ಜಗುಲಿ: ಸುತ್ತಮುತ್ತ ವೃತ್ತಾಂತ

✍ ಡಾ|| ರಾ. ಮ. ಹೊಸಮನಿ

*

ಜಗುಲಿ => ೦ಗಮ, ಗುರು, ಲಿ೦ಗ

ನಮ್ಮ ಹಳ್ಳಿ ಊರಿನ ಹಳೆಯ ಮನೆಯಲ್ಲಿ ಜಗುಲಿ ಇದ್ದವು. ಈಗ ಕಟ್ಟುವ ಪ್ರತಿಯೊಂದು ಮನೆಗಳಲ್ಲಿ ದೇವರ ಮನೆಗೆ ಸ್ಥಾನ. ಇದು ಹಳ್ಳಿ ಪಟ್ಟಣಗಳೆನ್ನದೆ ನಿಜದ ಸಂಗತಿ. ಬಹುತೇಕ ಎಲ್ಲರೂ ಜಗುಲಿ ಮರೆತಿದ್ದಾರೆ. ಗೊತ್ತಾಗದಂತೆ ಈ ಜಗುಲಿ ನಮ್ಮಲ್ಲಿಂದ ನಮಗರಿವಿಲ್ಲದಂತೆ ಮಾಯಮಾಡಿಸಲಾಗಿದೆ.

ಜಗುಲಿ ಎಂದರೇನು, ಅರ್ಥ, ಮಹತ್ವ, ಯಾವ ರೀತಿ ಇರಬೇಕು, ಹೇಗೆ ಉಪಯೋಗಿಸಬೇಕು, ತತ್ವ, ಹೇಗೆ ಏತಕ್ಕಾಗಿ ಮುಂದುವರಿಸಬೇಕು, ಇತ್ಯಾದಿ ಬಗ್ಗೆ ಬಹಳ ದಶಕಗಳಿಂದ ಲಿಂಗಾಯತರಲ್ಲಿ ನಿಜವಾದ ಸರಿಯಾದ ಸ್ಪಷ್ಟ ಅರಿವಿನ ಮಾಹಿತಿಯ ಕೊರತೆ ಕಂಡಿದ್ದೇವೆ. ಆ ಕಾರಣಕ್ಕಾಗಿ ಜಗುಲಿ ಹಿನ್ನೆಲೆಗೆ ಸರಿದು ಇಲ್ಲದಂತಾಗಿದೆ.

ಜಗುಲಿ ಇಲ್ಲದಂತಾಗುವ ಮೊದಲು ಜಗುಲಿಯ ಮೇಲೆ ಎಲ್ಲ ತರಹದ ಲಿಂಗಾಯತದಲ್ಲಿ ಸ್ಥಾನವಿಲ್ಲದ ನಂಬದ ದೇವರುಗಳ ಫೋಟೋ ಮೂರ್ತಿ ತೆಂಗಿನಕಾಯಿ ಕಲ್ಲುಗಳು ಮತ್ತು ಕಾಯಕದ ಪರಿಕರಗಳು ಇತ್ಯಾದಿ ಸ್ಥಾನ ಪಡೆದದ್ದು ಸುಳ್ಳಲ್ಲ. ಕ್ರಮೇಣ ಇಷ್ಟಲಿಂಗ ಪೂಜೆ ಮಾಡಿಕೊಳ್ಳುವ ಸ್ಥಳ ಹೋಗಿ ಮೂರ್ತಿ ದೇವರು ಇತ್ಯಾದಿಗಳ ಪೂಜೆ ಮಾಡುವ ಸ್ಥಳವಾಗಿದ್ದು ದುರಂತ.

ಜಗುಲಿ ಶಬ್ದವು ಮಹೋದ್ದೇಶ ಹೊಂದಿ ಬಹಳ ಅರ್ಥ ಗರ್ಭಿತವಾಗಿದೆ. "ಜಗುಲಿ" ಪದದ ಮೂರಕ್ಷರಗಳು ಒಂದೊಂದು ತತ್ವವುಳ್ಳ ಅರ್ಥದ ಪದಗಳಾಗಿವೆ.

