Previous ಬಸವರಸ ನವ ಧರ್ಮ ದ್ರಷ್ಟಾರ ಬಸವರಸ ಸಂಗನ ಬಸವನಾದುದು Next

ಬಸವರಸ ವಿವಾಹದ ಪ್ರಸ್ತಾಪ ಮತ್ತು ಕನಸು

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ವಿವಾಹದ ಪ್ರಸ್ತಾಪ

ಬಸವರಸ ವಿಚಾರ ಸರಣಿ ಎಲ್ಲರ ಮೇಲೂ ತನ್ನದೇ ಆದ ಪ್ರಭಾವ ಬೀರಿತು. ಎಂಥಾ ಪ್ರತಿಭಾವಂತ ಯುವಕ ! ಎಂದು ಬಲದೇವ ಮಂತ್ರಿಗಳು ಪ್ರಭಾವಿತರಾದರೆ, ಎಂತಹ ಆದರ್ಶವಂತ ಎಂದು ಬಲದೇವರಸರ ಏಕೈಕ ಪುತ್ರಿ ನೀಲಗಂಗಾ ವಿಸ್ಮಿತಳಾಗದಿರಲಿಲ್ಲ . ಆಕೆ ಬಸವರಸರ ಉದಾತ್ತ ವಿಚಾರಗಳ ಹೊನಲಿನಲ್ಲಿ ಮಿಂದು ಮೌನಿಯಾಗಿದ್ದಳು. ಉಳಿದ ಅರ್ಚಕರು ಅಧಿಕ ಪ್ರಸಂಗಿ ಎಂದುಕೊಳ್ಳದಿರಲಿಲ್ಲ. ಅಂತೂ ಬಸವರಸರ ಮಾತಿನ ಹೊಯ್ದು ಎಲ್ಲರನ್ನೂ ಒಂದು ಗುಂಗಿನಲ್ಲಿ ಬಂಧಿಸಿತು. ರಾತ್ರಿಯಿಡೀ ಅವರ ಮಾತುಗಳನ್ನು ಮೇಲುಕಾಡಿಸುತ್ತ ಮಲಗಿದ ಬಲದೇವರಸರು ಬೆಳಗಾಗುತ್ತಲೇ ಮಿಂದು ಮಡಿಯುಟ್ಟು ಸಂಗಮೇಶ್ವರನ ದರ್ಶನವನ್ನು ಪಡೆದು, ಗುರುಗಳ ದರ್ಶನಕ್ಕೆ ಹೋದರು.

ಯಾರು? “ಗುರುಗಳೇ, ನಿನ್ನೆ ತನ್ನ ಅಮೋಘ ವಾಣಿಯಿಂದ ಪ್ರಭಾವ ಬೀರಿದ ಆ ವಟು
“ಬಲದೇವರಸರೇ, ಅವನು ಬೇರೆ ಯಾರೂ ಅಲ್ಲ. ನಿಮ್ಮ ಸೋದರಳಿಯ !
ನಿಮ್ಮ ಸಹೋದರಿ ಮಾದಲಾಂಬಿಕೆಯ ಮಗ....??
“ಶಿವಶಿವಾ.. ಎಂಥ ಅಶ್ಚರ್ಯವಿದು ! ನಮ್ಮ ಮಾದಲಾಂಬಿಕೆಯ ಮಗ ಇಂಥಾ ಪ್ರತಿಭಾವಂತರೆ ? ಎಂತಹ ತೀಕ್ಷ್ಮಮತಿ ! ಎಷ್ಟು ಶಕ್ತಿಶಾಲಿ ವಾಣಿ ಅವರದು ! ತುಂಬಾ ತುಂಟ ಹುಡುಗ, ಹಠಮಾರಿ, ಉದ್ಧಟತನದಿಂದ ತಾಯಿ ತಂದೆಯರ ಮಾತನ್ನೇ ಧಿಕ್ಕರಿಸಿ ಹೋದವನು ಎಂದೆಲ್ಲ ಕೇಳಿದ್ದೆವಲ್ಲ ???
“ಲೋಕದ ನಡೆಯನ್ನು ಅನುಸರಿಸದವರನ್ನೆಲ್ಲ ಸಮಾಜ ಹಾಗೆ ಕರೆಯುವುದು ಸ್ವಾಭಾವಿಕವೆ ! ಬಸವರಸನು ಉದ್ಧಟನಲ್ಲ ದಿಟ್ಟ ; ವಿಚಾರ ಶೀಲ. ಅಷ್ಟೇ ವಿನಯ್ ವಿಧೇಯತೆಗಳಿಂದ ಕೂಡಿದವನು...''.

“ನಿಜಕ್ಕೂ ಅದೊಂದು ಅಪೂರ್ವ ಸಮಾಗಮ. ಗುರುಗಳೇ...ಹೆಣ್ಣು ಮಗಳಿದ್ದ ತಂದೆ ಇನ್ನೇನನ್ನು ಆಲೋಚಿಸಬಹುದು-ಇಂಥಾ ಬುದ್ಧಿವಂತ ಸೋದರಳಿಯನನ್ನು ಕಂಡ ಮೇಲೆ..

“ಓಹೋ..ನೀಲಗಂಗಳನ್ನು ಕೊಟ್ಟು ಮದುವೆ ಮಾಡುವ ವಿಚಾರವೋ!'' ಗುರುಗಳು ಅನ್ನುತ್ತಲೇ ತುಸು ಗಂಭೀರ ವದನರಾದರು.

“ನಾನು ಅನುಚಿತವಾದ ಮಾತನ್ನೇನೂ ಅಡಿಲ್ಲವಷ್ಟೆ .” ಬಲದೇವರು ಕೊಂಚ ಗಾಬರಿಗೊಂಡರು.

“ಇಲ್ಲ...ನಿಮ್ಮ ಅಪೇಕ್ಷೆ ಸೂಕ್ತವೆ. ಆದರೆ, ಬಸವರಸ ಎಲ್ಲರಂತೆ ತಿನ್ನುಣ್ಣುವ, ಉಡುತೊಡುವ ಬಗ್ಗೆ ಚಿಂತಿಸದೆ ಸದಾಕಾಲ ಸಮಾಜ ಪರಿವರ್ತನೆಯ ಬಗ್ಗೆ ಚಿಂತಿಸುವನು. ಏನೇನೋ ಆದರ್ಶಗಳನ್ನು ಹೊತ್ತ ಅವನು ವಿವಾಹ ಬಂಧನಕ್ಕೆ ಒಳಪಡಲು ಇಷ್ಟ ಪಡುವನೋ ಇಲ್ಲವೋ...?'' ಚಿಂತಾಕ್ರಾಂತರಾಗಿಯೇ ಹೇಳಿದರು.

ನಿಮ್ಮ ಮಾತನ್ನು ಮೀರಲಿಕ್ಕಿಲ್ಲ...''
''ಪ್ರಯತ್ನಿಸೋಣ ; ಸಂಗಮನಾಥನ ಇಚ್ಛೆ ಹೇಗಿದೆಯೋ ಹಾಗಾಗಲಿ.... ಜನರ ಸದ್ದುಗದ್ದಲದಿಂದ ತಪ್ಪಿಸಿಕೊಂಡು ದೂರದ ನಿರ್ಜನ ಪ್ರದೇಶಕ್ಕೆ ಹೋಗಿ, ಧ್ಯಾನಾಸಕ್ತರಾಗಿದ್ದ ಬಸವರಸರು ಗುರುಗಳ ಆದೇಶದಂತೆ ಬಂದು ನಮಸ್ಕರಿಸಿದರು. ಗುರುಗಳು ಪೀಠಿಕೆ ಪ್ರಾರಂಭಿಸಿದರು ; “ಬಸವರಸಾ, ಜೀವನದಲ್ಲಿ ಮುಂದುವರಿಯಲು ಅವಕಾಶಗಳು ಯಾವಾಗಲಾದರೂ ಒಮ್ಮೊಮ್ಮೆ ಬರುತ್ತಿರುತ್ತವಲ್ವೆ ?'. ಮಾತಿನ ಮರ್ಮ ತಿಳಿಯದೆ ಸುಮ್ಮನೆ ನಿಂತರು ಬಸವರಸರು.

“ನಿನ್ನೆ ನಿನ್ನ ಮಾತುಗಳನ್ನು ಕೇಳಿ ತುಂಬಾ ಪ್ರಭಾವಿತರಾದ ಬಲದೇವರಸರು ತಮ್ಮ ಮಗಳು ನೀಲಗಂಗಳನ್ನು ನಿನಗೆ ಕೊಟ್ಟು ಮದುವೆ ಮಾಡಬೇಕೆಂದು ಇದ್ದಾರೆ ...” ಈ ಮಾತುಗಳಿಂದ ಆಘಾತಕ್ಕೊಳಗಾದ ಬಸವರಸರು ತಾನೇನಾದರೂ ತಪ್ಪು ಮಾಡಿದ್ದೇನೆಂದು ದೂರವಿಡುವ ಉಪಾಯ ಮಾಡಿದ್ದಾರೆ ಎಂದು ಚಿಂತಾಕ್ರಾಂತರಾದರು. ?
''ಗುರುಗಳೇ ನಾನೇನು ತಪ್ಪು ಮಾಡಿರುವೆ ಎಂದು ಈ ಶಿಕ್ಷೆ...” ?
'ಈ ವಯಸ್ಸಿನ ತರುಣ-ತರುಣಿಯರು ಮದುವೆಯ ಹೊಂಗನಸು ಕಾಣುವಾಗ ನೀನು ಇದನ್ನು ಶಿಕ್ಷೆ ಅನ್ನುವುದೆ ?'' ಗುರುಗಳು ಮನಸಾರೆ ನಕ್ಕರು.

“ನನ್ನ ಒಲವು ಆ ಜೀವನದಲ್ಲಿಲ್ಲ ಎಂಬುದು ನಿಮಗೆ ಗೊತ್ತು. ಇಷ್ಟಿದ್ದೂ ನೀವು ನಿಮ್ಮ ಸನ್ನಿಧಿಯಿಂದ ನನ್ನನ್ನು ದೂರಕಳಿಸುವ ಅಪೇಕ್ಷೆ ಮಾಡಬಹುದೇ ? ಸ್ವಚ್ಛಂದವಾಗಿ ಅಧ್ಯಾತ್ಮದಾಗಸದಲ್ಲಿ ಹಾರಾಡ ಬಯಸುವ ಈ ಜೀವ ಪಕ್ಷಿಯನ್ನು ನಿರ್ದಾಕ್ಷಿಣ್ಯವಾಗಿ ಸಂಸಾರ ಪಂಜರದೊಳಕ್ಕೆ ಕೂಡಿ ಹಾಕಬೇಕು ಎನ್ನುವುದು ಶಿಕ್ಷೆಯಲ್ಲದೆ ಮತ್ತೇನು ?'' ಗುರುಗಳು ಮೃದುವಾಗಿ ಹೇಳಿದರು ;

“ಬಸವರಸಾ, ನೀನು ಅಸಾಮಾನ್ಯ ಪ್ರತಿಭಾವಂತ. ನಿನ್ನ ಪ್ರತಿಭೆ ಮತ್ತು ಉದಾತ್ತ ಗುರಿಗೆ ತಕ್ಕ ಕಾವ್ಯಕ್ಷೇತ್ರ ದೊರಕಿಸಬೇಕೆಂಬುದು ನನ್ನ ಅಪೇಕ್ಷೆಯಾಗಿತ್ತು. ಅದೀಗ ಶಿವ ಸಂಕಲ್ಪದಿಂದಲೇ ಒದಗಿದೆ ಅಂತ ತೋರುತ್ತಲಿದೆ. ನೀನು ಆಲೋಚನೆ ಮಾಡಿ ನೋಡು...'.

ಗುರುಗಳು ಸಲಹೆಯನ್ನಿತ್ತು ಹೊರಟಾಗ, ಬಸವರಸ ಅಲ್ಲಿಯೇ ಸ್ತಂಭೀಭೂತನಾಗಿ ನಿಂತ. ಅಕ್ಕ ನಾಗಮ್ಮನು ಪ್ರವೇಶಿಸಿ ತಮ್ಮನ ಬಳಿಗೆ ಬಂದಳು. “ಬಸವರಸಾ, ಗುರುಗಳು ನನಗೂ ಹೇಳಿ ಕಳಿಸಿ ಕರೆಸಿಕೊಂಡು ಈ ಬಗ್ಗೆ ಸೂಚಿಸಿದರಪ್ಪ....'.
“ನಿನ್ನಭಿಪ್ರಾಯ ಏನಕ್ಕ ???
“ಪೂಜ್ಯರ ಮಾತು ನಿಜ, ಸಮಾಜವನ್ನು ತಿದ್ದಬೇಕಾದರೆ ಅದರ ಮಧ್ಯದಲ್ಲಿದ್ದು ಪರಿವರ್ತಿಸಬೇಕಾಗುತ್ತೆ ; ಗುರುಕುಲದ ಕಾರ್ಯಕ್ಷೇತ್ರ ನಿನ್ನ ಪ್ರತಿಭೆಗೆ ಸಾಲದು...”

ಅದರೆ ಅಕ್ಕಾ, ಸಂಸಾರ ಬಂಧನ ನನಗೆ ಇಷ್ಟವಿಲ್ಲದ್ದು. ನನ್ನ ಜೀವ ಹಂಬಲಿಸುವುದು ಸಂಸಾರದ ಕೆಸರಿನ ಮಡುವನ್ನು ಪ್ರವೇಶಿಸುವುದನ್ನಲ್ಲ ; ಅಧ್ಯಾತ್ಮ ಸರೋವರದಲ್ಲಿ ವಿಹರಿಸುವುದನ್ನು.''

"ವಾತಾವರಣವನ್ನು ರೂಪಿಸಿಕೊಳ್ಳುವುದು ನಿನ್ನ ಕೈಲಿದೆ ಅಲ್ಲವೆ ?'

“ಅಕ್ಕಾ...ನೀವೆಲ್ಲ ನನ್ನ ಹಿತೈಷಿಗಳೆಂದು ಈವರೆಗೂ ನಂಬಿದ್ದೆ. ಆದರೆ ನನಗೆ ಆಸಕ್ತಿ ಇಲ್ಲದೇ ಇರೋ ಬದುಕಿಗೆ ಎಳೆಯುವ ನಿಮ್ಮ ಆತುರ ಒಂದು ವ್ಯೂಹ ರಚನೆಯಂತೆ ತೋರುತ್ತಾ ಇದೆ.''

ಬಸವರಸ ಉದ್ವಿಗ್ನನಾಗಿ ಏಕಾಂತವನ್ನರಸಿ ಹೊರಟುಹೋದ. ಹಗಲುರಾತ್ರಿಗಳನ್ನು ಅದೇ ಮನಸ್ಥಿತಿಯಲ್ಲಿ ಕಳೆದು, ಸುಪ್ರಭಾತದಲ್ಲಿಯೇ ಮಿಂದು ಧ್ಯಾನಸಕ್ತನಾಗುತ್ತಿದ್ದಾನೆ. ಬಹಿರ್ಮುಖನಾಗಿ ಗುಡಿಯತ್ತ ಸಾಗಲು ಹೊರಟಾಗ ನೀಲಗಂಗ ಗಿಡದ ಒಂದು ಬದಿಯಲ್ಲಿ ಅವಲೋಕಿಸುತ್ತ ನಿಂತವಳು ಬಂದು ನಮಸ್ಕರಿಸುತ್ತಾಳೆ. ನಿನ್ನೆ ಬಲದೇವರಸರ ಜೊತೆಗೆ ಬಂದು ಗುರುಗಳ ದರ್ಶನ ಮಾಡಿದ ಯುವತಿ, ಬಸವರಸ ಆಶ್ಚರ್ಯಭರಿತನಾಗಿರುವಾಗಲೇ ಆಕೆ ನುಡಿದಳು :
“ನಾನು ನೀಲಗಂಗಾ ..
"ಬಲದೇವರಸರ ಪುತ್ರಿಯೆ ? ನಿಮ್ಮನ್ನು ಕಾಣಬೇಕೆಂದು ನಾನು ಅಲೋಚಿಸುತ್ತಿದ್ದೆ”
“ನನ್ನನ್ನೇ ? ಏಕೆ ?''
“ನಿಮ್ಮಿಂದ ನನಗೊಂದು ಉಪಕಾರ ಆಗಬೇಕಾಗಿತ್ತು.'
“ನನ್ನಿಂದ...ನಿಮಗೆ ಉಪಕಾರ ! ನನಗೇನೂ ತೋಚುತ್ತಾ ಇಲ್ಲ...''
"ಈ ವರ ನನಗೆ ಒಪ್ಪಿಗೆ ಇಲ್ಲ ಎಂದು ನೀವು ನಿಮ್ಮ ತಂದೆಗೆ ಹೇಳಿ, ನನ್ನನ್ನು ಸಂಕಷ್ಟದಿಂದ ಉಳಿಸಬಲ್ಲಿರಾ ?'' ನೀಲಗಂಗಳಿಗೆ ತುಂಬಾ ಆಶ್ಚರ್ಯವಾಯಿತು.
''ಅಂಥ ಮೂರ್ಖತನ ಮಾಡುವವಳು ನಾನಲ್ಲ...''

ನಿಮ್ಮ ಒಳ್ಳೆಯದಕ್ಕೆ ನಾನು ಹೇಳುವುದು, ನೋಡಿ ನಾನು ಏನೇನೋ ಆದರ್ಶಗಳ ಕನಸು ಹೊತ್ತವನು. ಇಂಥ ನನ್ನನ್ನು ಮದುವೆಯಾಗಿ ಲೌಕಿಕ ಸುಖ ಪಡೆಯಬಹುದು ಅಂತ ನೀವು ಭಾವಿಸಿದ್ದರೆ ಅದು ನಿಮ್ಮ ಭ್ರಾಂತಿ...ಮುಂದೆ ನಿರಾಶೆಯಿಂದ ನಲುಗುವ ಬದಲು ಈಗಲೇ ತಪ್ಪಿಸಿಕೊಳ್ಳವುದು ಒಳ್ಳೆಯದಲ್ಲವೇ ?''

“ನಿಮ್ಮ ಆದರ್ಶಗಳ ಅರಿವು ನಿನ್ನೆ ನಿಮ್ಮ ಮಾತುಗಳನ್ನು ಕೇಳಿದಾಗಲೇ ನನಗೆ ಮನದಟ್ಟಾಯಿತು. ಆದರೆ...ಇಂಥಾ ಓರ್ವ ಆದರ್ಶ ವ್ಯಕ್ತಿಯನ್ನು ಕೈ ಹಿಡಿಯುವ ಸುವರ್ಣಾವಕಾಶ ಒದಗಿ ಬರಬಹುದೆಂದು ನಂಬಿರಲಿಲ್ಲ. ಅದು ಬಂದಿರುವಾಗ ಕಳೆದುಕೊಳ್ಳುವ ಮೂರ್ಖತನ ಮಾಡಲೆ ?''

“ನನ್ನ ಮನಸ್ಸನ್ನು ಹೇಗೆ ತೆರೆದಿಡುವುದು ? ನಿಮಗೆಲ್ಲಾ ಹೇಗೆ ಮನದಟ್ಟು ಮಾಡುವುದು ?'' ಬಸವರಸ ನಿಸ್ಸಹಾಯಕ ದನಿಯಲ್ಲಿ ನುಡಿದ.

''ತಾವು ತುಂಬಾ ತಿಳಿದವರು. ವ್ಯಕ್ತಿ ಜೀವನ, ಸಮಾಜ ಜೀವನದಲ್ಲಿ ಪುರುಷನು ಸತ್ವಸ್ವತಂತ್ರ ; ಬುದ್ಧನಿಗೆ ವೈರಾಗ್ಯದ ಪ್ರೇರಣೆಯಾಗುತ್ತಲೇ ಪತ್ನಿ-ಪುತ್ರನನ್ನು ತೊರೆದು ಸಾಧನೆಯತ್ತ ಸಾಗಲಿಲ್ಲವೇ ? ಹಾಗೆ ನಾನು ನಿಮಗೆ ಸಾಧನೆಗೆ ಆತಂಕವೆಂದು ಕಂಡರೆ ಅಂದೇ ತೊರೆಯಿರಿ. ಅದರೀಗ ನನ್ನ ಪ್ರಾಮಾಣಿಕ ಬಯಕೆಯನ್ನು ಕುರಿತು ಕೇಳಿರಿ. ನೀವು ಸ್ವತಂತ್ರವಾಗಿ ಉರಿಯುವ ಜ್ಯೋತಿ ; ನಿಮ್ಮಷ್ಟು ಶಕ್ತಿ ನನಗಿಲ್ಲವಾದರೂ ನಿಮ್ಮ ಬಾಳಿನ ದೀಪಕ್ಕೆ ಎಣ್ಣೆಯಾಗಲೂ ಬರದೆ ?''

ಬಸವರಸನು ಈ ಮಾತುಗಳಿಂದ ದಿಙ್ಞೂಡನಾದ. ಉತ್ತರಿಸಲು ತೋಚದೆ ಮುಂದೆ ಹೆಜ್ಜೆ ಇಟ್ಟಾಗ ನೀಲಗಂಗಾ ಮರುನುಡಿದಳು :
“ನನ್ನ ಮಾತು ನಂಬಿ; ಸಂಗಮನಾಥನ ಆಣೆಯಾಗಿಯೂ ಇದು ಸತ್ಯ! ನಿಮ್ಮ ಬಾಳಿನ ಬಂಡಿಗೆ ನಾನು ಹೆಗಲು ಕೊಡ್ತೇನೆ..."

ನೀಲಗಂಗಳ ಮಾತುಗಳು ಪುನಃ ಪುನಃ ಅಣುರಣಿಸತೊಡಗಿದವು. ತನಗೆ ಮಾರ್ಗದರ್ಶನ ಮಾಡುವವರು ಯಾರೂ ಕಾಣದಾದಾಗ ಚಿಂತಾಕ್ರಾಂತನಾದ ಬಸವರಸ ಸಂಗಮನಾಥನನ್ನೇ ಕೇಳೋಣವೆಂದು ಅಂದು ರಾತ್ರಿ ದೇವಾಲಯದ ಒಳಹೊಕ್ಕ

ಕನಸು

ನೀರವವಾದ ಕಾರಿರುಳು; ಹೊರಗೆ ಕತ್ತಲೆ ತುಂಬಿದಂತೆ ಬಸವರಸನ ಮನಸ್ಸಿನಲ್ಲಿ ಕತ್ತಲೆ ತುಂಬಿಕೊಂಡಿದೆ. ಅರ್ಚಕನಾದ ಅವನಿಗೆ ಯಾವಾಗ ಬೇಕಾದರೂ ದೇವಾಲಯದ ಒಳಗೆ ಪ್ರವೇಶಿಸುವ ಅವಕಾಶ ಇರುವ ಕಾರಣ ಸ್ನಾನ ಮಾಡಿ ಮಡಿಯುಟ್ಟು ದೇವಾಲಯವನ್ನು ಪ್ರವೇಶಿಸಿ ತನ್ನ ಮನದ ಅಳಲನ್ನು ತೋಡಿಕೊಳ್ಳುತ್ತಿದ್ದಾನೆ.

ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯ
ಪಶುವೇನ ಬಲ್ಲುದು ಹಸುರೆಂದೆಳಸುವುದು
ವಿಷಯ ರಹಿತನ ಮಾಡಿ ಭಕ್ತಿರಸವ ದಣಿಯ ಮೇಯಿಸಿ
ಸುಬುದ್ಧಿ ಎಂಬ ಉದಕವನೆರೆದು ನೋಡಿ ಸಲಹಯ್ಯ ಕೂಡಲಸಂಗಮದೇವಾ


ಪರಮಾತ್ಮಾ, ಒಂದು ಎಳೆಗರುವಿನ ಮುಂದೆ ಹಸಿರು ಹುಲ್ಲನ್ನು ಹರಡಿದರೆ ಅದಕ್ಕೇನು ತಿಳಿದೀತು ? ಹಸಿರೆಂದು ನಂಬಿ ಬಾಯಿ ಹಾಕುವುದು. ಹಸಿರು ಬಣ್ಣದ ಪ್ರಲೋಭನೆಗೆ ಕರುವು ಒಳಗಾದಂತೆ, ನನ್ನ ಮನಸ್ಸು ವಿಷಯದ ಪ್ರಲೋಭನೆಗೆ ಒಳಗಾಗಲು ಸಾಧ್ಯವಿದೆ. ಹಸಿರು ಕಂಡ ಪಶು ಉದ್ವೇಗಗೊಂಡು, ವಿವೇಕದಪ್ಪಿ ನುಗ್ಗುವಂತೆ ನನ್ನ ಮನಸ್ಸು ಹೋಗುವ ಸಾಧ್ಯತೆ ಇದೆ. ನನ ಬುದ್ಧಿಗೆ ಏನೊಂದು ನಿರ್ಧಾರಕ್ಕೆ ಬರಲಾರದ ಸ್ಥಿತಿಯೊದಗಿ ಮಂಕು ಕವಿದಿದೆ. ಆದ್ದರಿಂದ ನನ್ನನ್ನು ನಿರ್ಮಲಚಿತ್ತನನ್ನಾಗಿ ಮಾಡು, ಭಕ್ತಿಯ ಉಣಿಸನ್ನು ಮೇಯಿಸು, ಸುಬುದ್ಧಿ ಎಂಬ ನೀರನ್ನು ಕುಡಿಸು. ಆತ್ಮ ವಿಶ್ವಾಸದಿಂದ ಮುಂದುವರಿಯುವಂತೆ ಮಾಡು.

