ಲಿಂಗಾಯತ ಹಿಂದೂ ಧರ್ಮದ ಅಂಗವಲ್ಲ

*

By ಎಸ್.ಎಮ್.ಜಾಮದಾರ್ on January 22, 2018

ಅವರು ಕರ್ನಾಟಕ ಕಂಡ ಅತ್ಯುತ್ತಮ ಐ.ಎ.ಎಸ್. ಅಧಿಕಾರಿಗಳಲ್ಲಿ ಒಬ್ಬರು.ವೀರಶೈವ-ಲಿಂಗಾಯತ ಚರ್ಚೆಯಲ್ಲಿ ಅವರು ಲಿಂಗಾಯತ ಹಿಂದೂ ಧರ್ಮದ ಅಂಗವಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಅವರ ವಿಚಾರಗಳನ್ನು ಓದುಗರ ಮುಂದಿಡಲು ಸಮಾಜಮುಖಿಯು ಅವರೊಡನೆ ನಡೆಸಿದ ಚರ್ಚೆಯ ಆಯ್ದಭಾಗಗಳು ಇಲ್ಲಿವೆ. ಸಂದರ್ಶನದ ಪೂರ್ಣ ವಿಡಿಯೋ ಸಮಾಜಮುಖಿಯ ಅಂತರ್ಜಾಲತಾಣದಲ್ಲಿ ಲಭ್ಯವಿದೆ.

ಶಾಸ್ತ್ರೀಯವಾಗಿಯೇ ಲಿಂಗಾಯತರು ಹಿಂದೂ ಧರ್ಮದ ಭಾಗವಲ್ಲ, ಅದೊಂದು ಸ್ವತಂತ್ರಧರ್ಮವೆಂದು ಸಿದ್ಧಪಡಿಸಲು ಸೂಕ್ತ ಬೌದ್ಧಿಕ ಸಾಮಗ್ರಿ ಲಭ್ಯವಿದೆ ಎಂದು ತಾವು ಬರೆದಿದ್ದೀರಿ. ಇದನ್ನು ವಿಸ್ತರಿಸಿ, ವಿಶ್ಲೇಷಿಸುತ್ತೀರಾ.

ಮೊದಲನೇದಾಗಿ ಸ್ವತಂತ್ರ ಧರ್ಮ ಆಗಬೇಕಾಗಿದ್ದು ಅಂದ್ರೆ ಪ್ರತಿ ಧರ್ಮಕ್ಕೆ ತನ್ನದೇ ಆದಂಥ ಧರ್ಮ ಅನ್ನುವುದರ ಅರ್ಥ, ವ್ಯಾಖ್ಯಾನ ಏನಿದೆ, ಅದರ ಪರಿಮಿತಿಯ ಒಳಗಡೆ, ಆ ವ್ಯಾಖ್ಯಾನದಲ್ಲಿ ಬರತಕ್ಕಂಥ ಏನು ಲಕ್ಷಣಗಳಿವೆ ಅವನ್ನ ನೋಡಬೇಕಾಗುತ್ತದೆ. ಧರ್ಮ ಅಂದರೆ ದೇವರು, ಮನುಷ್ಯ ಮತ್ತು ದೇವರ ನಡುವಿನ ಸಂಬಂಧ, ಮನುಷ್ಯ ಮತ್ತು ಸಮಾಜದ ನಡುವಿನ ಸಂಬಂಧ, ಮನುಷ್ಯರಲ್ಲಿ ಹೆಣ್ಣುಗಂಡಿನ ನಡುವಿನ ಸಂಬಂಧದ ಕುರಿತ ವ್ಯಾಖ್ಯಾನಗಳು ಏನಿವೆ ಇವುಗಳನ್ನು ನಾವು ರಿಲೀಜನ್ ಅಂತ ಹೇಳ್ತೀವಿ. ಹೀಗಿರುವಾಗ ಲಿಂಗಾಯತದಲ್ಲಿ ಇವೆಲ್ಲ ಅಂಶಗಳೂ ಇವೆ.

ಜೊತೆಗೆ ಪ್ರತಿಯೊಂದು ಧರ್ಮಕ್ಕೆ ಅದರದ್ದೇ ಆದ ಸಂಸ್ಥಾಪಕ ಇರ್ತಾರೆ. ಪ್ರತಿಯೊಂದು ಧರ್ಮಕ್ಕೆ ತನ್ನದೇ ಆದಂಥ ಧರ್ಮದ ಶಿಷ್ಟಾಚಾರಗಳಿರುತ್ತವೆ, ಆಚರಣೆಗಳಿರುತ್ತವೆ. ಸಂಪ್ರದಾಯಗಳಿರುತ್ತವೆ. ಈ ಎಲ್ಲ ದೃಷ್ಟಿಯಿಂದ ನೋಡಿದರೆ ಲಿಂಗಾಯತರಲ್ಲಿ ಇವೆಲ್ಲವೂ ಇದೆ. ನಾವು ಸಾಮಾನ್ಯವಾಗಿ ಹೇಳ್ತಾ ಇರೋದು ಏನಂದ್ರೆ, 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ್ರು ಅಂತ. ಇದೇ ವಿಷಯದಲ್ಲೇನೇ ಬಹಳಷ್ಟು ಈ ವೀರಶೈವರು ಅನ್ನುವ ಭೇದ ಏನಿದೆ ಪ್ರಭೇದ ಏನಿದೆ ಅಥವಾ ಪ್ರತ್ಯೇಕ ಧರ್ಮ ಇದೆ ಅಂದ್ಕೊಂಡೂ ತಪ್ಪಾಗಲಿಕ್ಕಿಲ್ಲ, ಅದು ಮತ್ತು ಲಿಂಗಾಯತ ಇವೆರಡರ ನಡುವೆ ಇತ್ತೀಚೆಗೆ ಸುಮಾರು ಒಂದೈನೂರು ವರ್ಷಗಳು ಅಂತಿಟ್ಕೊಳ್ಳೋಣ, ಈ ಐನೂರು ವರ್ಷಗಳಿಂದ ಈ ವಿವಾದ ಬಹಳ ಪ್ರಚಲಿತದಲ್ಲಿದೆ.

