ಲಿಂಗಾಯತ ಧರ್ಮದ "ಗರ್ಭಲಿಂಗಧಾರಣೆ" ಸಂಸ್ಕಾರ

*

ಲಿಂಗಾಯತ ಧರ್ಮದ ವಿಶಿಷ್ಟ ಸಂಸ್ಕಾರ

ವಿಶ್ವದ ಯಾವುದೇ ಭಾಗದಲ್ಲಿ, ಯಾವುದೇ ಧರ್ಮ, ಮತ, ಪಂಥದಲ್ಲಿ ಇರಲಾರದಂಥ ವಿಶಿಷ್ಟ ಸಂಸ್ಕಾರ ಲಿಂಗಾಯತ ಧರ್ಮದಲ್ಲಿವೆ. ಹುಟ್ಟುತ್ತಲೇ ಮಂತ್ರಪಿಂಡವಾಗಿ, ಭಕ್ತನಾಗಿ ಹುಟ್ಟಲಿಕ್ಕೆ ಇರುವಂಥ ವಿಶಿಷ್ಟವಾದ ಈ ಸಂಸ್ಕಾರವೇ `ಗರ್ಭಲಿಂಗಧಾರಣೆ' ಸಂಸ್ಕಾರ. ಇದಕ್ಕೆ ಸರಿಸಮವಾದ ಸಂಸ್ಕಾರ ಲಿಂಗಾಯತ ಧರ್ಮವೊಂದನ್ನು ಬಿಟ್ಟು ನಾವು ಇನ್ನೆಲ್ಲಿಯೂ ಕಾಣಲಿಕ್ಕೆ ಸಾಧ್ಯವಿಲ್ಲ. ಶಿಶುವು ತಾಯಿಯ ಗರ್ಭದಲ್ಲಿರುವಾಗ ಆಹಾರ ನೀರುಗಳನ್ನು ತಾಯಿಯ ಮುಖಾಂತರ ಸ್ವೀಕರಿಸುತ್ತದೆ. ಅದೇ ರೀತಿ ಧರ್ಮಸಂಸ್ಕಾರವನ್ನೂ ಕೂಡ ಗರ್ಭದಲ್ಲಿದ್ದಾಗಲೇ ತಾಯಿಯ ಮುಖಾಂತರವೇ ಸ್ವೀಕರಿಸಬೇಕು ಎನ್ನುವ ಸಿದ್ಧಾಂತವೇ ಗರ್ಭಲಿಂಗಧಾರಣೆ.

ಮಾಂಸ ಪಿಂಡವೆನಿಸದೆ ಮಂತ್ರ ಪಿಂಡವೆಂದೆನಿಸಿದನಯ್ಯಾ ಬಸವಣ್ಣನು
ವಾಯು ಪ್ರಾಣಿಯೆನ್ನದೆ ಲಿಂಗಪ್ರಾಣಿ ಎನಿಸಿದ ಬಸವಣ್ಣನು.
ಜಗಭರಿತನೆಂಬ ಶಬ್ದಕ್ಕೆ ಅಂಗವಿಸದೆ, ಶರಣ ಭರಿತ ಲಿಂಗವೆನಿಸಿದ
ಕೂಡಲಚೆನ್ನ ಸಂಗಯ್ಯನಲ್ಲಿ ಬಸವಣ್ಣನು. (ಚೆ.ವ.ಸಂ.-24)

