ಗುರು ಬಸವಣ್ಣನವರ ಕೊಡುಗೆ

ಇಷ್ಟಲಿಂಗ ಪೂಜಾ ವಿಧಿ

*

ಇಷ್ಟಲಿಂಗ ಪೂಜಾ ವಿಧಾನ

ತ್ರಾಟಕ ಯೋಗ/ದೃಷ್ಟಿ ಯೋಗ/ ಬಸವ ಲಿಂಗ ಯೋಗ/ಬಸವ ಯೋಗ, ಲಿಂಗಾಂಗ ಯೋಗ

ಇಷ್ಟಲಿಂಗ ಪೂಜೆ ಮಾಡುವಾಗು ಶರಣರ ವಚನಗಳನ್ನು ಅಥವಾ ನಂತರದ ಶರಣ ಪರಂಪರೆಯ ಪದ್ಯ/ಹಾಡುಗಳನ್ನು ಹೇಳಬಹುದು. ಈ ಪದ್ಯ/ಹಾಡುಗಳು ಇಷ್ಟಲಿಂಗಕ್ಕೆ ಹಾಗೂ ಸೃಷ್ಟಿಕರ್ತ ಲಿಂಗದೇವನ ಕುರಿತಾಗಿರಬೇಕು.

Ishtalinga, ಇಷ್ಟಲಿಂಗ

೧) ಪ್ರಥಮವಾಗಿ ನಾವು ವಾಸಿಸುತ್ತಿರುವ ಸುಂದರವಾದ ಈ ಸೃಷ್ಟಿಯನ್ನು ರಚಿಸಿಕೊಟ್ಟಿರುವ ಪರಮ ದಯಾಳುಯಾದ ಸೃಷ್ಟಿ ಕರ್ತ ಲಿಂಗದೇವನಿಗೆ ಮೊಟ್ಟ ಮೊದಲು ಶರಣು ಸಲ್ಲಿಸಬೇಕು.

೨) ನಮಗೆ ಧರ್ಮವನ್ನು ಸಂಸ್ಕಾರವನ್ನು ಸುಜ್ಞಾನವನ್ನು ನೀಡಿ ಉದ್ಧರಿಸಿದ ವಿಶ್ವಗುರು ಬಸವಣ್ಣನವರ ಸ್ಮರಣೆ ಮಾಡಬೇಕು.

೩) ಧರ್ಮಗುರು ಬಸವಣ್ಣನವರು ಕೊಟ್ಟ ದಿವ್ಯ ಪಥದಲ್ಲಿ ನಡೆದ ಎಲ್ಲ ಶರಣರನ್ನು ಒಟ್ಟಾಗಿ ಸ್ಮರಿಸಿ ಶರಣು ಸಲ್ಲಿಸಬೇಕು.

೪) ನಮಗೆ ದೀಕ್ಷೆ ನೀಡಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಬೇಕು

೫) ನನ್ನ ತ್ರಿಕರಣಗಳಿಂದ ತಿಳಿದೊ ತಿಳಿಯದೊ ಮಾಡಿದ ಸಕಲ ಪಾಪ ಪರಿಹಾರಕ್ಕಾಗಿ ಸದ್ಭಕ್ತಿ , ಸುಜ್ಞಾನ , ಸಂಪತ್ ಸಿದ್ಧಿಗಾಗಿ ಶ್ರೀ ಗುರು ಲಿಂಗ ಜಂಗಮ ಪ್ರಸಾದಕ್ಕಾಗಿ ಇಷ್ಟಲಿಂಗ ಪೂಜೆಯನ್ನು ಮಾಡುತ್ತೇನೆಂದು ಸಂಕಲ್ಪ ಮಾಡಬೇಕು.