ಲಿಂಗಾಯತ ಧರ್ಮಕ್ಕೆ ತನ್ನದೇ ಆದಂಥ ಒಂದು ಸ್ವಾತಂತ್ರ್ಯವನ್ನ ಮಾನ್ಯತೆಯನ್ನ ಕೊಡ್ಬೇಕು, ಪ್ರತ್ಯೇಕತೆಯನ್ನ ಸರ್ಕಾರ ಮಾಡಬೇಕು ಅನ್ನುವಂಥ ಹೋರಾಟ ಇತ್ತೀಚಿನದಲ್ಲ. ಇದು ಕಳೆದ ನಲವತ್ತು ನಲವತ್ತೈದು ವರ್ಷಗಳ ಹಿಂದಿನಿಂದಲೂ ನಡೀತಿದೆ. 1947ರಲ್ಲೇನೇ ಈ ಹೋರಾಟ ಪ್ರಾರಂಭ ಆಯ್ತು. ಈ ಪ್ರತ್ಯೇಕತೆ ಹೋರಾಟ ಶುರುವಾದದ್ದು ಕ್ರಿಪ್ಸ್ ಮಿಷನ್ ಬಂದಾಗ. ಆವಾಗ, ಮಹಾರಾಷ್ಟ್ರ, ಕರ್ನಾಟಕ, ತಮಿಳ್ನಾಡಲ್ಲಿದ್ದಂಥ ಆಗಿನ ಲಿಂಗಾಯತ ಸಮುದಾಯದ ಎಲ್ಲ ಮುಖಂಡರು ಸೇರಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾರೆ. ಲಿಂಗಾಯತರು ಹಿಂದೂಗಳಲ್ಲ, ಲಿಂಗಾಯತ ಪ್ರತ್ಯೇಕ ಧರ್ಮ, ಆದ್ದರಿಂದ ಇದಕ್ಕೆ ಮಾನ್ಯತೆ ಕೊಡ್ಬೇಕು.

ಅಲ್ಲದೆ ಕಾನ್ಸ್ಟಿಟ್ಯೂಟ್ ಅಸೆಂಬ್ಲಿ ಸಂಘಟಿಸಿದಾಗ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕವಾಗಿ, ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಸ್ಥಾನಗಳನ್ನು ಕೊಡಬೇಕು ಅನ್ನುವಂಥ ಮನವಿಯನ್ನ ಕೊಟ್ಟಿದ್ವಿ. ಅದು 47ರಲ್ಲಿ. ಈ 70 ವರ್ಷದ ಇತಿಹಾಸದಲ್ಲಿ, ಬಹಳ ಪ್ರಮುಖವಾಗಿ ಇದು ಚರ್ಚೆಗೆ ಬಂದದ್ದು ಇತ್ತೀಚೆಗೆ. ಅದಕ್ಕೆ ಬಹಳ ಕಾರಣಗಳಿವೆ. ಆದ್ದರಿಂದ ಇತ್ತೀಚಿನ ಹೋರಾಟ ಅನ್ನೋದು ತಪ್ಪಾಗುತ್ತೆ. ಎರಡನೇದಾಗಿ, ಇದಕ್ಕೆ ರೂಪ ಬರಬೇಕಾದ್ರೆ ಏನಾಯ್ತೆಂದರೆ, ಮಾನ್ಯ ಸಿದ್ದರಾಮಯ್ಯನವರಿಗೆ ಒಂದು ಮನವಿ ಕೊಟ್ಟೆವು. ಸ್ವತಂತ್ರ ಆದ್ಮೇಲೆ ಯಾರೂ ಇಂತದೊಂದು ಮನವಿಯನ್ನು ಕೊಟ್ಟಿರಲಿಲ್ಲ. ಇದು ಚರ್ಚೆ ಆಗ್ತಿರಲಿಲ್ಲ. ಯಾಕೆ ಚರ್ಚೆ ಪ್ರಾರಂಭ ಆಯ್ತು ಅಂದ್ರೆ ಲಿಂಗಾಯತರಲ್ಲೇ ಒಂದು ಗುಂಪು, ವೀರಶೈವರಿಗೆ ಸೇರಿದ ಗುಂಪು ಪ್ರೆಸ್ ಕಾನ್ಫರೆನ್ಸ್ ಕರೆದು ಒಂದು ಹೇಳಿಕೆ ಕೊಟ್ಟುಬಿಟ್ರು. ನಾವು ಹಿಂದೂಗಳು. ಲಿಂಗಾಯತ ಧರ್ಮ ಹೇಗೆ ಪ್ರತ್ಯೇಕ ಆಗತ್ತೆ ಅಂದ್ಕೊಂಡು. ಆ ಪತ್ರಿಕಾ ಗೋಷ್ಠಿಯಲ್ಲಿ ಅವರು ಒಂದು ಲೇಖನವನ್ನ ಹಂಚಿದರು. ಆ ಸಭೆಯಲ್ಲಿ ನಾನು ಭಾಗವಹಿಸಿರಲಿಲ್ಲ. ನನ್ನ ಅವರ ನಡುವಿನ ಸೈದ್ಧಾಂತಿಕ ನಿಲುವಿಗೆ ಸರಿಹೋದದ್ದಾಗಿರಲಿಲ್ಲ. ಆದ್ರೆ ಚಿದಾನಂದಮೂರ್ತಿಗಳು ಬರೆದ್ರಲ್ಲ, ನನಗೆ ಬಹಳಷ್ಟು ಮಾನಸಿಕವಾದ ಉದ್ವೇಗ ಉಂಟಾದಾಗ ಅದರ ವಿರುದ್ಧವಾಗಿ ಒಂದು ಲೇಖನ ಬರೆದೆ. ಅದೇ ಲೇಖನ ಅದು. ಅದಾದ ಮೇಲೆ ಮತ್ತೆ ಬರೆದರು ಅವರು. ಅದಕ್ಕೆ ನಾನು 21 ಪುಟಗಳ ಒಂದು ಲೇಖನವನ್ನ 16 ಜರ್ನಲ್‍ಗಳಲ್ಲಿ ಏಕಕಾಲಕ್ಕೇ ಅದು ಬಂದುಬಿಟ್ಟಿತು. ಅದರಿಂದ ಬಹಳ ಪ್ರಚಾರ ಆಯ್ತು. ಅದು ಸ್ವಲ್ಪ ರಾಜಕೀಯ ಸ್ವರೂಪ ಪಡೆಯಿತು.

