ಅಸ್ಮಿತೆಗಳ ಹುಡುಕಾಟ; ರಾಜಕೀಯ ಲೆಕ್ಕಾಚಾರ: ‘ಸ್ವತಂತ್ರ ಲಿಂಗಾಯತ ಧರ್ಮ’ ಯಾಕೆ ಬೇಕು?

ಪರಿವಿಡಿ (index)
*

✍ಪೂಜ್ಯ ಶ್ರೀ ನಿಜಗುಣಾ ಪ್ರಭು, ಮುಂಡರಗಿಯ ತೋಂಟದಾರ್ಯ ಮಠ.

ಕೃಪೆ: ಸಮಾಚಾರ, July 26, 2017

(http://samachara.com/why-lingayaths-need-independent-religion/)

ಒಂದು ದೇಶ ಎಂದರೆ ಹಲವು ಭಾಷೆಗಳು ಹಾಗೂ ರಾಜ್ಯಗಳಿಂದ ಕೂಡಿರುತ್ತದೆ. ಅದೇ ರೀತಿಯಲ್ಲಿ ಹಲವು ಧರ್ಮಗಳೂ ಸೇರಿಕೊಂಡಿರುವ ರಾಷ್ಟ್ರ ಭಾರತ. ಒಂದೇ ಧರ್ಮ ಅಂತ ಭಾರತ ದೇಶದಲ್ಲಿ ಇಲ್ಲ. ಪ್ರಾಚೀನ ಭಾರತದ ಇತಿಹಾಸವನ್ನು ನೋಡುವುದಾದರೆ, ಆರ್ಯರು ಬರುವ ಮೊದಲು ಭಾರತದಲ್ಲಿ ದ್ರಾವಿಡ ಸಂಸ್ಕೃತಿಯನ್ನು ಪಾಲನೆ ಮಾಡಲಾಗುತ್ತಿತ್ತು. ಅವರು (ಆರ್ಯರು) ಬಂದ ನಂತರ ತಾರತಮ್ಯದ ಧರ್ಮ ಆಚರಣೆಗೆ ಬಂತು. ಹೀಗಾಗಿಯೇ ಅದರಿಂದ ಸಿಡಿದೆದ್ದು ಬೌದ್ಧ, ಜೈನ ಧರ್ಮಗಳು ಸ್ಥಾಪನೆಯಾದವು. ವೇದ, ಆಗಮ, ಪುರಾಣಗಳ ವಿರುದ್ಧ ಈ ಹೊಸ ಧರ್ಮಗಳನ್ನು ಸ್ಥಾಪಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಇದರ ವಿರುದ್ಧ ಭಾರತದಿಂದ ಬೌದ್ಧ ಧರ್ಮವನ್ನು ಹೊರಹಾಕಲಾಯಿತು. ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಎಂಬ ಆರ್ಯರು ತಂದ ಚಾತುರ್ವಣ ವ್ಯವಸ್ಥೆಯನ್ನು ಧಿಕ್ಕರಿಸಿದರು.

ಆರ್ಯರ ಆಗಮನಕ್ಕಿಂತ ಮುಂಚೆ ನಮ್ಮಲ್ಲಿ ಶಿವನನ್ನು ಆರಾಧನೆ ಮಾಡಲಾಗುತ್ತಿತ್ತು. ಹಾಗೂ ದ್ರಾವಿಡ ಸಂಸ್ಕೃತಿಯಲ್ಲಿ ಭಾವೈಕ್ಯತೆ ಚೆನ್ನಾಗಿಯೇ ಇತ್ತು. ಅವರು ಬಂದ ನಂತರವೇ ‘ಹರಿ ಸರ್ವೋತ್ತಮ’ ಎಂಬ ಭಾವನೆ ಬಿತ್ತಲಾಯಿತು. ಶಿವನಿಗಿಂತ ಹರಿ ಅಥವಾ ವಿಷ್ಣು ಶ್ರೇಷ್ಠ ಎಂದು ಜನರ ತಲೆಗೆ ತುಂಬಲಾಯಿತು. ಅವರು ನಿಧಾನವಾಗಿ ಶೈವ ಪರಂಪರೆಯನ್ನು ಹತ್ತಿಕ್ಕಿದರು. ವೈದಿಕ ಪರಂಪರೆಯನ್ನು ಆಚರಣೆಗೆ ತಂದರು. ಹೀಗೆ ಇದು ಶತ ಶತಮಾನಗಳ ಕಾಲ ಆಚರಣೆಯಲ್ಲಿರುವಾಗಲೇ 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವಣ್ಣನ ಪ್ರವೇಶವಾಯಿತು.

