ಇಷ್ಟಲಿಂಗ ಪೂಜೆ -ದೇವರಪೂಜೆ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಇಷ್ಟಲಿಂಗ ಪೂಜೆ -ದೇವರಪೂಜೆ

ಈವರೆಗೂ ವಿಸ್ತಾರವಾಗಿ ಇಷ್ಟಲಿಂಗದ ವಿಷಯವನ್ನು ನಾವು ಚರ್ಚಿಸಿದೆವು. ಇಷ್ಟಲಿಂಗಕ್ಕೆ ತಾತ್ವಿಕ ಹಿನ್ನೆಲೆ, ಭಾಕ್ತಿಕ ಸ್ವರೂಪ, ಯೌಗಿಕ ಉಪಯುಕ್ತತೆ ಇರುವುದು ಸುಸ್ಪಷ್ಟ. ಬೇರೆ ಹಲವಾರು ಉಪಾಸ್ಯ ವಸ್ತುಗಳನ್ನು ನೋಡಿದಾಗ ಅವುಗಳಿಗೆ ತಾತ್ವಿಕ ಹಿನ್ನೆಲೆ ಇರದೆ, ಅವುಗಳ ಸುತ್ತಲೂ ಕಾಗಕ್ಕ-ಗುಬ್ಬಕ್ಕನ ಕಥೆ ಹೆಣೆಯಲ್ಪಟ್ಟಿರುತ್ತವೆ. ಇಲ್ಲಿಯಾದರೋ ವಿಶ್ವದಾಕಾರದಲ್ಲಿ ವಿಶ್ವಾತ್ಮನ ಪೂಜೆ ಎಂದು ಸುಲಭವಾಗಿ ಹೇಳಬಹುದು. "ಇಷ್ಟಲಿಂಗ ಪೂಜೆಯಾಂದೇ ದೇವರ ಪೂಜೆ" ಎಂದು ಧೈರ್ಯವಾಗಿ ಹೇಳಬಹುದು.

ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದರೆ
ತಪ್ಪುವವು ಅಪಮೃತ್ಯು ಕಾಲಕರ್ಮಂಗಳಯ್ಯ
ದೇವಪೂಜೆಯ ಮಾಟ ದುರಿತಬಂಧನದೂಟ
-ಬ.ಷ.ವ. ೧೭೭
ಎನ್ನುತ್ತಾರೆ ಬಸವಣ್ಣನವರು. ಜಗತ್ತಿನಲ್ಲಿರುವ ಎಲ್ಲ ಉಪಾಸ್ಯ ವಸ್ತುಗಳನ್ನೂ ಆರು ಭಾಗವಾಗಿ ವಿಂಗಡಿಸಬಹುದು.

1. ಪೌರಾಣಿಕ ದೇವತೆಗಳ ಪೂಜೆ. (Worship of mythological deities)
2. ಪಂಚಭೂತ ಪೂಜೆ. (Worship of five elements)
3. ಪ್ರಾಣಿ ಪೂಜೆ, ವಾರದ (Worship of animals)
4. ಪಿತೃ ಪೂಜೆ. ವರವ (Worship of ancestors)
5, `ಮಹಾತ್ಮರ ಪೂಜೆ ಅಂಕ (Worship of saints)
6, ದೇವರ ಪೂಜೆ: (worship of God)


ಕಾಳಿ, ದುರ್ಗಿ, ತಿರುಪತಿ ವೆಂಕಟೇಶ್ವರ, ಪುರಿ ಜಗನ್ನಾಥ, ಪಂಡರಾಪುರ ವಿಠೋಬ, ಶನಿ ಮೊದಲಾದ ನವಗ್ರಹ ಮುಂತಾದುವೆಲ್ಲ ಪೌರಾಣಿಕ ಕಲ್ಪನೆಗಳು. ಅವುಗಳಿಗೆ ಐತಿಹಾಸಿಕ ಅಸ್ತಿತ್ವವಿಲ್ಲ: ತಾತ್ವಿಕ ಹಿನ್ನೆಲೆಯಿಲ್ಲ. ಹಾಗಾದರೆ ಇವು ಹೇಗೆ ಪ್ರಸಿದ್ಧ ಕ್ಷೇತ್ರಗಳಾಗಿರುತ್ತವೆ ಎಂದರೆ ಕೇವಲ ಪ್ರಚಾರದ ವೈಖರಿಯಿಂದ; ಭಾವುಕ ಭಕ್ತರ ಮರುಳು ಭಕ್ತಿಯಿಂದ, ಪೌರಾಣಿಕ ದೇವತೆಗಳ ಪೂಜೆ ಅತ್ಯಂತ ಬಾಲಿಶ, ಅರ್ಥರಹಿತ. ಇದು ನರ್ಸರಿ ಶಾಲೆಗೆ ಹೋಗುವ ಮಕ್ಕಳ ಮಟ್ಟದಂತೆ.

