ಅಗ್ನಿ (ಕಿಚ್ಚು), ಜಲ, ನೆಲ, ಕಲ್ಲು ದೇವರಲ್ಲ


ಗುರು ಬಸವಣ್ಣನವರು ದೇವನೊಬ್ಬನೇ ಎಂದು ಸಾರಿ, ಅಗ್ನಿ (ಕಿಚ್ಚು), ಜಲ, ನೆಲ, ಕಲ್ಲು ,ಆಕಾಶ ವಾಯು ಕ್ಷುದ್ರ ದೈವಾರಾಧನೆಯನ್ನು ಖಂಡಿಸಿದರು.

ಮೂಢನಂಬಿಕೆಗಳು ಮೂಢರಿಂದ ಆಚರಣೆಯಲ್ಲಿ ಬಂದವು. ಈ ನಂಬಿಕೆಗಳು ಜನರ ಅಜ್ಞಾನದಿಂದ ಹಾಗೂ ಅಸಹಾಯಕ ಸ್ಥಿತಿಯಿಂದ ಬಳಕೆಯಲ್ಲಿ ಬಂದಿರಬೇಕೆನಿಸುತ್ತದೆ. ಯಾಕೆಂದರೆ
ಮನುಷ್ಯ ತನ್ನ ಶಕ್ತಿಗಿಂತ ಮಿಗಿಲಾದ ಶಕ್ತಿಗೆ ಅಂಜುತ್ತಾನೆ. ಈ ಭಯವು ಭಕ್ತಿಗೆ, ಮೂಢನಂಬಿಕೆಗೆ ಕಾರಣವಾಗುತ್ತದೆ. ಆ ಭಕ್ತಿಯ ಆವೇಶದಲ್ಲಿ ಏನು ಆರಾಧಿಸಬೇಕು ; ಏನನ್ನು ನಂಬಬೇಕು ಎಂಬುದು ಮನಷ್ಯನಿಗೆ ಸರಿಯಾಗಿ ಹೊಳೆಯಲಾರದು. ಹೀಗಾಗಿಯೇ ಹಾವು ಪೂಜಿಸುವುದು, ಅಗ್ನಿ ಪೂಜಿಸುವುದು ಬೆಳೆದು ಬಂದಿರಬೇಕು. ಅರಿಯದ ಆಚರಣೆಯೇ ಮೂಢನಂಬಿಕೆ.
ಆದರೆ ಮನುಷ್ಯನಿಗೆ ಅರಿವಿಗೆ ಬಂದ ನಂತರವು ಅದೇ ಮೂಢನಂಬಿಕೆ ಪಾಲಿಸುವವರಿಗೆ ಏನೆನ್ನಬೇಕು?

ಕಿಚ್ಚು ದೈವವೆಂದು ಹವಿಯನಿಕ್ಕುವ,
ಹಾರುವರ ಮನೆಯಲಿ ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರ, ಬೀದಿಯ ಧೂಳ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯಾ.
ಕೂಡಲಸಂಗಮದೇವಾ,
ವಂದನೆಯ ಮರೆದು ನಿಂದಿಸುತ್ತಿದ್ದರು. -೧/೫೮೫ [1]

ಕಿಚ್ಚು = ಅಗ್ನಿ, ಬೆಂಕಿ
ಹವಿ = ಯಜ್ಞದಲ್ಲಿ ಅಗ್ನಿಗೆ ಅಹುತಿ ಕೊಡುವ ಹಾಲು, ತುಪ್ಪ, ಧಾನ್ಯ ಮೊದಲಾದವು

