ಬಸವ ಪಂಚಮಿಯ ಶುಭಾಶಯಗಳು

ಕಲ್ಲನಾಗರಕ್ಕೆ , ಹಾವಿನ ಹುತ್ತಕ್ಕೆ, ಹಾಲನೆರೆದು ವ್ಯರ್ಥ ಮಾಡಬೇಡಿ

*
ದೇವರು ಬೇಕು, ಮೂಢನಂಬಿಕೆ ಬೇಡ

ಬರುವ ಬಸವ(ನಾಗ)ಪಂಚಮಿಯಂದು ಕಲ್ಲನಾಗರಕ್ಕೆ , ಹಾವಿನ ಹುತ್ತಕ್ಕೆ, ಹಾಲನೆರೆದು ವ್ಯರ್ಥ ಮಾಡಬೇಡಿ, ಅನಾಥ ಮಕ್ಕಳಿಗೆ, ರೋಗಿಗಳಿಗೆ ಹಾಲು ಕೊಟ್ಟು ಮಾನವತೆ ಮೆರೆಯಿರಿ. ಭಾರತೀಯರು ಆಚರಿಸುವ ಎಲ್ಲಾ ಹಬ್ಬಗಳು ಜನಪದ ಸಮಸ್ಕೃತಿ ಮತ್ತು ಜೀವನ ಮೌಲ್ಯಗಳನ್ನು ತಿಳಿಸುವ ವೈಚಾರಿಕ ಪ್ರಜ್ಞೆಯಿಂದ ಕೂಡಿದೆ ಎಂಬುದು ತಿಳಿದುಬರುತ್ತದೆ. ಕಾಲಾನಂತರದಲ್ಲಿ ಪುರೋಹಿತ ಶಾಹಿಗಳು ಅರ್ಥವಿಲ್ಲದ ಆಚರಣೆ ಸೃಷ್ಠಿಸಿ ಪುರಾಣ ಕಥೆಗಳ ಮೂಲಕ ವೈಭವಿಕರಿಸಿ ಜನರಲ್ಲಿ ಭಯ ಮೂಡಿಸಿ ಮೌಢ್ಯವನ್ನು ಹೆಚ್ಚಿಸುವ ನಿರಂತರ ಪ್ರಯತ್ರ ಇಂದಿನವರೆಗೆ ಮುಂದುವರೆದಿದೆ. ಶೇ 80ರಷ್ಟು ಭಾರತೀಯ ಸಮಾಜ ಇಂದಿನ ವಿಜ್ಞಾನ ಯುಗದಲ್ಲಿ ಮೂಢನಂಬಿಕೆ, ಅಂಧಶ್ರದ್ಧೆಯ ಸಮೂಹ ಸನ್ನಿಗೆ ಒಳಗಾಗಿ ಧ್ವನಿ ಕಳೆದುಕೊಂಡಿದ್ದು ಸಮಾಜದ ದುರಂತ.

