ಪಾದೋದಕ (ಕರುಣೋದಕ)

*

ಪಾದೋದಕವೆಂಬುದು ಪರಮಾತ್ಮನ ಚಿದ್ರೂಪು ನೋಡಾ.
ಪಾದೋದಕವೆಂಬುದು ಮೋಕ್ಷದ ಮಾರ್ಗ ನೋಡಾ.
ಪಾದೋದಕವೆಂಬುದು ಪಾಪದ ಕೇಡು ನೋಡಾ.
ಪಾದೋದಕವೆಂಬುದು ಪ್ರಮಥರ ಇರವು ನೋಡಾ.
ಪಾದೋದಕವೆಂಬುದು ಕಪಿಲಸಿದ್ಧಮಲ್ಲಿಕಾರ್ಜುನನ ಮಹಿಮೆನೋಡಾ. - 3/769[#]

ಲಿಂಗೋದಕ ಪಾದೋದಕ ಪ್ರಸಾದೋದಕವೆಂದು ತ್ರಿವಿಧ:
ಲಿಂಗೋದಕವೆಂಬುದು ಶಿವಸಂಸ್ಕಾರದಿಂದಾದುದು,
ಪಾದೋದಕವೆಂಬುದು ಲಿಂಗಕ್ಕೆ ಮಜ್ಜನಕ್ಕೆರೆದುದು,
ಪ್ರಸಾದೋದಕವೆಂಬುದು ಲಿಂಗವಾರೋಗಿಸಿದ ಬಳಿಕ ಸಿತಾಳಂಗೊಟ್ಟುದು.
ಲಿಂಗೋದಕದಲ್ಲಿ ಲಿಂಗಕ್ಕೆ ಪಾಕಪ್ರಯತ್ನ, ಮಜ್ಜನಕ್ಕೆರೆವುದು.
ಪಾದೋದಕದಲ್ಲಿ ಮುಖಪಕ್ಷಾಲನವ ಮಾಡುವುದು,
ಶಿರಸ್ಸಿನ ಮೇಲೆ ತಳಿದುಕೊಂಬುದು.
ಪ್ರಸಾದೋದಕವನಾರೋಗಿಸುವುದು- ಇಂತೀ ತ್ರಿವಿಧೋದಕ.
ದಾಸೋಹ ಷಟ್-ಪ್ರಕಾರ ವರ್ತಿಸುವುದು;
ಭಕ್ತನಿಂದೆಯ ಮಾಡಲಾಗದು, ಆಚಾರನಿಂದೆಯ ಮಾಡಲಾಗದು.
ಹುಸಿಯಿಲ್ಲದಿದ್ದಡೆ ಭಕ್ತನು-
ಇಂತಿದು ಭಕ್ತಸ್ಥಲ ಕೂಡಲಚೆನ್ನಸಂಗಮದೇವಾ -4/1546 [#]

