ಇಷ್ಟಲಿಂಗದ ಗಾತ್ರ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಇಷ್ಟಲಿಂಗದ ಗಾತ್ರ

ಇಷ್ಟಲಿಂಗದ ಆಕಾರವನ್ನು ಅರಿತುದಾಯಿತು. ಇನ್ನು ಮೇಲೆ ಅದರ ಗಾತ್ರವನ್ನು ವಿಚಾರಿಸುವಾ. ಇಷ್ಟಲಿಂಗವು ವಿಶ್ವದಾಕಾರದಲ್ಲಿ ಗೋಲವಾಗಿದ್ದರೂ ತೆಂಗಿನ ಕಾಯಿ ಅಥವಾ ಪೇರಲ ಹಣ್ಣಿನಷ್ಟು ದೊಡ್ಡದೂ
ಆಗಿಲ್ಲ; ಕವಳೆಯ ಹಣ್ಣಿನಷ್ಟು ಚಿಕ್ಕದೂ ಆಗಿಲ್ಲ. ನೇರಲ ಹಣ್ಣಿನ ಗಾತ್ರದಷ್ಟು ಅಂದರೆ ಹೆಬ್ಬೆಟ್ಟಿನ ಗಾತ್ರದಷ್ಟು ದೊಡ್ಡದಾಗಿದೆ. ಅಂಗುಷ್ಟ ಪ್ರಮಾಣದಷ್ಟು ಗಾತ್ರವಿರುವುದಕ್ಕೂ ಅನೇಕ ಆಧಾರಗಳಿವೆ. ಪಿಂಡದಲ್ಲಿ ಪರಮಾತ್ಮನು ಹೃದಯಸ್ಥನಾಗಿದ್ದಾನೆಂದು ಎಲ್ಲ ಅನುಭಾವಿಗಳ ಅಭಿಮತವಾಗಿದೆ, ಈ ಹೃದಯಾಬ್ಬ ಕೋಶವು ಹೆಬ್ಬೆರಳಿನಷ್ಟು ಇದೆಯೆಂದೂ, ಉಪನಿಷತ್ತಾದಿ ಗ್ರಂಥಗಳು ಸಾರಿ ಹೇಳುತ್ತವೆ.

ಅಂಗುಷ್ಟ ಮಾತ್ರ: ಪುರುಷೋsಂತರಾತ್ಮ
ಸದಾ ಜನಾನಾಂ ಹೃದಯೇ ಸನ್ನಿವಿಷ್ಟಃ |
ಹೃದಾಮನೀಷಾ ಮನಸಾಭಿಜ್ಞ ಪ್ರೊ.
ಯ ಏತದ್ ವಿದುರಮೃತಾಸ್ತೇ ಭವಂತಿ ||
(ಶ್ವೇತಾಶ್ವೇತರೋಪನಿಷತ್, ಅ. ೩. ಶ್ಲೋಕ ೧೩)

"ಹೃದಯ, ಬುದ್ದಿ ಮತ್ತು ಮನಸ್ಸುಗಳ ಅನುಭವಕ್ಕೆ ವೇದ್ಯವಾಗಿ ಅಂಗುಷ್ಠದ ಅಂದರೆ ಹೆಬ್ಬೆರಳಿನ ಗಾತ್ರ (ಪ್ರಮಾಣ) ದಷ್ಟಿರುವ ಪುರುಷನುಅಂದರೆ ಅಂತರಾತ್ಮನು ಸದಾ ಮಾನವರ ಹೃದಯಕೋಶದಲ್ಲಿ ಸನ್ನಿಹಿತನಾಗಿರುತ್ತಾನೆ. ಈ ತತ್ವವನ್ನು ಬಲ್ಲವರು ಅಮೃತರಾಗುತ್ತಾರೆ."

“ಅಂಗುಲಾದಿ ಗುಣಂ ಚ ಲಿಂಗಸ್ಯ ದೈರ್ಫಿಕಮ್" |
(ವಿ.ನಿ, ಚಿಂತಾಮಣಿ ಪುಟ ೧೦೪)
ಲಿಂಗವು ಅಂಗುಷ್ಠದಷ್ಟು ಎತ್ತರವಿರುತ್ತದೆ.
“ಅಂಗುಷ್ಟ ಮಾತ್ರ ಮಚಲಂ ದ್ಯಾಯೇದೋಂಕಾರಮೀಶ್ವರಂ"
(ವೀ.ಧ. ಶಿರೋಮಣಿ, ಪುಟ ೨೪೮)

ಅಂಗುಷ್ಟ ಮಾತ್ರನೂ ಅಚಲನೂ ಓಂಕಾರ ಸ್ವರೂಪಿಯೂ ಆದ ದೇವನ ಧ್ಯಾನ ಮಾಡಬೇಕು.

