ಹಿಂದುತ್ವಕ್ಕೆ ಪ್ರತಿದ್ವಂದ್ವಿಯಾಗಿ ಹನ್ನೆರಡನೇ ಶತಮಾನದಲ್ಲಿ ಉದಿಸಿ ಬಂದ ಲಿಂಗಾಯತ ಧರ್ಮ

*

✍ಡಾ. ಜೆ ಎಸ್ ಪಾಟೀಲˌವಿಜಯಪುರ
(ಲೇಖಕರು: ಪ್ರಾಚಾರ್ಯರು ಮತ್ತು ಬಸವತತ್ವಾನುಯಾಯಿಗಳು)
Tuesday, May 12, 2020

ಹಿಂದುತ್ವಕ್ಕೆ ಪ್ರತಿದ್ವಂದ್ವಿಯಾಗಿ ಹನ್ನೆರಡನೇ ಶತಮಾನದಲ್ಲಿ ಉದಿಸಿ ಬಂದ ಲಿಂಗಾಯತ ಧರ್ಮ - ನೀಲಗಂಗಯ್ಯ ಪುಜಾರ್.

ಭಾಗ - 1

ಪ್ರಕೃತ (=ಪ್ರಸಕ್ತ) ಈ ಕಿರು ಪ್ರಬಂಧದ ಮೂಲಕ ನಾನು ಮೂರು ಧಾರ್ಮಿಕೈತಿಹಾಸಿಕ ಪ್ರಮೇಯಗಳನ್ನು ಮಂಡಿಸಲು ಪ್ರಯತ್ನಿಸಿದ್ದೇನೆ.

ಒಂದು : ಹಿಂದೂತ್ವವು ಭಾರತದ ಮೇಲಿನ ತನ್ನ ವಿಜಯ ಯಾತ್ರೆಯನ್ನು ಪೂರ್ಣಗೊಳಿಸಲಿಲ್ಲ. ಹಿಂದೂತ್ವದ ಸೌಧಕ್ಕೆ ಉಪಯೋಗಿಸಲಾರದೆ ಬಿಟ್ಟ ಕಚ್ಚಾ ಸಾಮಗ್ರಿಯು ಅನೇಕ ಜನಪದೀಯ ಕುಲಾಚಾರ ಸಮುದಾಯಗಳ ರೂಪದಲ್ಲಿ ಚಲ್ಲುವರೆದು ಬಿಟ್ಟಿದೆ.

ಎರಡು : ಬಸವಣ್ಣನು ಹಾಗೆ ನಿರುಪಯುಕ್ತವೆಂದು ಚೆಲ್ಲಿಕೊಟ್ಟ ಸಾಮಗ್ರಿಯನ್ನು ಉಪಯೋಗಿಸಿಕೊಂಡು ಹಿಂದೂತ್ವದ ಸೌಧದಿದಿರು ಪ್ರತಿ ಸೌಧವನ್ನು ಕಟ್ಟಿ ನಿಲ್ಲಿಸಲು ಪ್ರಯತ್ನಿಸಿದ.

ಮೂರು : ೧೫-೧೬‌ನೇ ಶತಮಾನದಲ್ಲಿ ಶ್ರೀವೈಷ್ಣವದ ಉಗ್ರ ಆಕ್ರಮಣದ ಒತ್ತಡಕ್ಕೆ ಒಳಗಾದ ವೈದಿಕ-ಆಗಮಿಕ ಶೈವಗಳು ಕರ್ನಾಟಕದ ರಾಜಕೀಯ ಸಂದರ್ಭದಲ್ಲಿ ಬಸವಣ್ಣನ ಲಿಂಗಾಯತದಲ್ಲಿ ವಿಲೀನಹೊಂದಿ ಆ ಧರ್ಮದ ಮೇಲೆ ತನ್ನ ಸ್ವಾಮಿತ್ವವನ್ನು ಪಡೆದವು.

ಈ ಮೂರು ಪ್ರಮೇಯಗಳನ್ನು ಅನುಮೋದಿಸುವವರಿಗೆ ಬಾಯಿ ಬಡತನವಿದ್ದು ಅವರು ಲಿಂಗಾಯತರ ಒಳಗೆ ಮಾತ್ರ ಸಿಗುವವರಾಗಿರುತ್ತಾರೆ. ಇವುಗಳನ್ನು ಖಂಡಿಸುವವರು ಒಳಗೂ ಹೊರಗೂ ಕೂಡಿಯೇ ಇದ್ದು ಅವರು ಬಾಯಿಬಲ ಹೊಂದಿದವರಾಗಿದ್ದಾರೆ. ನಾನು ಎರಡೂ ಪಕ್ಷಗಳಿಂದಲೂ ಸ್ವಾಗತಿಸುತ್ತೇನೆ.

ಭಾಗ - 2

ಬಸವಣ್ಣನಿಗೆ ವೈದಿಕರ ಕರ್ಮಠ ಹಾದಿ ಬೇಡವಾದ್ದರಿಂದಲೇ ಯಜ್ಞೋಪವೀತವನ್ನು ತ್ಯಜಿಸಿದ. ಅವನೆದುರು ಅವನ ಜೀವಿತದ ಉದ್ದೇಶ ಸ್ಪಷ್ಟವಾಗಿತ್ತು. ಬಸವಣ್ಣನೆದುರು ಅಸಂಖ್ಯಾತ ಜನರು ಧರ್ಮವಿರಹಿತರಾಗಿ ಕಲ್ಲು ˌ ಮಣ್ಣು ˌ ಮರˌ ಕೊಳಗಗಳನ್ನು ದೈವಗಳೆಂದು ಸಹಜ ಧರ್ಮ ಆಚರಿಸುತ್ತಿದ್ದದ್ದು ನೋಡಿದ. ಹಿಂದೂ ವೈದಿಕ ಧರ್ಮದಲ್ಲಿ ತಾತ್ವಿಕ ಅಧ್ಯಾತ್ಮಿಕ ಸಾಧನೆಗೆ ವೇದಾಧ್ಯಯನ ಅಗತ್ಯವಾಗಿತ್ತು.

ವೇದಾಧ್ಯಯನಕ್ಕೆ ಜನಿವಾರ ಅಗತ್ಯವಿತ್ತು. ಯಜ್ಞ ಸಾಮಾನ್ಯ ಜನರಿಗೂ ಮತ್ತು ಧರ್ಮಕ್ಕೂ ಮಧ್ಯ ದಳ್ಳುರಿಯಾಗಿ ಈ ನೆಲವನ್ನು ಸುಡುತ್ತಿತ್ತು. ಧರ್ಮಗೇಡಿಗಳಾಗಿದ್ದ ನಮ್ಮ ಜನಗಳಿಗೆ ಅಧ್ಯಾತ್ಮದ ನಿರಾಕರಣೆˌ ಆತ್ಮೋನ್ನತಿಯ ಬಯಕೆಗೆ ಬಿದ್ದ ಬೆಂಕಿˌ ಸ್ವರ್ಗˌ ಮೋಕ್ಷˌ ಸಾಕ್ಷಾತ್ಕಾರಗಳಿಗೆ ಮುಚ್ಚಿದ ದಾರಿ ಬಸವಣ್ಣನನ್ನು ಪ್ರಚೋದನೆ ನೀಡಿತ್ತು.

