ಲಿಂಗದ ಸ್ವರೂಪ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಲಿಂಗದ ಸ್ವರೂಪ

"ಲಿಂಗ" ಪದದ ಅರ್ಥವು ವ್ಯಾಪಕವಾಗಿದೆ. ಅದರ ಸಾಮಾನ್ಯವಾದ ಅರ್ಥವು ಚಿಹ್ನೆ, ಗುರುತು, ಕುರುಹು ಎಂದು ಹೇಳಬಹುದು. ಇದೇ ಅರ್ಥಗಳನ್ನು ಕೊಡುವ ಅನೇಕ ಪ್ರಯಾಗಗಳನ್ನು ಉಪನಿಷತ್ ಸಾಹಿತ್ಯದಲ್ಲಿರುವ ವಾಕ್ಯಗಳಿಂದ ನಾವು ಕಂಡುಕೊಳ್ಳಬಹುದು. ಈ ಕೆಳಗಿನ ಶ್ವೇತಾಶ್ವೇತರ, ಕಠ ಮತ್ತು ಮೈತ್ರಿ ಉಪನಿಷತ್ತುಗಳ ವಾಕ್ಯಗಳನ್ನು ನೋಡೋಣ.

ನ ಚೇಶಿತಾನೆವ ಚ ಸತ್ಯಲಿಂಗಮ್ [ಶ್ವೇ. VI 9]
ಅವ್ಯಕ್ತಸ್ತು ಪರಃ ಪುರುಷೋ ವ್ಯಾಪಕೋ ಲಿಂಗಏವಚ -[ಕ, Vol. 77]

ಮಹದಾದ್ಯಂ ವಿಶೇಷಾಂತಂ ಲಿಂಗಮ್ (ವೈ, VI. 10]

ಸುಪ್ರಸಿದ್ದವಾದ ಉಪನಿಷತ್ ಸಾಹಿತ್ಯದಲ್ಲಿ ಲಿಂಗವು ಹೀಗೆ ಬಳಸಲ್ಪಟ್ಟಿದೆ.

ಶಿವಪುರಾಣದಲ್ಲಿ ಲಿಂಗವು ಓಂಕಾರ ಸ್ವರೂಪವೆಂದು ವರ್ಣಿತವಾಗಿದೆ. "ಎಲ್ಲ ಸಿದ್ದಿಗಳನ್ನು ಕೊಡುವ ಓಂಕಾರವೇ ಲಿಂಗವು, ಓಂಕಾರದಲ್ಲಿಯ ಅ-ಉ-ಮ ಈ ಮೂರು ಅಕ್ಷರಗಳೇ ಅನುಕ್ರಮವಾಗಿ ಲಿಂಗದ ಪೀಠ, ಗೋಮುಖ [ಜಲಧಾರಿ] ಗೋಲಕಗಳಾಗಿ ತಿಳಿಯಲ್ಪಟ್ಟಿವೆ."
ಶಿವಪುರಾಣದಲ್ಲಿ ಇನ್ನೊಂದು ವಾಕ್ಯವನ್ನು ನೋಡಬಹುದು.

"ತದೇವ ಲಿಂಗಂ ಪ್ರಣವಂ ಸಾರ್ವಕಾಯಿಕಂ"

"ಎಲ್ಲ ಇಚ್ಛೆಗಳನ್ನು ಪೂರ್ಣಗೊಳಿಸುವ ಓಂಕಾರ ಪ್ರಣವವೇ ಲಿಂಗವು" ಓಂಕಾರವೇ ಬ್ರಹ್ಮವೆಂದು ಭಗವದ್ಗೀತೆಯು ಸಾರಿ ಹೇಳುತ್ತಿದೆ.

