ಲಿಂಗ (ಇಷ್ಟಲಿಂಗ)

*

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ !
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ !
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ !
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ ಕೂಡಲ ಸಂಗಮದೇವಯ್ಯ,
ನಿವೇನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ !
--ಬಸವಣ್ಣನವರು

ಪರಮಾತ್ಮಾ, ನೀನು ಜಗದಗಲ, ಮುಗಿಲಗಲ, ಇನ್ನೂ ಅಗಲ-ನಿನ್ನಷ್ಟೆ ಅಗಲ ಇರುವ ವ್ಯಾಪ್ತಿಯಳ್ಳವನು, ಪಾತಾದಿಂದತ್ತತ್ತ ಊಧ್ರ್ವಭಾಗದಿಂದಲೂ ಮೇಲೆ ನಿನ್ನವ್ಯಾಪ್ತಿ. ಗಮನವಿಲ್ಲದವನು, ಇಂದ್ರಿಯಗಳಿಗೆ ಅಗೋಚರನು, ಉಪಮಾತೀತನಾದ ನೀನು ನನ್ನ ಕರಸ್ಥಳಕ್ಕೆ ವಿಶ್ವದಾಕಾರದಲ್ಲಿ ಚುಳುಕಾಗಿ ಬಂದಿರುವೆ

ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದಡೆ
ತಪ್ಪುವವು ಅಪಮೃತ್ಯು ಕಾಲ ಕರ್ಮಂಗಳಯ್ಯಾ
ದೇವ ಪೂಜೆಯ ಮಾಟ ದುರಿತ ಬಂಧನದೋಟ
ಶಂಬು ನಿಮ್ಮಯ ನೋಟ ಹೆರೆ ಹಿಂಗದ ಕಣ್ ಬೇಟ
ಸದಾ ಸನ್ನಿಹಿತನಾಗಿ ಶರಣೆಂಬುವುದು ನಂಬುವುದು
ಜಂಗಮಾರ್ಚನೆಯ ಮಾಟ ಕೂಡಲ ಸಂಗನ ಕೂಟ.
--ಬಸವಣ್ಣನವರು

ಸುಪ್ರಭಾತದಲ್ಲಿ ಭಕ್ತಿ-ಪ್ರೀತಿ-ನಿಷ್ಠೆಗಳನ್ನು ಮೈಗೂಡಿಸಿಕೊಂಡು ಇಷ್ಟಲಿಂಗವನ್ನು ಅರ್ಚಸಿದರೆಅಪಮೃತ್ಯು-ಕಾರ್ಪಣ್ಯಗಳು ತಪ್ಪುತ್ತವೆ. ದೇವಪೂಜೆಯಿಂದ ದುರಿತಗಳು ದೂರಾಗುತ್ತವೆ. ನೆಟ್ಟ ದೃಷ್ಟಿಯಿಂದ ಇಷ್ಟಲಿಂದವ ನೋಡುವುದು, ಪರಮಾತ್ಮನಲ್ಲಿ ಅನನ್ಯ ಶ್ರದ್ಧೆ ಇರಿಸುವುದು, ಜಂಗಮ ಸೇವೆ ಮಾಡುವುದು ಇವೇ ದೇವನನೊಲಿಸುವ ಸಾಧನಗಳು.

ಜಗವನೊಳಕೊಂಡ ಲಿಂಗವು
ಸೊಗಯಿಸಿರ್ದೆನ್ನ ಕರಸ್ಥಲಕ್ಕೆ ಬಂದಿರಲು
ಕಂಡು ಹಗರಣವಾಯಿತ್ತೆನಗೆ ಗುರುಲಿಂಗ
ಜಂಗಮ ಸ್ವರೂಪವಾಗಿ ಮೂರ್ತಿಗೊಂಡಿತ್ತು ನೋಡಾ !
ಅಹಾ ಎನ್ನ ಪುಣ್ಯವೇ ! ಆಹಾ ಎನ್ನ ಭ್ಯಾಗ್ಯವೇ
ಆಹಾ ಅಖಂಡೇಶ್ವರಾ ನಿಮ್ಮ ಘನವ ಕಂಡು ಎನ್ನ ಮನಕ್ಕೆ ಮಂಗಳವಾಯಿತ್ತು ನೋಡಾ.
--ಶ್ರೀ ಷಣ್ಮುಖ ಶಿವಯೋಗಿಗಳು.

ಜಗತ್ತನ್ನೆ ಗರ್ಭಧರಿಸಿಕೊಂಡ ವಿಶ್ವದಾಕಾರದ ಇಷ್ಟಲಿಂಗವು ಪೂಜೆಗೆ ನನ್ನ ಕೈ ಸೇರಿರುವುದನ್ನು ಕಂಡು ಬಹಳ ಸಂಭ್ರಮವಾಗಿದೆ. ಗುರು-ಲಿಂಗ-ಜಂಗಮದ ಒಲುಮೆ ನೀಡುವ ಸಾಧನವಿದು. ನನ್ನ ಪುಣ್ಯ, ನನ್ನ ಭಾಗ್ಯ ಎಂತಹುದು ! ಪರಮಾತ್ಮಾ ನಿನ್ನ ಸಾಕಾರ ಸ್ವರೂಪವನ್ನು ಕಂಡು ನನಗೆ ಮಂಗಳಮಯ ಆನಂದವಾಗಿದೆ.

ಪರಿವಿಡಿ (index)
*
PreviousಗುರುಜಂಗಮNext
*