ಸ್ವರ್ಗˌ ಮೋಕ್ಷಗಳಿಗೆ ವೈದಿಕ ಹಿಂದೂ ಧರ್ಮವು ಹಚ್ಚಿದ ಬೇಲಿಯನ್ನು ಬಸವಣ್ಣ ಕಿತ್ತೆಸೆದ. ಇದರಿಂದ ಉತ್ತೇಜನಗೊಂಡ ಜನರ ಉತ್ಸಾಹ ಕಟ್ಟೆಯೊಡೆದು ಭೋರ್ಗರೆಯುವ ಪ್ರವಾಹವಾಗಿ ಹರಿಯಲಾಂಭಿಸಿತು. ಚಾಲುಕ್ಯ ಸಾಮ್ರಾಜ್ಯವನ್ನು ಅಪಹರಿಸಿ ಚಕ್ರವರ್ತಿಯಾಗಿ ಮೆರೆಯುತ್ತಿದ್ದ ಬಿಜ್ಜಳನಂತ ರಕ್ತಪಿಪಾಸು ರಾಜ್ಯಕರ್ತನೇ ಅದನ್ನು ತಡೆಯಲು ಉಪಾಯಗಾಣದೆ ಬದಿಗೆ ಸರಿದು ನಿಲ್ಲಬೇಕಾಯಿತು. ಬಸವಣ್ಣನಧರ್ಮಾನ್ವೇಷಣೆ ಈ ನೆಲಮೂಲದ ಜನರ ಸುತ್ತ ನಡೆದಿತ್ತು. ಆತನ ಹೊಸ ಧರ್ಮಕ್ಕಾಗಿ ದೊರೆತ ಮಾನವ ಸಾಮಗ್ರಿಗಳು ಈ ಜನಗಳೆ. ಅವನ ನಿಷ್ಟೆಯ ಕೇಂದ್ರಬಿಂದು ಅವರೆ.

ವರ್ಣವ್ಯವಸ್ಥೆ ˌ ಜಾತಿಪದ್ದತಿˌ ಕಾಲಾನುಕಾಲದ ನಿರ್ವಹಣೆಗೆಂದು ರಚಿತವಾಗಿದ್ದ ಪುರಾಣ ಕಲ್ಪನೆಗಳನ್ನೆಲ್ಲ ಕುಟ್ಟಿ ಪುಡಿಗೈಯುವುದರ ಜೊತೆಗೆ ಅದರಿಂದ ತೆರವಾದ ಜಾಗದಲ್ಲಿ ಹೊಸ ವ್ಯವಸ್ದೆಯನ್ನು ರಚಿಸುವ ಬಸವಣ್ಣನ ಧೋರಣೆಗಳನ್ನು ಅವನ ವಚನಗಳಲ್ಲೇ ನೋಡಬಹುದು. ಸ್ಪಷ್ಠವಾಗಿ ಆತ ಸಾಮಾಜಿಕ ಪರ್ಯಾಯ ವ್ಯವಸ್ಥೆ ಮಾಡಿದ್ದ. ಬಸವಣ್ಣ ಅಂದಿನ ಸಮಕಾಲೀನ ಸಮಾಜದ ಪಿರಾಮಿಡ್ಡನ್ನು ತಲೆಕೆಳಗು ಮಾಡಿ ನಿಲ್ಲಿಸಲು ಉದ್ಯುಕ್ತನಾಗಿದ್ದ.

ಭಾಗ - 3

ಲಿಂಗಧಾರಿಗಳಿಗೆ ಒಂದು ಧರ್ಮವಾಗಿˌ ಅವರ ಸಾಮಾಜಿಕ ಆಚರಣೆಗಳ ಪ್ರಭಾವ ಪರಿಸರದಲ್ಲಿರುವ ಬಹುಸಂಖ್ಯೆ ಜಾತಿ ಜನಾಂಗಗಳಿಗೆ ಒಂದು ಸಂಸ್ಕ್ರತಿಯೆಂದು ಬೆಳೆದು ಬಂದಿರುವ ಇಂದಿನ ಲಿಂಗಾಯತವು ಹನ್ನೆರಡನೇ ಶತಮಾನದ ಶರಣ ಚಳುವಳಿಯಲ್ಲಿಯೇ ಮೂಡಿಬಂತು ಮತ್ತು ಅದು ಅಲ್ಪಸಂಖ್ಯಾತ ದ್ವಿಜವರ್ಣಗಳಿಂದ ಪ್ರತಿನಿಧಿಸಲ್ಪಡುತ್ತಿರುವ ಹಿಂದೂತ್ವಕ್ಕೆ ಸಂವಾದಿಯಾಗಿ ಹುಟ್ಟಿಬಂತು ಎಂಬುದನ್ನು ನಾವು ತಿಳಿಯಬೇಕಿದೆ.

ಬಸವಣ್ಣ ತನ್ನ ಸ್ವಂತ ವ್ಯಕ್ತಿತ್ವದಿಂದ ಲಿಂಗಾಯತಕ್ಕೆ ಒಂದು ನಿರ್ಧಿಷ್ಟ ಸ್ಪಷ್ಟವಾಗಿ ಗುರುತಿಸಬಲ್ಲ ಧಾರ್ಮಿಕ ಮುದ್ರೆಯನೊತ್ತಿˌ ˌ ಹಿಂದೂಸ್ತಾನದ ಧಾರ್ಮಿಕ ಇತಿಹಾಸದ ವೇದಿಕೆಯ ಮೇಲೆ ಅದಕ್ಕೊಂದು ಅಧಿಕ್ರತ ಸ್ಥಾನಮಾನವನ್ನು ದೊರಕಿಸಿಕೊಟ್ಟು ಅದನ್ನೊಂದು ಚಾರಿತ್ರಿಕ ಧರ್ಮವನ್ನಾಗಿ ಮಾಡಿದನೆಂಬುದನ್ನು ಇಂದೂ ಕೂಡ ಆ ಧರ್ಮದ ಅನುಯಾಯಿಗಳಿಗೆ ಹೇಳಿಕೊಡಬೇಕಾಗಿದೆ. ಅದೇ ದುರ್ವಿಧಿಯಾಗಿ ಆ ಸಮಾಜವನ್ನು ಕಾಡುತ್ತಿದೆ.

ಭಾಗ - 4

ದೇವರು ಧರ್ಮˌ ಮಠ ಮಂದಿರˌ ಗುರುˌ ವಿರಕ್ತ ಇಂಥ ವಿಷಯಗಳಲ್ಲಿ ನನಗೆ ಆಸಕ್ತಿಯಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಿಂದೂಯೇತರ ಜನರಿಗೆ ಉಪದ್ರಕಾರಿಯಾಗಿ ಬೆಳೆಯುತ್ತಿರುವ *ವಿಶ್ವ ಹಿಂದೂ ಪರಿಷತ್ತು* ಮತ್ತು *ಸಂಘ ಪರಿವಾರಗಳ* ಅಸಹ್ಯಕರ ಉದ್ಧಟ ಚಟುವಟಿಕೆಗಳು ನನ್ನ ಧಾರ್ಮಿಕ ತಾಟಸ್ಥ್ಯವನ್ನು ಭಂಗಗೊಳಿಸಿದೆ. ವಿಶ್ವ ಹಿಂದೂ ಪರಿಷತ್ತು ಮತ್ತು ಸಂಘ ಪರಿವಾರದ ದಟ್ಟ ಕಾವಿಯ 'ಓಂ' ಗುರುತಿನ ಧ್ವಜವು ಹುಬ್ಬಳ್ಳಿಯ ಮೂರುಸಾವಿರ ಮಠದ ಗೋಪುರದ ಗುಮ್ಮಟವನ್ನೇರಿ ತನ್ನ ಕೊಕ್ಕಿನಿಂದ ಆ ನಿರಂಜನ ಪೀಠದ ಶಿಖರದ ಕಲಶದ ನೆತ್ತಿಯನ್ನು ಕುಕ್ಕುತ್ತಿದೆ.