"ಮಾಂಸಪಿಂಡವೆನಿಸದೆ ಮಂತ್ರಪಿಂಡವೆನಿಸಿದನಯ್ಯಾ ಬಸವಣ್ಣನು" ಎಂದು ಗುರು ಚೆನ್ನಬಸವಣ್ಣನವರು ಹೇಳುವ ಹಾಗೆ ಹುಟ್ಟುವ ಮಗು ಮಂತ್ರ ಪಿಂಡವಾಗಿ ಹುಟ್ಟಬೇಕು. ಭಕ್ತನಾಗಿ ಹುಟ್ಟಬೇಕು. ಇಲ್ಲಿ ಗರ್ಭಿಣಿ ತಾಯಿಯ ಗರ್ಭಕ್ಕೆ 7 ತಿಂಗಳುಗಳಾದಾಗ, ಮಗುವಿನ ಪರವಾಗಿ ಗುರುವಿನಿಂದ ಇಷ್ಟಲಿಂಗವನ್ನು ಪಡೆದುಕೊಳ್ಳುತ್ತಾಳೆ. ಸದ್ಗುರುವು ತಾಯಿಯ ಮುಖಾಂತರವಾಗಿ ಮಗುವಿಗೆ ಅನುಗ್ರಹಿಸುತ್ತಾರೆ. ಮಂತ್ರವನ್ನು ಕೂಡ ಮಗುವಿನ ಪರವಾಗಿ ತಾಯಿಗೇ ಬೋಧಿಸಲಾಗುತ್ತದೆ. ಮಗುವಿನ ಜನ್ಮವಾಗುವವರೆಗೆ ತಾಯಿ ತನ್ನ ಹಾಗೂ ಮಗುವಿನ ಇಷ್ಟಲಿಂಗಗಳನ್ನು ಪೂಜಿಸಿ ಕರುಣೋದಕ ಕರುಣಪ್ರಸಾದವನ್ನು ಪಡೆದುಕೊಳ್ಳಬೇಕು. ಮಗು ಹುಟ್ಟಿದ ತಕ್ಷಣ ಸ್ನಾನ ಮಾಡಿಸಿದ ನಂತರ ಮಗುವಿನ ಇಷ್ಟಲಿಂಗ ಪೂಜೆಯನ್ನು ಸಂಕ್ಷಿಪ್ತವಾಗಿ ಮಾಡಿ ಕರುಣೋದಕವನ್ನು ಮಗುವಿನ ಬಾಯಿಗೆ ಹಾಕಿದ ನಂತರವೇ ಹಾಲನ್ನು ಊಡಿಸುವ ಪದ್ಧತಿ ಇಂದಿಗೂ ಹಲವಾರು ಭಾಗಗಳಲ್ಲಿ ಪ್ರಚಲಿತದಲ್ಲಿದೆ. 7ನೇ ತಿಂಗಳಿಗೆ ಗರ್ಭಲಿಂಗಧಾರಣೆ ಆದ ನಂತರ, ನಮ್ಮ ಹುಟ್ಟುವ ಮಗುವನ್ನು ಲಿಂಗಾಯತ ಧರ್ಮ ಮಾರ್ಗದಲ್ಲಿ ನಡೆಸುತ್ತೇವೆ ಎಂದು ತಾಯಿ ತಂದೆಯರಿಂದ ಪ್ರಮಾಣ ಮಾಡಿಸಲಾಗುತ್ತದೆ. ಶೂನ್ಯ ಸಂಪಾದನೆಯಲ್ಲಿ ಒಂದು ಪ್ರಸಂಗವಿದೆ; ಚನ್ನಬಸವಣ್ಣನವರು ಬೆಳೆದು 10-12 ವರ್ಷದವರಾಗಿದ್ದಾರೆ, ಗುರು ಬಸವಣ್ಣನವರಿಗೆ ಬಂದು, "ನನಗೆ ದೀಕ್ಷೆ ಕೊಡಿ" ಎಂದು ಕೇಳುತ್ತಾರೆ. ಆಗ ಗುರುಬಸವಣ್ಣನವರು ಸುಮ್ಮನೆ ಪರೀಕ್ಷಿಸಲೋಸುಗ :

ಹೋ ಹೋ ನಾನೊಬ್ಬರಿಗೆಯೂ ಉಪದೇಶವ ಮಾಡಲಮ್ಮೆನು,
ಮುನ್ನಲಾದವರು ತಮ್ಮಿಂದ ತಾವಾದರು;
ಅವರೆಲ್ಲರೂ ನಿಜಲಿಂಗೈಕ್ಯರು ನಾನೇನು ಮಾಡಿತಿಲ್ಲ,
ತತ್ವವ ಹಿಡಿದವರಿಗೆ ತೊತ್ತಾಗಿ ನಡೆವೆನು,
ಅಮರಗಣಂಗಳ ಸಾಕ್ಷಿಯಾಗಿ
ಕೂಡಲಸಂಗಮದೇವರ ಮುಂದೆ
ಭಾಷೆ ಪ್ರಸಾದವನಿಕ್ಕಲಾರೆನಯ್ಯಾ ಚೆನ್ನಬಸವಣ್ಣ

ಜ್ಞಾನಿಗಳಾದವರೆಲ್ಲರೂ ತಮ್ಮಿಂದ ತಾವಾದರು. ನಾನಾರಿಗೆಯೂ ಉಪದೇಶ, ದೀಕ್ಷೆ ಮಾಡಿಲ್ಲ ಎಂದು ಗುರುಬಸವಣ್ಣನವರು ಹೇಳುತ್ತಾರೆ. ಅದಕ್ಕೆ ಚನ್ನಬಸವಣ್ಣನವರು ಹೇಳಿದ ವಚನ ನೋಡಿ:

