ಲಿಂಗಾಂಗಯೋಗದ ಪ್ರಮುಖ ಲಕ್ಷಣಗಳು

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

(ಶಿವ) ಲಿಂಗಾಂಗಯೋಗದ ಪ್ರಮುಖ ಲಕ್ಷಣಗಳು

ಲಿಂಗದೀಕ್ಷೆಯ ಮುಖಾಂತರ ಇಷ್ಟಲಿಂಗವನ್ನು ಪಡೆದಾದಮೇಲೆ ಇನ್ನು ಶಿವಯೋಗಾಭ್ಯಾಸದಲ್ಲಿ ಶರಣನು ನಿರತನಾಗುವನು. ಇಂಥ ಶಿವಯೋಗದ ಮುಖ್ಯ ಲಕ್ಷಣಗಳೇನು; ಸಾಧನೆಯ ಹಂತಗಳಾವುವು ಎಂಬ ಬಗ್ಗೆ ಈಗ ಪ್ರಸ್ತಾಪಿಸುವೆವು.

'ಯುಜ್'" ಎನ್ನುವ ಧಾತುವಿನಿಂದ 'ಯೋಗ' ಎಂಬ ಪದವು ಉತ್ಪತ್ತಿಯಾಗಿದೆ. ಯುಜ್ ಧಾತುವಿನ ಮೂಲಾರ್ಥ 'ಕೂಡು', ಸಂಯೋಗ, ಒಂದಾಗು, ಬೆರೆ ಎಂಬುದೇ ಆಗಿದೆ. ಸೇಶ್ವರವಾದಿ ಧರ್ಮ ಮತ ಸಿದ್ಧಾಂತಗಳ ಪ್ರಕಾರ ಭಕ್ತ- ಭಗವಾನರ ಕೂಟವೇ ಯೋಗ; ಜೀವ-ಶಿವರ ಐಕ್ಯವೇ, ಒಡವೆರೆದು ಒಂದಾಗುವುದೇ ಯೋಗವು; ಎರಡನೆಯದಾಗಿ ಯಾವ ಸಾಧನವು ಭಕ್ತ-ಭಗವಾನ್, ಜೀವ-ಶಿವ, ಅಂಗ-ಲಿಂಗರನ್ನು ಕೂಡಿಸಬಲ್ಲುದೋ ಅಂಥ ಸಾಧನವೇ ಯೋಗ, ಎಲ್ಲ ಧರ್ಮಗಳ ಸಿದ್ಧಾಂತಗಳು (metaphysical theories) ಒಂದು ಧೈಯವನ್ನು ಗುರುತಿಸಿಕೊಡುತ್ತವೆ. ಆ ಧೈಯವನ್ನು ತಲ್ಪಲು ವಿವಿಧ ಮಾರ್ಗಗಳುಂಟು; ಮತ್ತು ಆ ಮಾರ್ಗದಲ್ಲಿ ಸಾಗಿ ಧೈಯ ವನ್ನು ತಲುಪಲು ವಿವಿಧ ವಾಹನಗಳೂ ಬೇಕಷ್ಟೆ. ಸೈದ್ಧಾಂತಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ಸಾಧನೆಯು ನಿರ್ಧಾರವಾಗುವುದು.

ಉದಾಹರಣೆಗೆ, ಸಾಂಖ್ಯ ದರ್ಶನದ ಪ್ರಕಾರ 'ದೇವರು' ಎಂಬ ಕರ್ತನೇ ಇಲ್ಲ. ಇರುವುದು ಪ್ರಕೃತಿ ಮತ್ತು ಪುರುಷ. ಆದ್ದರಿಂದ ಅಲ್ಲಿ ಯೋಗದ ಗುರಿ ಪ್ರಕೃತಿಯಿಂದ ಪುರುಷನ ಬಿಡುಗಡೆ. ದೈತ , ತತ್ವವನ್ನು ಒಪ್ಪುವ ಸಿದ್ದಾಂತಗಳ ಪ್ರಕಾರ ಪರಮಾತ್ಮನು ಪರಂಧಾಮದಲ್ಲಿರುವನು; ಜೀವಿಯು ಸಾಲೋಕ್ಯ, ಸಾಮೀಪ್ಯ ಮುಂತಾದ ಹಂತಗಳ ಮೂಲಕ ಮೋಕ್ಷ ಹೊಂದುವನು. ಶರಣರ ಶಿವಯೋಗದ ಪ್ರಕಾರ ಯಾವ ಮೂಲದಿಂದ ಜೀವವು ತನ್ನ ಪ್ರಯಾಣವನ್ನು ಆರಂಭಿಸಿದೆಯಾ ಆ ಮೂಲವನ್ನು ಸೇರುವುದೇ ಗುರಿಯಾದ ಕಾರಣ ನದಿಯು ಸಮುದ್ರವನ್ನು ಬೆರೆತಂತೆ ಜೀವವು ದೇವನನ್ನು ಬೆರೆಯಬೇಕು; ಉರಿಯುಂಡ ಕರ್ಪೂರದಂತೆ ಅದು ಶೇಷರಹಿತವಾಗಿ ದೇವನಲ್ಲಿ ಸಮರಸವಾಗಬೇಕು.

ಭಾರತದಲ್ಲಿ ಸಾಂಪ್ರದಾಯಿಕವಾಗಿ ಐದು ಯೋಗಗಳು, ಸುಧಾರಣಾ ಧರ್ಮಗಳು ಪ್ರತಿಪಾದಿಸಿದ ಹಲವಾರು ಯೋಗಗಳು ಬೆಳೆದು ಬಂದಿವೆ. ಆತ್ಮನಲ್ಲಿ ಮೂಲಭೂತವಾಗಿ ಐದು ಶಕ್ತಿಗಳಿವೆ. ಆತ್ಮನು ಜಡ ಶರೀರದಲ್ಲಿ ನೆಲೆಗೊಳ್ಳುತ್ತಲೇ ಈ ಶಕ್ತಿಗಳ ಚಟುವಟಿಕೆ ತೋರಿಬರುತ್ತದೆ; ಆ ಶಕ್ತಿಗಳು ಐದು; ಕ್ರಿಯಾಶಕ್ತಿ, ಪ್ರಾಣಶಕ್ತಿ, ಜ್ಞಾನಶಕ್ತಿ, ಬುದ್ಧಿಶಕ್ತಿ, ಮತ್ತು ಭಾವನಾಶಕ್ತಿ, ಕ್ರಿಯಾಶಕ್ತಿಯ ವಿಕಾಸದ ಮೇಲೆ, ಅವಲಂಬನೆಯ ಮೇಲೆ ರೂಪು ಗೊಂಡುದು ಹಠಯೋಗ (ಮತ್ತು ಕುಂಡಲಿನಿ ಯೋಗ): ಧ್ಯಾನ ಶಕ್ತಿಯ ತಳಹದಿಯ ಮೇಲೆ ರೂಪುಗೊಂಡುದು ರಾಜಯೋಗ ಅಥವಾ ಧ್ಯಾನಯೋಗ; ಬುದ್ದಿ (ಅಥವಾ ಚಿಂತನ) ಶಕ್ತಿಯ ಮೇಲೆ ರೂಪುಗೊಂಡುದು ಜ್ಞಾನಯೋಗ, ಭಾವನಾಶಕ್ತಿಯ ಮೇಲೆ ರೂಪುಗೊಂಡುದು ಭಕ್ತಿಯೋಗ, ಗುರಿಯ ಕಡೆಗೆ ಸಾಗುವ ದಾರಿಯಂತೆ ಈ ಯೋಗಗಳಾದರೆ ಬುದ್ದಿ ಶಕ್ತಿ, ಧ್ಯಾನಶಕ್ತಿ ಮುಂತಾದವು ಗುರಿಯನ್ನು ತಲುವ ವಾಹನಗಳಿದ್ದಂತೆ.

ಈ ಎಲ್ಲ ಶಕ್ತಿಗಳ ಆಶ್ರಯಸ್ಥಾನ, ಕೇಂದ್ರವು ಆತ್ಮವೇ ಆಗಿದೆ. ಈ ಎಲ್ಲ ಶಕ್ತಿಗಳು, ವಿಷಯಾಸಕ್ತಿಯ ಕಡೆಗೆ ಮನಸ್ಸನ್ನು ತೊಡಗಿಸಿರುವ ಕಾರಣ, ವ್ಯರ್ಥವಾಗಿ ಹೋಗುತ್ತಿವೆ. ಇವೇ ದೈವೀಮುಖವಾಗಿ ಹರಿದಾಗ, ಅಂದರೆ ಯೋಗದ ಮೂಲಕ ಉದಾತ್ತೀಕರಣಗೊಂಡಾಗ ಸಾರ್ಥಕವಾಗುತ್ತವೆ. ಅಷ್ಟೇ ಅಲ್ಲ: ಮಾನವನ ಮೋಕ್ಷಕ್ಕೆ ಸಹಾಯಕವಾಗುತ್ತವೆ. ಯಾವುದಾದರೊಂದು ಪಥ, ವಾಹನವನ್ನು ಹಿಡಿದು ಒಂದೇ ಧೈಯದ ಕಡೆಗೆ ಹೊರಟಾಗ, ಅದನ್ನು ತಲುಪಲು ಸಾಧ್ಯವಷ್ಟೆ ? ಉದಾಹರಣಿಗೆ ಐದು ರಸ್ತೆಗಳ ಕೂಟವಾದ ಒಂದು ವೃತ್ತವಿದೆ ಎಂದುಕೊಳ್ಳೋಣ. ಓರ್ವನು ಕಾರಿನಲ್ಲಿ ಒಂದು ರಸ್ತೆಯಿಂದ ಬರುವನು; ಮತ್ತೊಬ್ಬ ಟಾಂಗಾದಲ್ಲಿ ಇನ್ನೊಂದು ರಸ್ತೆಯ ಮಾರ್ಗವಾಗಿ ಬರುವನು; ಇನ್ನೋರ್ವನು ಸ್ಕೂಟರಿನ ಮೇಲೆ, ಮಗದೊಬ್ಬ ಆಟೋರಿಕ್ಷಾದಲ್ಲಿ, ಇನ್ನೋರ್ವ ಕಾಲುನಡಿಗೆಯಿಂದ ಬರುವನು ಎಂದು ಕೊಳ್ಳುವ, ಅವರೆಲ್ಲರೂ ಆ ವೃತ್ತವನ್ನು ಸೇರಿಯೇ ಸೇರುವರಷ್ಟೇ.

ಒಂದು ದೊಡ್ಡ ರೇಲ್ವೆ ಜಂಕ್ಷನ್ ಇದೆ. ಬೇರೆ ಬೇರೆ ಲೈನುಗಳು ಅಲ್ಲಿ ಸೇರುತ್ತವೆ. ಯಾವುದೇ ಮಾರ್ಗವಾಗಿ ಬಂದರೂ ನಾವು ಈ ಜಂಕ್ಷನ್ ಸೇರುತ್ತೇವಷ್ಟೆ. ಅದೇ ರೀತಿ ಆತ್ಮನೆಂಬುವ ಕೇಂದ್ರ ವೃತ್ತದಿಂದ ಐದು ಶಕ್ತಿಗಳು ಹೊರಡುತ್ತಿದ್ದು, ಈ ಯಾವುದೇ ಶಕ್ತಿಯ ವಿಕಾಸ ಮಾಡಿಕೊಂಡರೂ ಅದರ ಸಹಾಯದಿಂದ ಆತ್ಮನೆಂಬುವ ವೃತ್ತವನ್ನು ಸೇರಬಹುದು. ಒಂದು ವಿಷಯವನ್ನು ಇಲ್ಲಿ ನಾವು ಗಮನಿಸಬಹುದು. ಅದೆಂದರೆ ವ್ಯಕ್ತಿಯು ಯಾವುದೇ ಯೋಗವನ್ನು ಅವಲಂಬಿಸಿದರೂ, ಅದರಲ್ಲಿ ಪರಿಣತಿ ಸಾಧಿಸಿದರೂ ಉಳಿದ ಅಂಶಗಳೂ ಅಲ್ಲಿ ಪೋಷಕವಾಗಿ ಇದ್ದೇ ಇರುತ್ತವೆ. ಉದಾಹರಣಿಗೆ ಮಾರಾಬಾಯಿಯನ್ನು ತೆಗೆದುಕೊಳ್ಳೋಣ. ಆಕೆ ಸ್ವಭಾವತಃ ಭಕ್ತಿಯೋಗಿಣಿ. ಆದರೆ ಆಕೆಯಲ್ಲಿ ಜ್ಞಾನ ಮತ್ತು ಕರ್ಮಗಳು ಪೋಷಕವಾಗಿವೆ. ಗಾಂಧೀಜಿ ಕರ್ಮಯೋಗಿ, ಆದರೂ ಅವರಲ್ಲಿ ಭಕ್ತಿ-ಜ್ಞಾನಗಳು ಪೋಷಕವಾಗಿವೆ. ಶಂಕರಾಚಾರ್ಯರು ಜ್ಞಾನಮಾರ್ಗಿಗಳು ಆದರೂ ಅವರಲ್ಲಿ ಭಕ್ತಿ-ಕರ್ಮಗಳು ತುಸು ಗೌಣವಾಗಿದ್ದರೂ, ಪೋಷಕ ಸಾಧನಗಳಾಗಿವೆ.