ಮತ್ತೊಂದು ದಿನ ಅಯ್ಯೋಧ್ಯೆಯ ರಾಮಮಂದಿರದ ಇಟ್ಟಿಗೆಗಳು ಹೊತ್ತ ರಥವು ಧಾರವಾಡದ ಮುರುಘಾ ಮಠದ ಪೌಳಿಯೊಳಗೆ ಬಂದು ನಿಂತು ಮಹಾಂತಪ್ಪಗಳ ಕೈಯಿಂದ ಪೂಜೋಪಚಾರ ಪಡೆದದ್ದಲ್ಲದೆ ಮೂರುಸಾವಿರ ಮಠಧೀಶರಿಂದಲೂ ಅರ್ಚನೆ ಹೊಂದಿಯೇ ಮುಂದೆ ಹೋಯಿತು. ದೇಶದ ಮೇಲೆ ಬ್ರಾಹ್ಮಣರು ಧಾರ್ಮಿಕ ದಂಡಯಾತ್ರೆಯನ್ನು ಕೈಗೊಂಡು ಲಿಂಗಾಯತದಂಥ ಅಲ್ಪಸಂಖ್ಯಾತ ಧರ್ಮದ ಜನಗಳಿಂದ ಕಪ್ಪು ಕಾಣಿಕೆಗಳು ಒಪ್ಪಿಸಿಕೊಂಡು ಹೋಗುವ ಉದ್ಧಟತನವನ್ನು ನಾನಿದರಲ್ಲಿ ಕಂಡಿರುವೆ.

ಭಾಗ - 5

ಮೈಸೂರಿನ ಅರಸೊತ್ತಿಗೆಯನ್ನು ನಿಯಂತ್ರಿಸುತ್ತಿದ್ದದ್ದು ಅಂದು ಶ್ರೀವೈಷ್ಣವ ಅಯ್ಯಂಗಾರಿ ಬ್ರಾಹ್ಮಣ ದಿವಾನರುಗಳು. ಅಂಥ ರೈತ ವಿರೋಧಿ ದಿವಾನರುಗಳ ಸಲಹೆಯಂತೆ ರೈತರು ಮತ್ತು ಕ್ರಷಿ ಕಾಯಕದವರ ಮೇಲೆ ಅಸಮಂಜಸ ತೆರಿಗೆ ಹೇರಿದ್ದರು ಮೈಸೂರು ಅರಸರು. ಮೈಸೂರು ಅರಸರ ಜನವಿರೋಧಿ 'ಜಿಜಿಯಾ' ತೆರಿಗೆ ವಿರೋಧಿಸಿದ್ದ ಹಿಂದೂ ಸಮಾಜ ವ್ಯವಸ್ಥೆಯಿಂದ ಹೊರಗುಳಿದ ಮತ್ತು ಸಂದರ್ಭಾನುಸಾರ ಬ್ರಾಹ್ಮಣ ಅಧಿಪತ್ಯವನ್ನು ವಿರೋಧಿಸುತ್ತ ಬಂದ ಲಿಂಗವಂತ ಸಮುದಾಯದ ಸುಮಾರು 400 ಜಂಗಮರನ್ನು ಮೈಸೂರು ಅರಸರ ಆಸ್ಥಾನದ ಬ್ರಾಹ್ಮಣ ದಿವಾನರು ಸಾಮೂಹಿಕ ಹತ್ಯಗೈದಿದ್ದರು.

ಆ ಘಟನೆ ಮೊದಲಾಗಿ ಆನಂತರದ 200 ವರ್ಷಗಳ ಪರ್ಯಂತ ನಾನು ಲಿಂಗಾಯತನೆಂದು ಹೇಳಿಕೊಳ್ಳುವ ಜನರೇ ಹಳೆ ಮೈಸೂರು ಪ್ರಾಂತ್ಯದಲ್ಲಿ ಉಳಿಯಲಿಲ್ಲ. ಇಂದು ಈ ಭಾಗದಲ್ಲಿರುವ ಒಕ್ಕಲಿಗ ಕುಟುಂಬಗಳು ಕ್ರಿ.ಶ. 1680 ರ ಮೊದಲು ಲಿಂಗಾಯತ ಕುಟುಂಬಗಳಾಗಿರುವ ಸಂಭವ ಅಲ್ಲಗಳೆಯಲಾಗದು. ಲಿಂಗಾಯತರು ಹಿಂದೂ ಸಮಾಜ ವ್ಯವಸ್ಥೆಯ ಹೊರಗಿದ್ದ ವೈದಿಕ ವಿರೋಧಿಗಳುˌ ಅಂದರೆ ಬ್ರಾಹ್ಮಣ ವಿರೋಧಿ ಜನಾಂಗದವರು.

ಭಾಗ - 6

ಕರ್ಣದಲ್ಲಿ ಹುಟ್ಟಿದವರುಂಟೆ ಜಗದೊಳಗೆ ಎಂದು ಪ್ರಶ್ನಿಸುವ ಮೂಲಕ ಬ್ರಾಹ್ಮಣರ ಪುರಾಣಗಳ ಪವಾಡ ಪುರುಷರ ಸುಳ್ಳನ್ನು ಬಯಲಿಗಿಟ್ಟು ಅವರ ಶ್ರದ್ಧೆಯ ಬುಡವನ್ನೇ ಅಲ್ಲಾಡಿಸಿ ಬಿಡುತ್ತಾರೆ ಬಸವಣ್ಣ. ಕರ್ಣದಲ್ಲಿರಲಿˌ ಶಿವಯೋಗಿ ಶಿವಾಚಾರ್ಯರು ಕಲ್ಲಿನಲ್ಲಿ ಹುಟ್ಟಿಸಿ ತೋರಿಸುತ್ತಾರೆ. ಶೂದ್ರರನ್ನು ಬೌದ್ಧರ ವಿರುದ್ಧ ಎತ್ತಿಕಟ್ಟುವುದಕ್ಕಾಗಿ ಅವರಿಗಾಗಿ ಲಾವಣಿˌ ಪವಾಡ ಜನಪದ ಹಾಡುಗಳನ್ನು ರಚಿಸಿ ನಂತರ ಅವುಗಳನ್ನೇ ಮಹಾಪುರಾಣ ಕಾವ್ಯಗಳಾಗಿ ಪರಿವರ್ತಿಸಿದ ಬ್ರಾಹ್ಮಣರ ಚಾತುರ್ಯವನ್ನು ಅರ್ಥಮಾಡಿಕೊಳ್ಳದ ಶಿವಾಚಾರ್ಯರು ಬ್ರಾಹ್ಮಣರ ಮುಗ್ಧ ಅನುಕರಣ ಮಾಡಿ ರೇಣುಕಾಚಾರ್ಯರನ್ನು ಕಲ್ಲಿನಲ್ಲಿ ಹುಟ್ಟಿಸುತ್ತಾರೆ.

ಈ ಬ್ರಾಹ್ಮಣರ ಮಹಾಕಾವ್ಯಗಳಲ್ಲಿ ನಾಯಕ ಪಾತ್ರ ಶೂದ್ರರಿಗೆ ಮೀಸಲಿಡುತ್ತಾರೆ. ವ್ಯಾಸನ ತಂದೆ ಪರಾಶರ ಹೊಲೆಯ. ತಾಯಿ ಮತ್ಸಗಂಧೆ ಬೋಯತಿ. ವ್ಯಾಸನ ವೀರ್ಯದಿಂದ ಹುಟ್ಟಿದ ಕುರು ಪಾಂಡವರು ಕ್ಷತ್ರಿಯರಾಗಲು ಹೇಗೆ ಸಾಧ್ಯ ? ಬ್ರಾಹ್ಮಣ ಪುರಾಣಿಕರು ಅವರಿಗೆ ಪದೋನ್ನತಿ ನೀಡಿದ್ದಾರೆ. ತಾವೇ ಪುರಾಣ ಬರೆದುˌ ವ್ಯಾಸ ವಾಲ್ಮಿಕಿಗಳೆಂಬ ಮಿಥ್ಯಗಳನ್ನು ಹುಟ್ಟಿಸಿದವರು ಬ್ರಾಹ್ಮಣರು.

