ಇಷ್ಟಲಿಂಗ ದೀಕ್ಷಾ ಸಂಸ್ಕಾರ, ಯಾರು, ಯಾವಾಗ ಮಾಡಿಸಿಕೊಳ್ಳಬೇಕು?

Who and when should get Istalinga Deekhsha?

- ಶರಣ ಸಚ್ಚಿದಾನಂದ ಚಟ್ನಳ್ಳಿ .

ನರಜನ್ಮಕ್ಕೊಮ್ಮೆ ಬಂದ ಬಳಿಕ, ಗುರುವಿನ ಕುರುಹ ಕಾಣಬೇಕು.
ಗುರುವಿನ ಕುರುಹ ತಾ ಕಂಡ ಬಳಿಕ, ಶಿಷ್ಯನಾಗಿ ಗುರು ಕರಜಾತನಾಗಬೇಕು.
ಕಪಿಲಸಿದ್ಧಮಲ್ಲಿಕಾರ್ಜುನದೇವರ ದೇವನ ಪಾದ ಪದ್ಮದಲ್ಲಿ
ಐಕ್ಯವ ಗಳಿಸಬೇಕು ಘಟ್ಟಿವಾಳಯ್ಯಾ.

ಗುರು ಚೆನ್ನಬಸವಣ್ಣನವರಿಂದ ಇಷ್ಟಲಿಂಗದೀಕ್ಷೆ ಹೊಂದಿದ ಸಿದ್ಧರಾಮೇಶ್ವರರು, ಜ್ಯೋತಿ ಮುಟ್ಟಿ ಜ್ಯೋತಿಯಾದಂತೆ ಗುರು ಮುಟ್ಟಿ ಗುರುವಾಗಿದ್ದಾರೆ. ಇಲ್ಲಿ ಅವರು ಘಟ್ಟಿವಾಳಯ್ಯ ಎನ್ನುವ ಇನ್ನೊಂದು ಜ್ಯೋತಿಯನ್ನು ಬೆಳಗಿಸುತ್ತಾ ಈ ವಚನವನ್ನು ಹೇಳುತ್ತಿದ್ದಾರೆ. ನರಜನ್ಮಕ್ಕೊಮ್ಮೆ ಬಂದ ಬಳಿಕ ಪ್ರತಿಯೊಬ್ಬ ವ್ಯಕ್ತಿಯೂ ಸದ್ಗುರುವಿನ ದರ್ಶನ ಪಡೆಯಬೇಕು, ನಂತರ ಗುರುವಿನ ಕರಜಾತನಾಗಬೇಕು. ಅರ್ಥಾತ್ ಇಷ್ಟಲಿಂಗ ದೀಕ್ಷೆ ಹೊಂದಬೇಕು. ಏಕೆಂದರೆ ``ದೀಕ್ಷೆಯಿಲ್ಲದ ಮೋಕ್ಷವಿಲ್ಲ" ಎನ್ನುವುದು ಶರಣರ ನುಡಿ, ಅದಕ್ಕಾಗಿಯೇ ಕಪಿಲಸಿದ್ಧ ಮಲ್ಲಿಕಾರ್ಜುನದೇವರ ದೇವ (ಪರಮಾತ್ಮನ)ನ ಪಾದದಲ್ಲಿ ಐಕ್ಯವಾಗಲಿಕ್ಕೆ ಇಷ್ಟಲಿಂಗ ದೀಕ್ಷೆಯಿಂದ ಮಾತ್ರ ಸಾಧ್ಯವಿದೆ ಎಂದು ಸಿದ್ಧರಾಮೇಶ್ವರರು ಘಟ್ಟಿವಾಳಯ್ಯನವರಿಗೆ ಉಪದೇಶ ಮಾಡುತ್ತಾರೆ.

