ಬಸವಣ್ಣ ತಿರಸ್ಕರಿಸಿದ ದೇವರುಗಳು


--ಲೇ: ರಂಜಾನ್ ದರ್ಗಾ
*

ಪಂಚಮಹಾಭೂತಗಳೆಲ್ಲ ತಮ್ಮಷ್ಟಕ್ಕೆ ತಾವು ಎಲ್ಲ ಮಹತ್ವವನ್ನು ಹೊಂದಿವೆ. ಆದರೆ ನಿಸರ್ಗದ ವಿರಾಟ್ ಸ್ವರೂಪಕ್ಕೆ ತಲೆಬಾಗಿದ ವೈದಿಕರು ಅವುಗಳನ್ನು ದೈವತ್ವಕ್ಕೆ ಏರಿಸಿ ‘ಭಯವೇ ಧರ್ಮದ ಮೂಲ’ ಎನ್ನುವಂತೆ ಮಾಡಿದರು. ಆಗ ನೀರು ಜಲದೇವತೆಯಾಯಿತು. ಕಿಚ್ಚು ಅಗ್ನಿದೇವತೆಯಾಯಿತು. ನೆಲ ಭೂದೇವಿಯಾಯಿತು. ಗಾಳಿ ವಾಯುದೇವತೆಯಾಯಿತು. ಆದರೆ ಇವೆಲ್ಲವನ್ನೊಳಗೊಂಡ ಅನಂತವಾದ ಶೂನ್ಯರೂಪಿ ಬಯಲು ಮತ್ತು ನಮ್ಮೊಳಗಿನ ’ಬಯಲು’ ಕೂಡಿದ ನಂತರ ಸೃಷ್ಟಿಯಾಗುವ ಸಂಗಮವೇ ಬಸವಣ್ಣನವರ ಕೂಡಲಸಂಗಮದೇವ. ಇಂಥ ಅರಿವಿನ ಕುರುಹು ಇಷ್ಟಲಿಂಗ.

ಯಾವುದೇ ರೀತಿಯ ಭಂಗ ಬರದ ಹಾಗೆ ಈ ದೇವನನ್ನು ಆರಾಧಿಸಬೇಕೆಂಬುದು ಬಸವಣ್ಣನವರ ಬಯಕೆ. ತೆತ್ತೀಸ (೩೩) ಕೋಟಿ ವೈದಿಕ ದೆವತೆಗಳು ಮತ್ತು ಅಸಂಖ್ಯಾತ ಶೂದ್ರ ದೇವತೆಗಳು ನಿಜದೇವರ ಆರಾಧನೆಯ ಏಕಾಗ್ರತೆಗೆ ಭಂಗವುಂಟು ಮಾಡುವುದನ್ನು ಬಸವಣ್ಣನವರು ಸಹಿಸಲಿಲ್ಲ. ಚಿತ್ರ ವಿಚಿತ್ರ ಕಲ್ಪನೆಯ ದೇವರುಗಳು ಮತ್ತು ಅವುಗಳ ಮೂರ್ತಿಗಳು ಅನುಭಾವ ಲೋಕದ ಅರಿಯುವಿಕೆಗೆ ಮತ್ತು ಭೌತಿಕ ಲೋಕದ ಇರುವಿಕೆಗೆ ಕಿರಿಕಿರಿಯುಂಟುಮಾಡುವಂಥವು ಎಂಬುದರ ಸ್ಪಷ್ಟ ಕಲ್ಪನೆ ಬಸವಣ್ಣನವರಿಗೆ ಇತ್ತು. ಅಭಂಗ ಅವಸ್ಥೆಯಲ್ಲಿ ಮಾತ್ರ ನಿಜದೇವನ ಜೊತೆ ಅನುಸಂಧಾನ ಸಾಧ್ಯ ಎಂಬುದು ಅವರ ದೃಢ ನಿಲವು. ಈ ಕಾರಣದಿಂದಲೇ ಅವರು ವಿವಿಧ ವಸ್ತುಗಳಿಗೆ ಸಂಬಂಧಿಸಿದ ದೈವತ್ವದ ಮಿಥ್ (ದಂತಕಥೆ) ಅನ್ನು ಭೇದಿಸುತ್ತಾರೆ.

‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ’ ಎಂದು ಬಸವಣ್ಣನವರು ಹೇಳಿದರು. ನೆಲವನ್ನು ದೇವರಾಗಿ ನೋಡದೆ ಕೇವಲ ನೆಲವಾಗಿ ನೋಡುವುದನ್ನು ಕಲಿಸಿದರು. ಹೀಗೆ ನೋಡಿದಾಗ ನೆಲವು ಭಾವನಾತ್ಮಕ ಪ್ರಶ್ನೆಯಾಗದೆ ಬದುಕಿಗೆ ಉತ್ತರವಾಗುವುದು. ‘ಜಲವೊಂದೆ ಶೌಚಾಚಮನಕ್ಕೆ ಎಂದು ತಿಳಿಸಿದಾಗ ಜಲ ದೇವತೆಯಾಗುವುದಿಲ್ಲ. ನೀರನ್ನು ನೀರಾಗಿ ನೋಡಿದಾಗ ಅದರ ಸೌಂದರ್ಯ ಮತ್ತು ಉಪಯೋಗದ ಪ್ರಜ್ಞೆ ಏಕಕಾಲಕ್ಕೆ ಬರುವುದು. ಜಲವು ದೇವತೆಯಾದಾಗ ಜನ ಅದರೊಳಗೆ ಮುಳುಗುವರು. ಗಂಗೆಯ ಜಲಮಾಲಿನ್ಯಕ್ಕೆ ಅದು ದೇವತೆ ಎಂಬ ಮೂಢನಂಬಿಕೆಯೆ ಕಾರಣ. ಅಗ್ನಿಯನ್ನು ದೇವತೆ ಎಂದು ತಿಳಿದದ್ದರಿಂದಲೇ ಯಜ್ಞ ಸಂಪ್ರದಾಯ ಬೆಳೆಯಿತು. ಅದು ಅರಣ್ಯ ನಾಶಕ್ಕೆ ನಾಂದಿ ಹಾಡಿತು. ವರ್ಷಗಟ್ಟಲೆ ನಡೆಯುತ್ತಿದ್ದ ಯಜ್ಞ ಯಾಗಾದಿಗಳಿಗಾಗಿ ಅದೆಷ್ಟು ಪ್ರಾಣಿಗಳು ಮತ್ತು ಮರಗಳು ಬಲಿಯಾಗಿವೆ ಎಂಬುದನ್ನು ಊಹಿಸಲಸಾಧ್ಯ. ಅಂತೆಯೆ ಬಸವಣ್ಣನವರು ವೈದಿಕರ ಅಗ್ನಿ ದೇವತೆಗೆ ‘ಕಿಚ್ಚು’ ಎಂದು ಕರೆದಿದ್ದಾರೆ.

"ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು
ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರು, ಬೀದಿಯ ಧೂಳ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯಾ
ಕೂಡಲಸಂಗಮದೇವಾ
ವಂದನೆಯ ಮರೆದು ನಿಂದಿಸುತ್ತಿದ್ದರು."

ಹೀಗೆ ಬಸವಣ್ಣನವರು ‘ಅಗ್ನಿದೇವ’ನ ನಿಜಸ್ವರೂಪವನ್ನು ತೋರಿಸುತ್ತ ನಮ್ಮನ್ನು ನಿಜದ ನೆಲೆಗೆ ತಂದು ನಿಲ್ಲಿಸುತ್ತಾರೆ. ಬಸವಣ್ಣನವರು ವಿವಿಧ ವಸ್ತುಗಳಿಗೆ ದೈವೀಸ್ವರೂಪವನ್ನು ಕಿತ್ತೆಸೆದು ಅವುಗಳ ಮೂಲಸ್ವರೂಪದ ಮಹತ್ವವನ್ನು ತಿಳಿಸಿರುವರು. ಅವುಗಳನ್ನು ಹಿತಮಿತವಾಗಿ ಬಳಸಲು ಸೂಚಿಸಿರುವರು.

"ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ,
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ,
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ,
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೇ ದೇವ."

ಎಂದು ಸಾರುತ್ತಾರೆ. ತಮ್ಮನ್ನೇ ಕಾಪಾಡಿಕೊಳ್ಳದ ದೈವಗಳು ನಮ್ಮನ್ನೆಂತು ಕಾಪಾಡುವವು ಎಂಬ ವಿಚಾರ ನಮ್ಮಲ್ಲಿ ಹುಟ್ಟುವಂತೆ ಮಾಡುತ್ತಾರೆ. ಇಂಥ ಎಲ್ಲ ದೈವಗಳ ಅನುಭವ ನಮಗಿದೆ. ಬರಗಾಲದಲ್ಲಿ ಜಗಲಿಯ ಮೇಲಿನ ಪಂಚಲೋಹಗಳ ವಿಗ್ರಹಗಳು ಕೈಗೆ ಸಿಕ್ಕ ದರದಲ್ಲಿ ಕಂಚುಗಾರರ ಅಂಗಡಿ ಸೇರುವುದನ್ನು ನಾವೆಲ್ಲ ಕಂಡಿದ್ದೇವೆ.

"ಉಳ್ಳವರು ಶಿವಾಲಯವ ಮಾಡಿಹರು
ನಾನೇನು ಮಾಡಲಿ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ."

ಸದಾ ಶ್ರೀಮಂತರ ಸೇವೆಯಲ್ಲಿ ನಿರತವಾಗುವ ಸ್ಥಾವರದೇವರಗಳ ಬಗ್ಗೆ ಬಸವಣ್ಣನವರಿಗೆ ತಿರಸ್ಕಾರವಿದೆ. ಶ್ರೀಮಂತರಿಗೂ ದೇವಾಲಯಗಳಿಗೂ ಘನವಾದ ಸಂಬಂಧವಿದೆ. ಹಿಂದಿನ ಕಾಲದಲ್ಲಿ ದೇವಾಲಯಗಳು ಶ್ರೀಮಂತರ ಸ್ವಿಸ್ ಬ್ಯಾಂಕ್‌ಗಳಂತೆ ಇದ್ದವು. ದೇವಾಲಯಗಳಲ್ಲಿನ ಲೈಂಗಿಕ ಶಿಲ್ಪ, ದೇವದಾಸಿಯರು, ನೃತ್ಯ, ಸಂಗೀತ ಹೀಗೆ ಇವೆಲ್ಲ ಉಳ್ಳವರಿಗೆ ಪ್ರಿಯವಾದವುಗಳೇ ಆಗಿವೆ. ಉಳ್ಳವರು ದೇವರ ಜೊತೆ ಸಲುಗೆಯಿಂದ ಇರುತ್ತಾರೆ.

"ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆಯಿಂದ ಒಳಗೈದಾರೆ.
ಆನು ದೇವಾ ಹೊರಗಣವನು.
ಸಂಬೋಳಿ ಸಂಬೋಳಿ ಎನ್ನುತ್ತ ಇಂಬಿನಲ್ಲಿ ಇದ್ದೇನೆ.
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು."

ಎಂದು ಬಸವಣ್ಣನವರು ಹೇಳುವಲ್ಲಿ ತಾವು ಇಂಥದ್ದಕ್ಕೆಲ್ಲ ಹೊರಗಿನವರು ಮತ್ತು ಕೆಳಜಾತೀಕರಣಕ್ಕೆ ಒಳಗಾಗಿ ಅಂಥ ಬಡವರ ಜೊತೆ ಇರುವವರು ಎಂಬುದನ್ನು ಸೂಚಿಸಿದ್ದಾರೆ.