ನಮ್ಮ ಶಿವಾಚಾರ್ಯ ಲಿಂಗಿ ಬ್ರಾಹ್ಮಣರು ತಾವು ಅರ್ಧ ಪುರಾಣ, ಅರ್ಧ ಸಿದ್ಧಾಂತ ಗ್ರಂಥ ಬರೆದು ಅದರ ಕರ್ತ್ರತ್ವವನ್ನು ರೇಣುಕಾಚಾರ್ಯ ಎಂಬ ಕಾಲ್ಪನಿಕ ವ್ಯಕ್ತಿಯ ಹೆಸರಿಗೆ ವರ್ಗಾಯಿಸುತ್ತಾರೆ. ಈ ಶಿವಾಚಾರ್ಯರು ಯಾರು ? ಅವರು ಯಾವ ಕಾಲದಲ್ಲಿ ಜೀವಿಸಿದ್ದರು ? ಅವರು ಭೋದಿಸಿದ ಸಿದ್ಧಾಂತದ ನೆಲೆಗಟ್ಟಾದರೂ ಏನು ? ಇವೆಲ್ಲವುಗಳನ್ನು ವಿಚಕ್ಷಕ ರೀತಿಯಿಂದ ಶೋಧಿಸುವ ಪ್ರಯತ್ನಗಳು ಆಗಬೇಕಿದೆ. ಸಿದ್ಧಾಂತ ಶಿಖಾಮಣಿಯಲ್ಲಿ ಹಲವು ವಿಸಂಗತಿಗಳಿವೆ.

ಭಾಗ - 7

ಸಿದ್ಧಾಂತ ಶಿಖಾಮಣಿ ರಚಿಸುವ ಮೂಲಕ ಶಿವಾಚಾರ್ಯರು ಪಂಚಾಚಾರ್ಯ ಪಂಚಮೋತ್ಪತ್ತಿಯ ಕಲ್ಪನೆಯ ಮೂಲಕ್ಕೆ ಕೊಡಲಿ ಏಟು ಹಾಕಿದ್ದಾರೆ. ಅಗಸ್ತ್ಯರನ್ನು ಮಾಧ್ಯಮವಾಗಿಸಿಕೊಂಡು ರೇಣುಕಾಚಾರ್ಯರು ಈ ಭೂಮಿಯಲ್ಲಿ ವೀರಶೈವವನ್ನು ನೆಲೆಗೊಳಿಸಿದ ಬಳಿಕ ಉಳಿದ ನಾಲ್ಕು ಆಚಾರ್ಯರ ಕೆಲಸವೇನು ? ಉಜ್ಜೈನಿˌ ಕೇದಾರˌ ಶ್ರೀಶೈಲˌ ಕಾಶಿಗಳಲ್ಲಿ ಶಿವಲಿಂಗಗಳು ಆಚಾರ್ಯರ ಲಿಂಗೋತ್ಪತ್ತಿಗೆ ಅವಕಾಶ ನೀಡಲಿಲ್ಲ ಎಂದು ಊಹಿಸಬೇಕೆ ?

ಇನ್ನೂ ಒಂದು ವಿಸಂಗತ ಸಂಗತಿ ಎಂದರೆ ಷಟಸ್ಥಲಾಂತರ್ಗತ ಏಕೋತ್ತರ ಸ್ಥಲಗಳನ್ನು ಅಗಸ್ತ್ಯರಿಗೆ ಬೋಧಿಸಿ ಅದನ್ನು ಹಿಂದುಳಿಸಿ ಹೋದ ರೇಣುಕಾಚಾರ್ಯರು ವಿಭೀಷಣನಿಗೆ ಇಷ್ಟಲಿಂಗ ಧಾರಣೆ ಮಾಡದೆ ಅಧಾರ್ಮಿಕವೆನ್ನಿಸುವ ಮೂರು ಕೋಟಿ ಸ್ಥಾವರ ಲಿಂಗಗಳನ್ನು ಸ್ಥಾಪಿಸಿದರೇಕೆ ? ಇಷ್ಟಲಿಂಗದ ಬಗ್ಗೆ ಅವರ ನಂಬುಗೆಗಳೇ ಪೊಳ್ಳಾಗಿದ್ದವೆ ?

ಅವರ ಮಟ್ಟಿಗೆ ಇಷ್ಟಲಿಂಗ ಧಾರಣವು ಐಚ್ಛಿಕವೇ ಆಗಿತ್ತು. ಅವರ ವೀರಶೈವಕ್ಕೆ ಅದು ಪ್ರಧಾನಾಂಶವಾಗಿರಲೇಯಿಲ್ಲ. ಸ್ಥಾವರ ಲಿಂಗ ಪೂಜೆಗೆ ಆಕ್ಷೇಪವಿರಲಿಲ್ಲ. ತೆಲುಗಿನ ಲಿಂಗೀಬ್ರಾಹ್ಮಣರಾಗಿದ್ದ ಶಿವಾಚಾರ್ಯರು ಇದಕ್ಕಿಂತ ಬೇರೇನು ಹೇಳಲು ಸಾಧ್ಯವಿದೆ ? 14-15 ನೇ ಶತಮಾನದ ಶೈವಗಳ ಮಹಾವಿಲಯದ ನಂತರ ವಿಶಾಲ ಲಿಂಗಾಯತದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪರಂಪರಾಶೀಲ ಶೈವ ವಿದ್ವಾಂಸರು ಹುಟ್ಟುಹಾಕಿದ ಸಂಸ್ಕ್ರತ ಗ್ರಂಥರಾಶಿಯಲ್ಲಿ ಲಿಂಗಾಯತವು ಸಿಕ್ಕಿಕೊಂಡು ಕುತ್ತುಸಿರು ಬಿಡುವಂತಾಗಿದೆ.

ಭಾಗ - 8

ಶಿವಾಚಾರ್ಯರು ಪಂಚಾಚಾರ್ಯರ ಕಲ್ಪನಾ ಪ್ರಮೇಯವನ್ನು ಕೈಬಿಟ್ಟು ರೇಣುಕರ ಏಕೈಕಾಚಾರ್ಯ ಪ್ರಮೇಯವನ್ನು ಕೈಗೆತ್ತಿಕೊಂಡಿದ್ದಕ್ಕೆ ಅರ್ಥವಿದೆ. ಅವರು ತೆಲಗು ಶ್ರೌತಶೈವರು. ಅವರ ಧಾರ್ಮಿಕ ಪುರಾಣ ಪರಂಪರೆಯಲ್ಲಿ ಪಂಚಾಚಾರ್ಯರಿಲ್ಲ. ಅವರಲ್ಲಿ ದ್ವಾದಶ ಆಚಾರ್ಯ ಪರಂಪರೆ ಇದೆ. ಮೂರು ಜನ ಸಿದ್ಧತ್ರಯರುˌ ಮೂರು ಜನ ಆರಾಧ್ಯತ್ರಯರುˌ ಮೂರು ಜನ ಆಚಾರ್ಯತ್ರಯರುˌ ಮೂರು ಜನ ಪಂಡಿತತ್ರಯರು. ರೇವಣಸಿದ್ದ ˌ ಮರುಳಸಿದ್ದ ˌ ಏಕೋರಾಮರು ಸಿದ್ದತ್ರಯರಾಗಿದ್ದು ದ್ವಾದಶ ಆಚಾರ್ಯರಲ್ಲಿ ಈ ಮೂವರಿಗೆ ಹೆಚ್ಚಿನ ಪ್ರಾಶಸ್ಥ್ಯ. ಹನ್ನೆರಡು ಜನ ಆಚಾರ್ಯರಿಗೂ ಶಿವಾಚಾರ್ಯ ಉಪಾಧಿಗಳುಂಟು.