ನಿಸರ್ಗದ ವಸ್ತುಗಳಾದ ಮಣ್ಣು, ನೀರು, ಬೆಂಕಿ ಮುಂತಾದುವನ್ನು ಅರಳಿ, ಬಿಲ್ವ, ಬನ್ನಿ, ತುಳಸಿ, ಗಂಗಾ, ಮುಂತಾದುವನ್ನು ಪೂಜಿಸುವುದು ಪಂಚಭೂತಗಳ ಪೂಜೆ, ಬತ್ತುವ ಜಲ, ಒಣಗುವ ಮರ ಮುಂತಾದುವನ್ನು ಪೂಜಿಸುವುದು ಭೂತಪೂಜೆ. ಇದೂ ಬಾಲಿಶವಾದರೂ ಮೊದಲಿನದರಷ್ಟು ಅಲ್ಲ. ನದಿ ನೀರು ಕೊಡುವ ಮೂಲಕ, ಗಿಡ ಹಣ್ಣು ಕೊಡುವ ಮೂಲಕ, ಬೆಂಕಿ ಸುಡುವ ಮೂಲಕ ಎಷ್ಟಾದರೂ ಉಪಯುಕ್ತವಷ್ಟೇ. ಇದು ಪ್ರೈಮರಿ ಶಾಲೆಗೆ ಹೋಗುವ ಮಕ್ಕಳ ಮಟ್ಟದಂತೆ ಎನ್ನಬಹುದು.

ಮೂರನೆಯದಾದ ಮಾಧ್ಯಮಿಕ ಶಾಲೆಯ ಮಕ್ಕಳಂತೆ ಇರುವ ಪ್ರಾಣಿ ಪೂಜೆಯಲ್ಲಿ ಗೋಪೂಜೆ, ನಾಗಪಾಜೆ, ಕೋತಿ ಪೂಜೆ ಮುಂತಾದುವು ಬರುತ್ತವೆ. ಸೋ ಮುಂತಾದವುವನ್ನು ಹಾಲು ಕೊಡುವವೆಂಬ ಕೃತಜ್ಞತೆಯಿಂದ ಪೂಜಿಸಿದರೆ ಹಾವು, ಕೋತಿ ಮುಂತಾದುವನ್ನು ಕೇಡು ಮಾಡದಿರಲೆಂದು ಪೂಜಿಸುವ ಪದ್ಧತಿ ಇದೆ. ಮನುಷ್ಯನಿಗಿಂತಲೂ ಕೀಳಾದ ಬುದ್ದಿ ಮಟ್ಟ ಇರುವ ಪ್ರಾಣಿಗಳು ಇವನಿಗೇನು ಕೊಡಬಲ್ಲವು ? ಆಕಳು ಹಾಲು ಕೊಡುತ್ತದೆ; ಕೃತಜ್ಞತೆ ಸಲ್ಲಿಸಬೇಕು. ಸರಿ ಕೃತಜ್ಞತೆಯನ್ನು ಸಲ್ಲಿಸುವುದು ಅದಕ್ಕೆ ಹುಲ್ಲು, ಹಿಂಡಿ, ಬೂಸಾ ತಿನ್ನಿಸುವುದರ ಮೂಲಕ ಅದನ್ನು ಬಿಟ್ಟು ಸರಿಯಾಗಿ ಆಹಾರ ಕೊಡದೆ ಕುಂಕುಮ ಹಚ್ಚಿ, ಊದಿನ ಕಡ್ಡಿ ಬೆಳಗಿದರೆ ಸಾಕೆ ? ಭಾರತೀಯರ ಈ ಮೂರ್ಖ ಭಕ್ತಿಯಿಂದಾಗಿಯೇ ನಾಟಿ ಹಸುಗಳು ಒಂದು ಲೀಟರ್ ಹಾಲನ್ನೂ ಕೊಡವು. ಫಾಮಾತ್ಯರು ಗೋವನ್ನು ಪೂಜಿಸದೆ ಸರಿಯಾಗಿ ಆಹಾರ ಕೊಟ್ಟು, ವೈಜ್ಞಾನಿಕವಾಗಿ ಪೋಷಿಸಿರುವುದರಿಂದ ವಿದೇಶೀ ಆಕಳು 25-30 ಲೀಟರ್ ಹಾಲು ಕೊಡುತ್ತವೆ.

