ಇಷ್ಟಲಿಂಗೋಪಾಸನೆ - ಒಂದು ವೈಜ್ಞಾನಿಕ ವಿಶ್ಲೇಷಣೆ.

*

ಇಷ್ಟಲಿಂಗೋಪಾಸನೆ - ಒಂದು ವೈಜ್ಞಾನಿಕ ವಿಶ್ಲೇಷಣೆ.

ಇಷ್ಟಲಿಂಗಪೂಜೆಯನ್ನು ಯಾರು ಬೇಕಾದರೂ, ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಮಾಡಬಹುದಾದಂಥ ಒಂದು ಸಾಧನೆಯಾಗಿದೆ. ಇದಕ್ಕೆ ಶ್ರದ್ಧೆ ಮತ್ತು ನಿಷ್ಠೆ ಬೇಕು, ಅಷ್ಟೇ. ಇದನ್ನು 12ನೇ ಶತಮಾನದಲ್ಲಿ ಮಹಾತ್ಮಾ ಬಸವಣ್ಣನವರು ಅವಿಷ್ಕಾರ ಮಾಡಿ ಬಳಕೆಗೆ ತಂದರು. ಅಂದಿನ ಅವರ ಅವಿಷ್ಕಾರವು ಇಂದಿನ ವಿಜ್ಞಾನ ಯುಗದಲ್ಲಿಯೂ ಕೂಡ ಎಲ್ಲ ರೀತಿಯ ವೈಜ್ಞಾನಿಕ ಪರೀಕ್ಷಣೆಗಳಲ್ಲಿ ಯಶಸ್ವಿಯಾಗುತ್ತಿದೆ ಎಂಬುದು ಆಶ್ಚರ್ಯವಾದರೂ ಸತ್ಯಸಂಗತಿಯಾಗಿದೆ. ಗುರು ಬಸವಣ್ಣನವರು ಲಿಂಗಕ್ಕೆ ಕಂತೆ ಕೂಡಿಸಿ ಅದಕ್ಕೆ ಇಷ್ಟಲಿಂಗವೆಂದು ಕರೆದರು. ಇಷ್ಟಲಿಂಗದ ಕಲ್ಪನೆ ಬಸವಣ್ಣನವರಿಗಿಂತ ಪೂರ್ವದಲ್ಲಿ ಇರಲಿಲ್ಲ. ಅವರೇ ಅದರ ಜನಕರು.

ಇಷ್ಟಲಿಂಗಪೂಜೆಯೂ ಹುಚ್ಚು ರೂಢಿಯಲ್ಲ, ಮೂಢ ಆಚರಣೆಯಲ್ಲ ತೋರಿಕೆಯ ಪೂಜಾವಸ್ತುವಲ್ಲ, ಚಂಚಲವಾದ ಮನಸ್ಸನ್ನು ನಿಯಂತ್ರಿಸುವ ಅದೊಂದು ಅದ್ಭುತ ಸಾಧನವಾಗಿದೆ. ಮನಸ್ಸನ್ನು ಸ್ಥಿರಗೊಳಿಸಿದರೆ ಅದರಿಂದ ಸಿಗುವ ಶಾಂತಿ, ನೆಮ್ಮದಿ ಅಪಾರವಾಗಿರುತ್ತದೆ. ಆಧ್ಯಾತ್ಮಿಕವಾಗಿ ಅದರ ಲಾಭಗಳು ಅದ್ಭುತವಾಗಿರುವುದಂತೂ ನಿಜ. ವ್ಯಾವಹಾರಿಕವಾಗಿಯೂ ಕೂಡ ಅದರಿಂದಾಗುವ ಪ್ರಯೋಜನಗಳಿಗೆ ಮಿತಿಯಿಲ್ಲ. ಇದನ್ನೇ ನಾವು ತೀರ ಸಂಕ್ಷಿಪ್ತವಾಗಿ ಇಲ್ಲಿ ಚರ್ಚಿಸುತ್ತಿದ್ದೇವೆ.

