Previous ಬಸವಣ್ಣನವರು ಅರ್ಥಮಂತ್ರಿಯಾದುದು ಬಸವಣ್ಣನವರಿಂದ ಲಿಂಗಾಯತ ಧರ್ಮದ ಸ್ಥಾಪನೆ Next

ಬಸವಣ್ಣನವರಿಂದ ಅನುಭವ ಮಂಟಪ ಸ್ಥಾಪನೆ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಅನುಭವ ಮಂಟಪ ಸ್ಥಾಪನೆ

ಚನ್ನಬಸವಣ್ಣನವರ ವಚನದ ಪ್ರಕಾರ ವಿಶೇಷ ಲಿಪಿಯನ್ನು ಓದುವ ಹೊತ್ತಿಗೆ ಆಗಲೇ ಮಹಾಮಠವು ಕಟ್ಟಲ್ಪಟ್ಟಿತ್ತು ಎಂಬುದು ಮನವರಿಕೆಯಾಗುತ್ತದೆ. ಕಾಲಜ್ಞಾನ ವಚನಗಳ ಪ್ರಕಾರ ಕಲ್ಯಾಣಕ್ಕೆ ಧರ್ಮಪಿತರು ಬಂದು ೯ ವರ್ಷಗಳ ನಂತರ ಅನುಭವ ಮಂಟಪ ಆಗಿದೆ. ಆದರೆ ಧರ್ಮಪ್ರಚಾರ ಕಾರ್ಯವು ಮೊದಲೇ ಆರಂಭವಾಗಿದೆ.

ಅನುಭವ ಮಂಟಪದ ಐತಿಹಾಸಿಕತೆ

ಕೆಲವು ಮತ್ಸರಿಗರು, ಗುರುಬಸವಣ್ಣನವರ ಅಸಾಮಾನ್ಯ ವ್ಯಕ್ತಿತ್ವ ಅದ್ಭುತ ಸಿದ್ಧಿ ಕಂಡು ಹೊಟ್ಟೆಯುರಿ ಪಡುವವರು ಮತ್ತು ಅವರ ಸಮಾನತಾ ತತ್ತ್ವವನ್ನು ಇಷ್ಟಪಡದವರು ಅನುಭವ ಮಂಟಪ ಇರಲೇ ಇಲ್ಲ ; ಶರಣರು ವಚನಗಳ ರೂಪದಲ್ಲಿ ಸಂವಾದ ಮಾಡಲೇ ಇಲ್ಲ. ನಂತರದಲ್ಲಿ ಕುಳಿತು ಕೆಲವರು ಇವೆಲ್ಲ ಕಲ್ಪಿಸಿದ್ದಾರೆ.' ಎಂದು ಸಂದೇಹಿಸುವರು.

ಅನುಭವ ಮಂಟಪ ಒಂದು ಕಟ್ಟಡವೇ ? ಅದು ಇತ್ತೆ? ಎಂಬುದು ತೀರಾ ಅಪ್ರಸ್ತುತ. ಅನುಭವ ಗೋಷ್ಠಿ ಒಂದು ಚಟುವಟಿಕೆ. ಅದನ್ನು ಕಟ್ಟಡದಲ್ಲೇ ಮಾಡಿರಬಹುದು ; ಗಿಡದ ಕೆಳಗೂ ಮಾಡಿರಬಹುದು. ಗಣಮೇಳಾಪ, ಶರಣರ ಗೋಷ್ಠಿ ಲಿಂಗವಂತ ಧರ್ಮಿಯನ ಆಚರಣೆಗಳಲ್ಲಿ ಮುಖ್ಯ ಕಟ್ಟಳೆ ಎಂದಾಗ ಎಲ್ಲಿಯಾದರೂ ಮಾಡಿರಲೇ ಬೇಕಲ್ಲ. ಅನುಭವ ಮಂಟಪ ಎಂಬ ಕಟ್ಟಡದಲ್ಲಿ ಕುಳಿದು ಮಾಡಿದರೇ ಅದು ಅನುಭವ ಗೋಷ್ಠಿ ಏನಲ್ಲ. ಅನುಭವ ಗೋಷ್ಠಿ ಮಾಡಿದ ತಾಣ ಅನುಭವ ಮಂಟಪ.

ಬಹಳಷ್ಟು ಜೇನ್ನೊಣಗಳು ಹಾರಾಡುತ್ತಿದ್ದರೆ ಅಲ್ಲಿ ಚೆಂಗೊಡ ಇದೆ ಎಂದು ಊಹಿಸುತ್ತೇವೆ. ಬಹಳ ಜನ ಬರೀ ಬಿಂದಿಗೆಗಳನ್ನು ಹೊತ್ತುಕೊಂಡು ಹೋಗುತ್ತಿದ್ದರೆ, ಪುನಃ ತುಂಬಿದ ಬಿಂದಿಗೆಗಳನ್ನು ಹೊತ್ತು ತರುತ್ತಿದ್ದರೆ ಅಲ್ಲೆಲ್ಲೋ ಜಲರಾಶಿ, ಭಾವಿಯೋ, ಕೊಳವೋ ಇದೆಯೆಂದು ಊಹಿಸುತ್ತೇವೆ. ಹಾಗೆ ಅಸಂಖ್ಯಾತ ಶರಣರು ನಾಡಿನ ಮೂಲೆ ಮೂಲೆಯಿಂದ ಧಾವಿಸಬೇಕಾದರೆ ಅಲ್ಲಿ ವಿಶೇಷವಾದುದೇನೋ ಇರಲೇಬೇಕು.

ಅನುಭಾವಿಗಳು- ದಾರ್ಶನಿಕರು ಬರೆದ ಸಾಹಿತ್ಯ ನೈಸರ್ಗಿಕವಾಗಿ ಅರಳಿದ ಹೂವಿನಂತಿದ್ದರೆ, ಉದ್ದೇಶಪೂರ್ವಕವಾಗಿ ಕುಳಿತು ಬರೆಯುವ ಪಂಡಿತರ ಸಾಹಿತ್ಯ ಕಾಗದದ ಹೂವಿನಂತೆ, ವಚನ ವಾಜ್ಯದ ಆಳ-ಹರಹುಗಳನ್ನು ನೋಡಿದರೆ ಅದು ಹೃದಯದ ಆಳದಿಂದ ಬಂದುದು, ಮೇಲಾಗಿ ಮತ್ತೆ ಯಾರೋ ಕುಳಿತು ಬರೆಯುವುದಾದರೆ ಅವರು ಅಂಥ ಅಮೂಲ್ಯ ಸಾಹಿತ್ಯವನ್ನು ರಚಿಸಿದ ಕೀರ್ತಿಯನ್ನು ತಾವು ಹೊಂದಲು ಬಯಸುವರೇ ವಿನಾ, ತಾವು ಬರೆದು ಇನ್ನೊಬ್ಬರ ಕೀರ್ತಿಯನ್ನೇಕೆ ಬೆಳೆಸುವರು ? ವಿಷಯದ ವೈವಿಧ್ಯತೆ ಮತ್ತು ವಿಸ್ತಾರದ ದೃಷ್ಟಿಯಿಂದಲೂ ವಚನಗಳು ಆಗಾಗ, ಸುತ್ತಲಿನ ಪರಿಸರದೊಡನೆ ಮಂಥನವಾಗಿ ಸ್ಪುರಿಸಿದ ಆಲೋಚನೆಗಳೇ ವಿನಾ ಕುಳಿತು ಬರೆದ, ನಿಯಂತ್ರಿತ ಕಾಲುವೆಯ ನೀರಿನಂತಲ್ಲ.

ಅಯ್ಯಾ, ಭಕ್ತಿಗೆ ಬೀಡಾದುದು ಕಲ್ಯಾಣ ಮೂವತ್ತಾರು ವರ್ಷ
ಅಯ್ಯಾ, ಅನುಭವಕ್ಕೆ ಶಿವಸದನವಾದುದು ಇಪ್ಪತ್ತೇಳು ವರ್ಷ
ಅಯ್ಯಾ, ಹಿಂದಿನಂತನುಭವ ಹಿಂದಿನಂತೆ ಭಕ್ತಿಯಿಲ್ಲ
ಮೂರುಮಾಸದೊಳಗಾಗಿ,
ಇಲ್ಲಿ ಆಡಲು ಭಯವಿಲ್ಲ ಕೇಳಯ್ಯಾ ಕೂಡಲಸಂಗಮದೇವಯ್ಯಾ
- ಬ.ವ

ಬಹುಶಃ ಗಡಿಪಾರನ್ನು ಹೊಂದಿ, ಶರಣರಿಂದ ಬೀಳ್ಕೊಳ್ಳುವಾಗ ಧರ್ಮಪಿತರು ಆಡಿರಬಹುದಾದ ಈ ಮಾತುಗಳನ್ನು ಗಮನಿಸಿ, ಶ್ರೀಗುರುವು ವಿಕ್ರಮನಾಮ ಸಂವತ್ಸರದ ಶ್ರಾವಣಮಾಸದಲ್ಲಿ ಕಲ್ಯಾಣವನ್ನು ಪ್ರವೇಶಿಸಿದರು. ರಾಕ್ಷಸನಾಮ ಸಂವತ್ಸರ ಫಾಲ್ಗುಣ ಮಾಸದ ದ್ವಾದಶಿ ದಿವಸ ಕಲ್ಯಾಣವನ್ನು ಬಿಟ್ಟರು. ಈ ೩೬ ವರ್ಷ ಕಲ್ಯಾಣವು ಭಕ್ತಿಗೆ ಬೀಡಾಗಿದ್ದಿತು. ಮುಂದೆ ೯ ವರ್ಷಗಳ ಬಳಿಕ ಅನುಭವ ಮಂಟಪ ರಚನೆಯಾಗಿ ಅನುಭವಗೋಷ್ಠಿ ನಡೆಯಿತು. ಅವರು ಕಲ್ಯಾಣವನ್ನು ಬಿಟ್ಟ ೩ ತಿಂಗಳೊಳಗೆ ಆಗಬಾರದ ಅನಾಹುತಗಳು ನಡೆದು ಹೋದವು.