ಸತ್ತುಹೋದ ಪಿತೃಗಳ ಅಥವಾ ಜೀವಂತವಾಗಿಯೇ ಇರುವ ತಾಯಿ ತಂದೆ, ಅಜ್ಜ-ಅಜ್ಜಿಯರ ಭಾವಚಿತ್ರ ಫಾಜೆ ಪಿತೃಪೂಜೆಯ ಸಾಲಿಗೆ ಬರುತ್ತದೆ. ಅವರು ಜನ್ಮ ಕೊಟ್ಟಿರುವ ಕಾರಣ ಕೃತಜ್ಞತೆಯಿಂದ ಅವರ ಭಾವಚಿತ್ರ ಬರೆಸಬೇಕು, ಹಾಕಿಕೊಳ್ಳಬೇಕು. ಶೋಭಾಯಮಾನವಾಗಿ ಕಾಣಲೆಂದು ಒಂದು ಮಾಲೆಯನ್ನೂ ಹಾಕಬಹುದು. ಆದರೆ ಅದಕ್ಕೆ ಪೂಜೆ ಮಾಡುವುದಾಗಲೀ, 'ಹಿರೇರ ಹಬ್ಬ ಎಂದು ಕಳಸವಿಟ್ಟು ಸೀರೆಯುಡಿಸಿ, ಮುಂದೆ ಎಡೆ ಇಟ್ಟು, ಮಾಡುವುದಾಗಲೀ ದಡ್ಡತನ. ಆ ಹಿರಿಯರು ತಮ್ಮ ಬಾಳಿನುದ್ದಕ್ಕೂ ಮಾಡಬಾರದ್ದನ್ನು ಮಾಡಿದ್ದರೂ, ಸತ್ತ ನಂತರ ಅವರನ್ನು ದೈವೀಕರಿಸಿ ಕೆಲವರು ಪೂಜಿಸುವರು. ಇದು ಸರಿಯಲ್ಲ. ಇದನ್ನು ಹಾಯಸ್ಕೂಲ್ ವಿದ್ಯಾರ್ಥಿ ಮಕ್ಕಳಿಗೆ ಹೋಲಿಸಬಹುದು.

ಐದನೆಯದು ಮಹಾತ್ಮರ ಪೂಜೆ, ವಿಭೂತಿ ಪೂಜೆ, ಇದು ಪದವಿ ವಿದ್ಯಾಲಯ ಮಟ್ಟದ್ದು, ಶಿವ, ಬುದ್ಧ, ಮಹಾವೀರ, ಎಸು, ಬಸವಣ್ಣ, ಗುರುನಾನಕ, ವಿವೇಕಾನಂದರು, ಅರವಿಂದರು ಮುಂತಾದವರು ಮಹಾತ್ಮರು; ಆದರ್ಶ ಜೀವಿಗಳಾಗಿ ಬಾಳಿದವರು. ಲೋಕ ಹಿತಕ್ಕಾಗಿ ಶ್ರಮಿಸಿದವರು. ಅವರು ಪರಮಾತ್ಮನ ಅನುಗ್ರಹ ಗಳಿಸಿಕೊಂಡವರು, ಆದ್ದರಿಂದ ಇನ್ನೊಬ್ಬರಿಗೆ ಅನುಗ್ರಹ ನೀಡಲೂ ಬಲ್ಲರು. ವ್ಯಕ್ತಿಗಳ ತಾಯಿ ತಂದೆ ತಾತಂದಿರು ಒಂದು ವೇಳೆ ಸಂತರು, ಶರಣರು, ಮುಕ್ತಾತ್ಮರು ಆಗಿದ್ದರೆ ಆಗ ಅವರೂ ವಿಭೂತಿಗಳ ಸಾಲಿನಲ್ಲೇ ಬರುವರು. ಆದ್ದರಿಂದ ಬೌದ್ದರಲ್ಲಿ ಬರುವ ಬುದ್ಧನ ಪೂಜೆ, ಶೈವರಲ್ಲಿರುವ ಶಿವನ ಆರಾಧನೆ, ಬಸವಣ್ಣನವರ ಪೂಜೆ ಮುಂತಾದುವು ತತ್ವವನ್ನು ಕೊಟ್ಟ, ಮಹಾತ್ಮರ ಪೂಜೆಯಾಗುವವು. ಇದು ಕಾಲೇಜ್ ವಿದ್ಯಾಭ್ಯಾಸದಂತೆ. ಆಗ

