ಇಷ್ಟಲಿಂಗವನ್ನು ಎಲ್ಲಿ ಧರಿಸಬೇಕು ?

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಇಷ್ಟಲಿಂಗವನ್ನು ಎಲ್ಲಿ ಧರಿಸಬೇಕು ?

ಅನಾಹತ ಚಕ್ರ (ಹೃದಯಕಮಲ) ದಲ್ಲಿ ಅವಿತುಕೊಂಡ ಅಂತರಾತ್ಮನು ಅಂಗದ ಮೇಲೆ ಇಷ್ಟಲಿಂಗವಾಗಿ ಬಂದುದರಿಂದ, ಅದನ್ನು ಎದೆಯ ಮೇಲೆಯೇ ಧರಿಸಿಕೊಳ್ಳಬೇಕು. ವಿಶುದ್ಧಿ ಚಕ್ರವಿರುವ ಕತ್ತಿನಲ್ಲಿ ಕೆಲವರು ಲಿಂಗವನ್ನು ಕಟ್ಟಿಕೊಳ್ಳುತ್ತಾರೆ; ಇನ್ನು ಕೆಲವರು ರಟ್ಟೆಯಲ್ಲಿ ಕಟ್ಟಿಕೊಳ್ಳುತ್ತಾರೆ, [ಕಾಯಕ ಮಾಡುವಾಗ ಎದೆಯ ಮೇಲೆ ತೊಂದರೆಯಾದರೆ ರಟ್ಟೆಗೆ ಕಟ್ಟಬಹುದು.] ಮತ್ತೆ ಹಲವರು ಹೊಕ್ಕುಳ ಕೆಳಗೆ ಜೋತು ಬಿಟ್ಟಿರುತ್ತಾರೆ. ಈಗಿನ ಫ್ಯಾಶನ್ ಯುಗದ ತರುಣರು ಮಗ್ಗುಲಿಗೆ, ಟೊಂಕದ ಹತ್ತಿರ ಅಲೆದಾಡುವ ಹಾಗೆ ಉದ್ದವಾದ ಶಿವದಾರದಿಂದ ಅಡ್ಡವಾಗಿ ಲಿಂಗವನ್ನು ಹಾಕಿರುತ್ತಾರೆ. ಇವೆಲ್ಲ ತಪ್ಪು ಪದ್ದತಿಗಳು; ಅಂತರಾತ್ಮನ ಕುರುಹಾದ ಇಷ್ಟಲಿಂಗವು ಅನಾಹತ ಚಕ್ರದ ಸ್ಥಾನದಲ್ಲಿ ಅಂದರೆ ಎದೆಯ ಮೇಲೆಯೇ ಇರಬೇಕು. ಅದಕ್ಕೆ ಇನ್ನೊಂದು ಮಹತ್ವದ ಆಧಾರವೂ ಇದೆ. ಯಾಗ ದೃಷ್ಟಿಯಿಂದ, ಆಧಾರ ಚಕ್ರದಲ್ಲಿ ಜೀವಾತ್ಮನಿದ್ದಾನೆಂದೂ ಬ್ರಹ್ಮ ರಂಧ್ರ ಚಕ್ರದಲ್ಲಿ ಪರಮಾತ್ಮನಿದ್ದಾನೆಂದೂ, ಹೃದಯ ಅಥವಾ ಅನಾಹತ ಚಕ್ರದಲ್ಲಿ ಅಂತರಾತ್ಮನು ಅವಿತುಕೊಂಡಿದ್ದಾನೆಂದೂ ಶಾಸ್ತ್ರಗಳು ಪ್ರತಿಪಾದಿಸುತ್ತವೆ. ತಪಸ್ಸು -ಅನುಷ್ಟಾನ-ಪೂಜೆಗಳಿಂದ ಆಂತರಿಕವಾದ ಒಂದು ಓಜಸ್ಸು ಉದಯಿಸಿ, ಗೋಮುಖವಾಗಿರುವ ಜೀವಾತ್ಮನು ಊರ್ಧ್ವ ಮುಖವಾಗಿ ಒಂದೊಂದು ಚಕ್ರಗಳನ್ನು ಏರುತ್ತಾ ಬರುತ್ತಾನೆ. ಈ ಪ್ರಮಾಣಕ್ಕನುಗುಣವಾಗಿ ಬ್ರಹ್ಮ ರಂಧ್ರದಲ್ಲಿರುವ ಪರಮಾತ್ಮನು ಕೆಳಗೆ ಇಳಿಯುತ್ತಾನೆಂದು ಹೇಳಲಾಗುತ್ತದೆ. ಜೀವನು ಮೇಲೇರುವ ಕ್ರಮಕ್ಕೆ ಉತ್ಕಾ೦ತಿತತ್ವ (Ascending Force) ವೆಂದೂ, ದೇವನ ಚೈತನ್ಯವು ಇಳಿದು ಬರುವ ಕ್ರಮಕ್ಕೆ ಉದ್ದಾರಕ ತತ್ವ (Descending Grace) ವೆಂದೂ ಹೆಸರು. ಈ ಜೀವ-ದೇವರು ಅನಾಹತ ಚಕ್ರದಲ್ಲಿ ಸಂಧಿಸುವರು. ಕೆಳಗಿನಿಂದ ಮೇಲಕ್ಕೆ ಚಿಮ್ಮಿ ಹೋಗುವ ಜೀವನ ಭಕ್ತಿ, ಮೇಲಿನಿಂದ ಕೆಳಗೆ ಧುಮ್ಮಿಕ್ಕುವ ಶಿವನ ಶಕ್ತಿಗಳು ಹೃದಯ ಕಮಲದಲ್ಲಿ ಬೆರೆತು ಒಂದಾಗುವದೇ ಮುಕ್ತಿ ಎಂದು ಶಿವಯೋಗಿಗಳ ಅಭಿಪ್ರಾಯವಾಗಿದೆ. ಇಷ್ಟಲಿಂಗವು ಮುಕ್ತಿಯ ಪ್ರತಿನಿಧಿ; ಮುಕ್ತಿಯನ್ನೀಯುವ ಕುರುಹಾಗಿರುವದರಿಂದ ಜೀವ-ದೇವರ ಸಂಗಮಕ್ಕೆ ಸಜ್ಜೆಯಾಗಿರುವ ಹೃದಯದ ಮೇಲೆ ಅಂದರೆ ಎದೆಯ ಮೇಲೆಯೇ ಲಿಂಗವನ್ನು ಧರಿಸುವುದು ಸಾಂಕೇತಿಕವೂ, ತಾತ್ವಿಕವೂ ಆಗಿದೆ...

