"ಇಷ್ಟಲಿಂಗ" ಜಾತ್ಯತೀತತೆಯ ಕುರುಹು

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

"ಇಷ್ಟಲಿಂಗ" ಜಾತ್ಯತೀತತೆಯ ಕುರುಹು

ಇಷ್ಟಲಿಂಗವು ಅನೇಕ ಲಿಂಗಾಯತರು ಮತ್ತು ಲಿಂಗಾಯತೇತರರು ತಿಳಿದಂತೆ ಜಾತಿಯ ಕುರುಹಲ್ಲ. 'ಮಾನವ ಮಾನವರಲ್ಲಿ ಜಾತಿಭೇದ ಮಾಡುವುದು ಅಪರಾಧ ವ್ಯಕ್ತಿಯು ಜಾತಿಯಿಂದ ದೊಡ್ಡವನಾಗನು ಆತ್ಮಜ್ಯೋತಿಯಿಂದ ಮಾತ್ರ ಎಂಬುದನ್ನು ಸಂಕೇತಿಸುವ ಕುರುಹು. ಭಾರತದ ರಾಷ್ಟ್ರಧ್ವಜವು ಹೇಗೆ ಯಾವುದೇ ಜಾತಿಮತದ ಕುರುಹಾಗದೆ ಸ್ವತಂತ್ರ ಪ್ರಜಾಪ್ರಭುತ್ವವಾದಿ ರಾಷ್ಟ್ರದ ಸಾರ್ವಭೌಮತ್ವವನ್ನು ಸಾರುವ ಪ್ರತೀಕವೋ ಹಾಗೆ ಇಷ್ಟಲಿಂಗವು ಜಾತ್ಯತೀತ, ಧರ್ಮಸಹಿತ ಸಮತಾವಾದಿ ದೇಶವನ್ನು ಕಟ್ಟುವುದರ ಸಂಕೇತ.

ಕನ್ನಡಿಯು ಹೇಗೆ ಯಾವುದೇ ಜಾತಿ ಮತ ಪಂಥದ ವ್ಯಕ್ತಿಯ ಆಸ್ತಿಯಾಗದೇ ನೋಡಿಕೊಳ್ಳುವವರೆಲ್ಲರ ಹಕ್ಕೊ, ಆಸ್ತಿಯೇ. ನೋಡಿಕೊಳ್ಳುವ ಸಾಧನವೋ ಹಾಗೆ. ಇಷ್ಟಲಿಂಗವೆಂಬ ದರ್ಪಣವು ದೇವನನ್ನು ಕಾಣಬೇಕು, ಆಧ್ಯಾತ್ಮಿಕ ಕ್ಷೇತ್ರದ ದಿವ್ಯಾನುಭೂತಿಯನ್ನು ಪಡೆಯಬೇಕು, ಸ್ವರೂಪ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು ಎನ್ನುವವರೆಲ್ಲರ ಹಕ್ಕು, ಆಸ್ತಿ, ಮತ್ತು ಸಾಧನಸಂಪತ್ತು.

ಈ ರತ್ನ ಖಚಿತವಾದ ಬಂಗಾರದ ಸರಪಳಿಯನ್ನು ಹತ್ತಿ ಕಟ್ಟಿಗೆ ಕಟ್ಟಲು ಬಳಸಿದರೆ ನಗಬೇಕೋ ಅಳಬೇಕೊ ? ಅದರಿಂದ ಆ ಬಂಗಾರದ ಸರಪಳಿಗೂ ಕುಂದಲ್ಲದೆ, ಅದರ ಶಕ್ತಿಯೂ ವ್ಯರ್ಥ. ಅದೇ ರೀತಿ ಉದಾತ್ತ ಉದ್ದೇಶ ಹೊತ್ತು ಹುಟ್ಟಿದ, ಬಸವಣ್ಣನವರ ಜೀವಿತದ, ಸಾಧನೆಯ ಶ್ರೇಷ್ಠ ಕೊಡುಗೆ ಇಷ್ಟಲಿಂಗವನ್ನು ಕೇವಲ ಒಂದು ಜಾತಿಯನ್ನು ಕಟ್ಟಲು ಬಳಸಿ ಸೀಮಿತ ಗೊಳಿಸಿದರೆ ಅದರಿಂದ ಆ ಲಾಂಛನಕ್ಕೆ ಮಾತ್ರವಲ್ಲದೆ ಕೊಟ್ಟ ಬಸವಣ್ಣನವರಿಗೂ ಅಗೌರವ ತೋರಿಸಿದಂತೆ.

