ನಾದ - ಬಿಂದು - ಕಳೆ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ನಾದ - ಬಿಂದು - ಕಳೆ

ಒಬ್ಬ ಯೋಗ ಸಾಧಕನು ಅನವರತ ಹಂಬಲಿಸುವುದು ಕೆಲವು ವಿಶೇಷ ಅನುಭವಗಳಿಗಾಗಿ; ಅವುಗಳಲ್ಲಿ ನಾದಾನುಭವ ಒಂದು; ನಂತರ ಬಿಂದುವಿನ ಮತ್ತು ಕಳೆಯ ಅನುಭವ. ಇವು ಶಿವಯೋಗ ಸಾಧನೆಯಲ್ಲಿ ಸುಲಭ ಸಾಧ್ಯ.

ಮೊರೆವ ನಾದವ ಕೇಳಿ ಉರಿವ ಜ್ಯೋತಿಯ ನೋಡಿ
ಸುರಿವ ಅಮೃತವ ಸವಿದುಂಡ ಕಾರಣ
ಹಲವು ತೊರೆದೆನು ಜನನ ಮರಣಗಳ || - "ಯೋಗಗಾಂಗ ತ್ರಿವಿಧಿ"

ಮೊರೆವ ನಾದ, ಉರಿವ ಜ್ಯೋತಿ, ಸುರಿವ ಅಮೃತ ಕಳೆ ಇವು ಮೂರು ಸಾಧನೆಯ ಅಮೃತ ಫಲಗಳು. ಅವುಗಳ ಬಗ್ಗೆ ಕೊಂಚ ತಿಳಿಯಾಣ.

ನಾದ :

ಏಳು ಸುತ್ತಿನ ಕೋಟೆಯಾಳಗೆ ನೀಳದುಪ್ಪರಿಗೆಗಳ ನಡುವೆ
ತಾಳ ಮದ್ದಳೆ ಭೇರಿಗಂಟೆಗಳು | ಓಂ ಶ್ರೀಗುರುಸಿದ್ದ
ವೇಳೆ ವೇಳೆಗೆ ತಾವೇ ನುಡಿವವು ||

ಶ್ರೀ ಸರ್ಪಭೂಷಣ ಶಿವಯೋಗಿಗಳು ಹೇಳುವರು : ಸಪ್ತಧಾತುಗಳಿಂದ ಆದ ಶರೀರ ಎಂಬ ಏಳು ಸುತ್ತಿನ ಕೋಟೆ ಇದು. ಇದರ ಮಧ್ಯದಲ್ಲಿ ವಿವಿಧ ನಾದಗಳು ಮಿಡಿಯುತ್ತಿರುವವು ಎಂಬುದಾಗಿ. ಇನ್ನೊಂದು ಕಡೆಯಲ್ಲಿ ಹೇಳುವರು :

ಸಾಕು ಸಾಕಿನ್ನಿದಕೆ ಬೇರೊಂದು ಸುಖಮುಂಟೆ
ನೇಕರಿಸಬಾರದಾತ್ಮಾನುಭವ ರತಿಯೇ || ಪಲ್ಲವಿ ||
ಹೊರಗಿಂದ್ರಿಯಗಳ ಚೇಷ್ಟೆಯನುಪೇಕ್ಷಿಸಿ ಹೃದಯ
ಸರಸಿಜದ ದಳಗತಿಯನುಳಿದು ಕಾಲದೊಳು
ಮೊರೆವ ಝೇಂಕೃತಿಯ ದಶ ನಾದಗಳೆಂದೆಂಬ
ಶರಧಿಯಾಳು ಮುಳುಗಿ ಮೈ ಮರೆದ ಪರಿಣಾಮವೇ || ೧ ||