ಬಸವ ಧರ್ಮದ ಪ್ರಕಾರ ಗುಡಿಗೆ ಒಯ್ತು ಎಡೆ ಮಾಡಿದುದು, ಅಥವಾ ಮನೆಯಲ್ಲಿ ಯಾವುದಾದರೂ ವಿಗ್ರಹಕ್ಕೆ ಎಡೆ ಮಾಡಿದ್ದು ಮಾತ್ರ ಪ್ರಸಾದವಲ್ಲ. ನಾವು ಊಟ ಮಾಡುವುದೆಲ್ಲ ಪ್ರಸಾದವಾಗಬೇಕು. ಹಾಗೆ ಪ್ರಸಾದವಾಗಬೇಕಾದರೆ ಉಣ್ಣುವ ಮೊದಲಿಗೆ ಲಿಂಗಕ್ಕೆ ಎಡೆಮಾಡಬೇಕು; ನಂತರ ಉಣ್ಣುವ ಪ್ರತಿಯಾಂದು ತುತ್ತನ್ನೂ ದೇವನ ನಾಮಸ್ಮರಣಿ ಮಾಡುತ್ತ, ಅರ್ಪಿಸುತ್ತಾ ಸ್ವೀಕರಿಸಬೇಕು. ಎದೆಯ ಮೇಲೆ ಇಷ್ಟಲಿಂಗವಿದ್ದರೆ ತುಂಬಾ ಸ್ವಾಭಾವಿಕವಾಗಿ ಪ್ರತಿಯಾಂದು ತುತ್ತೂ ಅರ್ಪಿತವಾಗುವುದು. ಆಗ ಅಂಥ ಪ್ರಸಾದ ಸ್ವೀಕಾರದಿಂದ ದೇಹವು ಪ್ರಸಾದ ಕಾಯವಾಗುವುದು, ಜೀವನವು ಪಾವನವಾಗುವುದು.

ಎದೆಯ ಮೇಲೆ ಲಿಂಗಧಾರಣಿ ಮಾಡುವುದರಲ್ಲಿ ಇನ್ನೊಂದು ವಿಚಾರವಿದೆ. ಇಂಥ ದೇವರು ನಮ್ಮ ಮುಂದೆ ಇರುವುದರಿಂದ ನಾವು ಎಲ್ಲಿಯೇ ಹೋಗುವಾಗ ನಮ್ಮ ಮುಂದೆ ದೇವನಿದ್ದಾನೆ, ನಾನು ದೇವನ ಬೆಂಬಳಿವಿಡಿದು ಅವನ ಹೆಜ್ಜೆಯಲ್ಲಿ ನಡೆದಿದ್ದೇನೆ ಎಂಬ ಉದಾತ್ತ ಕಲ್ಪನೆ ಮೂಡುವುದು. ಅದರಿಂದ ನಮಗೆ ಅಪಜಯ ಬರಲಾರದು. ದೇವನ ಸಂಗಾತಿಯಾಗಿ ಹೋಗುವವನಿಗೆ ವಿಘ್ನಗಳು ಬರಲು ಸಾಧ್ಯವೇ ಇಲ್ಲ. ಅಂತೆಯೇ ಇಷ್ಟಲಿಂಗಧಾರಿಗಳಿಗೆ ಆಕಸ್ಮಿಕ, ಅಕಾಲಮೃತ್ಯು ಬರಲಾರದೆಂದು ಹಿರಿಯರು ಹೇಳುತ್ತ ಬಂದಿರುವ ವಾಡಿಕೆಯಲ್ಲಿ ತಥ್ಯವಿಲ್ಲದಿಲ್ಲ. ಆದ್ದರಿಂದ ಸದಾಕಾಲ ಲಿಂಗವು ಎದೆಯ ಮೇಲಿರಬೇಕು. ಪೂಜೆ ಮಾಡಿ ಹೊರಗೆ ತೆಗೆದಿಡಬಾರದು. ದೇವನು ನನ್ನಲ್ಲಿ ಇದ್ದಾನೆ. ಅವನನ್ನು ಬಿಟ್ಟು ನಾನು ಒಂದು ಕ್ಷಣವೂ ಸಹ ಇಲ್ಲವೆಂಬ ಈ ಸದ್ಭಾವನೆ ಜಾಗ್ರತವಾಗಿರುವ ಸಲುವಾಗಿ ಅಂಗದ ಮೇಲೆ ಲಿಂಗವು ಸದಾಕಾಲ ಇರುವುದು ಮಂಗಲಮಯವಾದುದು.