ಧರ್ಮವನ್ನು ಉಳಿಸಿಕೊಂಡು ಜಾತಿಯನ್ನು ನಿರ್ಮೂಲನೆ ಮಾಡುವ, ವೈಚಾರಿಕತೆಯನ್ನು ಉಳಿಸಿಕೊಂಡು ಮೂಢನಂಬಿಕೆಯನ್ನು ತಿರಸ್ಕರಿಸುವ, ವರ್ಣವರ್ಗ ಲಿಂಗ ಜಾತಿ ಭೇದವಿಲ್ಲದೆ ಎಲ್ಲರನ್ನೂ ಉದ್ಧರಿಸುವ ಸರ್ವೋತ್ಕೃಷ್ಟ, ಸಮಾನತೆಯ ಕುರುಹು ಇಷ್ಟಲಿಂಗ,

ಹಿಂದೂ ಸಮಾಜವನ್ನು, ಒಟ್ಟಾರೆ - ಭಾರತೀಯ ಸಮಾಜವನ್ನು ಹದಗೆಡಿಸಿದ್ದ ಮುಖ್ಯ ಕಾರಣಗಳು ಬಹುದೇವತೋಪಾಸನೆ, ವರ್ಗ (ವೃತ್ತಿ) ಭೇದ ಮತ್ತು ವರ್ಣ (ಜಾತಿ) ಭೇದ. ಕರ್ತನಾದ ದೇವರನ್ನು ವಿಕೃತ ರೀತಿಯಲ್ಲಿ ರೂಪಿಸಿ ದೇವರ ಪಾವಿತ್ರ್ಯವನ್ನೂ ಹಾಳು ಮಾಡಿದ್ದಲ್ಲದೆ, ಜನರಲ್ಲಿ ಮೂಢನಂಬಿಕೆಗಳನ್ನು ಹೇರಳವಾಗಿ ಬೆಳೆಸಿದುದು ಬಹುದೇವತೋಪಾಸನೆ. ಹುಟ್ಟಿದ ಜಾತಿಗೆ ಒಂದು ವೃತ್ತಿಯೆಂಬ ವಿಂಗಡಣೆ ಮಾಡಿ, ಪುನಃ ಆ ವೃತ್ತಿಯನ್ನು ಮೇಲು ಕೀಳೆಂದು ವಿಂಗಡಿಸಿ, ಆ ವೃತ್ತಿಗಳನ್ನು ಮಾಡುವವರಲ್ಲೂ ವಿಂಗಡಣಿ, ಮೇಲು-ಕೀಳು ಎಂದು ಒಡೆದು ಹೋಳು ಮಾಡಿದ್ದು ದು ವರ್ಗ ಭೇದ. ಹುಟ್ಟನ್ನು, ಜಾತಿಯನ್ನು ಆರಿಸಿಕೊಳ್ಳಲು ಸ್ವತಂತ್ರನಾಗಿಲ್ಲದ ಮಾನವ ಜೀವಿಯ ತಲೆಗೆ ಹುಟ್ಟುತ್ತಲೇ ಶ್ರೇಷ್ಠ, ಕನಿಷ್ಠ ಎಂಬ ಜಾತಿಯ ತಲೆಪಟ್ಟಿ ಕಟ್ಟಿ ಸಮಾಜವನ್ನು ವರ್ಣ, ಜಾತಿಗಳಾಗಿ ವಿಂಗಡಿಸಿದ್ದಿತು ವರ್ಣ ವ್ಯವಸ್ಥೆ. ಈ ಎಲ್ಲ ಲೋಪಗಳಿಗೆ ಪರಿಹಾರವನ್ನು ಒಂದೇ ಅಸ್ತದ ಮೂಲಕ ಕಂಡು ಹಿಡಿಯಲು ಸಮಾಜ ವಿಜ್ಞಾನಿ ಬಸವಣ್ಣನವರು ಸಂಶೋಧನೆಗೆ ತೊಡಗಿದಾಗ ರೂಪುಗೊಂಡುದೇ ಇಷ್ಟಲಿಂಗ.