ಶರೀರ ವಿಜ್ಞಾನಿಗಳು ಮತ್ತು ಮನೋವಿಜ್ಞಾನಿಗಳು ನಮ್ಮ ಮೆದುಳನ್ನು ಎರಡು ಭಾಗವಾಗಿ ಗುರುತಿಸುತ್ತಾರೆ. ಮೆದುಳಿನ ಬಲಭಾಗವು ಸಂಶ್ಲೇಷಣಾತ್ಮಕವೂ, ವಿಷಯ ನಿಷ್ಠವೂ, ಸಮಗ್ರ ದೃಷ್ಟಿ ಹೊಂದಿದ್ದೂ ಆಗಿರುತ್ತದೆ. ಆದರೆ ಮೆದುಳಿನ ಎಡಭಾಗವು ಪ್ರತಿಯೊಂದು ವಿಷಯದ ಕುರಿತು ತರ್ಕ ಮಾಡುತ್ತದೆ. ಅದು ವಸ್ತುನಿಷ್ಠವಾಗಿರುತ್ತದೆ. ಪ್ರತಿಯೊಂದನ್ನು ವಿಶ್ಲೇಷಣೆ ಮಾಡುತ್ತ ಹೋಗುತ್ತದೆ. ಅದು ಯಾವುದನ್ನೂ ಸಮಗ್ರವಾಗಿ ಅವಲೋಕಿಸುವುದಿಲ್ಲ ಅಂಶಿಕವಾಗಿಯೇ ಕಾಣುತ್ತದೆ.

ವಿಜ್ಞಾನಿಗಳು ಸಾಬೀತು ಪಡಿಸಿರುವಂತೆ ಎಡಭಾಗದ ಮೆದುಳು ನಮ್ಮ ಬಲಭಾಗದ ಅಂಗಾಂಗಗಳನ್ನು ನಿಯಿಂತ್ರಿಸುತ್ತದೆ ಮತ್ತು ಬಲಭಾಗದ ಮೆದುಳು ಎಡಭಾಗದ ಅಂಗಾಂಗಗಳನ್ನು ನಿಯಂತ್ರಿಸುತ್ತದೆ. ಇಷ್ಟಲಿಂಗವನ್ನು ಎಡ ಅಂಗೈಯಲ್ಲಿಟ್ಟು ಧ್ಯಾನಿಸುವುದರಿಂದ ನಮ್ಮ ಧ್ಯಾನವು ಮೆದುಳಿನ ಬಲಭಾಗದ ವಲಯದೊಂದಿಗೆ ಸಂಪರ್ಕ ಹೊಂದುತ್ತದೆ. ಮತ್ತು ಮೆದುಳಿಗೆ ಬಲಭಾಗದ ಎಲ್ಲ ಗುಣ ಸ್ವಭಾವಗಳು ಪ್ರಭಾವಿತವಾಗಿ ಅವುಗಳ ಶಕ್ತಿ ಸಾಮರ್ಥ್ಯಗಳು ವೃದ್ಧಿಸುತ್ತವೆ. ಇಷ್ಟಲಿಂಗದ ಧ್ಯಾನದಿಂದ ನಮ್ಮ ಮೆದುಳಿನ ಬಲಭಾಗದ ಧಾರಣಾಶಕ್ತಿಯು ಹೆಚ್ಚಾಗುತ್ತದೆ. ಆದರೆ ಕ್ರೀಯಾಶೀಲತೆಯು ವೃದ್ಧಿಸುತ್ತದೆ. ನಮ್ಮ ಮೆದುಳಿನ ಶಕ್ತಿ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಖಚಿತವಾಗಿ ಗುರುತಿಸುವುದು ಇದುವರೆಗೆ ಸಾಧ್ಯವಾಗಿಲ್ಲ. ಈಗ ಜಗತ್ತಿನಲ್ಲಿ ಅತಿ ವಿದ್ವಾಂಸರೆಂದು ಹೇಳಲಾಗುವ ನೋಬೆಲ್ ಪುರಸ್ಕೃತರೂ ಕೂಡ ಅತಿ ಹೆಚ್ಚೆಂದರೆ ನೂರಕ್ಕೆ ಹತ್ತರಷ್ಟು ಅಂಶಮಾತ್ರ ತಮ್ಮ ಮೆದುಳಿನ ಶಕ್ತಿಯನ್ನು ಬಳಸುತ್ತಾರೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಮೆದುಳಿನ ಶಕ್ತಿಸಾಮರ್ಥ್ಯವನ್ನು ನಾವು ಸಂಪೂರ್ಣವಾಗಿ ಬಳಸಿಕೊಳ್ಳಲು ಸಮರ್ಥವಾದರೆ ಏನಾಗಬಹುದು ಎಂಬುದನ್ನು ಕಲ್ಪಿಸಲು ಕೂಡ ಸಾಧ್ಯವಿಲ್ಲ. ಇಷ್ಟಲಿಂಗದ ಉಪಾಸನೆಯಿಂದ ನಾವು ನಮ್ಮಲ್ಲಿರುವ ಆ ಶಕ್ತಿಯನ್ನು ಬೆಳೆಸಿಕೊಳ್ಳಬಹುದು.