ಇಷ್ಟಲಿಂಗದ ಇನ್ನೊಂದು ವಿಧವಾದ ತಾತ್ವಿಕ ವಿವೇಚನೆಯನ್ನು ನೋಡುವಾ. ಶಂಕರಾತಿಗಳು "ಸರ್ವಂ ಖಲ್ವಿದಂ ಬ್ರಹ್ಮ", "ಬ್ರಹ್ಮ ಸತ್ಯಂ ಜಗನ್ನಿಥ್ಯಾ' ಎಂದು ಹೇಳಿ ಕೇವಲ ಬ್ರಹ್ಮತತ್ವ ಒಂದನ್ನೇ ಮನ್ನಿಸುತ್ತಾರೆ. ಮಾಧ್ವಮತದ ದೈತಿಗಳು ಜೀವಾತ್ಮ ಪರಮಾತ್ಮ ಎಂಬ ಎರಡು ನಿರಂತರ ತತ್ವಗಳನ್ನು ಒಪ್ಪಿಕೊಂಡು ಜೀವ-ಪರಮರಲ್ಲಿ, ಜೀವ-ಜೀವರಲ್ಲಿ, ಜೀವಜಡದಲ್ಲಿ, ಜಡ - ಪರಮರಲ್ಲಿ, ಜಡ-ಜಡದಲ್ಲಿ ಭೇದವಿದೆಯೆಂದು ಪಂಚಭೇದಗಳನ್ನು ಪ್ರತಿಪಾದಿಸುತ್ತಾರೆ. ರಾಮಾನುಜ ಮತದ ವಿಶಿಷ್ಟಾದ್ವತಿಗಳು ಚಿತ್, ಅಚಿತ್, ಈಶ್ವರ ಎಂಬುದಾಗಿ ಮೂರು ತತ್ವಗಳನ್ನು ಮನ್ನಿಸುತ್ತಾರೆ. ಆದರೆ ಲಿಂಗಾಯತ ಧರ್ಮದ ಶಕ್ತಿ ವಿಶಿಷ್ಟಾದೈತ ಸಿದ್ದಾಂತವು ಪ್ರಕೃತಿ-ಪುರುಷ- ಪರಾಶಕ್ತಿ-ಪರಶಿವ ಎಂಬ ನಾಲ್ಕು (Four Entities) ತತ್ವಗಳನ್ನು ಒಪ್ಪುತ್ತದೆ. ಈ ನಾಲ್ಕು ತತ್ವಗಳು ಲಿಂಗದಲ್ಲಿ ಹೇಗೆ ಅಡಕವಾಗಿವೆಯೆಂಬುದನ್ನು ಈಗ ವಿವೇಚಿಸುವಾ.

ಪ್ರಕೃತಿಗೆ ಅವಿದ್ಯೆಯೆಂದು, ಮಾಯಾಶಕ್ತಿಯೆಂದು, ಮಾಯೆಯೆಂದು ಕರೆಯುವ ವಾಡಿಕೆಯುಂಟು. ಈ ಪ್ರಕೃತಿ ತ್ರಿಗುಣಾತ್ಮಕವಾಗಿದೆ. ಸತ್ವ ರಜತಮ ಈ ಮೂರು ಗುಣಗಳಿಂದ ಕೂಡಿದುದಾಗಿದೆ. ಈ ತ್ರಿಗುಣಗಳನ್ನು ಚಿತ್ರಿಸಿ ತೋರಿಸಬೇಕೆಂದರೆ, △ ಹೀಗೆ ಸಮಭುಜ ತ್ರಿಕೋನದ ಆಕೃತಿಯಿಂದ ತೋರಿಸಬಹುದು ಮತ್ತು ಪರಾಶಕ್ತಿಗೆ ಚಿತ್ ಶಕ್ತಿಯೆಂದೂ, ವಿಮರ್ಶಾ ಶಕ್ತಿಯೆಂದೂ ಹೇಳಲಾಗುವುದು. ಇದೂ ಸಹ - ಸತ್ - ಚಿತ್ ಆನಂದವೆಂಬ ಮೂರು ಗುಣಗಳಿಂದ ಕೂಡಿರುವುದು. ಆದ್ದರಿಂದಲೇ ಚಿತ್ ಶಕ್ತಿಯು ಸಚ್ಚಿದಾನಂದ ಮಾಯೆಯಾಗಿದೆ. ಈ ಪರಾಶಕ್ತಿಯ ತ್ರಿಗುಣಗಳನ್ನು ಚಿತ್ರಿಸಿ ತೋರಿಸಬೇಕೆಂದರೆ △ ಹೀಗೆ ಇನ್ನೊಂದು ಸಮಭುಜ ತ್ರಿಕೋನದ ಆಕೃತಿಯಿಂದ ತೋರಿಸಬಹುದಾಗಿದೆ. ಪ್ರಕೃತಿ ಅಥವಾ ಮಾಯೆಗೆ ಅಪರಾಪ್ರಕೃತಿಯೆಂದು ಹೆಸರು. ಯಾಕೆಂದರೆ ಅದು ಕೆಳಗಿನದು, ಅಧೋ ಮುಖಿಯಾಗಿದೆ. ಚಿತ್ ಶಕ್ತಿಗೆ ಪರಾಪ್ರಕೃತಿಯೆಂದು ಹೆಸರು. ಯಾಕೆಂದರೆ ಅದು ಮೇಲಿನದು, ರ್ಧಮುಖಿಯಾಗಿದೆ. ಇವುಗಳನ್ನು ಒಂದರ ಮೇಲೊಂದನ್ನಿಟ್ಟು ತೋರಿಸಬೇಕೆಂದರೆ ಅದು ⧖ ಹೀಗೆ ಆಕೃತಿ ಯುಳ್ಳದ್ದಾಗುವುದು. ವಿದ್ಯಾವಿದ್ಯೆ, ಪರಾಪರಗಳೆಂಬ ಈ ಎರಡು ತತ್ವಗಳಿಗೆ ಅತೀತವಾದ ಒಂದು ಅನುಪಮವಾದ ತತ್ವ ಇದೆ. ಅದು ಜಡವೂ ಅಲ್ಲ, ಚೇತನವೂ ಅಲ್ಲ; ಅದು ಸಾಕಾರವೂ ಅಲ್ಲ: ನಿರಾಕಾರವೂ ಅಲ್ಲ. ಅದೇ ಪರಮಾತ್ಮ ತತ್ವ. ಇಂಥ ಪರಮಾತ್ಮ ತತ್ವವು ಪರಿಪೂರ್ಣವು. ಪರಿಪೂರ್ಣತೆಯನ್ನು ಚಿತ್ರಿಸುವ ಏಕಮೇವ ಚಿಹ್ನೆ ೦. ಆದ್ದರಿಂದ ಆ ಪರವಸ್ತುವನ್ನು ಚಿತ್ರಿಸಿ ತೋರಿಸಬೇಕೆಂದರೆ, ೦ ಹೀಗೆ ಒಂದು ಶೂನ್ಯವನ್ನೇ ಬರೆಯುವುದು ಅನಿವಾರ್ಯವಾಗುವುದು. ಅಂದರೆ ಇಲ್ಲಿಯವರೆಗಿನ ಆ ಚಿತ್ರದ ಆಕೃತಿಯು ಹೀಗೆ ಆಗುವುದು. ಇಂಥ ಪರವಸ್ತುವಿನ ಅನು ಸಂಧಾನದಿಂದ, ಆ ಇಷ್ಟದ ಬಲದಿಂದ ಸಂಸಾರ ವರ್ತುಲವನ್ನು ದಾಟುವ ಶರಣನು ಅರ್ಥಾತ್ ಜೀವಿಯು ಸರಳರೇಖೆ "--" (ಸರಿಯಾದ ಪದ Tangent) ಆಗಬೇಕು. ಅನುಭಾವೀ ಶರಣನ (ಪುರುಷನ) ನಿಲುವನ್ನು ತೋರಿಸಬೇಕೆಂದರೆ “--” ಹೀಗೆ ಸರಳರೇಖೆಯಿಂದ ತೋರಿಸುವುದೇ ಯೋಗ್ಯವಾದೀತು. ಯಾಕೆಂದರೆ ಶಿವಾನುಭವವು ಸಂಸಾರ ಚಕ್ರಕ್ಕೆ ಅಡ್ಡಾಗಿ ನಿಲ್ಲುವುದಷ್ಟೆ. ಅಂದರೆ ಈ ವರೆಗೆ ಚಿತ್ರಿಸಿ ತೋರಿಸಿದ ಆಕೃತಿಯು ಹೀಗೆ ಇಷ್ಟಲಿಂಗದ ರೂಪವನ್ನು ಹೊಂದಿತು. ಆಹಾ! ನೋಡಿದಿರಾ ಇಷ್ಟಲಿಂಗದ ಮಹತಿಯನ್ನು ! ಇಂಥ ತಾತ್ವಿಕವೂ, ವಿಶ್ವಮಾನವತೆಯ ಸಂಕೇತವೂ, ಉಪಾಸನೆಗೆ ಸುಲಭಸಾಧ್ಯವೂ, ಪ್ರತಿಯಾಬ್ಬ ಮಾನವನಿಗೆ ವರ್ಣ-ಲಿಂಗ-ಜಾತಿ ಮುಂತಾದ ಯಾವ ಭೇದವಿಲ್ಲದೆ ಪೂಜಿಸಲು ಅನುಕೂಲವಾದ ಈ ಇಷ್ಟಲಿಂಗವನ್ನು ಪ್ರಪಂಚದ ಮಾನವಕೋಟಿಗೆ ನೀಡಿದ ಅಗ್ಗಳಿಕೆ ನಿಜವಾಗಿಯೂ ವಿಶ್ವವಿಭೂತಿ ಬಸವಣ್ಣನವರಿಗೆ ಸಲ್ಲುವುದು.