೬) ಶುದ್ಧೀಕರಿಸಿದ ಭಸ್ಮದಿಂದ ಪಂಚಕೋನ ರಚಿಸಿ ವಿಭೂತಿಯನ್ನು ಬಲಗೈ ನಡುವಿನ ಮೂರು ಬೆರಳುಗಳಿಂದ ಬಸವ ಮಂತ್ರ ಉಚ್ಛರಿಸುತ್ತ ಹಣೆ, ಕಿವಿಗಳು, ಕಂಠ, ಎದೆ, ಭುಜಗಳು, ನಾಭಿ, ಬೆನ್ನು, ಮೊಳಕೈಗಳು, ಪಕ್ಕೆಗಳು, ಮೊಳಕಾಲುಗಳು, ಪಾದ ಇತ್ಯಾದಿ ಸರ್ವಾಂಗಕ್ಕೂ ಧರಿಸಬೇಕು.

೭) ರುದ್ರಾಕ್ಷಿ ಮಾಲೆಗೆ ನಮಸ್ಕರಿಸಿ ಮಂತ್ರಧ್ಯಾನದಿಂದ ಶುದ್ಧೀಕರಿಸಿದ ರುದ್ರಾಕ್ಷಿ ಮಾಲೆಯನ್ನು ಕೊರಳಲ್ಲಿ ಧರಿಸಬೇಕು.

೮) ಇಷ್ಟಲಿಂಗಕ್ಕೆ ಶರಣು ಸಲ್ಲಿಸಿ ಜಲಶುದ್ಧಿಗೊಳಿಸಬೇಕು.

೯) ಅಷ್ಟವಿಧಾರ್ಚನೆ:- ಲಿಂಗ ಮಜ್ಜನದ ನಂತರ ತೇವ ಒರೆಸಿ ಅಂಗೈಯಲ್ಲಿ ಪಂಚಕೋನ ರಚಿಸಿ, ಲಿಂಗಕ್ಕೆ ವಿಭೂತಿ ಧಾರಣೆ, ರುದ್ರಾಕ್ಷಿ ಮಾಲೆ ಧಾರಣೆ, ಗಂಧ ಧಾರಣೆ, ಅಕ್ಷತೆ ಧಾರಣೆ, ಬಿಲ್ವ ಧಾರಣೆ, ಧೂಪಾರ್ಪಣೆ, ಆರತಿ ಅರ್ಪಣೆ ಕ್ರಮವತ್ತಾಗಿ ಇಷ್ಟಲಿಂಗದೇವನಿಗೆ ಭಕ್ತಿ ಭಾವದಿಂದ ಅರ್ಪಿಸಬೇಕು.
ನಂತರ ನೈವೇದ್ಯ , ಅಗ್ಘವಣಿ ಅರ್ಪಿಸಿ, ಘಂಟಾನಾದವನ್ನು ಮೊಳಗಿಸಿ ಕೃತಜ್ಞತೆಯನ್ನು ಸಲ್ಲಿಸಬೇಕು.

೧೦) ಸಚ್ಚಿದಾನಂದ ಪರವಸ್ತುವಿನ ಕುರುಹಾದ ಇಷ್ಟಲಿಂಗಕ್ಕೆ ಶಿರಬಾಗಿ ಕುರಂಗ ಮುದ್ರೆಯಿಂದ ಶರಣು ಶರಣಾರ್ಥಿಗಳನ್ನ ಸಲ್ಲಿಸಬೇಕು.

೧೧) ಎಲ್ಲ ಪೂಜೆ ಸಲಕರಣೆಗಳನ್ನು ಪ್ರತ್ಯೇಕಿಸಿ ಇಷ್ಟಲಿಂಗವನ್ನು ಅನಿಮಿಷಿಯ ದೃಷ್ಟಿಯಿಂದ ಧ್ಯಾನಿಸಿ ಸಾಧ್ಯವಾಗುವಷ್ಟು ಸಮಯ ದೃಷ್ಟಿ ಯೋಗವನ್ನು ಮಾಡುವುದು.