ಹೊರ ಮುಖವಾಗಿ ಸಾಗುವ ಸ್ವಭಾವವುಳ್ಳ ಇಂದ್ರಿಯಗಳ ಚಟುವಟಿಕೆಯನ್ನು ಉಪೇಕ್ಷೆ ಮಾಡಿ, ಹೃದಯ ಕಮಲದಲ್ಲಿ ಅಧೋಮುಖವಾಗಿರುವ 8 ದಳಗಳಲ್ಲಿ ಸಂಚರಿಸುವ ಜೀವವನ್ನು , ಊರ್ಧ ಮುಖವಾದ 4 ದಳಗಳಲ್ಲಿ ಸಂಚರಿಸುವಂತೆ ಮಾಡಿದರೆ ಆಗ ಝೇಂಕರಿಸುತ್ತ ಮೊರೆಯುವ ದಶನಾದಗಳನ್ನು ಕೇಳಬಹುದು. ಭ್ರಮರ, ಶಂಖ, ಮೃದಂಗ, ತಾಳ, ಘಂಟಾ, ವೀಣಾ, ಭೇರಿ, ದುಂದುಭಿ, ಸಮುದ್ರ ಘರ್ಜನೆ, ಮೇಘ ಘರ್ಜನೆ ಇವುಗಳಿಂದ ಹೊರ ಹೊಮ್ಮುವ ನಾದಗಳಿಗೆ ಹೋಲುವ ನಾದವನ್ನು ಅಂತರಂಗದಲ್ಲಿಯೇ ನಾದಯೋಗಿಯಾದರೂ ಶಿವಯೋಗಿ ಆಲಿಸುವನು.

ಪಿಂಡದೊಳಗೆ ಪ್ರಾಣವಿರ್ಪುದನೆಲ್ಲರೂ ಬಲ್ಲರಲ್ಲದೆ
ಪ್ರಾಣದೊಳಗೆ ಶಬ್ದ ವಿರ್ಪುದನಾರೂ ಅರಿಯರಲ್ಲ !
ಪ್ರಾಣದೊಳಗೆ ಶಬ್ದ ವಿರ್ಪುದನೆಲ್ಲರು ಬಲ್ಲರಲ್ಲದೆ
ಶಬ್ದದೊಳಗೆ ನಾದವಿರ್ಪುದನಾರೂ ಅರಿಯರಲ್ಲ !
ಶಬ್ದದೊಳಗೆ ನಾದವಿರ್ಪುದನೆಲ್ಲರೂ ಬಲ್ಲರಲ್ಲದೆ
ನಾದದೊಳಗೆ ಮಂತ್ರವಿರ್ಪುದನಾರೂ ಅರಿಯರಲ್ಲ !
ನಾದದೊಳಗೆ ಮಂತ್ರವಿರ್ಪುದನೆಲ್ಲರೂ ಬಲ್ಲರಲ್ಲದೆ |
ಮಂತ್ರದೊಳಗೆ ಶಿವನಿರ್ಪುದನಾರೂ ಅರಿಯರಲ್ಲ !
ಮಂತ್ರದೊಳಗೆ ಶಿವನಿರ್ಪುದನೆಲ್ಲರೂ ಬಲ್ಲರಲ್ಲದೆ
ಆ ಶಿವನ ಕೂಡುವ ಅವಿರಳ ಸಮರಸವನಾರೂ ಅರಿಯರಲ್ಲ, ಅಖಂಡೇಶ್ವರಾ !