ಈ ಯೋಗಗಳಲ್ಲಿ ಒಂದೊಂದನ್ನೇ ಅಳವಡಿಸಿಕೊಂಡಾಗ ಅವು ಏಕಮುಖ ಬೆಳವಣಿಗೆಗೆ ಕಾರಣವಾಗುವುವು. ಕರ್ಮಯೋಗದಿಂದ ಅನ್ನಮಯಕೋಶವಾದ ಶರೀರಕ್ಕೆ, ಹಠಯೋಗದಿಂದ ಪ್ರಾಣಮಯ ಕೋಶಕ್ಕೆ, ಧ್ಯಾನಯೋಗದಿಂದ ಮನೋಮಯ ಕೋಶಕ್ಕೆ, ಜ್ಞಾನಯೋಗದಿಂದ ವಿಜ್ಞಾನಮಯ ಕೋಶವಾದ ಬುದ್ದಿಗೆ, ಭಕ್ತಿಯೋಗದಿಂದ ಆನಂದಮಯ ಕೋಶವಾದ ಹೃದಯಕ್ಕೆ-ಹೀಗೆ ಸಂಸ್ಕಾರ ದೊರೆಯುತ್ತದೆ.

೧. ಶಿವಯೋಗ -ಸಮನ್ವಯ ಯೋಗ

ಶಿವಯೋಗವು ಈ ಎಲ್ಲ ಯೋಗಗಳ ಸಮನ್ವಯಯೋಗ. ಸಾಂಪ್ರದಾಯಿಕವಾಗಿ ಶೈವ ಸಿದ್ದಾಂತದ ಮೇಲೆ ರೂಪುಗೊಂಡು, ಶಿವಜ್ಞಾನ, ಶಿವವ್ರತ, ಶಿವಾರ್ಚನೆ, ಶಿವಧ್ಯಾನ ಮತ್ತು ಶಿವಭಕ್ತಿಗಳಿಂದ ಕೂಡಿದ ಯೋಗವೊಂದು ಎಂದಿನಿಂದಲೂ ಬಳಕೆಯಲ್ಲಿ ಇದ್ದಿತಾದರೂ ಇಷ್ಟಲಿಂಗ ನಿರ್ಮಾಪಕರಾದ ಬಸವಣ್ಣನವರು ಬೇರೊಂದು ಸಮನ್ವಯ ದೃಷ್ಟಿಯ ಶಿವಯೋಗವನ್ನು ಪ್ರತಿಪಾದಿಸಿದ್ದಾರೆ. ಜ್ಞಾನ-ಭಕ್ತಿ-ಕರ್ಮ ಮುಂತಾದ ಯೋಗಗಳಿಂದ ಒಂದೊಂದು ಅಂಗಾಂಗಕ್ಕೆ ಸಂಸ್ಕಾರ ಸಿಗುವ ಕಾರಣ, ಐದೂ ತತ್ವಗಳನ್ನು ಸಂಯಾಜಿಸಿ, ಸರ್ವಾಂಗೀಣ ಸಂಸ್ಕರಣಗೈಯುವ ಶಿವಯೋಗಕ್ಕೆ ರೂಪುರೇಷೆ ಹಾಕಿದ್ದಾರೆ.

ಬಸವನ ಯೋಗದಿಂ ಹಸನಾಯಿತ್ ಲೋಕ ಚಂದದಿ
ಬಸವ ಗತಿಯೆನಲು ಭವವು ಹಿಂಗುವುದು
ಬಸವಯ್ಯ, ಬಸವಣ್ಣ ಶರಣಾರ್ಥಿಯಂದೆನುತ
ಬಸವ ಬದುಕಿದೆನಯ್ಯ ಯೋಗಿನಾಥ
. -ಸಿದ್ದರಾಮೇಶ್ವರರು

ಇಷ್ಟಲಿಂಗ ಪೂಜೆಯನ್ನು ಜೀವಾಳವಾಗಿರಿಸಿಕೊಂಡ ಶಿವಯೋಗವು ಭಾರತೀಯ ವಿವಿಧ ಯೋಗಗಳ ಶ್ರೇಷ್ಟಾಂಶಗಳನ್ನು ಒಳಗೊಂಡು ಪರಿಪೂರ್ಣ ಯೋಗವಾಗಿದೆ. ಆ ಯೋಗಗಳು ವಿವಿಧ ಕುದುರೆಗಳಂತಿದ್ದರೆ ಇದು ಆ ಐದೂ ಕುದುರೆಗಳನ್ನೂ ಕಟ್ಟಿದ ರಥದಂತಿದೆ. ಸಾಧನಾಮಗ್ನನಾದ ಜೀವಾತ್ಮನೇ ರಥಿಕ; ದೇವರಲ್ಲಿ ನಂಬುಗೆಯೇ ಈ ರಥದ ಸಾರಥಿ. ಪರಮಾತ್ಮನೇ ಅಂತಿಮ ಧೈಯ. ಈ ನೂತನ ಯೋಗವನ್ನು 'ಬಸವನ ಯೋಗ' ಎಂದು ಸಿದ್ದರಾಮೇಶ್ವರರು ಸಂಬೋಧಿಸಿದ್ದಾರೆ. ನೂತನವಾದ, ಆಧುನಿಕವಾದ ಈ ಯೋಗವು ಹಿಂದಿನ ಪ್ರಚಲಿತ ಯೋಗಗಳ ಸಮನ್ವಯ ರೂಪವೇ ಆಗಿದ್ದರೂ, ಇವೆಲ್ಲವುಗಳಿಂದ ವಿಶೇಷವಾಗಿ, ಭಿನ್ನವಾಗಿ ಇದೆ. ಶೈವ ಪರಂಪರೆಯಲ್ಲಿ ಬರುವ ಶಿವಯೋಗದಿಂದ ಇದನ್ನು ಬೇರ್ಪಡಿಸಲು, ವಿಚಾರಸ್ಸಷ್ಟತೆಗಾಗಿ ಈ ಯೋಗವನ್ನು 'ಬಸವಯೋಗ' 'ಬಸವ ಪ್ರತಿಪಾದಿತ ಶಿವಯೋಗ' ಎಂದು ಸಂಬೋಧಿಸೋಣ. ಷಟ್ಸ್ಥಲ ದರ್ಶನವನ್ನು ನೆಲೆಗಟ್ಯೋಗಿರಿಸಿಕೊಂಡು, ಇಷ್ಟಲಿಂಗ ಪೂಜೆಯನ್ನೇ ಜೀವಾಳವಾಗಿ ಆಚರಿಸುವ ಈ ಯೋಗದಲ್ಲಿ ಇತರ ಯೋಗಗಳ ಪ್ರಮುಖ ಅಂಶಗಳು ಹೇಗೆ ಸಮಾವೇಶವಾಗಿರುವವೆಂಬುದನ್ನು ಗಮನಿಸೋಣ.

ಆರಾಧ್ಯ ವಸ್ತುವಾದ ಇಷ್ಟಲಿಂಗವನ್ನಿರಿಸಿಕೊಂಡು ಪೂಜೆಗೆ ಕುಳಿತುಕೊಳ್ಳುವ ಸಾಧಕನಿಗೆ ಪದ್ಮಾಸನ, ಸಿದ್ಧಾಸನ, ಸ್ವಸ್ತಿಕಾಸನ, ಸುಖಾಸನ ಇವುಗಳಲ್ಲಿ ಒಂದರ ಸಿದ್ದಿ ಅವಶ್ಯಕ. ಇದು ಹಠಯೋಗದ ಒಂದಂಶ. ನಂತರ ಅಷ್ಟವಿಧಾರ್ಚನೆಯನ್ನು ಹೃದಯ ತುಂಬಿ ಮಾಡುವಾಗ ಭಕ್ತಿ ಯೋಗದ ಸಾರವನ್ನು ನೋಡಬಹುದು.

ಅಷ್ಟವಿಧಾರ್ಚನೆಯ ಮಾಡುವುದು (ಭಕ್ತಿಯೋಗ)
ಮಾಡಿದ ಪೂಜೆಯ ನೋಡುವುದು (ತ್ರಾಟಕಯೋಗ-ಧ್ಯಾನಯೋಗ)
ಶಿವತತ್ವ ಗೀತವ ಹಾಡುವುದು (ಜ್ಞಾನಯೋಗ)
ಶಿವನ ಮುಂದೆ ನಲಿದಾಡುವುದು
ಭಕ್ತಿ ಸಂಭಾಷಣೆಯ ಮಾಡುವುದು
ನಮ್ಮ ಕೂಡಲಸಂಗನ ಕೂಡುವುದು (ಶಿವಯೋಗ) -ಬ.ಷ.ವ. ೧೭೫

ಎರಡನೆಯ ಹಂತದ ಲಿಂಗಸ್ತವನದಲ್ಲಿ ದೇವರ, ಅವನ ಕಾರುಣ್ಯದ ಸ್ವರೂಪವನ್ನು ವಿವೇಚಿಸುವಾಗ ಅದು ಜ್ಞಾನಯೋಗದ ಅರಿವನ್ನು ಅಳವಡಿಸುವುದು. ಮೂರನೆಯ ಹಂತದ ಲಿಂಗಾನುಸಂಧಾನದಲ್ಲಿ ಪ್ರಾಣಚಲನೆಯ ನಿಯಂತ್ರಣ, ದೃಷ್ಟಿಯೋಗ-ಉಭಯವೂ ಸೇರಿ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸುವುವು; ನಾಲ್ಕನೆಯದಾದ ಲಿಂಗಧ್ಯಾನದಲ್ಲಿ ಅಂತರ್ ತ್ರಾಟಕ-ಮಂತ್ರಧ್ಯಾನ-ಮನೊರ್ಲಯ-ಈ ಮೂರೂ ಸೇರಿ ಸಂಪೂರ್ಣ ಧ್ಯಾನ ಯೋಗಕ್ಕೆ ನಾಂದಿ ಹಾಡುವವು. ಐದನೇ ಹಂತದಲ್ಲಿ ಲಿಂಗೋದಕ- ಲಿಂಗ ಪ್ರಸಾದಗಳು ಪರಮಾತ್ಮನ ಕರುಣೆಯ ಪ್ರತೀಕವಾಗಿ ಸ್ವೀಕರಿಸಲ್ಪಡುವವು. ಹೀಗೆ ಶಿವಯೋಗದಲ್ಲಿ ಭಕ್ತಿ - ಜ್ಞಾನ - ಸಾಧನೆ -
ಯೋಗಗಳಿಗೆ ಪೂರ್ಣ ಅವಕಾಶವಿದೆ.

'ಇಡೀ ಜೀವನವೇ ಒಂದು ಯೋಗವಾಗಿ, ತಪಸ್ಸಾಗಿ ದೈವೀಕರಣಗೊಳ್ಳಬೇಕು. ಕಾಯಕವಿಲ್ಲದ ಜೀವನ - ಸಾಧನೆ ವ್ಯರ್ಥ' ಎಂದು ಪ್ರತಿಪಾದಿಸುವಲ್ಲಿ ಕರ್ಮಯೋಗದ ಪರಾಕಾಷ್ಠೆಯನ್ನು ಕಾಣಬಹುದು. ಹೀಗೆ ಶಿವಯೋಗಿಯನ್ನು ಕಾಯಕಯೋಗಿ, ಭಕ್ತಿಯೋಗಿ, ಜ್ಞಾನಯೋಗಿ, ಧ್ಯಾನಯೋಗಿ, ಹಠಯೋಗಿ, ಕುಂಡಲಿನಿಯೋಗಿ ಎಂದೆಲ್ಲ ಕರೆದರೂ ಅವನು ಅದಕ್ಕೆ ಅತೀತನಾಗಿಯೇ ಉಳಿಯುವನು.

೨. ಭಕ್ತಿ-ಜ್ಞಾನ-ಕ್ರಿಯಾ ಸಮನ್ವಯ

ಶಿವಯೋಗವು ಭಕ್ತಿ-ಜ್ಞಾನ-ಕ್ರಿಯೆಗಳ ಸಮತೋಲನವನ್ನು ಪ್ರತಿಪಾದಿಸುತ್ತದೆ. ಭಕ್ತಿಯಿಲ್ಲದ ಜ್ಞಾನ ಶುಷ್ಕ ಜ್ಞಾನ; ಭಕ್ತಿ ಸಹಿತವಾದ ಜ್ಞಾನವೇ ಸುಜ್ಞಾನ, ಭಕ್ತಿಯಿಲ್ಲದ ಆಚಾರ ಶುಷ್ಕಾಚಾರ; ಭಕ್ತಿ ಸಹಿತವಾದ ಆಚಾರವೇ ಸದಾಚಾರ. ಅದೇ ರೀತಿ ಜ್ಞಾನವಿಲ್ಲದ ಭಕ್ತಿ ಮೂಢ ಭಕ್ತಿ, ಜ್ಞಾನ ಸಹಿತವಾದ ಭಕ್ತಿಯೇ ಸದ್ಭಕ್ತಿ, ಜ್ಞಾನವಿಲ್ಲದ ಆಚಾರ ಕಂದಾಚಾರ, ಜ್ಞಾನ ಸಹಿತವಾದುದೇ ಸದಾಚಾರ. ಆಚಾರವಿಲ್ಲದ ಜ್ಞಾನ ವಾಗ್ವಾಲ; ಆಚಾರ ಸಹಿತವಾದುದೇ ಸುಜ್ಞಾನ, ಭಕ್ತಿ - ಕ್ರಿಯೆ - ಜ್ಞಾನಗಳ ಸಮತೋಲನ ಇದ್ದಾಗಲೇ ಬದುಕು ಸರ್ವಾಂಗ ಪರಿಪೂರ್ಣ.