ಇಷ್ಟಲಿಂಗ ಪೂಜೆಯು ದೇವಪಾಜೆ, ಇದು ಪೌರಾಣಿಕ ದೇವತೆಯ ಸಂಕೇತವಲ್ಲ; ಪಂಚಭೂತಗಳಲ್ಲಿ ಒಂದಲ್ಲ; ಪ್ರಾಣಿಯ ಪ್ರತಿನಿಧಿಯಲ್ಲ, ಪಿತೃಗಳ ರೂಪವಲ್ಲ; ಮಹಾತ್ಮರ ಪ್ರತೀಕವಲ್ಲ, ವಿಶ್ವಾತ್ಮನ ಪ್ರತೀಕ. ಮಾರ್ಮಿಕವಾಗಿ ಹೇಳಬೇಕೆಂದರೆ ದೇವರನ್ನು ನಿಜವಾಗಿಯೂ ಪ್ರಾರ್ಥಿಸುವವರು ಕೆಲವು ಉಪನಿಷತ್ಕಾರರು, ಮುಸಲ್ಮಾನರು ಮತ್ತು ಶರಣರು. ಬಾಕಿ ಎಲ್ಲರೂ ಪ್ರಾರ್ಥಿಸಿ-ಪೂಜಿಸುವುದು ನಾನು ತಿಳಿಸಿರುವ ಐದರಲ್ಲಿ ಒಂದನ್ನು ಅಥವಾ ಐದನ್ನು, ಮುಸಲ್ಮಾನರಲ್ಲಿ ಪೂಜೆ ಇಲ್ಲ: ಕೇವಲ ಪಾರ್ಥನೆ ಇದೆ. ಆದರೆ ಪೂಜೆ-ಪಾರ್ಥನೆ-ಧ್ಯಾನ ಈ ಮೂರನ್ನೂ ಅಳವಡಿಸಿ ದೇವರನ್ನು ಪೂಜಿಸಲು ಹೇಳುವುದು ಲಿಂಗಾಯತ ಧರ್ಮವೊಂದೆ, ಬಸವಣ್ಣನವರು ಒಬ್ಬರೇ ! ಇದು ಮತಾಂಧತೆಯ ಹೇಳಿಕೆಯಲ್ಲ. ಚಿಂತನಶೀಲದೃಷ್ಟಿಯಿಂದ ಬಸವಣ್ಣನವರು ಕಂಡು ಹಿಡಿದು, ಕೊಟ್ಟ ಇಷ್ಟಲಿಂಗದ ಮರ್ಮವನ್ನರಿತಾಗ ಮಾತ್ರ ಈ ಮಾತಿನ ಸತ್ಯತೆ ಗೋಚರಿಸಲು ಸಾಧ್ಯ.

ಕೆಲವರು ಒಂದೆರಡು ಸಂದೇಹಗಳನ್ನು ಎತ್ತುವರು.

1. ಇಷ್ಟಲಿಂಗವು ಕಲ್ಲು ; ಜಡವಾದ ವಸ್ತು; ಅಂದಾಗ ಅದು ಭೂತ ಪೂಜೆಯಲ್ಲವೆ ?
2. ವಿಶ್ವದ ಗೋಲಾಕಾರದಲ್ಲಿ ಪೂಜೆ ಎಂದಾಗ ವಿಶ್ವವು ಜಡ ವಸ್ತು; ಲಿಂಗಾಯತ ಧರ್ಮವು ವಿಶ್ವದ ಪೂಜೆಯನ್ನು ಹೇಳುತ್ತದೆ ಎಂದಾಗ ಪಂಚಭೂತಗಳ ಮುದ್ದೆಯಾದ ಜಗತ್ತನ್ನು ಪೂಜಿಸಲು ಹೇಳುತ್ತದೆ.