ಉಗಿಬಂಡಿ, ದೂರವಾಣಿ, ದೂರದರ್ಶನಗಳು ವೈಜ್ಞಾನಿಕ ಕ್ಷೇತ್ರದಲ್ಲಿ ಎಂತಹ ಉತ್ಕೃಷ್ಟ ಸಂಶೋಧನೆಯೋ, ಕೊಡುಗೆಯೋ ಅದಕ್ಕೂ ಮಿಗಿಲಾದುದು ಇಷ್ಟಲಿಂಗ. ತಾತ್ವಿಕ, ಅಧ್ಯಾತ್ಮಿಕ, ಯೌಗಿಕ ಅರ್ಥಗಳನ್ನೊಳಗೊಂಡ ಈ ಇಷ್ಟಲಿಂಗವು ಜಾತಿಮತ ಪಂಥಾತೀತವಾಗಿ ಮುಮುಕ್ಷುಗಳಿಗೆ ಬಸವಣ್ಣನವರ ಶ್ರೇಷ್ಠ ಕೊಡುಗೆ. ಈ ಮಾತುಗಳಲ್ಲಿ ಉತ್ತೇಕ್ಷೆಯಿಲ್ಲ, ವಾಸ್ತವಿಕತೆ ಇದೆ ಎಂದು ಮನವರಿಕೆಯಾಗಬೇಕಾದರೆ ಪೂರ್ವಾಗ್ರಹ ಪೀಡಿತರಾಗದೆ ಪೂರ್ತಿ ತಿಳಿದುಕೊಳ್ಳ ಬೇಕೆಂದು ನಾವು ಸೂಚಿಸುವೆವು.

ಇಷ್ಟಲಿಂಗವೆಂದರೇನು ?

ಕರ್ನಾಟಕ ರಾಜ್ಯದಲ್ಲಿ ಬಹುದೊಡ್ಡ ಸಮಾಜವಾಗಿ, ನೆರೆಯ ರಾಜ್ಯಗಳಾದ ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಕೇರಳ, ತಮಿಳು ರಾಜ್ಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೆಲೆಸಿ ಇನ್ನಿತರ ರಾಜ್ಯಗಳು, ರಾಷ್ಟ್ರಗಳಲ್ಲಿಯೂ ಇರುವ ಮೂರು ಕೋಟಿ ಜನಸಂಖ್ಯೆಯುಳ್ಳ ಲಿಂಗವಂತ ಅಥವಾ ಲಿಂಗಾಯತ ಸಮಾಜದ ಅನುಯಾಯಿಗಳ ಮುಖ್ಯ ಲಾಂಛನ ಇಷ್ಟಲಿಂಗ, ಗುರುವಿನಿಂದ ದೀಕ್ಷೆಯ ಮೂಲಕವಾಗಿ ಪಡೆದುಕೊಂಡು, ದೇಹದ ಮೇಲೆ ಸದಾಕಾಲವೂ ಧರಿಸಿಕೊಂಡು ಪೂಜಿಸಲ್ಪಡುವ ಗೋಲಾಕಾರದ ಕಪ್ಪುವರ್ಣದ ಲಾಂಛನವಿದು. ಅತ್ಯಂತ ಹೊಳಪಿನ ಕಪ್ಪು ಹೊರ ಮೈ ಇರುವ ಗೋಲಾಕಾರದ ಈ ಕುರುಹಿಗೆ ಇಷ್ಟಲಿಂಗವೆಂಬ ಹೆಸರು ಏಕೆ ಕೊಡಲ್ಪಟ್ಟಿರಬಹುದು ?

ಭಾರತೀಯ ಪರಂಪರೆಯಲ್ಲಿ ಅತಿ ಮುಖ್ಯ ವಾಹಿನಿಯಾಗಿರುವ ಹಿಂದೂ ಸಂಸ್ಕೃತಿಯಲ್ಲಿ 'ಇಷ್ಟದೈವ' ಎಂಬ ಪದವು ಬಳಕೆಯಾಗುವುದುಂಟು. ಆ ಇಷ್ಟದೈವಗಳು ಬೇರೆಬೇರೆಯಾಗಿ ಇರುವುದೇ ಅಲ್ಲದೆ ಅವುಗಳ ಮತ್ತು ಭಕ್ತನ ಸಂಬಂಧ ವೈಯಕ್ತಿಕವೂ, ಪ್ರತ್ಯೇಕವೂ ಆಗಿರಬಹುದು. ಒಬ್ಬೊಬ್ಬರ ಇಷ್ಟದೈವ ಅವರ ವೈಯಕ್ತಿಕ ಇಷ್ಟಾನಿಷ್ಟಗಳಿಗೆ ಸಂಬಂಧಿಸಿದಂತೆ ಒಂದೋಂದಿದ್ದು ಒಂದೇ ಮನೆಯವರಲ್ಲೇ ಬೇರೆ ಬೇರೆ ಇಷ್ಟ ದೈವಂಗಳಿರಬಹುದಾಗಿದೆ ಕೂಡ. ಹಲವಾರು ಇಷ್ಟದೈವಂಗಳ ಕಷ್ಟ ತಪ್ಪಿಸುವ ಉದ್ದೇಶ ಹೊತ್ತು ಹುಟ್ಟಿದ ಉಪಾಸ್ಯ ವಸ್ತುವಾದ ಈ ಕುರುಹು “ಇಷ್ಟ ಲಿಂಗ" ಎಂಬ ಅಭಿದಾನ ತಾಳಿರಲಿಕ್ಕೂ ಸಾಕು.