ಜ= ಜಂಗಮ, ಸಮಾಜ, ಸಂಚಾರಿ, ಧರ್ಮ ಬೋಧನೆ ಮಾಡುವ ಧರ್ಮಪ್ರಚಾರಕರು, ಜನರಿಂದ ದವಸ-ಧಾನ್ಯ-ಧನ ಇತರೆ ವಸ್ತುಗಳನ್ನು ಪಡೆದು ಸಾಮಾಜಿಕವಾಗಿ ಧರ್ಮ ಸಂಸ್ಕಾರ ದೊಂದಿಗೆ, ಧಾರ್ಮಿಕ, ಶೈಕ್ಷಣಿಕ ಆರ್ಥಿಕ ಅಭಿವೃದ್ಧಿ ಮಾಡುವ ಮಠದ ಅಧಿಪತಿ ,

ಗು=ಗುರು, ಅರಿವು ಜ್ಞಾನ ಮೂಡಿಸುವವರು.

ಲಿ=ಲಿಂಗ, ನಿರಾಕಾರ ಸೃಷ್ಟಿಕರ್ತ , ದೇವ ಒಬ್ಬನೆ, ಸಾಧನೆಯಿಂದ ಸತ್ಯದ ದೇವರನ್ನು ಕಾಣಲು ಅನುಭವಕ್ಕೆ ಬರುವ ದೇವರ ಕುರುಹುವೆ ಲಿಂಗ, ಸಾಧನವೆ ಇಷ್ಟಲಿಂಗ.

ಬಸವಾದಿ ಶರಣರ ವಚನಾಧರಿತ ಲಿಂಗಾಯತ ಧರ್ಮದಲ್ಲಿ ಗುರು ಲಿಂಗ ಜಂಗಮ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಂಡಿದೆ. ಅವುಗಳ ಅರ್ಥ ಮೇಲಿನದಲ್ಲದೆ ಹಲವು ರೀತಿಯಲ್ಲಿದ್ದು . ಮೂಲ ಅರ್ಥದಿಂದ ಇಂದು ಬದಲಾವಣೆ ಹೊಂದಿದೆ.

ಪ್ರತಿ ಮನೆಯಲ್ಲಿ ಜಗುಲಿ ಜಗುಲಿಕಟ್ಟೆಯಾಗಿದ್ದು. ಮೂಲತಃ ಅದರ ಮೇಲೆ ಕುಳಿತು ಇಷ್ಟಲಿಂಗ ಪೂಜೆ ವಚನಪಠಣ ಸಾಧನೆ ಮಾಡಿಕೊಳ್ಳುವುದಾಗಿತ್ತು.

ನಮ್ಮ ಮೈ ಮೇಲೆ ಇಷ್ಟಲಿಂಗ ಹೋಗಿ ತಾಯತ, ಲಾಕೆಟ್, ಕರಿದಾರ, ರುದ್ರಾಕ್ಷಿ, ಚಿಟಿ, ಕಡಗ ಇತ್ಯಾದಿ ಧರಿಸುವಂತೆ ಕ್ರಮೇಣವಾಗಿ ಬದಲಾವಣೆಯಾಗಿದೆ. ಹಣೆಯ ಮೇಲೆ ವಿಭೂತಿಯೊಂದೆ ಇರುತ್ತಿತ್ತು, ನಂತರ ಕುಂಕುಮ ಅದರೊಂದಿಗೆ ಕಾಣಿಸಿಕೊಂಡು, ಈಗ ಕೆಲವರಲ್ಲಿ ವಿಭೂತಿ ಮಾಯವಾಗಿ ಕುಂಕುಮ ಒಂದೆ ಹಚ್ಚಿ ಕೊಳ್ಳುತ್ತಿರುವುದು ಒಂದು ತರಹದ ಅರ್ಥ ಕಳೆದುಕೊಂಡು ಸ್ಥಾವರ ಮೌಢ್ಯತೆ ಅಂಟಿಕೊಂಡಿರುವ ಗಾಬರಿಗೊಳಿಸುವ ಬೆಳವಣಿಗೆ.

ಲಿಂಗಾಯತ ತತ್ವ ಅರಿವು ತ್ಯಜಿಸಿ ವೈದಿಕತೆಯ ವ್ಯಾಮೋಹ ಮತ್ತು ಅದರ ಬಲೆಗೆ ಬಿದ್ದು ಇನ್ನೂ ಆಳಕ್ಕೆ ಕುಸಿಯುತ್ತಿರುವುದು ಮುಂದುವರಿಯುತ್ತಿದೆ. ಇದು ಉದ್ದೇಶ ಪೂರ್ವಕವಾಗಿ ಲಿಂಗಾಯತವನ್ನು ವೈದಿಕೃತಗೊಳಿಸಿ ವೀರಶೈವಿಕರಣಗೊಳಿಸುವ ಭರಪೂರದ ಷಡ್ಯಂತ್ರ ಮತ್ತು ಅದನ್ನು ಇಲ್ಲದಂತಾಗಿಸುವ ನಯವಂಚಕದ ದುರುದ್ದೇಶವೆ ಸರಿ.