ಇಷ್ಟಲಿಂಗದ ಉಪಾಸನೆಯಲ್ಲಿ ಮಂತ್ರವೂ ಕೂಡ ಹೆಚ್ಚಿನ ಮಹತ್ವ ಹೊಂದಿದೆ. ಮಂತ್ರೋಚ್ಚಾರಣೆಯು ನಾಭಿಮೂಲದಿಂದ ಹೊಮ್ಮಬೇಕು ಅದರಿಂದ ನರನಾಡಿಗಳಲ್ಲೆಲ್ಲ ಒಂದು ರೀತಿಯ ಕಂಪನ ಉಂಟಾಗುತ್ತದೆ. ಆ ಕಂಪನದಿಂದಾಗೆ ನಮ್ಮ ದೇಹದಲ್ಲಿರುವ ಹಾರ್ಮೋನು(ಚೋದಕ)ಗಳು ಹೆಚ್ಚು ಚುರುಕಾಗುತ್ತವೆ ಮತ್ತು ಅವುಗಳ ಕ್ರೀಯಾಶೀಲತೆ ಹೆಚ್ಚಾಗುತ್ತದೆ. ಚೋದಕಗಳು ಸರಿಯಾಗಿ ಕೆಲಸ ಮಾಡಿದರೇನೆ ತಾನೇ ನಮ್ಮ ದೇಹ ಆರೋಗ್ಯದಿಂದಿರಲು ಸಾಧ್ಯ! ಮಂತ್ರದ ಅರ್ಥವನ್ನು ತಿಳಿದುಕೊಂಡು ಮನನ ಮಾಡುವುದರಿಂದ ಮನಸ್ಸಿನ ಏಕಾಗ್ರತೆ ಸಿದ್ಧಿಸುತ್ತದೆ. ಮನಸ್ಸಿನ ಏಕಾಗ್ರತೆಯಿಂದ ಅಲೌಕಿಕವಾದ ಅನೇಕ ಅನುಭೂತಿಗಳು ಅನುಭವಕ್ಕೆ ಬರುತ್ತೆ. ಇದನ್ನು ಪ್ರತ್ಯಕ್ಷವಾಗಿ ಪ್ರಮಾಣಿಸಿ ನೋಡಬಹುದು.

ಇಷ್ಟಲಿಂಗಕ್ಕೆ ಕಂತೆಕಟ್ಟಲು ಬಳಸುವ ಎಲ್ಲ ದ್ರವ್ಯಗಳು ಇಂಗಾಲದಿಂದ ಕೂಡಿರುತ್ತವೆ. ಇಂಗಾಲಕ್ಕೆ ದೃಷ್ಟಿಯನ್ನು ಆಕರ್ಷಿಸುವ ಶಕ್ತಿ ಇರುತ್ತದೆ. ಆದ್ದರಿಂದ ಇಂಥ ದ್ರವ್ಯಗಳಿಂದ ಕಂತೆ ಕಟ್ಟಿದ ಇಷ್ಟಲಿಂಗದಲ್ಲಿ ದೃಷ್ಟಿಯನ್ನು ನೆಟ್ಟಾಗ ಆ ದೃಷ್ಟಿಯು ಆಕರ್ಷಿಸಲ್ಪಟ್ಟು ಒಂದು ಬಿಂದುವಿನಲ್ಲಿ ಸ್ಥಿರವಾಗುತ್ತದೆ. ಆಗ ಇಷ್ಟಲಿಂಗದಿಂದ ಹೊರಹೊಮ್ಮುವ ಚೋದಕ ಅಲೆಗಳು ದೃಷ್ಟಿಯ ಮಾರ್ಗವಾಗಿ ನಯನೇಂದ್ರಿಯಗಳ ಕಡೆಗೆ ಹರಿಯುತ್ತವೆ. ನಯನೇಂದ್ರಿಯಗಳು ಜ್ಞಾನತಂತುಗಳ ಮೂಲಕ ಮೆದುಳಿನೊಂದಿಗೆ ಸಂಪರ್ಕ ಹೊಂದಿರುತ್ತವೆ. ಮೆದುಳಿಗೆ ಜೋಡಿಸುವಂಥದ್ದು ಇದು ಒಂದು ಮಾರ್ಗ. ಇನ್ನೊಂದು ಮಾರ್ಗವೆಂದರೆ ಇಷ್ಟಲಿಂಗಕ್ಕೆ ಆಧಾರ ನೀಡಿರುವ ಎಡ ಅಂಗೈಯು ಬಲಭಾಗದ ನಿಯಂತ್ರಣದಲ್ಲಿರುತ್ತದೆ. ಈ ರೀತಿಯಾಗಿ ಮೆದುಳಿನಿಂದ ಎಡ ಅಂಗೈಗೆ, ಎಡ ಅಂಗೈಯ ಮೂಲಕ ಇಷ್ಟಲಿಂಗಕ್ಕೆ ಇಷ್ಟಲಿಂಗದಿಂದ ದೃಷ್ಟಿಯ ಮೂಲಕ ನಯನೇಂದ್ರಿಯಗಳಿಗೆ ಮತ್ತು ನಯನೇಂದ್ರಿಯಗಳ ಮಾರ್ಗವಾಗಿ ಮತ್ತೆ ಮೆದುಳಿನ ಸಂಪರ್ಕ ಏರ್ಪಟ್ಟು ಒಂದು ವೃತ್ತ (ಸರ್ಕ್ಯುಟ್) ಪೂರ್ಣಗೊಳ್ಳುತ್ತದೆ. ಆಗ ಶಕ್ತಿ ಸಂಚಯವಾಗಲು ಆರಂಭಿಸುತ್ತದೆ. ಮೆದುಳಿನ ಕ್ರೀಯಾಶೀಲತೆಯು ವೃದ್ಧಿಸಲು ಪ್ರಾರಂಭವಾಗುತ್ತದೆ. ನಿರಂತರವಾದ ಆಭ್ಯಾಸದಿಂದ ವ್ಯಕ್ತಿಗೆ ಅನಿರ್ವಚನೀಯವಾದಂಥ ಅನುಭವಗಳು ಆಗ ಹತ್ತುತ್ತವೆ.

