ಇಷ್ಟಲಿಂಗದ ಸಾಕಾರ ರೂಪು

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಇಷ್ಟಲಿಂಗದ ಸಾಕಾರ ರೂಪು

ಇಷ್ಟಲಿಂಗದ ಆವಶ್ಯಕತೆಯನ್ನು ಅವಲೋಕಿಸಿದ ನಂತರ, ಈಗ ನಾವು ಆ ಲಿಂಗದ ಅರ್ಥ-ಆಕಾರ-ಲಾವಣ್ಯಗಳನ್ನು ನಿರೀಕ್ಷಿಸುವಾ. ಲಿಂಗವಂತನ ಕರಕಂಜದಲ್ಲಿ ವಿರಾಜಿಸುವ ಲಿಂಗದ ಗೋಲಾಕಾರದ ಗುಟ್ಟು, ಆ ಗೋಲಾಕಾರದಲ್ಲಿ ಗರ್ಭಿಕರಿಸಲ್ಪಟ್ಟ ಪಂಚಸೂತ್ರಲಿಂಗ (ಹುಟ್ಟುಲಿಂಗ)ದ ರಹಸ್ಯ ಮತ್ತು ಕಪ್ಪುವರ್ಣದಿ ಥಳಥಳಿಸಿ ಹೊಳೆಯುವ ಲಿಂಗದ ರೂಪು ಲಾವಣ್ಯಗಳನ್ನು ಅರಿತುಕೊಳ್ಳುವ ಪೂರ್ವದಲ್ಲಿ ಇಷ್ಟಲಿಂಗ ಪದದ ಅರ್ಥವನ್ನು ಗ್ರಹಿಸಿ ಮುಂದೆ ಸಾಗುವಾ.

"ಏನ ಬೇಡಿದಡೀವ ನಮ್ಮ ಕೂಡಲಸಂಗಮದೇವ" ಇಲ್ಲಿ ಕೂಡಲ ಸಂಗಮದೇವನೆಂದರೆ ಪರಶಿವನೆಂದೂ, ಲಿಂಗವೆಂದೂ ತಿಳಿಯಬೇಕು. ಶರಣರು ತಮ್ಮ ವಚನಗಳಿಗೆ ಉಪಯೋಗಿಸಿರುವ ವಚನ ಮುದ್ರಿಕೆಗಳು ತಮ್ಮ ಇಷ್ಟಲಿಂಗಕ್ಕೆ ಕರೆದ ಅಥವಾ ಹೆಸರಿಟ್ಟ ಪ್ರೀತಿಯ ನಾಮಗಳಾಗಿವೆ. "ಕೂಡಲ. ಸಂಗಮದೇವಾ ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯಾ" ಇತ್ಯಾದಿ ನುಡಿಗಳೇ ಸಾಕ್ಷಿ. ಆದ್ದರಿಂದ ಏನ ಬೇಡಿದಡೆ ನೀಡುವಂತಹದು ಇಷ್ಟಲಿಂಗವು. ಇಷ್ಟ ಪಟ್ಟ ದುದನ್ನು ಕೊಡುವಂತಹದೇ ಇಷ್ಟಲಿಂಗವು. ಬಯಸಿದುದನ್ನು ಬರುವಂತೆ ಮಾಡುವುದೇ ಇಷ್ಟಲಿಂಗವು. ಅಲ್ಲದೆ ನಮ್ಮ ಕಷ್ಟ, ಎಲ್ಲ ಕಾರ್ಪಣ್ಯ - ಅನಿಷ್ಟಗಳನ್ನು ಪರಿಹರಿಸಿ ಇಷ್ಟಗಳನ್ನು ದಯಪಾಲಿಸುವ ದೇವರೇ ಇಷ್ಟಲಿಂಗವು. ಆ ಅನಿಷ್ಟಗಳು ಒಳಗಿರಬಹುದು, ಹೊರಗಿರಬಹುದು; ಪಿಂಡದೊಳಗಿರಬಹುದು, ಪ್ರಪಂಚದೊಳಗಿರಬಹುದು, ಮನೆಯಲ್ಲಿರಬಹುದು, ಎಲ್ಲಿದ್ದರೂ ಆ ಎಲ್ಲ ಅನಿಷ್ಟಗಳನ್ನು (Evils), ಅಸಮತೆ ಹಿಂಸೆ - ಅಸತ್ಯ - ಅನ್ಯಾಯ - ಕಾಮ - ಕ್ರೋಧ - ಹೊಡೆದೋಡಿಸಿ, ಇತ್ಯಾದಿ ಅನಿಷ್ಟ ಶತುಗಳನ್ನು ಸಮತೆ - ಶಾಂತಿ - ಸತ್ಯ - ನ್ಯಾಯ - ಪ್ರೇಮದಯೆ - ಕ್ಷಮಾ ಇತ್ಯಾದಿ ಇಷ್ಟಗಳನ್ನು ಕೊಡುವುದೇ ಇಷ್ಟಲಿಂಗವು. ಲಿಂಗವಂತನು ಅಂಥ ಅನಿಷ್ಟಗಳ ಕೂಡ ಹೋರಾಡಿ ಇಷ್ಟವನ್ನು , ಒಳ್ಳಿತನ್ನು ಸ್ಥಾಪಿಸುವುದಕ್ಕಾಗಿಯೇ ಇಷ್ಟಲಿಂಗ ಪೂಜೆಯನ್ನು ಮಾಡಬೇಕೆನ್ನುವುದು ಶರಣ ಧರ್ಮ. ಹಾಗೆ ಮಾಡುವವರೇ ಶರಣರು. ಇವರೇ ವಿಶ್ವ ಕುಟುಂಬಿಗಳು. ಇಂಥವರಲ್ಲಿ, ಇಂಥ ವಿಶಾಲ ತತ್ವವನ್ನು - ಆ ತತ್ವವನ್ನು ಅನುಷ್ಠಾನ ಗೈಯುವ ಶಕ್ತಿಯನ್ನು ಕೊಡುವಂಥ ಇಷ್ಟಲಿಂಗವು ಅರ್ಚನಾರ್ಹವಾದ ಸಾಕಾರವು. 'ಇಷ್ಟಿ' ಎಂದರೆ ಉಪಾಸನೆ ಪೂಜೆ; ಇಷ್ಟಲಿಂಗವೆಂದರೆ ಉಪಾಸನೆಗೆ-ಪೂಜೆಗೆ ಯಾಗ್ಯವಾದ ಲಿಂಗವು. ಇದು 'ಇಷ್ಟಲಿಂಗ' ಶಬ್ದದ ಅರ್ಥವಾಗಿದೆ.

ನಿರಾಕಾರನೂ, ಅವ್ಯಕ್ತನೂ ಆದ ಪರಶಿವನು ವ್ಯಕ್ತನಾಗಿ ಪ್ರಕಟವಾಗುವುದು ಈ ವಿಶಾಲವಾದ ವಿಶ್ವದಲ್ಲಿಯಷ್ಟೆ. ಅಂದರೆ ದೇವನ ಸಾಕಾರ ಶರೀರವೇ ಈ ವಿಶ್ವವು: ದೇವನ ದೇಹವೇ ಈ ಬ್ರಹ್ಮಾಂಡವು.

