ಇಷ್ಟಲಿಂಗದ ಆವಶ್ಯಕತೆ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಇಷ್ಟಲಿಂಗದ ಆವಶ್ಯಕತೆ

ಲಿಂಗಾಯತ ಧರ್ಮವು "ಲಿಂಗ" ಎಂಬ ಪದವನ್ನು ಪರಮಾತ್ಮ, ಪರಬ್ರಹ್ಮ ಎಂಬ ಅರ್ಥದಲ್ಲಿ ಬಳಸುತ್ತದೆಂದು ವಿವರವಾಗಿ ಹೇಳಿದುದಾಯಿತು. ಅಂತಹ ಪರಮಾತ್ಮನನ್ನು ಇಷ್ಟಲಿಂಗ ರೂಪದಲ್ಲಿ ಸಾಕಾರಗೊಳಿಸಿ ಪೂಜಿಸುವ ಕಾರಣ, ಇಷ್ಟಲಿಂಗವು ಸುಂದರವಾದ ಆಕಾರ ಮತ್ತು ತಾತ್ವಿಕ ಹಿನ್ನೆಲೆಯುಳ್ಳ ಒಂದು ಕುರುಹು, ಲಾಂಛನ ಎಂದೂ ಪ್ರತಿಪಾದಿಸಿದ್ದಾಯಿತು. ಇಂಥ ಒಂದು ಲಾಂಛನವನ್ನು ಪಡೆದುಕೊಂಡು, ಧರಿಸಿಕೊಂಡು ಪೂಜಿಸುವ ಆವಶ್ಯಕತೆ ಇದೆಯೆ ? ದೇವರು ಸರ್ವವ್ಯಾಪಿಯಾಗಿ ಎಲ್ಲರ ಹೃದಯದಲ್ಲಿಯೂ, ವಿಶ್ವದಲ್ಲಿ ಎಲ್ಲೆಡೆಯಲ್ಲೂ ಇದ್ದಾನೆಂದಮೇಲೆ ಇದಿರಿಟ್ಟು ಪೂಜಿಸುವುದೇಕೆ ? ಎಂಬ ಪ್ರಶ್ನೆ ಇಣುಕುವುದು ಸ್ವಾಭಾವಿಕ. ಕೆಲವರು ಸಾಕಾರ ಪೂಜೆಯೇ ಬೇಡ ಎಂದೂ ವಾದಿಸುವವರಾಗಿದ್ದಾರೆ. ಸಾಕಾರೋಪಾಸನೆ ಅವಶ್ಯಕವೇ ಎಂಬುದನ್ನು ಕುರಿತು ಮೊದಲು ಪ್ರಸ್ತಾಪಿಸಿ; ಅಂಥದೊಂದು ಸಾಕಾರವಾಗಿ ಇಷ್ಟಲಿಂಗವೇ ಏಕೆ ಬೇಕು ಎಂಬ ಬಗ್ಗೆ ನೋಡೋಣ.

ಕುರುಹಿನಿಂದ ಅರುಹು

ನಿರಾಕಾರವನ್ನರಿಯಲು ಸಾಕಾರ ಬೇಕು. ಅರುಹ ಪೂಜಿಸಲು ಕುರುಹು ಬೇಕೇ ಬೇಕು. ಕುರುಹಿನಿಂದಲೇ ಅರುಹು ಸಾಧ್ಯವು. ಈ ಮಾತು ಇಹ-ಪರ ಅಂದರೆ ಲೌಕಿಕ-ಪಾರಮಾರ್ಥಿಕವೆರಡಕ್ಕೂ ಸಂಬಂಧಿಸಿದುದಾಗಿದೆ. ಲೌಕಿಕ ಮತ್ತು ಪಾರಲೌಕಿಕ ಜೀವನದಲ್ಲಿ ಕುರುಹಿನಿಂದಲೇ ಅರುಹನ್ನು ನಾವು ಪಡೆಯುತ್ತಿದ್ದೇವೆ. ಈಗ ಹಲಕೆಲವು ಉದಾಹರಣಿಗಳನ್ನು ನೋಡಬಹುದು.