ಪಿಂಡವೆಂದರೆ ಇಲ್ಲಿ ಪಂಚ ಭೂತಾತ್ಮಕವಾದ ಶರೀರ, (ಪಿಂಡವೆಂದರೆ ಆತ್ಮನೆಂದೂ ಅರ್ಥವಿದೆ) ಇದರಲ್ಲಿ ಅತಿ ಮುಖ್ಯವಾದುದೇ ಪ್ರಾಣಶಕ್ತಿಯ ಸಂಚಲನ, ಪ್ರಾಣಶಕ್ತಿಯ ಚಟುವಟಿಕೆ, ಉಸಿರು ನಿಂತುಹೋದರೆ ದೇಹವು ನಿಷ್ಕ್ರಿಯವಾಗುವುದು, ಜಡ ಶವವಾಗುವುದು. ಜಡ ಪಿಂಡವು ಚಟುವಟಿಕೆಯ ಆಗರವಾಗುವುದು. ಉಸಿರಾಟದ ಸಹಾಯದಿಂದಲಷ್ಟೆ ? ಹೀಗೆ ಪಿಂಡದಲ್ಲಿ ಪ್ರಾಣವಿದೆ; ಆ ಪ್ರಾಣದ ಹಿಂದೆ ಒಂದು ಬಗೆಯ ಶಬ್ದವಿದೆ, 'ಹಂ ಸಂ' ಎಂಬುದೇ ಆ ಶಬ್ದ. ಉಸಿರನ್ನು ಎಳೆದುಕೊಳ್ಳುವಾಗ 'ಹಂ' ಎಂಬ ಶಬ್ದವು, ಬಿಡುವಾಗ 'ಸಂ' ಎಂಬುದು ಸ್ವಾಭಾವಿಕವಾಗಿರುತ್ತವೆ. ಪ್ರಕೃತಿ ಸ್ವಭಾವದಿಂದ ಅದು ಸೊಂಯ್ ಸೊಂಯ್ ಎಂದರೂ ಅದನ್ನು ನಿಯಂತ್ರಿಸಿ ಕ್ರಮಬದ್ದ ಗೊಳಿಸಿದರೆ ಆಗ ಅದು 'ಸೋಹಂ' ಎಂದು ಭಾಸವಾಗುತ್ತದೆ. ಸ- ಅಹಂ ಅವನೇ ನಾನು ಎಂಬ ಲಕ್ಷ್ಯವಿಟ್ಟು ಹಾಗೆ ಉಚ್ಚರಿಸುತ್ತಾ ಹೋದಾಗ ಸಹ ಕಳೆದಾಗ ಅದು 'ಓಂ' ಆಗಿ ಗೋಚರವಾಗುತ್ತದೆ. ಇದುವೇ ಓಂಕಾರನಾದ. ಇದರಲ್ಲಿ ಮಂತ್ರವು ಹುದುಗಿರುತ್ತದೆ. ಇದು ಶಿವನ ಸ್ವರೂಪವೇ ಆಗಿರುತ್ತದೆ. ಪರಮಾತ್ಮನ ನಿಜಾನುಸಂಧಾನ ಮಾಡಿದಾಗ ಅವನೊಡನೆ ಒಂದುಗೂಡಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸಾಧಕನು ಅಂತಮ್ಮುಖಿಯೋಗಿ ಹೊರಗಿನ ಸಪ್ಪಳಗಳೇನೂ ಕಿವಿಗೆ ಬೀಳದಂತೆ ಧ್ಯಾನಾಸಕ್ತನಾದಾಗ ಒಂದೊಂದಾಗಿ ದಶವಿಧ ನಾದಗಳು ಕೇಳತೊಡಗಿ, ಕಡೆಗೆ ಓಂಕಾರನಾದವು ಅವ್ಯಾಹತವಾಗಿ ಅಖಂಡವಾಗಿ ಕೇಳತೊಡಗುತ್ತದೆ. ಇದು ಹೊರಗಿನ ನಾದವಲ್ಲ. ಒಳಗೇ ಮಿಡಿಯುವ ನಾದ. ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮವಾಗಿ ನಿರಂತರವಾಗಿ ಹೃದಯ ಗಂಹ್ವರದಲ್ಲಿ ನಿನದಿಸುವ ದನಿ. ಹೀಗಾಗಿ ಅದು ಆತ್ಮನಲ್ಲಿ ಸ್ವಾಭಾವಿಕವಾಗಿ ನೆಲೆಸಿರುವ ಚಿನ್ನಾದ ಎನ್ನಬಹುದು. ಒಂದು ಹೋಲಿಕೆಯನ್ನು ಕೊಡಬೇಕೆಂಬ ಅಪೇಕ್ಷೆಯುಂಟಾಗುತ್ತಿದೆ. ಒಂದು ಶಬ್ದ ನಿರೋಧಕ ಕೋಣಿಯಿದೆ ಎಂದುಕೊಳ್ಳೋಣ. ಒಳಗಿನ ದನಿ ಹೊರಗೆ ಬರುತ್ತಿಲ್ಲ. ಆ ಕೋಣಿಗೆ ದೊಡ್ಡ ದೊಡ್ಡ ಗಾಜಿನ ಕಿಟಕಿಗಳಿವೆ; ಒಳಗೆ ಸಂಗೀತಕಾರರು ವಾದ್ಯಗಳನ್ನು ನುಡಿಸುತ್ತಿದ್ದಾರೆ. ಗಾಜಿನ ಮೂಲಕ ನಾವು ಅವರ ಕೈಗಳ ಚಲನವಲನೆ ಕಾಣಬಹುದಾಗಿದೆ. ಆದರೆ ನಾದವನ್ನು ಕೇಳಲಾಗುವುದಿಲ್ಲ. ಗಾಜಿನ ಆವರಣ ಧ್ವನಿಯನ್ನು ಹೊರಗೆ ಬಿಡುತ್ತಿಲ್ಲ. ನಾವು ಬಾಗಿಲನ್ನು ತೆರೆದು ಒಳಹೊಕ್ಕರೆ ಆಗ ಅಲ್ಲಿಯ ನಾದಮಾಧುರ ಸವಿಯಬಹುದು. ಹಾಗೆ ನಮ್ಮ ಪ್ರಾಣ, ಅದರ ಚಟುವಟಿಕೆಗಳನ್ನು ನಾವು ದೇಹದ ಮುಖಾಂತರ ಗುರುತಿಸಬಹುದಾದರೂ ಅದರ ಮೂಲವಾದ ಆತ್ಮದಲ್ಲಿ ಹುದುಗಿರುವ ಪ್ರಣವನಾದವನ್ನು ಸವಿಯಲು ಆಗುತ್ತಿಲ್ಲ. ಕಾರಣವೆಂದರೆ ಆತ್ಮನ ಸುತ್ತಲೂ ಇರುವ ಆವರಣಗಳು. ಇವೆಲ್ಲವನ್ನೂ ಧ್ಯಾನಶಕ್ತಿಯಿಂದ ಭೇದಿಸಿ ಒಳಹೊಕ್ಕರೆ ಆತ್ಮನ ಅನಾಹತ, ಪ್ರಣವನಾದವನ್ನು ಕೇಳಬಹುದು.

