ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ?

ಕಲ್ಲೊಳಗಣ ಕಿಚ್ಚು ಉರಿಯದಂತೆ,
ಬೀಜದೊಳಗಣ ವೃಕ್ಷ ಉಲಿಯದಂತೆ,
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು,
ಗುಹೇಶ್ವರ ನಿಂದ ನಿಲವ ಅನುಭ(ಭಾ?)ವ ಸುಖಿ ಬಲ್ಲ.

#ಅರ್ಥ: ಕಲ್ಲೊಳಗಣ (ಕಲ್ಲಿನಲ್ಲಿರುವ) ಕಿಚ್ಚು (ಬೆಂಕಿ) ಉರಿಯಬಲ್ಲುದೆ? (ಉರಿಯಬಹುದೆ?) ಬೀಜದೊಳಗಣ (ಬೀಜದೊಳಗೆ ಇರುವ) ವೃಕ್ಷ (ಮರವು) ಉಲಿಯಬಲ್ಲುದೆ? (ಸದ್ದು ಮಾಡಬಹುದೆ?) ತೋರಲಿಲ್ಲಾಗಿ (ಕಾಣಲಿಲ್ಲ ಆದ್ದರಿಂದ)ಬೀರಲಿಲ್ಲಾರಿಗೆಯೂ! ( ಯಾರಿಗೂ ಹೊಳೆಯಲಿಲ್ಲ) ಗುಹೇಶ್ವರ (ಅತ್ಯಂತ ಸೂಕ್ಷ್ಮನಾದ) ನಿಂದ ನಿಲವ (ದೇವರ ಇರವು) ಅನುಭಾವ ಸುಖಿ ಬಲ್ಲ! ( ತನ್ನ ತಾನರಿತ ಸುಖಿ ಮಾತ್ರ ತಿಳಿದಿರುತ್ತಾನೆ)