ಕಾವಿ ಬಟ್ಟೆ ತ್ಯಾಗದ (ಸನ್ಯಾಸಿಯ) ಕುರುಹು (Symbol).
ಖಾದಿ ಬಟ್ಟೆ ಸ್ವದೇಶಾಭಿಮಾನದ (ಕಾಂಗ್ರೆಸ್ಸಿಗರ) ಕುರುಹು.
ಖಾಕಿ ಬಟ್ಟೆ ರಕ್ಷಣಿಯ (ಪೋಲೀಸರ) ಕುರುಹು.
ರಾಷ್ಟ್ರಧ್ವಜ ಸ್ವಾತಂತ್ಯತೆಯ ಕುರುಹು.
ಮಂಗಲಸೂತ್ರ ಸೌಭಾಗ್ಯದ (ಗಂಡನ) ಕುರುಹು.
ಸಹಿ ಮಾಡುವುದು ಸಮ್ಮತಿಯ ಕುರುಹು.
ನಗು ಆನಂದದ ಕುರುಹು.
ಅಳುವು ದುಃಖದ ಕುರುಹು.
ಚಿತ್ರ ವಸ್ತುವಿನ ಕುರುಹು.
ಕಿರೀಟ ಅರಸನ ಕುರುಹು.

ನೂರು ರೂಪಾಯಿಗಳ ನೋಟಿನ ಮೇಲಿರುವ ಸರಕಾರಿ ಮುದ್ರೆ, ನೂರು ರೂಪಾಯಿಗಳ ಮೌಲ್ಯದ ಕುರುಹು.
ಮೋಟಾರ್ ಹಾರ ಬಾರಿಸುವುದು ಬೀದಿಯ ಜನ ಸರಿಯಬೇಕೆಂಬುದರ ಕುರುಹು.
ನಿಲ್ದಾಣದ ಕೈಮರ (ಸಿಗ್ನಲ್), ಮೇಲೆ ಇದ್ದುದು, ಗಾಡಿ ಒಳಗೆ ಬರಬಾರದೆಂಬುದರ ಕುರುಹು.

ವಿಗ್ರಹಗಳು ಮಹಾತ್ಮರ, ಜ್ಞಾನಿಗಳ ಕುರುಹು.
ಬೀದಿಯ ಕೆಂಪು ದೀಪ ಗಂಡಾಂತರದ ಕುರುಹು.
ಮುನಸಿಪಲ್ ಬುಂಗಾ ಅಂಗಡಿ ಮುಚ್ಚಬೇಕೆಂಬುದರ ಕುರುಹು.
ಡಾಕ್ಟರರು ಹೆಚ್ಚಾದುದು ರೋಗ ಹೆಚ್ಚಾದುದರ ಕುರುಹು.
ವಕೀಲರು ಹೆಚ್ಚಾದುದು ವ್ಯಾಜ್ಯಗಳು ಹೆಚ್ಚಾದುದರ ಕುರುಹು.
ಗಡ್ಡ ಮೀಸೆಗಳು ಗಂಡಸಿನ ಕುರುಹು.
ಮೊಲೆ ಮುಡಿಗಳು ಹೆಂಗಸಿನ ಕುರುಹು.
ಜಯಘೋಷಣಿಯು ವಿಜಯದ ಕುರುಹು.
ನಕಾಶೆ ನಾಡಿನ ಕುರುಹು.
ಕೈಜೋಡಿಸುವುದು ನಾನು ನೀನು ಒಂದೆಂಬ ಸದ್ಭಾವದ ಕುರುಹು.
ಅತಿಥಿ ಬಂದಾಗ ಎದ್ದು ನಿಲ್ಲುವುದು ಗೌರವತೆಯ ಕುರುಹು.

ಇಂಥ ಅನೇಕ ಉದಾಹರಣೆಗಳನ್ನು ಜೀವನದಲ್ಲಿ ಕಾಣಬಹುದು. ಅದರಂತೆ :

ಇಷ್ಟಲಿಂಗವು ಪರಶಿವನ ಕುರುಹು

ಪಿಂಡಾಂಡ ಆತ್ಮನ ಕುರುಹು; ಬ್ರಹ್ಮಾಂಡ ಪರಮಾತ್ಮನ ಕುರುಹು.

ಇಷ್ಟಲಿಂಗ "ಪಿಂಡಬ್ರಹ್ಮಾಂಡಯೇರೆಕ್ಯಂ' ಎಂಬ ತತ್ವದ ಕುರುಹು. ಇದರ ವಿವರವಾದ ವಿವೇಚನೆಯನ್ನು ಮುಂದೆ ಮಾಡಲಾಗುವುದು.