ಈಗ ನಾವು ಇಷ್ಟಲಿಂಗದ ಗಾತ್ರ-ಆಕಾರ-ಆಕೃತಿ ಮುಂತಾದ ತಾತ್ವಿಕ ಸಂಗತಿಗಳನ್ನು ಅರಿತುದಾಯಿತು. ಇನ್ನು ಮೇಲೆ ಲಿಂಗದ ರೂಪ ಲಾವಣ್ಯವನ್ನು ಅಂದರೆ ಅದರ ಕಪ್ಪು ವರ್ಣದ ಮರ್ಮವನ್ನು ನಿರೀಕ್ಷಿಸೋಣ. ಲಿಂಗದ ಮೇಲಿರುವ ಕಪ್ಪು ಕವಚ ಅಥವಾ ಆವರಣಕ್ಕೆ ಕಂಥೆಯೆಂದೂ, ಕಂತೆಯೆಂದೂ, ಕಾಂತಿಯೆಂದೂ ರೂಢಿಯ ಹೆಸರುಗಳಿವೆ. ಇದಕ್ಕೆ ಅಷ್ಟಬಂಧ, ಸರಸವೆಂದೂ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗುತ್ತದೆ. ಇಷ್ಟಲಿಂಗದ ಅತಿ ಮುಖ್ಯ ಭಾಗವಾದ ಈ ಕಂಥೆಯನ್ನು ಸಿದ್ದಪಡಿಸಲು ಕೇರೆಣ್ಣಿ, ಎಣ್ಣೆ-ತುಪ್ಪ-ಕರ್ಪೂರದ ಕಾಡಿಗೆಯನ್ನು, ಜಾಲ್ಲೂಪ, ರಾಳಗಳ ಮಿಶ್ರಣವನ್ನು ಉಪಯಾಗಿಸುತ್ತಾರೆ. ಸಾಧಾರಣ ಕಂಥೆ ಅಥವಾ ಬೂದಿಯ ಮಿಶ್ರಣದೊಡನೆ ಸಿದ್ಧವಾದುದು ಹೊಳಪನ್ನು ಹೊಂದಿರದು. ಎಣ್ಣಿ ಕಂಥೆ ಅದಕ್ಕಿಂತಲೂ ಉತ್ತಮವಾಗಿಯೂ, ತುಪ್ಪದ ಕಂಥೆ ಇನ್ನೂ ಉತ್ತಮವಾಗಿಯೂ, ಕರ್ಪೂರದ ಕಾಡಿಗೆಯ ಕಂಥೆ ಅತ್ಯುತ್ತಮವಾಗಿಯೂ ಸಿದ್ಧವಾಗುವುದು. ಅದು ನೀಲವರ್ಣ ಮಿಶ್ರಿತ ಕಪ್ಪು ಬಣ್ಣದ್ದಾಗಿ ಹೆಚ್ಚಿನ ಹೊಳಪನ್ನು ಹೊಂದಿರುವುದು ಮಾತ್ರವಲ್ಲ ನಮ್ಮ ಮುಖವನ್ನು ಸಹ ಬಿಂಬಿಸುವಷ್ಟು ಸ್ಪಷ್ಟವಾಗಿರುವುದು.

