ಇಷ್ಟಲಿಂಗದ ಸ್ಥಾನ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗದ ಸ್ಥಾನ

ಲಿಂಗಾಯತ ಧರ್ಮದಲ್ಲಿ ಮುಖ್ಯ ಧಾರ್ಮಿಕ ಲಾಂಛನಗಳೆಂದರೆ ಇಷ್ಟ ಲಿಂಗ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಮತ್ತು ಪ್ರಸಾದ. ಪಾದೋದಕ ಪ್ರಸಾದಗಳು ಒಳಗೆ ಸ್ವೀಕರಿಸುವಂತಹವು. ಮಂತ್ರವು ಅಂತರಂಗದಲ್ಲಿ ಜಪಿಸಲ್ಪಡುವಂತಹುದು. ದೇಹದ ಮೇಲೆ ಸ್ಪಷ್ಟವಾಗಿ ಕಾಣುವಂತಹವು ಎಂದರೆ ವಿಭೂತಿ, ರುದ್ರಾಕ್ಷಿ ಮತ್ತು ಇಷ್ಟಲಿಂಗ : ವಿಭೂತಿ ಮತ್ತು ರುದ್ರಾಕ್ಷಿಗಳು ಉಳಿದೆಲ್ಲ ಶಿವಭಕ್ತರು ಧರಿಸಲ್ಪಡುವಂತಹವು ಆದರೆ, ಲಿಂಗಾಯತ ಧರ್ಮದ ಅನುಯಾಯಿಗಳಿಗೆ ವಿಶೇಷವಾದ, ವಿಶಿಷ್ಟವಾದ ಲಾಂಛನ ಇಷ್ಟಲಿಂಗವೊಂದೆ ! ಉಳಿದ ಧಾರ್ಮಿಕ ಲಾಂಛನಗಳಾದ ವಿಭೂತಿ, ರುದ್ರಾಕ್ಷಿ ಮುಂತಾದುವು ಪೋಷಕವಾದುವು ಮಾತ್ರ. ಹೀಗಾಗಿಯೇ ಈ ಇಷ್ಟಲಿಂಗಧಾರಿಗಳ ಧರ್ಮಕ್ಕೆ ಲಿಂಗಾಯತ ಧರ್ಮ, ಲಿಂಗವಂತಧರ್ಮ ಎಂದು ಹೆಸರು. ಬಳಕೆಯಲ್ಲಿರುವ ಬೇರೆ ಕೆಲವು ಸಮಾಜ ವಾಚಕ ಪದಗಳೆಂದರೆ ವೀರಶೈವಧರ್ಮ, ಶರಣಧರ್ಮ ಮುಂತಾದುವು. ಈ ಪದಗಳು ಸಮಾಜದಲ್ಲಿ ರೂಢಿಗತವಾಗಿರುವುದರಿಂದ ಬಳಸಲ್ಪಡುವವೇ ವಿನಾ, ಹೆಚ್ಚು ತಾತ್ವಿಕ ಅರ್ಥವನ್ನು ಒಳಗೊಂಡ ಪದಗಳಲ್ಲ.

1. ವೀರಶೈವ :

ವಿದ್ಯಾಯಾಂ ಶಿವರೂಪಾಯಾಂ ರಮಂತೇ ಯೇ ವಿಶೇಷತಃ
ತಸ್ಮಾದೇತೇ ಮಹಾಭಾಗ ವೀರಶೈವ ಇತಿ ಸ್ಮೃತಾಃ ||
ಸಿದ್ಧಾಂತಶಿಖಾಮಣಿ, ಪಂಚಮ ಪರಿಚ್ಛೇದ-೧೫
ಶಿವರೂಪವಾದ ವಿದ್ಯೆಯಲ್ಲಿ ರಮಿಸುವವರು, ಅಂದರೆ ಆನಂದಿಸುವವರು ಯಾರೋ ಅವರು ವೀರಶೈವರೆಂದು ಹೇಳಲ್ಪಡುತ್ತಾರೆ.