ತನ್ನ ಎಂಟನೇ ವಯಸ್ಸಿಗೆ ಕೂಡಲಸಂಗಮಕ್ಕೆ ಬಂದ ಬಸವಣ್ಣ ‘ಜಾತಿ ಸರ್ವೋತ್ತಮ’ ಅನ್ನುತ್ತಿದ್ದ ವೈದಿಕ ಪರಂಪರೆಗೆ ವಿರುದ್ಧವಾಗಿ ಮನುಷ್ಯ ಕುಲವೇ ಶ್ರೇಷ್ಠ ಎಂಬ ಧರ್ಮವನ್ನು ಸ್ಥಾಪಿಸಿದರು. ತಮ್ಮ ಅಭ್ಯಾಸದ ಮೂಲಕವೇ ಜ್ಞಾನದ ನೆಲೆಯಲ್ಲಿ ಧರ್ಮವನ್ನು ಹುಟ್ಟುಹಾಕಿದರು. ಅಲ್ಲೀವರೆಗೂ ಜ್ಞಾನವನ್ನು ಒಂದು ವರ್ಗದ ಸ್ವತ್ತನ್ನಾಗಿ ಮಾಡಲಾಗಿತ್ತು. ವೇದಗಳನ್ನು ಕೇಳಿಸಿಕೊಂಡರೆ ಕಿವಿಗೆ ಸೀಸ ಹೊಯ್ಯುವ, ನಾಲಿಗೆ ಕತ್ತರಿಸುವ ಪುರೋಹಿತಶಾಹಿಗಳ ಅನಿಷ್ಠಗಳನ್ನು ಅವರು ವಿರೋಧಿಸಿದರು. ಅದರ ಬದಲಿಗೆ ಅನುಭಾವ ಮಂಟಪವನ್ನು ಸ್ಥಾಪಿಸಿ, ಸರ್ವ ಜನಾಂಗದ ಜನರನ್ನೂ ಒಳಗೊಳ್ಳುವ ಪ್ರಯತ್ನ ಮಾಡಿದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಅಫ್ಘಾನಿಸ್ತಾನದ ಕಡೆಯಿಂದ ಸೂಫಿ ಸಂತರೂ ಕೂಡ ಬಸವಣ್ಣನ ಈ ಹೊಸ ಧರ್ಮ ಹೋರಾಟದ ಭಾಗವಾದರು. ಪ್ರಭು (ರಾಜ) ಪರಂಪರೆ ಪ್ರಧಾನವಾಗಿದ್ದ ಸಮಾಜದಲ್ಲಿ ಪ್ರಜಾಪ್ರಭುತ್ವ ನೆಲೆಯ ಸ್ವತಂತ್ರ ಲಿಂಗಾಯತ ಧರ್ಮ ನೆಲೆ ಕಂಡುಕೊಂಡಿತು. ಆ ಮೂಲಕ ಮಾನವನ ಅಸ್ಮಿತೆಯ ಹುಡುಕಾಟ ಶುರುವಾಯಿತು.