ಯಾವುದೇ ಒಂದು ಪಕ್ಷಿ ಗಗನದಲ್ಲಿ ಹಾರಬೇಕಾದರೆ ಅದಕ್ಕೆ ಎರಡೂ ಮಗ್ಗಲು ರೆಕ್ಕೆ: ಹಿಂದೆ ಪುಚ್ಚ ಬೇಕು. ಅದೇ ರೀತಿ ಜೀವಾತ್ಮನೆಂಬ ಪಕ್ಷಿ ಆಧ್ಯಾತ್ಮಾಗಸದಲ್ಲಿ ಹಾರಬೇಕಾದರೆ ಅದಕ್ಕೆ ಜ್ಞಾನ-ಕ್ರಿಯೆ ಎಂಬ ಎರಡು ರೆಕ್ಕೆಗಳೂ ಭಕ್ತಿ ಎಂಬ ಪುಚ್ಚ ಬೇಕೇಬೇಕು. ಹೀಗೆ ಸಾಧಕನ ಪ್ರಾರಂಭದ ಹಂತದಿಂದಲೂ ಕೊನೆಯವರೆಗೂ, ಅಂದರೆ ಸಿದ್ದಿ ಪಡೆದಾನಂತರವೂ ಜೀವನಾಂತ್ಯದವರೆಗೂ ಈ ಮೂರರ ಸಮತೋಲನ ಬೇಕೇ ಬೇಕು.

೩. ಮರ್ತ್ಯಲೋಕದ ಮಹತಿ

ಶಿವಯೋಗಿಯು ಅಧ್ಯಾತ್ಮಿಕ ಸಿದ್ಧಿಯನ್ನು ಪಡೆದಾನಂತರವೂ ಜೀವನ ಜಗತ್ತುಗಳಿಗೆ ವಿಮುಖನಾಗಬೇಕಾಗಿಲ್ಲ; ಆಗ ಕೂಡದು. ಏಕೆಂದರೆ:

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು;
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ
ಕೂಡಲ ಸಂಗಮದೇವಾ. -ಬ.ಷ.ವ. ೧೫೫

ಬಸವಣ್ಣನವರ ತತ್ವಜ್ಞಾನದ ದೃಷ್ಟಿಯಲ್ಲಿ ಈ ಜಗತ್ತು ಮಿಥ್ಯವಲ್ಲ ಮಾಯೆಯಲ್ಲ; ಈ ನಿಲುವನ್ನು ಅವರು ತಳೆಯಲಿಕ್ಕೆ ಇನ್ನೊಂದೂ ಕಾರಣ ಹೀಗಿರಬಹುದು.

ಲಿಂಗಾಯತ ಧರ್ಮದ ಕೇಂದ್ರವಾದ ಇಷ್ಟಲಿಂಗವು ವಿಶ್ವದಾಕಾರದಲ್ಲಿ ವಿಶ್ವಾತ್ಮನ ಪ್ರತೀಕ. ಅಂದಾಗ ವಿಶ್ವಾತ್ಮನೆಂಬ ಸಾಧ್ಯವನ್ನು ಗಳಿಸಲು ವಿಶ್ವವು ಸಾಧನವಾಗಿದೆ. ಸಾಧನದಿಂದ ಸಾಧ್ಯವನ್ನು ಗಳಿಸುವಾಗ ಸಾಧನವನ್ನು ಅಲ್ಲಗಳೆಯುವದು ಉಚಿತವಲ್ಲ, ಸಾಧುವೂ ಅಲ್ಲ, ವಿವೇಕವೂ ಅಲ್ಲ. ಪುಸ್ತಕವೆಂಬ ಸಾಧನದಿಂದ ಅಪಾರ ಜ್ಞಾನವೆಂಬ ಸಾಧ್ಯವನ್ನು ಗಳಿಸಿಕೊಂಡ ಮೇಲೆ ಆ ಪುಸ್ತಕವನ್ನು ತಿರಸ್ಕರಿಸುವುದು ಅವಿವೇಕ ರಮಣೀಯವಾದೀತು, ಅದರಂತೆ ಶರಣರು ವಿಶ್ವದಾಕಾರದಲ್ಲಿ ವಿಶ್ವಾತ್ಮನನ್ನು ಪೂಜಿಸುವುದರಿಂದ, ಅವರಿಗೆ ವಿಶ್ವಾತ್ಮನಂತೆ ವಿಶ್ವವೂ ಸಹ ತ್ಯಾಜ್ಯವಾಗದೆ ಗೌರವಾರ್ಹವಾಯಿತು; ಮಿಥ್ಯವಾಗದೆ ಸತ್ಯವಾಯಿತು; ಶಿವನ ಲೀಲಾರಂಗವಾಯಿತು; ಕರಾರನ ಕಮ್ಮಟವಾಯಿತು. ಆತ್ಮರುಗಳನ್ನು ಪರಿಪಕ್ವಗೊಳಿಸುವ ಕಾರ್ಯೋಗಾರವಾಯಿತು. ವಿಶ್ವವು ಪೂಜ್ಯವಾದುದರಿಂದ ವಿಶ್ವದ ಸಚರಾಚರವಸ್ತುಗಳೆಲ್ಲ ಶರಣರ ದೃಷ್ಟಿಯಲ್ಲಿ ಮಂಗಲಮಯವಾದವು- ಶಿವಮಯವಾದವು. ಆದ್ದರಿಂದ ಶರಣರು "ಸಕಲ ಜೀವಾತ್ಮರಿಗೆ ಲೇಸನೆ ಬಯಸಿ," ವಿಶ್ವ ಕುಟುಂಬಿಗಳಾದ ಮಹಾನುಭಾವರಾದರು. 'ಲೋಕವೇ ಅವರ ಮನೆಯಾಯಿತು; ಮಾನವ ಕುಲವೆಲ್ಲ ಅವರ ಕುಟುಂಬವಾಯಿತು.' 'ದಯವೇ ಧರ್ಮದ ಮೂಲವೆಂದು' ಬಗೆದು ವಿಶ್ವದ ಜೀವರಾಶಿಗಳಿಗೆಲ್ಲ ಅನುಕಂಪವನ್ನು ತೋರಿ ಅಹಿಂಸೆಯನ್ನು ಪ್ರತಿಪಾದಿಸಿದರು. ಆದುದರಿಂದಲೇ ಶರಣರ ಧರ್ಮವು ವಿಶ್ವಧರ್ಮದ ಸಲ್ಲಕ್ಷಣಗಳನ್ನು ಹೊಂದಿದೆ ಎಂದು ಹೇಳಬಹುದು, ಸರ್ವಧರ್ಮ ಸಮನ್ವಯತೆಯ ಸುಂದರ ತತ್ವಗಳನ್ನು ಒಳಗೊಂಡ ವಚನಸಾಹಿತ್ಯವನ್ನು ಸರಿಯೋಗಿ ಪರಿಶೋಧಿಸಿ ಪ್ರಚಾರ ಮಾಡಿದರೆ ಈ ಶರಣ ಧರ್ಮವು ರಾಷ್ಟಧರ್ಮವಾಗಿ ನಮ್ಮ ದೇಶದ ಸಮಸ್ಯೆಗಳಿಗೆ ಪರಿಹಾರ ತೋರಬಲ್ಲುದು. ಮಾತ್ರವಲ್ಲ ವಿಶ್ವಧರ್ಮವಾಗಿ ಸಮಸ್ತ ಮಾನವ ಕುಲಕೋಟಿಗೆ ಮಾರ್ಗದರ್ಶನ ಮಾಡಬಲ್ಲುದು.

೪. ಶರೀರದ ಮಹತಿ

ಶರಣರಿಗೆ ಬ್ರಹ್ಮಾಂಡದಂತೆ ಪಿಂಡಾಂಡವೂ ಸಹ ಗೌರವಾರ್ಹವಾಗಿದೆ. "ಕೂಡಲ ಸಂಗಮದೇವನ ಒಲಿಸಬಂದ ಪ್ರಸಾದ ಕಾಯವ ಕೆಡಿಸಲಾಗದು." ಎಂದು ದೇಹಿ ನೆಲೆಸಿರುವ ದೇಹದ ಬಗ್ಗೆ ಬಸವಣ್ಣನವರು ಗೌರವಭಾವನೆಯುಳ್ಳವರಾಗಿದ್ದಾರೆ. ಕೆಲವು ವೇದಾಂತಿಗಳು ದೇಹವನ್ನು ಹೇಯವಾದುದು, ಮಿಥ್ಯವಾದುದು ಎಂದು ಅದನ್ನು ದುರ್ಲಕ್ಷಿಸಿ ಅದು ಹೇಗಿದ್ದರೇನೆಂಬ ಉದಾಸೀನ ಭಾವ ತಳೆಯುತ್ತಾರೆ. ಆದರೆ ಶರಣರು ದೇವನನ್ನು ಒಲಿಸುವ ಪ್ರಸಾದಕಾಯವನ್ನು ಕೆಡಿಸದೆ, ಲಿಂಗಮುಖದಿಂದ ಸಕಲ ಭೋಗೋಪಭೋಗಿಯೋಗಬೇಕೆಂದು ಹೇಳಿದ್ದಾರೆ.

ಅರಿಸಿನ ಗಂಧ ಚಂದ್ರ ಕಚಮಾಲ್ಯ ವಿಲೇಪನ ವಸ್ತಭೂಷಣೋ |
ತ್ಕರರಚನಾ ವಿಲಾಸಮಯ ಶೋಭೆ ವಿಚಾರಿಸೆ ಗಂಡನುಳ್ಳ ಚೆ |
ಲ್ವರಸಿಗೆ ಯೋಗ್ಯವೋ ಬಣಗು ಮುಂಡೆಗೆ-ಯೋಗ್ಯವೋ ಲಿಂಗಸಂಗ ತ |
ತ್ಪರ ಶರಣಂಗೆ ಸರ್ವವಿಧಭೋಗಸುಖಂ ಪೆರತೇಂ ಶಿವಾಧವಾ. -ಮಗ್ಗೆಯ ಮಾಯಿದೇವ.

ಅರಿಸಿನ ಹೂವು ಗಂಧ ಒಡವೆ ವಸ್ತ್ರ ಇತ್ಯಾದಿಗಳನ್ನು ಅಲಂಕರಿಸಿ ಮೆರೆಯುವುದು ಗಂಡನುಳ್ಳ ಮುತ್ತೈದೆಗೆ ಒಪ್ಪುವುದೇ ಹೊರತು ವಿಧವೆಗೆ ಯೋಗ್ಯವಾಗಲಾರದು, ಅದರಂತೆ ಲಿಂಗಸಂಬಂಧಯುಕ್ತವಾಗಿರುವ ಶರಣನು ಸಕಲೇಂದ್ರಿಯ ಮುಖದಿಂದ ಬಂದ ಸುಖವನ್ನನುಭವಿಸುವುದಕ್ಕೆ ಅರ್ಹನಾಗಿದ್ದಾನೆಂದು ಮಗ್ಗೆ ಮಾಯಿದೇವರು ಸೊಗಸಾಗಿ ವಿವರಿಸಿದ್ದಾರೆ. ಅರ್ಥಾತ್ ದೇಹವನ್ನು ಅನಾವಶ್ಯಕವಾಗಿ ಕೊರಗಿಸಿ ಬಳಲಿಸಿದರೆ ಅದರಿಂದ ಯಾವ ಪುರುಷಾರ್ಥವೂ ಸಾಧ್ಯವಾಗಲಾರದೆಂದು ಅಭಿಪ್ರಾಯಪಟ್ಟಿದ್ದಾರೆ. "Strong mind in a strong body" ಎಂದು ವಿವೇಕಾನಂದರೂ ಸಹ ಸದೃಢವಾದ ಶರೀರದಲ್ಲಿಯೇ ಪುಷ್ಟವಾದ ಮನವಿರುತ್ತದೆಂದು ಹೇಳಿದ್ದಾರೆ. ಅಂಥ ಮನದಿಂದಲೇ ಆಧ್ಯಾತ್ಮ ಸಾಧ್ಯವಾಗುತ್ತದೆ. ದುರ್ಬಲ ದೇಹ, ಅಶಕ್ತ ಮನದವರಿಗೆ ಏನೂ ಆಧ್ಯಾತ್ಮಿಕ ಪ್ರಗತಿ ಸಾಧ್ಯವಿಲ್ಲವೆಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ. ಇದನ್ನರಿತು, ವಿಪರೀತವಾಗಿ ಉಪವಾಸಾದಿ ವ್ರತಗಳನ್ನು ಮಾಡುವುದನ್ನು, ಬಹಳ ಪರಿಶ್ರಮದಿಂದ ಹಠಯೋಗ ಸಾಧನೆಯನ್ನು ಮಾಡುವುದನ್ನು ಶಿವಯೋಗವು ಪ್ರೋತ್ಸಾಹಿಸದು.