ಈ ಹಿನ್ನೆಲೆಯಲ್ಲಿ ನಾಗಪಂಚಮಿ ದಿನ ಕಲ್ಲುನಾಗರಕ್ಕೆ ಮತ್ತು ಹುತ್ತಕ್ಕೆ ಹಾಲನ್ನೆರೆಯುವುದು ಎಷ್ಟು ಸಮಂಜಷ? ಎನ್ನುವ ಯೋಚನೆ ಮಾಡಬೇಕಿದೆ. ಈ ಹಿಂದೆ ನಾಗರಪಂಚಮಿ ಸಹೋದರಿಯರ, ಒಡಹುಟ್ಟಿದವರ ಹಬ್ಬವೆಂದು ಆಚರಿಸುತ್ತಿದ್ದರು, ಅಂದು ಪೌಷ್ಠಿಕಾಂಶದಿಂದ ಕೂಡಿದ ದ್ವಿದಳ ಧಾನ್ಯಗಳ ಅಡುಗೆ ಮಾಡಿ ಮನೆಯ ಎಲ್ಲರು ಕೂಡಿ ಸಂತೋಷದಿಂದ ಅಹಾರ ಸೇವಿಸಿ ಸಾಯಂಕಾಲ ಊರಿನ ಹೊರ ಬಯಲಿನಲ್ಲಿ ಜೋಕಾಲಿ ಸ್ಪರ್ಧೆ ಏರ್ಪಡಿಸಿ ಆರೋಗ್ಯಕರ ಆಟವಾಡುತ್ತಿದ್ದರು ಮತ್ತು ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳನ್ನು ಅಣ್ಣನಾದವನು ತವರಿಗೆ ಕರೆದುಕೊಂಡು ಬರುವುದನ್ನು "ಪಂಚಮಿ ಹಬ್ಬ ಉಳಿದಾವ ದಿನ ನಾಕು ಅಣ್ಣ ಬರಲಿಲ್ಲ ಕರೆಯಾಕ" ಎಂಬ ಜನಪದ ಹಬ್ಬವಾದ ಪಂಚಮಿ ಹಬ್ಬ ನಾಗಪಂಚಮಿಯಾಗಿ ಯಾಂತ್ರಿಕವಾಗಿ ಮೌಢ್ಯದಿಂದ ಭಯದಿಂದ ದೇವರ ಹೆಸರಲ್ಲಿ ಕಲ್ಲನಾಗರಿಗೆ ಮತ್ತು ಹುತ್ತಕ್ಕೆ ಹಾಲನೆರೆಯುವುದನ್ನು ರೂಢಿಸಿಕೊಂಡು ಬಂದರು. ನಮ್ಮ ದೇಶದಲ್ಲಿ ನಾಗಪಂಚಮಿಯಂದು ಸರಿಸುಮಾರು ಲಕ್ಷಗಟ್ಟಲೆ ಲೀಟರಗಳಷ್ಟು ಹಾಲು ಕಲ್ಲು ಮತ್ತು ಮಣ್ಣು ಪಾಲಾಗಿ ಹಾಳಾಗುತ್ತಿದೆ. ಭಾರತದಲ್ಲಿ ಎಷ್ಟೋಂದು ಬಡ ಮಕ್ಕಳಿಗೆ ಹಾಲು ಸಿಗದೆ ರೋಗಿಗಳಾಗುತ್ತಿದ್ದಾರೆ/ಅಂಗವಿಕಲತೆಗೆ ಒಳಗಾಗುತ್ತಿದ್ದಾರೆ, ಇದು ದೇವನಿಗೆ ಅರ್ಪಿಸುವ ಭಕ್ತಿಯೇ? ನಮ್ಮ ಮೌಢ್ಯವೆ? ಸ್ವಲ್ಪ ಯೋಚಿಸಿ ವಿಜ್ಞಾನದಿಂದ ನಮಗೆ ತಿಳಿದುಬರುವುದು ಹಾವು ಹಾಲು ಕುಡಿಯೊದಿಲ್ಲ ಅದರ ಅಹಾರ ಇಲಿ, ಕಪ್ಪೆ, ಹುಳಗಳು ಹಾಗು ಗಾಳಿ ಅಷ್ಟೆ. ಹಾವು ರೈತರಿಗೆ ಉಪಕಾರಿಯಾದ ಒಂದು ಜೀವಜಂತು, ಪೂಜೆಯ ನೆಪದಲ್ಲಿ ಕಲ್ಲನಾಗನಿಗೆ ಹಾಲನೆರೆದು ನಿಜವಾದ ಹಾವು ಬಂದರೆ ಕೊಲ್ಲುವುದು ಮತ್ತು ಹುತ್ತಕ್ಕೆ ಅರಿಷಿನ ಕುಂಕುಮಗಳಿಂದ ಪೂಜಿಸಿ ಒಳಗೆ ಇರುವ ಹಾವಿಗೆ ತೊಂದರೆ ಕೊಡುವುದು ಯಾವ ನ್ಯಾಯ? ಹೀಗೆ ಒಂದೆಲ್ಲಾ ಹತ್ತು ಹಲವಾರು ಪೂಜೆಗಳ ಮತ್ತು ದೇವರ ಹೆಸರಿನಲ್ಲಿ ಅನ್ನದ ಹುಂಡೆಗಳನ್ನು, ಬೆಲೆಬಾಳುವ ರೇಷ್ಮೆ ವಸ್ತ್ರ ಮತ್ತು ತುಪ್ಪವನ್ನು ಹೋಮ ಕುಂಡದಲ್ಲಿ ಸುಡುವುದರಿಂದ ನಮ್ಮ ದೇಶದ ಅಹಾರ ಉತ್ಪಾದನೆಯ ಶೇ 40ರಷ್ಟು ಅಹಾರ ವ್ಯರ್ಥವಾಗಿ ಹಾಳು ಮಾಡುತ್ತಿರುವುದು ಸಂವಿಧಾನ ವಿರೋಧಿ ಕ್ರಿಯೆಯಾಗಿದೆ. ಯಾವುದೇ ಮೂಲ ತತ್ವಗಳಲ್ಲಿಯಾಗಲಿ ಮತ್ತು ಉಪನಿಷತ್ತುಗಳಾಗಲಿ ದೇವ ಕೊಟ್ಟ ಸಂಪತ್ತನ್ನು ಹಾಳು ಮಾಡಿರಿ ಎಂದು ಹೇಳಿಲ್ಲ. ದೇವರು ಎಂದರೆ ದೇಹ, ವರ್ಣ ಮತ್ತು ರೂಪವಿರದ ನಿರಾಕಾರ ಚೈತನ್ಯ ಈ ಸುಂದರ ಜಗತ್ತು ಮತ್ತು ಜೀವ ಸೃಷ್ಟಿಗೆ ಕಾರಣವಾಗಿದೆ ಇದರ ಸಾಕಾರ ರೂಪವೇ ಜೀವ ಜಗತ್ತು ಮತ್ತು ಸಮಾಜ, ದೇವರು ಗುಡಿ, ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಮಂಟಪಗಳಲ್ಲಿ ಇಲ್ಲ, ಪ್ರತಿಯೊಬ್ಬ ಮಾನವನ ದೇಹದಲ್ಲಿ ಅಂತರಾಮಿಯಾಗಿ ಅಡಗಿರುವ ಅರಿವಿನ ಪ್ರಜ್ಞೆಯೇ ದೇವರ ಅಂಶಿಕವಾದ ಚೈತನ್ಯ, ಆ ಚೈತನ್ಯ ಹೋದ ಕ್ಷಣ ನಾವು ಶವವಾಗುತ್ತೇವೆ ಎಂಬುದನ್ನು ಅರಿತು ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳಸಿಕೊಳ್ಳುವ ಬಸವಾದಿ ಶರಣ-ಶರಣೆಯರ ನುಡಿ ಮತ್ತು ನಡೆಗಳಾದ ವಚನಗಳು ನಮಗೆ ಪ್ರೇರಕ ಶಕ್ತಿಯಾಗಲಿ.

ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದಡೆ ನಡೆಯಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯಂಬರಯ್ಯ
ನಮ್ಮ ಕೂಡಲಸಂಗಮದೇವನ ಶರಣರ ಕಂಡು
ಉದಾಸೀನವ ಮಾಡಿದಡೆ ಕಲ್ಲು ತಾಗಿದ ಮಿಟ್ಟಿಯಂತಪ್ಪರಯ್ಯಾ

ಉತ್ತಮ ಜೀವನಕ್ಕಾಗಿ ಬಸವಣ್ಣನವರ ಸಪ್ತಸೂತ್ರಗಳು (For a better life Basava's seven principles)

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ! ಇದೆ ಬಹಿರಂಗ ಶುದ್ಧಿ!
ಇದೆ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. -ವಿಶ್ವಗುರು ಬಸವಣ್ಣ

ಎಂಬ ಬಸವಣ್ಣನವರ ವಚನಗಳು ನಾಗರೀಕ ಸಮಾಜದ ಜನರನ್ನು ಎಚ್ಚರಿಸುವ ಬೆಳಕಿನ ಕಿರಣಗಳು ಭಾರತದ ಸಂವಿಧಾನ 51ಎ (ಹೆಚ್) ಕಾಲಂನಲ್ಲಿ ಹೇಳಿರುವಂತೆ "ಭಾರತದ ಎಲ್ಲಾ ನಾಗರೀಕರು ವೈಜ್ಞಾನಿಕ ಮನೋಭಾವ, ವೈಚಾರಿಕತೆಯನ್ನು ಬೆಳಸಿಕೊಳ್ಳುವುದು, ಮಾನವತೆಯನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಅದ್ಯ ಕರ್ತವ್ಯವಾಗಿದೆ."
*
ಪರಿವಿಡಿ (index)
Previousರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರುಮಹಾಗುರು ಬಸವಣ್ಣ ಸಂಸ್ಥಾಪಿಸಿದ ಲಿಂಗಾಯತ ಧರ್ಮNext
*