ಓರ್ವ ಪೋಲೀಸನು ಬರುತ್ತಿದ್ದಾನೆ ಎಂದುಕೊಳ್ಳೋಣ. ಅವನೇನೂ "ನಾನು ಪೋಲೀಸನು. ಆದ್ದರಿಂದ ನೀವೆಲ್ಲ ಗದ್ದಲ ಮಾಡಬೇಡಿ" ಎಂದು ಕೂಗುತ್ತ ಬರುವುದಿಲ್ಲ. ಅವನ ಸಮವಸ್ತ್ರ ನೋಡುವುದೇ ತಡ ಅವನು ಕಾಯ್ದೆ, ಶಿಸ್ತು ಪಾಲಿಸುವವನೆಂದು ಅರಿವಾಗುತ್ತದೆ. ಜನರು ತಮ್ಮಿಂದ ತಾವೇ ಸ್ತಬ್ದರಾಗುವರು. ಕಾವಿ ಲಾಂಛನಧಾರಿಯಾದ ಸ್ವಾಮಿಗಳು ಬರುತ್ತಿರುವರೆಂದು ಕೊಳ್ಳೋಣ. ಅವರೇನು "ನಾನು ಸ್ವಾಮಿ, ನಾನು ತ್ಯಾಗಿ" ಎಂದು ಕೂಗಿಕೊಳ್ಳುತ್ತಾ ಬರಬೇಕಾಗಿಲ್ಲ, ಅವರ ಲಾಂಛನ ನೋಡುವುದೇ ತಡ ಜನ ನಮಸ್ಕರಿಸುತ್ತಾರೆ. ಹೀಗೆ ಕೆಲವು ಕುರುಹು, ಲಕ್ಷಣಗಳಿಂದಲೇ ಪದಗಳು, ಶಬ್ದಗಳು ವಸ್ತುಗಳನ್ನು ಪ್ರತಿನಿಧಿಸುವ ಕುರುಹುಗಳು ತಾನೆ ? 'ನೀರು' ಎಂಬ ಪದ ಉಚ್ಚಾರವಾಗುತ್ತಿದ್ದಂತೆಯೇ ನೀರಿನ ಕಲ್ಪನೆ ನಮಗೆ ಬರುವುದಿಲ್ಲವೆ ? ಆಗ ನಾವು ನೀರನ್ನೇ ತಂದುಕೊಡುತ್ತೇವೆ. ಸರಿ, ಒಬ್ಬ ಮೂಕನಿದ್ದಾನೆ. ಅವನಿಗೆ ನೀರು ಅನ್ನಲು ಬಾರದು. ಆಗ ಅವನು ಕೈಯನ್ನು ವಿಶಿಷ್ಟ ರೀತಿಯಲ್ಲಿ ಬಾಯ ಬಳಿಗೆ ಒಯು ಸನ್ನೆ ಮಾಡುತ್ತಾನೆ. ಆ ಸನ್ನೆ “ಅವನಿಗೆ ಬಾಯಾರಿಕೆಯಾಗಿದೆ; ನೀರು ಬೇಕು' ಎಂಬುದರ ಕುರುಹು. ನಮ್ಮ ಎದುರು ಓರ್ವ ಸ್ತ್ರೀ ಬರುತ್ತಾಳೆಂದುಕೊಳ್ಳೋಣ. ಆಕೆಯ ಕೊರಳಲ್ಲಿ ಮಂಗಲಸೂತ್ರ ಕಾಣಬರುತ್ತದೆ. ತಟ್ಟನೆ ಆಕೆ ಗಂಡನುಳ್ಳಾಕೆ ಎಂಬ ಅರಿವು ನಮಗೆ ಮೂಡುತ್ತದೆ. ಹೀಗೆ ನಿತ್ಯ ಜೀವನದಲ್ಲಂತೂ ಕುರುಹಿಲ್ಲದೆ ಅರುಹು ಎಂದೆಂದಿಗೂ ಬರಲಾರದು. ಲೌಕಿಕದಂತೆ ಆಧ್ಯಾತ್ಮದಲ್ಲಿಯೂ ಸಹ ಕುರುಹು ಬೇಕು. ಅಂತೆಯೇ ಶರಣರು ಇಷ್ಟಲಿಂಗವೆಂಬ ಕುರುಹಿನಿಂದ ಪರಶಿವನನ್ನು ಅರಿತರು.

