ಲಿಂಗಯೋಗ (ಶಿವಯೋಗ/ಲಿಂಗಾಂಗಯೋಗ)

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಲಿಂಗಯೋಗ

ಮಾಣಿಕ್ಯವ ನುಂಗಿದ ಮತ್ಮದಂತೆ ಲಿಂಗದ ಬೆಳಗನ್ನು ಅಳವಡಿಸಿಕೊಂಡ ಶರಣನ ಜೀವನವೇ ಒಂದು ಅಖಂಡಯೋಗ, ಆಗ ಅವನು ಎಲ್ಲ ಸ್ಥಿತಿಗಳನ್ನೂ ದಾಟಿ ನಿಂತವನಾಗಿರುತ್ತಾನೆ.

ಕಂಗಳು ತುಂಬಿದ ಬಳಿಕ ನೋಡಲಿಲ್ಲ.
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ.
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ.
ಮನವು ತುಂಬಿದ ಬಳಿಕ ನೆನೆಯಲಿಲ್ಲ.
ಮಹಂತ ಕೂಡಲ ಸಂಗಮದೇವನ.
-ಬ.ಷ.ವ. ೮೫೨

ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ
ಮಾಟವುಳ್ಳನ್ನಬರ ಜಂಗಮವ ಹಾಡಿದೆ
ಜಿಹ್ನೆಯುಳ್ಳನ್ನಬರ ಪ್ರಸಾದವ ಹಾಡಿದೆ
ಈ ತ್ರಿವಿಧ ನಾಸ್ತಿಯಾದ ಬಳಿಕ
ಎನ್ನ ನಾ ಹಾಡಿಕೊಂಡೆ ಕಾಣಾ, ಕೂಡಲ ಸಂಗಮದೇವಾ. -ಬ.ಷ.ವ. ೯೧೬

ಶರಣನೆದ್ದು ಕುಳಿತರೆ ಶಿವರಾತ್ರಿ;
ಶರಣ ನಿದ್ರೆ ಗೈದರೆ ಜಪ;
ಶರಣ ನಡೆದುದೇ ಪಾವನ;
ಅವನು ನುಡಿದುದೇ ಪರತತ್ವ;
ಅವನ ಇರುಹೇ ಚೈತನ್ಯ ಸಮಾಧಿ,
ಅವನ ಬದುಕೇ ಲಿಂಗಯೋಗ; ಅವನ ಕಾಯವೇ ಕೈಲಾಸ.
(ಬ.ಷ.ವ. ೮೭೨)

ಶರಣನು ತನ್ನ ದೇಹವೆಂಬ ಮಡಿಕೆಯಲ್ಲಿ ಚೈತನ್ಯ ಜ್ಞಾನವೆಂಬ ದ್ರವ್ಯವನ್ನು (ಪದಾರ್ಥವನ್ನು) ತುಂಬಿ, ಚಿತ್ತಸಮತೆ ಎಂಬ ನೀರನ್ನು ಹಾಕಿ, ಪವಿತ್ರಗೊಂಡ ಇಂದ್ರಿಯಗಳೆಂಬ ಮುಚ್ಚಳವ ಮುಚ್ಚಿ, ಜ್ಞಾನವೆಂಬ ಉರಿಯನ್ನು ಕೊಡುವನು. ಮತಿ ಎಂಬ ಸಟ್ಟುಗದಲ್ಲಿ ಘಟ್ಟಿಸುತ್ತ, ದಿವ್ಯಜೀವನವೆಂಬ ಪ್ರಸಾದವನ್ನು ಎಡೆ ಮಾಡುವನು. ತನ್ನ ಭಾವವೆಂಬ ಸಿಂಹಾಸನದ ಮೇಲೆ ದೇವನನ್ನು ಕುಳ್ಳಿರಿಸಿ ಪರಿಣಾಮ, ಸಂತೃಪ್ತಿಯೆಂಬ ಓಗರವನ್ನು ಅವನಿಗೆ ಅರ್ಪಿಸುವನು. ಇಂಥ ಲಿಂಗಯೋಗಿಯ ಸಮಗ್ರ ಬದುಕೇ ಪರಮಾತ್ಮನಿಗೆ ಅರ್ಪಿತ. ಅವನ ಇರುವಿಕೆಯೇ ಪೂಜೆ; ಮಾತುಗಳೇ ಪ್ರಾರ್ಥನೆ.

ಲಿಂಗಾಂಗಯೋಗ ಮತ್ತು ಷಟಸ್ಥಲ

ಲಿಂಗಾಂಗಯೋಗವು ಷಟಸ್ಥಲಗಳ ಸಹಯೋಗದೊಡನೆಯೇ ಸಾಗಬೇಕು. ಷಟಸ್ಥಲದ ಜೀವಾಳವೇ ಲಿಂಗಾಂಗಯೋಗ, ಷಟಸ್ಥಲವು ಲಿಂಗಾಯತ ಧರ್ಮದ ದರ್ಶನಶಾಸ್ತ : ಲಿಂಗಾಂಗಯೋಗ ಎನ್ನುವ ರೇಗಾಡಿ, ಇಷ್ಟಲಿಂಗ ಎನ್ನುವ ಎಂಜಿನನ್ನು ಮುಂದಿಟ್ಟುಕೊಂಡು ಭಕ್ತಿ-ಜ್ಞಾನ ಎನ್ನುವ ಎರಡು ಹಳಿಗಳ ಗುಂಟ ಸಾಗುತ್ತದೆ. ಪ್ರಾರಂಭದ ನಿಲ್ದಾಣ ಭಕ್ತ ಸ್ಥಲಾಂತರ್ಗತ ಪಿಂಡಸ್ಥಲವಾದರೆ ಕೊನೆಯ ನಿಲ್ದಾಣ ಐಕ್ಯಸ್ಥಳ. ಮಾರ್ಗ ಮಧ್ಯೆ ಉಪಸ್ಥಲಗಳ ನಿಲ್ದಾಣಗಳು, ಆರು ಜಂಕ್ಷನ್‌ಗಳೂ ಬರುವವು. ಅವೇ ಷಟಸ್ಥಲಗಳು. ಪರಮಾತ್ಮ ಎನ್ನುವ ಗಿರಿಶೃಂಗವನ್ನು ತಲ್ಪಬೇಕೆಂದು ಲಿಂಗಾಂಗಯೋಗ ಎನ್ನುವ ಪಥದಲ್ಲಿ ನಾವು ಹೊರಟರೆ ಆರೋಹಣದ ಮಾರ್ಗದುದ್ದಕ್ಕೂ ಕೆಲವು ಹಂತಗಳು ಸಿಕ್ಕುವವು. ಅಲ್ಲಿ ನಿಂತು ತನ್ನ ಸ್ಥಿತಿಯನ್ನು, ಸುತ್ತಲಿನ ವೈಭವವನ್ನು ವರ್ಣಿಸಬಹುದು. ಅಂತಹ ಹಂತಗಳೇ ಷಟಸ್ಥಲಗಳು. ಇವು ಸಾಧಕನ Psycho-Spiritual ಮನೋವೈಜ್ಞಾನಿಕ ಮತ್ತು ಅಧ್ಯಾತ್ಮಿಕ ವಿವಿಧ ಹಂತಗಳೆನ್ನಬಹುದು.

