ಬಸವ ಧರ್ಮದ ಮಹಾಜಗದ್ಗುರು ಪೀಠ ಕೂಡಲ ಸಂಗಮ

ಮಹಾಮನೆ ಮಹಾಮಠ, ಕೂಡಲ ಸಂಗಮ ಸುಕ್ಷೇತ್ರ-587115, ತಾ|| ಹುನಗುಂದ, ಜಿ|| ಬಾಗಲಕೋಟೆ

ಬಸವ ಪೀಠವು ಎದ್ದು | ಒಸೆದು ನಾಣ್ಯವು ಹುಟ್ಟಿ
ಬಸವನ ಮುದ್ರೆ ಮೆರೆದಾವು ಧರೆಯವಗೆ |
ವಶವಾಗದಿಹುದೆ ಸರ್ವಜ್ಞ?

ಕೂಡಲಸಂಗಮ ಸುಕ್ಷೇತ್ರವು ಚಾರಿತ್ರಿಕ ಹಿನ್ನೆಲೆಯನ್ನೊಳಗೊಂಡ, ಸುಪ್ರಸಿದ್ಧ ಸಂಗಮೇಶ್ವರ ದೇವಾಲಯವನ್ನು ಹೊಂದಿದ ಧಾರ್ಮಿಕ ಸ್ಥಾನ. ಕೃಷ್ಣಾ-ಮಲಪ್ರಭಾ ನದಿಗಳ ಸಂಗಮದಿಂದಾಗಿ, ಇದೀಗ ಬಸವ ಸಾಗರ ಜಲಾಶಯದ ನಿರ್ಮಾಣದಿಂದಾಗಿ ಪ್ರಾಕೃತಿಕ ಚೆಲುವಿನಿಂದ ಶೋಭಿಸುತ್ತಿರುವ ಸುಂದರ ತಾಣ. ಚಿನ್ನಕ್ಕೆ ಸುವಾಸನೆ ಬಂದಂತೆ ಇಂತಹ ಕ್ಷೇತ್ರದ ಮಹಿಮೆ ವಿಶ್ವವಿಖ್ಯಾತಿಯನ್ನು ಹೊಂದುವಂತಾಗಿರುವುದು ವಿಶ್ವಗುರು ಬಸವಣ್ಣನವರ ಪಾದ ಸ್ಪರ್ಶದಿಂದಾಗಿ. "ಮಹಾಮಹಿಮ ಸಂಗನ ಬಸವಣ್ಣನು ಪಾದವಿಟ್ಟುದು ಅವಿಮುಕ್ತ ಕ್ಷೇತ್ರ" ಎಂದು ಜಗನ್ಮಾತೆ ಅಕ್ಕ ಮಹಾದೇವಿ ನುಡಿದ ಪ್ರಕಾರ ಕೂಡಲ ಸಂಗಮವು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರವಾಗಿ ಇಂದು ಪುಣ್ಯಭೂಮಿಯಾಗಿ ಕಂಗೊಳಿಸುತ್ತಿದೆ. ಮುಸಲ್ಮಾನರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ಧರಿಗೆ ಬುದ್ಧಗಯೆ ಮಹತ್ವದ ಧರ್ಮಕ್ಷೇತ್ರಗಳಾದಂತೆ ಬಸವ ಧರ್ಮೀಯರಾದ ಲಿಂಗಾಯತರಿಗೆ ಕೂಡಲ ಸಂಗಮವೇ ಧರ್ಮಕ್ಷೇತ್ರ.