ಅಗ್ನಿಯೇ ದೈವ ವೆಂದು (ದೇವರೆಂದು) ಬೆಲೆ ಬಾಳು ವಸ್ತುಗಳಾದ ಹಾಲು, ತುಪ್ಪ, ವಸ್ತ್ರಗಳನ್ನು ಬೆಂಕಿಗೆ ಹಾಕು ನಾವು ದೇವರಿಗೆ ತೃಪ್ತಿ ಪಡಿಸಿದ್ದೇವೆ. ನಮ್ಮ ಭಕ್ತಿಯನ್ನು ದೇವರಿಗೆ ಅರ್ಪಿಸಿದ್ದೇವೆ ಎನ್ನುವವರು. ಅದೇ ಬೆಂಕಿ (ದೈವ) ಮನೆಗೆ ಬಿದ್ದಾಗ ಬೀದಿಯ ಧೂಳು, ಬಚ್ಚಲ ನೀರು ಹಾಕಿ ಕೂಗಿ ಎಲ್ಲರನ್ನು ಕರೆದೂ ಬೆಂಕಿಯನ್ನು ನಿಂದಿಸುತ್ತಾ ಅದನ್ನು ಆರಿಸಲು ಮುಂದಾಗುತ್ತಾರೆ. ಅಂದರೆ ಇದೆಂಥಾ ಭಕ್ತಿ? ಇದೆಂಥಾ ದೇವರು? ಇದನ್ನೆ ಗುರು ಬಸವಣ್ಣನವರು ಮಾರ್ಮಿಕವಾಗಿ ಮೆಲಿನ ವಚನದಲ್ಲಿ ತಿಳಿಸಿದ್ಧಾರೆ.

ಅಗಳೂ ಲೋಗರ ಮನೆಯ ಬಾಗಿಲ ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು.
ಹೋಗೆಂದಡೆ ಹೋಗವು,
ನಾಯಿಗಿಂದ ಕರಕಷ್ಟ ಕೆಲವು ದೈವಂಗಳು.
ಮೇಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವಾ -೧/೫೫೪ [1]

ಲೋಗರ = ಅನ್ಯರು, ಜನಸಮೂಹ, ಸಾಮಾನ್ಯರು
ಮೇಲೋಗರ = ಅನ್ನ, ಸಾಧನ ಪದಾರ್ಥ, ಕಾಯಿಪಲ್ಲೆ ಮೊದಲಾದವು

ಗಾಡಿಗ ಡಿಂಬುಗಂಗೆ
ಚಿಕ್ಕುಮುಟ್ಟಿಗೆ, ಹಸುರಂಬಲಿಮುಟ್ಟಿಗೆ, ಹುರಿಬುತ್ತಿಯ ಬೇಡಿ,
ಮನುಷ್ಯರ ಪಿಡಿದು ಪೀಡಿಸಿ, ತಮ್ಮ ಬಸುರ್ಗೆ ಕಾಣದೆ,
ಈಡಾಡಿದ ಕೂಳಂಬಲಿಯನಾಯ್ದು ಕುರುಕುವ
ಹೇಸಿ ದೈವಂಗಳ ಬೇಡಿ ಬೇಡಿ ನಿರರ್ಥ ಕೆಡಬೇಡ, ಎಲವೋ,
ಕೂಡಲಸಂಗಮದೇವರ ನೆರೆನಂಬುವುದೆಲವೊ. -೧/೫೫೫ [1]

