ಉಪಾಸನೆ ವಿವಿಧ ಹಂತಗಳಲ್ಲಿ ಬೆಳೆದು ಬಂದ ಬಗೆ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಉಪಾಸನೆ ವಿವಿಧ ಹಂತಗಳಲ್ಲಿ ಬೆಳೆದು ಬಂದ ಬಗೆ.

ಉಪಾಸನೆ, ದೇವರ ಕಲ್ಪನೆ ಮುಂತಾದುವೆಲ್ಲ ಮಾನವ ಜನಾಂಗದ ಇತಿಹಾಸದಲ್ಲಿ ಮೂರು ಹಂತಗಳಲ್ಲಿ ಬೆಳೆದು ಬಂದಿವೆ ಎಂಬುದಾಗಿ ಬಹಳಷ್ಟು ಧಾರ್ಮಿಕ ತತ್ವಜ್ಞಾನಿಗಳ ಅಭಿಪ್ರಾಯ. ಹಿಂದೂ ಸಮಾಜದಲ್ಲಿ ಇಂದಿಗೂ ಆ ಮೂರೂ ಹಂತಗಳು ಇರುವುದೂ ಸುಸ್ಪಷ್ಟ.

ಅಧಿಭೌತಿಕ : ನಿಸರ್ಗದ ಸ್ಕೂಲವಸ್ತುಗಳಾದ ಸೂರ್ಯ, ಚಂದ್ರ, ಆಗ್ನಿ, ಪರ್ವತ, ನದಿ, ವೃಕ್ಷ ಮುಂತಾದ ದೃಷ್ಟ ವಸ್ತುಗಳಲ್ಲಿ ದೈವೀ ಶಕ್ತಿಯನ್ನು ಆರೋಪಿಸಿ ಅವನ್ನು ಪೂಜಿಸುವುದು ಅಧಿಭೌತಿಕ ಕಲ್ಪನೆ.

ಆಧಿದೈವಿಕ : ನಿಸರ್ಗದ ಹಿಂದಿರಬಹುದೆಂಬ ವಿವಿಧ ಆಕಾರಗಳಲ್ಲಿ ದೈವೀಶಕ್ತಿಯನ್ನು ಕಲ್ಪಿಸುವುದು ಅಧಿದೈವಿಕ. ಮೋಡದ ಹಿಂದೆ ಮೇಘರಾಜನನ್ನು, ಗಂಗೆಯ ಹಿಂದೆ ಗಂಗಾದೇವಿಯನ್ನು, ಗಾಳಿಯ ಹಿಂದೆ ವಾಯುರಾಜನನ್ನು, ವಿವಿಧ ಗೋಲಗಳ ಹಿಂದೆ ಗ್ರಹಗಳನ್ನು ಕಲ್ಪಿಸಿ, ಸಾಕಾರಗೊಳಿಸುವುದು ಅಧಿದೈವಿಕ ಕಲ್ಪನೆ.

ಆಧ್ಯಾತ್ಮಿಕ : ಬ್ರಹ್ಮಾಂಡದಲ್ಲೆಲ್ಲ ಮಹಾನ್. ಚೈತನ್ಯವೊಂದು ತುಂಬಿತುಳುಕುತ್ತಿದ್ದು ಅದು ತನ್ನಲ್ಲಿಯೂ ಇದೆ ಎಂದು ಅರಿತು ಪಿಂಡಬ್ರಹ್ಮಾಂಡಗಳೆರಡರಲ್ಲಿಯೂ ಹಾಸುಹೊಕ್ಕಾಗಿರುವ ಆ ಚೈತನ್ಯವನ್ನು ಗುರುತಿಸಿ, ಆರಾಧಿಸುವುದು ಅಧ್ಯಾತ್ಮಿಕ ಕಲ್ಪನೆ. ಲಿಂಗಪೂಜೆಯು ಸಹ ಈ ಮೂರು ಹಂತಗಳಲ್ಲಿ ಬೆಳೆದು ಬಂದುದನ್ನು ಗುರುತಿಸಬಹುದು.)