"ಆಗಳೂ ಲೋಗರ ಮನೆಯ ಬಾಗಿಲ ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು.
ಹೋಗೆಂದಡೆ ಹೋಗವು,
ನಾಯಿಗಿಂತ ಕರಕಷ್ಟ ಕೆಲವು ದೈವಂಗಳು
ತಾವೇನ ಕೊಡವವು ಕೂಡಲಸಂಗಮದೇವಾ"

ಎಂದು ಇಂಥ ದೇವರುಗಳನ್ನೆಲ್ಲ ಬಡವರ ಮನ ಮತ್ತು ಮನೆಗಳಿಂದ ಆಚೆ ನೂಕುವ ಪ್ರಯತ್ನ ಮಾಡುತ್ತಾರೆ. ಏಕೋಭಾವದಿಂದ ಪರಮಾತ್ಮನನ್ನು ಅರಿತುಕೊಂಡು ನಡೆಯುವವರು ಖಂಡಿತವಾಗಿಯೂ ಎಲ್ಲ ಜಂಜಡಗಳಿಂದ ಹೊರಬರುತ್ತಾರೆ ಎಂಬುದರ ಮನವರಿಕೆ ಮಾಡಿಕೊಡುತ್ತಾರೆ. ಅವರ ಕೂಡಲಸಂಗಮದೇವರು ಎಲ್ಲರ ದೇವರಾಗಿದ್ದಾನೆ. ಸಮಾಜದ ಎಲ್ಲ ಸ್ತರಗಳಿಂದ ಜನ ಅವರಲ್ಲಿಗೆ ಬಂದರು. ಅವರ ಶರಣಸಂಕುಲದ ಭಾಗವಾದರು. ಆದರೆ ಅವರಲ್ಲೇನಕರು ತಮ್ಮ ಸಾಂಪ್ರದಾಯಿಕ ನಡೆವಳಿಕೆಗಳಿಂದ ಹೊರಬರುವ ಸಾಮರ್ಥ್ಯವನ್ನು ತೋರಲಿಲ್ಲ.

"ಬಡ ಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ!
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ!
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ!
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ!
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ
ಕೂಡಲಸಂಗಮದೇವಾ."

ಬಸವಣ್ಣನವರು ಹಂಗುದೊರೆದು ಹೊಸ ದೇವರು, ಹೊಸ ಸಮಾಜ, ಹೊಸ ತಾತ್ತ್ವಿಕ ಚಿಂತನೆ, ಹೊಸ ಆರ್ಥಿಕ ನೀತಿ ಮತ್ತು ಹೊಸ ಜೀವನ ವಿಧಾನದೊಂದಿಗೆ ಮುನ್ನಡೆದರು. ಆದರೆ ಜನಸಮುದಾಯ ಅವರ ಶಕ್ತಿಯನ್ನು ಅರಿತರೂ ಅವರ ಹೆಜ್ಜೆಯೊಡನೆ ಹೆಜ್ಜೆ ಹಾಕುವಲ್ಲಿ ಸೋತಿತು. ಈ ಕಾರಣದಿಂದ ಶರಣರು ಬಹಳೇ ಕಷ್ಟಪಡಬೇಕಾಯಿತು. ಅವರೆಲ್ಲ ಧನಶಕ್ತಿಯಿಂದ ಬದುಕಿದವರಲ್ಲ; ಆತ್ಮಶಕ್ತಿಯಿಂದ ಬದುಕಿದವರು.
ಆದರೂ ಜನರನ್ನು ಗೊಡ್ಡು ಸಂಪ್ರದಾಯ ಮತ್ತು ಮೂಢನಂಬಿಕೆಗಳಿಂದ ಪಾರು ಮಾಡಿ ವೈಚಾರಿಕ ನೆಲೆಯಲ್ಲಿ ಮುನ್ನಡೆಸುವ ಬಗ್ಗೆ ಬಸವಣ್ಣನವರು ಸದಾ ಚಿಂತನೆ ಮಾಡಿದ್ದಾರೆ.

"ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ
ಕೆರೆ ಬಾವಿ ಹೂಗಿಡು ಮರಂಗಳಲ್ಲಿ
ಗ್ರಾಮಮಧ್ಯಂಗಳಲ್ಲಿ ಜಲಪಥ ಪಟ್ಟಣ ಪ್ರದೇಶದಲ್ಲಿ
ಹಿರಿಯಾಲದ ಮರದಲ್ಲಿ ಮನೆಯ ಮಾಡಿ,
ಕರೆವೆಮ್ಮೆಯ ಹಸುಗೂಸು ಬಸುರಿ ಬಾಣತಿ
ಕುಮಾರಿ ಕೊಡಗೂಸು ಎಂಬುವರ ಹಿಡಿದುಂಬ, ತಿರಿದುಂಬ
ಮಾರಯ್ಯ, ಬೀರಯ್ಯ, ಕೇಚರಗಾವಿಲ, ಅಂತರಬೆಂತರ
ಕಾಳಯ್ಯ, ಧೂಳಯ್ಯ, ಮಾಳಯ್ಯ, ಕೇತಯ್ಯಗಳೆಂಬ ನೂರು ಮಡಕೆಗೆ
ನಮ್ಮ ಕೂಡಲಸಂಗಮದೇವ ಶರಣೆಂಬುದೊಂದು ದಡಿ ಸಾಲದೆ?"

ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಇಂಥ ಕಿರಿಕಿರಿಯ ದೇವರುಗಳೆಂಬ ಮಡಕೆಗಳನ್ನು ಕೂಡಲಸಂಗಮದೇವರೆಂಬ ಜ್ಞಾನದ ಬಡಿಗೆಯಿಂದ ಒಡೆದು ಹಾಕಲು ಸೂಚಿಸುತ್ತಾರೆ. ಇಂಥ ದೇವರುಗಳಿಂದ ಬಿಡುಗಡೆ ಹೊಂದಿದಾಗ ಮಾತ್ರ ನಿಜವಾದ ದೇವರ ‘ದರ್ಶನ’ವಾಗುವುದು.

ಬಡವರು ಇಂಥ ದೇವರ ಸೇವೆ ಮಾಡುವುದರಲ್ಲೇ ಧನವನ್ನೆಲ್ಲ ಸವೆಸುತ್ತಾರೆ. ಭಯದಲ್ಲೇ ಲಯವಾಗುತ್ತಾರೆ. ತಮ್ಮ ಮತ್ತು ತಮ್ಮ ಮಕ್ಕಳ ಭವಿಷ್ಯವನ್ನು ಇಂಥ ದೇವರುಗಳಿಂದಾಗಿ ಹಾಳುಮಾಡಿಕೊಳ್ಳುತ್ತಾರೆ. ಆದರೆ ಬಸವಣ್ಣನವರ ದೇವರು ಏನನ್ನೂ ಬಯಸುವುದಿಲ್ಲ. "ಕುರಿ ಬೇಡ, ಮರಿ ಬೇಡ, ಬರಿಯ ಪತ್ರೆಯ ತಂದು ಪೂಜಿಸು ನಮ್ಮ ಕೂಡಲಸಂಗಮದೇವನ" ಎಂದು ದೇವಾರಾಧನೆಯ ಸರಳ ಮಾರ್ಗವನ್ನು ತೋರಿಸಿಕೊಡುತ್ತಾರೆ.

ಬಡವರು ಕಷ್ಟಪಟ್ಟು ದೇವರ ಕಾರ್ಯಗಳನ್ನು ಮಾಡಿದರೆ ಶ್ರೀಮಂತರನೇಕರು ಅಹಂಕಾರದಿಂದ ದೇವರ ಕೆಲಸ ಮಾಡುತ್ತಾರೆ.