ಬಿಂದು :

ನಾದಾನುಸಂಧಾನ, ಸಿದ್ದಿಯ ನಂತರ ಬಿಂದುವಿನ ಅನುಸಂಧಾನ. ಶ್ರೀ ಸರ್ಪಭೂಷಣರ ಒಂದು ಪದ್ಯವನ್ನಿಲ್ಲಿ ನೋಡೋಣ.

ಅರೆಮುಗಿದ ಕಣ್ಣಳೆರಡರ ತಾರೆಗಳ ನಡುವೆ
ತರಣಿ ಶಶಿ ಶಿಖಿ ಬಿಂಬದ ರಂಧ್ರದೊಳೆ
ಪೊರಪೊಣ್ಮಿ ಕೋಟಿ ಮಿಂಚುಗಳಂತೆ ಝಗಝಗಿಸಿ
ಮೆರೆವ ಬಿಂದು ಪ್ರಭೆಯ ನೋಳ್ಪ ಸಂತಸವೇ || ೨ ||

ಕಣ್ಣುಗಳು ಅರೆಮುಚ್ಚಿವೆ. ಎರಡರ ಮಧ್ಯೆ ಭೂಮಧ್ಯದ ಒಂದು ಅಲ್ಪ ರಂಧ್ರವಿದೆ. ಅದರ ಮೂಲಕ ಕಾಣುವುದೇನೋ ಎಂಬಂತೆ, ನೆಟ್ಟ ದೃಷ್ಟಿಯಿಟ್ಟು ನೋಡುತ್ತಿರುವ ಯೋಗಿಗೆ ಒಂದು ಅಸಾದೃಶ್ಯ ಬೆಳಕು ಹೊಮ್ಮುತ್ತಿದೆ. ಕೋಟಿ ಮಿಂಚುಗಳ ಪ್ರಕಾಶವನ್ನೇ ಕಂಡ ಅನುಭವವಾಗುತ್ತಿದೆ. ಇದಕ್ಕೆ ದಿವ್ಯ ದೃಷ್ಟಿಯನ್ನು ಅಳವಡಿಸಿಕೊಳ್ಳುವುದು ಎನ್ನುವದು. ಯೋಗಿ ರಾಜ ಶಿವನಿಗಿರುವ ಮೂರನೆಯ ಕಣ್ಣಿನ ಸಂಕೇತವೇ ದಿವ್ಯ ದೃಷ್ಟಿ ಸಂಪಾದನೆ. ಈ ಅನುಪಮವಾದ ಬೆಳಗಿಗೆ 'ಬಿಂದು' ಎನ್ನುತ್ತಾರೆ. ಇದು ಭೌತಿಕ ದೀಪ, ನಕ್ಷತ್ರಗಳಿಂದ ಬೆಳಗುವ ಬೆಳಕಲ್ಲ, ಆತ್ಮನ ಬೆಳಕು.