ಇಷ್ಟಲಿಂಗ ಪೂಜೆಯ ಕಾಲಕ್ಕೆ ಮನಸ್ಸನ್ನು ಶಾಂತವಾಗಿಡಬೇಕು, ದೇಹವನ್ನು ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿಡಬೇಕು, ನಾನಾ ಚಿಂತೆಗಳಲ್ಲಿ, ಬದುಕಿನ ಅನೇಕ ಸಮಸ್ಯೆಗಳಲ್ಲಿ ಮುಳುಗಿರುವ ನಮಗೆ ಮನಸ್ಸನ್ನು ಶಾಂತವಾಗಿಡಲು ಹೇಗೆ ಸಾಧ್ಯ? ಎಂದೆನಿಸಬಹುದು. ಆದರೆ ಅದು ತೊಡಕಿನ ಪ್ರಶ್ನೆಯೇ ಅಲ್ಲ. ಆರಂಭದಲ್ಲಿ ಹಾಗೆನಿಸುವುದು ಸಹಜ. ಇಷ್ಟಲಿಂಗೋಪಾಸನೆಯ ಆಭ್ಯಾಸವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತ ಹೋದಂತೆ ಹತ್ತಾರು ದಿನಗಳಲ್ಲಿಯೇ ಮನಸ್ಸನ್ನು ಶಾಂತವಾಗಿಡುವುದು ಒಂದು ಸಮಸ್ಯೆಯಾಗಿ ಕಾಣುವುದೇ ಇಲ್ಲ. ಇಷ್ಟಲಿಂಗಪೂಜೆಯನ್ನು ಕಾಟಾಚಾರಕ್ಕೆ ಬರೀ ಒಂದು ಕ್ರಿಯೆಯನ್ನಾಗಿ ಮಾಡಿದರೆ ಮನಸ್ಸು ಸ್ಥಿರವಾಗಲಾರದು. ಯಾಕೆಂದರೆ 'ಪೂಜೆಯ ಈ ಕ್ರಿಯೆ ಯಾವಾಗ ಮುಗಿದೀತೋ!' ಎಂಬ ಧಾವಂತ ಮನಸ್ಸಿನಲ್ಲಿ ಉಂಟಾಗುತ್ತದೆ. ಹಾಗಾಗಬಾರದು. ಎಲ್ಲಿಯವರೆಗೆ ಮನಸ್ಸನ್ನು ಶಾಂತವಾಗಿಡಲು ಸಾಧ್ಯವೋ ಅಲ್ಲಿಯವರೆಗೆ ಈ ಸಾಧನೆಯನ್ನು ಮುಂದುವರಿಸಬಹುದು.
ಪರಿವಿಡಿ (index)

ಕೃಪೆ: ಲೇಖಕರು: ಭಾಲಚಂದ್ರ ಜಯಶೆಟ್ಟಿ, ಸಂಗಮ, ಜನವರಿ-ಮಾರ್ಚ, 2009 *

Previousಇಷ್ಟಲಿಂಗಪರಮಾತ್ಮನ ಸ್ವರೂಪ ಇಷ್ಟಲಿಂಗ ರೂಪದಲ್ಲಿNext
*