ಶ್ರೀ ಸಿದ್ಧರಾಮೇಶ್ವರರು ಹೇಳುವರು

ಕಪಿಲಸಿದ್ಧಮಲ್ಲಿಕಾರ್ಜುನಾ
ನಿಮ್ಮ ಸಂಗನ ಬಸವಣ್ಣ ಬಂದು ಮರ್ತ್ಯದಲ್ಲಿ
ಮಹಾಮನೆಯ ಕಟ್ಟಿದರೆ
ಮರ್ತ್ಯಲೋಕವೆಲ್ಲವೂ ಭಕ್ತಿ ಸಾಮ್ರಾಜ್ಯವಾಯಿತ್ತು
ಆ ಮನೆಗೆ ತಲೆಬಾಗಿ ಹೊಕ್ಕವರೆಲ್ಲರೂ
ನಿಜಲಿಂಗ ಪದವಿಯ ಪಡೆದರು.


ಈ ಮಹಾಮನೆಯಲ್ಲಿ ಅನುಭವ ಗೋಷ್ಠಿ ನಡೆಯತ್ತಿದ್ದ ಭಾಗವೇ ಅನುಭವ

ಅನುಭವ ಮಂಟಪ - ಮಾದರಿ ಸಂಸ್ಥೆ

ಜಾತಿವರ್ಗವರ್ಣರಹಿತ ಆದರೆ ಧರ್ಮ ಸಹಿತವಾದ ಕಲ್ಯಾಣ ರಾಜ್ಯವನ್ನು ಕಟ್ಟಲು ಒಂದು ಸಾಧನವನ್ನಾಗಿ ಧರ್ಮಪಿತರು ಅನುಭವ ಮಂಟಪವನ್ನು ಕಟ್ಟಿದರು. ಅನುಭವ ಮಂಟಪ ದೇವಾಲಯವಲ್ಲ. ದೇವಾಲಯವು ದೇವರನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿದರೆ, ಅನುಭವ ಮಂಟಪ ನಾಲ್ಕು ಗೋಡೆಗಳ ಮಧ್ಯೆ ಇದ್ದ ದೇವರನ್ನು ಬಂಧ ಮುಕ್ತಗೊಳಿಸಿತು. ದೇವಾಲಯಗಳು ಕೆಲವರಿಗೆ ದರ್ಶನಾವಕಾಶ ಪೂಜಾಹಕ್ಕು ನೀಡಿದರೆ ಮತ್ತೆ ಕೆಲವರನ್ನು ಈ ಸೌಲಭ್ಯಗಳಿಂದ ವಂಚಿಸಿದವು. ಆದರೆ ಅನುಭವ ಮಂಟಪ ಕೆಲವರ ಕಪಿಮುಷ್ಟಿಯಲ್ಲಿದ್ದ ಧರ್ಮ ದೇವರನ್ನು ಎಲ್ಲರ ಸಂಪತ್ತನ್ನಾಗಿ ಮಾಡಲು ಹೋರಾಡಿತು.

ಧರ್ಮ- ದೇವರು-ಸಂಸ್ಕಾರ ಎಲ್ಲ ಮಾನವರ ಹಕ್ಕುಗಳು ಎಂದು ಧರ್ಮಪಿತರು ಸ್ವತಃ ಧರ್ಮಪ್ರಚಾರ ಕೈಗೊಂಡರು ; ಅವರ ಕುಟುಂಬ, ಪರಿವಾರ, ಅವರಿಂದ ತರಬೇತಿ ಹೊಂದಿದ ಜಂಗಮರು ಪ್ರಚಾರ ಕೈಗೊಂಡು, ಬಯಸಿದವರಿಗೆ ದೀಕ್ಷಾ ಸಂಸ್ಕಾರ ನೀಡಿದರು, ಹೀಗೆ ದೀಕ್ಷಿತರಾದವರನ್ನೆಲ್ಲ ಒಂದು ಕಡೆ ಸಮಾವೇಶಗೊಳಿಸಿ, ಸಂಸ್ಕರಿಸುವುದು ಮತ್ತು ದೀಕ್ಷಿತರಾದವರು ಪರಸ್ಪರ ಭೇದವಿಲ್ಲದೆ, ಪೂರ್ವಾಶ್ರಮವನ್ನು ಎತ್ತಿ ಆಡದೆ ಸಮಾನಭಾವದಿಂದ ಬೆರೆತು, ಸಹಪಂಕ್ತಿ ಭೋಜನ ಮಾಡಿ, ಸಹೋದರತ್ವ ಪ್ರದರ್ಶಿಸಲೆಂದು ಅನುಭವ ಮಂಟಪ ರೂಪುಗೊಂಡಿತು.

'ಶರಣ ಸಮಾಜ'' ಒಂದು ತತ್ತ್ವದ ನೆಲೆಗಟ್ಟಿನ ಮೇಲೆ ರೂಪುಗೊಂಡ ಪಾಕ. ಇದರಲ್ಲಿರುವ ಎಲ್ಲ ವಸ್ತುಗಳು ಪರಿಪಾಕಗೊಂಡು ಸಮರಸವಾಗಬೇಕು'. ಎಂದು ಮಂಟಪವು ಕೆಲಸ ಮಾಡಿತು. ಮಾರುಕಟ್ಟೆಯಿಂದ ನಾವು ಅಕ್ಕಿ, ಬೇಳೆ, ಉಪ್ಪು, ಕಾರ, ಕಾಯಿಪಲ್ಲೆ ಎಲ್ಲ ತರುತ್ತೇವೆ ಎಂದುಕೊಳ್ಳಿರಿ. ಆಗ ಉಗ್ರಾಣದಲ್ಲಿ ಎಲ್ಲವೂ ಪ್ರತ್ಯೇಕವಾಗಿ ಇರುತ್ತವೆ. ಈ ಸ್ಥಿತಿಯಲ್ಲಿರುವ ಅದನ್ನು ತರಕಾರಿ ಅನ್ನ ಎಂದು ನಾವು ಕರೆಯುವುದಿಲ್ಲ. ಒಂದು ಪಾತ್ರೆಯಲ್ಲಿ ಹಾಕಿ ಈ ವಸ್ತುಗಳನ್ನೆಲ್ಲ ಕುದಿಸಿದಾಗ ಅದು ಸ್ವಾದ ಸಹಿತವಾದ ತರಕಾರಿ ಅನ್ನವಾಗುವುದು. ಅದೇ ರೀತಿ ಹಿಂದೂ ಸಮಾಜದ ವಿವಿಧ ವರ್ಣ ಜಾತಿಗಳವರು ಪ್ರತ್ಯೇಕವಾಗಿ ಬದುಕುತ್ತ ಸಮರಸವಾಗದೆ ಇರುವುದನ್ನು ಗಮನಿಸಿದ ಬಸವಣ್ಣನವರು ಅನುಭವ ಮಂಟಪ ಎಂಬ ಪಾತ್ರೆಯಲ್ಲಿ ಎಲ್ಲ ಜಾತಿಮತ ಪಂಥಗಳಿಂದ ಬಂದ ಮುಮುಕ್ಷುಗಳನ್ನು ಸೇರಿಸಿ, ಶಿವಾನುಭಾವ ಸಂಸ್ಕಾರ ಎಂಬ ಚಿದಗ್ನಿಯನ್ನು ನೀಡಿ ಪರಿಪಾಕಗೊಳಿಸಿ ಶರಣ ಸಮಾಜ ಎನ್ನುವುದನ್ನು ರಚನೆ ಮಾಡಿದರು.

ಒಬ್ಬ ಲಿಂಗಾಯತ ಧರ್ಮಾನುಯಾಯಿಯ ಅನುಯಾಯಿತ್ವ ನಾಲ್ಕು ನಂಬಿಕೆ ಆಚರಣೆಗಳಿಂದ ಪರಿಪೂರ್ಣವಾಗುತ್ತದೆ. ಗುರುಸ್ವಾಯತ, ಲಿಂಗಸ್ವಾಯತ, ಜಂಗಮಸ್ವಾಯತ, ಪ್ರಸಾದ ಸ್ವಾಯತ, ಇದನ್ನು ಅಲ್ಲಮ ಪ್ರಭುದೇವರು ಸ್ಪಷ್ಟಪಡಿಸಿದ್ದಾರೆ.

೧. ಬಸವಾಯತ : ಧರ್ಮಗುರುವೇ ಒಂದು ಸಮಾಜದ ಮೇಟಿಗೂಟವಿದ್ದಂತೆ. ಧರ್ಮಗುರುವಿನಲ್ಲಿ ಶ್ರದ್ಧೆಯನ್ನಿರಿಕೊಳ್ಳದ ಯಾವ ಸಮಾಜವೂ ವ್ಯವಸ್ಥಿತವಾಗಿ ಸಾಗದು. ಧರ್ಮಗುರುವಿನ ಜೀವನ, ಸಾಧನೆ, ಸಂದೇಶಗಳು ಅನುಯಾಯಿಗೆ ದಿಕ್ಕೂಚಿಯಿದ್ದಂತೆ, ಆದ್ದರಿಂದ ಗುರುಸ್ವಾಯತವಾಗಬೇಕು ಅಂದರೆ ಬಸವಾಯತನಾಗಬೇಕು.