ಆವಾಗ ಈ ಕಾಂಗ್ರೆಸ್ ಪಕ್ಷದಿಂದ ಕೆಲವು ಮಂತ್ರಿಗಳು, ಕೆಲವು ಶಾಸಕರು ಎಲ್ಲಾ ಪಕ್ಷಗಳ, ಎಲ್ಲಾ ಸ್ವಾಮಿಗಳ ಅಭಿಪ್ರಾಯವನ್ನ ತಗೊಳ್ಳಬೇಕು ಅಂತ ಸಭೆಯನ್ನ ಕರೆದ್ರು. ಸಭೆಯನ್ನ ಕರೆದಾಗ ನಾನು ಬರೆದ ವಿಚಾರಗಳನ್ನ ಹಂಚಿಕೊಳ್ಳಬೇಕೆಂದು ಕೇಳಿದರು. ನನಗೆ ಸ್ವಲ್ಪ ಮುಜುಗರ ಆದರೂ ಕೂಡ ಹೂಂ ಅಂದೆ. ಅದಾದ ಮೇಲಿನ ರ್ಯಾಲಿಗಳಲ್ಲಿ ಏನಾಯ್ತು, ನಾನು ಹೇಳಿದ್ದು ಇದು ಹಿಂದೂ ಧರ್ಮ ಅಲ್ಲ, ಅದರಿಂದ ಭಿನ್ನವದ್ದು, ವಿರುದ್ಧವಾದ್ದು ಎಂದು ಹೇಳಿಲ್ಲ ನಾನೆಲ್ಲೂ. ಭಿನ್ನವಾದ್ದು ಎಂದು ಹೇಳಿದ್ದೆ. ಎರಡನೇದ್ದು, ವೀರಶೈವ, ಲಿಂಗಾಯತ ಬೇರೆ ಬೇರೆ ಅನ್ನುವುದನ್ನೂ ಹೇಳಿದ್ದೆ.

ನನ್ನ ಅಭಿಪ್ರಾಯದಲ್ಲಿ ಈ ಹೋರಾಟ ಈಗ ಒಂದು ದೃಷ್ಟಿಯಲ್ಲಿ ಒಂದು ರಾಷ್ಟ್ರೀಯ ಪಕ್ಷದ ಜೊತೆ ಉಳಕೊಂಡಿಲ್ಲ. ಉಳಿದೆರಡು ಮೂರು ಪಕ್ಷಗಳು ಕೂಡಿಕೊಂಡಿದೆ. ಅಷ್ಟೇ ಅಲ್ಲ, ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿ ಎಲ್ಲಾ ಪಕ್ಷಗಳು ಕೂಡಿಕೊಂಡಿವೆ. ಅದು ಬಹಳ ವಿಶೇಷವಾದ್ದು. ಕೇವಲ ರಾಜ್ಯಮಟ್ಟದಲ್ಲಿ ರಾಜಕೀಯ ಉದ್ದೇಶಕ್ಕೋಸ್ಕರ ಅವರು ಉಳಕೊಂಡಿಲ್ಲ ಅಂದ್ರು ಕೂಡ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಎಲ್ರೂ ಭಾಗವಹಿಸಿದ್ದಾರೆ. ಈಗೇನಾಗಿದೆ, ರಾಜಕೀಯವಾಗಿ ಉಳಿದಿಲ್ಲ. ಈಗೊಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿದೆ.

ಮತ್ತೊಂದು ಅಂಶವನ್ನು ಇಲ್ಲಿ ಗಮನಿಸಬೇಕು. 1871ರ ಮೈಸೂರು ಸಂಸ್ಥಾನದಲ್ಲಿ ನಡೆದುದನ್ನು. ಅಲ್ಲಿ ಲಿಂಗಾಯತವನ್ನು ಹಿಂದೂ ಧರ್ಮದಲ್ಲಿ ಗುರುತಿಸಿರಲಿಲ್ಲ. ಹಿಂದೂಧರ್ಮದ ನೆಲೆಗಟ್ಟಲ್ಲಿ ಸ್ಪಷ್ಟವಾಗಿ ಅವರು ನಾಲ್ಕು ಚಾತುರ್ವರ್ಣಗಳನ್ನ ಪ್ರಕಟಿಸಿದ್ದಾರೆ. ಅದರಲ್ಲಿ ಲಿಂಗಾಯತ ಸೇರಿಸಿಲ್ಲ. ಲಿಂಗಾಯತವನ್ನು ಪ್ರತ್ಯೇಕವಾಗಿ ಗುರುತಿಸಿದ್ದಾರೆ. ಅಂದ್ರೆ ಇದು ಪ್ರತ್ಯೇಕ ಧರ್ಮ ಅನ್ನುವುದಕ್ಕೆ ಒಂದು ರಾಜಕೀಯ ಅಥವಾ ಆಡಳಿತಾತ್ಮಕ ದಾಖಲೆ. ಮುಂದೆ 1881ರ ಸೆನ್ಸಸ್ ಮಾಡುವ ಕಾಲದಲ್ಲಿ ಇದ್ದವರು ಸಿ.ರಂಗಾಚಾರ್ ಅವರು ದಿವಾನರು. ಅವರ ಬಯಾಗ್ರಫಿನ್ನ ನೋಡಿದಾಗ ಗೊತ್ತಾಗತ್ತೆ. ಅವ್ರು ಯಾವ್ಯಾವುದೋ ಕಾರಣಕ್ಕಾಗಿ ಪೂರ್ವಾಗ್ರಹ ಪೀಡಿತರಾಗಿದ್ದರು. ಲಿಂಗಾಯತ ಸಮುದಾಯದೊಂದಿಗೆ ತಿಕ್ಕಾಟ ಕೂಡ ಮಾಡಿದ್ರು. ಮುಂದೆ ದಿವಾನರಾಗಿ ಬಂದಾಗ ಸೆನ್ಸಸ್ ಮಾಡಿದ್ದು ಅವರೇ. ಅದರ ಪೂರ್ಣಮಾಹಿತಿ ಕಲೆಕ್ಟ್ ಮಾಡಿದವರು. ಅವರು ರಿಪೋರ್ಟ್ ಬರೆಯಬೇಕಿತ್ತು. ಆದ್ರೆ ತೀರಿಹೋಗಿಬಿಟ್ರು. ಆಗ ಲೆವಿಸ್ ರೈಸ್ ಅನ್ನುವವರು ಅದನ್ನು ಬರೆಯುತ್ತಾರೆ. ರಂಗಾಚಾರ್ಲು ಅವರ ಕಾಲದಲ್ಲಿ ಸಂಗ್ರಹಿಸಿದ ಮಾಹಿತಿ ಪ್ರಚೋದನಕಾರಿಯಾಗಿತ್ತು. ಏನು ಮಾಡಿದ್ರು ಅಂದ್ರೆ ಹಿಂದೆ 1871ನೇ ಇವಿನಲ್ಲಿ 22 ಲಿಂಗಾಯತ ಉಪಜಾತಿ ಇತ್ತು. ಅವ್ರೆಲ್ಲ ಲಿಂಗಾಯತರು ಅಂತ ಸಪರೇಟ್ ಆಗಿದ್ರು. 1881ನಲ್ಲಿ ಆ ಉಪಜಾತಿಗಳನ್ನ ಹಿಂದೂದಲ್ಲಿ ಸೇರಿಸಿಬಿಟ್ರು. ಅಂದ್ರೆ ಆವಾಗ ಲಿಂಗಾಯತ ಸಪರೇಟ್ ಆಗ್ಲೇ ಇಲ್ಲ. ಎರಡನೇದು, ಲಿಂಗಾಯತ ಜಾತಿಯಲ್ಲಿಯ ಆರು ಉಪಜಾತಿಗಳನ್ನ ಶೂದ್ರರೊಂದಿಗೆ ಸೇರಿಸಿಬಿಟ್ರು.