ಅಡವಿಯಾಳಗರಸುವೊಡೆ ಸಿಡಿಗಂಟಿ ತಾನಲ್ಲ
ಮಡುವಿನೊಳಗರಸುವಡೆ ಮತ್ಯಮಂಡೂಕವಲ್ಲ
ಒಡಲದಂಡಿಸುವೊಡೆ ಕೊಡುವ ಸಾಲಿಗನಲ್ಲ.
ಅಷ್ಟ ತನುವಿನೊಳಗೆ ಹುದುಗಿರ್ಪ ಲಿಂಗವ
ನೆಟ್ಟನೆ ಅರಿಯೆಂದ ಅಂಬಿಗರ ಚೌಡಯ್ಯ.


ಕಾಡಿನಲ್ಲಿದ್ದು ತಪಸ್ಸು ಮಾಡಿದರೆ ದೇವನೊಲಿಯುವನೆಂದಾಗಲೀ ಮಡುವಿನೊಳಗೆ ಪ್ರಾಣಾಯಾಮ ಇತ್ಯಾದಿ ಅಭ್ಯಾಸ ಮಾಡಿದರೆ ಅವನ ಒಲುಮೆಯೋಗುವುದೆಂದಾಗಲೀ ಶಿವಯೋಗವು ಪ್ರತಿಪಾದಿಸದು. ಮಿತಿ ಮೀರಿ ಶರೀರವನ್ನು ಬಳಲಿಸಿದರೂ ಪ್ರಯೋಜನವಾಗದು. ಅಷ್ಟ ತನುವಿನಲ್ಲಿ ಹುದುಗಿರುವ ಆತ್ಮಸ್ವರೂಪವನ್ನು ಅರಿತವನೇ ನಿಜ ಶರಣನು ಎನ್ನುತ್ತಾರೆ ಚೌಡಯ್ಯನವರು.

೫. ದೇವನ ಕೃಪೆ

ಬಸವಣ್ಣನವರ ವಿಚಾರವಾಹಿನಿಯಲ್ಲಿ ಪರಮಾತ್ಮನ ಕೃಪೆಗೆ ಅಪಾರವಾದ ಸ್ಥಾನವಿದೆ. ಪಾತಂಜಲಯೋಗ ಮುಂತಾದುವುಗಳಲ್ಲಿರುವ ರೀತಿ ಇಲ್ಲಿ ದೇವರು ಆಹ್ವಾನವಿಲ್ಲದೆ ಬಂದ ಅತಿಥಿಯಂತಲ್ಲ': ಶಿವಯೋಗ, ಷಟ್‌ಸ್ಥಲ, ಸಮಗ್ರ ಜೀವನದಲ್ಲಿ ಹಾಸುಹೊಕ್ಕು. ದೇವಕೃಪೆಯಿಲ್ಲದೆ ಏನೇನೂ ಸಾಧ್ಯವಿಲ್ಲ ಎಂಬುದು ಶರಣರ ಅಭಿಪ್ರಾಯ.

ಕೆಲವು ಜನರು ದೇವಕೃಪೆ (Grace of God) ಮತ್ತು ದೈವವಾದ (Fatalism)ಗಳ ಮಧ್ಯೆ ಸರಿಯಾದ ಗಡಿಯನ್ನು ಗುರುತಿಸದೆ ಬಸವಣ್ಣನವರು ಪುರುಷ ಪ್ರಯತ್ನಕ್ಕೆ ಮಾತ್ರ ಬೆಲೆ ಕೊಟ್ಟಿದ್ದಾರೆ; ಅವರು ದೈವವಾದ ಒಪ್ಪರು' ಎಂದು ಬಿಡುವರಿವರು. 'ದೈವವಾದದಿಂದಲೇ ನಮ್ಮ ದೇಶ ಹಾಳಾಗಿರುವುದು. ವಾಸ್ತವವಾದಿ (Realist) ಆದ ಬಸವಣ್ಣನವರು ಒಪ್ಪುವುದು ಸಾಧ್ಯವೇ ಇಲ್ಲ' ಎನ್ನುವರು. ಈ ವಿಚಾರ ಸರಿಯೇ ಅಲ್ಲವೇ ಎಂಬುದನ್ನು ಈಗ ಪರಿಶೀಲಿಸೋಣ..

ಸಾಮಾನ್ಯವಾಗಿ ಭಾರತೀಯರು ದೈವವಾದಿಗಳು; ಎಲ್ಲದಕ್ಕೂ ದೈವ, ದೈವ ಎಂದು ಹೇಳಿ ಪುರುಷ ಪ್ರಯತ್ನಕ್ಕೆ ವಿಮುಖರಾಗಿ, ಪ್ರಯತ್ನವಾದದಿಂದ ದೂರ ಸರಿದರು. ಅದರಿಂದಾಗಿ ಭಾರತೀಯರು ಸಾಹಸಿಗಳಾಗದೆ, ಆಲಸಿಗಳಾದರು. ಅದರಿಂದ ಪರಕೀಯರ ದಾಸ್ಯಕ್ಕೆ ಒಳಗಾದರು. ಪಾಶ್ಚಿಮಾತ್ಯರು ಪ್ರಯತ್ನವಾದಿಗಳು, ಎಲ್ಲವನ್ನೂ ಪುರುಷ ಪ್ರಯತ್ನದಿಂದ ಮಾಡಲು ಸಾಧ್ಯವೆಂಬ ಹಮ್ಮು ಬಿಮ್ಮನವರು. ಇದರಿಂದ ಅವರು ಆಲಸಿಗಳಾಗದೆ, ಸಾಹಸಿಗಳಾದರು. ಹೊಸ ಹೊಸ ಭೂಪ್ರದೇಶಗಳನ್ನು ಸಂಶೋಧಿಸಿ, ಅವುಗಳನ್ನು ಆಳುವ ಬಲವುಳ್ಳವರಾದರು. ಸಾಮಾ ಜ್ಯ ಶಾಹಿಗಳಾಗಿ ಪರರನ್ನು ದಾಸ್ಯ ಶೃಂಖಲೆಯಲ್ಲಿಟ್ಟು ಮೆರೆಯುವಂಥವರಾದರು. ಈ ಎರಡೂ ಸಂಸ್ಕೃತಿಗಳ ವಿಚಾರಸರಣಿಗಳು ಅರ್ಧಸತ್ಯವಾಗಿವೆ: ಕೆಲವು ಕೊರತೆಯಿಂದ ಕೂಡಿವೆ. ಅವುಗಳಲ್ಲಿ ಒಂದು ಲಾಭವಿದ್ದರೆ, ಇನ್ನೊಂದು ಹಾನಿ ಇದೆ. ದೈವವಾದದಿಂದ ಮಾನವನು ಆಸ್ತಿಕ್ಯಭಾವನೆ ಹೊಂದಿ ನೀತಿವಂತ ಸಾಧುಪ್ರಾಣಿಯೋಗುತ್ತಾನೆ. ಇದು ಲಾಭ: ಆದರೆ ಹೇಡಿಯೋಗುತ್ತಾನೆ, ಇದು ಹಾನಿ. ಅದೇ ರೀತಿ ಪೌರುಷವಾದದಿಂದ ಮಾನವನು ಸಾಹಸಿಯೋಗಿ ದಿಟ್ಟನಾಗುತ್ತಾನೆ; ಇದು ಲಾಭ. ಆದರೆ ನಾಸ್ತಿಕನಾಗಿ ಆಕ್ರಮಣಶೀಲನಾಗುತ್ತಾನೆ; ಇದು ಹಾನಿ, ದೈವವಾದವೂ ಬೇಕು, ಪ್ರಯತ್ನ ವಾದವೂ ಬೇಕು ಎಂಬ ಸಮನ್ವಯ ದೃಷ್ಟಿ ಪ್ರತಿಪಾದಿಸಿದ ಬಸವಣ್ಣನವರು ಹೇಳುತ್ತಾರೆ. "ನೀ ಮಾಡಿದೊಡಾಯಿತ್ತೆಂದೆನ್ನೆನು, ಕರ್ಮಕ್ಕೆ ಕರ್ತೃವೇ ಕಡೆಯೆಂದೆಂಬೆನು" ಎಂದು ಹೇಳಿ ದೈವವಾದವನ್ನು - ಪ್ರಯತ್ನ ವಾದವನ್ನು ಸಮನ್ವಯಗೊಳಿಸಿದ್ದಾರೆ. ಇವೆರಡನ್ನೂ ಜೀವನದಲ್ಲಿ ಅಳವಡಿಸಿಕೊಂಡು ಹೋದರೆ ಆ ಬಾಳು ನಿಜಕ್ಕೂ ತನಗೂ ಪರರಿಗೂ ಆದರ್ಶವಾಗುತ್ತದೆ; ಮತ್ತು ಸಮತೋಲನದ ಸಮಾಜವನ್ನು ಕಟ್ಟುತ್ತದೆ.

ದೈವ (Fate), ವಿಧಿ, ಅದೃಷ್ಟ, ಹಣೆ ಬರಹ ಮುಂತಾಗಿ ಕರೆಯುವ ಅದಾದರೂ, ಹಿಂದೆ ನಾವು ಮಾಡಿರುವ ಪ್ರಯತ್ನಗಳ, ಕೆಲಸಗಳ ಪರಿಣಾಮವೇ.

ದೈವವೆಂದರೇನು ?

Fate is nothing but the collective force of one's own actions, performed in the past lives ದೈವವೆಂದರೆ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳ ಮೊತ್ತದ ಒಂದು ಒತ್ತಡವು. ನಾವು ಒಂದು ನದಿಯನ್ನು ದೋಣಿಯಲ್ಲಿ ದಾಟಬೇಕಾಗಿದೆ. ನಾವು ಕುಳಿತು ಹೋಗುವಾಗ ಅಂಬಿಗರು ಹುಟ್ಟು ಕಡೆಯುತ್ತ ಹೋಗುವರು. ಆದರೆ ನಮ್ಮ ದೋಣಿ ನೇರವಾಗಿ ಆಚೆಯ ದಂಡೆಗೆ ಹೋಗಿ ಮುಟ್ಟದೆ ಪ್ರವಾಹದ ಸೆಳೆತದಿಂದ ಸ್ವಲ್ಪ ಕೆಳಗಿನ ಮಗ್ಗಲು ಹೋಗಿ ಆಚೆಯ ದಂಡೆ ಸೇರುತ್ತದೆ. ಆ ಪ್ರವಾಹದ ಒತ್ತಡವೇ ದೈವವಿದ್ದ ಹಾಗೆ, ಹುಟ್ಟು ಹಾಕುವುದೇ ಪುರುಷ ಪ್ರಯತ್ನವಿದ್ದಂತೆ. ಹುಟ್ಟು ಕಡೆಯುವುದನ್ನು ಬಿಟ್ಟರೆ ಪ್ರವಾಹಪತಿತರಾಗಿ ಹೋಗಬಹುದು. ಪ್ರವಾಹದ ಒತ್ತಡದಂತೆ ನಮ್ಮ ಜೀವನದಲ್ಲಿ ಒಂದು ಅವ್ಯಕ್ತವಾದ ಯಾವುದೋ ಶಕ್ತಿ ಕೆಲಸ ಮಾಡುತ್ತಿರುತ್ತದೆ ಆ ಶಕ್ತಿಯೇ ದೈವವು.

'ನಮ್ಮ ಹಿಂದಿನ ಕರ್ಮಗಳ ಮೊತ್ತದ ಒತ್ತಡವೇ ದೈವ' ಎಂದರೂ ಈಗಾಗಲೇ ಘಟಿಸಿ ಹೋಗಿರುವ ಘಟನೆಗಳಿಗೆ ಸಂಬಂಧಿಸಿರುವ ಕಾರಣ ಈ 'ದೈವ' ಬಹು ಬಲಶಾಲಿಯೋಗಿ ಕಾಣುವುದು. ಅದರ ಮುಂದೆ ಮನುಷ್ಯನು ನಿಸ್ಸಹಾಯಕನಾಗಿ ತೋರಿಬರುವನು.