ಎಲ್ಲರಂತೆ ಮದುವೆಯಾಗಿ ದಾಂಪತ್ಯ ಜೀವನ ಸ್ವೀಕರಿಸು ಎಂದು ಗುರುಗಳು ಹೇಳಿದ್ದರೆ, ನಾನು ನಿರಾಕರಿಸಿ ಬಿಡಬಹುದಿತ್ತು. ಅವರು ಹೀಗೆ ಹೇಳಿದರು : ಇದು ನಿನ್ನ ಗುರಿಗೆ ಪೂರಕವಾಗಿ ಬಂದ ಅವಕಾಶ, ನಿನ್ನ ಪ್ರತಿಭೆಗೆ ತಕ್ಕ ಕಾರ್ಯಕ್ಷೇತ್ರ ಒದಗುತ್ತಾ ಇದೆ. ಈ ಮಾತುಗಳು ನನ್ನ ಸ್ಪಷ್ಟ ನಿರಾಕರಣೆಗೆ ಅಡ್ಡಿಯಾಗಿವೆ. ಈ ಮಾತುಗಳು ಪ್ರಲೋಭನೆಯಾಗಿ ನನ್ನನ್ನು ಪತನಗೊಳಿಸುತ್ತಲಿವೆಯೇ ? ದೇವಾ, ಅಪ್ರತ್ಯಕ್ಷವಾಗಿ ನನ್ನ ಮನಸ್ಸು ಆಸೆಗೆ ಒಳಗಾಗಿದೆಯೇ, ಸೋತಿದೆಯೇ ?

ಬೆಳೆಯ ಭೂಮಿಯಲೊಂದು ಪ್ರಳಯದ ಕಸಹುಟ್ಟಿ
ತಿಳಿಯಲೀಯದು. ಎಚ್ಚರಿಯಲೀಯದು.
ಎನ್ನ ಅವಗುಣವೆಂಬ ಕಸವ ಕಿತ್ತು ತೆಗೆಯಯ್ಯ ತಂದೆ
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವಾ.


ನಾನರಿಯದಂತೆ, ಒಂದು ವೇಳೆ ನನ್ನ ಮನಸ್ಸು ಪ್ರಲೋಭನೆಗೆ ಒಳಗಾಗಿರಬಹುದು. ಇದು ಉತ್ಕೃಷ್ಟವಾದ ಭೂಮಿಯಲ್ಲಿ ಬಂದಿರುವ ಕಳೆ ಎಂದರಿ. ಈ ಕಳೆಯ ಮಧ್ಯೆ ನನ್ನ ಆದರ್ಶದ ಸಸಿ ಮುಚ್ಚಿ ಹೋಗದೆ ಇರಲಿ; ಮುರುಟಾಗದಿರಲಿ. ಈ ಕಳೆಯನ್ನು ತೆಗೆದು ಹಾಕು. ನಾನು ಸುಳಿದೆಗೆದು ಬೆಳೆವೆನು.

(ಸಂಗಮದಲ್ಲಿ ಅಭ್ಯಸಿಸುತ್ತಿದ್ದ ವಟು ಬಸವರಸನ ಭಾಷಣ ಕೇಳಿ ಪ್ರಭಾವಿತರಾದ ಬಲದೇವರಸರು ತಮ್ಮ ಪುತ್ರಿ ಗಂಗಾಂಬಿಕೆಯನ್ನು ಮದುವೆ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದಾಗ ಮಾನಸಿಕ ತುಮುಲಕ್ಕೊಳಗಾದ ಬಸವರಸ ದೇವಾಲಯದಲ್ಲಿ ದೇವರ ಮುಂದೆ ತನ್ನ ದುಃಖ ತೋಡಿಕೊಳ್ಳುತ್ತಿದ್ದಾನೆ.)

ಕಾಲಲ್ಲಿ ಕಟ್ಟಿದ ಗುಂಡು ಕೊರಳಲ್ಲಿ ಕಟ್ಟಿದ ಬೆಂಡು
ತೇಲಲೀಯದು ಗುಂಡು ಮುಳುಗಲೀಯದು ಬೆಂಡು
ಇಂತಪ್ಪ ಸಂಸಾರ ಶರಧಿಯ ದಾಂಟಿಸಿ
ಕಾಲಾಂತಕನ ಕಾಯೋ ಕೂಡಲಸಂಗಮದೇವಾ.


“ವಿವಾಹ ಬಂಧನವು ಒಂದು ಗುಂಡಿನಂತೆ : ನನ್ನನ್ನು ಎಲ್ಲಿ ಸಂಸಾರ ಶರಧಿಯಲ್ಲಿ ಎಂಬ ಆತಂಕ ಒಂದು ಕಡೆ, ಆದರೆ ಗುರುಗಳ ಮಾತು ಬೆಂಡಿನಂತೆ, ಮುಳುಗಿಸುವುದೋ ಮೇಲೆತ್ತುವಂತೆ ತೋರಿಬರುತ್ತಿದೆ. ಹೀಗಾಗಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳದ ಸ್ಥಿತಿಯಲ್ಲಿ ನಾನಿದ್ದೇನೆ. ಈಗ ನಿನ್ನ ಹೊರತು ದಾರಿ ತೋರುವವರು ಯಾರೂ ಇಲ್ಲ...'

ಬಸವರಸನ ಅಳಲು ತುಟ್ಟ ತುದಿಯನ್ನೇರುತ್ತದೆ. ದುಃಖವು ಮೇರೆ ಮೀರಿದಾಗ ಮೌನಿಯಾಗಿ ಕುಳಿತುಕೊಳ್ಳುತ್ತಾನೆ. ಕಣ್ಣು ಮುಚ್ಚಿ ಧ್ಯಾನಾಸಕ್ತನಾಗುತ್ತಾನೆ. ಆಗ ಒಂದು ಕನಸಾಗುತ್ತದೆ. (ಕನಸಿನಂತಹ ಅನುಭವವಾಗುತ್ತದೆ. “ಎಲೆ ಮಗನೆ ಬಸವ ಬಸವಣ್ಣ ಬಸವಿದೇವ ; ನಿನ್ನಂ ಮಹೀತಳದೊಳು ಮೆರದಪೆವು. ನೀಂ ಬಿಜ್ಜಳರಾಯನಿಪ್ಪ ಮಂಗಳವಾಡಕ್ಕೆ ಹೋಗು.” ಎಂಬ ಸಂಗಮನಾಥನ ವಾಣಿ ಕೇಳಿ ಬಂದಾಗ ಬಸವರಸನು ಬೆಚ್ಚಿ ಬೀಳುತ್ತಾನೆ.

ಹರಿಹರ ಮಹಾಕವಿಯ ವರ್ಣನೆಯನ್ನು ಇಲ್ಲಿ ನೋಡೋಣ ಎಲೆ ಮಗನೆ ಬಸವ ಬಸವಣ್ಣ ಬಸವಿದೇವ, ನಿನ್ನಂ ಮಹೀತಳದೊಳು ಮೆರದಪೆವು. ನೀಂ ಬಿಜ್ಜಳ ರಾಯನಿಪ್ಪ ಮಂಗಳವಾಡಕ್ಕೆ ಹೋಗು.” ಎಂಬ ನುಡಿಯೊಡನೆ ಕನಸಿನ ಮಾತು ಮನವ ನಿಮ್ಮೈಗಂಡು, ನಿದ್ರೆ ತಿಳಿದು ಕಣ್ಣೆರೆದು ಕೆಲಬಲನಂ ನೋಡಿ ಬೆಚ್ಚಿ ಬೆರಡು ಗೊಂಡು ಅನುತಾಪವೇರಿ ವಿರಹಂ ಹೊಮ್ಮಿ ಕಣ್ಗೆಟ್ಟಗಲಲಾರದೆ ರಂಗಮಂಟಪದ ಕಂಭಮಂ ಘಳಿಲನೆ ಹಾಯ್ದು ದೇವ ದೇವ ಸಂಗ, ಕಂಡೈ, ಕೆಟ್ಟೆ ಕೆಟ್ಟೆಂ, ತೊಟ್ಟ ನಿಂತು ಕಣ್ ನೋಡದೆ ಹುಣ್ಣನೋಡದೆ ಹೋಗೆಂಬರೆ ? ಗಗನದಿಂದಿಳಿವಂಗೆ ಆದಾರ ಮಾಗುತ್ತೆ ತಪ್ಪುವರೆ ? ಕಾಳ್ಗಿಚ್ಚಿನಿಂ ಬೇಮಂಗೆ ತಂಪಿನ ಸೋನೆಯ ಮಳೆಯಾಗುತ್ತೆ ಮಾಣ್ಬರೆ ? ಇಂತು ನಡುಗಡಲೊಳಾಳುವಂಗೆ ತೆಪ್ಪವಾಗುತ್ತೆ ಪಿಂಗುವರೆ ? ನರಕ ದೊಳಾಳಲೀಯದೆ ಚಂಡಿಕೆವಿಡಿದುದ್ದರಿಸಲೆಂದಾಳ್ಗೊಂಡ ಗುರುವೆ, ಪರಮ ಬಂಧುವೆ, ಪ್ರಾಣವೇ, ಬೆಳುದಿಂಗಳೇಕೆ ? ಬಿಸುಪೇಕೆ ? ಅಮೃತವೇಕೆ? ವಿಷವೇಕೆ ? ಬೆಳಗೇಕೆ ತಮವೇಕೆ ? ನೀನೇಕೆ ಈ ನುಡಿಯೇಕೆ ? ಹೊದ್ದಿದರಂ ಹೋಗೆಂಬರೆ ? ಸಾರ್ದರಂ ಸೈರಿಸೆಂಬರೆ ? ನಂಬಿದವರ ಗೋಣಂ ಕೊಯ್ದರೆ ? ಶಿಶುವನಿರಿವರೆ ? ಪಶುವಂಕೊಲುವರೆ ? ಎನ್ನಂ ಬಿಡುವರೆ? ಕರುಣಿ ಕರುಣಿ, ಕರುಣಂ ಲೇಸಾಯ್ತು ಆರ್ಚಿಸಿತಕ್ಕೆ ಫಲವಾಯು ; ಇನ್ನೇನು ಇನ್ನೇನು' ಎಂದು ಬಸವರಸ ಪ್ರಲಾಪಿಸುವನು.

“ಬಲದೇವರಸರು ಅಪೇಕ್ಷಿಸಿದರು ; ಗುರುಗಳು ಸೂಚಿಸಿದರು ; ಅಕ್ಕ-ಭಾವ ಅನುಮೋದಿಸಿದರು. ನಿಸ್ಸಹಾಯಕನಾಗಿ ನಿನ್ನ ಮುಂದೆ ನನ್ನ ಅಳಲವನ್ನು ತೋಡಿಕೊಂಡರೆ ನೀನೂ ಹೀಗೇ ಹೇಳುವುದೇ ? ಏಕಿಂತು ಇವರೆಲ್ಲ ನನ್ನನ್ನು ವಿವಾಹ ಜೀವನಕ್ಕೆ ಒತ್ತಾಯಿಸುತ್ತಿರುವರು ? ದುರುದ್ದೇಶದಿಂದಲ್ಲವಷ್ಟೆ...''

ಒಂದು ಸುಂದರವಾದ ದೃಷ್ಟಾಂತ ಕಥೆಯು ಇಲ್ಲಿ ನೆನಪಾಗುತ್ತಿದೆ. ಒಮ್ಮೆ ಹತ್ತಾರು ಹುಡುಗರು ಆಟವಾಡಲೆಂದು ಊರ ಹೊರಗಿನ ನಂದಿ ದೇವಾಲಯಕ್ಕೆ ಹೋಗಿದ್ದರು. ಅಲ್ಲೊಂದು ಕಪ್ಪು ಕಲ್ಲಿನಲ್ಲಿ ಕಟೆಯಲ್ಪಟ್ಟ ಸುಂದರವಾದ ನಂದಿ ವಿಗ್ರಹವಿತ್ತು. ಬಾಲಕರು ಆಟವಾಡುತ್ತ ನಂದಿಯ ಸುತ್ತಮುತ್ತ ತಿರುಗಾಡುವಾಗ ಓರ್ವ ತುಂಟ ಹುಡುಗನು ನಂದಿಯ ವಿಗ್ರಹದ ಬಳಿ ಹೋಗಿ, ಅದರ ಮೂಗಿನ ಹೊರಳೆಯಲ್ಲಿ ಬೆರಳನ್ನಿಟ್ಟನು. ಆ ಹೊರಳೆಯಲ್ಲಿ ಒಂದು ಚೇಳು ಕುಳಿತಿತ್ತು. ತನ್ನ ಸ್ವಭಾವ ಗುಣದಂತೆ ಅದು ಕುಟುಕಿತು. ಅಯ್ಯೋ ಎಂದು ಮೆಲ್ಲನೆ ತುಂಟ ಬಾಲಕ ಚೀರಿದ. ಉಳಿದ ಹುಡುಗರು ಸುತ್ತುವರಿದು 'ಏನಾಯಿತೋ ಏನಾಯಿತೋ' ಎಂದು ಕೇಳಿದರು, ಆ ಧೂರ್ತ ಬಾಲಕ ಹೀಗೆ ಆಲೋಚಿಸಿದ, ''ನಾನೊಬ್ಬನೇ ಕಡಿಸಿಕೊಂಡಿದ್ದೇನೆ. ಇವರೆಲ್ಲ ಆರಾಮದಿಂದಿದ್ದಾರೆ. ಆದ್ದರಿಂದ ಉಪಾಯವಾಗಿ ಇವರಿಗೂ ಕಡಿಸಬೇಕು.” ಎಂದುಕೊಂಡ. ಇಲ್ಲಿ ತುಂಬಾ ತಣ್ಣಗಿದೆ, ಎಷ್ಟು ಚೆನ್ನಾಗಿದೆ ಗೊತ್ತಾ? ನೀವೂ ಬೆರಳಿಡಿರಿ...” ಇನ್ನೊಬ್ಬ ಬೆರಳಿಟ್ಟು ಅವನೂ ಕಡಿಸಿಕೊಂಡ, ತನ್ನ ಬುದ್ದಿಗೇಡಿತನದ ಅರಿವಾಯಿತು. ಆದರೇನು ಬೇರೊಬ್ಬರನ್ನು ಎಚ್ಚರಿಸಲಿಲ್ಲ ; ಅವರೂ ಕಡಿಸಿಕೊಳ್ಳುವಂತೆ ಮಾಡಿದ. ಇದೇ ರೀತಿ ಲೋಕದ ಜನರು ತಾವು ಸಂಸಾರದ ಚೇಳನ್ನು ಕಡಿಸಿಕೊಂಡು ಇನ್ನಿತರರಿಗೂ ಕಡಿಸಲು ಸತತವಾಗಿ ಯತ್ನಿಸುವರು.

ಇದನ್ನರಿತು ಬಸವರಸ ಹೀಗೆ ತನ್ನ ಅಳಲನ್ನು ತೋಡಿಕೊಳ್ಳುವನು: “ದೇವಾ, ಸಂಗಮನಾಥ ನಾನೀಗ ಕೆಟ್ಟೆ. ಅಟ್ಟದಿಂದ ಇಳಿಯುತ್ತ ಅರ್ಧ ಏಣಿಯ ಮೇಲಿರುವಾಗ ಆ ಏಣಿಯನ್ನು ಎಳೆದುಕೊಂಡು ಬಿಡುವುದೇ ? ಕಾಡ್ಗಚ್ಚಿನಿಂದ ಬೇಯುತ್ತಿರುವಾಗ ಮಳೆ ಬೀಳುತ್ತ ಹಾಯೆನಿಸುವಾಗಲೇ ಅದನ್ನು ನಿಲ್ಲಿಸುವುದೇ ? ಸಮುದ್ರದ ಮಧ್ಯದಲ್ಲಿರುವಾಗ ಆಶ್ರಯಿಸಿರುವ ತೆಪ್ಪವನ್ನು ತೆಗೆದುಕೊಂಡು ಬಿಡುವುದೆ ? ನರಕದಲ್ಲಿ ಬೀಳಗೊಡದಂತೆ ಉದ್ಧರಿಸುವ ಮಹಾಗುರು ನೀನು, ಜಗತ್ತಿನ ಪರಮಬಂಧು ; ಭಕ್ತರ ಪ್ರಾಣಸಮಾನನು. ಬೆಳುದಿಂಗಳಲ್ಲಿ ಬಿಸಿಲಿನ ಶಾಖವಿರುವುದೆ ? ಅಮೃತವಿದ್ದಲ್ಲಿ ವಿಷವಿರುವುದೆ ? ಬೆಳಕಿದ್ದಲ್ಲಿ ಕತ್ತಲೆ ಇರುವದುಂಟೆ ? ನಿನ್ನಿಂದ ಈ ಮಾತೆ ? ಆಶ್ರಯಿಸಿದವರನ್ನು ಹೋಗು ಎನ್ನುವುದು ಉಚಿತವಲ್ಲ. ನಂಬಿದವರ ಗೋಣನ್ನು ಕೊಯ್ಯಬಾರದು. ಎಳೆಯ ಕಂದನನ್ನು ಯಾರಾದರೂ ಇರಿಯುವರೆ? ಮುಗ್ಧ ಪಶುವನ್ನು ಕೊಲ್ಲುವರೆ ? ನನ್ನನ್ನು ಹೀಗೆ ಕೈಬಿಡುವುದೆ ? ಕಾರುಣ್ಯನಿಧಿಯೇ...ಬಲು ಒಳ್ಳೆಯಾದಾಯ್ತು.... ಇಷ್ಟು ಕಾಲ ಅರ್ಚಿಸಿದ್ದಕ್ಕೆ ತಕ್ಕ ಪ್ರತಿಫಲ ಕೊಟ್ಟೆ.'' ಎಂದು ಮುನಿಸುತುಂಬಿ, ಊಟವನ್ನು ಮಾಡದೆ ಪ್ರಲಾಪಿಸುತ್ತ ಮಲಗುವನು
ಬಸವರಸ.

ಆಗ ಪುನಃ ಸಂಗಮನಾಥನಿಂದ ಆದೇಶ ಹೀಗೆ ದೊರೆಯುವುದು: “ಮಗೂ ಬಸವಾ, ನನ್ನ ಮುದ್ದು ಕಂದಾ. ನಿನ್ನನ್ನಗಲಿ ನಾನೂ ಇರಲಾರೆ. ಇಷ್ಟು ಕೋಪ ಮುನಿಸುಗಳೇತಕ್ಕೆ ? ಹಠ ಮಾಡಬೇಡ ; ಪ್ರಲಾಪಿಸಬೇಡ ನನ್ನ ಭಕ್ತಿಯ ನಿಧಿಯೆ. ನಾನು ನಿನ್ನೊಡನೆಯೇ ಬರುವೆನು. ನಾಳೆ ನೀನಿಲ್ಲಿ ಬಂದು ನನ್ನನ್ನು ಧ್ಯಾನಿಸುತ್ತ ಕುಳಿತುಕೋ. ವೃಷಭನ ಮುಖಾಂತರ ನಾನೇ ನಿನ್ನ ಬಳಿ ಸಾಕಾರಗೊಂಡು ಬರುತ್ತೇನೆ. ಮುಂದೆ ನನ್ನನ್ನು ಅರ್ಚಿಸುತ್ತ ಭಕ್ತರ ಬಂಧುವಾಗಿ, ಶರಣರ ಪರುಷದ ಕಣಿಯಾಗಿ, ನಿತ್ಯ ಸುಖಿಯಾಗಿ ಇರುವಿಯಂತೆ, ದೈವೀಶಕ್ತಿಯ ಪ್ರತ್ಯಕ್ಷಶಕ್ತಿಯನ್ನು ಲೋಕದಲ್ಲಿ ತೋರುವಿಯಂತೆ.”

ಹರಿಹರನ ಪ್ರಕಾರ ಬಸವಣ್ಣನು ಇಂಥದೊಂದು ಕನಸನ್ನು ಕಂಡು ಅದರಲ್ಲಿ ದೇವರಿಂದ ಅದೇಶವನ್ನು ಪಡೆಯುವನು. ಆದರೆ ಇಲ್ಲಿ ಬರುವ ಪ್ರಸಂಗದ ವಿವರವನ್ನು ನೋಡಿದಾಗ ಇದು ಕನಸೋ (Dream) ಅಥವಾ ದರ್ಶನವೋ (Vision) ಎಂದು ಸಂದೇಹ ಬಾರದಿರದು. ಮೊದಲು ಕನಸೆಂದರೇನು ? ಕನಸುಗಳು ಹೇಗೆ ಬೀಳುವವು ? ಏಕೆ ಬೀಳುವವು ? ಅವುಗಳಲ್ಲಿ ಎಷ್ಟು ಬಗೆ ? ಮುಂತಾದ ವಿಷಯ ಚರ್ಚಿಸಿ ನಂತರ ದರ್ಶನ (Visions and revelation) ಕುರಿತು ಚರ್ಚಿಸೋಣ.

ಮಾನವನ ಮಾನಸಿಕ ಅವಸ್ಥೆಗಳು ಮೂರು. ಜಾಗ್ರತ, ಸ್ವಪ್ನ ಮತ್ತು ಸುಷುಪ್ತಿ ಎಂಬುದಾಗಿ. ಪಂಚ ಜ್ಞಾನೇಂದ್ರಿಯಗಳ ಮೂಲಕ ಹೊರಗಿನ ಜಗತ್ತಿನ ಅನುಭವವನ್ನು ಕಿವಿ, ಚರ್ಮ, ಕಣ್ಣು, ನಾಲಿಗೆ, ಮೂಗು ಇವುಗಳಿಂದ ಪಡೆಯುವುದು ಜಾಗ್ರತ ಅವಸ್ಥೆಯಾದರೆ, ಪಂಚೇಂದ್ರಿಯಗಳ ಚಟುವಟಿಕೆ ನಿಲ್ಲಿಸಿ ನಿದ್ರಾವಶವಾದಾಗ ಇನ್ನೊಂದು ಬಗೆಯ ಅನುಭವವನ್ನು ಪಡೆಯುವುದು ಸ್ವಪ್ನಾವಸ್ಥೆ. `ಜಾಗ್ರತಾವಸ್ಥೆಯಂತೆಯೇ ಇಲ್ಲಿ ಸಹ ರೂಪಾನುಭವ, ಸ್ಪರ್ಶಾನುಭವ, ಶಬ್ದಾನುಭವ ಎಲ್ಲ ಉಂಟು. ಹೊರಗಿನ ಇಂದ್ರಿಯಾನುಭವದಲ್ಲಿ ಆಗುವಂತೆ ಇಲ್ಲಿ ಸಹ ಸುಖ-ದುಃಖ ಮುಂತಾದ್ದೆಲ್ಲವನ್ನೂ ವ್ಯಕ್ತಿಯು ಅನುಭವಿಸುವನಷ್ಟೆ.

ಕನಸುಗಳಲ್ಲಿ ಕೆಲವು ಒಳ್ಳೆಯವಿದ್ದು, ಹಿತವನ್ನು ಸುಖವನ್ನು ಉಂಟು ಮಾಡಿದರೆ ಮತ್ತೆ ಕೆಲವು ಕೆಟ್ಟವಿದ್ದು ದುಃಖವನ್ನು, ಕ್ಷೋಭೆಯನ್ನು ಉಂಟುಮಾಡುವವು. ಕೆಲವು ಭಯವನ್ನು ಹುಟ್ಟಿಸುವುವು. ಹೀಗೇಕೆ ಆಗುವುದು ? ಮೊದಲು ಮೊದಲು ಕನಸುಗಳನ್ನು ಕಂಡಾಗ ಆದಿ ಮಾನವನು, ತನ್ನ ಜೀವವು ದೇಹವನ್ನು ತೊರೆದು ಎಲ್ಲೆಲ್ಲೋ ಹೋಗಿ ಅನುಭವಗಳನ್ನು ಪಡೆದು ಬರುವುದು ಎಂದು ಭಾವಿಸುತ್ತಿದ್ದ. ಇದು ಮನಸ್ಸಿನ ಒಂದು ಚಟುವಟಿಕೆ ಎಂಬ ತಿಳಿವು ಕಾಲಾನಂತರದಲ್ಲಿ ಉಂಟಾಯಿತು. ಜಾಗೃದವಸ್ಥೆಯಲ್ಲಿ ಮನಸ್ಸು ಏನೇನನ್ನು ಅನುಭವಿಸುವದೋ ಅದೇ ರೀತಿಯ ಅನುಭವಗಳನ್ನು ಸ್ವಪ್ನಾವಸ್ಥೆಯಲ್ಲಿ ಸಹ ಅನುಭವಿಸುವದು. ಕನಸು ಜಾಗ್ರತ ಜೀವನಕ್ಕೆ ಕೈಗನ್ನಡಿ ಎಂದು ಹೇಳಬಹುದು. ಒಬ್ಬ ವ್ಯಕ್ತಿಯು ತನ್ನ ಅಂತರಂಗವನ್ನು ತಾನು ಅರಿತುಕೊಳ್ಳಬೇಕಾಗಿದ್ದರೆ, ತಾನು ಕಾಣುವ ಕನಸುಗಳ ಮೂಲಕ ಎಂದು ಹೇಳಬಹುದು. ಜಾಗ್ರತ ಜೀವನವು ಅನೇಕ ಹೇಯಕೃತಿಗಳಿಂದ, ಮನಸ್ಸು ಹೇಯಭಾವನೆಗಳಿಂದ ಕೂಡಿದ್ದರೆ ಸ್ವಪ್ನಗಳು ಹಾಗೆಯೇ ಬೀಳುತ್ತಿರುತ್ತವೆ.

ಒಳ್ಳೆಯ ಕನಸುಗಳು ಬಿದ್ದು, ನಿರಾತಂಕವಾಗಿ ನಿದ್ರಿಸಬೇಕೆಂಬ ಇಷ್ಟವಿದ್ದರೆ ವ್ಯಕ್ತಿಯು ಕೆಟ್ಟ ನಡತೆ, ದುಷ್ಟ ಅಸಹ್ಯ ಆಲೋಚನೆಗಳಿಂದ ದೂರವಿರಬೇಕು. ಮಲಗುವಾಗ ಮಂತ್ರಧ್ಯಾನವನ್ನು ಮಾಡುತ್ತ ಶಿವಚಿಂತನೆ ಮಾಡುತ್ತ ಮಲಗಬೇಕು. ಒಂದು ಬೀಜವನ್ನು ಭೂಮಿಯಲ್ಲಿ ಹಾಕಿ ಮಣ್ಣನ್ನು ಮುಚ್ಚುತ್ತೇವೆ. ಅದು ಹೊರಗೆ ಕಾಣದಿದ್ದರೂ ಒಳಗೇ ವಿಕಾಸವನ್ನು ಹೊಂದುತ್ತಿರುತ್ತದೆ. ಮೊಳಕೆಯೊಡೆದು ಹೊರಗೆ ಬಂದಾಗ ಮಾತ್ರ ಗೋಚರವಾಗುತ್ತದೆಯಷ್ಟೇ. ಅದೇ ರೀತಿ ದುರ್ವಿಚಾರಗಳನ್ನು ಮುಚ್ಚಿ ನಿದ್ರೆ ಎಂಬ ಮಣ್ಣನ್ನು ಮುಚ್ಚಿದಾಗ ಅವು ಕೆಟ್ಟ, ಅಸಹ್ಯ, ಭಯಾನಕ ಕನಸುಗಳಾಗಿ ಮೊಳಕೆಯೊಡೆದು ತೋರುತ್ತವೆ. ಅದೇ ರೀತಿ ಶಿವಧ್ಯಾನ, ಮಂತ್ರ ಜಪದ ಬೀಜ ಬಿತ್ತಿ ನಿದ್ರೆ ಎಂಬ ಮಣ್ಣನ್ನು ಮುಚ್ಚಿದರೆ ಒಳ್ಳೆಯ ಮತ್ತು ದೈವೀ ಜೀವನದ ಕನಸುಗಳು ಬೀಳುತ್ತವೆ.

ದುಃಸ್ವಪ್ನವ ಕಾಣದಿರಿ,
ದುರ್ವಿಕಾರದಲ್ಲಿ ಕೂಡಿಡದಿರಿ,
ಮನೋವಿಕಾರದಲ್ಲಿ ಹರಿದಾಡದಿರಿ,
ಷಡಕ್ಷರವ ಸಂಬಂಧಿಸಿಕೊಳ್ಳಿ
ಮೂಲ ಮಂತ್ರವ ಆತ್ಮಂಗೆ ವೇಧಿಸಿಕೊಳ್ಳಿ......
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕುರಂಗೇಶ್ವರನ ಕೂಡಬಲ್ಲೊಡೆ.


ಎಚ್ಚರಿಕೆ ಕಾಯಕದ ಮುಕ್ತಿನಾಥಯ್ಯನೆಂಬ ಶರಣ ಮಲಗುವ, ನಿದ್ರಿಸುವ ಬಗೆಯನ್ನು ಕುರಿತು ಹೇಳುವನು. ವಿಕಾರ ಸಹಿತವಾದ ಮನಸ್ಸಿನಿಂದ ಮಲಗಿ ದುಃಸ್ವಪ್ನಗಳನ್ನು ಕಾಣಬಾರದು. ಷಡಕ್ಷರವನ್ನು, ಮೂಲಮಂತ್ರವಾದ ಓಂಕಾರವನ್ನು ಸಂಬಂಧಿಸಿಕೊಂಡು ನಿದ್ರಾವಶನಾಗಬೇಕು.

ಬಸವಣ್ಣನವರ ಅಭಿಪ್ರಾಯದಂತೆ ನಿರ್ದೋಷ ಪೂರಿತವಾದ ದೈವೀ ವಿಚಾರಗಳಿಂದ ಕೂಡಿದ ನಿದ್ರೆಯು ಸಮಾಧಿ ಸ್ಥಿತಿಯೇ ಸರಿ.

ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ.
........................................
ಕೂಡಲಸಂಗಮದೇವನ ಶರಣನ ಕಾಯವೇ ಕೈಲಾಸ ಕಾಣಿರಣ್ಣಾ


ಶರಣನು ಮಲಗಿದಾಗಲೂ ತನ್ನ ಉಸಿರಿನೊಡನೆಯೇ ಮಂತ್ರದ ಅನುಸಂಧಾನ ಮಾಡುವ ಕಾರಣ, ಅದು ಅಖಂಡ ಜಪವಾಗುವುದು. ಎದ್ದು ಕುಳಿತಾಗ `ಜಾಗರಣೆ ಯೊಡಗೂಡಿದ ಜಪ ನಡೆಯುವ ಕಾರಣ ಅದು ಶಿವರಾತ್ರಿ, ಶರಣನ ಕಾಯವೇ ಕೈಲಾಸ. ಹೀಗೆ ಶರಣನ ನಿದ್ರೆಯು ಒಂದು ಸಮಾಧಿಯ ಅನುಭವವೇ ಸರಿ.

ನಿದ್ರೆಯು ಉಳಿದ ದೇಹ ಗುಣಗಳಂತೆ ಅಂದರೆ ಹಸಿವು-ತೃಷೆಗಳಂತೆ ಜೀವನಕ್ಕೆ ಅವಶ್ಯಕತೆಯೇ ಹೌದು. ಮನುಷ್ಯನು ಅನ್ನಾಹಾರವಿಲ್ಲದೆ ಕೆಲವು ಕಾಲ ಬದುಕಬಲ್ಲ. ನೀರು ಮತ್ತು ನಿದ್ರೆಗಳಿಲ್ಲದೆ ಬದುಕಲಾರ. ಅಂತೆಯೇ ನಿದ್ರೆಯು ಶ್ರೀಮಂತ- ಬಡವ, ಅರಸ- ಆಳು, ವಿದ್ಯಾವಂತ- ಅವಿದ್ಯಾವಂತ ಎಂಬ ಯಾವ ಭೇದವೂ ಇಲ್ಲದೆ ಎಲ್ಲರನ್ನೂ ಆವರಿಸಿಕೊಳ್ಳುವುದು.

ಅಂಧಕಾರವೆಂಬ ಗಂಹ್ವರದೊಳಗೆ
ನಿದ್ರೆಯೆಂಬ ರಾಕ್ಷಸಿ ಗ್ರಹಿಸಿ
ವೀರರ ನಿಗ್ರಹಿಸಿ ನೀರಮಾಡಿ, ಧೀರರ ಧೃತಿಗೆಡಿಸಿ
ಶಾಪಾನುಗ್ರಹ ಸಮರ್ಥರ ಸತ್ತಂತಿರಿಸಿ
ನಿಚ್ಚ ನಿಚ್ಚ ಜೀವನಾಶವ ಮಾಡುತ್ತಿದ್ದಾಳೆ
ನೋಡಾ ಕೂಡಲಸಂಗಮದೇವಾ.


ಅಂಧಾಕಾರವೆನ್ನುವುದು ಲೋಕವನ್ನು ಬಳಸುವುದೇ ತಡ ನಿದ್ರೆ ಎನ್ನುವ ರಾಕ್ಷಸಿ ಎಲ್ಲರ ಮೇಲೂ ತನ್ನ ಮಾಯೆಯ ಜಾಲವನ್ನು ಮೆಲ್ಲನೆ ಬೀಸುವಳು. ಆಕೆಯ ಮಾಯಾಲಿಂಗನದಲ್ಲಿ ಸಿಕ್ಕ ವೀರರು ಮೆತ್ತಗಾಗಿ ಬಿಡುವರು ; ಧೀರರು ತಮ್ಮ ಸ್ಥಿಮಿತತೆಯನ್ನು ಕಳೆದುಕೊಳ್ಳುವರು. ಶಾಪಾನುಗ್ರಹ ಸಮರ್ಥರಾದ ಯೋಗಿಗಳು ಸಹ ನಿರ್ಬಲರಾಗುವರು. ಹೀಗೆ ನಿದ್ರೆಯು ನಿಚ್ಚನಿಚ್ಚ ಜೀವನಾಶವ ಮಾಡುವಳು. ಆದ್ದರಿಂದ ಆಕೆಯನ್ನು ನಿಯಂತ್ರಿಸುವುದು ಅತ್ಯಂತ ಅವಶ್ಯಕ.

ನಿದ್ರೆಯು ಒಂದು ಅವಶ್ಯಕತೆ ಎಂಬುದು ನಿಜ ; ಆದರೆ ಅದು ಅತಿಯಾದಾಗ ವಿಕಾರವಾಗುವುದು ಮತ್ತು ದೇಹ ವಿಕಾರಗಳಿಗೆ ಆಶ್ರಯ ನೀಡುವುದು. ನಿದ್ರಿಸುವುದು ಒಂದು ಕಲೆ; ನಿದ್ರೆ ಮಾಡುವ ಭಂಗಿಯಲ್ಲಿಯೂ ಆರೋಗ್ಯ ಸೂತ್ರ ಅಡಗಿರುವುದು. ಅಂಗಾತಲಾಗಿ ನೇರವಾಗಿ ಮಲಗುವವರು ಸ್ವಾಭಾವತಃ ಧೈರ್ಯಶಾಲಿಗಳಾಗಿರುವರು ; ಜೀವನವನ್ನು ಧೈರ್ಯದಿಂದ ಎದುರಿಸುವರು. ಪಕ್ಕಕ್ಕೆ ಹೊರಳಿ ಮಲಗಿದರೂ ಕೈ ಕಾಲುಗಳನ್ನು ನೇರವಾಗಿ ಇಟ್ಟುಕೊಳ್ಳುವವರು ಸ್ವಭಾವತಃ ಶಾಂತ ಚಿತ್ತರಾಗಿರುವರು. ಪಕ್ಕಕ್ಕೆ ಹೊರಳಿ ಮಲಗಿದರೂ ಕೈಕಾಲುಗಳನ್ನು ಸುರುಳಿಯಾಗಿ ಸುತ್ತಿಕೊಳ್ಳುವವರು ಚಿಂತಾಕ್ರಾಂತ ಸ್ವಭಾವದವರಾಗಿರುವರು. ಹೊಟ್ಟೆಯನ್ನು ಕೆಳಗೆ ಹಾಕಿ ಬೆನ್ನು ಮೇಲೆ ಮಾಡಿ ಮಲಗುವವರು ಪುಕ್ಕಲು ಸ್ವಭಾವದವರೂ. ಸಮಯಸಾಧಕರೂ ಆಗಿರುವರು. ಅವರು ಯಾವ ಶ್ರಮದ ಕೆಲಸವನ್ನೂ ಮಾಡರು, ಜವಾಬ್ದಾರಿ ಹೊರುವುದಿಲ್ಲ.

ಇಲ್ಲೊಂದು ನಗೆ ಹನಿ ನೆನಪಾಗುತ್ತದೆ. ನೆಪೋಲಿಯನ್ ಬೋನೋಪಾರ್ಟನು ಎಷ್ಟು ಧೀರಶೂರನೋ ಅಷ್ಟೇ ಹಾಸ್ಯಪ್ರಿಯನೂ ಆಗಿದ್ದ. ಬಹಳ ಬೇಸರವಾದಾಗ ನಗಿಸಲೆಂದು ಪುಕ್ಕನೂ, ಹಾಸ್ಯಗಾರನೂ ಆದ ಓರ್ವನನ್ನು ಇರಿಸಿಕೊಂಡಿದ್ದ. ಒಮ್ಮೆ ಯುದ್ಧಕ್ಕೆ ಹೋಗಿದ್ದರೆಲ್ಲರು. ಅಂದು ರಜೆಯನ್ನು ಸಾರಲಾಗಿತ್ತು. ಹೀಗಾಗಿ ಎರಡೂ ಪಾಳೆಯಗಳಲ್ಲಿ ಎಲ್ಲರೂ ವಿಶ್ರಾಂತಿಯಲ್ಲಿದ್ದರು. ನೆಪೋಲಿಯನ್ ಆ ಪುಕ್ಕಲು ಮನುಷ್ಯನನ್ನು ಕರೆದು ಹೇಳಿದ “ನಿನ್ನನ್ನು ಎಲ್ಲರೂ ಪುಕ್ಕಲು ಮನುಷ್ಯ ಎಂದು ತಮಾಷೆ ಮಾಡುವರು. ನೀನು ಇಂದು ಏನಾದರೂ ಶೌರ‍್ಯದ ಕೆಲಸಮಾಡಿ ನಿನಗೆ ಬಂದಿರುವ ಕಲಂಕ ತೊಡೆದುಕೊಳ್ಳಬೇಕು.” ಅವನು ತಂಬಾ ಉತ್ಸಾಹದಿಂದ ಕತ್ತಿ ಝಳಪಿಸುತ್ತ ಹೊರಟ. ಅಂದು ಸಂಜೆ ಹೆಮ್ಮೆಯಿಂದ ತಿರುಗಿ ಬಂದ. ಅವನ ಕೈಲಿ ಸೈನಿಕ ಸಮವೇಷದವನ ಎರಡು ಕಾಲುಗಳಿದ್ದವು. ನೆಪೋಲಿಯನ್ ನಿಜಕ್ಕೂ ಆಶ್ಚರ್ಯಪಟ್ಟನು. “ನಾನು ಶತ್ರು ಸೈನಿಕನ ಕಾಲನ್ನು ಕತ್ತರಿಸಿ ತಂದೆ.” ಎಂದು ಹೆಮ್ಮೆಯಿಂದ ಹೇಳಿದ. ಅವನನ್ನು ಸನಿಹಕ್ಕೆ ಕರೆದು ನೆಪೋಲಿಯನ್, "ನೋಡಿ, ನೀವೆಲ್ಲರೂ ಅವನನ್ನು ಹೇಡಿ ಎಂದು ಹಾಸ್ಯಮಾಡುವಿರಿ. ಇಂದು ಅವನು ಶೌರ‍್ಯದ ಕೆಲಸ ಮಾಡಿದ್ದಾನೆ.'' ಎಂದನು. ಅವನು ತಿರುಗಿ ಅದಿರಲಿ; ನೀನು ಆ ಸೈನಿಕನ ಕಾಲು ತರುವ ಬದಲು ತಲೆಯನ್ನೇ ತರಬಹುದಿತ್ತಲ್ಲ?” ಎಂದಾಗ ಅವನು ಹೇಳಿದ, “ನಾನು ಹಾಗೇ ಅಲೋಚಿಸಿದ್ದೆ. ಆದರೆ ಯಾರೋ ಆ ತಲೆಯನ್ನು ಕಡಿದು ಒಯ್ದಿದ್ದರು.” ಎಂದಾಗ ಎಲ್ಲರೂ ಬಿದ್ದು ಬಿದ್ದು ನಕ್ಕರು.

ಮಲಗುವಾಗ ಸರಿಯಾಗಿ ಮಲಗದೆ, ದೇಹದ ಯಾವ್ಯಾವುದೋ ಭಾಗದ ಮೇಲೆ ಒತ್ತಡ ಹಾಕಿದರೆ ಮಲಗುವಿಕೆಯು ಅನೇಕ ರೋಗಗಳಿಗೆ ಕಾರಣವಾಗುವುದು. ಅದ್ದರಿಂದ ಮಲಗುವ ಬಗೆ, ಮಲಗುವಾಗ ಮಾಡುವ ಚಿಂತನೆ ಇವೆಲ್ಲವೂ ಬಹಳ ಮುಖ್ಯ ಎಂಬುದನ್ನು ನಾವು ತಿಳಿದಿರಬೇಕು.

ಕನಸುಗಳ ಬಗ್ಗೆ ಸಾಕಷ್ಟು ವಿಶ್ಲೇಷಣೆ ನಡೆದು ವಿವಿಧ ಸಿದ್ಧಾಂತಗಳು ಮೈದಳೆದಿದ್ದರೂ ಸಿಗ್ಮಂಡ ಫ್ರಾಯಿಡನ ಸ್ವಪ್ನ ಮೀಮಾಂಸೆಯು ಬಹು ಜನಪ್ರಿಯವಾಗಿದೆ. Interpretation of Dreams ಎಂಬ ಅವನ ಕೃತಿ ದೊಡ್ಡ ಕ್ರಾಂತಿಯನ್ನೇ ಮನೋವೈಜ್ಞಾನಿಕ ಜಗತ್ತಿನಲ್ಲಿ ಮಾಡಿದೆಯಲ್ಲದೇ, ಮುಂದೆ ಮನೋವಿಶ್ಲೇಷಣೆ, ಮನೋರೋಗ ಚಿಕಿತ್ಸೆಗಳಿಗೆ ಸಹಾಯ
ಮಾಡಿದೆ.

ದೆವ್ವ ಭೂತ ಪಿಶಾಚಿಗಳ ಚಟುವಟಿಕೆ ಎಂದು ಕೆಲವರು. ಮಾಟಮಂತ್ರ ತಂತ್ರ ಎಂದು ಮತ್ತೆ ಕೆಲವರು ಮನಸ್ಸಿಗೆ ಬಂದಂತೆ ಕಲ್ಪಿಸಿಕೊಳ್ಳುವಾಗ, ಕನಸು ಮನಸ್ಸಿನ ಒಂದು ಚಟುವಟಿಕೆಯೆಂದು ಸಿಗ್ಮಂಡ್ ಪ್ರೈಡ್ ವಿಶ್ಲೇಷಿಸಿದಾಗ ಒಂದು ನೂತನ ಕ್ರಾಂತಿಯೇ ಮನಶಾಸ್ತ್ರ ಪ್ರಪಂಚದಲ್ಲಿ ಸಂಭವಿಸಿತು.

ಹುಟ್ಟುಗುಣಗಳು ಮತ್ತು ಕನಸು

ಕನಸುಗಳನ್ನು ಕಾಣುವಲ್ಲಿ ಹುಟ್ಟುಗುಣಗಳ ಪಾತ್ರ ಮಹತ್ವಪೂರ್ಣ. ಆದ್ದರಿಂದ ಹುಟ್ಟುಗುಣಗಳ ಬಗ್ಗೆ ಸ್ವಲ್ಪ ತಿಳಿಯೋಣ.

ಮಾನವನಲ್ಲಿ ಹಲವಾರು ಹುಟ್ಟುಗುಣಗಳಿವೆ. ಇವಕ್ಕೆ ಸ್ವಾಭಾವಿಕ ಪ್ರವೃತ್ತಿಗಳೆಂದೂ ಹೆಸರು. ಯಾವುದಾದರೊಂದು ಪ್ರಚೋದನೆಗೆ ವಿಶಿಷ್ಟ ಪ್ರತಿಕ್ರಿಯೆ ನೀಡಬೇಕೆಂಬ ಸ್ವಾಭಾವಿಕ ಒತ್ತಾಸೆಯೇ ಹುಟ್ಟುಗುಣ. ಒಂದು ಸೊಳ್ಳೆ ಮೈಮೇಲೆ ಕೂರುತ್ತದೆ, ಕಡಿಯುತ್ತದೆ. ಅದು ಪ್ರಚೋದನೆ, ನಿದ್ರಾವಸ್ಥೆಯಲ್ಲಿದ್ದರೂ ಅದನ್ನು ಓಡಿಸಲು ಕೈ ಯತ್ನಿಸುತ್ತದೆ. ಕೈ ಬೀಸುವುದು ಪ್ರಚೋದನೆ ; ಸೊಳ್ಳೆಯು ಹಾರಿ ಹೋಗುವುದು ಪ್ರತಿಕ್ರಿಯೆ. ಮಗುವು ತೊಟ್ಟಿಲಲ್ಲಿ ಮಲಗಿ ಗಾಢವಾದ ನಿದ್ರೆಯಲ್ಲಿ ಇರುತ್ತದೆ. ಏನೋ ಭಯಂಕರ ಸಪ್ಪಳ ಕೇಳುವುದೇ ತಡ ತಟ್ಟನೆ ಬೆಚ್ಚಿ ಬೀಳುತ್ತದೆ. ಇಲ್ಲಿ ಸಪ್ಪಳವೇ ಪ್ರಚೋದನೆ, ಬೆಚ್ಚಿ ಬೀಳುವುದೇ ಪ್ರತಿಕ್ರಿಯೆ. ದಾರಿಯಲ್ಲಿ ನಡೆಯುತ್ತ ಹೊರಟಾಗ ಒಂದು ಫಲಭರಿತ ತೋಟ ಕಾಣುತ್ತದೆ. ಅದರ ಹಣ್ಣನ್ನು ತಿನ್ನಬೇಕೆಂಬ ಬಯಕೆ ಉಂಟಾಗುತ್ತದೆ. ಇಲ್ಲಿ ಹಣ್ಣು ಪ್ರಚೋದನೆಯಾದರೆ ತಿನ್ನಬೇಕೆಂಬ ಬಯಕೆ ಪ್ರತಿಕ್ರಿಯೆ, ಮಾನವನಲ್ಲಿ ಸ್ವಾಭಾವಿಕ ಪ್ರತಿಕ್ರಿಯೆಗಳು ಹದಿನಾಲ್ಕು ಎಂಬುದಾಗಿ ಮನಶಾಸ್ತ್ರದ ಒಂದು ವಿಚಾರಧಾರೆಯವರು ಪ್ರತಿಪಾದಿಸುತ್ತಾರೆ.

೧. ಆಹಾರ ಹುಡುಕುವುದು : ಹುಟ್ಟಿದ ತಕ್ಷಣ ಎಲ್ಲ ಜೀವಿಗಳೂ ಆಹಾರವನ್ನು ಪಡೆಯಲು ಪ್ರಯತ್ನಿಸುತ್ತವೆ. ಪ್ರಾಣಿಗಳು ಕರುಗಳನ್ನು ಹಾಕುತ್ತವೆ. ಅವುಗಳಿಗೆ ಯಾರು ಕಲಿಸುವರು ? ಅವು ತಾವಾಗಿಯೇ ಹಾಲನ್ನು ಕುಡಿಯಲು ಆರಂಭಿಸುತ್ತವೆ.

೨. ಮೈಥುನ : ಲೈಂಗಿಕ ತೃಪ್ತಿಯನ್ನು ಹೊಂದಬೇಕೆಂಬ ಹುಟ್ಟುಗುಣ ಪ್ರಾಣಿಗಳಲ್ಲಂತೂ ಶಾರೀರಿಕವಾಗಿ ಅಭಿವ್ಯಕ್ತಗೊಳ್ಳುವುದು. ಅವುಗಳಿಗೆ ಮಾನಸಿಕ ಉದ್ರೇಕಕ್ಕಿಂತಲೂ ಶಾರೀರಿಕ ಬೆದೆಯೇ ಪ್ರಧಾನವಾಗಿ ಇರುವುದನ್ನು ಕಾಣುತ್ತೇವೆ.

೩. ಭಯ : ತನಗೆ ಮೀರಿದ ಒಂದು ಶಕ್ತಿಯನ್ನು ಕುರಿತು ಭಯಪಡುವುದು ಒಂದು ಜೈವಿಕ ಪ್ರವೃತ್ತಿಯೇ, ಮನುಷ್ಯನಿಗೆ ಹಾವನ್ನು ಕಂಡರೆ ಎಷ್ಟು ಭಯವೋ, ಹಾವಿಗೂ ಮನುಷ್ಯನನ್ನು ಕಂಡರೆ ಅಷ್ಟೇ ಭಯ. ಹುಲಿ, ಕರಡಿ ಮುಂತಾದ ಪ್ರಾಣಿಗಳೂ ಸಹ ಅಷ್ಟೇ ಭಯ ಪಡುವವು. ಇರುವೆ ಮನುಷ್ಯನನ್ನು ಕಚ್ಚುವುದು ಪ್ರತೀಕಾರ ಮನೋಭಾವದಿಂದಲ್ಲ ಭಯದಿಂದ, ತನ್ನನ್ನು ತುಳಿದಾನಲ್ಲ ಕೊಂದಾನಲ್ಲ. ಎಂಬ ಜೀವಭಯದಿಂದ ಹಾಗೆ ವರ್ತಿಸುವುದು.

೪. ಜಿಗುಪ್ಪೆ : ತನಗೆ ಸಹ್ಯವಲ್ಲದ ಬೇಡವಾದ ವಸ್ತುವಿನ ಬಗ್ಗೆ ತಾಳುವ ಮನೋಭಾವ ಜಿಗುಪ್ಪೆ. ಹಸಿದಾಗ ಇಷ್ಟ ಪಟ್ಟು ಹಾಲನ್ನು ಕುಡಿಯುವ ಕೂಸು ಹೊಟ್ಟೆ ತುಂಬಿದ ನಂತರ ಬಾಟಲಿಯನ್ನು ಎಸೆಯುವುದು, ತಾಯಿಯ ಮೊಲೆಯನ್ನು ಕಚ್ಚುವುದು. ಮರಿಗಳಿಗೆ ಹಾಲನ್ನು ಕುಡಿಸುವ ಹಸು ಕೆಚ್ಚಲು ಬರಿದಾದಾಗ ಒದೆಯುವುದು ; ನಾಯಿ ಮರಿಗಳನ್ನು ಹೆದರಿಸಿ ದೂರ ಹೋಗುವುದು. ಯಾವ ವಸ್ತುವೇ ಆಗಲಿ ತನಗೆ ಸುಖ ಕೊಡುವ ತನಕ ಅದನ್ನು ಪ್ರೀತಿಸಿ ಸಾಕಾದಾಗ ಜಿಗುಪ್ಪೆ ತಾಳುವುದು ಹುಟ್ಟುಗುಣ.