೨. ಲಿಂಗಾಯತ : ಬಸವ ಗುರುವು ಧಾರ್ಮಿಕ ಸಮಾನತೆಯ ಸಾಧನವಾಗಿಯೂ ವಿಶ್ವಾತ್ಮನನ್ನು ವಿಶ್ವದಾಕಾರದಲ್ಲಿ ಪೂಜಿಸಲು ಅನುವಾಗುವಂತೆಯೂ ಕೊಟ್ಟ ಚುಳುಕಾದ ದೇವ ಇಷ್ಟಲಿಂಗವನ್ನು ಶರೀರದ ಮೇಲೆ ಸಂಬಂಧಿಸಿಕೊಂಡು ಲಿಂಗಾಯತನಾಗಬೇಕು.

೩. ಗಣಾಯತ : ಮುಂದಿನದೇ ಜಂಗಮ ಸ್ವಾಯತ. ಅಂದರೇ ಒಂದು ವಿಶಿಷ್ಟ ತತ್ವಕ್ಕೆ ಬದ್ಧರಾಗಿ, ಗಣಲಾಂಛನವಾದ ಇಷ್ಟಲಿಂಗವನ್ನು ಧರಿಸಿಕೊಂಡು ಧರ್ಮಬಂಧುಗಳಾದವರ ಒಡನಾಟದಲ್ಲಿ ಸೇರಬೇಕು. ಲಿಂಗಾಯತ ಧರ್ಮ ವ್ಯಷ್ಟಿ ಧರ್ಮವಲ್ಲ ಸಮಷ್ಟಿ ಧರ್ಮ, ಕೂಡಿ ಬಾಳಬೇಕೆಂಬುದನ್ನು ಒತ್ತಿ ಒತ್ತಿ ಹೇಳುವ ಧರ್ಮ.

ಕಾಗೆ ಒಂದಗುಳ ಕಂಡಡೆ ಕರೆಯದೇ
ತನ್ನ ಬಳಗವೆಲ್ಲವ ?
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೇ
ತನ್ನ ಕುಲವನೆಲ್ಲವ ?
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದರೆ
ಆ ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವಾ
- ಬ.ವ.

ಕಾಗೆ ಕೋಳಿಯಿಂದ ತಮಗೆ ದೊರೆತುದನ್ನು ಹಂಚಿ ತಿನ್ನುವವು ಎಂದಾಗ ದೇವಸಾಕ್ಷಿಯಾಗಿ ಕೂಡಿದ ಶಿವಭಕ್ತ ಕೂಡಿ ಬದುಕಲು ಕಲಿಯಬಾರದೆ? ಹಂಚಿ ತಿನ್ನಬಾರದೆ?

ಎಷ್ಟೇ ದೊಡ್ಡ ವ್ಯಕ್ತಿಯಾಗಲಿ ಅವನು ಜಂಗಮ ಸ್ವಾಯತವಾಗಿ ಅಂದರೆ ಗಣಾಯತನಾಗಿ ಬದುಕಬೇಕು. ಹಾಗೆ ಆಗಬೇಕಾದರೆ ಅವನು ತತ್ತ್ವ ನಿಷ್ಠನಾಗಿರಲೇಬೇಕಾಗುತ್ತದೆ. ಇಲ್ಲವಾದರೆ ಅವನಿಗೆ ಗಣದ ಸದಸ್ಯತ್ವ ಗಣದಲ್ಲಿ ಸ್ಥಾನ (ಗಣಪದವಿ) ಲಭ್ಯವಾಗದು.

ಅಷ್ಟಮಿ ನವಮಿ ಎಂಬ ಕಲ್ಪಿತವೇಕೊ ಶರಣಂಗೆ
ತಪ್ಪಿತ್ತು ಗಣಪದವಿ ! ಲಿಂಗಕ್ಕೆ ದೂರ, ಜಂಗಮಕ್ಕೆ ದೂರ
ಒಬ್ಬರಿಗಾಳಾಗಿ ಒಬ್ಬರನೋಲೈಸುವ
ನಿರ್ಬುದ್ದಿ ಮನುಜರನೇನೆಂಬೆ
ಕೂಡಲಸಂಗಮದೇವಾ?
- ಬ.ವ.

ದುರ್ಗಾಷ್ಟಮಿ, ಮಹಾನವಮಿ, ಘಟ್ಟಕೂಡಿಸುವುದು ಮುಂತಾದವು ಶರಣನಿಗಿಲ್ಲ. ಲಿಂಗಾಯತನು ಆಚರಿಸಿದರೆ ಅವನನ್ನು ಸಮಾಜದಿಂದ ಹೊರಗಿಡಬೇಕು. ಏಕೆಂದರೆ ಗಣಪದವಿ ತಪ್ಪುವುದು. ದೇವರಿಗೂ ಬೇಡವಾಗುವನು. ಜಂಗಮಕ್ಕೂ (ಸಮಾಜಕ್ಕೆ, ಧಾರ್ಮಿಕ ಮುಖಂಡರಿಗೆ) ಬೇಡವಾಗುವನು. ಏಕೆಂದರೆ ಇವನು ಆಳಾಗಿರುವುದು ಕರ್ತನಿಗೆ ಓಲೈಸುವುದು ಕರ್ತನಲ್ಲದ ದೈವಂಗಳನ್ನು, ಗಂಡನ ಆಶ್ರಯದಲ್ಲಿದ್ದು ಪರಪುರುಷನ ಸ್ನೇಹ ಮಾಡುವ ಭ್ರಷ್ಟ ಸ್ತ್ರೀಯಂತೆ ಈ ಭಕ್ತ, ಅದಕ್ಕಾಗಿ ಶರಣ- ಕುಟುಂಬ ಅವನನ್ನು ಬಹಿಷ್ಕರಿಸುತ್ತದೆ.

೪. ಪ್ರಸಾದ ಸ್ವಾಯತ : ಒಬ್ಬ ವ್ಯಕ್ತಿ ನಿಜಾನುಯಾಯಿಯಾಗುವುದು ಬಂದವನನ್ನು ಸ್ವಾಗತಿಸಿ, ಆದರಿಸಿ, ಇಂಬಿಟ್ಟುಕೊಂಡಾಗ ಮಾತ್ರ. ಈ ಇಂಬಿಟ್ಟುಕೊಳ್ಳುವ ಕ್ರಿಯೆ ಸಹ ಭೋಜನ, ಈ ಕಾರ್ಯದಲ್ಲಿ ಸಾಕ್ಷಿಯಾಗುವವರು ಗುರು-ಜಂಗಮರು. ಒಬ್ಬ ವ್ಯಕ್ತಿ ದೀಕ್ಷೆ ಹೊಂದಿದಾಗ ಇವರು ಅವನ ಮನೆಗಾದರೂ ಹೋಗುವರು ಅಥವಾ ಇನ್ನಿತರ ಸಮಾಜ ಬಂಧುಗಳನ್ನು ಒಂದೆಡೆ ಸೇರಿಸಿ, ಆತನಿಗೆ 'ಕರುಣ ಪ್ರಸಾದ 'ವನ್ನು ಕೊಡುವರು ಮತ್ತು ಆಗಂತುಕನನ್ನು ಜೊತೆಗಿರಿಸಿಕೊಂಡು ಪ್ರಸಾದ ಸ್ವೀಕಾರ ಮಾಡುವರು. ಅಲ್ಲಿ ಅವನು ಸಮಾಜದಲ್ಲಿ ಅಡಕವಾಗುವನು.

ಸಾಮರಸ್ಯವನ್ನು ಸಾಧಿಸುವ ಮತ್ತೊಂದು ಕ್ರಿಯೆ ಶರಣರ ಸಂಗ, ಅನುಭವಗೋಷ್ಠಿ. ಇದು ಸತತವಾಗಿ ನಡೆಯಬೇಕು. ದಿನದಲ್ಲಿ ಒಂದು ನಿಮಿಷ ಕಾಲವಾದರೂ ಶರಣರ ಸಂಗದಲ್ಲಿರಬೇಕು ಎನ್ನುತ್ತಾರೆ ಧರ್ಮಪಿತರು.

ಲಿಂಗಾಂಗಿಗಳಲ್ಲದವರ ಶರಣರ ಸಂಗವಿಲ್ಲದವರ
ಕ೦ಡಡ ನಾಚುವ
ಅವರ ನುಡಿ ಎನಗೆ ಸಮನಿಸದಯ್ಯ
ಕೂಡಲಸಂಗಮದೇವಾ, ನೀನು ಅಲ್ಲಿಲ್ಲದ ಕಾರಣ.
- ಬ.ವ.

ಲಿಂಗಾಯತನಾಗುವುದು ಎಷ್ಟು ಮುಖ್ಯವೋ ಗಣಾಯತನಾಗುವುದೂ ಅಷ್ಟೇ ಮುಖ್ಯ. ಅಖಂಡ ಸಮಾಜವನ್ನು ಕಟ್ಟುವುದಕ್ಕೆ ನೆರವಾಗುವ ಪವಿತ್ರ ಸ್ಥಾನವೇ ಅನುಭವ ಮ೦ಟಪ.