ವೀ ಶಬೇನೋಚ್ಯತೇ ವಿದ್ಯಾ ಶಿವಜೀವೈಕ್ಯ ಬೋಧಿಕಾ | -
ತಸ್ಯಾ ರಮಂತೇ ಯೇ ಶೈವಾ ವೀರಶೈವಾಸ್ತು ತೇ ಮತಾಃ ||
-ಸಿದ್ಧಾಂತ ಶಿಖಾಮಣಿ, ಪಂಚಮ ಪರಿಚ್ಛೇದ-೧೬

“ವೀ ಶಬ್ದದಿಂದ ಶಿವಜೀವಸಾಮರಸ್ಯವನ್ನು ವಿವರಿಸುವ ವಿದ್ಯೆಯು ಹೇಳಲ್ಪಡುತ್ತದೆ. ಯಾವ ಶೈವರು ಅದರಲ್ಲಿ ಆನಂದಿಸುವರೋ ಅವರು ವೀರಶೈವರೆಂದು ತಿಳಿಯಲ್ಪಟ್ಟಿದ್ದಾರೆ.” (ವೀ, ಶಬ್ದವು ವಿದ್ಯೆಯನ್ನು ಹೇಗೆ ಸಂಕೇತಿಸುವುದೋ ಅರ್ಥವಾಗದು.)

ವೀರಶೈವ ಪದವು ಇಂದಿನ ಇಷ್ಟಲಿಂಗಧಾರಿ ಜನರಿಗೆ ಬಳಸಲ್ಪಡುತ್ತಿದ್ದರೂ, ಈ ಸಮಾಜವನ್ನು ಪ್ರತಿನಿಧಿಸುವ ಸೂಕ್ತ ಪದವಾಗದು. ಏಕೆಂದರೆ ಮೇಲಿನ ವ್ಯಾಖ್ಯಾನದ ಪ್ರಕಾರ ಶಿವರೂಪದ ವಿದ್ಯೆಯಲ್ಲಿ ರಮಿಸುವವರು ಯಾರೋ ಅವರು ವೀರಶೈವರು ಎನ್ನುವುದು ಉದಾತ್ತ ವ್ಯಾಖ್ಯಾನವಾಗಿದ್ದರೂ, ಧರ್ಮಾನುಯಾಯಿಗಳು, ಧರ್ಮಾಧಿಕಾರಿಗಳು, ಮಠಾಧಿಕಾರಿಗಳು, ಎಲ್ಲರೂ ಊಟ-ಉಪಚಾರ ಮುಂತಾದುವನ್ನು ಮಾಡುವಲ್ಲಿ, ಪಾದೋದಕ ಪ್ರಸಾದ ನೀಡುವಲ್ಲಿ, ಹೆಣ್ಣು-ಗಂಡುಗಳನ್ನು ಕೊಡುವ ಕೊಳ್ಳುವ ವ್ಯವಹಾರದಲ್ಲಿ ... “ಲಿಂಗಧಾರಣ “ಯನ್ನು ಗಮನದಲ್ಲಿ ಇಟ್ಟು ಕೊಳ್ಳುವರೇ ವಿನಾ ಶಿವರೂಪಾದ ವಿದ್ಯೆಯ ಪರಿಣತಿಯನ್ನಲ್ಲ.