ಷಟಸ್ಥಲವನ್ನು ಕುರಿತು ಸ್ವತಂತ್ರವಾದೊಂದು ಕೃತಿಯನ್ನು ಬರೆಯಬೇಕೆಂಬ ಹಂಬಲವಿದೆ. ಆಗ ವಿವರಗಳನ್ನು ನೋಡಬಹುದು. ಈಗ ಅತ್ಯಂತ ಸಂಕ್ಷಿಪ್ತವಾಗಿ ಲಿಂಗಾಂಗಯೋಗಕ್ಕೆ ಸಂಬಂಧಿಸಿದಂತೆ ಷಟಸ್ಥಲವನ್ನು ವಿವರಿಸಲಾಗಿದೆ :

ಎಷ್ಟೋ ಜನ್ಮಗಳವರೆಗೆ ಭವದ ಪಾರಾವಾರದಲ್ಲಿಯೇ ಭವಿಯಾಗಿ ಬಂದ ಈ ಜೀವಕ್ಕೆ ಒಂದಾನೊಂದು ದಿನ ಅರಿವು, ಎಚ್ಚರಿಕೆ ಮೂಡುವುದು. 'ನಾನಾರು ? ನಾನೆಂದರೆ ದೇಹ ಮನ ಪ್ರಾಣಗಳೇ ?' ಎಂಬ ಪ್ರಶ್ನೆ ಉದಿಸುವುದು. 'ನಾನೆಂದರೆ ದೇಹ ಮನ ಪಾಣಗಳ ಮುದ್ದೆಯಲ್ಲ; ಇವೆಲ್ಲವುಗಳ ಸಚೇತಕ ಶಕ್ತಿಯಾದ ಆತ್ಮನೇ ನಾನು', ಎಂಬ ಅರಿವು ಉಂಟಾಗುವುದು. ಈ ಆತ್ಮವು ನೆಲದ ಮರೆಯ ನಿಧಾನದಂತೆ, ಫಲದ ಮರೆಯ ರುಚಿಯಂತೆ, ಉದಕದೊಳಗೆ ಬೈಚಿಟ್ಟ ಬಯಕೆಯ ಕಿಚ್ಚಿನಂತೆ ದೇಹದ ಮರೆಯಲ್ಲಿ ಗುಪ್ತವಾಗಿ ಸುಪ್ತವಾಗಿ ಇದೆ ಎಂಬ ತಿಳುವಳಿಕೆ ಮೂಡುವುದೇ ಪಿಂಡಸ್ಥಲ. ಹಾಗಾದರೆ 'ಈ ಆತ್ಮನಿಗೂ ಬ್ರಹ್ಮಾಂಡವನ್ನಾಳುವ ಪರಮಾತ್ಮನಿಗೂ ಪರಸ್ಪರ ಸಂಬಂಧವೇನು ?' ಎಂಬ ಪ್ರಶ್ನೆಯನ್ನು ಚಿಂತಿಸತೊಡಗಿದಾಗ ಅದು ಪಿಂಡಜ್ಞಾನ ಸ್ಥಲ. ಅಲ್ಲಿ ಮೂಡುವ ತಿಳುವಳಿಕೆಯೆಂದರೆ "ಆ ಪರಮಾತ್ಮನ ಒಂದು ಅಂಶವೇ ನಾನು; ಗಾತ್ರದಲ್ಲಿ ಬೇರೆ ಬೇರೆ ಇದ್ದರೂ ಸೂತ್ರದಲ್ಲಿ, ಸತ್ವದಲ್ಲಿ, ಸ್ವರೂಪದಲ್ಲಿ ಪರಸ್ಪರ ಒಂದೇ; ಅದು ಸಿಂಧು ನಾನು ಬಿಂದು; ಅದು ಭೂಮ ನಾನು ಅಲ್ಪ."

"ಇಂಥ ಮಹತ್ತರವಾದ ಸ್ವರೂಪ ನನ್ನದಾಗಿದ್ರೂ ಸಹ ನಾನು ಪ್ರಾಕೃತಿಕ ಗುಣಗಳಲ್ಲಿ, ದೌರ್ಬಲ್ಯಗಳಲ್ಲಿ ಮುಳುಗಿರುವೆನಲ್ಲಾ" ಎಂಬ ಕಳವಳ ಪ್ರಾರಂಭವಾಗಿ ಲೌಕಿಕ ಆಸೆ-ಆಕಾಂಕ್ಷೆಗಳ ಮೋಹ ತೊರೆಯುವ, ಶಾರೀರಿಕ ಸುಖ ವಿಲಾಸಗಳಲ್ಲಿ ನಿರಾಸಕ್ತಿ ತಾಳುವ ವರ್ತನೆಯನ್ನು ಜೀವವು ತೋರುತ್ತದೆ. ಇದೇ 'ಸಂಸಾರ ಹೇಯಸ್ಥಲ'. ಸಂಸಾರ ಹೇಯಸ್ಥಲದಲ್ಲಿ ಪರಮಾತ್ಮನ ಅನುಗ್ರಹಕ್ಕಾಗಿ, ಪರಮಾತ್ಮನ ಪ್ರತಿನಿಧಿ ಗುರುವಿನ ಕೃಪೆಗಾಗಿ ಜೀವವು ಪರಿತಪಿಸುತ್ತದೆ. ಹಂಬಲಿಸಿ, ಹಲುಬಿ ಬೇಡುತ್ತದೆ. 'ಸಮುದ್ರದೊಳಗಣ ಸಿಂಪಿನಂತೆ', 'ಪಂಕದಲ್ಲಿ ಬಿದ್ದ ಬಡ ಪಶು ಕಾಲು ಬಡಿದು ಅಂಬಾ ಎಂದು ಎತ್ತುವವರಿಗಾಗಿ ಕರೆಯುವಂತೆ'. ಅಡವಿಯಾಳಗೆ ಹೊಲಬುಗೆಟ್ಟ ಪಶುವು ರಕ್ಷಕನಿಗಾಗಿ ಮೊರೆಯಿಡುವಂತೆ ಜೀವವು ಪ್ರಾರ್ಥಿಸುತ್ತದೆ. ಇಂಥ ಮೊರೆತ ಉತ್ಕಟಾವಸ್ಥೆಗೆ ಏರಿದಾಗ ಸದ್ಗುರುವಿನ ದರ್ಶನವಾಗುತ್ತದೆ; ಗುರುಕರುಣಿ ದೊರೆಯುತ್ತದೆ (ಗುರುಕಾರುಣ್ಯಸ್ಟಲ). ಗುರುವು ವಿಭೂತಿ ಧಾರಣ ಮಾಡಿ (ವಿಭೂತಿ ಸ್ಥಲ) ಷಡಕ್ಷರಿ ಮಂತ್ರೋಪದೇಶ ಮಾಡಿ (ಪಂಚಾಕ್ಷರಿ ಸ್ಥಲ) ಲಿಂಗ ಧಾರಣವನ್ನು ಮಾಡುವನು (ಲಿಂಗಧಾರಣ ಸ್ಥಲ).

