ರುದ್ರಾಕ್ಷಿ

*

ಭಾರತದ ಹಲವು ವಿಜ್ಞಾನಿಗಳು ಈ ರುದ್ರಾಕ್ಷಿಯನ್ನು ಧಾರಣಮಾಡುವುದರಿಂದ ಹೃದ್ರೋಗಗಳು ಹಾಗೂ ಮಾನಸಿಕ ರೋಗಗಳು ಬರುವುದಿಲ್ಲವೆಂದು ಹೇಳಿದ್ದಾರೆ. ಅಲ್ಲದೆ ಇಂಥ ರುದ್ರಾಕ್ಷಿಯನ್ನು ರಾತ್ರಿ ವೇಳೆಯಲ್ಲಿ ಒಂದು ಕಪ್ಪು ನೀರಿನಲ್ಲಿ ನೆನೆಯಿಟ್ಟು ಬೆಳಿಗ್ಗೆ ಹೊಟ್ಟೆಗೆ ಏನು ತೆಗೆದುಕೊಳ್ಳದೆ ಆ ನೀರನ್ನು ಕುಡಿದ ಒಂದು ತಾಸಿನವರೆಗೆ ಏನನ್ನೂ ತೆಗೆದುಕೊಳ್ಳದೇ ಇರಬೇಕು ಹೀಗೆ 41 ದಿನ ತೆಗೆದುಕೊಳ್ಳುವ ಪರಿಪಾಠವಿದೆ. ಈ ಕ್ರಮವನ್ನು ಅನುಸರಿಸುವದರಿಂದ ಹೃದಯಾಘಾತದಿಂದ ದೂರವಿರಲು ಸಾಧ್ಯವೆಂದು ತಿಳಿಸದ್ದಾರೆ. ಕಾರಣ ನಾವು ರುದ್ರಾಕ್ಷಿಯನ್ನು ಸದಾಕಾಲ ಎದೆಯ ಮೇಲೆ ಧರಿಸಿಕೊಳ್ಳಬೇಕು.

ಅಯ್ಯಾ ಎನಗೆ ರುದ್ರಾಕ್ಷಿಯೇ ಸರ್ವ ಪಾವನವು
ಅಯ್ಯಾ ಎನಗೆ ರುದ್ರಾಕ್ಷಿಯೇ ಸರ್ವ ಕಾರಣವು
ಅಯ್ಯಾ ಎನಗೆ ರುದ್ರಾಕ್ಷಿಯೇ ಸರ್ವ ಸಾಧನವು
ಅಯ್ಯಾ ಎನಗೆ ರುದ್ರಾಕ್ಷಿಯೇ ಸರ್ವ ಸಿದ್ದಿ
ಅಯ್ಯಾ ಎನಗೆ ರುದ್ರಾಕ್ಷಿಯೇ ಸರ್ವ ಪಾಪಕ್ಷಯವು
ಅಯ್ಯಾ ನಿಮ್ಮ ಪಂಚವಕ್ತ್ರಂಗಳೇ ಪಂಚಮುಖದ
ರುದ್ರಾಕ್ಷಿಗಳಾದುವಾಗಿ, ಕೂಡಲ ಸಂಗಮ ದೇವಯ್ಯಾ
ಎನ್ನ ಮುಕ್ತಿ ಪಥಕ್ಕೆ ಶ್ರೀ ರುದ್ರಾಕ್ಷಿಯೇ ಸಾಧನವಯ್ಯಾ. -1/983 [#] --ಬಸವಣ್ಣನವರು

ಪೂಜಾ ಸಾಧನಗಳಲ್ಲಿ ಒಂದಾದ ರುದ್ರಾಕ್ಷಿ ಅತ್ಯಂತ ಶ್ರೇಷ್ಟವಾದ ಮಣಿಯು. ಅದು ಪಾವನವು. ಪರಮಾತ್ಮನ ಸತ್-ಚಿತ್-ಆನಂದ-ನಿತ್ಯ-ಪರಿಪೂರ್ಣ ಎಂಬ ಐದು ತತ್ವಗಳನ್ನು ಸಂಕೇತಿಸುತ್ತದೆ.