ಹಿಂದಿನ ಜನ್ಮಗಳ ಕರ್ಮದ ಒತ್ತಡವಾದ ದೈವ (Fate) ಮತ್ತು ಪುರುಷ ಪ್ರಯತ್ನ ಎರಡನ್ನೂ ಮೀರಿ ಕೆಲಸ ಮಾಡುವ ಇನ್ನೊಂದು ತತ್ವ ಉಂಟು. ಅದುವೇ ದೇವಕೃಪೆ (Grace of God), ಮನುಷ್ಯನ ಪ್ರಬಲವಾದ ಸಂಸ್ಕಾರ, ಹಿಂದಿನ ಕರ್ಮಸಂದೋಹ, ವಿಧಿ, ಅದೃಷ್ಟ ಎಂದೆನ್ನುವ ಈ ಎಲ್ಲವನ್ನೂ ಮೀರಿ ಕೆಲಸ ಮಾಡುವಂಥದು ಆ ದೇವಕೃಪೆ.

ಆದರೆ ಪರಿಶುದ್ಧ ಮನಸ್ಸಿನಿಂದ ಮಾಡುವ ಪ್ರಾರ್ಥನೆಗೆ ಮಣಿದು, ದೇವನು ಒಲಿದುದೇ ಆದರೆ ಪ್ರವಾಹಕ್ಕೆ ಸಿಕ್ಕ ಹುಲ್ಲು ಕಡ್ಡಿಯಂತೆ 'ದೈವ'ವು ಕೊಚ್ಚಿ ಹೋಗಿ, ಭವಿಷ್ಯವೂ ಸಂಪೂರ್ಣವಾಗಿ ಬದಲಾಗುವುದು. ಇಂಥ ದೇವ ಕೃಪೆಯಾಗದೆ ಇನ್ನೇನೂ ಸಾಧ್ಯವಾಗದು. ಅದಕ್ಕಾಗಿ ಸಾಧಕನು ಮಾಡುವ ಪ್ರಯತ್ನವನ್ನೆಲ್ಲ ಮಾಡಿ, ಆ ಕೃಪೆ ಒದಗಿ ಬರುವ ಕ್ಷಣಕ್ಕಾಗಿ ತಾಳ್ಮೆಯಿಂದ ಕಾಯುವನು. ಇದನ್ನು ಮಾರ್ಮಿಕವಾಗಿ ಹೇಳುವ ಅಕ್ಕಮಹಾದೇವಿಯ ಈ ವಚನ ನೋಡಿರಿ :

ಅರಸಿ ತೊಳಲಿದರಿಲ್ಲ ಬಯಸಿ ಹೊಕ್ಕರಿಲ್ಲ
ತಪಸ್ಸು ಮಾಡಿದರಿಲ್ಲ;
ಅದು ತಾನು ಬಹ ಕಾಲಕ್ಕಲ್ಲದೆ ಸಾಧ್ಯವಾಗದು
ಶಿವನೊಲಿದಲ್ಲದೆ ಕೈಗೂಡದು
ಚನ್ನಮಲ್ಲಿಕಾರ್ಜುನನೆನಗೊಲಿದನಾಗಿ
ಆನು ಸಂಗನ ಬಸವಣ್ಣನ ಶ್ರೀಪಾದವ ಕಂಡು
ನಮೋ ನಮೋ ಎನುತಿರ್ದೆನು. (ಮ.ಅ.ವ. ೨೦)

ಸಾಮಾನ್ಯ ಜನರೂ ಹೇಳುತ್ತಾರೆ: 'ಯಾವುದಕ್ಕಾದರೂ ಒಂದು ಕಾಲ ಬರಬೇಕು. ಅಂಥ ಕಾಲ ಬರಲಾರದೆ ನಾವೇನು ಮಾಡಿದರೆ ಸಾಧ್ಯವಾದೀತು ? ಸಾಮಾನ್ಯರ ಈ ನುಡಿಯಲ್ಲಿಯೂ ಒಂದು ಅರ್ಥ ಹುದುಗಿದೆ. ಅದನ್ನೇ ಅಕ್ಕಮಹಾದೇವಿಯು ಮಾರ್ಮಿಕವಾಗಿ ತನ್ನ ವಚನದಲ್ಲಿ ಹೊರಸೂಸಿದ್ದಾಳೆ. ಅರಸಿ ತೊಳಲಿದರಾಗಲಿ, ಬಯಸಿ ಹೊಕ್ಕರಾಗಲಿ, ತಪಸ್ಸು ಮಾಡಿದರಾಗಲಿ, ನಮ್ಮ ಸಂಕಲ್ಪವು ಸಿದ್ಧಿಸದೆ, ಅದು ತನ್ನ ಮಹಾಕಾಲ ಬಂದಾಗ-ಶಿವನು ಒಲಿದಾಗ ಮಾತ್ರ ಸಾಧ್ಯವೆಂದು ಅಕ್ಕನ ಅಭಿಮತವಾಗಿದೆ. ಲಿಂಗದೊಲುಮೆ-ದೇವನ ಕಾರುಣ್ಯ (The Divine grace) ವು ಅತ್ಯವಶ್ಯವೆಂಬುದನ್ನು ಅಕ್ಕ ತನ್ನ ಅನುಭವದಿಂದ ಕಂಡುಕೊಂಡಿದ್ದಾಳೆ. ಒಂದು ಕಾಲ ಪರಿಮಿತಿಯಲ್ಲಿ ಕಾಯಿ ಹಣ್ಣಾಗುವುದು, ಅದನ್ನು ಆ ಪೂರ್ವದಲ್ಲಿ ಹಿಚುಕಿ ಹಣ್ಣು ಮಾಡುವುದು ಹೇಗೆ ಸೂಕ್ತವಲ್ಲವೋ ಅದರಂತೆ ದೇವನ ಕಾರುಣ್ಯದ ಮಹಾಕಾಲದಲ್ಲಿ ನಡೆಯುವ ಘಟನೆಗಳನ್ನು ಸಾವಧಾನದಿಂದ ತಾಳ್ಮೆಯಿಂದ ಕಾಯು ನೋಡಬೇಕು.
ಬಸವಣ್ಣನವರು ತಮ್ಮದೊಂದು ವಚನದಲ್ಲಿ ಹೀಗೆ ಹೇಳುತ್ತಾರೆ :

ಲೇಸಕಂಡು ಮನ ಬಯಸಿ ಬಯಸಿ
ಆಸೆ ಮಾಡಿದಡಿಲ್ಲ ಕಂಡಯ್ಯಾ
ತಾಳ ಮರಕ್ಕೆ ಕೈಯ ನೀಡಿ
ಮೇಲೆ ನೋಡಿ ಗೋಣು ನೊಂದುದಯ್ಯಾ
ಕೂಡಲಸಂಗಮದೇವ ಕೇಳಯ್ಯಾ.
ನೀವೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ -ಬ.ಷ.ವ. ೨೩

ಆದ್ದರಿಂದ ತಾಳ್ಮೆಗೆಡದೆ ಶಿವನ ಕಾರುಣ್ಯದ ಕವಚದಲ್ಲಿ ಜೀವನವನ್ನು ಮಾರ್ಪಡಿಸಿಕೊಂಡು ಹೋಗುವುದು ಸಾಧಕನಿಗೆ ಯಾವಾಗಲು ಚಂದವು. ಸಾಧಕನು ಅತಿ ಆತುರ ಪಡುವುದು ಸ್ವಾಭಾವಿಕ. ಆದರೆ ಅದರಿಂದ ತುಂಬಾ ಬಳಲಬೇಕಾಗುತ್ತದೆ. ಶ್ರೀ ಅರವಿಂದರೂ ಸಹ ಶಿವನ ಕಾರುಣ್ಯ (The Divine grace) ದ ವಿಷಯವಾಗಿ ಹೀಗೆ ಅಭಿಪ್ರಾಯ ಪಡುತ್ತಾರೆ.

The true movement is a pure aspiration and surrender. After all one has not a right to call on the Divine to manifest himself; it can come only as a response to a spiritual or psychic state of consciousness or to long course of sadhana rightly done or. If it comes before that or without, any apparent reason, it is a Grace; but one cannot demand or compel Grace. Grace is something spontaneous which wells out from the Divine consciousness as a free flow of its being. The Bhakta looks for it but he is ready to wait in perfect reliance - even if need be, all his life knowing that it will come, never varying in his love and surrender because it does not come now or soon.

“ಪರಿಶುದ್ಧವಾದ ಆಕಾಂಕ್ಷೆ ಮತ್ತು ಸರ್ವಸಮರ್ಪಣಿಗಳೇ ನಿಜವಾಗಿಯೂ ದೇವ ಶಕ್ತಿಯ ಚಲನೆಗೆ ಕಾರಣ. ದೇವ ಶಕ್ತಿ ಇಳಿದು ವ್ಯಕ್ತಗೊಳ್ಳಲೇ ಬೇಕೆಂದು ಕರೆಕೊಡುವ ಅಧಿಕಾರ ಯಾರಿಗೂ ಇಲ್ಲ. ತೀವ್ರವಾದ ಆಧ್ಯಾತ್ಮಿಕ ಪ್ರಜ್ಞೆಯ ಅಥವಾ ಪ್ರಾಣಶಕ್ತಿಯ ಕರೆಗಾಗಲೀ ಅಥವಾ ಎಡಬಿಡದೆ ಮಾಡಿದ ನಿಜವಾದ ಸಾಧನೆಯ ಪ್ರತಿಫಲವಾಗಿಯೋಗಲೀ ಅದು ವ್ಯಕ್ತವಾಗಬಹುದು. ಹಾಗಲ್ಲದೆ, ಇದಾವುದೂ ಇಲ್ಲದೆ, ಹೊರಗಿನ ಕೋರಿಕೆಯ ಕಾರಣವೇನೂ ಇಲ್ಲದೆ ದೇವ ಶಕ್ತಿ ಇಳಿದುಬಂದಾಗ ಅದನ್ನೇ "ದೇವಕೃಪೆ" ಎನ್ನಬಹುದು. ಆ ಅತೀತವಾದ ಶಕ್ತಿಯು ಸಹಜವಾಗಿ ಮತ್ತು ಸ್ವತಂತ್ರವಾಗಿ ಉಿ ಬರುವ ಸ್ವರೂಪವನ್ನುಳ್ಳದ್ದು, ಭಕ್ತನು ಅದನ್ನು ಹಾರಿಸುತ್ತಾನೆ. ಅದು ಬಂದೇ ಬರುತ್ತದೆಂದು ಸಂಪೂರ್ಣವಾಗಿ ನಂಬಿ ನಿರೀಕ್ಷಿಸುತ್ತಾನೆ, ಆದರೆ ಅದು ಬರದಿದ್ದರೆ ಈ ಕೂಡಲೇ ಅದು ಬರಲಿಲ್ಲವೆಂದಾಗಲೀ, ಬರುವುದು ತಡವಾಯಿತೆಂದಾಗಲೀ ಅದರ ವಿಷಯವಾದ ಶ್ರದ್ದೆಯನ್ನೂ, ಪ್ರೇಮವನ್ನೂ ಅವನು ಕಳೆದುಕೊಳ್ಳುವುದಿಲ್ಲ."

ಬಸವಾದಿ ಪ್ರಮಥರು ಪ್ರತಿಪಾದಿಸಿದ ಶಿವಯೋಗವು ಮುಖ್ಯವಾಗಿ ಸೇಶ್ವರವಾದಿ ಯೋಗವಿದ್ದು, ದೇವಕಾರುಣ್ಯಕ್ಕೆ ಪ್ರಮುಖ ಸ್ಥಾನವನ್ನೀಯುತ್ತದೆ. ಅದನ್ನು ಮಗ್ಗೆಯ ಮಾಯಿದೇವರ ಒಂದು ಪದ್ಯದಲ್ಲಿ ಗಮನಿಸೋಣ.