ಈ ವರೆಗೆ ಬಂದ ಸ್ಥಲ (ಹಂತ) ಗಳೆಲ್ಲವೂ ಭಕ್ತಸ್ಥಲದ ಅಂಗವಾಗಿ, ವಚನ ಸಂಪಾದನಾಕೃತಿಗಳಲ್ಲಿ ಕಾಣಬರುತ್ತಿದ್ದರೂ, ಇವು ಒಂದು ರೀತಿಯಲ್ಲಿ ಪೂರ್ವ ತರಬೇತಿ ಹಂತಗಳು (Preparatory stages) ಎನ್ನಬಹುದು. ಗುರುಕಾರುಣ್ಯ ಪಡೆದು, ವಿಭೂತಿ - ರುದ್ರಾಕ್ಷಿ - ಮಂತ್ರ - ಲಿಂಗಧಾರಣ ಮಾಡಿಕೊಂಡಾಗ ಯಾವನಾದರೊಬ್ಬ ಭಕ್ತನಾಗಲು, ಭಕ್ತ ಸ್ಥಲವನ್ನು ಪ್ರವೇಶಿಸಲು ಸಾಧ್ಯವಷ್ಟೆ ?

ಭಕ್ತನು ಶ್ರದ್ಧಾ ಭಕ್ತಿಯನ್ನು ಅಳವಡಿಸಿಕೊಳ್ಳುವನು. ಸದಾಚಾರ ಸಂಪನ್ನನಾಗುವನು. ಪೂರ್ವದ ಸ್ವಭಾವ ದೋಷಗಳಿದ್ದರೆ ಗೆಲ್ಲಲು ಎಳಸುವನು. ತನ್ನ ತಾಯಿ-ತಂದೆ ಬಂಧು-ಬಳಗ ಎಂದು ಜನರೊಡನೆ ವ್ಯವಹರಿಸದೆ, ತನ್ನ ಆಚಾರ-ವಿಚಾರ-ಸಂಸ್ಕಾರಕ್ಕೆ ಅನುಗುಣವಾಗಿ ಸ್ನೇಹ ಮಾಡುವನು. ಶರಣರ ಸತ್ಸಂಗದಲ್ಲಿ ಒಡನಾಡುವನು. ಪರಮಾತ್ಮನಲ್ಲಿ, ಇಷ್ಟಲಿಂಗದಲ್ಲಿ ಶರಣಾಗತ ಭಕ್ತಿ ತಾಳುವನು. ಯಾವ ಕ್ರಿಯೆಗೂ ಚ್ಯುತಿ ಬರದಂತೆ ಪೂಜಾದಿ ನಿಯಮಗಳನ್ನು ಮಾಡುವನು. ಇದು ಭಕ್ತ ಸ್ಟಲ.

ಶ್ರದ್ಧಾ ಭಕ್ತಿ ನಿಷ್ಟಾ ಭಕ್ತಿಯಾಗಿ ಗಟ್ಟಿಗೊಳ್ಳುವುದು. ಭಾವುಕ ಭಕ್ತಿಯಾಡನೆ ತಾತ್ವಿಕ ಚಿಂತನೆ ನೆಲೆಗೊಳ್ಳುವುದು. ವಿಮರ್ಶಾ ಪ್ರಜ್ಞೆ, ಚಿಕಿತ್ಸಕ ದೃಷ್ಟಿಕೋನ, ತಾನು ನಂಬಿದ ಸತ್ಯ-ತತ್ವದ ಪ್ರತಿಷ್ಠಾಪನೆಗಾಗಿ ಎದೆಗಾರಿಕೆಯ ಹೋರಾಟ ಮುಂತಾದವು ಮಹೇಶ್ವರ ಸ್ಥಲದ ಲಕ್ಷಣಗಳು.

ಈ ಲಕ್ಷಣಗಳು ವಿಶ್ವಧರ್ಮದ ಲಕ್ಷಣಗಳು (Universal Religion) ಎಂಬುದಾಗಿ ಎಡ್ವರ್ಡ್, ಗ್ಯಾಲವೇ ಅಭಿಪ್ರಾಯ ಪಡುತ್ತಾರೆ. ಯಾವುದು 'ದೇವರು, ಕರ್ತ' ಎಂದು ಗುರುತಿಸುತ್ತೇವೆಯಾ ಅದರ ಹೊರತಾದುದೆಲ್ಲ 'ಕಸ'; ಅದನ್ನು ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಬೇಕು. ದೇಹದ ಒಳಗಿರುವ ಅಂಗಾಂಗವೊಂದನ್ನು ರಕ್ಷಿಸಲು ಕ್ಯಾನ್ಸರ್, ಅಲ್ಸರ್ ಕಣಗಳನ್ನು ತೆಗೆಯುವುದಿಲ್ಲವೇ ಹಾಗೆ ! ಅದು ಬಿಟ್ಟು “ಅದೂ ಇರಲಿ, ಇದೂ ಇರಲಿ, ಪಾಪ ! ಯಾರ ಮನಸೂ ನೋಯುವುದೂ ಬೇಡ, ತುಳಸಿ, ಬೇವು, ಬಿಲ್ಯ ಸುತ್ತುವವರೂ ಸುತ್ತಲಿ, ಕುರಿ ಕಡಿಯುವವರೂ ಕಡಿಯಲಿ' ಎನ್ನುತ್ತಾ ಹೋದರೆ ಧರ್ಮದ ಪಾವಿತ್ರ್ಯತೆಯನ್ನು ಕಾಪಾಡಲು ಸಾಧ್ಯವೇ ಆಗದು. ಈ ಧೋರಣಿಗೆ ಶರಣರು ಸಂಪೂರ್ಣ ವಿರೋಧಿಗಳು.

