ಬಸವಣ್ಣನವರು ಸಾರಿದ ಸಮಾನತೆ

*

ಬಸವಣ್ಣನವರು ೧೨ನೇ ಶತಮಾನದಲ್ಲಿ ಮಾನವರ ಮೇಲು ಕೀಳೆಂಬ ಅಸಮಾನತೆಯನ್ನು ಹೊಡಿದೋಡಿಸಿ ಕ್ರಾಂತಿಕಾರಕವಾಗಿ ಸಮಾನತೆಯನ್ನು ಸಾರಿದರು. ಮೇಲು ವರ್ಗದವರ ತುಳಿತಕ್ಕೊಳಗಾದ ದೀನ ದಲಿತರನ್ನು, ಹೊಲೆಯ ಮಾದಿಗರನ್ನು ತನ್ನವರೆಂದು ಅಪ್ಪಿಕೊಂಡು ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರಿಂದ ಉತ್ತಮ ಸಾಹಿತ್ಯ ಸೃಷ್ಟಿಗೆ ಕಾರಣರಾದರು.

ನೆಲನೊಂದೆ; ಹೊಲಗೇರಿ ಶಿವಾಲಾಯಕ್ಕೆ,
ಜಲವೊಂದೆ; ಶೌಚಾಚಮನಕ್ಕೆ,
ಕುಲವೊಂದೆ ತನ್ನ ತಾನರಿದವಂಗೆ,
...
-- ಸ.ವ ಸಂ. ವಚನ ಸಂಖ್ಯೆ:೮೭೯

ಹುಟ್ಟಿನಿಂದ ಎಲ್ಲ ಮಾನವರು ಸಮಾನರು ಎಂದು ಸಾರಿ, ಎಲ್ಲರೂ ಜನಿಸಿದುದು ಯೋನಿಯಿಂದಲೇ "ಕರ್ಣದಲ್ಲಿ ಜನಿಸಿದವರುಂಟೆ"? ಎಂದು ಪ್ರಶ್ನಿಸಿ ನಾವು ಉತ್ತಮರು ಎಂದು ಬೀಗುವವರಿಗೆ ಈ ಪ್ರಶ್ನೆಯಿಂದ ಉತ್ತರವನ್ನು ಕೊಡುತ್ತಾರೆ.

ಹೊಲೆಯೋಳಗೆ ಹುಟ್ಟಿ ಕುಲವನರಸುವ
ಎಲವೋ ಮಾತಂಗಿ ಮಗ ನೀನು

ಎಂದು ಹೇಳಿ ಎಲ್ಲರೂ ಹುಟ್ಟಿದ್ದು ಹೊಲೆಯಲ್ಲಿಯೇ, ಪುನ: ಕುಲವನರಸುವುದು ಕೀಳು ಪ್ರವೃತ್ತಿ ಎಂದು ಸಾರಿ ಹೇಳಿ. ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ.

ನಾವು ಒಳ್ಳೆಯ ಕೆಲಸ ಮಾಡುತ್ತೇವೆ ಆದ್ದರಿಂದ ನಾವೇ ಶ್ರೇಷ್ಠ ಕುಲವೆಂದು ಬೀಗುವವರಿಗೆ ಬಸವಣ್ಣನವರು
ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ ಎಂದು ತಿಳಿಸಿ ಹುಟ್ಟಿಗೂ-ಉದ್ಯೂಗಕ್ಕೂ ಸಂಬಧವಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಕಮ್ಮಾರನಾದವನು ಕಾಯಿಸಲೇಬೇಕು, ಮಡಿವಾಳನಾದವನು ಬಟ್ಟೆಯನ್ನು ತೊಳೆಯಲೇ ಬೇಕು, ನೇಕಾರ ಜಾತಿಯಲ್ಲಿ ಹುಟ್ಟಿದವನು ಬಟ್ಟೆಯನ್ನು ನೇಯಲೇ ಬೇಕು ಎಂಬುದು ತಪ್ಪು. ಕಾಸುವವ ಕಮ್ಮಾರ; ಬಟ್ಟೆ ತೊಳೆಯುವವ ಮಡಿವಾಳ, ಬಟ್ಟೆ ನೇಯುವವ ನೇಕಾರ, ಓದು ಬರೆದವನು ಜ್ಞಾನಿ; ಅವರವರ ಆಸಕ್ತಿ, ಅವಕಾಶ, ಪ್ರತಿಭೆಗೆ ಅನುಗುಣವಾಗಿ ಯಾರು ಯಾವುದೇ ಉದ್ಯೋಗಗಳನ್ನು ಮಾಡಬಹುದು.

ಶೆಟ್ಟಿ ಎಂಬೆನೆ ಸಿರಿಯಾಳನ?
ಮಾದಾರನೆಂಬೆನೆ ಚೆನ್ನಯನ?
ಡೋಹಾರನೆಂಬೆನೆ ಕಕ್ಕಯ್ಯನ?
ಮಡಿವಾಳನೆಂಬೆನೆ ಮಾಚಯ್ಯನ?
ಆನು ಹಾರುವನೆಂದಡೆ ಕೂಡಲಸಂಗಮದೇವ ನಗುವನಯ್ಯ.

ಸತ್ತುದನೆಳೆವನೆತ್ತೆಣ ಹೊಲೆಯ?
ಹೊತ್ತು ತಂದು ನೀವು ಕೊಲುವಿರಿ
ಹೀಗೆ ಕಾಯಕ ಜೀವಿಗಳಲ್ಲಿ ಯಾವುದೇ ಭೇದ ಮಾಡಬಾರದು, ಯಾರು ಲಿಂಗಸ್ಥಲವನ್ನು, ದಿವ್ಯ ಜ್ಞಾನವನ್ನು ಪಡೆಯುವನೋ ಅವನೇ ಕುಲಜನು.

೧) ಹೊಲಸು ತಿಂಬುವವನೇ ಹೊಲೆಯ
೨) ಲಿಂಗವಿಲ್ಲದವನೇ ಹೊಲೆಯ
೩) ದೇವ ನಿಮ್ಮ ನಂಬದವ ಹೊಲೆಯ
೪) ಹುಸಿವನೆ ಹೊಲೆಯ

ಬಸವಣ್ಣನವರು ಭವಿ ಮತ್ತು ಭಕ್ತ ಎಂಬ ಎರಡೇ ವರ್ಗಗಳನ್ನಾಗಿ ಇಡಿ ಮಾನವ ಸಮುದಾಯವನ್ನು ವಿಂಗಡಿಸುತ್ತಾರೆ.
೧) ವಿಪ್ರ ಮೊದಲು ಆಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನೊಂದೇ ಎಂಬೆ
೨) ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೊಂದೇ ಎಂಬೆ

ಪರಿವಿಡಿ (index)
*
Previousಇಷ್ಟಲಿಂಗ ಪೂಜೆ ಮೂರ್ತಿಪೂಜೆ ಅಲ್ಲಶೂನ್ಯ ಸಿದ್ಧಾಂತ (ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ)Next
*