ಶಿವಪುರಾಣದ ಇನ್ನೊಂದು ವಾಕ್ಯವನ್ನು ಉದಾಹರಿಸಬಹುದು.
"ಲೀನಾರ್ಥಗಮಕಂ ಚಿಹ್ನಂ ಲಿಂಗಮಿತ್ಯಭಿಧೀಯತೆ"

ಲೀನ - ಅವ್ಯಕ್ತವಾಗಿರುವುದರ ಗಮಕ - ಜ್ಞಾನವನ್ನುಂಟುಮಾಡಿ ಕೊಡುವುದಕ್ಕೆ ಲಿಂಗವೆಂದು ಹೇಳಬೇಕು. ಶಿವಲಿಂಗವೆಂದರೆ ಶಿವನ ಚಿಹ್ನೆಯೆಂದೇ ತಿಳಿಯಬೇಕಲ್ಲದೆ ಅನ್ಯಥಾ ಭಾವಿಸಬಾರದು. ಲಿಂಗಕ್ಕೆ ಕೆಲವರು ಅಶ್ಲೀಲಪರ ಅರ್ಥವನ್ನು ಕೊಟ್ಟಿರುವುದು ಅಜ್ಞಾನವನ್ನೂ ಅಸೂಯಾ ಭಾವನೆಯನ್ನು ವ್ಯಕ್ತಪಡಿಸುವುದಲ್ಲದೆ, ಸಂಶೋಧಕನ ನಿರ್ಮಲ ದೃಷ್ಟಿ ಅಲ್ಲಿ ಗೋಚರವಾಗದು.

'ಲಿಂಗ'ವೆಂದರೆ ಜನನೇಂದ್ರಿಯವೆಂದು ಲಿಂಗಪೂಜಕರೆಂದರೆ ಜನನೇಂದ್ರಿಯಗಳನ್ನು ಕುರುಹುಗೊಳಿಸಿ ಪೂಜಿಸುವವರೆಂದು ಕೆಲವು ಪಾಶ್ಚಿಮಾತ್ಯರು ವಿವರಿಸಿದ್ದಾರೆ. ಶೈವವಿರೋಧಿ ವೈಷ್ಣವ ಸಂಸ್ಕೃತಿಯ ಕೆಲವರೂ ಇಂತಹ ಅವಹೇಳನಕರ ವ್ಯಾಖ್ಯಾನ ಮಾಡಿದ್ದಾರೆ.

"ಲಿಂಗಂ ಪರಮಾತ್ಮ ಚಿಹ್ನಂ" ಎಂದು ಸಂಹಿತೆಯು ಪ್ರತಿಪಾದಿಸುತ್ತದೆ. 'ಲಿಂಗ' ಎಂದರೆ ಪರಮಾತ್ಮ, ಪರಬ್ರಹ್ಮ ಎಂಬುದು ಒಂದು ಅರ್ಥ, ಲಿಂಗ ಎಂದರೆ ಕುರುಹು ಅಥವಾ ಚಿಹ್ನೆ ಎಂದು ಮತ್ತೊಂದು ಅರ್ಥ. ಜನನೇಂದ್ರಿಯ ಎಂತಲೂ ಅರ್ಥವಿದೆ. ಸೈಂಧವ ಎಂದರೆ ಉಪ್ಪು, ಕುದುರೆ, ಅತಿ ಉದ್ದನೆ ಮನುಷ್ಯ ಎಂದೆಲ್ಲ ಅರ್ಥವುಂಟು. ಆದರೆ ಎಲ್ಲಿ ಯಾವ ಅರ್ಥ ಮಾಡಬೇಕು ಎಂಬ ಬಗ್ಗೆ ವಿಮರ್ಶಾಪ್ರಜ್ಞೆ ಇರಬೇಕು. ಊಟಕ್ಕೆ ಕುಳಿತು ಸೈಂಧವವನ್ನು ತಾ ಅಂದಾಗ ಕುದುರೆಯನ್ನು ತರಬಾರದು. ಬಟ್ಟೆಬರೆಯನ್ನು ಹಾಕಿಕೊಂಡು ಸಿದ್ದವಾಗಿ, ಚಾಕು ತೆಗೆದುಕೊಂಡು ಹೊರಗೆ ನಿಂತು ಸೈಂಧವವನ್ನು ತಾ ಎಂದಾಗ ಉಪ್ಪನ್ನು ತರಬಾರದು. ಹಾಗೆ 'ಲಿಂಗ' ಪದದ ಅರ್ಥವನ್ನೂ, ಸಂದರ್ಭದ ಹಿನ್ನೆಲೆಯನ್ನು ಅರಿತು ವ್ಯಾಖ್ಯಾನ ಮಾಡಬೇಕೇ ವಿನಾ ಮನಸ್ಸಿಗೆ ಬಂದಂತೆ ಅಲ್ಲ.