1. ಇಷ್ಟಲಿಂಗವು ಕಲ್ಲಲ್ಲ. ಕಲ್ಲಿನಂತೆ ಬಿರುಸಾದ ಕಂಥೆಯಿಂದ ಕೂಡಿದ್ದರೂ ಕಲ್ಲಲ್ಲ. ಅನೇಕ ರಾಸಾಯನಿಕ ವಸ್ತುಗಳ ಮಿಶ್ರಣದಿಂದ ಕೂಡಿದ ಹೊದ್ದಿಕೆ, ಆವರಣ, ತಾಟಕಯಾಗ ಸಾಧನೆಗೆ ಸಹಕಾರಿಯಾಗುವಂತೆ ಹೊಳಪುಳ್ಳ ಆವರಣವನ್ನು ಸಿದ್ದಪಡಿಸಲಾಗಿದೆ. ಬಹಳಷ್ಟು ಜನ ಇಷ್ಟಲಿಂಗವು ಕತ್ತೆಂದು ತಿಳಿದಿರುವುದು; ಲಿಂಗವಂತರನ್ನು ಕಲ್ಲು ಕಟ್ಟಿಕೊಂಡವರೆಂದು
ಹಳಿಯುವುದು, ಅವರೂ ಹಳಿಸಿಕೊಳ್ಳುವುದು ಈ ಅಜ್ಞಾನದಿಂದಲೇ !

2. ಲಿಂಗಾಯತ ಧರ್ಮ ಸ್ಥಾಪಕ-ಪ್ರತಿಪಾದಕ ಬಸವಣ್ಣನವರು ಇಷ್ಟಲಿಂಗವನ್ನು ವಿಶ್ವದ ಗೋಲಾಕಾರದಲ್ಲಿ ರೂಪಿಸಿದರು. ಆ ಆಕಾರದ ಮೂಲಕ ಅವರು ಪೂಜಿಸ ಹೇಳಿರುವುದು ವಿಶ್ವವನ್ನಲ್ಲ; ವಿಶ್ವದಲ್ಲಿ ಓತಪ್ರೋತವಾಗಿ ತುಂಬಿ ತುಳುಕುವ ವಿಶ್ವಾತ್ಮನನ್ನು ನಾವು ಒಂದು ಹೂವನ್ನು ಕೈಯಲ್ಲಿ ಹಿಡಿದು ಮೂಸುತ್ತೇವೆ. ಯಾರಾದರೂ ಏನನ್ನು ಮೂಸುತ್ತಿದ್ದೀರಿ ಎಂದರೆ ಹೂವನ್ನು ಎನ್ನುವುದಿಲ್ಲ, ಹೂವಿನೊಳಗಣ ಪರಿಮಳವನ್ನು ಎನ್ನುತ್ತೇವೆ. ಹೂವಿನ ಮಾಧ್ಯಮದಲ್ಲಿ ಅಥವಾ ಆಶ್ರಯದಲ್ಲಿ ವಾಸನೆ ಇರಬಲ್ಲುದಾದ ಕಾರಣ ಪುಷ್ಟವನ್ನು ಆಘ್ರಾಣಿಸಿಯೇ ಪರಿಮಳವನ್ನು ಪಡೆಯಬೇಕಷ್ಟೇ ?

ಸ್ತ್ರೀಯರು ಗಂಗಾಪೂಜೆ ಮಾಡಬೇಕೆಂದು ಇಚ್ಚಿಸಿ, ಒಂದು ಬಿಂದಿಗೆಯಲ್ಲಿ ನೀರನ್ನು ತೆಗೆದುಕೊಳ್ಳುತ್ತಾರೆ; ಆ ಬಿಂದಿಗೆಗೆ ಸೀರೆ ಉಡಿಸಿ, ರತ್ನಹಾರ ತೊಡಿಸಿ, ಪೂಜಿಸುತ್ತಾರೆ. ಏನು ಮಾಡುತ್ತಿದ್ದೀರಿ ಎಂದರೆ "ಬಿಂದಿಗೆ ಪೂಜೆ ಮಾಡುತ್ತಿದ್ದೀವಿ" ಎನ್ನದೆ, "ಗಂಗಾಪೂಜೆ ಮಾಡುತ್ತಿದ್ದೀವಿ," ಎನ್ನುತ್ತಾರೆ. ನೀರು ದ್ರವ ವಸ್ತುವಾದ ಕಾರಣ, ಬಿಂದಿಗೆಯ ಆಶ್ರಯದಲ್ಲಿ ಹಿಡಿದು ಅದನ್ನು ಪೂಜಿಸುತ್ತಾರೆಂತೋ, ಹಾಗೆ ನಿರಾಕಾರನೂ ಜಗದಗಲ ಮುಗಿಲಗಲನೂ ಆದ ದೇವನನ್ನು ವಿಶ್ವದಾಕಾರದಲ್ಲಿ ಲಿಂಗಾಯತ ಧರ್ಮವು ಪೂಜಿಸಲು ಹೇಳುತ್ತದೆ.