ಅಂಜದಿರಿ ಅಂಜದಿರಿ
ನಿಮ್ಮ ಪ್ರಮಥರ ಮುಂದೆ ನಿಮಗೆ ಅಹುದಹುದೆನಲು
ನಿಮಗನಾದಿಯ ಶಿಶುವಾನಯ್ಯ
ಅದೆಂತೆಂದೊಡೆ:
ಅಂಜನೆಗೆ ಜಲಗರ ಬೆಳೆಯಿತ್ತೆಂದು, ಅಂಜಿ ಹೇಮರಸವ ಕುಡಿದಲ್ಲಿ
ಒಳಗಿರ್ದ ಕಪಿ ಶೃಂಗಾರವಾಗನೆ?
ಕೆಡುವುದೆ ಶಿವಪಿಂಡವು? ಮರೆವುದೆ ಶಿವ ಜ್ಞಾನವ?
ಹಿಂದೆ ಏಳುನೂರು ವರುಷ ಮಂಡೋದರಿಯ ಬಸುರಲ್ಲಿದ್ದು
ಉದಯಂಗಯ್ಯನೆ ಇಂದ್ರಜಿತು?
ಕೆಡುವುದೇ ಗುರುವಿನುಪದೇಶ, ಪಿಂಡವು ಮರೆವುದೆ ಶಿವ ಜ್ಞಾನವ?
ನೀವು ನಾನು ಹೊಟ್ಟೆಯಲ್ಲಿರ್ದಂದು
ವಿಭೂತಿಯ ಪಟ್ಟವ ಕಟ್ಟಿದಂದೆ ಅನುಗ್ರಹವಾಯಿತ್ತು
ಕೂಡಲಚೆನ್ನ ಸಂಗಮದೇವಯ್ಯಾ
ನಿಮ್ಮ ತೊತ್ತಿನ ತೊತ್ತು ನಾನು ಚೆನ್ನಬಸವಣ್ಣನು. (ಚೆ.ವ.ಸಂ.-12)

ಈ ರೀತಿ ಚೆನ್ನಬಸವಣ್ಣನವರು ತಾವು ಹೊಟ್ಟೆಯಲ್ಲಿದ್ದಾಗಲೇ ತಮಗೆ ಗುರುಬಸವಣ್ಣನವರ ಅನುಗ್ರಹವಾದುದನ್ನು ಹೇಳುತ್ತಿದ್ದಾರೆ. ಅಕ್ಕನಾಗಮ್ಮ ತಾಯಿ ಗರ್ಭವತಿಯಿರುವಾಗಲೇ 7ನೇ ತಿಂಗಳಿಗೆ ಗುರುಬಸವಣ್ಣನವರು ಗರ್ಭಲಿಂಗಧಾರಣೆ ಸಂಸ್ಕಾರವನ್ನು ನೀಡಿದ್ದಾರೆ. ಆದ್ದರಿಂದಲೇ ಚೆನ್ನಬಸವಣ್ಣನವರು ಹುಟ್ಟುತ್ತಲೇ ಅಪಾರ ಜ್ಞಾನಿಯಾಗಿ, ಅನುಭವ ಮಂಟಪದ ಅನುಭಾವಿ ಶರಣ ಸಂಕುಲದಿಂದ ಚಿನ್ಮಯ ಜ್ಞಾನಿ ಎಂದು ಕರೆಯಿಸಿಕೊಂಡಿರುವುದನ್ನು ಕಾಣುತ್ತೇವೆ.

ಈಗ ಇಂಥ ಶ್ರೇಷ್ಠ ಪದ್ಧತಿ ನಶಿಸಿಹೋಗುತ್ತಿತ್ತು. ಮತ್ತೊಮ್ಮೆ ಅದನ್ನು ಬೆಳಕಿಗೆ ತಂದ ಕೀರ್ತಿ ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಮಾತಾಜಿಯವರಿಗೆ ಸಲ್ಲುತ್ತದೆ.