ಶರಣರ ಸಂಗವು ವ್ಯಕ್ತಿಯನ್ನು ಪರಿಪೂರ್ಣಗೊಳಿಸಲು ಅತ್ಯಗತ್ಯ. ಶಸ್ತ್ರ ಚಿಕಿತ್ಸೆಗೆ ವೈದ್ಯರು ಪೂರ್ವಸಿದ್ಧತೆ ಮಾಡಿಕೊಳ್ಳುವರು. ರಕ್ತದೊತ್ತಡ, ರಕ್ತದೊಳಗಣ ಸಕ್ಕರೆ ಎಲ್ಲ ನಿಯಂತ್ರಣದಲ್ಲಿರುವುದನ್ನು ಗಮನಿಸಿ, ಶಸ್ತ್ರಚಿಕಿತ್ಸೆ ಮಾಡುವರು. ಅದು ಯಶಸ್ವಿಯಾದರೂ ಶಸ್ತ್ರಚಿಕಿತ್ಸಾನಂತರದ ಉಸ್ತುವಾರಿ, ಕಾಳಜಿ, ಚಿಕಿತ್ಸೆ ಮುಖ್ಯ. ಇಲ್ಲವಾದರೆ ರೋಗವು ಮರುಕಳಿಸಬಹುದು. ಉಲ್ಬಣವಾಗಬಹುದು ಮತ್ತು ಏನಾದರೂ ಸೋಂಕು ತಗುಲಿ, ನಂಜಾಗಬಹುದು.

ವಿಶ್ವಗುರು ಬಸವಣ್ಣನವರು ಅಸಂಖ್ಯಾತ ಜನರಿಗೆ ದೀಕ್ಷೆಯನ್ನು ನೀಡಿದರು. ಶಸ್ತ್ರಚಿಕಿತ್ಸಾನಂತರ ಆರೈಕೆಯನ್ನು ಮಠಾಧಿಕಾರಿಗಳಿಗೆ ಬಿಟ್ಟುಕೊಟ್ಟರು. ಆಪರೇಷನ್ ಯಶಸ್ವಿಯಾದರೂ ಮಠಾಧಿಕಾರಿಗಳು ಉದಾಸೀನತೆಯಿಂದ ಪೋಸ್ಟ್ ಟ್ರೇಟ್‌ ಮೆಂಟ್ ಸರಿಯಾಗದೆ, ರೋಗ ವಾಸಿಯಾಗಲಿಲ್ಲ : ಉಲ್ಬಣಗೊಂಡಿತು. ಅದೇ ಸಮಯದಲ್ಲೇ ಪಂಚಾಚಾರ್ಯವಾದಿಗಳ ರೋಗಸೋಂಕು ತಗುಲಿ, ಜಾತೀಯತೆಯ ನಂಜು ಏರಿಬಿಟ್ಟಿದೆ. ಎಲ್ಲ ಪ್ರಗತಿಪರ ಆಂದೋಲನಗಳು ಪುನಃ ಪುರೋಹಿತಶಾಹಿ, ರಾಜಶಾಹಿ, ವ್ಯಾಪಾರಿಗಳ ಕೈಗೆ ಸಿಕ್ಕಿ ಭಾರತ ದೇಶದಲ್ಲಿ ತಮ್ಮ ಮೂಲಸತ್ತ್ವ ಕಳೆದುಕೊಳ್ಳುವಂತೆ, ಶರಣರ ತತ್ತ್ವಗಳೂ ನಿರ್ಜಿವಗೊಂಡವು, ಕರಿಕೆ ಭೂಮಿಯಲ್ಲಿ ಬಿತ್ತಲ್ಪಟ್ಟ ಬೀಜಗಳಂತೆ ವಚನ ಸಾಹಿತ್ಯ ತನ್ನ ಅನುಯಾಯಿಗಳ ಮೇಲೆ ಮಾಡಬೇಕಾದ ಪರಿಣಾಮ ಮಾಡಲಿಲ್ಲ.

ಪ್ಲೇಟೋನ ಅಕ್ಯಾಡಮಿ, ಅಕ್ಟರನ ದಿನ್-ಇ- ಲಾಹಿ

ವಿಶ್ವಗುರು ಬಸವಣ್ಣನವರು ರೂಪಿಸಿದ ಅನುಭವ ಮಂಟಪವನ್ನು ನೆನಪಿಗೆ ತರುವ ಇನ್ನಿತರ ಸಂಸ್ಥೆಗಳೆಂದರೆ ಪ್ಲೇಟೋನ ಅಕ್ಯಾಡಮಿ, ಮೊಗಲ್ ಚಕ್ರವರ್ತಿ ಅಕ್ಟರ್ ರೂಪಿಸಿದ ದಿನ್-ಇಲಾಹಿ ಮತ್ತು ಆಧುನಿಕ ಪಾರ್ಲಿಮೆಂಟ್. ಆದರೆ ಅನುಭವ ಮಂಟಪ ಇವೆಲ್ಲಕ್ಕಿಂತಲೂ ಬೇರೆಯೆ.

ಪ್ಲೇಟೋನ ರಿಪಬ್ಲಿಕ್ ಗ್ರಂಥವನ್ನು ಓದಿದಾಗ ಬಗೆಬಗೆಯ ವಿಷಯಗಳ ಚರ್ಚೆ ಅಲ್ಲಿ ನಡೆಯುತ್ತಿದ್ದುದು ಗೋಚರವಾಗುತ್ತದೆ. ಆದರೆ ಅಕ್ಯಾಡಮಿಯಲ್ಲಿ ಸಮಾವೇಶವಾಗುತ್ತಿದ್ದವರು ಕೇವಲ ತಾರ್ಕಿಕರು (Logicians) ಮತ್ತು ತತ್ತ್ವಜ್ಞಾನಿಗಳು. ಅನುಭವ ಮಂಟಪದಲ್ಲಿ ಸಮಾವೇಶವಾಗುತ್ತಿದ್ದವರು ಅನುಭಾವಿಗಳು ಮತ್ತು ದಾರ್ಶನಿಕರು. ಅಕ್ಯಾಡಮಿಯ ಚರ್ಚೆಯ ಉದ್ದೇಶ ಕೇವಲ ಜ್ಞಾನ. ಅನುಭವ ಮಂಟಪದ ಉದ್ದೇಶ ಅರಿವನ್ನು ಆಚರಣೆಗೆ ಇಳಿಸುವುದು. ಅಲ್ಲಿ ಚರ್ಚೆಯು ಬೌದ್ದಿಕ ಕುಸ್ತಿ, ಇಲ್ಲಿ ಅಂತರಂಗ-ಬಹಿರಂಗ ಶುದ್ದಿಗೆ ಸಾಧನ. ಅಲ್ಲಿ ತಾರ್ಕಿಕ, ಕೂದಲು ಸೀಳುವ ವಿಶ್ಲೇಷಣೆ, ಇಲ್ಲಿ ತತ್ತ್ವವನ್ನು ತಿಳಿದು ಆನಂದಿಸುವ ಪ್ರಯತ್ನ. ಅಲ್ಲಿ ಸಮಸ್ಯೆ ತಿಳಿಯಲು ಚರ್ಚೆ; ಇಲ್ಲಿ ಸಮಸ್ಯೆಗೆ ಪರಿಹಾರ ನೀಡಲು ಚರ್ಚೆ. ಅರಿಸ್ಟಾಟಲ್, ಸೋಕ್ರತೀಸ್, ಪ್ಲೇಟೋ ಮುಂತಾದವರು ಬೇರೆ ಬೇರೆ ಪರಿಕಲ್ಪನೆ (Concept) ಗಳನ್ನು ತಿಳಿಸಲು ಚರ್ಚಿಸಿ ಪುಸ್ತಕ ಬರೆದು ಹೋದರು. ಶರಣರು ಒಂದು ಆದರ್ಶ ಸಮಾಜ ಕಟ್ಟಿ, ಸಾಹಿತ್ಯವನ್ನು ಬಿಟ್ಟು ಹೋದರು.

ಅಕ್ಷರನ ದಿನ್-ಇ- ಲಾಹಿಯಂತೂ ಇಂದಿನ ಸರ್ವಧರ್ಮಸಮ್ಮೇಳನಗಳಂತೆ. ಆಯಾ ಧರ್ಮಗಳ ಪಂಡಿತರು ತಮ್ಮ ತಮ್ಮ ಧರ್ಮದ ಬಗ್ಗೆ ಹೇಳುವರು; ಇನ್ನಿತರರು ಕೇಳುವರು.

