ಲಿಂಗಾಯತ ಧರ್ಮದ ಪದಕೋಶ

*
ಅಂಗ ಒಡಲು, ದೇಹ, ದೀಕ್ಷೆ ಹೊಂದಿದ ದೇಹ (ತನ್ನ ಅಂಗದ ಮೇಲೆ ಲಿಂಗವಿರುತಿರಲು, ಅನ್ಯರನೆ ಹಾಡಿ, ಅನ್ಯರನೆ ಹೊಗಳಿ, ಅನ್ಯರ ವಚನವ ಕೊಂಡಾಡಲು, ಕರ್ಮ ಬಿಡದು -ಬಸವ. ಸಮವ. ೧-೨೯-೧೦೭ [1])
ಅಂಗಗುಣ ಶರೀರಕ್ಕೆ ಸಂಬಂಧಿಸಿದಂತೆ ಇರುವ ಲೌಕಿಕವಾದ ಗುಣ (ಅಂಗಗುಣಂಗಳ ಬಿಟ್ಟವರಿಗೆ ಶರಣೆಂಬೆ - ಚೆನ್ನಬ. ಸಮವ. ೩-೨೯೨-೯೨೭), (ಅಂಗಗುಣಂಗಳ ಬಿಟ್ಟು ಲಿಂಗಗುಣಂಗಳಾದಡೆ ಅದೆ ಲಿಂಗಾಂಗಸಾಮರಸ್ಯ ಸಿದ್ಧರಾ. ಸಮವ. ೪-೨೬೦-೯೧೮).
ಅಂಗಷಟಸ್ಥಲ ಮನುಷ್ಯನಲ್ಲಿರುವ ಸ್ಥೂಲ, ಸೂಕ್ಷ್ಮ, ಮತ್ತು ಕಾರಣ ಶರೀರಗಳಿಗನುಸಾರವಾಗಿರುವ ಆರು ಸ್ಥಲಗಳು: ಭಕ್ತನ ಸಾಧನೆಯ ಆರು ಹಂತಗಳು.
ಅಂಗಸೋಂಕು ದೇಹ ಸ್ಪರ್ಷವಾದುದು, ಲಿಂಗವನ್ನು ಧರಿಸುವ ಆರು ಸ್ಥಾನಗಳಲ್ಲಿ ಒಂದು: ಎದೆ,
ಅಂತ್ಯಪ್ರಸಾದ ಪ್ರತಿಯೊಂದು ಭೋಗವಸ್ತುವನ್ನು ಮೊದಲು ಲಿಂಗಕ್ಕೆ ಅರ್ಪಿಸಿ, ಅನಂತರ ಅನುಗ್ರಹರೂಪವಾಗಿ ಪಡೆಯುವ ಪದಾರ್ಥ.
ಅಗಮ್ಯ ಭಾವಕ್ಕೆ ನಿಲುಕದ (ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ ಕೂಡಲ ಸಂಗಮದೇವ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ - ಬಸವ. ಸಮವ. ೧-೧೮೬-೭೪೪).
ಅಗೋಚರ ಕಣ್ಣಿಗೆ ಕಾಣದುದು (ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ ಕೂಡಲ ಸಂಗಮದೇವ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ - ಬಸವ. ಸಮವ. ೧-೧೮೬-೭೪೪).
ಅಗ್ಘವಣಿ, ಅಗ್ಗಣಿ, ಅಗ್ಗವಣಿ, ಅಗ್ಘಣಿ ಇಷ್ಟಲಿಂಗ ಪೂಜೆಗೆ ಬಳಸುವ ಪರಿಶುದ್ಧವಾದ ನೀರು (ಹೊತ್ತಾರೆ ಎದ್ದು ಅಗ್ಘವಣಿ ಪತ್ರೆಯ ತಂದು ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ ಬಸವ. ಸಮವ. ೧-೪೪-೧೭೨)
ಅನಿಮಿಷ ಕಣ್ಣೆವೆಗಳನ್ನು ಅಲುಗಿಸದೆ ಇಷ್ಟಲಿಂಗವನ್ನೇ ದೃಷ್ಟಿಸಿ ನೋಡುವುದು, ಲಿಂಗದಲ್ಲೇ ನೆಟ್ಟ ನೋಟವುಳ್ಳವನು.
