ಕಲ್ಯಾಣ ಕ್ರಾಂತಿ (ಸಮಾನತೆಯ ಕ್ರಾಂತಿ) (Kalyana Revolotion)

*

12ನೇ ಶತಮಾನದ ಶರಣರ ಸಮಾನತೆಯ ಕ್ರಾಂತಿ

ಭಾರತ ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಗುರು ಬಸವಣ್ಣನವರು ೧೧ನೇ ಶತಮಾನದ ಭಾರತೀಯ ಹಿಂದೂ ಸಮಾಜದ ಆಚರಣೆಗಳಲ್ಲಿ ತಾಂಡವವಾಡುತ್ತಿದ್ದ ಮತೀಯ ವಿಕಾರ, ಮೂಢ ನಂಬಿಕೆ, ಅಂಧಶ್ರದ್ಧೆ ಹಾಗೂ ಶ್ರೇಣೀಕೃತ ಸಮಾಜದ ಜಾತಿ ವ್ಯವಸ್ಥೆ ಇವುಗಳ ವಿರುದ್ಧ ಹೋರಾಟ ಮಾಡುತ್ತಲೇ, ತಿರಸ್ಕಾರಕ್ಕೆ ಒಳಗಾಗಿದ್ದ ತಳ ಸಂಸ್ಕೃತಿಯ ಬಾಯಿಲ್ಲದ ಜನಕ್ಕೆ ಅಂತರಂಗದ ಧ್ವನಿಯಾಗಿ ಅವರ ಆತ್ಮವಿಶ್ವಾಸದ ಪ್ರತೀಕವಾಗಿ ಬೆಳೆದು ಬಂದರು. ಅದೂ ೧೧ ನೇ ಶತಮಾನದ ಆ ಕಾಲದಲ್ಲಿ! ಇಂತಹ ವೇಳೆಯಲ್ಲಿ ತಳ ಸಂಸ್ಕೃತಿಯ ಸಮುದಾಯಗಳ ಜನತೆಯ ಆಶಯದ ಕಿಡಿಗೆ ತಮ್ಮ ವೈಚಾರಿಕತೆಯ ಪಂಜು ತಾಗಿಸಿದ ಬಸವಣ್ಣನವರು ಅಸ್ಪೃಶ್ಯ ಲೋಕದ ಅಂಧಕಾರದಲ್ಲಿ ಮುಳುಗಿ ಹೋಗಿದ್ದ ಅಸಂಖ್ಯಾತ ಜನತೆಯ ಪಾಲಿಗೆ ಬೆಳಕಿನ ದೀವಿಗೆಯಾದರು, ಆಸೆಯ ಕಿರಣವಾದರು. ಬಹಿರಂಗ ಶುದ್ಧಿಯಷ್ಟೆ ಅಂತರಂಗದ ಶುದ್ಧಿಯು ಮುಖ್ಯ ಎಂದು ಪ್ರತಿಪಾದಿಸಿ ತಮ್ಮ ಪ್ರಖರ ವೈಚಾರಿಕ ಚಿಂತನೆಗಳ ಮೂಲಕ ಎಲ್ಲರಿಂದಲೂ ಪ್ರೀತಿಸಲ್ಪಡುವವರಾದರು ಗುರು ಬಸವಣ್ಣನವರು.