ನಿಜವಾದ ಶಿವಜ್ಞಾನಿಗಳು ಬ್ರಾಹ್ಮಣರಲ್ಲಿ ಇರಬಹುದು ಶೂದ್ರರಲ್ಲಿ ಇರಬಹುದು, ಹರಿಜನರಲ್ಲಿ ಇರಬಹುದು. ಆದರೂ ಅಂಥವರೊಡನೆ ಧಾರ್ಮಿಕ - ಸಾಮಾಜಿಕ ಸಂಬಂಧವನ್ನು ಇಷ್ಟಲಿಂಗಧಾರಿಗಳು ಮಾಡದೆ ಅಂಗದ ಮೇಲೆ ಲಿಂಗವಿದ್ದವರೊಡನೆ ಮಾಡುವರು.
ಎಷ್ಟು ಅರುಹಾದರೂ ಅಂಗದ ಮೇಲೆ
ಶಿವಲಿಂಗಧಾರಣವಿಲ್ಲದಿರ್ದಡದು ಅರುಹಲ್ಲ;
ಅದು ನಮ್ಮ ಪುರಾತನರ ಮತವಲ್ಲ.
ಸಾಕ್ಷಾತ್ ಪರಮೇಶ್ವರನಾದರೂ ಆಗಲಿ,
ಅಂಗದ ಮೇಲೆ ಲಿಂಗಧಾರಣವಿಲ್ಲದಿದ್ದರೆ,
ಅವರ ಮುಖವ ನೋಡಲಾಗದು ಕಾಣಾ.
-ತೋ.ಸಿ.ವ. 176

ಆದರ್ಶ ಪತಿವ್ರತೆಯು ಮೊದಲು ಗಂಡನಿಗೆ ಭಕ್ಷ್ಯ-ಭೋಜ್ಯಗಳನ್ನು ಉಣ್ಣಿಸಿ ನಂತರ ಊಟ ಮಾಡುವಳು; ಅದೇ ರೀತಿ ನಿಜಭಕ್ತನು ಮೊದಲು ಎಲ್ಲವನ್ನೂ ಲಿಂಗಾರ್ಪಿತಮಾಡಿ, ತಾನು ಉಣ್ಣುವನು. ಆದ್ದರಿಂದ ಇಷ್ಟಲಿಂಗಕ್ಕೆ ಕೊಡದೆ ಅಂತರಂಗದಲ್ಲಿ ಪ್ರಾಣಲಿಂಗವಿದೆ ಎಂದು ಮನಸ್ಸಿಗೆ ಬಂದಂತೆ ತಿನ್ನುವವ, ಶ್ವಾನಜ್ಞಾನಿಯೇ ವಿನಾ ನಿಜ ಜ್ಞಾನಿಯಲ್ಲ.

2. ಲಿಂಗವಂತ :

ಇಷ್ಟಲಿಂಗ ಧಾರಣಿಯೇ ಈ ಧರ್ಮದ ಜೀವಾಳ. ಅನುಯಾಯಿಯನ್ನು ಕರೆಯುವ ಸೂಕ್ತಪದ ಲಿಂಗವಂತ, ಲಿಂಗಾಯತ. ಬಸವಣ್ಣನವರನ್ನು ಕುರಿತು ಹೇಳುವಾಗ ಚೆನ್ನಬಸವಣ್ಣನವರು, ಹೀಗೆ ಪದ ಪ್ರಯೋಗ ಮಾಡಿದ್ದಾರೆ.

1. ಶೀಲವಂತರೆಲ್ಲಾ ಶೀಲವಂತರಯ್ಯಾ ; ...ಕೂಡಲಚನ್ನಸಂಗಯ್ಯಾ
ಸಂಗನ ಬಸವಣ್ಣನೊಬ್ಬನೆ ಲಿಂಗವಂತ!
- ಚ.ಬ.ವ 1137
2. ಲಿಂಗ ಲಕ್ಷಣವಂತ ಬಸವಣ್ಣ, ಲಿಂಗ ಸಿರಿವಂತ ಬಸವಣ್ಣ
ಲಿಂಗ ಸೌಭಾಗ್ಯವಂತ ಬಸವಣ್ಣ.
-ಚ.ಬ.ವ. 325.
ಈ ಎಲ್ಲ ವಿಶೇಷಣಗಳಲ್ಲಿ ಒತ್ತು ಕೊಟ್ಟು ಹೇಳಿರುವ ಪದ 'ಲಿಂಗ'. ಈ ಧರ್ಮಾನುಯಾಯಿ ಲಿಂಗವಂತ.