೧೨) ಅಂತಿಮವಾಗಿ ಪ್ರತಿಜ್ಞೆ ಕೈಗೊಳ್ಳುವುದು: ಗುರು ಬಸವ ಪ್ರಣೀತ ಲಿಂಗಾಯತ ಧರ್ಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಂಕಣ ಬದ್ಧನಾಗಿ ತನು, ಮನವನ್ನು ಅರ್ಪಿಸುವುದಾಗಿ ಸಂಕಲ್ಪಿಸಿ ನಿಮ್ಮ ಕಾಯಕಕ್ಕೆ ಅಣಿಯಾಗುವುದು.

ಇಷ್ಟ ಲಿಂಗಕ್ಕೆ ಕಪ್ಪಾದ ಕಾಂತಿಯುಕ್ತವಾದ ಕಂಥೆಯ ಕವಚವು ಇರುವ ಕಾರಣ ಅದು ದೃಷ್ಟಿ ಯೋಗ ಅಥವಾ ತ್ರಟಕ ಯೋಗಕ್ಕೆ ಸಹಾಯಕ ಸಾಧನವಾಗುವುದು. ಆಲಿಯ ಕಪ್ಪು- ಕಂಥೆಯ ಕಪ್ಪು ಪರಸ್ಪರ ಆಕರ್ಶಿಸಲ್ಪಟ್ಟು ಬೇಗನೆ ಚಿತ್ತ ಏಕಾಗ್ರತೆಯ ಅನುಭವವಾಗುವುದು.ಆಧ್ಯಾತ್ಮಿಕವಾಗಿ ಇದು ಭಾವಸಾಗರವನ್ನು ದಾಂಟಿಸುವ ಹಡಗಿನಂತೆ. ಹಸುವಿನ ಕೆಚ್ಚಲಿನಲ್ಲಿರುವ ಹಾಲಿನಲ್ಲಿ ತುಪಾವಿರುವುದು ಸತ್ಯಾಂಶ. ಒಂದು ವೇಳೆ ಹಸುವು ಬಿದ್ದು ಪೆಟ್ಟದರೆ, ಬಿಸಿ ತುಪ್ಪವನ್ನ ಹಚ್ಚಿ ಆದ ಗಾಯ ಅಥವಾ ಪೆಟ್ಟನ್ನ ವಾಸಿ ಮಾಡುವುದು ಸರಿಯಾದುದು. ಆದರೆ "ಕೆಚ್ಚಲಿನಲ್ಲಿ ಹಾಲಿದೆ, ಹಾಲಿನಲ್ಲಿ ತುಪ್ಪವಿದೆ" ಎಂದು ಅತಿ ಬುದ್ದಿವಂತರಂತೆ(ಅಹಂ ಬ್ರಹ್ಮಾಸ್ಮಿ) ಕೂತರೆ ಹೇಗೆ ಹಸುವನ್ನ ಪೋಷಿಸಿ, ಕೆಚ್ಚಲಿಂದ ಹಾಲನ್ನ ಕರೆದು, ಹಾಲಿಗೆ ಸಂಸ್ಕಾರಕೊಟ್ಟು ತುಪ್ಪವ ಮಾಡಿ ಹಚ್ಚಿದರೆ ತಾನೇ ನೋವು ಮಾಯವಾಗುವುದು! ಅದೇ ರೀತಿ ಮಾನವನ ಒಳಗಿರುವ ಆತ್ಮ ಚೈತನ್ಯವು ಭವನ್ನ ಕಳೆಯಲಾರದು; ಇದನ್ನರಿತ ಶ್ರೀ ಗುರುವು ಅಂತರಂಗದ ಆತ್ಮ ಚೈತನ್ಯವನ್ನು ಚುಳಕಾಗಿ ಹೊರತೆಗೆದು ಹುಟ್ಟುಲಿಂಗವನ್ನಾಗಿ ರೂಪಿಸಿ, ಎರಡನ್ನು ಅಭಿನ್ನವಾಗಿ ಇಂಬಿಟ್ಟು ಶಿಷ್ಯನಿಗೆ ಧಾರಣ ಮಾಡುವನು. ಈ ಕರಸ್ತಲದ ಚ್ಯೋತಿ, ಅರುಹಿನ ಕುರುಹು ಮತ್ತೆ ಅಂತರಂಗವನ್ನು ಪ್ರವೇಶಿಸಿ ಕಾಯವನ್ನೇ ಕೈಲಾಸವನ್ನಾಗಿ ಮಾಡಿ ಪುನೀತಗೊಳಿಸುವುದು.