ದೇವರನ್ನು ನಂಬಿ, ತತ್ವನಿಷ್ಠನಾಗಿ ವ್ಯಕ್ತಿ ಹೊರಟಾಗ ವೈಯಕ್ತಿಕ ಬದುಕಿನಲ್ಲಿ ಸುಖ - ದುಃಖ, ನೋವು - ನಲಿವು, ಸ್ತುತಿ - ನಿಂದೆ ಬರಬಹುದು. ಸಾಮಾಜಿಕ ಜೀವನದಲ್ಲಿಯೂ ಕಷ್ಟಗಳು ಎದುರಾಗಬಹುದು. ಏಕೆಂದರೆ 'ಫಲವಿದ್ದ ಮರಕ್ಕೆ ಕಲ್ಲು ಎಸೆಯುವ, ಬರಡು ಮರದ ತಂಟೆಗೆ ಹೋಗದ ಜಗತ್ತಲ್ಲವೇ ಇದು ? ಬದುಕಿನಲ್ಲಿ ಏನೇ ಬಂದರೂ ಸಮಚಿತ್ತದಿಂದ ಎದುರಿಸುವ ಚಿತ್ತ ಸಮತೆಯುಳ್ಳವನು ಪ್ರಸಾದಿ, ಪ್ರಸಾದಿಯ ಲಕ್ಷಣವೆಂದರೆ ಅವಧಾನ ಭಕ್ತಿ; ಅವಧಾನವೆಂದರೆ ಎಚ್ಚರ. ಅಂದರೆ, ತನ್ನ ಬದುಕಿನಲ್ಲಿ, ನಿಯಮದಲ್ಲಿ, ಸಾಧನೆಯಲ್ಲಿ ಎಳ್ಳಷ್ಟೂ ದೋಷ ಬರದಂತೆ; ಎಲ್ಲಿಯೂ ತಪ್ಪದಂತೆ ಎಚ್ಚರ ವಹಿಸಿ ನಡೆಯುವವನು ಪ್ರಸಾದಿ. ಆಸೆ ಪಟ್ಟು ತಿನ್ನನುಲಿಂಗಕ್ಕೆ ಅರ್ಪಿತವಾಗಿ ಬರದ ತನಕ. ಎಲ್ಲ ಇಂದ್ರಿಯಗಳನ್ನು ದಿವ್ಯವಾಗಿ ಮಾಡಿಕೊಂಡು ಶಿವನ ಪ್ರಸಾದವಾಗಿ ಬದುಕನ್ನು ಅನುಭವಿಸುವನು.

ಸಾಧಕನು ನಡೆ-ನುಡಿ, ತಿಳುವಳಿಕೆ ಎಲ್ಲದರಲ್ಲಿಯೂ ಮೆಲ್ಕಂಡ ಲಕ್ಷಣಗಳನ್ನು ಅಳವಡಿಸುತ್ತಾ ಹೋಗುವ ಜೊತೆಗೆ ಯೋಗಾಭ್ಯಾಸದತ್ತ ಲಕ್ಷ್ಯವನ್ನು ಬಿಟ್ಟಿರನು. ಅವನ ಮನಸ್ಸು ಹೆಚ್ಚು ಹೆಚ್ಚು ಯೋಗಾಭ್ಯಾಸದಲ್ಲಿ ತಲ್ಲೀನವಾಗುತ್ತದೆ. ಇದೇ ಪ್ರಾಣಲಿಂಗಿ ಸ್ಥಲ. ಇಲ್ಲಿ ಅನುಭವ ಭಕ್ತಿಯೇ ಮುಖ್ಯ ಲಕ್ಷಣ; ತನ್ನ ಶರೀರದಲ್ಲೇ ಹುದುಗಿರುವ ಚಕ್ರಗಳು ಜಾಗೃತಗೊಂಡು ವಿವಿಧ ಅನುಭವಗಳನ್ನು ಪಡೆಯುವನು. ನಾದ-ಬಿಂದು-ಕಳೆಗಳ ದಿವ್ಯಾನುಭವ ಪ್ರಾಪ್ತಿಯೋಗುವುದು. ಇಷ್ಟೆಲ್ಲ ಅನುಭವಗಳ ದರ್ಶಕವಾದ ಇಷ್ಟಲಿಂಗ ತನ್ನ ಪ್ರಾಣವೇ ಆಗುವುದು; ಸರ್ವಸ್ವವೆನಿಸುವುದು. ತನ್ನ ಶರೀರ-ಇಷ್ಟಲಿಂಗಗಳು ಅದ್ಭುತ ಶಕ್ತಿಯ ಕೇಂದ್ರಗಳೆಂಬುದನ್ನು ಪ್ರಾಣಲಿಂಗಿ ಮನಗಾಣುವನು. ತನ್ನ ಶರೀರವು ಜ್ಞಾನ-ಪ್ರಕಾಶಗಳ ಅಗ್ನಿ ಕುಂಡವಾಗಿರುವುದನ್ನು ಮನಗಾಣುವನು. ಪಿಂಡ ಸ್ಥಲದಲ್ಲಿ 'ನಾನೆಂದರೆ ಆತ್ಮ' ಎಂದು ಪಡೆದ ಅರಿವನ್ನು (Intellectual Awareness) ಈಗ ಪ್ರಾಣಲಿಂಗಿ ಸ್ಥಲದಲ್ಲಿ ಸ್ವತಃ ಅನುಭವಿಸುವನು. ಆತ್ಮ (ಸಾಕ್ಷಾತ್ಕಾರ (self-realisation) ವನ್ನು ಇದೇ ಹಂತದಲ್ಲಿ ಪಡೆಯುವನು. ತನ್ನ ದೇಹದೊಳಗಿನ ಸಚೇತಕ ಶಕ್ತಿ ಆತ್ಮನ ಅನುಭವವಾದ ನಂತರ ಅವನ ಅನ್ವೇಷಣೆ ಮುಂದುವರಿಯುವುದು.