ಈ ವಿಶಾಲವಾದ ವಿಶ್ವವು ದೇವನ ಆಕಾರವಾದುದರಿಂದ, ಈ ರೂಪದಲ್ಲಲ್ಲದೇ ಇನ್ನಾವುದೇ ಆಕಾರದಲ್ಲಿಯೂ ದೇವನನ್ನು ಪ್ರತಿನಿಧಿಸುವುದು ಸಾಧ್ಯವಿಲ್ಲದ ಕಾರಣ ಬಸವಣ್ಣನವರು ವಿಶ್ವದಾಕಾರದಲ್ಲಿ ಇಷ್ಟಲಿಂಗವನ್ನು ರೂಪಿಸಿದರು. ಈ ವಿಶ್ವವು ತತ್ತಿಯ ಆಕಾರದಲ್ಲಿದೆಯೆಂದೂ, ಇಷ್ಟಲಿಂಗವು ಇಂಥ ವಿಶ್ವದ ಚಿಹ್ನೆಯೆಂದೂ ಶರಣರಿಂದ ಇಂದಿನವರೆಗೆ ಬಂದ ಕಲ್ಪನೆಯಾಗಿದೆ. ವಿಶ್ವವು ಗೋಲವಾಗಿದೆ; ತತ್ತಿಯ ಆಕಾರದಲ್ಲಿದೆ ಎಂಬುದಕ್ಕೆ ಅನೇಕ ಸಾಕ್ಷಿಗಳನ್ನು ಕೊಡಬಹುದು. ಸಾಮಾನ್ಯ ಮಾನವನು ಈ ಘನವಾದ ವಿಶ್ವವನ್ನು ಅವಲೋಕಿಸಿದರೂ ಇದು ಗೋಲವಾಗಿರಬೇಕೆಂದು ತರ್ಕಿಸುತ್ತಾನೆ. ಯಾವಾಗಲೂ ತಮ್ಮಷ್ಟಕ್ಕೆ ತಾವೇ ತಿರುಗುತ್ತಿರುವ ವಸ್ತುಗಳು ಗೋಲಾಕಾರವಾಗಿರಬೇಕೆಂದು ಊಹಿಸಬಹುದಾಗಿದೆ. ಅಲ್ಲದೆ ಅನೇಕ ವಿಜ್ಞಾನಿಗಳು, ದರ್ಶನಕಾರರು, ಶಿವಾನುಭಾವಿಗಳು, ತತ್ವಜ್ಞಾನಿಗಳು, ಖಗೋಲ ಶಾಸ್ತ್ರಜ್ಞರು ನಿರ್ವಿವಾದವಾಗಿ ಈ ವಿಶ್ವವು ಗೋಲವಾಗಿದೆಯೆಂದು ಅಭಿಪ್ರಾಯ ಪಟ್ಟಿದ್ದಾರೆ. ಮನುಸ್ಮೃತಿಯಲ್ಲಿ ಸಹ ವಿಶ್ವವು ಗೋಲವಾಗಿದೆ ಎಂಬ ಕಲ್ಪನೆ ಮೂಡಿಬಂದಿದೆ. ಗ್ರೀಕ್ ತತ್ವಜ್ಞಾನಿ ಪ್ಲೇಟೋನ ಟೀಮಿಯಸ್ (Timaeus) ಎಂಬ ಗ್ರಂಥದಲ್ಲಿಯೂ ಸಹ ವಿಶ್ವವು ಗೋಲವಾಗಿದೆ ಎಂಬ ವಿಷಯ ಪ್ರತಿಪಾದಿತವಾಗಿದೆ, ಈ ವಿಚಾರಸರಣಿಯನ್ನು ಅನೇಕ ಗ್ರೀಕ್ ತತ್ವಜ್ಞಾನಿಗಳು ಅನುಮೋದಿಸುತ್ತಾರೆ. ಅಲ್ಲದೆ ಆಧುನಿಕ ಖಗೋಲ ಶಾಸ್ತ್ರಜ್ಞರೂ ಸಹ ಈ ವಿಶಾಲವಾದ ವಿಶ್ವವು ಅತಿ ದೊಡ್ಡದಾದ, ಘನವಾದ ಗೋಲವಾಗಿದೆಯೆಂದು ಸರ್ವ ಸಮ್ಮತ ಅಭಿಪ್ರಾಯದವರಾಗಿದ್ದಾರೆ. ಶ್ರೀಮತಿ ಎಚ್. ಪಿ. ಭಾವಟಸ್ಕಿಯವರು ಹೀಗೆ ಹೇಳುತ್ತಾರೆ: "ತತ್ತಿಯ ಉಪಮೆಯು ಯಾಗಶಾಸ್ತ್ರವು ಕಲಿಸುವ ಸಂಗತಿಯನ್ನು ವಿವರಗೊಳಿಸುತ್ತದೆ. ಪರಮಾಣುವಿನಿಂದ ವಿಶ್ವದವರೆಗೆ, ಮಾನವನಿಂದ ಮಹಾದೇವನವರೆಗೆ ಇಷ್ಟಲಿಂಗದ ಸಾಕಾರ ರೂಪು ತೋರಿದ ವಸ್ತುವಿನ ಮೂಲ ರೂಪವು ಗೋಲಾಕಾರವಾಗಿರುತ್ತದೆ. ಎಲ್ಲ ಜನಾಂಗದವರಿಗೂ ಗೋಲಾಕಾರವು ಅನಾದ್ಯನಂತದ ಕುರುಹಾಗಿರುತ್ತದೆ." ಆಧುನಿಕ ಭೌತಶಾಸ್ತ್ರದಲ್ಲಿ ಮಹಾನ್ ಕ್ರಾಂತಿಯನ್ನು ಮಾಡಿರುವ ಐನ್‌ಸ್ಟೀನ್ 'ಈ ವಿಶ್ವವು ಹೈಪರ್‌ಬೋಲಾ ಆಕೃತಿಯಲ್ಲಿದೆ' ಎನ್ನುತ್ತಾನೆ. ಹೀಗೆ ವಿಶ್ವವು ತತ್ತಿಯ ಆಕಾರದಲ್ಲಿ ಗೋಲವಾಗಿದೆಯೆಂಬುದನ್ನು ಖಚಿತವಾಗಿ ತಿಳಿದುದಾಯಿತು. ವಿಶ್ವದಲ್ಲಿ ಸದಾ ಕಾಲವೂ ಚಲನೆಯಲ್ಲಿರುವ ಸೂರ್ಯ, ಚಂದ್ರ, ನಕ್ಷತ್ರ ಮುಂತಾದುವು ಗೋಲಾಕಾರದಲ್ಲಿವೆ. ಹಲವಾರು ದವಸಧಾನ್ಯಗಳು, ಬೀಜಗಳು ಗೋಲಾಕಾರದಲ್ಲಿವೆ. ಸರೋವರ ಅಥವಾ ಕೆರೆಯಾಳಗೆ ನಾವು ಒಂದು ಕಲ್ಲನ್ನೊ ಕಡ್ಡಿಯನ್ನೋ ಎಸೆಯುತ್ತೇವೆಂದುಕೊಳ್ಳಿ, ಆಗ ಅಲೆಗಳು ಉಂಗುರ ಉಂಗುರವಾಗಿ ಏಳುತ್ತವೆ. ಅಲೆಗಳ ಚಲನೆಯೂ ವರ್ತುಲಾಕಾರದಲ್ಲಿ ಸಾಗುತ್ತದೆ. ಪರಮಾಣುಗಳ ಸಂಚಾರವೂ ಗೋಲಾಕಾರದಲ್ಲಿ, ಇನ್ನೊಂದು ಸೋಜಿಗದ ಸಂಗತಿಯೆಂದರೆ ನಿಸರ್ಗದಲ್ಲಿ ಅತ್ಯಂತ ಸುಂದರ ಪುಷ್ಪವಾದ ನಾಗಲಿಂಗಪುಷ್ಟ ಮತ್ತು ಮಹಾಲಿಂಗನ ಬಳ್ಳಿಯ ಬೀಜಗಳು ಸ್ಥಾವರ ಲಿಂಗವನ್ನೇ ಹೋಲುತ್ತವೆ ಎಂಬುದು. ಹೀಗೆ ಮೂಲತಃ ಎಲ್ಲವೂ ಗೋಲಾಕಾರ. ಲಿಂಗಾಯತ ಧರ್ಮದಲ್ಲಿ ಪೂಜಿಸಲಾಗುವ ಇಷ್ಟಲಿಂಗವು ಇಂಥ ವಿಶ್ವದ ಆಕಾರದಲ್ಲಿ ದೇವನ ಸಾಕಾರವಾದ ಕುರುಹಾಗಿದೆಯೆಂಬುದನ್ನು ಅರಿತ ಮೇಲೆ ಯಾರಿಗೆ ತಾನೆ ಇದರಲ್ಲಿ ಶ್ರದ್ದೆ -ಸಂತೋಷಗಳು ಹುಟ್ಟಲಿಕ್ಕಿಲ್ಲ !

