ಭಕ್ತಿ ಇಲ್ಲದ ಬಡವ ನಾನಯ್ಯಾ.....

✍ ಶರಣ ರಂಜಾನ್ ದರ್ಗಾ
ಸಂಶೋಧಕ ಮತ್ತು ಸಂಯೋಜಕ
ಬಸವಾದಿ ಶರಣ ಸಾಹಿತ್ಯ ಕೇಂದ್ರ,
ಗುಲಬರ್ಗಾ ವಿಶ್ವವಿದ್ಯಾಲಯ,
ಕಲಬುರಗಿ- ೫೮೫೧೦೬

*

ಭಕ್ತಿ ಇಲ್ಲದ ಬಡವ ನಾನಯ್ಯಾ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ,
ಚೆನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲ ಪುರಾತರು ನೆರೆದು
ಭಕ್ತಿಭಿಕ್ಷವನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು
ಕೂಡಲ ಸಂಗಮದೇವಾ. - ಗುರು ಬಸವಣ್ಣ

ಅನುಭವ, ಅನುಭಾವ

ಅನುಭಾವ ಎಂಬುದು ಐಹಿಕ ಜಗತ್ತಿನ ಅನುಭವವನ್ನು ಬಿಟ್ಟು ಇಲ್ಲ. ಸರ್ವರ ಅನುಭವದ ಒಟ್ಟು ರೂಪವೇ ಅನುಭಾವ. ಅನುಭವ ಎಂಬುದು ಮಕರಂದದ ಹಾಗೆ. ಅನುಭಾವ ಎಂಬುದು ಜೇನುತುಪ್ಪದ ಹಾಗೆ. ಜೇನುಹುಳುಗಳು ಹೂವಿಂದ ಹೂವಿಗೆ ಹಾರಿ ಅವುಗಳ ಮಕರಂದವನ್ನು ಹೀರಿ, ತಮ್ಮ ದೇಹದೊಳಗಿನ ರಾಸಾಯನಿಕ ಅಂಶವನ್ನು ಆ ಸರ್ವ ಹೂಗಳಿಂದ ಕೂಡಿದ ಮಕರಂದ ಜೊತೆ ಬೆರೆಸಿ ತಮ್ಮ ಜೇನುಗೂಡಲ್ಲಿ ಸಂಗ್ರಹಿಸುವುದರ ಮೂಲಕ ಜೇನುತುಪ್ಪವನ್ನು ಸೃಷ್ಟಿಸುತ್ತವೆ. ಅನುಭವ ಮಂಟಪದಲ್ಲಿ ಸರ್ವ ಶರಣರ ಅನುಭವದ ಸಾರವೇ ಅನುಭಾವ.

ವಿವಿಧ ಕಾಯಕಜೀವಿಗಳಾದ ಶರಣರು ಕಾಯಕದ ಮೂಲಕ ಪಡೆದ ಅನುಭವಕ್ಕೆ ತಮ್ಮ ಸಂಸ್ಕಾರದ ಭಾವ ತುಂಬಿಕೊಂಡು ಅನುಭವ ಮಂಟಪಕ್ಕೆ ಬಂದು, ಚಿಂತನಗೋಷ್ಠಿಯಲ್ಲಿ ಭಾಗವಹಿಸಿ ಎಲ್ಲ ಶರಣರ ಅನುಭವ ಮತ್ತು ಸಂಸ್ಕಾರದಿಂದ ಕೂಡಿದ ಅನುಭಾವವನ್ನು ಆನಂದಿಸುತ್ತಾರೆ. ಜೇನುಗೂಡಿನಲ್ಲಿ ರಾಣಿಜೇನು ಎಲ್ಲವನ್ನೂ ನಿಭಾಯಿಸುವಂತೆ ಶರಣರಲ್ಲಿ ಲಿಂಗತತ್ತ್ವವೇ ಎಲ್ಲವನ್ನೂ ನಿಭಾಯಿಸುತ್ತದೆ. ಸರ್ವಸಮತ್ವ ಭಾವದಿಂದ ಕೂಡಿದ ಭಕ್ತಿಯನ್ನು ಲಿಂಗತತ್ತ್ವ ಬಯಸುತ್ತದೆ. ಮಾನವ ವಿಮೋಚನೆಯ ತತ್ತ್ವವೇ ಲಿಂಗತತ್ತ್ವ. ಪ್ರಖರವಾದ ಮಾನವೀಯ ಪ್ರಜ್ಞೆಯಿಂದ ಕೂಡಿದ ಭಕ್ತಿಮಾರ್ಗದಿಂದ ಮಾತ್ರ ಸಕಲಜೀವಿಗಳಿಗೆ ಲೇಸನ್ನೇ ಬಯಸುವ ಲಿಂಗಸಾಮ್ರಾಜ್ಯವನ್ನು ತಲುಪಲು ಸಾಧ್ಯ. ಜೇನುಹುಳುಗಳ ಪ್ರಯತ್ನದಿಂದ ಮಾತ್ರ ಜೇನುತುಪ್ಪವನ್ನು ಪಡೆಯಲು ಸಾಧ್ಯ.