ತಾತ್ಪರ್ಯ: ದೇವರು ಪ್ರಕೃತಿಯಲ್ಲಿ ಹೇಗೆ ಅಡಗಿದ್ದಾನೆ ಎಂಬುದನ್ನು ವಿವರಿಸುತ್ತಆತನು ಯಾರಿಗೆ ಕಾಣುತ್ತಾನೆ ಎಂಬುದನ್ನು ಹೇಳುತ್ತಿದ್ದಾರೆಅಲ್ಲಮ ಪ್ರಭುಗಳು.ಕಲ್ಲಿನಲ್ಲಿ ಬೆಂಕಿ ಇದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಆದರೆ ಆ ಬೆಂಕಿ ಉರಿಯುವುದಿಲ್ಲ. ಅದು ಕಣ್ಣಿಗೆ ಕಾಣುವುದೂ ಇಲ್ಲ.ಕಲ್ಲಿನಲ್ಲಿರುವ ಬೆಂಕಿಯನ್ನು ಕಾಣುವಂತೆ ಮಾಡಲು ಅನುಸರಿಸಬೇಕಾದ ದಾರಿ ಬೇರೆಯೇ ಆಗಿದೆ. ಮೇಲ್ನೋಟಕ್ಕೆ ಕಾಣದೆ ಇದ್ದರೂ ಕಲ್ಲಿನಲ್ಲಿ ಬೆಂಕಿ ಇದ್ದೇ ಇದೆ. ಅದೇ ರೀತಿ ದೇವರು ಪ್ರಕೃತಿಯಲ್ಲಿ ಎಲ್ಲೆಲ್ಲಿಯೂ ಇದ್ದಾನೆ. ಆದರೆ ಕಣ್ಣಿಗೆ ಕಾಣುವುದಿಲ್ಲ.ಬೀಜದಲ್ಲಿ ವೃಕ್ಷವಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಗಾಳಿಗೆ ತೂಗಾಡಿ ವೃಕ್ಷ ಸದ್ದು ಮಾಡುವಂತೆ ಬೀಜದಲ್ಲಿರುವ ವೃಕ್ಷ ಸದ್ದು ಮಾಡುತ್ತದೆಯೆ? ಅದು ಸದ್ದು ಮಾಡುವುದಿಲ್ಲ. ಆದರೆ ಬೀಜದಲ್ಲಿ ಮರವಿಲ್ಲವೆಂದು ಹೇಳಲಾಗದು. ಅದೇ ರೀತಿ ದೇವರು ಎಲ್ಲದರಲ್ಲಿಯೂ ಇದ್ದಾನೆ. “ಆದರೆ ನಾನು ಇದ್ದೇನೆ” ಎಂದು ಹೇಳುವುದಿಲ್ಲ.ಆತನು ಕಣ್ಣಿಗೆ ಕಾಣುವುದಿಲ್ಲ, ಹೊಳೆಯುವುದಿಲ್ಲ. ಆದ್ದರಿಂದಆತಇದ್ದಾನೆ ಎಂದುಯಾರಿಗೂ ಹೊಳೆಯುವುದಿಲ್ಲ. ಒಂದು ಸಣ್ಣ ಬೀಜದಲ್ಲಿ ಇಡೀ ದೊಡ್ಡ ವೃಕ್ಷ ಅಡಗಿದೆ ಎಂಬುದನ್ನು ತಿಳಿಯಲು ಬೇಕಾದ ದೃಷ್ಟಿ ಬೇರೆ.ಈ ಜಗತ್ತಿನ ಆಕರ್ಷಣೆಗಳಲ್ಲಿ ಮುಳುಗಿ ಹೋದವನಿಗೆ ಆತನು ಕಾಣುವುದಿಲ್ಲ. ಏಕೆಂದರೆ ಇಂತಹ ವಿಷಯಗಳಲ್ಲಿ ಮುಳುಗಿದವನು ಸೂಕ್ಷ್ಮವನ್ನು ಕಾಣುವಂತಹ ಸೂಕ್ಷ್ಮತೆಯನ್ನು ಹೊಂದಿರುವುದಿಲ್ಲ. ಕೇವಲ ಬಾಹ್ಯ ಕಣ್ಣಿಗೆ ಕಾಣುವುದನ್ನು ಮಾತ್ರ ಆತ ನಂಬುತ್ತಾನೆ. ಅದರ ಹೊರತು ಅತನಿಗೆ ಬೇರೇನೂ ಕಾಣದು. ದೇವರ ಸೂಕ್ಷ್ಮ ರೂಪವನ್ನು ನೋಡಲು ಮಾನವನ ಮನಸ್ಸು ಬಲು ಸೂಕ್ಷ್ಮವಾಗಬೇಕು. ಪ್ರಕೃತಿಯ ಹಿಂದೆ ಇರುವ ಪರವಸ್ತುವನ್ನು ಗಮನಿಸಲು ಮನಸ್ಸು ತನ್ನನ್ನು ತಾನು ಅರಿಯುವುದರಲ್ಲಿ ತೊಡಗಬೇಕು. ಅಂದರೆ ಇಲ್ಲಿ ನಮಗೆ ಕಂಡುಬರುವ ಎಲ್ಲವೂ ಮಾಯೆಯ ಜಾಲ ಎಂಬುದನ್ನು ಅರಿಯುವ ಶಕ್ತಿಯಿರಬೇಕು. ಆತನ ಸೂಕ್ಷ್ಮ ರೂಪ ತನ್ನನ್ನು ತಾನು ಅರಿತ ಅನುಭಾವಿಗೆ ಮಾತ್ರ ಕಾಣುತ್ತದೆ.

*
Previousವಚನಕಾರರ ದೃಷ್ಟಿಯಲ್ಲಿ ಶಿವರಾತ್ರಿ ಪುರುಷನ ಮುಂದೆ ಮಾಯೆ, ...Next
*