ನಿಟಿಲ ಭೂಮಧ್ಯದ ಸ್ಪಟಿಕ ವರ್ಣದ ಜ್ಯೋತಿ
ಘಟದೊಳಗೆ ತಾನಾಗಿ ತೊಳಗಿ ಬೆಳಗಿ
ವಟವೃಕ್ಷದ ಕೆಳಗೆ ಲೋಕಾದಿಲೋಕದೊಳು
ಘಟಿಕೆಯಂತಡಗಿದ ಪರಾತ್ಪರವಿದು || - ಅಲ್ಲಮ ಪ್ರಭು

ಈ ವಿಶೇಷವಾಗಿ ಭೂಮಧ್ಯದಲ್ಲಿ ಪ್ರಕಾಶಿಸುವ ಈ ಪ್ರಭೆಯು, ಸ್ಪಟಿಕ ವರ್ಣದ್ದಾಗಿ, ಘಟದೊಳಗೆ ಇರುತ್ತದೆ. ವಿಸ್ತಾರವಾಗಿ ಹಬ್ಬಿರುವ ವಟವೃಕ್ಷ ಅಂದರೆ ಸಹಸ್ತಾರದ ಕೆಳಗಿರುವ ದೈವೀಲೋಕದ ಸನಿಹದಲ್ಲೇ ಈ ಬಿಂದುವಿನ ಸ್ಥಾನ, ಆತ್ಮನ ಸ್ವಭಾವವು ಸತ್ - ಚಿತ್ - ಆನಂದ ಸ್ವರೂಪವಷ್ಟೆ. ನಾದವು ಆತ್ಮನ ಸರೂಪವನ್ನು, ಬಿಂದುವು ಅವನ ಚಿದ್ರೂಪವನ್ನು, ಕಳೆಯು ಅದರ ಆನಂದ ರೂಪವನ್ನು ಪ್ರತಿನಿಧಿಸುತ್ತವೆ. ವಿವಿಧಾವಸ್ಥೆಯಲ್ಲಿ ಬೇರೆ ಬೇರೆ ವರ್ಣಗಳು ಕಾಣುತ್ತಾ ಬಂದು, ಕಡೆಯಲ್ಲಿ ಶುಭ್ರ ಧವಳ ಸ್ವರೂಪದ ಬಿಂದುವೊಂದೇ ಕಾಣ ಬರುತ್ತದೆ.

ಕಳೆ

ಅಂಬರದೊಳಗಣ ತುಂಬಿದ ಕೊಡನುಕ್ಕಿ
ಕುಂಭಿನಿಯ ಮೇಲೆ ಸುರಿಯಲು ಮಾನವರು
ಶಂಭುಲೋಕಕ್ಕೆ ತೆರಳಿದರು. || ಯೋ . ತ್ರಿ.

ಇಲ್ಲಿ ಅಂಬರವೆಂದರೆ ಸಹಸ್ರದಳ ಪದ್ಮ ಎಂದು ಕರೆಸಿಕೊಳ್ಳುವ ಸಹಸ್ರಾರ ಚಕ್ರದ ಕೆಳಗಿರುವ ಚಿದಾಕಾಶ ವೈಜ್ಞಾನಿಕ ಭಾಷೆಯಲ್ಲಿ CerebroSpinal Cavity ಎಂದು ಕರೆದರೂ, ಯೌಗಿಕ ಪರಿಭಾಷೆಯಲ್ಲಿ ಚಿದಾಕಾಶ, ಕುಂಭಿನಿ ಸರಸಿ ಎನ್ನುವರು. ಇಲ್ಲಿಂದ ಒಂದು ಬಗೆಯ ಅಮೃತ ಕಳೆಯು ಸುರಿಯಲಾರಂಭಿಸುತ್ತದೆ. ಅದನ್ನೇ ಚಿತ್ಕಳಾನುಭವ ಎನ್ನುವರು. ಇದು ಲಭ್ಯವಾದ ಬಳಿಕ ಸಾಧನೆಗೆ ಇನ್ನೇನೂ ಬೇಕು ಎನ್ನುವ ಅತೃಪ್ತಿ ಇರದೆ ಅಸಾಮಾನ್ಯ ಆತ್ಮತೃಪ್ತಿ ಇರುವುದು. ಇದನ್ನು ಪಡೆದಾಗ ತನ್ಮಯತೆ ಎನ್ನುವುದು ಸರ್ವಾಂಗವನ್ನೂ ಬಳಸಿಕೊಳ್ಳುವುದು. ಇದನ್ನೇ ಅಮೃತಪಾನವೆಂದು; ಇದನ್ನು ಈಂಟಿದಾತನಿಗೆ ಅಮೃತ ಸಿದ್ದಿಯಾಯಿತೆಂದೂ ಅನ್ನುವರು.