ಆಧಿಭೌತಿಕ : ಮೊಟ್ಟಮೊದಲು ಆಕಾಶದ ಪ್ರತೀಕವಾಗಿ ಲಿಂಗವನ್ನು ಆದಿಮಾನವನು ಕಲ್ಪಿಸಿಕೊಂಡಿರಲು ಸಾಕು. ಆಕಾಶದಿಂದ ಬರುವ ಬೆಳಕುಮಳೆಗಳನ್ನು ನೋಡಿ ಆದಿಮಾನವನು ತನಗೆ ಅತಿ ಅವಶ್ಯಕವಾದ ಬೆಳಕು, ಮಳೆಯನ್ನು ಕೊಡುವ ಈ ಆಕಾಶದಲ್ಲಿ ಯಾವುದೋ ಒಂದು ಅದ್ಭುತ ಶಕ್ತಿ ಇರಬಹುದೆಂದು ಊಹಿಸಿರಬೇಕು. ಮತ್ತು ಅದು ತನ್ನ ಮೇಲೆ ಕೋಪ ಮಾಡಿಕೊಳ್ಳಬಾರದೆಂಬ ಭಯಭಕ್ತಿಯ ಕಲ್ಪನೆಯಿಂದ ಪ್ರಾಯಶಃ ಆಕಾಶಕ್ಕೆ ದೈವತ್ವವನ್ನು ಆರೋಪಿಸಿ, ಅದರ ಹಾಗೆ ಗೋಲಾಕಾರವಾಗಿ ಸಮುದ್ರ ಇಲ್ಲವೆ ಹೊಳೆ ದಂಡೆಗಳ ಮೇಲಿರುವ ಉಸುಕಿನಿಂದ ಲಿಂಗವನ್ನು ಮಾಡಿ ಪೂಜೆ ಮಾಡಿರಬೇಕು. ಇಂದಿಗೂ ಉಸುಕಿನ ಲಿಂಗವನ್ನು ಮಾಡಿ ಪೂಜಿಸುವ ವಾಡಿಕೆ ಜನಗಳಲ್ಲಿದೆ. ಮುಂದೆ ಮಣ್ಣಿನ ಲಿಂಗ ಬಳಕೆಯಲ್ಲಿ ಬಂದಂತೆ ಕಾಣಿಸುತ್ತದೆ. ಮಳಲು, ಮಣ್ಣಿನಲಿಂಗ ಪೂಜೆಗಳು ಹಲವು ಕಾಲ ನಡೆದ ನಂತರ ಅವು ಬಹಳ ದಿನ ಪೂಜೆಗೆ ಬರಲಾರದೆ ನಾಶವಾಗುತ್ತವೆಂದು ಮನಗಂಡು ಶಿಲೆಯ ಲಿಂಗವನ್ನು ಮಾಡಿ ಮಾನವನು ಪೂಜಿಸುತ್ತಾ ಬಂದಿದ್ದಾನೆ. ಆಕಾಶದಲ್ಲಿ ನೀರು ಇರುವುದರಿಂದ, ಆಕಾಶವು ನೀರು ಕೊಡುವುದರಿಂದ ಆಕಾಶದ ಪ್ರತೀಕವಾದ ಲಿಂಗಕ್ಕೂ ನೀರನ್ನೆರೆಯಬೇಕೆಂದು ಅಭಿಷೇಕ ಮಾಡುವ ಪದ್ಧತಿ ಬಳಕೆಯಲ್ಲಿ ಬಂದ ನಂತರ, ಮೊದಲು ಕೇವಲ ಗೋಲವಾಗಿರುವ ಲಿಂಗಗಳಿಗೆ ಅಭಿಷೇಕದ ನೀರು ಹರಿದು ಹೋಗುವುದರ ಸಲುವಾಗಿ ಗೋಮುಖ (ಜಲಹರಿ) ಮಾಡಿರಬೇಕು. -

ರಾವಣನ ತಾಯಿ ಉಸುಕಿನಲ್ಲಿ ಲಿಂಗವನ್ನು ಮಾಡಿ ಪೂಜಿಸುತ್ತಿದ್ದುದನ್ನು, ಶಿಲಾಲಿಂಗವನ್ನು ತಂದುಕೊಡಲು ಮಗನಿಗೆ ದುಂಬಾಲು ಬಿದ್ದುದನ್ನು ಪುರಾಣದ ಕಥೆಗಳಿಂದ ನಾವು ತಿಳಿಯಬಹುದಾಗಿದೆ.