ಇಂತಹ ಕೂಡಲ ಸಂಗಮ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದಿಂದ ಶ್ರೀಗುರು ಬಸವಣ್ಣನವರ ದಿವ್ಯ ಪ್ರೇರಣೆಯಂತೆ, ಬಸವ ಧರ್ಮಪೀಠ ಎಂಬ ವಿಶ್ವಸ್ಥ ಸಂಸ್ಥೆ (ಟ್ರಸ್ಟ) ಯೊಂದನ್ನು ಮುಂಬಯಿಯ 1950ನೇ ಟ್ರಸ್ಟ ಆಕ್ಟ್ ಪ್ರಕಾರ ನೊಂದಾಯಿಸಲಾಗಿದೆ. ನೊಂದಣಿ ಸಂಖ್ಯೆ: A 1758(BJP). ಲಿಂ|| ಪೂಜ್ಯ ಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು ಗೌರವಾಧ್ಯಕ್ಷರಾಗಿ ಸಾಗಿ ಬಂದ ಈ ಟ್ರಸ್ಟಿನ ಕಾರ್ಯಾಧ್ಯಕ್ಷರಾಗಿ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿಯವರು, ಕೋಶಾಧ್ಯಕ್ಷರಾಗಿ ಪೂಜ್ಯ ಶ್ರೀ ಜಗದ್ಗುರು ಮಾತೆ ಗಂಗಾದೇವಿಯವರು ಮತ್ತು ಅನೇಕ ತ್ಯಾಗ ಜೀವಿಗಳು ಹಗಲಿರುಳು ದುಡಿಯುತ್ತಿದ್ದಾರೆ. ಬಸವ ಧರ್ಮ ಪೀಠ ಟ್ರಸ್ಟ ಸುಮಾರು ಇಪ್ಪತ್ತಾರು ಎಕರೆ ಜಮಿನನ್ನು ಖರೀದಿಸಿದ್ದು ಇಲ್ಲಿ 'ಮಹಾಮನೆ' ಎಂಬ ಮಹಾಮಠವು ನಿರ್ಮಾಣವಾಗಿದೆ. ಈಗಾಗಲೇ ಚನ್ನಬಸವೇಶ್ವರ ಜ್ಞಾನಮಂಟಪ ಎಂಬ ಪುಸ್ತಕ ಮಳಿಗೆಯ ಕಟ್ಟಡ ನಿರ್ಮಾಣಗೊಂಡಿದ್ದು 'ಮಹಾಮನೆ' ಎಂಬ ಆಡಳಿತ ಕಟ್ಟಡವು ಪೂರ್ಣಗೊಂಡಿದೆ. 'ಗಣಲಿಂಗ ಮಂಟಪ' ಎಂಬ ಮುಖ್ಯ ಆಲಯವು ನಿರ್ಮಾಣಗೊಂಡಿದೆ. ದಿ. 14-1-1996 ರಂದು ಸ್ಥಾಪನೆಗೊಂಡ ಗಣಲಿಂಗವು ವಿಶೇಷ ಶಕ್ತಿ ಕೇಂದ್ರವಾಗಿ ದರ್ಶನಕ್ಕೆ ಲಭ್ಯವಿದೆ. ಬಸವ ಧ್ಯಾನ ಮಂಟಪವು ಸಿದ್ಧವಾಗಿದ್ದು ಗುರು ಬಸವಣ್ಣನವರ ದಿವ್ಯ ಮೂರ್ತಿಯನ್ನು ಹೊಂದಿದೆ. ಬಸವ ಧರ್ಮದ ಮಹಾಜಗದ್ಗುರು ಪೀಠದ ಪ್ರಥಮ ಅಧಿಕಾರಿಗಳಾದ ಪೂಜ್ಯ ಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳ ಶರಣಾಲಯ (ಗದ್ದುಗೆಯು) ಕಮಲದಾಕೃತಿಯಲ್ಲಿ ರೂಪುಗೊಂಡಿದೆ. 20 ಶರಣರ ಮಂಟಪಗಳು ಭವ್ಯ ಮತ್ತು ದಿವ್ಯವಾಗಿವೆ.