ಅನಿಮಿಷ ಅಲ್ಲಮ ಪ್ರಭುವಿನ ದೀಕ್ಷಾಗುರುವಿನ ಹೆಸರು, (ಇಂದೆನ್ನ ಗುರು ಅನಿಮಿಷಂಗೆ ಲಿಂಗವ ಕೊಟ್ಟೆನೆಂಬ ಸೂತಕ ಬೇಡ ...-ಅಲ್ಲಮ ಸಮವ-೨-೨೭೯-೯೨೮).
ಅನುಭವ ಅನುಭಾವ, ಆತ್ಮ ಜ್ಞಾನ, ಶ್ರದ್ಧೆ, ನಿಷ್ಠೆ, ಅವಧಾನ, ಅನುಭವ, ಆನಂದ ಮತ್ತು ಸಮರಸ ಎಂಬ ಆರು ಬಗೆಯ ಭಕ್ತಿಗಳಲ್ಲಿ ಒಂದು.
ಅನುಭವ ಮಂಟಪ ಕಲ್ಯಾಣ ಪಟ್ಟಣದಲ್ಲಿ ತತ್ವಜಿಜ್ಞಾಸೆಗಾಗಿ ವಿಶೇಷತ್: ಅನುಭವ ಗೋಷ್ಟಿಗಾಗಿ ಶರಣರು ಒಂದೆಡೆ ಸೇರಲು ಅನುಕೂಲವಾಗುವಂತೆ ಬಸವಣ್ಣನವರು ಏರ್ಪಡಿಸಿದ ಸಭಾಸ್ಥಾನ (ಚೆನ್ನಬಸವನೆಂಬ ಪ್ರಸಾದಿಯ ಪಡೆದು ಅನುಭವ ಮಂಟಪವನು ಮಾಡಿ ಅನುಭವ ಮೂರ್ತಿಯಾದ ನಮ್ಮ ಬಸವಯ್ಯನು - ನೀಲಮ್ಮ, ಸಮವ ೫-೨೪೨-೭೭೩).
ಅರೆಭಕ್ತ ಇಷ್ಟಲಿಂಗದೀಕ್ಷೆಯಾದ ಮೇಲೆಯೂ ಸ್ಥಾವರಲಿಂಗ, ಅನ್ಯಭವಿದೈವೋಪಾಸನೆಗಳನ್ನು ಬಿಡದವನು (ಅರೆಭಕ್ತರಾದವರ ನೆರೆ ಬೇಡ ಹೊರೆ ಬೇಡ -ಬಸವ. ಸಮವ ೧-೩೬-೧೩೩, ಅರೆಭಕ್ತರಾದವರ ನೆರೆಮನೆಯಲ್ಲಿರಲಾಗದು -ಚೆನ್ನಬಸವಣ್ಣ ಸಮವ-೩-೩೧೩-೯೬೪.