ಇಷ್ಟ ಲಿಂಗ ಪೂಜೆಯನ್ನು ಜ್ಞಾನ ಮುದ್ರೆಯಲ್ಲಿ ಮಾಡಬೇಕು
ಜ್ಞಾನ ಮುದ್ರೆ

ಎರಡೂ ಕೈಗಳನ್ನು ಮೇಲ್ಮುಖವಾಗಿ ಇಟ್ಟು ಆಯಾ ಕೈಗಳ ತೋರು ಬೆರಳಿಗೆ ಹೆಬ್ಬೆರಳಿನ ತುದಿಯನ್ನು ತಾಗಿಸಿ. ಉಳಿದ ಮೂರು ಬೆರಳುಗಳು ನೇರವಾಗಿ ಇರಲಿ. ಒತ್ತಡ ನೀಡಬೇಕಾದ ಅಗತ್ಯ ಇಲ್ಲ.

ಪ್ರಯೋಜನ: ಮೆದುಳಿನ ಶಕ್ತಿ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ನಾಡಿಗಳಲ್ಲಿ ಶಕ್ತಿ ಬಲವಾಗಿ ಸಂಚರಿಸುತ್ತದೆ. ಇದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಹಕಾರಿ.

ನಿದ್ರಾಹೀನತೆ, ಉದ್ವೇಗ, ಭಯ, ಒತ್ತಡ, ಮಾನಸಿಕ ಚಂಚಲತೆ ದೂರವಾಗುತ್ತದೆ. ಅಧಿಕವಾದ ಸಿಟ್ಟನ್ನು ಶಮನಗೊಳಿಸುವುದರ ಜೊತೆಗೆ ಮನುಷ್ಯ ಸ್ವಭಾವಗಳಾದ ಹಟಮಾರಿತನ, ಆಲಸ್ಯ, ಸಂಶಯ, ಅತಿ ನಿದ್ರೆಯನ್ನು ಹೋಗಲಾಡಿಸುತ್ತದೆ.

ಅಧ್ಯಾತ್ಮ ಶಕ್ತಿಯ ವೃದ್ಧಿಗೆ ಜ್ಞಾನ ಮುದ್ರೆ ಸಹಾಯಕ. ಪಿಟ್ಯುಟರಿ ಗ್ರಂಥಿಗಳ ಕಾರ್ಯಕ್ಷಮತೆ ಹೆಚ್ಚಿಸುವುದರೊಂದಿಗೆ ದೇಹಕ್ಕೆ ಹೊಸ ಚೈತನ್ಯವನ್ನು ತುಂಬಿಸುತ್ತದೆ. ಎಷ್ಟು ಹೊತ್ತು ಬೇಕಾದರೂ ಮಾಡಬಹುದು.

ಅಂತೆಯೇ ಷಣ್ಮುಖ ಸ್ವಾಮಿಗಳು 'ಇಷ್ಟಲಿಂಗವು ತನ್ನಿಂದ ಭಿನ್ನವಾದ ವಸ್ತುವಿನ ಮೂರ್ತಿಪೋಜೆಯಲ್ಲ ; ಜೀವಾತ್ಮ-ಪರಮಾತ್ಮರನ್ನ ಬೆಸುಗೆ ಮಾಡಿ ಪೂಜಿಸುವ ಅಹಂಗ್ರಹೋಪಾಸನೆ ' ಎಂದು ಹೇಳಿರುವರು.