ಗಾಡಿಗ = ಮನೆಯ ಜಗುಲಿಯ ಮೇಲೆ ಪೂಜಿಸಲ್ಪಡುವ ಭೂತ, ಸುಂದರ, ಗಾರುಡಿಗ, ಮಾಟಗಾರ, ಗಾಡಿಕಾರ, ಚೆಲುವ
ಡಿಂಬು = (ಸಂ) ೧ ದೇಹ, ಶರೀರ ೨ ದಿಬ್ಬ, ದಿಣ್ಣೆ ೩ ದೀಪವನ್ನಿಡುವ ಸಣ್ಣ ಪೀಠ, ದೀಪದ ಆಧಾರ
ಚಿಕ್ಕು = ಹಲಚೆಗಡಬು, (ಒಂದು ತರಹದ ಕಡಬು)
ಮುಟ್ಟಿಗೆ = ಹೆಸರುಪದ (ದೇ) (೧) ಮುಚ್ಚಿದ ಅಂಗೈ, ಮುಷ್ಟಿ (೨) ಯಾವುದಾದರೂ ವಸ್ತುವೊಂದನ್ನು ಚಿವುಟಿ ಹಿಡಿಯುವ ಇಕ್ಕುಳದಂತಹ ಸಾಧನ (೩) ದಿಕ್ಕುಗಳಿಗೆ ಎಸೆದು ಚೆಲ್ಲುವ ಬಲಿ (೪) ಸೌದೆ, ಕಟ್ಟಿಗೆ (೫) ಚಿತೆ (೬) ದೊಡ್ಡಪತ್ರೆ ಗಿಡ
ಈಡಾಡಿದ = ಕಿತ್ತು, ಒಗೆ, ಚೆಲ್ಲು
ಕೂಳು= ಅನ್ನ, ಊಟ, ತಿನ್ನುವ ಪದಾರ್ಥ
ಕುರುಕು = ಕುರುಕುರು ಸದ್ದಿನೊಂದಿಗೆ ತಿನ್ನು
ನೆರೆ = (ದೇ) ಪೂರ್ತಿಯಾಗಿ, ಪೂರ್ಣವಾಗಿ

ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ
ಕೆರೆ ಬಾವಿ ಹೂಗಿಡ ಮರಂಗಳಲ್ಲಿ
ಗ್ರಾಮಮಧ್ಯಂಗಳಲ್ಲಿ ಜಲಪಥ ಪಟ್ಟಣಪ್ರವೇಶದಲ್ಲಿ
ಹಿರಿಯಾಲದ ಮರದಲ್ಲಿ ಮನೆಯ ಮಾಡಿ,
ಕರೆವೆಮ್ಮೆಯ ಹಸುಗೂಸು ಬಸುರಿ ಬಾಣಂತಿ
ಕುಮಾರಿ ಕೊಡಗೂಸು ಎಂಬವರ ಹಿಡಿದುಂಬ ತಿರಿದುಂಬ
ಮಾರಯ್ಯ ಬೀರಯ್ಯ ಕೇಚರಗಾವಿಲ ಅಂತರಬೆಂತರ
ಕಾಳಯ್ಯ ಮಾರಯ್ಯ ಮಾಳಯ್ಯ ಕೇತಯ್ಯಗಳೆಂಬ ನೂರು ಮಡಕೆಗೆ
ನಮ್ಮ ಕೂಡಲಸಂಗಮದೇವ ಶರಣೆಂಬುದೊಂದೆ ದಡಿ ಸಾಲದೆ -೧/೫೫೬[1]

ಮೊರಡಿ = ಹೆಸರುಪದ (ದೇ) ೧ ದಿಣ್ಣೆ, ಗುಡ್ಡ, ಕಲ್ಲಿನ ರಾಶಿ, mound, hillock, hill.

ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ. -೧/೫೮೭[1]

ಅರಗು = Wax, ಒಂದು ಬಗೆಯ ಕೆಂಪುದ್ರವ್ಯ,
ಮುರುಟು = Shrink, ಸುರುಟಿಕೊಳ್ಳು ೨ ಸೊಟ್ಟಾಗು, ವಕ್ರಗೊಳ್ಳು ೩ ಕುಗ್ಗು, ಮುದುಡು

ಮಾರಿಕವ್ವೆಯ ನೋಂತು ಕೊರಳಲ್ಲಿ ಕಟ್ಟಿಕೊಂಬರು,
ಸಾಲಬಟ್ಟಡೆ ಮಾರಿಕೊಂಬರಯ್ಯಾ,
ಸಾಲಬಟ್ಟಡೆ ಅವರನೊತ್ತೆಯಿಟ್ಟು ಕೊಂಡುಂಬರಯ್ಯಾ.
ಮಾರುವೋಗನೊತ್ತೆಯೋಗ ನಮ್ಮ ಕೂಡಲಸಂಗಮದೇವ. -೧/೫೫೮[1]