ದೀಕ್ಷಾ ಸಂಸ್ಕಾರ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಪ್ರಮುಖವಾದ ಘಟನೆ. ಅದು ವ್ಯಕ್ತಿಗೆ ಪುನರ್ಜನ್ಮವನ್ನು ಕೊಡುತ್ತದೆ. ಅಲ್ಲಮ ಪ್ರಭುದೇವರು, ಅನುಭಾವ ಮಂಟಪಕ್ಕೆ ಬರುವುದಕ್ಕಿಂತ ಮುಂಚೆ ಅನೇಕ ಸಿದ್ಧಿಗಳನ್ನು ಪಡೆದರೂ ಅದಾವುದೂ ಅವರಿಗೆ ತೃಪ್ತಿ ಕೊಟ್ಟಿರಲಿಲ್ಲ. ಆದರೆ ಇಷ್ಟಲಿಂಗ ದೀಕ್ಷೆ ಪಡೆದ ಮೇಲೆ ``ನಾ ಬಯಸುವ ಬಯಕೆ ಕೈ ಸಾರಿತ್ತಿಂದು", `ನಾನು ಬದುಕಿದೆನು' ಎಂದು ಸಂಭ್ರಾಂತಿಯನ್ನು ವ್ಯಕ್ತಪಡಿಸುತ್ತಾರೆ. ಷಣ್ಮುಖ ಶಿವಯೋಗಿಗಳೂ ಕೂಡ ಇಷ್ಟಲಿಂಗ ದೀಕ್ಷೆ ಹೊಂದಿದ ಬಳಿಕ ಸಂಭ್ರಮಿಸಿದ ರೀತಿ ನೋಡಿದರೆ ಅಚ್ಚರಿಯಾಗುತ್ತದೆ.

ಜಗವನೊಳಕೊಂಡ ಲಿಂಗವು
ಸೊಗಯಿಸಿ ಇಂದೆನ್ನ ಕರಸ್ಥಲಕ್ಕೆ ಬಂದಿರಲು
ಕಂಡು ಹಗರಣವಾಯಿತ್ತೆನಗೆ,
ಗುರು, ಲಿಂಗ, ಜಂಗಮ ಸ್ವರೂಪವಾಗಿ ಮೂರ್ತಿಗೊಂಡಿತ್ತು ನೋಡಾ
ಆಹಾ ಎನ್ನ ಪುಣ್ಯವೆ! ಆಹಾ ಎನ್ನ ಭಾಗ್ಯವೆ! ಆಹಾ ಅಖಂಡೇಶ್ವರ!