ತಾನು ಶರಣ ಸತಿ, ಪರಮಾತ್ಮನೇ ಪತಿ ಎಂಬ ಮಧುರಾ ಭಕ್ತಿ ಮುಂದೆ ಪರಾಕಾಷ್ಠೆಗೆ ಏರುವುದು. ಇಲ್ಲಿ ಸಾಧಕನದು ಆನಂದ ಭಕ್ತಿ, ಆಗ ಭಾವೋನ್ಮಾದದ ಪರಾಕಾಷ್ಠೆಯನ್ನು ಕಾಣುತ್ತೇವೆ. ಶರಣರ ಭಕ್ತಿ ಹುಚ್ಚುಚ್ಚಾರ ಹರಿಯುವ ಆವೇಶದ ಭಕ್ತಿಯಲ್ಲ. ಅತಾರ್ಕಿಕವಾಗಿಯೂ ಹರಿಯದು. ಗಾಂಭೀರ್ಯ, ಶಾಂತಿ, ತನ್ಮಯತೆ, ತಲ್ಲೀನತೆಗಳಿಂದ ಕೂಡಿದ, ತಾತ್ವಿಕ ಚಿಂತನೆಯಾಡನೆಯೇ ಅಭಿವ್ಯಕ್ತವಾಗುವ ಆನಂದ ಭಕ್ತಿಯಿದು. ಈ ಆನಂದ ಭಕ್ತಿ ಶರಣ ಸತಿ - ಲಿಂಗ ಪತಿಯನ್ನು ಬಹು ಹತ್ತಿರ ಹತ್ತಿರ ತರುತ್ತದೆ. ಶರಣನ ಮನಸ್ಸು ದಿವ್ಯ ಚಿಂತನೆ, ಭಾವಗಳಿಂದ ಪರಿಪಕ್ವವಾಗಿ ಭೂಮ ಸ್ವರೂಪವನ್ನು ಹೊಂದುತ್ತದೆ. ಪರಮಾತ್ಮನ ಉತ್ಕಟಾನುಭವದಲ್ಲಿ ಉರಿಯನ್ನಪ್ಪಿದ ಕರ್ಪೂರದಂತೆ ಕರಗುತ್ತದೆ; ಜಗದ ಒಳ ಹೊರಗೆಲ್ಲ ತುಂಬಿರುವ ಮಹಾ ಬೆಳಗು ಪರಮಾತ್ಮನ ದಿವ್ಯ ಪ್ರಕಾಶವನ್ನು ಅನುಭವಿಸುತ್ತದೆ. ಪಿಂಡ ಜ್ಞಾನ ಸ್ಥಲದಲ್ಲಿ ಪಡೆದ ಅರಿವನ್ನು 'ನಾನು ಆ ದೇವನ ಒಂದು ಅಂಶ; ಸ್ವರೂಪದಲ್ಲಿ ಒಂದೇ' ಎಂಬುದನ್ನು ಐಕ್ಯ ಸ್ಥಲದಲ್ಲಿ ಅನುಭವಿಸುತ್ತದೆ. ಹೀಗೆ ಮಾತಿಗೆ ಇಂಬಿಲ್ಲದ ಶಬ್ದ ಮುಗ್ಧತೆ ನೆಲೆಗೊಂಡರೆ, ಪೂಜ್ಯ-ಪೂಜಕ-ಪೂಜೆ ಎಂಬ ತ್ರಿಪುಟಿಯಳಿಯುತ್ತದೆ. ಇದುವೇ ಸಮರಸ ಭಕ್ತಿ.
ಭಕ್ತ-ಮಹೇಶ್ವರ ಸ್ಥಲಗಳು ಕ್ರಿಯಾ ಪ್ರಧಾನ. ಪ್ರಸಾದಿ-ಪ್ರಾಣಲಿಂಗಿ ಸ್ಥಲಗಳು ಜ್ಞಾನ ಪ್ರಧಾನ, ಶರಣ-ಐಕ್ಯಸ್ಥಲಗಳು ಅನುಭಾವ ಭಕ್ತಿ ಪ್ರಧಾನ. ಶರಣ ಧರ್ಮವು ಭಕ್ತಿಗೆ ಆತ್ಯಂತಿಕ ಸ್ಥಾನ ಕೊಟ್ಟಿರುವುದನ್ನು ನಾವು ಗಮನಿಸಲೇ ಬೇಕು. ಶಂಕರಾತದಲ್ಲಿ ಭಕ್ತಿ ಪ್ರಾರಂಭಿಕ ಹಂತದಲ್ಲಿದ್ದು, ಜ್ಞಾನವೇ ಅಂತಿಮ ಹಂತದಲ್ಲಿ ಆಧಿಪತ್ಯ ಸ್ಥಾಪಿಸಿದರೆ, ಷಟಸ್ಥಲದಲ್ಲಿ ಭಕ್ತಿಶ್ರೀಯೇ ಅನಭಿಷಿಕ್ತ ಸಾಮ್ರಾಜ್ಯ. ಮೊದಲಿನಿಂದ ಕಡೆಯವರೆಗೆ ಆಕೆಯದೇ ಆಧಿಪತ್ಯ; ಕಡೆಯಲ್ಲಿ ಆಕೆಯದೇ ಗೆಲುವು !!