ಧರ್ಮಪಿತ ಶ್ರೀ ಗುರು ಬಸವ ತಂದೆಯ ದಿವ್ಯ ಪ್ರೇರಣೆಯಂತೆ ಅವರು ಐಕ್ಯರಾದ ಧರ್ಮ ಕ್ಷೇತ್ರ ಕೂಡಲಸಂಗಮದಲ್ಲಿ ಬಸವ ಧರ್ಮದ ಮಹಾಜಗದ್ಗುರು ಪೀಠವನ್ನು ಬಸವ ಶಕೆ ೮೫೮, ಸೋಮವಾರ ೧೩-೧-೧೯೯೨ರಂದು ಸಂಸ್ಥಾಪನೆ ಮಾಡಲಾಯಿತು. ಇದರ ಉದ್ದೇಶ ಬಸವ ತತ್ವದ ಪ್ರಚಾರ, ಸಮಾನತೆಯ ಪ್ರತಿಷ್ಠಾಪನೆ; ಜಾತಿ, ವರ್ಣ, ವರ್ಗ ಭೇದವಿಲ್ಲದೆ ಎಲ್ಲ ಮಾನವರ ಹಕ್ಕುಗಳನ್ನು ರಕ್ಷಿಸುವುದು; ಧರ್ಮನಿಷ್ಠೆ-ರಾಷ್ತ್ರ ಪ್ರೇಮಗಳನ್ನು ಜನರಲ್ಲಿ ಬೆಳೆಸುವುದು. ಸಕಲ ಜೀವಾವಳಿಗೆ ಲೇಸನ್ನೆ ಬಯಸಿ, ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಕಲ್ಯಾಣ ರಾಜ್ಯವನ್ನು ಕಟ್ಟುವುದು.

ಇಂತಹ ಧರ್ಮ ಪೀಠವನ್ನು ಅಪೂರ್ವ ವಾಗ್ಮಿಗಳು ಕ್ರಾಂತಿಕಾರಿ ಧರ್ಮ ಪ್ರಸಾರಕರು ಬಸವ ಯುಗ ನಿರ್ಮಾಪಕರು ಆದ ಪೂಜ್ಯ ಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು ಪ್ರಥಮ ಪೀಠಾಧೀಶರಾಗಿ ಆರೋಹಣ ಮಾಡಿ, ಅಪಾರ ಕಾರ್ಯ ಸಧನೆಗೈದು ದಿನಾಂಕ ೩೦-೬-೧೯೯೫ರಂದು ಲಿಂಗೈಕ್ಯರಾಗಿ ಕ್ರಿಯಾ ವಿಶ್ರಾಂತಿಯನ್ನು ಹೊಂದಿದರು. ಪೂಜ್ಯ ಮಹಾಜಗದ್ಗುರುಗಳ ಸದಿಚ್ಚೆಯಂತೆ ಧಾರವಾಡದ ಅಕ್ಕಮಹಾದೇವಿ ಅನುಭಾವ ಪೀಠದ ಪ್ರಥಮ ಮಹಿಳಾ ಜಗದ್ಗುರುವಾದ ಪೂಜ್ಯ ಶ್ರೀಮನ್ ನಿರಂಜನ ಮಹಾ ಜಗದ್ಗುರು ಡಾ|| ಮಾತೆ ಮಹಾದೇವಿಯವರು ಬಸವ ಧರ್ಮದ ಮಹಾಜಗದ್ಗುರು ಪೀಠದ ಎರಡನೆಯ ಅಧಿಕಾರಿಯಾಗಿ ಬಸವ ಶಕೆ ೮೬೨, ಶನಿವಾರ ದಿನಾಂಕ ೧೩-೧-೧೯೯೬ ರಂದು ಸತ್ ಸಂಕಲ್ಪದೊಡನೆ ಬಸವ ಧ್ವಜಾರೋಹಣ ಮಾಡಿ ಪೀಠಾರೋಹಣ ಮಾಡಿ, ಧರ್ಮ ಪ್ರಚಾರ ಕಾರ್ಯವನ್ನು ಮುಂದುವರಿಸಿದರು.

ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರು ಚಿತ್ರದುರ್ಗದ ಶರಣ ದಂಪತಿಗಳಾದ ಡಾ|| ಎಸ್. ಆರ್. ಬಸಪ್ಪ ಮತ್ತು ಗಂಗಮ್ಮನವರ ಸುಪುತ್ರಿಯಾಗಿ ದಿನಾಂಕ ೧೩-೩-೧೯೪೬ರಂದು ಜನಿಸಿ, ಬಿ. ಎಸ್ಸಿ ಪದವೀಧರೆಯಾಗಿ ನಂತರ ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿಗಳಿಂದ ಜಂಗಮ ದೀಕ್ಷೆ ಹೊಂದಿದರು. ಎಂ. ಎ. ತತ್ವಜ್ಞಾನವನ್ನು ಅಭ್ಯಸಿಸಿದ ಮಾತಾಜಿಯವರು ಅಪೂರ್ವ ವಾಗ್ಮಿಗಳು, ಉತ್ತಮ ಬರಹಗಾರರೂ ಅಗಿದ್ದಾರೆ ಇವರು ಸ್ವದೇಶ ವಿದೇಶಗಳೆರಡರಲ್ಲಿಯೂ ಸಂಚರಿಸಿ ಬಸವ ತತ್ವವನ್ನು ಪ್ರಚಾರ ಮಾಡುತ್ತಿದ್ದಾರೆ