ಜಗುಲಿ ಹೋಗಿ ದೇವರಮನೆಯಾಗಿ, ಜಗುಲಿ ಬಿಟ್ಟು ಗುಡಿ, ಬಸವಣ್ಣ ಹೋಗಿ ನಾಲ್ಕು ಕಾಲಿನ ಎತ್ತು ಆಗಿ, ಇಷ್ಟಲಿಂಗ ಪೂಜೆ ಹೋಗಿ ಮೂರ್ತಿ ಪೂಜೆ, ವಚನಗಳು ಹೋಗಿ ಶ್ಲೋಕಗಳಿಗೆ ಜೊತುಬಿದ್ದು, ಕನ್ನಡ ಬಿಟ್ಟು ಸಂಸ್ಕೃತ ವ್ಯಾಮೋಹ, ಅರ್ಥವಾಗುವುದನ್ನು ಬಿಟ್ಟು ತಿಳಿಯಲಾರದಕ್ಕೆ ಅಂಟಿಕೊಂಡು, ಸನ್ಮಾರ್ಗಕ್ಕೆ ಒಯುವವರನ್ನು ಬಿಟ್ಟು ಹೆದರಿಸುವವರಿಗೆ ಜೊತುಬಿದ್ದು, ವೈಚಾರಿಕತೆ ತ್ಯಜಿಸಿ ಮೌಢ್ಯತೆಗೆ ಬೆನ್ನತ್ತಿ, ಪ್ರೀತಿಸುವುದನ್ನು ಬಿಟ್ಟು ದ್ವೇಷಿಸುವದನ್ನು ರೂಢಿಸಿಕೊಂಡು, ಸ್ವಂತಿಕೆ ಮಾರಿ ಗುಲಾಮಗಿರಿಯ ಮಡುವಿನಲ್ಲಿ ಹಾರಿ, ಅಮೃತವನ್ನು ತಿರಸ್ಕರಿಸಿ ವಿಷದ ದಾಸರಾಗಿ, ಪೋಷಿಸುವವರಿಂದ ದೂರಸರಿದು ಶೋಷಿಸುವವರಿಗೆ ತೆಕ್ಕೆಬಿದ್ದು, ನಿರ್ಭಯ ಬಿಟ್ಟು ಭಯವಂಟಿಸಿಕೊಂಡು, ಸತ್ಯದಿಂದ ಸರಿದು ಹುಸಿಯ ಬೆನ್ನತ್ತಿ , ಅರಿವು ತೊರೆದು ಮೌಢ್ಯವಾಗಿ, ಬೆಳಕು ಧಿಕ್ಕರಿಸಿ ಕತ್ತಲೆಡೆಗೆ ಮುನ್ನುಗ್ಗಿ , ಕಾಯಕ ಅರ್ಹತೆಯಿಂದ ಜಾತಿಯತೆಗೆ ನಡೆದುದೆ ಇತ್ಯಾದಿ ಇಂದಿನ ಪರಿಸ್ಥಿತಿಯ ಚಿತ್ರಣ.

ಬಸವಣ್ಣನ ಮರೆಸಿ ನಾಲ್ಕು ಕಾಲಿನ ಎತ್ತು ಆಗಿಸಿ ಬಹುತೇಕರ ತಲೆಯಲ್ಲಿ ಈ ಬದಲಾವಣೆ ಹೀಗೆ ಸತ್ಯ ಅನ್ನುವ ಹಾಗೆ ಪ್ರತಿಸ್ಥಾಪಿಸಲಾಗಿದೆ. ಅದರಂತೆಯೆ ಜಗುಲಿಯ ಕಥೆ ಕೂಡ. ಇದೆಲ್ಲದಕ್ಕೆ ವಿರೂಪಗೊಂಡ ಮನಸ್ಥಿತಿ, ಪಟ್ಟಭದ್ರತೆ, ಜಾತಿಯತೆ, ನಿರಾಸಕ್ತಿ, ಗುಲಾಮಗಿರಿ, ಜಾತಿಯತೆ, ಅಂಧಪತನ, ಮೌಢ್ಯ, ಅಸಹಾಯಕತೆ, ನಿರಭೀಮಾನ, ಅಧ್ಯಯನ ಕೊರತೆ, ವಿಚಾರವಿಲ್ಲದೆ ಕಾಲೇರಗುವಿಕೆ, ಸ್ವಂತಿಕೆರಹಿತ, ಅವಕಾಶವಾದಿತನ, ಧ್ರೋಹ ಮನಸ್ಥಿತಿ,ಇತ್ಯಾದಿನೆ ಕಾರಣ.