ಇದಕ್ಕೆ ಮೈಸೂರಿನ ಲಿಂಗಾಯತ ಸಮುದಾಯದಲ್ಲಿ ಕೋಲಾಹಲ ನಡೆಯಿತು. ಆಗ ಹುಟ್ಟಿಕೊಂಡಿದ್ದು ಮೈಸೂರ್ ಸ್ಟಾರ್ ಪತ್ರಿಕೆ. ಇವರು ಲಿಂಗಾಯತರನ್ನು ಹಿಂದೂ ಧರ್ಮದಲ್ಲಿ ಸೇರಿಸಿದ್ದು ತಪ್ಪು. ಸೇರಿಸಿದರೂ ಬ್ರಾಹ್ಮಣರಲ್ಲಿ ಸೇರಿಸಬೇಕಿತ್ತು ಶೂದ್ರರಲ್ಲಿ ಸೇರಿಸಿದ್ದು ತಪ್ಪು ಅಂತ ಹೋರಾಟ ಆರಂಭವಾಯಿತು. ಆವಾಗ ಮಹಾರಾಜರ ಹತ್ರ ಇವರು ಮನವಿ ಕೊಟ್ಟರು. ನಾವು ವೀರಮಾಹೇಶ್ವರ ಬ್ರಾಹ್ಮಣರು. ಅದೂ ಒಂದು, ಈಗ ನಡೀತಾ ಇರೋದ್ರ ಹಿನ್ನೆಲೆ. ನಾವು ವೀರಮಾಹೇಶ್ವರ ಬ್ರಾಹ್ಮಣರು ಅಂತ ಪರಿಗಣನೆ ಮಾಡ್ಬೇಕು ಅಥವಾ ಬ್ರಾಹ್ಮಣರು ಅಂತ ಪರಿಗಣನೆ ಮಾಡ್ಬೇಕು. ಶೂದ್ರರು ಅಂತಲ್ಲ. ಇಲ್ಲಿ ಹೋರಾಟ ಲಿಂಗಾಯತರದು ನಡೀತಾ ಇರುವಾಗ ಅಲ್ಲಿ ಶುಭೋದಯ ಅಂತ ಪತ್ರಿಕೆ ಬರ್ತಿತ್ತು. ಬ್ರಾಹ್ಮಣರ ಪತ್ರಿಕೆ. ಅಲ್ಲಿ ಬ್ರಾಹ್ಮಣರೆಲ್ಲ ಸಂಘಟಿತರಾಗಿ ಇವ್ರ ವಿರುದ್ಧ ಹೋರಾಟ ಮಾಡಿದ್ರು. ನಿಮ್ಮಲ್ಲಿ ದಲಿತರಿದ್ದಾರೆ, ನಿಮ್ಮಲ್ಲಿ ಅನ್‍ಟಚೇಬಲ್ಸ್ ಇದ್ದಾರೆ. ನಿಮ್ಮಲ್ಲಿ ಗಾಣಿಗರು, ಪತ್ತಾರರು, ಕುಂಬಾರರು, ಕಮ್ಮಾರರು, ಮಾದಿಗರೆಲ್ಲ ಇದ್ದಾರೆ. ನೀವು ಹೇಗೆ ಬ್ರಾಹ್ಮಣರಾಗ್ತೀರಿ? ಅವ್ರನ್ನ ಸೇರಿಸಿಕೊಂಡ್ರೆ ನಾವು ವಿರೋಧ ಮಾಡ್ತೀವಿ ಅಂತ ಬ್ರಾಹ್ಮಣರ ಹೋರಾಟ ಆರಂಭವಾಯ್ತು. ಈ ಎರಡು ಹೋರಾಟವನ್ನ ಹೇಗೆ ಬಗೆಹರಿಸಬೇಕು ಅನ್ನೋ ಪ್ರಶ್ನೆ ಮಹಾರಾಜರಿಗೆ ಎದುರಾದಾಗ ಮಹಾರಾಜರು ತೀರ್ಮಾನ ಕೊಡ್ತಾರೆ. ಆ ತೀರ್ಮಾನ ಇವರು (ಮೈಸೂರು ಲಿಂಗಾಯತರು) ಒಪ್ಕೊಳ್ಳಲ್ಲ. ಮಹಾರಾಜರು ಸಪರೇಟ್ ಮಾಡ್ಬೇಕು ಅಂತ ಹೇಳಿದ್ರೂ ಕೂಡ ಈ ಮೈಸೂರಿನ ಆಗಿನ ಲಿಂಗಾಯತರು ವೀರಶೈವ ಆಗ್ಬೇಕು, ವೀರಶೈವ ಬ್ರಾಹ್ಮಣರಾಗ್ಬೇಕು ಅನ್ನೋ ಹುಚ್ಚು ಕಲ್ಪನೆಯಿಂದ ಮಹಾರಾಜರ ಮಾತನ್ನ ಒಪ್ಕೊಳ್ಳದೇ ಇದ್ದಿದ್ದಕ್ಕೆ ಮಹಾರಾಜರು ಅದಕ್ಕೆ ಬ್ರಾಹ್ಮಣರು ಅಂತ ನೀವು ಬರ್ಕೊಳ್ಬಹುದು, ಆದ್ರೆ ಬ್ರಾಹ್ಮಣರು ಅಂತ ಪರಿಗಣನೆ ಮಾಡುವುದಕ್ಕಾಗಲ್ಲ ಅಂತ ತೀರ್ಮಾನ ಕೊಟ್ರು. ಅದರಿಂದ ಲಿಂಗಾಯತರು 1931ರವರೆಗೆ ಶೂದ್ರರಾಗೇ ಮುಂದುವರಿದ್ರು. ಬ್ರಾಹ್ಮಣರು ಅಂತ ಬರೀಬಹುದು, ಆದ್ರೆ ಕನ್ಸಿಡರ್ ಮಾಡಲಿಲ್ಲ. ಇವರು ಬ್ರಾಹ್ಮಣರೂ ಆಗಲಿಲ್ಲ, ವೈಶ್ಯರೂ ಆಗಲಿಲ್ಲ, ಕ್ಷತ್ರಿಯರೂ ಆಗಲಿಲ್ಲ. ಶೂದ್ರರಾಗಿ ಮುಂದುವರಿದ್ರು. ಇದು ವೀರಶೈವರೇ ಹುಟ್ಟಿಸಿದಂಥದ್ದು. ವೀರಶೈವ ಅನ್ನುವಂಥ ಪ್ರಭೇದದ ಒಂದು ಹಿಡಿತ, ಒಂದು ವಾದ, ಒಂದು ಪರಿಗಣನೆ, 1881ರಿಂದ ಮೈಸೂರಿನಲ್ಲಿ ಮೈಸೂರಿಗರಿಂದ ಮಹಾರಾಜರ ತೀರ್ಮಾನವನ್ನ ಒಪ್ಪಲಾರದೆ ತಿರಸ್ಕರಿಸಿದ ಪರಿಣಾಮ ನಾವಿವತ್ತು ಎದುರಿಸ್ತಾ ಇದ್ದೀವಿ. ಇದು ಮುಂದುವರಿದು 91ರ ಸೆನ್ಸಸ್‍ನಲ್ಲಿ ಹಾಗೇ ಆಯ್ತು. ಮುಂದೆ 2001ನೇ ಸೆನ್ಸಸ್‍ನಲ್ಲಿ ಬದಲಾವಣೆ ಮಾಡ್ಕೊಂಡ್ರು.