"ಹತ್ತು ಮತ್ತರ ಭೂಮಿ, ಬತ್ತದ ಹಯನು, ನಂದಾದೀವಿಗೆಯ
ನಡೆಸಿಹೆವೆಂಬುವರ ಮುಖವ ನೋಡಲಾಗದು,
ಅವರ ನುಡಿಯ ಕೇಳಲಾಗದು.
ಅಂಡಜ, ಸ್ವೇದಜ, ಉದ್ಭಿಜ, ಜರಾಯುಜವೆಂಬ ಪ್ರಾಣಿಗಳಿಗೆ
ಭವಿತವ್ಯವ ಕೊಟ್ಟವರಾರೊ?
ಒಡೆಯರಿಗೆ ಉಂಡಲಿಗೆಯ ಮುರಿದಿಕ್ಕಿದಂತೆ
ಎನ್ನಿಂದಲೇ ಆಯಿತ್ತು, ಎನ್ನಿಂದಲೇ ಹೋಯಿತ್ತು ಎಂಬುವನ ಬಾಯಲ್ಲಿ
ಮೆಟ್ಟ ಹುಡಿಯ ಹೊಯ್ಯದೆ ಮಾಬನೆ
ಕೂಡಲಸಂಗಮದೇವ."

ಎಂದು ಅಹಂಕಾರದ ಭಕ್ತಿಯನ್ನು ಅಲ್ಲಗಳೆಯುತ್ತಾರೆ. ಅಹಂಕಾರ ಮತ್ತು ಭಯದಿಂದ ದೇವರನ್ನು ಪೂಜೆಸುವ ಆವಶ್ಯಕತೆ ಇಲ್ಲ ಎಂದು ಬಸವಣ್ಣನವರು ತಿಳಿಸಿದ್ದಾರೆ. ಭಕ್ತಿಯು ಅಂತಃಕರಣದಿಂದ ತುಂಬಿರಬೇಕು ಮತ್ತು ದಾಸೋಹ ಭಾವದಿಂದ ಕೂಡಿರಬೇಕು ಅಂಥವರು ಮಾತ್ರ ಬಸವಣ್ಣನವರ ದೇವರನ್ನು ಆರಾಧಿಸುವ ಯೋಗ್ಯತೆಯನ್ನು ಪಡೆಯುತ್ತಾರೆ. ಅವರೇ ಶರಣರಾಗುತ್ತಾರೆ.

"ಬಯಲ ರೂಪ ಮಾಡುವಾತನೆ ಶರಣನು,
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನೆಂಬೆ?
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿಯೆಂಬೆ?
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೆ
ಕೂಡಲಸಂಗಮದೇವಾ.

ಇಂಥ ಶರಣರು ಬಯಲಿಗೆ ‘ಇಷ್ಟ’ದ ರೂಪ ಕೊಡುತ್ತಾರೆ. ಆ ಮೂಲಕ ಬಯಲನ್ನು ಅನುಭಾವಿಸುತ್ತಾರೆ. ನಂತರ ಅಲ್ಲಿಗೇ ನಿಲ್ಲದೆ ಆ ಇಷ್ಟಲಿಂಗದ ರೂಪವನ್ನು ಜಂಗಮಲಿಂಗವೆಂಬ ಬಯಲಲ್ಲಿ ಲೀನಗೊಳಿಸುತ್ತಾರೆ. ಹೀಗೆ ಒಳ ಹೊರಗನ್ನು ಒಂದಾಗಿಸುತ್ತಾರೆ.