ಲಿಂಗಾಯತ ಧರ್ಮದ ಹೆಬ್ಬಾಗಿಲು ಇಷ್ಟಲಿಂಗ ದೀಕ್ಷಾ ಸಂಸ್ಕಾರ. ಯಾವುದೇ ಜಾತಿ ಮತ ಪಂಥದಲ್ಲಿ ಹುಟ್ಟಿದ ವ್ಯಕ್ತಿ ಲಿಂಗಾಯತನಾಗಲಿಕ್ಕೆ ಇರುವ ಏಕೈಕ ಸಾಧನ ಇಷ್ಟಲಿಂಗ ದೀಕ್ಷೆ. ಇಷ್ಟಲಿಂಗ ದೀಕ್ಷೆಯಲ್ಲಿ ಸ್ವತಃ ವ್ಯಕ್ತಿಯೇ ಗುರುವಿನಿಂದ ಇಷ್ಟಲಿಂಗವನ್ನು ಪಡೆದು ಗುರುವಿನ ಹಸ್ತದಲ್ಲಿ ಹುಟ್ಟನ್ನು ಪಡೆದು, ಪುನರ್ಜನ್ಮ ತಾಳುತ್ತಾನೆ.
* ವೈದಿಕರಲ್ಲಿ ದೀಕ್ಷಾ ಸಂಸ್ಕಾರವನ್ನು ಉಪನಯನ ಅಥವಾ ದ್ವಿಜ ಸಂಸ್ಕಾರ ಎನ್ನುತ್ತಾರೆ. ದ್ವಿ-ಎಂದರೆ ಎರಡು, ಜ-ಎಂದರೆ ಜನನ ಎಂದು ಅರ್ಥ. ಎರಡನೇ ಸಲ ಜನ್ಮ ತಾಳುವುದೇ ದ್ವಿಜ.
ಸಿಖ್ ಧರ್ಮದಲ್ಲಿ ಅವರ ಧರ್ಮದ ದೀಕ್ಷೆಗೆ `ಪಾಹುಲ್' ಎಂದು ಕರೆದು ಈ ಸಂಸ್ಕಾರಕ್ಕೆ ಒಳಗಾದವನು ಮಾತ್ರ ನಿಜವಾದ ಸಿಖ್ ಎನ್ನುವ ನಂಬಿಕೆ ಅವರದು. ಅದೇ ರೀತಿ ಕ್ರಿಶ್ಚಿಯನ್ ಧರ್ಮದಲ್ಲಿ ದೀಕ್ಷಾ ಸಂಸ್ಕಾರಕ್ಕೆ ``ಬ್ಯಾಪ್ಟಿಸಮ್" (Baptism) ಎಂದು ಕರೆದರೆ ಇಸ್ಲಾಂ ಧರ್ಮಿಯರು ``ಸುನ್ನತಿ" ಎಂದು ಕರೆಯುತ್ತಾರೆ. ಈ ರೀತಿ ಎಲ್ಲಾ ಪ್ರವಾದಿ ಧರ್ಮಗಳಲ್ಲಿಯೂ ಆಯಾ ಧರ್ಮಗಳ ದೀಕ್ಷಾ ಸಂಸ್ಕಾರ ವಿಧಿ ವಿಧಾನಗಳಿವೆ ಅದೇ ರೀತಿ ಲಿಂಗಾಯತ ಧರ್ಮದ ದೀಕ್ಷಾ ಸಂಸ್ಕಾರವೇ ``ಇಷ್ಟಲಿಂಗ ದೀಕ್ಷೆ" ವೈದಿಕ ಧರ್ಮದಲ್ಲಿ 8ನೇ ವಯಸ್ಸಿಗೆ ಗಂಡು ಮಕ್ಕಳಿಗೆ ಉಪನಯನ ಸಂಸ್ಕಾರಕ್ಕೆ ಬಹಳ ಮಹತ್ವ ನೀಡುತ್ತಾರೆ. ಆಹ್ವಾನ ಪತ್ರಿಕೆ ಮುದ್ರಿಸಿ ಬಂಧು ಬಳಗದವರನ್ನೆಲ್ಲಾ ಈ ಕಾರ್ಯಕ್ರಮಕ್ಕೆ ಆಹ್ವಾನಿಸುವರು. ಇದರಿಂದ ಅವರ ಸಹಧರ್ಮೀಯರೂ ಉಪನಯನದ ಮಹತ್ವ ಅರಿತು, ಅವರೂ ಆಚರಿಸುತ್ತಾರೆ. ಲಿಂಗಾಯತ ಧರ್ಮೀಯರಲ್ಲಿಯೂ ಈ ರೀತಿಯ ಜಾಗೃತೆಯುಂಟಾಗುವುದು ಅವಶ್ಯವಾಗಿದೆ. ಈಗೀಗ ಅನೇಕರು ಇಷ್ಟಲಿಂಗ ದೀಕ್ಷೆ ಪಡೆಯುತ್ತಿದ್ದರೂ ಇನ್ನೂ ಹೆಚ್ಚಿನ ಜನರು ಇದರಿಂದ ಬಹುದೂರ ಉಳಿದಿದ್ದಾರೆ. ಅದಕ್ಕಾಗಿ ಆರ್ಥಿಕವಾಗಿ ಅನುಕೂಲವಿರುವವರು, ತಮ್ಮ ಮಕ್ಕಳಿಗೆ ದೀಕ್ಷೆ ಕೊಡಿಸುವಾಗ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಬಂಧು, ಬಾಂಧವರು, ಮಿತ್ರರನ್ನು ಕರೆದು ಗುರುಗಳನ್ನು ಆಹ್ವಾನಿಸಿ, ಮಕ್ಕಳಿಗೆ ದೀಕ್ಷಾ ಸಂಸ್ಕಾರ ಕೊಡಿಸಬೇಕು. ಇದರಿಂದ ಇತರರೂ ದೀಕ್ಷಾ ಸಂಸ್ಕಾರದ ಮಹತ್ವವನ್ನು ಅರಿತುಕೊಳ್ಳುತ್ತಾರೆ. ಆರ್ಥಿಕವಾಗಿ ಅನಾನುಕೂಲವಿರುವವರು ಗುರುಗಳು ಇರುವ ಕಡೆಗೆ ಹೋಗಿ ದೀಕ್ಷೆ ತೆಗೆದುಕೊಳ್ಳಬಹುದು.