ಸಾಮಾನ್ಯವಾಗಿ ಲೈಂಗಿಕತೆಯ (Sex Instinct) ಪ್ರವೃತ್ತಿಯನ್ನು ಎಲ್ಲೆಡೆಯಲ್ಲೂ ಕಾಣುವ ಒಂದು ಮನೋವೈಪರೀತ್ಯ ಸ್ಥಿತಿಯುಳ್ಳ ಜನರುಂಟು, ಕಾಪಾಲಿಕರನ್ನು ಈ ವರ್ಗದಲ್ಲಿ ಸೇರಿಸಬಹುದು. ಈ ಜನರು ಅಥವಾ ಇಂಥ ಜನರು ವಿಕೃತ ಕಾಮವನ್ನು ತೃಪ್ತಿಪಡಿಸಿಕೊಳ್ಳಲು, ಸಮರ್ಥಿಸಿಕೊಳ್ಳಲು ಧರ್ಮ-ದೇವರು-ಯಾಗಗಳೆಲ್ಲವನ್ನೂ ಬಳಸಿ ಕೊಳ್ಳುವರು. ಇಂಥವರು ಅವ್ಯಕ್ತವಾಗಿರುವ ಪರಮಾತ್ಮನ ಜ್ಞಾನವನ್ನುಂಟು ಮಾಡಿಕೊಡುವ ಸಾಧನ 'ಲಿಂಗ' ಎಂದಾಗಲೀ, ಲಿಂಗವೆಂದರೆ ಪರಬ್ರಹ್ಮನೆಂದಾಗಲೀ ಅರಿಯದೆ, ಬೋಧಿಸದೆ ವಿಪರೀತಾರ್ಥಗಳನ್ನು ಮಾಡುವ ಸಾಧ್ಯತೆಯುಂಟು. ಅಂಥವರ ಮಾತನ್ನು ನಾವು ಶಾಸ್ತ್ರವೆಂದು ಪರಿಗಣಿಸಲಾಗದಷ್ಟೇ.

ಲಿಂಗಾಯತ ಧರ್ಮದಲ್ಲಿ "ಲಿಂಗ" ಪದ ಬಳಕೆ

ವಚನ ವಾಙ್ಮಯದಲ್ಲಿ ಪರಶಿವ, ಶಿವ, ಲಿಂಗ ಮುಂತಾದ ಎಲ್ಲ ಪದಗಳು ಪರಮಾತ್ಮನನ್ನು ಸಂಕೇತಿಸುತ್ತವೆ. 'ಶಿವ' ಶಬ್ದವನ್ನು ವಚನಕಾರರು ಬಳಸಿಕೊಂಡಿರುವರಾದರೂ ಅವರು ಹೆಚ್ಚು ಒತ್ತು ಕೊಟ್ಟು, ಆಸಕ್ತಿವಹಿಸಿ ಬಳಸಿಕೊಂಡಿರುವುದು "ಲಿಂಗ" ಪದವನ್ನು, ವಚನ ವಾಙ್ಮಯದ ದೃಷ್ಟಿಯಲ್ಲಿ, ಲಿಂಗಾಯತ ಧರ್ಮ, ತತ್ವಶಾಸ್ತ್ರಗಳಲ್ಲಿ "ಲಿಂಗ"ದ ಅರ್ಥವ್ಯಾಪ್ತಿ ನೋಡೋಣ.