ಅಧಿದೈವಿಕ :

ಪಂಚಭೂತಗಳಲ್ಲೊಂದಾದ ಆಕಾಶಕ್ಕೆ ದೈವತ್ವವನ್ನು ಆರೋಪಿಸಿ ಅದರ ಆಕಾರದಲ್ಲಿ ಪೂಜಿಸುವ ಅಧಿಭೌತಿಕ ಕಲ್ಪನೆಯ ನಂತರ, ಮಾನವನು ಸೃಷ್ಟಿಗೆ ಮೂರ್ತರೂಪ ಕೊಡುವ ಅಧಿದೈವಿಕ ಕಲ್ಪನೆಗೆ ಕೈಹಾಕಿದ. ದೇವರನ್ನು ಮೂರ್ತಿಕರಿಸುವ ಕಲ್ಪನೆಯೂ ಇಲ್ಲಿ ಪ್ರಧಾನ. ಇದಕ್ಕೆ (The Age of Mythology) ಪುರಾಣಯುಗ ಎನ್ನುವರು. ದೇವರ ಮೂರ್ತಿ ಕರಣ, (Personification of God) ಮಹಾತ್ಮರ ದೈವೀಕರಣ, (Deification of Saints) ಈ ಪುರಾಣಯುಗದ ಪ್ರಧಾನ ಅಂಶಗಳು. ಐತಿಹಾಸಿಕವಾಗಿ ಆಗಿ ಹೋದ ಮಹಾತ್ಮರನ್ನು ದೇವತೆಯನ್ನಾಗಿ ಮಾಡುವುದು ಒಂದು ಚಟುವಟಿಕೆಯಾದರೆ ನವಗ್ರಹಗಳನ್ನು ನೆಲ, ನೀರು, ಗಾಳಿ, ಬೆಳಕುಗಳನ್ನು ವಿವಿಧ ಆಕಾರಗಳಿಂದ ಮೂರ್ತಿಕರಿಸುವುದು ಮತ್ತೊಂದು ಚಟುವಟಿಕೆ.

"ದೇವರು ಬಹುಶಃ ನನ್ನಂತೆಯೇ ಪುರುಷನಾಗಿರಬೇಕು. ಸರಿ, ಪುರುಷಾಕಾರ ಸಿದ್ಧವಾಯಿತು. ನಾವು ವಾಸಿಸುವ ಪೃಥ್ವಿಗೆ ಅವನು ಒಡೆಯನು. ಪೃಥ್ವಿಯು ತಾಯಿ ಹಾಲನ್ನೀಯುವಂತೆ ಬೆಳೆಯನ್ನಿತ್ತು ಪೋಷಿಸುವ ತಾಯಿ. ಪೃಥ್ವಿಯನ್ನು ಸ್ತ್ರೀರೂಪದಲ್ಲಿ ಸಾಕಾರಗೊಳಿಸಿ ಪುರುಷಾಕಾರದ ದೇವತೆಯ ಪಕ್ಕ ಪಾರ್ವತಿಯನ್ನು ಮಾಡಿ ಕೂಡಿಸೋಣ. ನಮ್ಮ ಬದುಕಿಗೆ ಅವಶ್ಯಕವಾದ ನೀರು; ಅದೂ ತಾಯಿಯಂತೆಯೆ ! ಸರಿ ಅದನ್ನು ಗಂಗಾದೇವಿಯನ್ನಾಗಿ ಮಾಡಿ ಆ ದೇವತೆಯ ತಲೆಯ ಮೇಲೆ ಕುಳ್ಳಿರಿಸೋಣ. ನಮ್ಮ ಜೀವನಾವಶ್ಯಕತೆ ಅಗ್ನಿ; ನಮ್ಮ ಬದುಕು ನಿಂತಿರುವುದೇ ಸೂರ್ಯ, ಚಂದ್ರ, ಅಗ್ನಿಯರ ಮೇಲೆ; ಅವನ್ನು ಆ ದೇವತೆಯ ಮೂರು ಕಣ್ಣುಗಳನ್ನೇಕೆ ಮಾಡಬಾರದು ? ನಮ್ಮ ಇನ್ನೊಂದು ಅವಶ್ಯಕತೆ ಗಾಳಿ. ಆದರೆ ಗಾಳಿಯನ್ನು ಚಿತ್ರೀಕರಿಸುವುದು ಹೇಗೆ ? ವಾಯುವನ್ನೇ ಆಧಾರ, ಆಹಾರವಾಗಿ ಮಾಡಿಕೊಂಡು ದೀರ್ಘಕಾಲ ಇರಬಲ್ಲ ಹಾವನ್ನಾಗಿ ಮಾಡಿ ನಾಗಾಭರಣನನ್ನಾಗಿ ಮಾಡೋಣ. ದೇವತೆಗೆ ಬಟ್ಟೆಯುಡಿಸುವವರಾರು ? ಅವನಿಗೆ ದಿಕ್ಕುಗಳೇ ಅಂಬರ, ಸರಿ; ಅವನು ದಿಗಂಬರನಾಗಿ ಇರಲಿ. ಆಕಾಶ ತತ್ವ ನೀಲವರ್ಣದಲ್ಲಿದೆ. ಸರಿ, ಅದೇ ವರ್ಣವನ್ನು ದೇವತೆಗೆ ಬಳಿದರಾಯಿತು.