ಎರಡನೆಯದಾಗಿ ಇದು ಕಾಟಾಚಾರದ ವಸ್ತುವಾಗದೆ ಇಷ್ಟಪಟ್ಟು ಸಾಧಕನು ತನ್ನ ಆತ್ಮದರ್ಶನ, ಸ್ವರೂಪ ಸಾಕ್ಷಾತ್ಕಾರಕ್ಕಾಗಿ ಪಡೆದುಕೊಳ್ಳುವ ಕಾರಣ ಇದು ಇಷ್ಟಲಿಂಗವು. "ಇಷ್ಟಿ" ಎಂದರೆ ಪೂಜೆ, ಉಪಾಸನೆ, ಈ ಪೂಜೆ ಅಥವಾ ಉಪಾಸನೆಗೆ ಅತ್ಯಂತ ಸೂಕ್ತವು, ಶ್ರೇಷ್ಠವೂ ಆದ ಕಾರಣ ಇದು ಇಷ್ಟಲಿಂಗ. ಅನಿಷ್ಟಗಳು ತನ್ನ ಅಂತರಂಗದಲ್ಲೇ ಇರಬಹುದು. ಬಹಿರಂಗದಲ್ಲೇ ಇರಬಹುದು. ಘಟದೊಳಗೆ ಇರಬಹುದು, ಮಠದೊಳಗೆ ಇರಬಹುದು; ಸಮಾಜದೊಳಗಿರಬಹುದು. ಅವುಗಳನ್ನು ತೊಡೆದುಹಾಕಿ ಇಷ್ಟವನ್ನು, ಒಳಿತನ್ನು, ಲೇಸನ್ನು ಪ್ರತಿಷ್ಠಾಪಿಸುವ ಮನೋಬಲ, ಬುದ್ದಿ ಬಲ, ಆತ್ಮಬಲಗಳನ್ನು ಬೆಳೆಸುವುದು ಯಾವುದೋ ಅದೇ ಇಷ್ಟಲಿಂಗ.

ಪಾರಲೌಕಿಕ ಉದ್ದೇಶಹೊಂದಿ ಆತ್ಮಾನುಭೂತಿಯನ್ನೇ ಮುಖ್ಯ ಧೈಯವನ್ನಾಗಿ ಇಟ್ಟುಕೊಂಡು ಅರ್ಚಿಸುವ ಭಕ್ತರು ಬಲು ವಿರಳ. ಹೆಚ್ಚಿನ ಜನರು ಲೌಕಿಕ ಕಾಮನೆ, ಇಷ್ಟಾರ್ಥಗಳ ಸಿದ್ಧಿಗಾಗಿಯೇ ಅರ್ಚಿಸುವುದು. ಆದ್ದರಿಂದ ಬೇಡುವವರ ಇಷ್ಟಾರ್ಥ ಸಿದ್ದಿಗಳನ್ನು ಪೊರೈಸಲು ಸಮರ್ಥವಾದುದು ಇಷ್ಟಲಿಂಗ.

1. ಏನ ಬೇಡಿದಡೀವ ನಮ್ಮ ಕೂಡಲಸಂಗಮದೇವ.
2. ಹಾಡಿದೊಡೆ ಎನ್ನೊಡೆಯನ ಹಾಡುವೆ
ಬೇಡಿದಡೆ ಎನ್ನೊಡೆಯನ ಬೇಡುವೆ,
ಎಂದು ಬಸವಣ್ಣನವರು ನುಡಿಯುವುದು ಈ ದೃಷ್ಟಿಯಿಂದಲೇ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಪುರುಷನ ಮುಂದೆ ಮಾಯೆ, ...ಇಷ್ಟಲಿಂಗದ ಸ್ಥಾನNext
*