ತೆಲುಗು ಶ್ರೌತಶೈವರಾಗಿದ್ದ ಶ್ರೀಪತಿ ಪಂಡಿತಾರಾಧ್ಯರು ತಮ್ಮ ಶ್ರೀಕರ ಭಾಷ್ಯದ ಆರಂಭದಲ್ಲಿ ಶಿವ ಹಾಗು ನಂದಿಯನ್ನು ಸ್ತುತಿಸಿದ ನಂತರ ರೇವಣಸಿದ್ದರನ್ನು "ಶ್ರೀಮದ್ ರೇವಣದೇಶಿಕೇಂದ್ರ ವಿಭವಂ ಲಿಂಗಾವಧಾನೋಜ್ವಲಂ" ಎಂದೂˌ ಮರುಳಸಿದ್ಧರನ್ನು" ಸಿದ್ಧಾರ್ಯಂ ಮರುಳ ಪ್ರಭುಂ ಬುದ್ಧನಂತಂ" ಎಂದೂˌ ಏಕೋರಾಮನನ್ನು " ಶ್ರೀ ಮದ್ಧಂಡ ಶಿಖೋಪವಿತ್ ವಿಲಸತ್ ಕಂಥಾಜಿನಾಲಂಕ್ರತಃ ಏಕೋರಾಮಯತೀಂದ್ರ" ಎಂದೂ ಸ್ತುತಿಸಿ ಉಳಿದಿಬ್ಬರನ್ನು ಕೈಬಿಟ್ಟಿದ್ದಾರೆ. ಈ ಆಚಾರ್ಯರ ಜುಟ್ಟ ˌ ಜನಿವಾರˌ ಕ್ರಷ್ಣಾಜಿನಗಳನ್ನು ನೋಡಿಯೂ ಕರ್ನಾಟಕದ ವೀರಶೈವವಾದಾಗಳು ಇನ್ನೂ ಆ ಆಚಾರ್ಯರುಗಳ ಬಗ್ಗೆ ಭ್ರಮೆ ಇರಿಸಿಕೊಂಡಿದ್ದರೆ ಯಾರೇನು ಮಾಡಲಿಕ್ಕಾಗುವುದಿಲ್ಲ.

ರೇಣುಕಾಚಾರ್ಯರು ಉದ್ಭವಿಸಿದ ಸೋಮೇಶ್ವರಲಿಂಗ ತೆಲುಗು ದೇಶದ ಕೊಲ್ಲಿಪಾಕಿಯಲ್ಲಿ ˌ ಮರುಳಸಿದ್ಧರ ವಟಕ್ಷೇತ್ರವು ಬಳ್ಳಾರಿ ಜಿಲ್ಲೆ ಉಜ್ಜೈನಿಯಲ್ಲ ˌ ಅದು ತಮಿಳುನಾಡಿನ ವೇದಾರಣ್ಯಂನ ನೆರೆಯ ಸಮುದ್ರದ ಮರಳು ರಾಶಿಯಲ್ಲಿ ನಾಸ್ತಿಕರಿಗೆ ಕಾಣದ ಶ್ವೇತವಟವ್ರಕ್ಷದ ನೆರಳಿನಲ್ಲಿದೆ ಎಂದು ಕಥೆ ಹೇಳಲಾಗುತ್ತಿದೆ. ಏಕೋರಾಮನ ರಾಮನಾಥ ಲಿಂಗವು ಹಿಮಾಲಯದಲ್ಲಿಲ್ಲ ˌ ಅಲ್ಲಿರುವುದು ಕೇದಾರನಾಥಲಿಂಗ. ದ್ರಾಕ್ಷಾರಾಮ ಕ್ಷೇತ್ರವು ಇಲ್ಲಿಯೇ ದಕ್ಷಿಣದಲ್ಲಿ ಎಲ್ಲಿಯೋ ಇರಬೇಕು. ತೆಲಗು ಆರಾಧ್ಯ ಬ್ರಾಹ್ಮಣರಿಗೆ ಅದೆಲ್ಲಿದೆ ಎಂದು ಗೊತ್ತಿರಬೇಕು. ಕೊಲ್ಲಿಪಾಕಿಗೆ ಹೋಗಿ ರೇಣುಕಾಚಾರ್ಯರು ಉದ್ಭವಿಸಿದ ಸೋಮನಾಥಲಿಂಗವನ್ನು ನೋಡಿಬಂದವರು ಹೇಳುವುದನ್ನು ಕೇಳಿದರೆ ಆ ಲಿಂಗದ ಅರ್ಚಕರು ಲಿಂಗವಂತರಲ್ಲ. ಆ ದೇವಸ್ಥಾನದ ಆವರಣದಲ್ಲಿರುವ ಪೆದ್ದಮಠಂ (ಹಿರೇಮಠ)ದ ಗುರುಗಳು ಲಿಂಗವಂತರಲ್ಲ. ಅವರಿಗೆ ಇಷ್ಟಲಿಂಗವೆಂದರೇನೆಂದು ಗೊತ್ತೆಯಿಲ್ಲ. ಅವರು ವೀರಶೈವರಾಗಿರುವುದು ಅಷ್ಟೆ ನಿಜ.

ಭಾಗ - 9

ತೆಲುಗು ಆಗಮಿಕ ಶೈವ ಬ್ರಾಹ್ಮಣರು ಹದಿನೈದನೇ ಶತಮಾನದಿಂದೀಚೆಗೆ ಕರ್ನಾಟಕಕ್ಕೆ ಬಂದು ಲಿಂಗಧಾರಿಗಳಾದರು ಎನ್ನಲು ಅನೇಕ ಐತಿಹಾಸಿಕ ಸಾಕ್ಷಗಳು ಲಭ್ಯ ಇವೆ. ತೋಂಟದ ಸಿದ್ಧಲಿಂಗ ಯತಿಗಳು ತಮ್ಮ ಒಂದು ವಚನದಲ್ಲಿ " ಆದಿಯಲ್ಲಿ ಶಿವತತ್ವದಲ್ಲಿ ರೇಣುಕನ ಉದಯವಾಗಿದ್ದಡೆ ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋ " ಎಂದು ಪ್ರಶ್ನಿಸುತ್ತಾರೆ. ವಿಚಿತ್ರವೆಂದರೆ ಈ ಶ್ರೌತಶೈವರಿಗೆ ಸಿದ್ದಾಂತ ಶಿಖಾಮಣಿಯು ಪ್ರಮಾಣ ಗ್ರಂಥವಾಗಿರುವುದು. ಶ್ರೌತಶೈವರ ಈ ಆಧಾರ ಗ್ರಂಥವನ್ನು ಲಿಂಗಾಯತ ಧರ್ಮದ ಜೀವನದಲ್ಲಿ ತಂದು ತೇಲಿಬಿಟ್ಟ ಕಾಲವನ್ನು ಸ್ಪಷ್ಟವಾಗಿ ಗುರುತಿಸಬೇಕಿದೆ.

ಮದ್ರಾಸ್ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಉನ್ನತ ಅಧ್ಯಯನ ಪೀಠದ ಡಾ. ವ್ಹಿ ರತ್ನಸಭಾಪತಿಯವರು ಕರ್ನಾಟಕ ವಿಶ್ವವಿದ್ಯಾಯಲದ ಕನ್ನಡ ಅಧ್ಯಯನ ಪೀಠದ ಆಶ್ರಯದಲ್ಲಿ ಮ. ನಿ. ಮ್ರತ್ಯುಂಜಯ ಸ್ಮಾರಕ ಉಪನ್ಯಾಸ ಮಾಲೆಯ 1980ನೇ ವರ್ಷದ ಉಪನ್ಯಾಸಕರಾಗಿ "Perspective in Veerashaivism" ಎಂಬ ವಿಷಯದ ಬಗ್ಗೆ ಮೂರು ಉಪನ್ಯಾಸಗಳನ್ನು ನೀಡಿದ್ದು ಮೊದಲನೇ ಉಪನ್ಯಾಸದಲ್ಲಿಯೇ ಅವರು In conclusion, the term Veerashaivism is coined by the shaivites after the period of Basava ಎಂದು ಹೇಳಿದ್ದಾರೆ.

