ಮೆರೆದರು. ಕಲ್ಯಾಣದಲ್ಲಿ ಶರಣರು ಪಣ್ಯಾಂಗನೆಯರನ್ನು ಪುಣ್ಯಾಂಗನೆಯರನ್ನಾಗಿ ಮಾಡಿ ವೇಶ್ಯಾ ಸಮಸ್ಯೆಯನ್ನು ಬಗೆಹರಿಸುವತ್ತ ಮುನ್ನಡೆದರು.

೧೮೫೭ರಲ್ಲಿ ದೇಶದಲ್ಲಿ ಮೊದಲಬಾರಿಗೆ ಮುಂಬೈ ವಿಶ್ವವಿದ್ಯಾಲಯದ ಸ್ಥಾಪನೆಯಾಯಿತು. ೧೮೭೫ರಲ್ಲಿ ಬೆಳಗಾವಿಯ ಪೋಸ್ಟ್ ಮಾಸ್ತರರೊಬ್ಬರು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಗೆ ಪತ್ರ ಬರೆದು ತಮ್ಮ ಮಗಳು ಮ್ಯಾಟ್ರಿಕ್ ಪರೀಕ್ಷೆ ಬರೆಯಲು ಅವಕಾಶವಿದೆಯೆ ಎಂದು ಕೇಳಿದರು. ವಿಶ್ವವಿದ್ಯಾಲಯದ ಕಾನೂನಿನಲ್ಲಿ ಮಹಿಳಾ ಶಿಕ್ಷಣಕ್ಕೆ ಅವಕಾಶ ಇದ್ದಿದ್ದಿಲ್ಲ. ಹೀಗಾಗಿ ಆ ಪೋಸ್ಟ್ ಮಾಸ್ತರ್ ಮಗಳಿಗೆ ಅವಕಾಶ ಸಿಗಲಿಲ್ಲ. ಆಗ ಮುಂಬೈ ವಿಶ್ವವಿದ್ಯಾಲಯ ಲಂಡನ್ನ ವಿಶ್ವವಿದ್ಯಾಲಯದ ಅಧೀನದಲ್ಲಿತ್ತು. ಆಡಳಿತ ಮಂಡಳಿ ಮಹಿಳಾ ಶಿಕ್ಷಣದ ಈ ಹೊಸ ಸಮಸ್ಯೆ ಕುರಿತು ಲಂಡನ್ ವಿಶ್ವವಿದ್ಯಾಲಯಕ್ಕೆ ತಿಳಿಸಿತು. ಆ ಕಾಲಕ್ಕೆ ಲಂಡನ್ ವಿಶ್ವವಿದ್ಯಾಲಯದಲ್ಲಿ ಕೂಡ ಮಹಿಳೆಯರಿಗೆ ಪ್ರವೇಶ ಇದ್ದಿದ್ದಿಲ್ಲ. ಈ ಕುರಿತು ಚಿಂತನೆ ನಡೆಸಿದ ಲಂಡನ್ ವಿಶ್ವವಿದ್ಯಾಲಯ ಎಂಟು ವರ್ಷಗಳ ತರುವಾಯ, ಮಹಿಳೆಯರು ಪರೀಕ್ಷೆ ಬರೆಯಬಹುದೆಂದು ನಿರ್ಧರಿಸಿ ಮುಂಬೈ ವಿಶ್ವವಿದ್ಯಾಲಯಕ್ಕೆ ತಿಳಿಸಿತು. ಮುಂದೆ ೧೮೮೫ರಲ್ಲಿ ಕೊರ್ನಿಲಿಯಾ ಸೊರಾಬ್ಜಿ ಎಂಬ ಮಹಿಳೆ ಪುಣೆಯ ಡೆಕ್ಕನ್ ಕಾಲೇಜಿನಿಂದ ಮೊದಲ ಪದವೀಧರೆಯಾದಳು ಎಂದು ಪ್ರೊ. ಡೋಂಗರಕರ್ ಸಂಶೋಧನೆ ಮಾಡಿರುವುದಾಗಿ ಮುಂಬೈ ಮಹಾನಗರ ಪಾಲಿಕೆಯ ನಿವೃತ್ತ ಅಸಿಸ್ಟಂಟ್ ಕಮೀಷನರ್ ಎಸ್.ಜಿ. ಮಸಳಿ ಅವರು ತಿಳಿಸಿದ್ದಾರೆ. ಆದರೆ ೧೨ನೇ ಶತಮಾನದಲ್ಲೇ ಶರಣಸಂಕುಲದಲ್ಲಿ ಅನೇಕ ವಚನಕಾರ್ತಿಯರಿದ್ದರು. ಇಲ್ಲಿಯ ವರೆಗೆ ೩೩ ವಚನಕಾರ್ತಿಯರ ವಚನಗಳು ಸಿಕ್ಕಿವೆ. ಇವರ ಭಾಷಾ ಪ್ರೌಢಿಮೆ, ಸಾಹಿತ್ಯ ಶಕ್ತಿ ಮತ್ತು ತತ್ತ್ವಜ್ಞಾನ ಅಚ್ಚರಿ ಮೂಡಿಸುತ್ತವೆ. ಒಂದೇ ಪ್ರದೇಶದಲ್ಲಿ, ಒಂದೇ ಕಾಲಘಟ್ಟದಲ್ಲಿ ಇಷ್ಟೊಂದು ಮಂದಿ ಉನ್ನತ ಸಾಧನೆಯ ಮಹಿಳಾ ಸಾಹಿತಿಗಳು ಕಾಣಿಸಿಕೊಂಡ ಉದಾಹರಣೆ ವಿಶ್ವದ ಇತಿಹಾಸದಲ್ಲಿ ಇನ್ನೊಂದು ಇಲ್ಲ.