ಕರುಣಮೆ ಕಾರಣಂ ಬಯಲ ಮಾತಿನ ಮಾಲೆಯ ಗೋಳುಮಂಡೆಯಂ |
ತಿರಲರಿವೇತಕಾಚರಣಿಯೇತಕೆ ನಂಬುಗೆಯೇತಕಯ್ಯ ನಿ ||
ನ್ನು ರುತರಮಪ್ಪ ಸಕೃಪೆಯೆ ಸತ್ಯಮಭಿಷ್ಟ ಪದಾರ್ಥಸಿದ್ದಿಯಂ |
ಪರಿಪರಿದಯ್ದುವಂಗೆ ಪರಮಪ್ರಭುವೇ ಮಹದೈಪುರೀಶ್ವರಾ || -

"ಎಲೆ ದೇವನೆ, ತನಗಿಷ್ಟವಾದ ಮೋಕ್ಷವನ್ನು ಬೇಗನೆ ಹೊಂದಬೇಕಾದರೆ ಬರಿಯ ಜ್ಞಾನದಿಂದಾಗಲಿ, ಬರಿಯ ಆಚರಣೆಯಿಂದಾಗಲಿ, ಬರಿಯ ನಂಬುಗೆಯಿಂದಾಗಲಿ ಪ್ರಯಾಜನವಾಗಲಾರದು. ಅವೆಲ್ಲಾ ಸಾಧನವಾಗುವವೆಂದು ತಲೆ ಜಜ್ಜಿ ಕೊಂಡು ಹರಟುವ ವ್ಯರ್ಥವಾದ ವಾಗ್ವಾಲವು ಹಾಗಿರಲಿ, ಶ್ರೇಷ್ಠವಾದ ನಿನ್ನ ಕೃಪೆಯಾಂದೇ ಶಾಶ್ವತವಾದುದು. ಅದೇ ಮುಕ್ಕಿಗೆ ಮುಖ್ಯ ಕಾರಣವು. ದೇವನ ಕಾರುಣ್ಯ (The Divine grace) ಕ್ಕಾಗಿ ಕೈಚಾಚಿ ಹಂಬಲಿಸಿ, ಪಡೆದು ಕರಣದ ಕತ್ತಲೆಯನ್ನು ಕಳೆದುಕೊಂಡು ಅವನ ಸಾನ್ನಿಧ್ಯ ಸೇರಿದ ಹಲವಾರು ಶರಣ-ಸಂತರನ್ನು ನಾವು ನೋಡಬಹುದಾಗಿದೆ. ಮಹಾಯೋಗಿ ಶ್ರೀ ಅರವಿಂದರು ತಮ್ಮ ಪೂರ್ಣಯೋಗ (Integral yoga) ದಲ್ಲಿ ದೇವಕೃಪೆಗೆ ಅಗ್ರಸ್ಥಾನ ಕೊಟ್ಟಿದ್ದಾರೆ

೬. ಶರಣಾಗತಿ

ದೇವಕೃಪೆಯ ಜೊತೆಗೆ ಅವಿನಾಭಾವ ಸಂಬಂಧದಿಂದ ಕೂಡಿರುವ ತತ್ವ ಶರಣಾಗತಿ, (Submission or Surrender). ಪರಮಾತ್ಮನ ಕೃಪೆಯು ಧಾರೆಸಬೇಕಾದರೆ ಅವನಲ್ಲಿ ಅನನ್ಯವಾದ ಶರಣಾಗತಿ ಇರಲೇಬೇಕು. ತಾಳ್ಮೆ ಗೇಡಿತನ, ಅವಿಶ್ವಾಸ, ದೌರ್ಬಲ್ಯಗಳು ಇದ್ದು ದೇ ಆದರೆ ದೇವನ ಕಾರುಣ್ಯವು ಅವತರಣವಾಗದು.

"ಶರಣಾಗತಿಯನ್ನು ಒಂದು ಬಗೆಯ ವಿಧಿವಾದ (Fatalism), ನಿಷ್ಕ್ರಿಯತೆ ಎಂದು ಅರ್ಥ ಮಾಡುವವರೂ ಇದ್ದಾರೆ. ಹಾಗೆ ಅರ್ಥ ಮಾಡಬಾರದು. ವಿಧಿವಾದದಲ್ಲಿ ಅಜ್ಞಾನವು ತುಂಬಿ ತುಳುಕುತ್ತಿದ್ದರೆ ಶರಣಾಗತಿಯಲ್ಲಿ ಅರಿವು ತುಂಬಿರುತ್ತದೆ. ವಿಧಿವಾದದಲ್ಲಿ ತಾನು ನಿಸ್ಸಹಾಯಕ ಎಂಬ ಭಾವವಿದ್ದು, ಪ್ರಯತ್ನವು ಪೂರ್ತಿ ಸತ್ತು ಹೋಗಿರುತ್ತದೆ. ಶರಣಾಗತಿಯಲ್ಲಿ ದೇವನ ಕೃಪೆಯನ್ನು ಪಡೆದೇ ತೀರುವೆನೆಂಬ ಆತ್ಮ ವಿಶ್ವಾಸದೊಡನೆ ಪ್ರಾಮಾಣಿಕ ಪ್ರಯತ್ನವಿರುತ್ತದೆ. ಆದರೆ ದೇವನಲ್ಲಿ ಸಂಪೂರ್ಣ ನಂಬಿಕೆ ಇದ್ದು, "ನೀನು ಒಲಿದಾಗ ಒಲಿ; ನೀನು ಒಲಿದು ಕೊಟ್ಟುದನ್ನು ನಾನು ಸ್ವೀಕರಿಸುವೆ." ಎಂಬ ನಿರ್ಲಿಪ್ತ ಭಾವವಿರುತ್ತದೆ.
ಅಕ್ಕಮಹಾದೇವಿ ಒಂದು ವಚನದಲ್ಲಿ (೧೬೧) ಹೀಗೆ ಹೇಳುತ್ತಾಳೆ :

ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೇ ಅಯ್ಯ ?
ನೀನು ಬಹಿರಂಗ ವ್ಯವಹಾರ ದೂರಸ್ಟನು.
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೇ ಅಯ್ಯ ?
ನೀನು ವಾಙ್ಮನಾತೀತನು.
ಜಪಸ್ತೋತ್ರದಿಂದೊಲಿಸುವೆನೇ ಅಯ್ಯ ?
ನೀನು ನಾದಾತೀತನು.
ಭಾವಜ್ಞಾನದಿಂದೊಲಿಸುವೆನೇ ಅಯ್ಯ ?
ನೀನು ಸರ್ವಾಂಗಪರಿಪೂರ್ಣನು.
ಅಯ್ಯಾ ನಿನ್ನ ಒಲಿಸಲೆನ್ನಳವಲ್ಲ
ನೀನೊಲಿವುದೇ ಸುಖವಯ್ಯ ಚನ್ನಮಲ್ಲಿಕಾರ್ಜುನಾ.

"ಕೀಡೆಯು ತನ್ನ ಸ್ವಪ್ರಯತ್ನದಿಂದ ಭೃಂಗವಾಗಲಾರದು. ಭೃಂಗಕ್ಕೆ ಕಾರುಣ್ಯ ಹುಟ್ಟಿ, ಕೀಡೆಯನ್ನು ಎತ್ತಿಕೊಂಡು ಹೋಗಿ ಅರಲಿನ ಮನೆಯಲ್ಲಿಟ್ಟು ಅದಕ್ಕೆ ಆಶೀರ್ವಾದ ಮಾಡಿ ತನ್ನಂತೆ ಮಾಡಿಕೊಳ್ಳುತ್ತದೆ. ಅದರಂತೆ ದೇವನೇ, ನಿನ್ನನ್ನು ಒಲಿಸಲು ನನ್ನ ಅಳವಲ್ಲ, ನೀನೇ ನಿನ್ನ ಕೃಪಾದೃಷ್ಟಿಯನ್ನು ಬೀರಿ, ನನ್ನನ್ನು ನಿನ್ನ ಸಾನ್ನಿಧ್ಯದಲ್ಲಿಟ್ಟು ಕೊಂಡು ನಿನ್ನವಳನ್ನಾಗಿ ಮಾಡಬೇಕು." ಎಂದು ದೇವನಿಗೆ ಸಂಪೂರ್ಣವಾಗಿ ಶರಣಾಗತಿ (Surrender) ಹೋಗಿದ್ದಾಳೆ. ಯಾಕೆಂದರೆ ಅಷ್ಟವಿಧಾರ್ಚನೆ ಮಾಡಿ, ಷೋಡಶೋಪಚಾರಗಳನ್ನು ನೀಡಿ ದೇವನನ್ನು ಒಲಿಸಲು ಮಾಡಿದ ಪ್ರಯತ್ನ ನಿಷ್ಪಲವಾಗಿರಲು ಸಾಕು. ಇವೆಲ್ಲ ಬಾಹ್ಯ ಪೂಜೆಗಳಾಗುವುವು. ದೇವನು ಬಹಿರಂಗ ವ್ಯವಹಾರ ದೂರಸ್ಥನಾದ್ದರಿಂದ, ಇವುಗಳಿಂದ ಒಲಿಸಲು ಸಾಧ್ಯವಿಲ್ಲ. ಅಂತರಂಗದಲ್ಲಿ ಧ್ಯಾನಮಾಡಿ ಒಲಿಸಲು ಹಂಬಲಿಸಿ ಅಕ್ಕ ಹತಾಶಳಾಗಿದ್ದಾಳೆ. ಏಕೆಂದರೆ ದೇವನು ವಾನಾತೀತನು. ವಾಕ್ ಮನಸ್ಸುಗಳಿಗೆ ನಿಲುಕದವನನ್ನು ಮನದಲ್ಲಿ ಧ್ಯಾನಮಾಡಿ ಹೇಗೆ ಒಲಿಸಲು ಸಾಧ್ಯವಾದೀತು ! ಜಪ-ಸ್ತೋತ್ರಮಾಡಿ, ಹಾಡಿ ಹೊಗಳಿ ಹರಿದಾಡಿ ಅಕ್ಕ ಸೋತಿದ್ದಾಳೆ. ಏಕೆಂದರೆ ದೇವನು ನಾದಾತೀತನು. ಬುದ್ದಿಯಿಂದ, ತರ್ಕದಿಂದ ತಿಳಿಯಲು ಅಕ್ಕ ತವಕಗೊಂಡು ನಿರಾಶಳಾಗಿದ್ದಾಳೆ, ಏಕೆಂದರೆ ದೇವನೇ ಮತಿಗತೀತನಾಗಿದ್ದಾನೆ. ಹೃದಯಕಮಲದಲ್ಲಿ ಇಂಬಿಟ್ಟು ಕೊಳ್ಳಲು ಹಂಬಲಿಸಿ ಹಗರಣಗೊಂಡಿದ್ದಾಳೆ. ಯಾಕೆಂದರೆ ದೇವನು ಸರ್ವಾಂಗ ಪರಿಪೂರ್ಣನು. ಯಾವುದು ಖಂಡಿತವೋ ಅದು ಮಾತ್ರ ಒಂದು ಸ್ಥಾನ, ಕಾಲದಲ್ಲಿ ಇಂಬಿಡಲ್ಪಡಲಿಕ್ಕೆ ಬರುತ್ತದೆ ವಿಶ್ವದೊಳಗೆಲ್ಲ ಓತಪ್ರೋತವಾಗಿ ತುಂಬಿ ತುಳುಕಿ ವಿಶ್ವಕ್ಕೂ ಅತೀತವಾದ ಘನವಸ್ತು, ಅಖಂಡನಾದ ಪರಿಪೂರ್ಣ ಪರಶಿವನನ್ನು ಹೃದಯ ಕಮಲವೆಂಬ ಒಂದು ಸ್ಥಾನ ವಿಶೇಷದಲ್ಲಿ ಸೀಮಿತಗೊಳಿಸಿ ಇಂಬಿಟ್ಟುಕೊಳ್ಳಲು ಹೇಗೆ ಸಾಧ್ಯ ? ನಾವು ದೇವನ ಗರ್ಭದಲ್ಲಿ ಇಂಬಿಡಲ್ಪಡಬಹುದು, ದೇವನು ನಮ್ಮಲ್ಲಿ ಇಂಬಿಡಲ್ಪಡಲಾರನು. 'ಈ ಎಲ್ಲ ಪ್ರಯತ್ನಗಳಿಂದ ನಿನ್ನನ್ನು ಒಲಿಸಲು ಸಾಧ್ಯವಿಲ್ಲೆಂದು ಮನಗಂಡು ನೀನೇ ಒಲಿಯಬೇಕೆಂದು ನಿನ್ನಲ್ಲಿ ನಾನು ಶರಣಾಗತಳಾಗುತ್ತಿರುವೆ.' ಎಂಬ ಭಾವವಿದೆ ಅಕ್ಕನ ವಚನದಲ್ಲಿ.

ಶ್ರೀ ಅರವಿಂದರು ಸಹ ತಮ್ಮ ಪೂರ್ಣಯೋಗದಲ್ಲಿ ಶರಣಾಗತಿ ಕುರಿತು ಮಹತ್ವದ ಸ್ಥಾನ ಕೊಟ್ಟಿದ್ದಾರೆ. ಅವರು ಹೀಗೆ ಅಭಿಪ್ರಾಯ ಪಡುತ್ತಾರೆ.

It is necessary if you want to progress in your sadhana that you should make the submission and surrender of which you speak sincere, real and possible."

"ನಿನ್ನ ಸಾಧನೆಯಲ್ಲಿ ನೀನು ಮುಂದುವರಿಯಬೇಕಾದರೆ, ಯಾವುದನ್ನು ಕುರಿತು ನೀನು ನಿಷ್ಠೆಯಿಂದ ದುಡಿದು ಸಾಧ್ಯವಾದುದನ್ನಾಗಿ ಮಾಡಿಕೊಳ್ಳ ಬೇಕೆಂದಿರುವಿಯಾ ಆ ಸತ್ಯಕ್ಕೆ ಸಂಪೂರ್ಣವಾಗಿ ಒಳಪಡಿಸಿಕೊಂಡ ಶರಣಾಗತಿಯನ್ನು ಹೊಂದಲೇಬೇಕು.”

"It is ego and desire that prevent surrender. If there is no surrender, there can be no transformation of the whole being. Absolute sincerity can make the determination of surrender rapidly effective."