ಕಲ್ಯಾಣ ಕ್ರಾಂತಿಯ ಹಿನ್ನೆಲೆ

ಚಪ್ಪಲಿ ತಯಾರಿಸುವ ಸಮಗಾರ ಜಾತಿಯ ಹರಳಯ್ಯನವರ ಮನೆಯಲ್ಲಿ ಬಸವಣ್ಣನವರು ಪ್ರಸಾದ ಮುಗಿಸಿಕೊಂಡು ಹೊರಡುವಾಗ ಹರಳಯ್ಯ ಶರಣು ಎಂದು ವಂದಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಬಸವಣ್ಣನವರು ತಲೆಬಾಗಿ ಶರಣು ಶರಣಾರ್ಥಿ ಎಂದು ಎರಡು ಬಾರಿ ವಂದಿಸುತ್ತಾರೆ. ಬಸವಣ್ಣನವರು ತನಗೆ ತೋರಿದ ಗೌರವಕ್ಕೆ, ಪ್ರೀತಿಗೆ ಅಚ್ಚರಿಯಿಂದ ರೋಮಾಂಚಿತನಾದ ಹರಳಯ್ಯ ಈ ಘಟನೆಯನ್ನು ತನ್ನ ಪತ್ನಿ ಕಲ್ಯಾಣಮ್ಮನ ಬಳಿ ಹೇಳಿದನು. ಬಸವಣ್ಣನವರ ಪ್ರೀತಿಗೆ ಏನಾದರೂ ಉಡುಗೊರೆ ಕೊಡಲೇ ಬೇಕೆಂದು ಕಲ್ಯಾಣಮ್ಮ ಚಿಂತಿಸಿ ತಮ್ಮ ಮೈ ಚರ್ಮ ತೆಗೆದು ಚಮ್ಮಾವುಗೆ ಮಾಡಲು ಗಂಡಗೆ ಹೇಳುತ್ತಾಳೆ. ಹರಳಯ್ಯ ಇದಕ್ಕೆ ಒಪ್ಪಿಕೊಂಡು ಹಲವು ದಿನಗಳ ಕಾಲ ಹಗಲು ಇರುಳು ಶ್ರಮಿಸಿ ತನ್ನ ಹಾಗು ಪತ್ನಿಯ ಚರ್ಮವನ್ನು ತೆಗೆದು ಸುಂದರವಾದ ಒಂದು ಜೊತೆ ಪಾದರಕ್ಷೆಯನ್ನು ತಯಾರು ಮಾಡಿ, ಅವುಗಳನ್ನು ಶ್ವೇತ ವಸ್ತ್ರದಲ್ಲಿ ಸುತ್ತಿ, ಎದೆಗವಚಿಕೊಂಡು ಆಸ್ಥಾನಕ್ಕೆ ತೆರಳಿ ಬಸವಣ್ಣನವರಿಗೆ ಕೊಟ್ಟು, ಇವುಗಳನ್ನು ಧರಿಸಿ ತಾವು ಈ ಧರೆಯ ಮೇಲೆ ಓಡಾಡಿದರೆ ನನ್ನ ಜನ್ಮ ಸಾರ್ಥಕ ಎಂದು ಹರಳಯ್ಯ ದಂಪತಿಗಳು ಬಸವಣ್ಣನವರಲ್ಲಿ ಭಿನ್ನವಿಸಿಕೊಳ್ಳುತ್ತಾರೆ. ಹರಳಯ್ಯನ ಪ್ರೀತಿ, ಕಂಡು ಅಚ್ಛರಿಗೊಳಗಾದ ಬಸವಣ್ಣನವರು, ಈ ಪಾದುಕೆಗಳನ್ನು ಕಾಲಲ್ಲಿ ಧರಿಸುವಷ್ಟು ಯೋಗ್ಯ ನಾನಲ್ಲ, ಶರಣರ ಚರ್ಮದಿಂದ ಮಾಡಿದ ಚಮ್ಮಾವುಗೆಗಳು ದೇವರಿಗೆ ಮಾತ್ರ ಮೀಸಲು ಎಂದು ತಿಳಿಸಿ ಅವುಗಳನ್ನು ತನ್ನ ಶಿರದ ಮೇಲೆ ಹೊತ್ತುಕೊಂಡು ಮರಳಿ ಕೊಡುತ್ತಾರೆ.

ಹರಳಯ್ಯ ಚಮ್ಮಾವುಗೆಗಳನ್ನು ಮನೆಗೆ ತೆಗೆದುಕೊಂಡು ಹೋಗುವಾಗ ಬ್ರಾಹ್ಮಣರಾದ ಮಧುವರಸರು ಎದುರಾಗಿ ಸುಂದರವಾದ ಚಮ್ಮಾವುಗೆ ನೋಡಿ ಕೇಳಿ, ಕೊಡದಿದ್ದಾಗ ಅವುಗಳನ್ನು ಕಸಿದುಕೊಂಡು ಧರಿಸಿಕೊಳ್ಳಲು ಪ್ರಯತ್ನಿಸಿದಾಗ ಅವರ ಮೈಯಲ್ಲಾ ಉರಿ ಪ್ರಾರಂಭವಾಯುತು. ಹರಳಯ್ಯನ ಮನೆಯ ಚರ್ಮ ತೊಳೆದ ನೀರಿನಿಂದ ಸ್ನಾನ ಮಾಡಿದಾಗ ಮೈ ಉರಿ ಕಡಿಮೆಯಾಯಿತು. ಈ ಘಟನೆಯಿಂದ ಶರಣರ ಮಹತ್ವವನ್ನು ಅರಿತ ಮಧುವರಸರು ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದರು.