ಶ್ರೀ ರುದ್ರಾಕ್ಷಿಯ ಧರಿಸಿದಾತನೆ ಲಿಂಗವೆಂಬೆ,
ಶ್ರೀ ರುದ್ರಾಕ್ಷಿಯ ಧರಿಸದ ಅಧಮರನೆ ಭವಿಯೆಂಬೆ,
ಕೂಡಲ ಸಂಗಮದೇವಯ್ಯಾ
ಶ್ರೀ ರುದ್ರಾಕ್ಷಿಯ ಧರಿಸುವ ಭಕ್ತರ ನೀನೆಂಬೆ. -೧/೧೩೬೮ [#]

ಮಸ್ತಕದಲ್ಲಿ ರುದ್ರಾಕ್ಷಿಯಂ ಧರಿಸಿ
ಅನ್ಯದೈವದ ಗುಡಿಯ ಹೊಗಲಾಗದು ಶರಣ.
ಕರಣಂಗಗಳಲ್ಲಿ ರುದ್ರಾಕ್ಷಿಯಂ ಧರಿಸಿ
ಹರನಿಂದೆ ಗುರುನಿಂದೆಯ ಕೇಳಲಾಗದು ಶರಣ.
ತೋಳುಗಳಲ್ಲಿ ರುದ್ರಾಕ್ಷಿಯಂ ಧರಿಸಿ
ಪರಸತಿಯನಪ್ಪಲಾಗದು ಶರಣ.
ಮುಂಗೈಯಲ್ಲಿ ರುದ್ರಾಕ್ಷಿಯಂ ಧರಿಸಿ
ಅನ್ಯರಿಗೆ ಕೈಮುಗಿಯಲಾಗದು ಶರಣ.
ಇದನರಿದು ಧರಿಸಿದಡೆ ಶ್ರೀರುದ್ರಾಕ್ಷಿಯಹುದು.
ಅಂತಲ್ಲದಿರ್ದಡೆ, [ಡಂ]ಬ ಹಗರಣವ ಹೊತ್ತು ಬಂದಂತೆ ಎಂದಾತನಂಬಿಗರ ಚೌಡಯ್ಯ. /೨೨೬ [#]

ಅಯ್ಯಾ, ರುದ್ರಾಕ್ಷಿಯಿಂದ ಹರಿದೆನು ಭವಪಾಶಂಗಳ,
ಅಯ್ಯಾ, ರುದ್ರಾಕ್ಷಿಯಿಂದ ಮುರಿದೆನು ತನುಗುಣಾದಿಗಳ,
ಅಯ್ಯಾ, ರುದ್ರಾಕ್ಷಿಯಿಂದ ಒರೆಸಿದೆನು ಮಹಾಮಾಯೆಯ,
ಅಯ್ಯಾ, ರುದ್ರಾಕ್ಷಿಯಿಂದ ಕಳೆದೆನು ಪಂಚಮಹಾಪಾತಕವ.
ಅಯ್ಯಾ ಕೂಡಲಸಂಗಮದೇವಾ,
ಶ್ರೀಮಹಾರುದ್ರಾಕ್ಷಿಯಿಂದ ಗೆಲಿದೆನಯ್ಯಾ ಸಕಲದುರಿತಂಗಳನು. -೧/೧೦೦೫ [#]

[#] ಈ ತರಹದ ಸಂಖ್ಯೆಯ ವಿವರ: -1/1368 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-1368 (೧೫ ಸಮಗ್ರ ವಚನ ಸಂಪುಟಗಳು, ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)

ಪರಿವಿಡಿ (index)
Previousವಿಭೂತಿ, Vibhootiಮಂತ್ರNext
*