ಆಗ ಕೆಲವರು ಹೇಳಬಹುದು, "ಹಾಗಾದರೆ ನಾವು ರಾಮ, ಕೃಷ್ಣ, ಹನುಮಂತ, ಕಾಳಿ, ಮುಂತಾದುವನ್ನು ಎದುರಿಗಿಟ್ಟು ಕೊಂಡರೂ ಉದ್ದೇಶವಾಗಿ ಇಟ್ಟುಕೊಳ್ಳುವುದು ದೇವರನ್ನೇ" ಎಂಬುದಾಗಿ, ಕಣ್ಣೆದುರಿಗೆ ಸಾಕಾರ ದೇಹ, ಅವಯವ ಇರುವ ಮೂರ್ತಿಯನ್ನು ಇಟ್ಟು ಕೊಂಡ ಮೇಲೆ ಆ ಅವಯವಗಳುಳ್ಳ ಮೂರ್ತಿಯ ಧೈಯ ವ್ಯಕ್ತಿಗಳಾದ ರಾಮ, ಕೃಷ್ಣ, ಬುದ್ದ, ಬಸವಣ್ಣ, ಅಕ್ಕಮಹಾದೇವಿ, ಅರವಿಂದ ಮುಂತಾದವರು ಒಂದು ಕಾಲದಲ್ಲಿ ಬಾಳಿ ಬದುಕಿ ಹೋದವರಾದ ಕಾರಣ, ವಿಭೂತಿ ಪುರುಷರನ್ನು ಆ ಮೂರ್ತಿಗಳು ಸಂಕೇತಿಸಬಹುದೇ ವಿನಾ ನಿರಾಕಾರನೂ, ನಿರವಯವನೂ ಆದ ದೇವನನ್ನಲ್ಲ.

3. ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ, ಹಿತ್ತಾಳೆ, ತಾಮಗಳಿಂದ ಮಾಡಿದ ದೇವರು ದೇವರಲ್ಲ ಎಂದ ಬಸವಣ್ಣನವರು ಕಲ್ಲು ದೇವರನ್ನೇ ದೇವರೆಂದು ತಿಳಿಯಲು ಹೇಳಿದರಲ್ಲಾ ? ಎಂದು ಕೆಲವರ ಪ್ರಶ್ನೆ.

ಕರ್ತನ ಸ್ಥಾನವನ್ನು ಕೆಳಗಿಳಿಸುವ ಕೆಲಸವನ್ನು ಬಸವಣ್ಣನವರು ಎಂದೂ ಮಾಡಿಲ್ಲ. ಅವರು ಇಷ್ಟಲಿಂಗವನ್ನೇ ದೇವರು, Creator ಕರ್ತ ಎನ್ನದೆ, ಕರ್ತನ ಅರಿವನ್ನು ಮಾಡಿಕೊಡುವ ಕುರುಹು ಎನ್ನುತ್ತಾರೆ. ದೇವರು ಎನ್ನುವ ಧೈಯ ವಸ್ತುವನ್ನು ತಲ್ಪಲು ಸಹಾಯಕವಾಗುವ ಕರಸ್ಥಲದ ಜ್ಯೋತಿ ಎನ್ನುತ್ತಾರೆ. ವಿಶ್ವಸಂಸ್ಥೆಯಲ್ಲಿ ಚರ್ಚೆ ನಡೆದಾಗ 'ಭಾರತ' ಹೀಗೆ ಅಂದಿತು ಎನ್ನುತ್ತಾರೆ. ಭಾರತ ಹೋಗಿರುತ್ತದೆಯೆ ? ಭೂಪ್ರದೇಶ ಹೋಗುವುದುಂಟೆ ? ಭಾರತದ ಪ್ರತಿನಿಧಿಯಾಗಿ ಒಬ್ಬ ಮಾತನಾಡುತ್ತಾನೆ ಅಷ್ಟೆ ? ಹಾಗೆ ಇಷ್ಟಲಿಂಗವು ಜಗದಗಲ ಮುಗಿಲಗಲನಾಗಿರುವ ದೇವರ ಅರಿವನ್ನು ಉಂಟುಮಾಡುವ ಪ್ರತಿನಿಧಿ,

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಇಷ್ಟಲಿಂಗವನ್ನು ಎಲ್ಲಿ ಧರಿಸಬೇಕು ?ಇಷ್ಟಲಿಂಗವು ಯೋಗ ಸಾಧನೆಗೆ ಸಹಾಯಕNext
*