"ಲಿಂಗ"-ಸಂಸ್ಕೃತ ಪದ, ಇದನ್ನು ಮಗ್ಗೆಯ ಮಾಯಿದೇವರು ತಮ್ಮ ಶಿವಾನುಭವ ಸೂತ್ರದಲ್ಲಿ ಹೀಗೆ ವ್ಯಾಖ್ಯಾನಿಸುತ್ತಾರೆ :

ಲೀಯತೆ ಗಮ್ಯತೇಯತ್ರ ಯೇನ ಸರ್ವಂ ಚರಾಚರಂ
ತದೇ ತಲ್ಲಿಂಗ ಮಿತ್ಯುಕ್ತಂ ಲಿಂಗತತ್ವ ಪರಾಯಣಿ:

ಈ ತೋರುವ ಸಚಠಾಚರ ಸೃಷ್ಟಿಯೆಲ್ಲವೂ ಯಾವುದರಿಂದ ಹೊರಹೊಮ್ಮಿ, ಎಲ್ಲಿ ಲೀಲೆಯಾಡಿ, ಕೊನೆಗೆ ಯಾವುದರಲ್ಲಿ ಲಯವಾಗುವದೋ ಅದು ಲಿಂಗವೆಂದು ಮಗ್ಗೆಯ ಮಾಯಿದೇವರು ಲಿಂಗಕ್ಕೆ ನಿರ್ವಚನ ಮಾಡಿದ್ದಾರೆ . ತೋರುವ ತೋರಿಕೆಯೆಲ್ಲದಕ್ಕೂ ಆಧಾರಭೂತವಾಗಿ, ಅದರ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣ ಕರ್ತೃವಾಗಿ ಇರುವ ಅವ್ಯಕ್ತವಾದ ಚೈತನ್ಯವೇ ಲಿಂಗವೆಂದು ಹೇಳಬಹುದು.

ಲಿಕಾರವೇ ಶೂನ್ಯ, ಬಿಂದುವೇ ಲೀಲೆ
ಗಕಾರವೇ ಚಿತ್ತು. ಈ ತ್ರಿವಿಧದೊಳಗದೆ.
ಲಿಂಗವೆಂಬ ಸಕೀಲ, ಅದರ ಸಂಚವನಾವಾತಬಲ್ಲ
ಆತನೇ ಲಿಂಗಸಂಗಿ, ಕೂಡಲಚನ್ನ ಸಂಗಮದೇವಾ

ಲಿಂಗಾನುಭಾವಿಗಳ: ಶ್ರೀಚರಣಕ್ಕೆ ನಮೋ ನಮೋ ಎಂಬೆ ! -ಚನ್ನಬಸವಣ್ಣ. ೭೮೭

ಚಿತ್ ಚೈತನ್ಯವೇ ಗಮಿಸಿ ಜಗತ್ ಚೈತನ್ಯವಾಗಿ ಸೃಷ್ಟಿಯಾಯಿತ್ತಾಗಿ ಗಕಾರವೇ ಚಿತ್ತು ಎಂಬುದಾಗಿಯೂ, ಆ ಮಧ್ಯದ ಚಿದ್ಭಂದುವೇ ಆ ಚಿತ್ ಚೈತನ್ಯಕ್ಕೆ ಅಂಗವಾಗಿ ಲೀಲಾಸ್ಟಿತಿಯ ನಟಿಸುತ್ತಿಹುದಾಗಿ, ಬಿಂದುವೆ ಲೀಲೆಯೆಂದೂ, ಲಿಕಾರವೇ ಲಯವನೆಯ್ದಿಸಿ ಸರ್ವಶೂನ್ಯ ಮಾಡುವುದಾಗಿ ಲಿಕಾರವೇ ಶೂನ್ಯವೆಂದೂ ಹೀಗೆ ಜಗದುತ್ಪತ್ತಿ ಸ್ಥಿತಿಲಯಗಳು ಯಾವುದರಿಂದ ಆಗುವವೋ ಅದುವೇ ಲಿಂಗವೆಂದು ಲಿಂಗ ಶಬ್ದಕ್ಕೆ ನಿರ್ವಚನ ಮಾಡಿದ್ದಾರೆ: ಮತ್ತು ಅಂಥ ಲಿಂಗದ ಮರ್ಮವನರಿದು ಆಚರಿಸುವ ಲಿಂಗಾನುಭಾವಿಗಳಿಗೆ ಶರಣು ಮಾಡಿದ್ದಾರೆ ಚೆನ್ನಬಸವಣ್ಣನವರು.