ಪ್ರಜಾಪ್ರಭುತ್ವದ ಜೀವಾಳ ಪಾರ್ಲಿಮೆಂಟು ; ಇದರ ಜೀವಾಳ ವಿಚಾರ, ವಾಕ್, ಆಚಾರ ಸ್ವಾತಂತ್ರ್ಯ. ಸಮುದಾಯಿಕ ಚಿಂತನೆ ಲೋಕಸಭೆಯ ವಿಶೇಷ. ಈ ಎರಡೂ ಅಂಶಗಳಲ್ಲಿ ಅನುಭವ ಮಂಟಪ ಲೋಕಸಭೆಯನ್ನು ಹೋಲುತ್ತದೆ. ಪ್ರತಿಯೊಬ್ಬ ಶರಣ ಸದಸ್ಯನಿಗೂ ವಿಚಾರ ಸ್ವಾತಂತ್ರ್ಯವಿತ್ತು; ತನಗೆ ಸರಿಕಂಡುದನ್ನು ಪ್ರತಿಪಾದಿಸುವ ವಾಕ್ ಸ್ವಾತಂತ್ರ್ಯವಿತ್ತು ಮತ್ತು ತನಗೆ ಸಮ್ಮತವಾದ ಆಚಾರವನ್ನು ಅಳವಡಿಸಿಕೊಳ್ಳಲವಕಾಶವಿದ್ದಿತು. ಶರಣರು ಧಾರ್ಮಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳೆಲ್ಲವನ್ನು ಮುಕ್ತಮನದಿಂದ ಚರ್ಚಿಸುತ್ತಿದ್ದರು. ಆದರೆ ಲೋಕಸಭಾ ಸದಸ್ಯರಿಗೆ ಭಿನ್ನವೆಂಬಂತೆ, ತಾವು ನಂಬಿದ್ದನ್ನು ; ಆಡಿದ್ದನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು ; ಸಚ್ಚಾರಿತ್ರ್ಯವಂತರಾಗಿದ್ದರು. ಉತ್ತಮ ನಡೆ-ನುಡಿಗಳನ್ನು ಸಂಗಮಿಸಿಕೊಂಡು, ಆತ್ಮಾನುಭವಿಗಳಾಗಿದ್ದರು, ದಾರ್ಶನಿಕರಾಗಿದ್ದರು. ಹೀಗಾಗಿ ಅನುಭವ ಮಂಟಪವು ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಆಗಿತ್ತು ಎಂದರೆ ಉತ್ತೇಕ್ಷೆಯಲ್ಲ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನುಭವ ಮಂಟಪವನ್ನು ವಿಶ್ವಸಂಸ್ಥೆ (U.N.O)ಗೂ ಹೋಲಿಸಬಹುದು. ಲೋಕಸಭೆ ತನ್ನ ದೇಶದ ಸಮಸ್ಯೆ, ಆಗು ಹೋಗುಗಳನ್ನು ಕುರಿತು ಚಿಂತನೆ ಮಾಡಿದರೆ ವಿಶ್ವರಾಷ್ಟ್ರ ಸಂಸ್ಥೆ ಮಾನವ ಜನಾಂಗದ ಆಗುಹೋಗು, ಸಮಸ್ಯೆಗಳನ್ನು ಚಿಂತಿಸುತ್ತದೆ. ಹಾಗೆ ಅನುಭವ ಮಂಟಪದ ಚರ್ಚೆ ಒಂದು ಜಾತಿ ಒಂದು ಮತ ಒಂದು ಪಂಥಕ್ಕೆ ಸೀಮಿತವಾಗಿ ಸಾಗದೆ ಮಾನವ ಜನಾಂಗದ ಸಮಸ್ಯೆಗಳನ್ನು ಕುರಿತು, ಚಿಂತಿಸಿದುದನ್ನು ಶೂನ್ಯ ಸಂಪಾದನೆಯಲ್ಲಿ ಕಾಣುತ್ತೇವೆ.

ಅನುಭವ ಮಂಟಪವು ಅರ್ಥಾತ್ ಬಸವ ತತ್ತ್ವವು ಸಮಾನತೆಯನ್ನು ಬೋಧಿಸಿತು. ಸಮಾಜವಾದಿ ಸಮಾಜರಚನೆಗೆ ನಾಂದಿ ಹಾಡಿತು. ಅನೇಕರು ಈ ಸಮಾಜವಾದದಲ್ಲಿ ಕಮ್ಯುನಿಸ್ಟರಿಂದ ಹೋಲಿಕೆಯನ್ನು ಕಂಡರೂ ಮೂಲಭೂತ ವ್ಯತ್ಯಾಸವಿದೆ.

ಮಾರ್ಕ್ಸ್‌ ಸಾಮ್ಯವಾದವು ಭೌತಿಕವಾದದ ತಳಹದಿಯ ಮೇಲೆ ನಿಂತಿದ್ದರೆ, ಬಸವಣ್ಣನವರ ಸಮತಾವಾದವು ಚಿತ್ ಪ್ರಧಾನವಾದ (Idealism) ಮೇಲೆ ನಿಂತಿದೆ. ಮಾರ್ಕ್ಸವಾದದಲ್ಲಿ ಜಡಶಕ್ತಿಯು (Material Energy) ಈ ಸೃಷ್ಟಿಗೆ ಆದಿ ಕಾರಣವಾಗಿದ್ದರೆ ಬಸವ ತತ್ತ್ವದಲ್ಲಿ ಚೈತನ್ಯ ಶಕ್ತಿ(Spiritual Energy ಪರಮಾತ್ಮ ತತ್ತ್ವವು)ಯು ಆದಿ ಕಾರಣವಾಗಿರುತ್ತದೆ. ಮಾರ್ಕ್ಸವಾದದಲ್ಲಿ ಸಾಮಾಜಿಕ ಪ್ರಜ್ಞೆಯೇ ಸಮತಾದೃಷ್ಟಿಗೆ ಪ್ರೇರಕ ಶಕ್ತಿಯಾದರೆ ಬಸವವಾದದಲ್ಲಿ ಶಿವಪ್ರಜ್ಞೆ (Divine Con- sciousness) ಸಮತಾ ದೃಷ್ಟಿಗೆ ಪ್ರೇರಣೆ ನೀಡುತ್ತದೆ. ಏಕೆ . ಮನುಷ್ಯ ಒಳ್ಳೆಯವನಾಗಿರಬೇಕು ? ಒಳ್ಳೆಯದನ್ನು ಮಾಡಬೇಕು ? ತನ್ನಂತೆ ಇನ್ನೊಬ್ಬನಿಗೆ ಸುಖ-ದುಃಖವಿರುತ್ತದೆ. ಆದ್ದರಿಂದ ಎಂದು ಸಾಮ್ಯವಾದ ಅಂದರೆ, ತನ್ನಂತೆ ಸುಖದುಃಖ ಇರುವುದು ಮಾತ್ರವಲ್ಲ ಪ್ರತಿಯೊಂದು ಜೀವವೂ ಶಿವಾಂಶಿಕವಾಗಿರುತ್ತದೆ. ದೇವರು ಭಕ್ತ ದೇಹಿಕ, ಆದ್ದರಿಂದ ದೇವರನ್ನು ನೋಯಿಸಬಾರದು ಎನ್ನುತ್ತದೆ ಬಸವ ತತ್ವ, ಮಾರ್ಕ್ಸ್‌ವಾದದಲ್ಲಿ ಧೈಯ ಮುಖ್ಯ. ಸಾಧನೆ ಹಿಂಸಾತ್ಮಕವಾಗಿದ್ದರೂ ಪರವಾಗಿಲ್ಲ. ಬಸವ ತತ್ತ್ವದಲ್ಲಿ ಧೈಯವಷ್ಟೇ ಚೆನ್ನಾಗಿದ್ದರೆ ಸಾಲದು, ಸಾಧನವು ಚೆನ್ನಾಗಿರಬೇಕು. ಆದ್ದರಿಂದ ಇದು ಹೃದಯ ಪರಿವರ್ತನೆಗೆ ಮಹತ್ವ ನೀಡುತ್ತದೆ. ಮಾರ್ಕ್ಸ್‌ವಾದವು ಶರೀರ ಸುಖಕ್ಕೆ, ಆರಾಮ ಜೀವನಕ್ಕೆ ಮಹತ್ವ ನೀಡಿದರೆ ಬಸವ ತತ್ತ್ವವು ಶರೀರ-ಬುದ್ಧಿ (ಮನ) ಆತ್ಮ ಮೂರನ್ನು ಒಪ್ಪಿ ಸುಖ-ಸಂತೋಷ ಆನಂದ ಮೂರಕ್ಕೂ ಸ್ಥಾನ ನೀಡುತ್ತದೆ. ಮಾರ್ಕ್ಸ್ ವಾದವು ಸಮೃದ್ಧರಾಷ್ಟ್ರಕ್ಕೆ ಮಹತ್ವ ನೀಡಿದರೆ, ಬಸವತತ್ವವು ಸಮೃದ್ಧಿ, ಸಂತೃಪ್ತಿ, ಸುಯಿಧಾನ ಮೂರಕ್ಕೂ ಸ್ಥಾನವನ್ನು ನೀಡುತ್ತದೆ.

