ಗಣಾಚಾರ

*

ಜೋಳವಾಳಿಯಾನಲ್ಲ, ವೇಳೆ ವಾಳಿಯವ ನಾನಯ್ಯ
ಹಾಳುಗೆಟ್ಟೋಡುವ ಆಳು ನಾನಲ್ಲಯ್ಯಾ ;
ಕೇಳು ಕೂಡಲ ಸಂಗಮದೇವಾ, ಮರಣವೇ ಮಹಾನವಮಿ.
--ಬಸವಣ್ಣನವರು

ಜೋಳಕ್ಕಾಗಿ ಕೂಲಿಯಾಳಾದವ ನಾನಲ್ಲ ; ಸಮಯಕ್ಕೆ ಒದಗಲೆಂದು ಆಳಾದ ನಿಷ್ಠಾವಂತ ನಾನು. ಪ್ರಸಂಗ ಬಂದಾಗ ಎದೆಗುಂದಿ ಓಡುವವ ನಾನಲ್ಲ. ಪರಮಾತ್ಮಾ, ಮರಣವು ಒಂದು ಮಹಾ ಉತ್ಸವ ಎಂದು ಉತ್ಸಾಹದಿಂದ ಅದನ್ನು ಇದಿರ್ಗೊಳ್ಳುವವನು ನಾನು.

ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ
ನಡೆಯೊಳಗೆ ನುಡಿಯ ಪೂರೈಸುವೆ
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ
ಒಂದು ಜವೆ ಕೊರತೆಯಾದರೆ
ಎನ್ನನದ್ದಿ ನಿನೆದ್ದು ಹೋಗು, ಕೂಡಲ ಸಂಗಮದೇವಾ.
--ಬಸವಣ್ಣನವರು

ನಿಷ್ಠೆ, ಶರಣಾಗತಿ, ಪ್ರಾಮಾಣಿಕತೆ ಮುಂತಾದ ಮಾತುಗಳನ್ನು ಆಡುತ್ತೇನೆ ಆಡಿದಂತೆ ನಡೆಯುತ್ತೇನೆ. ನನ್ನ ನಿಷ್ಠೆಯನ್ನು ಪರೀಕ್ಷಿಸಲು ತೂಗುವ ತಕ್ಕಡಿಯ ಹಿಡಿ ನಿನ್ನ ಕೈಲಿದೆ. ನಡೆ-ನುಡಿ ಎಂಬ ಎರಡು ಪರಡಿಗಳು ಸಮವಾಗಿದರೆ ಒಂದು ಜವೆಯಷ್ಟು ಕೊರತೆಯಾದರು ಪರಮಾತ್ಮಾ, ನನ್ನನ್ನು ನಿರ್ದಾಕ್ಷಿಣ್ಯವಾಗಿ ಕುಕ್ಕಿ(ನನ್ನನ್ನು ಶಿಕ್ಷಿಸಿ) ನೀನು ಹೊರಟುಹೋಗು.

ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ. ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದಾದರೆ
ಗೆಲುವೆನೆಂಬ ಭಾಷೆ ಭಕ್ತನದು !
ಸತ್ಯವೆಂಬ ಕೂರಲಗನೆ ತಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ.
--ಬಸವಣ್ಣನವರು

ಜಂಬೂದ್ವೀಪ ಸಹಿತವಾಗಿ ನವಖಂಡದ ಪೃಥ್ವಿಯ ಜನರಲ್ಲ ಗಮನವಿಟ್ಟು ಕೇಳಿರಿ. ಇಬ್ಬರ ಮಧ್ಯದ ಹೋರಾಟವನ್ನು ಭಕ್ತನನ್ನು ಕೊಲ್ಲುವೆ, ಹುಮ್ಮೆಟ್ಟಿಸುವೆ ಎಂಬ ಛಲ ಭಕ್ತನದು. ಅಂತಿಮವಾಗಿ ಗೆಲ್ಲುವರಾರು ಗೊತ್ತೆ? ಸದ್ಭಕ್ತರೆ! ಏಕೆಂದರೆ ಪರಮಾತ್ಮನು ನಿರಾಯುಧನು! ಭಕ್ತನ ಕೈಯಲ್ಲೊ ಸತ್ಯ ಎಂಬ ಕೂರಲಗು ಇದೆ.

ಅಡಿಗಡಿಗೆ ದೇವರಾಣೆ, ಅಡಿಗಡಿಗೆ ಭಕ್ತರಾಣೆ
ಅಡಿಗಡಿಗೆ ಗುರುವಿನಾಣೆ, ಎಂಬ ವಚನವೆ ಹೊಲ್ಲ!
ಅವರು ಶಿವಫಥಕ್ಕೆ ಸಲ್ಲರು
ಆದಿಯಿಂದ ಬಂದ ವಚನವೆಂದು ಶರಣರ ಕೂಡೆ ಸರಸವಾಡಿದರೆ
ನಗುತಲಿರಿದುಕೊಂಡರೆ ಅಲಗು ನೆಡದಿಹುದೆ ಕೂಡಲ ಸಂಗಮದೇವಾ.
--ಬಸವಣ್ಣನವರು

ಕೆಲವರು ಮೋಜಿಗಾಗಿ ಆಣೆ ಇಡುವರು. ದೇವರಾಣೆಯಾಗೂ ನಾನು ಎತ್ತಿಟ್ಟಿಲ್ಲ, ಭಕ್ತರಾಣೆ, ಗುರುವಿನಾಣೆಯಾಗೂ ನನಗೆ ಗೊತ್ತಿಲ್ಲ ಎಂದು ಶರಣರೊಡನೆ, ಹಿರಿಯರೊಡನೆ ಹುಡುಗಾಟ ಮಾಡುವರು. ಇಂಥವರು ಶಿವಪಥಕ್ಕೆ ಯೋಗ್ಯರಲ್ಲ. ನಗುನಗುತ್ತ ಇರಿದುಕೊಂಡರೂ ಹೇಗೆ ಕತ್ತಿಯು ನೆಡುವುದೋ ಹಾಗೆ ನಗುನಗುತ್ತಾ ದೇವರಾಣೆ ಇಟ್ಟು ಹೇಳಿದರೂ ಪಾಪ ಬರುವುದು.

ಪರಿವಿಡಿ (index)
*
Previousಭೃತ್ಯಾಚಾರಕಾಯಕ ಮತ್ತು ದಾಸೋಹNext
*