ಬಸವಣ್ಣನವರು ಇಂಥ ಭಕ್ತಿಯ ಕುರಿತು ಈ ವಚನದಲ್ಲಿ ತಿಳಿಸುತ್ತಾರೆ. ಬಸವಣ್ಣನವರು ಎಲ್ಲ ಸ್ತರದ ಜನಸಮುದಾಯಗಳ ಅನುಭವ ಮತ್ತು ಸಂಸ್ಕಾರಗಳಿಗೆ ಭಕ್ತಿ ಎಂದು ಕರೆಯುತ್ತಾರೆ. ಎಲ್ಲರ ಅನುಭವ ಮತ್ತು ಸಂಸ್ಕಾರಗಳನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಮಹಾನುಭಾವಿಯಾಗುತ್ತಾರೆ. ಹೀಗಾಗಿ ಅವರಿಗೆ ಜಗತ್ತಿನ ಎಲ್ಲ ರಹಸ್ಯಗಳು ಗೋಚರಿಸತೊಡಗುತ್ತವೆ. ಎಲ್ಲರ ಭಕ್ತಿಭಿಕ್ಷೆಯಿಂದ ಅವರ ಅನುಭವದ ಪಾತ್ರೆ ತುಂಬಿದೆ. ಅಂತೆಯೆ ಅವರಿಗೆ ಮಾನವನನ್ನು ಎಲ್ಲರೀತಿಯ ಬಂಧನಗಳಿಂದ ವಿಮೋಚನೆಗೊಳಿಸುವ ಮಾರ್ಗವನ್ನು ಕಂಡುಹಿಡಿಯಲು ಸಾಧ್ಯವಾಯಿತು. ಮೇಲ್ಜಾತಿಯವರ ಪುಸ್ತಕ ಜ್ಞಾನ ಮತ್ತು ಕೆಳಜಾತಿಗಳವರ ಅನುಭವಾಮೃತದಿಂದ ಅವರು ಸತ್ಯ ಮತ್ತು ಅಸತ್ಯದ ಅಂತರವನ್ನು ಕಂಡುಕೊಂಡರು. ನ್ಯಾಯ ಮತ್ತು ಅನ್ಯಾಯದ ರೀತಿಗಳನ್ನು ಗುರುತಿಸಿದರು. ಸುಲಿಗೆಯ ಮೂಲವನ್ನು ಅರಿತರು. ಹೀಗಾಗಿ ಜಾತಿ, ಮತ, ಪಂಥ, ವರ್ಗ, ವರ್ಣ, ಲಿಂಗ ಮುಂತಾದ ಭೇದಗಳಿಂದ ಮಾನವಕುಲವನ್ನು ಮೇಲಕ್ಕೆತ್ತುವ ಸಿದ್ಧಾಂತವನ್ನು ರೂಪಿಸಲು ಅವರಿಗೆ ಸಾಧ್ಯವಾಯಿತು.

ಮನುಷ್ಯರನ್ನು ಮೂಢನಂಬಿಕೆಯ ಬಲೆಯಲ್ಲಿ ಸಿಲುಕಿಸುವುದರ ಮೂಲಕ ಅವರೆಂದೂ ಸ್ವತಂತ್ರವಾಗಿ ಚಿಂತನೆ ಮಾಡದ ಹಾಗೆ ನೋಡಿಕೊಳ್ಳುವ ಕರ್ಮಸಿದ್ಧಾಂತವನ್ನು ಆಮೂಲಾಗ್ರವಾಗಿ ವಿರೋಧಿಸುವ ಶಕ್ತಿಯನ್ನು ಪಡೆಯಲು ಸಾಧ್ಯವಾಯಿತು. ಎಲ್ಲಿಯವರೆಗೆ ನಾವು ಕಾಯಕಜೀವಿಗಳ ಅನುಭವಕ್ಕೆ ಬೆಲೆ ಕೊಡುವುದಿಲ್ಲವೋ ಅಲ್ಲಿಯ ವರೆಗೆ ನಾಗರಿಕ ಸಮಾಜವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂಬುದನ್ನು ಭಕ್ತಿಯ ಪರಿಕಲ್ಪನೆಯ ಮೂಲಕ ತೋರಿಸಿಕೊಟ್ಟರು. ಭಕ್ತಿ ಎಂಬ ಇಂಥ ಕ್ರಾಂತಿಕಾರಿ ಮಾನವೀಯ ಪ್ರಜ್ಞೆ ಇಲ್ಲದವನೇ ನಿಜವಾದ ಬಡವ ಎಂಬುದನ್ನು ಸೂಚಿಸಿದರು. ಹೀಗೆ ಬಸವಣ್ಣನವರು ಎಲ್ಲ ಜಾತಿ ಜನಾಂಗಗಳ ಅನುಭವವನ್ನು ತಮ್ಮದಾಗಿಸಿಕೊಂಡರು. ಅವರಲ್ಲೇ ಒಬ್ಬರಾಗಿ ಸಮಾಜವನ್ನು ನೋಡಿದರು. ಅಸಮಾನತೆಯ ಸಮಾಜ ಅಸಹನೀಯವೆನಿಸಿತು. ಇಂಥ ಕುರೂಪ ಸಮಾಜವನ್ನು ಸುಂದರ ಸಮಾಜವನ್ನಾಗಿಸಲು ಪಣ ತೊಟ್ಟರು.