ಇಷ್ಟಲಿಂಗ ದೇವರ ಕುರುಹು, ಗುರುವು ಭಕ್ತನಿಗೆ ದೀಕ್ಷೆಯ ಮೂಲಕ ಅನುಗ್ರಹಿಸಿ, ಮಸ್ತಕದ ಮೇಲೆ ಹಸ್ತವನ್ನಿಟ್ಟು ಪಂಚಾಕ್ಷರೀ ಮಂತ್ರಗಳನ್ನು ಆತನ ಕಿವಿಯಲ್ಲಿ ಹೇಳಿ ತನ್ನಲ್ಲಿರುವ ಚಿತ್ಕಳೆಯನ್ನೇ ಇಷ್ಟಲಿಂಗ ರೂಪವಾಗಿ ಕೊಡುವನು. ಇದನ್ನು ಭಕ್ತನು ಯಾವಾಗಲೂ ತನ್ನ ಮೈಮೇಲೆ ಧರಿಸಿರಬೇಕು. (ಶ್ರೀ ಗುರು ಕರಸ್ಥಲದಲ್ಲಿ ಅನುಗ್ರಹವ ಮಾಡಿಕೊಟ್ಟುದೀಗ ಇಷ್ಟಲಿಂಗ -ಚೆನ್ನಬಸವಣ್ಣ ಸಮವ-೩-೩೨೧-೯೮೭)
ಉಭಯ ಇಷ್ಟಲಿಂಗ ಮತ್ತು ಪ್ರಾಣಲಿಂಗ
ಉಭಯಕುಳ ಇಷ್ಟಲಿಂಗ ಪೂಜೆ ಮತ್ತು ಜಂಗಮದಾಸೋಹ
ಉಭಯಲಿಂಗ ಇಷ್ಟಲಿಂಗ ಮತ್ತು ಪ್ರಾಣಲಿಂಗ
ಐಕ್ಯ ದೇವರಲ್ಲಿ ಒಂದಾಗುವುದು, ಲಿಂಗಾಂಗ ಸಾಮರಸ್ಯ, ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬ ಮೋಕ್ಷಸಾಧನೆಯ ಆರು ಹಂತಗಳಲ್ಲಿ ಕೊನೆಯ ಹಂತ. (ಐಕ್ಯನೆಂತೆಂಬೆನಯ್ಯಾ? ಜನನ ಮರಣ ವಿರಹಿತವಾಗದನ್ನಕ್ಕ. ...... .......ಬಸವ ಸಮವ-೧-೧೨೩-೫೧೦)
ಕಂತಿ ಇಷ್ಟಲಿಂಗಕ್ಕೆ ಲೇಪಿಸುವುದಕ್ಕಾಗಿ ತಯಾರಿಸಿದ ಗೇರೆಣ್ಣೆ ಹಾಗೂ ಕಾಡಿಗೆಯ ಕಪ್ಪು ಮಿಶ್ರಣ.
ಕಂತೆ ಜಂಗಮರು ಧರಿಸುವ ಪಂಚಮುದ್ರೆಗಳಲ್ಲಿ ಒಂದು, ಭಿಕ್ಷೆಯನ್ನು ಹಾಕಿಸಿಕೊಳ್ಳಲು, ಚಚ್ಚೌಕವಾದ ಬಟ್ಟೆಯ ನಾಲ್ಕು ಮೂಲೆಗಳನ್ನು ಸೇರಿಸಿ ಮಾಡಿದ ಚೀಲ; ಜೋಳಿಗೆ.
ಕದಳಿಯ ಬನ ಆಂಧ್ರ ಪ್ರದೇಶದ ಶ್ರೀಶೈಲದಲ್ಲಿ, ತಪಸ್ಸಿಗೆ, ಧ್ಯಾನಕ್ಕೆ ಯೋಗ್ಯವಾಗಿರುವ ಪ್ರಕೃತಿ ಸೌಂದರ್ಯದಿಂದ ಕೂಡಿರುವ ಒಂದು ಪವಿತ್ರ ಸ್ಥಳ.
ಕರಡಿಗೆ ಕೊರಳಲ್ಲಿ ಧರಿಸುವ ಇಷ್ಟಲಿಂಗವನ್ನಿಟ್ಟಿರುವ ಸಣ್ಣ ಪೆಟ್ಟಿಗೆ (ಕಟ್ಟಿಗೆ ಅಥವಾ ಬೆಳ್ಳಿ/ಬಂಗಾರದ್ದು) ಅಥವಾ ಸಣ್ಣ ಭರಣಿ, ಚೌಕ, ಲಿಂಗದಕಾಯಿ
ಕರಸ್ಥಲ, ಕರಸ್ಥಳ ಎಡ ಅಂಗೈ, ಇಷ್ಟಲಿಂಗವನ್ನಿಟ್ಟು ಪೂಜಿಸುವ ದೇಹದ ಅಂಗ.