ಅದೇ ಉಪನ್ಯಾಸದಲ್ಲಿ ಅವರು ಡಾ. ಎಚ್ ಪಿ ಮಲ್ಲದೇವರ Essentials of Veerashaisism ಗ್ರಂಥದಲ್ಲಿನ ವಾಕ್ಯ " incontravertible evidence is necessary to prove that panchacharyas were the originators of Veerashaisism ಎಂಬುದನ್ನು ಉಲ್ಲೇಖಿಸಿದ್ದಾರೆ. ಅದೇ ರೀತಿ ಅವರು ಬಸವಣ್ಣನವರ ಬಗ್ಗೆ However, there is an ample evidence to prove that Basava in the 12th century, revived and reformed Veerashaiva Philasophy and gave it its present shape ಎನ್ನುತ್ತ ˌ ಕೊನೆಗೆ Lingayat is founded by the heroic attempts of Basava ಎಂದು ನಿರ್ಧಾರಯುತವಾಗಿ ಉಲ್ಲೇಖಿಸಿದ್ದನ್ನು ಪ್ರಾಸ್ಥಾಪಿಸಿದ್ದಾರೆ.

ಭಾಗ - 10

ಸಿದ್ದಾಂತಶಿಖಾಮಣಿಯ ಪ್ರವೇಶದಿಂದಾಗಿ ಕರ್ನಾಟಕದ ಶರಣಧರ್ಮದ ಪ್ರವಾಹದಲ್ಲಿ ಕಲಕು ನೀರು ಬಂದು ಸೇರಿದೆ. ಅನೇಕ ಒತ್ತಡಗಳಿಗೆ ಸಿಕ್ಕ ಕಾಳಾಮುಖˌ ಪಾಶುಪತˌ ತಮಿಳು ಶೈವˌ ತೆಲಗು ಶ್ರೌತಶೈವˌ ಶರಣರ ಲಿಂಗಾಯತದೊಂದಿಗೆ ವಿಲಿನವಾಗಿ ಲಿಂಗಾಯತವನ್ನು ಕುಲಗೆಡಿಸಿದವು. ಆ ಮೊದಲು ಆಗಮದಲ್ಲಿ ಕ್ವಚಿತ್ತಾಗಿ ಪ್ರಸ್ತಾಪಿಸುತ್ತ ಬಂದಿದ್ದ ವೀರಶೈವ ಶಬ್ಧವನ್ನು ಹೊಸ ಲಿಂಗಾಯತ ಧರ್ಮಕ್ಕೆ ಪಾರಿಭಾಷಿಕ ಹೆಸರನ್ನಾಗಿ ಉಪಯೋಗಿಸಲಾಂಭಿಸಿದರು.

ಈ ವೀರಶೈವವು ಬಸವಣ್ಣನವರ ಪೂರ್ವದಲ್ಲೇ ಅಸ್ಥಿತ್ವದಲ್ಲಿದ್ದಿದ್ದರೆ ಉಪನಯನˌ ಮೌಂಜೀಬಂಧನˌ ಯಜ್ಞಯಾಗಾದಿಗಳುˌ ವೇದಪಠಣˌ ವೈದಿಕ ಧರ್ಮಸೂತ್ರಗಳ ಪರಿಪಾಲನೆಗಳ ವಿರುದ್ಧ ಬಂಡೇಳಲು ಕಾರಣಗಳೇ ಇದ್ದಿರಲಿಲ್ಲ. ಹೇಳಿಕೇಳಿ ಬಸವಣ್ಣನವರು ಹುಟ್ಟಿನಿಂದ ಶೋತ್ರಿಯ ಶೈವರು-ಶಿವಾದ್ವೈತಿಗಳು. ಬಸವಣ್ಣನವರು ಬಸವಣ್ಣನವರಾದದ್ದು ಆ ಬಂಡಾಯದಿಂದಲೆ. ಆನಂತರ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಶಿದ್ಧಾಂತಶಿಖಾಮಣಿಯ ಮೂಲಕ ಮತ್ತೆ ಅವರನ್ನು ಶೋತ್ರಿಯ ಶಿವಾದ್ವೈತಿಗಳನ್ನಾಗಿ ರೂಪಿಸುವ ಪ್ರಯತ್ನಗಳಾಗಬಾರದು.

ಸಿದ್ಧಾಂತಶಿಖಾಮಣಿಯು ವೀರಶೈವವನ್ನು ಪ್ರವೇಶಿಸುವಾಗ ಒಂಟಿಯಾಗಿ ಬಂದಿಲ್ಲ. ತನ್ನ ಜ್ಞಾತಿ ಬಂಧಗಳಾದ ಶ್ರೀಕರಭಾಷ್ಯ ˌ ಕ್ರೀಯಾಸಾರಗಳನ್ನು ಜೊತೆಗೂಡಿಸಿಕೊಂಡು ಬಂದಿದೆ. ಬಸವಣ್ಣನು ಕಿತ್ತೊಗೆದ ಜನೀವಾರವನ್ನು ವೀರಶೈವಕ್ಕೆ ಗ್ರಾಹ್ಯವಾಗಿಸಲು ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ಸು ಸಿಗಲಿಲ್ಲವೆಂಬುದು ಬೇರೆ ಮಾತು.

ಭಾಗ - 11

ಬುದ್ದ ˌ ಬಸವಣ್ಣ ˌ ಗುದ್ದಲಿಯನ್ನು ಹೊತ್ತು ನೆಲವನ್ನು ಅಗಿದು ಧರ್ಮಕ್ಕೆ ಬುನಾದಿಯನ್ನು ತೋಡಿ ಧರ್ಮದ ಕಟ್ಟಡವನ್ನು ಕಟ್ಟಿ ನಿಲ್ಲಿಸಿದರು. ಗುರು ಗೋವಿಂದಸಿಂಗರು ಕ್ರಪಾಣದ ಸಂಪ್ರೋಕ್ಷಣೆಯಿಂದ ಧರ್ಮ ದೀಕ್ಷೆ ನೀಡಿ ಸಿಖ್ಖರಿಗಾಗಿ ಖಾಲ್ಸಾಕ್ಕೆ ಧಾರ್ಮಿಕ ಸ್ವರೂಪವನ್ನಿತ್ತರು. ಬುದ್ದ ˌ ಬಸವಣ್ಣ ˌ ಗೋವೀಂದಸಿಂಗರಾರೂ ರೇಣುಕರಂತೆ ಕೈಲಾಸದ ಶಿವನ ಒಡ್ಡೋಲಗದಿಂದ ಭೂಮಿಗಿಳಿದು ಸ್ಥಾವರಲಿಂಗದ ಒಡಲನ್ನು ಭೇದಿಸಿ ಹೊರಬಂದುˌ ಕಾಡಿನಲ್ಲಿದ್ದ ಮುನಿಯೊಬ್ಬನಿಗೆ ಧರ್ಮ ಬೋಧನೆ ಮಾಡಿ ತನ್ನ ಶಾಪವಿಮೋಚನೆ ಮಾಡಿಕೊಂಡು ಮತ್ತೆ ಅಂತರಿಕ್ಷಕ್ಕೆ ಹಾರಿˌ ಶಿವನ ಒಡ್ಡೋಲಗ ಸೇರಿಕೊಳ್ಳುವ ಪವಾಡದ ಸನ್ನಿವೇಶಗಳಲ್ಲಿ ಧರ್ಮ ಸ್ಥಾಪನೆ ಮಾಡಲಿಲ್ಲ.