ಇಂಥ ಒಂದುತನದ ಮೂಲವನ್ನು ತಿಳಿಸುವುದರ ಮೂಲಕ ಬಸವಣ್ಣನವರು ಎಲ್ಲ ರೀತಿಯ ಭೇದಭಾವಗಳನ್ನು ಅಳಿಸಿ ಸರ್ವ ಸಮತೆಯ ದೀಪವನ್ನು ಜನಮನದಲ್ಲಿ ಬೆಳಗಿಸಲೆತ್ನಿಸುವ ಕ್ರಮ ಅನುಪಮವಾಗಿದೆ. ಇಂಥ ಸಮತಾ ಪ್ರಜ್ಞೆಯಿಂದಾಗಿ ಅವರು ಸದಾ ಮಹಿಳೆಯ ಪರ, ದುಡಿಯುವವರ ಪರ, ಬಡವರ ಪರ, ಅಸ್ಪೃಶ್ಯರ ಪರ ಮತ್ತು ಅನೈತಿಕ ಸಂಬಂಧದಿಂದ ಹುಟ್ಟಿದವರ ಪರ ನಿಲ್ಲುತ್ತಾರೆ.

"ಚೆನ್ನಯ್ಯನ ಮನೆಯ ದಾಸನು ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ."

ಎಂದು ಹೇಳುವಲ್ಲಿ ಬಸವಣ್ಣನವರ ಅಂತಃಕರಣ ಮತ್ತು ಅವರಿಗೆ ತಮ್ಮ ಮಣಿಹದ ಬಗ್ಗೆ ಇರುವ ದೃಢನಿರ್ಧಾರದ ಅರಿವಾಗುತ್ತದೆ. ಇಂಥ ಕಾರಣಗಳಿಂದಲೇ ಜನಪದ ಕವಿಯೊಬ್ಬ ನಿರಕ್ಷರಿಯಾಗಿದ್ದರೂ ಬಸವ ತತ್ತ್ವವನ್ನು ಅರಿತುಕೊಂಡು ‘ಕಲ್ಯಾಣದೊಳಗ ಬಸವಣ್ಣ ಇರುವಾಗ ಕಲ್ಲಿಗ್ಯಾಕ ಕೈಯ ಮುಗಿಯುವೆ’ ಎಂದು ಪ್ರಶ್ನಿಸಿದ್ದಾನೆ.

ಬಸವಣ್ಣನವರು ಅತ್ಯಂತ ನಿರ್ಗತಿಕರಲ್ಲೂ ದೇವರನ್ನು ಕಾಣುತ್ತಾರೆ. ಆ ಮೂಲಕ ಸಂವೇದನೆಯ ಸಾಗರವನ್ನೇ ಸೃಷ್ಟಿಸುತ್ತಾರೆ. ಅವರು ಬದುಕನ್ನು ಪ್ರೀತಿಸುವ ಕ್ರಮ ವಿಶ್ವಮಾನ್ಯವಾಗಿದೆ.

"ಕೆದರಿದ ತಲೆಯ, ತೊನೆವ ನಡೆಯ, ಹಣೆಯ ಬುಗುಟಿನ,
ಕರಸ್ಥಲದ ಅನಿಮಿಷದಿಂದ ಬಹಿರಂಗದವಧಾನ ತಪ್ಪಿ,
ಇದಿರುಗೊಯಿಲು ತಾಗಿ ಪುರ್ಬೊಡೆದು,
ಕಣ್ಣು ತರಿದು, ಕಿವಿ ಹರಿದು
ಜೊಲುವ ರಕ್ತಧಾರೆಯ, ಗಾಳಿಯ ಧೂಳಿಯ ಮಳೆಯ ಜೋರಿನ,
ಬೆನ್ನ ಬಾಸುಳದ, ಎಡಬಲದ ಬರಿಯ ತದ್ದಿನ,
ಮುಳ್ಳುದರಹಿನ, ಕಂಕುಳ ಸೀಳ ಕಂಡು
ನೋಡುವ ಜನರು ಬೆರಗಾಗೆ-
ಪೊರವಾರಿನ ಮರೆಯ ದಿಗಂಬರದ ಬಣಗು ಸುರಿಯುತ್ತ,
ಆಪ್ಯಾಯನವರತು, ಬಿದ್ದು ಮೊಳಕಾಲೊಡೆದು,
ಹೊಸ ಹುಣ್ಣಿನ ರಕ್ತದ ಜೋರು ಹರಿದು,
ಮುಂಗಾಲ ಕಣೆ ಒಳೆದು, ಕಣಕಾಲ ಸಂದು ತಪ್ಪಿ,
ಕಿರುಬೆರಳು ಎಡಹಿ, ಹೆಬ್ಬೊಟ್ಟೊಡೆದ ಗಾಯದ,
ಉರುಗು ಟೊಂಕದ, ಪೆರಚು ಗುಂಟನ
ನೋಡಾ ಚೆನ್ನಬಸವಣ್ಣಾ,
ಅತ್ಯಂತ ಮಲಿನ ಕೂಡಲಸಂಗಮದೇವರ ಕುರುಹು ವಿಪರೀತ,
ನೋಡುವಡೆ ಭಯಂಕರವಾಗಿದೆ ನೋಡಯ್ಯಾ."