ಕಾಯ ಅಂಗ, ಒಡಲು (ಎನ್ನ ಕಾಯವ ದಂಡಿಗೆಯ ಮಾಡಯ್ಯಾ.... ಬಸವ ಸಮವ-೧-೧೨೦-೪೯೯).
ಕಾಯಕ ಸಮರ್ಪಣಭಾವದಿಂದ ಮಾಡುವ ಕೆಲಸ,
ಗಂಟೆ ಕಾಯಕ ಬೆಳಗಿನ ಜಾವದಲ್ಲಿ ಜನರಾನ್ನು ಎಬ್ಬಿಸಲು ಗಂಟೆಯನ್ನು ಸದ್ದು ಮಾಡುತ್ತಾ ಮನೆ ಮನೆಗಳಿಗೆ ಹೋಗುವ ಜಂಗಮನ ಕಾಯಕ
ಗದ್ದುಗೆ ಲಿಂಗಾಯತ ಜಂಗಮರ ಸಮಾಧಿ.
ಗರ್ಭದೀಕ್ಷೆ ತಾಯಿಯ ಗರ್ಭದಲ್ಲಿರುವ ಮಗುವಿಗೆ ಕೊಡುವ ದೀಕ್ಷೆ.
ಘನಲಿಂಗ ಪರಂಜ್ಯೋತಿ ಸ್ವರೂಪವಾದ ಮಹಾಲಿಂಗ ( ಸ್ಥಾವರ ಭಕ್ತಂಗೆ ಸೀಮೇಯಲ್ಲದೆ ಘನಲಿಂಗ ಜಂಗಮಕ್ಕೆ ಸೀಮೇಯಲ್ಲಿಯದು -ಬಸವ ಸಮವ-೧-೧೦೧-೪೧೯)
ಚರ ಮಠಮಾನ್ಯಗಳನ್ನು ತೊರೆದು ಸ್ಥಳದಿಂದ ಸ್ಥಳಕ್ಕೆ ಸಂಚರಿಸುವ ವಿರಕ್ತ; ಜಂಗಮ;
ಚಿನ್ಮಯ ಜ್ಞಾನಸ್ವರೂಪವಾದವನು, ಶುದ್ಧಜ್ಞಾನಿ
ಚುಳುಕು ಅತ್ಯಂತ ಸೂಕ್ಷ್ಮವಾದುದು, ಅಂಗೈಕುಳಿಗಾತ್ರವಾದುದು. (.. ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ - ಬಸವ ಸಮವ-೧-೧೮೬-೭೪೪)
ಚೈತನ್ಯ ಆತ್ಮ ಶಕ್ತಿ;
ಚೌಕ ಕೊರಳಲ್ಲಿ ಧರಿಸುವ ಇಷ್ಟಲಿಂಗವನ್ನಿಟ್ಟಿರುವ ಸಣ್ಣ ಪೆಟ್ಟಿಗೆ ಅಥವಾ ಸಣ್ಣ ಭರಣಿ, ಕರಡಿಗೆ, ಲಿಂಗದಕಾಯಿ.
ಜಂಗಮ ಒಂದೇ ಕಡೆಯಲ್ಲಿ ನೆಲಸದೆ ಸದಾ ಸಂಚರಿಸುವ ವಿರಕ್ತ; ಅಯ್ಯ; ಜನನ ಮರಣಗಳಿಂದ ದೂರವಾದವನೂ ಜ್ಞಾನಮೂರ್ತಿಯೂ ಆದವನು.; ಗುರು, ಲಿಂಗ, ಜಂಗಮ ಎಂಬ ತ್ರಿವಿಧ ತತ್ವಗಳಲ್ಲಿ ಕಾಯವು ಗುರು, ಪ್ರಾಣವು ಲಿಂಗ, ಜ್ಞಾನವು ಜಂಗಮವು.
