ಇಷ್ಟಲಿಂಗ ಪೂಜೆ

*

ಇಷ್ಟಲಿಂಗ ಪೂಜೆಯು ದೇವ ಪೂಜೆ. ಇದು ಪೌರಾಣಿಕ ದೇವತೆಯ ಸಂಕೇತವಲ್ಲ; ಪಂಚ ಭೂತಗಳಲ್ಲಿ ಒಂದಲ್ಲ; ಪ್ರಾಣಿಯ ಪ್ರತಿನಿಧಿಯಲ್ಲ; ಪಿತೃಗಳ ರೂಪವಲ್ಲ; ಮಹಾತ್ಮರ ಪ್ರತೀಕವಲ್ಲ; ವಿಶ್ವಾತ್ಮನ ಪ್ರತೀಕ. ಮಾರ್ಮಿಕವಾಗಿ ಹೇಳಬೇಕೆಂದರೆ ದೇವರನ್ನು ನಿಜವಾಗಿಯೂ ಪೂಜಿಸಲು ಹೇಳುವುದು ಲಿಂಗಾಯತ ಧರ್ಮವೊಂದೆ. ಚಿಂತನಶಿಲದೃಷ್ಟಿಯಿಂದ ಬಸವಣ್ಣನವರು ಕಂಡು ಹಿಡಿದು ಕೊಟ್ಟ ಇಷ್ಟಲಿಂಗದ ಮರ್ಮವನ್ನರಿತಾಗ ಮಾತ್ರ ಈ ಮಾತಿನ ಸತ್ಯತೆ ಗೋಚರಿಸಲು ಸಾಧ್ಯ.[೨]

ಇಷ್ಟಲಿಂಗವು ಕಲ್ಲಲ್ಲ:

ಕಲ್ಲಿನಂತೆ ಬಿರುಸಾದ ಕಂಥೆಯಿಂದ ಕೂಡಿದ್ದರೂ ಕಲ್ಲಲ್ಲ. ಅನೇಕ ರಾಸಾಯನಿಕ ವಸ್ತುಗಳ ಮಿಶ್ರಣದಿಂದ ಕೂಡಿದ ಹೊದ್ದಿಕೆ, ಆವರಣ, ತ್ರಾಟಕಯೋಗ ಸಾಧನೆಗೆ ಸಹಕಾರಿಯಾಗುವಂತೆ ಹೊಳಪುಳ್ಳ ಆವರಣವನ್ನು ಸಿದ್ಧಪಡಿಸಲಾಗಿದೆ. ಬಹಳಷ್ಟು ಜನ ಇಷ್ಟಲಿಂಗವು ಕಲ್ಲೆಂದು ತಿಳಿದಿರುವುದು ಅವರ ಅಜ್ಞಾನದಿಂದ ಮಾತ್ರ!

ಇಷ್ಟಲಿಂಗವನ್ನು ಅರಗು, ರಾಳ, ಇಂಗಳೀಕ, ಶಿಲಾರಸ, ರುಮಾಮಸ್ತಕಿ, ಅಂಜನಗಳು (ಆಕ್ಸೈಡ್ಸ್), ತುಪ್ಪದ ಕಾಡಿಗೆ, ಗೇರು ಎಣ್ಣೆ ಇವುಗಳಿಂದ ಕಾಂತಿಯನ್ನು ತಯಾರಿಸಿ ಒಳಗೆ ಕಾಂತಶಿಲೆ ಅಂದರೆ ಸೂರ್ಯಕಾಂತ ಶಿಲೆ, ಚಂದ್ರಕಾಂತ ಶಿಲೆ ಇವುಗಳಲ್ಲಿ ಯಾವುದಾದರೊಂದರಿಂದ ಮಾಡಿದ ’ಪಂಚಲಿಂಗ’ವನ್ನು ಕೂಡಿಸಿ ತಯಾರಿಸಲಾಗುತ್ತದೆ.[೧]

ಇಷ್ಟಲಿಂಗವು ಜಡವಸ್ತುವಿನ ಕುರುಹು ಅಲ್ಲ

ವಿಶ್ವದ ಗೋಲಾಕಾರದಲ್ಲಿ ಪೂಜೆ ಎಂದಾಗ ವಿಶ್ವವು ಜಡ ವಸ್ತು; ಲಿಂಗಾಯತ ಧರ್ಮವು ವಿಶ್ವದ ಪೊಜೆಯನ್ನು ಹೇಳುತ್ತದೆ ಎಂದಾಗ ಪಂಚಭೂತಗಳ ಮುದ್ದೆಯಾದ ಜಗತ್ತನ್ನು ಪೂಜಿಸಲು ಹೇಳುತ್ತದೆಯೆ? ಇಲ್ಲ. ಬಸವಣ್ಣನವರು ಇಷ್ಟಲಿಂಗವನ್ನು ವಿಶ್ವದಾಕಾರದ ಗೋಲಾಕಾರದಲ್ಲಿ ರೂಪಿಸಿದರು. ಆ ಆಕಾರದ ಮೂಲಕ ಅವರು ಪೂಜಿಸ ಹೇಳಿರುವುದು ವಿಶ್ವವನ್ನಲ್ಲ; ವಿಶ್ವದಲ್ಲಿ ಓತಪ್ರೋತವಾಗಿ ತುಂಬಿ ತುಳುಕುವ ವಿಶ್ವಾತ್ಮನನ್ನು.