ಕೆಳಜಾತಿಗಳಿಂದ ಬಂದ ಸತ್ಪುರುಷರಾದ ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ದಾಸಯ್ಯ ಮುಂತಾದವರ ಅನುಭವ ಬಸವಣ್ಣನವರಿಗೆ ಶ್ರೀರಕ್ಷೆಯಾಯಿತು. ಅವರ ಅನುಭವದ ಪಾತ್ರೆಯನ್ನು ತುಂಬಿಸಿದವರೇ ಇಂಥ ಕಾಯಕಜೀವಿಗಳು. ಹೀಗೆ ಲಕ್ಷಾಂತರ ಜನರ ಅನುಭವದಿಂದ ಒಂದು ನಾಗರೀಕತೆ ನಿರ್ಮಾಣವಾಗುವುದು. ಅವರೆಲ್ಲರ ಅನುಭವದ ಸಾರವಾದ ಅನುಭಾವದಿಂದ ಮಾನವ ಸಂಸ್ಕೃತಿ ಅರಳುವುದು. ಹೀಗೆ ನಿರ್ಮಾಣವಾದ ನಾಗರೀಕತೆಯಲ್ಲಿ ಅರಳಿದ ಸಂಸ್ಕೃತಿಯಲ್ಲಿ ವಿಶ್ವಮಾನವನ ಉದಯವಾಗುವುದು. ಸುಂದರ ಸಮಾಜಕ್ಕಾಗಿ ಹೋರಾಟ ಮಾಡಬಯಸುವವರು ಮೊದಲು ತಮ್ಮೊಳಗಿನ ವೈರುಧ್ಯಗಳ ವಿರುದ್ಧ ಹೋರಾಡಬೇಕಾಗುತ್ತದೆ. ತಮ್ಮೊಳಗೇ ಹೋರಾಟ ಮಾಡುವುದೆಂದರೆ ತಮ್ಮ ಜಾತಿ ಪ್ರಜ್ಞೆಯಿಂದ ಹೊರಬಂದು, ಎಲ್ಲ ಜಾತಿಯವರ ಅನುಭವವನ್ನು ಗೌರವಿಸಿ ಆ ಜಾತಿಗಳೊಂದಿಗೆ ಒಂದಾಗುವುದರ ಮೂಲಕ ಜಾತಿ ನಿರ್ಮೂಲನ ಮಾಡುವುದು. ಆ ಮೂಲಕ ಕಾಯಕದ ಮಹಿಮೆಯನ್ನು ಸಾರುವುದು.

ಈ ವಿಚಾರವನ್ನೇ ಬಸವಣ್ಣನವರು ಈ ವಚನದಲ್ಲಿ ಸೂಚಿಸಿದ್ದಾರೆ. ಬಸವಣ್ಣನವರು ಕಾಯಕಜೀವಿಗಳ ಕಷ್ಟ ಅರಿತುಕೊಂಡರು. ಅವರಿಗೆ ಅಭಯಹಸ್ತ ನೀಡಿದರು. ಅವರ ಕಾಯಕವನ್ನು ಗೌರವಿಸಿದರು. ಯಾವುದೇ ಕಾಯಕ ದೊಡ್ಡದಲ್ಲ ಅಥವಾ ಚಿಕ್ಕದಲ್ಲ. ಸತ್ಯಶುದ್ಧ ಕಾಯಕಗಳೆಲ್ಲ ಪವಿತ್ರವಾದವುಗಳು ಎಂಬ ಆತ್ಮವಿಶ್ವಾಸ ತುಂಬಿದರು. ಬಸವಣ್ಣನವರಿಂದಾಗಿ ಕೃಷಿಕಾರ್ಯ ಮಾಡುವವರು, ತೊಗಲು ಹದ ಮಾಡುವವರು, ಪಾದರಕ್ಷೆಗಳನ್ನು ತಯಾರಿಸುವವರು, ಕಸಗುಡಿಸುವವರು ಹೀಗೆ ಎಲ್ಲ ಕಾಯಕ ಜೀವಿಗಳು ಒಂದಾಗಿ ತಮ್ಮ ಜಾತಿಗಳ ಚೌಕಟ್ಟುಗಳಿಂದ ಹೊರಬಂದು ಶರಣಸಂಕುಲದಲ್ಲಿ ಒಂದಾದರು.

*
ಪರಿವಿಡಿ (index)
Previousಜಗದ್ಗುರು ಸಂಪ್ರದಾಯದ ಮೂಲ ಮತ್ತು ಬೆಳವಣಿಗೆಸಿದ್ದರಾಮೇಶ್ವರರು ಕಟ್ಟಿಸಿದ ಕೆರೆ ಶುದ್ಧ ಮಾಡಲು ಯತ್ನಿಸಿದ ವಿಪ್ರರ ಕಥೆNext
*