ಜೀವಸಮಾಧಿ ಪ್ರಾಣವನ್ನು ಬ್ರಹ್ಮರಂಧ್ರಕ್ಕೇರಿಸಿ ಪರಬ್ರಹ್ಮದಲ್ಲಿ ಐಕ್ಯಗೊಳಿಸುವುದು.
ಜೋಳವಾಳಿ ಅನ್ನದ ಋಣಕ್ಕಾಗಿ ದುಡಿಯುವವನು.
ತ್ಯಾಗಾಂಗ ತ್ಯಾಗಾಂಗ, ಭೋಗಾಂಗ ಮತ್ತು ಯೋಗಾಂಗಗಳಲ್ಲಿ ಒಂದು; ಶರಣನ ಸದಾಚಾರಗಳಿಗೆ ಸಂಬಂಧಿಸಿದುದು ತ್ಯಾಗಾಂಗ, ಸಂಸಾರದಲ್ಲಿಯ ಕೆಡುಕುಗಳನ್ನು ತ್ಯಜಿಸಿ ಸದಾಚಾರದಲ್ಲಿ ವರ್ತಿಸುವುದೇ ತ್ಯಾಗಾಂಗ.
ತ್ರಿಕರಣಶುದ್ಧ ಮಾತು, ಮನಸ್ಸು ಮತ್ತು ದೇಹವೆಂಬ ಮೂರು ಕರಣಗಳಲ್ಲಿಯೂ ಪರಿಶುದ್ಧವಾಗಿರುವಿಕೆ.
ತ್ರಿಪುಂಡ್ರ ಹಣೆಯ ಮೇಲೆ ಧರಿಸುವ ವಿಭೂತಿಯ ಮೂರು ಗೆರೆಗಳು.
ತ್ರಿಪುಟಿ ಜ್ಞಾತೃ, ಜ್ಞಾನ ಮತ್ತು ಜ್ಞೇಯ ಎಂಬ ಮೂರರ ಕೂಟ
ತ್ರಿವಿಧ ದಾಸೋಹ ತನು, ಮನ, ಧನಗಳನ್ನು ಗುರು, ಲಿಂಗ, ಜಂಗಮಗಳಿಗೆ ಅರ್ಪಿಸಿ ಮಾಡುವ ಮೂರು ಬಗೆಯ ಸೇವೆಗಳು.
ದಾಸೋಹ ಅಹಂಕಾರವಳಿದು ತನ್ನ ತನು, ಮನ, ಧನಗಳನ್ನು ಗುರು, ಲಿಂಗ, ಜಂಗಮಗಳಿಗೆ ಸಮರ್ಪಿಸಿ ಮಾಡುವ ಸೇವೆ.; ಗುರು, ಲಿಂಗ, ಜಂಗಮಗಳಿಗೆ ದಾಸ ಭಾವನೆಯಿಂದ ಮಾಡುವ ಸೇವೆ;
ದಾಸೋಹಂಭಾವ ತಾನು ಸೇವಕನೆಂಬ ಭಾವನೆ; ಕಿಂಕರಭಾವ
ದಾಸೋಹಿ ದಾಸಭಾವದಿಂದ ಗುರು ಲಿಂಗ ಜಂಗಮಗಳ ಸೇವೆಯಲ್ಲಿ ನಿರತನಾಗಿರುವವನು; ಕಿಂಕರಭಾವವುಳ್ಳವನು.
ದೀಕ್ಷಾಗುರು ಭಕ್ತನಿಗೆ ಲಿಂಗದೀಕ್ಷೆಯನ್ನು ನೀಡುವವನು;
ದೀಕ್ಷಾಸಂಸ್ಕಾರ ಗುರುವಿನ ಬಳಿ ಇಷ್ಟಲಿಂಗದೀಕ್ಷೆಯನ್ನು ಪಡೆಯುವ ವಿಧಿ; ವಿದ್ಯುಕ್ತವಾದ ಆಚರಣೆ.