ಈ ಪ್ರಕಾರವಾಗಿದ್ದು ನಮ್ಮನ್ನು ಪರೀಕ್ಷಿಸುತ್ತಾನೆ ನೋಡಿ ಬಸವಣ್ಣನವರ ದೇವರು. ಸದಾ ತಲ್ಲೀನವಾಗಿ ಮತ್ತು ಜಾಗೃತವಾಗಿ ಪ್ರೀತಿ ಮತ್ತು ಸೇವಾಭಾವದೊಂದಿಗೆ ಈ ದೇವರನ್ನು ಅರಿಯುವ ಯತ್ನ ಮಾಡಬೇಕಾಗಿದೆ.

ಬಸವನೆಂಬ ಪರುಷ ನೋಡಾ
ಬಸವನೆಂಬ
ಪರುಷ ಮುಟ್ಟಲು
ಕನ್ನಡ ಹೊನ್ನಾಯಿತು ನೋಡಾ.

ಬಸವನೆಂಬ
ಮಂತ್ರ ಹುಟ್ಟಲು
ಕನ್ನಡ ಧರ್ಮವಾಯಿತು ನೋಡಾ.

ಬಸವನೆಂಬ
ಗುರು ಬರಲು
ಬದುಕು ಕಾಯಕವಾಯಿತು ನೋಡಾ.

ಬಸವನೆಂಬ
ಲಿಂಗ ನೋಡಲು
ಜಗವೆಲ್ಲ ವಶವಾಯಿತು ನೋಡಾ.

ಬಸವನೆಂಬ
ಜಂಗಮ ಕಾಣಲು
ಲೋಕ ದಾಸೋಹವಾಯಿತು ನೋಡಾ.

ಬಸವನೆಂಬ
ಭಕ್ತ ಕೇಳಲು
ಲಿಂಗ ಜಂಗಮವಾಯಿತು ನೋಡಾ.

ಬಸವನೆಂಬ
ಶರಣ ಹೇಳಲು
ಜಂಗಮ ಲಿಂಗವಾಯಿತು ನೋಡಾ.

ಬಸವನೆಂಬ
ಪ್ರಜ್ಞೆ ನುಡಿಯಲು
ದಯೆ ಮಾತ್ರ ಅರಿಯಿತು ನೋಡಾ.

ಬಸವನೆಂಬ
ತತ್ತ್ವ ಹೊಳೆಯಲು
ಕನ್ನಡದ ಸತ್ತ್ವವಾಯಿತು ನೋಡಾ.

--ರಂಜಾನ್ ದರ್ಗಾ

ಪರಿವಿಡಿ (index)
*
Previousಶಾಸನಗಳಲ್ಲಿ ಬಸವಣ್ಣಹಿರೇಮಠ ಸಂಸ್ಥಾನ ಭಾಲ್ಕಿNext
*