ಈಗ ಬರೋಣ. ಲಿಂಗಾಯತ ಧರ್ಮದ ಬಗ್ಗೆ ನಾನು ಹೇಳಿದೆ. ಬಸವಣ್ಣನವರು ಅದರ ಸಂಸ್ಥಾಪಕರು. ಅದರಲ್ಲಿ ಯಾವ ಸಂಶಯಾನೂ ಇಲ್ಲ. ಸಾಕಷ್ಟು ಮಾಹಿತಿ ಕೊಟ್ಟಿದ್ದೇನೆ. ಅದು 12ನೇ ಶತಮಾನ. ಶರಣರ ಕಾಲ. ಅವರ ಧಾರ್ಮಿಕ ಗ್ರಂಥ ವಚನ. ಅವರಿಗೆ ಸಂಸ್ಕಾರ ಇರುತ್ತೆ. ಆದರೆ ಹಿಂದೂವಿನಲ್ಲಿಯ 44 ಸಂಸ್ಕಾರಗಳಲ್ಲಿ ನಾಲ್ಕೇ ನಾಲ್ಕು ಮುಖ್ಯವಾದವು. ಆ ನಾಲ್ಕು ಸಂಸ್ಕಾರಗಳು ಹಿಂದೂ ಧರ್ಮಕ್ಕಿಂತ ಸಂಪೂರ್ಣ ಭಿನ್ನವಾಗಿವೆ. ಹುಟ್ಟಿದಾಗ ಇರಲಿ, ಸತ್ತಾಗ ಇರಲಿ, ನಾಮಕರಣ ಇರಲಿ, ಮದುವೆ ಇರಲಿ. ಸಂಪೂರ್ಣವಾಗಿ ಭಿನ್ನ. ವಿಶೇಷವಾಗಿ, ಜನನ, ಮರಣ ಮತ್ತು ಮದುವೆ ತೆಗೆದುಕೊಂಡರೆ, ಎಷ್ಟು ವಿಪರೀತವಾಗಿದೆ, ಬ್ರಾಹಣ ಸಮುದಾಯದ ಮದುವೆಗಳು. ಮದುವೆ ವಿಷಯ ತೆಗೆದುಕೊಂಡರೆ, ಅಲ್ಲಿ ಹೋಮ ಇರಬೇಕು. ಅಗ್ನಿಸಾಕ್ಷಿಯಾಗಿ. ಸಪ್ತಪದಿ ಇರಬೇಕು. ಮತ್ತೆ ನಾತಿ ಚರಾಮಿ ಭಕ್ತಿಯಿಂದ ಮಾಡಬೇಕು. ಇವು ಮೂರೂ ಲಿಂಗಾಯತರಲ್ಲಿ ಇಲ್ಲ. ಇವತ್ತು ಯಾವುದೇ ಲಿಂಗಾಯತರ ಮನೆಗೆ ಹೋಗಿ ನೋಡಿ. ಇವು ಮೂರೂ ಇಲ್ಲ.

ನೀವು ವೀರಶೈವ-ಲಿಂಗಾಯತರ ನಡುವಣ ಭೇದ ಸುಮಾರು 500 ವರ್ಷ ಹಳೆಯದು ಎಂದಿರಿ. ಅದನ್ನು ವಿವರಿಸುತ್ತೀರಾ.

ತಾವು ಕೇಳಿದ ಪ್ರಶ್ನೆ ಬಹಳ ಅರ್ಥಪೂರ್ಣವಾದದ್ದು. ಐತಿಹಾಸಿಕವಾಗಿ ಒಂದು ಹೊಸ ಚಳವಳಿ ಪ್ರಾರಂಭ ಆಯ್ತು ಅಂದ್ರೂ ತಪ್ಪಾಗಲಿಕ್ಕಿಲ್ಲ. ಈ ಬಸವೇಶ್ವರ ನಡೆಸಿದಂಥ ಕ್ರಾಂತಿ ಇದು, ಅವರೇನು ತತ್ವಗಳನ್ನ ಪ್ರತಿಪಾದಿಸಿದ್ರು, ಅದೇನು ಹೋರಾಟ ನಡೀತು, ಸುಮಾರು 770 ಜನ…. ಅವರ ಕ್ರಾಂತಿಯಲ್ಲಿ ಎಲ್ಲ ಧರ್ಮದ ಜನರು ಇದ್ರು, ಸೇರ್ಕೊಂಡ್ರು. ಸೇರ್ಕೊಂಡು ಸುಮಾರು 1154ರಿಂದ 66ರವರೆಗೆ 12 ವರ್ಷಗಳ ಕಾಲ ನಡೆದಂಥ ಈ ಆಂದೋಲನದಲ್ಲಿ ಕೊನೆಗೆ ಎಲ್ಲಿಗೆ ಹೋಯ್ತು ಅಂದ್ರೆ ಸ್ವತಂತ ಧರ್ಮನೇ ಆಗಿಬಿಡ್ತು. ಇವರ ಅನುಯಾಯಿಗಳೆಲ್ಲ ಸಮಾನರು ಅನ್ನೋದು ಬಂದಾಗ ಬ್ರಾಹ್ಮಣ ಹುಡುಗಿಯ ಮದುವೆಯನ್ನ ಒಬ್ಬ ಹರಿಜನ ಹುಡುಗನಿಗೆ ಮಾಡ್ತಾರೆ. ಅದು ವರ್ಣಸಂಕರ ಆಗಿ ಕ್ರಾಂತಿಯಾಗಿ ರಕ್ತಪಾತ ಆದದ್ದು ಸುಮಾರು 10 ಸಾವಿರ ಶರಣರ ಕಗ್ಗೊಲೆಯಾಗತ್ತೆ, ಬಿಜ್ಜಳನ ಕೊಲೆಯೂ ಆಗತ್ತೆ. ಇವರೆಲ್ಲ ದಾರಿ ಸಿಕ್ಕಲ್ಲಿ ಓಡಿಹೋಗ್ತಾರೆ. ಕ್ರಾಂತಿ ಆಗದೇ ಹೋಗಿದ್ರೆ ಇಷ್ಟೆಲ್ಲ ಪ್ರಚಾರ ಆಗ್ತಿರಲಿಲ್ಲ. ಸುಮಾರು ಒಂದು ಲಕ್ಷ 96ಸಾವಿರ ಜನರಿದ್ದರು ಅಂತಾರೆ. ಅದರಲ್ಲಿ 10-15 ಸಾವಿರ ಜನ ಕೊಲೆಯಾಗಿದ್ರೂ, ಸುಮಾರು 1 ಲಕ್ಷ 75 ಸಾವಿರ ಜನರಂತೂ ಅಲ್ಲಿಂದ ಓಡಿಹೋದ್ರು. ಹಾಗೆ ಓಡಿಹೋದವ್ರು ನಾಲ್ಕೂ ದಿಕ್ಕಿನಲ್ಲಿ ಓಡಿದರು.