ಸಮಗಾರ ಹರಳಯ್ಯನವರು ಮತ್ತು ಬ್ರಾಹ್ಮಣ ಮಧುವರಸರು ಇಷ್ಟಲಿಂಗ ದೀಕ್ಷೆ ಪಡೆದ ಕಾರಣ ಜಾತಿಸಂಕರಗೊಂಡು ಬಸವಣ್ಣನವರ ಜಾತ್ಯತೀತ ಧರ್ಮವಾದ ಲಿಂಗವಂತ ಧರ್ಮದ ಭಾಗವಾದರು. ನಡೆ ನುಡಿ ಸಿದ್ಧಾಂತದ ಶರಣರು ’ಜಾತಿ ನಿರರ್ಥಕ, ನೀತಿ ಲೋಕರಕ್ಷಕ’ ಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟವರಾಗಿದ್ದರು. ಪ್ರತಿಯೊಬ್ಬರು ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನೀತಿವಂತರಾದಾಗ ಅವರ ವರ್ಣ, ಜಾತಿ ಮತ್ತು ಉಪಜಾತಿಗಳು ನಿರ್ನಾಮವಾಗಿ ಕೇವಲ ಶರಣರಾದರು. ಜಾತಿ ಮತ್ತು ಅಸ್ಪೃಶ್ಯತೆಯ ವಿಷವನ್ನು ನಮ್ಮ ಸಮಾಜದಿಂದ ಹೊರಹಾಕಿ ಎಲ್ಲರೀತಿಯ ಸಮಾನತೆಯನ್ನು ಸಾಧಿಸುವುದು ಶರಣರ ಉದ್ದೇಶವಾಗಿತ್ತು. ಇಂಥ ಘನ ಉದ್ದೇಶದಿಂದಲೇ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯನ್ನು ಶರಣರು ಏರ್ಪಡಿಸಿದರು. ವರ್ಣ ಮತ್ತು ಜಾತಿಪದ್ಧತಿಯ ಮೇಲೆ ನಿಂತ ಮನುಧರ್ಮದ ಸಮಾಜಕ್ಕೆ ದೊಡ್ಡ ಸವಾಲು ಒಡ್ಡಿ ಸಮಾನತೆಯ ಕ್ರಾಂತಿ ಕಹಳೆಯನ್ನು ಊದಿದರು. ಹರಳಯ್ಯನವರ ಮಗ ಶೀಲವಂತನ ಜೊತೆ ಮಧುವರಸರ ಮಗಳು ಲಾವಣ್ಯಳ ಮದುವೆ ಆಯಿತು.