೫. ಕೂತೂಹಲ : ಅತ್ಯಂತ ಗಮನಾರ್ಹ ಹುಟ್ಟುಗುಣವಿದು. ಕುತೂಹಲ ಎಂಬ ಪ್ರಚೋದಕ ಶಕ್ತಿ ಇಲ್ಲದಿದ್ದರೆ ಆದಿ ಮಾನವ ಆಧುನಿಕ ಮಾನವನಾಗದೆ ತನ್ನ ಶೈಶವಾಸ್ಥೆಯಲ್ಲೇ ಉಳಿದು ಬಿಡುತ್ತಿದ್ದ ; ಶಿಲಾಯುಗದ ಮಾನವ ಅಣು ಯುಗಕ್ಕೆ ಕಾಲಿಡುತ್ತಲೇ ಇರಲಿಲ್ಲ. ಇದೊಂದು ನಿರಂತರವಾಗಿ ಮುಂತಳ್ಳುವ ಶಕ್ತಿ. ಹೊಸ ಹೊಸತರ ಅನ್ವೇಷಣೆಗೆ ಕುತೂಹಲವೇ ಕಾರಣ.

೬. ವಾತ್ಸಲ್ಯ : ಹುಟ್ಟುಗುಣಗಳ ಪ್ರಾಬಲ್ಯವೇನು ಎನ್ನುವುದು ವ್ಯಕ್ತವಾಗುವುದು ವಾತ್ಸಲ್ಯದಲ್ಲಿಯೆ. ಒಂದು ಹೆಣ್ಣು ಹುಲಿ ಈದಾಗ ತನ್ನ ಮರಿಗಳಿಗಾಗಿ ಜೀವದ ಹಂಗು ತೊರೆದು ಅವನ್ನು ಕಾಪಾಡುತ್ತದೆ. ಎಂದೂ ಈದ ಅನುಭವವೇ ಇಲ್ಲದ ಪ್ರಾಣಿಗಳು ಸಹ ಮಕ್ಕಳನ್ನು ಹೆತ್ತ ತಕ್ಷಣವೇ ಅವನ್ನು ನೆಕ್ಕಿ ನೆಕ್ಕಿ ಪ್ರೀತಿಸುತ್ತವೆ. ವಾತ್ಸಲ್ಯ ಎನ್ನುವುದೊಂದು ಹುಟ್ಟುಗುಣವಾದಂತೆ ಕರ್ತವ್ಯ ಅನ್ನುವುದು ಆಗಿಲ್ಲ ಎನ್ನುವುದು ಗಮನಾರ್ಹ. ಕೆಲವು ತಾಯಿತಂದೆಯರು ಅದೆಂತಹ ಮಮತೆ- ತ್ಯಾಗಗಳಿಂದ ಮಕ್ಕಳನ್ನು ಬೆಳೆಸುವರು. ಕಾಲಾನಂತರದಲ್ಲಿ ಆ ಮಕ್ಕಳು ಇದೆಲ್ಲವನ್ನೂ ಮರೆತು ಮತಾಪಿತೃಗಳನ್ನು ದೂರಮಾಡುವರಷ್ಟೆ.

೭. ಸಂಘಜೀವನ : ಗುಂಪುಗೂಡಿ ಬದುಕುವ ಬಗೆಯು ಒಂದು ಹುಟ್ಟುಗುಣವೆ. ಆನೆಗಳನ್ನು ನೋಡಲಿ, ಕೋತಿಗಳನ್ನು ನೋಡಲಿ ಅವೆಲ್ಲವು ಒಟ್ಟಾಗಿ ಬದುಕಲು ಯತ್ನಿಸುತ್ತವೆ. ಇರುವೆಗಳಲ್ಲಿ ಮತ್ತು ಜೇನ್ನೊಣಗಳಲ್ಲಿ ಈ ಸಂಘ ಜೀವನ ಅತ್ಯದ್ಭುತ. ಅಗಾಧವಾದ ಹೊಂದಾಣಿಕೆ ಅವುಗಳಲ್ಲಿರುತ್ತದೆ. ಹೆಣ್ಣಾನೆಗೆ ಹೆರಿಗೆ ಆಗುವಾಗ ಉಳಿದ ಆನೆಗಳು ಕೋಟೆಯಂತೆ ಸಾಲಾಗಿ ನಿಂತು ಆ ಹೆಣ್ಣಾನೆಯ ರಕ್ಷಣೆ ಮಾಡುತ್ತವೆಯಂತೆ. ಒಮ್ಮೆ ನಾನು ಏನನ್ನೋ ಬರೆಯುತ್ತ ಕುಳಿತಿದ್ದೆ. ಪೂಜೆ ಮಾಡುವ ಜಾಗದಲ್ಲೇ ಪೂಜಾನಂತರ ಕುಳಿತಿದ್ದೆ. ಹಿಂದಿನ ದಿನ ರಾತ್ರಿ ಪ್ರಸಾದ ನೀಡುವಾಗ ಯಾರೋ ನೆಲದ ಮೇಲೊಂದು ಚಪಾತಿ ಚೂರು ಕೆಡವಿದ್ದರು ಅಂತ ಕಾಣುತ್ತದೆ. ಬೆಳಿಗ್ಗೆ - ಗುಡಿಸಿ. ಸಾರಿಸುವವರ ಕಣ್ಣಿಗೂ ತಪ್ಪಿಸಿಕೊಂಡು ಅದು ಬಿದ್ದಿತು. ಒಂದು ಇರುವೆ ಬಂದು ಆ ಚೂರನ್ನು ಎಳೆದೊಯ್ಯಲು ಯತ್ನಿಸಿತು ; ಸಾಧ್ಯವಾಗಲಿಲ್ಲ. ನಾನು ಕುತೂಹಲದಿಂದ ಗಮನಿಸುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲೇ ಆ ಇರುವೆ ಎಲ್ಲಿಗೋ ಹೋಗಿ ಏಳೆಂಟು ಇರುವೆಗಳನ್ನು ಕರೆತಂದಿತು. ಎಲ್ಲವೂ ಚಪಾತಿ ಚೂರಿನ ಸುತ್ತಲೂ ನಿಂತು ಎತ್ತಿ ಕೊಂಡು ಅನಾಯಾಸವಾಗಿ ಒಯ್ದವು. ಈ ಭಾವೈಕ್ಯತೆ ಕಂಡು ನಾನು ಬೆರಗಾಗಿ ಬಿಟ್ಟೆ . ಆ ಇರುವೆಯ ದೂರಾಲೋಚನೆಗೆ ಆಚ್ಚರಿಪಟ್ಟೆ, ತಾನಷ್ಟೇ ಕಂಡುದನ್ನು ತಾನಷ್ಟೇ ತಿನ್ನಬೇಕೆಂದು ಆದು ಬಯಸಿದ್ದರೆ ಕೊಂಚ
ವೇಳೆಯಲ್ಲಿ ಆ ಚೂರು ಗುಡಿಸಲ್ಪಡುತ್ತಿತ್ತು. ಜೊತೆಗಾರರನ್ನು ಕರೆತಂದು ಸುರಕ್ಷಿತ ಸ್ಥಳಕ್ಕೆ ಚಪಾತಿಯನ್ನು ಎಳೆದೊಯ್ಯುವುದರಲ್ಲಿ ದೂರಾಲೋಚನೆ, ಔದಾರ‍್ಯ ಮನೋಭಾವ, ಸಾಂಘಿಕ ಬದುಕಿನ ಅಪೇಕ್ಷೆ ವ್ಯಕ್ತವಾಗುತ್ತವೆ.

೮. ಪ್ರತಿಷ್ಠೆ : ಇದೂ ಪ್ರಬಲವಾದ ಹುಟ್ಟುಗುಣ. ಈ ಹುಟ್ಟುಗುಣದ ಇನ್ನೊಂದು ರೂಪವೇ ಸ್ವಾಭಿಮಾನ. ಪ್ರತಿಷ್ಠೆಯೆಂಬುವ ಈ ಗುಣವನ್ನು ಎಲ್ಲ ಹಂತಗಳಲ್ಲಿಯೂ ಕಾಣಬಹುದು. ಮಗುವು ಏನೋ ಒಂದು ವಸ್ತುವನ್ನು ಬೇಡುತ್ತದೆ. ಅದನ್ನು ನೀವು ಕೊಡದಿದ್ದಾಗ ಅದರ ಪ್ರತಿಷ್ಠೆಗೆ ಧಕ್ಕೆ ಬಂದಿತೆಂದು ಮುನಿಸಿಕೊಳ್ಳುತ್ತದೆ ; ರಚ್ಚೆ ಹಿಡಿದು ಅಳುತ್ತದೆ. ಕೆಲವೊಮ್ಮೆ ನೀವು ಮುಂದೆ ಮುಂದೆ ಹೋಗುವಾಗ ಮಗು ಪುಟ್ಟ ಪುಟ್ಟ ಹೆಜ್ಜೆಯೊಡನೆ ಬರುತ್ತ, ತಟ್ಟರಿಸಿ ಬೀಳುತ್ತದೆ. ಆಗ ನೀವು ನೋಡಿದರೂ ನೋಡದಂತೆ ಇದ್ದರೆ ಅದು ಮೆಲ್ಲನೆ ಎದ್ದು ಸಾವರಿಸಿಕೊಂಡು ಮುಂದೆ ಬರುತ್ತದೆ. ನೀವು ಬಿದ್ದುದನ್ನು ನೋಡಿಬಿಟ್ಟರೆ ಅಳಲು ಆರಂಭಿಸುತ್ತದೆ. ಅಲ್ಲಿ ನೋವಿಗಿಂತಲೂ ಮಿಗಿಲು ಪ್ರತಿಷ್ಠೆಗೆ ಧಕ್ಕೆಯಾದುದು ಅಳುವಿಗೆ ಕಾರಣ.

೯. ವಿಧೇಯತೆ : ತನಗಿಂತಲೂ ಹಿರಿದಾದ ಒಂದು ಶಕ್ತಿಗೆ ವಿಧೇಯವಾಗಿ ನಡೆದುಕೊಳ್ಳುವುದು (ತನಗಿಂತಲೂ ಕಿರಿದಾದ ಶಕ್ತಿಯ ಮೇಲೆ ದರ್ಪ ತೋರಿಸುವುದು) ಒಂದು ಹುಟ್ಟು ಗುಣವೆ. ತನ್ನ ಕಛೇರಿಯಲ್ಲಿ ವ್ಯಾಪಾರವಲಯದಲ್ಲಿ ರಾಜಕೀಯದಲ್ಲಿ, ಧಾರ್ಮಿಕ ರಂಗದಲ್ಲಿ ತನಗಿಂತಲೂ ಹಿರಿದಾದ ಶಕ್ತಿಗಳಿಗೆ, ವ್ಯಕ್ತಿಗಳಿಗೆ ಮನ್ನಣೆ ಕೊಡುವುದನ್ನು ನಾವು ಕಾಣುತ್ತೇವೆ. ಪರಮಾತ್ಮನೆಂಬ ಆತ್ಯಂತಿಕ ಶಕ್ತಿಗೆ ಶರಣಾಗುವುದೂ ಒಂದು ವಿಧೇಯತೆಯೆ.

೧೦. ಮೊರೆಯಿಡುವುದು : ತನ್ನ ಸೀಮಿತವಾದ ಶಕ್ತಿಯನ್ನು, ಸಾಮರ್ಥ್ಯವನ್ನು ಗುರುತಿಸಿ ವಿದ್ಯೆ, ಬುದ್ಧಿ, ಯಶಸ್ಸು, ಸಂಪತ್ತು, ಮುಕ್ತಿ ಮುಂತಾದುವುಗಳ ಗಳಿಕೆಗಾಗಿ ತನಗಿಂತಲೂ ಹಿರಿದಾದ ಶಕ್ತಿಯಲ್ಲಿ ಮೊರೆಯಿಡುವುದೂ ಒಂದು ಹುಟ್ಟುಗುಣವೆ.

೧೧. ಕೋಪ : ತನ್ನ ಇಷ್ಟವು ನೆರವೇರದಿದ್ದಾಗ ತನ್ನ ಇಷ್ಟಕ್ಕೆ ತಕ್ಕಂತೆ ಇತರರು ನಡೆಯದೆ ಇದ್ದಾಗ ತೋರಿಸುವ ಉಗ್ರ ಪ್ರತಿಕ್ರಿಯೆಯೇ ಕೋಪ. ಕೆಲವರಲ್ಲಿಯಂತೂ ಇದು ಪ್ರಾಣಿಗಳಿಗಿಂತಲೂ ಮಿಗಿಲಾಗಿ ಇರುತ್ತದೆ.

೧೨. ರಚನಾಶಕ್ತಿ : ವಿಧಾಯಕವಾಗಿ ಚಿಂತಿಸುವುದು, ಕಲಿಯುವುದು ಒಂದು ಸಹಜ ಪ್ರವೃತ್ತಿಯೆ. ಇದರ ಬೆಳವಣಿಗೆಯಿಂದಲೇ ಇಂದು ಭಾಷೆ, ವಿಜ್ಞಾನ, ಕಲೆ, ನಾಗರಿಕತೆ ಎಲ್ಲವೂ ಬೆಳೆದಿರುವುದು. ಮಾನವನಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿದ್ದರೆ ಪ್ರಾಣಿಗಳಲ್ಲಿಯೂ ಇದು ಅಲ್ಪ ಪ್ರಮಾಣದಲ್ಲಾದರೂ ಇದೆ. ಎತ್ತರದ ಸ್ಥಾನದಲ್ಲಿ ಹಣ್ಣುಗಳನ್ನು ಕಟ್ಟಿ ಕೋತಿಗಳನ್ನು ಆ ಕೋಣೆಯಲ್ಲಿ ಬಿಟ್ಟಾಗ ಅವು ಏರಲಾರದೆ. ಸ್ವಲ್ಪ ಹೊತ್ತಿನಲ್ಲಿ ಉಪಾಯವನ್ನು ಹುಡುಕಿದವಂತೆ, ಆಲ್ಲಿ ಕೆಲವು ಡಬ್ಬಿಗಳು ಬಿದ್ದಿದ್ದರೆ ಅವನ್ನು ತಂದು ಒಂದರ ಮೇಲೆ ಒಂದನ್ನು ಇಟ್ಟು ಹಣ್ಣನ್ನು ತೆಗೆದುಕೊಂಡವಂತೆ.

೧೩. ಸಂಗ್ರಹ ಬುದ್ದಿ : ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಸಂಗ್ರಹಣ ಬುದ್ಧಿಯನ್ನು ಕಾಣುತ್ತೇವೆ. ಬಣ್ಣಬಣ್ಣದ ಸಾಮಾನು, ಹರುಕು ಮುರುಕು ಡಬ್ಬಿ ಮುಂತಾದುವನ್ನು ಸಹ ಮಕ್ಕಳು ಕೂಡಿ ಹಾಕುತ್ತವೆ. ಇರುವೆಗಳು ಆಹಾರ ಧಾನ್ಯ ಸಂಗ್ರಹಿಸಿದರೆ, ಜೇನು ನೊಣಗಳು ಜೇನುತುಪ್ಪವನ್ನು ಸಂಗ್ರಹಿಸುತ್ತವೆ. ಈ ಸಂಗ್ರಹ ಬುದ್ಧಿಯ ಪರಾಕಾಷ್ಠೆಯನ್ನು ತಲ್ಪಿದವನನ್ನೇ ಲೋಭಿ, ಜಿಪುಣ, ಸ್ವಾರ್ಥಿ ಎಂದೆಲ್ಲ ಕರೆಯುತ್ತೇವೆ. ಸಂಗ್ರಹ ಬುದ್ಧಿಯು ಅತಿಯಾದಾಗ ಸ್ವಾರ್ಥಕ್ಕೆ ದೌರ್ಜನ್ಯಕ್ಕೆ ಎಡೆಮಾಡಿಕೊಡುತ್ತದೆ.

ಇಲ್ಲೊಂದು ನಗೆ ಹನಿ ನೆನಪು ಬರುತ್ತದೆ. ಒಂದು ಹೆದ್ದಾರಿಯ ಬದಿಯ ಅರಳೀಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಕುಳಿತು ದಣಿವಾರಿಸಿಕೊಂಡ ಓರ್ವ ವ್ಯಕ್ತಿ ತನ್ನ ಪರ್ಸ್ ಮರೆತು ಎದ್ದು ಹೋದ. ಅದರಲ್ಲಿ ಒಂದು ಸಾವಿರ ರೂಪಾಯಿ ಇದ್ದವು. ಅವನ ಮನಸ್ಸಿಗೆ ಬಲು ಬೇಸರವಾಯಿತು. ಪುನಃ ಬಂದು ನೋಡುವಾಗ ಆ ಪರ್ಸ್ ಇರಲಿಲ್ಲ. ಆಗ ಅವನು ಒಂದು ಬೋರ್ಡ್ ಹಾಕಿದ ''ಇಲ್ಲಿ ಇಂಥ ದಿನ ನೆರಳಲ್ಲಿ ಕುಳಿತು ದಣಿವಾರಿಸಿಕೊಂಡು ಹೋಗುವಾಗ ಒಂದು ಸಾವಿರ ರೂಪಾಯಿಗಳಿರುವ ಪರ್ಸ್ ಬಿಟ್ಟು ಹೋಗಿದ್ದೇನೆ. ಪ್ರಾಮಾಣಿಕವಾಗಿ ತಂದುಕೊಟ್ಟರೆ ಐವತ್ತು ರೂಪಾಯಿ ಬಹುಮಾನ.'' ಎಂದು ತನ್ನ ಪೂರ್ಣವಿಳಾಸ ಕೊಟ್ಟ.

ಇದನ್ನು ಒಬ್ಬ ಸ್ವಾರ್ಥಿ ನೋಡಿದ. ಅವನು ಇನ್ನೊಂದು ಬೋರ್ಡ್ ಹಾಕಿದ ಒಂದು ಸಾವಿರ ರೂಪಾಯಿ ವಾಪಸ್ಸು ಕೊಟ್ಟವರಿಗೆ ಕೇವಲ ೫೦ ರೂಪಾಯಿ ಬಹುಮಾನ ತುಂಬ ಕಮ್ಮಿ. ಆ ಪರ್ಸನ್ನು ನನಗೆ ತಂದುಕೊಟ್ಟರೆ ನಾನು ಐದು ನೂರು ರೂಪಾಯಿ ಕೊಡುತ್ತೇನೆ.''

ತನ್ನದಲ್ಲದ ವಸ್ತು ತನಗೆ ಸಿಕ್ಕಾಗ ಕೊಡುವುದೇನು ಮಹಾ ಅಲ್ಲವೆ ? ಸ್ವಾರ್ಥ ಮತ್ತು ಸಂಗ್ರಹ ಬುದ್ಧಿಯು ಮನುಷ್ಯನ ವಿವೇಕ ಶಕ್ತಿಯನ್ನು ನಾಶಮಾಡುತ್ತದೆ.

ಹುಬ್ಬಳ್ಳಿ ಅಂಥ ಒಂದು ಊರಿನಲ್ಲಿ ದಾನಪ್ಪ ಎಂಬ ಕಡುಲೋಭಿ ಇದ್ದ. ಅವನು ಎಂದೂ ಯಾರಿಗೂ ಕೈಯೆತ್ತಿ ದಾನ ಮಾಡಿದವನಲ್ಲ. ಅಂಥವನು ಒಂದು ದಿವಸ ರೇಷ್ಮೆಯ ಚೀಲವೊಂದರಲಿಟ್ಟಿದ ಒಂದು ಸಾವಿರ ರೂಪಾಯಿ ಕಳೆದುಕೊಂಡು ಬಿಟ್ಟ. ಬಾಯಿ ಬಡಿದುಕೊಂಡು ಅತ್ತ ಪೋಲೀಸ್ ಸ್ಟೇಷನ್ನಿಗೆ ಹೋಗಿ ವಿವರಗಳನ್ನು ತಿಳಿಸಿ ದೂರುಕೊಟ್ಟ. ದಿನಪತ್ರಿಕೆಯಲ್ಲಿ ಜಾಹಿರಾತು ಕೊಟ್ಟ. ಸಾವಿರ ರೂಪಾಯಿಗಳನ್ನು ತಂದು ಕೊಟ್ಟವರಿಗೆ ನೂರು ರೂಪಾಯಿ ಬಹುಮಾನ ಎಂದು ಘೋಷಿಸಿದ.

ಗಾಮನಗಟ್ಟಿಯಿಂದ ಹುಬ್ಬಳ್ಳಿಗೆ ಹಾಲು ಮಾರಲು ಪರಪ್ಪ ಎಂಬ ಶರಣನು ಸೈಕಲ್ ಮೇಲೆ ಬರುವಾಗ ರೇಷ್ಮೆ ಚೀಲ ಕಂಡಿತು. ಕುತೂಹಲದಿಂದ ಚೀಲ ತೆಗೆದುಕೊಂಡ, ೧೦೦ ರೂಪಾಯಿಗಳ ೧೦ ನೋಟು. ಅಂದು ಬೆಳಿಗ್ಗೆ ತಾನೆ ಪೇಪರಿನಲ್ಲಿ ಜಾಹಿರಾತು ನೋಡಿದ್ದ. ಮರುಕದಿಂದ ಆ ಹಣದ ಚೀಲವನ್ನೊಯ್ದು ದಾನಪ್ಪನಿಗೆ ತಲ್ಪಿಸಿ, ಪ್ರಾಮಾಣಿಕವಾಗಿ ಬಹುಮಾನ ಬೇಡಿದ. ದಾನಪ್ಪ ಒಳಗೆ ಹೋಗಿ ಎಣಿಸಿದ ಸರಿಯಾಗಿ ನೂರರ ಹತ್ತು ನೋಟು. ಪರಪ್ಪನ ಪ್ರಾಮಾಣಿಕತೆ ಕಂಡು ಅವನಿಗೆ ಅಶ್ಚರ್ಯವಾಯಿತು. ಅವನ ಬದಲು ಇವನಿಗೇ ಬೇರೆಯವರ ಹಣ ಸಿಕ್ಕಿದ್ದರೆ ಕೊಡುತ್ತಿದ್ದನೆ ? ಖಂಡಿತ ಇಲ್ಲ.

ದಾನಪ್ಪನಿಗೆ ತುಸು ಸಂಕಟವಾಯಿತು. ಹಣವಂತೂ ತನ್ನದೆ. ತನ್ನ ಹಣವನ್ನು ತಂದು ಒಪ್ಪಿಸಬೇಕಾದುದು ಯಾರೇ ಇರಲಿ, ಅವರ ಧರ್ಮ, ಅಂದಾಗ ತಾನು ಬಹುಮಾನ ಕೊಡುವುದೇಕೆ ? ಒಂದು ನೂರರ ನೋಟನ್ನು ಎತ್ತಿಟ್ಟು ಹೊರಬಂದು ಅಯ್ಯಾ, ಈ ಚೀಲದಲ್ಲಿ ಒಂಭತ್ತೇ ನೋಟಿವೆ. ಅಂದರೆ ನೀನು ಒಂದು ನೂರು ಆಗಲೇ ಎತ್ತಿಕೊಂಡಿದ್ವಿ, ನಿನ್ನ ಬಹುಮಾನ ನಿನಗೆ ಮುಟ್ಟಿತು ನಡೆ ನಡೆ...”ಎಂದ. “ಇಲ್ಲ ಸ್ವಾಮಿ, ನಿಮ್ಮ ಕೈಯಿಂದಲೇ ಪಡೆದುಕೊಳ್ಳಬೇಕೆಂದು ನಾನು ಬಂದಿರುವೆ. ನಾನಾಗಿ ತೆಗೆದುಕೊಂಡರೆ ಅದು ಅಪ್ರಮಾಣಿಕ ತನ. ನೀವಾಗಿ ಕೊಟ್ಟರೆ ಬಹುಮಾನ...'' ಇಂಥಾ ಬಣ್ಣದ ಮಾತುಬೇಡ... ನಡೆ..'' ದಾನಪ್ಪ ಗದರಿದ. ಇದರಿಂದ ಪರಪ್ಪನಿಗೆ ಕೋಪ ಬಂದಿತು. ಎಷ್ಟೋ ನಿಯತ್ತಿಲ್ಲದ ಮನುಷ್ಯ ಎಂದು ಹತ್ತಿರದ ಸ್ಟೇಷನ್ನಿಗೆ ಹೋಗಿ ದೂರು ಕೊಟ್ಟ. ಅಲ್ಲಿ ಸತ್ಯಪ್ಪ ಎಂಬ ಪೋಲೀಸ್ ಅಧಿಕಾರಿ ಇದ್ದ. ದಾನಪ್ಪನನ್ನು ಕರೆಸಿದ. ಉಭಯತರನ್ನೂ ಕೇಳಿದ.

''ನೋಡಿ ಸಾಹೇಬರೇ....ಈ ಚೀಲದಲ್ಲಿ ಇದ್ದುದು ಸಾವಿರ ರೂಪಾಯಿ ; ನೂರರ ಹತ್ತು ನೋಟು. ಅದರಲ್ಲಿ ಒಂದನ್ನು ಎತ್ತಿಟ್ಟುಕೊಂಡು ಒಂಬತ್ತನ್ನು ಮಾತ್ರ ಬಿಟ್ಟಿದ್ದಾನೆ. ಅವನ ಬಹುಮಾನದ ಹಣ ಅವನಿಗೆ ಮುಟ್ಟಿತು.....''

“ಖಂಡಿತ ಇಲ್ಲ. ಅವರೇ ನನ್ನ ಪ್ರಾಮಾಣಿಕತೆಗೆ ಮೆಚ್ಚಿ ಬಹುಮಾನವನ್ನು ಕೈಯೆತ್ತಿ ಕೊಡಲಿ ಎಂದು ನಾನು ಇಡೀ ಚೀಲವನ್ನು ಹಾಗೇ ತಂದು ಕೊಟ್ಟಿದ್ದೇನೆ.”