ಸುಮಾರು 1266ರಿಂದ ಸುಮಾರು 1370ರವರೆಗೆ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಆಯ್ತು. ಆಗ ಈ ಧರ್ಮವನ್ನ ಸೇರಿದವರಲ್ಲಿ ಬಹಳ ಮುಖ್ಯವಾದಂಥ ಒಂದು ಸಣ್ಣ ಗುಂಪು ಅಂದ್ರೆ, ಆಂಧ್ರದ ಆರಾಧ್ಯ ಶೈವಬ್ರಾಹ್ಮಣರು. ಇವರಲ್ಲಿ ಪ್ರಮುಖರು ಅಂದ್ರೆ ಮಲ್ಲಿಕಾರ್ಜುನ ಪಂಡಿತಾರಾಧ್ಯ. ಬಸವಣ್ಣನ ಮೇಲೆ ಬಹಳ ಗೌರವ ಅವರಿಗೆ. ಬಸವಣ್ಣನನ್ನ ನೋಡಕೆ ಬರ್ತಾರೆ. ಅವ್ರು ಸಂಗಮಕ್ಕೆ ಹೋಗಿರ್ತಾರೆ. ಸಂಗಮಕ್ಕೆ ಹೋದ್ರೆ ಅಲ್ಲೂ ಸಿಗೋದಿಲ್ಲ. ಅವರ ಚರಮಗೀತೆ ಬರೆದಿದ್ದಾರೆ. 29 ಲೈನಿನ ಚರಮಗೀತೆ ಇದೆ, ಬಹಳ ಚೆನ್ನಾಗಿದೆ. ಅವರು ಹೋಗಿ ಶ್ರೀಶೈಲದಲ್ಲಿ ನೆಲೆಯೂರ್ತಾರೆ. ಅವರ ಅನುಯಾಯಿಗಳು ಮುಂದುವರೆದರು. ಅಲ್ಲಿ ಏನಾಯ್ತು ಅಂದ್ರೆ ವೀರಶೈವ ಬ್ರಾಹ್ಮಣರು ಬಸವಣ್ಣನ ಮೂರು ಮುಖ್ಯ ತತ್ವಗಳನ್ನ ಇಷ್ಟಲಿಂಗ, ಅಷ್ಟಾವರ್ಣ, ಷಟ್ ಸ್ಥಳ ಒಪ್ಕೊಂಡ್ರು. ಮುಂದೆ ಅವರು ಶೈವ ಬ್ರಾಹ್ಮಣರಾಗಿದ್ದಾಗ ಪ್ರಚಾರ ಮಾಡಿಕೊಂಡು ಬಂದ ತತ್ವಗಳನ್ನು ಬೇರೆ ಬೇರೆ ಆಗಮಿಕಗಳಲ್ಲಿ ಕೂಡಿಸಿಕೊಂಡ್ರು.