ತಾಯಿ - ತಂದೆಯರಿಂದ ಮಾಂಸ ಪಿಂಡವಾಗಿ ಹುಟ್ಟಿದ ಈ ದೇಹ (ಗರ್ಭಲಿಂಗಧಾರಣೆಯಾದರೆ ಮಂತ್ರ ಪಿಂಡವಾಗಿಯೇ ಹುಟ್ಟುತ್ತದೆ) ಸದ್ಗುರುವಿನ ಹಸ್ತದಲ್ಲಿ ಹುಟ್ಟಿದಾಗ ಮಂತ್ರ ಪಿಂಡವಾಗುತ್ತದೆ. "ಹುಟ್ಟಿದೆ ಶ್ರೀ ಗುರುವಿನ ಹಸ್ತದಲ್ಲಿ" ಎನ್ನುವ ಗುರು ಅಕ್ಕಮಹಾದೇವಿ ತಾಯಿಯವರ ವಚನದಲ್ಲಿ ಈ ಭಾವವೇ ವ್ಯಕ್ತವಾಗಿದೆ.

ವ್ಯಕ್ತಿ, ಲಿಂಗಾಯತರಾದ ತಾಯಿ-ತಂದೆಗಳಿಂದ ಜನ್ಮ ಪಡೆದರೂ, ಧರ್ಮದ ಅನುಯಾಯಿತ್ವ ತನ್ನಿಂದ ತಾನೆ ಬರಲಾರದು. ತಂದೆ ಇಂಜಿನಿಯರ್ ಆದ ಮಾತ್ರಕ್ಕೆ ಅವನ ಮಕ್ಕಳು ಇಂಜಿನಿಯರ್ ಆಗಲಾರರು; ಅವರೂ ಕೂಡ ಡಿಪ್ಲಮೋ, ಬಿ.ಇ. ಪದವಿಧರನಾಗಲೇ ಬೇಕು. ಅದೇ ರೀತಿ ಒಬ್ಬ ಕೂಲಿ ಕಾರ್ಮಿಕನ ಮಗ ಕೂಲಿ ಕಾರ್ಮಿಕನಾಗಲೇ ಬೇಕು ಎಂದೇನಿಲ್ಲ. ಅವನು ಕೂಡ ಡಿಪ್ಲಮೋ, ಬಿ.ಇ. ಪದವಿಗಳನ್ನು ಪಡೆದುಕೊಂಡರೆ ಇಂಜಿನಿಯರ್ ಆಗುತ್ತಾನೆ. ಅದೇ ರೀತಿ ಲಿಂಗಾಯತ ತಾಯಿ - ತಂದೆಯರಿಗೆ ಹುಟ್ಟಿದ ಮಾತ್ರಕ್ಕೆ ಲಿಂಗದೀಕ್ಷೆ ಪಡೆದುಕೊಳ್ಳದೇ ಇರುವರನ್ನು ಲಿಂಗಾಯತರೆಂದು ಕರೆಯಲಾಗದು. ಅವರು ಕೂಡ ಸದ್ಗುರುವಿನಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆಯಲೇ ಬೇಕು. ಅದೇ ರೀತಿ ಯಾವುದೇ ಜಾತಿ, ಮತ, ಅಧಿಕಾರ ಅಂತಸ್ತುಗಳ ಭೇದವಿಲ್ಲದೆ ಯಾರು ಬೇಕಾದರೂ ಇಷ್ಟಲಿಂಗ ದೀಕ್ಷೆ ಹೊಂದಿ ಲಿಂಗಾಯತರಾಗಬಹುದು.