ಪರಮಾತ್ಮನಿದ್ದಾನೆನ್ನು ವುದಕ್ಕೆ ಸಾಕ್ಷಿ ಬ್ರಹ್ಮಾಂಡ ಅಥವಾ ವಿಶ್ವವಾದರೆ, ಜೀವಾತ್ಮನಿದ್ದಾನೆನ್ನು ವುದಕ್ಕೆ ಸಾಕ್ಷಿ ಪಿಂಡಾಂಡ (ತನು) ವಾಗಿದೆ. ಅದಕ್ಕಾಗಿಯೇ ಪರಶಿವನ ಕುರುಹಾದ ಇಷ್ಟಲಿಂಗವು ಬ್ರಹ್ಮಾಂಡದ ಆಕಾರದಲ್ಲಿ ಸಾಕಾರವಾಗಿ ಕರಸ್ಥಲಕ್ಕೆ ಚುಳುಕಾಗಿ ಬಂದು ಗೋಲ ರೂಪು ತಾಳಿದಂತೆ, ಆತ್ಮನ ಕುರುಹಾದ ಪಂಚಸೂತ್ರಲಿಂಗವು ಪಿಂಡಾಂಡದ ಆಕಾರದಲ್ಲಿ ಸಾಕಾರವಾಗಿ ಶಾಂಭವೀ ಮುದ್ರೆಯ ರೂಪು ತಾಳಿ ಕರಸ್ಥಲಕ್ಕೆ ಬಂದಿದೆ. ಶಾಂಭವೀ ಮುದ್ರೆಯೆಂದರೆ ಲಿಂಗಪೂಜೆಗೆ ಕುಳಿತಾಗ ಶರಣನು ವಾಮಕರದಲ್ಲಿ ಲಿಂಗವ ಪಿಡಿದು ಪೂಜಸುವ ಸನ್ನಿವೇಶವಾಗಿದೆ. ಆ ಶರಣನ ಕೆಳಗಿನ ಪದ್ಮಾಸನವೇ ಪೀಠವಾಗಿ, ಅವನ ಶಿರವೇ ಗೋಲಕವಾಗಿ, ಮುಂದೆ ಚಾಚಿದ ಲಿಂಗವ ಹಿಡಿದ ವಾಮಕರವೇ ಗೋಮುಖ [ಜಲಹರಿ] ವಾಗಿ, ಕಾಣುವುದರಿಂದ ಈ ಪಿಂಡಾಂಡದ (ಶರಣನ ಶಾಂಭವಿ ಮುದ್ರೆಯ) ಆಕಾರದಲ್ಲಿ ಪಂಚಸೂತ್ರಲಿಂಗ - [ಹುಟ್ಟು ಲಿಂಗ]ವನ್ನು ಬಸವಣ್ಣನವರು ರಚಿಸಿದರು. ಈವರೆಗೂ ಸ್ಥಾವರಲಿಂಗವು ಯಾಗಿರಾಜನಾದ ಶಿವನ ಒಂದು ಸಾಕಾರವಾಗಿ ಪೂಜಿಸಲ್ಪಡುತ್ತಿದ್ದರೆ, ಇದೀಗ ಅದೇ ಆಕಾರವನ್ನು ಹೋಲುವ ಪಂಚಸೂತ್ರಲಿಂಗವು ಯಾಗಿರಾಜ ಶಿವನ ಸಂಕೇತವಾಗದೆ ಆತ್ಮ ತತ್ವದ ಸಂಕೇತ-ದೇಹದಾಕಾರದಲ್ಲಿ ಆಯಿತು. ಇದರಿಂದ ಇಷ್ಟಲಿಂಗೋಪಾಸನೆ ಶಿವೋಪಾಸನೆಯಾಗದೆ ಆತ್ಯೋಪಾಸನೆ ಮತ್ತು ಪರಮಾತ್ರೋಪಾಸನೆಯಾಗುತ್ತದೆ.