ಇಲ್ಲಿಗೆ ಗಂಗಾಧರ, ಗೌರೀವರ, ತ್ರಿನೇತ್ರ, ನಾಗಾಭರಣ, ದಿಗಂಬರ ನೀಲವರ್ಣದ ದೇವತೆ ರೂಪುಗೊಂಡಿತು. ನಿರಾಕಾರ : ದೇವರನ್ನು ಮೂರ್ತಿಕರಣಗೊಳಿಸುವ ವಿಧಾನದ ಫಲ ಹೀಗಾದರೆ, ಐತಿಹಾಸಿಕ ವ್ಯಕ್ತಿಗಳನ್ನು ದೈವೀಕರಣಗೊಳಿಸಿದ್ದು ಇನ್ನೊಂದು ಪ್ರಸಂಗ. ಪುರಾಣಯುಗದಲ್ಲಿ ಇವೆಲ್ಲ ಚಟುವಟಿಕೆ ನಡೆಯುವಾಗ, "Symbolism" ಕುರುಹುಗೊಳಿಸುವಿಕೆಯೂ ಬಹಳಷ್ಟು ನಡೆಯಿತು. ಶಿವನನ್ನು ಧ್ಯಾನಮಗ್ನ ಯಾಗಿಯ ಆಕಾರವನ್ನು ಹೋಲುವ ಸ್ಥಾವರಲಿಂಗಾಕಾರದಲ್ಲಿ ಮೂರ್ತಿಕರಿಸಿ ಪೂಜಿಸುವುದೂ ಆರಂಭವಾಯಿತು. ಗುಡಿಯಾಳಗಣ ಸ್ಥಾವರಲಿಂಗವು ಎಡಗೈಯನ್ನು ಯಾಗವಟ್ಟಿಗೆಯ ಮೇಲಿಟ್ಟು ಚಾಚಿ ಪದ್ಮಾಸನದಲ್ಲಿ ಧ್ಯಾನಮಗ್ನನಾಗಿ ಕುಳಿತ ಶಿವನ ಸಾಕಾರದಂತೆ ಕಾಣುತ್ತದೆ. ಶಿರಸ್ಸು ಗೋಳಕವಾಗಿ, ಚಾಚಿದ ಕೈ ಜಲಹರಿಯಾಗಿ ಕಾಣಬರುತ್ತವೆ. ಹೀಗೆ ಅಧಿದೈವಿಕ ಪೂಜೆಯಾಗಿ, ಕೈಲಾಸದ ಶಿವನ ಕುರುಹಾಗಿ ಬಳಕೆಗೆ ಬಂದಿತು.