ನೀವು ಕೇಳಬಹುದು, ಬಸವಣ್ಣ ಧರ್ಮವನ್ನು ಸ್ಥಾಪಿಸಿದ್ದರಾ? ಎಂದು. ಬಸವಣ್ಣ ಹೇಳಿದ ಆಚರಣೆಗಳು ಧರ್ಮದ ತಳಹದಿಯನ್ನೇ ಹೊಂದಿದೆ. ಆ ಧರ್ಮದ ಆಚರಣೆಗಳು ಅಷ್ಠಾವರಣವೇ ಅಂಗ, ಪಂಚಾಚಾರವೇ ಪ್ರಾಣ ಹಾಗೂ ಷಟಸ್ಥಳಗಳೇ ಆತ್ಮವಾಗಿ, ಈ ತತ್ವದ ತಳಹದಿಯ ಮೇಲೆ ಅನುಯಾಯಿಗಳಿಗೆ ಶಿಷ್ಟಾಚಾರವನ್ನು ಬೋಧಿಸಿದರು. ಅಷ್ಠಾವರಣ ಎಂದರೆ – ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಮತ್ತು ಪ್ರಸಾದ- ಸ್ವತಂತ್ರ ಧರ್ಮ ಆಚರಿಸುವವರಿಗೆ ನೀಡಲಾದ ಎಂಟು ಆವರಣಗಳು. ಇದರ ನಂತರ ಪಂಚಾಚಾರದ ಹೆಸರಿನಲ್ಲಿ ಐದು ಆಚಾರಗಳನ್ನು ನೀಡಲಾಯಿತು. ಸದಾಚಾರ, ಶಿವಾಚಾರ, ಗಣಾಚಾರ, ಬೃತ್ಯಾಚಾರ, ಲಿಂಗಾಚಾರಗಳನ್ನು ಜನರ ಮುಂದಿಡಲಾಯಿತು. ಇದನ್ನು ಪಾಲನೆ ಮಾಡುವ ವ್ಯವಸ್ಥೆಯನ್ನು ಷಟಸ್ಥಳ (ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ)ಗಳ ಆಧಾರದ ತಮ್ಮನ್ನು ತಾವು ಪೂಜಿಸಿಕೊಳ್ಳುವ ಧರ್ಮವಾಗಿ ಪರಿವರ್ತನೆಗೊಂಡಿತು. ಇವಿಷ್ಟನ್ನು ಪಾಲಿಸಲು ಯಾವ ಪುರೋಹಿತರ ಅಗತ್ಯವೂ ಇಲ್ಲ ಎಂದು ಬಸವಣ್ಣ ಹೇಳಿದರು. ಅವತ್ತಿಗೆ ವೇಶ್ಯರಿಗೂ ಕೂಡ ಧರ್ಮದ ನೆಲೆಯಲ್ಲಿ ಸೂರು ನೀಡಲಾಯಿತು. ಸರ್ವ ಜನಾಂಗದವರಿಗೂ ಆಶ್ರಯ ನೀಡಲಾಯಿತು. ಭಾರತ ದೇಶದ ಭವಿಷ್ಯವನ್ನು ಈ ಧರ್ಮದ ತಳಹದಿಯ ಮೇಲೆ ಕಟ್ಟಲು ಹೋರಾಟ ಪ್ರಾರಂಭವಾಯಿತು.

ಹಾಗೆ ನೋಡಿದರೆ, ಹಿಂದೂ ಎಂಬುದು ಧರ್ಮ ಅಲ್ಲ. ಅದಕ್ಕೆ ಒಂದು ಧರ್ಮ ಗ್ರಂಥ ಎಂಬುದಿಲ್ಲ. ಅದು ಆಚರಣೆ ಅಷ್ಟೆ. ಅದನ್ನು ಸಂಸ್ಕೃತಿ, ಪರಂಪರೆ ಎಂದು ಗುರುತಿಸಬಹುದು. ಅದಕ್ಕೆ ಹೋಲಿಸಿದರೆ ಲಿಂಗಾಯತ ಧರ್ಮಕ್ಕೆ ತನ್ನದೇ ಆದ ಕಟ್ಟಳೆಗಳಿವೆ, ಶಿಷ್ಟಾಚಾರಗಳಿವೆ. ಹೇಗೆ ಬೌದ್ಧ ಧರ್ಮ, ಜೈನ ಧರ್ಮ, ಸಿಖ್‌ ಧರ್ಮಗಳಿಗೆ ಒಂದು ಧಾರ್ಮಿಕ ನೆಲೆ ಇದೆಯೋ, ಹಾಗೆ ಲಿಂಗಾಯತ ಧರ್ಮಕ್ಕೂ ಪ್ರತ್ಯೇಕವಾದ ನೆಲೆಯೊಂದಿದೆ. ವೈದಿಕರು ಕಾಗೆಯನ್ನು ಚಾಂಡಾಳ ಪಕ್ಷಿ ಎಂದು ಕರೆದರೆ, ಬಸವಣ್ಣ ಅದನ್ನು ದಾಸೋಹದ ಪಕ್ಷಿ ಎಂದು ಕರೆದರು. ಕೂಡಿ ಬಾಳುವ ಕಾಗೆಗಳ ಮೌಲ್ಯವನ್ನು ಜನರಿಗೆ ಎತ್ತಿ ತೋರಿಸಿದರು. ಲಿಂಗಾಯತ ಧರ್ಮ ಅಸ್ಪೃಶ್ಯತೆಗೆ ಒಳಗಾದ ಮನುಷ್ಯರನ್ನು ಮಾತ್ರವಲ್ಲ, ಪ್ರಾಣಿ ಪಕ್ಷಿಗಳನ್ನೂ ಸಮಾನವಾಗಿ ಕಂಡಿತು.