ಹೀಗೆ ಶರಣರು ಪೂಜಿಸುವ ಪರಮನಿರಂಜನದ ಕುರುಹಾದ ಇಷ್ಟಲಿಂಗವು ಇಂತು ಈ ರೂಪು ತಾಳಿದೆ. ಬಾಹ್ಯ ಲಿಂಗ ಅರ್ಥಾತ್ ಕಂತೆಯ ಕವಚವು ಬ್ರಹ್ಮಾಂಡ [Macrocosmjದ, ತತ್ತಿಯ ಆಕಾರ [Oval shape]ದಲ್ಲಿಯೂ, ಅಂತರ್ಲಿಂಗವಾದ ಪಂಚಸೂತ್ರ ಲಿಂಗ (ಹುಟ್ಟುಲಿಂಗ)ವು ಪಿಂಡಾಂಡದ [Microcosm] ಶರಣರ ಪೂಜೆಯ ಕಾಲದ ಶಾಂಭವೀ ಮುದ್ರೆಯ ಆಕಾರದಲ್ಲಿಯೂ ರಚನೆಯಾಗಿವೆ. ಮೊದಲಿನದರಲ್ಲಿ ಎರಡನೆಯದನ್ನಿಟ್ಟು ಒಂದೇ ಸಾಕಾರ ರೂಪಮಾಡಿ ಇಷ್ಟಲಿಂಗದ ರೂಪವನ್ನು ರಚಿಸಲಾಗಿದೆ.

ಹೀಗೆ ಒಂದರೊಳಗೊಂದನ್ನು ಹುದುಗಿಸಿದ ಕಾರಣವೇನಿರಬಹುದು? ದೇವನ ಗರ್ಭದಲ್ಲಿ ಜೀವನಿದ್ದಾನೆ; ಬ್ರಹ್ಮಾಂಡದಲ್ಲಿ ಪಿಂಡಾಂಡ ವಿದೆ. ಈ ಮಹಾಸತ್ಯವನ್ನು ಸಂಕೇತಿಸುವ ಸಲುವಾಗಿಯೇ ಗೋಲಾಕಾರದ ಕಂತೆಯ ಕವಚ ಅರ್ಥಾತ್ ಬಾಹ್ಯಲಿಂಗದಲ್ಲಿ ಪಂಚಸೂತ್ರ ಲಿಂಗ ಅಂದರೆ ಅಂತರ್ಲಿಂಗವನ್ನು ಹುದುಗಿಸಿ “ನಿನ್ನೊಳಗೆ ನಾನು ಲಿಂಗಯ್ಯ, ನನ್ನೊಳಗೆ ನೀನು, ಭಿನ್ನ ಭಾವಗಳಿಲ್ಲ ಭಾವಿಸಿ ನೋಡಲು" ಎಂಬ ತತ್ವವನ್ನು ಪ್ರತಿಪಾದಿಸಲಾಗಿದೆ. "ಪಿಂಡ ಬ್ರಹ್ಮಾಂಡಯಾತ್ಮಿಕ್ಯಂ" ಎಂಬ ಶಾಸ್ತ್ರವಾಕ್ಯ ಇಲ್ಲಿ ನಿಜವಾಗಿ ಅನುಷ್ಠಾನಕ್ಕೆ ಬಂದಿದೆ ಎಂದು ಅರಿಯಬಹುದು. ಈ ದೃಷ್ಟಿಯಿಂದಲೇ ಇಷ್ಟಲಿಂಗಪೂಜೆ ಪ್ರತೀಕೋಪಾಸನೆಯಾಗದೆ ಅಹಂಗ್ರಹೋಪಾಸನೆಯಾಗುತ್ತದೆ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಇಷ್ಟಲಿಂಗ ಏಕೆ ಬೇಕು?ಇಷ್ಟಲಿಂಗದ ಗಾತ್ರNext
*