ಕೆಲವೊಮ್ಮೆ ನಿರಾಕಾರವಾದ ಭಾವನೆಯನ್ನು, ಆಲೋಚನೆಯನ್ನು ತಿಳಿಸುವ ಶಕ್ತಿಶಾಲಿ ಮಾಧ್ಯಮ ಸಾಕಾರ ಎನ್ನಿಸದಿರದು.

ವಾತ್ಸಲ್ಯ ನಿರಾಕಾರ; ಮಗುವಿಗೆ ಕೊಡುವ ಮುದ್ದು ಸಾಕಾರ.
ದಯಾ ನಿರಾಕಾರ; ಸೇವೆ-ಸಹಾಯ ಮಾಡುವುದು ಸಾಕಾರ.
ಭಕ್ತಿ ನಿರಾಕಾರ; ಅರ್ಚನೆ ಸಾಕಾರ.
ಭಾವ ನಿರಾಕಾರ; ಭಾಷೆ ಸಾಕಾರ.
ಅರ್ಥ ನಿರಾಕಾರ; ಶಬ್ದ ಸಾಕಾರ.
ಜ್ಞಾನ ನಿರಾಕಾರ; ಪುಸ್ತಕ ಸಾಕಾರ.
ಬಿಂದು (ವ್ಯಾಖ್ಯೆಯಂತೆ) ನಿರಾಕಾರ; "." ಸಾಕಾರ.
ವಾದ ರೇಖೆ (ವ್ಯಾಖ್ಯೆಯಂತೆ) ನಿರಾಕಾರ; "-" ಇದು ಸಾಕಾರ.
ಕಾಲ (ಸಮಯ) ನಿರಾಕಾರ; ಗಡಿಯಾರ ಸಾಕಾರ.

ಪರಶಿವ ನಿರಾಕಾರ; ಇಷ್ಟಲಿಂಗ ಸಾಕಾರ

ತಾಯಿಗೆ ವಾತ್ಸಲ್ಯ ಭಾವನೆ ಉಕ್ಕುತ್ತಿರುತ್ತದೆ. ಅದು ನಿರಾಕಾರ. ಅದನ್ನು ವ್ಯಕ್ತಪಡಿಸುವುದು ಹೇಗೆ ? ಮಗುವನ್ನು ಎತ್ತಿಕೊಂಡು ಲೊಚಲೊಚನೆ ಮುದ್ದಿಕ್ಕುವಳು. ಆ ಮುದ್ದಿ ಕ್ಕುವಿಕೆ ಆಕೆಯ ಭಾವನಾಪೂರ ಹರಿಯುವ ಸಾಕಾರ. ನಾನೀಗ ನನ್ನಲ್ಲಿರುವ ಜ್ಞಾನವನ್ನು ಕೊಡಬೇಕಾಗಿದೆ. ಅದು ನಿರಾಕಾರ. ಅದನ್ನು ಹೇಗೆ ಕೊಡಲು ಬರುವುದು ? ನನ್ನಲ್ಲಿರುವ ಜ್ಞಾನವನ್ನು ನಾನು ಪ್ರವಚನ ಅಥವಾ ಗ್ರಂಥದ ಸಹಾಯದಿಂದ ಕೊಡಬಲ್ಲೆ. ಹೀಗೆ ಜ್ಞಾನವು ನಿರಾಕಾರವಾದರೆ ಪುಸ್ತಕವು ಸಾಕಾರ.

ನಿಮಗೆ ದೇವರ ಮೇಲೆ ಅಪಾರ ಭಕ್ತಿಯಿದೆ. ಭಕ್ತಿಭಾವ ನಿರಾಕಾರ. ಅದು ಅಭಿವ್ಯಕ್ತವಾಗುವ ವಿಧಾನವೇ ಅರ್ಚನೆ; ಅದು ಸಾಕಾರ.