"ಆಶೆ ಮತ್ತು ಅಹಂಕಾರಗಳು ಶರಣಾಗತಿಗೆ ಅಡ್ಡಿಯಾಗಿರುವ ಪ್ರಬಲ ಶಕ್ತಿಗಳು. ಶರಣಾಗತಿ ಇಲ್ಲದೆ ಸಾಧಕನ ಪೂರ್ಣ ವ್ಯಕ್ತಿತ್ವದಲ್ಲಿ ಪರಿವರ್ತನೆ ಸಾಧ್ಯವೇ ಇಲ್ಲ. ಪರಿಪೂರ್ಣ ಪ್ರಾಮಾಣಿಕತೆಯಿಂದ ಕೂಡಿದ ಅಚಲವಾದ ನಿಷ್ಠೆಯು ಈ ಶರಣಾಗತಿಯನ್ನು ಪ್ರಭಾವಯುಕ್ತವಾಗಿ ತ್ವರಿತ ಗತಿಯಲ್ಲಿ ಸಾಧ್ಯವಾಗುವಂತೆ ಮಾಡುತ್ತದೆ."

A Complete surrender is not possible in so short a time, -for a complete surrender means to cut the knot of the ego in each part of the being and offer it, free and Whole, to the Divine.

"ಸಂಪೂರ್ಣ ಶರಣಾಗತಿಯು ಕೇವಲ ಅಷ್ಟು ಅಲ್ಪ ಕಾಲದಲ್ಲಿ ಸಾಧ್ಯವಾಗುವಂತಹುದಲ್ಲ. ಏಕೆಂದರೆ, ಸಂಪೂರ್ಣ ಶರಣಾಗತಿಯಲ್ಲಿ ನಮ್ಮ ದೇಹದ ಕಣಗಳಲ್ಲಿಯೂ ಇರುವ ಅಹಂಕಾರದ ಗಂಟನ್ನು ಕತ್ತರಿಸಿ ಅದೆಲ್ಲವನ್ನೂ ನಿರ್ಹೇತುಕವಾಗಿ ದೈವಶಕ್ತಿಗೆ ಒಪ್ಪಿಸಬೇಕಾಗುತ್ತದೆ."

ಅರವಿಂದಾಶ್ರಮದ ಶ್ರೀ ಮಾತೆಯವರು ಸಹ ಶರಣಾಗತಿಯ ಮಹತಿಯನ್ನು ಎತ್ತಿ ತೋರಿಸಿದ್ದಾರೆ :

"True surrender enlarges you. It increases your capacity : It gives you greater in quality and in quantity: which you could not have had by yourself."

"ನಿಜವಾದ ಶರಣಾಗತಿ ನಿನ್ನನ್ನು ವಿಕಾಸಗೊಳಿಸುತ್ತದೆ. ನಿನ್ನ ಶಕ್ತಿಯನ್ನು ಅಧಿಕಗೊಳಿಸುತ್ತದೆ. ನಿನ್ನಿಂದ ನೀನೇ ಪಡೆಯಲಾಗದಂತಹ ಶಕ್ತಿಯನ್ನು ಪ್ರಮಾಣದಲ್ಲಿಯೂ ಮತ್ತು ಗುಣದಲ್ಲಿಯೂ ಅಧಿಕವಾದಂತಹ ರೀತಿಯಲ್ಲಿ ಉಂಟು ಮಾಡಿಕೊಡುತ್ತದೆ."


"The true, lasting queitness in the vital and the physical as well as in the mind comes from a complete consecration to the Divine; for when you can no more call anything, not even yourself, yours, when everything including your body, sensations, feelings and thoughts belong to the Divine. The Divine takes the entire responsibility of all and you have nothing more to worry about."

"ದೈಹಿಕವಾದ ಮತ್ತು ಮಾನಸಿಕವಾದ ಆತ್ಯಂತಿಕ ಶಾಂತಿ ಲಭಿಸಬೇಕಾದರೆ ದೈವಶಕ್ತಿಯನ್ನು ಕುರಿತು ಸಂಪೂರ್ಣವಾದ ಸರ್ವಾರ್ಪಣ ಭಕ್ತಿ ಅತ್ಯಂತ ಅವಶ್ಯಕ, ಏಕೆಂದರೆ ನೀನು ನಿನ್ನ ತನವೆಲ್ಲವನ್ನೂ ಕಳೆದುಕೊಂಡಾಗ ನಿನ್ನ ಸರ್ವಸ್ವವನ್ನು, ದೇಹ, ಭಾವನೆಗಳು ಇಂದ್ರಿಯಗಳು, ಆಲೋಚನೆಗಳು- ಎಲ್ಲವನ್ನು ದೈವಶಕ್ತಿಗೆ ಅರ್ಪಿಸಿ ದೂರ ನಿಂತಾಗ, ಆ ದೈವ ಶಕ್ತಿಯೇ ಅವುಗಳೆಲ್ಲದರ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ನಿನಗೆ ಅವೆಲ್ಲವುಗಳ ತೊಂದರೆಯಿಂದ ಮುಕ್ತಿ ಲಭಿಸುತ್ತದೆ."

ಇಂಥದೊಂದು ಭಾವವನ್ನು ಅಭಿವ್ಯಕ್ತಿಗೊಳಿಸುವ ಶ್ರೀ ರಾಮಕೃಷ್ಣರ ಮಾತೊಂದು ಹೀಗಿದೆ: "ಓ ತಾಯಿ ನಾನು ಯಂತ್ರ, ನೀನು ಯಂತ್ರವಾಹಕಳು. ನಾನು ರಥ, ನೀನು ರಥಿಕಳು. ನೀನು ತಿರುಗಿಸಿದಂತೆ ನಾನು ತಿರುಗುವೆ; ನೀ ಮಾಡಿಸಿದಂತೆ ನಾ ಮಾಡುವೆನು."

ಪರಮಾತ್ಮನ ಕರುಣಿ ಧಾರೆಸದೆ ಇರಲು ಮುಖ್ಯ ಕಾರಣ 'ಅಹಂ'ದ ಅಂಶ ಸಾಧಕನಲ್ಲಿ ಉಳಿದಿರುವುದು. 'ನಿನ್ನನ್ನು ನಂಬಿರುವೆ; ದೇವ ನೀನೇನಾದರೂ ಮಾಡು; ಕೊಲ್ಲು ಕಾಯಿ ನಿಮ್ಮ ಧರ್ಮ.' ಎಂದು ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡಾಗ ಸೆಲೆಯ ಬಾಯಿಗೆ ಅಟೆದುಕೊಂಡಿದ್ದ ಕಲ್ಲು ಅರುಗಾದಾಗ ಅದು ನಿರರ್ಗಳವಾಗಿ ಹೊಮ್ಮುವಂತೆ ದೇವನ ಕರುಣಿಯು ಧಾರೆಸತೊಡಗುತ್ತದೆ; ಅದು ಮಹಾಪೂರವಾಗಿ ಹರಿದು ಬಂದು ಬಾಳಿನಲ್ಲಿ ಅನುಭಾವದ ಹಸಿರನ್ನು ತುಂಬುತ್ತದೆ.

೭. ಹಂಬಲ

ಆ ಪರಮಾತ್ಮನಲ್ಲಿ ಅನನ್ಯವಾದ | ಶರಣಾಗತಿಯಾಡನೆ, ಸಾಧಕನಲ್ಲಿ ಇರಬೇಕಾದ ಇನ್ನೊಂದು ಮಹತ್ವದ ಅಂಶ ದೇವನ ಕೃಪೆಗಾಗಿ ಉತ್ಕಟ ಹಂಬಲ. ಹಂಬಲವೆಂದರೆ ಕೇವಲ ಬೌದ್ಧಿಕವಾಗಿ ಕರೆಯುವುದಲ್ಲ, ಹೃದಯದ ಅಂತರಾಳದಿಂದ ಮೊರೆಯಿಡುವುದು. ಬಸವ ಪ್ರತಿಪಾದಿತ ಶಿವಯೋಗದ ಮುಖ್ಯ ಸಾಹಿತ್ಯವಾದ ವಚನ ವಾಜ್ಯದಲ್ಲಿ ಈ 'ಹಂಬಲ', ದೇವನಿಗಾಗಿ ಭಕ್ತ ಪಡುವ ವ್ಯಾಕುಲತೆ ಅತ್ಯಂತ ರಮಣೀಯ, ಮತ್ತು ಹೃದಯಸ್ಪರ್ಶಿ,

ಅಯ್ಯಾ, ಎಳೆಗರು ತಾಯನರಸಿ ಬಳಲುವಂತೆ
ಅಯ್ಯಾ, ನಾನು ನಿಮ್ಮನರಸಿ ಬಳಲುತ್ತಿದ್ದೇವೆ.
ಅಯ್ಯಾ, ನೀವೆನ್ನ ಮನಕ್ಕೆ ಪ್ರಸನ್ನ ಮಾಡಿ
ಕಾರುಣ್ಯವ ಮಾಡಿರಯ್ಯಾ, ನೀವೆನ್ನ ಮನಕ್ಕೆ
ನೆಲೆವನೆಯೋಗಿ ಕಾರುಣ್ಯವ ಮಾಡಿ,
ನೀನಿನಿತು ಲೇಸನೀಯಯ್ಯ
ಅಂಬೇ ಅಂಬೇ ಕೂಡಲ ಸಂಗಮದೇವಾ. -ಬ.ಷ.ವ. ೧೦೧೫

ಎಳೆಗರುವಿಗೆ ಹಸಿವಾಗಿದೆ. ಮೇಯಲು ಹೋದ ಆಕಳು ಇನ್ನೂ ಮನೆಗೆ ಬಂದಿಲ್ಲ. ಹೊಟ್ಟೆಯ ಹಸಿವಿನ ಜೊತೆಗೆ ತಾಯಿಯ ನೆನಪು ವಿಪರೀತವಾಗಿ ಕಾಡುತ್ತಿದೆ. ಆಗ ಆ ಮುಗ್ಧ ಕರು 'ಅಂಬಾ ಅಂಬಾ' ಎಂದು ಕರೆಯುವ ಪರಿ ಹೃದಯ ಭೇದಕವಾಗಿರುತ್ತದಷ್ಟೇ. ಅದೇ ಪರಿಸ್ಥಿತಿಯೋಗಿದೆ ಈ 'ಜೀವ' ಪಶುವಿನದು. ಆತ್ಮದ ಹಸಿವೆ ಒಂದು ಕಡೆ; ಪರಮಾತ್ಮನ ನೆನಪು ಮತ್ತೊಂದು ಕಡೆ.

"ಸಮುದ್ರದೊಳಗಣ ಸಿಂಪಿನಂತೆ
ಬಾಯಿ ಬಿಡುತ್ತಲಿದ್ದೇನಯ್ಯಾ,
ನೀವಲ್ಲದೆ ಮತ್ತಾರೂ ಎನ್ನವರಿಲ್ಲ ನೋಡಯ್ಯಾ,
ಕೂಡಲ ಸಂಗಮದೇವ, ನೀವಲ್ಲದೊಳಕೊಂಬುವವರಿಲ್ಲ ನೋಡಯ್ಯ" -ಬ.ಷ.ವ, ೫೫

ಸಮುದ್ರದಲ್ಲಿರುವ ಸಿಂಪು ಸ್ವಾತಿ ಮಳೆಯ ನೀರನ್ನೇ ಹಂಬಲಿಸುತ್ತ ಹೇಗೆ ಬಾಯಿ ಬಿಡುವುದೋ ಹಾಗೇ, ಈ ಸಂಸಾರ ಸಾಗರದಲ್ಲಿ ತೇಲುತ್ತಿರುವ ಜೀವನೆಂಬ ಸಿಂಪು ಹರನ ಕರುಣೆಯೆಂಬ ಸ್ವಾತಿಯ ಜಲವನ್ನೇ ನಿರೀಕ್ಷಿಸುತ್ತಿರುವುದು. ಏಕೆಂದರೆ ಸಿಂಪಿಗೆ ಮುತ್ತನ್ನುಂಟು ಮಾಡಿಕೊಡಲು ಸ್ವಾತಿಯ ಬಿಂದುವಿನ ಹೊರತು ಬೇರಿನ್ನಾವ ನೀರಿನಲ್ಲಿಯೂ ಆ ಸಾಮರ್ಥವಿರಲಾರದು. ಅದರಂತೆ ಜೀವನಿಗೆ ಮುಕ್ತಿಯನ್ನೀಯುವ ಸಾಮರ್ಥ ದೇವನನ್ನುಳಿದು ಇನ್ನಾರಿಗೂ ಇಲ್ಲ. ಆದ್ದರಿಂದ ಬಸವಣ್ಣನವರು ಸಮುದ್ರದ ಸಿಂಪಿನಂತೆ ಹರನ ಕರುಣಿಗಾಗಿ ಕೈ ಚಾಚಿ ತಮ್ಮನ್ನೆತ್ತಿಕೊಂಡು ಮುಕ್ತವನ್ನಾಗಿ ಮಾಡಲು ಹಲುಬಿದ್ದಾರೆ.