ಸತ್ಯಪ್ಪನವರು ಪರಪ್ಪನ ಪ್ರಾಮಾಣಿಕತೆಗೆ ಬೆರಗಾದರು ; ಅವನು ಆಪ್ರಮಾಣಿಕನೇ ಆಗಿದಿದ್ದರೆ ಎಲ್ಲ ಹಣವನ್ನು ತಂದು ಕೊಡುತ್ತಿರಲಿಲ್ಲ ಎಂದು ಊಹಿಸಿದರು. ದಾನಪ್ಪನ ಕ್ಷುಲ್ಲಕ ಸ್ವಭಾವದ ಅರಿವೂ ಆಯಿತು. ಆ ಹಣದ ಚೀಲವನ್ನು ದಾನಪ್ಪನಿಂದ ಪಡೆದುಕೊಂಡು ಹೇಳಿದರು ;

"ದಾನಪ್ಪನವರೇ......ಇದರಲ್ಲಿ ಒಂಬತ್ತು ನೋಟವೆ; ಅಲ್ಲವೆ ? ನೀವು ಕೊಟ್ಟ ದೂರಿನಲ್ಲಿ ಒಂದು ಸಾವಿರ ರೂಪಾಯಿಗಳ ಚೀಲ ಕಳೆದಿದೆ ಎಂದಿದೆ. ಆದ್ದರಿಂದ ಚೀಲ ನಿಮ್ಮದಲ್ಲ. ಒಂದು ಸಾವಿರ ರೂಪಾಯಿಗಳಿರುವ ಚೀಲ ಸಿಕ್ಕಾಗ ನಿಮಗೆ ತಲ್ಪಿಸಲಾಗುತ್ತೆ. ಇದರ ವಾರಸುದಾರರು ಸಿಕ್ಕುವ ತನಕ ಈ ಚೀಲ ಪರಪ್ಪನ ಬಳಿ ಇರಲಿ.'' ಎಂದು ಪರಪ್ಪನಿಗೆ ಕೊಟ್ಟಾಗ ದಾನಪ್ಪ ಇಂಗುತಿಂದ ಮಂಗನಂತಾದ ತನ್ನ ಹಣ ಪ್ರಾಯಶ್ಚಿತ್ತಕ್ಕಾಯಿತು ಎಂದು ಪರಿತಾಪಪಟ್ಟನು. ಹೀಗೆ ಸಂಗ್ರಹ ಪ್ರವೃತ್ತಿ ಎಲ್ಲೆ ಮೀರಿ ಹರಿದಾಗ ಸ್ವಾರ್ಥಕ್ಕೆ ಲೋಭಕ್ಕೆ ಕಾರಣವಾಗುತ್ತದೆ.

೧೪. ಹಾಸ್ಯ : ಹಾಸ್ಯ ಎಂಬ ಸಹಜ ಪ್ರವೃತ್ತಿಯನ್ನು ಸಹ ಮನೋವಿಶ್ಲೇಷಕರು ಗುರುತಿಸಿದ್ದಾರೆ. ಪ್ರಾಣಿಗಳು ತಮ್ಮ ಪುಟ್ಟ ಮರಿಗಳೊಡನೆ ಚಿನ್ನಾಟವಾಡುವುದರಲ್ಲಿ, ಚಿಕ್ಕ ಮರಿಗಳು ಚಲಿಸುವ ವಸ್ತುಗಳೊಡನೆ ಚಿನ್ನಾಟವಾಡುವುದರಲ್ಲಿ ಆ ಹಾಸ್ಯಪ್ರಜ್ಞೆಯನ್ನು ಕಾಣಬಹುದು. ಹೀಗೆ ಹಲವಾರು ಪ್ರಕೃತಿ ಜನ್ಯ ಸ್ವಭಾವಗಳುಂಟು. ಸಾಮಾನ್ಯವಾಗಿ ಪಶುಗಳು ಅವುಗಳಿಗೆ ವಶವಾಗಿ ನಡೆಯುತ್ತವೆ. ಈ ಆಲೋಚನೆಯ ಆಧಾರದ ಮೇಲೆ ನಾವು ಹೀಗೊಂದು ಉಕ್ತಿಯನ್ನು
ಮಾಡಬಹುದು.

ಹುಟ್ಟುಗುಣಗಳಲ್ಲಿ ಬದುಕುವುದು ಪಶುವಿನ ಲಕ್ಷಣ.
ಕಲಿತ ಗುಣಗಳಲ್ಲಿ ಬದುಕುವುದು ಮಾನವನ ಲಕ್ಷಣ.
ದೈವೀಗುಣಗಳಲ್ಲಿ ಬಾಳುವುದು ಶರಣನ ಲಕ್ಷಣ.


ಪ್ರಾಣಿಗಳು ಪ್ರಕೃತಿ ಸ್ವಭಾವದ ದಾಸರಾಗಿ ಹಸಿವು, ತೃಷೆ, ನಿದ್ರೆ, ಮೈಥುನ ಮುಂತಾದವನ್ನು ನಡೆಸುತ್ತವೆ. ಮಾನವರು ಈ ಹುಟ್ಟುಗುಣಗಳಿಂದ ಪ್ರಚೋದಿತರಾದರೂ ವಿವೇಕ ಹೀನರಾಗಿ ಅವುಗಳನ್ನು ತೃಪ್ತಿಮಾಡಿಕೊಳ್ಳದೆ ಸಮಾಜದ ನೀತಿ-ನಿಯಮ- ನಡಾವಳಿಕೆಗಳೆಂಬ (Eticates and manners) ಕಲಿತ ಗುಣಗಳಲ್ಲಿ ಬಾಳುವರು. ಮಹಾತ್ಮರು ಹುಟ್ಟುಗುಣಗಳ ಪ್ರಾಬಲ್ಯದ ಅಡಿಯಲ್ಲಾಗಲೀ, ಸಮಾಜದ ನಡವಳಿಕೆಗಳ ರೀತಿಯಲ್ಲಾಗಲೀ ಬಾಳದೆ ಅಂತಃಸಾಕ್ಷಿಗನುಗುಣವಾಗಿ ದೈವೀಗುಣಗಳಲ್ಲಿ ಬಾಳುವರು.

ಹುಟ್ಟುಗುಣಗಳ ಪ್ರಭಾವ ಎಷ್ಟೇ ಉತ್ಕಟವಾಗಿದ್ದರೂ ಮನುಷ್ಯನೂ ಅದರ ಸೆಳವಿಗೆ ಸಿಕ್ಕದೆ, ತನ್ನನ್ನು ತಾನು ನಿಯಂತ್ರಿಸಿಕೊಂಡು ವರ್ತಿಸುವನು. ರಸ್ತೆಯ ಪಕ್ಕದ ಪೌಳಿಯಲ್ಲಿ ಒಂದು ಮಾವಿನಮರವಿದೆ. ಅದರ ತುಂಬ ಫಲಗಳು ತುಂಬ ಚೆನ್ನಾಗಿ ಆಗಿವೆ. ಹೋಗುತ್ತಿರುವ ಒಬ್ಬ ವ್ಯಕ್ತಿಗೆ ಆ ಹಣ್ಣುಗಳನ್ನು ಕಂಡು ತಿನ್ನಬೇಕೆಂಬ ಆಸೆ ಉಂಟಾಗುತ್ತದೆ. ಆದರೂ ಅವನು ತಕ್ಷಣವೇ ಕಾಂಪೌಂಡ್ ಹೊಕ್ಕು, ಮರವನ್ನು ಹತ್ತಿ ಬಿಡುವುದಿಲ್ಲ. ತಿಂಡಿ ಅಂಗಡಿಯಲ್ಲಿ ರುಚಿ ರುಚಿಯಾದ ತಿಂಡಿಗಳನ್ನು ಜೋಡಿಸಲಾಗಿದೆ. ಆ ದೃಶ್ಯವೇ ಹಸಿದವನ ಬಾಯಲ್ಲಿ ನೀರೂರಿಸುತ್ತದೆ. ಆದರೂ ಅವನು ಹೋಗಿ ಗಬಕ್ಕನೆ ತೆಗೆದುಕೊಂಡು ತಿನ್ನುವುದಿಲ್ಲ.

ಒಂದನೆಯದಾಗಿ, ಅನ್ಯರ ವಸ್ತುಗಳನ್ನು ಅತಿಕ್ರಮಿಸಿ ತಿನ್ನುವುದು ಅಪರಾಧ. ಈ ಅಪರಾಧವನ್ನು ಮಾಡಿದರೆ ಸರ್ಕಾರವು ಶಿಕ್ಷಿಸೀತು, ಎಂಬ ಕಾಯಿದೆಯ ಭಯ ವ್ಯಕ್ತಿಯನ್ನು ತಪ್ಪು ಮಾಡದಂತೆ ತಡೆಯುತ್ತದೆ. ಶಿಕ್ಷೆ ಮಾಡುವುದು ದೊಡ್ಡ ಅಪರಾಧವಾಗದೆ ಇದ್ದರೂ ತಪ್ಪು ಮಾಡಿದರೆ ಸಮಾಜವು ಹೀಯಾಳಿಸೀತು ఎంబ ಎರಡನೆ ಭಯವು ವ್ಯಕ್ತಿಯನ್ನು ನಿಯಂತ್ರಿಸುತ್ತದೆ. ಕೆಲವೊಂದು ಸನ್ನಿವೇಶದಲ್ಲಿ ಕಾಯಿದೆ ಭಯ, ಸಾಮಾಜಿಕ ಭಯಗಳು ಕೆಲಸ ಮಾಡದೆ 'ಈ ಕೆಲಸ ಮಾಡಿದರೆ ಮಹಾ ನ್ಯಾಯಾಧೀಶನಾದ ಪರಮಾತ್ಮನು ಮೆಚ್ಚನು.' ಎಂಬ ನೈತಿಕ ಭಯ, ಅಂತರಾತ್ಮದ ಭಯವೂ ವ್ಯಕ್ತಿಯನ್ನು ನಿಯಂತ್ರಿಸುತ್ತದೆ. ಹೀಗೆ ಕಾಯಿದೆ, ಸಮಾಜ, ಅಂತರ್‌ ಪ್ರಜ್ಞೆಗಳು ನಿಯಂತ್ರಕ ಸಾಧನಗಳು.

"ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು'' ಎಂಬ ಒಂದು ಮಾತನ್ನು ನೀವು ಕೇಳಿರಬಹುದು. ಗಾದೆಗಳು ರೂಪುಗೊಳ್ಳಬೇಕಾದರೆ ಅವುಗಳ ಹಿಂದೆ ಕಥೆಗಳೇ ಇರುತ್ತವೆನ್ನಬಹುದು. ಒಂದು ಊರಿನಲ್ಲಿ ದೊಡ್ಡ ಶ್ರೀಮಂತರೊಬ್ಬರ ಮನೆಯಲ್ಲಿ ವಿಶೇಷ ಭೋಜನಕೂಟವಿದ್ದಿತು. ಅಲ್ಲಿಗೆ ಬಂದ ಗಣ್ಯರಿಗೆಲ್ಲ ಊಟ-ತಾಂಬೂಲದ ವ್ಯವಸ್ಥೆ ಇದ್ದಿತು. ಅದರೂ ಒಬ್ಬ ಶ್ರೀಮಂತನು ಕದ್ದು ಅಡಿಕೆಯೊಂದನ್ನು ಬಾಯಿಗೆ ಹಾಕಿಕೊಂಡನು. ಇದನ್ನು ಯಾರೋ ಗಮನಿಸಿಬಿಟ್ಟರು. ಅವನು ಅಡಿಕೆ ಕದ್ದ ವಿಷಯ ಎಲ್ಲರಿಗೂ ತಿಳಿದು ಅವನನ್ನು ಎಲ್ಲರೂ ಛೇಡಿಸತೊಡಗಿದರು. ತಾನಿಷ್ಟು ದೊಡ್ಡಮನುಷ್ಯನಾಗಿ ಹೀಗೆ ಅನ್ನಿಸಿಕೊಳ್ಳ- ಬೇಕಾಯಿತಲ್ಲ ಎಂದು ಆ ಕಳಕ ತೊಡೆದುಕೊಳ್ಳಲಿಕ್ಕೆ ಅವನು ಇಡೀ ಗ್ರಾಮದ ಜನರಿಗೆ ಊಟಕ್ಕೆ ಹಾಕಿಸಿದನು. ಜನರು ಉಂಡು ಬರುವಾಗ ಏನು ಶಿಸ್ತು ಊಟ ಅಲ್ಲವೆ? ಅಡಿಕೆ ಕಳ್ಳನ ಮನೆ ಊಟದಂತೆ ನಾವು ಎಂದೂ ಉಂಡುದಿಲ್ಲ.'' ಎಂದರು.

ಕೆಲವರಿಗೆ ಕೆಲವು ದೌರ್ಬಲ್ಯಗಳಿರುತ್ತವೆ. ಎಲ್ಲರ ಜೊತೆಗೆ ಉಂಡರೆ ತಿಂದರೆ ಕೆಲವರಿಗೆ ಸಮಾಧಾನವಿರದು. ಉಂಡು ತಿಂದೂ ಸಹ ಸ್ವಲ್ಪ ಕದ್ದು ಬಾಯಿಗೆ ಹಾಕಿಕೊಂಡರೇ ಸಮಾಧಾನ. ನಾವಿನ್ನೂ ಚಿಕ್ಕವರಿದ್ದಾಗ ನಡೆದ ಪ್ರಸಂಗ. ನಮ್ಮಲ್ಲಿಗೆ ಬಂದ ಓರ್ವ ಮ್ಯಾಜಿಸ್ಟ್ರೇಟರ್ ಹೆಂಡತಿಗೆ ಅಂಗಡಿಗಳ ಸಾಮಾನು ಖರೀದಿಗೆ ಹೋದಾಗ ಏನಾದರೂ ಕದ್ದು ತರುವುದು ಸ್ವಭಾವ, ಅದೊಂದು ಆಕೆಗೆ ಮನೋರೋಗ, ಹಾಗೇನೂ ತರಲಾಗದಿದ್ದರೆ ಚಟಪಟಿಸಿ, ವಿಚಿತ್ರವಾಗಿ ಮಾಡುವುದು. ಇನ್ನು ಏನು ಹೇಳಿಯೂ ಪ್ರಯೋಜನವಿಲ್ಲ ಎಂದು ಆ ನ್ಯಾಯಾಧೀಶರು ಒಬ್ಬ ಆಳನ್ನು ಹಿಂದೆ ಕಳಿಸುತ್ತಿದ್ದರು. ಅವನ ಸುಮ್ಮನೆ ಗಮನಿಸಬೇಕು. ಆಕೆ ಕದ್ದು ತಂದ ಸಾಮಗ್ರಿಗಳಿಗೆ ನಂತರ ಹಣವನ್ನು ಕಳಿಸುವುದು ಹೀಗೆ ವ್ಯವಸ್ಥೆ ಮಾಡಿದ್ದರು. ಪ್ರವಚನ ಕಾಲದಲ್ಲಿ ಭೇಟಿಯಾದ ಓರ್ವ ಹುಡುಗಿಗೆ ಬಾಚಣಿಗೆ ಕದಿಯುವ ಹುಚ್ಚು. ತುಂಬಾ ವರ್ಷಗಳ ಹಿಂದಿನ ಮಾತು. ಜಮಖಂಡಿಯಲ್ಲಿ ಪ್ರವಚನ ಮಾಡುತ್ತಿದ್ದೆ. ಬಡಬಡ ಮಾತನಾಡುವ ಒಬ್ಬ ಹುಡುಗಿ ಬಂದಳು. ನಾಲ್ಕಾರು ದಿವಸ ಇರುತ್ತೇನೆ ಎಂದಳು. ಹೆಣ್ಣು ಮಗಳು ತಾನೇ ನಮ್ಮ ಸಾಧಕಿಯರೊಡನೆ ಇರಲಿ ಎಂದು ಒಪ್ಪಿಗೆ ಕೊಟ್ಟೆ. ಇವರ ಬಾಚಣಿಗೆ ಇಲ್ಲವಾದವು. ನಮಗೆ ವಿಚಿತ್ರವೆನಿಸಿತು. ಮರುದಿವಸ ಎಲ್ಲರಿಗೂ ಒಂದೊದು ತರಿಸಿಕೊಟ್ಟೆ, ಪುನಃ ಮರುದಿವಸ ಇಲ್ಲವೇ ಇಲ್ಲ. ಅದು ಸೆಕೆ ಕಾಲ. ಒಳಗೆ ಮಲಗಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಎಲ್ಲರೂ ಕಾಂಪೌಂಡಿನಲ್ಲಿ ಮಲಗುತ್ತಿದ್ದೆವು. ಮನೆಯ ಬಾಗಿಲು ಮುಚ್ಚಿರುತ್ತಿದ್ದೆವು. ಆ ಅತಿಥಿ ರಾತ್ರಿಯಿಡೀ ನಿದ್ದೆ ಮಾಡುತ್ತಿರಲಿಲ್ಲ. ಊರಿಗೆ ಹೋಗು ಎಂದರೂ ಹೋಗದೆ ಹಠ ಪ್ರಾರಂಭಿಸಿದಳು. ಸ್ವಲ್ಪ ನಿದ್ದೆಯನ್ನಾದರೂ ಮಾಡಲಿ ಎಂದು ವೈದ್ಯರು ನಿದ್ರೆಯ ಇಂಜೆಕ್ಷನ್ ಕೊಟ್ಟರು. ಆಕೆ ಗಾಢವಾಗಿ ನಿದ್ದೆ ಹೋದಳು. ನಮ್ಮ ಹುಡುಗಿಯರಿಗೆ ಸಂದೇಹ ಬಂದು ಆಕೆಯ ಸೂಟ್‌ಕೇಸ್‌ ತೆಗೆದರೆ ವಿವಿಧ ಬಗೆಯ ಬಾಚಣಿಕೆಗಳ ಗುಂಪೇ ಇತ್ತು. ನಿನ್ನೆ - ಮೊನ್ನೆ ಕದ್ದವು. ಇತರರ ಮನೆಯಿಂದ ಕದ್ದವು ಇದ್ದವು . ಕೇವಲ ಬಾಚಣಿಕೆಯನ್ನೇ ಕಳ್ಳತನ ಮಾಡುವ ಪ್ರವೃತ್ತಿ ಏಕೆ ಬಂದಿತ್ತೋ ಕಡೆಗೂ ಬಗೆಹರಿಯಲಿಲ್ಲ.

ಜಗತ್ತಿನಲ್ಲಿ ವ್ಯವಹರಿಸುವಾಗ ಹಲವಾರು ಪ್ರಚೋದನೆಗಳು ಹೀಗೆ ತಾಡಿಸುತ್ತಲೇ ಇರುತ್ತವೆ. ಮಹಾತ್ಮರು ಒಂದನೆಯದಾಗಿ ಅವುಗಳ ತಾಡನಕ್ಕೆ ಈಡಾಗರು. ಎರಡನೆಯದಾಗಿ ವಿವೇಕಿಗಳು ಅವುಗಳ ತಾಡನಕ್ಕೆ ಈಡಾದರೂ ಅವುಗಳನ್ನು ಬೇಗನೆ ಹೊರತಳ್ಳುವರು. ಮೂರನೆಯದಾಗಿ ಅವುಗಳನ್ನು ತೃಪ್ತಿಮಾಡಿಕೊಳ್ಳುವ ಸಾಮರ್ಥ್ಯವಿದ್ದವರು ಮಾಡಿಕೊಂಡುಬಿಡುವರು. ನಾಲ್ಕನೆಯದಾಗಿ ಆ ಪ್ರಚೋದನೆಗಳನ್ನು ಹೊರತಳ್ಳಲಾರದವರು ಮನಸ್ಸಿನಲ್ಲಿ ಹತ್ತಿಕ್ಕಿಕೊಳ್ಳುವರು.

ಹಣ್ಣು ತಿನ್ನುವ ವಿಷಯವೇ ಇರಲಿ, ಬಟ್ಟೆ ಬರೆ ಕೊಳ್ಳುವುದೇ ಇರಲಿ, ಚಿನ್ನಾಭರಣಗಳ ಖರೀದಿಯೇ ಇರಲಿ, ಮಕ್ಕಳನ್ನು ಹೊಂದುವುದೇ ಇರಲಿ ಇವೆಲ್ಲವನ್ನು ಪ್ರಚೋದನೆಗಳು ಎಂದುಕೊಂಡರೆ ಮಹಾತ್ಮರು ಇವುಗಳ ಯಾವ ತಾಡನಕ್ಕೂ ಈಡಾಗರು. ಅವೆಲ್ಲವನ್ನು ನಿರ್ವಿಕಾರ ಮನೋಭಾವದಿಂದಲೇ ನೋಡುವರು. ಆ ಮಟ್ಟಕ್ಕೆ ವಿವೇಕಿಗಳು ಏರದಿದ್ದರೂ, "ಆ ಸೀರೆ ಎಷ್ಟು ಚೆನ್ನಾಗಿದೆ. ಇದು ನನಗಿಲ್ಲವಲ್ಲ. ಆ ಮಗು ಎಷ್ಟು ಮುದ್ದಾಗಿದೆ, ಇಂಥ ಮಗು ನನಗಿಲ್ಲವಲ್ಲ....” ಎಂಬ ಭಾವವು ಮನಸ್ಸಿನಲ್ಲಿ ಸುಳಿದರೂ ತಕ್ಷಣವೇ ಅವನ್ನು ನಿಯಂತ್ರಿಸಿ, “ಇವುಗಳನ್ನು ಹೊಂದಿರುವುದೇ ಮಹಾ ಸಾಧನೆಯಲ್ಲ....” ಎಂಬ ತಿಳುವಳಿಕೆ ತಾಳಿ ಆ ಬಯಕೆಗಳನ್ನು ಹೊರಹಾಕುವರು. ಸೂಕ್ತ ಅವಕಾಶವಿದ್ದವರು ಆ ಆಸೆಗಳನ್ನು ಅನುಭವಿಸಿ ತೃಪ್ತಿಪಡುವರು. ಇದೇನು ಸಾಧ್ಯವಾಗದೆ ಕೆಲವರು ತಮ್ಮ ಆಸೆಗಳನ್ನು, ಪ್ರಚೋದನೆಗಳನ್ನು ಬಲವಂತವಾಗಿ ಹತ್ತಿಕ್ಕಿಕೊಳ್ಳುವರು. ಹೀಗೆ ಹತ್ತಿಕ್ಕಲ್ಪಟ್ಟ ಬಯಕೆಗಳು ಹೋಗಿ ಅಜಾಗ್ರತ ಮನಸ್ಸು (Unconcious mind) ಅಥವಾ ಸುಪ್ತ ಚೇತನದಲ್ಲಿ ಸೇರಿಕೊಳ್ಳುತ್ತವೆ. ಮತ್ತು ವ್ಯಕ್ತಿಯು ನಿದ್ರಾವಶನಾದಾಗ, ಜಾಗೃತ ಮನಸ್ಸು ಕರ್ತವ್ಯ ವಿಮುಖವಾಗಿದ್ದಾಗ, ಈ ಅತೃಪ್ತ ಬಯಕೆಗಳು ಕನಸಿನ ರೂಪದಲ್ಲಿ ಪ್ರಕಟಗೊಂಡು ತೃಪ್ತಿ ಹೊಂದುತ್ತವೆ.

ಮನಸ್ಸನ್ನು ವಿಶ್ಲೇಷಣೆಯ ದೃಷ್ಟಿಯಿಂದ ವಿವಿಧ ಸ್ತರಗಳಾಗಿ ವಿಂಗಡಿಸಬಹುದು. ಜಗತ್ತಿನೊಡನೆ ವ್ಯವಹರಿಸುವ ಜಾಗೃತ ಮನಸ್ಸು, ಜಾಗೃತ ಮನಸ್ಸಿನ ಸ್ವಲ್ಪವೇ ಹಿಂದಿರುವ ಪ್ರೀಕಾನ್‌ಷಿಯಸ್ ಮೈಂಡ್ (Preconscious mind), ಅದರ ಹಿಂದಿನದು ಅಜಾಗೃತ ಮನಸ್ಸಾದರೆ ; ತುಂಬಾ ಆಳಕ್ಕಿರುವುದೇ ಸಬ್ ಕಾನ್‌ಷಿಯಸ್ ಮೈಂಡ್ (subconscious mind). ನಾವು ಎಷ್ಟೋ ವಿಷಯಗಳನ್ನು ತಿಳಿದಿರುತ್ತೇವೆ. ಅವುಗಳಲ್ಲಿ ಸದ್ಯಕ್ಕೆ ಉಪಯುಕ್ತವಾಗಿರುವವು ಜಾಗೃತ ಮನಸ್ಸಿನಲ್ಲಿದ್ದರೂ, ತಾತ್ಕಾಲಿಕ ಉಪಯೋಗಕ್ಕೆ ಬರದವು ಪ್ರೀಕಾನ್‌ಷಿಯಸ್ ,ಮೈಂಡ್‌ನಲ್ಲಿರುತ್ತವೆ . ಉದಾಹರಣೆಗೆ “ಕನಸು ನಾನೀಗ' ಕುರಿತು ಚಿಂತಿಸುವಾಗ, ಪ್ರವಚನ ಮಾಡುವಾಗ ದೇವರ ಅಸ್ತಿತ್ವ, ಆತ್ಮಸ್ವರೂಪ ಮುಂತಾದ ವಿಷಯಗಳು ಪ್ರೀಕಾನ್ಷಿಯಸ್ ಮೈಂಡಿಗೆ ಹೋಗಿರುತ್ತವೆ. ಆವಶ್ಯಕತೆ ಕಂಡಾಗ ಬರುತ್ತವೆ. ಶಾಲೆಯಲ್ಲಿ ಒಬ್ಬ ಭೌತಶಾಸ್ತ್ರದ ಪಾಠ ಕೇಳುತ್ತಿರುತ್ತಾನೆ. ಅದು ಜಾಗ್ರತ ಮನಸ್ಸಿನ ರಂಗಭೂಮಿಯ ಮೇಲೆ ಇರುತ್ತದೆ. ಇದಕ್ಕೆ ಸಂಬಂಧಿಸಿದ ಹಿಂದಿನ ತರಗತಿಯ ಪಾಠ, ಅದರ ಹಿಂದಿನ ತರಗತಿಯ ಪಾಠ ಎಲ್ಲವೂ ನೆನಪಿಗೆ ಬಂದು, ರಸಾಯನ ಶಾಸ್ತ್ರ ಗಣಿತ, ಮುಂತಾದವು ಪಕ್ಕಕ್ಕೆ ಸರಿದಿರುತ್ತವೆ. ಈ ಕ್ರಿಯೆಯನ್ನು ಒಂದು ನಾಟಕಕ್ಕೆ ಹೋಲಿಸಬಹುದು. ಆಯಾ ದೃಶ್ಯಗಳಿಗೆ ಸಂಬಂಧಪಟ್ಟ ಪಾತ್ರಧಾರಿಗಳು ರಂಗಮಂಟಪಕ್ಕೆ ಬರುತ್ತಾರೆ. ಉಳಿದವರು ಪಕ್ಕದ ಕೋಣೆಯಲ್ಲಿ ಅಥವಾ ತೆರೆಯ ಹಿಂದೆ ಇರುತ್ತಾರೆ.