ಮಾರ್ಕ್ಸ್ವಾದೀ ಸಮಾಜದಲ್ಲಿ ಬಂದೂಕಿನ ತುದಿಗೆ ಹೆದರಿ ಕಾಮ್ರೇಡನು ಅನಿವಾರ್ಯವಾದ ಸರಳ ವ್ರತವನ್ನು, ಒಳ್ಳೆಯತನವನ್ನು ಅಳವಡಿಸಿಕೊಂಡರೆ, ಬಸವವಾದಿ ಸಮಾಜದಲ್ಲಿ ಅಂತರಾತ್ಮನಿಗೆ, ಪರಮಾತ್ಮನಿಗೆ ಹೆದರಿ ಶರಣನು ಸ್ವಯಂ ಪ್ರೇರಣೆಯ ಸರಳ ವ್ರತವನ್ನು, ಒಳ್ಳೆಯತನವನ್ನು ಅಳವಡಿಸಿಕೊಳ್ಳುವನು. ಸಮಷ್ಟಿ ಜೀವನವನ್ನು ಸಾಮ್ಯವಾದಿಯು ಒತ್ತಾಯದಿಂದ ಅಳವಡಿಸಿಕೊಂಡರೆ, ಸಮಷ್ಟಿ ಜೀವನವನ್ನು ಶರಣನು ಸ್ವಯಂ ಇಚ್ಛೆಯಿಂದ ಅಳವಡಿಸಿಕೊಳ್ಳುವನು. ತನ್ನ ದುಡಿಮೆಯ ಪ್ರತಿಫಲವನ್ನು ಅನಿವಾರ್ಯವಾಗಿ ಸ್ಟೇಟ್‌ಗೆ ಸಾಮ್ಯವಾದಿಯು ಸಲ್ಲಿಸಿದರೆ, ಶರಣನು ಸಂತೋಷದಿಂದಲೇ ಶಿವನ ಸೊಮ್ಮನ್ನು ಶಿವನಿಗೆ ಸಲ್ಲಿಸುವನು. ಹೀಗೆ ಭೌತಿಕವಾದದ ತಳಹದಿಯ ಮೇಲೆ ನಿಂತ ಸಾಮ್ಯವಾದ, ಚಿತ್ ಪ್ರಧಾನ ವಾದದ ಮೇಲೆ ನಿಂತ ಸಮತಾವಾದಗಳಲ್ಲಿ ಹೋಲಿಕೆ-ಭಿನ್ನತೆ ಎರಡೂ ಕಂಡು ಬರುವವು. ಒಂದರಲ್ಲಿ ಅನ್ಯರು ಹೇರಿದ ಕಟ್ಟುಪಾಡು ಇದ್ದರೆ ಇನ್ನೊಂದರಲ್ಲಿ ತಾನೇ ವಿಧಿಸಿಕೊಂಡ ನೇಮವಿರುತ್ತದೆ. ಅನುಭವ ಮಂಟಪ ಜಗತ್ತಿಗೇ ಮಾದರಿಯಾಗಿ ನಿಲ್ಲುವ ಒಂದು ಶರಣ ಸಮಾಜವನ್ನು ರಚಿಸಿ ತೋರಿಸಿತು. ಹೀಗೆ ವಿಶ್ವಗುರು ಬಸವಣ್ಣನವರು ತಮ್ಮ ಹೃನ್ಮನ ಬುದ್ಧಿಗಳಲ್ಲಿ ರೂಪುಗೊಂಡ ಆಲೋಚನಾ ಸರಣಿಗೆ ಒಂದು ಕ್ರಿಯಾತ್ಮಕ ಮತ್ತು ಸಾರ್ವತ್ರಿಕ ಸ್ವರೂಪವನ್ನು ಕೊಡಬೇಕು ಎಂಬ ಘನ ಉದ್ದೇಶದಿಂದ ಅನುಭವ ಮಂಟಪವೆಂಬ ಪ್ರಯೋಗ ಶೀಲ ಆಧ್ಯಾತ್ಮ ವಿಶ್ವವಿದ್ಯಾಲಯವನ್ನು ಕಟ್ಟಿದರು.

೧. ಇಂದಿನ ವಿಶ್ವವಿದ್ಯಾಲಯಗಳಂತೆ ಅನುಭವ ಮಂಟಪವು ಕೇವಲ ಉಪಜೀವನದ ವಿದ್ಯೆಯನ್ನು ಕೊಡುವ ಲೌಕಿಕ ಸಂಸ್ಥೆಯಾಗದೆ, ಜೀವನದ ವಿದ್ಯೆಯನ್ನು ಕಲಿಸುವ ವಿನೂತನ ಸಂಸ್ಥೆಯಾಯಿತು.

೨. ಇಂದಿನ ವಿಶ್ವವಿದ್ಯಾಲಯಗಳಂತೆ ಕೇವಲ ಬುದ್ದಿಯನ್ನು ಬೆಳೆಸುವ ಒಂದು ಕಾರಾಗಾರವಾಗದೆ ಭಾವ- ಬುದ್ಧಿಗಳನ್ನು ಸಮತೌಲನಿಕವಾಗಿ ಬೆಳೆಸುವ ಕಮ್ಮಟವಾಯಿತು.

೩. ಇಂದಿನ ವಿದ್ಯಾಲಯಗಳು ದೇಹ ಪರಿಶ್ರಮಕ್ಕೆ ಕಾಸಿನ ಬೆಲೆಯನ್ನೂ ಕೊಡದೆ, ಸುಖ ಜೀವನಕ್ಕೆ ಹೆದ್ದಾರಿಯಾಗುವ ಸರಕಾರಿ ನೌಕರಿಗಳನ್ನು ಬೆನ್ನು ಹತ್ತುವ ಪ್ರವೃತ್ತಿ ಬೆಳೆಸಿದರೆ, ಅಂದಿನ ಅನುಭವ ಮಂಟಪ – ವೃತ್ತಿಗೌರವ-ವೃತ್ತಿದೈವತ್ವಗಳನ್ನು ಪ್ರತಿಪಾದಿಸಿ, ಸ್ವಾವಲಂಬಿ ಕಾಯಕಗಳನ್ನು ಶರಣರು ಕೈಗೊಳ್ಳುವಂತೆ ಪ್ರೇರೇಪಿಸಿತು. 'ಕಾಯ' ಪದ ಜನ್ಯವಾದ ಕಾಯಕವು ಮೂಲವಾಗಿ ಸಂಸ್ಕೃತ ಪದವಾದರೂ ಅಲ್ಲಿ ಇಲ್ಲದ ವಿಶೇಷತೆಯನ್ನು ಕನ್ನಡ ಭಾಷೆಯಲ್ಲಿ ತುಂಬಿಕೊಂಡುದು ಗುರು ಬಸವಣ್ಣನವರು ಮತ್ತು ಅನುಭವ ಮಂಟಪದ ಮೂಲಕ.

೪. ಇಂದಿನ ವಿಶ್ವವಿದ್ಯಾಲಯಗಳು ತನು-ಮನ- ಆತ್ಮ ಈ ಮೂರು ಘಟಕಗಳಲ್ಲಿ 'ಮನ' ಕ್ಕೆ ಅರ್ಥಾತ್ ಬುದ್ಧಿಗೆ ಸಂಸ್ಕಾರ ಕೊಟ್ಟರೆ ಅನುಭವ ಮಂಟಪವು ಮೂರೂ ಘಟಕಗಳಿಗೆ ಸಂಸ್ಕಾರ ಕೊಡಲು ಅರ್ಪಣೆ-ಅನುಭಾವ- ಅರ್ಚನೆಗಳನ್ನು ಬೋಧಿಸಿತು.

ಅರ್ಪಣೆ : ಈ ಆಚರಣೆಯು ತನ್ನಲ್ಲಿ ೩ ಅಂಶಗಳನ್ನು ಅಂತರ್ಗತಗೊಳಿಸಿಕೊಂಡಿದೆ. ಅವೇ ಕಾಯಕ-ದಾಸೋಹ-ಪ್ರಸಾದ. ಶರೀರವು ಅತ್ಯಮೂಲ್ಯವಾದ ಸಾಧನ. ಇದರ ರಕ್ಷಣೆಗೆ ಅನ್ನ ಬೇಕು. ಅನ್ನದ ಸಂಪಾದನೆಗೆ ಅರ್ಥಬೇಕು. ಈ ಅರ್ಥವನ್ನು ಗಳಿಸುವ ಮಾರ್ಗವೇ ಕಾಯಕ. ಪ್ರಾಮಾಣಿಕ ಉದ್ಯೋಗ, ಹೀಗೆ ಗಳಿಸಿದ ಅರ್ಥವನ್ನು ತನಗೆ ಅಗತ್ಯವಿದ್ದಷ್ಟು ಬಳಸಿಕೊಂಡು, ದಾಸೋಹದ ಮುಖಾಂತರ ಸಮಷ್ಟಿಗೆ ಅರ್ಥಾತ್ ಜಂಗಮಕ್ಕೆ ಸಲ್ಲಿಸಬೇಕು. ಆಗ ಸ್ವೀಕರಿಸುವುದು ಪ್ರಸಾದ. ಕಾಯಕದಿಂದ ಗಳಿಸಿ, ದಾಸೋಹದ ಮೂಲಕ ವಿನಿಯೋಗಿಸಿ, ಪ್ರಸಾದವನ್ನು ಸ್ವೀಕರಿಸುವುದೇ ಅರ್ಪಣೆ. ಈ ತತ್ವದಿಂದ ವ್ಯಕ್ತಿಯು ಬದುಕುವನು. ಸಮಾಜವನ್ನು ಸುಸ್ಥಿತಿಯಲ್ಲಿ ಇಡುವನು. ಹೀಗೆ ಕಾಯಕ ಸಮಷ್ಟಿಯುದ್ಧಾರದ ಸೂತ್ರ.

ಅನುಭಾವ : ಮನುಷ್ಯನಲ್ಲಿರುವುದು ಶರೀರ ಒಂದೇ ಅಲ್ಲ, ಇದಕ್ಕಿಂತ ಮಿಗಿಲಾದುದು, ಉಳಿದ ಪ್ರಾಣಿಗಳಿಗಿಂತಲೂ ಮನುಷ್ಯನನ್ನು ಶ್ರೇಷ್ಠಗೊಳಿಸುವುದು ಮನಸ್ಸು. ಈ ಮನಸ್ಸಿನ ವಿಕಾಸಕ್ಕಾಗಿ ಬೇಕು ಶರಣರ ಸಂಗ ; ಶರಣರ ಅನುಭಾವ.

ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು.
ವಸ್ತ್ರ ಮಾಸಿದಡೆ ಮಡಿವಾಳಂಗಿಕ್ಕುವುದು.
ಮನದ ಮೈಲಿಗೆಯ ತೊಳೆಯಬೇಕಾದರೆ
ಕೂಡಲ ಚನ್ನಸಂಗನ ಶರಣರ ಅನುಭಾವವ ಮಾಡುವುದು.


ಈ ಅನುಭಾವದಿಂದ ಧರ್ಮಬಂಧುಗಳ ಒಡನಾಟ ಪ್ರಾಪ್ತಿಯಾಗುವುದು, ತಾತ್ವಿಕ ಸಂದೇಹ, ಸಂಶಯಗಳಳಿದು ತಾತ್ವಿಕ ನಿಖರತೆ ಪ್ರಾಪ್ತವಾಗುವುದು. ಉಳಿದ ಶರಣರು ಸಹಪಥಿಕರಾಗುವುದರಿಂದ ಸಾಧನಾಮಾರ್ಗ ಸರಳವಾಗುವುದು.

ಮಡಿಕೆಯ ಮಾಡುವರೆ ಮಣ್ಣೆ ಮೊದಲು
ತೊಡುಗೆಯ ಮಾಡುವೊಡೆ ಹೊನ್ನೆ ಮೊದಲು
ಶಿವಪಥವನರಿವೊಡೆ ಗುರುಪಥವೇ ಮೊದಲು
ನಮ್ಮ ಕೂಡಲಸಂಗಮದೇವರನರಿವೊಡೆ
ಶರಣರ ಸಂಗವೇ ಮೊದಲು ||
-ಬ.ವ.

ದೇವರ ಸ್ವರೂಪ ಮುಂತಾದ ತಾತ್ವಿಕ ಸಂಗತಿಗಳು ಶರಣರ ಸಂಗದಲ್ಲಿ ಅರ್ಥವಾದರೆ, ಅವರ ಮಾರ್ಗದರ್ಶನದಿಂದ, ಪರಮಾತ್ಮನ ದರ್ಶನ ಪ್ರಾಪ್ತಿಯಾಗುತ್ತದೆ.

ಧರ್ಮಪಿತರ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಧರ್ಮಪಿತರ ಕಾಲದಲ್ಲಿ ಪ್ರತಿಯೊಂದು ಊರಿನಲ್ಲಿಯೂ ದಿನನಿತ್ಯವೂ ಅನುಭವ ಗೋಷ್ಠಿಗಳು ನಡೆಯುತ್ತಿದ್ದವು. ಊರಲ್ಲಿರುವ ಮಠಗಳು ಜನರಿಗೆ ನಿತ್ಯ ಸಂಸ್ಕಾರವನ್ನು ನೀಡುತ್ತಿದ್ದವು. ಇಂದು ಅದು ಇಲ್ಲವಾಗಿದೆ. ಬಹುಪಾಲು ಮಠಗಳು ವ್ಯವಹಾರದ ಕೇಂದ್ರಗಳಾಗಿವೆ. ಇನ್ನು ಕೆಲವು ಮಠಗಳಲ್ಲಿ ಬೋಧೆಯು ನಡೆದರೂ ಅವೈಚಾರಿಕ ಪುರಾಣ, ಕೀರ್ತನೆಗಳಲ್ಲಿ ಕಾಲಹರಣವಾಗುತ್ತಿರುತ್ತದೆ.

ತಮ್ಮ ಮಠದ ಗದ್ದುಗೆಗಳ ಕರ್ತೃಗಳನ್ನು ದೈವೀಕರಿಸಿದ, ವೈಭವೀಕರಿಸಿದ ಅವೈಚಾರಿಕ ಪವಾಡಗಳಿಂದ ತುಂಬಿದ ಪುರಾಣ ಶ್ರವಣದಿಂದ ಜನರಲ್ಲಿ ಹೆಚ್ಚಿನ ಸಂಸ್ಕಾರವಾಗದು. ಆದ್ದರಿಂದ ಬಸವ ತತ್ವಾನುಯಾಯಿಗಳು, ಅಭಿಮಾನಿಗಳು, ಆಸಕ್ತರು ಒಂದು ಕಡೆ ಸೇರಿ ಅನುಭವ ಗೋಷ್ಠಿಯನ್ನು (ಧರ್ಮಪಿತರ ಕಾಲದಲ್ಲಿ ನಡೆದಂತೆ ನಿತ್ಯವೂ ಮಾಡಲಾಗದಿದ್ದರಷ್ಟೆ ವಾರಕ್ಕೊಮ್ಮೆಯಾದರೂ ಒಂದಡೆ ಸೇರಿ ವಚನಾನುಭವವನ್ನು, ಸಾಮೂಹಿಕ ಪ್ರಾರ್ಥನೆ ಮಾಡಿಯಾದ ನಂತರ ಮಾಡಬೇಕು.

ಇನ್ನು ದಿನ ನಿತ್ಯ ಅರ್ಧಗಂಟೆ, ಒಂದು ಗಂಟೆಯನ್ನಾದರೂ ಮೀಸಲಿರಿಸಿ ಕುಟುಂಬದವರೆಲ್ಲ ಒಂದೆಡೆ ಸೇರಿ, ಸಂಕ್ಷಿಪ್ತ ಪ್ರಾರ್ಥನೆ ಮಾಡಿ, ವಚನ ಶಾಸ್ತ್ರದ ಅಧ್ಯಯನ- ಚಿಂತನ ಮಾಡಬೇಕು. ಇದರಿಂದ ಕೌಟುಂಬಿಕವಾದ ಹಾರ್ದಿಕತೆ ಮೂಡುವುದೇ, ಅಲ್ಲದೇ ತಮ್ಮ ಧರ್ಮದ ಬಗ್ಗೆ ಜ್ಞಾನವನ್ನು ಹೊಂದಲು ಅನುಕೂಲವಾಗುವುದು. ಮಕ್ಕಳು ಉತ್ತಮ ಸಂಸ್ಕಾರದಲ್ಲಿ ಬೆಳೆದು, ಆದರ್ಶ ಜೀವನವನ್ನು ಅಳವಡಿಸಿಕೊಳ್ಳುವರು. ತಾಯಿ ತಂದೆಯರನ್ನು, ಗುರುಹಿರಿಯರನ್ನು ಗೌರವಿಸುವರು.

ಅರ್ಚನೆ : ವ್ಯಕ್ತಿಯಲ್ಲಿರುವ ಅತ್ಯಂತ ಮಹತ್ವಪೂರ್ಣವಾದ ಅಂಶ ಆತ್ಮ, ಆತ್ಮ ಎಂಬ ನಿಧಿ ಇರುವುದರಿಂದಲೇ ಈ ಶರೀರಕ್ಕೆ ಬೆಲೆ, ಆತ್ಮವು ಇಲ್ಲಿಂದ ತೊಲಗುತ್ತಲೇ ಈ ಶಿವವು ಶವವೇ ಆಗಿಬಿಡುತ್ತದೆ. ಒಂದು ಹಣದ ಚೀಲ ಇದೆ ಎಂದುಕೊಳ್ಳುವಾ. ಅದರಲ್ಲಿ ಹಣ ಇರುವಾಗ ಅದನ್ನು ತುಂಬಾ ಎಚ್ಚರಿಕೆಯಿಂದ ಕಾಯ್ದಿರಿಸುತ್ತೇವೆ. ಕಾಯುತ್ತೇವೆ. ಆ ಹಣವನ್ನು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿದ ಬಳಿಕ ಅಥವಾ ಬ್ಯಾಂಕಿಗೆ ಕಟ್ಟಿದ ಬಳಿಕ ಚೀಲವನ್ನು ಎಲ್ಲೋ ಇಡುತ್ತೇವೆ. ಹಾಗೆಯೇ ಆತ್ಮವೆಂಬ ನಿಧಿಯು ಇರುವವರೆಗೆ ಶರೀರವೆಂಬ ಈ ಚೀಲಕ್ಕೆ ಎಲ್ಲಿಲ್ಲದ ಬೆಲೆ. ಅದು ತೊಲಗುತ್ತಲೇ ಶರೀರದ ಚೀಲವನ್ನು ಭೂಮಿಯಲ್ಲಿ ಹೂಳುತ್ತಾರೆ. ಇಲ್ಲವೇ ಬೆಂಕಿಯಲ್ಲಿ ದಹಿಸುತ್ತಾರೆ. ಹೀಗೆ ಮನುಷ್ಯನಿಗೆ ಅವನ ಅಸ್ತಿತ್ವಕ್ಕೆ ಬೆಲೆ ತಂದುಕೊಡುವುದೇ ಆತ್ಮ. ಈ ಆತ್ಮಕ್ಕೆ ತನ್ನ ಮೂಲ ನೆಲೆಯಾದ ಪರಮಾತ್ಮನನ್ನು ಕೂಡುವ ಹಂಬಲ. ಈ ಹಂಬಲವು ಪೂರೈಸಲು ಇರುವ ಸಾಧನವೇ ಅರ್ಚನೆ.