ಭಾಗ - 12

ಮೈಸೂರು ಒಡೆಯರ್ ಆಡಳಿತದಲ್ಲಿ ತಮಿಳುನಾಡಿದ ಅಯ್ಯಂಗಾರಿ ಶ್ರೀವೈಷ್ಣವರು ರಾಜಗುರುವಾಗುವ ಪರಿಪಾಠ ಬೆಳೆದಂತೆ ವೀರಶೈವವಾದಿ ಶಿವಾಚಾರ್ಯರಿಗೆ ದುಗುಡ ಆರಂಭವಾಯಿತು. ಮೈಸೂರಿನ ಯಜಮಾನ್ ವೀರಸಂಗಪ್ಪನವರು ನ್ಯಾಯಾಲಯದಲ್ಲಿ ಹೋರಾಡುವ ಮೂಲಕ ವೀರಶೈವರರು ಬ್ರಾಹ್ಮಣರ ಸರಿ ಎಂಬ ಶ್ರೇಷ್ಟತೆಯ ವ್ಯಸನಕ್ಕೆ ಬಿದ್ದು ಅದನ್ನು ಪ್ರತಿಪಾದಿಸಿದರು. ಆದರೆ ವೀರಶೈವವನ್ನು ಸಾಮಾಜಿಕವಾಗಿ ಜಾಗ್ರತ ಜನಾಂಗವಾಗಿ ರೂಪಿಸುವಲ್ಲಿ ಸಂತ್ರಪ್ತಿಪಟ್ಟರೆ ಹೊರತು ವೀರಶೈವರಿಗೆ ಹಿಂದೂ ವರ್ಣಶ್ರೇಣಿಯಲ್ಲಿ ಬ್ರಾಹ್ಮಣರ ಸಮಾನವಾದ ಸ್ಥಾನವನ್ನು ದೊರಕಿಸಿ ಕೊಡುವಲ್ಲಿ ವಿಫಲವಾದರು. ವೀರಸಂಗಪ್ಪನವರು ಶ್ರೀವೈಷ್ಣವ ಬ್ರಾಹ್ಮಣರನ್ನು ಗುರಿಯಾಗಿಸಿಕೊಂಡು ವೀರಶೈವರನ್ನು ಜಡ ವೇದೋಪನಿಷತ್ತು ˌ ಆಗಮ ಪುರಾಣಗಳ ವೈದಿಕ ಸಂಪ್ರದಾಯಸ್ಥರನ್ನಾಗಿ ಮಾಡದೆ ಅವರನ್ನು ಚೈತನ್ಯಶಾಲಿ ಲಿಂಗಾಯತರನ್ನಾಗಿ ಮಾಡಲು ಪ್ರಯತ್ನಿಸಿದ್ದರೆ ಸಾಕಿತ್ತು.

ಬ್ರಾಹ್ಮಣರ ಕ್ರೀಯಾಪೂರ್ಣ ಒಪ್ಪಿಗೆ ಇಲ್ಲದೆ ಯಾವನೂ ತ್ರಿವರ್ಣ ಹಿಂದೂ ವ್ಯವಸ್ಥೆಯಲ್ಲಿ ಬ್ರಾಹ್ಮಣ ಸ್ಥಾನ ಪಡೆಯಲು ಸಾಧ್ಯವೇಯಿಲ್ಲ ಎಂಬ ಸತ್ಯ ಅವರು ಮತ್ತು ಅವರ ವೀರಶೈವ ವಿದ್ವಾಂಸ ಪರಿವಾರ ಮನಗಾಣಲಿಲ್ಲ. ಔರಂಗಜೇಬನಂಥ ಬಲಾಢ್ಯ ಚಕ್ರವರ್ತಿಯೊಡನೆ ಸೆಣಸಿದ ಶಿವಾಜಿ ಮಹಾರಾಜನನ್ನು ಕ್ಷತ್ರಿಯನೆಂದು ಮನ್ನಣೆ ನೀಡದ ಬ್ರಾಹ್ಮಣರು ಯಾವ ಕೆಲಸಿಗೂ ಬಾರದ ವೀರಶೈವರಿಗೆ ಬ್ರಾಹ್ಮಣತ್ವ ನೀಡುವುದು ಎಂದಿಗೂ ಅಸಾಧ್ಯ. ವೀರಶೈವರು ಹಿಂದೂಗಳೆಂದು ಗುರುತಿಸಿಕೊಳ್ಳುವುದಾದರೆ ಅವರು ಶೂದ್ರರಾಗಿ ಇರಲು ಯಾರ ಪರವಾನಿಗೆಯೂ ಬೇಕಿಲ್ಲ. ನಾನೊಬ್ಬ ವೀರಶೈವ ಧರ್ಮಪೀಠದ ಜಗದ್ಗುರುವಾಗಿದ್ದರೂ ಹಿಂದೂ ಧರ್ಮದ ದ್ರಷ್ಟಿಯಲ್ಲಿ ನಾನೊಬ್ಬ ಸಾಮಾನ್ಯ ಶೂದ್ರನೇ ಹೊರತು ಬ್ರಾಹ್ಮಣನಾಗಲಿˌ ಅದಕ್ಕೆ ಸರಿಸಮನಾದವನಾಗಲಿ ಆಗಲಾರೆ.

ಭಾಗ - 13

ಬಸವಯುಗದಲ್ಲಿ ಪಶ್ಚಿಮದ ಉಳುವಿಯಿಂದ ಪೂರ್ವದ ಶ್ರೀಶೈಲದ ವರೆಗೆ ಬಸವಣ್ಣನವರ ಹೆಸರು ಹೇಳಿಕೊಂಡು ಸಾಮಾಜಿಕ ನೆಲೆಯಲ್ಲಿ ಸಂಘಟಿತವಾದ ಸಮುದಾಯಿಕ ಜನವರ್ಗವೊಂದು ಹರಡಿಕೊಂಡಿತ್ತು. ಬಸವಣ್ಣನ ಕಾಯಕದಯ್ಯಗಳು ಈ ಪ್ರದೇಶದ ಉದ್ದಗಲಕ್ಕೆ ಪಾಹಿಮಾಮ್ ಶರಣಬಸವˌ ಎಂದು ಉದ್ಗರಿಸುತ್ತ ಭಿಕ್ಷಾಟನೆಗೈಯುತ್ತ ಬಸವಧರ್ಮವನ್ನು ತಳಮಟ್ಟದಲ್ಲಿ ರಕ್ಷಣೆ ಮಾಡಿಕೊಂಡು ಬಂದಿದ್ದರು. ಜುಟ್ಟು ಜನಿವಾರಯುಳ್ಳ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದ ಹೊಲೆ ಹದಿನೆಂಟು ಜಾತಿಯವರಲ್ಲಿ ಭಿಕ್ಷೆ ಬೇಡಿ ಅವರನ್ನು ಬಸವಧರ್ಮದ ಪ್ರಭಾವಕ್ಕೆ ಸಿಲುಕಿಸಿ ಲಿಂಗಾಯತವನ್ನು ಊರಿನ ಸಮಸ್ತ ಜನರ ಧರ್ಮವನ್ನಾಗಿ ಮಾಡಿದ ಶ್ರೇಯಸ್ಸು ಕಾಯಕದ ಜಂಗಮರಿಗೆ ಸಲ್ಲಬೇಕು.