ರೇಖಾಗಣಿತದಲ್ಲಿ ಬಿಂದು, ರೇಖೆಗಳನ್ನು ವ್ಯಾಖ್ಯಾನಿಸುವಾಗ ಹೀಗೆ ಹೇಳುತ್ತಾರೆ : "ಸ್ಥಾನಮಾತ್ರವಿದ್ದು ಉದ್ದ ಅಗಲ ಪಿಂಡವಿಲ್ಲದುದ್ದು ಬಿಂದು. ಉದ್ದ ಮಾತ್ರವಿದ್ದು ಅಗಲ ದಪ್ಪ ಇಲ್ಲದುದು ರೇಖೆ.” ಈ ವ್ಯಾಖ್ಯೆಯ ಪ್ರಕಾರ ಬಿಂದು - ರೇಖೆಗಳನ್ನು ಬರೆಯಲಾಗಲೀ, ಬೇರೆಯವರಿಗೆ ತೋರಿಸಲಾಗಲೀ ಸಾಧ್ಯವಿಲ್ಲ. ಅವು ನಿರಾಕಾರದ ಕಲ್ಪನೆಗಳು. ಆದರೂ ಶಿಕ್ಷಕನು "." ಇದು ಬಿಂದು, "---" ಇದು ರೇಖೆ ಎಂದು ಹೇಳಿ, ಅವು ನಿಜವಾಗಿ ಬಿಂದು ರೇಖೆಗಳಾಗದೆ, ಅವುಗಳ ಕುರುಹುಗಳಾದರೂ ಅವನ್ನು ನೀನು ನಂಬಿ ಅಭ್ಯಾಸ ಮಾಡು ಎಂದು ಕಲಿಸುವನು. ವಿದ್ಯಾರ್ಥಿಗಳು ಶಿಕ್ಷಕನಲ್ಲಿ ನಂಬಿಗೆಯಿಟ್ಟು ಅವುಗಳನ್ನು ಒಪ್ಪಿಕೊಂಡು ಅಪಾರವಾದ ರೇಖಾಗಣಿತ ಜ್ಞಾನವನ್ನು ಪಡೆಯುವರು. ಅದರಂತೆಯೇ ಸದ್ದುರುವು ಶಿಷ್ಯನ ಕರಸ್ಥಲಕ್ಕೆ ಇಷ್ಟಲಿಂಗವನ್ನು ಕೊಟ್ಟು ಇದೇ ಪರಶಿವನೆಂದು (ಪರಶಿವನ ಸಾಕಾರವೆಂದು) ನಂಬಿ, ನಿಷ್ಠೆಯಿಂದ ಪೂಜಿಸು ಎಂದು ಹೇಳುತ್ತಾನೆ. ಅದರಿಂದ ಆ ಶಿಷ್ಯನು ಇಷ್ಟಲಿಂಗದಲ್ಲಿಯೇ ಅಪಾರವಾದ ಶಿವಾನುಭವ ಜ್ಞಾನವನ್ನು ಪಡೆಯುತ್ತಾನೆ. ಈ ಪ್ರಪಂಚದಲ್ಲಿ ಕಾಲ ಅಥವಾ ಸಮಯವನ್ನು ಯಾರಿಗೂ ತೋರಿಸಲಿಕ್ಕೆ ಬಾರದು. ಅದು ನಿರಾಕಾರವಾಗಿದೆ ! 'ಗಡಿಯಾರವೆಂಬ ಸಾಕಾರದಿಂದ ನಿಜವಾದ ಕಾಲವನ್ನು ತಿಳಿಯುತ್ತೇವಷ್ಟೆ. ಅದೇ ರೀತಿ ನಿರಾಕಾರನಾದ ದೇವನನ್ನು ಸಾಕಾರದಿಂದ ಇಷ್ಟಲಿಂಗದ ಮೂಲಕ ಅರಿಯಬೇಕು.' ಎಂದು ಹೇಳಬಹುದು. ಹೀಗೆ, ಅರುಹು ಪಡೆಯಲು ಕುರುಹು ಬೇಕು; ಅರುಹ ಪೂಜಿಸಬೇಕಾದರೆ ಕುರುಹಿನ ಪೂಜೆ ಅನಿವಾರ್ಯವಾದುದು. ನಿರಾಕಾರದ ನಿಲವನರಿಯಬೇಕಾದರೆ ಸಾಕಾರ ಬೇಕು; ನಿರಾಕಾರವನ್ನು ಉಪಾಸಿಸಬೇಕಾದರೆ ಸಾಕಾರೋಪಾಸನೆ ಅತ್ಯಂತ ಅವಶ್ಯ. ನಿರಾಕಾರ ನಿರಂಜನ ಪರಶಿವನನ್ನರಿದು ಅನ್ನಿಸಲು ಇಷ್ಟಲಿಂಗವನ್ನು ಅರ್ಚಿಸುವುದು ಅನಿವಾರ ಮತ್ತು ಅತ್ಯವಶ್ಯವೆಂಬುದನ್ನು ಮನಗಂಡಂತಾಯಿತು. ಕುರುಹಿನಿಂದಲೆ ಅರುಹು ಸಾಧ್ಯವೆಂಬ ಸೂತ್ರವನ್ನೊಪ್ಪಿಕೊಂಡಂತಾಯಿತು. ಶರಣರ ಅಮೃತ ನುಡಿಗಳಲ್ಲಿಯೇ ಈ ಸಿದ್ದಾಂತವನ್ನು ನಾವು ಕಾಣಬಹುದು. ಅಂತಹ ಕೆಲವು ವಚನ ಮೌಕ್ತಿಕಗಳನ್ನು ನೀವು ಮನನ ಮಾಡಲೆಂದು, ನಮ್ಮ ವಿಚಾರಗಳನ್ನು ಸಮರ್ಥಿಸಲೆಂದು ಕೊಡುತ್ತಿದ್ದೇವೆ.