ವ್ಯಕ್ತಿಯ ಬದುಕು ಸರ್ವಾ೦ಗಪರಿಪೂರ್ಣವಾಗಬೇಕೆಂದಿದ್ದರೆ ಭೌತಿಕ ಮೌಲ್ಯ (Material values) ಗಳನ್ನು ಒದಗಿಸುವ (ಕಾಯಕ- ದಾಸೋಹ-ಪ್ರಸಾದಗಳಿಂದ ಕೂಡಿದ) ಅರ್ಪಣೆ, ಬೌದ್ಧಿಕ-ನೈತಿಕ ಮೌಲ್ಯ (Intellectual and moral values) ಗಳನ್ನು ನೀಡುವ ಅನುಭಾವ, ಅಧ್ಯಾತ್ಮಿಕ ಮೌಲ್ಯಗಳನ್ನು (Spiritual Values) ಒದಗಿಸುವ ಅರ್ಚನೆ- ಮೂರೂ ಬೇಕೇ ಬೇಕು. 'ಅರ್ಪಣೆ' ಯಿಂದ ವ್ಯಕ್ತಿ ವ್ಯಕ್ತಿಗಳಲ್ಲಿ ಮಧುರ ಬಾಂಧವ್ಯ, ಸಮಷ್ಟಿಯ ಅಭವೃದ್ಧಿ ಸಾಧ್ಯವಾದರೆ ಅನುಭಾವದಿಂದ ಚಿಂತನಶಕ್ತಿ ಮೂಡುವುದು, ಅರ್ಚನೆಯಿಂದ ಆತ್ಮನ ನಿಃಶ್ರೇಯಸ್ಸು ಸಾಧ್ಯವಾಗುವುದು, ಹೀಗೆ ಎಲ್ಲರೂ ಎಲ್ಲಾ ಮೌಲ್ಯಗಳನ್ನೂ ಅಳವಡಿಸಿಕೊಳ್ಳುವುದರಿಂದ ವ್ಯಕ್ತಿಗಳ ಸರ್ವಾಂಗೀಣ ಅಭಿವೃದ್ಧಿ ಯಾಗುವುದಲ್ಲದೆ ಸಮಾಜವೂ ಸರ್ವತೋಮುಖ ಅಭಿವೃದ್ಧಿ ಹೊಂದುವುದು.

ಸಾಂಪ್ರದಾಯಿಕ ಸಮಾಜದಲ್ಲಿ ಶ್ರೇಣೀಕೃತ ಸಮಾಜ ವ್ಯವಸ್ಥೆ ಇದ್ದು ಕೆಲವರು ಬರೀ ದುಡಿದು, ಕೆಲವರು ಬರೀ ವಿರಾಮದಲ್ಲಿ ಐಷಾರಾಮ ಪಡೆದು, ಮತ್ತೆ ಕೆಲವರು ಕೇವಲ ಪೂಜಿಸಿ ಕಾಲಕಳೆಯುವ ಬಗೆ ಇದ್ದರೆ, ಗುರು ಬಸವಣ್ಣನವರು ಎಲ್ಲರಿಗೂ ಈ ಮೂರನ್ನೂ ಕಡ್ಡಾಯವಾಗಿ ಒದಗಿಸಿಕೊಡುವ ಚಿಂತನೆ ಮಾಡಿದರು. ಎಲ್ಲರೂ ದುಡಿಯಬೇಕು ; ಎಲ್ಲರೂ ಅನುಭವದಲ್ಲಿ ಪಾಲ್ಗೊಳ್ಳಬೇಕು ; ಎಲ್ಲರೂ ದೇವರನ್ನು ಪೂಜಿಸಬೇಕು. ಹೀಗಾಗಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದು ನಿಜವಾಗಿ ಅನುಷ್ಠಾನಕ್ಕೆ ಬಂದುದು ಧರ್ಮಪಿತರ ಬೋಧನೆಯಿಂದಾಗಿ.

ಅನುಭವ ಮಂಟಪದ ಕಲ್ಪನೆಯನ್ನು ಚಿತ್ತ ಭಿತ್ತಿಯಲ್ಲಿ ಮೂಡಿಸಿಕೊಂಡರೆ ಇದು ಒಂದು ಸುಂದರ ತಿಳಿಗೊಳದಂತೆ, ಅನುಭವ ಮಂಟಪದ ಶರಣರು ಪರಮಹಂಸೆಗಳಂತೆ, ಕಾಣಬರುವುದು. ಸದ್ಭಕ್ತಿಯ ಸುಜಲನ್ನೀಂಟಿ, ಸುಜ್ಞಾನದ ಕಮಲನಾಳವನ್ನು ತಿಂದು ದಿವ್ಯಾನಂದದ ನಿಬ್ಬೆರಗಿನಲ್ಲಿ ತೇಲಾಡುವ ಶರಣರೆಂಬ ಪರಮಹಂಸೆಗಳು, ಅಧ್ಯಾತ್ಮದ ಪರಮೋನ್ನತ ಸ್ಥಿತಿಯನ್ನು ಹೊಂದಿದರು. ಹೀಗಾಗಿ ಅನುಭವ ಮಂಟಪದ ಸರಸಿಯಲ್ಲಿ ತೇಲಿದರೆ ಆನಂದ, ಮುಳುಗಿದರೆ ಶಾಂತಿ,

ವಿಮಾನಗಳು ಏರಲಿಕ್ಕೆ, ಇಳಿಯಲಿಕ್ಕೆ ನಿಲ್ದಾಣಗಳು ಹೇಗೆ ಬೇಕೋ ಹಾಗೆ ಅನುಭವ ಮಂಟಪದಂತಹ ಅಧ್ಯಾತ್ಮಿಕ ಸಂಸ್ಥೆಗಳು ಸಾಧನೆಯ ಮೂಲಕ ಊರ್ಧ್ವಗಾಮಿಯಾಗಿ ಸಾಧಕರು ಏರಲಿಕ್ಕೂ ದೇವಕೃಪೆಯು ಇಳಿದು ಬರಲಿಕ್ಕೂ ಅತ್ಯಗತ್ಯವಾಗುತ್ತದೆ.

ಅನುಭವ ಮಂಟಪವನ್ನು ಒಂದು ಪ್ರಯೋಗಶಾಲೆ ಎನ್ನಬಹುದು. ವಿಜ್ಞಾನಿಯು ಮೊದಲು ಒಂದು ಸತ್ಯವನ್ನು, ಅಥವಾ ಸಿದ್ಧಾಂತವನ್ನು ಊಹಿಸುವನು (Assumption) ತನ್ನ ಊಹೆಯನ್ನು, ಪ್ರಯೋಗಕ್ಕೆ ಒಳಪಡಿಸುವನು. ಸತ್ಯಾರ್ಥ ನಿರ್ಣಯವಾದಾಗ ಅದನ್ನು ಒಂದು ಸಿದ್ಧಾಂತ (Theory) ವೆಂದು ದಾಖಲಿಸುವನು. ಹಾಗೆಯೇ ಧರ್ಮಪಿತರು ಜಾತಿವರ್ಣವರ್ಗರಹಿತ ಧರ್ಮಸಹಿತ ಸಮಾಜವನ್ನು ಕಟ್ಟುವ ಒಂದು ಆಲೋಚನೆಯನ್ನು ತಳೆದರು. ಆ ಆಲೋಚನೆಯನ್ನು ಅನುಭವ ಮಂಟಪದಲ್ಲಿ ಪ್ರಯೋಗಕ್ಕೆ ಒಳಪಡಿಸಿದರು. ಯಶಸ್ವಿಯಾಗಿ, ವಚನ ಸಾಹಿತ್ಯದಲ್ಲಿ ತಮ್ಮ ವಿಚಾರಗಳನ್ನು ದಾಖಲಿಸಿದರು.

ಧರ್ಮಪಿತ ಬಸವಣ್ಣನವರು ರೂಪಿಸಿದ ಅರ್ಥಾತ್ ಸಂಸ್ಥಾಪಿಸಿದ ಲಿಂಗಾಯತ ಧರ್ಮದ ಉದಯ ಕೂಡಲಸಂಗಮದಲ್ಲಿ ಆದರೂ, ಈ ಶಿಶುವು ನಾಮಕರಣಗೊಂಡು ಬೆಳೆದುದು ಕಲ್ಯಾಣದ ತೊಟ್ಟಿಲಲ್ಲಿ. ಇದರ ಜನಕರು ಧರ್ಮಪಿತ ಬಸವಣ್ಣನವರಾದರೂ ಸಾಕಿ ಸಲಹಿ ಪೋಷಿಸಿದವರು ಅನೇಕ ಶರಣರು. ಹೀಗಾಗಿ ತಂದೆಯ ಹೆಸರು ಹಿಡಿದು ಬಸವ ಧರ್ಮ ಎನ್ನಬಹುದು. ಧರ್ಮಪಿತ ಬಸವಣ್ಣನವರು ಇಟ್ಟ ಹೆಸರು ಲಿಂಗಾಯತ- ಲಿಂಗವಂತ ಧರ್ಮ ಎನ್ನಬಹುದು. ಶರಣರ ಆರೈಕೆಯಲ್ಲಿ ಪುಷ್ಟಿಗೊಂಡ ಕಾರಣ ಶರಣ ಧರ್ಮ ಎನ್ನಬಹುದು. ಈ ಧರ್ಮದ ಸಂಹಿತೆ ವಚನ ಸಾಹಿತ್ಯವಾದ ಕಾರಣ ವಚನಧರ್ಮ ಎಂದೂ ಅನ್ನಬಹುದು.

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವಣ್ಣನವರು ಅರ್ಥಮಂತ್ರಿಯಾದುದು ಬಸವಣ್ಣನವರಿಂದ ಲಿಂಗಾಯತ ಧರ್ಮದ ಸ್ಥಾಪನೆ Next
cheap jordans|wholesale air max|wholesale jordans|wholesale jewelry|wholesale jerseys