ಲಿಂಗವೆಂಬುದು ಪರಾಶಕ್ತಿಯುಕ್ತ,
ಲಿಂಗವೆಂಬುದು ಪರಶಿವನ ನಿಜದೇಹ,
ಲಿಂಗವೆಂಬುದು ಪರಶಿವನ ಘನತೇಜ,
ಲಿಂಗವೆಂಬುದು ಪರಶಿವನ ನಿರತಿಶಯಾನಂದಸುಖ,
ಲಿಂಗವೆಂಬುದು ಪರಶಿವನ ಪರಮಜ್ಞಾನ,
ಲಿಂಗವೆಂಬುದು ಪರಶಿವನು ತಾನು,
ಲಿಂಗವೆಂಬುದು ಷಡಧ್ವಮಯ ಜಗಜ್ಜನ್ಮಭೂಮಿ ತಾನು,
ಲಿಂಗವೆಂಬುದು ಅಖಂಡಿತ ಅಭೇದ್ಯ ಪಂಚಸಂಜ್ಞೆ ತಾನು.
ಲಿಂಗವೆಂಬುದು ಹರಿಬ್ರಹ್ಮರ ನಡುವೆ ನೆಗಳ
ಜ್ಯೋತಿರ್ಮಯಲಿಂಗ, ಶ್ರುತಿಃ "ಆಲಯಂ
ಸರ್ವಭೂತಾನಾಂ ಲಯಾನಾಮ್ ಲಿಂಗ ಮುಚ್ಯತೆ"
ಎಂದುದಾಗಿ
ಇದು ಲಿಂಗದ ಮರ್ಮ ಉರಿಲಿಂಗ ಪೆದ್ದಿಪ್ರಿಯ
ವಿಶ್ವೇಶ್ವರ ಲಿಂಗದೊಳಿಂತು ತಿಳಿಯಬಲ್ಲಾತನೆ ಬಲ್ಲವನು. -ಉರಿಲಿಂಗಪೆದ್ದಿ, ವ.ಸಾ.ಸಂ.ಪು. ೨೨
"ಲಿಂಗ" ಪದದ ಬಳಕೆಯನ್ನು ವೈವಿಧ್ಯಮಯ ಅರ್ಥಗಳೊಡನೆ ಮಾಡಬಹುದೆಂದು ಉರಿಲಿಂಗ ಪೆದ್ದಿ ಗಳು ಅಭಿಪ್ರಾಯ ಪಡುತ್ತಾರೆ. "ಲಿಂಗ"ವು ಪರಾಶಕ್ತಿ ಯುಕ್ತನಾದ ಪರಮಾತ್ಮನನ್ನು ಸಂಕೇತಿಸುತ್ತದೆ. ನಿರಾಕಾರ ದೇವನ ನಿಜದೇಹ ಅಥವಾ ಸಾಕಾರದ ಸಂಕೇತ. ಪರಮಾತ್ಮನು ಪ್ರಕಾಶ, ಆನಂದ, ಜ್ಞಾನಗಳ ತವರು ಎನ್ನುವುದನ್ನೂ ಈ ಪದವು ಪ್ರತಿನಿಧಿಸುತ್ತದೆ. ಲಿಂಗವೆನ್ನುವುದು ಪರಶಿವನಿಗೇ. ಇದು ಷಡ್ತತ್ವಗಳಿಂದ ಕೂಡಿದ ಜಗತ್ತಿಗೆ ಜನ್ಮಭೂಮಿ. ಅಂದರೆ ಲೋಕವನ್ನು ಹೆರುವ ಮಹಾಗರ್ಭ, ಪರಮಾತ್ಮನು ಹರಿ, ಹರರನ್ನೂ ಮೀರಿದ ಜ್ಯೋತಿ ಸ್ವರೂಪನು. ಸಮಸ್ತ ಜಗತ್ತು ಲಯವಾಗಲು ಇರುವ ಗಮ್ಯವು ಮತ್ತು ಸಚರಾಚರ ವಸ್ತುಗಳಿಗೆಲ್ಲ ಆಲಯವು.