ಎನ್ನ ಕರಸ್ಥಲದ ಮದ್ಯದಲ್ಲಿ ಪರಮ ನಿರಂಜನದ
ಕುರುಹು ತೋರಿದ, ಆ ಕುರುಹಿನ ಮಧ್ಯದಲ್ಲಿ
ಅರುಹಿನ ಕಳೆಯ ತೋರಿದ;
ಆ ಕಳೆಯ ಮಧ್ಯೆದಲ್ಲಿ ಮಹಾಜ್ಞಾನದ ಬೆಳಗ ತೋರಿದ
ಆ ಬೆಳಗಿನ ನಿಳುವಿನೊಳಗೆ ಎನ್ನ ತೋರಿದ
ಎನ್ನೋಳಗೇ ತನ್ನ ತೋರಿದ, ತನ್ನೊಳಗೆ ಎನ್ನ ನಿಂಬಿಟ್ಟು ಕೊಂಡ
ಮಹಾ ಗುರುವಿಗೆ ನಮೋ ನಮೋ ಎನುತಿರ್ಪೆ
ನಯ್ಯಾ ಅಖಂಡೇಶ್ವರಾ !

ಕೆಲವರು ಇಷ್ಟಲಿಂಗ ಪೂಜೆಯು ಸಹ ಸ್ಥಾವರಲಿಂಗ ಪೂಜೆ ಎನ್ನುವರು. ಆದ್ರೆ ಶರಣರು ತಮ್ಮ ವಚನಗಳಲ್ಲಿ ಈ ತಪ್ಪು ಹಾಗೂ ಕೆಟ್ಟ ಅಭಿಪ್ರಾಯವನ್ನ ಅಲ್ಲಗಳೆದಿದ್ದಾರೆ.

ಪರಬೊಮ್ಮವೆ ಶರಣನ ಶಿರದರಮನೆಯಿಂದ ಕರದರಮನೆಗೆ
ಗುರುಕೃಪೆಯಿಂದ ಲಿಂಗ ಮೂರ್ತಿಯಾಗಿ ಬಿಜಯಂ
ಗಯೇ ದೆರ್ಪುದು ಕಂಡಾ !
ಅದು ಕಾರಣ, ಶರಣಂಗೆಯೂ ಲಿಂಗಕ್ಕೆಯೂ ಭೇದಾ
ಭೇದ ಸಂಬಂಧವಿರ್ಪುದು ಕಂಡಾ !
ಈ ಗೊತ್ತನರಿಯದೆ ಯುಕ್ತಿಗೆಟ್ಟ ಮನುಜರು
ಲಿಂಗವು ಕೈಲಾಸದ ಶಿವನ ಕುರುಹಾದುದಾರಿಂದ ಪೂಜ್ಯ ವೆಂಬರು :
ಶರಣು ಮನುಜನಾದುದರಿಂದ ಅವನು ಪೂಜಕ ನೆಂಬರು
ಇಂತಿ ಕೇವಲ ಭೇದಸಂಬಂಧವ ಕಲ್ಪಿಸುವ ಭಾವಭಾರಿಗಳು
ಶಿವಾದ್ವೈತಕ್ಕೆ ದೂರವಗಿಪ್ಪರು ಕಂಡಾ :
ಅರೆಯರಿವಿನ ನರಜೀವಿಗಳು ಶರಣರ ಸಾಮರಸ್ಯಕೆ
ಹೊರಗಾಗಿರ್ಪರು ಕಂಡಾ.
ಕೂಡಲ ಚನ್ನ ಸಂಗಮದೇವಾ.

ಲಿಂಗವಂತರು ಧರಿಸಿ ಪೂಜಿಸುವ ಇಷ್ಟಲಿಂಗವು ಪೌರಾಣಿಕ ಶಿವನ ಪ್ರತಿಕವಲ್ಲ. ಶಿರದರಮನೆಯಲ್ಲಿ ನೆಲಸಿರುವ ಪರಮಾತ್ಮನ ಪ್ರತೀಕ ಎನ್ನುವುದು ಶರಣರ ವಾಣಿ.