"ಲಿಂಗಾಂಗ ಸಾಮರಸ್ಯ' ಕುರಿತು ಒಂದು ಮಾತನ್ನು ಅರಿಯಬೇಕು. ಭಾವ ಲಿಂಗೈಕ್ಯ, ಕಾಯಲಿಂಗೈಕ್ಯ ಎಂಬ ಎರಡು ತತ್ವಗಳನ್ನು ಅರಿಯದೆ ಬಹಳ ಜನ ಗೊಂದಲಕ್ಕೆ ಸಿಕ್ಕಿರುವುದನ್ನು ಕಾಣುತ್ತೇವೆ. ಮಾನವ ಶರೀರ ತ್ರೈಮಲಾದಿಗಳ ಆಗರವಾಗಿ, ಪ್ರಾಕೃತಿಕ ಗುಣಗಳ ದೌರ್ಬಲ್ಯದ ರಣಾಂಗಣವಾಗಿದ್ದಾಗ ದೇವನ ಕಾರುಣ್ಯಾವತರಣ ಮುಂತಾದುವನ್ನು ಊಹಿಸಲೂ ಅಸಾಧ್ಯ. ಆಗ ಇಲ್ಲಿ ಸಾಧಕ ಶುದ್ದೀಕರಣ ಕ್ರಿಯೆಯಲ್ಲಿ ತೊಡಗುವನು. ಐಕ್ಯ ಸ್ಥಲದಲ್ಲಿ ಸರ್ವಾಂಗವನ್ನು ಶರಣ ಸಾಧಕ ತೊಳೆದುಕೊಂಡಿರುವ ಸ್ಥಿತಿಯಿಂದಾಗಿ ದೈವೀಪ್ರಭೆ ಸರ್ವಾಂಗವನ್ನು ಪ್ರವೇಶಿಸಿ, ವ್ಯಾಪಿಸಿಕೊಳ್ಳುವುದು. ಶರಣನ 'ಭಾವ' ಅದ್ಭುತವಾದ ಪ್ರಕಾಶಆನಂದಗಳನ್ನು ಅನುಭವಿಸಿ ಹೇಳಲಾರದ ಒಂದು ಸ್ಥಿತಿಯನ್ನು ಹೊಂದುತ್ತದೆ. ಇದೂ ಲಿಂಗಾಂಗ ಸಾಮರಸ್ಯ, ಶರಣ ಧರ್ಮದ ದೃಷ್ಟಿಯಲ್ಲಿ ಇದೇ ಆತ್ಯಂತಿಕ ಸಿದ್ದಿಯಲ್ಲ; ಶರಣನು ತನ್ನ ಮನ, ಬುದ್ದಿ, ಚಿತ್ತಗಳನ್ನು ಮರ್ತದ ಮಟ್ಟಕ್ಕೆ ತರಲೇಬೇಕು. ಇಲ್ಲಿಯವರೆಗಿದ್ದ ಅಪರಿಪೂರ್ಣತೆ ಕಳೆದುಕೊಂಡು ಈಗ ಅವನು ಪರಿಪೂರ್ಣನಾಗಿರುವನಲ್ಲವೆ ? ಇನ್ನವನು ಲೋಕೋದ್ಧಾರದ ಕಾರ್ಯದಲ್ಲಿ ತೊಡಗಬೇಕು. ಈವರೆಗೆ ಬಂದುವಲ್ಲ ಅಂಗಸ್ಥಲಗಳು: ಈವರೆಗೆ ಅವನು ಬದುಕಿದುದು ತನ್ನ ಆತ್ರೋದ್ಧಾರಕ್ಕಾಗಿ, ತನ್ನ ಪರಿಪೂರ್ಣತೆಗಾಗಿ. ಇನ್ನು ಮುಂದೆ ಲಿಂಗಸ್ಥಲ ಪ್ರವೇಶ, ಇನ್ನು ಮೇಲೆ ಅವನ ಬದುಕು ಇತರರ ಉದ್ದಾರಕ್ಕಾಗಿ, ಪರಿಪೂರ್ಣತೆಗಾಗಿ.

ಅವನ ಬದುಕೀಗ ಅವನ ಕೈಲಿಲ್ಲ; ದೇವನ ಕೈಲಿ ! ದೇವನು ಮರ್ತದಲ್ಲಿ ಇರಿಸಿದಷ್ಟು ದಿವಸ ಇರುವುದು. ಇರುವ ತನಕ ಪ್ರಾಮಾಣಿಕವಾಗಿ ಕರ್ತನಿಗಾಗಿ ದುಡಿಯುವುದು. ಕೆಲಸ ಮುಗಿಯಿತೆಂದು ಕರ್ತನಿಂದ ಒಡಗೂಡಲು ಕರೆ ಬರುತ್ತಲೇ ಸಿದ್ದವಾಗುವುದು. ಆಗ, ಪಂಚ ಭೂತಾತ್ಮಕವಾದ ಶರೀರವನ್ನು ವಿಸರ್ಜಿಸುವನು. ಪೃಥ್ವಿ, ಅಪ್, ತೇಜ, ವಾಯು, ಆಕಾಶಗಳ ದೇಹವು ಪಂಚ ಭೂತಗಳೊಡನೆ ಬೆರೆಯುತ್ತಲೇ ಪರಿಶುದ್ಧಾತ್ಮವು ಬ್ರಹ್ಮಾಂಡಗತ ಪರಮಾತ್ಮನೊಡನೆ ಒಡವೆರೆದು ಒಂದಾಗುವುದು. ಇದೇ ಕಾಯ ಲಿಂಗೈಕ್ಯ ಭಾವ ಲಿಂಗೈಕ್ಯದ ಸ್ಥಿತಿಯನ್ನು ವೇದಾಂತದ ಜೀವನ್ಮುಕ್ತ ಸ್ಥಿತಿಗೆ, ಕಾಯ ಲಿಂಗೈಕ್ಯವಾದ ಸ್ಥಿತಿಯನ್ನು ವಿದೇಹ ಮುಕ್ತಿಯ ಸ್ಥಿತಿಗೆ ಹೋಲಿಸಬಹುದು.

ಲಿಂಗಾಂಗಯೋಗ ಮತ್ತು ಶಕ್ತಿಪಾತ

ಕುಂಡಲಿನೀ ಮುಂತಾದ ಯೋಗಗಳಲ್ಲಿ ಶಕ್ತಿಪಾತಕ್ಕೆ ಬಹು ಸ್ಥಾನವುಂಟು. ಗುರು ಕೃಪೆ ಮತ್ತು ಶಕ್ತಿಪಾತಗಳು ಬಿಚ್ಚಿ ಬೇರಾಗದ ಅವಿನಾಭಾವ ಸಂಬಂಧ ಹೊಂದಿವೆ. ಶಕ್ತಿಪಾತದ ತತ್ವವನ್ನು ವಿಕೃತಗೊಳಿಸಿ ಕೆಲವು ಆಧುನಿಕ ಯೋಗಿಗಳು ಅದರ ದುರುಪಯೋಗದ ಪರಾಕಾಷ್ಠೆಯನ್ನು ತಲ್ಪಿದ್ದಾರೆ. ಇಷ್ಟಾದರೂ ಆ ತತ್ವದಲ್ಲಿರುವ ಶ್ರೇಷ್ಠತೆಯನ್ನು ಕಡೆಗಣಿಸಲಾಗದು.