“ಯಜ್ಞ ಮಾಡುವಾಗ ಯಜ್ಞ ಪಶುವನ್ನು ಒಂದು ಕಂಬಕ್ಕೆ ಕಟ್ಟುತ್ತಾರೆ. ಅದಕ್ಕೆ 'ಯೂಪಸ್ತಂಭ' ಎಂಬ ಹೆಸರಿದೆ. ಆ ಕಂಬವು ಪರಬ್ರಹ್ಮವೆಂದು ಪ್ರತೀತಿ ಇತ್ತು. ಪಶು ಯಜ್ಞವು ನಿರಾಕರಿಸಲ್ಪಟ್ಟ ನಂತರ ಆ ಕಂಬವೇ ಲಿಂಗವಾಗಿಯೂ ಜೀವಾತ್ಮನೇ ಪಶುವಾಗಿಯೂ ಪರಿಗಣಿಸಲ್ಪಟ್ಟವು." ಎಂದು ಸ್ವಾಮಿ ವಿವೇಕಾನಂದರು ಸ್ಥಾವರ ಲಿಂಗಕ್ಕೆ ಅರ್ಥವನ್ನು ಕಲ್ಪಿಸಿದ್ದಾರೆ. ಮತ್ತು ಕೆಲವರು ಬೌದ್ಧರ ಚಿಕ್ಕ ಚಿಕ್ಕ ಬೌದ್ಧ ಸ್ತೂಪಗಳೇ ಶಿವಲಿಂಗಗಳಾದುವೆಂದು ಊಹಿಸುವವರೂ ಇದ್ದಾರೆ. ಆದರೆ ಆ ಎರಡೂ ತರ್ಕಗಳು ನಿರಾಧಾರವಾದವುಗಳಾಗಿವೆ. ಏಕೆಂದರೆ ಆರ್ಯರು ಬರುವ ಪೂರ್ವದಲ್ಲೇ, ಬೌದ್ಧ ಧರ್ಮ ಸ್ಥಾಪಿತವಾಗುವ ಮೊದಲೇ ಶಿವಲಿಂಗಗಳ ಪೂಜೆ ಇದ್ದಿತೆಂದು ಹರಪ್ಪಾ ಮೊಹೆಂಜೊದಾರೋ ಸಂಸ್ಕೃತಿಯಿಂದ ಸಿದ್ದವಾಗುತ್ತದೆ. ಅಂದ ಮೇಲೆ ಮೇಲಿನ ಅಭಿಪ್ರಾಯಗಳು ಕೇವಲ ಊಹೆಗಳೇ ವಿನಾ ಸತ್ಯ ಸಂಗತಿಯಾಗಲಾರವು.

ಅಧ್ಯಾತ್ಮಿಕ :

ಲಿಂಗಪೂಜೆಯು ನಿಸರ್ಗದ ಒಂದು ಅಂಗವಾದ ಆಕಾಶದ ಪ್ರತೀಕವಾಗದೆ, ಕೈಲಾಸದ ಶಿವನ ಕುರುಹೂ ಆಗದೆ ನಿರಾಕಾರ ವಿಶ್ವಾತ್ಮನ ಮತ್ತು ನಿರಾಕಾರ ಜೀವಾತ್ಮನ ಕುರುಹಾಗಿ ಆಧ್ಯಾತ್ಮಿಕ ಅರ್ಥವನ್ನು ಪಡೆದುದು ಬಸವಣ್ಣನವರಿಂದಾಗಿ,

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ
ಕೂಡಲ ಸಂಗಮದೇವಯ್ಯಾ, ನೀವು
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ.
- (ಬ.ಷ.ವ. ೭೪೩)

ಇಷ್ಟಲಿಂಗವು ಜಗದಗಲ ಮುಗಿಲಗಲನಾಗಿರುವ ಪರಮಾತ್ಮನ ಕುರುಹ ಸ್ಥಾವರಲಿಂಗದಂತೆ ಕೇವಲ ಭತೃಪ್ತಿಯ ಶ್ರದ್ದಾ ಕೇಂದ್ರವಲ್ಲ; ಅದ ಆತ್ಮದರ್ಶನಕ್ಕಾಗಿ ಇರುವ ಯಾಗದರ್ಪಣ. ಇಂಥ ತಾತ್ವಿಕ ಅರ್ಥವ್ಯಾಪ್ತಿ ಯೌಗಿಕ ಉಪಯುಕ್ತತೆಯನ್ನದು ಪಡೆದುದು ಬಸವಣ್ಣನವರಿಂದ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಇತಿಹಾಸದಲ್ಲಿ ಲಿಂಗದ ಕಲ್ಪನೆಲಿಂಗದ ಸ್ವರೂಪNext
*