Subconscious mind ಎನ್ನುವದಂತೂ ಕಗ್ಗತ್ತಲೆಯ ಗವಿಯಂತಿದ್ದು ಬಹು ಹಿಂದಿನ, ಮತ್ತು ಹಿಂದಿನ ಜನ್ಮಗಳ ಸಂಸ್ಕಾರ ನೆನಪುಗಳನ್ನೂ ತುಂಬಿಕೊಂಡಿರುವ ಸಾಧ್ಯತೆಯುಂಟು, ಅಜಾಗೃತ ಮನಸ್ಸು ಜಾಗೃತ ಮನಸ್ಸಿಗಿಂತಲೂ ಅಧಿಕಪಟ್ಟು ಇರುವುದು. ಮಂಜುಗಡ್ಡೆಯ ನೀರಿನಲ್ಲಿದ್ದರೆ ಅದು ತೇಲಿ ಕಾಣುವ ಭಾಗಕ್ಕಿಂತಲೂ ಮುಳುಗಿರುವ ಭಾಗವೇ ಹೆಚ್ಚು. ಮಜ್ಜಿಗೆಯಲ್ಲಿ ಬೆಣ್ಣೆಯ ಉಂಡೆಯನ್ನು ಹಾಕಿದರೆ ಅದು ತೇಲಿ ಕಾಣುವ ಭಾಗ್ಯಕ್ಕಿಂತಲೂ ಮುಳುಗಿರುವ ಭಾಗವೇ ಹೆಚ್ಚು. ಭಾರತೀಯ ತತ್ತ್ವಶಾಸ್ತ್ರದಲ್ಲಿ ಬರುವ ಚಿತ್ರ ಮತ್ತು ಮನಗಳಲ್ಲಿ ಮನಸ್ಸನ್ನು ಜಾಗೃತ ಮನಸ್ಸಿಗೆ ಸಮಾನ ಪದವೆಂದು ಗುರುತಿಸಿದರೆ ಅಜಾಗ್ರತವನ್ನು ಚಿತ್ರಕ್ಕೆ ಸಮಾನಪದವೆನ್ನಬಹುದು. ಯೋಗವೆಂದರೆ ಚಿತ್ತವೃತ್ತಿ ನಿರೋಧ'' ಎಂದು ಪಾತಂಜಲ ಮಹರ್ಷಿ ಹೇಳುವ ಮಾತಿನಲ್ಲಿಯೂ ಮರ್ಮವೊಂದು ತುಂಬಿದೆ. ಮನಸ್ಸನ್ನು ಶುದ್ಧಿ ಮಾಡುವುದು ಎಷ್ಟೋ ಸುಲಭ ; ಆದರೆ ಚಿತ್ತವನ್ನು ಶುದ್ಧಿಮಾಡುವುದು ಬಲುಕಷ್ಟ. ಚಿತ್ತವು ಶುದ್ದಿಯಾದಾಗಲೇ ನಿಜವಾದ ಶುದ್ಧತ್ವ ಪ್ರಾಪ್ತವಾಗುವುದು. ಅಡಿಗೆ ಮನೆಯಲ್ಲಿ ಹೆಣ್ಣು ಮಕ್ಕಳು ಕೊಂಚ ಕೊಂಚ ಸಾಮಾನು ಮಾತ್ರ ಇಟ್ಟುಕೊಂಡಿದ್ದು ಉಗ್ರಾಣದಲ್ಲಿ ಬಹಳಷ್ಟು ಸಾಮಾನು ಸಂಗ್ರಹಿಸಿರುತ್ತಾರೆ. ಅವಶ್ಯಕವಿರುವ ಇಲ್ಲದಿರುವ ಎಲ್ಲ ಸಾಮಾನು ಇರುತ್ತವೆ. ಹಾಗೆ ಜಾಗ್ರತ ಮನಸ್ಸು ಅಂದಂದಿನ ಅನುಭವಗಳ ವೇದಿಕೆಯಾದರೆ ಅಜಾಗೃತ ಮನಸ್ಸು ಉಗ್ರಾಣದಂತೆ ಅವಶ್ಯಕ- ಅನವಶ್ಯಕ ಅನುಭವಗಳು ನೆನಪುಗಳಿಂದ ತುಂಬಿರುತ್ತದೆ. ಅದನ್ನು ಶುಚಿಗೊಳಿಸುವುದು ಶ್ರಮದ ಕೆಲಸ.

ಇಂಥ ಅಜಾಗೃತ ಮನಸ್ಸು ಅತೃಪ್ತ ಭಾವನೆಗಳನ್ನೂ ತುಂಬಿಕೊಂಡಿರುತ್ತದೆ. ಅವೆಲ್ಲ ಅದುಮಲ್ಪಟ್ಟು ಸಂಗ್ರಹಿತವಾಗಿರುತ್ತವೆ ಎಂದು ಹೇಳಿರುವೆನಷ್ಟೆ. ಈ ಭಾವನೆ, ಆಸೆಗಳು ಫಕ್ಕನೆ ವ್ಯಕ್ತವಾಗುವ ಎರಡು ಮಾರ್ಗಗಳೆಂದರೆ ನಾಲಿಗೆ ಜಾರುವಿಕೆ ಮತ್ತು ಕನಸು. ಕೆಲವೊಮ್ಮೆ ಏನನ್ನೋ ಮಾತನಾಡುತ್ತ ಕುಳಿತಾಗ ಏನನ್ನೋ ಫಕ್ಕನೆ ಆಡುವುದುಂಟು. ಆಗ ಜೊತೆಗೆ ಕುಳಿತವರು ಆಶ್ಚರ್ಯದಿಂದ ನೋಡಿದಾಗ 'ನಾಲಿಗೆ ಜಾರಿತು' ಎನ್ನುತ್ತೇವೆ. ಇದರರ್ಥ ಜಾಗ್ರತ ಮನಸ್ಸಿನ ನಿಯಂತ್ರಣ ಮೀರಿ ಫಕ್ಕನೆ ಈ ಮಾತುಗಳು, ಅಜಾಗೃತ ಮನಸ್ಸಿನಿಂದ ತಳ್ಳಲ್ಪಟ್ಟು ಬಂದಿರುತ್ತವೆ. ಸಹ್ಯವಾದ ಉತ್ತಮ ಆಲೋಚನೆಗಳಾದರೆ ಜಾಗೃತ ಮನಸ್ಸು ವಿರೋಧಿಸುವುದಿಲ್ಲವಾದ ಕಾರಣ ನಾಲಿಗೆ ಜಾರಿ ಬರುವ ಪ್ರಸಂಗವಿರದು. ಅಸಹ್ಯವಾದ, ಸಮಾಜದ ನೀತಿ ನಡಾವಳಿಕೆಗೆ ಒಪ್ಪದ ಮಾತುಗಳು ಅಥವಾ ಆ ಸನ್ನಿವೇಶಕ್ಕೆ ಎಷ್ಟೋ ಹೊಂದದೆ ಇರುವ ಮಾತುಗಳು ಮಾತ್ರ ಹಾಗೆ ಜಾರಿ ಬರುತ್ತವೆ.

ಅತೃಪ್ತ ಆಸೆ - ಆಕಾಂಕ್ಷೆಗಳು ಹೊರಬರಲು ಕನಸು ಒಂದು ಉತ್ತಮ ಮಾಧ್ಯಮ. ಅಜಾಗೃತ ಮನಸ್ಸಿನೊಳಗಿರುವ ಬಯಕೆಗಳನ್ನು ಹೊರಕ್ಕೆ ಹಾಕುವ ಕ್ರಿಯಾರೂಪವೇ ಕನಸೆಂದು ಹೇಳಬಹುದು. ಆದರೆ ಕನಸುಗಳೆಲ್ಲವೂ ಅತೃಪ್ತ ಬಯಕೆಗಳ ಪ್ರಕಟರೂಪ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ನಮಗೆ ರೆಕ್ಕೆ ಮೂಡಿದಂತೆ, ಆಕಾಶದಲ್ಲಿ ಗುಡ್ಡ - ಬೆಟ್ಟಗಳ ಮೇಲೆ ಹಾರಾಡಿದಂತೆ ಕನಸು ಬೀಳುವುದುಂಟು. ಇದು ವ್ಯಕ್ತಿಯ ಮಹತ್ವಾಕಾಂಕ್ಷೆಯನ್ನು ಸಂಕೇತಿಸುವುದೆಂದು ವಿಶ್ಲೇಷಕರ ಅಭಿಪ್ರಾಯ. ಬೆಳಗಿನಿಂದ ಸಂಜೆಯವರೆಗೆ ಏನಾದರೂ ವಿಷಯ ಕುರಿತು ಯಾವುದಾದರೂ ಸ್ಥಳ ಕುರಿತು ಮಾತನಾಡಿರುತ್ತೇವೆ ಎಂದುಕೊಳ್ಳೋಣ. ಆಗ ಕನಸ್ಸಿನಲ್ಲಿ ಅಂಥ ಸ್ಥಳಗಳಿಗೆ ಹೋದಂತೆ, ಅಂಥ ವ್ಯಕ್ತಿಗಳನ್ನು ಭೇಟಿ ಮಾಡಿದಂತೆ ಆಗುವುದುಂಟು.

ಕೆಲವೊಮ್ಮೆ ಶಾರೀರಕ ದೋಷಗಳಿಂದಲೂ ಹಾರಾಡಿದಂತೆ ಕನಸು ಬೀಳುವುದಂತೆ. ದೈಹಿಕ ಕಾರಣಗಳಿಗಾಗಿಯೂ ವಿಚಿತ್ರ ಕನಸಾಗುವುದುಂಟು. ಒಬ್ಬ ವ್ಯಕ್ತಿ ಹೊಡೆದುಕೊಂಡ ಹೊದ್ದಿಕೆ ಜಾರಿ ಇರುವುದು ಎಂದುಕೊಳ್ಳುವಾ. ಆಗ ಕನಸಿನಲ್ಲಿ ಬೆತ್ತಲೆ ಓಡಾಡಿದಂತೆ ಅನುಭವವಾಗುವುದು.

ಕೆಲವು ಕನಸುಗಳು ರೂಪಾಂತರಗೊಂಡಿದ್ದರೆ ಮತ್ತೆ ಕೆಲವು ನೇರವಾಗಿ ಬಿದ್ದಿರುತ್ತವೆ. ಒಮ್ಮೆ ಉತ್ತರ ಧೃವ ಸಂಶೋಧನೆಗೆ ಹೋದ ಕೆಲವು ಸಾಹಸಿಗಳು ತಮ್ಮೊಡನೆ ಒಯ್ದಿದ್ದ ಆಹಾರವೆಲ್ಲ ಮುಗಿದುಬಿಟ್ಟಿದ್ದಿತು. ಹಸಿವಿನ ಬಾಧೆ ವಿಪರೀತವಾಗಿ ಒಂದೊಂದು ದಿನದ ಪ್ರಯಾಣವೂ ಅವರಿಗೆ ಬಹಳಷ್ಟು ಶ್ರಮದಾಯಕವಾಗಿ ಇದ್ದಿತು. ಕಷ್ಟಪಟ್ಟು ಪ್ರಯಾಣಿಸುತ್ತಿದ್ದರು. ಆಗ ಅವರಿಗೆ ಬೀಳುವ ಎಲ್ಲ ಕನಸುಗಳು ಆಹಾರಕ್ಕೆ ಸಂಬಂಧಪಟ್ಟಿರುತ್ತಿದ್ದವು. ಒಳ್ಳೆಯ ಹೋಟೆಲುಗಳಿಗೆ ಹೋಗಿ ತಿಂದಂತೆ ಕನಸಾಗುತ್ತಿತ್ತು. ಇಲ್ಲಿ ಆಹಾರ ತಿನ್ನುವ ಅಪೇಕ್ಷೆ ರೂಪಾಂತರ ಹೊಂದದೆ ನೇರವಾಗಿ ಬಂದಿದೆ.

ಒಬ್ಬ ಬಾಲಕನಿಗೆ ನಾಯಿಮರಿಯನ್ನು ಸಾಕುವ ಆಸೆಯಾಯಿತು. ತನ್ನ ಸ್ನೇಹಿತರ ಮನೆಗೆ ಹೋದಾಗ ಒಂದು ಮುದ್ದಾದ ನಾಯಿಮರಿ ಕಂಡು ಪಡೆದುಕೊಂಡು ಸಾಕಲು ಬಂದನು. ಅವನ ಅಜ್ಜ ಬಲು ಮಡಿವಂತನು. ವಿಪರೀತ ನೇಮ ಆಚಾರದವನು, 'ನಾಯಿಯನ್ನು ತಂದುದೇಕೆ ? ಅದು ಮಡಿಯನ್ನು ಹಾಳುಮಾಡುತ್ತದೆ' ಎಂದು ಗದರಿ, ಬಾಲಕನನ್ನು ಬೈದು ನಾಯಿಮರಿಯನ್ನು ಬಿಟ್ಟು ಬರಲು ಹೇಳಿದನು. ಆ ಬಾಲಕ ಅತ್ತು ಅತ್ತು ಸುಮ್ಮನಾದ. ರಾತ್ರಿ ಅವನಿಗೆ ಒಂದು ಕನಸಾಯಿತು. ಅದರಲ್ಲಿ ಅವನು ನಾಯಿಯನ್ನು ಖರೀದಿಸಲು ಮಾರ್ಕೆಟಿಗೆ ಹೋಗಿದ್ದನು. ಅಲ್ಲಿ ಎಲ್ಲಿ ನೋಡಿದರೂ ನಾಯಿ ಮಾರಾಟದ ಅಂಗಡಿಗಳೇ, ಮುದ್ದು ಮುದ್ದಾದ ನಾಯಿಗಳಿದ್ದವು, ಬಾಲಕನು ತುಂಬಾ ಪ್ರೀತಿಯಿಂದ ಒಂದು ನಾಯಿಯನ್ನು ಕೈಲಿ ಹಿಡಿದುಕೊಂಡು ಕೊಳ್ಳಬೇಕೆಂಬ ಆಸೆಪಟ್ಟು, ಅಂಗಡಿಯವನನ್ನು ಬೆಲೆ ಕೇಳಲು ಮಾತನಾಡಿಸಿದ. ಆ ಅಂಗಡಿಕಾರ ಮತ್ತೆ ಯಾರೂ ಅಲ್ಲ; ತನ್ನ ಅಜ್ಜನೇ ಆಗ ಬಾಲಕ ಗಾಬರಿಗೊಂಡು ಅಳತೊಡಗಿದ. ತಟ್ಟನೆ ಎಚ್ಚರವಾಯಿತು. ಇಲ್ಲಿ ಸಹ ನಾಯಿಯನ್ನು ಸಾಕಬೇಕೆಂಬ ಆಸೆ ರೂಪಾಂತರಗೊಳ್ಳದೆ ಹಾಗೆ ಬಂದಿದೆ.

ಇನ್ನು ಕೆಲವು ಕನಸುಗಳು ರೂಪಾಂತರಗೊಂಡು ಬರುತ್ತವೆ. ಒಂದು ಸಲ ಒಬ್ಬ ಹುಡುಗಿಗೆ ಒಂದು ಕನಸಾಯಿತು. ಅದರಲ್ಲಿ ಅವರ ಶಾಲೆಯ ಮುಖ್ಯೋಪಾಧ್ಯಾಯೆ ಸತ್ತಂತೆ ಕನಸುಬಿದ್ದಿತು. ಆ ಹುಡುಗಿ ಇದೇನೋ ಅಪಶಕುನದ ಕನಸು ಎಂದು ಗಾಬರಿಗೊಂಡಳು. ಇದನ್ನು ಅಭ್ಯಸಿಸಿದಾಗ ತಿಳಿದು ಬಂದುದಿಷ್ಟು . ಆಕೆಯ ತಾಯಿ ಸತ್ತು ಹೋಗಿದ್ದಳು. ಮಲತಾಯಿ ಇದ್ದಳು. ಅವಳು ತುಂಬಾ ತ್ರಾಸುಕೊಡುತ್ತಿದ್ದಳು. ಆ ಹುಡುಗಿಯ ತಂದೆಗೆ ಮಗಳನ್ನು ಪ್ರೀತಿ ಮಾಡಲು ಸಹ ಬಿಡುತ್ತಿರಲಿಲ್ಲ. ಹೀಗಾಗಿ ಆ ಹುಡುಗಿಗೆ ಮಲತಾಯಿ ಸತ್ತು ಹೋದರೆ ತಾನೂ - ತನ್ನ ತಂದೆ ಸುಖವಾಗಿರಬಹುದೆಂಬ ಅಪೇಕ್ಷೆ ಅದಮ್ಯವಾಗಿತ್ತು. ಆದರೆ ಅವಳ ವಿವೇಕವು – ನೈತಿಕ ತಿಳುವಳಿಕೆಯು ಈ ಆಸೆಯನ್ನು ಹೀಗೆ ಹತ್ತಿಕ್ಕುತ್ತಿತ್ತು. ಆಕೆ ಎಷ್ಟೇ ಆದರೂ ನಿಮ್ಮ ತಾಯಿ. ತಾಯಿ ಸಾಯಲಿ ಎಂದು ಬಯಸಬಾರದು. ಅದು ಪಾಪ.'' ಹೀಗೆ ಅಜಾಗೃತ ಮನಸ್ಸಿನಲ್ಲಿ ಹೊಯ್ದಾಟ ನಡೆದಾಗ ಆ ಆಸೆ ಮುಖ್ಯೋಪಾಧ್ಯಾಯೆ ಸತ್ತಂತೆ ಕನಸು ಕಾಣುವುದರಲ್ಲಿ ತೃಪ್ತಿಗೊಂಡಿತ್ತು. ಮಖ್ಯೋಪಾಧ್ಯಾಯೆ ಏಕೆ ? ಒಂದು ಸಲ ಮನೆಯಲ್ಲಿ ಮಲತಾಯಿಯಿಂದ ಹಿಂಸೆಗೊಳಗಾದ ಬಾಲಕಿ ತನ್ನ ಸಹಪಾಠಿಯನ್ನು ಹೊಡೆದಾಗ, ಮುಖ್ಯೋಪಾಧ್ಯಾಯೆ ಈಕೆಯನ್ನು ಚೆನ್ನಾಗಿ ಶಿಕ್ಷಿಸಿದ್ದಳು. ವಿವೇಕವು ಒಪ್ಪದ ಅನೇಕ ಆಸೆ - ಆಲೋಚನೆಗಳು ಹೀಗೆ ರೂಪಾಂತರಗೊಂಡು ಬಂದಿರುತ್ತವೆಂದು ಹೇಳಬಹುದು.

ಒಂದು ಸಲ ಓರ್ವರು ತಮ್ಮ ಬಂಧುಗಳ ಮನೆಗೆ ಬಂದಿದ್ದರು. ಮಹಡಿಯ ಮೇಲೆ ಕೋಣೆಯೊಂದರಲ್ಲಿ ಇರಲು ಅನುಕೂಲ ಮಾಡಿದ್ದರು. ಅದು ಸೆಕೆ ಕಾಲ. ಕಿಟಕಿಯನ್ನು ತೆರೆದಿಡಲಾಗಿತ್ತು. ಆ ಕಿಟಕಿಯ ಹೊರಭಾಗದಲ್ಲಿ ಟೆಲಿಗ್ರಾಫ್ ತಂತಿಯೊಂದು ಹಾಯ್ದುಹೋಗಿತ್ತು. ಅದು ಆಗಾಗ ಜುಂಜುಂ ಎಂದು ಸದ್ದು ಮಾಡುತ್ತಿತ್ತು. ಇವರಿಗೆ ಒಂದು ಕನಸಾಯಿತು. ಅದರಲ್ಲಿ ಅವರು ಕಾಡಿನೊಳಕ್ಕೆ ತಿರುಗಾಡಲು ಹೋದರು. ಅಲ್ಲಿ ಸಂಚರಿಸುವಾಗ ಅನೇಕ ಜೇನ್ನೊಣಗಳು ಸುತ್ತುವರಿದು ಕಡಿಯಲು ಎರಗಿದವು. ಆಗ ಅವುಗಳನ್ನು ಓಡಿಸಲು ಇವರು ಕೈಗಳನ್ನು ಜಾಡಿಸಿ ಪ್ರಯತ್ನಿಸಿದರು. ಇಲ್ಲಿ ವಾಸ್ತವಿಕವಾಗಿ ಅವರು ಸೊಳ್ಳೆಯ ಪರದೆಯನ್ನು ಆ ರೀತಿ ಕೈ ಜಾಡಿಸಿ ಮುದ್ದೆ ಮಾಡಿಬಿಟ್ಟಿದ್ದರು. ಇಲ್ಲಿ ಟೆಲಿಗ್ರಾಫ್ ತಂತಿಯ ಶಬ್ದವು ಜೇನ್ನೊಣದ ಝೇಂಕಾರದೊಡನೆ ಸಮನಾಂತರ ಹೊಂದಿ ಕೆಲಸ ಮಾಡಿದ್ದನ್ನು ಕಾಣುತ್ತೇವೆ.

ಕನಸುಗಳು ರೂಪಾಂತರಗೊಂಡು ಏಕೆ ಬೀಳುವುವು ಎಂಬ ಬಗ್ಗೆ ಕೆಲವು ವಿವರಣೆಗಳಿವೆ. Dream is the guardian of sleep. ಅಂದರೆ ಕನಸು ನಮ್ಮ ನಿದ್ರೆಗೆ ಭಂಗತರದಂತೆ ರಕ್ಷಿಸುವ ಒಂದು ಪೋಷಕ ಸಾಧನ, ನಿದ್ರೆಯು ಆಹಾರ - ನೀರುಗಳಿಗಿಂತಲೂ ಮುಖ್ಯವಾದ ಒಂದು ಆವಶ್ಯಕತೆ. ಅದು ದಣಿದ ಶರೀರಕ್ಕೆ ವಿಶ್ರಾಂತಿಯನ್ನು, ತನ್ಮೂಲಕ ಪುನಶ್ವೇತನವನ್ನು ನೀಡುತ್ತದೆ. ಒಳ್ಳೆಯ ನಿದ್ರೆಯನ್ನು ಹೊಂದುವ ವ್ಯಕ್ತಿ ಆರೋಗ್ಯ ದೃಷ್ಟಿಯಿಂದ, ಮನಶ್ಯಾಂತಿಯ ದೃಷ್ಟಿಯಿಂದ ಸುಖಿಯಾಗಿರುತ್ತಾನೆ. ವ್ಯಕ್ತಿಯ ಹಲವಾರು ಆಲೋಚನೆ, ಆಸೆ ಆಕಾಂಕ್ಷೆಗಳೆಲ್ಲವೂ ಬಹಳಷ್ಟು ಅಸಹ್ಯವಾಗಿ ಉಗ್ರವಾಗಿ ಇದ್ದಾಗ ಅದೇ ರೀತಿ ಕನಸುಗಳು ಬಿದ್ದರೆ ಅವನಿಗೆ ನಿದ್ರಾಭಂಗವಾಗುವುದು. ಆ ಬಯಕೆಗಳು ಆಲೋಚನೆಗಳು ರೂಪಾಂತರಗೊಂಡು ಕನಸಿನ ಸಾಮಗ್ರಿಗಳೇ ಆಗಿ ಹೋದರೆ ಆಗ ನಿದ್ದೆಗೆ ಭಂಗಬರದೆ ವ್ಯಕ್ತಿಯು ಆರಾಮವಾಗಿ ನಿದ್ರಿಸುವನು.

ಪ್ರಚೋದಿತ ವಿಷಯಗಳು ಕನಸಿನಲ್ಲಿ ರೂಪಾಂತರಗೊಳ್ಳುವುದಕ್ಕೆ ಇನ್ನೊಂದು ಕಾರಣವನ್ನು ಫ್ರಾಯಿಡನು ಕೊಡುತ್ತಾನೆ. ಅನೇಕ ಅತೃಪ್ತ ಆಸೆ ಆಕಾಂಕ್ಷೆ ಆಲೋಚನೆಗಳು ಅದುಮಲ್ಪಟ್ಟು ಆಜಾಗೃತ ಮನಸ್ಸನ್ನು ಪ್ರವೇಶಿಸುತ್ತವಷ್ಟೇ. ಅವುಗಳಲ್ಲಿ ಅಸಹ್ಯವೂ, ಉಗ್ರವೂ ಆದ ಭಾವನೆಗಳು ಇದ್ದರೆ ಅವು ಮನಸ್ಸಿನ ರಂಗಮಂದಿರಕ್ಕೆ ಬಂದು ತೃಪ್ತಿಯನ್ನೂ ಪಡೆಯಲು ಹಾತೊರೆಯುತ್ತಿರುತ್ತವೆ. ಆಗ ಈ ಬಯಕೆಗಳು ಯಥಾ ರೂಪದಲ್ಲಿ ಮುನ್ನುಗ್ಗಲು Censor ಎಂಬ ನೈತಿಕ ಕಾವಲುಗಾರ ಬಿಡುವುದಿಲ್ಲ. ಈ ಕಾವಲುಗಾರನನ್ನು ಮೋಸಗೊಳಿಸಲು ಮತ್ತು ಅವನು ಗುರುತು ಹಿಡಿಯಬಾರದೆಂದು ಆ ಬಯಕೆಗಳು ಅಲೋಚನೆಗಳು ರೂಪಾಂತರದ ವೇಷಧರಿಸಿ ಕಾಣಿಸಿಕೊಳ್ಳುವುದುಂಟು.