ಆದರೆ ಮನುವಾದಿಗಳು ರೊಚ್ಚಿಗೆದ್ದರು. ಸಮಗಾರ ವರನಿಗೆ ಬ್ರಾಹ್ಮಣ ಕನ್ಯೆಯನ್ನು ಕೊಡುವುದು ಧರ್ಮಬಾಹಿರವಾದ ಅನುಲೋಮ ವಿವಾಹ ಎಂದು ಕಲ್ಯಾಣದ ದೊರೆ ಬಿಜ್ಜಳನ ಕಿವಿ ಚುಚ್ಚಿದರು. ಶರಣರು ಸಾವು ನೋವು ಮತ್ತು ಕಷ್ಟ ನಷ್ಟಗಳನ್ನು ಅನುಭವಿಸದರೂ ತಮ್ಮ ನಡೆ ನುಡಿ ಸಿದ್ಧಾಂತವನ್ನು ಬಿಡದೆ ಅದಕ್ಕಾಗಿ ಅವರು ಎಂಥ ತ್ಯಾಗಕ್ಕೂ ಸಿದ್ಧರಾದರು. ಅದಕ್ಕಾಗಿ ನಾಡು ಎಂದೂ ಕಂಡರಿಯದಂಥ ದುರಂತವನ್ನು ಅನುಭವಿಸಿದರು. ಕಣ್ಣು ಕೀಳಿಸಿಕೊಂಡು ಎಳೆಹೂಟ್ಟೆ ಶಿಕ್ಷೆ ಅನುಭವಿಸಿದ ಹರಳಯ್ಯ, ಶೀಲವಂತ ಮತ್ತು ಮಧುವರಸರು ಹುತಾತ್ಮರಾದರು. ಮನುವಾದಿ ಭಯೋತ್ಪಾದಕರಿಂದಾಗಿ ಕಲ್ಯಾಣದಲ್ಲಿ ಅಸಂಖ್ಯಾತ ಶರಣರ ಹತ್ಯಾಕಾಂಡವಾಯಿತು. ಶರಣರ ಸಹಸ್ರಾರು ವಚನ ಕಟ್ಟುಗಳನ್ನು ವೈದಿಕಶಕ್ತಿಗಳು ಸುಟ್ಟು ಹಾಕಿದವು, ಸಹಸ್ರಾರು ವಚನಕಟ್ಟುಗಳು ಬೆಂಕಿಗೆ ಆಹುತಿಯಾದವು. ಸಕಲ ಮಾನವರನ್ನು ವಿಮೋಚನೆಗೊಳಿಸುವಂಥ ವಚನಸಾಹಿತ್ಯವನ್ನು/ ಶರಣರನ್ನು ಮನುವಾದಿಗಳು/ಸಂಪ್ರದಾಯವಾದಿಗಳು ಕಂಡಲ್ಲಿ ನಾಶ ಮಾಡ ತೋಡಗಿದರು. ಶರಣರು ಮತ್ತು ಬಿಜ್ಜಳನ ಸೈನಿಕರ ನಡುವೆ ವಚನ ಸಾಹಿತ್ಯಕ್ಕಾಗಿ ಹೋರಾಟ ನಡೆಯಿತು, ನಂತರ ನಡೆದ ದಂಗೆಯಿಂದ ಬಿಜ್ಜಳನು ಕೊಲ್ಲಲ್ಪಡುತ್ತಾನೆ. ಇದೇ ೧೨ನೆ ಶತಮಾನದ ಬಸವಕ್ರಾಂತಿ / ಕಲ್ಯಾಣ ಕ್ರಾಂತಿ ಎಂದು ಪ್ರಸಿದ್ಧಿ ಪಡೆದಿದೆ. ಈ ಅನಿರೀಕ್ಷಿತ ಕ್ರಾಂತಿಯಿಂದ ಶರಣರು ಚೆಲ್ಲಾಪಿಲ್ಲಿಯಾಗುತ್ತಾರೆ. ಬಸವಣ್ಣನವರು ಕೂಡಲಸಂಗಮದತ್ತ ತೆರಳಿದರೆ, ಅಕ್ಕ ಮತ್ತು ಅಲ್ಲಮ ಶ್ರೀಶೈಲದ ಕದಳಿ ವನದ ಹಾದಿ ಹಿಡಿಯುತ್ತಾರೆ. ಸಿದ್ದರಾಮ ಸೊಲ್ಲಾಪುರದ ಕಡೆ, ಚನ್ನಬಸವಣ್ಣ ವಚನ ಸಾಹಿತ್ಯ ಹೊತ್ತು ಪಶ್ಚಿಮ ಘಟ್ಟದ ಕಡೆಗೆ (ಇಂದಿನಿ ಉಳವಿ) ಕಡೆ ಪ್ರಯಾಣ ಬೆಳೆಸುತ್ತಾರೆ.

ಇಂದು ಲಿಂಗಾಯತರು ಎಂದು ಕರೆಯಿಸಿಕೊಳ್ಳುವವರ ಹೃದಯಗಳಲ್ಲಿ ನಿರಂತರ ನೋವಿನ ಜ್ವಾಲೆಯಾಗಿ ಅವರ ತ್ಯಾಗ ಜೀವಂತವಾಗಿರಬೇಕಿತ್ತು. ಆದರೆ ನಮ್ಮ ಜನರ ವಿಸ್ಮೃತಿಯಿಂದಾಗಿ ಹತ್ತಾರು ಸಹಸ್ರ ಶರಣರ ಸಾವು ನೋವುಗಳು ನಮಗೆ ಬಾಧಿಸದೆ ಮರೆಯಾಗಿವೆ. ಎಲ್ಲ ಕಾಯಕಜೀವಿ ಶರಣರ ಈ ತ್ಯಾಗಕ್ಕೆ ಬೆಲೆ ಇಲ್ಲದಂತಾಗಿದೆ. ಅದಕ್ಕಾಗಿ ಲಿಂಗಾಯತರು ಜಾಗೃತರಾಗಿ ಶರಣರು ಹೋರಾಟ ಮಾಡಿ ಉಳಿಸಿಕೊಟ್ಟಿರುವ ವಚನ ಸಾಹಿತ್ಯವನ್ನು ಸಾಧ್ಯವಾದಷ್ಟು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಅವಾಗಲೆ ನಮ್ಮ ಹುತಾತ್ಮ ಶರಣರ ತ್ಯಾಗಕ್ಕೆ ಒಂದು ಬೆಲೆ.

ಪರಿವಿಡಿ (index)
*
Previousಹರ್ಡೇಕರ ಮಂಜಪ್ಪಲಿಂಗಾಯತ : ಕನ್ನಡಿಗರು ಸೃಷ್ಠಿಸಿದ ಕರ್ನಾಟಕದ ಮೊದಲ ಧರ್ಮNext
*