ದೀಕ್ಷೆ ಗುರುವು ತನ್ನ ಭಕ್ತನ ಮಲತ್ರಯಗಳನ್ನು ನಿವಾರಿಸಿ, ಲಿಂಗಸಂಬಂಧವನ್ನು ಮಾಡಿಕೊಡುವ ವಿಧಿ; ಗುರುವು ತನ್ನ ಶಿಷ್ಯನ ಮನಸ್ಸಂಸ್ಕಾರಕ್ಕಾಗಿ ನೀಡುವ ಮಂತ್ರೋಪದೇಶ.
ಪಟ್ಟದ ಅಯ್ಯ, ಪಟ್ಟದಯ್ಯ ಧಾರ್ಮಿಕ ಸಂಸ್ಕಾರಗಳನ್ನು ನೆರವೇರಿಸುವ ಅಧಿಕಾರವುಳ್ಳ ಮಠಾಧಿಪತಿ.
ಪರಮಾತ್ಮ ಜಗತ್ತಿನಲ್ಲಿ ಸರ್ವವ್ಯಾಪಿಯಾಗಿರುವ ಚೈತನ್ಯ; ದೇವರು;
ಪಾವಡ, ಲಿಂಗಪಾವಡ ಇಷ್ಟಲಿಂಗವನ್ನಿಡಲು ಬಳಸುವ ಬಟ್ಟೆ; ಲಿಂಗವಸ್ತ್ರ
ಲಿಂಗಕಾಯ ಶರೀರದ ಮೇಲೆ ಇಷ್ಟಲಿಂಗವನ್ನು ಧರಿಸಿರುವವನು; ಶರೀರ ಗುಣಗಳನ್ನು ಬಿಟ್ಟು ಶರಣ ತತ್ವಗಳನ್ನು ತನ್ನಲ್ಲಿ ಅಳವಡಿಸಿಕೊಂಡಿರುವವನು.
ಲಿಂಗದೀಕ್ಷೆ ನೋಡಿ ದೀಕ್ಷೆ
ಲಿಂಗದೇಹಿ ನೋಡಿ ಲಿಂಗಕಾಯ
ಲಿಂಗಧಾರಕ ನೋಡಿ ಲಿಂಗಕಾಯ
ಲಿಂಗಧಾರಣ ಗುರುವಿನಿ ಮೂಲಕ ವಿದ್ಯುಕ್ತವಾಗಿ ಇಷ್ಟಲಿಂಗವನ್ನು ಧರಿಸುವುದು.
ಲಿಂಗಧಾರಣೆ ಗುರುವಿನಿ ಮೂಲಕ ವಿದ್ಯುಕ್ತವಾಗಿ ಇಷ್ಟಲಿಂಗವನ್ನು ಧರಿಸುವ ಆಚರಣೆ.
ಲಿಂಗಧಾರಿ ಇಷ್ಟಲಿಂಗವನ್ನು ಧರಿಸಿರುವವನು, ಲಿಂಗವಂತ.
ಲಿಂಗಮುದ್ರೆ ’ಇದು ದೇವನಿಗೆ ಅರ್ಪಿತವಾದುದು’ ಎಂಬುದನ್ನು ಸೂಚಿಸಲು ಮರ, ನೆಲ, ಎತ್ತು ಹಾಗೂ ಇತರ ವಸ್ತುಗಳ ಮೇಲೆ ಒತ್ತುವ ಲಿಂಗದ ಚಿಹ್ನೆ, ಗುರುತು.
ಲಿಂಗಾಯತ ಇಷ್ಟಲಿಂಗವನ್ನು ಧರಿಸಿರುವವನು, ಲಿಂಗವಂತ.
ಲಿಂಗವ್ಯಸನಿ ಸದಾಕಾಲ ಲಿಂಗಧ್ಯಾನದಲ್ಲಿ ನಿರತನಾಗಿರುವವನು.