"ತಾಯಿ ನೊಂದರೆ ಒಡಲೊಳಗಣ ಶಿಶುವ ನೋವಂತೆ" ಎನ್ನುವ ಒಂದು ಮಾತು ಅಕ್ಕಮಹಾದೇವಿ ತಾಯಿಯವರ ವಚನದಲ್ಲಿದೆ. ತಾಯಿಯ ನೋವು-ನಲಿವುಗಳು, ಸುಖ-ದುಃಖಗಳು ಮಗುವಿನ ಮೇಲೆಯೂ ಪರಿಣಾಮ ಬೀರುತ್ತವೆ ಎನ್ನುವುದು ಇಂದು ವೈ ಜ್ಞಾನಿಕವಾಗಿಯೂ ಸತ್ಯವಾದ ಮಾತಾಗಿದೆ. ಅಂದಾಗ ಗರ್ಭಲಿಂಗಧಾರಣೆ ಸಂಸ್ಕಾರ ಪಡೆದು, ದಿನ ನಿತ್ಯ ಅರ್ಚನೆ, ಮಾಡುವಂಥ ತಾಯಿಯಿಂದ ನೈಸರ್ಗಿಕವಾಗಿಯೇ ಮಗು, ಧಾರ್ಮಿಕ ಆಧ್ಯಾತ್ಮಿಕ ಜೀವಿಯಾಗುತ್ತದೆ ಮತ್ತು ಜ್ಞಾನಿಯೂ ಆಗುತ್ತದೆ. ಮಗು ಬೆಳೆಯುತ್ತಾ ಹೋದಂತೆ ಹಟ, ಕಿರಿ-ಕಿರಿ ಎನ್ನುವಂಥದು ಮಾಡುವುದೇ ಇಲ್ಲ, ಇಂಥ ಮಕ್ಕಳು ಸ್ವಭಾವತಃ ಜ್ಞಾನಿಗಳಾಗುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ವಿಶೇಷವಾದ ಗುಣಗಳನ್ನು ತೋರಿಸುತ್ತಾರೆ. ಗರ್ಭಲಿಂಗ ಧಾರಣೆಯ ನಂತರ ಹೆರಿಗೆಯೂ ಕೂಡ ಯಾವುದೇ ಹೆಚ್ಚು ನೋವುಗಳಿಲ್ಲದೆ, ಕಷ್ಟವಿಲ್ಲದೆ ಆಗುತ್ತದೆ ಎನ್ನುವುದು ಅನೇಕರ ಅನುಭವದ ಮಾತೂ ಆಗಿದೆ. ಏಕೆಂದರೆ ಪರಮಾತ್ಮನ ಒಲುಮೆ ಗುರುಬಸವ ತಂದೆಯ ಅನುಗ್ರಹ ಅನೇಕ ಪವಾಡಗಳನ್ನು ಮಾಡಬಲ್ಲುದು. ಅದಕ್ಕಾಗಿಯೇ ಹರಿಹರ ಮಹಾಕವಿ "ಬಸವನ ರಕ್ಷೆಯೇ ರಕ್ಷೆ" ಎಂದು ನುಡಿದಿದ್ದಾರೆ.

ಅದಕ್ಕಾಗಿ ಇಂಥ ಉದಾತ್ತವಾದ ಗರ್ಭಲಿಂಗಧಾರಣೆ ಸಂಸ್ಕಾರ ಮಾಡಿಸಿಕೊಳ್ಳಲಿಕ್ಕೆ ಇಂದಿನ ಆಧುನಿಕ ಸಹೋದರಿಯರು ಮುಂದೆ ಬರಬೇಕು. ತಾಯಂದಿರು, ಹಿರಿಯರು ಇದಕ್ಕೆ ಪ್ರೋತ್ಸಾಹ ನೀಡಬೇಕು. ತನ್ಮೂಲಕವಾಗಿ ಧರ್ಮಾಚರಣೆಯನ್ನು ಮಾಡಬೇಕು. ಇದಕ್ಕಾಗಿ ಹೆಚ್ಚಿನ ಜನ ಶರಣೆಯರು ಕ್ರಿಯಾ ಮೂರ್ತಿಗಳಾಗಿ ಇಂಥ ಸಂಸ್ಕಾರವನ್ನು ನೀಡಬೇಕು. ಇದರಿಂದ ನಮ್ಮ ಧರ್ಮದ ಒಂದು ಶ್ರೇಷ್ಠವಾದ ಸಂಸ್ಕಾರವನ್ನು ಉಳಿಸಿದಂತಾಗುತ್ತದೆ ಬೆಳೆಸಿದಂತಾಗುತ್ತದೆ. ಒಂದು ಅಮೂಲ್ಯವಾದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಯುವ ಜನಾಂಗವಾದ ನಮ್ಮ ಮೇಲೆ ಇರುವುದರಿಂದ ಧರ್ಮದ ಎಲ್ಲಾ ಆಚರಣೆಗಳನ್ನು ಮಾಡುತ್ತ ಎಲ್ಲಾ ಧರ್ಮಸಂಸ್ಕಾರಗಳನ್ನು ಪಡೆಯುತ್ತ, ಮಕ್ಕಳಿಗೂ ಸಂಸ್ಕಾರ ನೀಡುತ್ತಾ ಧರ್ಮಮಾರ್ಗದಲ್ಲಿ ನಡೆಯುತ್ತ ಗುರುಬಸವ ತಂದೆಯವರ ಕರುಣೆಗೆ ಪಾತ್ರರಾಗೋಣ. ಅವರ ಮೆಚ್ಚುಗೆಯ ಮಕ್ಕಳಾಗೋಣ.

ಪರಿವಿಡಿ (index)
*
Previousಇಷ್ಟಲಿಂಗ ಕಂಥೆ/ಕಂತೆಯ ಆಕಾರಅಗ್ನಿ (ಕಿಚ್ಚು), ಜಲ, ನೆಲ, ಕಲ್ಲು ದೇವರಲ್ಲNext
*