ಇಲ್ಲಿ ಪಾದವೆಂದರೆ ಲಿಂಗ, ಪಾದಪೂಜೆಯೆಂದರೆ ಲಿಂಗಪೂಜೆ, ಪಾದೋದಕವೆಂದರೆ ಲಿಂಗದ ಮೇಲೆ ಹಾಕಿದ ನೀರು, ಆ ನೀರನ್ನು ಕುಡಿಯುವುದು ನಾವು ಲಿಂಗಸಾಧನೆಯನ್ನು ಮಾಡುವಾಗ ಶಕ್ತಿಕಣಗಳು ಲಿಂಗದ ಮೇಲ್ಮೈ ಮೇಲೆ ಸಂಗ್ರಹವಾಗಿರುತ್ತವೆ. ನಾವು ಬಲಗೈ ತುದಿ ಬೆರಳನ್ನು ಪಾದೋದಕ ಬಟ್ಟಲಿನಲ್ಲಿ ಅದ್ದ ನಿಧಾನವಾಗಿ ಮೂರು ಬಾರಿ ಲಿಂಗದ ಮೇಲೆ ಹಾಕಬೇಕು. ನಂತರ ಲಿಂಗವನ್ನು ಹಸ್ತದಿಂದ ತುದಿ ಬೆರಳಿನವರೆಗೆ ಸರಿಸಿ, ಅಂಗೈ ಮಧ್ಯದಲ್ಲಿ ಶೇಖರಿಸಿದ ಪಾದೋದಕವನ್ನು ಚಲ್ಲದ ಹಾಗೆ ನಿಧಾನವಾಗಿ ಕುಡಿಯಬೇಕು. "ಕರಸ್ಥಲದ ಲಂಗವೂ ಕೂಡಾ ಮಣಿ, ಮಂತ್ರ, ಔಷಧಗಳಿಂದ ಕೂಡಿದ್ದಾಗಿ ಇದಕ್ಕೆ ಬಾಹ್ಯ ಪಾದೋದಕ ಎನ್ನುತ್ತಾರೆ. ಆದರೆ ಬಸವಲಿಂಗ ಸಾಧನೆಯಿಂದ ಪೀನಿಯಲ್ ಗ್ರಂಥಿ (ಬ್ರಹ್ಮರಂಧ್ರ)ಯಿಂದ (Third Eye - Pineal Gland )ಅಮೃತ (ಮೆಲೆಟಾನಿನ್) (Melatonin , The Pineal Gland and Melatonin , Melatonin-Brain Harmone) ಸ್ರವಿಸುವಿಕೆಯು ನಿಜವಾದ ಪಾದೋದಕವಾಗಿದೆ".

ದೇಹದೊಳಗಣ ದೇಹಿಯೆನ್ನಬಹುದೆ ನಿಮ್ಮ ಶರಣನ?
ಅನ್ನ ಪಾನಾದಿಗಳೊಗಣ ಅನ್ನಪಾನವೆಂದೆನ್ನಬಹುದೆ ಪ್ರಸಾದವ?
ಎನಬಾರದಯ್ಯಾ, ಎನ್ನ ತಂದೆ!
ಸಾಧನದೊಳಗಣ ಸಂಯೋಗವೆಂತಿದ್ದುದು ಅಂತಿದ್ದುದಾಗಿ.
ಇದು ಕಾರಣ, ಶೃತಿ ಸ್ರ್ಮತಿಗಗೋಚರ
ಕೂಡಲಚೆನ್ನಸಂಗಮದೇವಾ ನಿಮ್ಮ ಶರಣರು. - 4/641 [#]

ಶರಣನು ಮಾನವ ಶರೀರದಲ್ಲೇ ಇರಬಹುದು. ಆದರೆ ಅವನು ಸಾಮಾನ್ಯ ಮಾನವನಲ್ಲ ; ಪಾದೋದಕ ನೀರೇ ಆಗಿರಬಹುದು. ಅದು ಸಾಮಾನ್ಯ ನೀರಲ್ಲ ; ಪ್ರಸಾದವು ಅನ್ನರೂಪದಲ್ಲೇ ಇರಬಹುದು, ಅದು ಸಾಮಾನ್ಯ ಅನ್ನವಲ್ಲ. ಪದಾರ್ಥದಲ್ಲೇ ಕೃಪೆ ಸಂಯೋಗವಾಗಿರುವಂತೆ ಶರಣರಲ್ಲಿ ಪರಮಾತ್ಮನ ಕೃಪೆ ಅವತೀರ್ಣವಾಗಿರುತ್ತದೆ.

[#] ಈ ತರಹದ ಸಂಖ್ಯೆಯ ವಿವರ: -3/769 :- ಸಮಗ್ರ ವಚನ ಸಂಪುಟ -3, ವಚನ ಸಂಖ್ಯೆ-769 (೧೫ ಸಮಗ್ರ ವಚನ ಸಂಪುಟಗಳು, ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)

ಪರಿವಿಡಿ (index)
Previousಮಂತ್ರಪ್ರಸಾದNext
*