ಗಿರಿಯ ಶಿಖರಗ್ನಿ ಮುಖದೊಳಿರುವ ಅರ್ಕೆಶ್ವರನ ಹಿಂದೆ
ಸುರಿವುದಮ್ಮತದ ಪಂಚಧಾರೆಯು | ಓಂ ಶ್ರೀಗುರು ಸಿದ್ದ
ಅರಿದು ಸೇವಿಸೆ ಮರಣವಿಲ್ಲವು || -ಸರ್ಪಭೂಷಣ ಶಿವಯೋಗಿಗಳು

ಉನ್ಮನಿಯ ಜ್ಯೋತಿ ಬ್ರಹ್ಮರಂಧ್ರದ ಮೇಲೆ ಸಹಸ್ರದಳ ಪದ್ಮ,
ಅಲ್ಲಿ ಅಮೃತವಿಹುದು.
ಅಲ್ಲಿ ಓಂಕಾರ ಸ್ವರೂಪನಾಗಿ ಗುಹೇಶ್ವರ ಲಿಂಗವು ಸದಾ ಸನ್ನಿಹಿತನು. -ಅಲ್ಲಮ ಪ್ರಭು

ಈ ಚಿತ್ಕಳೆಗೆ ಚಂದ್ರಕಳೆ ಎಂದೂ ಅನ್ನುವರು. ಶಿವನಿಗೆ ಮೂರು ಕಣ್ಣುಗಳನ್ನು ಚಿತ್ರಿಸಿರುವುದನ್ನು ಎಲ್ಲರೂ ಬಲ್ಲರು. ಬಲನೇತ್ರ ಸೂರ್ಯನೇತ್ರ, ಎಡನೇತ್ರ ಚಂದ್ರನೇತ್ರ, ಭೂಮಧ್ಯದಲ್ಲಿ ಅಗ್ನಿ ನೇತ್ರ. ಎಡಕಣ್ಣು ಚಂದ್ರನ ಸಂಕೇತವೆಂದ ಬಳಿಕ ಪುನಃ ಎಳೆಯ ಚಂದ್ರನನ್ನು ಶಿವನ ಮುಡಿಯ ಮೇಲೆ ಇಟ್ಟುದೇಕೆ ? ಇದುವೇ ಯೋಗಿ ಶಿವನ ಚಿತ್ಕಳಾನುಭವದ ಸಂಕೇತವಾದ ಚಂದ್ರಕಳೆ. ಈ ಎಲ್ಲ ವಿಶೇಷಾನುಭವಗಳನ್ನೊದಗಿಸುವ ಒಂದು ಅಪೂರ್ವ ನಿಧಿ ಇಷ್ಟಲಿಂಗ, ಅನರ್ಘ ಸಂಪತ್ತಿನ ಭಾಂಡಾರವನ್ನು ತೆರೆಯುವ ಕೀಲಿಕ್ಕೆ ಇದು ಎಂದರೂ ತಪ್ಪಾಗದು. ಜನ್ಮ ಜನ್ಮಾಂತರಗಳಿಂದಲೂ ಸಾಗಿ ಬಂದಿರುವ ಆತ್ಮವನ್ನು ಸುತ್ತುವರಿದಿರುವ ದೇಹವು ಒಂದು ಅನರ್ಘ ಭಂಡಾರ. ಆದರೆ ಸದ್ಯದಲ್ಲಿ ಕತ್ತಲೆಯ ರಾಶಿ ಒಳಗಿನ ಕೋಣಿಯನ್ನು ತುಂಬಿದೆ. ಅಂಗೈಯಲ್ಲಿ "ಸಂಗ್ರಹಿಸಿದ ವಿದ್ಯುತಿ" (Accumulated Current) ನಂತಿರುವ ಇಷ್ಟಲಿಂಗದ ನೆರವಿನಿಂದ ದಿವ್ಯ ಪ್ರಭೆಯ ವಿದ್ಯುತ್ತನ್ನು ಜಾಗೃತಗೊಳಿಸಿಕೊಂಡು ಒಳಗೆ ಹರಿಯಬಿಟ್ಟು ಕೊಂಡರೆ ಆಗ ಅಲ್ಲೆಲ್ಲ ಬೆಳಕು.