ಕೇವಲ ತಾನು ಇಷ್ಟಲಿಂಗ ದೀಕ್ಷೆ ಸಂಸ್ಕಾರ ಹೊಂದಿ ಲಿಂಗಾಯತನಾದರೆ ಸಾಲದು ಇತರರಿಗೂ ಕೂಡ ಇದರ ಮಹತ್ವವನ್ನು ತಿಳಿ ಹೇಳಿ ಲಿಂಗದೀಕ್ಷೆ ತೆಗೆದುಕೊಳ್ಳುವಂತೆ ಮಾಡಿದರೆ ಜೀವನದಲ್ಲಿ ಒಂದು ಒಳ್ಳೆಯ, ಪುಣ್ಯದ ಕಾರ್ಯ ಮಾಡಿದಂತಾಗುತ್ತದೆ. ಇಷ್ಟಲಿಂಗ ದೀಕ್ಷೆಯ ಮಹತ್ವ ಅರಿತು ಇದನ್ನು ಪಡೆದುಕೊಂಡ ವ್ಯಕ್ತಿಯಂತೂ ನಿಮ್ಮ ಬಗ್ಗೆ ಧನ್ಯತೆಯ ಭಾವ ಹೊಂದುತ್ತಾನೆ. ಅವನೆಂದಿಗೂ ಜನ್ಮದಲ್ಲಿ ನಿಮ್ಮನ್ನು ಮರೆಯದೆ ಕೊಂಡಾಡುತ್ತಲೇ ಇರುತ್ತಾನೆ.

ನರಜನ್ಮವ ತೊಡೆದು ಹರಜನ್ಮ ಮಾಡುವಂಥ, ಭವಿತನವನ್ನು ತೊಡೆದುಹಾಕಿ ಭಕ್ತನನ್ನಾಗಿ ಮಾಡುವಂಥ, ಭವ ಬಂಧನವನ್ನು ತೊಡೆದುಹಾಕಿ ಪರಮ ಸುಖವನ್ನು ತೋರುವಂಥದ್ದು ಈ ಇಷ್ಟಲಿಂಗ ದೀಕ್ಷೆ. ಹಾಗಾದರೆ ಇಂಥ ಇಷ್ಟಲಿಂಗ ದೀಕ್ಷೆ ಸಂಸ್ಕಾರವನ್ನು ವ್ಯಕ್ತಿ ಯಾವಾಗ ತೆಗೆದುಕೊಳ್ಳಬೇಕು? ಮದುವೆಯಾಗುವಾಗಲೋ? ವಯಸ್ಸಾದ ಮೇಲೋ? ಅಥವಾ ಸತ್ತ ಮೇಲೋ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಗುರು ಅಕ್ಕಮಹಾದೇವಿ ತಾಯಿಯವರ ಈ ವಚನ :

ಉರಕ್ಕೆ ಜವ್ವನಗಳು ಬಾರದ ಮುನ್ನ,
ಮನಕ್ಕೆ ನಾಚಿಕೆಗಳು ತೋರದ ಮುನ್ನ,
ನಮ್ಮವರಂದೆ ಮದುವೆಯ ಮಾಡಿದರು;
ಚೆನ್ನ ಮಲ್ಲಿಕಾರ್ಜುನ ದೇವರ ದೇವಂಗೆ
ಹೆಂಗೂಸೆಂಬ ಭಾವವ ತೋರದ ಮುನ್ನ
ನಮ್ಮವರಂದೆ ಮದುವೆಯ ಮಾಡಿದರು