ಇವು ಸುಮಾರು 14ನೇ ಶತಮಾನದ ಪ್ರಾರಂಭದಲ್ಲಿ ಸಿದ್ಧಾಂತ ಶಿಖಾಮಣಿ ಅನ್ನುವ ಗ್ರಂಥವನ್ನ ಬರೆದ್ರು. ಆವಾಗ ಪಂಚಪೀಠಗಳ ರಚನೆ ಆಗಿರಲಿಲ್ಲ. ಅಸ್ತಿತ್ವದಲ್ಲಿ ಇರಲಿಲ್ಲ. ಇವು ಅಸ್ತಿತ್ವಕ್ಕೆ ಬಂದದ್ದು ನಂತರದ ಅವಧಿಯೊಳಗೆ. ನಂತರ ಇವರ ಒಳಗಿನಿಂದಲೇ ಹಿಂದೆ ಯಾವ ತತ್ವದ ವಿರುದ್ಧ ಬಸವಣ್ಣನವರು ಹೋರಾಟ ಮಾಡಿ ತತ್ವ ಪ್ರತಿಪಾದನೆ ಮಾಡಿ ಸಂಘಟನೆ ಮಾಡಿ ಧರ್ಮ ಕಟ್ಟಿದರೋ ಅದೇ ತತ್ವಗಳನ್ನ ಹಿಂದಿನ ಬಾಗಿಲಿಂದ ಒಳಸಾಗಿಸಿದರು. ಅದೇ ವೀರಶೈವ ಆಗಿ ಪರಿವರ್ತನೆಗೊಂಡಿತು. ಅದರ ಪರಿಣಾಮ ಏನಾಯ್ತು ಅಂದ್ರೆ, ನೋಡಿ ಇವತ್ತು ಕೂಡ ಭಾರತದಲ್ಲಿ ಮುಸ್ಲಿಮರಲ್ಲಿ ಜಾತಿ ಇದೆ. ಕ್ರೈಸ್ತರಲ್ಲಿ ಜಾತಿ ಇದೆ. ಮುಸಲ್ಮಾನರಲ್ಲಿ 13 ಉಪಜಾತಿಗಳಿವೆ. ಅದೇ ಪ್ರಕಾರ ಹಿಂದಿದ್ದಂತಹ ಜಾತಿಗಳ ಒಂದು ಗುರುತ್ವ ಇನ್ನೂ ಹೋಗಿಲ್ಲ. ಆ ಅಸ್ಮಿತೆ ಹೋಗಿಲ್ಲ. ಅದನ್ನ ಇವರು ಇನ್ನೂ ಸ್ವಲ್ಪ ಹೆಚ್ಚು ಮಾಡಿದ್ದಾರೆ. ಇದರ ಪರಿಣಾಮ ಆಗ ರಾಜ್ಯ ನಡೆಸ್ತಿದ್ದಂಥ ವಿಜಯನಗರ ಸಾಮ್ರಾಜ್ಯದ ಮೇಲೆ ಆಯ್ತು. ಸಂಗಮ ವಂಶದಲ್ಲಿ ಅವರೆಲ್ಲ ಶೈವರು. ಅವರಿಗೆ ಮಾರ್ಗದರ್ಶನ ಮಾಡಿದವರು ಕ್ರಿಯಾಶಕ್ತಿ ಗುರುಗಳು. ಇವರು ಕಾಳಾಮುಖಿ ಪಂಥದವರು, ಕಾಶ್ಮೀರದಲ್ಲಿದ್ದರು. ವಿದ್ಯಾರಣ್ಯರು 60 ವರ್ಷಗಳ ನಂತರ ಬಂದರು. ಆದರೆ ವಿದ್ಯಾರಣ್ಯರು ಕೂಡ ಶೈವ ಪಂಥದವರೇ ಆಗಿದ್ದರಿಂದ ಅವರಿಗೂ ಬಹಳ ಗೌರವ ತೋರಿಸ್ತಿದ್ದರು. ಆದರೆ ಸಾಮ್ರಾಜ್ಯ ಸ್ಥಾಪನೆಯಾದ 60 ವರ್ಷಗಳ ನಂತರ ಬಂದ ವಿದ್ಯಾರಣ್ಯರು ಈ ಸಾಮ್ರಾಜ್ಯ ಸ್ಥಾಪಕರಿಗೆ ಗೈಡ್ ಮಾಡುವ ಸಂದರ್ಭ ಇರಲಿಲ್ಲ. ಕ್ರಿಯಾಶಕ್ತಿ ಗುರುಗಳು ಕೂಡ ಕಾಳಾಮುಖ ಪಂಥದವರೇ. ನಮ್ಮಲ್ಲಿ ಬಹಳಷ್ಟು ಲಿಂಗಾಯತರು ಅನುಸರಿಸೋದು ಕಾಳಾಮುಖಿ ಪಂಥವನ್ನೇ. ಕಾಳಾಮುಖಿ, ಕಾಪಾಲಿಕ, ಪಾಶುಪತ, ಕಾಶ್ಮೀರಿ ಶೈವ ಇವೆಲ್ಲ ಕರ್ನಾಟಕಕ್ಕೆ ಬಂದವು. ಅವೆಲ್ಲ ಮತಗಳು ಕನ್ವರ್ಟ್ ಆಗಿ ಲಿಂಗಾಯತದೊಳಗೆ ಸೇರಿಕೊಂಡವು.

ರಾಜಾಶ್ರಯ ಸಿಕ್ಕಿದ ನಂತರ ಈ ಧರ್ಮ ಬಹಳ ಬೆಳೀತು. ಆದ್ರಿಂದ 18ನೇ ಶತಮಾನದಲ್ಲಿ ಲಿಂಗಾಯತ ಧರ್ಮಕ್ಕೆ ರಾಜಾಶ್ರಯ ಸಿಗಬೇಕಾಗಿತ್ತೆಂದರೆ, ವೀರಶೈವವನ್ನು ಮಾಡಿದಂತ ಬದಲಾವಣೆ. ಅಂದ್ರೆ ಮೂಲವಾಗಿದ್ದಂಥ ಲಿಂಗಾಯತವನ್ನ ಸ್ವಲ್ಪ ಭ್ರಷ್ಟಗೊಳಿಸಿ ಹಿಂದುವನ್ನ ಅದರಲ್ಲಿ ಸೇರಿಸಿದ್ದರಿಂದ ಆಗಿನ ರಾಜರಿಗೆ ಹೆಚ್ಚಿಗೆ ಅರ್ಥ ಮಾಡಿಕೊಳ್ಳೋಕೆ ಸಾಧ್ಯ ಆಯ್ತು. ಬಸವ ತತ್ವವೂ ಅದರ ಜೊತೆಗೆ ಪ್ರಚಾರಕ್ಕೆ ಬಂತು.