15-16 ಶತಮಾನದಲ್ಲಿ ಶ್ರೀವೈಷ್ಣವ ಆಕ್ರಮಣಕ್ಕೆ ಸಿಕ್ಕು ಬೆಂದು ಲಿಂಗಾಯತ ಧರ್ಮದ ಆಶ್ರಯಪಡೆದ ಪಾಶುಪತˌ ಕಾಳಾಮುಖˌ ತಮಿಳು ಶೈವˌ ತೆಲುಗು ಶ್ರೌತಶೈವರು ಆಚಾರ್ಯರುˌ ಮಾಹೇಶ್ವರರುˌ ಶಿವಾಚಾರ್ಯರೆಂದು ಹೇಳಿಕೊಳ್ಳುತ್ತ ಇಂದು ವೀರಶೈವ ಧರ್ಮ ಪೀಠಸ್ಥರೂˌ ಸ್ಥಿರˌ ಚರ ಪಟ್ಟಾಧ್ಯಕ್ಷರು ಆಗಿ ವೀರಶೈವ ಗುರುಪರಂಪರೆಯನ್ನು ಬೆಳೆಸುತ್ತಿದ್ದಾರೆ.

ಭಾಗ - 14

ವೀರಶೈವರಿಗೆ ನಾನು ಒಂದು ಮಾತು ಸ್ಪಷ್ಟಪಡಿಸುತ್ತೇನೆ :

ಬಸವಣ್ಣನಿಲ್ಲದ ನಿಮ್ಮ ಧರ್ಮಕ್ಕೆ ಏನೂ ಅರ್ಥವಿಲ್ಲ. ಅದು ವೈದಿಕ ಶೈವದ ಒಂದು ಪ್ರಭೇದವೆಂಬ ಅರ್ಥ ಬರುವಂತೆ ಅದನ್ನು ವೀರಶೈವವೆಂದು ಕರೆದುಕೊಳ್ಳುವ ಮೌಢ್ಯವನ್ನು ಬಿಡುವುದು ಒಳಿತು. ವೀರಶೈವವು ಲಿಂಗವಂತರಿಗೆ ಒಂದು ಐತಿಹಾಸಿಕ ಸಂಧುಕಟ್ಟಿನ ಸಂದರ್ಭದಲ್ಲಿ ಉಪಯೋಗಿಸಲಾದ ಪಾರಿಭಾಷಿಕ ಶಬ್ಧವೇ ವಿನಃ ಅದೊಂದು ಸ್ವಯಂ ಸಂಪೂರ್ಣ ಧರ್ಮವಲ್ಲ.

ಅದರ ಪ್ರಾಚೀನ ಮೊಳಕೆಯನ್ನು ಹರಪ್ಪ ಮೊಹಾಂಜದಾರೊ ಉತ್ಖನನದಲ್ಲಿ ದೊರೆತ ಮುದ್ರಿಕೆಗಳ್ಳಲ್ಲಾಗಲಿˌ ವೇದೊಪನಿಷತ್ತು ˌ ಆಗಮ ಪುರಾಣಗಳಲ್ಲಿ ಹುಡುಕುವ ವ್ಯರ್ಥ ಪ್ರಯಾಸ ಮಾಡಬೇಡಿರಿ. ಲಿಂಗಾಯತರಿಗಿರುವ ವೇದೋಪಷತ್ತುಗಳ ನೆಲೆಯನ್ನು ಬ್ರಾಹ್ಮಣನು ಸಮ್ಮತಿಸುವುದಿಲ್ಲ.

ಯಾವ ಹಿಂದೂ ಪವಿತ್ರ ಗ್ರಂಥಗಳಲ್ಲಿ ಏನೇ ಬರೆದಿರಲಿˌ ಯಾವ ಸಾಹಿತ್ಯದಲ್ಲಿ ಏನೇ ಹೇಳಿರಲಿˌ ಒಂದು ಮಾತ್ರ ನಿಶ್ಚಯ : ಬಸವನಿಗಿಂತ ಪೂರ್ವದಲ್ಲಿ ಖಚಿತ ಸಿದ್ಧಾಂತ ಹಾಗು ಪ್ರಾಸ್ಥಾಪಿತ ಸಾಮಾಜಿಕ ಸಂಘಟನೆಯನ್ನು ಹೊಂದಿದ ಲಿಂಗಧಾರಿ ಧಾರ್ಮಿಕ ವ್ಯವಸ್ಥೆ ಎಂದೂ ಇರಲಿಲ್ಲ. ಬಸವಣ್ಣನ ಇಷ್ಟಲಿಂಗದ ಕಲ್ಪನೆಯೇ ಬೇರೆ. ಅದನ್ನು ಬಸವಪೂರ್ವದ ತಪ್ತಮುದ್ರಾ ಲಿಂಗವಾಗಲಿˌ ನಾಭಿˌ ಶಿಖೆಗಳಲ್ಲಿ ಧರಿಸುತ್ತಿದ್ದ ಲಿಂಗವಾಗಿ ಕಲ್ಪಿಸಬಾರದು. ಬಸವಣ್ಣನ ಲಿಂಗವು ನುಡಿಯಲ್ಲಿ ಮಾತ್ರ ಎಚ್ಚತ್ತು ನಡೆಯಲ್ಲಿ ತಪ್ಪಿದರೆ ಘಟಸರ್ಪವಾಗುವಂತ ಆಚಾರ ಶುದ್ಧಿಯ ಸಂಕಲ್ಪಕ್ಕೆ ಪ್ರಮಾಣವಾದದ್ದು. ಅದಕ್ಕಾಗಿ ಬಸವಣ್ಣನ ಲಿಂಗಾಯತದ ಬೇರುಗಳನ್ನು ಬಸವಣ್ಣನಾಚೆಯ ದಿನಗಳಲ್ಲಿ ಹುಡುಕುವ ವೀರಶೈವರ ಕಾರ್ಯ ವ್ಯರ್ಥ ಕಾಲಹರಣವಷ್ಟೆ. ಧರ್ಮವಿಹೀನ ಅವರ್ಣೀಯ ಜನಾಂಗ ಮತ್ತು ಜನಪದೀಯ ಸಮುದಾಯಕ್ಕೆ ಅವರ ಅಧ್ಯಾತ್ಮದ ಹಸಿವನ್ನು ಹಿಂಗಿಸುವುದಕ್ಕಾಗಿ ಕರ್ಮ ಜಂಜಡಗಳಿಂದ ಮುಕ್ತವಾದ ಒಂದು ಸರಳˌ ಅರ್ಥವಾಗುವ ಧರ್ಮವನ್ನು ಬಸವಣ್ಣ ಹುಟ್ಟುಹಾಕಿದ್ದನೆಂಬುದಷ್ಟೇ ನಿಜˌ ಉಳಿದದ್ದೆಲ್ಲ ಸುಳ್ಳು.

ಕೊನೆಯದಾಗಿˌ ಊರ ಶಾನುಭೋಗನೊಬ್ಬ ಸಾಯುವ ಸಂದರ್ಭದಲ್ಲಿ ಊರಿನ ಜನ ಆತನ ಕೊನೆಯ ಆಶೆ ಕೇಳಿದರಂತೆ. ಅದಕ್ಕೆ ಆತ ತಾನು ಸತ್ತ ಮೇಲೆ ತನ್ನ ಶವಸಂಸ್ಕಾರ ಊರ ಮಸೀದಿಯ ಅಂಗಳದಲ್ಲಿ ಮಾಡಬೇಕೆಂದು ಕೇಳಿದನಂತೆ. ಈ ಕಥೆಯ ಸಾರಾಂಶದಂತೆ ಡಾ. ಸೌದತ್ತಿಮಠ ಅವರು ಬದುಕದೆ ಕೊನೆಗಾಲದಲ್ಲಿ ಸತ್ಯವನ್ನು ಹೇಳಿ ಒಬ್ಬ ಬಸವಾನುಯಾಯಿಗಳಾಗಿ ಬದುಕಬೇಕೆಂದು ಬಯಸುತ್ತೇವೆ.

*
Previousಇಕ್ಷುದಂಡಕ್ಕೆ ಕೀಳು ಮೇಲಲ್ಲದೆ . . .ಲಿಂಗಾಯತರು ಶೂದ್ರರೆ?Next
*