ಹೀಗೆ "ಲಿಂಗ" ಪದವು ಪರಮಾತ್ಮ ವಾಚಕ, ಪರಶಿವ ಸೂಚಕ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಲಿಂಗವೆಂಬುದು ಸರ್ವಕಾರಣ ನಿರ್ಮಲ,
ಲಿಂಗವೆಂಬುದು ಸಚ್ಚಿದಾನಂದ ನಿತ್ಯಪರಿಪೂರ್ಣ.
ಲಿಂಗವೆಂಬುದು ಸರ್ವಲೋಕೋತ್ಪತ್ತಿಗೆ ಕಾರಣ,
ಲಿಂಗವೆಂಬುದು ಸರ್ವತ ಪೂರಣ ನಿಜ ಚೈತನ್ಯವು.
ಲಿಂಗವೆಂಬುದು ಜನ್ಮವಾರಿಧಿಯ ದಾಂಟಿಸುವ ಭೈತ್ರವು;
ಲಿಂಗವೆಂಬುದು ಶರಣರ ಹೃದಯದಲ್ಲಿ ಬೆಳಗುವ
ಜ್ಯೋತಿರ್ಮಯ ಲಿಂಗವು. ಇಂತೀ ಲಿಂಗದ ಮರ್ಮವನರಿದವನೆ
ಅರಿದವನು ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ..

ಲಿಂಗ' ಅರ್ಥಾತ್ ಪರಮಾತ್ಮನು ಸರ್ವಕಾರಣ ನಿರ್ಮಲನು. ಅಂದರೆ ತಾನು ವಿಕಾರಕ್ಕೊಳಗಾಗದೆಯೇ ಎಲ್ಲವನ್ನೂ ಸೃಷ್ಟಿಸಬಲ್ಲ; ಎಲ್ಲಕ್ಕೂ ಆದಿ ಕಾರಣವಾದ ಮೂಲಶಕ್ತಿ. ಅದು ಸತ್-ಚಿತ್-ಆನಂದ-ನಿತ್ಯ-ಪರಿಪೂರ್ಣ ಲಕ್ಷಣಗಳಿಂದ ಕೂಡಿದುದು; ಸಕಲ ತತ್ವಗಳಿಗೆ ಆಶ್ರಯೀಭೂತವಾದುದು, ಚೈತನ್ಯ ಸ್ವರೂಪವು. ಇದು ಪ್ರಕಾಶ ಸ್ವರೂಪವು. ಮಾತ್ರವಲ್ಲ ಹೃದಯ ಕಮಲದಲ್ಲಿ ಅಂಶರೂಪದಲ್ಲಿ ಆತ್ಮವಾಗಿ ನೆಲೆಸಿರುತ್ತದೆ.