12ನೇ ಶತಮಾನದಲ್ಲಿ ಆರಂಭವಾದ ಈ ಧರ್ಮದ ಪ್ರಖರತೆಯನ್ನು ಕಂಡ ವೈದಿಕ, ಸನಾತನವಾದಿಗಳು ಇದರ ವಿರುದ್ಧ ಸಿಡಿದೆದ್ದರು. ಹುನ್ನಾರ ಮಾಡಿದರು. ಬ್ರಾಹ್ಮಣ್ಯದ ಹಿನ್ನೆಲೆಯ ಶೈವ ಪರಂಪರೆಯನ್ನು ಆಚರಣೆ ಮಾಡುತ್ತಿದ್ದ ವೀರಶೈವರು ಲಿಂಗಾಯತ ಧರ್ಮವನ್ನು ಸ್ವೀಕರಿಸಿದರು. ನಿಧಾನವಾಗಿ ಶೈವಾಚರಣೆಗಳು ಲಿಂಗಾಯತ ಧರ್ಮದ ಆಚರಣೆಗಳ ಮೇಲೆ ಹೇರಲ್ಪಟ್ಟವು. ಇದು ಮುಂದಿನ ಮೂರ್ನಾಲ್ಕು ಶತಮಾನಗಳ ಕಾಲ ನಡೆದುಕೊಂಡು ಬಂತು. ಹೀಗಾಗಿ 15ನೇ ಶತಮಾನದ ಹೊತ್ತಿಗೆ ಲಿಂಗಾಯತ ಧರ್ಮದ ಕುರುಹು ಅಳಿಸಿ ಹೋಗುವ ಮಟ್ಟಕ್ಕೆ ಬಂತು.

ಆದರೆ ತೋಂಟದ ಯಡಿಯೂರು ಸಿದ್ದಲಿಂಗೇಶ್ವರರು ಮತ್ತೆ ಲಿಂಗಾಯತ ಧರ್ಮದ ಅಸ್ಮಿತೆಯನ್ನು ಹುಡುಕುವ ಪ್ರಯತ್ನ ಆರಂಭಿಸಿದರು. ತಮ್ಮ 700 ಜನ ಅನುಯಾಯಿಗಳ ಜತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದರು. ವಿರಕ್ತ ಮಠಗಳನ್ನು ಸ್ಥಾಪಿಸಿದರು. ಶೈವ ಪರಂಪರೆಯನ್ನು ಮುಂದಿಟ್ಟು ಪೂಜೆ ಪುನಸ್ಕಾರಗಳನ್ನು ತಮ್ಮ ಉದರ ಪೋಷಣೆಗಾಗಿ ಶುರುಮಾಡಿದವರ ಹುನ್ನಾರಗಳನ್ನು ಜನರಿಗೆ ತಿಳಿಸುವ ಕೆಲಸ ಶುರುಮಾಡಿದರು. ಹಾಗೆ ನೋಡಿದರೆ ಸ್ವತಂತ್ರ ಲಿಂಗಾಯತ ಧರ್ಮದ ಬಗ್ಗೆ ಪುನರ್‌ಮನನ ಆರಂಭವಾಗಿ ಸಾಕಷ್ಟು ವರ್ಷಗಳೇ ಕಳೆದಿವೆ.

60-70ರ ದಶಕಗಳಲ್ಲಿ ಈ ಕುರಿತು ಕೆಲಸ ಭರದಿಂದ ಸಾಗಿತು. ಪಕ್ಕೀರಪ್ಪ ಹಳಕಟ್ಟಿ ಅವರ ವಚನ ಸಂಗ್ರಹ ಈ ನಿಟ್ಟಿನಲ್ಲಿ ನಡೆದ ಮಹತ್ವದ ಕೆಲಸ. ಕರ್ನಾಟಕ ವಿಶ್ವವಿದ್ಯಾಲಯ ತಂದ ವಚನಗಳ ಸಂಪುಟವೂ ಈ ದಾರಿಯಲ್ಲಿ ಬೆಳಕು ಚೆಲ್ಲಿತು. ಕೊಲೆಗೀಡಾದ ಎಂ. ಎಂ. ಕಲ್ಬುರ್ಗಿ ಅವರು ಲಿಂಗಾಯತ ಸ್ವತಂತ್ರ ಧರ್ಮ ಎಂದು ಪ್ರತಿಪಾದಿಸಲು ಬೇಕಾದ ಅಸ್ತ್ರಗಳನ್ನು ತಯಾರು ಮಾಡುತ್ತಿದ್ದರು. ಅವರ ಸಂಶೋಧನೆ ಒಂದು ತಾರ್ಕಿತ ಅಂತ್ಯಕ್ಕೆ ತಲುಪಿತ್ತು. ಇವತ್ತು ಅವರ ಬದುಕಿದ್ದರೆ, ಸದ್ಯ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗೆ ಹೊಸ ಮೆರುಗು ಬರುತ್ತಿತ್ತು.