ಹೊತ್ತಿ ಉರಿಯುವ ಒಂದು ದೀಪವಿದೆ. ಆ ದೀಪದಿಂದ ಉರಿಯದ ದೀಪ ತನ್ನನ್ನು ತಾನು ಹಚ್ಚಿಕೊಳ್ಳುವುದು. ಅಥವಾ ಉರಿಯುವ ದೀಪ ಉರಿಯದ ಇನ್ನೊಂದು ದೀಪವನ್ನು ಹಚ್ಚುವುದು. ಹೀಗಿದೆ ಗುರು-ಶಿಷ್ಯ ಸಂಬಂಧ. ನಿಜವಾದ ಗುರು ತಾನು ಪರಮಾತ್ಮನ ದಿವ್ಯವಾದ ಅನುಗ್ರಹ, ಆನಂದ ಹೊಂದಿರುವನು. ಅದನ್ನು ಅವನು ಶಿಷ್ಯನಿಗೆ ನೀಡುವನು ಮೂರು ಮಾಧ್ಯಮಗಳ ಮೂಲಕ. ಅವೆಂದರೆ ಸ್ಪರ್ಶ, ನೋಟ ಮತ್ತು ಸಂಕಲ್ಪ: ಕುಕ್ಕುಟ ನ್ಯಾಯವೆಂದು ಕರೆಸಿಕೊಳ್ಳುವ ಸ್ಪರ್ಶವನ್ನು, ಮತ್ಯ ನ್ಯಾಯವೆಂದು ಕರೆಸಿಕೊಳ್ಳುವ ನೋಟವನ್ನು , ಕೂರ್ಮ ನ್ಯಾಯವೆಂದು ಕರೆಸಿಕೊಳ್ಳುವ ಸಂಕಲ್ಪವನ್ನು - ಮೂರನ್ನೂ ಬಳಸಿ ಅನುಗ್ರಹಿಸುವ ವಿಧಾನವನ್ನು ದೀಕ್ಷಾ ಕ್ರಮದಲ್ಲಿ ಅಳವಡಿಸಲಾಗಿದೆ. ಮೊದಲು ಸದ್ದುರುವು ತಾನು ತನ್ನ ಇಷ್ಟಲಿಂಗವನ್ನು ಪೂಜಿಸುವನು. ನಂತರ ಅನುಗ್ರಹಿಸಬೇಕಾದ ಇಷ್ಟಲಿಂಗವನ್ನು ತೆಗೆದುಕೊಂಡು ಪೂಜೆಯ ಮೂಲಕ ಶುದ್ದೀಕರಿಸುವನು. ತನ್ನ ಎಡದ ಅಂಗೈಯಲ್ಲಿಟ್ಟುಕೊಂಡು ಅನಿಮಿಷ ದೃಷ್ಟಿಯಿಂದ ಇಷ್ಟಲಿಂಗವನ್ನು ನೋಡುತ್ತ ತನ್ನ ನೋಟ ಮತ್ತು ಅದರ ಹಿಂದಿನ ಸಂಕಲ್ಪಗಳಿಂದ ಆ ಇಷ್ಟಲಿಂಗವನ್ನು ಚಿತ್ಕಳಾಭರಿತವಾಗಿ ಮಾಡುವನು. ತನ್ನ ಸಂಕಲ್ಪ ಶಕ್ತಿಯನ್ನು ಅವಧರಿಸಿಕೊಂಡ ಇಷ್ಟಲಿಂಗವನ್ನು ಶಿಷ್ಯನ ಕೈಗೆ ಇಡುವನು.

ವೇಧಾ ದೀಕ್ಷೆಯಲ್ಲಿ ಗುರುವು ತನ್ನ ಹಸ್ತವನ್ನು ಶಿಷ್ಯನ ಮಸ್ತಕದ ಮೇಲಿಟ್ಟು ಸ್ಪರ್ಶ ಮುಖಾಂತರವಾಗಿ ಅನುಗ್ರಹಿಸುವನು. ಕಿವಿಯಲ್ಲಿ ಮಂತ್ರೋಪದೇಶ ಮಾಡುವಾಗ ಅರೆತೆರೆದ ಕಣ್ಣುಗಳಲ್ಲಿ ವಾತ್ಸಲ್ಯ ತುಂಬಿ ಶಿಷ್ಯನನ್ನು ದೃಷ್ಟಿಸಿ ನೋಟದ ಮುಖಾಂತರ ಅನುಗ್ರಹಿಸುವನು. ಕ್ರಿಯಾ ದೀಕ್ಷೆಯಲ್ಲಿ ತನ್ನ ಸಂಕಲ್ಪವನ್ನೇ ತುಂಬಿಕೊಂಡ ಇಷ್ಟಲಿಂಗವನ್ನು ಶಿಷ್ಯನ ಕರಕಮಲಕ್ಕೆ ಇಟ್ಟು ಸಂಕಲ್ಪ ಮುಖಾಂತರ ಅನುಗ್ರಹಿಸುವನು. ಹೀಗೆ ಗುರುವು ಮೂರು ಬಗೆಯಲ್ಲಿ ಶಕ್ತಿಯನ್ನು ಧಾರೆ ಎರೆಯುವ ಮೂರು ವಿಧಾನಗಳನ್ನು ಇಷ್ಟಲಿಂಗ ದೀಕ್ಷಾ ಕ್ರಮದಲ್ಲಿ ಅಳವಡಿಸಲಾಗಿದೆ.