ಒಳಗಿನ ಪಂಚಸೂತ್ರ ಘಟಿತ ಲಿಂಗವನ್ನು ಬೂದು ಬಣ್ಣದ ಬಳಪದ ಕಲ್ಲಿನಿಂದ ಸಿದ್ಧಪಡಿಸಲಾಗುವುದು. ಸಂಸ್ಥಾಪಕ ಶರಣರ ಕಾಲದಲ್ಲಿ ಲೋಹ ಚುಂಬಕ ಶಿಲೆಯಿಂದ ಪಂಚಸೂತ್ರಲಿಂಗವನ್ನು ಮಾಡಲಾಗುತ್ತಿತ್ತೆಂದು ಹಿರಿಯ ತಲೆಮಾರಿನವರ ಹೇಳಿಕೆ.

ಮೇಲೆ ಹೇಳಿದ ರೀತಿಯಲ್ಲಿ ಸಿದ್ಧಗೊಳಿಸಿದ ಕಂತೆಯನ್ನು ಹುಟ್ಟು ಲಿಂಗಕ್ಕೆ ಆಚ್ಛಾದಿಸಿ ಇಷ್ಟಲಿಂಗದ ರೂಪವನ್ನು ಥಳಥಳ ಹೊಳೆಯುವಂತೆ ಮಾಡುತ್ತಾರೆ. ಕಂತೆಯಿಂದಾಗಿ ಕಪ್ಪು ನೇರಲವರ್ಣವು ಲಿಂಗಕ್ಕೆ ಬರುತ್ತದೆ. ಅದು ತುಂಬಾ ಆಕರ್ಷಣೀಯವಾಗಿರುತ್ತದೆ. ದೀಕ್ಷಾ ಸಮಯದಲ್ಲಿ ಸದ್ದುರುವು ಚಿತ್ಕಳೆಯನ್ನು ತುಂಬಿಕೊಟ್ಟ ಮೇಲಂತೂ ಇಷ್ಟಲಿಂಗವನ್ನು ನೋಡುತ್ತ ಹಾಗೇ ನಿಬ್ಬೆರಗಿನಲ್ಲಿ ಕುಳಿತು ಕೊಳ್ಳುವಂತಾಗುತ್ತದೆ. ಕಂತೆಗೆ ಕಪ್ಪು ವರ್ಣವನ್ನೇ ಏಕೆ ಕೊಟ್ಟರು ? "Black absorbs white reflects" ಎಂಬ ವೈಜ್ಞಾನಿಕ ನಿಯಮದಂತೆ ಕಪ್ಪುವರ್ಣದ ಕಂತೆಯು ಕಣ್ಣಿನ ಕಪ್ಪು ಆಲಿಯನ್ನು ಆಕರ್ಷಿಸುತ್ತದೆ. ಕಣ್ಣಿನ ಗುಡ್ಡೆ ಕಪ್ಪು, ಲಿಂಗದ ಕಂತೆಯೂ ಕಪ್ಪು. ಈ ಕಪ್ಪು ಆ ಕಪ್ಪನ್ನು ಆಕರ್ಷಿಸಿ ಎರಡೂ ಒಡವೆರೆದು ಒಂದಾಗುತ್ತವೆ. ಆಗ ಲಿಂಗಪೂಜಕನ ದೃಷ್ಟಿ ಇಷ್ಟಲಿಂಗದಲ್ಲಿ ಏಕಾಗ್ರತೆ ಹೊಂದಿ ಲಯವಾಗಲು, ಮನೋಲಯವಾಗಿ ಲಿಂಗಾಂಗ ಸಮರಸಿಯಾಗುತ್ತಾನೆ. ಇದನ್ನೇ ತಾಟಕಯಾಗವೆಂದು ಕರೆಯುವರು. ಶಿವಯಾಗಿಯ ಲಿಂಗತಾಟಕದ ಮಹತಿಯನ್ನು ಚಾಮರಸ ಕವಿಯು ಬಲು ಸೊಗಸಾಗಿ ವರ್ಣಿಸಿದ್ದಾನೆ :

ಆಲಿ ನಿಂದೊಡೆ ಸುಳಿದು ಸೂಸುವ ಗಾಳಿ ನಿಲುವದು
ಗಾಳಿ ನಿಲೆ ಮನ ಮೇಲೆ ನಿಲುವದು
ಮನವು ನಿಂದೊಡೆ ಬಿಂದು ನಿಂದಿಹುದು !
ಲೀಲೆಯಿಂದ ಬಂದು ನಿಂದೊಡೆ ಕಾಲಕರ್ಮವ
ಗೆದ್ದು ಮಾಯೆಯ ಹೇಳ ಹೆಸರಿಲ್ಲೆನಿಸಬಹುದೆ ಬಸವ ಕೇಳೆಂದ !

ಲಿಂಗಾನುಸಂಧಾನದಿಂದ ಮಾಯೆಯನ್ನು ಗೆದ್ದು ಮಹಾದೇವನನ್ನು ಕೂಡಲು ಸಾಧ್ಯವಿದೆಯೆಂಬ ಭಾವವು ಮೇಲಿನ ಪದ್ಯದಲ್ಲಿ ಪ್ರತಿಪಾದಿತವಾಗಿದೆ. ಲಿಂಗಾನುಸಂಧಾನವನ್ನು ಹೇಗೆ ಮಾಡಬೇಕೆಂಬ ಬಗ್ಗೆ ಈಗ ತಿಳಿದು ಕೊಳ್ಳೋಣ. ಉತ್ತಮ ಕಂತೆಯ ಲಿಂಗವನ್ನು ವಾಮಕರದಲ್ಲಿ ಇಟ್ಟು ಮೂಗಿನ ತುದಿಗೆ ೧೦-೧೨ ಅಂಗುಲ ಅಂತರದಲ್ಲಿ ನೇರವಾಗಿ ಹಿಡಿಯಬೇಕು. ಕಣ್ಣಿನ ಮೇಲೆ ಹೊರಗಿನ ಬೆಳಕು ಬೀಳದಂತೆ ನೋಡಿಕೊಳ್ಳಬೇಕು. ಪೂಜೆಗೆ ಕುಳಿತ ನಮ್ಮ ಹಿಂದೆ ಒಂದು ಚಿಕ್ಕದಾದ, ಪ್ರಶಾಂತವಾಗಿ ಉರಿಯುವ ಹರಳೆಣ್ಣೆ (ಔಡಲೆಣ್ಣಿ) ಯ ಜ್ಯೋತಿಯನ್ನಿಡಬೇಕು. ಜ್ಯೋತಿಯ ಚಿಕ್ಕ ಬಿಂದುವು ಕರದಲ್ಲಿ ಹಿಡಿದ ಲಿಂಗದಲ್ಲಿ ಪ್ರತಿಫಲಿತವಾಗಿ ಬೀಳುವುದು. ಆ ಜ್ಯೋತಿಯ ಬಿಂದುವನ್ನು ಅರೆತೆರೆದ ದೃಷ್ಟಿಯಿಂದ ಕಣ್ಣು ಪಿಳುಕಿಸದೆ ಅನುಸಂಧಾನ ಗೈಯಬೇಕು.