ಎನ್ನ ಕರಸ್ಥಲದ ಮಧ್ಯದಲ್ಲಿ
ಪರಮ ನಿರಂಜನದ ಕುರುಹು ತೋರಿದ,
ಆ ಕುರುಹಿನ ಮಧ್ಯದಲ್ಲಿ
ಅರುಹಿನ ಕಳೆಯ ತೋರಿದ
ಆ ಕಳೆಯ ಮಧ್ಯದಲ್ಲಿ ಮಹಾಜ್ಞಾನದ ಬೆಳಗ ತೋರಿದ,
ಆ ಬೆಳಗಿನ ನಿಲುವಿನೊಳಗೆ ಎನ್ನ ತೋರಿದ,
ಎನ್ನೊಳಗೆ ತನ್ನ ತೋರಿದ, ತನ್ನೊಳಗೆ ಎನ್ನ ನಿಂಬಿಟ್ಟು ಕೊಂಡ,
ಮಹಾಗುರುವಿಗೆ ನಮೋ ನಮಃ ಎನುತಿರ್ದೆನಯ್ಯಾ ಅಖಂಡೇಶ್ವರಾ.
-ಷ.ವ. ೫೬

ಷಣ್ಮುಖಸ್ವಾಮಿಯ ಈ ಮೇಲಿನ ವಚನದಲ್ಲಿ ಕುರುಹಿನ ಮಹತಿಯು ಬಹು ಮಾರ್ಮಿಕವಾಗಿ ವರ್ಣಿತವಾಗಿದೆ. ಇಲ್ಲಿ ಶರಣನು ಕರಸ್ಥಲದಲ್ಲಿ ಪರಮ ನಿರಂಜನದ ಕುರುಹಾದ ಇಷ್ಟಲಿಂಗವನ್ನು ಅನಿಮಿಷ ದೃಷ್ಟಿಯಿಂದ ಅನುಸಂಧಾನಗೈಯುತ್ತಾನೆ. ಈ ಇಷ್ಟಲಿಂಗಾನುಸಂಧಾನದಲ್ಲಿ ಆ ಕುರುಹಿನ ಮಧ್ಯದಲ್ಲಿ ಪ್ರಾಣಲಿಂಗದ ಚಿಜ್ಯೋತಿಯಾದ ಅರುಹಿನ ಕಳೆಯನ್ನು ಕಾಣುತ್ತಾನೆ. ಆ ಅರುಹಿನ ಕಳೆಯಲ್ಲಿ ಭಾವಲಿಂಗದ ಪರಂಜ್ಯೋತಿಯಾದ ಮಹಾಜ್ಞಾನದ ಬೆಳಗಕ್ಷಿಸುತ್ತಾನೆ. ಆ ಮಹಾ ಬೆಳಗಿನ ನಿಲುವಿನೊಳಗೆ ಶರಣ ತನ್ನನ್ನು ಕಾಣುತ್ತಾನೆ; ತನ್ನೊಳಗೆ ಆ ಪರಶಿವನಿರುವುದನ್ನು ಅನುಭವಿಸುತ್ತಾನೆ; ಅಲ್ಲದೆ ಆ ಶರಣನು ಆ ಪರಶಿವನ ಚಿದರ್ಭದಲ್ಲಿರುವ ಶಿಶುವಿನಂತೆ, ತಾನು ಇಂಬಿಡಲ್ಪಟ್ಟು ದನ್ನು ಕಂಡು ಮೂಕವಿಸ್ಮಿತನಾಗಿ, ಮಾತು ಮೌನವಾಗಿ ಕುರುಹಿನಿಂದ ಅರುಹಿನಲ್ಲಿ ಬೆರೆತು ನಿಬ್ಬೆರಗಾಗಿರುವ ತನ್ನ ನಿಲುವನ್ನು ಎಷ್ಟೊಂದು ಸೊಗಸಾಗಿ ಹೇಳಿದ್ದಾನೆ ನೋಡಿರಿ !