ಹೀಗೆ ಹಲವಾರು ಪ್ರಮಾಣಗಳಿಂದ ನಮಗೆ ತಿಳಿದು ಬರುವುದೇನೆಂದರೆ, "ಹೃದಯಸ್ಥನಾದ ಚೈತನ್ಯವು, ಅಂತರಾತ್ಮವು, ಪ್ರಾಣಲಿಂಗವು, ಪುರುಷ ತತ್ವವು ಅಂಗುಷ್ಠದಾಕಾರದಲ್ಲಿ ಅಂದರೆ ಹೆಬ್ಬೆರಳಿನ ಗಾತ್ರದಲ್ಲಿ ಹೃದಯ ಕಮಲದಲ್ಲಿ ವಿರಾಜಿಸುತ್ತದೆ' ಎಂಬುದು.

ಆದ್ದರಿಂದಲೇ ಶರಣರು, "ಅಂತರಂಗದೊಳಗಿರ್ದ ನಿರವಯ ಲಿಂಗವನ್ನು ಸಾಕಾರ ಲಿಂಗವ ಮಾಡಿ ಎಲ್ಲ ಕರಸ್ಥಲಕ್ಕೆ ತಂದುಕೊಟ್ಟನಯ್ಯಾ ಶ್ರೀಗುರುವು." (-ಬ.ಷ.ವ. ೧೩೬೦)

"ಅಯ್ಯಾ ಎನ್ನ ಹೃದಯದಲ್ಲಿ ವ್ಯಸ್ತವಾಗಿಹ ಪರಮ ಚಿದ್ಬಳಗನೇ ತಂದು ಕರಸ್ಥಲದೊಳಗೆ ಇಂಬಿಟ್ಟಿರಲ್ಲಾ ?" (ಬ.ಷ.ವ. ೧೨೧೮) ಎಂದಿದ್ದಾರೆ.

ಅಂತರಸಾಕ್ಷಿ ಚಿದ್ಘನಪರಾಹ್ವಯ ಲಿಂಗಮನಾಂದೇಶಿಕನು ||
ಚಿಂತಿಸಿ ತಂದು ಬಾಹ್ಯಕರಣಕ್ಕು ಪದೇಶಮನೊಲ್ಲು ಮಾಡೆ ಮು ||
ನ್ನೆಂತಿರುತಿರ್ದುದಂತುಭಯ ಸಂಗಶರೀರದೊಳ್ಳೆಕ್ಯವಾಗಿ ವಿ |
ಶ್ರಾಂತಿಯ ನೆಯ್ಲಿ ದಲ್ಲಿ ಬಳಿಕೇನೆನಬರ್ಪುದದಂ ಶಿವಾಧವಾ | -ಮಗ್ಗೆಯ ಮಾಯಿದೇವ

"ಅನಾದಿಯಾದ ಶ್ರೀ ಗುರುವು ಜ್ಞಾನಮಯವಾದ ಅಂತರ್ಗತ ಪ್ರಾಣ ಲಿಂಗವನ್ನು ತನ್ನ ಭಾವಮನೋದೃಷ್ಟಿಯಿಂದ ಹೊರಕ್ಕೆ ತಂದು, ಬಾಂದ್ರಿಯ ಗೋಚರವನ್ನಾಗಿ ಮಾಡಿ, ಕ್ರಿಯಾ ದೀಕ್ಷೆಯ ಮೂಲಕ ಅನುಗ್ರಹಿಸಲು, ಅದು ತನ್ನ ಪೂರ್ವಸ್ಥಿತಿಯಂತೆಯೇ ಅಂತರ್ಬಾಹ್ಯ ಶರೀರಗಳೆರಡರಲ್ಲೂ ಒಂದೇಯಾಗಿರುವ ಕಾರಣ, ಕ್ರಿಯಾ ವಿಶ್ರಾಂತಿಯನೈದಿರುವ ಶರಣನ ಮಾರ್ಗವನ್ನು ಏನೆಂದು ಹೇಳಬಹುದು !" ಎಂದು ಮಗ್ಗೆಯ ಮಾಯಿದೇವರಾದಿಯಾಗಿ ಹಲವರು ಶಿವಾನುಭವಿಗಳು ಪ್ರಾಣಲಿಂಗವು ಇಷ್ಟಲಿಂಗವಾದುದನ್ನು ಹಾಡಿಕೊಂಡಿದ್ದಾರೆ. ಆದ್ದರಿಂದ ಪ್ರಾಣಲಿಂಗದ ಅಂಗುಷ್ಟ ಪರಿಮಿತಿಯಲ್ಲಿ ಇಷ್ಟಲಿಂಗದ ಗಾತ್ರವನ್ನು ಕಲ್ಪಿಸಿರುವುದು ಎಷ್ಟು ಉದಾತ್ತ ವಿಚಾರವು !

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಇಷ್ಟಲಿಂಗದ ಸಾಕಾರ ರೂಪುಇಷ್ಟಲಿಂಗವನ್ನು ಎಲ್ಲಿ ಧರಿಸಬೇಕು ?Next
*