ನೀವು ಲಿಂಗಾಯತರೊಳಗೆ ಇರುವ ತಪ್ಪು ತಿಳುವಳಿಕೆ, ಪ್ರಜ್ಞೆಯನ್ನು ಸರಿಪಡಿಸಲು ಏನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೀರಾ?
ಇದೆ. ಈಗ ಏನಿದೆ ಇವತ್ತಿನ ಹೋರಾಟದ ಜೊತೆಗೆ ಸಾಂಸ್ಥಿಕವಾದ ಹೋರಾಟ, ಆಮೇಲೆ ಶುದ್ಧೀಕರಣವನ್ನ ತರುವ ಕ್ರಿಯೆಗಳು, ಸಂಸ್ಥೆಗಳ ರಚನೆ ಇವೆಲ್ಲ ಒಂದು ಭಾಗ. ಇವತ್ತು ಏನಾಗಿದೆ ಅಂದ್ರೆ, ಈ ಭ್ರಷ್ಟಗೊಳಿಸಿದಂಥ ಲಿಂಗಾಯತರ ಬಗ್ಗೆ ನಮ್ಮ ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಆಗ್ಬೇಕಾಗಿದೆ. ಈಗ ನೋಡಿ ಪೂಜೆನೂ ಮಾಡ್ತೀರ. ದಿಸ ಈಸ ನಾಟ್ ಕರೆಕ್ಟ್. ಆಮೇಲೆ …. ಭವಿಷ್ಯ ಕೇಳ್ತೀರ, ಶಕುನ ಕೇಳ್ತಿರ. ಇದು ಸರಿಯಲ್ಲ. ಇಂತಹ ಸಣ್ಣಸಣ್ಣ ತಪ್ಪುಗಳು ಇವೆ. ಮೂಲದಲ್ಲಿ ಯಾವುದೂ ಬದಲಾವಣೆಯಾಗಿಲ್ಲ. ಸಂಸ್ಕಾರದಲ್ಲಿ ಬದಲಾವಣೆ ಆಗಿಲ್ಲ. ಆಚರಣೆ ಹಾಗೇ ಉಳಿದಿದೆ. ನನಗೆ ಬಹಳ ವ್ಯಸನ ಅನ್ನಿಸತ್ತೆ. ಬಸವಣ್ಣನವ್ರು ಚಾಲೂ ಮಾಡಿದ್ದು ವಿಧವಾ ವಿವಾಹ. ಇವತ್ತೂ ಇದೆಯಲ್ಲ. ಹೆಣ್ಣುಮಕ್ಕಳು ಮುಟ್ಟಾಗಿರ್ತಾರೆ. ನಮ್ಮ ಹೆಣ್ಣುಮಕ್ಕಳು ಹೊರಗಡೆ ಯಾರೂ ಕೂರಲ್ಲ. ಹೆಣ್ಣುಮಕ್ಕಳನ್ನ ದತ್ತು ತಗೋತಾರೆ. ಹೀಗೆ ಯಾವ ಸಂಪ್ರದಾಯ, ಆಚರಣೆಗಳು ಆಗ ಇದ್ದವೋ ಅವು ಇವತ್ತಿಗೂ ಇವೆ. ಅವು ಹಿಂದೂ ಧರ್ಮದಿಂದ ಭಿನ್ನ. ವಿರುದ್ಧವಲ್ಲ, ಭಿನ್ನವಾಗಿವೆ. 1955ರಲ್ಲಿ ಹಿಂದೂ ಸುಧಾರಣೆಯ ನಾಲ್ಕು ಕಾಯ್ದೆಗಳು ಬಂದವು. ಅದರಲ್ಲಿದ್ದ ಎಲ್ಲ ಅಂಶಗಳೂ ಮೊದಲೇ ಲಿಂಗಾಯತರಲ್ಲಿದ್ದವು. ಅಕ್ಚುವಲಿ ಅಭಿಮಾನ ಪಡ್ಬೇಕು. ಕಾನೂನಿನ ಮಟ್ಟಿಗೆ ನಾವು ಹಿಂದೂಗಳು ಅಂತಂದ್ರೆ ನಮ್ಮ ಯಾವ ಅಭ್ಯಂತರ ಇಲ್ಲ. ನಾವು ಹೇಳ್ತೇವೆ ನೀವು ಲಿಂಗಾಯತರು ಅಂತ. ಒಪ್ಪಿಕೊಳ್ತಾ ಇಲ್ಲ.

ಕಡೆಯ ಪ್ರಶ್ನೆ. ಲಿಂಗಾಯತರು ಅಲ್ಪಸಂಖ್ಯಾತ ಸ್ಥಾನಮಾನ ಕೇಳುವುದು ನೈತಿಕವಾಗಿ ಸರಿಯೆ? ಲಿಂಗಾಯತರಿಗೆ ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ಉಳಿಸಿಕೊಳ್ಳಲಿಕ್ಕೆ ಪ್ರಭುತ್ವದ ವಿಶೇಷ ಸವಲತ್ತುಗಳು ಬೇಕೆ?
ಇದು ಸಹ ಬಹಳ ಒಳ್ಳೆಯ ಪ್ರಶ್ನೆ. ಲಿಂಗಾಯತರಲ್ಲೂ ಬಹಳಷ್ಟು ಹಿಂದುಳಿದವರಿದ್ದಾರೆ. ಅವರಿಗೆ ಈ ಸವಲತ್ತುಗಳ ಅಗತ್ಯವಿದೆ. ಅಲ್ಲದೆ ಅಲ್ಪಸಂಖ್ಯಾತ ಸ್ಥಾನಮಾನ ದೊರಕುತ್ತಿದ್ದಂತೆಯೇ ಸವಲತ್ತುಗಳು ಸಿಗಲ್ಲ. ಅವಕ್ಕೆ ಸ್ಪರ್ಧೆ ಮಾಡಬೇಕು. ಇಸ್ಲಾಂನಲ್ಲೂ ಹಿಂದುಳಿದವ್ರಿದ್ದಾರೆ ಇಸ್ಲಾಂ ಚಾಲೂ ಆಗ್ತನೇ ಪೊಲಿಟಿಕಲ್ ಆಗಿ ಸಪರೇಟ್….. ಆದ್ರೆ ಖಡ್ಗ ತಗೊಂಬಿಟ್ಟು ಹೋದ್ರೆ ಆ ಧರ್ಮನೇ ಸ್ಥಾಪನೆಯಾಗ್ತಿರಲಿಲ್ಲ. ಅದೇ ರೀತಿ ಕ್ರಿಶ್ಚಿಯಾನಿಟಿಗೆ ಹೋದ್ರೆ ಕಾನ್ಟ್ಟಂಟಾಯ್ನ್ ನೋಪಲ್, ಅವನು ಎಲ್ಲಿಯವರೆಗೆ ಕ್ರಿಶ್ಚಿಯನ್ ಆಗಲಿಲ್ಲ, 325 ವರ್ಷ ಕ್ರಿಶ್ಚಿಯನ್ ಧರ್ಮ ಸೀಕ್ರೇಟ್ ಆಗೇ ಉಳೀತು. ಯಾವಾಗ ರೋಮನ್ ಎಂಪರರ್ ಒಪ್ಪಿಕೊಂಡ ಆವಾಗ ಕ್ರಿಶ್ಚಿಯಾನಿಟಿ ಹರಡುವುದಕ್ಕೆ ಸಾಧ್ಯವಾಯ್ತು. ಹಿಂದು ಧರ್ಮದಲ್ಲೂ ಕೂಡ ರಾಜಕೀಯ ಹಸ್ತಕ್ಷೇಪ ಇಲ್ಲದಿದ್ರೆ ಇಷ್ಟು ಆಗ್ತಿರಲಿಲ್ಲ. ರಾಜಕೀಯದಿಂದ ಧರ್ಮ ಸಪರೇಷನ್ ಮಾಡೋದು ಕಷ್ಟದ ಕೆಲಸ. ಎಲ್ಲಾ ಧರ್ಮಗಳು ರಾಜಕೀಯ ಪ್ರೇರಣೆಯಿಂದನೇ ಪ್ರಚಾರ ಆಗಿದ್ದು. ಹುಟ್ಟುವಾಗ ಬೇರೆ ಇರಬಹುದು, ಬೆಳೆಯುವಾಗ ಮಾತ್ರ ರಾಜಕೀಯ ಬೇಕಾಗತ್ತೆ.

*
ಪರಿವಿಡಿ (index)
Previousಮುಂಬೈ ಮತ್ತು ಮದ್ರಾಸ್ ಜನಗಣತಿಗಳಲ್ಲಿ ಲಿಂಗಾಯತರುಮಹಿಳಾ ಸ್ವಾತಂತ್ರ್ಯ: ಶರಣರ ನಿಲುವುಗಳುNext
*