ಸಮಾರೋಪ

ಲಿಂಗಾಂಗಯೋಗವು ಉಳಿದ ಯೋಗಗಳಿಗಿಂತ ಬೇರೆಯಾಗಿದೆ. ಆದರೆ ಅವುಗಳ ಅಂಶಗಳನ್ನು ಅರಗಿಸಿಕೊಂಡು, ಅವುಗಳ ಕೊರತೆಯನ್ನು ದೂರೀಕರಿಸಿಕೊಂಡು ಒಂದು ಪರಿಪೂರ್ಣ ಯೋಗ ಎನ್ನಿಸಿಕೊಳ್ಳುತ್ತದೆ. ಯೋಗಗಳಲ್ಲೆಲ್ಲ ಸರ್ವೋತ್ಕೃಷ್ಟ ಯೋಗ ಲಿಂಗಾಂಗಯೋಗ ಎಂಬ ಭಾವದಿಂದಲೇ ಚೆನ್ನಬಸವಣ್ಣನವರು ತಮ್ಮೊಂದು ವಚನದಲ್ಲಿ (ವಚನ 30, ಪುಟ 15) "ನಿಜ ಸುಖದ ರಾಜಾಧಿರಾಜ ಲಿಂಗಾಂಗಯೋಗ" ಎನ್ನುವರು. ವೈವಿಧ್ಯಮಯವಾದ ಅನುಭವಗಳನ್ನೂ ಒದಗಿಸುತ್ತದೆ. ಸಾಂಪ್ರದಾಯಿಕ ಯೋಗಗಳಲ್ಲಿ ಹೆಚ್ಚಿನ ಸ್ಥಾನ ಪಡೆದುದು ಅಷ್ಟಾಂಗಯೋಗ; ಅದಕ್ಕೆ ರಾಜಯೋಗವೆಂದೂ ಕರೆಯುವರು. ಪಾತಂಜಲಿಯ ಅಷ್ಟಾಂಗಯೋಗ ಅಥವಾ ರಾಜಯೋಗಕ್ಕೆ ಸಾಂಖ್ಯವೇ ತತ್ವ ಜ್ಞಾನ: ಲಿಂಗಾಂಗಯೋಗಕ್ಕೆ ಶಕ್ತಿ ವಿಶಿಷ್ಟಾದೈತವೇ ತತ್ವಜ್ಞಾನ. ಹೀಗಾಗಿ ಪಾತಂಜಲಿಯ ರಾಜಯೋಗವು ಸ್ವಭಾವತಃ ನಿರೀಶ್ವರವಾದಿ ಯೋಗ, ಬಸವ ಧರ್ಮದ ಯೋಗವು ಸ್ವಭಾವತಃ ಸೇಶ್ವರವಾದಿ ಯೋಗ. ಕಾಲಾನಂತರದಲ್ಲಿ ಪಾತಂಜಲಿಯ ಯೋಗದಲ್ಲಿ ದೇವರಿಗೆ ಕೊಂಚ ಸ್ನಾನ ಸಿಕ್ಕಿತಾದರೂ ಅವನು ಆಮಂತ್ರಣವಿಲ್ಲದ ಅತಿಥಿಯಾಗಿ ಬಂದು ಎಲ್ಲೋ ಒಂದು ಕಡೆ ಕುಳಿತುಕೊಳ್ಳುವನು. (ನಿಯಮ ತತ್ವದಲ್ಲಿ ಬರುವ ಈಶ್ವರ ಪ್ರಣಿಧಾನ ಎಂಬ ಉಪನಿಯಮದಲ್ಲಿ), ಬಸವ ಯೋಗದಲ್ಲಿ ದೇವನು ಅಧ್ಯಾತ್ಮ ಜೀವನದ ಹಾಸುಹೊಕ್ಕು, ಆರಂಭದಿಂದ ಅಂತ್ಯದವರೆಗೂ ಅವನದೇ ಪ್ರಭುತ್ವ ! ಅಷ್ಟಾಂಗ ಯೋಗವು ಪಿಂಡಾಂಡಕ್ಕೆ ಸಂಬಂಧಿಸಿದ 25 ತತ್ವಗಳ ಚಿಂತನೆ ನಡೆಸಿದರೆ, ಬಸವ ಪ್ರತಿಪಾದಿತ ಲಿಂಗಾಂಗಯೋಗವು ಪಿಂಡಾಂಡಕ್ಕೆ ಸಂಬಂಧಿಸಿದ 25, ಬ್ರಹ್ಮಾಂಡಕ್ಕೆ ಸಂಬಂಧಿಸಿದ 11- ಒಟ್ಟು 36 ತತ್ವಗಳ ವಿವೇಚನೆ ಮಾಡುತ್ತದೆ.

ಅಷ್ಟಾಂಗಯೋಗವು ಆತ್ಮ-ಅನಾತ್ಮ ವಿವೇಚನೆ ಮಾಡಿ, ಪ್ರಕೃತಿಯಿಂದ ಪುರುಷನ ಬಿಡುಗಡೆಯೇ ಅಂತಿಮ ಧೈಯವೆಂದರೆ, ಲಿಂಗಾಂಗಯೋಗವು ಪ್ರಕೃತಿಯಿಂದ ಬಿಡುಗಡೆ ಮಾಡಿದ ಆತ್ಮನನ್ನು ಪರಮಾತ್ಮನಲ್ಲಿ ಸಮರಸ ಮಾಡುವುದೇ ಅಂತಿಮ ಧೈಯವೆನ್ನುತ್ತದೆ. ಪಾತಂಜಲಿಯ ಯೋಗದ ಪ್ರಕಾರ ಚಿತ್ತ ಸರೋವರವನ್ನು ಪರಿಶುಭ್ರಗೊಳಿಸಿ, ನಿಸ್ತರಂಗವಾಗಿ ಮಾಡಿಕೊಳ್ಳುವುದು ಗುರಿಯಾದರೆ, ಬಸವ ಯೋಗದ ಪ್ರಕಾರ ಚಿತ್ತವನ್ನು ಸುಚಿತ್ತವಾಗಿ, ಎಲ್ಲ ಭಾವನೆಗಳನ್ನೂ ಶಿವಮಯ ಮಾಡಬೇಕು. ನಿರ್ವಿಕಲ್ಪ ಸಮಾಧಿಯೇ ರಾಜಯೋಗದ ಗುರಿಯಾದರೆ ಚೈತನ್ಯ ಸಮಾಧಿ ಲಿಂಗಾಂಗಯೋಗದ ಗುರಿ, ಶಬ್ದ ಮುಗ್ಧತೆಯೇ ಅಲ್ಲಿ ಕೊನೆಯ ಮೆಟ್ಟಿಲಾದರೆ, ಮಾತಿನ ಜ್ಯೋತಿರ್ಲಿಂಗವು ಲಿಂಗಾಂಗಯೋಗದ ಮುಖ್ಯ ಸಾಧನೆ. ನಿಸ್ತರಂಗ ಚಿತ್ತ ಸರೋವರದಲ್ಲಿ ಬಿಂಬಿತವಾಗುವ ಆತ್ಮದರ್ಶನವೇ ನಿರೀಶ್ವರವಾದದ ಗುರಿಯಾದರೆ, ಬ್ರಹ್ಮಾಂಡವನ್ನೆಲ್ಲ ತೆರಹಿಲ್ಲದೆ ಓತಪ್ರೋತವಾಗಿ ತುಂಬಿರುವ ಸಚ್ಚಿದಾನಂದ ಚೇತನವನ್ನು ಕಾಣುವುದೇ ಲಿಂಗಾಂಗಯೋಗದ ಗುರಿ. ಈ ಎಲ್ಲವನ್ನೂ ಗಳಿಸಲಿಕ್ಕೆ ಮುಖ್ಯ ಸಾಧನ ಇಷ್ಟಲಿಂಗ. ಹೀಗಾಗಿ ಅದು ತಾತ್ವಿಕ ಹಿನ್ನೆಲೆ, ಯೋಗಿಕ ಮಹತಿಯುಳ್ಳ ಲಾಂಛನ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಯೋಗಿಯ ಬಹಿರಂಗ ಬದುಕುಲಿಂಗಾಯತವು ಒಂದು ವಿಶ್ವಧರ್ಮNext
*