ನೋಂತು = ಬೆಲೆಯುಳ್ಳ ಆಭರಣ? (ಕೊರಳಲ್ಲಿ ಧಿರಿಸುವ)
ಸಾಲಬಟ್ಟಡೆ = ಸಾಲ ಬಂದಾಗ
ಮಾರುವೋಗು = ಮಾರಿಕೊಳ್ಳು
ಮಾರುವೋಗನೊತ್ತೆಯೋಗ = ಮಾರುವೋಗನು + ಒತ್ತೆಹೋಗ ಅಂದರೆ ಮಾರಾಟವಾಗುವುದಿಲ್ಲ ಹಾಗೂ ಒತ್ತೇಯಿಡಲಾಗುವುದಿಲ್ಲ.

ಉಣಲುಡಲು ಮಾರಿಯಲ್ಲದೆ, ಕೊಲಲು ಕಾಯಲು ಮಾರಿಯೆ
ತನ್ನ ಮಗನ ಜವನೊಯ್ದಲ್ಲಿ ಅಂದೆತ್ತ ಹೋದಳು ಮಾರಿಕವ್ವೆ
ಈವಡೆ ಕಾವಡೆ ನಮ್ಮ ಕೂಡಲಸಂಗಯ್ಯನಲ್ಲದೆ
ಮತ್ತೊಂದು ದೈವವಿಲ್ಲ. -೧/೫೫೯[1]

ಮೊರನ ಗೋಟಿಲಿ ಬಪ್ಪ ಕಿರುಕುಳದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು,
ಕುರಿ ಸತ್ತು ಕಾವುದೆ ಹರ ಮುಳಿದವರ
ಕುರಿ ಬೇಡ ಮರಿ ಬೇಡ,
ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು
ನಮ್ಮ ಕೂಡಲಸಂಗಮದೇವನ. -೧/೫೬೦[1]

ಮುಳಿ = ಸಿಟ್ಟು

ಬನ್ನಿರೇ ಅಕ್ಕಗಳು, ಹೋಗಿರೇ ಆಲದ ಮರಕ್ಕೆ.
ಕಚ್ಚುವುದೇ ನಿಮ್ಮ, ಚಿಪ್ಪಿನ ಹಲ್ಲುಗಳು.
ಬೆಚ್ಚಿಸುವುವೇ ನಿಮ್ಮ, ಬಚ್ಚಣಿಯ ರೂಹುಗಳು.
ನಮ್ಮ ಕೂಡಲಸಂಗಮದೇವನಲ್ಲದೆ
ಪರದೈವಂಗಳು ಮನಕ್ಕೆ ಬಂದವೆ
ಬಿಕ್ಕನೆ ಬಿರಿವ ದೈವಂಗಳು. -೧/೫೬೧[1]

ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ !
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ !
ದೈವ ದೈವವೆಂದು ಕಾಲಿಡಲಿಂಬಿಲ್ಲ,
ದೇವನೊಬ್ಬನೆ ಕೂಡಲಸಂಗಮದೇವ. -೧/೫೬೨[1]

ಮೊರ = ಧಾನ್ಯ ಶುದ್ಧಮಾಡುವ ಸಾಧನ
ಹಣಿಗೆ = ಬಾಚಣಕೆ (Comb)
ಬಿಲ್ಲನಾರಿ = ಬಿಲ್ಲಿನ ದಾರ/ಹಗ್ಗ?
ಕೊಳಗ = ಧಾನ್ಯ ಅಳೆಯುವ ಸಾಧನ (ಉದಾ: ಪಾವು, ಶೇರು)
ಗಿಣ್ಣಿಲು = ಗಿಂಡಿ, ಬಟ್ಟಲು

[1] ಈ ತರಹದ ಸಂಖ್ಯೆಯ ವಿವರ: ಸವಸ-1/554 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-554 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previousಲಿಂಗಾಯತ ಧರ್ಮದ "ಗರ್ಭಲಿಂಗಧಾರಣೆ" ಸಂಸ್ಕಾರಇಷ್ಟಲಿಂಗ ದೀಕ್ಷಾ ಯಾರು ...Next
*