ಲಿಂಗದೊಳಿಟ್ಟ ದೃಷ್ಟಿ ನಿಜದೃಷ್ಟಿಯೆಾಳಿರ್ದ ಮನಂ ಮನಸ್ಸಿನೊ |
ಳ್ಪಿಂಗದ ನಿಂದ ಭಾವಮದರೊಳ್ಳೆಲೆಗೊಂಡ ಶಿವಾತ್ಮಲಿಂಗ ವಾ |
ಳ್ಪಿಂಗದೊಳಿರ್ದು ನಿತ್ಯಸುಖಿಯಾಗಿ ವಿರಾಜಿಸುವಂಗೆ ಬಾಹ್ಯ ಕ ||
ರ್ಮಂಗಳವೇತಕಯ್ಯ ಪರಮಪ್ರಭುವೇ ಮಹದೈಪುರೀಶ್ವರಾ || -ಮಗ್ಗೆಯ ಮಾಯಿದೇವ

ಇಷ್ಟಲಿಂಗದಲ್ಲಿ ನೋಟವು ನೆಟ್ಟಿರಲು, ಆ ನೋಟದಲ್ಲಿ ಮನಸ್ಸು ಎಡಬಿಡದೆ ತಗುಲಿಕೊಂಡಿರಲು, ಆ ಮನಸ್ಸಿನಲ್ಲಿ ಭಾವವು ಅಗಲದೆ ನಿಂತಿರಲು, ಆ ಭಾವದಲ್ಲಿ ಅಚಲವಾಗಿ ಪರಮಾತ್ಮ ಲಿಂಗವು ನಿಂತಿರಲು, ಆ ಮಹಾಲಿಂಗದಲ್ಲಿ ಬೆರೆದು ಚಿರಪರಿಣಾಮಿಯಾಗಿರುವ ಶರಣನಿಗೆ ಇನ್ನು ಬಹಿರಾಪಾರಗಳೆಲ್ಲಿರುವವು ? ಅವುಗಳಿಂದವನಿಗೇನು ಪ್ರಯೋಜನವು ?" ಎಂದು ಮಗ್ಗೆಯ ಮಾಯಿದೇವರು ಲಿಂಗಾನುಸಂಧಾನದ ಅನುಭವವನ್ನು ಮಾರ್ಮಿಕವಾಗಿ ಹೊರಸೂಸಿದ್ದಾರೆ.

ಹೀಗೆ ಲಿಂಗಾನುಸಂಧಾನಗೈಯುವ ವಿಧಾನವನ್ನು ಗುರುವಿನಿಂದ ಪ್ರತ್ಯಕ್ಷ ತಿಳಿದುಕೊಳ್ಳಬೇಕು. ಈ ಲಿಂಗಾನುಸಂಧಾನದಿಂದ ಸಾಧಕನು ಲಿಂಗಾನಂದದ ನಿಬ್ಬೆರಗಿನಲ್ಲಿ ನಿಲುಕಡೆ ಹೊಂದುವನು, ಶಿವಾನು ಭಾವಿಯಾಗುವನು. ಇದೆಲ್ಲದಕ್ಕೆ ಕಾರಣ ಹೊಳಪುಳ್ಳ ಆವರಣದ ಕಂತೆಯೆಂಬುದನ್ನು ಮರೆಯಕೂಡದು. ಬಿಳಿಯ ಗೋಡೆಯ ಮೇಲೆ ಕಪ್ಪು ಚುಕ್ಕೆಯನ್ನಿಟ್ಟು ನಿರೀಕ್ಷಿಸುವ ಪದ್ಧತಿಯು ಕೆಲವು ಕ್ರಿಶ್ಚಿಯನ್ನ ಪಂಥಗಳಲ್ಲಿದೆಯೆಂದು ಹೇಳಲಾಗುತ್ತಿದೆ. ಪ್ರಾಯಶಃ ಕಪ್ಪು ವರ್ಣವು ಕಣ್ಣನ್ನು ಆಕರ್ಷಿಸುವ, ದೃಷ್ಟಿ ನಿಲ್ಲಿಸುವ ಚಿತ್ತ ಏಕಾಗ್ರತೆಗೆ ಸಾಧನವಾಗಿದೆ ಎಂಬುದು ಇದರಿಂದ ಸಿದ್ಧವಾಗುತ್ತದೆ. ಆದರೆ ಇಷ್ಟಲಿಂಗದ ಕಂತೆಯು ತುಂಬ ಆಕರ್ಷಣೀಯವಾಗಿರುತ್ತದೆ. ಅದು ಕಣ್ಣಿಗೆ ಬೇಕಾದ ಜ್ಯೋತಿಯನ್ನು ಪೂರೈಸುತ್ತದೆ. ಇಷ್ಟಲಿಂಗದ ನಿತ್ಯ ನಿರೀಕ್ಷಣೆಯಿಂದ ಕಮ್ಮಿಯಾಗಿರುವ ಇಷ್ಟಲಿಂಗದ ಸಾಕಾರ ರೂಪು ಕಣ್ಣಿನ ಕಳೆ ವೃದ್ದಿಯಾಗುತ್ತದೆ. ಅಲ್ಲದೆ ಕಣ್ಣುಗಳು ನೂರು ವರುಷವಾದರೂ ರೋಗವಿಲ್ಲದೆ ನಿಚ್ಚಳವಾಗಿ, ಮಂದವಾಗದೆ ವಸ್ತುವನ್ನು ಕಾಣುವ ಶಕ್ತಿಯನ್ನು ಹೊಂದಿರಬಲ್ಲವು. ಕಣ್ಣಿನ ಕಳೆಯನ್ನು ಜೀವಂತವಾಗಿ ಕೊನೆಯವರೆಗೂ ಇಡಬಲ್ಲ ಶಕ್ತಿ ಲಿಂಗದ ಕಂತೆಯಲ್ಲಿದೆ. ಭೌತಿಕವಾಗಿ, ನೈತಿಕವಾಗಿ, ಬೌದ್ದಿಕವಾಗಿ ಕಣ್ಣು ಕೆಟ್ಟಣ್ಣಗಳು ಲಿಂಗವನ್ನು ನಿರೀಕ್ಷಿಸಿ ಗುಣವಾದುದನ್ನು ನಾವು ಪ್ರತ್ಯಕ್ಷ ನೋಡಿದ್ದೇವೆ. ಈ ಕಣ್ಣುಗಳು ಕಳೆಯೇರುವುದು ಮಾತ್ರವಲ್ಲ, ಅರಿವಿನ ಕಣ್ಣು ಸಹ ಅರಳುವುದು, ಪ್ರಾತಿಭ ಚಕ್ಕು ಉಸ್ಮಿಲನವಾಗುವುದು. ಲಿಂಗ ನೋಟದ ಕೂಟವು ಲಿಂಗ ಸಮರಸಕ್ಕೆ ನಾಂದಿಯಾಗುವುದು. ಈ ಲಿಂಗಾನುಸಂಧಾನದ ಅನುಭೂತಿಯನ್ನು ಪ್ರಭುದೇವರು ತಮ್ಮ ವಚನದಲ್ಲಿ ಮಾರ್ಮಿಕವಾಗಿ ಹೇಳಿಕೊಂಡಿದ್ದಾರೆ :