ಯೌವ್ವನ ಎನ್ನುವಂಥದ್ದು ಬರುವುದಕ್ಕಿಂತ ಮುಂಚೆಯೇ, ದೀಕ್ಷೆಯಾಗಬೇಕು. ಸಾಮಾನ್ಯವಾಗಿ ಹೆಣ್ಣುಮಕ್ಕಳು ದೊಡ್ಡವರಾಗುವುದಕ್ಕಿಂತ ಮುಂಚೆ ಎಲ್ಲರೊಂದಿಗೆ ಬೆರೆತು ಗಂಡು ಹೆಣ್ಣು ಎನ್ನುವ ಭಾವವಿಲ್ಲದೆ, ಲಜ್ಜೆ ನಾಚಿಕೆ ಏನೊಂದು ಇಲ್ಲದೆ ಗಂಡು ಮಕ್ಕಳೊಂದಿಗೆ ಬೆರೆತು ಹೆಣ್ಣು ಮಕ್ಕಳು ಆಟ ಆಡುತ್ತಾರೆ. ಆದರೆ ದೊಡ್ಡವರಾದ ಮೇಲೆ ಅವರಲ್ಲಿ ದೈಹಿಕ ಪರಿವರ್ತನೆಯ ಜೊತೆ ಜೊತೆಗೆ ಮಾನಸಿಕ ಪರಿವರ್ತನೆಯೂ ಕೂಡ ಆಗುತ್ತದೆ. ಆಗ ಮನಕ್ಕೆ ನಾಚಿಕೆಗಳು ಉಂಟಾಗುತ್ತವೆ. ಹೆಂಗೂಸು, ಗಂಡುಗೂಸು ಎನ್ನುವ ಭಾವ ತೋರುವುದಕ್ಕಿಂತ ಮುಂಚೆಯೇ ದೀಕ್ಷೆ ಸಂಸ್ಕಾರವನ್ನು ಪಡೆಯಬೇಕು ಅಥವಾ ಮಕ್ಕಳಿಗೆ ಕೊಡಿಸಬೇಕು ಎನ್ನುವ ಮಹತ್ವಪೂರ್ಣವಾದ ವಿಷಯವನ್ನು ಈ ವಚನ ಹೇಳುತ್ತಿದೆ. ಅಂದರೆ ಹೆಣ್ಣು ಮಕ್ಕಳಿಗೆ ಅವರು ದೊಡ್ಡವರಾಗುವುದಕ್ಕಿಂತ ಮುಂಚೆಯೇ ದೀಕ್ಷೆಯಾಗಬೇಕು. ತೀರ ಚಿಕ್ಕ ವಯಸ್ಸಿನಲ್ಲಾದರೆ ಅವರಿಗೆ ಅಷ್ಟೊಂದು ಅರಿವಿರುವುದಿಲ್ಲ. 8-9 ವರ್ಷಕ್ಕೆಲ್ಲ ಅರಿವು ಎನ್ನುವಂಥದ್ದು ಬರಲು ಆರಂಭಿಸುತ್ತದೆ ಅದಕ್ಕಾಗಿ 10 ವರ್ಷ ವಯಸ್ಸಿನ ಒಳಗೆ ಗಂಡು ಮಗುವೇ ಇರಲಿ ಹೆಣ್ಣು ಮಗುವೇ ಇರಲಿ ದೀಕ್ಷೆ ಮಾಡಿಸಲೇ ಬೇಕು. ಇಲ್ಲಿ ತಾಯಿ-ತಂದೆಗಳ ಜವಾಬ್ದಾರಿ ಬಹಳ ಮುಖ್ಯವಾದುದು. ಮಕ್ಕಳು ಪೂಜೆ ಧ್ಯಾನ ಮಾಡುವುದರಿಂದ ಅವರಲ್ಲಿ ಏಕಾಗ್ರತೆ ಹೆಚ್ಚಾಗಿ ಅವರ ವಿದ್ಯಾಭ್ಯಾಸಕ್ಕೂ ಹೆಚ್ಚು ಉಪಯುಕ್ತವಾಗುತ್ತದೆ. ಮಕ್ಕಳಲ್ಲಿ ಸಹಜವಾಗಿ ಇರುವ ತುಂಟತನಗಳು ಮಾಯವಾಗಿ ಅವರಲ್ಲಿ ಶಾಂತತೆ ಅಳವಡುತ್ತದೆ. ಬಾಲ್ಯದಲ್ಲಿಯೇ ದೀಕ್ಷೆ ಹೊಂದಿ ಪೂಜೆ ಮಾಡುವ ಮಕ್ಕಳು ಇತರ ಮಕ್ಕಳಿಗಿಂತ ಭಿನ್ನವಾಗಿರುತ್ತಾರೆ ಮಾತ್ರವಲ್ಲ ಜ್ಞಾನಿಗಳಾಗಿರುತ್ತಾರೆ.