ಕರಸ್ಥಲದ ಜ್ಯೋತಿ

ಓರ್ವ ಮನುಷ್ಯ ಕತ್ತಲಿನಲ್ಲಿ ಒಂದು ಗುರಿಯತ್ತ ನಡೆಯುತ್ತಿರುತ್ತಾನೆ ಎಂದು ಕೊಳ್ಳೋಣ. ಅವನಿಗೆ ಹಗಲಿನಲ್ಲಿ ಸೂರ್ಯನ ಬೆಳಕು, ರಾತ್ರಿಯಲ್ಲಿ ಚಂದ್ರನ ಬೆಳಕು ನೆರವಾಗುತ್ತವೆ. ಕಡೆಗೆ ಒಂದು ಪಂಜಾದರೂ ಬೇಕು; ಟಾರ್ಚಂತೂ ಈಗ ಸಿಕ್ಕುತ್ತವೆ. ಹಾಗೆಯೇ ಅಜ್ಞಾನಿಯಾದ ಭವಜೀವಿ ಶಿವದ ಗುರಿಯತ್ತ ಸಾಗಲು ಬಾಳಿನ ಕಾನನದಲ್ಲಿ ನಡೆಯುವಾಗ ಇಷ್ಟಲಿಂಗವೆಂಬ ಕರಸ್ಥಲದ ಜ್ಯೋತಿ ಬಲು ಸಹಾಯಕವಾಗುತ್ತದೆ.

ಕರಸ್ಥಲದ ಜ್ಯೋತಿಯಿದು. ಕುರುಹವಿದು,
ಎರಕವಿದು. ಇದರ ನೆಲೆಯ ತಿಳಿದಡೆ
ನಿಜಾನಂದವು. ಹೊಲಬುದೂರದಿಹ ನಿಸ್ಸಿಮನ
ಹೊಲಬನರಿದು ಕೂಡಿದಾತನೆ ಮೃಡನು ಕಾಣಾ ರಾಮನಾಥಾ.

ಜೇಡರ ದಾಸಿಮಯ್ಯನು ಈ ವಚನದಲ್ಲಿ,- "ಇಷ್ಟಲಿಂಗವು ಕರಸ್ಥಲದ ಜ್ಯೋತಿಯೆಂದೂ, ಅರುಹಿನ ಕುರುಹೆಂದೂ ನಿರಾಕಾರದ ಸಾಕಾರವೆಂದೂ ಅದರ ನೆಲೆಯನರಿದು ಅಂಗಕ್ಕಳವಡಿಸುವುದರಿಂದ ನಿಸ್ಸಿಮನಾದ ದೇವನ ಹೊಲಬನರಿತು ನಿಜಲಿಂಗಾನಂದದ ನಿಬ್ಬೆರಗಿನಲ್ಲಿ ನಿಲುಗಡೆ ಹೊಂದಿ ಲಿಂಗಪೂಜಕನು ಶಿವಸ್ವರೂಪ ತಾನಾಗುವನು." ಎಂದು ಕುರುಹು ಹಿಡಿದು ಅರಿವ ಕರಿಗೊಳಿಸಿಕೊಳ್ಳುವ ಅನುಭವವನ್ನು ಪ್ರತಿಪಾದಿಸಿದ್ದಾನೆ.