ವಿದ್ಯುತ್ತನ್ನು ಉತ್ಪಾದಿಸುವ ಜನರೇಟರುಗಳು ಸ್ಥಗಿತವಾಗಿದ್ದು, ಅವನ್ನು ಚಾಲನೆ ಮಾಡಲಿಕ್ಕೆ ಸಂಗ್ರಹಿಸಿದ ವಿದ್ಯುತ್ತನ್ನು ಬಳಸಿಕೊಳ್ಳುವಂತೆ, ದೇಹಾಂತರ್ಗತವಾಗಿರುವ ಪ್ರಾಣ ವಿದ್ಯುತ್ತನ್ನು ಜಾಗೃತಗೊಳಿಸಿಕೊಳ್ಳಲಿಕ್ಕೆ, ಈ ಇಷ್ಟಲಿಂಗವನ್ನು ಯೋಗಿಗಳು ಬಳಸಿಕೊಳ್ಳುವರು.

ಒಂದು ಮನೆಯು ಹಲವಾರು ವಸ್ತುಗಳಿಂದ ತುಂಬಿದೆ; ಟೇಪ್ ರೆಕಾರ್ಡರ್ ಹಾಡುತ್ತಿದೆ: ಫ್ಯಾನ್ ತಿರುಗುತ್ತಿದೆ, ಸುಂದರವಾದ ದೀಪಗಳು ಬೆಳಗುತ್ತಿವೆ. ಆಗ ಕರೆಂಟು ಹೋಗುತ್ತದೆ ಎಂದುಕೊಳ್ಳಿ. ಇವೆಲ್ಲ ಸ್ತಬ್ದಗೊಳ್ಳುತ್ತವೆ. ವಿದ್ಯುತ್ ಹರಿಯುತ್ತಲೇ ಇವೆಲ್ಲ ಪ್ರಾರಂಭವಾಗುತ್ತವಷ್ಟೆ : ಅದೇ ರೀತಿ ಇಷ್ಟಲಿಂಗವನ್ನು ದೃಷ್ಟಿಸಿ ನೋಡುತ್ತ ತ್ರಾಟಕಾಭ್ಯಾಸದಲ್ಲಿ ಯೋಗಿಯು ಮೈಮರೆತಾಗ ಅಲ್ಲಿ, ಜಾಗೃತಗೊಂಡು ಒಳಗೆ ಪ್ರವೇಶಿಸುವ ಪ್ರಾಣ ವಿದ್ಯುತ್ತಿನ ಚಾಲನೆಯಿಂದ 'ನಾದಾನುಭವ' ಎಂಬ ಟೇಪ್ ರೆಕಾರ್ಡರ್ ಉಲಿಯುತ್ತದೆ: ಬಲ್ಬುಗಳು ಉರಿಯಲಾರಂಭಿಸುವಂತೆ 'ಬಿಂದು'ವಿನ ಅನುಭವವಾಗಿ, ಅಪೂರ್ವ ಶಕ್ತಿಯು ಜಾಗೃತಗೊಳ್ಳುತ್ತದೆ. ದಿವ್ಯವಾದ ಆನಂದಾನುಭೂತಿ ಸರ್ವಾಂಗವನ್ನೂ ಬಳಸಿಕೊಳ್ಳುತ್ತದೆ. ಇದೆಲ್ಲವನ್ನೂ ಕ್ರೋಢೀಕರಿಸಿ ಬಸವಣ್ಣನವರು ಹೇಳುವ ವಚನ ಹೀಗಿದೆ.