3. ಅರ್ಪಿತ ಅನರ್ಪಿತವೆಂಬೆರಡು ಕಳೆದು
ನಿಂದಾತನನಚ್ಯ ಲಿಂಗವಂತನೆಂಬೆ.
4, ಲಿಂಗವಂತನು ಲಿಂಗವಂತರಿಗೆ ಬುದ್ದಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.
-ಬ.ಷ.ವ. ೬೫೭

ಲಿಂಗಧಾರಿಯಾದ ಒಬ್ಬ ಅನುಯಾಯಿ (ಲಿಂಗವಂತ) ಇನ್ನೊಬ್ಬ ಸಹಧರ್ಮಿಯ ಬಗ್ಗೆ ಕೋಪಗೊಂಡರೆ ಅದು ಅವನ ತಪ್ಪನ್ನು ತಿದ್ದುವ ಉದ್ದೇಶದಿಂದಲೇ ವಿನಾ, ಜೀವಹರಣ ಮಾಡುವ ಹಗೆಯಿಂದಲ್ಲ' ಎಂದು ಹೇಳುವಲ್ಲಿ 'ಲಿಂಗವಂತ' ಎಂಬ ಪದ ಈ ಧರ್ಮಾನುಯಾಯಿಗೆ ಅತ್ಯಂತ ಸೂಕ್ತ ಎಂದು ಬಳಕೆಯಾದದು ಗೋಚರವಾಗುತ್ತದೆ.

ಉದಯದ ಮುಖದಲ್ಲಿ ಲಿಂಗದರ್ಶನ
ಹಗಲಿನ ಮುಖದಲ್ಲಿ ಜಂಗಮದರ್ಶನ, ಲೇಸು, ಲೇಸು.
ಸಮಯಶೀಲ ಲಿಂಗವಂತಗೆ ಇದೇ ಪಥವು :
ಸದ್ಭಕ್ತಂಗೆ ಇದೇ ಪಥವು ಲೇಸು ಲೇಸು
ಕೂಡಲ ಚನ್ನ ಸಂಗಯ್ಯನಲ್ಲಿ ಅಚ್ಚ ಲಿಂಗೈಕ್ಯರಿಗೆ.
-ಚ.ಬ.ವ 135

ತಮ್ಮ ಧರ್ಮಕ್ಕೆ ಲಿಂಗವಂತ ಧರ್ಮವೆಂದೇ ಹೆಸರಿಟ್ಟ ಬಸವಣ್ಣನವರು ಇದರ ಮರ್ಮ ಅನ್ಯರಿಗೆ ತಿಳಿಯದು ಎಂದು ಹೇಳುವರು ಈ ವಚನದಲ್ಲಿ ;

ಅಂಗಲಿಂಗ ಸಂಗಸುಖ ಸಾರಾಯದನುಭಾವ
ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ.
-ಬ.ಷ.ಹೆ.ವ. 1174.
ಈ ಧರ್ಮದ ಅನುಯಾಯಿತ್ವ ಹುಟ್ಟಿನಿಂದ ಒದಗದೆ ಆಚರಣಿ ಯಿಂದ ಮತ್ತು ಲಿಂಗಧಾರಣಿ ಯಿಂದ ಒದಗುವ ಕಾರಣದ ಇದು ಲಿಂಗವಂತ ಧರ್ಮ. ವಚನ ಧರ್ಮದ ಪ್ರಕಾರ ಹುಟ್ಟುತ್ತ ಎಲ್ಲರೂ ಮಾನವರು, ಭವಿಗಳು, ಸಂಸ್ಕಾರದಿಂದ ಯಾರು ಬೇಕಾದರೂ ಭಕ್ತರು, ಶರಣರು ಆಗಬಲ್ಲರು. ವಿದ್ಯೆಯುಳ್ಳವನು ವಿದ್ಯಾವಂತ, ಹಣ ಹೊಂದಿದವ ಹಣವಂತ, ಬುದ್ದಿ ಇದ್ದವನು ಬುದ್ದಿವಂತ, ಶೀಲ ಉಳ್ಳವನು ಶೀಲವಂತ, ನೀತಿಯುಳ್ಳವನು ನೀತಿವಂತ. ಅದೇ ರೀತಿ ಲಿಂಗವಿದ್ದವನು ಲಿಂಗವಂತ; ಇಷ್ಟಲಿಂಗವಿಲ್ಲದವ ಅಂದರೆ ಧರಿಸದವನು ಲಿಂಗವಂತನಾಗಲಾರ: ಅವನು ಕೇವಲ ಅಂಗವಂತ.