ನೋಟವೇ ಕೂಟ, ಕೂಟವೇ ಪ್ರಾಣ
ಪ್ರಾಣವೇ ಏಕ, ಏಕವೇ ಸಮರಸ.
ಸಮರಸವೆ ಲಿಂಗ, ಲಿಂಗವೇ ಪರಿಪೂರ್ಣ,
ಪರಿಪೂರ್ಣವೆ ಪರಬ್ರಹ್ಮ, ಪರಬ್ರಹ್ಮವೆ ತಾನು.
ಇಂತೀ ನಿಜವ ಗುಹೇಶ್ವರ ಬಲ್ಲನಲ್ಲದೆ
ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡೈ -ಪ್ರಭುದೇವರ ವಚನ

ನೋಟದ ಕೂಟದಿಂದ ಲಿಂಗಕ್ಕೂ ತನಗೂ ಇರುವ ಸಮರಸ ಭಾವವನ್ನು ತುಂಬ ಸೊಗಸಾಗಿ, ಅನುಭವ ಗಮ್ಯವಾಗಿ ಈ ವಚನದಲ್ಲಿ ಹೇಳಲಾಗಿದೆ.

ಇಷ್ಟಲಿಂಗದಲ್ಲಿರುವ ಕಂತೆಯಲ್ಲಿ ದೃಷ್ಟಿಯನ್ನು ಗ್ರಹಿಸುವ ಶಕ್ತಿಯಿದೆ; ದೃಷ್ಟಿ ಒಲಿಸುವ ಶಕ್ತಿಯಿದೆ. ದೃಷ್ಟಿಯನ್ನು ತಡೆದು ನಿಲ್ಲಿಸುವ ಮತ್ತು ದೃಷ್ಟಿಯನ್ನು ಲಯಗೊಳಿಸುವ ಶಕ್ತಿಯೂ ಇದೆ. ಅಷ್ಟೇ ಏಕೆ - ಅಂತರಂಗದ ಅರಿವನ್ನು ಕರಗತಮಾಡಿ ಸಾಧಕನನ್ನು ದೇವನೆಡೆಗೆ ಕರೆದುಕೊಂಡು ಹೋಗುವ ಕರಸ್ಥಲದ ಜ್ಯೋತಿಯದು !

ಇಷ್ಟಲಿಂಗದಲ್ಲಿ ಸುಪ್ತ ವಿದ್ಯುತ್ ಶಕ್ತಿಯೂ ಇದೆ. ಯಾಕೆಂದರೆ ಅದನ್ನು ಕೇರಣ್ಣಿಯಿಂದ ಮಾಡಿರುತ್ತಾರೆ. ಈ ಕಂತೆಯ ಇಷ್ಟಲಿಂಗವನ್ನು ರೇಷ್ಮೆ ಅಥವಾ ಉಳ್ಮೆಯ ಬಟ್ಟೆಗೆ ತಿಕ್ಕಿ ಘರ್ಷಣಮಾಡಿ ವಾಮಕರದಿ ಹಿಡಿದು ಪೂಜಿಸುವಾಗ, ಲಿಂಗಪೂಜಕನ ತೋಳಿನ ನರಗಳ ಮೂಲಕ ವಿದ್ಯುತ್ ಶಕ್ತಿ ಹರಿಯುತ್ತದೆ. ಇಡೀ ಶರೀರವು ಜಾಗೃತಗೊಂಡು ವೀಣೆಯನ್ನು ಮೀಂಟಿದಂತೆ ಆಗುತ್ತದೆ. ಅದಕ್ಕೆಂದೇ ಪೂಜೆ, ಧ್ಯಾನ, ಲಿಂಗತಾಟಕಕ್ಕೆ ಕುಳಿತಾಗ ಜಾಗೃತಗೊಂಡ ಪಾಣ ವಿದ್ಯುತ್‌ ಭೂಗತವಾಗಿ ಹರಿದು ವ್ಯರ್ಥವಾಗಿ ಹೋಗಬಾರದೆಂದು ಕಂಬಳಿಯ ಆಸನ, ಚಾಪೆ, ಮಣಿ ಮುಂತಾಗಿ ಹಾಕಿಕೊಂಡೇ ಕುಳಿತುಕೊಳ್ಳಬೇಕೆಂಬ ಕಟ್ಟಪ್ಪಣೆ ವಿಧಿಸಿರುವುದು.