ಅಂತರಂಗದೊಳಗಿರ್ದ ನಿರಾಕಾರ ಲಿಂಗವ ಸಾಕಾರವ ಮಾಡಿ,
ಶ್ರೀಗುರುಸ್ವಾಮಿ ಎನ್ನ ಕರಸ್ಥಳಕ್ಕೆ ತಂದುಕೊಟ್ಟನಯ್ಯ
ಇಂತಪ್ಪ ಲಿಂಗವು ಅಂತರಂಗವನಾವರಿಸಿ
ಅಂತರಂಗದ ಕರಣಂಗಳೇ ಕಿರಣಂಗಳಾಗಿ
ಆ ಬೆಳಗುವ ಚಿದಂಶಿಕವೇ ಪ್ರಾಣಲಿಂಗವು
ಆ ಮೂಲ ಚೈತನ್ಯವೇ ಭಾವಲಿಂಗವು

ನಾದ ಬಿಂದು ಕಳಾತೀತ ಪರಮಾತ್ಮನು

ಪರಮಾತ್ಮನು ತನ್ನ ಒಂದು ಅಂಶವಾದ ಜೀವಾತ್ಮನನ್ನು ಪಿಂಡಾಂಡದಲ್ಲಿ ಹುದುಗಿಸಿದ್ದಾನಷ್ಟೆ. ಇಂಥ ಆತ್ಮನ ಇರುವಿಕೆಗೆ ಜೀವಂತ ಸಾಕ್ಷಿಗಳೇ ನಾದ ಬಿಂದು ಕಳೆಗಳು. ಹಾಗಾದರೆ ಬ್ರಹ್ಮಾಂಡಗತನಾದ ಪರಮಾತ್ಮನ ಸ್ವರೂಪ ದರ್ಶನ ಎಂತು ? ಹೇಗೆ ?

ಆಕಾಶದೊಳಗಣ ಜ್ಯೋತಿಯ ಪ್ರಭೆ ಬಂದು |
ಲೋಕಂಗಳೊಳಗೆ ಮುಸುಕಲು | ಅದರೊಳಗೆ
ಏಕಾಂಗಿಯಾದಡವ ಮುಕ್ತ || ೮ || ಯೋ . ತ್ರಿ.

ಅತ್ಯುನ್ನತ ಸ್ಥಿತಿಯಾಳಗೆ, ಆಕಾಶದ ಒಳಹೊರಗೆಲ್ಲ ಜ್ಯೋತಿಯು ತುಂಬಿದಂತೆ, ಅದರೊಳಗೆ ತಾನಿದ್ದಂತೆ ಸಾಧಕನಿಗೆ ಅನುಭೂತಿಯೋಗುವುದು.

ಬೆಳಗಿನೊಳಗಣ ಬೆಳಗು ಮಹಾಬೆಳಗು
ಶಿವಶಿವಾ ಪರಮಾಶ್ರಯವೇ ತಾನಾಗಿ
ಶತಪತ್ರ ಕಮಳ ಕರ್ಣಿಕಾ ಮಧ್ಯದಲ್ಲಿ
ಸ್ವತಃ ಸಿದ್ಧನಾಗಿರ್ಪ ನಮ್ಮ ಕೂಡಲ ಸಂಗಮ ದೇವರು -ಬ.ಷ.ವ. ೮೧೬

ಬ್ರಹ್ಮಾಂಡವನ್ನೆಲ್ಲ ತುಂಬಿ ತುಳುಕುವ ಬೆಳಗು; ತನ್ನ ಸಹಸ್ತಾರದಲ್ಲಿ ತುಂಬಿ ತುಳುಕುವ ಬೆಳಗು. ಅದರೊಳಗೆ ತಾನು, ತನ್ನೊಳಗೆ ಅದು. ಇಂತಹ ಓತಪ್ರೋತ ಬೆಳಗನ್ನು ಸಾಧಕನು ದರ್ಶಿಸುವನು, ಅನುಭವಿಸುವನು.

ಇಂದ್ರದಿಕ್ಕಿನೊಳೆದ್ದ ಸೂರ್ಯ | ಚಂದ್ರಗುಪ್ತದ ಪುರದೊಳು ಮುಳುಗೆ.
ಚೆಂದಚೆಂದದ ಬೆಳಗು ತೋರ್ಪುವುದು | ಓಂ ಶ್ರೀ ಗುರುಸಿದ್ದ
ನಿಂದು ನೋಡಲು ಬಯಲಿಗೆ ಬಯಲದು ||೭|| -ಸರ್ಪಭೂಷಣ ಶಿವಯೋಗಿಗಳು

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಅರ್ಚನೆಯ ಆವಶ್ಯಕತೆಸಾಕ್ಷಾತ್ಕಾರ ಮತ್ತು ಚಕ್ರಭೇದನNext
*