ಹೀಗೆ ಕನಸು ಕಾಣುವ ಶಕ್ತಿಯು ದೇವರು ಮಾನವನಿಗೆ ಕೊಟ್ಟ ವರ ವಿಶೇಷ ಇದಿಲ್ಲದಿದ್ದರೆ ವ್ಯಕ್ತಿಗಳು ತಮ್ಮ ಮನಸ್ಸಿನಲ್ಲಿ ಮೂಡುವ ಅನೇಕ ಉಗ್ರ ಮತ್ತು ಅಸಹ್ಯಭಾವನೆಗಳಿಂದ ವಿಹ್ವಲಗೊಂಡು ಸುಖವಾಗಿ ನಿದ್ರೆ ಮಾಡಲು ಸಾಧ್ಯವಾಗದು. ಪರಿಣಾಮವಾಗಿ ಮನೋರೋಗಿಗಳು ಆಗುವ ಸಾಧ್ಯತೆಯುಂಟು. ದಡ್ಡರಿಗೆ ಕನಸು ಬೀಳುವುದು ಕಮ್ಮಿ. ಗಂಡಸರಿಗಿಂತಲೂ ಹೆಣ್ಣುಮಕ್ಕಳು ಹೆಚ್ಚಾಗಿ ಕನಸು ಕಾಣುತ್ತಾರೆ. ಇದಕ್ಕೆ ಕಾರಣ ಬಹುಶಃ ಹೆಚ್ಚು ಚಿಂತಿಸುವಿಕೆ ಇರಬಹುದು. ತುಂಬಾ ಸೂಕ್ಷ್ಮ ಸ್ವಭಾವದವರು, ಚಿಂತೆ ಮಾಡುವವರು, ಸಣ್ಣ ಸಣ್ಣದನ್ನು ಮನಸ್ಸಿಗೆ ಹಚ್ಚಿಕೊಳ್ಳುವವರು ಕನಸು ಕಾಣುವುದು ಹೆಚ್ಚು. ದಡ್ಡರು ಯಾವ ಬಗ್ಗೆಯೂ ಅಷ್ಟೊಂದು ಚಿಂತೆ ಹಚ್ಚಿಕೊಳ್ಳುವುದಿಲ್ಲ. ಇಲ್ಲಿ ಇನ್ನೂ ಒಂದು ವಿಚಾರ ಕುರಿತು ಪ್ರಸ್ತಾಪಿಸಬಹುದು. ಅದೇ ನಿದ್ರಾ ಸಂಚಾರ ಸ್ಥಿತಿ (Somnambulism) ಕೆಲವರು ಅವರಿಗೆ ಅರಿವಿಲ್ಲದೆಯೇ ರಾತ್ರಿ ವೇಳೆಯಲ್ಲಿ ಎದ್ದು ಸಂಚರಿಸುವ ಬಗ್ಗೆ ಕೇಳುತ್ತೇವೆ. ಅದು ಮುಖ್ಯವಾಗಿ ಅತೃಪ್ತವಾದ ಆಸೆ ಆಕಾಂಕ್ಷೆಗಳ ತೃಪ್ತಿಯ ಪ್ರಯತ್ನವೇ ಹೌದು. ಅಜಾಗೃತ ಮನಸ್ಸಿನಲ್ಲಿ ತುಡಿಯುವ ಭಾವನೆಗಳು ಈ ರೀತಿ ಪ್ರಚೋದಿಸುತ್ತವೆ.

ಬೆಂಗಳೂರಿನ ಮಲ್ಲೇಶ್ವರದಲ್ಲಿ ಪ್ರವಚನ ನಡೆದಾಗ ಓರ್ವ ವೃದ್ಧ ತಂದೆ ತಮ್ಮ ಮಗಳನ್ನು ಕರೆದುಕೊಂಡು ಬಂದರು. ರಾತ್ರಿ ಒಂದು ಹೊತ್ತಿನಲ್ಲಿ ಆಕೆ ಬಾಗಿಲು ತೆರೆದುಕೊಂಡು ಯಾರೋ ಕರೆದರು ಎಂದು ಹೊರಟು ಬಿಡುವುದು. ಓಣಿಯಲ್ಲಿ ಸುತ್ತಾಡಿ ಬರುವುದು. ಈ ಎಲ್ಲ ಚಟುವಟಿಕೆಗಳ ಅರಿವೇ ಆಕೆಗೆ ಇರುವುದಿಲ್ಲ. ಆಕೆಗೆ ಇಂಥಾ ದೋಷವಿದೆ ಎಂದು ಮದುವೆಯಾಗಲೂ ಯಾರೂ ಮುಂದೆ ಬರುತ್ತಿದ್ದಿಲ್ಲ. ಜೊತೆಗೆ ಬಡತನ ಬೇರೆ. ಮನೆಯವರು 'ದೆವ್ವ, ಭೂತಗಳು ಕರೆಯುತ್ತವೆ ; ಅದಕ್ಕೇ ಹೊರಗೆ ಹೋಗುತ್ತಾಳೆ' ಎಂದು ಮಾಂತ್ರಿಕರಿಗೆ ತೋರಿಸುತ್ತಿದ್ದರು. ನಮ್ಮ ಪ್ರವಚನ ಆರಂಭವಾದ ಮೇಲೆ ಮನೆಮಂದಿಯೆಲ್ಲ ದರ್ಶನಕ್ಕೆ ಬಂದರು. ನಮಸ್ಕಾರ ಮಾಡಿ ಆಕೆ ಕೇಳಿದ ಪ್ರಶ್ನೆ, “ನನಗೆ ಮದುವೆ ಯಾವಾಗ ಆಗುತ್ತೆ ? ಮದುವೆಯ ಯೋಗವಿದೆಯೋ ಇಲ್ಲವೊ ?'' ನನಗೆ ತುಂಬಾ ಅನುಕಂಪವೆನಿಸಿತು. ಎಷ್ಟು ಜನ ಹೆಂಗಳೆಯರು ತಮ್ಮ ಭವಿಷ್ಯದ ಕಗ್ಗತ್ತಲೆಯ ಬಗ್ಗೆ ಚಿಂತಿತರಾಗಿದ್ದಾರೋ ಎನ್ನಿಸಿತು. ಆ ಹುಡುಗಿಗೆ ಸಮಾಧಾನ ಹೇಳಿದೆ. ಅವಳ ಮನಸ್ಸಿನಲ್ಲಿ ಕಾಡುತ್ತಿದ್ದ ಆಸೆಯ ವಿರಾಟರೂಪವನ್ನು ವಿವರಿಸಿ, ನೀನು ಮಾನಸಿಕ ಧೈರ್ಯ ತಂದುಕೊಂಡು ಆರಾಮವಾಗಿದ್ದುಕೊಂಡು ಮಂತ್ರಜಪ ಮಾಡು. ಇಲ್ಲವಾದರೆ ಈ ನಿನ್ನ ಲೋಪದಿಂದಾಗಿ ಯಾರೂ ಮದುವೆಯಾಗುವ ಧೈರ್ಯ ಮಾಡರು. ಖಂಡಿತಾ ಆಗುತ್ತದೆ' ಎಂದೆ. ಮುಂದೆ ಸ್ವಲ್ಪ ಸುಧಾರಣೆ ಆಯಿತೆಂದು ಅವರ ತಂದೆ ಹೇಳಿದರು. ಮದುವೆಯ ಆಹ್ವಾನ ಪತ್ರಿಕೆಯೂ ಒಂದು ದಿನ ಬಂದು ಕೈಸೇರಿದಾಗ ನೆಮ್ಮದಿ ಎನಿಸಿತು. ದೈವೀ ಶರಣಾಗತಿ, ಮಂತ್ರಜಪ, ಮಹಾತ್ಮರ ಜೀವನ-ಸಂದೇಶಾಧ್ಯಯನ ಎಷ್ಟೋ ಬಾರಿ ಮಾನಸಿಕ ಸ್ತಿಮಿತತೆ ತಂದು ವ್ಯಕ್ತಿಗಳ ಬದುಕನ್ನು ಸುಧಾರಿಸುವುದೆಂಬುದು ಸತ್ಯ ಸಂಗತಿಯೇ.

ದೈವೀ ಕನಸುಗಳು

ಈವರೆಗೆ ಸಾಮಾನ್ಯವಾಗಿ ಬೀಳುವ ಕನಸನ್ನು ಕುರಿತು ಪ್ರಸ್ತಾಪಿಸಿದ್ದಾಯಿತು. ಕೆಲವು ಕನಸುಗಳು ದೈವೀ ಜೀವನಕ್ಕೆ ಸಂಬಂಧಪಟ್ಟವಾಗಿರುತ್ತವೆ. ಅಕ್ಕಮಹಾದೇವಿಯು ಹಗಲು ಇರುಳು ಮಲ್ಲಿಕಾರ್ಜುನನ ನೆನಪಿನಲ್ಲೇ ಕಾಲಕಳೆಯುತ್ತಿರುವಾಗ ಒಂದು ಕನಸನ್ನು ಕಂಡಳು.

ಅಕ್ಕ ಕೇಳವ್ವಾ, ಅಕ್ಕಯ್ಯ ನಾನೊಂದು ಕನಸ ಕಂಡೆ
ಅಕ್ಕಿ ಅಡಕೆ ತೆಂಗಿನಕಾಯಿ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಬಂದುದ ಕಂಡೆನಾ
ಮಿಕ್ಕುಮೀರಿ ಹೋಹನ ಬೆಂಬತ್ತಿ ಕೈವಿಡಿದೆನು
ಚನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನವ್ವಾ !


ಹಗಲು ಇರುಳು ಶಿವನ ಧ್ಯಾನದಲ್ಲಿ, ಅವನ ದರ್ಶನದ ಹಂಬಲದಲ್ಲಿ ಇರುವಾಗ ಆಕೆಯೊಂದು ಕನಸು ಕಂಡಳು. ಅಕ್ಕಿ ಅಡಿಕೆ ತೆಂಗಿನಕಾಯಿ ಮುಂತಾದ ಶುಭಸೂಚಕ ವಸ್ತುಗಳನ್ನು ಕಂಡಳು. ಜಟಾಧಾರಿಯಾದ ಸುಲಿಪಲ್ಲ ಶಿವನು ಭಿಕ್ಷಕ್ಕೆ ಬಂದುದನ್ನು, ತಾನು ಹೋಗಿ ಅವನ ಬೆನ್ನು ಹತ್ತಿ ಕೈವಿಡಿದುದನ್ನು ಕನಸಿನಲ್ಲಿ ಕಂಡಳು, ಆಗ ತಟ್ಟನೆ ಎಚ್ಚರವಾಯಿತು. ಇದೇ ರೀತಿ ಸಾಧಕರು, ಸಾತ್ವಿಕರು, ದೈವೀಭಕ್ತರ ಬದುಕಿನಲ್ಲಿ ಗುರುಗಳು ಯೋಗಿಗಳು ಬಂದಂತೆ, ಅವರ ಸನ್ನಿಧಿಯಲ್ಲಿದ್ದಂತೆ ಅವರೊಡನೆ ಮತನಾಡಿದಂತೆ, ಹೀಗೆಲ್ಲ ಕನಸುಗಳು ಆಗುವವು.

ಭವಿಷ್ಯ ಸೂಚಕ ಕನಸುಗಳು

ಇನ್ನೊಂದು ಬಗೆಯ ಕನಸುಗಳು ಬೀಳುವುದುಂಟು. ಅವು ಅನಿರೀಕ್ಷಿತವಾಗಿರುವ ಮತ್ತು ಎಂದೂ ಆಲೋಚಿಸಿರದ ಸಂಗತಿಗಳನ್ನು ವ್ಯಕ್ತಪಡಿಸುವುದುಂಟು. ಇವುಗಳ ಮೂಲಕ ವ್ಯಕ್ತಿಗಳು ಮುಂದೇನು ಮಾಡಬೇಕೆಂಬ ಆದೇಶ ಪಡೆಯುವರು ; ಅಥವಾ ಮುಂದೆ ಏನಾಗಬಹುದೆಂಬ ಬಗ್ಗೆ ಸೂಚನೆ ಪಡೆಯುವರು. ಇಲ್ಲಿ ಈ ಕನಸುಗಳು ಪರಮಾತ್ಮನ ಇಚ್ಛೆಯನ್ನು ಕುರಿತು ಸೂಚಿಸುವುವು. ಬಸವಣ್ಣನವರು ತಮ್ಮ ಜೀವನದ ಕವಲುದಾರಿಯಲ್ಲಿ ನಿಂತಿರುವಾಗ ಮುಂದೇನೂ ಆಲೋಚಿಸದೆ ಇರುವಾಗ, “ಎಲೆ ಮಗನೆ ಬಸವಣ್ಣ ಬಸವಿದೇವ ನಿನ್ನಂ ಮಹೀತಳದೊಳು ಮರದಪೆವು, ನೀಂ ಬಿಜ್ಜಳರಾಯನಿಪ್ಪ ಮಂಗಳವಾಡಕ್ಕೆ ಹೋಗು ಎಂದು ಅದೇಶ ಪಡೆಯುವರು. ಇದು ಭವಿಷ್ಯ ಸೂಚಕ ವಸ್ತು. (Prophetic dream).

ಕೆಳದಿ ರಾಜ್ಯದ ಸಂಸ್ಥಾಪನೆಯ ಕಾಲಕ್ಕೆ ಇಂಥದೊಂದು ಕನಸಾಯಿತು. ಚೌಡಪ್ಪ ನಾಯಕನು ಒಂದುದಿನ ಮಲಗಿ ನಿದ್ರಾವಶನಾಗಿರುವಾಗ ಜಟಾ ಮುಕುಟಧಾರಿಯಾದ ಜಂಗಮನೊಬ್ಬ ಕನಸಿನಲ್ಲಿ ದರ್ಶನವನ್ನಿತ್ತು ಕೆಳದಿಯ ಪಕ್ಕದಲ್ಲಿರುವ 'ಸೀಗೆ ಬಯಲು' ಎಂಬ ಹಳ್ಳಿಯಲ್ಲಿ ರಾಮೇಶ್ವರ ಲಿಂಗವು ಮಣ್ಣಿನಲ್ಲಿ ಹೂತು ಹೋಗಿದೆಯೆಂದೂ, ಅದನ್ನು ಹೊರತೆಗೆಸಿ ಪ್ರತಿಷ್ಠಾಪಿಸಬೇಕೆಂದು ಮತ್ತು ಹಿಂದೂ ಸಂಸ್ಕೃತಿಯ ಸಾಮ್ರಾಜ್ಯವಾದ ವಿಜಯನಗರದ ಆಡಳಿತವು ಶಿಥಿಲವಾದ ಕಾರಣ ಮತ್ತೊಂದು ಸಾಮ್ರಾಜ್ಯವನ್ನು ಕಟ್ಟ- ಬೇಕೆಂದು, ಅದು ಇವರಿಂದಲೇ ಆಗುವುದೆಂದು ಸೂಚಿಸಿದನು.

ಕನಸನ್ನು ಕಂಡು ಆಶ್ಚರ್ಯ ಚಕಿತನಾದ ಚೌಡಪ್ಪ ಈ ಸಂಗತಿಯನ್ನು ತಾಯಿ ಬಸವಾಂಬೆಗೂ, ತಮ್ಮ ಭದ್ರಪ್ಪ ನಾಯಕನಿಗೂ ಹೇಳಿದನು. ಅವರ ಮನೆಯ ವೃತ್ತಿ ಒಕ್ಕಲುತನ. ಒಂದು ದಿವಸ ಕೃಷಿ ಕಾಯಕಕ್ಕಾಗಿ ಗದ್ದೆಗೆ ಹೋಗಿದ್ದ ಚೌಡಪ್ಪನು ಕೆಲಸದ ನಂತರ ದಣಿದು ಗಿಡದ ನೆರಳಿನಲ್ಲಿ ಮಲಗಿದ್ದ. ಆಗ ಒಂದು ನಾಗರ ಹಾವು ತನ್ನ ವಿಸ್ತಾರವಾದ ಹೆಡೆ ಬಿಚ್ಚಿ ತಲೆಯ ಮೇಲೆ ಆಡಿಸುತ್ತ ನೆರಳನ್ನು ಮಾಡುತ್ತಿತ್ತು. ಮಗನಿಗೆ ಬುತ್ತಿ ತಂದ ಬಸವಾಂಬೆ ಭಯದಿಂದ ಚೀರಬೇಕು ಎನ್ನುವಷ್ಟರಲ್ಲಿ ಅದು ನಿಧಾನವಾಗಿ ಸರಿದು ಹೋಯಿತು. ಮಗನನ್ನು ಎಬ್ಬಿಸಿ ವಿಷಯವನ್ನು ವಿವರಿಸಿದಳು. ಗಮನಿಸಿದಾಗ ಆ ಹಾವು ವಿಶಿಷ್ಟ ಸ್ಥಳವನ್ನು ತೋರಿಸಿತು. ಚೌಡಪ್ಪನು ಏನೋ ಊಹಿಸಿ, ಆ ಜಾಗವನ್ನು ಗುರುತು ಮಾಡಿದನು. ತಾಯಿ ಇಬ್ಬರು ಮಕ್ಕಳು ಆ ಸ್ಥಳವನ್ನು ಅಗೆದುನೋಡಿದಾಗ ಅಲ್ಲಿ ಬಂಗಾರದ ನಾಣ್ಯಗಳಿಂದ ತುಂಬಿದ ಒಂದು ದೊಡ್ಡ ನಿಕ್ಷೇಪ ಮತ್ತು ಒಂದು ಖಡ್ಗ (ನಾಗರ ಮುರಿ) ಕಂಡು ಬಂದವು. ದೈವೀಲೀಲೆಗೆ ಅವರು ಬೆರಗಾದರು ಕೆಳದಿ ರಾಜ್ಯದ ಸಂಸ್ಥಾಪನೆಗೆ ಇದೇ ನಾಂದಿಯಾಯಿತು.

ಕೆಲವು ಕನಸುಗಳು ದೇವರ ಆದೇಶವನ್ನು ಸೂಚಿಸುವುವು ಎಂಬುದಕ್ಕೆ ಒಂದೆರಡು ಉದಾಹರಣೆ ಕೊಡಲು ಇಚ್ಛಿಸುವೆ. ೧೯೬೫ರಲ್ಲಿ ಬಿ.ಎಸ್.ಸಿ ಮುಗಿಸಿ ಆಧ್ಯಾತ್ಮ ಜೀವನದಲ್ಲಿ ಆಸಕ್ತಿ ಉತ್ಕಟವಾಗಿ ಮನೆಯಿಂದ ನಿರ್ಗಮಿಸಿದೆ. ೧೯೬೬ ಏಪ್ರಿಲ್ ೫ರ ದವನದ ಹುಣ್ಣಿಮೆಯಂದು ಅನಧಿಕೃತವಾಗಿ ಜಂಗಮದೀಕ್ಷೆ ಸ್ವೀಕರಿಸಿ ಕಾವಿಯನ್ನು ಧರಿಸಿದೆ. ಶಿಕ್ಷಣವನ್ನು ಮುಂದುವರಿಸುವ ಬಗ್ಗೆ ಯಾವ ಆಲೋಚನೆ ತಳೆದಿರಲಿಲ್ಲ. ಲೌಕಿಕ ಶಿಕ್ಷಣದಿಂದ ಆಗಬೇಕಾದುದೇನು ಎಂದು ಭಾವಿಸಿದ್ದೆ.

ಪೂಜ್ಯ ಗುರೂಜಿಯವರು ಗುಲಬರ್ಗಾ ಜಿಲ್ಲೆಯ ಕೋಡಿ ಎಂಬ ಊರಿನ ಪ್ರಮುಖರ ಆಹ್ವಾನದ ಮೇರೆಗೆ ಪ್ರವಚನಕ್ಕೆ ಹೋಗಿದ್ದರು. ನಾವುಗಳು ಅನೇಕರು ಹೋಗಿದ್ದೆವು. ಯಾವಾಗಲಾದರೊಮ್ಮೆ ಭಾಷಣ ಮಾಡುತ್ತಿದ್ದ ನಾನು ಪ್ರವಚನವನ್ನು ಲಕ್ಷ್ಯಗೊಟ್ಟು ಆಲಿಸುತ್ತಿದ್ದೆ. (ಈ ವರೆಗೂ ನಾನು ಸಂಪೂರ್ಣವಾಗಿ ಕೇಳಿದ ಪ್ರವಚನ ಅದೊಂದೆ. ಪ್ರವಚನ ಮಾಡಲಾರಂಭಿಸಿದ ಮೇಲೆ ಕೇಳುವ ಅವಕಾಶ ನಮಗೆ ಸಿಕ್ಕಿಲ್ಲ !) ಒಂದುದಿವಸ ನನಗೊಂದು ಕನಸು ಆಯಿತು. ಅದರಲ್ಲಿ ನಾನು ಎಂ.ಎ. ಯನ್ನು ತತ್ತ್ವಜ್ಞಾನ ವಿಷಯದೊಡನೆ ಓದಬೇಕೆಂಬ ಸ್ಪಷ್ಟ ಆದೇಶ ದೊರೆಯಿತು. ನನಗೆ ಬಲು ಆಶ್ಚರ್ಯವಾಯಿತು. ಓದಬೇಕೆಂಬ ಹಂಬಲವಿದ್ದು ಅದು ಅಜಾಗೃತ ಮನಸ್ಸಿನಲ್ಲಿ ಅತೃಪ್ತ ಆಸೆಯಾಗಿದ್ದು, ಅದರ ಪ್ರತೀಕವಾಗಿ ಈ ಕನಸು ಬಿದ್ದಿರಲಿಲ್ಲ. ಕಾವಿಯನ್ನು ಧರಿಸಿಕೊಂಡು, ಆಗ ಮೂರು ಹೊತ್ತು ಸ್ನಾನ-ಪೂಜೆ, ಮಡಿಯೂ ಜಾಸ್ತಿ, ವಿಶ್ವವಿದ್ಯಾಲಯಕ್ಕೆ ಯಾರು ಹೋಗಬೇಕು ? ಒಲ್ಲದ ಮನಸ್ಸಿನಿಂದಲೇ ಈ ಕನಸಿನ ವಿಷಯ ಪೂಜ್ಯರ ಗಮನಕ್ಕೆ ತಂದೆ. “ನಿಜಕ್ಕೂ ವಿಚಿತ್ರ ಕನಸು ! ನೋಡೋಣ; ದೈವೀ ಆದೇಶಕ್ಕೆ ತಲೆಬಾಗಬೇಕಾಗುತ್ತದೆ.'' ಎಂದರು ಗುರೂಜಿಯವರು. ಈ ಕನಸು ಪುನರಾವರ್ತನೆ ಯಾಗತೊಡಗಿತು. “ನೀವು ಬಿ.ಎಸ್‌ಸಿ ಜೀವವಿಜ್ಞಾನ ಪದವೀಧರರು; ಬಹುಶಃ ತತ್ತ್ವಜ್ಞಾನದ ಸಂಸ್ಕಾರ ಬೇಕೆಂದು ದೈವಸಂಕಲ್ಪವಿರಬೇಕು. ಆಯಿತು ಸೇರುವಿರಂತೆ....'' ಹಾಗಾದರೆ ಯಾವ ವಿಶ್ವವಿದ್ಯಾಲಯಕ್ಕೆ ಸೇರಲಿ ? ಹೈದರಾಬಾದದಲ್ಲಿ ಪೂಜ್ಯ ಅಪ್ಪಾಜಿಯವರ ಪರಿಚಯದ ಶ್ರೀ ಕೋರವಾರರು ಇದ್ದುದರಿಂದ ನಾನು ವಿದ್ಯಾರ್ಥಿನಿಯಾಗಿದ್ದಾಗ ಪರಿಚಿತರ ಸಹಾಯ ದೊರೆಯುವುದು ಎಂಬ ತರ್ಕ. ಬೆಂಗಳೂರಲ್ಲಿ ತತ್ತ್ವಜ್ಞಾನವಿನ್ನೂ ಇರಲಿಲ್ಲ. ಮೈಸೂರು ಕೂಡ ಬಹಳ ಜನ ಪರಿಚಿತರಿರುವ ಕಾರಣ ಒಳ್ಳೆಯದು. ಉತ್ತರ ಕರ್ನಾಟಕ ಆಗ ಇನ್ನೂ ಅಪರಿಚಿತ. ಯಾವ ಊರು ? ಅಂದು ಆಲೋಚಿಸುವಾಗಲೇ ಬಿದ್ದ ಇನ್ನೊಂದು ಕನಸಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕಟ್ಟಡ ಕಣ್ಮುಂದೆ ನಿಂತಿತು, ಇದುವೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಇಲ್ಲಿ ನೀನು ಓದಬೇಕು.” ಎಂಬ ದೃಶ್ಯ - ಧ್ವನಿ ಕನಸಿನಲ್ಲಿ ಸ್ಪಷ್ಟವಾದವು. ಒಂದೆರಡು ದಿವಸಗಳ ನಂತರ ಬಿದ್ದ ಇನ್ನೊಂದು ಕನಸಿನಲ್ಲಿ ನಾನು ಕರ್ನಾಟಕ ವಿಶ್ವವಿದ್ಯಾಲಯದ ಕಟ್ಟಡದ ಮುಂದೆ ನಿಂತಂತೆ, ಆ ಕಟ್ಟಡದ ಹಿಂದೆ ತುಸುದೂರದಲ್ಲಿ ಇರುವ ದಿಬ್ಬದ ಮೇಲೆ ಯೋಗಿ ಶಿವನು ನೀಳವಾಗಿ ಮಲಗಿದ್ದಾನೆ. ಅವನ ಶಿರೋಭಾಗದಲ್ಲಿ ಉಜ್ವಲ ಬೆಳಕಿದೆ. ಇಲ್ಲಿ ಆಶ್ರಮವಾಗುತ್ತದೆ.” ಎಂಬ ಧ್ವನಿ ಕೇಳುತ್ತಿದೆ. ಇದರಿಂದ ಧಾರವಾಡಕ್ಕೆ ಹೋಗಬೇಕೆಂದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಓದಬೇಕೆಂದು ದೇವಸಂಕಲ್ಪವಿದೆ ಎಂಬುದು ಸ್ಪಷ್ಟವಾಯಿತು. ಆಗಲೇ, ಡಾ|| ಡಿ.ಸಿ. ಪಾವಟೆಯವರಿಗೆ ನಾನು ಬರೆದ ಪತ್ರಕ್ಕೆ ಉತ್ತರ ಬಂದಿತು. ಕರ್ನಾಟಕ ವಿಶ್ವವಾದ್ಯಾಲಯದಲ್ಲಿ ಪ್ರವೇಶ ಪಡೆದು ನಾನು ಓದುವ ವಿಚಾರವನ್ನು ಅವರು ಹರ್ಷದಿಂದ ಸ್ವಾಗತಿಸಿದ್ದರು.