"ಜನ್ಮವಾರಿಧಿಯ ದಾಂಟಿಸುವ ಧೈತ್ರ" ಎಂಬಲ್ಲಿ ಲಿಂಗ ಪದವು ಉಪಾಸ್ಯ ವಸ್ತುವಾದ ಇಷ್ಟಲಿಂಗವನ್ನು ನಿರ್ದೇಶಿಸುತ್ತದೆ. ಮಾನವ ಜನ್ಮವೆಂಬ ಭವಸಾಗರವನ್ನು ದಾಟಲು ಇದು ಒಂದು ನಾವೆ ಎಂಬುದಾಗಿ ಪ್ರತಿಪಾದಿಸಲ್ಪಟ್ಟಿದೆ. ಈ ಮರ್ಮವನ್ನರಿತು ನಡೆದಾಗಲೇ ಓರ್ವನು ಶಿವಾನುಭಾವಿಯಾಗಬಲ್ಲ ಎನ್ನುತ್ತಾರೆ ಸ್ವತಂತ್ರ ಸಿದ್ಧಲಿಂಗೇಶ್ವರರು.
ಹೀಗೆ ಎಲ್ಲ ವಚನಕಾರರೂ, ಪರಾತ್ಮರ ವಸ್ತುವನ್ನು ಲಿಂಗವೆಂದೂ, ಶಿವನೆಂದೂ, ಬಯಲು, ನಿರ್ಬಯಲೆಂದೂ, ಶೂನ್ಯ-ನಿಶೂನ್ಯವೆಂದೂ ಕರೆದಿದ್ದಾರೆ. ಈ ಬಯಲು ಅಥವಾ ಶೂನ್ಯವು ಏನೂ ಇಲ್ಲದ್ದು (ಬೌದ್ದರ void) ಎಂಬರ್ಥದಲ್ಲಿ ಬಳಸಿಲ್ಲವೆಂಬುದನ್ನು ಗಮನಿಸಬೇಕು. ಯಾವ ದ್ವಂದ್ವಗಳೂ ಇಲ್ಲದೆ, ತಾನೇ ತಾನಾಗಿರುವ ಅತೀತವಾದ ಶುದ್ಧ ಇರುಹುಸತ್ ಎಂಬರ್ಥದಲ್ಲಿ ಉಪಯೋಗಿಸಿದ್ದಾರೆ. ಇಲ್ಲದಂತೆ ಇಲ್ಲದುದು ಬೌದ್ದರ ಶೂನ್ಯವಾದರೆ, ಇಲ್ಲದಂತೆ ಇರುವುದು ಲಿಂಗಾಯತ ಧರ್ಮದ ಶೂನ್ಯವು. ಅದು ಪರಿಪೂರ್ಣ; ಅದನ್ನು ಅಂಗಳಕ್ಕಳವಡಿಸಿಕೊಳ್ಳುವುದೇ ಶೂನ್ಯದ ಸಂಪಾದನೆಯು, ಅದೇ ಲಿಂಗಾಯತ ಧರ್ಮದ, ಯಾಗದ ಗುರಿಯು ಕೂಡ.

ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗ;
ಆದಿ ಮಧ್ಯಾವಸಾನಗಳಿಲ್ಲದ ಸ್ವತಂತ್ರ ಲಿಂಗ;
ನಿತ್ಯ ನಿರ್ಮಳ ಲಿಂಗ;
ಅಯೋನಿ ಸಂಭವನಯ್ಯಾ, ನಮ್ಮ ಕೂಡಲ ಸಂಗಮದೇವರು.
-ಬ.ಷ.ಹೆ.ವ. 1237.

ಬಸವಣ್ಣನವರು "ಲಿಂಗ" ಎಂಬ ಪದದ ತಾತ್ವಿಕ ಅರ್ಥವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಪರಮಾತ್ಮನು ಅಮೂಲ್ಯನು; ಬೆಲೆ ಕಟ್ಟಲಾರದವನು; ಯಾವುದೇ ಲೌಕಿಕ ಪ್ರಮಾಣಗಳಿಂದ ಸಾಧಿಸಿ ತೋರಿಸದ ಅಪ್ರಮಾಣನು; ಪಂಚೇಂದ್ರಿಯಗಳ ಅನುಭವಕ್ಕೆ ನಿಲುಕದ ಅಗೋಚರನು, ಹುಟ್ಟು ಅವಸಾನ ಇಲ್ಲದ, ಪರಾವಲಂಬಿಯಲ್ಲದ ಸ್ವತಂತ್ರನು, ನಾಶವಿಲ್ಲದ ನಿತ್ಯನು; ಕಾಮ ಕ್ರೋಧಾದಿಗಳೇನೂ ಇಲ್ಲದ ನಿರ್ಮಲನು, ಅವನು ತಾಯಿತಂದೆಗಳಲ್ಲಿ ಹುಟ್ಟಿದವನಲ್ಲ, ಅಸಂಭವ, ಅಜಾತ. ಹೀಗೆ "ಲಿಂಗ" ಪದವು ನಿರ್ದೆಶಿಸುವುದು ದೇವರನ್ನು, ಪರಾತ್ಪರ ಪರಬ್ರಹ್ಮವನ್ನು.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಉಪಾಸನೆ ಬೆಳೆದು ಬಂದ ಬಗೆಇಷ್ಟಲಿಂಗ-ಚುಳುಕಾದ ದೇವNext
*