ಉಡುಪಿ ಮಠದ ಪೇಜಾವರ ಶ್ರೀಗಳು ಲಿಂಗಾಯತರು ಹಿಂದೂ ಧರ್ಮ ಬಿಟ್ಟು ಹೋಗಬಾರದು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಅವರು ಹಿರಿಯರು. ಲಿಂಗಾಯತ ಧರ್ಮದ ಬಗ್ಗೆ ಅವರಿಗೆ ಮಾಹಿತಿ ಕೊರತೆ ಇದ್ದಂತಿದೆ. ಅವರಲ್ಲಿ ನಾನು ಕೋರಿಕೊಳ್ಳುವುದು ಇಷ್ಟೆ, ಅವರ ಮತಾಚಾರ್ಯರಲ್ಲೇ ತಾತ್ವಿಕ ಭಿನ್ನಾಭಿಪ್ರಾಯಗಳಿವೆ. ಹೀಗಾಗಿ, ಅವರಿಂದ ಕಲಿಯುವ ಅವಶ್ಯಕತೆ ನಮಗಿಲ್ಲ.

ಇನ್ನು, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಸ್ಥಾನಮಾನ ನೀಡುವ ಹಿನ್ನೆಲೆಯಲ್ಲಿ ರಾಜಕೀಯ ನಡೆಯುತ್ತಿದೆ ಎನ್ನುತ್ತಿದ್ದಾರೆ. ಹಾಗೆ ನೋಡಿದರೆ, ಇದರಿಂದ ರಾಜಕೀಯದವರಿಗೆ ಲಾಭವಾಗುವುದಿಲ್ಲ. ಲಿಂಗಾಯತ ಧರ್ಮದ ಪುನರ್‌ ಸ್ಥಾಪನೆಗಾಗಿ ದೊಡ್ಡ ಹೋರಾಟ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗಲ್ಲದಿದ್ದರೂ ಭವಿಷ್ಯದಲ್ಲಾದರೂ ಅದು ನೆರವೇರಲೇಬೇಕು. ರಾಜಕಾರಣಿಗಳು ಇದರಿಂದ ಲಾಭ ಆಗುತ್ತದೆ ಎಂದು ಅಂದುಕೊಂಡಿದ್ದರೆ ಅದು ಭ್ರಮೆ ಅಷ್ಟೆ.

ಅಂತಿಮವಾಗಿ ಹಿಂದೂ ಸನಾತನ ಮತದ ನೆರಳಿನಿಂದ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ ಹೊರಬರಬೇಕು. ಮನುಷ್ಯ ಕುಲವನ್ನು ಯಾವುದೇ ಭೇದ ಭಾವ ಇಲ್ಲದೆ ಪ್ರೀತಿಸುವ ಅವರ ಆಶಯವನ್ನು ನಾವು ಜೀವಂತವಾಗಿಡಬೇಕು. ಪ್ರಜಾಪ್ರಭುತ್ವದ ನೆಲೆಯಲ್ಲಿ ಹುಟ್ಟಿದ ಧರ್ಮದ ನೆರಳಿನಲ್ಲಿ ನಾವು ಮಾನವೀಯತೆಯ ಅಸ್ಮಿತೆಗಳನ್ನು ಹುಡುಕಬೇಕು. ಅದು ಈ ಕಾಲದ ಅಗತ್ಯ ಮತ್ತು ಅನಿವಾರ್ಯತೆ.

*
Previousವೀರಶೈವರು ಹಿಂದೂಗಳೇ ಆದರೆ ಲಿಂಗಾಯತರು ಹಿಂದೂಗಳಲ್ಲಲಿಂಗಾಯತ ಧರ್ಮದಲ್ಲಿ ಏನುಂಟು ಏನಿಲ್ಲNext
*