ಆಕಾರವಲ್ಲದ ನಿರಾಕಾರ ಮೂರ್ತಿಯು ನೀನು
ಸಾಕಾರ ರೂಪವ ದಯದಿಂದ ತಾಳ್ದು
ನೂಕುತಿಹ ಭವನ ಕಾಕುಗುಣಗಳ ಬಿಡಿಸ
ಬೇಕೆಂದು ಬಂದ ಮಹಾ ಶೋಕಹರನೆ.

ಮುಳುಗುಂದ ಶ್ರೀ ಮಹಂತ ಶಿವಯಾಗಿಗಳ ಮೇಲಿನ ಪದ್ಯದಲ್ಲಿ, 'ಭಕ್ತನನ್ನು ಭವದಲ್ಲಿ ಬಳಲಿಸುವ ದುರ್ಗುಣಗಳನ್ನು ಪರಿಹರಿಸಿ, ಉದ್ದರಿಸಲು ಆ ದಯಾಘನನಾದ ಪರಶಿವನು ಸಾಕಾರರೂಪ ತಾಳಿ ಕರಸ್ಥಲಕ್ಕೆ ಬಂದಿದ್ದಾನೆ' ಎಂಬ ಭಾವವು ಪ್ರತಿಪಾದಿತವಾಗಿದೆ. ಇಲ್ಲಿಯೂ ಸಹ ಸಾಕಾರದ ಮೂಲಕ ನಿರಾಕಾರವನ್ನು ಆರಾಧಿಸುವ ವಿಚಾರ ಕಾಣಬಹುದಾಗಿದೆ.

ಕುರುಹು ಒಂದು ಸಾಧನ; ಅರಿವು ಸಾಧ್ಯ. ಇಷ್ಟಲಿಂಗವು ಸಾಕಾರ, ಅದು ಸಾಧಿಸಿಕೊಡುವ ದೇವನು ನಿರಾಕಾರ..

ಅರುಹು ಪೂಜಿಸಲೆಂದು ಗುರುವು
ಕುರುಹು ಕೈಯಲ್ಲಿ ಕೊಟ್ಟಡೆ, ಅರುಹನೇ ಮರೆತು
ಕುರುಹ ಪೂಜಿಸುವ ಹೆಡ್ಡರ ನೋಡಾ.


ಇಲ್ಲಿ ಅಲ್ಲಮ ಪ್ರಭುದೇವರು ಅರುಹೆಂಬ ಸಾಧ್ಯವನ್ನು ಕುರುಹೆಂಬ ಸಾಧನದಿಂದ ಸ್ವಾಧೀನಪಡಿಸಿಕೊಳ್ಳಬೇಕೆಂದು ಕುರುಹು ಕೊಟ್ಟಿರುವಾಗ, ಧೈಯವನ್ನೇ ಮರೆತು ಆ ಕುರುಹೆಂಬ ಸಾಧನದಲ್ಲಿಯೇ ಕೊನೆಯವರೆಗೆ ಕಾಲ ಕಳೆಯಬೇಡವೆಂದು ಸಾಧಕನನ್ನು ಎಚ್ಚರಿಸಿದ್ದಾರೆ.

"ಮರಹು ಬಂದಿಹುದೆಂದು ಗುರುವು ಕುರುಹ ಕೈಯಲ್ಲಿ ತೋರಿದ!", "ಬಯಲ ಮೂರ್ತಿಯ ಮಾಡಿ ಎನ್ನ ಕರಸ್ಥಲಕ್ಕೆ ತಂದುಕೊಟ್ಟನಯ್ಯಾ ಶ್ರೀಗುರುವು" ಇತ್ಯಾದಿ ಶರಣರ ವಚನಗಳಲ್ಲಿ, ಅರಿವನ್ನು ಅಂಗಕ್ಕೆ ಅಳವಡಿಸಬೇಕಾದರೆ, ಶಿವಾನುಭಾವಿಯಾಗಬೇಕಾದರೆ ಇಷ್ಟಲಿಂಗವೆಂಬ ಕುರುಹು ಅವಶ್ಯವೆಂದೂ, ಅನಿವಾರ್ಯವೆಂದು ಹೇಳಿದುದನ್ನು ಗಮನಿಸಬಹುದಾಗಿದೆ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಇಷ್ಟಲಿಂಗ-ಚುಳುಕಾದ ದೇವಇಷ್ಟಲಿಂಗ ಏಕೆ ಬೇಕು?Next
*