ಇಂತಹ ಅತ್ಯುನ್ನತವಾದ ತತ್ವವುಳ್ಳ ಇಷ್ಟಲಿಂಗವನ್ನು ಪ್ರತಿಯೊಬ್ಬ ಅನುಯಾಯಿಯೂ ಧರಿಸಲೇಬೆಕು. ಏಕೆಂದರೆ ದೇವನಿಗೆ ಎಡೆಮಾಡದೆ ಅವನು ಏನನ್ನು ತಿನ್ನಬಾರದು. ಜಗತ್ತೆಲವೂ ದ್ಯೆವಿವರ, ಅದನ್ನು ಉದಾರವಾಗಿ, ದಾನವಾಗಿ ದೇವರು ನಮಗೆ ಕೊಟ್ಟಾಗ ಅವನಿಗೆ ಕೃತಜ್ಞತೆ ಸಲ್ಲಿಸದೆ ಭೋಗಿಸುವುದು ಕೃತಘ್ನ ಕಾರ್ಯ. ಆದ್ದರಿಂದ ಪ್ರತಿಯೊಂದನ್ನು ನಾವು ಭೋಗಿಸುವ ಮುನ್ನವೇ ಅದನ್ನು ಸಾಂಕೇತಿಕವಾಗಿ ದೇವನಿಗೆ ಅರ್ಪಿಸಿ ಸ್ವೀಕರಿಸಬೇಕು. ಹೀಗೆ ಅರ್ಪಿಸುವ ಕಾರ್ಯವೇ ಪೂಜೆ ಇದರ ಅಂಗವಾಗಿ ನಿತ್ಯ ಲಿಂಗಾರ್ಚನೆಯನ್ನು ಮಾಡಿ, ದಿನದ ಮೊದಲ ಪ್ರಸದವಾಗಿ ಇಷ್ಟಲಿಂಗ ತೀರ್ಥ, ಇಷ್ಟಲಿಂಗ ಪ್ರಸಾದಗಳನ್ನು ಸ್ವೀಕರಿಸಿ ಜೀವನವನ್ನು ದಿವ್ಯಗೊಳಿಸಿಕೊಳ್ಳಬೆಕು.

ಅಂಗದ ಮೇಲಣ ಲಿಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೇ ?
ಹಿಂಗಲಾಗದು ಭಕ್ತಿ ಪಥಕ್ಕೆ ಸಲ್ಲದಾಗಿ !
ಹಿಂಗಲಾಗದು ಶಿವಶರಣರ ಪಥಕ್ಕೆ ಸಲ್ಲದಾಗಿ !
ಕೂಡಲಸಂಗಮ ದೇವರ ಹಿಂಗಿ ನುಂಗಿದುಗುಳು ಕಿಲ್ಪಿಷ?

ಇದನರಿತು ನಿತ್ಯ ಲಿಂಗಾರ್ಚನೆ ಮಾಡುವವನೇ ಲಿಂಗಾಯತನು ಸರ್ವರೂ ಲಿಂಗಾರ್ಚನೆಯನ್ನು ಮಾಡಬೇಕಾದರೆ ಅವರು ತಮ್ಮ ತಮ್ಮ ಇಷ್ಟಲಿಂಗಗಳನ್ನು ಧರಿಸಿಕೊಂಡಿರಲೇಬೇಕಷ್ಟೇ ? ಧರ್ಮಾಚರಣೆಗಳು ಶಿಥಿಲವಾದಾಗ ಜನರು ಲಿಂಗಧಾರಣೆಯ ಮಹತ್ವವನ್ನರಿಯದೆ ಧರಿಸುವುದುವುದನ್ನ ಬಿಟ್ಟು ಬಿಡುತ್ತಾರೆ. ಏನೋ ಅಂತಹ ಪ್ರಸಂಗ ಒದಗಿದಾಗ ಗಂಡ, ಹೆಂಡತಿ, ಮಕ್ಕಳು ಪರಸ್ಪರ ಎರವಲನ್ನ ಪಡೆದು ಕೇವಲ ಶಾಸ್ತ್ರಕ್ಕೆಂಬತೆ ಪೂಜಿಸುತ್ತಾರೆ. ಗುರು ಚಿತ್ಕಳೆ ತುಂಬಿಕೊಟ್ಟ ವಸ್ತುವನ್ನು ಶರೀರದಿಂದ ಅಗಲಿಸಿ ಬೇರೆ ಬೇರೆಯವರು ಹಾಗಿ ಪೂಜಿಸುಲಾಗದು ಅದನ್ನು ಚನ್ನಬಸವಣ್ಣ ನವರು ಟೀಕಿಸಿದ್ದಾರೆ.