ಲಿಂಗಸಾಹತ್ಯ ಗುರುವು ಅನುಗ್ರಹಿಸಿದ ಇಷ್ಟಲಿಂಗವನ್ನು ತನ್ನ ಶರೀರದೊಂದಿಗೆ ಸಂಬಂಧಿಸಿಕೊಳ್ಳುವುದು; ಇಷ್ಟಲಿಂಗಧಾರಣೆ;
ಲಿಂಗೈಕ್ಯ ಲಿಂಗ ಮತ್ತು ಅಂಗಗಳ ನಡುವೆ ಭೇದವಿಲ್ಲದಿರುವ ಸ್ಥಿತಿ; ಪರಮಾತ್ಮನ ಅಂಶದಲ್ಲಿ ಬೆರೆತು ಹೋಗಿರುವ ಸ್ಥಿತಿ; ಭೌತಿಕ ಶರೀರವನ್ನು ತ್ಯಜಿಸಿದವನು;
ವಚನ ವಚನ ಎಂದರೆ 'ಪ್ರಮಾಣ' ಎಂದರ್ಥ - ಕನ್ನಡದ ಸಾಹಿತ್ಯ ರೂಪಗಳಲ್ಲಿ ಬಹು ಪ್ರಮುಖವಾದದ್ದು. ಇದು ಸಾಹಿತ್ಯ ಪರಿಭಾಷೆಯಾಗಿ ಒಂದು ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರ. ಬಸವಣ್ಣ ಹಾಗೂ ಇತರ ಶರಣರು ತಮ್ಮ ಸುತ್ತಮುತ್ತಲ ಬದುಕು, ಸಮಾಜ ಸುಧಾರಣೆ, ಸಂಪ್ರದಾಯ ಮುಂತಾದ ಅನೇಕಾನೇಕ ವಿಷಯಗಳು ವಚನಸಾಹಿತ್ಯದಲ್ಲಿ ಲಭ್ಯ.
ವಚನಕಾರ ವಚನಗಳನ್ನು ರಚಿಸಿದ ಶರಣ
ವಿರಕ್ತ ಭೋಗಾಭಿಲಾಷೆಯಿಂದ ದೂರನಾದವನು; ವಿರಾಗಿಯಾದವನು, ನಿರಂಜನ,ಜಂಗಮ,
ವಿರಕ್ತಮಠ ವಿರಾಗಿಗಳ ಮಠ, ವಿರಕ್ತರು ವಾಸಿಸುವ ಭವನ.
ವೇಳೆವಾಳಿಯವ ಒಡೆಯನು ಗತಿಸಿದಾಗ ತಾನೂ ಸಾಯುವೆನೆಂದು ಪ್ರತಿಜ್ಞೆ ಮಾಡುವ ವ್ಯಕ್ತಿ.
ವೈರಾಗ್ಯ ಪ್ರಾಪಂಚಿಕ ವಿಷಯಗಳಲ್ಲಿ ಉಂಟಾಗುವ ಅನಾಸಕ್ತಿ, ವಿರಕ್ತಿ.
ಶರಣಸತಿ, ಲಿಂಗಪತಿ ತಾನೇ ಸತಿ, ಲಿಂಗವೇ ಪತಿ ಎಂದು ಭಾವಿಸಿ, ದೇವನಿಗೆ ತನ್ನ ಸರ್ವಸ್ವವನ್ನು ಅರ್ಪಿಸಿಕೊಳ್ಳುವ ಭಕ್ತಿಭಾವ;

[1] ಈ ತರಹದ ಸಂಖ್ಯೆಯ ವಿವರ: ೧-೨೯-೧೦೭:- ಸಮಗ್ರ ವಚನ ಸಂಪುಟ -೧, ಪುಟ -೨೯, ವಚನ ಸಂಖ್ಯೆ-೧೦೭

ಪರಿವಿಡಿ (index)
*
Previousಲಿಂಗಾಯತ ಎಂದರೇನು? What is Lingayatಲಿಂಗಾಯತರ ಪ್ರಮುಖ ಹಬ್ಬಗಳುNext
*