ತಂದೆಯು ವಿದ್ಯಾವಂತನಾಗಿದ್ದು, ಮಗನು ಈ ಎ. ಹೆ. ಗು. ದವನಾಗಿ ಇದ್ದರೆ ಹೇಗೆ ವಿದ್ಯಾವಂತ ಎನ್ನಿಸಿಕೊಳ್ಳನೋ, ತಂದೆಯು ಶೀಲವಂತನಾಗಿದ್ದು, ಮಗನು ಉಡಾಳನಾಗಿದ್ದರೆ ಅಪ್ಪನ ಶೀಲವಂತಿಕೆಯ ಕಾರಣದಿಂದಲೇ ಮಗನು ಹೇಗೆ ಶೀಲವಂತ ಎನ್ನಿಸಿಕೊಳ್ಳಲಾರನೋ, ಹಾಗೆ ತಂದೆ ಲಿಂಗವಂತನಾಗಿದ್ದೂ, ಮಗನು ಲಿಂಗವನ್ನು ಧರಿಸದಿದ್ದರೆ ಅವನೂ ಲಿಂಗವಂತನಾಗಲಾರ. ಹೇಗೆ ವಿದ್ಯೆ, ನೀತಿ, ಶೀಲ, ಬುದ್ದಿ, ಹಣಗಳನ್ನು ಯಾರು ಬೇಕಾದರೂ ಗಳಿಸಿಕೊಂಡು ಆ ವಿಶೇಷಣ ಹೊಂದಬಹುದೊ ಹಾಗೆ, ಲಿಂಗವಂತತ್ವ ಗಳಿಕೆಯಂದ, ಆಚರಣೆಯಿಂದ ಬರುವುದೇ ವಿನಾ ಹುಟ್ಟಿನಿಂದಲ್ಲ, ತಾಯಿತಂದೆಯರಿಂದಲ್ಲ.

3. ಲಿಂಗಾಯತ :

ಲಿಂಗವಂತ, ಲಿಂಗಾಯತ ಇವು ಸಮಾನಾರ್ಥಕ ಪದಗಳು. "ವೀರಶೈವರನ್ನಿಗೆ 'ಲಿಂಗವಂತ' 'ಲಿಂಗಾಯತ' ಎಂಬ ಶಬ್ದಗಳಿಂದಲೂ ಸಂಬೋಧಿಸುತ್ತಾರೆ. ಲಿಂಗಾಯತ ಶಬ್ಬವೇ ಉಳಿದೆರಡು ಪದಗಳಿಗಿಂತ ಇಂದು ಹೆಚ್ಚು ಬಳಕೆಯಲ್ಲಿದೆ" ಎನ್ನುತ್ತಾರೆ ಡಾ. ಪಿ. ವಿ. ನಾರಾಯಣ್, "ಆದರೆ 'ಲಿಂಗಾಯತ' ಶಬ್ದವು ವಚನಗಳಲ್ಲೆಲ್ಲಿಯೂ ದೊರೆಯುವುದಿಲ್ಲ ; ಪ್ರಾಯಶಃ ಇದು ಈಚಿನ ಶಬ್ದ" ಎನ್ನುತ್ತಾರೆ, ಇದು ತಪ್ಪು.