9-10 ವರ್ಷದ ಮಕ್ಕಳಿಗೆ ದೀಕ್ಷೆ ಕೊಡಿಸುವುದರಲ್ಲಿ ಇನ್ನೊಂದು ಮಹತ್ವ ಪೂರ್ಣವಾದ ಅಂಶವಿದೆ. ಆ ಎಳೆಯ ಮಕ್ಕಳ ಮನಸ್ಸು ತುಂಬಾ ಶುಭ್ರ ಮತ್ತು ತಿಳಿಯಾಗಿರುತ್ತದೆ. ಅಲ್ಲಿ ಕಾಮ-ಕ್ರೋಧಗಳಿಲ್ಲ, ಮೋಹ-ಲೋಭಗಳಿಲ್ಲ, ಮದ-ಮತ್ಸರ, ರಾಗ-ದ್ವೇಶಗಳು ಇರುವುದಿಲ್ಲ. ಇಂಥ ಪರಿಶುದ್ದವಾದ ಮನಸ್ಸಿನಿಂದ ಇಷ್ಟಲಿಂಗ ಪೂಜೆ ಮಾಡಿದಾಗ ಪರಮಾತ್ಮನ ಒಲುಮೆಯಾಗುತ್ತದೆ ಮುಂದೆ ಆ ಮಕ್ಕಳು ಸತ್ಪ್ರಜೆಗಳಾಗಿ, ಲಿಂಗಾಯತ ಧರ್ಮದ, ಭಾರತದೇಶದ, ಮಾನವ ಜನಾಂಗದ ಆಸ್ತಿಯಾಗುತ್ತಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ತಮ್ಮ ಮುಗ್ಧ ಭಕ್ತಿಯಿಂದ ಪರಮಾತ್ಮನನ್ನು ಒಲಿಸಿಕೊಂಡ ಅನೇಕ ಮಕ್ಕಳ ಉದಾಹರಣೆಗಳು ನಮ್ಮೆದುರಿಗೆ ಇವೆ. ಧ್ರುವ, ಕೊಳೂರು ಕೊಡಗೂಸು, ಪ್ರಹ್ಲಾದ, ಸಿಂಡರೆಲಾ, ಚನ್ನಬಸವಣ್ಣ, ಅಕ್ಕಮಹಾದೇವಿ ಇಂಥ ಅನೇಕರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮುಟ್ಟಿರುವುದನ್ನು ಕಾಣುತ್ತೇವೆ. ಅದಕ್ಕಾಗಿ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ದೀಕ್ಷೆ ಕೊಡಿಸಬೇಕು. ನಮ್ಮ ತಂದೆಯವರು ನನಗೆ 10-12 ವರ್ಷಕ್ಕೆಲ ದೀಕ್ಷೆ ಕೊಡಿಸಿದ್ದರು, ಇಷ್ಟಲಿಂಗ ಕೈಯಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಾ ಇದ್ದರೆ ಆಗಲೇ ತುಂಬಾ ಆನಂದವಾಗುತ್ತಿತ್ತು. ಏಕಾಗ್ರತೆ ಅಳವಟ್ಟು ಓದಿದ್ದೆಲ್ಲ ಚೆನ್ನಾಗಿ ಅರ್ಥವಾಗುತಿತ್ತು ಮಾತ್ರವಲ್ಲ ನೆನಪಿನಲ್ಲಿ ಉಳಿಯುತಿತ್ತು ಹೀಗಾಗಿ 5ನೇ ತರಗತಿ ಮುಗಿಯುವಷ್ಟರಲ್ಲೇ ಗುರುಬಸವಣ್ಣನವರ 300 ವಚನಗಳನ್ನು ಕಂಠಪಾಠ ಮಾಡಿದ್ದೆ.

ಇಷ್ಟಲಿಂಗ ದೀಕ್ಷೆಯನ್ನು ಇನ್ನೂ ನೀವು ಪಡೆದುಕೊಂಡಿಲ್ಲವೇ? ನಿಮ್ಮ ಮಕ್ಕಳಿಗೆ ಇನ್ನೂ ದೀಕ್ಷೆ ಮಾಡಿಸಿಲ್ಲವೇ? ಇದಕ್ಕಾಗಿ ತಡವೇಕೆ? ಈಗಲೇ ದೀಕ್ಷೆ ತೆಗೆದುಕೊಳ್ಳುವ ಸಂಕಲ್ಪ ಮಾಡಿ ನಾಳೆಯೇ ಸದ್ಗುರುವಿನಿಂದ ಇಷ್ಟಲಿಂಗ ದೀಕ್ಷೆ ಪಡೆದುಕೊಂಡು ಪಾವನರಾಗಿ.

ಶರಣು ಶರಣಾರ್ಥಿ

*
Previousಅಗ್ನಿ (ಕಿಚ್ಚು), ಜಲ, ನೆಲ, ಕಲ್ಲು ದೇವರಲ್ಲವಚನಕಾರರ ದೃಷ್ಟಿಯಲ್ಲಿ ಶಿವರಾತ್ರಿ Next
*