ಪೂಜ್ಯ ಶ್ರೀ ಮಹಾ ಜಗದ್ಗುರು ಡಾ|| ಮಾತೆ ಮಹಾದೇವಿಯವರು ದಿನಾಂಕ 14 ಮಾರ್ಚ 2019ರಂದು ಲಿಂಗೈಕ್ಯರಾದ ನಂತರ, ಮೂರನೇಯ ಪೀಠಾಧಿಕಾರಿಯಾಗಿ ಪೂಜ್ಯ ಶ್ರೀ ಡಾ|| ಗಂಗಾಮಾತಾಜಿ ಅವರು ಧರ್ಮ ಪ್ರಚಾರ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸದ್ಭಕ್ತರಿಗೆ ದೊರಕುವ ಸೌಲಭ್ಯಗಳು

ಕೂಡಲಸಂಗಮ ಸುಕ್ಷೇತ್ರವನ್ನು, ಮಹಾಮನೆ ಮಹಾಮಠವನ್ನು ಸಂದರ್ಶಿಸುವ ಯಾತ್ರಾರ್ಥಿಗಳಿಗೆ ದಾಸೋಹದ ವ್ಯವಸ್ಥೆ ಇರುತ್ತದೆ. ಬೆಳಿಗ್ಗೆ 10 ಗಂಟೆಯಿಂದ 11-30ರವರೆಗೆ ಉಪಾಹಾರವನ್ನು ಮಧ್ಯಾಹ್ನ 12ರಿಂದ 4ರವರೆಗೆ ಊಟವನ್ನು ಕೊಡಲಾಗುವುದು. 50 ಕೋಣೆಗಳ "ಅಕ್ಕನಾಗಲಾಂಬಿಕಾ ಶರಣ ಧಾಮ" ಮತ್ತು 80 ಕೋಣೆಗಳ "ಸರ್ವಜ್ಞ ಶರಣ ಧಾಮ" ಮತ್ತು "ಸಿದ್ಧರಾಮೇಶ್ವರ ಸಮುಚ್ಛಯ" ಸಿದ್ಧವಾಗಿರುವುದರಿಂದ ವಸತಿಯ ಸೌಲಭ್ಯವು ಯಾತ್ರಾರ್ಥಿಗಳಿಗೆ ಲಭ್ಯವಾಗುತ್ತದೆ. ಶಾಲೆ ಕಾಲೇಜುಗಳ ಪ್ರವಾಸಿ ತಂಡದವರು ಮತ್ತು ಇನ್ನಿತರ ಪ್ರವಾಸಿ ತಂಡದವರಿಗೆ ಪೂರ್ವಭಾವಿ ಬೇಡಿಕೆಯೊಡನೆ ಉಪಾಹಾರ-ಊಟಗಳನ್ನು ಸಿದ್ಧಪಡಿಸಿ ಕೊಡಲಾಗುವುದು.

ಬೆಂಗಳೂರು ಶಾಖೆಯ ವಿಳಾಸ: ಬಸವ ಧರ್ಮ ಪೀಠ, ಬಸವ ಮಂಟಪ, 2035, 20ನೇ ಮುಖ್ಯ ರಸ್ತೆ, 2ನೇ ಬ್ಲಾಕ್, ರಾಜಾಜಿನಗರ ಬೆಂಗಳೂರು-560010.

ಪರಿವಿಡಿ (index)
Previousಅನುಭವ ಮಂಟಪಗುರು ಬಸವಣ್ಣನವರು ಅಂಚೆ ಚೀಟಿ ಮತ್ತು ನಾಣ್ಯದ ಮೇಲೆ.Next
*