ಪ್ರಜಾಪ್ರಭುತ್ವದ ತಾಯಿ ಎನಿಸಿಕೊಂಡ ಇಂಗ್ಲಂಡ್‌ನಲ್ಲಿ ೨೦ನೇ ಶತಮಾನದ ವರೆಗೂ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಆದರೆ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಅಭಿಪ್ರಾಯ ಸ್ವಾಂತಂತ್ರ್ಯವಿತ್ತು. ಭಾರತದಲ್ಲಿ ಜಾತಿಭೇದ ನೀತಿ ಇರುವ ಹಾಗೆ ಅಮೆರಿಕದಲ್ಲಿ ಮೊನ್ನೆ ಮೊನ್ನೆಯ ವರೆಗೂ ವರ್ಣಭೇದ ನೀತಿ ಇತ್ತು. ಇಂದಿಗೂ ಅಲ್ಲಿ ಕರಿಯರನ್ನು ಎರಡನೆಯ ದರ್ಜೆಯ ಪ್ರಜೆಗಳ ಹಾಗೆ ಕಾಣುವ ಪರಿಸ್ಥಿತಿ ಇದೆ. ೧೯೬೮ರಲ್ಲಿ ಕೊಲೆಗೀಡಾದ ಅಮೆರಿಕದ ಕರಿಯರ ಗಾಂಧಿ ಮಾರ್ಟಿನ್ ಲೂಥರ್ ಕಿಂಗ್ ಅವರ "ಐ ಹ್ಯಾವ್ ಎ ಡ್ರೀಮ್" ಎಂಬ ಭಾಷಣ ಜಗತ್ ಪ್ರಸಿದ್ಧವಾಗಿದೆ. ಕಪ್ಪು ಮತ್ತು ಬಿಳಿ ಹುಡುಗ ಹುಡುಗಿಯರು ಜನಾಂಗ ದ್ವೇಷ ಮರೆತು ಒಂದಾಗಿ ಮುನ್ನಡೆಯಬೇಕೆನ್ನುವುದು ಆ ಭಾಷಣದ ತಿರುಳಾಗಿದೆ. ಶರಣರು ೧೨ನೇ ಶತಮಾನದಲ್ಲೇ ಹರಳಯ್ಯ ಮಧುವರಸರ ಮಕ್ಕಳ ಮದುವೆ ಮಾಡಿಸಿದರು. ಅದಕ್ಕಾಗಿ ಎಲ್ಲ ಕಷ್ಟನಷ್ಟಗಳನ್ನು ಎದುರಿಸಿದರು.