(೧೯೬೫ ಜುಲೈದಿಂದ ಸುಮಾರು ೧೯೬೭ರ ವರೆಗೆ ನಾನು ಒಂದು ವಿಶಿಷ್ಟ ಭಾವನಾತ್ಮಕ ಸ್ಥಿತಿಯಲ್ಲಿದ್ದೆ. ಬುದ್ಧಿಗಿಂತಲೂ ಭಾವವು ಪ್ರಧಾನವಾಗಿ ಕೆಲಸ ಮಾಡುತ್ತಿತ್ತಲ್ಲದೆ ಪರಮಾತ್ಮನಲ್ಲಿ Cat -theoryಯ ಶರಣಾಗತಿ ತುಂಬಿತ್ತು. ನನ್ನ ಒಳಹೊರಗನ್ನು ಅವನು ವ್ಯಾಪಿಸಿಕೊಂಡು ಮುನ್ನಡೆಸುವನು ; ನಾನೊಂದು ಸೂತ್ರದ ಬೊಂಬೆ ಎನಿಸುತ್ತಿತ್ತು. ಆ ಕಾಲದಲ್ಲೇ ಭಾವಪ್ರಧಾನವಾದ ಅನುಭಾವ ಸಾಹಿತ್ಯ ರೂಪುಗೊಂಡಿದ್ದು, ಮತ್ತು ಆಧ್ಯಾತ್ಮಿಕ ಅನುಭವಗಳು ಪುಂಖಾನುಪುಂಖವಾಗಿ ಮುತ್ತುತ್ತಿದ್ದವು.)
ಅದೇ ಸಮಯದಲ್ಲಿ ಬಿದ್ದ ಕನಸುಗಳಲ್ಲಿ ಆಶ್ರಮವಾಗುವ ಸ್ಥಾನದ ನಿರ್ದೆಶನ ಸಹ ದೊರೆತ್ತಿತ್ತು. ಧಾರವಾಡದ ಸಪ್ತಾಪುರದಲ್ಲಿ ಒಂದು ಮನೆ ಬಾಡಿಗೆ ಹಿಡಿದು ವಿಶ್ವವಿದ್ಯಾಲಯ - ದಲ್ಲಿ ಹೆಸರು ನೋಂದಾಯಿಸಿದೆ.

ಒಂದು ದಿವಸ ನಸುಕಿನಲ್ಲಿಯೇ ದಿನ ನಿತ್ಯದಂತೆ ಅಡ್ಡಾಡುತ್ತ ಉಳುವಿರಸ್ತೆಯಲ್ಲಿ ಹಲವಾರು ಜನ ಸಾಗಿದ್ದೆವು. ರೇಲ್ವೆ ಗೇಟ್ ಪಕ್ಕದ ಒಂದು ಜಾಗದಲ್ಲಿ ಅತ್ತಿತ್ತ ಅಡ್ಡಾಡುವಾಗಲೇ ಎದುರಿನ ಗದ್ದೆಗಳು, ನಿಂತ ನೀರು ಕನಸಿನ ದೃಶ್ಯವನ್ನು ನೆನಪಿಸಿದವು. ನಿಜ, ಅಂದು ಕನಸಿನಲ್ಲಿ ಕಂಡ ಜಾಗ ಇದೆ.'' ಖಚಿತವಾಯಿತು. ನಾನು ಹೇಳಿದುದನ್ನು ಕೇಳಿ, ಗುರೂಜಿ ಮನಸಾರೆ ನಕ್ಕು ಸರಿ, ಸರಿ ನೀವು ಕೇಳಿದ್ದು ಸಿಗಬೇಕಲ್ಲ ಎಂದರು. 'ಪರಮಾತ್ಮನ ಇಚ್ಛೆ ಹಾಗಿದ್ದರೆ ಏಕೆ ಪ್ರಯತ್ನಿಸಬಾರದು?' ಎಂದೆ. ಕೊಂಚ ದೂರ ಸಾಗಿಬಂದಿದ್ದೆವು. ಓರ್ವ ಗೌಳಿಗರ ಮುದುಕ ಬಂದು ನಮಸ್ಕರಿಸಿ' 'ಯವ್ವಾ, ಈ ಜಮೀನು ನಂದು. ತಾವೇನಾದರೂ ಮಠ ಮಾಡುವುದಾದರೆ ಕಮ್ಮಿ ಬೆಲೇಲಿ ಕೊಡ್ತೀನಿ' ಎಂದ. ನಿಜಕ್ಕೂ ಸೋಜಿಗವೆನಿಸಿತು. ಪರಮಾತ್ಮನ ಸಂಕಲ್ಪವಿದ್ದರೆ ಎಷ್ಟು ಸುಲಭವಾಗಿ ಕೆಲಸ ಆಗುವುದಲ್ಲ ಎನ್ನಿಸಿತು.

ಮತ್ತೊಂದು ಕನಸು ಬಹಳ ವಿಚಿತ್ರವಾಗಿ ಬಿದ್ದಿತ್ತು. ಯಲಿವಿಗಿ ರೇಲ್ವೆ ದುರಂತ ಕುರಿತಾದುದು ಅದು. ಅಂದಿನ ಟ್ರೇನಿನಲ್ಲಿ ನಾನು ಪ್ರಯಾಣ ಮಾಡಬೇಕಾಗಿದ್ದಿತು. ಬೆಂಗಳೂರಿಂದ ಧಾರವಾಡಕ್ಕೆ ಪ್ರಯಾಣಿಸುತ್ತಿದ್ದ ನಾನು ತಾಯಿಯವರ ಆರೋಗ್ಯ ಸರಿಯಿಲ್ಲದ ಕಾರಣ ನೋಡುವ ಕರ್ತವ್ಯದಿಂದ ಚಿತ್ರದುರ್ಗಕ್ಕೆ ಬಂದು ಉಳಿದೆ. ಮರುದಿನ ಹೊರಡುವ ನಿರ್ಧಾರ ದೃಢವಾಗಿತ್ತು. ಆದರೆ ಅಂದಿನ ರಾತ್ರಿಯ ಕನಸಿನಲ್ಲಿ ಟ್ರೇನುಗಳು ಡಿಕ್ಕಿಯ ಚಿತ್ರ ಕಾಣಬಂದಿತು. ಎಲ್ಲಿ ಯಾವಾಗ, ಹೇಗೆ ಎಂಬುದು ತಿಳಿಯಲಿಲ್ಲ. ಉದ್ವಿಗ್ನಳಾಗಿ ಚಟಪಟಿಸಿದೆ. ನಾನು ಪ್ರಯಾಣ ಕೈಗೊಳ್ಳುವುದು ನಿಲ್ಲಿಸದೆ. ಮರುದಿವಸ ಪ್ರಜಾವಾಣಿಯ ಮುಖ ಪುಟದಲ್ಲಿ ಕಂಡ ಚಿತ್ರ ಕನಸಿನ ಪಡಿಯಚ್ಚಾಗಿತ್ತು.

ಒಂದು ಊರಿನಲ್ಲಿ ಪೂಜ್ಯ ಗುರುಗಳ ಪ್ರವಚನ ನಡೆದಿತ್ತು. ಅಲ್ಲಿ ಬರುತ್ತಿದ್ದ ಒಂದು ವ್ಯಕ್ತಿಯ ಮುಖ ತುಂಬ ವಿಲಕ್ಷಣವಾಗಿ ಕನಸಿನಲ್ಲಿ ಕಂಡಿತು. ಅವನ ಹೆಸರು ಸಹ ಕನಸಿನ ಮೂಲಕ ತಿಳಿಯಿತು. ಆ ವ್ಯಕ್ತಿಯ ಚಹರೆ - ಹೆಸರು ಬರೆದು ಎಚ್ಚರವಹಿಸಲು ಪೂಜ್ಯರಿಗೆ ಪತ್ರ ಬರೆದೆ. ನಾನೆಂದೂ ನೋಡಿರದ ವ್ಯಕ್ತಿ ಆತ. ಆಗ ಅವರಿಗೂ ಆಶ್ಚರ್ಯವಾಯಿತು. ನಾನು ಕೆಲವಾರು ದಿವಸಗಳ ನಂತರ ಅಲ್ಲಿಗೆ ಹೋದಾಗ ನೂರಾರು ಜನ ಸಾಲಿನಲ್ಲಿ ನಿಂತು ನಮಸ್ಕರಿಸುತ್ತಿದ್ದರು. ಆಗ ಆ ವ್ಯಕ್ತಿ ನಮಸ್ಕರಿಸುತ್ತಿದ್ದಂತೆಯೇ ಅವನ ಹೆಸರನ್ನು ತಟ್ಟನೆ ಕೇಳಿದೆ. ಆತ ಸೋಜಿಗಗೊಂಡು ನಿಮಗೆ ಹೇಗೆ ಗೊತ್ತು ಎಂದಾಗ ನಾನು ಸುಮ್ಮನೆ ಮುಗುಳ್ನಕ್ಕೆ. ಆದರೆ ಎಂದೂ ನೋಡದೆ ಇರುವ ವ್ಯಕ್ತಿಯ ಬಗ್ಗೆ ಕನಸಿನಲ್ಲಿ ನೋಡಿ ಕೆಲವು ಮಾಹಿತಿ ಪಡೆದಿದ್ದೆ.

ಎಂ. ಎ. ಪರೀಕ್ಷೆ ನಡೆಯುವಾಗಿನ ಒಂದು ಪ್ರಸಂಗ. ಹೆಚ್ಚಿನ ಸಾಧನೆಯಲ್ಲಿ ನಿರತಳಾಗಿ ಅಜ್ಞಾತಳಾಗಿ ಇದ್ದ ನಾನು ಹೆಚ್ಚು ಪರಿಚಿತಳಾದುದು ಶತಮಾನೋತ್ಸವ ಕಾರ್ಯಕ್ರಮಗಳಿಂದ. ಹೀಗಾಗಿ ಜನಪ್ರಿಯತೆ ಜಾಸ್ತಿಯಾಗಿ ಕಾರ್ಯಕ್ರಮಕ್ಕೆ ಒತ್ತಡದ ಕರೆ ಬರತೊಡಗಿದವು. ಪ್ರವಾಸ ಜಾಸ್ತಿಯಾಗಿ ಅಭ್ಯಾಸ ಕುಂಠಿತವಾಯಿತು. ಪರೀಕ್ಷೆಯ ಸಮಯ, ಮರುದಿನ ಸೈಕಾಲಜಿ, ಹಿಂದಿನ ದಿನ ಯಾರೋ ಪರಿಚಿತ ಭಕ್ತರು ಆಶ್ರಮಕ್ಕೆ ಬಂದರು. ದಾಕ್ಷಿಣ್ಯ ಸ್ವಭಾವದ ನಾನು ಅವರೊಡನೆ ಮಾಡನಾಡುತ್ತ ಚರ್ಚಿಸುತ್ತ ಸಮಯ ಕಳೆದುದಾಯಿತು. ಮರು ದಿನದ ಪರೀಕ್ಷೆ ಕುರಿತು ಭಯಪಟ್ಟು ಕಳವಳದಿಂದ ಮಲಗಿದೆ “ನಾಳೆ ಪರೀಕ್ಷೆ ಹೇಗೆ ಎದುರಿಸಲಿ ? ಇವರಾರೋ ಇವತ್ತೇ ಇಲ್ಲಿಗೆ ಬಂದು ತೊಂದರೆ ಕೊಡಬೇಕೆ? ಬಸವಣ್ಣಾ, ಏನು ಮಾಡಲಿ ? ಇರಲಿ.... ಯಶಸ್ಸು-ಆಯಶಸ್ಸು ಎಲ್ಲವನ್ನೂ ಸಮವಾಗಿ ಸ್ವೀಕರಿಸಬೇಕು ಎಂದುಕೊಂಡು, ಧ್ಯಾನಾಸಕ್ತಳಾಗಿ ಮಲಗಿದೆ. ಅಂದು ರಾತ್ರಿ ಕನಸಿನಲ್ಲಿ ನಾನು ಪರೀಕ್ಷಾ ಹಾಲ್ ದಲ್ಲಿ ಕುಳಿತಂತೆ, ಪ್ರಶ್ನೆ ಪತ್ರಿಕೆ ಕೈಲಿ ಹಿಡಿದು ಬಂದಂತೆ ಆ ಪ್ರಶ್ನೆಗಳು ಸ್ಪಷ್ಟವಾಗಿ ತೋರುತ್ತಿವೆ. ಸರಿ ಮರುದಿನ ಬಂದ ಭಕ್ತರುಗಳು ಏಳುವ ಮುನ್ನವೇ ಸ್ನಾನ ಪೂಜೆ ಮುಗಿಸಿ ಬೆಳಗಿನ ಆರು ಗಂಟೆಗೆ ಆಶ್ರಮದಿಂದ ಹೊರಟುಬಿಟ್ಟು ವಿಶ್ವವಿದ್ಯಾಲಯದ ಹಿಂದಿನ ಬೊಟಾನಿಕಲ್ ಗಾರ್ಡನ್‌ದಲ್ಲಿ ಒಂದು ಗಿಡದ ಕೆಳಗೆ ಕುಳಿತೆ. ಕನಸಿನಲ್ಲಿ ಕಂಡುದನ್ನು ನೆನಪಿಸಿಕೊಂಡು ಆಯ್ಕೆ ಮಾಡಿ ಓದಿದೆ.

ಹತ್ತು ಗಂಟೆಗೆ ಪರೀಕ್ಷೆ ಅಂತ ಕಾಣುತ್ತದೆ. ಆತಂಕದಿಂದಲೇ ಪ್ರವೇಶಿಸಿದೆ. ಪ್ರಶ್ನೆ ಪತ್ರಿಕೆ ಬಂದಾಗ ನೋಡಿ ಕೊಂಚ ಕಾಲ ಸ್ತಂಭೀಭೂತಳಾದೆ. ಕನಸಿನಲ್ಲಿ ಕಂಡುದು ಇಲ್ಲೂ ತದ್ರೂಪುಗೊಂಡಿತ್ತು. ಚೆನ್ನಾಗಿ ಬರೆದೆ, ಒಳ್ಳೆಯ ಅಂಕವೂ ದೊರೆತವು.

ಇಡೀ ಜಗತ್ತು ಒಂದು ಅಖಂಡ ಘಟಕ, ದೂರದರ್ಶನದ ಆಂಟೆನ್ನಾ ಹೇಗೆ ವಾಯು ತರಂಗಗಳಲ್ಲಿರುವ ದೃಶ್ಯಗಳನ್ನು ಕ್ರೋಢಿಕರಿಸಿ ಸಾಕಾರಗೊಳಿಸುವುದೋ ಹಾಗೆ ಧ್ಯಾನದಿಂದ ಏಕಾಗ್ರಗೊಂಡ ಮನಸ್ಸು ಸಹ ಚಿತ್ರದ ಪರದೆಯ ಮೇಲೆ ಹಲವಾರು ದೃಶ್ಯಗಳನ್ನು ಮೂಡಿಸುತ್ತದೆ ಎನಿಸುತ್ತದೆ. ಧ್ಯಾನ ಮುಂತಾದ ಆಧ್ಯಾತ್ಮಿಕ ಸಾಧನೆಗಳಲ್ಲಿ ಹೆಚ್ಚು ಹೆಚ್ಚು ತೊಡಗುತ್ತ ಅಂತರ್ಮುಖರಾದಂತೆ ದೊರೆಯುವ ಅಪೂರ್ವ ಅನುಭವಗಳ ಸವಿಯಿಂದ ಪಾರಾಗಿ ಹೊರ ಬರುವುದು ಬಹಳ ಕಷ್ಟದಾಯಕವೆನಿಸುತ್ತದೆ. ಮಾತ್ರವಲ್ಲ ಬಲವಂತವಾಗಿ ಮನಸ್ಸನ್ನು ಹೊರಗಿನ ಕರ್ತವ್ಯದಲ್ಲಿ ತೊಡಗಿಸಲು ಎಳೆದು ತರಬೇಕಾಗುತ್ತದೆ.

ಹರಿಹರ ಮಹಾಕವಿಯು ಬಸವರಾಜ ದೇವರ ರಗಳೆಯಲ್ಲಿ ಪ್ರಸ್ತಾಪಿಸಿರುವ, 'ಎಲೆ ಮಗನೆ ಬಸವಣ್ಣ ನಿನ್ನಂ ಮಹೀತಳದೊಳು ಮೆರೆದಪೆವು, ನೀಂ ಬಿಜ್ಜಳ ರಾಯನಿಪ್ಪ ಮಂಗಳವಾಡಕ್ಕೆ ಹೋಗು' ಎಂಬುದು ಕನಸಿನಲ್ಲಿ ಸಿಕ್ಕ ಆದೇಶ ಎಂದು ಹೇಳಿರುವನಾದರೂ ಅದರ ವಿವರಗಳನ್ನು ಅಭ್ಯಸಿಸಿದಾಗ ಅದು ದರ್ಶನ (Vision) ಎನ್ನಿಸುತ್ತದೆ. ಏಕೆಂದರೆ ಕನಸಿನಲ್ಲಿ ಎರಡು ವಸ್ತುಗಳ ಮಧ್ಯೆ ನೇರವಾದ ಚರ್ಚೆ ಇರದು. ಇಲ್ಲಿ ಹಾಗಲ್ಲ; ಸಂಗಮನಾಥ ಆದೇಶಿಸುವನು, ಆಗ ಬಸವಣ್ಣ ಮುನಿಯುವನು. ಪುನಃ ಸಂಗಮನಾಥನು ಸಂತೈಸುವನು. ಇದು ದರ್ಶನಾನುಭವದ ಎಲ್ಲ ಲಕ್ಷಣಗಳನ್ನು ಹೊಂದಿದೆ.

ಅತೀಂದ್ರಿಯಾನುಭವದ ವಲಯದಲ್ಲಿ ಬರುವ ದರ್ಶನ ಕುರಿತು ತಾತ್ವಿಕ ವಿವೇಚನೆ ಮಾಡುವ ಮುನ್ನ ಇನ್ನೊಂದು ವಿಷಯವನ್ನು ಪ್ರಸ್ತಾಪಿಸಲು ಬಯಸುವೆನು.

ಬಸವರಸನು ಬಗೆ ಬಗೆಯಿಂದ ಪ್ರಲಾಪಿಸಿದಾಗ ಸಂಗಮನಾಥನು ಪುನಃ ಹೇಳುತ್ತಾನೆ. “ಎಲೆ ಮಗನೆ ಎಲೆ ಕಂದ ಎಲೆ ಬಸವ, ನಿನ್ನನಗಲಿ ನಾನಿರಲಾರೆ. ನಿನಗಿನಿತು ನಿರೋಧವೇಕೆ? ಬೇಡಯ್ಯ ಬೇಡೆನ್ನರಸ, ಬೇಡೆನ್ನ ಭಕ್ತಿ ನಿಧಿಯೆ. ನಿನ್ನೊಡನೆ ಬಿಡದೆ ಬಪ್ಪೆಂ; ನಾಳೆ ಮಧ್ಯಾಹ್ನದೊಳು ಶುದ್ಧಾಂಗನಾಗಿ ಬಂದು ನಂದಿಕೇಶ್ವರನ ಮುಂದೆನ್ನ ನೆನೆವುತ್ತಂ ಕುಳ್ಳಿರೆ ವೃಷಭನ ಮುಖಾಂತರದಿಂದಾವೆ ಬಂದಪೆವು. ಆತ ನಿನಗೆ ಸದ್ಗುರು. ಅಲ್ಲಿಂ ಬಳಿಕ್ಕಂ ಎಮ್ಮನರ್ಚಿಸುತ್ತೆ ಭಕ್ತರ ಬಂಧುವಾಗಿ ಶರಣರ ಪರುಷದ ಖಣಿಯಾಗಿ ನಿತ್ಯ ಸುಖಿಯಾಗಿ ಪರಸಮಯದ ಗರ್ವಮಂ ನಿಲಿಸಿ ಭಕ್ತರಂ ಗೆಲಿಸಿ ಪ್ರತ್ಯಕ್ಷಂಗಳು ತೋರಿ ಲೌಕಿಕ ಧರ್ಮಮಂ ಮೀರಿ ಕಡುನಿಷ್ಠೆಯಂ ಹೇರಿ ಪರಮ ಸುಖದಿಂದಿರ್ಪುದು.''

ಇಂಥದೊಂದು ಸ್ಪಷ್ಟ ಆಶ್ವಾಸನೆ ಸಿಕ್ಕಾಗ ಉದ್ವಿಗ್ನಗೊಂಡ ಬಸವರಸನ ಮನಸ್ಸು ಸ್ವಲ್ಪ ಶಾಂತಗೊಳ್ಳುವುದು. ಅವನ ನಿರ್ಗಮನ ದೇವಸಂಕಲ್ಪಿತ, ಮಾನವ ಯೋಜಿತವಲ್ಲ ಎಂಬ ಅರಿವು ಮೂಡುವುದು. ಹರ ಕರುಣೋದಯವಾದಂತೆ ಅರುಣೋದಯವಾದಾಗ ಸಮಾಧಾನ ಮನಸ್ಕನಾಗಿ ದೇವಾಲಯದಿಂದ ಹೊರಡುವನು.

ಬಸವರಸನ ಸಾಧನಾತ್ಮಕ ಮುಖವನ್ನು ಹರಿಹರ ಕವಿ ಚಿತ್ರಿಸಿರುವುದನ್ನು ನೋಡಿದರೆ ಸ್ವತಃ ಹರಿಹರನು ಸಹ ಕೇವಲ ಪಂಡಿತನಾಗಿರದೆ ಸಾಧಕ ಹೃದಯದ ಅನುಭಾವಿ ಎನ್ನಿಸುವುದು. ಇಲ್ಲವಾದರೆ ಸ್ವಭಾವತಃ ದಾರ್ಶನಿಕ ಹೃದಯದ ಬಸವಣ್ಣನ ಆಂತರವನ್ನು ಚಿತ್ರಿಸಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಅಂದಿನಿಂದ ಇಂದಿನವರೆಗೆ ಕಾವ್ಯ, ತತ್ತ್ವಜ್ಞಾನ, ಕಾದಂಬರಿ ಮುಂತಾದ ವಿವಿಧ ಪ್ರಾಕಾರಗಳಲ್ಲಿ ಬಸವಣ್ಣನವರನ್ನು ಚಿತ್ರಿಸಲು ಎಳಸಿರುವ ಬಹಳಷ್ಟು ಲೇಖಕರು ಆ ಅಂಶವನ್ನು ಸ್ಪರ್ಶಿಸದೆ ಪಾರಾಗುವುದನ್ನು ಕಾಣುತ್ತೇವೆ. ಆದರೆ ಈ ಸೂಕ್ಷ್ಮಾತಿಸೂಕ್ಷ್ಮವಾದ ಕುಸುರಿ ಕೆಲಸದಲ್ಲಿ ಹರಿಹರ ಕವಿ ಯಶಸ್ವಿಯಾಗಲು ಕಾರಣವೆಂದರೆ ಸ್ವತಃ ತಾನೇ ಪ್ರಾಮಾಣಿಕ ಸಾಧಕನಾಗಿದ್ದುದು.

ಭಕ್ತನ ಮನ ಹೆಣ್ಣಿನೊಳಗಾದಡೆ, ವಿವಾಹವಾಗಿ ಕೂಡುವುದು
ಭಕ್ತನ ಮನ ಮಣ್ಣಿನೊಳಗಾದಡೆ ಕೊಂಡು ಆಲಯವ ಮಾಡುವುದು
ಭಕ್ತನ ಮನ ಹೊನ್ನಿನೊಳಗಾದಡೆ, ಬಳಲಿ ದೊರಕಿಸುವುದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ -ಶಿವಯೋಗಿ ಸಿದ್ಧರಾಮೇಶ್ವರ

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವರಸ ನವ ಧರ್ಮ ದ್ರಷ್ಟಾರ ಬಸವರಸ ಸಂಗನ ಬಸವನಾದುದು Next
cheap jordans|wholesale air max|wholesale jordans|wholesale jewelry|wholesale jerseys