ಸತಿಯ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ ;
ಸುತನ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ ;
ಅಳಸಿ ನಾಗವತ್ತಿಗೆಯಲಿರಿಸಿದುದು ಪ್ರಾಣಲಿಂಗವಲ್ಲ
ತನುಸೊಂಕಿ ವಜ್ರದಂತಿರಬೇಕು.
ಮನದಲ್ಲಿ ಕರದಲ್ಲಿ ಕೊಟ್ಟ ಪ್ರಾಣಲಿಂಗ ಹಿಂಗಿದಡೆ
ಅವನಂದೇ ವ್ರತಗೇಡಿ, ಕೂಡಲ ಚನ್ನ ಸಂಗಮದೇವಾ

ಗುರುವಿತ್ತ ಇಷ್ಟಲಿಂಗವನ್ನು ಅಗಲಿಸಿದರೆ ಅದರಲ್ಲಿನ ಚಿತ್ಕಳೆಯು ಪತನಗೊಳ್ಳುವುದು, ಗುರುಕಾರುಣ್ಯವು ಇಷ್ಟಲಿಂಗದಲ್ಲಿ ಹರಿದು ಸದಾಕಾಲದಲ್ಲಿ ಶಿಷ್ಯನನ್ನು ರಕ್ಷಿಸುವುದು. ಆದ ಕಾರಣ ಪ್ರತಿಯೊಬ್ಬರೂ ಅದನ್ನ ಧರಿಸಿ ಪೂಜಿಸಬೇಕು.

ಒಮ್ಮೆ ನೆಲದಲ್ಲಿ ಬಿತ್ತಿದ ಬಿತ್ತುವ ಕಿತ್ತಿ ಕಿತ್ತಿ
ಮತ್ತೆ ಬಿತ್ತುತ್ತಾ ಹೋದರೆ,
ಆ ಬಿತ್ತು ಮೊಳೆತು ಕಳೆಯೇರಿ ಬೆಳೆದು
ಬೆಳೆಸನ್ನೀವ ಪರಿಯಂತೋ, ಮರುಳ ಮಾನವಾ!
ಗುರುವಿತ್ತ ಲಿಂಗವ ತೊರೆತೊರೆದು ಮರಳಿ
ಮರಳಿ ಧರಿಸಿದಡೆ ಆ ಇಷ್ಟಲಿಂಗವು ಅನಿಷ್ಟವ
ಕಳೆದು ಇಷ್ಟಾರ್ಥವನೀವ ಪರಿಯಿನ್ನೆಂತೋ
ಇದು ಕಾರಣ ಕೂಡಲ ಚೆನ್ನಸಂಗಯ್ಯನಲ್ಲಿ ಮುಕ್ತಿಯನರವೂಡೆ
ಅಂಗದಲ್ಲಿ ಹೆರೆಹಿಗಂದೆ ಲಿಂಗವ ಧರಿಸಬೇಕು.

ಪರಿವಿಡಿ (index)
*
Previousಜಗುಲಿ: ಸುತ್ತಮುತ್ತ ವೃತ್ತಾಂತಲಿಂಗಾಯತ ತತ್ವ-ಸಿದ್ಧಾಂತಗಳುNext
*