೧೯ನೇ ಶತಮಾನದಲ್ಲಿ ಕಮ್ಯೂನಿಸ್ಟ್ ತತ್ತ್ವಜ್ಞಾನಿ ಕಾರ್ಲ್ ಮಾರ್ಕ್ಸ್ "ಜಗತ್ತಿನ ಕಾರ್ಮಿಕರೇ ಒಂದಾಗಿರಿ ನೀವು ಒಂದಾದರೆ ನಿಮ್ಮ ಸಂಕೋಲೆಗಳನ್ನು ಹೊರತುಪಡಿಸಿ ನೀವು ಏನನ್ನೂ ಕಳೆದುಕೊಳ್ಳುವುದಿಲ" ಎಂದು ಸಾರಿದರು. ಬಸವಣ್ಣನವರು ೧೨ನೇ ಶತಮಾನದಲ್ಲೇ ಭಾರಿ ತೆರಿಗೆ ಮತ್ತು ಸುಲಿಗೆಯಿಂದ ನರಳುತ್ತಿದ್ದ ಕಾಯಕಜೀವಿಗಳನ್ನು, ಅಸ್ಪೃಶ್ಯತೆಯಿಂದ ಬಳಲುತ್ತಿದ್ದ ದಲಿತರನ್ನು, ಎಲ್ಲ ಹಕ್ಕುಗಳಿಂದ ವಂಚಿತರಾಗಿದ್ದ ಮಹಿಳೆಯರನ್ನು ವಿಮೋಚನೆಯ ದಾರಿಯೆಡೆಗೆ ತಂದರು.

ವಿಶ್ವಸಂಸ್ಥೆಯ ಮಾನವಹಕ್ಕುಗಳು ಕೂಡ ಬಸವಪ್ರಜ್ಞೆಯಿಂದ ಹೊರತಾಗಿಲ್ಲ. ಜೀವಿಸುವ ಹಕ್ಕು, ಮಾತನಾಡುವ ಹಕ್ಕು, ವರ್ಗ, ವರ್ಣ ಮತ್ತು ಲಿಂಗಭೇದ ನೀತಿಯ ವಿರುದ್ಧ ಹೋರಾಡುವ ಹಕ್ಕುಗಳು ಮಾನವಹಕ್ಕುಗಳಾಗುತ್ತವೆ. ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಭಾಗ ತನ್ನ ೩೦ ಅಂಶಗಳ ಕಾರ್ಯಕ್ರಮದಲ್ಲಿ ಈ ಮಾನವಹಕ್ಕುಗಳನ್ನು ಕುರಿತು ವಿವರಿಸಿದೆ. ಈ ಎಲ್ಲ ಮಾನವ ಹಕ್ಕುಗಳನ್ನು ಸಾಧಿಸುವುದೇ ವಚನಚಳವಳಿಯ ಗುರಿಯಾಗಿತ್ತು.

ಬಸವಪ್ರಜ್ಞೆಯು ಮಾನವಹಕ್ಕುಗಳ ಪ್ರಜ್ಞೆಯಾಗಿದೆ; ಪ್ರಜಾಪ್ರುತ್ವವಾದಿ ಪ್ರಜ್ಞೆಯಾಗಿದೆ; ಮುಂದುವರಿದ ಸಮಾಜವಾದಿ ಪ್ರಜ್ಞೆಯಾಗಿದೆ, ಅದಕ್ಕೂ ಮುಂದುವರಿದ ಸಮತಾವಾದಿ ಪ್ರಜ್ಞೆಯಾಗಿದೆ. ಅಂತೆಯೆ ಬಸವಣ್ಣನವರು ಹಳೆಯ ೩೩ ಕೋಟಿ ದೇವತೆಗಳನ್ನು ಆಚೆ ತಳ್ಳಿದ ನಂತರ ನಮಗೆ ಹೊಸ ಸರ್ವಸಮತಾವಾದಿ ದೇವರನ್ನು ಇಷ್ಟಲಿಂಗದ ಮೂಲಕ ಕೊಟ್ಟರು. ಬಸವಣ್ಣನವರ ಕೂಡಲಸಂಗಮದೇವ ಮಾದಾರ ಚನ್ನಯ್ಯನ ಮನೆಯಲ್ಲಿ ಅಂಬಲಿಯನ್ನು ಕುಡಿಯುವ ದೇವರಾಗಿದ್ದಾನೆ. ಬಡವರ, ಹಿಂದುಳಿದವರ, ದಲಿತರ, ಕಾಯಕಜೀವಿಗಳ ಒಟ್ಟಾರೆ ಇಡೀ ಮಾನವಕುಲದ ದೇವರಾಗಿದ್ದಾನೆ.

ಪರಿವಿಡಿ (index)
*
Previousಲಿಂಗಾಯತ ಮತ್ತು ಇಷ್ಟಲಿಂಗಲಿಂಗಾಯತ ಮತ್ತು ವೀರಶೈವNext
*