ಗುರು ವ್ಯಕ್ತಿಯಾಗಿ ಜಂಗಮ ಜಾತಿಯಾದ ಕಾರಣ ಈ ಎಲ್ಲಾ ದುರದೃಷ್ಟಕರ ಬೆಳವಣಿಗೆಗೆ ಕಾರಣವಾಯಿತ್ತೆನ್ನಬಹುದು. ಜಗುಲಿಕಟ್ಟೆ ಹೋಗಿ ದೇವರ ಜಗುಲಿಯಾಗಿ ದೇವರ ಮನೆಯಾದದ್ದು ಖೇದಕರವಲ್ಲದೆ ಅದು ಮನೆಯಿಂದ ಮಾಯವಾದದ್ದು ಮೂಲ ಅರ್ಥ ಹೋಗಿರುವುದು ತಿಳುವಳಿಕೆ ಅರಿವು ಉತ್ಸುಕತೆ ಕಾಪಾಡಿಕೊಳ್ಳುವಿಕೆ ಹೆಮ್ಮೆ ನಮ್ಮ ಮಹತ್ವ ಸ್ವಾಭಿಮಾನ ಶ್ರೇಷ್ಠತೆ ಇತ್ಯಾದಿ ಕಳೆದುಕೊಂಡಿರುವುದ್ದಕ್ಕಾಗಿ.

ಜೀವಪರ ಜನಪರ ಸಮಾನತೆ ವೈಚಾರಿಕತೆ ಪ್ರಜಾಪ್ರಭುತ್ವ ಕಾಯಕ ದಾಸೋಹ ಮೌಢ್ಯರಹಿತ ವೈಜ್ಞಾನಿಕ ಪ್ರಭುದ್ಧತೆ ಪ್ರಗತಿಪರ ಲಿಂಗಾಯತ ಧರ್ಮದ ಗುರ್ತು ಅಶ್ಮೀತೆ ಸತ್ಯತೆ ಉಳಿಸಿಕೊಳ್ಳವುದರಲ್ಲಿ ಜಗುಲಿಗೆ ವಿಶೇಷ ಸ್ಥಾನವಿದೆ ಮತ್ತು ಅದನ್ನು ಮರುಬಳಕೆಗೆ ತರುವುದು ಅವಶ್ಯಕ. ಅರಿವಿನಿಂದ ಸಕಲವೆಲ್ಲವು ಸಾಧ್ಯ. ಅರಿವು ಮೂಡಿಸಿ ಜಗುಲಿ ಜಗುಲಿಕಟ್ಟೆಯಾಗಿ ವಚನಪಠನ ತ್ರಾಟಕಯೋಗ ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದಕ್ಕಾಗಿ ಪ್ರತಿಯೊಂದು ಮನೆಯಲ್ಲಿ ವಿಜೃಂಬಿಸಲಿ. ಅರಿವು ಹೆಮ್ಮೆ ವೃದ್ಧಿಗೆ ಕಾರಣ. ಹೆಮ್ಮೆ ನೆಮ್ಮದಿ ಸಂತೋಷ ಪ್ರೀತಿಭರಿತ ಸಮೃದ್ಧ ಸೃಜನಶೀಲ ಲವಲವಿಕೆಯ ಮನೆಯಾಗಿರಲು "ಜಗುಲಿ" ಇರಲಿ.

🙏-ಡಾ ರಾ ಮ ಹೊಸಮನಿ
(ಈ ಬರಹಕ್ಕೆ ಶ್ರೀ ಮಲ್ಲಿಕಾರ್ಜುನ ನಾಗಶೆಟ್ಟಿಯವರ ವಿಚಾರದ ಬರಹ ಸ್ಪೂರ್ತಿ)

ಪರಿವಿಡಿ (index)
Previous866666 ಎಂದರೇನು?ಇಷ್ಟಲಿಂಗ ಪೂಜಾ ವಿಧಿNext
*