"ಅಯ್ಯಾ ನೀನೇಕೆ ಬರಲೊಲ್ಲೆ ಹೇಳಯ್ಯಾ ?
ನೀ ಬಾರದಿರಲಾನು ಕಲ್ಲು ಮರನಾಗಿಹೆನಯ್ಯಾ
ಕಪಿಲಸಿದ್ಧ ಮಲ್ಲಿನಾಥಯ್ಯ, ನೀ ಬಾರಯ್ಯ ನಿಮ್ಮ ಧರ್ಮ ಹೇಳಯ್ಯಾ." -ಸಿ.ವ, ೬೪೬

ಸಿದ್ದರಾಮಣ್ಣನವರು, 'ಶಿವನೇ ನೀ ಬರದಿದ್ದರೆ ನಾನು ಜಡವಸ್ತುವಾಗಿ ಪರಿಣಮಿಸುವೆ. ನೀ ಬಂದು ನಿನ್ನ ಧರ್ಮವ ತಿಳಿಸಿ ಎನ್ನಲ್ಲಿ ಚೈತನ್ಯ ತುಂಬಿ ನಿನ್ನಡಿಗೆ ಬರಮಾಡಿಕೊಳ್ಳಯ್ಯಾ.' ಎಂದು ಹಂಬಲಿಸಿದ್ದಾರೆ.

"ಅಕಟಕಟಾ, ಶಿವ ನಿನಗಿನಿತು ಕರುಣವಿಲ್ಲ !
ಅಕಟಕಟಾ! ಶಿವ ನಿನಗಿನಿತು ಕೃಪೆಯಿಲ್ಲ !
ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ ?
ಏಕೆ ಹುಟ್ಟಿಸಿದೆ ಪರಲೋಕ ದೂರನ ?
ಏಕೆ ಹುಟ್ಟಿಸಿದೆ ? ಕೂಡಲ ಸಂಗಮದೇವಾ,
ಕೇಳಯ್ಯಾ. ಎನಗಾಗಿ ಮತ್ತೊಂದು ತರುಮರಾದಿಗಳಿದ್ದಿಲ್ಲವೆ ?" -ಬ.ಷ.ವ, ೬೪

ಇಹಲೋಕದಲ್ಲಿ ದುಃಖಿಯೋಗಿರುವ ಪರಲೋಕ ಸುಖವನ್ನನುಭವಿಸದ ನನ್ನನ್ನು ಏಕೆ ಹುಟ್ಟಿಸಿದೆ ? ಶಿವನೆ ! ನಿನಗೆ ಸ್ವಲ್ಪವಾದರೂ ಕರುಣಿ ಇಲ್ಲವೇ ? ಶಿವನೇ ! ನಿನ್ನಲ್ಲಿ ಸ್ವಲ್ಪವಾದರೂ ಕೃಪೆಯಿರಬಾರದೆ ? ಶಿವನೇ ನನ್ನನ್ನು ಹುಟ್ಟಿಸುವುದರ ಬದಲು ಗಿಡಮರಗಳನ್ನಾದರೂ ಹುಟ್ಟಿಸ ಬಾರದಾಗಿತ್ತೇ ? ಎಂದು ಬಸವಣ್ಣನವರು, ಮಗುವು ತಾಯಿಯ ಮೇಲೆ ಹುಸಿ ಮುನಿಸು ತೋರಿಸಿ ಹಠಮಾಡಿ ತಿಂಡಿಯನ್ನು ದೊರಕಿಸಿಕೊಳ್ಳುವಂತೆ, ಶಿವನ ಮೇಲೆ ಹುಸಿ ಮುನಿಸು ತೋರಿ ಅವನ ಕೃಪಾಯಾಚನೆ ಮಾಡಿದ್ದಾರೆ.

ಅಯ್ಯಾ ! ನೀನೆನಗೆ ಶ್ರೀಗುರುವಪ್ಪೊಡೆ,
ನಾ ನಿನಗೆ ಶಿಷ್ಯನಪ್ಪೊಡೆ,
ಎನ್ನ ಕಾಯದ ಕರ್ಮವ ತೊಡೆದು,
ಎನ್ನ ಕರಣಾದಿ ಗುಣಂಗಳ ಕಳೆದು,
ಎನ್ನ ಪ್ರಾಣದ ಧರ್ಮವ ನಿಲಿಸಿ,
ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ;
ನೀನೆನ್ನ ಕರಸ್ಥಲಕ್ಕೆ ಬಂದು, ಕಾರುಣ್ಯವ ಮಾಡಾ, ಗುಹೇಶ್ವರ !

ಜಗದ್ದುರು ಅಲ್ಲಮ ಪ್ರಭುದೇವರು ಪರಮನಿರಂಜನ ಗುರುವಿಗೆ ಶರಣಾಗಿ ಅವನ ಕಾರುಣ್ಯಕ್ಕೆ ಕೈಚಾಚಿ ಬೇಡಿಕೊಂಡಿದ್ದಾರೆ, ಕಾಯ-ಕರಣ ಪ್ರಾಣಗಳ ಉಪಟಳವನ್ನು ನಿಲ್ಲಿಸಿ, ನೀನು ನನ್ನ ಕಾಯಪ್ತಾಣಗಳಲ್ಲಿ ಇಷ್ಟ ಪ್ರಾಣ ಭಾವಲಿಂಗವಾಗಿ ನೆಲೆಸಿ, ಎನ್ನ ಕರಸ್ಥಲಕ್ಕೆ ಬಂದು ಕಾರುಣ್ಯವ ಮಾಡು ಎಂದು ಲಿಂಗದೋಲುಮೆಗಾಗಿ ಹಂಬಲಿಸಿದ್ದಾರೆ. (ಅ.ವ. ೫೩)

ಜೀವ ತರಂಗಿಣಿ

ಪರಮಾತ್ಮನಿಗಾಗಿ ಜೀವವು ಈ ಪರಿಯಿಂದ ಹಂಬಲಿಸುವುದೇಕೆ ? ಶಕ್ತಿ ವಿಶಿಷ್ಟಾದೈತ ಸಿದ್ದಾಂತದ ಪ್ರಕಾರ ಜೀವಾತ್ಮರುಗಳು ಹೊರಹೊಮ್ಮಿರುವುದು ಆ ಮೂಲ ನೆಲೆಯಾದ ಪರಮಾತ್ಮನಿಂದ. ಆದ್ದರಿಂದ ಆ ಮೂಲವನ್ನು ಸೇರುವ ತನಕ ಜೀವಾತ್ಮನಿಗೆ ಸಮಾಧಾನವಿಲ್ಲ. ದೇವನ ಕಡೆಗಿರುವ ಸಾಧಕನ ಹಂಬಲವನ್ನು ಸಮುದ್ರವನ್ನು ಸೇರ ಬಯಸುವ ನದಿಯ ನೀರಿಗೆ ಹೋಲಿಸಬಹುದು. ನೀರಿನ ತಾಯಿ ಸಮುದ್ರವೆಂದು ಬೇರೆ ಹೇಳಬೇಕಾಗಿಲ್ಲ. ಯಾವುದೋ ಕಾರಣದಿಂದ (ಲೀಲೆಯಿಂದ) ನೀರಿನ ಒಂದು ಹನಿಯು ಸಮುದ್ರವನ್ನು ಬಿಟ್ಟು ಹೊರಬಂದ ನಂತರ ಅದು ತಿರುಗಿ ತನ್ನ ತಾಯಿಯ ಒಡಲನ್ನು ಅಂದರೆ ಮೂಲ ನೆಲೆಯನ್ನು ಸೇರುವವರೆಗೆ ಅದಕ್ಕೆ ಸಮಾಧಾನವಿಲ್ಲ; ವಿಶ್ರಾಂತಿಯಿಲ್ಲ. ರವಿಯ ರಶ್ಮಿಗಳಿಂದ ಸಮುದ್ರದ ನೀರು ಕಾಯು ಉಗಿಯೋಗಿ ಗಗನದಲ್ಲಿ ತೇಲಾಡಿದರೂ ತನ್ನ ತವರುಮನೆಯಾದ ಸಮುದ್ರವನ್ನೇ ಹಂಬಲಿಸುತ್ತಿರುತ್ತದೆ. ತಂಗಾಳಿ ಬೀಸುತ್ತಲೇ ಬಹಳ ದಿನಗಳಿಂದ ಅಗಲಿದ ಸಹೋದರಿಯರು ಒಬ್ಬರನ್ನೊಬ್ಬರು ಅಪ್ಪಿ ಕೊಳ್ಳುವಂತೆ, ಮೊಡಗಳು ಒಂದನ್ನೊಂದು ತಬ್ಬಿಕೊಂಡು ನಾ ಮುಂದೆ ನೀ ಮುಂದೆ ಎಂದು ಭೂಮಿಗೆ ಬೀಳುವವು. ಸಮುದ್ರವನ್ನು ಬಿಟ್ಟು ನೀರಿನ ಹನಿಯು ಘನ, ದ್ರವ, ಉಗಿ, ಮಂಜು, ಇಬ್ಬನಿ ಯಾವ ರೂಪದಲ್ಲಿರಲಿ, ಯಾವ ಸ್ಥಳದಲ್ಲಿರಲಿ, ತನ್ನ ತವರು ಮನೆಗೆ ಹೋಗಬೇಕೆಂದು ಹಗಲಿರುಳೆನ್ನದೆ ಅವ್ಯಾಹತವಾಗಿ ಧಾವಿಸಿ ಹರಿಯುತ್ತಿರುವುದು. ಆ ಪ್ರವಾಹವನ್ನು ಪ್ರತಿಬಂಧಿಸುವುದಕ್ಕಾಗಿ ನಡುವೆ ದಿನ್ನೆಗಳು ಅಡ್ಡಾದರೆ ಅವುಗಳನ್ನು ಕೊರೆದು ಭೇದಿಸುವುದು, ಕಲ್ಲುಗಳನ್ನು ನೂಕಿ ತಳ್ಳುವುದು, ಬೆಟ್ಟಗಳನ್ನು ಛೇದಿಸಿ ಅಥವಾ ಬಳಸಿಕೊಂಡು ಹೋಗುವುದು. ಜೀವದ ಮೇಲಿನ ಆಸೆ-ಆಕಾಂಕ್ಷೆ ತೊರೆದು ಉನ್ನತವಾದ ಪರ್ವತಗಳ ಮೇಲಿಂದ ಕೆಳಗುರುಳಿ ದಬದಬೆಯೋಗಿ ಬೀಳುವುದು. ಅದು ಹೋಗುವ ದಾರಿಯಲ್ಲಿ ಯಾರೂ ಅಡ್ಡ ಬರಲಾರರು. ಯಾವ ಶಕ್ತಿಯೂ ಅದನ್ನು ತಡೆದು ನಿಲ್ಲಿಸಲಾರದು. ಎಲ್ಲ ಕಷ್ಟ ಕಾರ್ಪಣ್ಯಗಳನ್ನುಂಡು ತನ್ನದೇ ಆದ ಒಂದು ರಾಜಮಾರ್ಗ ಹುಡುಕಿಕೊಂಡು ಅಂದರೆ ಹಳ್ಳ-ನದಿಯೋಗಿ, ಮೊದಲಿನ ಹೋರಾಟ ಕಡಿಮೆಯಾದಂತೆ ಸ್ವಲ್ಪ ಸಾವಧಾನವಾಗಿ ರಾಜಕನ್ನಿಕೆಯಂತೆ ಘನ ಗಂಭೀರವಾಗಿ ಹರಿದು ಸಮುದ್ರವನ್ನು ಸೇರುವುದು.

ಸಮುದ್ರದಿಂದ ಉಗಿಯೋಗಿ ಹೊರಟು ಆಕಾಶವನ್ನು ಸೇರಿದ ನೀರು ಸಮುದ್ರವನ್ನು ಕೂಡುವವರೆಗೆ ಅವಿಶ್ರಾಂತವಾಗಿ ಶ್ರಮಪಟ್ಟು ಹೇಗೆ ಹರಿಯುವುದೋ ಅದೇ ರೀತಿ ಚಿಚ್ಛಕ್ತಿಯ ಒಡಲಿನಿಂದ ಹೊರಹೊಮ್ಮಿದ ಚಿದಂಶಿಕನಾದ ಜೀವಾತ್ಮನು ಕೆಲವು ಸಮಯ ಈ ಮರ್ತದಲ್ಲಿರಬೇಕಾದರೂ ಆ ದೇವನ ಸಾನ್ನಿಧ್ಯಕ್ಕಾಗಿ ಯಾವಾಗಲೂ ಹಂಬಲಿಸುತ್ತಿರುವನು. ಹರನ ಹಂಬಲವುಳ್ಳವನೇ ನಿಜವಾದ ಶರಣನು. ಹೀಗೆ ಅನೇಕ ಶರಣರು ದೇವನಿಗಾಗಿ ಹಂಬಲಿಸಿರುವುದನ್ನು ಕಾಣಬಹುದಾಗಿದೆ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಗುರುತ್ವವು ಅರ್ಹತೆಯಿಂದ, ಜಾತಿಯಿಂದಲ್ಲಇಷ್ಟಲಿಂಗ ಮತ್ತು ಸಾಲಿಗ್ರಾಮNext
*