ನಾವು ಒಂದು ಹೂವನ್ನು ಕೈಯಲ್ಲಿ ಹಿಡಿದು ಮೂಸುತ್ತೇವೆ, ಯಾರದರೂ ಏನನ್ನು ಮೂಸುತ್ತಿದ್ದಿರಿ ಎಂದರೆ ಹೂವನ್ನು ಎನ್ನುವುದಿಲ್ಲ, ಹೂವಿನೊಳಗಣ ಪರಿಮಳವನ್ನು ಎನ್ನುತ್ತೇವೆ. ಹೂವಿನ ಮಾಧ್ಯಮದಲ್ಲಿ ಅಥವಾ ಆಶ್ರಯದಲ್ಲಿ ವಾಸನೆ ಇರಬಲ್ಲುದಾದ ಕಾರಣ ಪುಷ್ಪವನ್ನು ಆಘ್ರಾಣಿಸಿಯೇ ಪರಿಮಳವನ್ನು ಪಡೆಯಬೇಕಷ್ಟೇ?

ಬಸವಣ್ಣನವರು ಇಷ್ಟಲಿಂಗವನ್ನೇ ದೇವರು ಎನ್ನದೆ, ದೇವರ ಅರಿವನ್ನು ಮಾಡಿಕೊಡುವ ಕುರುಹು ಎನ್ನುತ್ತಾರೆ. ದೇವರು ಎನ್ನುವ ಧ್ಯೇಯ ವಸ್ತುವನ್ನು ತಲುಪಲು ಸಹಾಯಕವಾಗುವ ಕರಸ್ಥಲದ ಜ್ಯೋತಿ ಎನ್ನುತ್ತಾರೆ. ವಿಶ್ವಸಂಸ್ಥೆಯಲ್ಲಿ ಚರ್ಚೆ ನಡೆದಾಗ ’ಭಾರತ’ ಹೀಗೆ ಅಂದಿತು ಎನ್ನುತ್ತಾರೆ. ಭಾರತ ಹೋಗಿರುತ್ತದೆಯೆ? ಭೂಪ್ರದೇಶ ಹೋಗುವುದುಂಟೆ? ಭಾರತದ ಪ್ರತಿನಿಧಿಯಾಗಿ ಒಬ್ಬ ಮಾತಾನಾಡುತ್ತಾನೆ ಅಷ್ಟೆ? ಹಾಗೆ ಇಷ್ಟಲಿಂಗವು ಜಗದಗಲ ಮುಗಿಲಗಲನಾಗಿರುವ ದೇವರ ಅರಿವನ್ನು ಉಂಟುಮಾಡುವ ಪ್ರತಿನಿಧಿ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ
ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ
-- ಬಸವಣ್ಣನವರು ಸವಸಂ-೧, ವ. ಸಂಖ್ಯೆ ೭೪೪. [೩]

ವಿಶ್ವದ ಎಲ್ಲ ಮಾನವರೂ ಸದ್ಗುರುವಿನಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದು ಲಿಂಗಧಾರಿಗಳಾಗಿ ಇಷ್ಟಲಿಂಗ ಪೂಜೆಯನ್ನು ಮಾಡಿಕೊಂಡು ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಳ್ಳಬೇಕೆಂಬುದೇ ಬಸವಾದಿ ಶರಣರ ಆಶಯವಾಗಿದೆ.

ಗ್ರಂಥ ಋಣ:
[೧] ಲಿಂಗವಂತನ ಲಿಂಗಪ್ರಭೆ, ಲೇಖಕರು: ಶ್ರೀ ಬಸವರಾಜ ಗುರುಸಿದ್ದಪ್ಪ ಮೆಣಸಿನಕಾಯಿ, ಪಾರು ಪ್ರಕಾಶನ, ಗದಗ- ೨೦೦೮.
[೨] ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು, ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
[೩] ಸಮಗ್ರ ವಚನ ಸಾಹಿತ್ಯ ಸಂಪುಟ-೧ ಬಸವಣ್ಣವವರ ವಚನ ಸಂಪುಟ, ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.

ಪರಿವಿಡಿ (index)
*
Previousಕಾಯಕ ಮತ್ತು ದಾಸೋಹಅನುಭವ ಮಂಟಪNext
*