ಈ ವಿದ್ಯುತ್ ಶಕ್ತಿಯು ಹೃದಯಾಕಾಶವನ್ನು ಹೊಕ್ಕು ಆತ್ಮ ತೇಜವನ್ನುಂಟುಮಾಡಿ, ಊರ್ಧರಿ ಚಿದಾಕಾಶದಲ್ಲಿ ಸಂಚರಿಸಿ ಸಾಧಕನನ್ನು ಭಾವ ಪುಲಕಿತನನ್ನಾಗಿ ಮಾಡಿದಾಗ, ಶರಣನು ಶತಕೋಟಿ ಸೂರ್ಯರ ತೇಜೋರಾಶಿಯನ್ನು ಕಂಡಂತೆ ಭಾವಪುಲಕಿತನಾಗುತ್ತಾನೆ. ಆದರೆ ಇದು ಭೌತಿಕ ವಿದ್ಯುತ್ (Physical Electricity) ಆಗಿರದೆ ಪ್ರಾಣವಿದ್ಯುತ್ತು (Vita! Electricity) ಆಗಿರುವುದೆಂಬುದನ್ನು ತಿಳಿದುಕೊಂಡರೆ ಸಾಕು. ಈ ಪಾಣವಿದ್ಯುತ್‌ ಪಸರಿಸಿದಾಗ ಸಾಧಕನಿಗೆ ವಿಶೇಷ ಅನುಭವಗಳಾಗುವುವು. ಅದನ್ನು ಅಕ್ಕಮಹಾದೇವಿಯ ಮಾತುಗಳಲ್ಲಿ ಕೇಳೋಣ.

ಕೋಟಿ ರವಿ ಶಶಿಗಳಿಗೆ ಮೀಟದ ಪ್ರಭೆ ಬಂದು
ನಾಟಿತ್ತು ಎನ್ನ ಕರದೊಳಗೆ | ಅದರಿಂದ
ದಾಟಿದೆನು ಭವದ ಕುಣಿಗಳನು || ೧೭ ||

ಕೋಟಿ ರವಿಶಶಿಯರನ್ನೂ ಮೀರಿಸುವ ಬೆಳಕು ಬಂದು ಕರದಲ್ಲಿ ನೆಲೆಸಿದುದಾಗಿಯೂ; ಅದರ ಪರಿಣಾಮವಾಗಿ ಭವದ ಕುಣಿಗಳನ್ನು ದಾಂಟಿದುದಾಗಿಯೂ ಅಕ್ಕಮಹಾದೇವಿ ಹೇಳುವಳು.

ಮೊರೆವ ನಾದವ ಕೇಳಿ ಉರಿವ ಜ್ಯೋತಿಯ ನೋಡಿ
ಸುರಿವ ಅಮೃತವ ದಣಿದುಂಡ ಕಾರಣವು
ತೊರೆದೆನು ಜನನ ಮರಣಗಳ || ೧೯ | |

ಹೃದಯ ಕಮಲದಲ್ಲಿ ಮೊರೆವ ಅನಾಹತ ನಾದವನ್ನು ಕೇಳಿ, ಭೂ ಮಧ್ಯದಲ್ಲಿ ಬೆಳಗುವ ಪರಮಜ್ಯೋತಿಯನ್ನು ನೋಡಿ, ಬ್ರಹ್ಮರಂಧ್ರದಲ್ಲಿ ಹುದುಗಿದ್ದು ಧಾರೆಸುವ ಅಮೃತದ ಕಳೆಯನ್ನು ಈಂಟಿದ ಕಾರಣ ಭವ ಬಂಧನ, ಜನನಮರಣ ಹರಿದುದಾಗಿ ಅಕ್ಕಮಹಾದೇವಿ ಹೇಳುವಳು, ಅತ್ಯಂತ ಅಪರೂಪದ ವಿಶೇಷ ಅನುಭವಗಳನ್ನು ಶಿವಯಾಗ ಮಾರ್ಗದ ಪಥಿಕರಾದ ಶರಣರು ಪಡೆದರು. ಆದರೆ ಅವರು ಇಷ್ಟಲಿಂಗ ವಿರಹಿತರಾಗಿ ಪಡೆಯಲಿಲ್ಲ; ಮತ್ತು ಇಷ್ಟಲಿಂಗದ ಮುಖಾಂತರವೇ ಅತ್ಯಂತ ಆಳವಾದ ಅತೀಂದ್ರಿಯ ಅನುಭವಗಳನ್ನು ಸುಲಭವಾಗಿ ಪಡೆಯಲು ಸಾಧ್ಯವೆಂಬುದು ಅವರ ಅಭಿಪ್ರಾಯ. ಅದನ್ನು ಅಕ್ಕಮಹಾದೇವಿ ಹೀಗೆ ಪ್ರತಿಪಾದಿಸುವಳು :

ಅಷ್ಟಾವರಣದ ಹಣ್ಣು ಬಟ್ಟ ಬಯಲೊಳಗಿರಲು
ಅಷ್ಟಾಂಗಯಾಗಗಳ ಮಾಡಿ | ಬಳಲುವರು
ದೃಷ್ಟಿ ಇಡುವುದನು ಮರೆದಿಹರು || ೩೨ ||

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಇಷ್ಟಲಿಂಗದ ಗಾತ್ರಇಷ್ಟಲಿಂಗ ಪೂಜೆ -ದೇವರಪೂಜೆNext
*