ದೇಹನಾಮ ಸೊಗಸದು ಲಿಂಗಾಯತಂಗೆ
ಮಾನವನಾಮ ಸೊಗಸದು ಜಂಗಮಭಕ್ತಂಗೆ

ಎಂಬ ಚನ್ನಬಸವಣ್ಣನವರ 1244 ನೆಯ ವಚನದಲ್ಲಿದೆ. ಧನವಾನ್' ಅಂದರೆ ಧನ ಉಳ್ಳವನು, ಭಾಗ್ಯವಾನ್ ಅಂದರೆ ಸಂಪತ್ತು ಉಳ್ಳವನು ಎಂದಂತೆ ಲಿಂಗವಾನ್, ಲಿಂಗವಂತ ಎಂಬುದು ಸಹ ಲಿಂಗಾಯತವು ಸ್ವಲ್ಪ ಹೆಚ್ಚಿನ ಸಂಬಂಧವನ್ನು ಸೂಚಿಸುತ್ತದೆ. ಆಯತ ಅಂದರೆ ಸಂಬಂಧಿಸಿಕೊಳ್ಳುವುದು: ಇದರ ಧ್ವನಿಯೆಂದರೆ ಗುರುವಿನ ಮುಖಾಂತರ ಲಿಂಗವನ್ನು ಅಂಗದ ಮೇಲೆ ಸಂಬಂಧಿಸಿಕೊಳ್ಳುವುದು. ತನಗೆ ತಾನೇ ಮೈಮೇಲೆ ಧರಿಸಿದವ ಲಿಂಗವಂತನಾದರೆ, ಗುರುವಿನ ಮೂಲಕ ದೀಕ್ಷೆ-ಮಂತ್ರೋಪದೇಶಗಳಿಂದ ಇಷ್ಟಲಿಂಗವನ್ನು ಪಡೆದುಕೊಂಡವನು ಲಿಂಗಾಯತ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಗೋಳಾಕಾರದ ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸಿಕೊಂಡು ಪೂಜಿಸಲು ಹೇಳುವುದೇ ಲಿಂಗಾಯತ ಧರ್ಮ, ಕಣ್ಣಿಗೆ ಕಾಣುವ ಜಗತ್ತನ್ನು ಮಾತ್ರ ಸತ್ಯವೆಂದೊಪ್ಪಿ ಕಣ್ಣಿಗೆ ಕಾಣದ ದೇವರನ್ನು ನಂಬದೆ, ಐಹಿಕ ಮೌಲ್ಯಗಳಲ್ಲಿ ಮಾತ್ರ ನಂಬಿಕೆ ಇಡುವುದು ಲೋಕಾಯತವಾದ; ಕಣ್ಣಿಗೆ ಕಾಣುವ ಜಗತ್ತನ್ನು ಸತ್ಯವೆಂದೊಪ್ಪಿ ಕಣ್ಣಿಗೆ ಕಾಣದ, ದಿವ್ಯಾನುಭವಕ್ಕೆ ಮಾತ್ರ ಸಿಕ್ಕುವ ದೇವರನ್ನೂ ಸತ್ಯವೆಂದು ಮನ್ನಿಸಿ ಲೌಕಿಕ ಮತ್ತು ಪಾರಲೌಕಿಕ ಎರಡೂ ಮೌಲ್ಯಗಳನ್ನು ಸ್ವೀಕರಿಸುವದು ಲಿಂಗಾಯತ ಧರ್ಮ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಇಷ್ಟಲಿಂಗ ಜಾತ್ಯತೀತತೆಯ ಕುರುಹುಇಷ್ಟಲಿಂಗದ ಉಗಮNext
*